ಸೋಮವಾರ, ಫೆಬ್ರವರಿ 15, 2016

ಯುದ್ಧವಿರೋಧಿ ಆಶಯದಲಿ ಗೆದ್ದ ’ಸಹದೇವ’ :



ಮಹಾಭಾರತಕ್ಕೂ ರಂಗಭೂಮಿಗೂ ಅವಿನಾಭಾವ ಸಂಬಂಧ. ವೃತ್ತಿ ಕಂಪನಿಯವರು ಮಹಾಭಾರತದ ಪಾತ್ರಗಳನ್ನು ವೈಭವೀಕರಿಸಿ ರಂಗದ ಮೇಲೆ ವಿಜ್ರಂಭಿಸಿದರೆ, ಆಧುನಿಕ ರಂಗಭೂಮಿಯವರು ಮಹಾಕಾವ್ಯದ ಪ್ರಮುಖ ಪಾತ್ರ ಹಾಗೂ ಸನ್ನಿವೇಶಗಳನ್ನು ಮುರಿದು ಕಟ್ಟುವ ಮಹತ್ತರ ಪ್ರಯತ್ನವನ್ನು ಕಾಲಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ. ಈಗ ಮತ್ತೊಮ್ಮೆ ಮಹಾಭಾರತದ ದ್ವೇಷ ರಾಜಕಾರಣವನ್ನು ಮರುವ್ಯಾಖ್ಯಾನಗೊಳಿಸುವ ಪ್ರಯತ್ನವನ್ನು ಸಹದೇವ ನಾಟಕವು ಮಾಡುತ್ತದೆ. ಮಹಾಕಾವ್ಯದ ಪಂಚಪಾಂಡವರಲ್ಲಿ ನಿರ್ಲಕ್ಷಿತವಾದ ಪಾತ್ರಗಳೆಂದರೆ ನಕುಲ ಮತ್ತು ಸಹದೇವ. ಸಹದೇವ ಪಾತ್ರವನ್ನಿಟ್ಟುಕೊಂಡು ಮಹಾಭಾರತದ ತಂತ್ರಗಾರಿಕೆಯನ್ನು ಅನಾವರಣಗೊಳಿಸುವ ವಿಶಿಷ್ಟ ನಾಟಕವನ್ನು ಸಶಕ್ತ ಭಾಷೆಯ ಮೂಲಕ ಕವಿ ಬಸವರಾಜ ಸೂಳೇರಿಪಾಳ್ಯರವರು ರಚಿಸಿ ಕೊಟ್ಟಿದ್ದಾರೆ. ’ರಂಗನಿರಂತರರಂಗತಂಡದ ವರ್ಷದ ನಿರ್ಮಿತಿಯಾದಸಹದೇವನಾಟಕವನ್ನು ಜೋಸೆಫ್ ಜಾನ್ರವರು ನಿರ್ದೇಶಿಸಿದ್ದು 2016 ಫೆಬ್ರುವರಿ 12 ರಂದುರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

ಇಡೀಸಹದೇವನಾಟಕವು ತನ್ನ ಯುದ್ಧವಿರೋಧಿ ಧೋರಣೆ ಹಾಗೂ ದ್ವೇಷ ರಾಜಕಾರಣದ ದುಷ್ಪರಿಣಾಮಗಳನ್ನು ಮಹಾಭಾರತದ ಆಯ್ದ ದೃಶ್ಯಗಳ ಮೂಲಕ ತೋರಿಸಲು ಮಾಡಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕುವೆಂಪುರವರಸ್ಮಶಾನ ಕುರುಕ್ಷೇತ್ರನಾಟಕವೂ ಸಹ ಯುದ್ಧವನ್ನು ವಿರೋಧಿಸುವ ಮಹತ್ತರ ರಂಗಪ್ರಯೋಗವಾಗಿದ್ದು ಸಹದೇವಸಹ ಅದೇ ರೀತಿಯ ಮಹತ್ತರ ಆಶಯವನ್ನು ಬಿಂಬಿಸುತ್ತದೆ.  "ಸತ್ಯ ನಿರಾಕರಿಸಲಾರದ ಸಹದೇವ ನಾನು... ನಾನೇಕೆ ಯುದ್ಧವನ್ನು ಸಹಿಸಿಕೊಂಡೆ? ತಪ್ಪು ಮಾಡಿದೆ. ಆದರೆ ನೀವೇನು ಮಾಡುತ್ತಿದ್ದೀರಿ. ನನ್ನನ್ನು ಸಹದೇವ, ಸಹನೆದೇವ ಎನ್ನುತ್ತಾರೆ. ಆದರೆ ನೀವು ಅಸಹನೆ ದೇವ ಎಂದು ಗೊತ್ತಾ ...? ಎಂದು ಸಹದೇವನ ಪಾತ್ರದ ಮೂಲಕ ಪ್ರೇಕ್ಷಕರನ್ನು ಕೆಣಕುವ ನಾಟಕವು ಅಸಹಿಷ್ಣುತತೆ ತಾಂಡವವಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯರೊಳಗಿನ ಅಸಹನೆಯನ್ನು ಹಾಗೂ ಹಿಂಸೆ-ದ್ವೇಷವನ್ನು ಕಂಡೂ ಸುಮ್ಮನಿರುವ ನಿರ್ಲಿಪ್ತತೆಯನ್ನು ಪ್ರಶ್ನಿಸುತ್ತದೆ.


ಶ್ರೀಕೃಷ್ಣನಿಂದ ಅಕ್ಷೆಹಿಣಿ ಸೈನ್ಯ ಪಡೆದ ಸುಯೋಧನನು ಯಾವ ಗಳಿಗೆಯಲ್ಲಿ ಯುದ್ಧ ಶುರುಮಾಡಿದರೆ ಗೆಲುವು ಸಾಧ್ಯವೆಂಬುದನ್ನು ಖಗೋಳ ಪಂಡಿತ ಸಹದೇವನನ್ನು ಕೇಳುತ್ತಾನೆ. ಸಹದೇವನ ಮಾತಿನಂತೆ ಅಮವಾಸ್ಯೆಯಂದು ಯುದ್ಧ ಶುರುವಾದರೆ ಪಾಂಡವರಿಗೆ ಸೋಲಾದೀತೆಂದು ದಿಗಿಲುಗೊಂಡ ಕೃಷ್ಣ ಎರಡು ದಿನ ಮೊದಲೇ ಸೂರ್ಯನ ಮುಂದೆ ಚಂದ್ರನನ್ನು ತಂದು ಅಮವಾಸ್ಯೆ ಸೃಷ್ಟಿಸಿ ಯುದ್ಧ ಆರಂಭಿಸಿ ಕೌರವ ಪಡೆ ನಾಶಮಾಡಿ ಪಾಂಡವರನ್ನು ಗೆಲ್ಲಿಸುತ್ತಾನೆ. ಕೌರವರ ನಾಶಕ್ಕೆ ಕೃಷ್ಣನ ಹಾಗೇಯೇ ಸಂಚು ಹೂಡಿದ ಶಕುನಿಯನ್ನು ಸಹದೇವ ಕೊಲ್ಲುತ್ತಾನೆ. ಮಕ್ಕಳ ಮಾರಣಹೋಮದಿಂದ ನೊಂದ ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿದಾಗ ಪಾಂಡವ ಕುಟುಂಬ ಕುರುಡಾಗಿ ಸ್ವರ್ಗಾರೋಹಣದತ್ತ ಸಾಗುತ್ತದೆ. ಈಗಿನ ಕಾಲದ ಗರ್ಭಿಣಿ ಹುಡುಗಿಯೊಬ್ಬಳುಯುದ್ಧ ದಾಹಿಗಳಿಂದ, ದ್ವೇಷದ ದುಷ್ಪರಿಣಾಮಗಳಿಂದ ಮುಂದೆ ಹುಟ್ಟುವ ತನ್ನ ಮಗುವನ್ನು ಕಾಪಾಡುವುದು ಹೇಗೆ?’ ಎಂದು ಪ್ರಶ್ನಿಸುವುದರೊಂದಿಗೆ ನಾಟಕವೆನೋ ಮುಗಿಯುತ್ತದೆ... ನೋಡುಗರಲ್ಲಿ ಅನೇಕಾನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.    

ನಾಟಕದ ಶೀರ್ಷಿಕೆಸಹದೇವಎಂದಿದ್ದರೂ ಸಹದೇವ ಪಾತ್ರವು ನಾಟಕದ ಕೇಂದ್ರವಾಗಿರದೇ ಪರೀಧಿಯಲ್ಲೇ ಉಳಿಯುತ್ತದೆ. ಕೃಷ್ಣ ಹಾಗೂ ಶಕುನಿಯರಿಬ್ಬರ (ಕು)ತಂತ್ರಗಾರಿಕೆಯೇ ಇಡೀ ನಾಟಕದ ಅಂತ:ಸತ್ವವಾಗಿದ್ದುಸಹದೇವಪಾತ್ರ ಸಹ ಅವರ ತಂತ್ರಗಾರಿಕೆಯ ಭಾಗವಾಗಿ ಮೂಡಿಬಂದಿದೆ. ಮಹಾಭಾರತದಲ್ಲಿ ನಿರ್ಲಕ್ಷಕ್ಕೊಳಗಾದಸಹದೇವಪಾತ್ರಕ್ಕೆ ಒಂದಿಷ್ಟು ಪ್ರಾಮುಖ್ಯತೆಯನ್ನು ಕೊಡಲು ಸೂಳೇರಿಪಾಳ್ಯರವರು ಸಹದೇವನನ್ನು ಒಬ್ಬ ಖಗೋಳ ಶಾಸ್ತ್ರಜ್ಞ, ಜ್ಯೋತಿಷ್ಯ ಪಂಡಿತ ಎಂದು ನಿರೂಪಿಸಲು ಪ್ರಯತ್ನಿಸಿದ್ದಾರೆ. ಹೊಸ ಹೊಳವನ್ನು ಮಹಾಭಾರತದ ಅದ್ಯಾವ ಭಾಗದಿಂದ ಆಯ್ದುಕೊಂಡರೋ ಗೊತ್ತಿಲ್ಲ. ಆದರೆ ನೋಡುಗರಲ್ಲಿ ಜ್ಯೋತಿಷ್ಯದ ಕುರಿತು ಇರಬಹುದಾದ ಮೌಡ್ಯವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುತೇಕ ಆಧುನಿಕ ಕನ್ನಡ ನಾಟಕಗಳಲ್ಲಿ ಮೌಡ್ಯವನ್ನು ವಿರೋಧಿಸುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿಯೇ ಕನ್ನಡ ರಂಗಭೂಮಿಯ ಅನೇಕ ನಾಟಕಕಾರರು ಮಾಡಿದ್ದಾರೆ. ಕುವೆಂಪುರವರು ಇದರಲ್ಲಿ ಪ್ರಮುಖರಾದವರು. ಆದರೆ... ಬಸವರಾಜ ಸೂಳೇರಿಪಾಳ್ಯರವರು ಮಹಾಭಾರತವನ್ನು ಮುರಿದು ಕಟ್ಟುವಂತಹ ತಮ್ಮ ನಾಟಕದ ಮೂಲಕ ಜ್ಯೋತಿಷ್ಯ ಎನ್ನುವ ಮೌಡ್ಯಾಚರಣೆಗೆ ಅಧೀಕೃತತೆಯನ್ನು ಒದಗಿಸಲು ಪ್ರಯತ್ನಿಸಿದಂತಿದೆ. ಗ್ರಹ ನಕ್ಷತ್ರಗಳ ಚನೆಯನ್ನು ಆಧರಿಸಿ ಶುಭ-ಅಶುಭ ಕಾಲವನ್ನು ನಿರ್ಧರಿಸುವುದು ವೈಜ್ಞಾನಿಕ ಯುಗದಲ್ಲಿ ಪ್ರಶ್ನಾರ್ಹವಾಗಿದೆ.

ಜ್ಯೋತಿಷ್ಯ ಎನ್ನುವ ಮೌಡ್ಯವನ್ನೇ ಬ್ಯಾನ್ ಮಾಡಬೇಕು ಎಂದು ಹಲವಾರು ಪ್ರಜ್ಞಾವಂತ ಪ್ರಗತಿಪರರು ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಪುರೋಹಿತಶಾಹಿಗಳ ನವಗ್ರಹಗಳ ಕಲ್ಪನೆಯೇ ತಪ್ಪು ಎನ್ನುವುದು ಸಾಬೀತಾಗಿದೆ. ಜ್ಯೋತಿಷ್ಯ ಕೇಳಿ, ಪಂಚಾಂಗ ಓದಿ, ಜಾತಕ ಗ್ರಹಗತಿ ತಿಳಿದು ಶುಭಲಗ್ನ ಗಳಿಗೆಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದ ದಾಂಪತ್ಯಗಳೇ ಮುರಿದು ಬೀಳುತ್ತಿವೆ. ಇಂತಹುದರಲ್ಲಿಸಹದೇವ ಹೇಳಿದ ಗ್ರಹಗತಿಗಳ ಆಧಾರದ ಜ್ಯೋತಿಷ್ಯ ಎಂದೂ ಸುಳ್ಳಾಗದುಎಂಬುದನ್ನು ಸಾಬೀತು ಪಡಿಸಲು ಪ್ರಯತ್ನಿಸುವ ನಾಟಕ ಜನರಲ್ಲಿರುವ ಮೂಢನಂಬಿಕೆಗಳಿಗೆ ಪ್ರೇರಣೆ ಕೊಟ್ಟಂತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯುದ್ಧದಲಿ ಗೆಲ್ಲಲು ರಣತಂತ್ರಗಳಿಗಿಂತ ಗ್ರಹಗತಿ ಗಳಿಗೆ ಕಾಲ ತಂತ್ರಗಳೇ ನಿರ್ಣಾಯಕ ಆಗುವಂತಿದ್ದರೆ ದುರ್ಬಲರೂ ಭಲಾಡ್ಯರನ್ನು ಸೋಲಿಸಬಹುದಾಗಿದೆ. ಸಹದೇವನ ಲೆಕ್ಕಾಚಾರದ ಪ್ರಕಾರ ಕೌರವರು ಯುದ್ಧವನ್ನು ಆರಂಭಿಸಿದ್ದರೆ ಕದನದಲಿ  ಗೆಲ್ಲುತ್ತಿದ್ದರು ಶ್ರೀಕೃಷ್ಣ ಕೂಡಾ ಇದರಿಂದ ದಿಗಿಲು ಬಿದ್ದು ಸೂರ್ಯ ಚಂದ್ರರ ಪ್ರಾಕೃತಿಕ ಚಲನೆಯನ್ನೇ ಬದಲಿಸಿ ಯುದ್ಧವನ್ನು ಗೆಲ್ಲಬೇಕಾಯಿತು ಎನ್ನುವುದನ್ನು ನಾಟಕ ಹೇಳುತ್ತದೆ. ದೇವರನ್ನೇ ಜ್ಯೋತಿಷ್ಯ ದಿಗಿಲುಗೊಳಿಸಿದ ಮೇಲೆ ಜನಸಾಮಾನ್ಯರಾದ ನಮ್ಮ ಗತಿ ಏನು ಎನ್ನುವ ಸಂದೇಹ ನೋಡುಗರನ್ನು ಕಾಡಿ ಜ್ಯೋತಿಷ್ಯದತ್ತ ನಂಬಿಕೆಯನ್ನು ಬಲಗೊಳಿಸಬಹುದಾದ ಕೆಲಸವನ್ನು   ನಾಟಕದಲ್ಲಿ ಮಾಡಿದಂತಿದೆ. ಸಹದೇವನನ್ನು ಅಸಮಾನ್ಯನನ್ನಾಗಿಸಲು ಮೌಡ್ಯಾಚರಣೆಯನ್ನೆ ಆತನ ಮೇಲೆ ಅರೋಪಿಸಬೇಕಿತ್ತೇ? ಗೊತ್ತಿಲ್ಲ. ಆದರೆ ಜ್ಯೋತಿಷ್ಯ ಭವಿಷ್ಯ ಎನ್ನುವ ಪುರೋಹಿತಶಾಹಿ ಹುಸಿ  ಕಲ್ಪನೆಗಳನ್ನು ಸಹದೇವ ದೃಢೀಕರಿಸಿದ್ದಂತೂ ಸುಳ್ಳಲ್ಲ.

ಕಾಲ್ಪನಿಕ ಪೌರಾಣಿಕ ಕಥಾನಕವನ್ನು ಸಮಕಾಲೀನಗೊಳಿಸುವಂತಹ ಸ್ತುತ್ಯಾರ್ಹ ಪ್ರಯತ್ನವನ್ನೂ ನಾಟಕದಲ್ಲಿ ಮಾಡಲಾಗಿದೆ. ಆದರೆ ಅದನ್ನು ಅಸಂಗತ ಮಾದರಿಯಲ್ಲಿ ಮಾಡಲಾಗಿದೆ. ಪೌರಾಣಿಕ ಕಾಲ್ಪನಿಕ ಸನ್ನಿವೇಶಗಳ ನಡುವೆ ಕಾಲದ ದೃಶ್ಯಗಳನ್ನು ಇದ್ದಕ್ಕಿದ್ದಂತೆ ತರ್ಕಾತೀತಿವಾಗಿ ಸೇರಿಸಿದಾಗ ನೋಡುಗರಿಗೆ ಗೊಂದಲ ಉಂಟಾಗುತ್ತದೆ. ಕೆಲವೊಮ್ಮೆ ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ನಡುವೆ ಸಂಬಂಧವೇ ಇಲ್ಲದಂತೆ ದೃಶ್ಯ ಸಂಯೋಜನೆ ಮಾಡಲಾಗಿದೆ. ಇದು ನಾಟಕಕಾರನ ಹಾಗೂ ನಿರ್ದೇಶಕನ ಅಸಾಮಾನ್ಯ ಬುದ್ಧಿಮತ್ತೆ ಇರಬಹುದಾದರೂ ಅದನ್ನು ಪ್ರೇಕ್ಷಕರಿಗೆ ಸಂವಹನ ಮಾಡಲು ಸಾಧ್ಯವಾಗಿಲ್ಲ. ಕಥಾಕಥಿತ ಕಥಾನಕದ ಹಂಗನ್ನು ತೊರೆದು, ಯುದ್ಧವಿರೋಧಿ ಆಶಯವನ್ನು ಕೇಂದ್ರವಾಗಿಟ್ಟುಕೊಂಡು ಅದಕ್ಕೆ ಪೂರಕವಾಗಿ ಕಾಲಾತೀತ ರೀತಿಯಲ್ಲಿ ದೃಶ್ಯಗಳನ್ನು ಅಸಂಗತವಾಗಿ ಜೋಡಿಸುತ್ತಾ ಹೋಗಿದ್ದು ಸಾಮಾನ್ಯ ಪ್ರೇಕ್ಷಕರ ಅರಿವಿನ ಮಿತಿಯನ್ನು ಮೀರಿದ್ದಾಗಿದೆ. ಬೌದ್ಧಿಕ ನೆಲೆಯಲ್ಲಿ ಇಡೀ ನಾಟಕವನ್ನು ಕಟ್ಟುವ ಪ್ರಯತ್ನವನ್ನು ನಿರ್ದೇಶಕ ಜೋಸೆಫ್ ತದಾತ್ಮಕತೆಯಿಂದ ಮಾಡಿದ್ದಾರೆ. ಆದರೆ ಹೀಗೆ ಇರುವುದನ್ನು ಒಡೆದು ಹೊಸ ವಿನ್ಯಾಸದಲ್ಲಿ ನಾಟಕವನ್ನು ಕಟ್ಟುವ ದಾವಂತದಲ್ಲಿ ನಾಟಕವು ನಿರ್ದೇಶಕರ ಹಿಡಿತಕ್ಕೆ ಸಿಕ್ಕಲಿಲ್ಲ ಹಾಗೂ ನೋಡುಗರ ವಿವೇಚನೆಗೂ ಸಂಪೂರ್ಣ ದಕ್ಕಲಿಲ್ಲ.


ನಾಟಕದಾದ್ಯಂತ ಸಂಕೇತಗಳನ್ನು ಹೆಚ್ಚಾಗಿಯೇ ಬಳಸಲಾಗಿದೆ. ಕೆಲವು ಅರ್ಥವಾಗುತ್ತವೆ ಇನ್ನು ಕೆಲವು ಅನರ್ಥವಾಗುತ್ತವೆ. ರಣಹದ್ದು ಹಾಗೂ ಸೀಳುನಾಯಿ ಪಾತ್ರ ಸೃಷ್ಟಿ ಯದ್ಧದ ಭೀಕರತೆ ಹಾಗೂ ನಿರರ್ಥಕತೆಗೆ  ಸಾಂಕೇತಿಕವಾಗಿ ಸೊಗಸಾದ ಉದಾಹರಣೆಯಾಗಿವೆ. ”ಎಲ್ಲಿವರೆಗೂ ಮನುಷ್ಯ ಮನುಷ್ಯರನ್ನು ಕೊಲ್ತಾನೆ ಇರ್ತಾರೋ ಅಲ್ಲಿವರೆಗೂ ನಮಗೆ ಹೆಣಗಳ ಕೊರತೆಯಿಲ್ಲ. ಸ್ವಲ್ಪ ತಾಳ್ಮೆಯಿಂದ ಕಾಯಬೇಕಷ್ಟೆ...” ಎಂದು ನಾಯಿ ಹಸಿದ ಹದ್ದಿಗೆ ಸಮಾಧಾನ ಹೇಳುತ್ತದೆ. ಪ್ರಾಣಿ ಪಕ್ಷಿ ರೂಪಕಗಳು ಕಾಲಾತೀತವಾಗಿ ಮೂಡಿಬಂದಿದ್ದು ಮಹಾಭಾರತದ ಕಥೆಯಲ್ಲಿ ಗಾಂಧಿ ಬುದ್ಧರ ಕುರಿತು ಪ್ರಸ್ತಾವನೆಗಳನ್ನು ಮಾಡಲಾಗಿದೆ. ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆಯ ಕಟ್ಟನ್ನು ಬಿಚ್ಚಿದ ಕೂಡಲೇ ಪಾಂಡವರ ಕುಟುಂಬ ಪರಿವಾರ ಕುರುಡಾಗುತ್ತದೆ. ಇದು ಅದೇನನ್ನು ಸಂಕೇತಿಸುತ್ತೋ ಗೊತ್ತಿಲ್ಲಾ. ಗಾಂಧಾರಿ ಕಣ್ಣು ಬಿಡುವುದಕ್ಕೂ ಬೇರೆಯವರು ಕುರುಡಾಗುವುದಕ್ಕೂ ಅದೇನು ಸಂಬಂಧ ಎನ್ನುವುದು ಅರ್ಥವಾಗುತ್ತಿಲ್ಲಮಲ್ಲಿಗೆ ಎನ್ನುವ ಸಮಕಾಲೀನ ಪಾತ್ರವೊಂದನ್ನು ಸೃಷ್ಟಿಸಿ  ಪೌರಾಣಿಕ ಕಾಲದ ಸನ್ನಿವೇಶಕ್ಕೆ ಕರೆದೊಯ್ದು ಸ್ವರ್ಗಾರೋಹಿ ಪಾಂಡವರನ್ನು ಹಿಡಿದು ನಿಲ್ಲಿಸಿ ಮುಂದಿನ ಮನುಕುಲದ ಭವಿಷ್ಯದ ಕುರಿತು ಪ್ರಶ್ನಿಸುವಂತೆ ಚಿತ್ರಿಸಲಾಗಿದೆ. ಕಾಲೈಕ್ಯ ಸ್ಥಳೈಕ್ಯ ಸಿದ್ದಾಂತವನ್ನು ಮೀರಿ ಆಶಯ ಕೇಂದ್ರಿತ ನಾಟಕವನ್ನು ಕಟ್ಟಲು ನಿರ್ದೇಶಕರು ತಾವು ಕಲಿತ ವಿದ್ಯೆಯೆಲ್ಲವನ್ನೂ ಬಳಸಿದ್ದಾರೆ. ನೋಡುಗರ ಮೆದುಳಿಗೆ ಕೈಹಾಕಿ ಬೇಕಾದಷ್ಟು ಕೆಲಸ ಕೊಟ್ಟಿದ್ದಾರೆ. ಕೆಲವು ಬಿಡಿ ದೃಶ್ಯ ಸೃಷ್ಟಿ ಸೃಜನಶೀಲತೆಯ ಸಾಕಾರವಾಗಿವೆ. ಅದರಲ್ಲೂ ಪಗಡೆ ಆಟದ ಜೊತೆಗೆ ಯುದ್ಧವನ್ನು ನಿರೂಪಿಸುವ ದೃಶ್ಯ ಸೊಗಸಾಗಿ ಮೂಡಿಬಂದಿದೆ.

ಸಹದೇವ" ನಾಟಕದ ಮೂಲ ಸತ್ವವಿರುವುದು ಮನುಷ್ಯರೊಳಗಿರುವ ದ್ವೇಷವೆನ್ನವ ವಿನಾಶಕಾರಿ ಮನಸ್ಥಿತಿಯಲ್ಲಿ. "ರಾಜ್ಯಾಧಿಕಾರಕ್ಕಾಗಿ ಯಾರು ಯುದ್ಧ ಮಾಡುತ್ತಾರೆ. ದೇಶ ಶಾಶ್ವತವಲ್ಲ, ದ್ವೇಷ ಮಾತ್ರ ಶಾಶ್ವತ" ಎಂದು ಸುಯೋಧನನು ಮಾವ ಶಕುನಿಗೆ ಹೇಳುತ್ತಾನೆ. ಇಲ್ಲಿ  ಗಾಂಧಾರಿ ಸಹ ಕುಂತಿಗೆ ಮಕ್ಕಳಾದವಲ್ಲಾ ಎನ್ನುವ ದ್ವೇಷಕ್ಕೆ ಗರ್ಭ ಹಿಚುಕಿಕೊಂಡು ನೂರೊಂದು ಮಕ್ಕಳ ಹೆತ್ತು ದ್ವೇಷದ ಸಂತತಿಯನ್ನು ಹೆಚ್ಚಿಸುತ್ತಾಳೆ. ಶಕುನಿಯು ತನ್ನ ಗಾಂಧಾರ ಕುಲವನ್ನು ಭೀಷ್ಮ ನಾಶಮಾಡಿದ್ದಕ್ಕೆ ಪ್ರತಿಫಲವಾಗಿ ಕುರುವಂಶದ ಸರ್ವನಾಶಕ್ಕೆ ತಂತ್ರಗಾರಿಕೆಯಿಂದ ದ್ವೇಷ ಸಾಧಿಸಿ ಯಶಸ್ವಿಯಾಗುತ್ತಾನೆ. ಶಕುನಿ ಸಾಯುವ ಮುನ್ನ "ಶಕುನಿ ಎಂದರೇ ದ್ವೇಷದ ಸಾಕಾರವಿದ್ದಂತೆ. ನನ್ನನ್ನು ಸಂಪೂರ್ಣ ಸಾಯಿಸಲು ಎಂದೂ ಯಾರಿಂದಲೂ ಸಾಧ್ಯವೇ ಇಲ್ಲ. ಎಲ್ಲೆಲ್ಲಿ ನನ್ನ ರಕ್ತದ ಕಣಗಳು ಬೀಳುತ್ತವೋ ಅಲ್ಲೆಲ್ಲಾ ದ್ವೇಷವೆನ್ನುವುದು ಹುಟ್ಟುತ್ತದೆ, ಎಲ್ಲಿವರೆಗೂ ಜಗದಲ್ಲಿ ದ್ವೇಷ, ಯುದ್ಧಗಳಿರುತ್ತವೆಯೋ  ಅಲ್ಲಿವರೆಗೂ ಶಕುನಿ ಅವಿನಾಶಿ " ಎಂಬರ್ಥದ ಮಾತುಗಳನ್ನು ಹೇಳುವ ಮೂಲಕ ದ್ವೇಷಗುಣದ ರಕ್ತಬೀಜಾಸುರತೆಯನ್ನು ಸಾಕ್ಷೀಕರಿಸುತ್ತಾನೆ. ದ್ರೌಪತಿಗೆ ದುರ್ಯೋಧನನ ಮೇಲೆ ದ್ವೇಷ. ಪಾಂಡವರಿಗೆ ಕೌರವರ ಮೇಲೆ, ಕೌರವರಿಗೆ ಪಾಂಡವರ ಮೇಲೆ.. ಹೀಗೆ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಕಾರುತ್ತಾ ತಂತ್ರ ಪ್ರತಿತಂತ್ರಗಳನ್ನು ಹೂಡುತ್ತಾ ಅಂತಿಮವಾಗಿ ಯುದ್ಧವಾಗಿ ಸಾವು ನೋವುಗಳನ್ನು ಅನುಭವಿಸುತ್ತಾರೆ. ದ್ವೇಷದಿಂದ ನಾಶವಲ್ಲದೇ ಬೇರೇನೂ ದಕ್ಕದು ಎನ್ನುವ ಸಾರ್ವಕಾಲಿಕ ಸತ್ಯವನ್ನು ಹೇಳುವಲ್ಲಿ  ’ಸಹದೇವನಾಟಕ ಯಶಸ್ವಿಯಾಗಿದೆ.


ಯಾರೂ ಅರಿಯದ ಕೆಲವೊಂದು ಹೊಸ ಅವಿಷ್ಕಾರಗಳನ್ನು ನಾಟಕಕಾರರು ಮಾಡಿದ್ದಾರೆ. ಯುದ್ಧ ದ್ವೇಷ ಹಿಂಸೆಯನ್ನು ವಿರೋಧಿಸುವ ಧಾವಂತದಲ್ಲಿ ಪುರಾಣದಲ್ಲಿ ಇಲಾರದವುಗಳನ್ನು ಕಲ್ಪಿಸಿಕೊಂಡು ಹೊಸ ಪುರಾಣ ಸೃಷ್ಟಿಸಲೂ ಪ್ರಜ್ಞಾಪೂರ್ವಕವಾಗಿಯೇ ಪ್ರಯತ್ನಿಸಿದ್ದಾರೆ. ಮಹಾಭಾರತದ ಯುದ್ಧಾನಂತರ ಏಕಲವ್ಯನ ಜೊತೆ ಪ್ರೀತಿಸಿದ ಗಾಂಧಾರಿಯ ಮಗಳು ನಾಡು ತೊರೆದು ಕಾಡಿಗೆ ಓಡಿಹೋಗುತ್ತಾಳೆಂದು ಮಿಥ್ ಕಥೆಗೆ ಇನ್ನೊಂದು ಹೊಸ ಮಿಥ್ನ್ನು ಸೇರಿಸುತ್ತಾರೆ. ’ಕುಂತಿ ಐದು ಮಕ್ಕಳನ್ನು ಹೆತ್ತಳು ಎಂದು ತಿಳಿದು ಸಂಕಟಪಟ್ಟೆ..’ ಎಂದು ಗಾಂಧಾರಿ ಹೇಳುತ್ತಾಳೆ ಆದರೆ ಕುಂತಿ ಐದೂ ಮಕ್ಕಳನ್ನು ಒಂದೇ ಬಾರಿಗೆ ಹೆರಲಿಲ್ಲ ಹಾಗೂ ಐವರಲ್ಲಿ ಇಬ್ಬರು ಕುಂತಿಯ ಮಕ್ಕಳಲ್ಲ ಮಾದ್ರಿಯವು ಎನ್ನುವುದಾದರೂ ನಾಟಕಕಾರರಿಗೆ ಗೊತ್ತಿರಬೇಕಿತ್ತು. ರಾಜ್ಯಭ್ರಷ್ಟರಾದ ಪಾಂಡವರು ರಾಜ್ಯಾಧಿಕಾರಕ್ಕಾಗಿಯೇ ಯುದ್ಧಮಾಡುತ್ತಿರುವಾಗ ಕರ್ಣನನ್ನು ನೋಡಲು ಬಂದ ಕುಂತಿ "ಹಸ್ತಿನಾವತಿಯ ಅನಭಿಶಕ್ತ ಮಹಾರಾಣಿಯಾಗಿ ಹೇಳುತ್ತೇನೆ ನೀನೇ ನನ್ನ ಮಗ.." ಎನ್ನುವುದು ಆಭಾಸಕಾರಿಯಾಗಿದೆ. "ಎಲ್ಲಾ ನೀಚ ಹೆಂಗಸರಂತೆ ನೀನೂ.." ಎಂದು ಕರ್ಣ ಕುಂತಿಗೆ ಹೇಳುವುದು ಅತಿರೇಕವೆನಿಸುತ್ತದೆ. ಹೀಗೆ.. ನಾಟಕದಲ್ಲಿ ಹಲವಾರು ಅತಾರ್ಕಿಕ ಅಂಶಗಳನ್ನು ಸೇರಿಸಲಾಗಿದ್ದು ಇವುಗಳಿಗೆ ಕನಿಷ್ಟ ಪಾತ್ರಗಳ ಮಾತಿನಲ್ಲಾದರೂ ಸಮರ್ಥನೆಗಳನ್ನು ಕೊಟ್ಟಿದ್ದರೆ ನೋಡುಗರ ಸಂದೇಹಗಳನ್ನು ನಿವಾರಿಸಬಹುದಾಗಿತ್ತು

ನೋಡುಗರ ಆಲೋಚನೆಯಲ್ಲಿರುವ ರೂಢಿಗತ ಸಿದ್ಧಮಾದರಿಯ ಮಹಾಭಾರತವನ್ನು ಸಾರಾಸಗಟಾಗಿ ಒಡೆದುಹಾಕಿ  ಬೇರೆ ಮಾದರಿಯನ್ನು ಕಟ್ಟುವ ನಿಟ್ಟಿನಲ್ಲಿ  ನಿರ್ದೇಶಕರು ತಮ್ಮದೇ ಆದ ಕ್ರಿಯಾಶೀಲತೆಯನ್ನು ಬಳಿಸಿದ್ದಾರೆ. ನಾಟಕದಲ್ಲಿ ಅಭಿನಯಿಸಿದ ಬಹುತೇಕ ನಟರು ಮಹಾಭಾರತದ ಕಲ್ಪನೆಯ ಪಾತ್ರಗಳಿಗೆ ಪೂರಕವಾಗಿಲ್ಲ. ಯುದ್ಧದಲಿ ಪಳಗಿದ ಯೋಧರಾದ ವೀರ ಕುರು ಪಾಂಡವರಂತೆ ನಟರುಗಳು ಕಟ್ಟುಮಸ್ತು ದೇಹ ಹೊಂದಿಲ್ಲ. ಭೀಮ ಭೀಮನಂತಿಲ್ಲ, ಅರ್ಜುನ ಅರ್ಜುನನ ಹಾಗಿಲ್ಲ, ಶಕುನಿ ಶಕುನಿಯಂತಿಲ್ಲ .. ಎಲ್ಲವೂ ಮಿಸ್ಮ್ಯಾಚ್ ಕಾಸ್ಟಿಂಗ್. ಯಾಕೆಂದರೆ ನಿರ್ದೇಶಕರು ತಮ್ಮ ಆಶಯವನ್ನು ಪ್ರೇಕ್ಷಕರಿಗೆ ಸಂವಹನಗೊಳಿಸಲು ನಟರನ್ನು ಪರಿಕರಗಳಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದು ನಾಟಕದಾದ್ಯಂತ ಗೋಚರಿಸುತ್ತದೆ. ಹಾಕಿದ ವೇಶಭೂಷಣಗಳಿಂದ ಯಾವುದೇ ಪಾತ್ರಗಳನ್ನೂ (ಮಹಿಳಾ ಪಾತ್ರಗಳನ್ನು ಹೊರತುಪಡಿಸಿ) ರಾಜಮನೆತನದವರೆಂದು ಗುರುತಿಸಲು ಸಾಧ್ಯವೇ ಇಲ್ಲ. ನಾಟಕದಲ್ಲಿ ಬಳಸಿದ ಮಾತುಗಳು ಕಲಾತ್ಮಕವಾದ ಶಿಷ್ಟಭಾಷೆಯಾಗಿದ್ದರೂ ಪಾತ್ರಗಳ ವೇಷ ಭೂಷಣಗಳಿಂದ ಇದು ಯಾವುದೋ ಬುಡಕಟ್ಟು ಜನಾಂಗದ ಮಹಾಭಾರತವೊಂದು ರಂಗದ ಮೇಲೆ ಅನಾವರಣಗೊಂಡಂತೆ ಭಾಸವಾಗುತ್ತದೆ. ಯಾಕೆಂದರೆ ನಿರ್ದೇಶಕರಿಗೆ ಪಾತ್ರೋಚಿತ ವೇಷಭೂಷಣಗಳಿಗಿಂತ ವೇಷೋಚಿತ ಭಾಷಾ ಬಳಕೆಗಿಂತ ಹೇಳ ಬೇಕೆಂದಿರುವ ನಾಟಕದ ಆಶಯ ತುಂಬಾ ಮಹತ್ತರವಾಗಿದೆ. ವಿಚಿತ್ರವೆಂದರೆ ಬಣ್ಣ ಬಣ್ಣದ ಧಿರುಸುಗಳಲ್ಲಿ ರಾಜತೇಜಸ್ಸಿನ ಕಾಸ್ಟೂಮ್ಸ್ಗಳಲ್ಲಿ ಕುಂತಿ, ಗಾಂಧಾರಿ ಹಾಗೂ ದ್ರೌಪತಿ ಪಾತ್ರಗಳಿದ್ದು ಬೇರೆಲ್ಲಾ ಪುರುಷ ಪಾತ್ರಗಳು ಕಪ್ಪು ಇಲ್ಲವೇ ಕೆಂಪು ಬಣ್ಣದ ಕಾಸ್ಟೂಮ್ಸ್ ಧರಿಸಿವೆ. ಇವೆಲ್ಲಕ್ಕೂ ಸಾಂಕೇತಿಕವಾಗಿ ಹಲವು ಅರ್ಥಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ. ದ್ವೇಷ ಹಾಗೂ ಯುದ್ಧವನ್ನು ಕಪ್ಪು ಬಣ್ಣಕ್ಕೂ ಅದರಿಂದಾದ ದುಷ್ಪರಿಣಾಮಗಳನ್ನು ಕೆಂಪು ಬಣ್ಣಕ್ಕೂ ಹೋಲಿಕೆ ಮಾಡಿ ಬುದ್ದಿವಂತ ಪ್ರೇಕ್ಷಕರು ಅರ್ಥೈಸಿಕೊಳ್ಳಬಹುದಾಗಿದೆ. ನಾಟಕದ ದೃಶ್ಯಗಳು ಸಾಂಕೇತಿಕವಾಗಿ ಮೂಡಿಬಂದರೆ ಮಾತುಗಳು ಕಾವ್ಯಾತ್ಮಕವಾಗಿ ಮೂಡಿ ಬಂದಿವೆ.


ನಿರ್ದೇಶಕರು ನಾಟಕದಲ್ಲಿ ನಟರ ಅಭಿನಯಕ್ಕಿಂತ ರಂಗತಂತ್ರಗಾರಿಕೆಗಳಿಗೆ ಅತೀ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಬಹುತೇಕ ಪಾತ್ರಧಾರಿಗಳು iಗೆ ಕೊಟ್ಟ ಮಾತುಗಳನ್ನು ಏರಿಳಿತಗಳ ಹಂಗಿಲ್ಲದೆ ಒಪ್ಪಿಸಿದ್ದಾರೆ. ದೇಹಭಾಷಾ ಬಳಕೆಯಲ್ಲೂ ಸಹ ಯಾಂತ್ರಿಕತೆಯೇ ತುಂಬಿದೆ. ಭಾವತೀವ್ರತೆಯಂತೂ ಯಾವುದೇ ಪಾತ್ರದ ಅಭಿನಯದಲ್ಲಿ ಕಾಣಸಿಗುವುದಿಲ್ಲ. ಇರುವುದರಲ್ಲಿ ಕರ್ಣನ ಪಾತ್ರಧಾರಿ ವೆಂಕಟರಾಜು ತಮ್ಮ ಸ್ಪಷ್ಟವಾದ ಮಾತುಗಳು ಹಾಗೂ ಆಂಗಿಕಾಭಿನಯದಿಂದ ಗಮನ ಸೆಳೆಯುತ್ತಾರೆಶಕುನಿಯಾಗಿ ಸತ್ಯಕಾಂತ್ ಹಾಗೂ ಕೃಷ್ಣನಾಗಿ ಚೇತನ್ರವರು ಆಡುವ ಮಾತುಗಳಲ್ಲಿರುವ ಮಾರ್ಮಿಕತೆಯಿಂದಾಗಿ ಗಮನಾರ್ಹರಾಗುತ್ತಾರೆ. ಹೆಚ್ಚು ಪಾತ್ರಧಾರಿಗಳಿಗೆ ಅಭಿನಯಿಸಲು ನಾಟಕದಲ್ಲಿ ವಿಶೇಷ ಅವಕಾಶವೂ ಇಲ್ಲವಾಗಿದೆ. ಹೀಗಾಗಿ ಎಲ್ಲಾ ಪಾತ್ರಧಾರಿಗಳು ಅಗತ್ಯಕ್ಕೆ ತಕ್ಕಷ್ಟು ನಟಿಸಿ ನಿರ್ದೇಶಕರು ಹೇಳಿಕೊಟ್ಟಷ್ಟನ್ನು ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸಿದ್ದಾರೆ. ಇಡೀ ನಾಟಕದ ಏಕೈಕ ಅಗೋಚರ ಪಾತ್ರಧಾರಿಯಾಗಿ ನಿರ್ದೇಶಕ ಜೋಸೆಪ್ರವರು ಗೋಚರಿಸುತ್ತಾರೆ. ನಾಟಕದ ನಂತರ ಕೊನೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ಬಳಸಲಾದ ರಂಗತಂತ್ರಗಳು ಹಾಗೂ ನಾಟಕದ ಯುದ್ಧವಿರೋಧಿ ಆಶಯಗಳು ಮಾತ್ರ. ನಿರ್ದೇಶಕ ಹಾಗೂ ನಾಟಕಕಾರರ ಉದ್ಧೇಶವೂ ಆಳುವ ವರ್ಗಗಳ ದ್ವೇಷ ರಾಜಕಾರಣವನ್ನು ಹೇಳುವುದೇ ಆಗಿದ್ದರಿಂದ ಆಶಯದಲ್ಲಿ ನಾಟಕ ಯಶಸ್ವಿಯಾಗಿದೆ.

ಜೋಸೆಪ್ ಜಾನ್ರವರು ಆಧುನಿಕ ಕನ್ನಡ ರಂಗಭೂಮಿಯ ಒಬ್ಬ ಕ್ರಿಯಾಶೀಲ ನಿರ್ದೇಶಕ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅವರ ಹಿಂದಿನ ಕೆಲವಾರು ನಾಟಕದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ವಿಶಿಷ್ಟವಾಗಿ ನಾಟಕಗಳನ್ನು ಕಟ್ಟಿಕೊಟ್ಟಿದ್ದಾರೆಆದರೆಸಹದೇವನಾಟಕದಲ್ಲಿ ಹೊಸ ತಂತ್ರಗಳೇನೂ ಬಳಕೆಯಾಗದೇ ಅವರ ಹಿಂದಿನ ನಾಟಕಗಳಲ್ಲಿರೋದನ್ನೇ ಪುನರಾವರ್ತನೆ ಮಾಡಿದಂತಿದೆ. ಅದೇ ಪರಿಕರಗಳು ಹಾಗೂ ಬಟ್ಟೆಗಳ ಸಾಂಕೇತಿಕ ಬಳಕೆ, ಪಾತ್ರಗಳ ಮೂವಮೆಂಟ್ ಹಾಗೂ ಬ್ಲಾಕಿಂಗ್ ಶೈಲಿಗಳು ಮತ್ತೆ ಮತ್ತೆ ಬಳಕೆಯಾಗುತ್ತಿವೆ. ಯಾಕೆ ಜೋಸೆಪ್ ರವರ ಕ್ರಿಯಾಶೀಲತೆಯ ಬತ್ತಳಿಕೆ ಬರಿದಾಗಿ ಬತ್ತಿಹೋಯಿತೆ? ಹೊಸ ರೀತಿಯ ದೃಶ್ಯ ಸಂಯೋಜನೆ ಹಾಗೂ ರಂಗವಿನ್ಯಾಸ ಪರಿಕಲ್ಪನೆಗಳು ಜೋಸೆಫ್ರವರ ಜೋಳಿಗೆಯಿಂದ ಯಾಕೆ ಹೊರಗೆ ಬರುತ್ತಿಲ್ಲ. ಎನ್ನುವ ಸಂದೇಹ ಅವರ ಹಿಂದಿನ ನಾಟಕಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಬಾರದೇ ಇರದು.

ನಾಟಕದಾದ್ಯಂತ ಗಮನ ಸೆಳೆಯುವುದು ಕಾವ್ಯಾತ್ಮಕ ಸಂಭಾಷಣೆ ಮತ್ತು ಮಾರ್ಮಿಕ ಮಾತುಗಳು. ಸ್ವತಃ ಕವಿಯಾಗಿರುವ ನಾಟಕಕಾರ ಸೂಳೇರಿಪಾಳ್ಯರವರು ರಂಗಪಠ್ಯಕ್ಕಿಂತ ಸಂಭಾಷಣೆಯಲ್ಲಿ ಹೆಚ್ಚು ಮಾರ್ಮಿಕತೆ ತುಂಬಿದ್ದಾರೆ. "ಜಗತ್ತಿನ ನದಿಗಳಲ್ಲಿ ರಕ್ತ ಹರಿಯುತ್ತಿದೆ. ಗಂಗೆ, ಯಮುನೆ, ಕಾವೇರಿ ಕೆಂಪಾಗಿದ್ದಾರೆ. ಆಕಾಶ ನೀಲಿಯಲ್ಲಿ ನೆತ್ತರು ಅಂಟಿಕೊಂಡಿದೆ. ಲೋಕ ಬದುಕುತ್ತಿಲ್ಲ ಸಾವನ್ನು ಬಯಸುತ್ತಿದೆ.." ಎನ್ನುವಂತ ಅರ್ಥಗರ್ಭಿತ ಮಾತುಗಳೇ ನಾಟಕದ ಹೈಲೈಟ್ ಆಗಿವೆ. "ತೂತು ದೋಣಿಯ ಪಯಣಕ್ಕೆ ಗೊತ್ತು ಗುರಿ ಇಲ್ಲಾ" ಎನ್ನುವ ಕರ್ಣ, "ಎರಡು ತುಟಿಗಳ ನಗುವಿನ ನಡುವಿನ ಲೋಕ ಮಾತ್ರ ನನ್ನದು." ಎನ್ನುವ ಮಲ್ಲಿಗೆ. "ಸಾಯಿಸುವುದನ್ನು ಕಲಿತವರು ಬದುಕಲಾರರು, ಬದುಕಬೇಕೆನ್ನುವವರು ಯಾರನ್ನೂ ಸಾಯಿಸಲಾರರು" ಎಂದು ಹೇಳುವ ಕುಲುಮೆಯವರು. " ಎಲ್ಲರ ಮಾಂಸದಂತೆಯೇ ಮಹಾರಾಜರ ಮಾಂಸವೂ ಇರುತ್ತದೆ ಆದರೆ ಅಲ್ಲಿ ದುರಾಸೆ ವಾಸನೆ ಜಾಸ್ತಿ..." ಎನ್ನುವ ರಣಹದ್ದು..ಹೀಗೆ ಅನೇಕ ಸಂಭಾಷಣೆಗಳು ಕೇಳುಗರನ್ನು ತನ್ಮಯಗೊಳಿಸುವಂತೆ ಮೂಡಿಬಂದಿವೆ. ಸಂಭಾಷಣೆಗಳ ಕಾವ್ಯಾತ್ಮಕತೆಗೆ ತಕ್ಕಂತೆ ನಾಟಕವೂ ದೃಶ್ಯಕಾವ್ಯವಾಗಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು


ಪ್ರಸ್ತುತ ಇದು ನಾಟಕದ ಐದನೇ ಪ್ರದರ್ಶನವಾದರೂ ಇನ್ನೂ ನಾಟಕ ರಿಹರ್ಸಲ್ಸ್ ಹಂತದಲ್ಲೇ ಇದೆ. ರಂಗಶಾಲೆಯೊಂದರ ಸ್ಟೂಡೆಂಟ್ ಪ್ರೊಡಕ್ಷನ್ ಇರಬಹುದೇನೋ ಎಂದೆನಿಸುತ್ತದೆ. ಬಹುತೇಕ ನಟರುಗಳು ಹೊಸಬರಾಗಿರುವುದು ಇದಕ್ಕೆ ಕಾರಣವೋ ಗೊತ್ತಿಲ್ಲಾ. ಆದರೆ ಎರಡು ತಿಂಗಳು ನಿರಂತರ ತಾಲಿಂ ಮಾಡಿಸಿದರೂ ಅಭಿನಯ ವಿಭಾಗ ಸೊರಗಿದ್ಯಾಕೋ ತಿಳಿಯುತ್ತಿಲ್ಲ. ದೃಶ್ಯಗಳನ್ನು ಒಂದು ಬಂಧದಲ್ಲಿಟ್ಟು ಚೆಂದಗೊಳಿಸುವುದರತ್ತ ಅದು ಯಾಕೋ ನಿರ್ದೇಶಕರು ಗಮನಹರಿಸಿಲ್ಲವೆಂದೆನಿಸುತ್ತದೆ. ಇದು ನಿರ್ದೇಶಕರ ಸಮಸ್ಯೆಯೋ ಇಲ್ಲವೇ ಪಾತ್ರೋಚಿತ ಅನುಭವಿ ನಟರು ಸಿಗದೇ ಇರುವ ತಾಪತ್ರಯವೋ ಅಥವಾ ರಂಗಸಂಘಟಕರ ಅನಾಸಕ್ತಿ ಹಾಗೂ ಆಯ್ಕೆಯ ಕೊರತೆಯೋ ಗೊತ್ತಿಲ್ಲಾ ಆದರೆ ಇಡೀ ನಾಟಕ ಅದ್ಯಾಕೋ ಕಳೆಗಟ್ಟಲಿಲ್ಲ. ಸಿಜಿಕೆ ಸಂಸ್ಥಾಪಿಸಿದರಂಗನಿರಂತರ ಪ್ರೊಡಕ್ಷನ್ ಎಂದರೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಇರುತ್ತದೆ. ನಿರೀಕ್ಷೆಯನ್ನು ನಿರಾಸೆಗೊಳಿಸದಂತೆ ವಿಶಿಷ್ಟ ನಾಟಕವನ್ನು ಕಟ್ಟಿಕೊಡುವ ಜವಾಬ್ದಾರಿ ರಂಗಸಂಘಟಕರು ಹಾಗೂ ರಂಗನಿರ್ದೇಶಕರ ಮೇಲಿದೆ. ದ್ವೇಷ ಹಾಗೂ ಅಸಹಿಷ್ಣುತತೆ ದೇಶದಲ್ಲಿ ಹೆಚ್ಚಿರುವ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಯುದ್ಧದ ನಿರರ್ಥಕತೆ ಹಾಗೂ ದ್ವೇಷದಿಂದಾಗುವ ಸರ್ವನಾಶವನ್ನು ಪರಿಣಾಮಕಾರಿಯಾಗಿ ಹೇಳುವ ನಾಟಕದ ಅಗತ್ಯವಿದೆ. ’ಸಹದೇವನಾಟಕವನ್ನು ನಿರ್ದೇಶಕರು ಇನ್ನೊಮ್ಮೆ ಮರುಪರಿಶೀಲಿಸಿ ಒಟ್ಟಂದದಲಿ ಇಡೀ ಪ್ರಯೋಗವನ್ನು ಮರಳಿ ಕಟ್ಟಿಕೊಟ್ಟರೆ ರಂಗಭೂಮಿಗೆ ಒಂದು ಅತ್ಯುತ್ತಮ ನಾಟಕ ದಕ್ಕುವುದರಲ್ಲಿ ಸಂದೇಹವಿಲ್ಲ.


ರಂಗವಿನ್ಯಾಸದಲ್ಲೂ ಅಂತಹ ವಿಶೇಷತೆ ಏನಿಲ್ಲ. ಹಾವಿನಂತೆ ಮಣಿದ ವಾಕಿಂಗ್ ಡಯಾಸ್ ಹೊರತಾಗಿ. ಶಶಿಧರ್ ಅಡಪರಂತಹ ವಿಶ್ವವಿಖ್ಯಾತ ಕಲಾನಿರ್ದೇಶಕರ ಪ್ರತಿಭೆಯನ್ನು ಬಳಸಿಕೊಂಡಿದ್ದರೆ ನಿರ್ದೇಶಕರು ಪ್ರೇಕ್ಷಕರ ಮನದಾಳದಲ್ಲಿ ಉಳಿಯಬಹುದಾದ ಹಾಗೂ ನಾಟಕದ ಬಹುತೇಕ ದೃಶ್ಯಗಳಿಗೆ ಪೂರಕವಾಗಿ ಬಳಕೆಯಾಗಬಹುದಾದ ಸೆಟ್ ಮಾಡಿಸಬಹುದಾಗಿತ್ತು. ಬಿ.ವಿಠ್ಠಲ್ (ಅಪ್ಪಯ್ಯ) ರವರ ಬೆಳಕಿನ ವಿನ್ಯಾಸವೂ ದೃಶ್ಯದ ಮೂಡಿಗೆ ಸರಿಯಾಗಿ ಸ್ಪಂದಿಸಿದ್ದರೆ ನೋಡುಗರಲ್ಲಿ ಮೂಡ್ ಕ್ರಿಯೇಟ್ ಆಗುತ್ತಿತ್ತು. ಬಹುತೇಕ ಕಪ್ಪು ಬಣ್ಣದ ಸ್ಕ್ರೀನ್ ಹಾಗೂ ವಸ್ತ್ರವಿನ್ಯಾಸದ ಮೇಲೆ ಬಣ್ಣ ಬಣ್ಣದ ಬೆಳಕುಗಳನ್ನು ರಸಭಾವಗಳಿಗೊರಗಾಗಿ ಬಿಟ್ಟಾಗ ನಾಟಕದ ದೃಶ್ಯಗಳಿಗೆ ಬ್ಲೆಂಡ್ ಆಗಲು ಅಸಾಧ್ಯವಾಗುತ್ತದೆ. ಬೆಳಕಿನ ಉದ್ದೇಶವೇ ಪಾತ್ರ ಹಾಗೂ ಸನ್ನಿವೇಶಕ್ಕೆ ಪೂರಕವಾಗಿ ಮೂಡ್ ಸೃಷ್ಟಿಸುವುದು. ಉದ್ದೇಶ ಸಾಧಿಸಲು ಬೆಳಕಿನ ತಂತ್ರಗಳ ಬಳಕೆಯಲ್ಲಿ ಇನ್ನೂ ಬೆಳಕಿನ ತಜ್ಞರು ಶ್ರಮವಹಿಸಬೇಕಿದೆ. ಪ್ರೇಕ್ಷಕರಲ್ಲಿ ಮೂಡ್ ಸೃಷ್ಟಿಸುವ ಇನ್ನೊಂದು ಮಹತ್ತರವಾದ ಸಾಧನ ಹಿನ್ನೆಲೆ ಸಂಗೀತ. ಆದರೆ ನಟರ ಸಂಭಾಷಣೆಯೊಂದಿಗೆ ಓವರ್ಲ್ಯಾಪ್ ಆಗುವಂತಹ ಆಲಾಪಗಳು ಹಾಗೂ ಹಿನ್ನಲೆ ಸಂಗೀತ ಕೇಳುಗರಿಗೆ ಕಿರಿಕಿರಿ ಮಾಡಿದ್ದಂತೂ ಸತ್ಯ. ಸಂಗೀತ ನಿರ್ವಹಣೆಯಲ್ಲಿ ಮಾತ್ರ ಯಾವಾಗಲೂ ಖರಾರುವಕ್ಕತೆಯನ್ನು ಕಾಪಾಡಿಕೊಂಡರೆ ನಾಟಕ ಸೊಗಸು. ಒಂಚೂರು ಹೆಚ್ಚು ಕಡಿಮೆಯಾದರೂ ನೋಡುಗರಿಗೆ ರಸಭಂಗವಾಗುವುದರಲ್ಲಿ ಸಂದೇಹವಿಲ್ಲ. ಕಲಾಕ್ಷೇತ್ರದ ಸೌಂಡ್ ಸಿಸ್ಟಂ ಅವ್ಯವಸ್ಥೆಯೂ ಸಂಗೀತ ರಸಸ್ವಾದ ಕೆಡಿಸಲು ಅಪಾರ ಕೊಡುಗೆ ಕೊಡುತ್ತದೆ ಎನ್ನುವುದರಲ್ಲೂ ವಿಶೇಷವಿಲ್ಲಕಾಸ್ಟೂಮ್ಸಗಳಂತೂ ಯಾವುಯಾವುದೋ ದೇಶದ ಯಾವುಯಾವುದೋ ಕಾಲಘಟ್ಟದ ಸಮ್ಮಿಶ್ರಣದಂತಿದೆ. ಇಲ್ಲಿ ಗ್ರೀಕ್ ಶೈಲಿಯ ಕಾಸ್ಟೂಮ್ಸ್ ಗಳಿಂದ ಹಿಡಿದು ರಾಜಸ್ತಾನಿ ಮಾದರಿ ವೇಶಭೂಷಣಗಳೂ ಇವೆ. ಜೊತೆಗೆ ಪೈಜಾಮ ಜುಬ್ಬಾದ ಯುವಕ, ಲಂಗಾ ದಾವಣಿಯ ಹುಡುಗಿಯೂ ಇಲ್ಲಿ ಮೂಡಿಬಂದಿದ್ದಾರೆ. ಪ್ರೇಕ್ಷಕರು ತಮ್ಮ ಮನೋಭೂಮಿಕೆಯಲ್ಲಿನ ಮಹಾಭಾರತವನ್ನು ಸಂಪೂರ್ಣ ಮರೆತು ಕಾಲಾತೀತವಾದ ಕಥಾನಕವಲ್ಲದ ಸನ್ನಿವೇಶಗಳನ್ನು ಹೊಸದಾಗಿ ನೋಡುವುದನ್ನು ರೂಢಿಸಿಕೊಂಡರೆ ನಾಟಕ ಸಂವಹನವಾಗಬಹುದೇನೋ..?

ಸಹದೇವ ನಾಟಕವು ಹೊರನೋಟದಲ್ಲಿ ಬಲು ಚೆಂದವಿದೆಯಾದರೂ ರಂಗಪಠ್ಯದಲ್ಲಿ ಬಂಧವಿಲ್ಲ ದೃಶ್ಯ ಸಂಯೋಜನೆಯಲ್ಲಿ ಸಂಯಮವಿದೆ ಆದರೆ ದೃಶ್ಯಗಳ ನಡುವೆ ಸಂಬಂಧಗಳಿಲ್ಲ. ಸಂಭಾಷಣೆಗಳಲ್ಲಿ ಕಾವ್ಯಾತ್ಮಕತೆ ಇದೆ ಆದರೆ ಅವು ದೃಶ್ಯಗಳಲ್ಲಿ ಪ್ರತಿಫಲಿಸಲಿಲ್ಲ. ರೂಪಕಗಳು ಬೇಕಾದಷ್ಟಿವೆ ಆದರೆ ಸಂಕೇತಗಳ ಭಾರಕ್ಕೆ ಇಡೀ ನಾಟಕವೇ ಕುಸಿಯುವಂತಿದೆ. ಅನೇಕಾನೇಕ ಗೊಂದಲ ಗೋಜಲುಗಳ ನಡುವೆ ನಾಟಕ ಯಾರಿಗೆ ಎಷ್ಟು ದಕ್ಕಿತೋ ಗೊತ್ತಿಲ್ಲಾ. ಆದರೆ ಕೊಟ್ಟ ಕೊನೆಗೆಮಲ್ಲಿಗೆಪಾತ್ರ ಹೇಳುವ ಮಾತುಗಳು ಮಾತ್ರ ಪ್ರೇಕ್ಷಕರ ಮರ್ಮಕ್ಕೆ ಮುಟ್ಟುವಂತಹವು. ನಾಟಕದ ಆಶಯದ ಸಾಕಾರ ಆಗೋದೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. "ಸಹದೇವನಿಗೆ ಎಲ್ಲ ಗೊತ್ತಿದ್ದೂ ಏನೂ ಮಾಡದ ಅಸಹಾಯಕನಾಗಿ ಸುಮ್ಮನಾಗಿ ಬಹುದೊಡ್ಡ ದುರಂತಕ್ಕೆ ಸಾಕ್ಷಿಯಾದ. ಅದೇ ಸಹದೇವನ ರೀತಿ ಇಲ್ಲಿ ನೆರೆದ ಜನಗಳೂ ಯುದ್ಧ ದ್ವೇಷ ಹಿಂಸೆಗಳನ್ನು ಸಹಿಸಿಕೊಂಡಿದ್ದರೆ ಮನುಕುಲದ ನಾಶಕ್ಕೆ ಕಾರಣವಾಗಬೇಕಾಗುತ್ತದೆ." ಎಂದು ಮಲ್ಲಿಗೆ ಪಾತ್ರವು ಪ್ರೇಕ್ಷಕರಿಗೆ ನೇರವಾಗಿ ಹೇಳುತ್ತದೆ. ನೋಡುಗರಲ್ಲಿ  ಆಲೋಚನೆ ಮಾಡುವಂತೆ ಪ್ರೇರೇಪಿಸುತ್ತದೆ. ಇದೇ ನಾಟಕದ ಮೂಲ ಆಶಯವೂ ಆಗಿದೆ. ತನ್ನ ಉದ್ದೇಶದಲ್ಲಿಸಹದೇವಸಫಲವಾಗಿದೆ.


ನಾಟಕವೊಂದಕ್ಕೆ ಕೇವಲ ಸದಾಶಯ ಹಾಗೂ ಗುರಿಯೊಂದಿದ್ದರೆ ಸಾಲದು, ಗುರಿ ತಲುಪಬೇಕಾದ ದಾರಿಯಲ್ಲೂ ಸ್ಪಷ್ಟತೆ ಇರಬೇಕಾಗುತ್ತದೆ. ಅಸ್ಪಷ್ಟ ಸನ್ನಿವೇಶಗಳ ಅನಿರ್ಧಿಷ್ಟ ದೃಶ್ಯಗಳಲ್ಲಿ ಪ್ರೇಕ್ಷಕನ ಪಯಣವನ್ನು ಅಸಹನೀಯಗೊಳಿಸದೇ  ಒಂದಿಷ್ಟು ಗ್ರಹಿಕೆಯೋಗ್ಯಗೊಳಿಸುವುದರಿಂದ ನಾಟಕ ಹೆಚ್ಚು ಜನರಿಗೆ ಸುಲಬಕ್ಕೆ ದಕ್ಕುವಂತಾಗುತ್ತದೆ. ಸರಳಗೊಳಿಸುವುದು ಅಂದರೆ ಎಲ್ಲವನೂ ಸರಳೀಕೃತಗೊಳಿಸುವುದು ಎಂದರ್ಥವಲ್ಲ. ಹೇಳುವುದನ್ನೇ ಗೊಂದಲಗಳಿಲ್ಲದಂತೆ ಹೇಳಿದರೆ, ಕಟ್ಟುವ ದೃಶ್ಯಗಳನ್ನು ಒಂದು ಕ್ರಮದಲ್ಲಿ ಜೋಡಿಸಿದರೆ ನಾಟಕದ ಮೂಲಕ ನೋಡುಗನನ್ನು ರಂಗಾಶಯದತ್ತ ಕರೆದುಕೊಂಡು ಹೋಗಬಹುದಾಗಿದೆ. ಪ್ರಯೋಗದಿಂದ ಪ್ರಯೋಗಕ್ಕೆ ಅಭಿನಯ, ಸಂಗೀತ ಹಾಗೂ ಬೆಳಕಿನ ನ್ಯೂನ್ಯತೆಗಳು ಸರಿಹೋಗುತ್ತವೆ. ಆದರೆ ನಾಟಕದ ಹಂದರವನ್ನು ಒಂದು ಬಂಧದಲ್ಲಿಟ್ಟು ಚೆಂದಗೊಳಿಸುವ ಕೆಲಸವನ್ನು ನಿರ್ದೇಶಕರೇ ಮಾಡಬೇಕಾಗುತ್ತದೆ. ನಿಟ್ಟಿನಲ್ಲಿ ಜೋಸೆಫ್ ರವರು ಆಲೋಚಿಸಿ ಇಡೀ ನಾಟಕವನ್ನು ಮರುಪರಿಶೀಲಿಸಿ ಪರಿಷ್ಕರಣೆಗೊಳಿಸಿದರೆಸಹದೇವವಿಶಿಷ್ಟ ನಾಟಕವಾಗುವುದರಲ್ಲಿ ಸಂದೇಹವೇ ಇಲ್ಲ
 

ನಾಟಕಕಾರ ಬಸವರಾಜ ಸೂಳೇರಿಪಾಳ್ಯ :  ಗ್ರಾಮೀಣ ಹಿನ್ನಲೆಯಿಂದ ಬಂದ ಬಸವರಾಜ್ ರವರು ಸಂವೇದನಾಶೀಲ ಕವಿ, ಬರಹಗಾರ, ರಂಗರೂಪಾಂತರಕಾರ ಹಾಗೂ ನಾಟಕಕಾರ. ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ ಇವರು ವಾಸ್ತುಶಿಲ್ಪಿಯಾಗಿ ಕೆಲಸ ಮಾಡಿದ್ದಕ್ಕಿಂತ ಅಕ್ಷರಶಿಲ್ಪಿಯಾಗಿದ್ದೊಂದು ವಿಶೇಷ. ಮಾರ್ಕ್ಸ, ಲೋಹಿಯಾ, ಲಂಕೇಶರ ವಿಚಾರಗಳಿಂದ ಪ್ರಭಾವಿತರಾದ ಸೂಳೇರಿಪಾಳ್ಯರವರು ತಮ್ಮೆಲ್ಲಾ ಬರಹಗಳಲ್ಲಿ ಪ್ರಗತಿಪರತೆಯನ್ನು, ಜನಪರತೆಯನ್ನು ಸೃಜಿಸಿದ್ದಾರೆ. ಜನಪದ ಜಾಣೆಯರ ಕಥೆಗಳು, ನಿದ್ದೆಯಲ್ಲಿ ನಗುವ ಹುಡುಗ ಎನ್ನುವ ಮಕ್ಕಳ ಸಾಹಿತ್ಯವನ್ನೂ ರಚಿಸಿ ಪ್ರಕಟಿಸಿದ್ದಾರೆ. ವಿಶ್ವಾಲಯದ ಆನಾಥ ಮಕ್ಕಳಿಗಾಗಿ ಐದು ಮಕ್ಕಳ ನಾಟಕಗಳನ್ನು ರಚಿಸಿ ಕೊಟ್ಟಿದ್ದಾರೆ. ಒಟ್ಟು ಹನ್ನೊಂದು  ಪ್ರಮುಖ ಕಾದಂಬರಿಗಳನ್ನು ರಂಗರೂಪಗೊಳಿಸಿ ಆಧುನಿಕ ಕನ್ನಡ ರಂಗಭೂಮಿಗೆ ಗಮನಾರ್ಹ ಕೊಡುಗೆಯನ್ನು ಸೂಳೇರಿಪಾಳ್ಯರವರು ಕೊಟ್ಟಿದ್ದಾರೆ. ಶಿವರಾಮ ಕಾರಂತರ ಮೈಮನಗಳ ಸುಳಿಯಲ್ಲಿ, ಲಂಕೇಶರ ಮುಸ್ಸಂಜೆ ಕಥಾ ಪ್ರಸಂಗ, ಶಾಂತರಸರ ಬಡೆಸಾಬು ಪುರಾಣ, ಹಾಲನಹಳ್ಳಿ ಕೃಷ್ಣರವರ ಸುಟ್ಟ ತಿಕದ ದೇವರು, ಅಮರೇಶ ನುಡಗೋಣಿರವರ ನೀರು ತಂದವರು, ಲೋರ್ಕನ ಯರ್ಮಾ, ಡಿ.ಕೆ.ಚೌಟರ ಮಿತ್ತಬೈಲು ಯಮನಕ್ಕ... ಮುಂತಾದ  ರಂಗರೂಪಾಂತರಗೊಂಡ ನಾಟಕಗಳು ರಂಗಸಂಪದ, ರಂಗನಿರಂತರ, ರೂಪಾಂತರದಂತಹ ಪ್ರಮುಖ ಹವ್ಯಾಸಿ ರಂಗತಂಡಗಳು ನಾಟಕಗಳನ್ನು ಪ್ರಯೋಗಿಸಿವೆಸರೋಜಿನಿ, ಕ್ಷ್ಮೀ ಬಾರಮ್ಮ, ತೇಲಿ ಹೋದ ನೌಕೆ, ಅಕ್ಬರ್ ಬೀರಬಲ್, ಮಂಜುಳವರ್ಷಿಣಿ... ಹೀಗೆ ಹದಿನೈದಕ್ಕೂ ಹೆಚ್ಚು ಟಿವಿ ದಾರಾವಾಹಿಣಿಗಳಿಗೆ ಸೂಳೇರಿಪಾಳ್ಯರವರು ಸ್ಕ್ರಿಪ್ಟ್ ಬರೆದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟಗೊಂಡಿವೆ.


ನಿರ್ದೇಶಕ ಜೋಸೆಫ್ ಜಾನ್ :
ಮೂಲತಃ ಕೇರಳದಿಂದ ಬಂದ ಮಲಯಾಳಿ ಭಾಷಿಕ ಜೋಸೆಪ್ರವರು ಆಧುನಿಕ ಕನ್ನಡ ರಂಗಭೂಮಿಯಲ್ಲಿ ಗಮನಾರ್ಹ ನಿರ್ದೇಶಕರೆನಿಸಿಕೊಂಡಿದ್ದು ವಿಶೇಷವಾದಂತಹುದು. ಎಂ. ಪದವೀಧರರಾದ ಜಾನ್ರವರು ಬಾಲ್ಯದಿಂದಲೇ ರಂಗಾಸಕ್ತಿಯನ್ನು ಬೆಳೆಸಿಕೊಂಡು ಹೆಗ್ಗೋಡಿನ ನೀನಾಸಮ್ನಲ್ಲಿ ರಂಗತರಬೇತಿ ಪಡೆದು ಅಭಿನಯ ಹಾಗೂ ರಂಗನಿರ್ದೇಶನದಲ್ಲಿ ತಮ್ಮದೇ ಆದ ವಿಶೇಷ ಶೈಲಿಯನ್ನು ಬೆಳೆಸಿಕೊಂಡಿದ್ದಾರೆ. ಡೆಹ್ರಾಡೂನಿನ ಸಂಚಾರ್ ಪಪ್ಪೆಟ್ ಯುನಿಟ್ನಲ್ಲಿ ಗೊಂಬೆಯಾಟದ ತರಬೇತಿಯನ್ನೂ  ಪಡೆದು ಬಂದಿದ್ದಾರೆ. ಮೂಕಾಭಿನಯ, ಸಂಗೀತ ಕ್ಷೇತ್ರಗಳಲ್ಲೂ ಪರಿಣತಿಯನ್ನು ಸಾಧಿಸಿದ ಜೋಸೆಫ್ ನಾಡಿನಾದ್ಯಂತ ಅನೇಕ ರಂಗಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಸಿನೆಮಾದಲ್ಲೂ ಆಸಕ್ತಿ ಹೊಂದಿರುವ ಜೋಸೆಫ್ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಪ್ರಮುಖ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಗುಂಡಾಯಣ, ಮೂಗು ಮಸಾಲ, ತದ್ರೂಪಿ, ರತ್ನನ್ ಪರಪಂಚ, ಅರಣಿ, ಸ್ವಪ್ನಸಿದ್ಧಿ, ಗುಣಮುಖ, ಪುರುಷಸೂಕ್ತ, ಸೋರೆಬುರುಡೆ ಮುಂತಾದ ಹಲವಾರು ನಾಟಕಗಳನ್ನು ನಿರ್ದೇಶಿಸಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ

                                      ಶಶಿಕಾಂತ ಯಡಹಳ್ಳಿ
   
      
    
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ