ಶುಕ್ರವಾರ, ಜನವರಿ 8, 2016

'ಅನುಭವ ವಿಸ್ತರಿಸಿದ ಸೃಷ್ಟಿ ಅಕಾಡೆಮಿ'

ಕಥೆಗಾರ ಹನುಮಂತ ಹಾಲಗೇರಿಯವರ ಅನುಭವ ಕಥನ :


ಶಾಲಾ ಕಾಲೇಜುಗಳಲ್ಲಿ ನಾಟಕ ಮಾಡಿ ಶಹಬ್ಬಾಸ್ ಅನಿಸಿಕೊಳ್ಳುತ್ತಿದ್ದ ನನ್ನಲ್ಲಿ ನಟನಾಗಬೇಕು ಎಂಬ ಹುಚ್ಚು ಆಗಾಗ ತಲೆಗೇರಿಬಿಟ್ಟಿತ್ತುಕುಣಿಗಲ್ ಕೆಂಪಾಪುರದಲ್ಲಿ ಎನ್ಜಿಓ ಒಂದರಲ್ಲಿ ಸುಜಲ ಜಲಾನಯನದಲ್ಲಿ ಕೆಲಸ ಮಾಡುತ್ತಿದ್ದ ನಾನು ಅಲ್ಲಿನ ಏಕತಾನತೆ ಮತ್ತು ಹೊಲಸು ವ್ಯವಸ್ಥೆಯಿಂದಾಗಿ ಬೇಸತ್ತು  ಒಂದು ಬೆಳಗು ಸೀದ ಬೆಂಗಳೂರು ಬಸ್ ಹಿಡಕೊಂಡು ಬಂದು ಬಿಟ್ಟಿದ್ದೆ. ಬೆಳಗ್ಗೆ ಪ್ರಜಾವಾಣಿಯಲ್ಲಿ ಪ್ರಮೋಟರ್ ಆಗಿ ಮನೆ ಮನೆಗೆ ಪೇಪರ್ ಹಾಕೋ ಕೆಲಸ ಮಾಡುತ್ತಾ ಸಂಜೆ ರವೀಂದ್ರ ಕಲಾಕ್ಷೇತ್ರ, ಅಲ್ಲಿ ಇಲ್ಲಿ ನಾಟಕಗಳ ಪಾತ್ರಗಳಿಗಾಗಿ ಹಲ್ಲುಗಿಂಜುತ್ತಾ ನನ್ನಂಥ ಅಲೆಮಾರಿ ಗೆಳೆಯರೊಂದಿಗೆ ಅಲೆಯುತ್ತಾ ಕಾಲ ಕಳಿಯುತ್ತಿದ್ದೆ.

 ಘಾಟೆ ಭವನದಲ್ಲೊಂದು ಪ್ರೀಯಾಗಿ ಆ್ಯಕ್ಟಿಂಗ್ ಕ್ಲಾಸ್ ನಡೆಯುತ್ತೆ ಸೇರ್ಕೊ ಅಂತ ಯಾರೋ ಹೇಳಿದ್ರಿಂದ ಅಲ್ಲಿಗೆ ಹೋದೆ. ಅಲ್ಲಿ ಶಶಿಕಾಂತ ಯಡಹಳ್ಳಿಯವರು ಸಿಪಿಐನ ಇಪ್ಟಾ ಘಟಕದೊಂದಿಗೆ ಜಂಟಿಯಾಗಿ ಸೃಷ್ಟಿ ಅಭಿನಯ ಕಾರ್ಯಾಗಾರ ಮಾಡುತ್ತಿದ್ದರು. ಭಾನುವಾರಕ್ಕೊಮ್ಮೆ 5 ತಿಂಗಳವರೆಗೆ ನಡೆಯುವ ಕಾರ್ಯಾಗಾರಕ್ಕೆ ಕೇವಲ 500 ರೂ.ಪ್ರವೇಶ ನಿಧಿ ಅಂತ ಕೊಡಬೇಕಿತ್ತು. ದುರಾದೃಷ್ಟಕ್ಕೆ ಆಗ ನನ್ನ ಹತ್ತಿರ ಅಷ್ಟೂ ದುಡ್ಡಿರಲಿಲ್ಲ. ಶಶಿ ಸರ್ ಮುಂದೆ ಕೈ ಚಾಚಿ " ನನ್ನ ಹತ್ತಿರ ಇಷ್ಟೇ ಇರೋದು ಸರ್" ಅಂತ ನೂರರ ಎರಡು ನೋಟು ಹಿಡಿದಿದ್ದೆ. ಮುಂದೆ ಕೊಟ್ರಾಯಿತು ಬಿಡು ಎಂದು ನನಗೆ ಅರ್ಜಿ ಕೊಟ್ಟಿದ್ದರು.

ಯಡಹಳ್ಳಿಯವರು ಆಗಲೇ ತಮ್ಮ ವೈಚಾರಿಕತೆಯಲ್ಲಿ ಎಷ್ಟೊಂದು ಸ್ಪಷ್ಟತೆ ರೂಡಿಸಿಕೊಂಡಿದ್ದರೆಂದರೆ ತಮ್ಮ ಕ್ಲಾಸಿಗೆ ಯಾರಾದ್ರೂ ಕುಂಕುಮ, ನಾಮ ಹಚ್ಕೊಂಡು ಬಂದ್ರೆ ಅವರೊಂದಿಗೆ ಜಗಳಕ್ಕೆ ನಿಂತು ಬೀಡುತ್ತಿದ್ದರು. "ನಿಮ್ಮ ಚಪ್ಲಿ ಹೊರಗ ಬಿಡ್ತಿರಿಲ್ಲೋ.. ಹಂಗ ನಿಮ್ಮ ಜಾತಿ, ಧರ್ಮ ಸುಟ್ಟ ಸುಡಗಾಡು ಎಲ್ಲಾನೂ ಹೊರಗಡೆ ಬಿಟ್ಟು ಬರ್ರಿ. ಕ್ಲಾಸ್ ಒಳಗ ನೀವು ಶುದ್ಧ ಮನುಷ್ಯರಾಗಿ ಬರಬೇಕು." ಅಂತಿದ್ರು. ಆಗಷ್ಟೆ ಸೃಷ್ಟಿ ಕಾರ್ಯಾಗಾರದಿಂದ ತರಬೇತಿ ಪಡೆದು ಹೀರೋ ಆಗಿದ್ದ ನೆನಪಿರಲಿ ಪ್ರೇಮ್ ಸಹ ಬಂದು ನಮಗೆ ಅಭಿನಯ ಹೇಳಿಕೊಟ್ಟಿದ್ದರು. ಕೆಂಗುಲಾಭಿ ಚಿತ್ರ ನಿರ್ದೇಶಿಸುತ್ತಿರುವ ಶ್ರೀಧರ ಜಾವೂರ ಸಹ ಸೃಷ್ಟಿಯ ವಿದ್ಯಾರ್ಥಿಯೇ. ಸೃಷ್ಟಿಯ ಅಂದಿನ ಗೆಳೆತನದಿಂದಲೇ ಇಂದು ಕೆಂಗುಲಾಬಿ ಸಿನೆಮಾ ಆಗುವ ಹಂತ ತಲುಪಿದ್ದು.

ಅವರ ಕಾರ್ಯಾಗಾರ ಕೇವಲ ಕ್ಲಾಸ್ ರೂಮಿಗೆ ಮಾತ್ರ ಸೀಮಿತವಾಗಿರದೆ, ಮೊಬೈಲ್ನಲ್ಲಿ ಕಿರು ಚಿತ್ರ ಮಾಡುವುದು, ಒಳ್ಳೊಳ್ಳೆ ನಾಟಕಗಳಿಗೆ ಕರೆದುಕೊಂಡು ಹೋಗುವುದು, ಸಂವಾದಗಳಿಗೆ ಕರೆದುಕೊಂಡು ಹೋಗುವುದು, ಅಲ್ಲಿ ಪ್ರಶ್ನೆ ಕೇಳುವಂತೆ ಹುರಿದುಂಬಿಸುವುದು, ಹಿಂಜರಿದರೆ ತಾವೇ ಪ್ರಶ್ನೆ ಬರೆದುಕೊಟ್ಟು ಪ್ರೇರೆಪಿಸುವುದು, ರಂಗಭೂಮಿ ಸಂಬಂಧದ ಪ್ರತಿಭಟನೆಗಳಿಗೆ ಕರೆದುಕೊಂಡು ಹೋಗುವುದು. ಸಿನೆಮಾ ಶೂಟಿಂಗ್ ಗಳಿಗೆ ಕರೆದೊಯ್ಯುವುದು, ಮೊಬೈಲ್ನಲ್ಲಿ ಕಿರುಚಿತ್ರ ಮಾಡಿಸುವುದು ಇವೆಲ್ಲ ಯಡಹಳ್ಳಿ ಮಾಡಿಸುತ್ತಿದ್ದರು.

ಅವರ ಕಾರ್ಯಾಗಾರದಲ್ಲಿಯೇ ಚಿಕ್ಕದೊಂದು ನಾಟಕ ಬರೆದು ಗೆಳೆಯರೊಂದಿಗೆ ಅಭಿನಯಿಸಿದ್ದೆ. ನನ್ನ ಬರವಣಿಗೆ ನೋಡಿ "ಬರವಣಿಗೆ ಚಲೋ ಐತಿ ನಿಂದು" ಅಂತ ಬೆನ್ನು ತಟ್ಟಿದ್ದರು. ಆಗ ವಾರ್ತಾಭಾರತಿ ಪತ್ರಿಕೆಗೆ ರಂಗಭೂಮಿ ವಿಮರ್ಶೆ ಬರೆಯುತ್ತಿದ್ದ ಶಶಿಕಾಂತ ಅವರು, ನನಗೂ ಅಲ್ಲಿ ಬರೆಯಲು ಪ್ರೇರೆಪಿಸಿದರು. ಅಷ್ಟೇ ಅಲ್ಲದೆ "ನೀನು ವಾರ್ತಾಭಾರತಿ ಪತ್ರಿಕೆಗೆ ಕೆಲಸಕ್ಕೆ ಸೇರ್ಕೋ ನಾನು ಬಷೀರ ಅವರಿಗೆ ಹೇಳ್ತಿನಿ" ಎಂದು ನನ್ನ ಬದುಕಿಗೆ ದೊಡ್ಡ ತಿರುವನ್ನು ಕೊಟ್ಟವರೇ ಯಡಹಳ್ಳಿ ಸರ್.

ಸುಮಾರು 15 ವರ್ಷಗಳಿಂದೇ  ಅದೇ ಬದ್ಧತೆಯಿಂದ ಯಡಹಳ್ಳಿ ಸರ್ ಸೃಷ್ಟಿ ಕಾರ್ಯಾಗಾರವನ್ನು ನಡೆಸುತ್ತಾ ಬಂದಿರುವ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೃಷ್ಟಿಯಿಂದ ತರಬೇತಿ ಪಡೆದು ಸಿನೆಮಾ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. "ನಿನೊಬ್ಬ ಮಾತ್ರ ಹೊರಗೆ ಹೋಗಿ ಕಥೆ ಬರೆಯುತ್ತಿದ್ದಿ" ಎಂದು ಆಗಾಗ ಯಡಹಳ್ಳಿಯವರು ನನ್ನನ್ನು ಕಾಲೆಳೆಯುತ್ತಿರುತ್ತಾರೆ.

ಮುಂದೆ ನಾಟಕ ಅಕಾಡೆಮಿಯಿಂದ ಚಿ.ಶ್ರೀನಿವಾಸರಾಜು, ಡಾ.ವಿಜಯಮ್ಮ ಅವರು ನಡೆಸಿದ ನಾಟಕ ರಚನಾ ಕಾರ್ಯಾಗಾರದಲ್ಲಿ ಶಶಿ ಸರ್ ಮತ್ತು ನಾನು ಭಾಗವಹಿಸಿದ್ದೇವು. ಕಾರ್ಯಾಗಾರದ ಕೊನೆಯ ದಿನ 60 ಶಿಭಿರಾರ್ಥಿಗಳು ಸ್ಥಳದಲ್ಲೆ ಕುಳಿತು ಬರೆದ ಕೊಟ್ಟ ನಾಟಕಗಳಲ್ಲಿ ಶಶಿಕಾಂತ, ನನ್ನದು ಸೇರಿ ಕೇವಲ 5 ನಾಟಕಗಳು ಮಾತ್ರ ಪ್ರದರ್ಶನಕ್ಕೆ ಯೋಗ್ಯವಾಗಿದ್ದವು ಮುಂದೆ ಅವು ಪ್ರದರ್ಶನ ಕಂಡಿದ್ದವು. ನನ್ನ ಶಿಷ್ಯ ನೀನು, ನನ್ನ ಜೊತೆಗೆ ನಾಟಕ ಬರೆದು ಗೆದ್ದುಬಿಟ್ಟೆ ಎಂದು ಯಡಹಳ್ಳಿ ಅಂದು ನಗಾಡಿದ್ದರು. (ನನ್ನ ನಾಟಕದ ವಸ್ತುವನ್ನು ಮಾತ್ರ ಬಹುವಾಗಿ ಇಷ್ಟಪಟ್ಟಿದ್ದ ಡಾ.ವಿಜಯಮ್ಮ ಮತ್ತು ಶ್ರೀನಿವಾಸರಾಜು ಮೇಷ್ಟ್ರು ನನ್ನನ್ನು ಕರೆಸಿಕೊಂಡು ತಿದ್ದಿ ತೀಡಿ, ಪ್ರದರ್ಶನಕ್ಕೆ ಯೋಗ್ಯವಾಗಿಸಿದ್ದರು.)

ಒಂದೆರಡು ವರ್ಷ ರಂಗಭೂಮಿ ವಿಶ್ಲೇಷಣೆ ಎಂಬ ರಂಗಭೂಮಿಗೆ ಮೀಸಲಾಗಿದ್ದ ಪತ್ರಿಕೆಯೊಂದನ್ನು ಹೊರತಂದರು. ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಂಡದ್ದನ್ನು ನೇರವಾಗಿ ಬರೆಯುವ ಯಡಹಳ್ಳಿ, ತಮ್ಮ ಬರವಣಿಗೆಯುದ್ದಕ್ಕೂ ಸಾಂಸ್ಕೃತಿಕ ದಲ್ಲಾಳಿತನವನ್ನು ಖಂಡಿಸುತ್ತಲೇ ಬಂದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಸುಮಾರು 300 ಕೋಟಿ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶೇ.70ರಷ್ಟು ಅನುದಾನ ದಲ್ಲಾಳಿಗಳಿಗೆ ಸೋರಿಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೆಅಂತ ಎಲ್ಲ ದಲ್ಲಾಳಿಗಳ ಹುನ್ನಾರಗಳನ್ನು, ಅಧಿಕಾರಿಗಳನ್ನು, ಮಂತ್ರಿ ಮಹೋದಯರನ್ನು ನೇರವಾಗಿ ಖಂಡಿಸುತ್ತಾ ಬಂದವರು. ಬಹಳಷ್ಟು ಸಲ ನಾಟಕ ಪ್ರದರ್ಶನವನ್ನು ಕಟುವಾಗಿ ವಿಮರ್ಶಿಸುವುದರಿಂದ ಯಡಹಳ್ಳಿ ಬರುತ್ತಾರೆಂದರೆ ಒಂದು ರೀತಿಯ ಹೆದರಿಕೆ ಇರುತ್ತದೆ.

ನಾನು ಕಲಿತ ಸೃಷ್ಟಿ ಶಾಲೆಯಲ್ಲಿ ನಾನು ಪಾಠ ಮಾಡಲು ಇದೇ ಭಾನುವಾರ ಹೋಗುತ್ತಿರುವುದರಿಂದ ಖುಷಿಯಲ್ಲಿ ಇದೆಲ್ಲ ನೆನಪಾಯಿತು. ಕಥಿ ಬರಿಬಹುದು, ಆದ್ರೆ ಕಥನ ತಂತ್ರಗಳ ಕುರಿತು ಕಥಿ ಹೇಳಕ್ಕೆ ನನಗೆ ಬರೂದಿಲ್ಲ ಅಂತ ಹೇಳುತ್ತಲೇ ಹಲವು ಸಲ ತಪ್ಪಿಸಿಕೊಂಡಿದ್ದೆ. ಸಲ ಮೇಷ್ಟ್ರ ಪ್ರೀತಿಯ ಒತ್ತಾಯಕ್ಕೆ ಮಣಿಯಬೇಕಾಯಿತು.

                                                                            - ಹನುಮಂತ  ಹಾಲಗೇರಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ