ಗುರುವಾರ, ಫೆಬ್ರವರಿ 25, 2016

ಪುರೋಹಿತಶಾಹಿ ಸಂಚು ಬಯಲುಗೊಳಿಸುವ "ಬೆಟ್ಟದ ಚೆಲುವೆ" : ನಾಟಕ ವಿಮರ್ಶೆ :


ಎಲ್ಲಮ್ಮ ಪುರಾಣವನ್ನು ಪರಿಷ್ಕರಿಸಿದ "ಬೆಟ್ಟದ ಚೆಲುವೆ" :



2016, ಫೆ. 22 ಭರತ ಹುಣ್ಣಿಮೆ ದಿನಅಂದು ಉತ್ತರ ಕರ್ನಾಟಕದ ಶಕ್ತಿದೇವತೆ ಸವದತ್ತಿ ಎಲ್ಲಮ್ಮನ ಜಾತ್ರೆ. ಕಾಕತಾಳೀಯವಾಗಿ ಇದೇ ದಿನ ಎಲ್ಲಮ್ಮ ದೇವಿಯ ಕುರಿತ ಆಧುನಿಕ ನಾಟಕವನ್ನು ಬೆಂಗಳೂರಿನಲ್ಲಿ ವಿಶಿಷ್ಟವಾಗಿ ಪ್ರದರ್ಶಿಸಿದ್ದೊಂದು ವಿಶೇಷ. ಈಗಾಗಲೆ ವೃತ್ತಿ ಕಂಪನಿಯವರು, ಪೌರಾಣಿಕ ನಾಟಕದವರು, ಗ್ರಾಮೀಣ ಹವ್ಯಾಸಿ ಕಲಾವಿದರುಗಳು ಎಲ್ಲಮ್ಮ ದೇವಿ ಮಹಾತ್ಮೆ ಕುರಿತು ಬೇಕಾದಷ್ಟು ನಾಟಕ ಪ್ರದರ್ಶನಗಳನ್ನು ಮಾಡಿ ಭಕ್ತಾದಿಗಳನ್ನು ದೇವಿಯ ಕೃಪೆಗೆ ಪಾತ್ರವಾಗಿಸಿದ್ದಾರೆ. ಆದರೆ ಮೊಟ್ಟಮೊದಲ ಬಾರಿಗೆ ಎಲ್ಲಮ್ಮ ದೇವಿಯನ್ನು ಪವಾಡಗಳ ಬಂಧನದಿಂದ ಬಿಡುಗಡೆಗೊಳಿಸಿ, ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಜಿ.ಹೆಚ್.ಹನ್ನೆರಡುಮಠರವರುಬೆಟ್ಟದ ಚೆಲುವೆಹೆಸರಲ್ಲಿ ಏಳು ವರ್ಷಗಳ ಹಿಂದೆ ನಾಟಕವನ್ನು ರಚಿಸಿದ್ದು ಈಗ ಮಾಲತೇಶ ಬಡಿಗೇರರ ನಿರ್ದೇಶನದಲ್ಲಿ ರಂಗದಂಗಳದಲ್ಲಿ ಪ್ರದರ್ಶನಗೊಂಡಿತು.
 
ಶ್ರೀ ವಿವೇಕಾನಂದ ಕಲಾಕೇಂದ್ರವು ಫೆ.22 ರಿಂದ 27ರವರೆಗೆ ಆರು ದಿನಗಳರಂಗಸಂಭ್ರಮರಂಗೋತ್ಸವವನ್ನು ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಆಯೋಜಿಸಿದೆ. ಫೆ.22ರಂದು ಎಸ್.ಎಸ್.ಎಂ.ಆರ್.ವಿ ಪದವಿ ಕಾಲೇಜಿನರಂಗಾಂತರಂಗತಂಡದ ವಿದ್ಯಾರ್ಥಿ ಕಲಾವಿದರುಬೆಟ್ಟದ ಚೆಲುವೆನಾಟಕವನ್ನು ಪ್ರದರ್ಶಿಸಿ ನೋಡುಗರನ್ನು ಬೆರಗುಗೊಳಿಸಿದರು.


ಏಳು ಸಾವಿರ ಶಿಷ್ಯರ ಪಡೆ ಹೊಂದಿದ ಕೋಪಿಷ್ಟ ಮುನಿ ಜಮದಗ್ನಿಗೆ ಬ್ರಹ್ಮಶ್ರೀಯಾಗುವ ಹಂಬಲ. ಕಾಡಿನ ಒಡನಾಡಿಗಳಾದ ಬುಡಕಟ್ಟು ಜನರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಲ್ಲಿ ಪುರೋಹಿತಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ. ಇದನ್ನು ಜಮದಗ್ನಿಯ ಪತ್ನಿ ರೇಣುಕಾ ವಿರೋಧಿಸುತ್ತಾಳೆ. ಶ್ರಮಿಕ ಶೂದ್ರರು ರೇಣುಕಾಳನ್ನು ತಮ್ಮ ರಕ್ಷಣೆಗೆ ಬಂದ ದೇವತೆ ಎಂದು ತಿಳಿದು ಗುಣಗಾನ ಮಾಡುತ್ತಾರೆ. ಪಿತೃಪ್ರಧಾನತೆಯ ಹರಿಕಾರರಾದ ಜಮದಗ್ನಿಗೆ ಮಡದಿಯ ಕೀರ್ತಿ ಸಹಿಸಲಸಾಧ್ಯವಾಗಿ ಅಸಹನೆಯಿಂದ ಕುದಿಯುತ್ತಾನೆಗಂಧರ್ವ ದಂಪತಿಗಳು ಜಲಕ್ರೀಡೆಯಾಡುವಾಗ ಮೈಮರೆತ ರೇಣುಕಾಳ ಕೊಡ ನೀರಲ್ಲಿ ಕೊಚ್ಚಿಹೋಗಿದ್ದನ್ನೇ ನೆಪವಾಗಿಸಿಕೊಂಡು ಸಿಟ್ಟಿಗೆದ್ದ ಜಮದಗ್ನಿ ಕುಷ್ಟರೋಗಿಯಾಗು ಎಂದು ಮಡದಿಗೆ ಶಾಪ ಕೊಡುತ್ತಾನೆ. ಶರಣರಿಬ್ಬರು ಬಂದು ರೇಣುಕಾಳನ್ನು ಕಾಡುಜನರಲ್ಲಿಗೆ ಕರೆದೊಯ್ಯತ್ತಾರೆ. ಶೂದ್ರರನ್ನು ರಕ್ಷಿಸಿ ತನ್ನ ವಿಸ್ತರಣೆಗೆ ಅಡ್ಡಿಮಾಡಿ ತನ್ನ ವೈರಿಗಳಾದ ಕಾಡುಜನರೊಂದಿಗೆ ಬದುಕುತ್ತಿರುವ  ರೇಣುಕಾಳನ್ನು ಕೊಲ್ಲಲು ಜಮದಗ್ನಿಯು ಪುತ್ರ ಪರಶುರಾಮನಿಗೆ ಆದೇಶಿಸುತ್ತಾನೆ. ಆತ ತನ್ನ ಕೊಡಲಿಯಿಂದ ತಾಯಿಯ ರುಂಡ ಚೆಂಡಾಡುತ್ತಾನೆ. ಕೊನೆಗೆ ತನ್ನ ಪುರಷಹಂಕಾರದಿಂದಾದ ತಪ್ಪಿಗೆ ಜಮದಗ್ನಿ ಪಶ್ಚಾತ್ತಾಪ ಪಡುತ್ತಾನೆ. "ಹೆಂಗಸರನ್ನು ಕೀಳಾಗಿ ಕಾಣುವ ಗಂಡಸರಿರುವವರೆಗೂ ಜಮದಗ್ನಿ ಹೆಸರು ಅಜರಾಮರ" ಎಂದು ಗೋಳಾಡುತ್ತಾನೆ. ರೇಣುಕಾ ಎಲ್ಲಮ್ಮ ದೇವತೆಯಾಗಿ ಶ್ರಮಜೀವಿಗಳೆದೆಯಲ್ಲಿ ಶಾಶ್ವತ ದೇವಿಯಾಗುತ್ತಾಳೆ. ಇಲ್ಲಿಗೆ ನಾಟಕ ಮುಗಿಯುತ್ತದೆ... ಪೌರಾಣಿಕ ಕಥೆಯನ್ನು ಹೊಸದಾಗಿ ಕಟ್ಟಿಕೊಡಲು ಪ್ರಯತ್ನಿಸುತ್ತದೆ.

ಎಲ್ಲಮ್ಮನ ಕಥನವೆಂದರೆ ಪವಾಡಗಳ ಕಂತೆಯೇ ಆಗಿದೆ. ’ರಾಜರಾಣಿಯರ ರಾಸಲೀಲೆಯನ್ನು ನೋಡಿ ಮೋಹಗೊಂಡು ತಾನೂ ರಾಣಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ರೇಣುಕಾ ಮನದಲ್ಲಿ ಅಂದುಕೊಂಡಾಗ ಆಕೆಯ ಮಣ್ಣಿನ ಕೊಡ ಕರಗಿ ಮರಳಾಯಿತು, ಸುತ್ತಿದ ಸಿಂಬೆ ಹಾವಾಗಿ ಹರಿದೋಯಿತು. ಖಾಲಿ ಕೈಲಿ ಬಂದ ಮಡದಿಯ ಮೇಲೆ ಸಂದೇಹ ತಾಳಿದ ಜಮದಗ್ನಿ ತನ್ನ ನೂರು ಮಕ್ಕಳಿಗೆ ತಾಯಿಯ ತಲೆ ಕಡಿಯಲು ಆದೇಶಿಸಿದಾಗ ನಿರಾಕರಿಸಿದ ಮಕ್ಕಳನ್ನೆಲ್ಲಾ ನಿಷ್ಕರುಣೆಯಿಂದ ಶಾಫಕೊಟ್ಟು ಬೂದಿಯಾಗಿಸುತ್ತಾನೆ. ಕೊನೆಗೆ ಪರುಶುರಾಮ ತಾಯಿಯ ತಲೆ ಕಡಿದು ಪಿತೃವಾಕ್ಯ ಪರಿಪಾಲಿಸಿ ತಂದೆ ಕೊಟ್ಟ ವರವನ್ನು ತಾಯಿಯ ಪುನರ್ಜಿವಗೊಳಿಸಲು ಬಳಸಿ ರೇಣುಕಳನ್ನು ಬದುಕಿಸುತ್ತಾನೆಂಬುದು..’ ಎಲ್ಲಮ್ಮನ ಕುರಿತ ಪವಾಡಗಳು ಸಮಸ್ತ ಪುರಾಣಗಳಲ್ಲಿ ಹಾಗೂ ಎಲ್ಲಮ್ಮನ ಆರಾಧಕರಾದ ಜೋಗಿತಿ ಪದಗಳಲ್ಲಿ ದಾಖಲಾಗಿವೆಆದರೆ.... ಎಲ್ಲಾ ಪುರಾಣಗಳನ್ನು ಅಧ್ಯಯನ ಮಾಡಿ ಪವಾಡಗಳನ್ನೆಲ್ಲಾ ಪಕ್ಕಕ್ಕಿಟ್ಟು ವಾಸ್ತವಕ್ಕೆ ಹತ್ತಿರ ಎನ್ನುವಂತಹ ರೀತಿಯಲ್ಲಿ ಹನ್ನೆರಡುಮಠರವರುಬೆಟ್ಟದ ಚೆಲುವೆನಾಟಕವನ್ನು ರಚಿಸಿದ್ದು ಅನನ್ಯವೆನಿಸುತ್ತದೆ. ಪುರಾಣಗಳಲ್ಲಿರುವ ಮಿಥ್ಯೆಗಳನ್ನು ಮುರಿದು ಸಮಕಾಲೀನಗೊಳಿಸವುದರಲ್ಲಿ ನಾಟಕಕಾರರು ಬಹುತೇಕ ಯಶಸ್ವಿಯಾಗಿದ್ದಾರೆ.


ಪೌರಾಣಿಕ ಪಾತ್ರಗಳು ಎಂದಾಗ ವೈಭವೀಕರಣ ಎನ್ನುವುದು ಮಾಮೂಲು. ಆದರೆ ನಾಟಕದ ವಿಶೇಷತೆ ಏನೆಂದರೆ ಇಲ್ಲಿ ಯಾವ ಪಾತ್ರಗಳೂ ವಿಜ್ರಂಭನೆಗೊಂಡಿಲ್ಲ. ಜಮದಗ್ನಿ ಮುನಿ ಪುರಾಣಗಳಲ್ಲಿ ಅದೆಷ್ಟೇ ಪ್ರಭಾವಶಾಲಿ ಋಷಿಯಾಗಿದ್ದರೂ ಮನುಷ್ಯರ ಎಲ್ಲಾ ದೌರ್ಬಲ್ಯಗಳನ್ನು ಹೊಂದಿದ್ದಾನೆಂಬುದನ್ನು ನಾಟಕದಲ್ಲಿ ತೋರಿಸಲಾಗಿದೆ. ಜಮದಗ್ನಿಯನ್ನು ಆತನ ಆಶ್ರಮದ ಸನ್ಯಾಸಿನಿಯರೇ ಲೇವಡಿ ಮಾಡುತ್ತಾರೆ. ಆತನನ್ನೂ ಸಾಮಾನ್ಯ ಮನುಷ್ಯರ ಹಾಗೆ ಮೆನಸಿನಕಾಯಿ ಈರುಳ್ಳಿ ಪ್ರೀಯನನ್ನಾಗಿಸಿದ್ದಾರೆ. ಋಷಿಯ ಜನವಿರೋಧಿತನವನ್ನು, ಮಹಿಳಾ ವಿರೋಧಿತನವನ್ನು ನಾಟಕದಾದ್ಯಂತ ವಿಡಂಬಣೆಗೊಳಿಸಲಾಗಿದೆ. ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದ ಮಹರ್ಷಿಯೊಬ್ಬನ ಸಣ್ಣತನಗಳನ್ನು ನಾಟಕ ಬಯಲುಗೊಳಿಸುತ್ತದೆಮನುಷ್ಯರನ್ನು ಮನುಷ್ಯರನ್ನಾಗಿ ತೋರಿಸುವ ಪ್ರಯತ್ನದಲ್ಲಿ ನಾಟಕಕಾರ ಹಾಗೂ ನಿರ್ದೇಶಕ ಇಬ್ಬರೂ ಗೆದ್ದಿದ್ದಾರೆ. ಪೌರಾಣಿಕ ಹುಸಿ ಪರಿಕಲ್ಪನೆಗಳನ್ನು ಒಡೆದು ಹಾಕಿದ್ದಾರೆ. ಪ್ರಸ್ತುತ ರಂಗಭೂಮಿ ಮಾಡಬೇಕಾದದ್ದೇ ಇದನ್ನು. ಕಥಾಕಥಿಯ ಪುರೋಹಿತಶಾಹಿ ಹಿತಾಸಕ್ತಿ ಪ್ರಣೀತ ಮಿಥ್ಗಳನ್ನು ಮುರಿದು ವಸ್ತುನಿಷ್ಟತೆಗೆ ಪೂರಕವಾಗಿ ಹೇಗೆ ಮರಳಿ ಕಟ್ಟಬೇಕು ಎನ್ನುವುದಕ್ಕೆ ನಾಟಕ ಮಾದರಿಯಾಗಿದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಶೋಷಣೆಯ ನೆಲೆಗಳನ್ನು   ನಾಟಕ ಬಯಲಾಗಿಸುತ್ತದೆ. ಸ್ವತಃ ರೇಣುಕಾ ಪಾತ್ರವೇ ಗಂಡನ ಶ್ರೇಷ್ಠತೆಯ ದಾಹ ಹಾಗೂ ದರ್ಪವನ್ನು ವಿಡಂಬಿಸುತ್ತದೆ. ’ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆಗಳೆಲ್ಲಾ ವಿನಾಶಕ್ಕೆಎಂದು ರೇಣುಕಾ ಪ್ರತಿಭಟಿಸುತ್ತಾಳೆ. "ಬ್ರಹ್ಮಶ್ರೀ ಎನ್ನಿಸಿಕೊಳ್ಳುವ ತೆವಲು ಸೇಂದಿ ಸರಾಯಿಗಿಂತ ದೊಡ್ಡ ಚಟ".... "ಗಂಡನ ಉಗುಳನ್ನು ಪಂಚಾಮೃತವೆಂದು ತಿಳಿಯೋಳೇ ಪತಿವೃತ್ತೆ...." ಎಂದು ಜಮದಗ್ನಿಯ ಆಶ್ರಮದ ಸನ್ಯಾಸಿನಿಯರು ಶ್ರೇಷ್ಠತೆಯ ವ್ಯಸನದಲ್ಲಿ ಬೀಗುತ್ತಿದ್ದ ಜಮದಗ್ನಿಯನ್ನು ಲೇವಡಿ ಮಾಡುತ್ತಾರೆ. ಆಶ್ರಮವಾಸಿಗಳಾದ ಸನ್ಯಾಸಿನಿಯರು ತಮ್ಮ ಪರಮ ಗುರುವಿನ ಕುರಿತು ಮುದಿಯಾ, ಸಿಡುಕ ಎಂದೆಲ್ಲಾ ಲೇವಡಿ ಮಾಡುವುದು ಅತಿರೇಕವೆನಿಸಿದರೂ ಜಮದಗ್ನಿಯಂತಹ ಮಹಿಳಾ ವಿರೋಧಿ ಋಷಿಗೆ ಹೆಂಗಸರು ಬೈದದ್ದು ನೋಡುಗರಲ್ಲಿ ಸಂಚಲನವನ್ನುಂಟುಮಾಡುವಂತಿದೆ.

ಬೆಟ್ಟದ ಚೆಲುವೆನಾಟಕವು ಎಲ್ಲಮ್ಮನ ಕಥೆ ಹೇಳುತ್ತಲೇ ಸನಾತನ ವರ್ಗಸಂಘರ್ಷವನ್ನು ತೋರಿಸುತ್ತದೆ. ಪುರೋಹಿತಶಾಹಿಗಳು ಕಾಡಿಗೆ ಬೆಂಕಿ ಇಟ್ಟು, ಕಾಡನ್ನು ಸುಟ್ಟು ಅಲ್ಲಿರುವ ಕಾಡುವಾಸಿಗಳನ್ನು ನಾಶಮಾಡಿದ್ದು ಹಾಗೂ ಇದು ನಾಡಿನ ವಿಸ್ತರಣೆಯ ತಂತ್ರಗಾರಿಕೆಯಾಗಿರುವುದು ಮನುಕುಲದ ಇತಿಹಾಸವನ್ನು ಬಲ್ಲ ಎಲ್ಲರಿಗೂ ಗೊತ್ತಿದೆ. ನಾಡು ಕಾಡಿನ ನಡುವಿರುವ ಸಂಘರ್ಷವನ್ನು ನಾಟಕ ಬಲು ಸೊಗಸಾಗಿ ಕಟ್ಟಿಕೊಡುತ್ತದೆ. ಕಾಡಲ್ಲಿ ಆಶ್ರಮ ಕಟ್ಟಿ, ಶಿಷ್ಯಪಡೆಯನ್ನು ಹುಟ್ಟು ಹಾಕುವ ಬ್ರಾಹ್ಮಣ ವರ್ಗವು ಕಾಡಿನ ಶ್ರಮಿಕವರ್ಗದವರ ಮೇಲೆ ಮಾಡುವ ಹಿಂಸೆ ಹಾಗೂ ಶೋಷಣೆಯನ್ನು ನಾಟಕ ತೋರಿಸುತ್ತದೆ. ಮೇಲ್ವರ್ಗದವಳಾಗಿದ್ದೂ ಹಿಂಸೆಯನ್ನು ವಿರೋಧಿಸಿ ಕಾಡುಜನರ ಪ್ರಾಣವನ್ನು ಉಳಿಸುವ ರೇಣುಕಾಳು ಕೆಳವರ್ಗದವರ ಪಾಲಿಗೆ ಎಲ್ಲಮ್ಮ ದೇವಿಯಾಗುತ್ತಾಳೆ. ಕಾಡು-ಕೊಳ್ಳದ ರಕ್ಷಣೆಗಾಗಿ ತನ್ನ ಮಗ ಪರಶುರಾಮ ಹಾಗೂ ಪತಿ ಜಮದಗ್ನಿಯ ವಿರೋಧವನ್ನು ಕಟ್ಟಿಕೊಂಡ ರೇಣುಕಾಳು ತಂದೆ ಮಗನ ಪುರುಷಾಹಂಕಾರಕ್ಕೆ ಬಲಿಯಾಗುತ್ತಾಳೆ. ಶ್ರಮಿಕರ ಹಾಗೂ ಕೆಳವರ್ಗದವರ ಪಾಲಿಗೆ ಅಂದಿನಿಂದ ಇಂದಿನವರೆಗೂ ಎಲ್ಲಮ್ಮ ಶಕ್ತಿದೇವತೆಯಾಗಿದ್ದಾಳೆ. ವರ್ಗಸಂಘರ್ಷವನ್ನು ಪ್ರತಿಭಟಿಸಿ ಗಂಡನ ಶಾಪಕ್ಕೆ ಗುರಿಯಾಗಿ ಮಗನಿಂದ ಹತ್ಯೆಗೊಳಗಾದ ಎಲ್ಲಮ್ಮ ಈಗಲೂ ಉತ್ತರ ಕರ್ನಾಟಕ ಭಾಗದಲ್ಲಿ ಜನಜನಿತಳಾಗಿದ್ದಾಳೆ. ಅಸಂಖ್ಯಾತ ಭಕ್ತರನ್ನು ಹೊಂದಿದ್ದಾಳೆ. ಬಹುಷಃ ವರ್ಗ ಸಂಘರ್ಷವನ್ನು ವಿರೋಧಿಸಿ ಶೋಷಿತರ ಪರವಾಗಿ ನಿಂತು ಮೇಲ್ವರ್ಗದವರ ಕುತಂತ್ರಕ್ಕೆ ಬಲಿಯಾದ ಬುದ್ಧ, ಬಸವ, ಏಸು, ಗಾಂಧಿ... ಮುಂತಾದ ಮಹನೀಯರ ಸಾಲಿಗೆ ಎಲ್ಲಮ್ಮಳೂ ಸೇರುವಂತೆ ನಾಟಕ ಮೂಡಿಬಂದಿದೆ.

ಆದರೆ... ನಾಟಕಕಾರರು ಅದ್ಯಾಕೋ ಜಮದಗ್ನಿಯಂತಹ ಖಳನಾಯಕನನ್ನೂ ಪಶ್ಚಾತ್ತಾಪದ ಬೆಂಕಿಯಲ್ಲಿ ಉರಿಸಿ ಪುನೀತನನ್ನಾಗಿಸಿದ್ದಾರೆ. "ನಾನು ಒಂದು ಜಾತಿಯನ್ನಷ್ಟೇ ಪ್ರೀತಿಸಿದರೆ, ರೇಣುಕಳು ಸಕಲ ಜಾತಿ ಜನರೂ ಒಂದೇ ಎಂದು ತಿಳಿದ ಜ್ಯೋತಿ.... ಆಕೆ ಮಹಾತಾಯಿ, ಜಗಜ್ಜನನಿ..., ಸಾವನ್ನು ಮೀರಿದ ಶರಣೆ...." ಎಂದೆಲ್ಲಾ ಸತ್ತ ಎಲ್ಲಮ್ಮಳನ್ನು ಹೊಗಳುವ ಜಮದಗ್ನಿ ಸಿಕ್ಕಾಪಟ್ಟೆ ನೊಂದುಕೊಂಡು ಬದಲಾಗುವುದು ಪುರಾಣದ ಪರಿಕಲ್ಪನೆ ಗೊತ್ತಿದ್ದವರಿಗೆ ಆಭಾಸಕಾರಿ ಎನಿಸುತ್ತದೆ. ವರ್ಗಸಂಘರ್ಷದ ಹಿನ್ನೆಲೆಯಲ್ಲಿ ಪುರೋಹಿತಶಾಹಿ ವರ್ಗವು ಶ್ರಮಿಕವರ್ಗದ ಮೇಲೆ ಮಾಡುವ ಆಕ್ರಮಣವನ್ನು ತೋರಿಸುವ ನಾಟಕದ ಉದ್ದೇಶಕ್ಕೆ ಕ್ಲೈಮ್ಯಾಕ್ಸಲ್ಲಿ ಹಿನ್ನೆಡೆಯಾದಂತಿದೆ. ಇಡೀ ನಾಟಕದ ಖಳನಾಯಕನ ಮೇಲೆ ಅನುಕಂಪವನ್ನು ಹುಟ್ಟುವಂತೆ ಚಿತ್ರಿಸಲಾಗಿದೆ. ಆದರೆ ಪುರೋಹಿತಶಾಹಿ ಋಷಿಮುನಿಗಳು ಹೀಗೆ ಪಶ್ಚಾತ್ತಾಪ ಪಟ್ಟು ಪರಿವರ್ತನೆಹೊಂದಿ ಗೋಳಾಡಿದ ಉದಾಹರಣೆಗಳೇ ಮನುಕುಲದ ಪುರಾಣೇತಿಹಾಸಗಳಲ್ಲಿ ಇಲ್ಲವೇ ಇಲ್ಲ. ಆದರೆ ಹನ್ನೆರಡುಮಠರು ವರ್ಗಶತ್ರುವಿಗೂ ಕರುಣೆ ತೋರಿದ್ದಾರೆ. ಎಲ್ಲಮ್ಮನನ್ನು ಎತ್ತರಕ್ಕೇರಿಸುವ ದಾವಂತದಲ್ಲಿ ಎಲ್ಲಮ್ಮನ ಸಾವಿಗೆ ಕಾರಣರಾದವರನ್ನೂ ಕ್ಷಮಾರ್ಹವಾಗಿಸಿದ್ದಾರೆ.

ಆದರೂ ಯಾಕೋ ನಾಟಕ ಇನ್ನೂ ಅಪೂರ್ಣ ಎನ್ನಿಸುವಂತಿದೆ. ಸವದತ್ತಿಯ ಎಲ್ಲಮ್ಮ ಎಂದ ಕೂಡಲೇದೇವದಾಸಿಎನ್ನುವ ಮಹಿಳಾವಿರೋಧಿ ಅನಿಷ್ಟ ಪದ್ಧತಿ ಕಣ್ಮುಂದೆ ಬರುತ್ತದೆ. ಮುತ್ತುಕಟ್ಟಿ ಮಹಿಳೆಯರನ್ನು ದೇವರ ಹೆಸರಲ್ಲಿ ವೇಶ್ಯೆಯರನ್ನಾಗಿ ಮಾಡುವ ಕೆಳವರ್ಗದವರ ಕಂದಾಚಾರವನ್ನು ನಿಲ್ಲಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು  ಸರ್ವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದರೂ, ಈಗಲೂ ಎಲ್ಲಮ್ಮನ ಹೆಸರಲ್ಲಿ ದೇವದಾಸಿ ಪದ್ದತಿ ಕದ್ದುಮುಚ್ಚಿ ಜಾರಿಯಲ್ಲಿದೆ. ಅಸಂಖ್ಯಾತ ಕೆಳವರ್ಗದ ಮಹಿಳೆಯರು ದೇವದಾಸಿಯರಾಗಿ ಪುರುಷರ ಕಾಮುಕತನಕ್ಕೆ ಶತಮಾನಗಳಿಂದ ಬಲಿಯಾಗುತ್ತಲೇ ಬಂದಿದ್ದಾರೆ. ಎಲ್ಲಮ್ಮನ ಕುರಿತ ನಾಟಕದಲ್ಲಿ ಪ್ರಮುಖ ಅಂಶವನ್ನು ನಾಟಕಕಾರರು ಅದ್ಯಾಕೋ ಮರೆಮಾಚಿದ್ದಾರೆ. ಎಲ್ಲಮ್ಮಳು (ರೇಣುಕಾ) ಶ್ರಮಿಕ ವರ್ಗದವರನ್ನು ಮೇಲ್ವರ್ಗದವರ ಶೋಷಣೆಯಿಂದ ಕಾಪಾಡಲು ಪ್ರಯತ್ನಿಸಿ ಜೀವತೆತ್ತಾಗ, ಆಕೆಯನ್ನು ದೇವಿಯನ್ನಾಗಿಸಿದ ಕೆಳವರ್ಗದ ಜನರು ಎಲ್ಲಮ್ಮನ ಹೆಸರಲ್ಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮೈಮಾರಾಟದ ದಂದೆಗೆ ನೂಕುತ್ತಿರುವುದರ ಬಗ್ಗೆಯೂ ನಾಟಕದಲ್ಲಿ ಬೆಳಕು ಚೆಲ್ಲಬೇಕಿತ್ತು. ಹಾಗಾಗಲಿಲ್ಲವೆಂಬುದೇ ನಾಟಕದ ಅಪೂರ್ಣತೆಗೆ ಪ್ರಮುಖ ಕಾರಣವಾಗಿದೆ. ಸಾಮಾಜಿಕ ಸಮಸ್ಯೆಗೆ ಕುರುಡಾಗಿ ಪೌರಾಣಿಕ ಕಥೆ ಹೇಳಿದರೇನು ಪ್ರಯೋಜನ ? ಎನ್ನುವ ಪ್ರಶ್ನೆ ಸೂಕ್ಷ್ಮ ಪ್ರಜ್ಞೆಯ ಪ್ರೇಕ್ಷಕರಲ್ಲಿ ಬಾರದೇ ಇರದು.
     
ಇಷ್ಟೆಲ್ಲಾ ವಾಸ್ತವತೆಯ ದಟ್ಟತೆಯನ್ನು ಗಟ್ಟಿಯಾಗಿ ಕಟ್ಟಿಕೊಡುವ ನಾಟಕದಲ್ಲೂ ಕೆಲವು ಮಿಥ್ಗಳು ಸೇರಿಕೊಂಡಿದ್ದೊಂದು ವಿಪರ್ಯಾಸ. "ನನಗೆ ಇಬ್ಬರು ಗಂಡಂದಿರು, ಒಬ್ಬ ಲೌಕಿಕ ಗಂಡನಾದರೆ ಇನ್ನೊಬ್ಬ ಅಲೌಕಿಕ ಗಂಡ" ಎಂದು ರೇಣುಕಾ ಪಾತ್ರದ ಮೂಲಕ ಹೇಳಿಸುತ್ತಾ ದೃಶ್ಯವೊಂದನ್ನು ರೂಪಕವಾಗಿಸಲಾಗಿದೆ. ಲೌಕಿಕ ಕಥೆಯನ್ನು ಹೇಳುವ ನಾಟಕದಲ್ಲಿ ಅಲೌಕಿಕ ಕಲ್ಪನೆ ಬೇಕಿರಲಿಲ್ಲ. ಕೊಡದ ಬುಡದ ಸಿಂಬೆ ಹಾವಾಗುವ ಪವಾಡವೇ ನಾಟಕದಲ್ಲಿಲ್ಲವಾದರೂ ಸಿಂಬೆ ರೂಪದಲ್ಲಿ ಹಾವನ್ನೇ ಬಳಸಿದ್ದು ಆಭಾಸಕಾರಿಯಾಗಿದೆ. ಪುರೋಹಿತಶಾಹಿ ಮೂಲದ ಬ್ರಾಹ್ಮಣ ವರ್ಗದ ಶಿಷ್ಯರುಗಳು ಕೆಳವರ್ಗದ ದೇವನಾದ ಶಿವನ ತ್ರಿಶೂಲವನ್ನು ಬಳಸಿದ್ದೂ ಸಮಂಜಸವೆನ್ನಿಸುವುದಿಲ್ಲ.   ನಾಟಕದಲ್ಲಿ ಜಲಕ್ರೀಡೆಗಾಗಿ ಬಂದ ಗಂಧರ್ವ ದಂಪತಿಗಳನ್ನು ತೋರಿಸಲಾಗಿದೆ. ಗಂಧರ್ವರ ಪರಿಕಲ್ಪನೆ ಆರ್ಯರದಾಗಿದ್ದು ಬಿಸಿಲುನಾಡಿನಲ್ಲಿರುವ ಎಲ್ಲಮ್ಮನ ಕೊಳ್ಳಕ್ಕೆ ಗಂಧರ್ವರು ಯಾಕೆ ಬಂದರೋ ಗೊತ್ತಿಲ್ಲ. ಎಲ್ಲಮ್ಮನ ಪುರಾಣಗಳಲ್ಲಿ ರಾಜ ರಾಣಿಯರ ಜಲಕ್ರೀಡೆ ಎಂದು ಪ್ರಸ್ತಾವಗಳಿವೆ. ಅದನ್ನು ಬದಲಾಯಿಸಿದ ನಾಟಕಕಾರರು ಇಲ್ಲದ ಕಾಲ್ಪನಿಕ ಗಂಧರ್ವರನ್ನು ತಂದು ನಾಟಕದಲ್ಲಿ ಸೇರಿಸಿದ್ಯಾಕೋ ತಿಳಿಯಲಿಲ್ಲ.


ಬೆಟ್ಟದ ಚೆಲುವೆಎಂದು ಅದ್ಯಾಕೆ ನಾಟಕಕ್ಕೆ ಹೆಸರಿಟ್ಟರೋ ಗೊತ್ತಿಲ್ಲ. ಆದರೆ ನಾಟಕದಲ್ಲಿ ಎಲ್ಲಮ್ಮನ ಚೆಲುವಿಕೆಯ ಬಗ್ಗೆ ವಿವರಣೆಗಳಿಲ್ಲ. ಜೊತೆಗೆ ಏಳುಕೊಳ್ಳದ ಎಲ್ಲಮ್ಮ ಎಂದೆನ್ನುತ್ತಾರೆಯೇ ಹೊರತು ಏಳುಗುಡ್ಡದ ಎಲ್ಲಮ್ಮ ಎನ್ನುವುದಿಲ್ಲ. ಹಾಗೂ ಈಗಾಗಲೇ ಮೈಸೂರಿನ ಚಾಮುಂಡಿ ದೇವಿಯ ಕುರಿತು ಬಂದ ನಾಟಕಕ್ಕೆಬೆಟ್ಟದ ಚೆಲುವೆಎಂದು ಹೆಸರಿಟ್ಟು ಪ್ರದರ್ಶಿಸಲಾಗಿದೆ. ನಾಟಕವು ವಿವಾದಕ್ಕೊಳಗಾಗಿ ಕೋರ್ಟು ಮೆಟ್ಟಲೇರಿತ್ತು. ಈಗಚಾಮಚೆಲುವೆಹೆಸರಲ್ಲಿ ಮಂಡ್ಯ ರಮೇಶರವರು ನೂರಾರು ಪ್ರದರ್ಶಗಳನ್ನು ಮಾಡುತ್ತಿದ್ದಾರೆ. ಕೊಳ್ಳದ ಎಲ್ಲಮ್ಮನನ್ನು ಬೆಟ್ಟದ ಚೆಲುವೆ ಎಂದು ಒಪ್ಪಿಕೊಳ್ಳುವುದು ಎಲ್ಲಮ್ಮನ ಕುರಿತು ಅರಿವಿರುವವರಿಗೆ ಅದ್ಯಾಕೋ ಸಾಧ್ಯವಾಗುತ್ತಿಲ್ಲ. ಕುರಿತು ನಾಟಕಕಾರರು ಆಲೋಚಿಸಬೇಕಿದೆ.
ಎಸ್.ಎಸ್.ಎಂ.ಆರ್.ವಿ ಪದವಿ ಕಾಲೇಜಿನಲ್ಲಿ ಕಳೆದೆರಡು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿದ್ದವು. ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನೂ ಗಳಿಸಿದ್ದರು. ಅದೇನಾಯಿತೋ ಗೊತ್ತಿಲ್ಲ. ಕಳೆದ ಐದು ವರ್ಷಗಳಿಂದ ನಾಟಕ ನಿರ್ಮಾಣದ ಕೆಲಸ ನಿಂತೇ ಹೋಗಿತ್ತು. ಪ್ರಸ್ತುತ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿಲ್ಕುಮಾರ್ ರವರ ಆಸಕ್ತಿಯಿಂದಾಗಿ ಮತ್ತೆ ಈಗ ನಾಟಕ ನಿರ್ಮಿತಿ ಆರಂಭವಾಗಿದ್ದು ಸಂತಸಕರವಾದ ಸಂಗತಿ. ಮಾಲತೇಶ ಬಡಿಗೇರರಂತಹ ವೃತ್ತಿಪರತೆ ಹೊಂದಿದ ನಿರ್ದೇಶಕರನ್ನು ಕರೆಯಿಸಿ, ಬೇಕಾದ ಅನುಕೂಲತೆಗಳನ್ನೆಲ್ಲಾ ಮಾಡಿಕೊಟ್ಟುಬೆಟ್ಟದ ಚೆಲುವೆಎನ್ನುವ ಚೆಂದದ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿ ಪ್ರದರ್ಶಿಸುತ್ತಿದ್ದಾರೆ. ಮೊದಲ ಬಾರಿಗೆ ರಂಗವೇದಿಕೆ ಹತ್ತಿದ್ದರೂ ಸಹ ನಾಟಕದಲ್ಲಿ ಭಾಗಿಯಾದ ಕಾಲೇಜಿನ ಯುವಕ ಯುವತಿಯರು ಲವಲವಿಕೆಯಿಂದ ನಟಿಸಿ ನೋಡುಗರಲ್ಲಿ ಹರುಷವನ್ನು ತಂದರು. ಜಮದಗ್ನಿಯಾಗಿ ತಮ್ಮ ಅಭಿನಯದಿಂದ ಭಾರ್ಗವ್ ಗಮನಸೆಳೆದರೆ ರೇಣುಕಾ ಎಲ್ಲಮ್ಮನ ಪಾತ್ರದಲ್ಲಿ ನಯನರವರ ನಟನೆ ಒಂಚೂರು ಸಪ್ಪೆ ಎನಿಸಿದರೂ ಪಾತ್ರೋಚಿತವಾಗಿತ್ತು. ಸನ್ಯಾಸಿನಿಯರೆಲ್ಲಾ ತಮ್ಮ ಪಾದರಸದ ಚಲನೆ ಹಾಗೂ ಪಂಚ್ ಡೈಲಾಗ್ಗಳಿಂದಾಗಿ ಪ್ರೇಕ್ಷಕರಿಗೆ ಕಚಗುಳಿಯನ್ನಿತ್ತರು.

ನಾಟಕದಲ್ಲಿ ಗುಂಪನ್ನು ನಿರ್ವಹಿಸಿದ ರೀತಿ ಸೊಗಸಾಗಿ ಮೂಡಿಬಂದಿದೆ. ಅದರಲ್ಲೂ ಗುಂಪು ಕಾದಾಟದ ದೃಶ್ಯಗಳಲ್ಲಿ ಸಂಗೀತದ ಅಬ್ಬರಕ್ಕೆ ತಕ್ಕಂತೆ ನಟರ ಚಲನೆ, ಚಿತ್ರವಿಚಿತ್ರ ಸದ್ದುಗಳು, ಘೋಷಣೆಗಳು ಹಾಗೂ ಚೀತ್ಕಾರಗಳು ನೋಡುಗರಲ್ಲಿ ರೋಮಾಂಚನವನ್ನು ಮೂಡಿಸಿದ್ದಂತೂ ಸುಳ್ಳಲ್ಲ. ಬಡಿಗೇರರ ನಾಟಕ ಅಂದರೆ ಅಬ್ಬರಕ್ಕೆ ಕೊರತೆ ಎಂಬುದಿರುವುದಿಲ್ಲ. ಹೊಸ ನಟ ನಟಿಯರನ್ನು ಬಳಿಸಿಕೊಂಡು ಖರಾರುವಕ್ಕಾಗಿ ಮೂವ್ಮೆಂಟ್ ಹಾಗೂ ಬ್ಲಾಕಿಂಗ್ ಮಾಡಿದ್ದು ನಿರ್ದೇಶಕರ ವೃತ್ತಿಪರತೆಗೆ ಸಾಕ್ಷಿಯಾಗಿದೆ.


ನಾಟಕದ ಸ್ಕ್ರಿಪ್ಟ್ಲ್ಲಿ ಹಿಡಿತವಿದೆ, ಪ್ರೆಸೆಂಟೇಶನಲ್ಲಿ ತುಡಿತವಿದೆ, ಅಭಿನಯದಲ್ಲಿ ಸಂಯಮವಿದೆ... ಆದರೆ ಸಂಗೀತ ಸಂಯೋಜನೆಯಲ್ಲಿ ಒಂಚೂರು ಸಮಸ್ಯೆಯಾಗಿದೆ. ತಾಂತ್ರಿಕವಾಗಿ ಇನ್ನೂ ನಾಟಕ ಸಶಕ್ತವಾಗಬೇಕಿದೆ. ಸಂಗೀತ ಸಂಯೋಜನೆ ನಟರ ಅಭಿನಯಕ್ಕೆ ಸಿಂಕ್ ಆಗಬೇಕಿದೆ. ಪಾತ್ರವೊಂದು ಸಂಭಾಷಣೆಯನ್ನು ಹೇಳುವಾಗ ಹಿನ್ನೆಲೆಯಲ್ಲಿ ಆಲಾಪ ಹಾಗೂ ಸಂಗೀತ ಕೊಟ್ಟರೆ ಕೇಳುಗರಿಗೆ ಕಿರಿಕಿರಿಯಾಗುತ್ತದೆಂಬ ಅರಿವು ಮೇಳದವರಿಗಿರಬೇಕಿದೆ. ಬೆಳಕಿನ ವಿನ್ಯಾಸ (ನವೀನ್ ಮಂಡ್ಯ) ದಲ್ಲಿ ಇನ್ನೂ ಖರಾರುವಕ್ಕತೆಯನ್ನು ರೂಢಿಸಿಕೊಂಡು ಮೂಡಿಗೆ ಅನುಗುಣವಾಗಿ ಬೆಳಕಿನ ಬಣ್ಣಗಳನ್ನು ಬಳಸಬೇಕಿದೆ. ಗಂಧರ್ವರ ಸಮಾಗಮದ ದೃಶ್ಯದಲ್ಲಿ ಬೆಳಕು ಭ್ರಮಾಲೋಕವನ್ನು ಸೃಷ್ಟಿಸಿದ್ದು ಬಲು ಸೊಗಸಾಗಿದೆ. ದೃಶ್ಯಕ್ಕೆ ತಕ್ಕಂತೆ ಸೈಕಿನ ಬಣ್ಣ ಬದಲಾಯಿಸಿದ್ದರೆ ನಾಟಕ ಇನ್ನೂ ಕಳೆಗಟ್ಟುತ್ತಿತ್ತು. ನಾಟಕದಲ್ಲಿ ಸ್ಥಿರವಾದ ಸೆಟ್ ಇದ್ದರೂ ಬಳಸಿದ ಪರಿಕರಗಳು ದೃಶ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿವೆ. ಕಾಸ್ಟೂಮ್ಸ್ಗಳಂತೂ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದವು. ಆದರೆ ಅದ್ಯಾಕೋ ಋಷ್ಯಾಶ್ರಮದ ಬ್ರಾಹ್ಮಣ ಪುರೋಹಿತಶಾಹಿ ವಟುಗಳು ಜಂಗಮರ ರೀತಿಯಲ್ಲಿ ವೇಶಭೂಷಣ ಹಾಕಿಕೊಂಡಿರುವುದು ಆಭಾಸಕಾರಿ ಎನ್ನಿಸುವಂತಿತ್ತು. ಜಮದಗ್ನಿ, ಪರಶುರಾಮ, ಹಾಗೂ ಶಿಷ್ಯರುಗಳ ಮಾತುಗಳಲ್ಲಿ ಬ್ರಾಹ್ಮಣ್ಯತನ ಇದ್ದವೇ ಹೊರತು ಕಾಸ್ಟೂಮ್ಸಗಳ ಮೇಲೆ ಶೈವ ಜಂಗಮದ ಛಾಯೆ ದಟ್ಟವಾಗಿದೆ. ತ್ರಿಶೂಲಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಪಾತ್ರೋಚಿತವಾಗಿ ಕಾಸ್ಟೂಮ್ಸ್ ಬಳಸಿದ್ದರೆ ನಾಟಕದ ಆಶಯಕ್ಕೆ ಇನ್ನೂ ಹೆಚ್ಚು ನ್ಯಾಯ ಸಲ್ಲಿಸಬಹುದಾಗಿತ್ತು. ಪರಶುರಾಮನು ತಾಯಿಯನ್ನು ಕೊಲ್ಲುವುದೋ ಬೇಡವೋ ಎನ್ನುವ ದ್ವಂದ್ವದಲ್ಲಿದ್ದಾಗ ಆತನನ್ನು ಪ್ರಚೋದಿಸಲು ಬಳಸಲಾದ ರುಂಡವಿಲ್ಲದ ದೇಹಗಳ ಗುಂಪಿನ ಸೃಷ್ಟಿ ಅನನ್ಯವಾಗಿ ಮೂಡಿಬಂದಿದೆ.

ಉತ್ತರ ಕರ್ನಾಟಕದ ಭಾಷೆ ಆಕರ್ಷಕವಾಗಿ ಬಳಕೆಯಾಗಿದೆ. ಆದರೆ ವಿಶಿಷ್ಟ ಭಾಷಾ ಶೈಲಿಗೆ ಬೆಂಗಳೂರು ಮೂಲದ ನಟ-ನಟಿಯರ ನಾಲಿಗೆ ಪಳಗಬೇಕಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಭಾಷಾ ಶೈಲಿಗಳು ಇಲ್ಲಿ ಕಲಸು ಮೇಲೋಗರವಾಗಿದ್ದು ಯಾವುದೇ ಒಂದು ಶೈಲಿಗೂ ನ್ಯಾಯ ಸಿಗದಂತಾಗಿದೆ. ನಾಟಕಕಾರರು ಹಾಗೂ ನಿರ್ದೇಶಕರು ಉತ್ತರ ಕರ್ನಾಟಕದವರಾಗಿದ್ದು ಭಾಗದ ಭಾಷಾ ಸೊಗಡನ್ನು ಕಲಾವಿದರಿಗೆ ಕಲಿಸಿಕೊಡಬೇಕಾಗಿದೆ. ಹನ್ನೆರಡುಮಠರವರು ನಾಟಕದಾದ್ಯಂತ ಬಳಸಿದ ಭಾಷಾ ಶೈಲಿ ಸೋಜಿಗ ಹುಟ್ಟಿಸುವಂತಿದೆ. ಪ್ರಾಸಬದ್ಧತೆ ಅತಿಯಾದಂತೆನಿಸಿದರೂ ಮಾತಿಗೆ ಮಾರ್ಮಿಕತೆಯನ್ನು ತಂದುಕೊಟ್ಟಿದೆ. ವಿಡಂಬನೆ ಮಾಡುವ ಸಂದರ್ಭದಲ್ಲಿ ಪಂಚ್ ಸಂಭಾಷಣೆ ಬಳಿಸಿದ್ದು ನೋಡುಗರ ತುಟಿಯಲ್ಲಿ ನಗೆ ಹುಟ್ಟಿಸುವಂತಿದೆ.


ಯಲ್ಲಮ್ಮನ ಪುರಾಣ, ಮಹಾತ್ಮೆಗಳ ಕುರಿತು ಕಾಲ್ಪನಿಕ ಕಟ್ಟು ಕಥೆಗಳ ಪವಾಡಜನ್ಯ ನಾಟಕಗಳನ್ನು ಕಂಡ ರಂಗಭೂಮಿಗೆ ವಾಸ್ತವಕ್ಕೆ ಹತ್ತಿರವೆನ್ನಿಸಬಹುದಾದ ರೀತಿಯಲ್ಲಿ ಯಲ್ಲಮ್ಮಳನ್ನು ಅನಾವರಣಗೊಳಿಸಿದ ನಾಟಕದ ಕರ್ತು ಹನ್ನೆರಡುಮಠರವರು ಹಾಗೂ ಅಪರೂಪದ ನಾಟಕವನ್ನು ಆಯ್ದುಕೊಂಡು ನಿರ್ದೇಶಿಸಿದ ಮಾಲತೇಶ ಬಡಿಗೇರ ಇಬ್ಬರೂ ಅಭಿನಂದನಾರ್ಹರು. ಎಲ್ಲಮ್ಮನ ಜೊತೆಜೊತೆಗೆ ತಗಲಾಕಿಕೊಂಡ ಮಹಿಳಾ ಶೋಷಣೆಯ ಅತಿರೇಕವಾದ ದೇವದಾಸಿ ಅನಿಷ್ಟ ಪದ್ದತಿಯ ಕುರಿತೂ ವೈಚಾರಿಕ ದೃಷ್ಟಿಕೋನದಿಂದ ಹೆಚ್ಚುವರಿ ದೃಶ್ಯಸೃಷ್ಟಿ ಮಾಡಿದ್ದರೆ ಅಪೂರ್ಣವೆನ್ನಿಸುವ ಅಪರೂಪದ ನಾಟಕಕ್ಕೆ ಪೂರ್ಣತ್ವ ಬರಬಹುದಾಗಿದೆ. ದೇವದಾಸಿ ಆಚರಣೆಯ ಹಿಂದಿರುವ ಪುರೋಹಿತಶಾಹಿ ಪುರುಷ ಪ್ರಧಾನತೆಯ ಕುತಂತ್ರವನ್ನು ನಾಟಕ ಬಯಲುಗೊಳಿಸಿದ್ದರೆ ಸಾಮಾಜಿಕ ಸಮಸ್ಯೆಯೊಂದರ ವಿರುದ್ಧ ಜನಜಾಗೃತಿ ಮಾಡಿದಂತಾಗುತ್ತಿತ್ತು. ನಿಟ್ಟಿನಲ್ಲಿ ಬೆಟ್ಟದ ಚೆಲುವೆನಾಟಕದ ರೂವಾರಿಗಳು ಯೋಚಿಸುವುದುತ್ತಮ.

ಸಾಹಿತ್ಯ ಕೃಷಿಕ ನಾಟಕಕಾರ ಜಿ.ಹೆಚ್.ಹನ್ನೆರಡುಮಠ : 
ಜಿ.ಹೆಚ್.ಹನ್ನೆರಡುಮಠರವರು ಸಾಹಿತ್ಯಕ್ಷೇತ್ರದ ಬಹುತೇಕ ವಿಭಾಗಗಳಲ್ಲಿ ಕೃಷಿಮಾಡಿದವರು. ಸಾಹಿತ್ಯ ಕ್ಷೇತ್ರದ ಹಾಗೆಯೇ ರಂಗಭೂಮಿಗೂ ಸಹ ಹನ್ನೆರಡುಮಠರವರ ರಂಗಪಠ್ಯದ ಕೊಡುಗೆ ಗಮನಾರ್ಹವಾದದು. ಇಲ್ಲಿವರೆಗೂ ಸ್ವಾಮೇರ ಸೋಮಾರ, ಬಂಡೆದ್ದ ಬಾರಕೋಲು, ಮಹಾತಪಸ್ವಿ, ಗೋದಿ ಹುಗ್ಗಿ ಗಂಗಯ್ಯ, ಮೌನಕೋಗಿಲೆ, ಅಪ್ಪಗಳ ಅಪ್ಪ ಅಪ್ಪಣ್ಣ ಹೀಗೆ ಮೂವತ್ಮೂರು ನಾಟಕಗಳನ್ನು ಬರೆದಿದ್ದಾರೆ. ಇದರಲ್ಲಿ ಐದು ಮಕ್ಕಳ ನಾಟಕಗಳೂ ಸೇರಿವೆ. ಒಟ್ಟು ೨೩ ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಆದರೆ.. ರಂಗದಮೇಲೆ ಬಂದಿದ್ದು ಮಾತ್ರ ಕೇವಲ ಐದೇ ದೊಡ್ಡವರ ನಾಟಕಗಳು. ಈಗ ಪ್ರದರ್ಶಿಸಲಾಗುತ್ತಿರುವಬೆಟ್ಟದ ಚೆಲುವೆನಾಟಕ ಬರೆದು ಏಳೆಂಟು ವರ್ಷಗಳೇ ಆಗಿದ್ದರೂ ರಂಗಕ್ಕೇರಲು ಇಷ್ಟು ದಿನ ಕಾಯಬೇಕಾಯಿತು. ಹನ್ನೆರಡುಮಠರನ್ನು ಸಾಹಿತಿಯೆಂದೇ ಗುರುತಿಸುವುದರಿಂದಲೋ ಏನೋ ಅವರ ನಾಟಕಗಳತ್ತ ರಂಗಭೂಮಿಯವರು ಹೆಚ್ಚಾಗಿ ಗಮನಹರಿಸಿಲ್ಲ. ಇವರ ಹೋಳಿ ನಾಟಕ ಚಲನಚಿತ್ರವಾಯಿತೇ ಹೊರತು ನಾಟಕವಾಗಿ ಪ್ರದರ್ಶನವಾಗಲಿಲ್ಲ. ಬಹುತೇಕ ನಾಟಕಗಳು ಪ್ರದರ್ಶನಯೋಗ್ಯವಾಗಿದ್ದು ಸಿದ್ಧನಾಟಕಗಳ ಕೊರತೆಯನ್ನು ಎದುರಿಸುತ್ತಿರುವ ಪ್ರಸ್ತುತ ಆಧುನಿಕ ಕನ್ನಡ ರಂಗಭೂಮಿಯವರು ಹನ್ನೆರಡುಮಠರವರ ನಾಟಕಗಳನ್ನು ಪ್ರದರ್ಶನಯೋಗ್ಯಗೊಳಿಸಬೇಕಾಗಿದೆ. ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದ ಹನ್ನೆರಡುಮಠರವರ ನಾಟಕ ಸಾಹಿತ್ಯವನ್ನು ಪರಿಗಣಿಸಿ ನಾಟಕ ಅಕಾಡೆಮಿಯವರು ಜೀವಮಾನದ ಸಾಧನೆ ಪ್ರಶಸ್ತಿಯನ್ನು ಹನ್ನೆರಡುಮಠರಿಗೆ ಕೊಡುವುದು ಸೂಕ್ತವಾಗಿದೆ. ಹಾಗೂ ಅವರು ಅದಕ್ಕೆ ಯೋಗ್ಯರಾಗಿದ್ದಾರೆ.

ಇಲಕಲ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿಯಾದ ಮೇಲೆ ಬೆಂಗಳೂರಿಗೆ ಬಂದು ನೆಲೆಸಿದ ನಂತರ 1600ಕ್ಕೂ ಅಧಿಕ ಭಾವಗೀತೆಗಳನ್ನು ರಚಿಸಿದ್ದಾರೆ. ಇಲ್ಲಿವರೆಗೂ ಒಟ್ಟು ಹನ್ನೊಂದು ದ್ವನಿಸುರಳಿಗಳು ಬಂದಿವೆ. ಸಿನೆಮಾಗಳಿಗೆ ಹಾಗೂ ಟಿವಿ ದಾರಾವಾಹಿಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಅಮೇರಿಕದ ಪ್ರವಾಸ ಕಥೆನ ಕುರಿತು ಎರಡು ಪುಸ್ತಕಗಳನ್ನು ಬರೆದಿದಾರೆ. ಹನ್ನೊಂದು ಕೃತಿಗಳನ್ನು ಸಂಪಾದಿಸಿದ್ದಾರೆ. ನಾಲ್ಕು ಲಲಿತ ಪ್ರಬಂಧ ಸಂಕಲನಗಳು, ಆರು ಚರಿತ್ರೆ ಪುಸ್ತಕಗಳು, ಮೂರು ಹಾಸ್ಯ ಲೇಖನ ಸಂಕಲನಗಳು, ಒಂಬತ್ತು ಸಣ್ಣಕಥೆಗಳ ಸಂಕಲನಗಳು, ಹದಿನೇಳು ಕಾದಂಬರಿಗಳು ಹಾಗೂ ಹದಿಮೂರು ಕವನ ಸಂಕಲನಗಳನ್ನು ಸೇರಿ ಒಟ್ಟು 99 ಪುಸ್ತಕಗಳನ್ನು ಹನ್ನೆರಡುಮಠರವರು ರಚಿಸಿದ್ದಾರೆಹನ್ನೆರಡುಮಠರವರು ಕರ್ನಾಟಕದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಲೇಖನ, ಕಥೆ, ವಿನೋದ, ಕವನಗಳನ್ನು ಕಳೆದ ಐದು ದಶಕಗಳಿಂದ ಬರೆಯುತ್ತಲೇ ಬಂದಿದ್ದಾರೆ.

ಹನ್ನೆರಡುಮಠರವರ ಕಾದಂಬರಿಗಳ ಕುರಿತು ಡಾ.ಆರ್.ಆಯ್,ಹರಕುಣಿಯವರು ಡಾಕ್ಟರೇಟ್ ಮಾಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯವು ಹನ್ನೆರಡುಮಠರವರ ಸಮಗ್ರ ಸಾಹಿತ್ಯ ಕುರಿತು ಪಿಹೆಚ್ ಡಿ ಗಾಗಿ ಪ್ರಬಂಧ ಸಿದ್ದಪಡಿಸುತ್ತಿದೆ. ಇವರ ಮಗಳು ಡಾ.ವಿಜಯಲಕ್ಷ್ಮೀಯವರು ಸಹ ನೃತ್ಯಕಲಾವಿದೆಯಾಗಿದ್ದು ಕೆಲವಾರು ನಾಟಕ, ದೂರದರ್ಶನ, ಹಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಪ್ಪತ್ತರ ಹರೆಯದರಲ್ಲೂ ಸಹ ಯುವಕರ ಹಾಗೆ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿರುವ ಹನ್ನೆರಡುಮಠರವರಿಗೆ ಅಭಿನಂದನೆಗಳು. ಇನ್ನೂ ಉತ್ತಮ ನಾಟಕಗಳು ಅವರಿಂದ ಮೂಡಿ ಬರಲಿ ಹಾಗೂ ಅವರ ಎಲ್ಲಾ ನಾಟಕಗಳೂ ರಂಗಕ್ಕೇರಿ ನಾಡಿನಾದ್ಯಂತ ಪ್ರದರ್ಶನಗೊಳ್ಳಲಿ.


ಬಹುಮುಖಿ ರಂಗ ಪ್ರತಿಭೆ ಮಾಲತೇಶ ಬಡಿಗೇರ :
ಮಾಲತೇಶ ಬಡಿಗೇರ ಅಪ್ಪಟ ಗ್ರಾಮೀಣ ದೇಸಿ ಪ್ರತಿಭೆ. 1995ರಲ್ಲಿ ನೀನಾಸಂ ನಲ್ಲಿ ರಂಗಭೂಮಿ ಕುರಿತು ಒಂದು ವರ್ಷದ ಡಿಪ್ಲೋಮಾ ಮುಗಿಸಿ, ಮತ್ತೊಂದು ವರ್ಷ ರಂಗ ತಿರುಗಾಟದಲ್ಲಿ ಭಾಗವಹಿಸಿ ನಾಟಕದ ಹಲವು ಆಯಾಮಗಳಲ್ಲಿ ತರಬೇತಿ ಪಡೆದರು. ನಂತರ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದು ಪೋಸ್ಟರ್ ಬರೆಯುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ತದನಂತರ ರಂಗಭೂಮಿಯನ್ನೇ ಬದುಕಾಗಿಸಿಕೊಂಡು, ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ರಂಗಭೂಮಿಯಲ್ಲಿ ಕಳೆದ ಎರಡು ದಶಕಗಳಿಂದ ರಂಗಪ್ರಕಾರದ ಎಲ್ಲಾ ವಿಭಾಗಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಕನ್ನಡ ರಂಗಭೂಮಿಯನ್ನೂ ಬೆಳೆಸಿದರು ಹಾಗೂ ತಾವೂ ಬೆಳೆದರು.

ನಟರಾಗಿ ನೀನಾಸಂ ತಿರುಗಾಟದ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಕರ್ನಾಟಕದಾದ್ಯಂತ ಒಂದು ವರ್ಷಗಳ ಕಾಲ ನೂರಾರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ. ರಂಗನಿರ್ದೇಶಕರಾಗಿ ಇಲ್ಲಿವರೆಗೂ ಮಾಲತೇಶರವರು ಐವತ್ತಕ್ಕೂ ಹೆಚ್ಚು ಮಕ್ಕಳ ಹಾಗೂ ದೊಡ್ಡವರ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಗುಡುಸಲಿನ ಗುಡುದಾಶಿ, ಮಾಧವಿ, ರಾವಿನದಿಯ ದಂಡೆಯಲ್ಲಿ, ರಾಕ್ಷಸ, ತಿರುಕರಾಜ, ಸತಹೊಮ ಅರಗಿನ ಬೆಟ್ಟ, ರೋಮಿಯೋ ಜೂಲಿಯೆಟ್, ಅಂಧಯುಗ, ತುಕ್ರನ ಕನಸು, ಹುಲಿಯ ನೆರಳು, ಬೂಟು ಬಂದೂಕುಗಳ ನಡುವೆ, ಕರಿಭಂಟ, ನಮ್ಮೂರ ಗಾಂಧಿ, ಮಂಟೇಸ್ವಾಮಿ ಕಥಾ ಪ್ರಸಂಗ, ವೆಂಕಟಿಗನ ಹೆಂಡತಿ, ಸ್ಮಶಾನ ಕುರುಕ್ಷೇತ್ರ, ಮಹಾಮಾರಿ, ಗುಳಿಗೆ ಗುಮ್ಮ.... ಇವು ಅವರ ಪ್ರಮುಖ ನಾಟಕಗಳು ರಂಗಸಂಘಟಕರಾಗಿ  ಬಹುರೂಪಿ ಮತ್ತು ಅದಮ್ಯ ರಂಗ ಸಂಸ್ಕೃತಿ ಎನ್ನುವ ಎರಡು ರಂಗತಂಡಗಳನ್ನು ಹುಟ್ಟಿ ಹಾಕಿ ತಮ್ಮದೇ ರಂಗತಂಡಕ್ಕೆ ಕೆಲವಾರು  ನಾಟಕಗಳನ್ನು ಬಡಿಗೇರ ನಿರ್ದೇಶಿಸಿದ್ದಾರೆ. ತಮ್ಮ ರಂಗತಂಡದ ನಾಟಕೋತ್ಸವಗಳನ್ನೂ ಆಯೋಜಿಸಿದ್ದಾರೆ. ನೇಪತ್ಯದಲ್ಲಿ ಪ್ರವೀಣರಾಗಿರುವ ಮಾಲತೇಶರವರು ಮೂಲತಃ ಚಿತ್ರಕಲಾವಿದರಾಗಿದ್ದು ಮುಖವಾಡಗ ತಯಾರಿಕೆಯಲ್ಲಿ ಸಿದ್ದಹಸ್ತರಾದವರು. ಮೇಕಪ್, ಬ್ಯಾಕ್ಡ್ರಾಪ್ ಪೈಂಟಿಂಗ್, ರಂಗಪರಿಕರಗಳ ನಿರ್ಮಾಣ, ರಂಗಸಜ್ಜಿಕೆ ವಿನ್ಯಾಸ, ವಸ್ತ್ರವಿನ್ಯಾ.... ಹೀಗೆ ರಂಗನೇಪತ್ಯದ ಎಲ್ಲಾ ಕೆಲಸಗಳಲ್ಲೂ ಪಾರಂಗತರು. ಹವ್ಯಾಸಿ ರಂಗಭೂಮಿ, ಮಕ್ಕಳ ರಂಗಭೂಮಿ, ಶಾಲಾ ರಂಗಭೂಮಿ, ಕಾಲೇಜು ರಂಗಭೂಮಿ, ಕಾರ್ಮಿಕ ರಂಗಭೂಮಿ ಹಾಗೂ ನೌಕರರ ರಂಗಭೂಮಿಯಲ್ಲಿ ಹಲವಾರು ಗಮನಾರ್ಹ ನಾಟಕಗಳನ್ನು ಪ್ರತಿ ವರ್ಷ ನಿರ್ದೇಶಿಸಿದ್ದು, ಅವರ ನಿರ್ದೇಶನದ ಬಹುತೇಕ ನಾಟಕಗಳು ವಿವಿಧ ರಂಗಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದಿವೆ.

ಕಲಾಗಂಗೋತ್ರಿಯ ಪದ್ದಣ್ಣ ಪ್ರಶಸ್ತಿ , ರಂಗನಿರಂತರ ಪುರಸ್ಕಾರ, ಅಂತರಂಗ ಪ್ರಶಸ್ತಿ, ಗದಗ ಜಿಲ್ಲಾ ಸಾಹಿತ್ಯ ಬಳಗದ ಪ್ರಶಸ್ತಿ, ತುಮಕೂರಿನ ಸಮ್ಮುಖ ಪ್ರಶಸ್ತಿ ಮತ್ತು ಮಂಡ್ಯದ ಜನದನಿ ಪ್ರಶಸ್ತಿಗಳು ಮಾಲತೇಶರ ಪ್ರತಿಭೆಗೆ ಸಂದಿವೆ. ಇದೆಲ್ಲದಕ್ಕಿಂತಲೂ 2006 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಉಸ್ತಾದ ಬಿಸ್ಮಿಲ್ಲಾ ಖಾನ್ ಪ್ರಶಸ್ತಿಯನ್ನು ಪ್ರಕಟಿಸಿ ಮಾಲತೇಶರವರನ್ನು ದೆಲ್ಲಿಗೆ ಕರೆಸಿಕೊಂಡು ಪುರಸ್ಕರಿಸಿದ್ದು ಕನ್ನಡ ರಂಗಭೂಮಿಗೆ ಹೆಮ್ಮೆ ತರುವಂತಹ ಸಂಗತಿ. ಬಿ.ವಿ.ರಾಜಾರಾಮರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ ಮಾಲತೇಶ ಬಡಿಗೇರರು ನಾಟಕ ಅಕಾಡೆಮಿಯ ಸದಸ್ಯರಾಗಿ ತಮಗೆ ಸಿಕ್ಕ ಅವಕಾಶವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

ಹೀಗೆ... ರಂಗಭೂಮಿಯ ವಿವಿಧ ಆಯಾಮಗಳಲ್ಲಿ ಕೆಲಸಮಾಡುವಂತಹ ಮಾಲತೇಶ ಬಡಿಗೇರ ನಿಜಕ್ಕೂ ಆಧುನಿಕ ಕನ್ನಡ ರಂಗಭೂಮಿಗೆ ಬಹುಮುಖಿ ಕೊಡುಗೆಯನ್ನು ಕೊಟ್ಟಿದ್ದಾರೆ. ನಟರಿಗೆ ತರಬೇತಿಯನ್ನು ಕೊಟ್ಟು, ನಾಟಕವನ್ನು ನಿರ್ದೇಶಿಸಿ, ರಂಗವಿನ್ಯಾಸ ಮಾಡಿ, ರಂಗಪರಿಕರಗಳನ್ನು ಸಿದ್ದಪಡಿಸಿ, ಕಾಸ್ಟೂಮ್ಸ ವಿನ್ಯಾಸ ಮಾಡಿ ಪ್ರತಿಯೊಬ್ಬ ಪಾತ್ರದಾರಿಗೂ ಮೇಕಪ್ ಮಾಡಿ, ಅಗತ್ಯ ಬಿದ್ದರೆ ಲೈಟಿಂಗ್ ಕೂಡಾ ನಿರ್ವಹಿಸಿ... ಇಡೀ ನಾಟಕವನ್ನು ಅದ್ಬುತವಾಗಿ ಕಟ್ಟಿಕೊಡುತ್ತಾರೆ. ನಾಟಕದ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸುವುದರಿಂದಲೇ ವರ್ಷದ ೩೬೫ ದಿನಗಳ ಕಾಲ ಯಾವಾಗಲೂ ಮಾಲತೇಶ ಬ್ಯೂಸಿಯಾಗಿಯೇ ಇರುತ್ತಾರೆ. ಒಂದಾದ ಮೇಲೆ ಒಂದು ನಾಟಕಗಳನ್ನು ನಿರ್ಮಿಸುತ್ತಾರೆ. ರಾಜ್ಯಾದ್ಯಂತ ರಂಗಕ್ರಿಯೆಗಳಿಗಾಗಿ ಸಂಚರಿಸುತ್ತಾರೆ. ಇಷ್ಟೊಂದು ವೈವಿದ್ಯಮಯ ಕೆಲಸಗಳನ್ನು ವೃತ್ತಿಪರವಾಗಿ ಮಾಡುವಂತಹ ಇನ್ನೊಬ್ಬ ರಂಗಕರ್ಮಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕನ್ನಡ ರಂಗಭೂಮಿಯಲ್ಲಿ ಅಪರೂಪ. ಇಂತಹ ಅಪರೂಪದ ರಂಗಕರ್ಮಿ ಮಾಲತೇಶ ಬಡಿಗೇರ್ ನಿಜಕ್ಕೂ ಅಭಿನಂದನಾರ್ಹರು

                                         ಶಶಿಕಾಂತ ಯಡಹಳ್ಳಿ



  
 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ