ಬೈಯಪ್ಪನಹಳ್ಳಿ ಚಿತಾಗಾರದ
ಮುಂಭಾಗದ ವರಾಂಡದಲ್ಲಿ ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಬಿಳಿ ಬಟ್ಟೆ ಹೊದಿಸಿ ಅವರನ್ನು ಮಲಗಿಸಲಾಗಿತ್ತು.
ಎದೆಯಮೇಲೆ ಏಳೆಂಟು ಹಾರಗಳು ಜೊತೆಗೆ ಸುತ್ತಲೂ ನೆರೆದಿದ್ದ ಕೆಲವೇ ಕೆಲವು ಜನರ ಗುಂಪು. ಯಾರೋ ಒಬ್ಬ
ಸಾಮಾನ್ಯ ವ್ಯಕ್ತಿ ಮರಣ ಹೊಂದಿದ್ದಾಗಲೂ ಇದಕ್ಕಿಂತಾ ಚೆಂದದ ಮೆರವಣಿಗೆ ತೆಗೆದು, ಹಾರತುರಾಯಿಗಳಲ್ಲಿ
ಹೆಣವನ್ನು ಮುಳುಗಿಸಿ, ಒಂದಿಷ್ಟು ಜನ ಅತ್ತು ಕರೆದು ಅಲ್ಲೊಂದು ಸೂತಕದ ದೃಶ್ಯವನ್ನೇ ಸೃಷ್ಟಿಸಲಾಗುತ್ತಿತ್ತು.
ಆದರೆ.. ಈಗ ಅಲ್ಲಿ ಹೀಗೆ ಕೆಲವು ಹಾರಗಳನ್ನು ಹಾಕಿಸಿಕೊಂಡು ನಿರುಮ್ಮಳವಾಗಿ ಜಗದ ಚಿಂತೆ ಮರೆತು ಮಲಗಿರುವ
ವ್ಯಕ್ತಿ ಸಾಮಾನ್ಯರಾಗಿರಲಿಲ್ಲ ! ಇವರ ಹೆಸರನ್ನು ಕೇಳದೇ ಇರುವ ಸಾಹಿತಿ ಕಲಾವಿದರೇ ಈ ರಾಜ್ಯ ದೇಶದಲ್ಲಿಲ್ಲ.
ಅಕ್ಷರ ಲೋಕದ ಅಸಾಮಾನ್ಯ ವ್ಯಕ್ತಿ,
ರಂಗಭೂಮಿಯ ಅದಮ್ಯ ಶಕ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಭಾರತೀಯ ರಂಗಭೂಮಿಯ ಶ್ರೇಷ್ಟ ನಾಟಕಕಾರ
ಗಿರೀಶ್ ಕಾರ್ನಾಡರು ತಮ್ಮ ಸಾರ್ಥಕ ಬದುಕನ್ನು ಅಂತ್ಯಗೊಳಿಸಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಚಿತಾಗಾರದ
ಮುಂಬಾಗದ ವರಾಂಡದ ಚಪ್ಪಡಿ ಕಲ್ಲಿನ ಹಾಸಿಗೆಯ ಮೇಲೆ ಚಿರನಿದ್ರೆಯಲ್ಲಿದ್ದರು. ಕಣ್ಣಳತೆಯಲ್ಲಿ ಲೆಕ್ಕ
ಹಾಕಿದರು ಸುತ್ತಲೂ ಅಂದಾಜು ಇನ್ನೂರೈವತ್ತು ಜನ ಸೇರಿರಬಹುದು. ಅದರಲ್ಲಿ ಅರ್ಧದಷ್ಟು ಜನ ಪೊಲೀಸರು
ಮತ್ತು ಮಾಧ್ಯಮದವರು.
ಆಶ್ಚರ್ಯ, ಕನ್ನಡ ರಂಗಭೂಮಿಯ
ಬೆಳಕನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ, ನಾಟಕ ಸಾಹಿತ್ಯಕ್ಕಾಗಿಯೇ ಜ್ಞಾನಪೀಠ
ಪ್ರಶಸ್ತಿ ಪಡೆದ, ಕನ್ನಡ ರಂಗಭೂಮಿಗೆ ವಿಶಿಷ್ಟವಾದ ಅಪರೂಪದ ನಾಟಕಗಳನ್ನು ಬರೆದುಕೊಟ್ಟು ಆಧುನಿಕ ರಂಗಭೂಮಿಯನ್ನು
ಶ್ರೀಮಂತಗೊಳಿಸಿದ ಹೆಸರಾಂತ ವ್ಯಕ್ತಿಯೊಬ್ಬರ ಪಾರ್ಥೀವ ಶರೀರವನ್ನು ಹೀಗೆ ಅತೀ ಸಾಮಾನ್ಯ ವ್ಯಕ್ತಿಯ
ಶವದಂತೆ ಅಂತ್ಯಸಂಸ್ಕಾರಕ್ಕಾಗಿ ತಂದಿರಿಸಿದ್ದು ನಿಜಕ್ಕೂ ವಿಸ್ಮಯಕಾರಿಯಾದದ್ದು.
ಕಾರ್ನಾಡರೆಂದರೇ ಹೀಗೆ.. ಅವರಿಗೆ
ವಿಧಿವಿಧಾನಗಳ ಹೆಸರಿನ ಆಡಂಬರಗಳ ಬಗ್ಗೆ ಆಸ್ತೆ ಹಾಗೂ ಆಸಕ್ತಿ ಎರಡೂ ಇರಲಿಲ್ಲ. ಸನಾತನ ಸಂಪ್ರದಾಯಗಳ
ಕುರಿತು ಭ್ರಮೆಗಳಿರಲಿಲ್ಲ, ಸಾವಿನ ನಂತರದ ಸ್ವರ್ಗನರಕಗಳ ಕಲ್ಪನೆಗಳ ಕುರಿತು ನಂಬಿಕೆಗಳಿರಲಿಲ್ಲ,
‘ಇರುವವರೆಗೆ
ಎಲ್ಲಾ, ಸತ್ತಮೇಲೆ ಏನೂ ಇಲ್ಲಾ’ ಎಂದು ಅರಿತಿದ್ದವರು. ಹಾಗಾಗಿ ಸಾವಿಗೆ ಮುನ್ನವೇ “ಸತ್ತನಂತರ ಯಾವುದೇ ಧಾರ್ಮಿಕ
ವಿಧಿವಿಧಾನಗಳನ್ನು ಮಾಡಕೂಡದು, ಸತ್ತ ಶವದ ಮೆರವಣಿಗೆ ವೈಭವೀಕರಣಗಳು ಆಗಕೂಡದು, ಸರಕಾರಿ ಗೌರವಾದರಗಳು
ನಡೆಯಕೂಡದು” ಎಂದು ಕುಟುಂಬಸ್ತರಿಗೆ ಕಟ್ಟುಪಾಡು ಮಾಡಿ ತಮ್ಮ ಪಾಡಿಗೆ
ತಾವು ಜಗದ ಜಾತ್ರೆ ಮುಗಿಸಿ ಮತ್ತೆ ಮರಳಿ ಬರದ ಶೂನ್ಯದತ್ತ ಯಾತ್ರೆ ಹೊರಟರು.
ಶೋಕತಪ್ತರಾದ ಕಾರ್ನಾಡರ ಮಗ ಹಾಗೂ ಮಗಳು |
2019,
ಜೂನ್ 10ರಂದು
ಬೆಳಿಗ್ಗೆ ಎಂಟು ಗಂಟೆಗೆ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ ಕಾರ್ನಾಡರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ
ಒಂಚೂರು ಆಘಾತವನ್ನುಂಟು ಮಾಡಿತು. ಒಂಬತ್ತು ಗಂಟೆಗೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಸಾವಿನ ಸುದ್ದಿ
ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿ ಮನಸ್ಸು ಭಾರವಾಯಿತು. ಕಳೆದ ಮೂರು ವರ್ಷಗಳಿಂದ ಕಾರ್ನಾಡರ ಆರೋಗ್ಯ
ಕ್ಷೀಣಿಸತೊಡಗಿತ್ತು. ಉಸಿರಾಟದ ತೊಂದರೆಯಿಂದಾಗಿ ಕೃತಕವಾಗಿ ಆಕ್ಸಿಜನ್ ಉಸಿರಾಡಿಸುತ್ತಲೇ ಬದುಕಿನ
ಬಂಡಿ ಉರುಳಿಸುತ್ತಿದ್ದರು. ಬರುಬರುತ್ತಾ ಬಹುಅಂಗಾಂಗಗಳ ವೈಪಲ್ಯವೇ ಕಾರಣವಾಗಿ ಜೂನ್ 10 ರಂದು ಗಿರೀಶರವರ ಹೃದಯ
ಸ್ಥಬ್ದವಾಗಿ ಉಸಿರು ನಿಂತಿತು. ಕಾರ್ನಾಡರು ಎಂಬತ್ತು ವರ್ಷಗಳ ಸುದೀರ್ಘ ಬದುಕನ್ನು ಸಾರ್ಥಕಗೊಳಿಸಿಕೊಂಡು
ಸಾಂಸ್ಕೃತಿಕ ಲೋಕದ ಚರಿತ್ರೆಯಲ್ಲಿ ಉಳಿಯಬಹುದಾದಂತಹ ಅನನ್ಯ ಕೊಡುಗೆಗಳನ್ನು ಕೊಟ್ಟು ಕಾಲನ ವಶವಾದರು.
‘ಹೇಳುವುದೊಂದು ಮಾಡುವುದೊಂದು’ ಎನ್ನುವಂತೆ ಬದುಕಿದ ಸಾಧಕರನ್ನು
ನೋಡಿದ್ದೇವೆ, ‘ಬರೆದಿದ್ದೊಂದು ಬದುಕಿದ್ದೊಂದು’ ಎನ್ನುವಂತೆ ಜೀವನ ಸಾಗಿಸಿದ
ಅತಿರಥರನ್ನೂ ಕಂಡಿದ್ದೇವೆ. ಆದರೆ ತಾವು ನಂಬಿದ ಸಿದ್ದಾಂತಗಳಿಗೆ ಬದ್ಧರಾಗಿ ನಡೆದಂತ ನುಡಿದ, ನುಡಿದಂತೆ
ನಡೆದ ವ್ಯಕ್ತಿಗಳು ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದವರು ಗಿರೀಶ್ ಕಾರ್ನಾಡರು. ಅವರ ವಿಚಾರಗಳನ್ನು
ವಿರೋಧಿಸುವವರೂ ಇದ್ದಾರೆ, ಅವರ ಹಿಂದುತ್ವ ವಿರೋಧಿತನವನ್ನು ಖಂಡಿಸುವವರೂ ಇದ್ದಾರೆ, ಅವರ ವಿವಾದಾತ್ಮಕ
ಹೇಳಿಕೆಗಳನ್ನು ಒಪ್ಪದೇ ಇರುವವರೂ ಬೇಕಾದಷ್ಟು ಜನರಿದ್ದಾರೆ. ಆದರೆ.. ಯಾರು ಎಷ್ಟೇ ವಿರೋಧಿಸಲಿ, ಅದ್ಯಾರು
ಅದೆಷ್ಟೇ ಪ್ರತಿಭಟಿಸಲಿ ತಾವು ನಂಬಿದ ಸಿದ್ದಾಂತಕ್ಕೆ ಕೊನೆಯವರೆಗೂ ನಿಷ್ಟರಾಗಿದ್ದ ಕಾರ್ನಾಡರ ಬದ್ದತೆಯನ್ನು
ಒಪ್ಪಲೇಬೇಕು.
ಎಲ್ಲಾ ರೀತಿಯ ಹೇರಿಕೆಗಳನ್ನೂ
ತಮ್ಮ ಬದುಕಿನಾದ್ಯಂತ ಕಾರ್ನಾಡರು ವಿರೋಧಿಸುತ್ತಲೇ ಬಂದರು. ಗೋಮಾಂಸ ನಿಷೇಧವನ್ನು ಮಾಂಸಾಹಾರಿಗಳ ಮೇಲೆ
ಹೇರಲು ಹಿಂದುತ್ವವಾದಿಗಳು ಪ್ರಯತ್ನಿಸಿದಾಗ ಕಾರ್ನಾಡರು ಜನರ ಆಹಾರದ ಹಕ್ಕನ್ನು ಎತ್ತಿಹಿಡಿಯಲು ಬೀದಿಗಿಳಿದು
ಪ್ರತಿಭಟಿಸಿದ್ದರು. ಸಲಿಂಗ ಕಾಮಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಕಾನೂನುಗಳನ್ನು ಕಿತ್ತು ಹಾಕಲು
ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲಕೊಟ್ಟರು. ಹಿಂದುತ್ವವಾದವನ್ನು ವಿರೋಧಿಸಿದವರೆಲ್ಲರನ್ನು
ನಗರ ನಕ್ಸಲರು ಎಂದು ಆರೋಪಿಸಿ ಸಂಘಪರಿವಾರದವರು ಹಿಯಾಳಿಸುತ್ತಿದ್ದಾಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ
ಕಾರ್ನಾಡರು ಆಕ್ಸಿಜನ್ ನಳಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡೇ
ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಅವರ ಕತ್ತಿನಲ್ಲಿ ‘ನಾನೂ ನಗರ ನಕ್ಸಲ್’ ಎನ್ನುವ ಬಿತ್ತಿಪತ್ರವನ್ನು
ತೂಗಿಹಾಕಿಕೊಂಡೇ ಬಂದು ಬಲಪಂಥೀಯರ ಅಸಹಿಷ್ಣುತತೆಯ ವಿರುದ್ಧ ಪ್ರತಿಭಟಿಸಿದ್ದರು. ವ್ಯಕ್ತಿ ಸ್ವಾತಂತ್ರ್ಯಕ್ಕೆ
ಧಕ್ಕೆ ಬಂದಾಗ, ಮನುಷ್ಯರ ಮೂಲಭೂತ ಅಗತ್ಯಗಳನ್ನು ಬಲವಂತವಾಗಿ ನಿರ್ಬಂಧಿಸಿದಾಗ, ಅಲ್ಪಸಂಖ್ಯಾತರ ಹಕ್ಕುಗಳಿಗೆ
ಚ್ಯುತಿಯಾದಾಗ, ಕಾನೂನುಗಳು ಮಾನವೀಯತೆಯ ಮೇಲೆ ಸವಾರಿ ಮಾಡಿದಾಗಲೆಲ್ಲಾ ಕಾರ್ನಾಡರು ಬೀದಿಗಿಳಿದು ಪ್ರತಿಭಟನಾನಿರತರ
ಜೊತೆಗೆ ಸೇರಿ ವಿರೋಧಿಸುತ್ತಲೇ ಬಂದವರು. ಅವರ ಈ ಎಲ್ಲಾ ವಿರೋಧಗಳು ವಿವಾದಗಳಿಗೆ ಕಾರಣವಾಗಿದ್ದವು.
ಕಾರ್ನಾಡರಿಗೆ ಜೀವಬೆದರಿಕೆ ಬರಲೂ ನೆಪವಾಗಿದ್ದವು. ಉಗ್ರ ಬಲಪಂಥೀಯರ ಹಿಟ್ ಲಿಸ್ಟಲ್ಲಿ ಕಾರ್ನಾಡರ
ಹೆಸರೂ ಸೇರ್ಪಡೆಯಾಗುವಂತೆ ಮಾಡಿದ್ದವು. ಆದರೆ.. ಇಂತಹ ಯಾವುದೇ ಬೆದರಿಕೆಗಳಿಗೂ ಒಂಚೂರು ಮಣಿಯದೇ ತಾವು
ನಂಬಿದ್ದನ್ನು ನಿರ್ಬಡೆಯಿಂದ ಹೇಳುತ್ತಲೇ ಬದುಕಿದ ಕಾರ್ನಾಡರು ಬಹುಸಂಖ್ಯಾತರಿಂದ ತುಳಿತಕ್ಕೊಳಗಾದ
ಅಲ್ಪಸಂಖ್ಯಾತರ ದಮನಿತ ಜನರ ದ್ವನಿಯಾಗಿದ್ದರು.
ಕಾಂಟ್ರವರ್ಸಿಗಳಿಗೂ ಕಾರ್ನಾಡರಿಗೂ
ಅವಿನಾಭಾವ ಸಂಬಂಧ. ತಮಗನ್ನಿಸಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೇ ನೇರವಾಗಿ ನಿಷ್ಠುರವಾಗಿ ಹೇಳುವ
ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಕಾರ್ನಾಡರ ಅನೇಕ ಅನಿಸಿಕೆಗಳು ದೇಶಾದ್ಯಂತ ತೀವ್ರ ವಿವಾದಗಳನ್ನು
ಹುಟ್ಟಿಹಾಕಿ ಗಿರೀಶರವರನ್ನು ಸದಾ ಸುದ್ದಿಯಲ್ಲಿಟ್ಟಿವೆ. ರಾಷ್ಟ್ರಕವಿ ರವೀಂದ್ರನಾಥ ಠಾಗೋರರವರವರನ್ನು
‘ಎರಡನೇ
ದರ್ಜೆ ನಾಟಕಕಾರ’ ಎಂದು ಸಮಾರಂಭವೊಂದರಲ್ಲಿ ನೇರವಾಗಿ ಆರೋಪಿಸಿದಾಗ ದೇಶಾದ್ಯಂತ
ವಿರೋಧವನ್ನು ಎದುರಿಸಿದರು. 2012ರ ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ
ನೈಪಾಲ್‌ರವರನ್ನು ಹೀಯಾಳಿಸಿ ಮಾತಾಡಿದ್ದು ಅಂತರಾಷ್ಟ್ರೀಯ ವಿವಾದವಾಗಿತ್ತು. 2915ರಲ್ಲಿ ಬೆಂಗಳೂರಿನ
ವಿಧಾನಸೌಧದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿಯೂ ಸಹ ‘ಬೆಂಗಳೂರು ಅಂತರಾಷ್ಟ್ರೀಯ
ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲಿಗೆ ಟಿಪು ಸುಲ್ತಾನ್ ಹೆಸರಿಡಬೇಕು ಯಾಕೆಂದರೆ ಟಿಪು ಹುಟ್ಟಿದ್ದು
ದೇವನಹಳ್ಳಿಯಲ್ಲಿ’ ಎಂದು ಹೇಳಿ ರಾಜ್ಯಾದ್ಯಂತ ವಿವಾದದ ಕಿಡಿಯನ್ನು ಹೊತ್ತಿಸಿ
ಸುಮ್ಮನಾಗಿದ್ದರು. ಈ ಕಿಡಿ ಬೆಂಕಿಯಾಗಿ ಧಗಧಗಿಸಿದಾಗ ಕ್ಷಮೆ ಕೋರಿ ವಿವಾದವನ್ನು ತಣ್ಣಗಾಗಿಸಿದ್ದರು.
“ಪ್ರಚಾರಕ್ಕಾಗಿಯೋ, ಪ್ರಶಸ್ತಿಗಳಿಗಾಗಿಯೋ,
ಸದಾ ಸುದ್ದಿಯಲ್ಲಿರಲೆಂದೋ ಕಾರ್ನಾಡರು ಹೀಗೆ ವಿವಾದಗಳನ್ನು ಸೃಷ್ಟಿಸುತ್ತಾರೆ” ಎಂಬುದು ಅವರನ್ನು ವಿರೋಧಿಸುವವರ
ಆರೋಪವಾಗಿತ್ತು. ಆದರೆ.. ತಮಗನ್ನಿಸಿದ್ದನ್ನು ನೇರವಾಗಿ ಅಭಿವ್ಯಕ್ತಿಸುವ ಚಟ ಮತ್ತು ಹಠ ಇದ್ದುದರಿಂದ
ಮುಂದಿನ ಪರಿಣಾಮಗಳ ಬಗ್ಗೆ ಎಂದೂ ಆಲೋಚನೆ ಮಾಡದೇ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಕಾರ್ನಾಡರು
ಪಜೀತಿಗೆ ಒಳಗಾಗುತ್ತಿದ್ದರು. ಇದಕ್ಕಾಗಿಯೇ ಹಸಿದು ಕಾಯುತ್ತಿರುವ ಸುದ್ದಿ ಮಾಧ್ಯಮಗಳು ಗಿರೀಶರವರ
ಹೇಳಿಕೆಗಳನ್ನು ಅತಿಯಾಗಿ ವೈಭವೀಕರಿಸಿ ಕಾರ್ನಾಡರನ್ನು ಸದಾ ಸುದ್ದಿಯಲ್ಲಿರಿಸಲು ಸಹಕರಿಸುತ್ತಲೇ ಬಂದವು.
ವಾದವಿವಾದಗಳೇನೇ ಇರಲಿ...
ಗಿರೀಶ್ ಕಾರ್ನಾಡರು ತಮ್ಮ ಬಹುಮುಖಿ ಪ್ರತಿಭೆಯಿಂದಾಗಿ ದೇಶಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಟಕಕಾರರಾಗಿ,
ನಟರಾಗಿ, ಚಲನಚಿತ್ರಗಳ ನಿರ್ದೇಶಕರಾಗಿ, ಸ್ಕ್ರಿಪ್ಟ್ ರೈಟರಾಗಿ, ಬರಹಗಾರರಾಗಿ, ಪ್ರತಿಷ್ಠಿತ ಸಾಂಸ್ಕೃತಿಕ
ಸಂಸ್ಥೆಗಳ ನಿರ್ದೇಶಕರಾಗಿ ರಾಜ್ಯದ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲಿಯೂ ಸಹ ತಮ್ಮ ಅಸ್ಮಿತೆಯನ್ನು
ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಬೆಂಗಾಲಿಯಲ್ಲಿ ಬಾದಲ್ ಸರ್ಕಾರ್, ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್,
ಹಿಂದಿಯಲ್ಲಿ ಮೋಹನ್ ರಾಕೇಶ್‌ರವರು ಆಧುನಿಕ ರಂಗಭೂಮಿಯಲ್ಲಿ ನಾಟಕಕಾರರಾಗಿ ದೇಶಾದ್ಯಂತ ಹೆಸರಾದಂತೆಯೇ
ಕನ್ನಡದಲ್ಲಿ ಗಿರೀಶ್ ಕಾರ್ನಾಡರು ಜಗದ್ವಿಖ್ಯಾತರಾದವರು. ಕಾರ್ನಾಡರು ಬರೆದ ನಾಟಕಗಳು ಒಂದಕ್ಕಿಂತಾ
ಒಂದು ವಿಭಿನ್ನವಾಗಿರುವಂತಹವು. ಪುರಾಣ, ಚರಿತ್ರೆ, ಜಾನಪದಗಳ ಸೊಗಡನ್ನು ಸಂಸ್ಕರಿಸಿ ಕಾರ್ನಾಡರು ಬರೆದ
ನಾಟಕಗಳು ದೇಶಾದ್ಯಂತ ರಂಗಭೂಮಿಯಲ್ಲಿ ಸಂಚಲನವನ್ನು ಉಂಟುಮಾಡಿದವು. ಕನ್ನಡದಲ್ಲಿ ಒಬ್ಬ ಅಪ್ರತಿಮ ಪ್ರತಿಭಾವಂತ
ನಾಟಕಕಾರ ಹುಟ್ಟಿ ಬರಲು ಕಾರಣವಾದವು.
ಚಿತ್ರಕಲಾವಿದರು ಹಾಗೂ ಕವಿಯಾಗಿದ್ದ
ಕಾರ್ನಾಡರು ಮೊಟ್ಟಮೊದಲ ಬಾರಿಗೆ 1961ರಲ್ಲಿ ಬರೆದ ನಾಟಕ ‘ಯಯಾತಿ’. ಕಾರ್ನಾಡರಿಗೆ ದೇಶಾದ್ಯಂತ
ಹೆಸರು ತಂದುಕೊಟ್ಟು ಜ್ಞಾನಪೀಠ ಪ್ರಶಸ್ತಿ ದೊರಕಲು ಕಾರಣವಾಗಿದ್ದು 1964ರಲ್ಲಿ ರಚಿಸಿದ ನಾಟಕ ‘ತುಘಲಕ್’. ಕನ್ನಡದಲ್ಲಿ ಪ್ರೊ.ಬಿ.ಚಂದ್ರಶೇಖರರವರು
ನಿರ್ದೇಶಿಸಿದ್ದ ಈ ನಾಟಕ ತದನಂತರ ಸಿ.ಆರ್.ಸಿಂಹರವರ ಅಭಿನಯ ಮತ್ತು ನಿರ್ದೇಶನದಲ್ಲಿ (1969ರಿಂದ)
ಅತೀ ಹೆಚ್ಚು ಖ್ಯಾತಿಯನ್ನು ಪಡೆದು ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿತು. ಬಿ.ವಿ.ಕಾರಂತರೇ ಈ ನಾಟಕವನ್ನು ಹಿಂದಿ ಭಾಷೆಗೆ ರೂಪಾಂತರ
ಮಾಡಿದ್ದರು. ಭಾರತದ ಪ್ರಮುಖ ರಂಗನಿರ್ದೇಶಕರುಗಳಾದ ಇಬ್ರಾಹಿಂ ಅಲ್ಕಾಜಿ, ಪ್ರಸನ್ನ, ಅರವಿಂದ ಗೌರ್,
ದಿನೇಶ್ ಥಾಕೂರ್‌ರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಬೆಂಗಾಲಿ ಭಾಷೆಯಲ್ಲೂ ಸಹ ಶ್ಯಾಮಾನಂದ್
ಜಲನ್‌ರವರಿಂದ ‘ತುಘಲಕ್’ ನಿರ್ದೇಶನಕ್ಕೊಳಗಾಗಿದೆ.
‘ತುಘಲಕ್’ ನಾಟಕ ಇಂಗ್ಲೀಷ್, ಹಂಗೇರಿಯನ್,
ಸ್ಪ್ಯಾನಿಶ್, ಜರ್ಮನ್ ಭಾಷೆಗಳಿಗೂ ಅನುವಾದವಾಗಿದೆ.
ಮಾನಿಶಾದ, 1971ರಲ್ಲಿ ಹಯವದನ, 1977ರಲ್ಲಿ ಅಂಜುಮಲ್ಲಿಗೆ, 1980ರಲ್ಲಿ ಹಿಟ್ಟಿನ ಹುಂಜ, 1989ರಲ್ಲಿ ನಾಗಮಂಡಲ, 1991ರಲ್ಲಿ ತಲೆದಂಡ, 1994ರಲ್ಲಿ ಅಗ್ನಿ ಮತ್ತು ಮಳೆ, 2000ರಲ್ಲಿ ಟಿಪು ಸುಲ್ತಾನ ಕಂಡ ಕನಸು, 2006ರಲ್ಲಿ ಒಡಕಲು ಬಿಂಬ
ಹಾಗೂ ಮದುವೆ ಅಲ್ಬಂ, 2012ರಲ್ಲಿ ಹೂ ಮತ್ತು ಬೆಂದ ಕಾಳು ಆನ್ ಟೋಸ್ಟ್.. ಹೀಗೆ ಒಟ್ಟು ಹದಿನಾಲ್ಕು
ನಾಟಕಗಳನ್ನು ಕಾರ್ನಾಡರು ರಚಿಸಿದ್ದಾರೆ. ಸಂಖ್ಯೆಯ ದೃಷ್ಟಿಯಲ್ಲಿ ಇವು ಜಾಸ್ತಿ ಅಲ್ಲದೇ ಇರಬಹುದು,
ಆದರೆ.. ಯಶಸ್ಸಿನ ದಾರಿಯಲ್ಲಿ ಬಹುತೇಕ ನಾಟಕಗಳು ಮೈಲುಗಲ್ಲಾಗುವಂತಹುವೇ ಆಗಿವೆ. ಕಾರ್ನಾಡರು ಬಾದಲ್
ಸರ್ಕಾರರ ‘ಏವಂ ಇಂದ್ರಜಿತ್’ ನಾಟಕವನ್ನು ಹಾಗೂ ಮರಾಠಿಯ
ಮಹೇಶ್ ಎಲಕುಂಚವಾರರ ವಾಸಾಂಸಿ ಜೀರ್ಣಾನಿ ಮತ್ತು ಧರ್ಮಪುತ್ರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
‘ತಲೆದಂಡ’ ನಾಟಕಕ್ಕೆ ಕರ್ನಾಟಕ ನಾಟಕ
ಅಕಾಡೆಮಿ (1990), ಕರ್ನಾಟಕ ಸಾಹಿತ್ಯ ಅಕಾಡೆಮಿ (1993) ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ (1994)
ಪ್ರಶಸ್ತಿಗಳು ದೊರಕಿವೆ.
ಆಗೊಮ್ಮೆ ಈಗೊಮ್ಮೆ’ ಎನ್ನುವ ಹೆಸರಿನಲ್ಲಿ ಕಾರ್ನಾಡರು
ಬರೆದ ಹಲವಾರು ಲೇಖನಗಳ ಸಂಗ್ರಹವು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. 2011ರಲ್ಲಿ ‘ಆಡಾಡತ ಆಯುಷ್ಯ’ ಎನ್ನುವ ಹೆಸರಲ್ಲಿ ತಮ್ಮ
ಆತ್ಮಕತೆಯನ್ನೂ ಗಿರೀಶರವರು ಬರೆದಿದ್ದು ಧಾರವಾಡದ ಮನೋಹರ ಗ್ರಂಥ ಮಾಲಾದವರು ಪ್ರಕಟಿಸಿದ್ದಾರೆ.
ಬಹುಭಾಷಾ ಚಲನಚಿತ್ರ ನಟರಾಗಿಯೂ
ಗುರುತಿಸಲ್ಪಟ್ಟಿರುವ ಕಾರ್ನಾಡರು ಕನ್ನಡ, ಹಿಂದಿ, ತಮಿಳು, ಮಲಯಾಳಿ, ತೆಲಗು, ಮರಾಠಿ ಭಾಷೆಗಳೂ ಸೇರಿದಂತೆ
ಒಟ್ಟು ನೂರರಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ದ ಟಿವಿ ಸೀರಿಯಲ್‌ಗಳಾದ ‘ಮಾಲ್ಗುಡಿ ಡೇಸ್ ಹಾಗೂ ಇಂದ್ರಧನುಷ್’ನಲ್ಲಿಯೂ ಸಹ ತಮ್ಮ ನಟನೆಯ
ಮೂಲಕ ಗಮನ ಸೆಳೆದಿದ್ದಾರೆ. ಸಿನೆಮಾ ನಿರ್ದೇಶಕರಾಗಿಯೂ ಹೆಸರುವಾಸಿಯಾಗಿರುವ ಕಾರ್ನಾಡರು 1971ರಲ್ಲಿ
ನಿರ್ದೇಶಿಸಿದ್ದ ‘ವಂಶವೃಕ್ಷ’ ಕನ್ನಡ ಸಿನೆಮಾದ ನಿರ್ದೇಶನಕ್ಕಾಗಿ
ರಾಷ್ಟೀಯ ಫಿಲಂ ಪ್ರಶಸ್ತಿ ಪುರಸ್ಕೃತವಾಗಿತ್ತು. ಕನ್ನಡದ ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನೂ ಸಹ
ತಮ್ಮದಾಗಿಸಿಕೊಂಡಿತ್ತು. ತದನಂತರ ತಬ್ಬಲಿಯು ನೀನಾದೆ ಮಗನೆ (1977), ಗೋಧೂಳಿ (ಹಿಂದಿ 1977), ಒಂದಾನೊಂದು
ಕಾಲದಲ್ಲಿ (1978), ಕಾನೂರು ಹೆಗ್ಗಡತಿ (1999), ಕಾಡು (1973), ಉತ್ಸವ್ (ಹಿಂದಿ 1984) ಚೆಲುವಿ
(ಹಿಂದಿ ಮತ್ತು ಕನ್ನಡ 1992), ಚಿದಂಬರ ರಹಸ್ಯ (ಟಿವಿ ಫಿಲಂ).. ಎನ್ನುವ ಕಲಾತ್ಮಕ ಸಿನೆಮಾಗಳನ್ನು
ಕಾರ್ನಾಡರು ನಿರ್ದೇಶಿಸಿ ಸಿನೆಮಾ ರಂಗದಲ್ಲೂ ಸಹ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಕಾರ್ನಾಡರು ನಿರ್ದೇಶಿಸಿದ
ಕಾಡು, ಒಂದಾನೊಂದು ಕಾಲದಲ್ಲಿ, ತಬ್ಬಲಿಯು ನೀನಾದೆ ಮಗನೆ, ಚೆಲುವಿ, ಕಾನೂರು ಹೆಗ್ಗಡತಿ.. ಹೀಗೆ ಅವರ
ಬಹುತೇಕ ಸಿನೆಮಾಗಳೆಲ್ಲಾ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿವೆ. ವಂಶವೃಕ್ಷ, ಕಾಡು,
ಒಂದಾನೊಂದು ಕಾಲದಲ್ಲಿ ಈ ಮೂರೂ ಸಿನೆಮಾಗಳ ನಿರ್ದೇಶನಕ್ಕಾಗಿ ಪ್ರತಿಷ್ಟಿತ ಫಿಲಂ ಫೇರ್ ಅವಾರ್ಡ ದೊರಕಿದ್ದು,
ಆನಂದ ಭೈರವಿ ಸಿನೆಮಾದಲ್ಲಿ ನಟಿಸಿದ್ದ ಕಾರ್ನಾಡರ ಅತ್ಯತ್ತಮ ನಟನೆಗೆ ಫಿಲಂ ಫೇರ್ ಪ್ರಶಸ್ತಿ ಕೊಟ್ಟು
ಗೌರವಿಸಲಾಗಿತ್ತು. ಸಂಸ್ಕಾರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಸುವರ್ಣ ಪದಕವನ್ನೂ ಕಾರ್ನಾಡರು
ಪಡೆದು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾರೆ.
ಕಾರ್ನಾಡರನ್ನು 1974ರಲ್ಲಿ
ಪುಣೆಯ ‘ಫಿಲಂ
ಆಂಡ್ ಟೆಲವಿಜನ್ ಇನ್ಸ್ಟೀಟ್ಯೂಟ್ ಆಪ್ ಇಂಡಿಯಾ’ ಸಂಸ್ಥೆಗೆ ನಿರ್ದೇಶಕರನ್ನಾಗಿ
ಕೇಂದ್ರ ಸರಕಾರವು ಆಯ್ಕೆ ಮಾಡಿತ್ತು. 1984 ರಿಂದ 1993ರ ವರೆಗೆ ‘ಇಂಡೋ ಯುಎಸ್ ಸಬ್ ಕಮಿಶನ್
ಆನ್ ಎಜುಕೇಶನ್ ಆಂಡ್ ಕಲ್ಚರಲ್’ ಎನ್ನುವ ಅಂತರಾಷ್ಟ್ರೀಯ ಮೀಡಿಯಾ ಕಮಿಟಿಯ ಕೋ-ಛೇರಮನ್ ಆಗಿಯೂ
ಕಾರ್ನಾಡರು ಕೆಲಸ ಮಾಡಿದ್ದಾರೆ. 1988 ರಿಂದ 1993ರವರೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ
ಕಾರ್ಯ ನಿರ್ವಹಿಸಿದ ಕಾರ್ನಾಡರು 1976 ರಿಂದ 1978ರ ವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ
ಕನ್ನಡ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಲಾಸ್ ಎಂಜಲೀಸಿನ ದಕ್ಷಿಣ ಕ್ಯಾಲಿಪೋರ್ನಿಯಾ
ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವಕ್ಕೂ ಕಾರ್ನಾಡರು ಪಾತ್ರವಾಗಿದ್ದಾರೆ.
ಭಾರತದಲ್ಲಿ ಸಾಹಿತ್ಯ ಸಾಧನೆಗಾಗಿ
ಕೊಡಮಾಡುವ ಜ್ಞಾನಪೀಠ ಪ್ರಶಸ್ತಿಯು ಮೊದಲ ಬಾರಿಗೆ ನಾಟಕಕಾರನೊಬ್ಬನಿಗೆ ಒಲಿದು ಬಂದಿದ್ದರೆ ಅದು ಗಿರೀಶ್
ಕಾರ್ನಾಡರಿಗೆ ಮಾತ್ರ. (1998ರಲ್ಲಿ). ಕಾರ್ನಾಡರ ಪ್ರತಿಭೆ ಮತ್ತು ಸಾಧನೆಗೆ ಸಂದಿರುವ ಪ್ರಶಸ್ತಿಗಳು
ಅನೇಕಾನೇಕ. ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1972), ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ
‘ಪದ್ವಶ್ರೀ’ ಪ್ರಶಸ್ತಿ (1974) ಹಾಗೂ
ಪದ್ಮಭೂಷಣ (1992), ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ (1992), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
(1994), ಕಾಳಿದಾಸ್ ಸನ್ಮಾನ್ (1998), ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ (1997)...
ಹೀಗೆ ಅನೇಕ ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಗಿರೀಶ್ ಕಾರ್ನಾಡರನ್ನು ಹುಡುಕಿಕೊಂಡು ಬಂದಿವೆ. ಕಾರ್ನಾಡರಿಗೆ
ದಕ್ಕಿದ ಈ ಎಲ್ಲಾ ಪ್ರಶಸ್ತಿಗಳೂ ಸಹ ಕರ್ನಾಟಕದ ಹೆಮ್ಮೆಯನ್ನು
ಸಾರುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಪ್ರತಿಭೆಯ ಸಂಕೇತವೂ ಆಗಿ ಕಂಗೊಳಿಸುತ್ತವೆ.
ಇಲ್ಲಿವರೆಗೂ ಕಾರ್ನಾಡರ ಸಾಧನೆಗಳನ್ನು
ಹೇಳಲಾಗಿದ್ದು ಅವರ ಜೀವನದ ವ್ಯಯಕ್ತಿಕ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾರ್ನಾಡರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನ್ ಎಂಬಲ್ಲಿ ಜನಿಸಿದರು. ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಬ್ಯಾಸವನ್ನು
ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ
ಮೊದಲಿಗರಾಗಿ ಬಿ.ಎ ಡಿಗ್ರಿ (1958) ಪಡೆದರು. ಇಂಗ್ಲೆಂಡಿನ ಆಕ್ಸ್‌ಫರ್ಡ ವಿಶ್ವವಿದ್ಯಾಲಯದಲ್ಲಿ ತತ್ವಜ್ಞಾನ,
ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಎಂಎ (1963) ಸ್ನಾತಕೋತ್ತರ ಪದವಿಯನ್ನು ಪಡೆದರು.
ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗಲೇ ಆಕ್ಸ್‌ಫರ್ಡ ಯುನಿವರ್ಸಿಟಿಯ ಯುನಿಯನ್ ಸೊಸೈಟಿಯ ಅಧ್ಯಕ್ಷರಾಗಿ
ಆಯ್ಕೆಯಾಗಿದ್ದರು. ಓದಿನ ನಂತರ ಭಾರತಕ್ಕೆ ಮರಳಿ ಮದ್ರಾಸಿನ ಆಕ್ಸ್‌ಫರ್ಡ ಯುನಿವರ್ಸಿಟಿ ಪ್ರೆಸ್‌ನಲ್ಲಿ
(1963-70) ಸಹಾಯಕ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡು ತದನಂತರ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು. 1974ರಲ್ಲಿ ಪುಣೆಯ ಫಿಲ್ಮ್ ಆಂಡ್ ಟೆಲಿವಿಜನ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರಾಗಿ ಕೇಂದ್ರ ಸರಕಾರದಿಂದ
ನಿಯಮಿಸಲ್ಪಟ್ಟರು. 2000-03 ರವರೆಗೆ ಲಂಡನ್ನಿನ ನೆಹರು ಸೆಂಟರಿನ ನಿರ್ದೇಶಕರ ಹಾಗೂ ಭಾರತದ ಹೈಕಮೀಶನ್‌ನಲ್ಲಿ
ಸಚಿವರಾಗಿದ್ದರು. ಕಾರ್ನಾಡರು 1980 ರಲ್ಲಿ ಡಾ.ಸರಸ್ವತಿ ಗಣಪತಿಯವರೊಡನೆ ವಿವಾಹವಾದರು ಹಾಗೂ ಈ ದಂಪತಿಗಳಿಗೆ
ಮಗಳು ಶಾಲ್ಮಲೀ ರಾಧಾ ಹಾಗೂ ರಘು ಅಮೇಯ ಹೆಸರಿನ ಮಗ ಇದ್ದಾರೆ. ಈಗ ಭೌತಿಕವಾಗಿ ಗಿರೀಶ್ ಕಾರ್ನಾಡರು
ಅಗಲಿದ್ದಾರೆ ಆದರೆ ಅವರ ನಾಟಕ, ಸಿನೆಮಾ ಹಾಗೂ ಬರಹಗಳು ಮೂಲಕ ತಲೆತಲೆಮಾರುಗಳ ಕಾಲ ಜೀವಂತವಾಗಿರುತ್ತಾರೆ.
ಯಯಾತಿ ನಾಟಕದಲ್ಲಿ ಕಾರ್ನಾಡರು
ಬರೆದ ಈ ಸಂಭಾಷಣೆ ಹೀಗಿದೆ..
“ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು
ಆದರೆ
ಕನಸುಗಳಿಲ್ಲದ ದಾರಿಯಲ್ಲಿ
ಹೇಗೆ ನಡೆಯಲಿ..”
ಆಧುನಿಕ ಭಾರತೀಯ ರಂಗಭೂಮಿಯ
ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನೂ
ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವ್ಯಯಕ್ತಿಕ ಒಲವು ನಿಲುವುಗಳನ್ನು
ಪಕ್ಕಕ್ಕಿಟ್ಟು ನೋಡಿದರೆ ಅವರ ಬದುಕು ಹಾಗೂ ಸಾಧನೆಯೇ ಯುವ ರಂಗಪೀಳಿಗೆಗೆ ಮಾರ್ಗದರ್ಶಕವಾಗಿವೆ. ಕಾರ್ನಾಡರು
ಸಾವನ್ನು ಆಡಂಬರಗೊಳಿಸದೇ ಸರಳವಾಗಿಸಿದ್ದು ಕಾಲನ ಪಟ್ಟಿಯ ಸರದಿಯಲ್ಲಿರುವವರಿಗೆ ಮಾದರಿಯಾಗಿದೆ.
ಬರಹ ಚೆನ್ನಾಗಿದೆ. ಆದರೆ ಜೂನ್ 10 ಎಂದು ಬರಬೇಕಾದ ಸ್ಥಳದಲ್ಲಿ ಮೇ 10 ಎಂದು ಬಂದಿದೆ.
ಪ್ರತ್ಯುತ್ತರಅಳಿಸಿಚನ್ನಾಗಿ ಬಂದಿದೆ.ಆಡಾಡುತ ಆಯುಷ್ಯ ಬರೆದ ನಂತರ ಬೇಂದ್ರೆಯವರ ಇನ್ನೊಂದು ನುಡಿಗಟ್ಟು "ನೋಡನೋಡ್ತ ದಿನಮಾನ"ದ ಹೆಸರಿನಲ್ಲಿ ತಮ್ಮ ಬದುಕಿನ ಮುಂದಿನ ಕತೆಯನ್ನು ಬರೆಯುವವರಿದ್ದರು.ಅದನ್ನು ಬರೆದಿದ್ದಾರೆಯೇ ಎಂಬುದು ತಿಳಿಯಲಿಲ್ಲ.ಮಹೀಪಾಲ ದೇಸಾಯಿ.
ಪ್ರತ್ಯುತ್ತರಅಳಿಸಿ