ಮಂಗಳವಾರ, ಜೂನ್ 4, 2019

ಸರಕಾರಿ ಅನುದಾನದ ಸುತ್ತ ಅನುಮಾನಗಳ ಹುತ್ತ :



ಬೆಳೆಗಿಂತ ಕಳೆಯೇ ಫಲಾನುಭವಿಯಾದರೆ ಕಲೆ ಉಳಿದೀತೆಲ್ಲಿ..
ಬೇಲಿ ಎದ್ದು ಹೊಲ ಮೇಯ್ದರೆ ಬೆಳೆಗೆ ಉಳಿಗಾಲವೆಲ್ಲಿ..

ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಹಾಗೂ ಮಾಡುತ್ತಿದ್ದೇವೆ ಎಂದು ದಾಖಲೆಗಳನ್ನು ಕೊಟ್ಟಿರುವ ಸಂಘ ಸಂಸ್ಥೆಗಳಿಗೆ ಮಾರ್ಚ ಅಂತ್ಯದೊಳಗೆ ಬಿಡುಗಡೆಮಾಡಬೇಕಾಗಿದ್ದ ಕಳೆದ ವರ್ಷದ ವಾರ್ಷಿಕ ಅನುದಾನವನ್ನು ಕುಂಟು ನೆಪ ಹೇಳಿ ತಡೆಹಿಡಿಯಲಾಯಿತು. ಇದರ ವಿರುದ್ಧ ಕೆಲವರು ಗೊಣಗಿದರು, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕೆಗಳಲ್ಲಿ ಬರೆದರು-ಬರೆಸಿದರು. ಆದರೆ.. ಯಾರು ಅದೆಷ್ಟೇ ಪ್ರತಿರೋಧವನ್ನೊಡ್ಡಿದರು ಚುನಾವಣೆಯ ನೀತಿಸಂಹಿತೆಯ ನೆಪ ಹೇಳಿದ ಸರಕಾರ ಅನುದಾನ ಬಿಡುಗಡೆ ಮಾಡಲೇ ಇಲ್ಲಾ. ಇಲಾಖೆಯ ಅನುದಾನದಿಂದಲೆ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ, ಹಮ್ಮಿಕೊಳ್ಳಬಹುದಾಗಿದ್ದ ಸಂಘ ಸಂಸ್ಥೆಗಳು ಆರ್ಥಿಕ ಅಭಾವದಿಂದಾಗಿ ತುಂಬಾ ಸಂಕಷ್ಟವನ್ನು ಅನುಭವಿಸಿದವು.

ಗಡಿ ಅಭಿವೃದ್ದಿ ಪ್ರಾಧಿಕಾರದ ಅಕೌಂಟಿನಲ್ಲಿ ಅನುದಾನಕ್ಕೆ ಬೇಕಾದ ಹನ್ನೆರಡು ಕೋಟಿ ಹಣವನ್ನು ಕಾಯ್ದಿರಿಸಲಾಗಿದೆ, ಚುನಾವಣೆಯ ನಂತರ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಕೃತಿ ಇಲಾಖೆಯ ಸಚಿವಾಲಯವು ಹೇಳುತ್ತಾ ಅನುದಾನದ ಆಸೆಯನ್ನು ಜೀವಂತವಾಗಿ ಇಡುತ್ತಾ ಬಂದಿತು. ಚುನಾವಣೆ ಮುಗಿದು ಎರಡನೇ ವಾರ ಕಳೆಯುತ್ತಾ ಬಂದರೂ ಇಲ್ಲಿವರೆಗೂ ಅನುದನದ ಹೆಸರಿನ ಉಸಿರೇ ಇಲ್ಲಾ. ಕೆಲವು ಫೇಕ್ ಸಂಘಸಂಸ್ಥೆಗಳು ಸುಳ್ಳು ದಾಖಲೆ ಕೊಟ್ಟು ಹಣ ಪಡೆಯುತ್ತಿವೆ, ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆ ಇನ್ನೊಂದು ನೆಪವನ್ನು ಮುಂದೆ ಮಾಡುತ್ತಿದೆ. ಆದರೆ ಆ ಪರಿಶೀಲನೆಯ ಕೆಲಸ ಇನ್ನೂ ಆರಂಭವೇ ಆಗಿಲ್ಲಾ ಇನ್ನು ಮುಗಿಯುವುದೆಂದು, ಅನುದಾನ ಭಾಗ್ಯ ಅರ್ಹರಿಗೆ ದೊರೆಯುವುದೆಂದು?

ಒಂದೇ ವರ್ಷದಲ್ಲಿ ಎರಡೆರಡು ಸಲ ಅನುದಾನ ಬಿಡುಗಡೆ ಮಾಡುವುದನ್ನು ಸರಕಾರದ ಕಾನೂನುಗಳು ಒಪ್ಪುವುದಿಲ್ಲಾ.. ಸರಕಾರದ ಖಜಾನೆಯವರು ಸಮ್ಮತಿಸುವುದಿಲ್ಲಾ. ಆದರೂ ಕಳೆದ ವರ್ಷದ ಹಾಗೂ ಈ ವರ್ಷದ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸ್ಕತಿ ಸಚಿವಾಲಯ ಹೇಳುತ್ತಿದೆ. ಇದನ್ನು ಸಾಂಸ್ಕೃತಿ ಲೋಕ ನಂಬಿ ಕುಳಿತಿದೆ. ಆದರೆ ಸಾಧ್ಯತೆಗಳು ಕ್ಷೀಣವಾಗಿವೆ.

ಅನುದಾನದ ಅಭಾವದಿಂದಾಗಿ ನಾಡಿನಾದ್ಯಂತ ಸಾಂಸ್ಕೃತಿಕ ಕೆಲಸಗಳು ಮುಕ್ಕಾಲು ಭಾಗ ನಿಂತೇ ಹೋಗಿವೆ. ಅನುದಾನವೆಂಬ ಆಮ್ಲಜನಕದಿಂದಲೇ ಉಸಿರಾಡುತ್ತಿದ್ದ ಸಂಘ ಸಂಸ್ಥೆಗಳು ಹಾಗೂ ಅವುಗಳ ಪದಾಧಿಕಾರಿಗಳಿಗೆ ಉಸಿರು ಕಟ್ಟಿದಂತಾಗಿದೆ. ಸರಕಾರದ ಅನುದಾನ ಬರುತ್ತದೆ ಎಂದು ನಂಬಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದೈರ್ಯ ಸಾಲದಾಗಿದೆ. ಅನುದಾನ ಇಂದಿಲ್ಲ ನಾಳೆ ಬರುತ್ತದೆ ಎಂದು ನಂಬಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡಿದವರಿಗೆ ದಿಕ್ಕೇತೋಚದಂತಾಗಿ, ಬರಗಾಲ ನೀಗಲು ಮಳೆ ಬಂದೀತೆಂದು ಆಕಾಶ ನೋಡುವ ರೈತನ ಪಾಡಾಗಿದೆ. ಹೀಗಾಗಿ ಈಗೀಗ ಅನುದಾನ ಬಂದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡರಾಯಿತು ಬಿಡು ಎನ್ನುವ ಧೋರಣೆ ಸಾರ್ವತ್ರಿಕವಾಗಿದೆ.

ಚಿಕ್ಕಪುಟ್ಟ ಸಂಸ್ಥೆಗಳ ಮಾತು ಬಿಡಿ, ಸಾಣೇಹಳ್ಳಿಯ ಶ್ರೀಮಠದ ಶಿವಕುಮಾರ ರಂಗಶಿಕ್ಷಣ ಕೇಂದ್ರ ಮತ್ತು ಶಿವಸಂಚಾರಕ್ಕೆ ಸರಕಾರದಿಂದ ಬರಬೇಕಾದ ವಾರ್ಷಿಕ ಅನುದಾನ ಬಂದಿಲ್ಲವೆಂದು ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಪತ್ರಿಕೆಗಳಿಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ವಾರ್ಷಿಕವಾಗಿ ಒಂದು ಕೋಟಿ ಹಣವನ್ನು ನಾವು ರಂಗಭೂಮಿ ಸೇವೆಗಾಗಿ ಖರ್ಚು ಮಾಡುತ್ತಿದ್ದೇವೆ, ಅನುದಾನವನ್ನು ಸರಕಾರ ಕೊಡದೇ ಹೋದರೆ ಹೇಗೆ ರಂಗಕೈಂಕರ್ಯ ಮಾಡುವುದು? ಎಂದು ಶ್ರೀಗಳು ಸರಕಾರವನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯ ಕಲಾವಿದರ ಮಾತು ಬಿಡಿ, ಶ್ರೀಮಂತ ಮಠದ ಅಸಾಮಾನ್ಯ ಸ್ವಾಮೀಜಿಯವರ ಮಾತಿಗೂ ಸರಕಾರ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಅನುದಾನವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿಲ್ಲಾ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಸಂಸ್ಕೃತಿ ಸಚಿವಾಲಯದತ್ತ ಬೆರಳು ತೋರಿಸುತ್ತಾರೆ. ಆ ಸಚಿವಾಲಯದ ಅಧಿಕಾರಿಗಳನ್ನು ಕೇಳಿದರೆ ಇಲಾಖೆಯ ಸಚಿವರತ್ತ ಮುಖಮಾಡುತ್ತಾರೆ. ಸಚಿವರನ್ನೇ ಕೇಳೋಣವೆಂದರೆ ಅವರು ವಿದೇಶಿ ಪ್ರವಾಸ, ರಾಜಕೀಯ ಒತ್ತಡಗಳಿಂದಾಗಿ ಬೇಟಿಯಾಗಲೂ ಕೈಗೆ ಸಿಗುತ್ತಿಲ್ಲ. ಒಟ್ಟಿನ ಮೇಲೆ ಅನುದಾನವೆನ್ನುವುದು ಕನ್ನಡಿಯೊಳಗಿನ ಗಂಟಾಗಿದೆ, ಸರಕಾರದಿಂದ ಆರ್ಥಿಕ ಸಹಾಯವನ್ನು ಪಡೆಯುವುದೇ ಎಲ್ಲರಿಗೂ ಬಿಡಿಸಲಾಗದ ಕಗ್ಗಂಟಾಗಿದೆ.

ಒಪ್ಪೋಣ, ಸರಕಾರಕ್ಕೇನೋ ಸಾಂಸ್ಕೃತಿಕ ದಾರಿದ್ರ್ಯ ಮೆಟ್ಟಿಕೊಂಡಿದೆ. ಆದರೆ.. ಕನ್ನಡದ ಸಾಂಸ್ಕೃತಿಕ ಲೋಕಕ್ಕೂ ಸರಕಾರವನ್ನೇ ಅವಲಂಬಿಸುವಂತಹ ಆರ್ಥಿಕ ದಾರಿದ್ರ್ಯ ಅಂಟಿಕೊಂಡಿದೆಯಾ? ಸರಕಾರದ ಸವಲತ್ತು ಸಿಕ್ಕರೆ ಮಾತ್ರ ನಾವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತೇವೆ ಇಲ್ಲವಾದರೆ ಅಸಾಧ್ಯವೆಂದುಕೊಳ್ಳುವಷ್ಟು ಪರಾವಲಂಬಿತನ ಕನ್ನಡ ಸಾಂಸ್ಕೃತಿಕ ಸಾರಸ್ವತ ಲೋಕಕ್ಕೆ ಮೈಗೂಡಿಕೊಂಡಿದೆಯಾ? ಯಾಕಿಷ್ಟು ಸರಕಾರಿ ಅನುದಾನಕ್ಕಾಗಿ ಕಾಯುವಿಕೆ? ಅನುದಾನ ಇಲ್ಲವೆಂದರೆ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಮಾಡಲಾಗುವುದಿಲ್ಲವೆಂಬ ಮನೋಭಾವ ಬೆಳೆದಿದ್ದಾದರೂ ಯಾಕೆ?

ಯಾಕೆಂದರೆ.. ಸರಕಾರ ಕೊಡುವ ಅನುದಾನ ಕೇವಲ ಪ್ರೋತ್ಸಾಹದಾಯಕ ಸಹಾಯವೆಂದು ತಿಳಿದುಕೊಂಡು, ತಮ್ಮದೇ ಆದ ರಿಸೋರ್ಸಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಜವಾದ ಕಲಾಸೇವಾ ಮನೋಭಾವದೊಂದಿಗೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತಾ ಬಂದಿದ್ದರೆ, ಹೀಗೆ ಅನುದಾನ ಬಂದಿಲ್ಲವೆಂದು ಆಕಾಶ ನೋಡುವುದು ತಪ್ಪುತ್ತಿತ್ತು. ಸ್ವಾಭಿಮಾನಿಯಾದ ಕಲಾವಿದರು ಸರಕಾರದ ಮುಂದೆ ಹೀಗೆಲ್ಲಾ ಅನುದಾನಕ್ಕಾಗಿ ಬೇಡುವುದು ಬೇಕಿರಲಿಲ್ಲ. ಸರಕಾರ ಅನುದಾನವನ್ನು ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ, ನಾವು ಮಾತ್ರ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗುತ್ತೇವೆ ಎನ್ನುವ ಮನೋಭಾವ ಸಂಘ ಸಂಸ್ಥೆಗಳ ರೂವಾರಿಗಳಿಗೆ ಇರಬೇಕಾಗಿತ್ತು. ಅಂತಹ ಕೆಲವು ಸಂಸ್ಥೆಗಳನ್ನು ಈಗಲೂ ನಡೆಸುವವರು ಇದ್ದಾರೆ ಆದರೆ ಅಂತವರು ಅಪರೂಪವಾಗಿದ್ದಾರೆ. ಅನುದಾನಕ್ಕಾಗಿ ಹಾತೊರೆಯುವವರೇ ಹೆಚ್ಚಾಗಿದ್ದಾರೆ.

ನಿಜವಾದ ಕಲಾವಿದರುಗಳೇ ಸಮಾನಾಸಕ್ತರ ಸಾಂಸ್ಕೃತಿಕ ಸಂಘಗಳನ್ನು ಕಟ್ಟಿ ಇತಿಮಿತಿಗಳಲ್ಲಿ ತಮ್ಮ ಪಾಡಿಗೆ ತಾವು ಕಲಾಕಾಯಕವನ್ನು ಮಾಡಿಕೊಂಡು ಹೋಗಿದ್ದರೆ ಹೀಗೆ ಇಷ್ಟೊಂದು ಅನುದಾನದ ಮೇಲಿನ ಅವಲಂಬನೆ ಇರುತ್ತಿರಲಿಲ್ಲವೋ ಏನೋ?. ಆದರೆ ಕಲೆಯ ಹೆಸರಲ್ಲಿ ಯಾವಾಗ ಈವೆಂಟ್ ಮ್ಯಾನೇಜರ‍್ಸ್‌ಗಳು ಹುಟ್ಟಿಕೊಂಡರೋ, ಸರಕಾರದಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ಕಲೆಯ ಹೆಸರಲ್ಲಿ ದಲ್ಲಾಳಿ ವರ್ಗವೊಂದು ಹುಟ್ಟಿಕೊಂಡು ಅಧಿಕಾರಿಗಳ ಸಹಕಾರದೊಂದಿಗೆ ಸಂಸ್ಕೃತಿ ಇಲಾಖೆಯ ಖಜಾನೆಗೆ ಲಗ್ಗೆ ಇಟ್ಟಿತೋ ಆಗ ಅನುದಾನ ಎನ್ನುವುದು ಮಧ್ಯವರ್ತಿಗಳ ಬದುಕಿನ ಆದಾಯದ ಸೆಲೆಯಾಯಿತು. ನಿಜವಾಗಿ ಕಲಾಕಾಯಕ ಮಾಡುವವರು ನೇಪತ್ಯಕ್ಕೆ ಸರಿದು ಈ ದಲ್ಲಾಳಿ ವರ್ಗದವರೇ ಮುಂಚೂಣಿಗೆ ಬಂದು ಫಲಾನುಭವಿಗಳಾದರು. ಸಾಂಸ್ಕೃತಿಕ ಬ್ರೋಕರ್‌ಗಳು ಕರೆದಾಗ ಬಂದು ಕಲೆಯನ್ನು ಪ್ರದರ್ಶಿಸಿ ಅವರು ಕೊಟ್ಟಷ್ಟು ತೆಗೆದುಕೊಂಡು ಹೋಗುವುದಷ್ಟಕ್ಕೆ ಹಲವಾರು ಕಲಾವಿದರುಗಳು ಮತ್ತು ಕೆಲವು ಕಲಾತಂಡಗಳು ಸೀಮಿತವಾದರು. ಕಲಾವಿದರನ್ನು ಕಲಾತಂಡಗಳನ್ನು ಬೇಕಾದಾಗ ಬೇಕಾದಷ್ಟೇ ಬಳಸಿಕೊಂಡು ಸರಕಾರದ ಹಣವನ್ನು ಪಡೆಯುವ ಒಂದು ಪಡೆಯೇ ಬೆಂಗಳೂರನ್ನೂ ಒಳಗೊಂಡಂತೆ ಜಿಲ್ಲಾಕೇಂದ್ರಗಳಲ್ಲಿ ಕ್ರಿಯಾಶೀಲವಾಯಿತು. ಕೆಲವು ದಲ್ಲಾಳಿಗಳಂತೂ ಕಲಾವಿದರುಗಳಿಗೆ -ಕಲಾತಂಡಗಳಿಗೆ ಗೌರವಧನ ಕೊಡಬೇಕಾಗುತ್ತದೆಂದು, ಕಲಾವಿದರಿಗೆ ಕೊಡಬೇಕಾದ ಹಣವನ್ನೂ ತಾವೇ ಉಳಿಸಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನುದಾನವನ್ನು ಪಡೆಯುವ ಕಲೆಯಲ್ಲಿ ಪಾರಂಗತರಾದರು. ಇದರಿಂದಾಗಿ ಕಳೆದೊಂದು ದಶಕದಲ್ಲಿ ಸಂಘ ಸಂಸ್ಥೆಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗತೊಡಗಿತು. ಒಬ್ಬೊಬ್ಬರು ಮೂರ‍್ನಾಲ್ಕು ಹೆಸರಿನಲ್ಲಿ ಸಂಘಗಳನ್ನು ನೋದಣಿ ಮಾಡಿಸಿಕೊಂಡು ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳುವ ತಂತ್ರಗಳಲ್ಲಿ ಯಶಸ್ವಿಯಾಗತೊಡಗಿದರು.

ಇದರಿಂದಾಗಿ ಭಾಷೆ, ಕಲೆ, ಸಂಸ್ಕೃತಿಯನ್ನು ಕಟ್ಟುವ ಸದಾಶಯದೊಂದಿಗೆ ಸರಕಾರ ಕೊಡಮಾಡುವ ಅನುದಾನದ ಬಹುಪಾಲು ನಿಜವಾದ ಕಲಾವಿದರ ಬದಲಾಗಿ ದಲ್ಲಾಳಿಗಳ ಜೇಬು ಸೇರಿತು. ಅಧಿಕಾರಿಗಳು ಅಷ್ಟೇ ಯಾಕೆ ರಾಜಕಾರಣಿಗಳ ಸಹಕಾರವೂ ಸಹ ಇಂತಹ ದಲ್ಲಾಳಿ ವರ್ಗದ ಜೊತೆಗಿದ್ದಿದ್ದರಿಂದಲೇ ಅನುದಾನದ ಹಣ ಅಪಾತ್ರರ ಪಾಲಾಗತೊಡಗಿತು. ಇಷ್ಟಕ್ಕೂ ಅನುದಾನಕ್ಕೆ ಆಯ್ಕೆ ಮಾಡುವ ಸಂಘಸಂಸ್ಥೆಗಳ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಅನುದಾನದ ಆಯ್ಕೆ ಸಮಿತಿಯಲ್ಲಿರುವವರಿಗೆ ಇರಲು ಸಾಧ್ಯವೇ ಇಲ್ಲಾ. ಆಯ್ಕೆ ಸಮಿತಿಯಲ್ಲಿರುವ ಅಧಿಕಾರಿಗಳಿಗಂತೂ ಸಾಂಸ್ಕೃತಿಕ ಲೋಕದ ಗಂಧಗಾಳಿಯೇ ಗೊತ್ತಿರುವುದಿಲ್ಲ. ಬಂದ ದಾಖಲೆಗಳನ್ನು ಮಾತ್ರ ಪರಿಶೀಲಿಸಿ ಯಾರಿಗೆ ಎಷ್ಟು ಲಕ್ಷ ಅನುದಾನ ಕೊಡಬೇಕೆಂಬುದನ್ನು ನಿರ್ಧರಿಸುವುದರಿಂದ ಕಾರ್ಯಕ್ರಮಗಳನ್ನು ಮಾಡಲಿ ಬಿಡಲಿ ದಾಖಲೆಗಳು ಮಾತ್ರ ಪಕ್ಕಾ ಇರುವುದಷ್ಟೇ ಅನುದಾನಕ್ಕೆ ಆಯ್ಕೆಯಾಗಲು ಬೇಕಾದ ಮಾನದಂಡವಾಗಿದೆ. ಹೀಗಾಗಿ ಯಾರು ದಾಖಲೆಗಳಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಮಾಡುತ್ತೇವೆ ಎಂದು ತೋರಿಸುತ್ತಾರೋ ಅವರಿಗೆ ಹಾಗೂ ಅಧಿಕಾರಿಗಳ ಜೊತೆ ಉತ್ತಮ ಕೊಡುಕೊಳ್ಳುವ ಬಾಂಧವ್ಯವನ್ನು ಹೊಂದಿರುತ್ತಾರೋ ಅಂತವರಿಗೆ ಮಾತ್ರ ಹೆಚ್ಚೆಚ್ಚು ಅನುದಾನದ ಭಾಗ್ಯ ಒಲಿದು ಬರುತ್ತದೆ. ನಿಜವಾದ ಕಲಾವಿದರಾದವರಿಗೆ ಸರಿಯಾಗಿ ದಾಖಲೆಗಳನ್ನು ವದಗಿಸಲು ಸಾಧ್ಯವಾಗದ್ದರಿಂದ, ಯಾವುದೋ ಒಂದು ದಾಖಲೆ ಇಲ್ಲದೇ ಹೋದರೂ ಅವರ ಬೇಡಿಕೆಯನ್ನು ತಿರಸ್ಕರಿಸಾಗುತ್ತದೆಯಾದ್ದರಿಂದ ಕಲಾಕಾಯಕನಿರತರಲ್ಲಿ ಬಹುತೇಕರಿಗೆ ಅನುದಾನ ಒಲಿದು ಬರುವುದು ಕಷ್ಟಸಾಧ್ಯವಾಗಿದೆ.

ಹೀಗಾಗಿ.. ಕಲಾಕಾಯಕ ನಿರತ ಕಲಾವಿದರು ತಮ್ಮ ಪಾಡಿಗೆ ತಾವು ಕಲೆಯ ಪ್ರದರ್ಶನವನ್ನು ಅನಾದಿ ಕಾಲದಿಂದಲೂ ಮಾಡುತ್ತಲೇ ಬಂದಿದ್ದಾರೆ. ಅಂತವರನ್ನು ಬಳಸಿಕೊಂಡು ಅನುದಾನವನ್ನು ಪಡೆದವರು ಫಲಾನುಭವಿಗಳಾಗುತ್ತಲೇ ಇದ್ದಾರೆ. ಜನರ ತೆರಿಗೆಯ ಬಹುತೇಕ ಹಣ ಅಪಾತ್ರರಿಗೆ ಸೇರಿ ಪೋಲಾಗುತ್ತಲೇ ಇದೆ. ಕಲೆ ಸಂಸ್ಕೃತಿಯ ಉದ್ದಾರದ ಮಾತಂತೂ ಬರೀ ಕಾಗದದ ಮೇಲೆ ಕುಣಿಯುತ್ತಲಿದೆ. ಕುರುಡು ಕಾಂಚಾಣ ಕಲಾವಿದರ ಬದಲಾಗಿ ಕಲಾವಿದರ ಮುಖವಾಡ ಧರಿಸಿರುವ ದಲ್ಲಾಳಿಗಳಿಗೆ ದಕ್ಕುತ್ತದೆ. ಕೆಲವಾರು ಕಲಾತಂಡದ ಮುಖಂಡರೂ ಸಹ  ಸರಕಾರಿ ಹಣದ ಹಿಂದೆ ಬಿದ್ದು ತಮ್ಮ ತಂಡದ ಕಲಾವಿದರನ್ನು ಪುಕ್ಕಟೆಯಾಗಿ ಬಳಸಿಕೊಂಡೋ ಇಲ್ಲವೇ ಚಿಲ್ಲರೆ ಕಾಸನ್ನು ಕೊಟ್ಟಂತೆ ಮಾಡಿಯೋ ಅನುದಾನದಿಂದ ಬರುವ ಹಣದಲ್ಲಿ ಸಿಂಹಪಾಲನ್ನು ಜೀರ್ಣಿಸಿಕೊಳ್ಳುತ್ತಾರೆ.

ಆ ರಾಜಕೀಯದವರನ್ನು ನೋಡ್ರೀ ನೂರಾರು ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾರೆ. ಆ ಕನ್ನಡ ಸಂಘಟನೆಯ ಅಧಿನಾಯಕನನ್ನು ನೋಡಿ ವರ್ಷಕ್ಕೆ ಕೋಟಿ ರೂಪಾಯಿ ಸರಕಾರಿ ಅನುದಾನ ಪಡೆಯುತ್ತಿದ್ದಾರೆ, ಇನ್ನು ಕೆಲವು ಜನ ಕಲಾವಿದರಾಗಿದ್ದವರು, ಒಂದಿಷ್ಟು ಕಲ್ಚರಲ್ ಈವೆಂಟ್‌ಗಳನ್ನಾದರೂ ಮಾಡುವವರು ಕೆಲವು ಲಕ್ಷಗಳನ್ನು ಪಡೆದರೆ ಯಾಕ್ರೀ  ಹೊಟ್ಟೆ  ಉರ‍್ಕೋಳ್ತೀರಾ? ಎನ್ನುವ ಉದಾರವಾದಿಗಳೂ ಸಹ ರಂಗಭೂಮಿಯ ಆಯಕಟ್ಟಿನಲ್ಲಿದ್ದಾರೆ. ಅವರಿವರು ಸರಕಾರದ ಹಣ ನುಂಗಿದರು ಎಂದು ಯಾಕ್ರೀ ಬಾಯಿ ಬಡ್ಕೋಳ್ತೀರಾ, ತಾಕತ್ತಿದ್ರೆ ನೀವು ತಗೊಳ್ರೀ ಬೇಡ ಅಂದೋರ‍್ಯಾರು? ಎನ್ನುವ ಫಲಾನುಭವಿ ಪ್ರಮುಖರೂ ಬೇಕಾದಷ್ಟಿದ್ದಾರೆ. ಅಂದರೆ ದೊಡ್ಡ ದೊಡ್ಡ ದಲ್ಲಾಳಿಗಳು, ಪ್ರಭಾವಶಾಲಿ ವ್ಯಕ್ತಿಗಳು ಸಾಕಷ್ಟು ಹಣವನ್ನು ಹೊಡೆದರೆ, ಸಣ್ಣಪುಟ್ಟ ಮಧ್ಯವರ್ತಿಗಳು ಒಂದಿಷ್ಟು ಅನುದಾನವನ್ನು ಅಕ್ರಮವಾಗಿ ಬಳಸಿಕೊಂಡರೆ ಅದು ತಪ್ಪಲ್ಲ ಎನ್ನುವುದು ಇಂತವರ ಸಮರ್ಥನೆ. ಇದು ಸಹ ಅಪಾಯಕಾರಿಯಾದಂತಹುದು. ದರೋಢೆಕೋರರಿಗಿಂತಾ ಪಿಕ್ ಪಾಕೆಟ್ ಮಾಡುವವರು ಒಳ್ಳೆಯವರು ಎನ್ನುವಂತಿದೆ ಇವರ ವಾದ. ಇಂತಹ ಅನಿಸಿಕೆಗಳೇ ದಲ್ಲಾಳಿ ವರ್ಗವನ್ನು ಪೋಷಿಸಿ ಬೆಳೆಸುತ್ತದೆ, ನಿಜವಾದ ಕಲಾವಿದರನ್ನು ಅವಕಾಶ ವಂಚಿತರನ್ನಾಗಿಸುತ್ತದೆ.

ನಿಜವಾಗಿ ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಯಬೇಕಾದದ್ದು ಉಳಿಯಬೇಕಾದದ್ದು ಜನರಿಂದ. ಯಾವಾಗ ಕಲೆ ಸಂಸ್ಕೃತಿಗಳು ರಾಜಾಶ್ರಯದಿಂದಲೇ ಬದುಕಲು ಪ್ರಯತ್ನಿಸುತ್ತವೋ ಅಂತಹ ಪ್ರಯತ್ನಗಳಲ್ಲಿ ಪ್ರಾಮಾಣಿಕತೆಯ ಕೊರತೆ ಇರುವ ಸಾಧ್ಯತೆಗಳೇ ಹೆಚ್ಚು. ಹಿಂದಿನಿಂದಲೂ ಆಸ್ಥಾನ ಕಲೆಗಳನ್ನು ಹೊರತುಪಡಿಸಿ ಬಹುತೇಕ ಕಲೆಗಳು ಹಾಗೂ ಕಲಾವಿದರುಗಳು ಜನಾಶ್ರಿತವಾಗಿಯೇ ಬೆಳೆದು ಉಳಿದು ಬಂದಿವೆ. ಜಾನಪದ ಕಲಾಪ್ರಕಾರಗಳಂತೂ ಜನರಿಂದ ಜನರಿಗಾಗಿ ಇರುವ ಕಲಾಮಾಧ್ಯಮಗಳು. ವೃತ್ತಿ ರಂಗಭೂಮಿಯಂತೂ ಟಿಕೇಟ್ ಮೂಲಕ ಜನರಿಂದಲೇ ಹಣ ಸಂಗ್ರಹಿಸಿ ಶತಮಾನಗಳಿಂದ ಉಳಿದು ಬಂದಿದೆ. ಇತ್ತೀಚೆಗೆ ಕಂಪನಿ ನಾಟಕದ ಮಾಲೀಕರೂ ಸಹ ಸರಕಾರಿ ಸಹಾಯಧನವನ್ನು ಪಡೆಯುತ್ತಿದ್ದಾರಾದರೂ ಕಲಾವಿದರುಗಳಿಗೆ, ನೇಪತ್ಯ ತಂತ್ರಜ್ಞರಿಗೆ ಸೂಕ್ತ ಸಂಬಳಗಳನ್ನು ಕೊಟ್ಟು ನಾಟಕ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಎರಡು ದಶಕಗಳಿಗಿಂತಲೂ ಮುಂಚೆ ಆಧುನಿಕ ಹವ್ಯಾಸಿ ರಂಗಭೂಮಿಲ್ಲಿ ತೊಡಗಿಸಿಕೊಂಡವರು ಅಷ್ಟಾಗಿ ಸರಕಾರಿ ಹಣವನ್ನು ಪಡೆಯುವ ಹಪಾಹಪಿಗೊಳಗಾಗಿರಲಿಲ್ಲ. ಹೊಟ್ಟೆಪಾಡಿಗೆ ಎಲ್ಲಿಯೋ ಕೆಲಸ ಮಾಡುತ್ತಿದ್ದ ರಂಗಕರ್ಮಿ ಕಲಾವಿದರುಗಳು ಹವ್ಯಾಸಕ್ಕಾಗಿ ತಮ್ಮ ಕೈಯಿಂದಲೇ ಹಣವನ್ನು ಹಾಕಿ ತಮ್ಮ ಸಮಯವನ್ನು ಕೊಟ್ಟು ನಾಟಕಗಳನ್ನು ಕಟ್ಟುತ್ತಾ ಇದ್ದರು.

ಆದರೆ.. ಆಧುನಿಕ ರಂಗಶಿಕ್ಷಣ ಕೇಂದ್ರಗಳಿಂದ ಬಂದು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವರು ನಾಟಕಕಲೆಯನ್ನು ಹವ್ಯಾಸವಾಗಿ ತೆಗೆದುಕೊಳ್ಳದೇ ವೃತ್ತಿಯನ್ನಾಗಿ ಮಾಡಿಕೊಂಡರು. ಹವ್ಯಾಸಿ ರಂಗಭೂಮಿಯಲ್ಲಿ ಪ್ರದರ್ಶನಗಳ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿಲ್ಲವಾದ್ದರಿಂದ, ಸರಕಾರಿ ಸಂಸ್ಥೆಗಳ ಅನುದಾನ, ಪ್ರಾಯೋಜನೆ, ಯೋಜನೆಗಳನ್ನು ಪಡೆದುಕೊಳ್ಳುವ ಮೂಲಕ ಆದಾಯದ ಮೂಲವನ್ನು ಕಂಡುಕೊಂಡರು. ರಾಜ್ಯ ಸರಕಾರ ಅಷ್ಟೇ ಯಾಕೆ ಕೇಂದ್ರ ಸರಕಾರದ ಸಹಾಯಧನಕ್ಕೂ ಕೈಚಾಚಿದರು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಲ್ಲಿರುವ ಅಗಣಿತ ಆರ್ಥಿಕ ಸಂಪನ್ಮೂಲ ಪಡೆಯುವಲ್ಲಿ ದಲ್ಲಾಳಿ ವರ್ಗಗಳ ಕರಾಮತ್ತಂತೂ ವಿಸ್ಮಯಕಾರಿಯಾಗಿದೆ. ಪರ್ಸಂಟೇಜ್ ವ್ಯವಹಾರಗಳು ಕುದುರಿಕೊಂಡು ಕಲಾವಿದರಲ್ಲದವರೂ ಸಹ ಸುಳ್ಳು ದಾಖಲೆಗಳನ್ನು ದಲ್ಲಾಳಿಗಳ ಮೂಲಕ ಕಳುಹಿಸಿ ವಾರ್ಷಿಕ ಅನುದಾನ ಹಾಗೂ ಪ್ರಾಯೋಜನೆಗಳನ್ನು ಪಡೆಯುತ್ತಿದ್ದಾರೆ. ರೆಪರ್ಟರಿ ನಡೆಸುತ್ತೇವೆಂದು ಗುರುಶಿಷ್ಯ ಯೋಜನೆಯಲ್ಲಿ ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಹೆಸರುವಾಸಿ ನಿರ್ದೇಶಕರುಗಳೂ ಸಹ ತೆಗೆದುಕೊಳ್ಳುತ್ತಿರುವುದು ರಂಗಭೂಮಿಯ ದುರಂತವಾಗಿದೆ. ಇದೆಲ್ಲಾ ಗೊತ್ತಿರುವ ಬಹುತೇಕರು ಸಹ ಫಲಾನುಭವಿಗಳಾಗಲು ಮಾರ್ಗಗಳನ್ನು ಹುಡುಕುತ್ತಿದ್ದಾರೆಯೇ ಅಕ್ರಮವನ್ನು ಹೊರತು ಪ್ರಶ್ನಿಸಲು ಸಿದ್ದರಾಗಿಲ್ಲ.

ಹೇಳುತ್ತಾ ಹೋದರೆ ಸರಕಾರಿ ಹಣವನ್ನು ಪಡೆಯುವುದರ ಹಿಂದೆ ಅನೇಕಾನೇಕ ಕರ್ಮಕಾಂಡಗಳಿವೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅನುದಾನವೇನಾದರೂ ಒಂದೆರಡು ವರ್ಷ ನಿಂತರೆ ಬಹುತೇಕ ದಲ್ಲಾಳಿಗಳು ನೀರಿನಿಂದ ತೆಗೆದ ಮೀನಿನಂತೆ ಏದುಸಿರು ಬಿಡುತ್ತಾರೆ. ಎಲ್ಲಿ ತಮ್ಮ ಹಕ್ಕನ್ನು ಸರಕಾರ ಕಿತ್ತುಕೊಂಡು ನಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುತ್ತದೋ ಎಂದು ಆತಂಕಗೊಳ್ಳುತ್ತಾರೆ. ಸರಕಾರಿ ಸಹಾಯಧನದ ಎನ್ನುವುದು ಈಗ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಲು ಸರಕಾರ ಕೊಡಮಾಡುವ ಸಹಕಾರವಾಗಿ ಉಳಿಯದೇ, ಸಹಾಯಧನವೇ ಎಲ್ಲಾ ಆಗಿದೆ. ಬಂದ ಹಣದಲ್ಲಿ ಕಲಾವಿದರಿಗೆ ಸಣ್ಣ ಸಂಭಾವನೆಯನ್ನೂ ಕೊಡದೇ ತಮ್ಮ ವ್ಯಯಕ್ತಿಕ ಬದುಕನ್ನು ಕಟ್ಟಿಕೊಳ್ಳುವ ಮಹಾಮಹಿಮರ ಪಡೆಯೇ ಬೇರೆ ಪ್ರಕಾರಗಳಂತೆ ಕನ್ನಡ ರಂಗಭೂಮಿಯಲ್ಲಿಯೂ ಇದೆ. ಸರಕಾರ ಅನುದಾನವನ್ನು ನಿಲ್ಲಿಸಿದರೆ ಶೇಕಡಾ ತೊಂಬತ್ತರಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಿಂತೇ ಹೋಗುತ್ತವೆ. ಈಗ ಕಳೆದಾರು ತಿಂಗಳಿಂದ ಆಗಿದ್ದೂ ಸಹ ಇದೆ.

ಸಂಗತಿ ಹೀಗಿರುವಾಗ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳೆಗಿಂತ ಕಳೆಯೇ ಹೆಚ್ಚು ಬಲಿಷ್ಟವಾಗಿ ಬೆಳೆದಿರುವಾಗ, ಸಹಾಯಧನ ಹಂಚಿಕೆಯ ವ್ಯವಸ್ಥೆಯೇ ಭ್ರಷ್ಟವಾಗಿರುವಾಗ, ಪರ‍್ಸೆಂಟೇಜ್ ವ್ಯವಹಾರ ತೀವ್ರವಾಗಿರುವಾಗ..  ಸರಕಾರವು ಸಹಾಯಧನದ ಹೆಸರಲ್ಲಿ ಜನರ ತೆರಿಗೆ ಹಣವನ್ನು ಕೊಡಮಾಡುವ ಅಗತ್ಯವಿದೆಯಾ? ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ.. ಕಳೆಯನ್ನು ನಾಶಮಾಡಲು ಬೆಳೆಯನ್ನು ಸುಡಲು ಸಾಧ್ಯವಿಲ್ಲವಲ್ಲಾ? ನಿಜಕ್ಕೂ ಕಲೆಯ ಮೇಲೆ ಬದ್ದತೆಯನ್ನು ಇಟ್ಟುಕೊಂಡು ಕೆಲಸ ಮಾಡುವ ಕೆಲವಾರು ಕಲಾಸಕ್ತ ವ್ಯಕ್ತಿಗಳು ಹಾಗೂ ತಂಡಗಳು ಈಗಲೂ ನಿಷ್ಟೆಯಿಂದ ಕೆಲಸಮಾಡುತ್ತಲೇ ಇವೆ. ಸಹಾಯಧನ ಬರಲಿ  ಬಿಡಲಿ ತಮ್ಮ ಪಾಡಿಗೆ ತಾವು ಜನರನ್ನು ಆಶ್ರಯಿಸಿಯೋ ಇಲ್ಲಾ ತಮ್ಮದೇ ಆರ್ಥಿಕ ಮೂಲಗಳನ್ನು ಹುಡುಕಿಯೋ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಲೇ ಬಂದ ತಂಡಗಳು, ಸಂಘಟನೆಗಳೂ ಇದ್ದಾವೆ. ಆದರೆ.. ನೋಡುವವರಿಗೆ ಈ ಬೆಳೆಗಿಂತ ಕಳೆಯೇ ಹೆಚ್ಚು ಕಣ್ಣಿಗೆ ರಾಚುವಷ್ಟು ಸಾಂಸ್ಕೃತಿಕ ತೋಟ ಕರಾಬಾಗಿ ಹೋಗಿದೆ.

ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕೊಡಮಾಡುವ ಸಹಾಯಧನವನ್ನು ನಿಲ್ಲಿಸುವುದರಿಂದ ಬದ್ದತೆಯಿಂದ ಕೆಲಸ ಮಾಡುವವರಿಗೆ ಒಂದಿಷ್ಟು ಸಂಕಷ್ಟವನ್ನು ತರಬಲ್ಲುದು. ಆದರೆ.. ಕಲಾಕಾಯಕವನ್ನು ನಿಷ್ಟೆಯಿಂದ ಮಾಡುವವರು ಸಹಾಯಧನದ ಮೇಲೇಯೇ ಅವಲಂಬಿತರಾಗದೇ ಜನಾಶ್ರಿತ ಆರ್ಥಿಕ ಮೂಲಗಳನ್ನು ಹುಡುಕುವುದು ಒಳ್ಳೆಯದು. ರಾಜಾಶ್ರೀತ ಅವಲಂಬನೆಗಿಂತಾ ಜನಾಶ್ರಿತ ಸ್ವಾವಲಂಬನೆ ಕಲಾಸಾಧಕನ ಗುರಿಯಾಗಬೇಕು. ಕಲೆ ಎನ್ನುವುದು ಹಣ ಮಾಡುವ ದಂದೆಯಾಗದೇ, ಕಲೆಯ ಹೆಸರಲ್ಲಿ ತನ್ನ ಹಾಗೂ ತನ್ನ ಕುಟುಂಬದವರ ಹೊಟ್ಟೆ ಹೊರೆಯುವ ಕಾಯಕವಾಗದೇ, ಕಲೆಯಿಂದ ಪಡೆದಿದ್ದಕ್ಕಿಂತ ಹೆಚ್ಚು ಕೊಡುವ ಕೆಲಸವನ್ನು ಕಲಾವಿದರು, ಕಲಾತಂಡಗಳು, ಸಂಘಸಂಸ್ಥೆಯ ರೂವಾರಿಗಳು ಮಾಡಿದಾಗ ಮಾತ್ರ ಕಲೆ ಭಾಷೆ ಸಂಸ್ಕೃತಿ ಉಳಿದು ಸಮೃದ್ದವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಕ್ರಮವಾಗಿ ಸಹಾಯಧನ ಪಡೆಯುವ ಸಾಂಸ್ಕೃತಿಕ ದಲ್ಲಾಳಿಗಳನ್ನು ವಿರೋಧಿಸುವ, ಅಂತಹ ಕಲ್ಚರಲ್ ಬ್ರೋಕರ್‌ಗಳಿಗೆ ಬೆನ್ನೆಲುಬಾಗಿ ನಿಂತ ಅಧಿಕಾರಿವರ್ಗದ ವಿರುದ್ಧ ಪ್ರತಿಭಟಿಸುವ ಕೆಲಸವೂ ಸಹ ಕಲಾನಿಷ್ಟೆಯ ಭಾಗವೇ ಆಗಿದೆ. ಕೇಳುವವರೇ ಇಲ್ಲವಾದರೆ ಅಸಲಿ  ಕಲಾವಿದರಿಗಿಂತ ನಕಲಿ ಕಲಾದಲ್ಲಾಳಿಗಳೇ ಸರಕಾರಿ ಸಹಾಯಧನದ ಬಹುಭಾಗವನ್ನು ಕಬಳಿಸುವುದರಲ್ಲಿ ಸಂದೇಹವಿಲ್ಲ. ಹಾಗೆ ಸಹಾಯಧನದ ಮೇಲೆಯೇ ಪರಾವಲಂಬಿಯಾಗಿ ಬದುಕುವ ಕಲಾವ್ಯಾಪಾರಿಗಳು ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಲು ಹೇಗೆ ಸಾಧ್ಯ?

ಸರಕಾರಿ ಸಂಸ್ಥೆಗಳ ಯೋಜನೆ ಪ್ರಾಯೋಜನೆ ಅನುದಾನ ಸಹಾಯಧನಗಳು ಇರಲಿ. ಅವುಗಳು ಅರ್ಹ ಕಲಾಕಾಯಕ ಜೀವಿಗಳಿಗೆ ದಕ್ಕಲಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ  ಸರಕಾರೀ ಸಂಸ್ಥೆಗಳಿಂದ ಸಹಾಯಧನ ಪಡೆಯುವುದರಲ್ಲಿ ತಪ್ಪೇನಿಲ್ಲಾ.. ಆದರೆ ಹಾಗೆ ಪಡೆದ ಹಣವನ್ನು ಪಡೆದ ಉದ್ದೇಶಕ್ಕಾಗಿಯೇ ಬಳಸಿದರೆ ಯಾರ ಆಕ್ಷೇಪವೂ ಇಲ್ಲಾ. ರಂಗಭೂಮಿಯವರಿಗೆ ನಿಜವಾಗಿಯೂ ಕಲೆಯ ಬಗ್ಗೆ ಕಾಳಜಿ  ಕಳಕಳಿ ಇದ್ದಲ್ಲಿ ಸಾಂಸ್ಕೃತಿಕ ದಲ್ಲಾಳಿಗಳು ಹಾಗೂ ಭ್ರಷ್ಟ ಅಧಿಕಾರಿಶಾಹಿಗಳ ವಿರುದ್ಧ ದೊಡ್ಡದಾಗಿ ಸಂಘಟಿತ ದ್ವನಿಯೆತ್ತಲಿ. ಕಲೆಯ ವನದಲ್ಲಿ ಬ್ರಹತ್ತಾಗಿ ಬೆಳೆದು ನಿಂತ ಕಳೆಯನ್ನು ನಾಶ ಮಾಡುವ ನಿಟ್ಟಿನಲ್ಲಿ ಪ್ರತಿಭಟನೆಯೆಂಬ ಕ್ರಿಮಿನಾಶಕಗಳನ್ನು ಬಳಸಲು ರಂಗಬದ್ದತೆ ಇರುವ ರಂಗಕರ್ಮಿ ಕಲಾವಿದರುಗಳು ಕಾರ್ಯನಿರತರಾಗಲಿ. ಒಟ್ಟಿನ ಮೇಲೆ ಕಲೆ ಭಾಷೆ ಸಂಸ್ಕೃತಿಯ ಉಳಿವಿಗಾಗಿ ಸರಕಾರ ಕೊಡಮಾಡುವ ಜನರ ತೆರಿಗೆಯ ಹಣ ಅದರ ಉದ್ದೇಶಕ್ಕೆ ಬಳಕೆಯಾಗಲಿ. ಕನ್ನಡದ ಕಲೆಯ ಅಸ್ಮಿತೆ ಚಿರಾಯುವಾಗಲಿ.

-      - ಶಶಿಕಾಂತ ಯಡಹಳ್ಳಿ    
        

(ವಿಶೇಷ ಸೂಚನೆ : ಸರಕಾರಿ ಸಂಸ್ಥೆಗಳಿಂದ ಸಹಾಯಧನವನ್ನು ಪಡೆದ ಉದ್ದೇಶಕ್ಕಾಗಿಯೇ ಉಪಯೋಗಿಸಿ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಡುತ್ತಿರುವ ಕಲಾವಿದರಿಗೆ, ಕಲಾತಂಡಗಳಿಗೆ, ಸಂಘ ಸಂಸ್ಥೆಗಳಿಗೆ ಅಭಿನಂದನೆಗಳೂ ಹಾಗೂ ಈ ಲೇಖನದಲ್ಲಿರುವ ಆಕ್ಷೇಪಗಳು ಅಂತಹ ಕಲಾಬದ್ದತೆ ಇರುವವರಿಗೆ ಅನ್ವಯಿಸುವುದಿಲ್ಲ.)




6 ಕಾಮೆಂಟ್‌ಗಳು:

  1. ನಿಜ ಸರ್, ರಂಗಬದ್ಧತೆಯನ್ನು ಬದುಕುವ ಸಲುವಾಗಿ ದುರೂಪಯೋಗಪಡಿಸಿಕೊಳ್ಳುತ್ತಿರುವ ದಲ್ಲಾಳಿ ವರ್ಗದ ಹೆಚ್ಚಿನ ಕಳೆಯೆಂಬ ಪರ್ಸೆಂಟೇಜ್ ಕೊಳೆ ನಿರ್ನಾಮವಾದಾಗ ಆರೋಗ್ಯಪೂರ್ಣ ರಂಗಭೂಮಿ ವಾತಾವರಣ ಸಾಧ್ಯ. ಸಮಯೋಚಿತ ಉತ್ಲಮ ೇಖನ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ತಮ್ಮ ಲೇಖನ ಅದ್ಭುತವಾಗಿದೆ ಸಾರ್. ಅಂಥವರಿಗೆ ಶಿಕ್ಷೆಯನ್ನು ವಿಧಿಸುವ ಕಾರ್ಯ ಮಾಡಲಿ ಸಾರ್. ಆದರೆ ಪ್ರಮಣಿಕವಾಗಿ ಕಲಾಸೇವೆ ಮಾಡುವವರಿಗೆ ಪ್ರೋತ್ಸಾಹ ದೊರೆಯುವಂತೆ ಮಾಡಿ ಸಾರ್.

    ಪ್ರತ್ಯುತ್ತರಅಳಿಸಿ
  3. ಮಾನ್ಯರೆ,
    ಪ್ರಸ್ತುತ ಕಲಾರ೦ಗದ ವಾಸ್ತವ ಪರಿಸ್ಥಿತಿಯನ್ನು, ಧನಸಹಾಯದ ಕರ್ಮಕಾ೦ಡವನ್ನು ಮನಮುಟ್ಟುವಂತೆ ವಿವರಿಸಿದ ರೀತಿ ಅನನ್ಯ.ತಮಗೆ ಹೃತ್ಪೂರ್ವಕ ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  4. ಬಹಳ ಚನ್ನಾಗಿ ಬರೆದಿದ್ದೀರಿ ಸಾರ್,ನಿಮ್ಮ ಲೇಖನ ಓದಿದಾಗ ನಿಜ ರಂಗ ಭೂಮಿ ಸೇವೆ ಮಾಡುವವರಿಗೆ ಖುಷಿಯಾಗುತ್ತದೆ.ಸುಳ್ಳು ಸಂಸ್ಥೆಗಳಿಗೆ ಮನಮುಟ್ಟಿ ನೋಡಿಕೊಳ್ಳುವ ಹಾಗಿದೆ.ಪ್ರತಿವಿಷಯವನ್ನು ತಿಳಿದು ಅಳಿದು ತೂಗಿ ನಿಜವಿಷಯವನ್ನು ಮನಮುಟ್ಟುವ ಹಾಗೆ ಬರೆದಿದ್ದೀರಿ.ತಮಗೆ ಮನಪೂರ್ವಕ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  5. ಸರ ನಿಮ್ಮ ಲೇಖನ ಚನ್ನಾಗಿ ಬಂದಿದೆ ಸರ

    ಪ್ರತ್ಯುತ್ತರಅಳಿಸಿ