ಜಾಗತೀಕರಣದ ಕೂಸಾದ ‘ಕಾರ್ಪೋರೇಟ್ ಕಲ್ಚರ್’ ಎನ್ನುವುದು ಹಲವಾರು ವಿಚಿತ್ರ ಹಾಗೂ ವಿಕೃತ ಸಂಸ್ಕೃತಿಯನ್ನು ಹುಟ್ಟಿಹಾಕಿದೆ. ಮನುಷ್ಯ ಸಂಬಂಧಗಳನ್ನು ವ್ಯಾಪಾರಿ ದೃಷ್ಟಿಕೋನದಲ್ಲಿ ನೋಡುವ ಪರಿಕಲ್ಪನೆಯನ್ನು ಸೃಷ್ಟಿಸಿದೆ. ಅದರಲ್ಲಿ ಬಾಡಿಗೆ ತಾಯಿಯಿಂದ ಮಗು ಪಡೆಯುವ ಕಲ್ಚರ್ ಸಹ ಸೇರಿದೆ. ಕರಿಯರ್ ರೂಪಿಸಿಕೊಳ್ಳುವ, ಹಣ ಮಾಡುವ ದಾವಂತದಲ್ಲಿ ಮಗು ಹೆರುವುದಕ್ಕೂ ಸಮಯವಿಲ್ಲದಂತಹ ಒತ್ತಡವನ್ನು ಈ ಆಧುನಿಕ ಸಂಸ್ಕೃತಿ ರೂಪಿಸಿದೆ. ಮಾನವೀಯ ಅಂತಃಕರಣಗಳ ಮೀರಿದಂತಹ ಆಧುನಿಕ ಕಾರ್ಪೋರೇಟ್ ಪ್ರಪಂಚದೊಳಗಿನ ವ್ಯವಹಾರಿಕತೆಯನ್ನು ತೋರಿಸುವ ಪ್ರಯತ್ನವೇ ‘ರಬ್ಡಿ’ ನಾಟಕದ ಉದ್ದೇಶವಾಗಿದೆ.
ನೌಶೀಲ್ ಮೆಹ್ತಾ ರವರು ಬಿಹಾರದಲ್ಲಾದ ಘಟನೆಯನ್ನಾಧರಿಸಿ 12 ವರ್ಷಗಳ ಹಿಂದೆ ಹಿಂದಿ ಪತ್ರಿಕೆಯೊಂದರಲ್ಲಿ ಬರೆದಿದ್ದ ಕಥಾನಕ ಲೇಖನವನ್ನು ಆಧರಿಸಿ ‘ರಬ್ಡಿ’ ನಾಟಕವನ್ನು ನಿತೀಶ್ ಹಾಗೂ ಹೇಮಲತ ಇಬ್ಬರೂ ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ್ದು ರಂಗವರ್ತುಲ ತಂಡದ ಕಲಾವಿದರಿಗೆ ನಿತೀಶ್.ಎಸ್ ರವರು ನಿರ್ದೇಶಿಸಿದ್ದಾರೆ. ಪಂಚಮುಖಿ ನಟರ ಸಮೂಹವು 2014, ಆಗಸ್ಟ್ 11 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಆಮೋದ’ ಸಾಂಸ್ಕೃತಿಕ ಉತ್ಸವದಲ್ಲಿ ‘ರಬ್ಡಿ’ ನಾಟಕವು ಪ್ರದರ್ಶನಗೊಂಡಿತು.
ಹಣ ಇದ್ದರೆ ಏನು ಬೇಕಾದ್ದನ್ನು ಪಡೆಯಬಹುದು ಎನ್ನುವ ಕಾಲವಿದು. ಮನೆ ಕಾರು ಅಂಗಡಿಗಳನ್ನು ಬಾಡಿಗೆ ಪಡೆದು ಬಳಸಿ
ಖಾಲಿಮಾಡುವ ಹಾಗೆ ತಾಯಿಯ ಗರ್ಭವನ್ನೂ ಸಹ ಬಾಡಿಗೆಗೆ ತೆಗೆದುಕೊಂಡು ಮಗು ಪಡೆದ ನಂತರ ಹೆತ್ತವಳನ್ನು ಮಗುವಿಂದ ದೂರಮಾಡುವ ಕಾಲವಿದು.
ಬಡತನದ ಅಗತ್ಯತೆಯನ್ನು ದುರುಪಯೋಗ ಪಡಿಸಿಕೊಂಡು ಹಣದಿಂದ ಮಾತೃತ್ವವನ್ನು ಕೊಂಡುಕೊಳ್ಳುವ ಜಾಗತಿಕ ಕಾಲವಿದು. ಇಂತಹ ಜಾಗತೀಕರಣದ ಕಾಲದಲ್ಲಿ ತಾಯ್ತನವನ್ನೂ ಬಾಡಿಗೆಗೆ ಪಡೆಯುವುದು ದುರಂತವಾಗಿದೆ. ದಂಪತಿಗಳಿಗೆ ಮಕ್ಕಳಾಗಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿಯಲ್ಲಿ ಮಗು ಪಡೆಯಲು ಬಾಡಿಗೆ ತಾಯಿಯನ್ನು ಬಳಸಿದರೆ ಸರಿ ಎನ್ನಬಹುದೇನೋ? ಆದರೆ ಮಗುಮಾಡಿಕೊಳ್ಳಲು ಎಲ್ಲವೂ ಸರಿ ಇದ್ದಾಗಲೂ ಬಾಡಿಗೆ ತಾಯಿಯನ್ನು ಗೊತ್ತು ಪಡಿಸುವುದು ಅಕ್ಷಮ್ಯ. ಇಂತಹ ಒಂದು ಅಕ್ಷಮ್ಯ ಅಮಾನವೀಯ ಸಂದರ್ಭವನ್ನು ದೃಶ್ಯರೂಪದಲ್ಲಿ ಕಟ್ಟಿ ಕೊಡುವ ಪ್ರಯತ್ನವನ್ನು ‘ರಬ್ಡಿ’ ನಾಟಕ ಮಾಡಿದೆ.
ಅವರು ಕಾರ್ಪೋರೇಟ್ ಸೆಕ್ಟರನಲ್ಲಿ ಕೆಲಸ ಮಾಡುವ ಸಾಪ್ಟವೇರ್ ಇಂಜನೀಯರ್ ದಂಪತಿಗಳು. ಗಂಡ ಮಗು ಬೇಕೆಂದರೆ, ಹೆಂಡತಿಗೆ ಕರಿಯರ್ ಚಿಂತೆ. ಬಾಡಿಗೆ ತಾಯಿಯಿಂದ ಮಗು ಪಡೆಯಲು ಕೂಲಿ ಕೆಲಸದ ಸಾವಿತ್ರಿಯನ್ನು ಒಪ್ಪಿಸುತ್ತಾರೆ. ಪತಿಯಿಂದ ಪರಿತ್ಯಕ್ತಳಾದ ಸಾವಿತ್ರಿ ತನ್ನ ಬುದ್ದಿಮಾಂದ್ಯ ಮಗಳನ್ನು ಡಾಕ್ಟರ್ ಓದಿಸಲು ಹಣ ಬೇಕಾಗುತ್ತದೆಂದು ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಡಾಕ್ಟರಗಳ ವಿಶೇಷ ಆರೈಕೆಯಲ್ಲಿ ಹೆಣ್ಣು ಮಗು ಜನಿಸುತ್ತದೆ. ಆದರೆ ಆ ಮಗುವೂ ಬುದ್ದಿಮಾಂದ್ಯ ಮಗುವಾಗಿರುತ್ತದೆ. ಇದು ಗೊತ್ತಾಗಿದ್ದೇ ಒಂದಿಷ್ಟು ಹಣವನ್ನು ಸಾವಿತ್ರಿಗೆ ಕೊಟ್ಟು ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಸಾಪ್ಟವೇರ್ ಗಂಡ ಹೆಂಡತಿಯರು ನಾಪತ್ತೆಯಾಗುತ್ತಾರೆ. ತನ್ನ ಕಷ್ಟದ ಪರಿಸ್ಥಿತಿಯಲ್ಲೂ ಈ ಬುದ್ದಿಮಾಂದ್ಯ ಮಗುವನ್ನು ತಾನೇ ಸಾಕುತ್ತೇನೆ ಎಂದು ಸಾವಿತ್ರಿ ನಿರ್ಧರಿಸುವುದರೊಂದಿಗೆ ನಾಟಕ ಮುಗಿಯುತ್ತದೆ. ನೋಡುಗರೆದೆಯಲ್ಲಿ ತಲ್ಲಣಗಳನ್ನು ಹುಟ್ಟಿಸುತ್ತದೆ.
ಅವರು ಕಾರ್ಪೋರೇಟ್ ಸೆಕ್ಟರನಲ್ಲಿ ಕೆಲಸ ಮಾಡುವ ಸಾಪ್ಟವೇರ್ ಇಂಜನೀಯರ್ ದಂಪತಿಗಳು. ಗಂಡ ಮಗು ಬೇಕೆಂದರೆ, ಹೆಂಡತಿಗೆ ಕರಿಯರ್ ಚಿಂತೆ. ಬಾಡಿಗೆ ತಾಯಿಯಿಂದ ಮಗು ಪಡೆಯಲು ಕೂಲಿ ಕೆಲಸದ ಸಾವಿತ್ರಿಯನ್ನು ಒಪ್ಪಿಸುತ್ತಾರೆ. ಪತಿಯಿಂದ ಪರಿತ್ಯಕ್ತಳಾದ ಸಾವಿತ್ರಿ ತನ್ನ ಬುದ್ದಿಮಾಂದ್ಯ ಮಗಳನ್ನು ಡಾಕ್ಟರ್ ಓದಿಸಲು ಹಣ ಬೇಕಾಗುತ್ತದೆಂದು ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಡಾಕ್ಟರಗಳ ವಿಶೇಷ ಆರೈಕೆಯಲ್ಲಿ ಹೆಣ್ಣು ಮಗು ಜನಿಸುತ್ತದೆ. ಆದರೆ ಆ ಮಗುವೂ ಬುದ್ದಿಮಾಂದ್ಯ ಮಗುವಾಗಿರುತ್ತದೆ. ಇದು ಗೊತ್ತಾಗಿದ್ದೇ ಒಂದಿಷ್ಟು ಹಣವನ್ನು ಸಾವಿತ್ರಿಗೆ ಕೊಟ್ಟು ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಸಾಪ್ಟವೇರ್ ಗಂಡ ಹೆಂಡತಿಯರು ನಾಪತ್ತೆಯಾಗುತ್ತಾರೆ. ತನ್ನ ಕಷ್ಟದ ಪರಿಸ್ಥಿತಿಯಲ್ಲೂ ಈ ಬುದ್ದಿಮಾಂದ್ಯ ಮಗುವನ್ನು ತಾನೇ ಸಾಕುತ್ತೇನೆ ಎಂದು ಸಾವಿತ್ರಿ ನಿರ್ಧರಿಸುವುದರೊಂದಿಗೆ ನಾಟಕ ಮುಗಿಯುತ್ತದೆ. ನೋಡುಗರೆದೆಯಲ್ಲಿ ತಲ್ಲಣಗಳನ್ನು ಹುಟ್ಟಿಸುತ್ತದೆ.
“ಬದುಕಾಕ ಕನಸು ಕಾಣಬೇಕ್ರವ್ವಾ, ನಮ್ಮಂತವರ ಬದುಕಿಗೆ ಕನಸು ಕಾಣುವುದೇ ಆಧಾರ” ಎನ್ನುವ ಸಾವಂತ್ರಿ ಈ ನಾಟಕದ ಕೇಂದ್ರ ಬಿಂದುವಾಗಿದ್ದಾಳೆ. ಕೆಳವರ್ಗವನ್ನು ಪ್ರತಿನಿಧಿಸುವ ಈ ಪಾತ್ರ ಸಶಕ್ತವಾಗಿ ಮೂಡಿಬಂದಿದೆ. ಬಡತನದ ಸಂಕಟಗಳನ್ನು, ಕೌಟುಂಬಿಕ ದೌರ್ಜನ್ಯವನ್ನು ಮೆಟ್ಟಿ ನಿಂತು ದಿಟ್ಟವಾಗಿ ಬದುಕುವ ಛಲವನ್ನು ಹೊಂದಿದ ಸಾವಂತ್ರಿ ತನ್ನ ಬುದ್ದಿಮಾಂದ್ಯ ಮಗಳನ್ನು ಡಾಕ್ಟರ್ ಮಾಡುವ ಕನಸು ಕಾಣುವುದೇ ಆಶಾಭಾವನೆಯ ಬಲು ದೊಡ್ಡ ರೂಪಕವಾಗಿದೆ. ಸಾವಿತ್ರಿಯ ಹಾಸ್ಯಪ್ರಜ್ಞೆ ಹಾಗೂ ವಿಡಂಬನಾತ್ಮಕ ಮಾತುಗಳು ನೋಡುಗರಲ್ಲಿ ವಿನೋದದ ಜೊತೆಗೆ ವಿಷಾದವನ್ನೂ ಹುಟ್ಟಿಸುವಂತಿವೆ. ಈ ನಾಟಕದಲ್ಲಿ ಬರುವ ಮೇಲ್ವರ್ಗದ ಪಾತ್ರಗಳಿಗೆ ಸಾವಂತ್ರಿಯ ಮಾತು ನಡುವಳಿಕೆ ವಿಚಿತ್ರವೆನಿಸಿದರೆ, ನಾಟಕ ನೊಡುವ ಪ್ರೇಕ್ಷಕರ ಕಣ್ಣಲ್ಲಿ ಈ ಎಲ್ಲಾ ಮೇಲ್ವರ್ಗದ ಪಾತ್ರಗಳ ನಡುವಳಿಕೆಯೇ ವಿಕ್ಷಪ್ತ ಎನ್ನಿಸುವಂತೆ ಈ ನಾಟಕ ಮೂಡಿಬಂದಿದೆ.
ನಾಟಕದ ಅಂತ್ಯದ ದೃಶ್ಯ ಮನಮಿಡಿಯುವಂತಿದೆ. “ಯಾರ್ಯಾಕಿಲ್ಲ, ನಾನಿದ್ದೀನಿ. ಲೋಕದಾಗ ಎಲ್ಲಾ ಸಂಬಂಧಗಳು ಬೀಳ್ತಾವ. ಆದರ ತಾಯಿ ಮಗುವಿನ ಸಂಬಂಧ ಎಂದೂ ಬೀಳೊಲ್ಲ. ಹಣ ಕೊಟ್ರ ಎಲ್ಲಾ ಸಿಗ್ತಾದ ಆದರ ತಾಯ್ತನ ಸಿಗೂದಿಲ್ಲ” ಎನ್ನುವ ಸಾವಿತ್ರಿಯ ಮಾತು ನೋಡುಗರ ಆಂತರ್ಯವನ್ನೇ ಕಲಕುವಂತಿದೆ. “ಸಕಲವಿದ್ದೂ ಮಗು ತಬ್ಬಲಿ ತಾನಾಗಿದೆ, ಸಿಕ್ಕಸಿಕ್ಕವರನ್ನು ತಬ್ಬಿ ಅವ್ವಾ ಎಂದಿದೆ...” ಎನ್ನುವ ಹಿನ್ನಲೆಯ ಹಾಡು ಹಾಗೂ ಸಾವಿತ್ರಿಯ ತಾಯಿಯ ಮಮತೆ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದ್ದಂತೂ ಸತ್ಯ.
ಒಂದು ಕಡೆ ಕೆಳವರ್ಗದ ಮಹಿಳೆಯ ಮಾನವೀಯತೆ ಹಾಗೂ ಇನ್ನೊಂದು ಕಡೆ ಕಾರ್ಪೋರೇಟ್ವರ್ಗದ ಮಹಿಳೆಯ ಅಮಾನವಿಯತೆಗಳನ್ನು ತುಲನಾತ್ಮಕವಾಗಿ ತೋರಿಸಲಾಗಿದೆ. ಇಲ್ಲಿ ಮೂರು ಮಹತ್ವದ ಮಹಿಳಾ ಪಾತ್ರಗಳಿವೆ. ಶ್ರಮಜೀವಿಯಾದ ಸಾವಂತ್ರಿ ಮಮತೆಯ ಪ್ರತೀಕವಾದರೆ, ಸಾಪ್ಟವೇರ್ ಮಹಿಳೆ ಯಾಂತ್ರಿಕ ಬದುಕಿಗೆ ರೂಪಕವಾಗಿದ್ದಾಳೆ. ಇವರಿಬ್ಬರ ನಡುವೆ ಮಧ್ಯವರ್ತಿಯೆನಿಸುವ ಮಹಿಳಾ ಡಾಕ್ಟರ್ ವ್ಯಾಪಾರೀಕರಣದ ಭಾಗವೆನಿಸುತ್ತಾಳೆ. ಈ ಮೂರು ಮಹಿಳೆಯರ ಸುತ್ತಲೇ ಸುತ್ತುವ ಈ ನಾಟಕದಲ್ಲಿ ಪುರುಷ ಪಾತ್ರಗಳು ನಿರ್ಣಾಯಕವೆನ್ನಿಸುವಂತಿಲ್ಲ. ಪರುಷರ ಕುಮ್ಮಕ್ಕಿಲ್ಲದೇ ಈ ರೀತಿಯ ಘಟನೆಗಳು ನಡೆಯುವುದು ಸುಲಭ ಸಾಧ್ಯವಲ್ಲ. ಕಥೆ ಬರೆದವರು, ನಾಟಕ ನಿರ್ದೇಶಿಸಿದವರು ಪುರುಷರಾಗಿದ್ದರಿಂದ ಎಲ್ಲಾ ಆರೋಪಗಳನ್ನು ಸ್ತ್ರೀಪಾತ್ರಗಳ ಮೇಲೆಯೇ ಹಾಕಿ ಸೇಪ್ ಆಗಿದ್ದಾರೆನೋ ಎನ್ನುವ ಅನುಮಾನ ಬಾರದೇ ಇರದು.
ಈ ನಾಟಕದ ಅಂತಸತ್ವ ಇರುವುದೇ ತಾಯಿತನದಲ್ಲಿ. ಯಾರದೋ ಭೂಮಿ ಇನ್ಯಾರದೋ ಬೀಜವಾಗಿದ್ದರೂ ಸಹ ಇಲ್ಲಿ ಮಗುವನ್ನು ಹೆರುವ ತಾಯಿಗೆ ತನ್ನ ಗರ್ಭ ಸಂಜಾತ ಮಗುವಿನ ಜೊತೆಗೆ ಭಾವನಾತ್ಮಕವೆನ್ನಿಸುವ ಸಂಬಂಧ ಬೆಳೆಯುತ್ತದೆ. ಆದರೆ ಅದೇ ಸಂಬಂಧ ಬಾಡಿಗೆಗೆ ಗೊತ್ತು ಮಾಡಿದ ಮಹಿಳೆಗೆ ಸಾಧ್ಯವಾಗುವುದೇ ಇಲ್ಲ. ಮಗು ಹುಟ್ಟುವವರೆಗೂ ಬಾಡಿಗೆ ತಾಯಿಯನ್ನು ಚೆನ್ನಾಗಿ ಆರೈಕೆ ಮಾಡಿ ನಂತರ ಮಗು ಬುದ್ದಿಮಾಂದ್ಯ ಎಂದು ಗೊತ್ತಾದ ತಕ್ಷಣ ನಿರ್ದಾಕ್ಷಿಣ್ಯವಾಗಿ ಮಗುವನ್ನು ತ್ಯಜಿಸಿ ಹೋಗಲು ಬಾಡಿಗೆಗೆ ನಿಯಮಿಸಿದ ಮಹಿಳೆಗೆ ಸಾಧ್ಯವಾಯಿತು. ಆದರೆ ಹೆತ್ತ ಒಡಲಿಗೆ ಮಗು ಹೇಗೆ ಇದ್ದರೂ ಸಹ ಮಗುವಿನ ಮೇಲಿನ ಮಮಕಾರ ಹೆಚ್ಚಾಯಿತು. ಮಾತೃತ್ವದ ಕುರಿತು ಭಾವನಾತ್ಮಕ ನೆಲೆಯಲ್ಲಿ ‘ರಾಬ್ಡಿ’ ನಾಟಕ ಪ್ರಸ್ತುತಗೊಂಡಿದೆ.
ಗಂಡ ಹೆಂಡತಿಯರಿಗೆ ಮಗುವಾಗುವ ಸಾಧ್ಯತೆ ಇದ್ದೂ ಬಾಡಿಗೆ ತಾಯಿಯನ್ನು ಗೊತ್ತುಪಡಿಸುವುದಕ್ಕೆ ಕಾನೂನು ಸಮ್ಮತಿ ಇಲ್ಲ. ಆದರೂ ಈ ನಾಟಕದಲ್ಲಿ ಅದನ್ನು ತೋರಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಈಗ ಆಧುನಿಕ ವೈದ್ಯಕೀಯದ ತಾಂತ್ರಿಕತೆ ಅದೆಷ್ಟು ಮುಂದುವರೆದಿದೆ ಎಂದರೆ ಗರ್ಭದಲ್ಲಿದ್ದಾಗಲೇ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕುರಿತು ತಿಳಿಯಲು ಸಾಧ್ಯವಿದೆ. ಆದರೂ ಈ ನಾಟಕದಲ್ಲಿ ಈ ಸಾಧ್ಯತೆಯನ್ನು ಮರೆಮಾಚಿ ಮಗು ಹುಟ್ಟಿದ ಮೇಲೆಯೇ ಅದರ ಬುದ್ದಿಮಾಂದ್ಯತೆ ಡಾಕ್ಟರರಿಗೆ ತಿಳಿಯುತ್ತದೆ ಎನ್ನುವುದು ಅವಾಸ್ತವ ವೆನ್ನಿಸುತ್ತದೆ. ಜೊತೆಗೆ ಕೊನೆಗೆ ಮಗುವನ್ನು ಅಪ್ಪಿಕೊಂಡು ಸಾವಂತ್ರಿ ಒಪ್ಪಿಕೊಳ್ಳುವ ಸನ್ನಿವೇಶಕ್ಕೆ ನಾಟಕ ನಿಲ್ಲಿಸಿದ್ದರೆ ನಿಜಕ್ಕೂ ಅರ್ಥಪೂರ್ಣವೆನಿಸುತ್ತಿತ್ತು. ಆದರೆ ಕೊಟ್ಟ ಕೊನೆಗೆ ನಾಲ್ಕು ವರ್ಷಗಳ ನಂತರ ಮರಳಿ ಸಾವಿತ್ರಿ ಆಸ್ಪತ್ರೆಗೆ ಬರುವ ದೃಶ್ಯ ಅನಗತ್ಯವೆನಿಸುತ್ತದೆ. ಈ ಅತಾರ್ಕಿಕ ಸಂಗತಿಗಳಿಗೆ ನಾಟಕದಲ್ಲಿ ಉತ್ತರವನ್ನಾದರೂ ಕೊಟ್ಟಿದ್ದರೆ ಚೆನ್ನಾಗಿತ್ತು.
ನಾಟಕದ ಪ್ರತಿಯೊಂದು ಪಾತ್ರಗಳೂ ಸಹ ನಟನೆಯಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿವೆ. ಅದರಲ್ಲೂ ಸಾವಿತ್ರಿ ಪಾತ್ರದ ದೀಪಿಕಾ ಆರಾಧ್ಯರ ಅಭಿನಯ ಮನನೀಯವಾಗಿದೆ. ಆರೇಳು ವರ್ಷದ ಬುದ್ದಿಮಾಂಧ್ಯ ಮಗುವಿನ ಪಾತ್ರದಲ್ಲಿ ಬಾಲಕಿ ಸಿರಿ ಸೊಗಸಾಗಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದಳು. ಮಹಿಳಾ ಡಾಕ್ಟರ್ ಆಗಿ ಮಾನಸ ಜ್ಯೋಷಿ ಹಾಗೂ ಹೆಂಡತಿಯಾಗಿ ಸುಷ್ಮಿತಾ ಶ್ರೀಧರ್ ರವರ ಪಾತ್ರೋಚಿತ ಅಭಿನಯ ಗಮನ ಸೆಳೆಯುವಂತಿದೆ. ಗಂಡನಾಗಿ ನಿತೀಶ ಶ್ರೀಧರ್ ಮತ್ತು ಸಹಾಯಕ ವೈದ್ಯನಾಗಿ ಹರೀಶ ಬಾಬುರವರು ಪಾತ್ರೋಚಿತವಾಗಿ ಅಭಿನಯಿಸಿದರಾದರೂ ಅವರ ಅಭಿನಯಕ್ಕೆ ಈ ನಾಟಕದಲ್ಲಿ ಹೆಚ್ಚು ಅವಕಾಶ ಇಲ್ಲದಾಗಿದೆ. ನಿರ್ದೇಶಕ ನಿತೀಶ್ ರವರು ಅಭಿನಯ ವಿಭಾಗದಲ್ಲಿ ತುಂಬಾ ಪರಿಶ್ರಮವಹಿಸಿದ್ದಾರೆ.
ನಾಟಕದಲ್ಲಿ ನಾಗತಿಹಳ್ಳಿ ರಮೇಶರವರ ಎರಡು ಹಾಡುಗಳ ಸಾಲುಗಳನ್ನು ಆಗಾಗ ಬಳಸಲಾಗಿದೆ. ಸುಪ್ರಿಯಾ ರಘುನಂದನರವರು ಈ ಹಾಡಿನ ಸಾಲುಗಳಿಗೆ ದ್ವನಿ ನೀಡಿ ಇಡೀ ನಾಟಕಕ್ಕೆ ಮೂಡ್ ಸೃಷ್ಟಿಸಿದ್ದಾರೆ. ಸರಳ ಹಾಗೂ ಸುಂದರ ರಂಗವಿನ್ಯಾಸ ಮಾಡಲಾಗಿದೆ. ಹಿಂದೆ ಬ್ಯಾಕಡ್ರಾಪನಲ್ಲಿ ಬಳಸಿದ ಪ್ರಕೃತಿಯ ಚಿತ್ರವು ಫಲವಂತಿಕೆಯ ಪ್ರತೀಕವಾದ ಮಹಿಳೆಯನ್ನು ಪ್ರಕೃತಿಗೆ ಸಂಕೇತವಾಗಿ ತೋರಿಸಿದ್ದು ಮಾರ್ಮಿಕವಾಗಿದೆ. ರಾಮಕೃಷ್ಣ ಬೆಳ್ತೂರರ ಪ್ರಸಾಧನದಲ್ಲಿ ವಿಶೇಷತೆವೇನಿಲ್ಲ. ಕಾಸ್ಟೂಮ್ ಗಳಲ್ಲಿ ಇನ್ನೂ ಸ್ವಲ್ಪ ಬದಲಾವಣೆ ಬೇಕಾಗಿತ್ತು. ಒಂಬತ್ತು ತಿಂಗಳ ಕಾಲಾವಧಿಯಲ್ಲಿ ನಡೆಯುವ ಈ ನಾಟಕದ ಯಾವ ಪಾತ್ರವೂ ಕಾಸ್ಟೂಮನ್ನು ಬದಲಾಯಿಸದೇ ಇರುವುದು ಎನ್ನುವುದು ಆಬಾಸಕಾರಿಯಾಗಿದೆ.
ಮುಸ್ತಫ |
ಈ ನಾಟಕದಲ್ಲಿ ಒಂದು ಪ್ರಮುಖ ಕೊರತೆ ಎದ್ದು ಕಾಣುವಂತಿತ್ತು. ಅದು ಈ ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿದ್ದ ಮುಸ್ತಪಾರವರ ಅನುಪಸ್ಥಿತಿ. ಆಗಸ್ಟ್ ಐದರಂದು ರಸ್ತೆ ಅಪಘಾತದಲ್ಲಿ ತೀರಿಕೊಂಡ ಈ ಯುವ ಬೆಳಕಿನ ತಜ್ಞನ ನೆನಪು ಈ ನಾಟಕದ ಪ್ರದರ್ಶನದಲ್ಲಿ ಕಾಡಿತು. ಮುಸ್ತಫ ರವರ ಅನುಪಸ್ಥಿತಿಯಲ್ಲಿ ಮಂಜು ನಾರಾಯಣ ಬೆಳಕನ್ನು ನಿರ್ವಹಿಸಿದರು. ಇಡೀ ನಾಟಕದಲ್ಲಿ ಹೈಲೈಟ್ ಎನ್ನುವಂತೆ ಬೆಳಕು ಮೂಡಿಬಂದಿದೆ.
ಕಾರ್ಪೋರೇಟ್ ಸೆಕ್ಟರನಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಸೇರಿ ಈ ನಾಟಕವನ್ನು ಕಟ್ಟಿಕೊಟ್ಟಿದ್ದರೆ. ಅಚ್ಚರಿಯ ವಿಷಯವೇನೆಂದರೆ ತಮ್ಮ ಒತ್ತಡದ ಕೆಲಸಗಳ ನಡುವೆಯೂ ತಮ್ಮದೇ ಕಾರ್ಪೋರೇಟ್ ಕಲ್ಚರನ್ನು ಲೇವಡಿ ಮಾಡುವಂತಹ ನಾಟಕವನ್ನು ನಿರ್ಮಿಸಿ ಪ್ರದರ್ಶಿಸಿದ್ದಾರೆ. ಮಾತೃತ್ವ, ಜೀವ ಎನ್ನುವುದು ಅದು ಹೇಗೆ ವ್ಯವಹಾರಿಕವಾಗಿದೆ ಎನ್ನುವುದನ್ನು ಮಾರ್ಮಿಕವಾಗಿ ಈ ನಾಟಕದಲ್ಲಿ ತೋರಿಸಿದ್ದಾರೆ. ಸಂಪಾದನೆಯ ಹಿಂದೆ ದಿನ ನಿತ್ಯ ಪೈಪೋಟಿಗೆ ಬಿದ್ದಂತೆ ಓಡುತ್ತಿರುವ ಕಾರ್ಪೋರೇಟ್ ಜಗತ್ತಿನ ವಿಕ್ಷಿಪ್ತ ಜೀವಿಗಳ ಒತ್ತಡದ ಬದುಕಿನ ಅನಾಹುತಗಳ ಅನಾವರಣಗೊಳಿಸುವಂತಹ ನಾಟಕವನ್ನು ಆಡುವ ಮೂಲಕ ಅದೇ ಲೋಕದ ಕ್ರಿಯಾಶೀಲ ಕಲಾವಿದರು ಮಾನವೀಯತೆಗೆ ಸ್ಪಂದಿಸಿದ್ದಾರೆ. ಮಾತೃತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ವ್ಯಾಪಾರೀ ಜಗತ್ತಿನ ಅಮಾನವೀಯತೆಯನ್ನು ಬೆತ್ತಲು ಗೊಳಿಸಿದ್ದಾರೆ. ಈ ಕಾರಣಕ್ಕಾದರೂ ಈ ರಂಗವರ್ತುಲದ ಕಲಾವಿದ ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಲೇಬೇಕಿದೆ. ಪ್ರತಿಯೊಂದು ಕಾಪೋರೇಟ್ ಕಛೇರಿಗಳಲ್ಲಿ ಈ ರಾಬ್ಡಿ ನಾಟಕ ಪ್ರದರ್ಶನಗೊಳ್ಳಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ