ಗುರುವಾರ, ಆಗಸ್ಟ್ 28, 2014

“ಆಧುನಿಕ ಕನ್ನಡ ರಂಗಭೂಮಿಗೆ ಡಾ.ಯು.ಆರ್.ಅನಂತಮೂರ್ತಿಯವರ ಕೊಡುಗೆ”


'ಆವಸ್ಥೆ' ನಾಟಕ, ತಂಡ : ಅಭಿನಯ ತರಂಗ, ನಿ: ಪ್ರಕಾಶ ಬೆಳವಾಡಿ



ಯಾರು ಏನೇ ಹೇಳಲಿ, ಕನ್ನಡ ಸಾಹಿತ್ಯಲೋಕ ಕಂಡ ಅದ್ಬುತ, ಅನನ್ಯ, ವಿಕ್ಷಿಪ್ತ ದೈತ್ಯ ಪ್ರತಿಭೆ ಡಾ.ಯು.ಆರ್.ಅನಂತಮೂರ್ತಿ. ಅನಂತಮೂರ್ತಿಗಳನ್ನು ಸಾಹಿತ್ಯ, ಸಿನೆಮಾ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸುವ ಹಾಗೆ ರಂಗಭೂಮಿಯ ಜೊತೆ ಗುರುತಿಸಿದ್ದು ತುಂಬಾ ಕಡಿಮೆ. ಆದರೆ ಕೆಲವೇ ಕೆಲವು ಆತ್ಮೀಯರಿಗೆ ಗೊತ್ತಿರುವ ಸಂಗತಿ ಏನೆಂದರೆ ಅನಂತಮೂರ್ತಿಯವರಿಗೆ ರಂಗಭೂಮಿಯತ್ತ ಒಂದು ರೀತಿಯ ಒಲವು ಹಾಗೂ ಸೆಳವು ಹೆಚ್ಚಾಗಿಯೇ ಇತ್ತು. ರಂಗಭೂಮಿಗೆ ಅನಂತಮೂರ್ತಿಯವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ.

ಅನಂತಮೂರ್ತಿಯವರು ಬರೆದಿದ್ದೇ ಒಂದೇ ಒಂದು ನಾಟಕ. ಅದು ಆವಾಹನೆ ಎನ್ನುವ ವಿಡಂಬನಾತ್ಮಕ ಅಸಂಗತ ಮಾದರಿಯ ನಾಟಕ. ನಾಟಕವನ್ನು 2004ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಯೋಗರಂಗದ ಕೆ.ವಿ.ನಾಗರಾಜಮೂರ್ತಿಯವರು ನಾಟಕವನ್ನು 1988 ರಲ್ಲಿಯೇ ಗ್ರಾಮೀಣ ರಂಗಭೂಮಿಯ ಯುವಕರಿಗೆ ನಿರ್ದೇಶಿಸಿದ್ದರಾದರೂ ಅದು ಪ್ರೇಕ್ಷಕರ ಗಮನ ಸೆಳೆಯಲಿಲ್ಲ. ಒಂದೇ ಒಂದು ಪ್ರದರ್ಶನಕ್ಕೆ ನಿಂತೇ ಹೋಯಿತು. 1990 ರಲ್ಲಿ ಚಿದಂಬರರಾವ್ ಜಂಬೆರವರು ನೀನಾಸಂ ಶಾಲೆಯ ವಿದ್ಯಾರ್ಥಿಗಳಿಗೂ ಆವಾಹನೆ ನಾಟಕವನ್ನು ತರಬೇತಿಯ ಭಾಗವಾಗಿ ನಿರ್ದೇಶಿಸಿದ್ದರು. ಅದ್ಯಾಕೂ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲೇ ಇಲ್ಲ. ಇದರಿಂದಗಿ ಅನಂತಮೂರ್ತಿಗಳಿಗೆ ನಿರಾಶೆಯಾದಂತಾಯಿತು.

ನಾಟಕ ರಚನೆ ತನ್ನ ಕ್ಷೇತ್ರವಲ್ಲ ಎಂದು ಮನಗಂಡ ಅನಂತಮೂರ್ತಿಗಳು ಮತ್ತೆ ಪ್ರಯತ್ನಕ್ಕೆ ಮುಂದಾಗಲಿಲ್ಲ. ಆದರೆ ರಂಗಭೂಮಿಯ ಸೆಳೆತ ಅವರನ್ನು ಬಿಡಲಿಲ್ಲ. ಪಿ.ಲಂಕೇಶರವರ ಬಳಗದಲ್ಲಿ ಸಕ್ರೀಯರಾಗಿದ್ದಾಗಲೇ ಅನಂತಮೂರ್ತಿಗಳು ನಾಟಕರಂಗದ ಪ್ರಭಾವಕ್ಕೆ ಒಳಗಾಗಿದ್ದರು. ಲಂಕೇಶರ ಜೊತೆಗೆ ನಾಟಕಗಳ ರೀಡಿಂಗ್ ಮಾಡುವುದು, ನಾಟಕದ ಸಾಧ್ಯತೆಗಳ ಬಗ್ಗೆ ಚರ್ಚಿಸುವುದು, ಹೊಸ ನಾಟಕಗಳನ್ನು ನೋಡಿ ಕಲಾವಿದರಿಗೆ ಬೆನ್ನು ತಟ್ಟುವುದು ಹೀಗೆ ತಮ್ಮದೇ ಆದ ರೀತಿಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು.ಅನಂತಮೂರ್ತಿಗಳ ರಂಗಪ್ರೀತಿಯನ್ನು ವಿಸ್ತರಿಸಿದ್ದು ಬಿ.ವಿ.ಕಾರಂತರ ಸಾಂಗತ್ಯ. ಕಾರಂತರು ಮೈಸೂರಲ್ಲಿ ರಂಗಾಯಣದ ನಿರ್ದೇಶಕರಾದಾಗ ನಾಟಕ ನೋಡಲೆಂದೇ ಮೈಸೂರಿಗೆ ಹೋಗಿ ನಾಟಕದ ನಂತರದ ಸಂವಾದಗಳಲ್ಲಿ ಪಾಲ್ಗೊಂಡು ನಾಟಕದ ಸಾಧಕ ಬಾಧಕಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸುತ್ತಿದ್ದರು. ರಂಗಾಯಣದ ರಂಗಚಟುವಟಿಕೆಗಳ ಜೊತೆಗೆ ತಮ್ಮನ್ನು ಸದಾ ಗುರುತಿಸಿಕೊಂಡರು


ಅನಂತಮೂರ್ತಿಯವರ ನಾಟಕ ಪ್ರೀತಿಗೆ ಒಂದು ಸಣ್ಣ ಉದಾಹರಣೆ ಹೀಗಿದೆ. ನಾಲ್ಕೈದು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ಆಯೋಜಿಸಲಾದ ಬಹುರೂಪಿ ನಾಟಕೋತ್ಸವದಲ್ಲಿ ಸದಾರಮೆ ನಾಟಕ ಪ್ರದರ್ಶನವಾಗುತ್ತಿತ್ತು. ನಾಟಕವನ್ನು ನೋಡಲೇಬೇಕೆಂಬ ಆಸೆ ಅನಂತಮೂರ್ತಿಗಳದ್ದು. ಆದರೆ ಆರೋಗ್ಯ ಸರಿಯಿರಲಿಲ್ಲ. ಆದರೂ ಬೆಂಗಳೂರಿನಿಂದ ಮೈಸೂರಿಗೆ ನಾಟಕ ನೋಡುವ ಅಭಿಲಾಷೆಯಿಂದ ಹೊರಟೇ ಬಿಟ್ಟರು. ಅಲ್ಲಿ ನೋಡಿದರೆ ಇಡೀ ರಂಗಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಕಾಲಿಡಲೂ ಜಾಗವಿಲ್ಲದಷ್ಟು ಜನವೋ ಜನ. ಯಾರೋ ಕಾರ್ಯಕರ್ತರು ಕಛೇರಿಯಿಂದ ಒಂದು ಖುರ್ಚಿ ತಂದು ಹಿಂದೆ ಕೂಡಿಸಿದರು. ಆಗ ತಾನೆ ಡಯಾಲಿಸಿಸ್ ಮಾಡಿಸಿಕೊಂಡು ಬಂದ ನೋವಿನ ಜೊತೆಗೆ  ಮೂರು ಗಂಟೆ ಪ್ರಯಾಣದ ಆಯಾಸವನ್ನೂ ಲೆಕ್ಕಿಸಿದೇ ಪ್ಲಾಸ್ಟಿಕ್ ಚೇರನಲ್ಲಿ ಕುಳಿತು ನಾಲ್ಕು ಗಂಟೆಗಳ ನಾಟಕವನ್ನು ನೋಡಿ ಆನಂದಿಸಿದರು. ಅಂದು ಅಲ್ಲಿಯೇ ಉಳಿದುಕೊಂಡು ಮರುದಿನ ಎಲ್ಲಿ ಕಳ್ಳನ ಪಾತ್ರದಾರಿ ಎಂದು ಹುಲಗಪ್ಪ ಕಟ್ಟೀಮನಿಯವರನ್ನು ಹುಡುಕಿಸಿ ಕರೆಸಿಕೊಂಡು ಅಭಿನಂದಿಸಿದರು. ಇಡೀ ದಿನ ಸದಾರಮೆ ನಾಟಕದ ಕುರಿತು ಚರ್ಚೆಯಲ್ಲಿ ಸಕ್ರೀಯರಾಗಿ ಪಾಲ್ಗೊಂಡರು. ಇದೆಂತಾ ರಂಗಪ್ರೀತಿ

ಕೆ.ವಿ.ಸುಬ್ಬಣ್ಣ, ನೀನಾಸಮ್
ಅನಂತಮೂರ್ತಿಗಳ ರಾಜಕೀಯ ನಿರ್ಧಾರಗಳು, ಆಚಾರ ವಿಚಾರಗಳಲ್ಲಿರುವ ಭಿನ್ನತೆಗಳು, ಅನಿರೀಕ್ಷಿತ ವಾಗ್ವಾದಗಳು ಏನೇ ವಾದವಿವಾದ ಹುಟ್ಟಿಹಾಕಿರಲಿ, ಆದರೆ ಅವರ ರಂಗಭೂಮಿಯ ಪ್ರೀತಿ ಮಾತ್ರ ನಿರ್ವಿವಾದವಾಗಿರುವಂತಹುದು. ಅನಂತಮೂರ್ತಿ ಹಾಗೂ  ಹೆಗ್ಗೋಡಿನ ನೀನಾಸಂ ಶಿಕ್ಷಣ ಕೇಂದ್ರದ ಸಂಬಂಧ ಅವಿನಾಭಾವ ಎನ್ನುವಂತಹುದಾಗಿತ್ತು. ಕೆ.ವಿ.ಸುಬ್ಬಣ್ಣ ಹಾಗೂ ಅನಂತಮೂರ್ತಿಗಳು ಕ್ಲಾಸಮೇಟ್ಗಳಾಗಿದ್ದವರು. ಉತ್ತಮ ಒಡನಾಡಿಗಳು. ಸುಬ್ಬಣ್ಣ ರಂಗಭೂಮಿಯ ಮೇರುವ್ಯಕ್ತಿಯಾದರೆ ಅನಂತಮೂರ್ತಿಗಳು ಸಾಹಿತ್ಯಕ್ಷೇತ್ರದ ದೈತ್ಯ ಸಾಹಿತಿಗಳಾಗಿ ಬೆಳೆದವರು. ಸುಬ್ಬಣ್ಣನವರ ರಂಗಭೂಮಿಯ ಕೆಲಸಗಳಿಗೆ ಒತ್ತಾಸೆಯಾಗಿ ಅನಂತಮೂರ್ತಿಗಳು ಜೊತೆಯಾಗಿ ನಿಂತರು. ಪ್ರತಿ ವರ್ಷ ನೀನಾಸಂ ನಡೆಸುವ ಸಂಸ್ಕೃತಿ ಶಿಬಿರಗಳನ್ನು ನಡೆಸಿ ಕೊಡುವ ಜವಾಬ್ದಾರಿ ಅನಂತಮೂರ್ತಿಗಳದ್ದಾಗಿತ್ತು. ಹತ್ತು ದಿನಗಳ ಕಾಲ ಬೆಂಗಳೂರಿನ ಕಾಂಕ್ರೀಟ್ ಕಾಡನ್ನು ಬಿಟ್ಟು ಹೆಗ್ಗೋಡಿನ ಪ್ರಕೃತಿಯ ಮಡಿಲಲ್ಲಿ ಮೈಮರೆತು ಯುವಕರ ಜೊತೆಗೆ ಸೇರಿ ಕಲೆ ಸಂಸ್ಕೃತಿಯನ್ನು ಕಟ್ಟುವ ಕೆಲಸಗಳಲ್ಲಿ ನಿರತರಾಗುತ್ತಿದ್ದರು. ನೀನಾಸಂ ಪ್ರದರ್ಶಿಸುವ ಬಹುತೇಕ ನಾಟಕಗಳನ್ನು ನೋಡಿ ವಿಶ್ಲೇಷಿಸುತ್ತಿದ್ದರು. ಒಂದು ರೀತಿಯಲ್ಲಿ ನೀನಾಸಂ ಕೇಂದ್ರದ ಆಧಾರ ಸ್ಥಂಭವಾಗಿದ್ದ ಅನಂತಮೂರ್ತಿಗಳಿಂದ ಪ್ರಭಾವಿತರಾದ ಅದೆಷ್ಟೊ ಕಲಾವಿದರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಆಲೋಚನಾ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಅನಂತಮೂರ್ತಿಗಳು ನೇರವಾಗಿ ನಾಟಕಗಳನ್ನು ಬರೆಯದೇ ಇರಬಹುದು. ಆದರೆ ಅವರ ಕೆಲವಾರು ಕಥೆ ಹಾಗೂ ಕಾದಂಬರಿಗಳು ನಾಟಕಗಳಾಗಿ ರಂಗದಂಗಳದಲ್ಲಿ ಪ್ರದರ್ಶನಗೊಂಡಿವೆ. ಉತ್ತಮ ನಾಟಕಗಳ ಕೊರತೆಯನ್ನು ಅನುಭವಿಸುತ್ತಿರುವ ಆಧುನಿಕ ಕನ್ನಡ ರಂಗಭೂಮಿಗೆ ಅನಂತಮೂರ್ತಿಯವರ ಸಾಹಿತ್ಯ ಕೃತಿಗಳು ವರದಾನವಾಗಿ ಬಂದವು. ಅದರಲ್ಲಿ ಪ್ರಮುಖವಾದವುಗಳು ಹಲವಾರಿವೆ. ಅನಂತಮೂರ್ತಿಯವರ ಬರಹದಲ್ಲಿರುವ ರಂಗಸಾಧ್ಯತೆಗಳನ್ನು
ಆರ್.ನಾಗೇಶ
ಮೊಟ್ಟ ಮೊದಲು ಗುರುತಿಸಿದವರು ಆಧುನಿಕ ಕನ್ನಡ ರಂಗಭೂಮಿಯ ವಿಶಿಷ್ಟ ರಂಗನಿರ್ದೇಶಕ ಆರ್.ನಾಗೇಶರವರು. ಅನಂತಮೂರ್ತಿಯವರ ಭಾರತೀಪುರ ಕಾದಂಬರಿಯನ್ನು ರಂಗರೂಪಕ್ಕಳವಡಿಸಲು ಅನಂತಮೂರ್ತಿಯವರಿಂದ ಹಕ್ಕುಗಳನ್ನು ಪಡೆದ ನಾಗೇಶರವರು 1982ರಲ್ಲಿ ತಾವೇ ಕಟ್ಟಿದ್ದ ಸೂತ್ರದಾರ ರಂಗತಂಡಕ್ಕೆ ನಿರ್ದೇಶಿಸಿದ್ದರು. ಬಹುಷಃ ಅನಂತಮೂರ್ತಿಯವರ ಬರಹ ನಾಟಕವಾಗಿದ್ದು ಅದೇ ಮೊದಲನೆಯದಾಗಿದೆ. ಪ್ರಯೋಗದಲ್ಲಿ ಸೇತುಮಾಧವ, ಮಾಲತಿ, ಸಿ.ಲಕ್ಷ್ಮಣ್.. ಮುಂತಾದವರು ಅಭಿನಯಿಸಿದ್ದರು. ಬೆಂಗಳೂರು ಸೇರಿದಂತೆ ದೆಲ್ಲಿ, ಹೈದರಾಬಾದ್, ಕಲ್ಕತ್ತಾಗಳಲ್ಲೂ ನಾಟಕ ಪ್ರದರ್ಶನ ಕಂಡಿತು. ಸ್ವತಃ ಅನಂತಮೂರ್ತಿಗಳೇ ಬೇರೆ ಬೇರೆ ಕಡೆಗೆ ಶೋಗಳಾದಾಗ ಹೋಗಿ ಕುಳಿತು ನಾಟಕ ನೋಡಿ ನಾನು ಭಾರತೀಪುರ ಬರೆದಿದ್ದಕ್ಕೆ ಸಾರ್ಥಕವಾಯಿತು ಎಂದು ಹೇಳಿದರಂತೆ. ಸಾಹಿತ್ಯಕವಾಗಿ ಅಷ್ಟೇನು ಉತ್ತಮ ಕೃತಿಯಾಗಿರದ ಭಾರತೀಪುರ ಆರ್.ನಾಗೇಶರವರ ಕ್ರಿಯಾಶೀಲತೆಯಲ್ಲಿ ಅತ್ಯುತ್ತಮ ರಂಗನಾಟಕವಾಗಿ ಮೂಡಿಬಂದಿದ್ದನ್ನು ಕೆಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.
 
1987ರಲ್ಲಿ ಅನಂತಮೂರ್ತಿಯವರ ಮೌನಿ ಸಣ್ಣ ಕಥೆಯನ್ನು ಉಮಾಶಂಕರರವರು ನಾಟಕವಾಗಿ ರೂಪಾಂತರಿಸಿದರು. ಪ್ರಯೋಗರಂಗ ತಂಡದ ಎರಡನೇ ಪ್ರೊಡಕ್ಷನ್ ಆಗಿದ್ದ ಮೌನಿ ನಾಟಕವನ್ನು ಕೆ.ವಿ.ನಾಗರಾಜಮೂರ್ತಿಗಳು ನಿದೇಶಿಸಿದ್ದರು. ಈವರೆಗೂ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ನಾಟಕ ಕಂಡಿದೆ. ಇದೇ ಮೌನಿ ಕಥೆಯಾಧಾರಿತ ನಾಟಕವನ್ನು ಸಾಗರದ ಭಾರತಿ ಕಲಾವಿದರು 1991ರಲ್ಲಿ ದೇವೆಂದ್ರ ಬೆಳೆಯೂರುರವರ ನಿರ್ದೇಶನದಲ್ಲಿ ಪ್ರದರ್ಶಿಸಿದ್ದಾರೆ. ನಂತರ ನಾಟಕ ದೂರದರ್ಶನದಲ್ಲೂ ಸಹ ಪ್ರಸಾರವಾಯಿತು.


ನಾಟಕ :ಸೂರ್ಯನ ಕುದುರೆ, ತಂಡ : ಜನಮನದಾಟ, ನಿ: ಎಂ.ಗಣೇಶ

ಅನಂತಮೂರ್ತಿಯವರ ಇನ್ನೊಂದು ಕಥೆ ಸೂರ್ಯನ ಕುದುರೆ, 2002ರಲ್ಲಿ ಶಿವಮೊಗ್ಗದ ನಮ್ ಟೀಮ್ ರಂಗತಂಡ ನಾಟಕವನ್ನು ಮೊದಲ ಬಾರಿಗೆ ಪ್ರದರ್ಶನಮಾಡಿತು. ಸತ್ಯನಾರಾಯಣರಾವ್ ಅಣತಿರವರು ರಂಗರೂಪಾಂತರಿಸಿದ್ದು. ರವಿಕುಮಾರ್ರವರು ನಿರ್ದೇಶಿಸಿದ್ದರು. ಸೂರ್ಯನಕುದುರೆ ಕಥೆ ಅನಂತಮೂರ್ತಿಯವರ ಬದುಕಲ್ಲಾದ ನಿಜವಾದ ಘಟನೆಯನ್ನಾಧರಿಸಿದ್ದು. ಕಥೆಯಲ್ಲಿ ಅವರೇ ಅನಂತು ಪಾತ್ರವಾಗಿದ್ದಾರೆ. ಅನಂತು ಪಾತ್ರವನ್ನು ಸಾಸ್ವೇಹಳ್ಳಿ ಸತೀಶರವರು ಅಭಿನಯಿಸಿದ್ದರು. ಪಾತ್ರದ ಬಗ್ಗೆ ಹೇಳಿ ಸರ್ ಎಂದು ಸಾಸ್ವೇಹಳ್ಳಿಯವರು ಅನಂತಮೂರ್ತಿಯವರನ್ನು ಕೇಳಿದಾಗ ಮೊದಲು ನನ್ನ ಹಾಗೆ ವಿಪರೀತ ಸಿಗರೇಟು ಸೇದೊದನ್ನ ಕಲಿತುಕೊಂಡರೆ ಮಾತ್ರ ಪಾತ್ರ ಮಾಡಬಹುದು ಎಂದು ತಮಾಷೆ ಮಾಡಿದ್ದರಂತೆ. ಅಂತಹ ಹಾಸ್ಯ ಪ್ರಜ್ಞೆ ಅನಂತಮೂರ್ತಿಯವರದ್ದಾಗಿತ್ತು.  ಇದೇ ಸೂರ್ಯನ ಕುದುರೆ ನಾಟಕವನ್ನಾಧರಿಸಿ 2006 ರಲ್ಲಿ ಸಾಗರದ ಸ್ಪಂದನ ತಂಡಕ್ಕೆ ಎಂ.ಗಣೇಶರವರು ನಿರ್ದೇಶಿಸಿದರು. 2007ರಲ್ಲಿ ಇದೇ ನಾಟಕವನ್ನು ಗಣೇಶರವರು ನೀನಾಸಂ ರಂಗಶಿಕ್ಷಣ ಕೇಂದ್ರಕ್ಕೂ ಹಾಗೂ 2008 ರಲ್ಲಿ ಜನಮನದಾಟ ರೆಪರ್ಟರಿಗೂ ನಾಟಕವನ್ನು ನಿರ್ದೇಶಿಸಿದ್ದು ಐವತ್ತಕ್ಕೂ ಹೆಚ್ಚು ಪ್ರದರ್ಶನಗಳಾಗಿವೆ. ಚಲನಚಿತ್ರವಾಗಿ ಯಶಸ್ವಿಯಾಗಿದ್ದ ಅನಂತಮೂರ್ತಿಯವರ ಬರ ಕಥೆಯನ್ನಾಧರಿಸಿ ಇತ್ತೀಚೆಗೆ ಶಶಿಧರ್ ಬಾರಿಘಾಟರವರು ನಾಟಕವನ್ನು ನಿರ್ದೇಶಿಸಿದ್ದಾರೆ.

'ಆವಸ್ಥೆ' ನಾಟಕವಾಡಿದ 'ಅಭಿನಯ ತರಂಗ' ತಂಡದವರೊಂದಿಗೆ ಅನಂತಮೂರ್ತಿಗಳು

ಅನಂತಮೂರ್ತಿಯವರ ಇನ್ನೊಂದು ಪ್ರಮುಖ ಕಾದಂಬರಿ ಆವಸ್ಥೆ ಯನ್ನು ಪ್ರಕಾಶ ಬೆಳವಾಡಿಯವರು ರಂಗರೂಪಾಂತರಿಸಿ ಹೆಗ್ಗೋಡಿನ ನೀನಾಸಂ ತಿರುಗಾಟಕ್ಕೆ 2004ರಲ್ಲಿ ನಿರ್ದೇಶಿಸಿದ್ದು ನಾಡಿನಾದ್ಯಂತ ಪ್ರದರ್ಶನಗೊಂಡಿತ್ತು. ನಂತರ 2006 ರಲ್ಲಿ ಅದೇ ನಾಟಕವನ್ನು ಬೆಂಗಳೂರಿನ ಅಭಿನಯ ತರಂಗಕ್ಕೂ ಬೆಳವಾಡಿಯವರು ನಿರ್ದೇಶಿಸಿದ್ದರು. ಭಾರತೀಪುರ ಕಾದಂಬರಿಯನ್ನಾಧರಿಸಿ ತೀರ್ಥಹಳ್ಳಿಯ ಸೀತಾರಾಮಾಚಾರ್ಯರು ನಾಟಕ ಮಾಡಿಸಿದ್ದಾರೆ.

ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಎನ್.ಎಸ್.ಡಿ ದೇವೇಂದ್ರರಾಜ್ ಅಂಕುರ್ರವರು ಸಮುದಾಯ ರಂಗಸಂಘಟನೆಗೆ ವಿಶಿಷ್ಟ ರೂಪದಲ್ಲಿ ನಿರ್ದೇಶಿಸಿದ್ದರು. ಕಹಾನಿ ರಂಗಮಂಚ್ ಎನ್ನುವ ರಂಗಪ್ರಕಾರವನ್ನೇ ಹುಟ್ಟುಹಾಕಿರುವ ಅಂಕುರರವರು ರಂಗದಂಗಳದಲ್ಲಿ ಪಾತ್ರಗಳು ಕಾದಂಬರಿಯನ್ನು ಓದುತ್ತಲೇ ನಟಿಸುವ ರೀತಿಯಲ್ಲಿ ನಾಟಕ ಮೂಡಿಬಂದು ಗಮನಸೆಳೆದಿತ್ತು. ಜಿ.ಕೆ.ಗೋವಿಂದರಾವ್ರವರು ಪ್ರಾಣೇಶಾಚಾರ್ಯ ಪಾತ್ರವನ್ನೂ, ಗುಂಡಣ್ಣನವರು ನಾರಾಯಣಪ್ಪರವರ ಪಾತ್ರವನ್ನು ಮಾಡಿದ್ದರು. ಸಂಸ್ಕಾರ ಪುಸ್ತಕವನ್ನೇ ರಂಗಪರಿಕರವಾಗಿ  ಬಳಸಿದ್ದು ಇನ್ನೂ ವಿಶೇಷವೆನಿಸುವಂತಿತ್ತು


ನಾಟಕ :ಸೂರ್ಯನ ಕುದುರೆ, ತಂಡ : ಸ್ಪಂದನ, ಸಾಗರ, ನಿ: ಎಂ.ಗಣೇಶ

ಅನಂತಮೂರ್ತಿಯವರ ಬದುಕು ಬರಹ ಸಾಧನೆ ಸವಾಲುಗಳನ್ನು ಕುರಿತು  ಎಂದೆಂದೂ ಮುಗಿಯದ ಕಥೆ ಎನ್ನುವ ಒಂದು ಅದ್ಬುತ ಏಕವ್ಯಕ್ತಿ ಪ್ರದರ್ಶನ ಮೂಡಿಬಂದಿತು. ಕ್ಲಿಪ್ ಜಾಯಿಂಟ್, ಆವಸ್ಥೆ, ಸಂಸ್ಕಾರ, ಭಾರತೀಪುರ..ಹೀಗೆ ಅನಂತಮೂರ್ತಿಯವರ ಒಟ್ಟು ಐದು ಕಥೆ ಕಾದಂಬರಿಗಳ ಪ್ರಮುಖ ಪಾತ್ರ ಹಾಗೂ ಸನ್ನಿವೇಶಗಳನ್ನಾಧರಿಸಿ ಕೆ.ಪಿ.ವಾಸುದೇವ್ರವರು ಕಥಾನಕವನ್ನು ಸಂಯೋಜನೆ ಮಾಡಿದ್ದು, ಎಸ್.ಆರ್.ರಮೇಶರವರು ಮೈಸೂರಿನ ಪರಿವರ್ತನ ರಂಗತಂಡಕ್ಕೆ ರಂಗರೂಪಾಂತರಿಸಿ ನಿರ್ದೇಶಿಸಿದ್ದಾರೆ. ಅನಂತಮೂರ್ತಿಯವರ ಪಾತ್ರವನ್ನು ಜಯರಾಮ್ ತಾತಾಚಾರ್ರವರು ನಿರ್ವಹಿಸಿದ್ದು ಸ್ವತಃ ಅನಂತಮೂರ್ತಿಯವರೇ ಬೆರಗಾಗುವಷ್ಟು ಅದ್ಬುತವಾಗಿ ಅಭಿನಯಿಸಿದ್ದಾರೆ. 2009 ರಲ್ಲಿ ಮೊದಲ ಪ್ರದರ್ಶನ ಕಂಡ ಏಕವ್ಯಕ್ತಿ ಪ್ರದರ್ಶನವು ಈಗಾಗಲೇ ಹದಿನಾಲ್ಕು ಪ್ರದರ್ಶನಗಳನ್ನು ಕಂಡಿದೆ. ಇಡೀ ನಾಟಕದಲ್ಲಿ ಒಬ್ಬರೇ ನಟ ಇಪ್ಪತ್ಮೂರು ವಿಷಯಗಳುಳ್ಳ ಒಟ್ಟು ಹದಿನಾರು ಪಾತ್ರಗಳನ್ನು ಎರಡು ಗಂಟೆಗಳ ಕಾಲ ನಿರ್ವಹಿಸಿದ್ದು ಒಂದು ದಾಖಲೆಯೇ ಆಗಿದೆ. ನಾಟಕವನ್ನು ನೋಡಿದ ಅನಂತಮೂರ್ತಿಗಳು ನನ್ನನ್ನು ಎಲ್ಲೂ ಅನಗತ್ಯವಾಗಿ ಹೊಗಳದೇ ಇಷ್ಟೊಂದು ವಿಮರ್ಶಾತ್ಮಕವಾಗಿ ನನ್ನ ಶಿಷ್ಯರು ನಾಟಕದ ಮೂಲಕ ಕಟ್ಟಿಕೊಟ್ಟಿದ್ದು ಅಚ್ಚರಿಯ ಸಂಗತಿ... ಎಂದು ಸಂತಸಪಟ್ಟಿದ್ದರು. ಜಯರಾಮ್ ತಾತಾಚಾರರನ್ನು ಕರೆದು ಅನಂತಮೂರ್ತಿ ಅಂದರೆ ಯಾರು ಎನ್ನೋದನ್ನ ಎಲ್ಲರಿಗೂ ಗೊತ್ತಾಗುವ ಹಾಗೆ ಅಭಿನಯಿಸಿ ತೋರಿಸಿದೆಯಲ್ಲಾ, ಶಹಬ್ಬಾಸ್ ಎಂದು ಮನಪೂರ್ವಕ ಅಭಿನಂದಿಸಿದ್ದರು.

ರಂಗಭೂಮಿಗೆ ಸಮಸ್ಯೆಗಳಾದಾಗ ತೀವ್ರವಾಗಿ ಸ್ಪಂದಿಸಿದ್ದೂ ಇದೆ. ಬೆಂಗಳೂರಿಗೆ ಎನ್ ಎಸ್ ಡಿ ಬೇಕು ಎಂದು ಪ್ರಸನ್ನರವರು ರವೀಂದ್ರ ಕಲಾಕ್ಷೇತ್ರದ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದ್ದಾಗ ಅನಂತಮೂರ್ತಿಯವರು ಸ್ವಯಂಪ್ರೇರಿತರಾಗಿ ಬಂದು ತಮ್ಮ ಬೆಂಬಲವನ್ನು ಸೂಚಿಸಿದ್ದರು. ಬಿ.ವಿ.ಕಾರಂತರು ಭೂಪಾಲನಲ್ಲಿ ಆರೆಸ್ಟ್ ಆದಾಗ ತಮ್ಮ ನೈತಿಕ ಬೆಂಬಲವನ್ನು ಘೋಷಿಸಿದ್ದರು. ನಾಟಕದ ಚಟುವಟಿಕೆ ಹಾಗೂ ಚಳುವಳಿಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದ ಅನಂತಮೂರ್ತಿಯವರು ನಿಜವಾಗಿ ಒಬ್ಬ ಸಹೃದಯ ಪ್ರೇಕ್ಷಕರಾಗಿದ್ದರೆಂಬುದರಲ್ಲಿ ಸಂದೇಹವೇ ಇಲ್ಲ.  ಜ್ಞಾನಪೀಠ ಪುರಸ್ಕೃತರು ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಮಯ ಸಿಕ್ಕಾಗ, ನಾಟಕ ನೋಡಬೇಕೆಂದಾಗ ಬಂದು ಸಿಕ್ಕ ಸೀಟಿನಲ್ಲಿ ಕುಳಿತು ನಾಟಕವನ್ನು ಅನುಭವಿಸಿ ಆನಂದಿಸುತ್ತಿದ್ದರು. ನಾಟಕದ ನಂತರ ರಂಗತಂಡವನ್ನು, ಕಲಾವಿದರನ್ನು ಮನಪೂರ್ವಕ ಅಭಿನಂದಿಸುತ್ತಿದ್ದರು. ಯಾರೇ ಬಂದು ನಿಮ್ಮ ಕಥೆ ಕಾದಂಬರಿಗಳನ್ನು ನಾಟಕ ಮಾಡಬೇಕು ಅನುಮತಿ ಕೊಡಿ ಎಂದು ಕೇಳಿದರೆ ಆತ್ಮೀಯತೆಯಿಂದ ಸ್ವಾಗತಿಸಿ ಪ್ರೀತಿಯಿಂದ ಮಾತಾಡಿಸಿ ಉತ್ತಮವಾಗಿ ನಾಟಕ ಮಾಡಲು ಪ್ರೋತ್ಸಾಹಿಸುತ್ತಿದ್ದುದನ್ನು ಈಗಲೂ ಹಲವಾರು ರಂಗಕರ್ಮಿಗಳು ನೆನಪಿಸಿಕೊಳ್ಳುತ್ತಾರೆ. ಅಪರಿಚಿತರ ಜೊತೆಯೂ ಆತ್ಮೀಯವಾಗಿ ಮಾತಾಡುವ, ಹತ್ತಿರ ಬಂದವರ ಹೆಗಲ ಮೇಲೆ ಕೈಹಾಕಿ ತಮ್ಮ ಮನದ ತಲ್ಲಣ ತುಮಲಗಳನ್ನು ಹಂಚಿಕೊಳ್ಳುವ ಗುಣದಿಂದಾಗಿಯೇ ಅನಂತಮೂರ್ತಿಗಳು ರಂಗಕರ್ಮಿಗಳಿಗೆ ಆಪ್ಯಾಯಮಾನರಾಗಿದ್ದರು. ಅವರು ನಡೆಸುತ್ತಿದ್ದ ರುಜುವಾತು ಪತ್ರಿಕೆಯಲ್ಲಿ ರಂಗಭೂಮಿಯ ಕುರಿತು ಹಲವಾರು ಸಂವಾದಗಳನ್ನು ಪ್ರಕಟಿಸಿದ್ದಾರೆ. ರಂಗ ಲೇಖನಗಳನ್ನು ಬರೆದು ದಾಖಲಿಸಿದ್ದಾರೆ.

ರಂಗನಾಟಕಗಳಿಂದಲೇ ಜ್ಞಾನಪೀಠವನ್ನು ಪಡೆದ ಗಿರೀಶ್ ಕಾರ್ನಾಡರಂತವರು ರಂಗಕರ್ಮಿಗಳಿಗೆ ಗಗನಕುಸುಮವಾಗಿರುವಾಗ ಸಾಹಿತ್ಯ ಲೋಕದ ದಿಗ್ಗಜ ಅನಂತಮೂರ್ತಿಯವರು ರಂಗಭೂಮಿಗೆ ಹತ್ತಿರವಾಗಿದ್ದು ನಿಜಕ್ಕೂ ಸಂತಸದ ಸಂಗತಿಯಾಗಿತ್ತು. ಯಾರು ಬೇಕಾದರೂ ಹೋಗಿ ಆತ್ಮೀಯವಾಗಿ ಅನಂತಮೂರ್ತಿಯವರ ಜೊತೆಗೆ ಮಾತಾಡಬಹುದಾಗಿತ್ತು. ಯಾವುದೇ ಸಾಹಿತ್ಯದ ಕಾರ್ಯಕ್ರಮಗಳಿಗೆ ಯಾವುದೇ ಊರಿಗೆ ಅನಂತಮೂರ್ತಿಯವರು ಹೋದರೆ ಅಲ್ಲಿ ಸಿಕ್ಕ ರಂಗಕರ್ಮಿಗಳನ್ನು ಕರೆದು ಯಾವ ನಾಟಕ ಮಾಡಿದಿರಿ, ಮಾಡಿದ ನಾಟಕ ಹೇಗಾಯ್ತು ಎಂದೆಲ್ಲಾ ಅಕ್ಕರೆಯಿಂದ ವಿಚಾರಿಸಿಕೊಳ್ಳುವ ರೀತಿಯಿಂದಾಗಿ ಕಲಾವಿದರ ಗೌರವಕ್ಕೆ ಪಾತ್ರರಾದರು. ಗುಂಪು ಚರ್ಚೆಗಳಲ್ಲಿ ಮುಕ್ತವಾಗಿ ಮಾತಾಡುತ್ತಾ ಸಂವಾದವನ್ನು ಹುಟ್ಟುಹಾಕುವ ಅನಂತಮೂರ್ತಿಗಳ ಜೊತೆ ಚರ್ಚಿಸುವುದೇ ಒಂದು ಚೆಂದ.

ಸಾಹಿತ್ಯ ಲೋಕದಲ್ಲಿ ಅನಂತಮೂರ್ತಿಯವರನ್ನು ವಿರೋಧಿಸುವವರಿದ್ದಾರೆ, ರಾಜಕೀಯದಲ್ಲಿ ಅವರನ್ನು ದ್ವೇಷಿಸುವ ಒಂದು ಕೋಮುವಾದಿ ಪಡೆಯೇ ಇದೆ. ಆದರೆ... ರಂಗಭೂಮಿಯಲ್ಲಿರುವವರಿಗೆ ಅನಂತಮೂರ್ತಿಯವರ ಕುರಿತು ಯಾವುದೇ ತಕರಾರಿಲ್ಲ. ಅನಂತ ಯುಗಾಂತ್ಯದ ವರೆಗೂ ರಂಗಕರ್ಮಿಗಳು ಅನಂತಮೂರ್ತಿಯವರನ್ನು ಗೌರವಿಸಿದರು. ಅವರ ನಾಟಕ, ಕಥೆ, ಕಾದಂಬರಿಗಳನ್ನು ರಂಗದಂಗಳದಲ್ಲಿ ಪ್ರದರ್ಶಿಸಿದರು. ಆದರೆ... 2014, ಆಗಸ್ಟ್ 22 ರಂದು ಅನಂತಮೂರ್ತಿಯವರ ಸಾವಿನ ನಂತರದ ಘಟನೆಗಳು ಮಾತ್ರ ರಂಗಭೂಮಿಯವರನ್ನು ತಲ್ಲಣಗೊಳಿಸಿದವು. ಅಸಮಾಧಾನವನ್ನು ಹುಟ್ಟುಹಾಕಿದವು. ಅದಕ್ಕೆ ಕಾರಣ ಅನಂತಮೂರ್ತಿಯವರ ಅಂತ್ಯಕ್ರಿಯೆ ನಡೆದ ರೀತಿ ಹಾಗೂ ನಡೆದ ಸ್ಥಳ. ಅನಂತಮೂರ್ತಿಯವರ ವೈಚಾರಿಕತೆಯನ್ನು ಅಣಕಿಸುವಂತೆ ವೈದಿಕ ಆಚರಣೆಗಳು ಅವರ ಅಂತ್ಯ ಸಂಸ್ಕಾರದಲ್ಲಿ ನಡೆದವು. ಅದನ್ನು ಸಹ ಅವರ ಕುಟುಂಬ ವರ್ಗದ ಅಭಿಲಾಷೆ ಎಂದುಕೊಂಡು ಬಿಡಬಹುದಾಗಿತ್ತು.

ಆದರೆ ಯಾವಾಗ ಕಲಾಗ್ರಾಮದಲ್ಲಿ ಅನಂತಮೂರ್ತಿಯವರ ಅಂತ್ಯ ಸಂಸ್ಕಾರವನ್ನು ಸರಕಾರ ಮಾಡಿತೋ ಆಗ ರಂಗಕರ್ಮಿಗಳಲ್ಲಿ ಒಳಗೊಳಗೇ ಅಸಮಾಧಾನ ಹೆಚ್ಚಾಗತೊಡಗಿತು. ಕಲೆಯ ಆಗರವಾಗಬೇಕಾಗಿದ್ದ ಕಲಾಗ್ರಾಮ ಗಣ್ಯ ಸಾಹಿತಿಗಳನ್ನು ಸುಡುವ ಸ್ಮಶಾನವಾಗುತ್ತಿದೆಯಲ್ಲಾ ಎನ್ನುವ ಆತಂಕ ಕಲಾವಿದರನ್ನು ಕಾಡತೊಡಗಿತು. ಸರಕಾರ, ಸಂಸ್ಕೃತಿ ಇಲಾಖೆಗಳು ಸೇರಿ ಮಾಡಿದ ನಿರ್ಧಾರ ನಿಜಕ್ಕೂ ಆಘಾತಕಾರಿಯಾಗಿತ್ತು. ಯಾಕೆಂದರೆ ಕಲಾಗ್ರಾಮದಲ್ಲಿ ಎನ್.ಎಸ್.ಡಿ ರಂಗಚಟುವಟಿಕೆಗಳಿಗಾಗಿ ಎರಡು ಎಕರೆ ಜಾಗವನ್ನು ಸರಕಾರ ಕೊಟ್ಟಿದೆ. ಅದೂ ಸಹ ಹಲವಾರು ರಂಗಕರ್ಮಿಗಳ ಹೋರಾಟದ ಪರಿಣಾಮಗಳಿಂದ ಪಡೆಯಲ್ಪಿಟ್ಟಿದೆ. ಅದೇ ಜಾಗದಲ್ಲಿ ರಾಷ್ಟ್ರಕವಿ ಶಿವರುದ್ರಪ್ಪನವರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅದೂ ಎನ್.ಎಸ್.ಡಿ ಗೆ ಜಾಗ ಕೊಡಿಸಲು ಒಂದಿಷ್ಟು ಪ್ರಯತ್ನ ಮಾಡಿದ್ದ ಬಿ.ಜಯಶ್ರೀರವರ ಸಮ್ಮುಖದಲ್ಲೇ ನಡೆದಿತ್ತು. ಈಗ ರಂಗಭೂಮಿಯಿಂದಲೇ ಮೇಲಕ್ಕೇರಿ ಹೋದ ಉಮಾಶ್ರೀರವರೇ ಸಂಸ್ಕೃತಿ ಮಂತ್ರಿಣಿಯಾಗಿದ್ದು ಇವರ ಸಮ್ಮುಖದಲ್ಲೇ ಅನಂತಮೂರ್ತಿಯವರ ಅಂತ್ಯಕ್ರಿಯೆ ಕಲಾಗ್ರಾಮದಲ್ಲಿ ನಡೆದು ಹೋಯಿತು. ಇದು ನಿಜಕ್ಕೂ ಅಕ್ಷಮ್ಯ. ಬದುಕಿರುವವರೆಗೂ ರಂಗಭೂಮಿಯ ಒಡನಾಡಿಯಾಗಿದ್ದ ಅನಂತಮೂರ್ತಿಯವರು ಸತ್ತಮೇಲೆ ರಂಗಭೂಮಿಯಲ್ಲಿ ಅಸಹನೆ ಹುಟ್ಟಲು ಕಾರಣರಾಗಿದ್ದೊಂದು ವಿಪರ್ಯಾಸ


ಈಗ ಹಿರಿಯ ರಂಗಕರ್ಮಿ ಪ್ರಸನ್ನರಾದಿಯಾಗಿ ಹಲವಾರು ಸಾಹಿತಿ- ಕಲಾವಿದರು ಕಲಾಗ್ರಾಮವನ್ನು ಸ್ಮಶಾನ ಮಾಡಲು ಹೊರಟ ಸರಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಕೆಲವರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಶಿವರುದ್ರಪ್ಪನವರ ಅಂತ್ಯಕ್ರಿಯೆಯಾದಾಗಲೇ ರೀತಿಯ ಪ್ರತಿರೋಧ ಒಡ್ಡಿದ್ದರೆ ಕಲಾಗ್ರಾಮದಲ್ಲಿ ಅನಂತಮೂರ್ತಿಯವರ ಶವಸಂಸ್ಕಾರವನ್ನು ತಡೆಯಬಹುದಾಗಿತ್ತು. ಆದರೆ ಸರಕಾರದ ಅವಿವೇಕತನದ ನಿರ್ಧಾರದಿಂದಾಗಿ ಬದುಕಿದ್ದಾಗಲೂ ವಾದ ವಿವಾದಗಳ ಕೇಂದ್ರವಾಗಿದ್ದ ಅನಂತಮೂರ್ತಿಗಳು ಈಗ ಸತ್ತ ನಂತರವೂ ವಾದ ವಿವಾದಗಳನ್ನು ಹುಟ್ಟಿಸಿದ್ದು ವಿಸ್ಮಯದ ಸಂಗತಿ. ಏನೇ ಆಗಲಿ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟ ಅನಂತಮೂರ್ತಿಗಳಿಗೆ ರಂಗನಮನಗಳು. 

                            -ಶಶಿಕಾಂತ ಯಡಹಳ್ಳಿ 
            

 
                   
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ