ಗುರುವಾರ, ಜೂನ್ 6, 2019

ವಿಶ್ವ ಪರಿಸರ ದಿನಕ್ಕೆ ರಂಗಭೂಮಿಯ ಸ್ಪಂದನ; ಜನಮನದ ಮಾಲಿನ್ಯ ದೂರಾದರೆ ಭೂಮಿಯೇ ನಂದನ :



ಪರಿಸರ ಎಂಬುದು ಸರಿಯಾಗಿದ್ದರೆ, ಭೂಮಿ ಎನ್ನುವುದು ಜೀವಕುಲ ಬದುಕಲು ಯೋಗ್ಯವಾಗಿದ್ದರೆ ದೇಶ, ಭಾಷೆ, ಸಮಾಜ, ಸಂಸ್ಕೃತಿಗಳ ಅಸ್ತಿತ್ವಕ್ಕೆ ಮಹತ್ವ ಬರುತ್ತದೆ. ನಿಂತ ನೆಲ, ಬಳಸುವ ಜೀವಜಲ, ಉಸಿರಾಡುವ ಗಾಳಿಯಲ್ಲಿ ಮಾಲಿನ್ಯವೇ ತುಂಬಿ ಮನುಕುಲದ ಬದುಕೇ ದುಸ್ತರವಾದರೆ ಮನುಷ್ಯ ಕಟ್ಟಿಕೊಂಡ ಸಮಾಜ ಸಂಸ್ಕೃತಿಗಳಿಗೆ ಬೆಲೆಯೆಲ್ಲಿ? ಈಗಾಗಲೇ ಸಾಕಷ್ಟು ಪರಿಸರವನ್ನು ಮನಕುಲ ತನ್ನ ಸ್ವಾರ್ಥಕ್ಕಾಗಿ ಹಾಳುಮಾಡಿಯಾಗಿದೆ. ದೇಶಕ್ಕೆ ದೇಶವೇ ಗ್ಯಾಸ್ ಚೇಂಬರ್‌ನಂತಾಗಿ ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೀಡಾಗಿವೆ. ಇಂತಹ ಆತಂಕಕಾರಿ ಕಾಲಮಾನದಲ್ಲಿ ಈಗಾಗಲೇ ಹಾಳಾದ ಪರಿಸರವನ್ನು ಮತ್ತಷ್ಟು ಹಾಳುಮಾಡಲು ಬಿಟ್ಟು, ಮನುಕುಲವನ್ನು ಮಾರಕ ಕಾಯಿಲೆಗಳಿಗೆ ಒಳಗಾಗಲು ಬಿಡದೇ ಪರಿಸರವನ್ನು ಉಳಿಸಬೇಕಿದೆ. ಮುಂದಿನ ತಲೆಮಾರಿನ ಸಂತತಿಯಾದರೂ ವಿಷಮುಕ್ತ ವಾತಾವರಣದಲ್ಲಿ ಉಸಿರಾಡುವಂತೆ ಮಾಡಲು ಮಾಲಿನ್ಯವನ್ನು ನಾಶಮಾಡಬೇಕಿದೆ.

ಪರಿಸರವನ್ನು ಉಳಿಸಿ ಮಾಲಿನ್ಯವನ್ನು ಅಳಿಸಲು ಪ್ರೇರಕವಾಗಲೀ ಎಂದು ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 5 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮಾಡುವ ಕೆಲಸವನ್ನೂ ಜಗತ್ತಿನಾದ್ಯಂತ ಸರಕಾರಗಳು ಹಾಗೂ ಸರಕಾರೇತರ ಸಂಘ-ಸಂಸ್ಥೆಗಳು ಮಾಡುತ್ತಲೇ ಬಂದಿವೆ. ಕರ್ನಾಟಕದಾದ್ಯಂತವೂ ಪರಿಸರ ಕುರಿತು ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ರಂಗಭೂಮಿಯೂ ಸಹ ವಿಶ್ವ ಪರಿಸರ ದಿನದಂದು ಪರಿಸರ ಉಳಿಸಲು ಉತ್ತೇಜನ ನೀಡುವಂತಹ, ಮಾಲಿನ್ಯವನ್ನು ನಿಯಂತ್ರಿಸಲು ಪ್ರೇರೇಪಿಸುವಂತಹ ನೂತನ  ಕಾರ್ಯಕ್ರಮವೊಂದನ್ನು ಟೌನ್‌ಹಾಲ್ ಮುಂದೆ ಆಯೋಜಿಸಿ ಗಮನಸೆಳೆಯಿತು.

ರಂಗವಸಂತ ರಂಗತಂಡದ ರೂವಾರಿ ಅಜಯ್ ಕುಮಾರ್ ಹಾಗೂ ಕೆವಾರು ಕಲಾವಿದರುಗಳು ವಿಶ್ವ ಪರಿಸರ ದಿನಕ್ಕೆ ರಂಗಭೂಮಿ ಸ್ಪಂದಿಸಬೇಕು ಎನ್ನುವ ಆಶಯವನ್ನಿಟ್ಟುಕೊಂಡು, ಹಲವು ರಂಗತಂಡ ಹಾಗೂ ಕಲಾವಿದರುಗಳನ್ನು ಜೊತೆ ಸೇರಿಸಿಕೊಂಡು, ಬೀದಿ ನಾಟಕವೊಂದನ್ನು ಆಡುವುದರ ಮೂಲಕ ಸಾಂಕೇತಿಕವಾಗಿ ಪರಿಸರ ಜಾಗೃತಿಯನ್ನು ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದಕ್ಕೆ ಪೂರ್ವಭಾವಿಯಾಗಿ ಸಭೆ ಮಾಡಿ, ಬೇರೆ ಬೇರೆ ತಂಡಗಳ ಕಲಾವಿದರನ್ನು ಒಟ್ಟು ಸೇರಿಸಿ ಮಾಲಿನ್ಯ  ಭೂತ ಎನ್ನುವ ಬೀದಿನಾಟಕವನ್ನು ಸಿದ್ದಗೊಳಿಸಿ  ಪ್ರದರ್ಶಿಸಲಾಯಿತು.



ನೂರಕ್ಕೂ ಹೆಚ್ಚು ರಂಗ ಕಲಾವಿದರು, ನಾಲ್ಕು ಜನ ನಿರ್ದೇಶಕರು, ಹತ್ತಾರು ಜನ ಸಂಗೀತದ ಮೇಳದವರು ಸೇರಿಕೊಂಡು ಒಂದು ಮೇಘಾ ಈವೆಂಟ್ ಬೀದಿ ನಾಟಕವನ್ನು ಟೌನ್‌ಹಾಲ್ ಮುಂದೆ ಪ್ರದರ್ಶಿಸಿ ರಂಗಮಾಧ್ಯಮದ ಮೂಲಕ ಪರಿಸರದ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದರು. ಅಜಯ್ ಕುಮಾರ್ ಈ ಬೀದಿ ನಾಟಕವನ್ನು ರಚಿಸಿದ್ದರೆ, ರಾಮಕೃಷ್ಣ ಬೆಳ್ತೂರ್, ಸಿದ್ದರಾಮ್ ಕೊಪ್ಪರ್, ಹ್ಯಾರಿ ಜೇಮ್ಸ್, ಚೇತನ್ ಗಂಗ ಈ ನಾಲ್ಕೂ ಜನ ನಿರ್ದೇಶಕರುಗಳು ತಲಾ ಒಂದೊಂದು ಪರಿಸರ ಮಾಲಿನ್ಯ ವಿಷಯದ ಕುರಿತು ಬೀದಿ ನಾಟಕವನ್ನು ಕಟ್ಟಿಕೊಟ್ಟಿದ್ದರು. ಈ ನಾಟಕಕ್ಕೆ ಪರಿಸರ ಗೀತೆಯನ್ನು ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಯೋಗೇಶ್ ಮಾಸ್ಟರ್ ರಚಿಸಿದ್ದು ಬೀದಿ ನಾಟಕಕ್ಕೆ ವಿಶೇಷತೆಯನ್ನು ತಂದುಕೊಟ್ಟಿತು..

ರಂಗಭೂಮಿಗೆ ಇತ್ತೀಚೆಗೆ ಬಂದ ಹೊಸ ತಲೆಮಾರಿನ ಯುವಕ ಯುವತಿಯರು ಅದಮ್ಯ ಉತ್ಸಾಹದಿಂದ ಬೀದಿ ನಾಟಕದಲ್ಲಿ ಭಾಗವಹಿಸಿದ್ದು, ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು ನಾಟಕ ಮಾಡಿದ್ದು ರಂಗಭೂಮಿಯ ಭವಿಷ್ಯದ ಬಗ್ಗೆ ಆಶಾದಾಯಕ ಭರವಸೆಯನ್ನು ಹುಟ್ಟಿಸುವಂತಹುದು. ಗುಂಡಣ್ಣ, ಕಪ್ಪಣ್ಣ, ನಾಗರಾಜಮೂರ್ತಿ, ಕೆವೈಎನ್, ಬಾರೀಘಾಟ್, ಕೆಎಸ್‌ಡಿಎಲ್ ಚಂದ್ರು.. ಮುಂತಾದ ಹಿರಿಯ ರಂಗಕರ್ಮಿಗಳು ಬಂದು ಯುವಕರ ಈ ಹೊಸ ರಂಗ ಸಾಹಸಕ್ಕೆ ಸಾಕ್ಷಿಯಾಗಿ ಯುವಕರಲ್ಲಿ ಹೆಚ್ಚಿನ ಉತ್ಸಾಹದ ಸೃಷ್ಟಿಗೆ ಕಾರಣರಾದರು. ಸಾಂಕೇತಿಕವಾಗಿ ಗಿಡವೊಂದನ್ನು ನೆಡುವ ಮೂಲಕ ರಂಗಭೂಮಿ ಕಲಾವಿದ ಸಂಚಾರಿ ವಿಜಯ್ ಇಡೀ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಯುವ ಕಲಾವಿದರಲ್ಲಿ ಉಲ್ಲಾಸವನ್ನುಂಟುಮಾಡಿತು.



ಈ ಹೊಸ ತಲೆಮಾರಿನ ರಂಗಾಸಕ್ತ ಯುವಕರಲ್ಲಿ ಏನಾದರೂ ಮಾಡಬೇಕೆಂಬ ಅದಮ್ಯ ಉತ್ಸಾಹವಿದೆ, ತಮಗನ್ನಿಸಿದ್ದನ್ನು ಮಾಡುವ ಛಲವೂ ಇದೆ.. ಜೊತೆಗೆ ಸೂಕ್ತ ಮಾರ್ಗದರ್ಶನದ ಕೊರತೆಯೂ ಇದೆ. ಪೂರ್ವಭಾವಿ ಸಭೆಯಲ್ಲಿ ಸಾವಿರ ಸಸಿಗಳನ್ನು ಕಲಾಗ್ರಾಮದಲ್ಲಿ ಒಂದೇ ದಿನದಲ್ಲಿ ನೆಡುವ ಯೋಜನೆಯನ್ನು ಹಾಕಿಕೊಂಡೇ ಬಂದಿದ್ದರು. ಆದರೆ.. ಅದರ ಸಾಧಕ ಬಾಧಕ, ಖರ್ಚುವೆಚ್ಚಗಳನ್ನು ವಿವರವಾಗಿ ಬಿಡಿಸಿಟ್ಟ ನಾಗರಾಜಮೂರ್ತಿಯವರು ಇತಿಮಿತಿಯೊಳಗೆ ಪರಿಸರ ದಿನಾಚರಣೆ ಮಾಡುವ ಸಲಹೆ ಕೊಟ್ಟು ಸಾಹಸಿ ಯುವಕರಿಗೆ ತಮ್ಮ ಅನುಭವದ ಮೂಸೆಯಲ್ಲಿ ಮಾರ್ಗದರ್ಶನ ಮಾಡಿದರು. ನಾನೂ ಸಹ ಗಿಡಗಳನ್ನು ನೆಡುವುದು ಸುಲಭ, ಬೆಳೆಸುವುದು ಕಷ್ಟ, ಅಷ್ಟಕ್ಕೂ ಗಿಡಮರಗಳನ್ನು ಬೆಳೆಸುವುದು ರಂಗಕರ್ಮಿ ಕಲಾವಿದರುಗಳ ಕಾಯಕವಲ್ಲ, ರಂಗಮಾಧ್ಯಮದ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವುದನ್ನು ಮಾಡಿದರೆ ಸಾಕು, ಸಾಧ್ಯವಾದರೆ ಕಲಾಗ್ರಾಮದ ಅಕ್ಕಪಕ್ಕ ವಾಸಿಸುವ ಜನರ ಪಾಲ್ಗೊಳ್ಳುವಿಕೆಯಲ್ಲಿ ನೂರು ಮರಗಳನ್ನು ನೆಟ್ಟು ಅದನ್ನು ಪೋಷಿಸುವ ಹೊಣೆಗಾರಿಕೆಯನ್ನೂ ಗಿಡ ನೆಟ್ಟ ಕುಟುಂಬದವರಿಗೆ ವಹಿಸುವುದು ಸೂಕ್ತ ಎಂದು ಹೇಳಿ ಮನವರಿಕೆ ಮಾಡಿಕೊಟ್ಟೆ.

ಕೊನೆಗೂ ಮೇ ಐದರ ಬೆಳಿಗ್ಗೆ ಬೀದಿ ನಾಟಕವನ್ನು ಮಾಡುವ ಮೂಲಕ ಮಾಲಿನ್ಯದ ಬಗ್ಗೆ ಎಚ್ಚರಿಸುವ ಕೆಲಸವನ್ನು ಸಾಂಕೇತಿಕವಾಗಿ ಮಾಡಿ ಮುಗಿಸಿದ ಈ ಯುವರಂಗಕರ್ಮಿ ಪಡೆ, ಮಧ್ಯಾಹ್ನ ಕಲಾಗ್ರಾಮಕ್ಕೆ ತೆರಳಿ ಸಂಜೆಯವರೆಗೂ ನೂರು ಸಸಿಗಳನ್ನು ನೆಟ್ಟು ನೀರುಣಿಸಿ ತಣಿದರು. ಈಗ ನೆಟ್ಟ ಮರಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ಸಹ ರಂಗವಸಂತ ತಂಡದ ಕಲಾವಿದರು ವಹಿಸಿಕೊಂಡಿರುವುದು ಶ್ಲಾಘನೀಯ. ಯಾಕೆಂದರೆ ಕಲಾಗ್ರಾಮದ ಪರಿಸರದಲ್ಲಿ ಈಗಾಗಲೇ ರಂಗಮಂದಿರ ಹಾಗೂ ಇತರೇ ಕಟ್ಟಡಗಳನ್ನು ಕಟ್ಟಲು ನೂರಾರು ಮರಗಳನ್ನು ಕಡಿದು ಹಾಕಿದ್ದಾರೆಯೇ ಹೊರತು ಮತ್ತೆ ಬೆಳೆಸಲು ಹೋಗಿರಲಿಲ್ಲ. ಕನಿಷ್ಟ ಕಿರಿಯ ರಂಗಕಲಾವಿದರುಗಳಾದರೂ ಆ ಕೆಲಸವನ್ನು ಮಾಡಿ ಮರಗಳ ಕೊರತೆಯನ್ನು ತುಂಬಲು ಪ್ರಯತ್ನಿಸಿದರಲ್ಲಾ ಎನ್ನುವುದೇ ಬಹುದೊಡ್ಡ ಸಮಾಧಾನದ ಸಂಗತಿ. 


ಬೀದಿ ನಾಟಕದ ಬಗ್ಗೆ ಹೇಳಬೇಕಾದರೆ, ಅದೊಂದು ಯಶಸ್ವೀ ಪ್ರಯೋಗ ಎನ್ನುವುದಕ್ಕಿಂತಲೂ ಶ್ಲಾಘನೀಯ ಪ್ರಯತ್ನ ಎನ್ನಬಹುದಾಗಿದೆ. ನಾಲ್ಕು ಜನರ ನಿರ್ದೇಶಕರುಗಳು ನಾಲ್ಕು ರೀತಿಯ ಮಾಲಿನ್ಯಗಳನ್ನು ಇಟ್ಟುಕೊಂಡು ನಾಟಕ ಮಾಡಿದ್ದರೆ ಚೆನ್ನಾಗಿತ್ತು. ಆದರೆ ನಾಲ್ಕರಲ್ಲಿ ಮೂರರ ವಿಷಯಗಳೂ ವಾಯುಮಾಲಿನ್ಯಕ್ಕೆ ಸಂಬಂಧಿಸಿದ್ದವುಗಳಾಗಿದ್ದು ಏಕತಾನತೆಯನ್ನುಂಟುಮಾಡಿದವು.  ನೆಲ, ಜಲ, ಪರಿಸರ ಮಾಲಿನ್ಯದಿಂದಾಗಿ ಜನಜೀವನ ಹೇಗೆ ಸಂಕಷ್ಟಕ್ಕೆ ಒಳಗಾಗಿದೆ ಎನ್ನುವುದನ್ನು ವಿವಿಧ ರೂಪಕಗಳ ಮೂಲಕ ತೋರಿಸುವ ಸಾಧ್ಯತೆಗಳನ್ನು ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ಕಲಾವಿದರುಗಳಿಗೆಲ್ಲಾ ಇನ್ನಷ್ಟು ತಾಲೀಮು ಬೇಕಾಗಿತ್ತು. ಟ್ರಾಫಿಕ್ ಸೌಂಡ್‌ನ್ನೂ ಮೀರಿಸಿ ದ್ವನಿಯನ್ನು ಎತ್ತರಿಸಿ ಬೀದಿಯಲ್ಲಿ ಹೇಗೆ ಸಂಭಾಷಣೆ ಹೇಳಬೇಕು ಎನ್ನುವ ದ್ವನಿ ಏರಿಳಿತದ ತರಬೇತಿ ಮತ್ತು ಪ್ರ್ಯಾಕ್ಟೀಸ್ ಬಹುತೇಕ ನಟನಟಿಯರಿಗೆ ಕೊಡಬೇಕಾಗಿತ್ತು. ನಾಟಕದಲ್ಲಿ ಶಿಸ್ತು ಹಾಗೂ ಟೈಮಿಂಗ್ ಅಳವಡಿಸಿಕೊಂಡಿದ್ದರೆ ಈ ಬೀದಿನಾಟಕ ಇನ್ನೂ ಹೆಚ್ಚು ಕಳೆಗಟ್ಟುತ್ತಿತ್ತು. ಹೇಗೋ  ಒಂದು  ಈವೆಂಟ್ ಮಾಡಿ ಮುಗಿಸಿದೆವು ಎನ್ನುವ ಹುಸಿ ಆತ್ಮತೃಪ್ತಿಯನ್ನು ಹೊಂದದೇ, ಅಂದುಕೊಂಡದ್ದನ್ನು ಅಂದವಾಗಿ ಪ್ರೇಕ್ಷಕರು ಮೆಚ್ಚುವಂತೆ ಮಾಡಿದೆವು ಎನ್ನುವುದೇ ಸಾರ್ಥಕತೆಯನ್ನು ಮೂಡಿಸಲು ಸಾಧ್ಯ.

ಇಷ್ಟಕ್ಕೂ ಈ ಬೀದಿ ನಾಟಕದ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡ ಜಾಗವೇ ಶಬ್ದಾಸುರನ ಆವಸ್ಥಾನ. ಕ್ಷಣಕ್ಷಣಕ್ಕೂ ಕರ್ಕಶ ಶಬ್ಧಗಳನ್ನು ಮಾಡುತ್ತಾ ಸಾಲುಗಟ್ಟಿ ಸಾಗುವ ಸಾವಿರಾರು ತರಾವರಿ ವಾಹನಗಳ ಓಡಾಟದ ನಡುವೆ ನಾಟಕವನ್ನು ಅದೆಷ್ಟೇ ಪರಿಣಾಮಕಾರಿಯಾಗಿ ಪ್ರದರ್ಶಿಸಿದರೂ ಪ್ರೇಕ್ಷಕರಿಗೇನೂ ಸ್ಪಷ್ಟವಾಗಿ ಕೇಳಿಸದೇ ನೀರಿಕ್ಷಿತ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ, ಆಗಲೂ ಇಲ್ಲಾ. ಶಬ್ದಮಾಲಿನ್ಯದ ವಿರುದ್ಧ ಜಾಗೃತಿ ಮಾಡಲು ಸದ್ದಾಸುರ ಸಹಕರಿಸಲೇ ಇಲ್ಲ. ಮುಂದೆ ವಾಯುಮಾಲಿನ್ಯದ ವಿರುದ್ಧ ಜನಜಗೃತಿ ನಾಟಕ ಮಾಡುತ್ತಿದ್ದರೆ ಹಿಂದೆ ಸಹಸ್ರಾರು ವಾಹನಗಳು ಶಬ್ದಮಾಲಿನ್ಯ, ವಾಯುಮಾಲಿನ್ಯ ಮಾಡುತ್ತಾ ಓಡಾಡುತ್ತಿರುವುದು ಪರಸ್ಪರ ವೈರುದ್ಯಕರವಾಗಿತ್ತು.



ಸಾಂಕೇತಿಕವಾಗಿಯೋ, ಪ್ರಚಾರಾತ್ಮಕವಾಗಿಯೋ, ಏನಾದರೂ ಮಾಡಬೇಕೆಂಬ ತುಡಿತದಿಂದಲೋ, ರಂಗಭೂಮಿಯವರ ಗಮನವನ್ನು ಸೆಳೆಯಲೋ.. ಈ ಸ್ಟ್ರೀಟ್ ಪ್ಲೇ ಈವೆಂಟ್‌ನ್ನು ಯುವ ಕಲಾವಿದರು ಮಾಡಿದ್ದೇನೋ ಸರಿ. ಆದರೆ.. ಮಾಲಿನ್ಯದ ಕುರಿತು ಯಾರಿಗೆ ಅರಿವನ್ನು ಮೂಡಿಸಬೇಕಾಗಿತ್ತೋ ಅವರನ್ನು ತಲುಪಲು ಈ ಬೀದಿ ನಾಟಕಕ್ಕೆ ಸಾಧ್ಯವಾಗದೇ ಹೋಯಿತು. ನಾಟಕ ನಡೆಯುವ ಸ್ಥಳದ ಪಕ್ಕದಲ್ಲೇ ನಿಮಿಷಕ್ಕೆ ನೂರಾರು ವಾಹನಗಳ ಸವಾರರು ತಮ್ಮ ವಾಹನಗಳ ಹೊಗೆಯನ್ನು ಉಗುಳುತ್ತಾ, ತರಾವರಿ ಶಬ್ಧಗಳನ್ನು ಹೊರಡಿಸುತ್ತಾ ಸಾಗುತ್ತಿದ್ದರೇ ಹೊರತು ಯಾರೂ ಒಂದರಗಳಿಗೆ ನಿಂತು ನಾಟಕ ನೋಡುವ ಆಸಕ್ತಿ ತೋರಿಸಲಿಲ್ಲಾ, ತೋರಿಸುವುದೂ ಇಲ್ಲಾ. ಹಾಗಾದರೆ ಇಷ್ಟೊಂದು ಜನ ಕಲಾವಿದರು ಸೇರಿ ಈ ಬೀದಿ ನಾಟಕ ಮಾಡಿದ ಉದ್ದೇಶವಾದರೂ ಏನು?

ಹೀಗೆ ನೂರಾರು ಜನ ಕಲಾವಿದರು ಪರಿಶ್ರಮವಹಿಸಿ ಫಲಾನುಭವಿಗಳೇ ಇಲ್ಲದ ಒಂದು ಕಡೆ ಬೀದಿ ನಾಟಕದ ಒಂದು ಪ್ರದರ್ಶನವನ್ನು ಮಾಡಿ ಆತ್ಮತೃಪ್ತಿಯನ್ನು ಪಡೆಯುವ ಪ್ರಯತ್ನವನ್ನು ಬದಿಗಿಟ್ಟು, ಹತ್ತತ್ತು ಕಲಾವಿದರಂತೆ ಹತ್ತು ತಂಡಗಳನ್ನು ರಚಿಸಿ, ಪ್ರತಿ ತಂಡವೂ ಪರಿಸರದ ದಿನದ ನೆಪದಲ್ಲಿ ಬೇರೆ ಬೇರೆ ಆಯ್ದ ಬಡಾವಣೆಗಳಲ್ಲಿ ಹತ್ತತ್ತು ಕಡೆ ಮಾಲಿನ್ಯ ಭೂತ ಬೀದಿ ನಾಟಕವನ್ನು ಮಾಡಿದ್ದರೆ ಕನಿಷ್ಟ ನೂರು ಪ್ರದರ್ಶನಗಳನ್ನಾದರೂ ಕೊಡಬಹುದಾಗಿತ್ತು.  ಹೀಗೆ ನಾಟಕ ಮಾಡಿದ ಬಡಾವಣೆಗಳಲ್ಲೆಲ್ಲಾ ಕುಟುಂಬಕ್ಕೊಂದು ಮರ ಬೆಳೆಸಲು ಸ್ಥಳೀಯರನ್ನು ಪ್ರೇರೇಪಿಸಿ, ಅಸಕ್ತರಿಗೆ ಸಸಿಗಳನ್ನು ಒದಗಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಅವುಗಳನ್ನು ನೆಡಬಹುದಿತ್ತು. ಹಾಗೆ ನೆಟ್ಟ ಗಿಡಗಳ ಪೋಷಣೆಯ ಹೊಣೆಯನ್ನೂ ಸಹ ಗಿಡ ನೆಟ್ಟ ಕುಟುಂಬದವರಿಗೆ ವಹಿಸಿಕೊಟ್ಟಿದ್ದರೆ ಗಿಡ ನೆಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಬೀದಿ ನಾಟಕಕ್ಕೊಂದು ಬೆಲೆ ಬರುತ್ತಿತ್ತು.



ಆದರೆ ದೂರಗಾಮಿಯಾಗಿ ಯೋಚಿಸದೇ ಈ ಕ್ಷಣದ ಪ್ರಚಾರಕ್ಕೆ, ತಕ್ಷಣದ ಪ್ರತಿಕ್ರಿಯೆಗೆ ಹಾತೊರೆಯುವುದರಿಂದ ಏನೂ ಪ್ರಯೋಜನವಿಲ್ಲ. ಯಾವುದೇ ಯೋಜನೆ ಯೋಚನೆಗಳು ಸಾರ್ವಜನಿಕರ ಸಹಕಾರವಿಲ್ಲದೇ ಯಶಸ್ವಿಯಾಗಲು ಸಾಧ್ಯವೇ ಇಲ್ಲಾ. ಕಳೆದ ಐವತ್ತು ವರ್ಷಗಳಿಂದ ಈ ದೇಶದಲ್ಲಿ ಬಿಲಿಯನ್ ಗಂಟಲೇ ಗಿಡಗಳನ್ನು ಪ್ರತಿ ವರ್ಷ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಮಳೆಗಾಲದಲ್ಲಿ ನೆಡುತ್ತಲೇ ಬಂದಿವೆ. ಹಾಗೆ ನೆಟ್ಟ ಗಿಡಗಳೆಲ್ಲಾ ಬೆಳೆದಿದ್ದರೆ ಪರಿಸರ ಉಳಿಸಿ ಎಂದು ಬೀದಿ ನಾಟಕ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಎಲ್ಲಿ ನೋಡಿದಲ್ಲೆಲ್ಲಾ ಮರಗಳೇ ಬೆಳೆದು ಇಡೀ ದೇಶದ ನಗರ, ಪಟ್ಟಣ, ಹಳ್ಳಿಗಳು ಹಸಿರಿನಿಂದ ನಳನಳಿಸುತ್ತಿದ್ದವು. ಆದರೆ.. ಜನರು ಆಸಕ್ತಿಯಿಂದ ಜವಾಬ್ದಾರಿಯನ್ನು ಹೊರದೇ ಯಾವುದೇ ಯೋಜನೆಗಳು ಗುರಿ ಸಾಧಿಸಲು ಸಾಧ್ಯವೇ ಇಲ್ಲ.

ಆದ್ದರಿಂದ.. ಗಿಡ ನೆಡುವುದು ರಂಗಕರ್ಮಿ ಕಲಾವಿದರುಗಳ ಕೆಲಸವಲ್ಲ. ಪರಿಸರದ ಬಗ್ಗೆ ಯುವ ರಂಗಪೀಳಿಗೆಗೆ ನಿಜಕ್ಕೂ ಕಾಳಜಿಯಿದ್ದರೆ ರಂಗಮಾಧ್ಯಮದ ಮೂಲಕ ಜನರ ಮನಸ್ಸನ್ನು ಪರಿವರ್ತನೆ ಮಾಡುವ ಕೆಲಸವನ್ನು ಮಾಡಬೇಕಿದೆ. ಪರಿಸರ ಮಾಲಿನ್ಯಕ್ಕಿಂತಲೂ ಜನರ ಮನಸ್ಸಿನಲ್ಲಿ ಮನೆಮಾಡಿರುವ ಸ್ವಾರ್ಥ ಕೇಂದ್ರಿತ ಮಾಲಿನ್ಯವನ್ನು ತೆಗೆದುಹಾಕಲು ಪ್ರಂiiತ್ನಿಸಬೇಕಿದೆ. ರಂಗಭೂಮಿಯ ಮುಖ್ಯ ಉದ್ದೇಶ ರಂಜನೆಯ ಜೊತೆಗೆ ಬೋಧನೆ, ಪ್ರಚೋದನೆಯೇ ಹೊರತು ಗಿಡ ನೆಟ್ಟು ಪೋಷಿಸುವುದಲ್ಲ. ಹಾಗೆ ಮಾಡುವಂತೆ ಜನರನ್ನು ತಯಾರಿಗೊಳಿಸುವುದೇ ಕಲೆಯ ಕಾಯಕವಾಗಿದೆ. ಹೀಗಾಗಿ.. ಈಗ ಬಲು ಉತ್ಸಾಹದಿಂದ ಬೀದಿ ನಾಟಕದ ಈವೆಂಟ್ ಮಾಡಿದ ಎಲ್ಲಾ ಯುವ ಕಲಾವಿದರು, ನಿರ್ದೇಶಕರು, ಸಂಘಟಕರು ಮುಂದಿನ ವರ್ಷದ ವಿಶ್ವ ಪರಿಸರ ದಿನಾಚರಣೆಯನ್ನು ಜನತೆಯ ಸಕ್ರೀಯ ಪಾಲ್ಗೊಳ್ಳುವಿಕೆಯಲ್ಲಿ ನಡೆಸುವ ನಿಟ್ಟಿನಲ್ಲಿ ಆಯೋಜಿಸುವುದು ಉತ್ತಮ.


ವಿಷಯ ಉದ್ದೇಶ ಏನೇ ಇರಲಿ, ಬೆಂಗಳೂರಿನಲ್ಲಿ ದ್ವೀಪಗಳಂತಿರುವ ರಂಗತಂಡಗಳೇ ಹೆಚ್ಚು. ಅಂತಹುದರಲ್ಲಿ ಹತ್ತಾರು ರಂಗತಂಡಗಳ ಕಲಾವಿದರುಗಳು ಒಂದು ಸದುದ್ದೇಶಕ್ಕಾಗಿ ಒಂದು ಕಡೆ ಸೇರಿ ಸಂಘಟನಾತ್ಮಕವಾಗಿ ನಾಟಕೊಂದನ್ನು ಸಿದ್ದಗೊಳಿಸಿ ಪ್ರದರ್ಶನಗೊಳಿಸಿದ್ದು ಸ್ತುತ್ಯಾರ್ಹವಾಗಿದೆ. ಈಗಿನ ಯುವಕರಲ್ಲಿ ಉತ್ಸಾಹವಿದೆ. ಏನನ್ನಾದರೂ ಮಾಡುವ ತುಡಿತವಿದೆ, ಆದರೆ ಏನನ್ನು ಯಾತಕ್ಕೆ ಯಾರಿಗಾಗಿ ಹೇಗೆಲ್ಲಾ ಮಾಡಬೇಕು ಎಂದು ಮನದಟ್ಟಾಗುವಂತೆ ಹೇಳಿಕೊಡುವ ಅನುಭವಿ ಮಾರ್ಗದರ್ಶಕರು ಬೇಕಾಗಿದ್ದಾರೆ. ಬೆಂಗಳೂರಿನ ಹಿರಿಯ ರಂಗಕರ್ಮಿಗಳು ಮಾರ್ಗದರ್ಶಕರಾಗಿ ಈ ಯುವ ಸಾಹಸಿಗಳಿಗೆ ಸರಿಯಾದ ದಾರಿ ದಿಕ್ಕನ್ನು ತೋರಿಸುವ ಮೂಲಕ ಕನ್ನಡ ರಂಗಭೂಮಿಯ ಭವಿಷ್ಯದ ಕಲಾವಿದರನ್ನು ಬೆಳೆಸಬೇಕಿದೆ. ಪರಿಸರ ಪ್ರಜ್ಞೆಯ ಜೊತೆಜೊತೆಗೆ ರಂಗ ಬದ್ಧತೆ, ಅಪಾರವಾದ ಸಿದ್ಧತೆಗಳ ಜೊತೆಗೆ ಜನಪರ ವೈಚಾರಿಕ ಮೌಲ್ಯಗಳನ್ನು ಯುವ ರಂಗಪೀಳಿಗೆ ರೂಢಿಸಿಕೊಳ್ಳಬೇಕಿದೆ. ರಂಗ ಚಟುವಟಿಕೆಗಳು ನಿಧಾನವಾಗಿ ರಂಗಚಳುವಳಿಗಳಾಗಿ ಬೆಳೆದು ಜನರ ನಡುವಿನ ಎಚ್ಚರದ ದ್ವನಿಯಾಗಿ, ಅನ್ಯಾಯ ಅಸಮಾನತೆಯ ವಿರುದ್ದದ ಪ್ರತಿಭಟನೆಯ ಶಕ್ತಿಯಾಗಿ ಮಾರ್ಪಾಡಾಗಬೇಕಾಗಿದೆ. ಹಳೆಯ ಬೇರು ಹೊಸ ಚಿಗುರು ಒಂದಾದಾಗ ರಂಗಮಾಧ್ಯಮ ಸಮಾಜದ ಅವಿಭಾಜ್ಯ ಅಂಗವಾಗಲು ಸಾಧ್ಯ, ಕಲೆಗಾಗಿ ಕಲೆಯಾಗಿರದೇ ಜನತೆಗಾಗಿ ಕಲೆ ತುಡಿಯಲು ಸಾಧ್ಯ. ಸಕಾರಾತ್ಮಕ ನಿಟ್ಟಿನಲ್ಲಿ ರಂಗಭೂಮಿ ಸ್ವಸ್ಥವಾಗಿ ಬೆಳೆಯಲು ಸಾಧ್ಯ. 

-ಶಶಿಕಾಂತ ಯಡಹಳ್ಳಿ     









1 ಕಾಮೆಂಟ್‌:

  1. ಮಾನ್ಯ ಗೌರವಾನ್ವಿತ ನಾಟಕ ಅಕಾಡೆಮಿಯ ಸದಸ್ಯರಾದ ಶಶಿಕಾಂತ್ ಯಡವಳ್ಳಿ ಅಲ್ಲ ..... ಅಲ್ಲ .... ಯಡಹಳ್ಳಿಯವರೆ ನಿಮ್ಮ ಮೇಧಾವಿ ಲೇಖನ ಓದಿ ಮನಸ್ಸಿಗೆ ಬಹಳ ಖುಷಿಯಾಯಿತು ಮೊದಲ ಬಾರಿಗೆ ನೀವು ಈ ರೀತಿ ಹೊಸ ರಂಗಾಸಕ್ತರನ್ನು ಪ್ರೇರೇಪಿಸಿದ್ದಕ್ಕಾಗಿ ನಿಮಗಿದೋ ನನ್ನ ಧನ್ಯವಾದಗಳು .ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎನ್ನುವ ಹಾಗೆ ಬರೀ ಓದಿನಲ್ಲೋ ಅಥವಾ ಬರಹದಲ್ಲೋ ಜಾಣ್ಮೆಯನ್ನು ತೋರಿಸಿದರೆ ಸಾಕಾಗುವುದಿಲ್ಲ ಅಲ್ಲವೇ ? ಬುದ್ಧಿಯನ್ನು ಖರ್ಚು ಮಾಡಿ ಸಾಕಷ್ಟು ಗಿಡಗಳನ್ನು ನೆಟ್ಟು ಅಥವಾ ಜನಸಂದಣಿಯ ಕಡೆ ಬೀದಿ ನಾಟಕವನ್ನು ಮಾಡಿ ಹೆಸರನ್ನು ನೀವೂ ಗಳಿಸಬಹುದಿತ್ತು ಅಥವಾ ನಾಟಕ ಅಕಾಡೆಮಿಯಿಂದ ಬೃಹತ್ ಕಾರ್ಯಕ್ರಮವನ್ನೆ ಹಮ್ಮಿಕೊಂಡು ಆರೋಗ್ಯಕರವಾಗಿ ರಾಜ್ಯದ ಗಮನ ಸೆಳೆಯುವ ಹಾಗೆ ಯಶಸ್ವಿ ಆಗಬಹುದಿತ್ತು ಅಲ್ಲವೇ ಸಾರ್ ? ಶಶಿಕಾಂತ ಸಾರ್ ನನ್ನ ಹೆಸರು ಡಾ.ದೇವನಹಳ್ಳಿ ದೇವರಾಜ್ ನಾನು ಪಿಎಚ್.‌ಡಿ ಸೇರಿದಂತೆ 9 ಪದವಿಗಳನ್ನು ಮಾಡಿದ್ದರೂ ಕೂಡ ಸು.20-21 ವರ್ಷಗಳಿಂದಲೂ ರಂಗಭೂಮಿ ಕಾಯಕದಲ್ಲಿ ನಿರತನಾಗಿದ್ದೇನೆ.ನನ್ನದೇ ಆದ ಪರಿವರ್ತನಾ ಕಲಾ ಸಂಸ್ಥೆ ತಂಡ ಕಟ್ಟಿ ಸು.13 ವರ್ಷಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಬೀದಿನಾಟಕ, ವೇದಿಕೆ ನಾಟಕಗಳನ್ನು ಮಾಡಿ ಜಾಗೃತಿ ಮೂಡಿಸುತ್ತಾ ಬಂದಿದ್ದೇನೆ ನನ್ನನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ..... ಬೆಂಗಳೂರಿನ ನೀವೆ ಹೇಳುವ ಮಾರ್ಗದರ್ಶಕರು ಅಥವಾ ಹಿರಿಯ ರಂಗಕರ್ಮಿಗಳಿಗೆ ಎಷ್ಟು ಜನಕ್ಕೆ ನಾನು ಗೊತ್ತು ಎನ್ನುವುದು ? ನಿಮ್ಮ ನಾಟಕ ಅಕಾಡೆಮಿಯಲ್ಲಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಕ್ರಿಯರಾಗಿ ರಂಗಕಾಯಕ ಮಾಡುವವರ ಪಟ್ಟಿ ಇದೆಯಾ ?ತೋರಿಸುವಿರಾ? ರಂಗಭೂಮಿ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವೇ? ಅಲ್ಲಿರುವವರು ಮಾತ್ರ ರಂಗಕರ್ಮಿಗಳೇ? ಈ ವಿಶ್ವ ಪರಿಸರ ದಿನಾಚರಣೆ "ಮಾಲಿನ್ಯ ಭೂತ" ಬೀದಿನಾಟಕದಲ್ಲಿ ಅಭಿನಯಿಸಿದ ಕಲಾವಿದರು 70% ಕ್ಕಿಂತ ಹೆಚ್ಚು ಗೆಳೆಯರು ರಂಗಭೂಮಿಗೆ ಹೊಸದಾಗಿ ಪಾದಾರ್ಪಣೆ ಮಾಡಿದ ಕಲಾವಿದರೆ ಆಗಿದ್ದಾರೆ. ಇದೇನಾ ಮಾರ್ಗದರ್ಶಕರಾಗಿ, ರಂಗಕರ್ಮಿಯಾಗಿ ಹೊಸಬರನ್ನು ಹುರಿದುಂಬಿಸುವ ರೀತಿ ಹೇಳಿ ಸಾರ್ ? ವಿಷಯ ನಿಮಗೆ ತಿಳಿಸಿದ್ದರೂ ಕೂಡ ನಿಮ್ಮ ತಂಡ ಯಾಕೆ ಕೈ ಜೋಡಿಸಲಿಲ್ಲ ನೀವು ಜತೆಯಲ್ಲಿ ನಿಂತು ಯಾಕೆ ಅದನ್ನು ಅಚ್ಚುಕಟ್ಟುತನ ಮಾಡಲಿಲ್ಲ ? ಇದುವರೆವಿಗೂ ಅಕಾಡೆಮಿಯಿಂದ ಮಾಡಿದ ಕಾರ್ಯಕ್ರಮಗಳಲ್ಲಿ ರಂಗಭೂಮಿ ಎಷ್ಟು ಜನ ಹೊಸಬರಿಗೆ ತಲುಪಿದೆ ಎನ್ನುವ ಮಾಹಿತಿ ಕೊಡುತ್ತೀರಾ...?ನಿಮಗೆ ನಿನ್ನೆ ಮಾಡಿದ ಬೃಹತ್ ಕಾರ್ಯಕ್ರಮದ ಬಗ್ಗೆ ಕಾಳಜಿ ಇದ್ದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ರಂಗ ತಂಡಗಳ ಸಭೆ ಕರೆದು ಅದರ ಸಾಧಕ- ಬಾಧಕಗಳನ್ನು ಚರ್ಚಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಗುರುತರವಾಗಿರತಕ್ಕಂತ ರಂಗಭೂಮಿ ಕಾಯಕಕ್ಕೆ ಕೈ ಹಾಕಬಹುದಿತ್ತಲ್ಲವೇ ಸರ್ .....ಏನನ್ನೂ ಮಾತನಾಡದೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಲೇಖನವನ್ನು ಹರಿಯಬಿಟ್ಟಿದ್ದರ ಉದ್ದೇಶವಾದರೂ ಏನು ಸಾರ್? ಇದು ಒಂದು ರೀತಿಯ ಸ್ವಪ್ರಚಾರವೇ... ಅಲ್ಲವೇ ? ಇದು ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಅಂತ ಯಾರಿಗಾದರೂ ಅನ್ನಿಸದೇ ಇರದು.ಇರ್ಲಿ ಬಿಡಿ ಸಾರ್ ಪಾಪ...... ಹೊಸದಾಗಿ ರಂಗಭೂಮಿಗೆ ಬಂದವರು ಅಥವಾ ಸಾಕಷ್ಟು ವರ್ಷಗಳು ಇಲ್ಲಿ ಕಲಾವಿದರಾಗಿ ದುಡಿದ ಯುವ ಮನಸ್ಸುಗಳು ಏನೋ ನಿನ್ನೆ ಕಾರ್ಯಕ್ರಮ ಮಾಡಿ ಹೋದ್ರು ಆದರೆ ನನ್ನ ಅರಿಕೆ ಏನೆಂದರೆ ನಿಮಗೆ ತಾಕತ್ತಿದ್ದರೆ ನಿಮ್ಮದೇ ಸಮಯ ತೆಗೆದುಕೊಂಡು 101 ಜನರನ್ನು ಸೇರಿಸಿ ಬೀದಿ ನಾಟಕ ಮಾಡಿ ತೋರಿಸಿ ಸಾರ್.........ನಂತರದಲ್ಲಿ ಈ ಹದಿನಾಲ್ಕು ತಂಡಗಳ ಕೂಡ ನಿಮ್ಮ ಜತೆ ಸಾಕಷ್ಟು ಯುವಕರು ಸದಾ ಇರುತ್ತೇವೆ ನೀವು ರಂಗಭೂಮಿಗೆ ಹೊಸದಾಗಿ ನಾಂದಿ ಹಾಡುವ ಕಾಯಕಕ್ಕೆ ನಾನು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತೇನೆ ಇಂತಿ ಡಾ.ದೇವನಹಳ್ಳಿ ದೇವರಾಜ್ ರಂಗ ನಟ ಮತ್ತು ನಿರ್ದೇಶಕ ನನ್ನ ಜಂಗಮವಾಣಿ ಸಂಖ್ಯೆ 7892268467 /9591604118 ನಮಸ್ಕಾರ 🙏🙏🙏🙏🙏🙏🙏🙏🙏💐💐🌹🌹🌹

    ಪ್ರತ್ಯುತ್ತರಅಳಿಸಿ