ಸೋಮವಾರ, ಜೂನ್ 3, 2019

ಅಧ್ಯಕ್ಷ-ಅಧಿಕಾರಿ ಕದನ; ಹರಾಜಾಯ್ತು ಅಕಾಡೆಮಿಯ ಮಾನ :


 
ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಮಾತಿನ ಮಾರಾಮಾರಿ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಿದೆ.

ಯಾಕೋ ಏನೋ ಬಹುತೇಕ ಸಂದರ್ಭಗಳಲ್ಲಿ ಈ ಅಕಾಡೆಮಿಗಳ ಅಧ್ಯಕ್ಷರಿಗೂ ಹಾಗೂ ಸರಕಾರಿ ಅಧಿಕಾರಿಗಳಿಗೂ ಹೊಂದಾಣಿಕೆ ಎನ್ನುವುದೇ ಬಹಳ ಅಪರೂಪ. ಆಗಾಗ ಹಣಕಾಸಿನ ವಿಚಾರಕ್ಕೋ, ಅಹಮಿಕೆಯ ಮೇಲಾಟಕ್ಕೋ ಮುಸುಕಿನ ಗುದ್ದಾಟಗಳು ಅಕಾಡೆಮಿಯ ಆಂತರಿಕ ಆಡಳಿತದ ಭಾಗವೇನೋ ಎನ್ನುವಂತೆ ಸಾಂಗವಾಗಿ ನಡೆದುಕೊಂಡು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಸಂಘರ್ಷಗಳು ಅತಿರೇಕಕ್ಕೆ ತಿರುಗಿ ಮಾತಿನ ಚಕಮಕಿಯಿಂದ ದೈಹಿಕ ಹಲ್ಲೆಯವರೆಗೂ ಮುಂದುವರೆದದ್ದನ್ನು ಅಕಾಡೆಮಿಗಳ ಇತಿಹಾಸದಲ್ಲಿ ಕಾಣಬಹುದಾಗಿದೆ. 



ಆರ್.ನಾಗೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ದಕ್ಷಿಣಾಮೂರ್ತಿ ಎನ್ನುವವರು ರೆಜಿಸ್ಟ್ರಾರ್ ಆಗಿದ್ದರು. ಇವರಿಬ್ಬರ ನಡುವೆ ಅಕಾಡೆಮಿಯ ಸಭೆಯೊಂದರಲ್ಲಿ ಮಾತಿನ ಸಮರ ಆರಂಭಗೊಂಡು ಅದು ದಕ್ಷಿಣಾಮೂರ್ತಿಯವರ ಹಲ್ಲುಗಳನ್ನು ಮುರಿಯುವಲ್ಲಿ ಅಂತ್ಯವಾಗಿತ್ತು. ಅಧಿಕಾರಿಯ ಅಸಹಕಾರವನ್ನು ಸಾಧ್ಯವಾದಷ್ಟೂ ತಡೆದುಕೊಂಡಿದ್ದ ನಾಗೇಶರವರು  ಸಹನೆ ಕಳೆದುಕೊಂಡು ತಮ್ಮ ಮುಂದಿದ್ದ ಪೇಪರ್‌ವೇಟನ್ನು ಎತ್ತಿ ರೆಜಿಸ್ಟ್ರಾರ್ ಮೂತಿಗೆ ಗುರಿಯಿಟ್ಟು ಎಸೆದು ಹಲ್ಲುಗಳನ್ನೇ ಉದುರಿಸಿದ್ದರು. ಆ ನಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿ, ಪತ್ರಿಕೆಗಳಲ್ಲಿ ವರದಿಯಾಗಿ ನಾಟಕ ಅಕಾಡೆಮಿಯ ಗೌರವಕ್ಕೆ ಕಳಂಕ ಮೆತ್ತಿಕೊಂಡಿತ್ತು.
 
ಇದಕ್ಕಿಂತ ಮೊದಲು ಹಾಗೂ ಇದಾದ ನಂತರವೂ ಕಾಲಕಾಲಕ್ಕೆ ಕೆಲವು ಅಕಾಡೆಮಿಗಳಲ್ಲಿ ಅಧ್ಯಕ್ಷರು ಹಾಗೂ ಅಧಿಕಾರಿ ನಡುವಿನ ಸಮನ್ವಯದ ಕೊರತೆಯಿಂದ ಆದ ಸಂಘರ್ಷಗಳಿಗಂತೂ ಲೆಕ್ಕವೇ ಇಲ್ಲಾ. ಇಬ್ಬರಲ್ಲಿ ಒಬ್ಬರು ತಾಳ್ಮೆ ವಹಿಸಿದ್ದರೆ ಅದು ಹೇಗೋ ಸಾಮರಸ್ಯದಿಂದ ಕೆಲಸ ಮಾಡಬಹುದಾಗಿದೆ. ಆದರೆ.. ಯಾವಾಗ ಈ ಇಬ್ಬರೂ ಅಹಮಿಕೆಗೆ ಒಳಗಾಗಿ ತಾವು ಹೇಳಿದ್ದೇ ಆಗಬೇಕು ಎನ್ನುವ ಹಠಕ್ಕೆ ಬೀಳುತ್ತಾರೋ ಆಗ ಮಾತಿನ ಜಟಾಪಟಿ, ಅಸಹಕಾರಗಳು ಶುರುವಾಗುತ್ತವೆ. ಅಕಾಡೆಮಿ ಎನ್ನುವುದು ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆಯಾಗುತ್ತದೆ.

ಈಗ ಆಗಿದ್ದೂ ಹಾಗೇನೇ?  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಡಾ.ಅರವಿಂದ ಮಾಲಗತ್ತಿಯವರಿಗೂ ಹಾಗೂ ರೆಜಿಸ್ಟ್ರಾರ್ ಆಗಿರುವ ಕರಿಯಪ್ಪನವರಿಗೂ ಮಾತಿನ ಕತ್ತಿವರಸೆ ಶುರುವಾಗಿದೆ. ಜೊತೆಯಲ್ಲಿದ್ದವರಿಗೆ ಇರಿಸು ಮುರಿಸಾಗುವಂತೆ ಇಬ್ಬರೂ ಅಕಾಡೆಮಿಯ ಸಭೆಯಲ್ಲಿಯೇ ಕಿತ್ತಾಡಿಕೊಂಡಿದ್ದಾರೆ.

ಇಷ್ಟಕ್ಕೂ ಆಗಿದ್ದಾದರೂ ಏನು? ಮೇ 27ರಂದು ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿಯ ಸಭೆ ಕರೆಯಲಾಗಿತ್ತು. ಆಗ ರೆಜಿಸ್ಟ್ರಾರ್ ಹೆಸರಿಗೆ ಬಂದ ಅಕಾಡೆಮಿ ಫೆಲೋಶಿಪ್ಪಿಗೆ ಸಂಬಂಧಿಸಿದ ಮನವಿ ಪತ್ರವೊಂದನ್ನು ಕರಿಯಪ್ಪನವರು ನೇರವಾಗಿ ಸಭೆಯ ಗಮನಕ್ಕೆ ತಂದಿದ್ದಾರೆ. ಇದರಿಂದ ಕೆಂಡಾಮಂಡಲವಾದ ಮಾಲಗತ್ತಿ ಸಾಹೇಬರು ನನ್ನ ಗಮನಕ್ಕೆ ತರದೇ ಹೇಗೆ ನೇರವಾಗಿ ಸಭೆಯಲ್ಲಿ ಪತ್ರವನ್ನು ಮಂಡಿಸುತ್ತೀರಿ ಎಂದು ಕೋಪದಿಂದಲೇ ಕೇಳಿದ್ದಾರೆ. ರೆಜಿಸ್ಟ್ರಾರ್ ಹೆಸರಿಗೆ ಬಂದ ಪತ್ರವನ್ನು ಅಧ್ಯಕ್ಷರ ಗಮನಕ್ಕೆ ತೋರಿಸುವ ಅಗತ್ಯವೇನಿಲ್ಲವೆಂದು ಕರಿಯಪ್ಪ ಪ್ರತಿವಾದಿಸಿದ್ದಾರೆ. ಇಲ್ಲಿಗೆ ಇಬ್ಬರ ಇಗೋ ಹರ್ಟ ಆಗಿ ಮಾತಿನ ಜಟಾಪಟಿ ಶುರುವಾಗಿದೆ. ಚಿಕ್ಕ ವಿಷಯಕ್ಕೆ ಶುರುವಾದ ಜಗಳ ಇದ್ದಕ್ಕಿದ್ದಂತೆ ಅತಿರೇಕಕ್ಕೆ ಹೋಗಿದ್ದನ್ನು ನೋಡಿ ಸ್ಥಾಯಿ ಸಮಿತಿಯ ಸದಸ್ಯರುಗಳು ಹಾಗೂ ಅಕಾಡೆಮಿಯ ಸಿಬ್ಬಂದಿ ದಂಗಾಗಿ ಹೋಗಿದ್ದಾರೆ. ಈ ಇಬ್ಬರೂ ತಮ್ಮ ತಮ್ಮ ಹಕ್ಕುಗಳ ಬಗ್ಗೆ ವಾದಿಸಿದ್ದಾರೆ. ಮಾತಿನ ಕತ್ತಿ ಬೀಸಿ ಬೇಸತ್ತ ಮಾಲಗತ್ತಿಯರವರು ದೂರ್ವಾಸಾವತಾರದಲ್ಲಿ ನಾನು ಅಕಾಡೆಮಿಗೆ ರಾಜೀನಾಮೆ ಕೊಡುತ್ತೇನೆ ಎಂದು ಘೋಷಿಸಿ ಸಭೆಯನ್ನು ಬಿಟ್ಟು ಹೊರಗೆದ್ದು ಹೋಗಿದ್ದಾರೆ. ಅವರ ಹಿಂದೆಂದೇ ಓಡಿ ಹೋದ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ದಂಡಪ್ಪನವರು ಮಾಲಗತ್ತಿಯವರ ನೆತ್ತಿಗೇರಿದ ಸಿಟ್ಟನ್ನು ಸಾಧ್ಯವಾದಷ್ಟೂ ಶಮನಗೊಳಿಸಿ ಮರಳಿ  ಕರೆತಂದಿದ್ದಾರೆ. ಸಭೆ ಮುಂದುವರೆಸಿದರೆಲ್ಲಿ ಮತ್ತೆ ಮಾತಿನ ಕೆಸರೆರೆಚಾಟ ಶುರುವಾಗುತ್ತದೋ ಎನ್ನುವ ಆತಂಕದಿಂದ ತರಾತುರಿಯಲ್ಲಿ ವಂದನಾರ್ಪನೆ ಮಾಡಿ ಸಭೆಗೆ ಮಂಗಳ ಹಾಡಲಾಗಿದೆ.

ಇದಿಷ್ಟು ನಡೆದ ಘಟನೆ. ಆದರೆ.. ಈ ಇಬ್ಬರ ಇಗೋ ಕ್ಲಾಷ್‌ನಿಂದಾಗಿ ಹಾಳಾಗಿದ್ದು ಸಾಹಿತ್ಯ ಅಕಾಡೆಮಿಯ ಗೌರವ. ಸಾರ್ವಜನಿಕ ಕಛೇರಿಯಲ್ಲಿ ಆಡಳಿತದಲ್ಲಿದ್ದವರಿಗೆ ಸಹನೆ ಮತ್ತು ಸಂಯಮ ಇಲ್ಲದೇ ಹೋದರೆ ಏನು ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ  ಘಟನೆಯೊಂದು ಉದಾಹರಣೆ ಮಾತ್ರ.

ಅಕಾಡೆಮಿಗಳಿಗೆ ಸರಕಾರ ಕೋಟಿಯಷ್ಟು ಅನುದಾನವನ್ನು ಕೊಟ್ಟು ಆಗುವ ಖರ್ಚುವೆಚ್ಚಗಳಿಗೆ ಲೆಕ್ಕವನ್ನು ಇಡಲೆಂದು ಹಾಗೂ ಆಡಳಿತದಲ್ಲಿ ಅಧ್ಯಕ್ಷರಿಗೆ ಸೂಕ್ತ ಮಾಹಿತಿ ಕೊಡಲು ಸಹಾಯವಾಗಲೆಂದು ರೆಜಿಸ್ಟ್ರಾರ್ ಎನ್ನುವ ಹುದ್ದೆಯ ಅಧಿಕಾರಿಯನ್ನು ನೇಮಿಸಿರುತ್ತಾರೆ. ಸರಕಾರದ ಹಣ ಪೋಲಾಗದಿರಲಿ ಹಾಗೂ ಅಕಾಡೆಮಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲಿ ಎನ್ನುವುದೇ ಇದರ ಹಿಂದಿರುವ ಉದ್ದೇಶ. ಆದರೆ ಈ ಅಧಿಕಾರಿ ತನ್ನ ಲೆಕ್ಕಪತ್ರಗಳ ಕೆಲಸವನ್ನು ಹಾಗೂ ಬೈಲಾದಲ್ಲಿರುವಂತೆ ನಿಯಮಗಳ ಪಾಲನೆಯನ್ನು  ಮಾತ್ರ ಮಾಡುವುದು ಬಿಟ್ಟು ಇಡೀ  ಅಕಾಡೆಮಿಯ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ/ಳೆ. ಭ್ರಷ್ಟ ಅಧಿಕಾರಿಯಾಗಿದ್ದರಂತೂ ಅಕಾಡೆಮಿಗೆ ಬರುವ ಅನುದಾನದಲ್ಲಿ ಯಾವು ಬಾಗತ್ತಿನಲ್ಲಿ ಎಷ್ಟು ಕಮಿಷನ್ ಹೊಡೆಯಬೇಕು ಎನ್ನುವ ಲೆಕ್ಕಾಚಾರದಲ್ಲೇ ಮುಳುಗಿ ಅಕಾಡೆಮಿಯ ಇತರೇ ಸಿಬ್ಬಂದಿಗಳ ಮೇಲೆ ಹಿಡಿತವನ್ನು ಹೊಂದಲು ಬಯಸುತ್ತಾನೆ. ಆ ಮೂಲಕ ಹಣಕಾಸಿನ ವ್ಯವಹಾರಗಳು ಹಾಗೂ ಅವುಗಳನ್ನು ಬಳಸಲು ಇರುವ ಕಾನೂನಾತ್ಮ ಅಂಶಗಳ ಬಗ್ಗೆ ಅರಿವಿನ ಕೊರತೆ ಇರುವ ಅಧ್ಯಕ್ಷರನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲು ನೋಡುತ್ತಾನೆ.

ಯಾವಾಗ ಅಕಾಡೆಮಿಯ ಅಧ್ಯಕ್ಷರಾದವರು ಈ ಅಧಿಕಾರಿಯ ಉದ್ದೇಶವನ್ನು ಪ್ರಶ್ನಿಸುತ್ತಾರೋ ಆಗ ಅಕಾಡೆಮಿಯ ಕಾರ್ಯಯೋಜನೆಗಳ ಜಾರಿಯಲ್ಲಿ ಅಧಿಕಾರಿಯ ಅಸಹಕಾರ ಚಳುವಳಿ ಮುಂದುವರೆಯುತ್ತದೆ. ಅಧ್ಯಕ್ಷರು ಅಕಾಡೆಮಿಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಏನೇ ಪ್ರಯತ್ನಗಳನ್ನು ಮಾಡಿದರೂ ಪ್ರತಿಯೊಂದಕ್ಕೂ ಕೊಕ್ಕೆ ಹಾಕಲು ರೆಜಿಸ್ಟ್ರಾರ್ ಸಿದ್ದವಾಗಿಯೇ ಕೂತಿರುತ್ತಾನೆ. ಬಿಲ್‌ವಿದ್ಯೆಯಲ್ಲಿ ಪರಿಣತಿ ಇಲ್ಲದ ಅಧ್ಯಕ್ಷರುಗಳು, ಬಿಲ್‌ವಿದ್ಯಾಪಾರಂಗತರಾದ ಅಧಿಕಾರಿಗಳು ಕೇಳುವ ಲೆಕ್ಕಗಳಿಗೆ ಸುಸ್ತಾಗಿ ಹೋಗುತ್ತಾರೆ.  ಸಮಯಕ್ಕೆ ತಕ್ಕಂತೆ ಹೇಗೆ ಬೇಕಾದರೂ ಅರ್ಥೈಸಬಹುದಾದ ಸರಕಾರಿ ನಿಯಮಗಳ ಬಲೆಯಲ್ಲಿ ಅಧ್ಯಕ್ಷರನ್ನು ಬಂಧಿಸಿ ವಶೀಕರಿಸಿಕೊಳ್ಳಲು ಈ ಅಧಿಕಾರಿಗಳು ಪ್ರತಿ ನಿತ್ಯ ತಂತ್ರ ಪ್ರತಿತಂತ್ರಗಳನ್ನು ಹೂಡುತ್ತಲೇ ಇರುತ್ತಾರೆ.. ಕೆಲವು ಸಲ ಅಕಾಡೆಮಿಯ ಅಧ್ಯಕ್ಷರುಗಳು ಸಿಂಬಳದಲ್ಲಿ ಸಿಕ್ಕ ನೊಣದ ಹಾಗೆ ಒದ್ದಾಡುತ್ತಲೇ ಇರುತ್ತಾರೆ.

ಇದು ಅಧಿಕಾರಿಗಳ ಮಾತಾದರೆ ಇನ್ನು ಕೆಲವು ಅಧ್ಯಕ್ಷರುಗಳು ಸರಕಾರದ ಕಾನೂನು ನಿಯಮಗಳಿಗೂ ನಮಗೂ ಏನೂ ಸಂಬಂಧವಿಲ್ಲಾ. ನಾನು ಹೇಳಿದ್ದೇ ಆಗಬೇಕು ಎನ್ನುವ ಹಠಕ್ಕೆ ಬಿದ್ದು ಸಂಘರ್ಷವನ್ನು ಮೈಮೇಲೆಳೆದುಕೊಳ್ಳುತ್ತಾರೆ. ಅಕಾಡೆಮಿಗೆ ನಾನು ಸುಪ್ರೀಂ ಆಗಿರುವುದರಿಂದ ಇಲ್ಲಿ ನಾನು ಹೇಳಿದ್ದೇ ಆಗಬೇಕು ಎನ್ನುವ ಹಠವೂ ಮೇಲಾಟಕ್ಕೆ ಕಾರಣವಾಗುತ್ತದೆ. ಅಕಾಡೆಮಿಗಳಿಗೆ ಅಪ್ಪ ಅಮ್ಮನಂತಿರುವ ಈ ಅಧ್ಯಕ್ಷ-ಅಧಿಕಾರಿಯ ಜಗಳದಲ್ಲಿ ಅಕಾಡೆಮಿ ಎನ್ನುವ ಕೂಸು ಬಡವಾಗುತ್ತಾ ಹೋಗುತ್ತದೆ. ಅಧ್ಯಕ್ಷರು ಅಂದುಕೊಂಡದ್ದನ್ನು ಸಾಧಿಸುವಲ್ಲಿ ಸರಕಾರಿ ರೂಲ್ಸುಗಳು ಹಾಗೂ ಅಧಿಕಾರಿಗಳೆಂಬ ರೂಲರ್‌ಗಳು ಅಡೆತಡೆಯನ್ನು ಒಡ್ಡುತ್ತಲೇ ಇರುತ್ತಾರೆ.

ಇಂತಹ ಸಂದರ್ಭದಲ್ಲಿ ಯಾರು ಅಕಾಡೆಮಿಯನ್ನು ಮುನ್ನಡೆಸಬೇಕು ಎನ್ನುವುದೇ ಈಗ ಬಗೆಹರಿಯಬೇಕಾದ ಸಂಗತಿಯಾಗಿದೆ. ಕಾರ್ ಡ್ರೈವಿಂಗ್ ಕಲಿಯುವಾಗ ಡ್ರೈವರ್ ಸೀಟಲ್ಲಿ ಕಾರು ಓಡಿಸುವವರು ಕುಳಿತಿದ್ದರೂ ಕಾರಿನ ಎಲ್ಲಾ ಕಂಟ್ರೋಲ್ ಪಕ್ಕದಲ್ಲಿರುವ ಟ್ರೇನರ್ ಕಾಲಲ್ಲಿಯೇ ಇರುತ್ತದೆ. ಅದೇ ರೀತಿ ಆಡಳಿತದ ಅನುಭವದ ಕೊರತೆ ಇರುವ ಅಧ್ಯಕ್ಷರು ಅಕಾಡೆಮಿಗೆ ಬಂದಾಗ ಆಡಳಿತದ ಅನುಭವುಳ್ಳ ಈ ರೆಜಿಸ್ಟ್ರಾರ್ ಎನ್ನುವ ಸರಕಾರಿ ಟ್ರೇನರ್ ಇಡೀ ಅಕಾಡೆಮಿಯ ನಿಯಂತ್ರಣವನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ಬಯಸುತ್ತಾನೆ. ಮೊದಮೊದಲು ರೆಜಿಸ್ಟ್ರಾರ್ ಹೇಳಿದ್ದನ್ನು ಕೇಳುವ ಕೆಲವು ಅಧ್ಯಕ್ಷರುಗಳಿಗೆ ಆಡಳಿತದ ಬಗ್ಗೆ ಒಂದಿಷ್ಟು ಗೊತ್ತಾಗುತ್ತಿದ್ದಂತೆ ತಮ್ಮ ಚಿತ್ತ ಬಂದಂತೆ ಅಕಾಡೆಮಿಯನ್ನು ಸ್ವತಂತ್ರವಾಗಿ ಮುನ್ನಡೆಸಲು ಬಯಸುತ್ತಾರೆ. ಆದರೆ.. ಅದಕ್ಕೆ ಅವಕಾಶವಾಗದಂತೆ ಹಾಗೂ ಕೊನೆಯವರೆಗೂ ಕಂಟ್ರೋಲ್ ತನ್ನಲ್ಲಿಯೇ ಇರುವಂತೆ ಅಧಿಕಾರಿ ಶತಪ್ರಯತ್ನ ಮಾಡುತ್ತಲೇ ಇರುತ್ತಾನೆ. ಅಕಾಡೆಮಿಯ ನಿಯಂತ್ರಣಕ್ಕಾಗಿ ಈ ಇಬ್ಬರ ನಡುವೆ ಆಗಾಗ ಕ್ಲಾಶ್ ಆಗುತ್ತಲೇ ಇರುತ್ತದೆ. ಇದರಿಂದಾಗಿ ಅಕಾಡೆಮಿಯ ಕಾರ್ಯಚಟುವಟಿಕೆಗಳು ಹಲವು ಬಾರಿ ಕುಂಟಿತಕ್ಕೊಳಗಾಗುತ್ತವೆ. ಎಷ್ಟೋ ಸಲ ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕೆ ಅಕಾಡೆಮಿಯ ಸದಸ್ಯರನ್ನೇ ಅಧ್ಯಕ್ಷರ ವಿರುದ್ಧ ಎತ್ತಿಕಟ್ಟಿ ಅಧ್ಯಕ್ಷರ ಆಶಯದ ಯೋಜನೆಗಳು ಕಾರ್ಯರೂಪಕ್ಕೆ ಬರದಂತೆ ಮಾಡಿದ್ದೂ ಇದೆ.  



ಇದನ್ನು ಮನಗಂಡೇ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿ ಬಂದ ಜೆ.ಲೊಕೇಶರವರು ಆರಂಭದಿಂದಲೂ ಅಕಾಡೆಮಿಗಳಿಗೆ ಸ್ವಾಯತ್ತತೆ ಬೇಕು, ಅಧಿಕಾರಿಗಳ ಹಸ್ತಕ್ಷೇಪದಿಂದ ಅಧ್ಯಕ್ಷರುಗಳಿಗೆ ಮುಕ್ತಿ ಬೇಕು ಎಂದು ಭಾರೀ ಪ್ರಮಾಣದಲ್ಲಿ ಪ್ರಯತ್ನವನ್ನು ಮಾಡುತ್ತಲೇ ಬಂದರು. ದಶಕಗಳ ಕಾಲ ಯೂನಿಯನ್ ಲೀಡರ್ ಆಗಿದ್ದ ಲೋಕೇಶರವರಿಗೆ ಅಧಿಕಾರಿಗಳ ಕುತಂತ್ರಗಳು ಹಾಗೂ ಸ್ವಾಯತ್ತತೆಯ ಅಗತ್ಯದ ಕುರಿತು ಅರಿವಿತ್ತು. ಬೇರೆ ಅಕಾಡೆಮಿಗಳ ಅಧ್ಯಕ್ಷರೆಲ್ಲರನ್ನೂ ಸೇರಿಸಿಕೊಂಡು ಸ್ವಾಯತ್ತತೆ ಬೇಕೆಂದು ಇಲಾಖೆಯ ನಿರ್ದೇಶಕರಿಂದ ಹಿಡಿದು ಇಲಾಖೆಯ ಸಚಿವರಾಗಿದ್ದ ಉಮಾಶ್ರೀಯವರವರೆಗೂ ತಮ್ಮ ಪ್ರಯತ್ನವನ್ನು ಮುಂದುವರೆಸಿದರು. ಇದಕ್ಕೆ ಬೇರೆ ಅಕಾಡೆಮಿಗಳ ಅಧ್ಯಕ್ಷರುಗಳು ಸಂಪೂರ್ಣ ಸಹಕಾರ ಕೊಡದೇ ಇದ್ದುದರಿಂದ ಹಾಗೂ ಎಲ್ಲಿ ಸಂಪೂರ್ಣ ಸ್ವಾಯತ್ತತೆಯನ್ನು ಅಧ್ಯಕ್ಷರುಗಳಿಗೆ ಕೊಟ್ಟರೆ ತಮ್ಮ ಅಧಿಕಾರ ಕಡಿತಗೊಳ್ಳುವುದು ಎಂದು ಅಧಿಕಾರಿಗಳು ಆತಂಕಗೊಂಡಿದ್ದರಿಂದ ಸ್ವಾಯತ್ತತೆಯ ಆಗ್ರಹ ಇಲಾಖೆ ಕಾರ್ಯದರ್ಶಿಗಳ ಸಭೆಯಲ್ಲೇ ತಣ್ಣಗಾಯಿತು. ಅಕಾಡೆಮಿಗಳಲ್ಲಿ ಅಧಿಕಾರಿಶಾಹಿಗಳ ಹಸ್ತಕ್ಷೇಪ ನಿರಾತಂಕವಾಗಿ ಮುಂದುವರೆಯಿತು. ಇದರಿಂದಾಗಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ನಡುವಿನ ಅಂತರ್‌ಯುದ್ಧ ಚಿರಂಜೀವಿಯಾಯಿತು. ಈ ಇಬ್ಬರು ಆಡಳಿತಗಾರರ ನಡುವೆ ಅಕಾಡೆಮಿಗಳು ಬಡವಾದವು ಅಂದುಕೊಂಡದ್ದನ್ನು ಸಾಧಿಸ ಇದ್ದದ್ದನ್ನು ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆಗೊಳಗಾದವು.

ಹೀಗೆ ಅಧಿಕಾರಿಗಳೇ ಹಿಂಬಾಗಿಲ ಮೂಲಕ ಅಕಾಡೆಮಿಗಳನ್ನು ನಿಯಂತ್ರಿಸುವುದೇ ಆದಲ್ಲಿ, ಸರಕಾರವೇ ಆಯ್ಕೆ ಮಾಡಿದ ಅಧ್ಯಕ್ಷರು ಹಾಗೂ ಸದಸ್ಯಗಳಿಗೆ ಅಂದುಕೊಂಡದ್ದನ್ನು ಅಡತಡೆಗಳಿಲ್ಲದೇ ಮಾಡಲು ಸಂಪೂರ್ಣ ಸ್ವಾತಂತ್ರ್ಯವೇ ಇಲ್ಲ ಎಂಬುದಾದಲ್ಲಿ ಅಧಿಕಾರಿಗಳೇ ಅಕಾಡೆಮಿಯನ್ನು ನೋಡಿಕೊಳ್ಳುವುದು ಸೂಕ್ತ. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳನ್ನು ಅಧಿಕಾರಿಗಳ ಸುಪರ್ಧಿಗೆ ವಹಿಸಿ ಸರಕಾರ ಆದೇಶ ಹೊರಡಿಸುವುದೇ ಸರಿಯಾದ ಕ್ರಮ. ಯಾಕೆಂದರೆ ಭ್ರಷ್ಟ ವ್ಯವಸ್ಥೆಯ ಫಲಾನುಭವಿಗಳಾಗಿರುವ ಬಹುತೇಕ ಅಧಿಕಾರಿಗಳು ಹುಲ್ಲು ಕಂಡಲ್ಲಿ ಮೇಯುವ ಭ್ರಷ್ಟರು. ಏನನ್ನೋ  ಸಾಧಿಸಿಬಿಡಬೇಕು ಎಂದು ಸಾವಿರ ಕನಸುಗಳನ್ನು ಇಟ್ಟುಕೊಂಡು ಬಂದ ಅಧ್ಯಕ್ಷರುಗಳು ನತದೃಷ್ಟರು. ನಾನೂರು ಕೋಟಿಗಿಂತಲೂ ಹೆಚ್ಚು ವಾರ್ಷಿಕ ಬಜೆಟ್ ಇರುವ ಸಂಸ್ಕೃತಿ ಇಲಾಖೆ ಎನ್ನುವ ಫಲವತ್ತಾದ ಹುಲ್ಲುಗಾವಲನ್ನೇ ಕೆಲವಾರು ಅಧಿಕಾರಿಗಳು ಮೇಲಿನವರಿಗೆ ಪಾಲು ಕೊಟ್ಟು ಹಂಚಿಕೊಂಡು ತಿನ್ನುತ್ತಿರುವಾಗ ಇನ್ನು ಹದಿನೈದು ಇಪ್ಪತ್ತು ಕೋಟಿ ರೂಪಾಯಿಗಳ ಅನುದಾನವಿರುವ  ಎಲ್ಲಾ ಅಕಾಡೆಮಿ ಪ್ರಾಧಿಕಾರಗಳು ಅವರಿಗ್ಯಾವ ಲೆಕ್ಕ. ಕನಿಷ್ಟ ಆಯಾ ಕ್ಷೇತ್ರಗಳಲ್ಲಿ ಒಂದಿಷ್ಟು ಸಾಧನೆ ಮಾಡಿ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಸದಸ್ಯರುಗಳ ಮರ್ಯಾದೆಯಾದರೂ ಉಳಿಯುತ್ತದೆ ಎಂಬುದನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಅಕಾಡೆಮಿಗಳಿಗೆ ಕನಿಷ್ಟ ಸ್ವಾಯತ್ತತೆಯನ್ನು ಕೊಡಬೇಕಾಗಿದೆ. ಅಧಿಕಾರಿಗಳ ಕಿರುಕುಳದಿಂದ ಅಕಾಡೆಮಿಗಳ ಅಧ್ಯಕ್ಷರುಗಳನ್ನು ಕಾಪಾಡಬೇಕಿದೆ. ಜೊತೆಗೆ ಅಕಾಡೆಮಿ ಅಧ್ಯಕ್ಷರುಗಳೂ ಸಹ ತಮ್ಮ ಕನಸುಗಳನ್ನು ನನಸಾಗಿಸಲು ಅಸಾಧ್ಯವಾದ ತಾಳ್ಮೆ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸುವ ಜಾಣ್ಮೆಯನ್ನು ಬೆಳಿಸಿಕೊಳ್ಳಬೇಕಾಗಿದೆ. 

-ಶಶಿಕಾಂತ ಯಡಹಳ್ಳಿ




2 ಕಾಮೆಂಟ್‌ಗಳು:

  1. ಸೃಜನಾತ್ಮಕ ಕಾರ್ಯಗಳಿಗಿಂತ ಇಂತಹುದ್ದೆ ಮೇಲುಗೈ ಆದರೆ ಬಲು ಬೇಸರ ಆಗುತ್ತದೆ.You cannot relate creativity to administration.ಅಕಾಡೆಮಿಗಳಲ್ಲಿ ಸೃಜನಾತ್ಮಕ ಕಾರ್ಯಗಳಿಗೆ ಜಾತಿ,ವರ್ಗ ,ಅಧಿಕಾರ ನೋಡದಂತೆ ಪ್ರಾಶಸ್ತ್ಯ ಕೊಡಬೇಕು ಎಂದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ