ಗುರುವಾರ, ಮಾರ್ಚ್ 3, 2016

ಕಾಲ ದೇಶ ಮೀರಿ ನಿಲ್ಲುವ ನಾಟಕ "ಮೃತ್ಯುಂಜಯ" : ನಾಟಕ ವಿಮರ್ಶೆ :

ಸಮುದಾಯ ರೆಪರ್ಟರಿಯಲ್ಲಿಮೃತ್ಯುಂಜಯ’ :



ಸಮುದಾಯಸಾಂಸ್ಕೃತಿಕ ಸಂಘಟನೆಗೆ ನಾಲ್ಕು ದಶಕಗಳು ತುಂಬಿದ ಸಂದರ್ಭದಲ್ಲಿ ರೆಪರ್ಟರಿ ರಂಗಸಾಹಸವನ್ನು ಅರಂಭಿಸಿದ್ದು ಸ್ತುತ್ಯಾರ್ಹವಾಗಿದೆ. ರಂಗನಾಟಕ, ಬೀದಿನಾಟಕವನ್ನು ಸಿದ್ದಪಡಿಸಿ ನಾಡಿನಾದ್ಯಂತ ರಂಗಯಾತ್ರೆ ಕೈಗೊಂಡು ರಂಗಕಲೆಯ ಮುಖೇನ ಜನಜಾಗೃತಿಯನ್ನುಂಟುಮಾಡುವ ಸಮುದಾಯದ ಮಹತ್ವಾಂಕಾಂಕ್ಷೀ ಯೋಜನೆಯು ಸಾಕಾರಗೊಂಡಿದೆ. 2015 ಡಿಸೆಂಬರ್ 30 ರಿಂದ ಪ್ರಾರಂಭಗೊಂಡ ಸಮುದಾಯದ ರೆಪರ್ಟರಿ ರಂಗತಿರುಗಾಟವು ತನ್ನ ಎರಡು ತಿಂಗಳುಗಳ ತಿರುಗಾಟವನ್ನು ಮುಗಿಸಿ ಫೆ.29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಮಾರೋಪಗೊಂಡಿತು.   ’ಮೃತ್ಯುಂಜಯರಂಗನಾಟಕ, ’ಕಾವ್ಯರಂಗ ಪ್ರಯೋಗಎನ್ನುವ ರೂಪಕ ಹಾಗೂಗೋಡೆಗೆ ಹೇಳಿದ ಕಥೆಎನ್ನುವ ಬೀದಿ ನಾಟಕವನ್ನು ಸಿದ್ಧಗೊಳಿಸಿ ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ಯಶಸ್ವಿಯಾಗಿ  ಪ್ರದರ್ಶಿಸಿದ್ದು ಮಾದರಿಯಾಗಿದೆ.

ನಿರಂಜನರ ಎರಡು ಪ್ರಮುಖ ಕಾದಂಬರಿಗಳಾದಚಿರಸ್ಮರಣೆಹಾಗೂಮೃತ್ಯುಂಜಯಗಳನ್ನು ಆಧರಿಸಿ ಡಾ.ಎಂ.ಜಿ.ಹೆಗಡೆಯವರುಮೃತ್ಯುಂಜಯಹೆಸರಲ್ಲಿ ರಂಗಪಠ್ಯವನ್ನು ಸಿದ್ಧಪಡಿಸಿದ್ದು ಡಾ.ಶ್ರೀಪಾದ ಭಟ್ರವರು ಸಮುದಾಯದ ರೆಪರ್ಟರಿ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2016 ಫೆಬ್ರವರಿ 29 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರೆಪರ್ಟರಿಯ ಸಮಾರೋಪ ಸಮಾರಂಭದ ಭಾಗವಾಗಿಮೃತ್ಯುಂಜಯನಾಟಕ ಪ್ರಯೋಗಗೊಂಡು ನೋಡುಗರಲ್ಲಿ ಸಂಚಲನವನ್ನು ಹುಟ್ಟಿಸಿತು.

ಸಮಕಾಲೀನ ಸಾಮಾಜಿಕ ಸಂಕಟಗಳಿಗೆ ಸ್ಪಂದಿಸುವ ಆಶಯಗಳೊಂದಿಗೆ ಹುಟ್ಟಿಕೊಂಡಸಮುದಾಯಸಂಘಟನೆಯುಮೃತ್ಯುಂಜಯನಾಟಕದ ಮೂಲಕ ಆಳುವ ವರ್ಗಗಳ ಜನವಿರೋಧಿ ಧೋರಣೆಯನ್ನು ಅನಾವರಣಗೊಳಿಸಲು ಸಮರ್ಥವಾಗಿ ಪಯತ್ನಿಸಿದೆ. ಪ್ರಸ್ತುತ ದೇಶವನ್ನಾಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ವಿರೋಧಿಸುತ್ತಿರುವವರನ್ನು ದೇಶದ್ರೋಹಿಗಳೆಂಬ ಸುಳ್ಳು ಆರೋಪದ ಮೇಲೆ ಬಂಧಿಸಿ ವಿಚಾರಣೆಗೊಳಪಡಿಸುತ್ತಿವೆ. ಪ್ರಭುತ್ವದ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ದಮನಿಸುತ್ತಿವೆ. ಇಂತಹ ಅನಾಹುತಕಾರಿ ಸಂದರ್ಭಕ್ಕೆ ಪೂರಕವಾಗಿ ಇತಿಹಾಸ ಹಾಗೂ ಪುರಾಣಗಳಿಂದಾದ ಘಟನೆಗಳನ್ನು ಬಳಸಿಕೊಂಡು ಆಳುವ ವರ್ಗಗಳ  ಅಸಲಿ ಮುಖವಾಡವನ್ನು ಬೆತ್ತಲುಗೊಳಿಸುವ ಕೆಲಸವನ್ನು ಮಾಡುವುದರಲ್ಲಿಮೃತ್ಯುಂಜಯನಾಟಕ ಯಶಸ್ವಿಯಾಗಿದೆ.


ನಿರಂಜನರಚಿರಸ್ಮರಣೆಕಾದಂಬರಿಯು ಜಮೀನ್ದಾರರ ಶೋಷಣೆ ಹಾಗೂ ಬ್ರಿಟಿಷ್ ಪ್ರಭುತ್ವದ ನಿರಂಕುಶತೆಗೆ ಬಲಿಯಾದ ರೈತಾಪಿ ಜನಗಳ ಸಂಕಟಗಳನ್ನು ಹೇಳಿದರೆ, ಅವರ ಮತ್ತೊಂದು ಮಹತ್ತರವಾದಮೃತ್ಯುಂಜಯಕಾದಂಬರಿಯು ಅರಮನೆ ಮತ್ತು ಗುರುಮನೆಗಳ ಮೇಲಾಟದಲ್ಲಿ ಬಲುಪಶುವಾದ ರೈತನಾಯಕರ ದುರಂತವನ್ನು ತಿಳಿಸುತ್ತದೆ. ಎರಡೂ ಕಾದಂಬರಿಯಲ್ಲಿರುವ ವರ್ಗಸಂಘರ್ಷದ ಸಾಮ್ಯತೆ ಹಾಗೂ ಪರಿಣಾಮಗಳನ್ನು ಆಯ್ದುಕೊಂಡುಮೃತ್ಯುಂಜಯನಾಟಕವನ್ನು ಡಾ.ಎಂ.ಜಿ.ಹೆಗಡೆಯವರು ಕಟ್ಟಿಕೊಟ್ಟಿದ್ದಾರೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಈಗಿನ ಕೇರಳ ರಾಜ್ಯದಲ್ಲಿರುವ ಕೈಯೂರಿನಲ್ಲಾದ ರೈತ ಬಂಡಾಯವನ್ನು ಕೇಂದ್ರವಾಗಿಟ್ಟುಕೊಂಡುಚಿರಸ್ಮರಣೆಕಾದಂಬರಿ ರಚಿತವಾಗಿದ್ದರೆ, ಸುಮಾರು ಐದು ಸಾವಿರ ವರ್ಷಗಳ ಹಿಂದೆ ಈಜಿಪ್ತನಲ್ಲಿ ರೈತರು ಕಂದಾಯ ವಿರೋಧಿಸಿ ದಂಗೆಯೆದ್ದು ಪ್ರಭುತ್ವದ ಶಕ್ತಿಕೇಂದ್ರದ ಕುತಂತ್ರಕ್ಕೆ ಬಲಿಯಾದ ಕಥೆಯನ್ನುಮೃತ್ಯುಂಜಯಕಾದಂಬರಿ ವಿವರಿಸುತ್ತದೆ. ಒಂದು ಚಾರಿತ್ರಿಕ ಘಟನೆಯಾದರೆ ಇನ್ನೊಂದು ಪೌರಾಣಿಕ ಕಲ್ಪನೆಯಾಗಿದೆ. ಇವೆರಡನ್ನೂ ಸಮೀಕರಿಸಿ ಸಮಕಾಲೀನ ಸಂಘರ್ಷವನ್ನು ಹೇಳುವ ಆಶಯದಲ್ಲಿಮೃತ್ಯುಂಜಯನಾಟಕ ಯಶಸ್ವಿಯಾಗಿದೆ.

ಕೈಯೂರಿನ ಮಾಸ್ತರರ ನೇತೃತ್ವದಲ್ಲಿ, ಪಂಡಿತ ಎನ್ನುವ ಕ್ರಾಂತಿಕಾರಿಯ ಮಾರ್ಗದರ್ಶನದಲ್ಲಿ ಕೆಲವು ಯುವಕರು ರೈತರ ಹಕ್ಕುಗಳಿಗಾಗಿ ಕ್ರಾಂತಿಕಾರಿ ಚಟುವಟಿಕೆ ಆರಂಭಿಸುತ್ತಾರೆ. ರಹಸ್ಯ ಸಭೆಗೆಂದು ಬಂದ ಪಂಡಿತ ಕ್ರಾಂತಿಕಾರಿ ಯುವಕರಿಗೆ ಈಜಿಪ್ತಿನಲ್ಲಿ ನಡೆದ ರೈತದಂಗೆ ಹಾಗೂ ಅಲ್ಲಿಯ ಪ್ರಭುತ್ವದ ಮೇಲಾಟಗಳ ಕುರಿತು ಕತೆಯನ್ನು ಹೇಳತೊಡಗುತ್ತಾರೆ. ಕೈಯೂರಿನಲ್ಲಾಗುವ ವರ್ಗ ಸಂಘರ್ಷದ ಸನ್ನಿವೇಶಗಳು ಹಾಗೂ ಈಜಿಪ್ಟಿನ ಪೆರೋ ರಾಜ್ಯದಲ್ಲಾಗುವ ಸಂಘರ್ಷಗಳ ಸಂದರ್ಭಗಳು ಒಂದಕ್ಕೊಂದು ಮಿಳಿತಗೊಂಡು ಇಡೀ ನಾಟಕ ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ. ಕೈಯೂರಿನ ಯುವಕರು ಜಮೀನ್ದಾರರ ಮೇಲೆ ತಿರುಗಿಬಿದ್ದಿದ್ದು. ಜಮೀನ್ದಾರರು ಪೊಲೀಸರ ಸಹಾಯದಿಂದ ರೈತಾಪಿ ಜನರ ಮೇಲೆ ಹಲ್ಲೆ ಮಾಡಿ ದೇಶದ್ರೋಹದ ಹುಸಿ ಆರೋಪ ಹೊರೆಸಿ ಕ್ರಾಂತಿಕಾರಿಗಳನ್ನು ಬಂದಿಸಿದ್ದು. ಬ್ರಿಟೀಷ್ ಪ್ರಭುತ್ವ ಪೂರ್ವಯೋಜಿತ ವಿಚಾರಣೆ ನಡೆಸಿ ಕ್ರಾಂತಿಕಾರಿಗಳಿಗೆ ಮರಣ ದಂಡನೆ ಕೊಟ್ಟಿದ್ದೆಲ್ಲಾ ದೃಶ್ಯಗಳ ಮೂಲಕ ಬಿಚ್ಚಿಕೊಳ್ಳುತ್ತವೆ. ದೃಶ್ಯಗಳ ನಡು ನಡುವೆ ಪ್ಲಾಷ್ಬ್ಯಾಕ್ ತಂತ್ರದಲ್ಲಿ  ನೀರಾಣೆ ಪ್ರಾಂತ್ಯದ ಕಂದಾಯ ವಸೂಲಿ ಅಧಿಕಾರಿಯ ದೌರ್ಜನ್ಯ ವಿರೋಧಿಸಿ ರೈತರು ದಂಗೆಯೆದ್ದು ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದು. ರಾಜ ಪೆರೋ ಹಾಗೂ ರಾಜಗುರುವಿನ ನಡುವಿನ ಅಧಿಕಾರದಾಹದ ರಾಜಕೀಯದ ಚದುರಂಗದಾಟಕ್ಕೆ ರೈತನಾಯಕ ದಾಳವಾಗಿದ್ದು. ಕೊನೆಗೆ ಅರಮನೆ ಹಾಗೂ ಗುರುಮನೆಗಳು ರಾಜಿಯಾಗಿ ರೈತನಾಯಕ ಮನೆಕ್ಟಾನ ಮೇಲೆ ರಾಜದ್ರೋಹ ಆರೋಪಿಸಿ ಪೊಳ್ಳು ವಿಚಾರಣೆ ನಡೆಸಿ  ಮರಣದಂಡನೆಯನ್ನು ವಿಧಿಸಿದ್ದು... ಎಲ್ಲಾ ದೃಶ್ಯಗಳನ್ನು ಬ್ಲೆಂಡ್ ಮಾಡಲಾಗಿದೆ.


ದುಡಿಯುವ ವರ್ಗಗಳ ಅಸಹಾಯಕತೆ ಹಾಗೂ ಆಳುವ ವರ್ಗಗಳ ಶೋಷಣೆಯನ್ನು ತೋರಿಸಲು ರಂಗರೂಪಕ ಸಾಧ್ಯತೆಗಳನ್ನೂ ಸಮರ್ಥವಾಗಿ ಶ್ರೀಪಾದರು ಬಳಸಿದ್ದಾರೆ. ಅಸಹಾಯಕರನ್ನು ಕುಕ್ಕಿ ತಿನ್ನುವ ಹದ್ದುಗಳನ್ನು ನಾಟಕದ ಆರಂಭಕ್ಕೆ ತೋರಿಸಿರುವುದು ಇಡೀ ನಾಟಕದ ಆಶಯಕ್ಕೆ ಪೂರಕವೆನ್ನುವಂತೆ ರೂಪಕವಾಗಿ ಮೂಡಿಬಂದಿದೆ. ಇದು ಆಳುವ ಪ್ರಭುತ್ವ ಮತ್ತು ಆಳಿಸಿಕೊಳ್ಳುವ ಪ್ರಜೆಗಳ ನಡುವಿನ ಸಂಬಂಧವನ್ನು ಹೇಳುವ ಪ್ರಯತ್ನವಾಗಿದೆ. ಆದರೆ.. ನಾಟಕದ ಪ್ರಸ್ತುತಿಯಲ್ಲಿ ಸರ್ವಾಧಿಕಾರಿ ಪ್ರಭುತ್ವ ಸುಮ್ಮನಿದ್ದವರ ಮೇಲೆ ಹಲ್ಲೆ ಮಾಡದೆ ಹಕ್ಕಿಗಾಗಿ ಹೋರಾಡುವವರ ಮೇಲೆ ಮಾತ್ರ ದಂಡುಕಟ್ಟಿಕೊಂಡು ದಾಳಿ ಮಾಡುತ್ತವೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಆರಂಭಿಕ ರೂಪಕ ಅಪೂರ್ಣವೆನಿಸುತ್ತದೆ. ಆದರೆ ಕೊನೆಗೆ ಕ್ಲೈಮ್ಯಾಕ್ಸನಲ್ಲಿ ಹೋರಾಟಗಾರರನ್ನು ನೇಣಿಗೆ ಹಾಕುವಾಗ ನೇಣು ಹಗ್ಗ ಹಿಡಿದು ಎಡಬಲಕ್ಕೆ ಹದ್ದಿನಂತೆ ನಿಂತ ರಾಜಕಾರಣಿ ಹಾಗೂ ಪುರೋಹಿತಶಾಹಿ ಪಾತ್ರಗಳು ಮತ್ತು ಹಿಂದೆ ಇದ್ದ ನ್ಯಾಯಾಧೀಶರ ಪಾತ್ರದಾರಿ ಪ್ರಸ್ತುತ ಪ್ರಜಾಪ್ರಭುತ್ವ ಮಾದರಿ ಆಳುವ ವ್ಯವಸ್ಥೆಯನ್ನೇ ಲೇವಡಿ ಮಾಡುವಂತೆ ಮೂಡಿ ಬಂದಿದೆ. ’ಪ್ರಭುತ್ವ ಧರ್ಮತ್ವ ಹಾಗೂ ದಂಡಾಧಿಕಾರತ್ವಗಳು ಸೇರಿ ಅದು ಹೇಗೆ ತಮಗೆದುರಾಡಿದವರ ಮೇಲೆ ದೇಶದ್ರೋಹದ ಆರೋಪ ಹೇರಿ ಬಲಿ ಪಡಿಯುತ್ತವೆ ಎನ್ನುವುದನ್ನು ಕ್ಲೈಮ್ಯಾಕ್ಸ ದೃಶ್ಯ ಅತ್ಯಂತ ಮಾರ್ಮಿಕವಾಗಿ ಹೇಳುವಲ್ಲಿ ಸಫಲವಾಗಿದೆಜೊತೆಗೆ ಈಗಿನ ಪ್ರಸ್ತುತ ಪ್ಯಾಸಿಸ್ಟ್ ವ್ಯವಸ್ಥೆಯನ್ನು ಬೆತ್ತಲೆಗೊಳಿಸುವಂತೆಮೃತ್ಯುಂಜಯಒಡಮೂಡಿದೆ.

ರಾಜದ್ರೋಹದ ಆಪಾದನೆ ಮೇಲೆ ರೈತ ಬಂಡಾಯಗಾರರನ್ನು ನೇಣಿಗೇರಿಸಿದ ನಂತರ ಮುಗಿಯಬೇಕಿದ್ದ ನಾಟಕ ರೋಮಾಂಚಕ ರೀತಿಯಲ್ಲಿ ಮುಂದುವರೆಯುತ್ತದೆ. ’ಜನಹೋರಾಟಗಾರರು ಕ್ರೂರ ವ್ಯವಸ್ಥೆಗೆ ಬಲಿಯಾದರೂ ಅವರ ಆಶಯಗಳನ್ನು ಮುಂದಿನ ಜನಸಮುದಾಯ ಕ್ರಾಂತಿಯದಾರಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆಎನ್ನುವ ಕಾನ್ಸೆಪ್ಟನ್ನು ಕೆಂಪುಬಾವುಟ ಹಿಡಿದ ವ್ಯಕ್ತಿಯ ಹಿಂದೆ ಕೆಂಪು ಬಟ್ಟೆಯ ಹರಿವನ್ನು ತೋರಿಸುತ್ತಲೇ ಅದರ ಹಿಂದೆ ಅನೇಕರು ಬಾವುಟ ಹಿಡಿದು ಕ್ರಾಂತಿಪಥದತ್ತ ಹೊರಡುವ ದೃಶ್ಯ ಹಾಗೂ ಹಿನ್ನಲೆ ಸಂಗೀತ ನೋಡುಗರಲ್ಲಿ ಸಂಚಲನವನ್ನು ಹುಟ್ಟಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಇರುವ 12 ಜನ ಕಲಾವಿದರು ವೇದಿಕೆಯಿಂದ ಹೋಗಿ ಹಿಂದಿನ ನೇಪತ್ಯ ಸುತ್ತಿಕೊಂಡು ಬಂದು ಮತ್ತೆ ವೇದಿಕೆ ಮೇಲೆ ಚಲಿಸುತ್ತಾ ಸಾಗುವಾಗ ನೂರಾರು ಜನ ಸರತಿಯಲ್ಲಿ ಹೋಗುತ್ತಿದ್ದಾರೇನೋ ಎನ್ನುವ ಅನುಭವ ಪ್ರೇಕ್ಷಕರಿಗಾದದ್ದಂತೂ ಸುಳ್ಳಲ್ಲ. ಘೋಷನಾತ್ಮಕವಾಗಬಹುದಾದ ಕೊನೆಯ ಅಂಕದ ಕೊನೆಯನ್ನು ಹೀಗೆ ರೂಪಕವಾಗಿ ತೋರಿಸಿ ಪ್ರೇಕ್ಷಕರಲ್ಲಿ ಪ್ರೇರೇಪಣೆಯನ್ನುಂಟುಮಾಡಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಯ್ಯ ಕುಮಾರ್ ವಿರುದ್ಧ ದೇಶದ್ರೋಹದ ಹುಸಿ ಆರೋಪವನ್ನು ಆಪಾದಿಸಿ ಬಂಧಿಸಿ ವಿಚಾರಣೆಗೊಳಪಡಿಸಿ ಹಿಂಸಿಸುತ್ತಿರುವ ಪ್ರಸ್ತುತ ಸಂದರ್ಭಕ್ಕೆ ಸರಿಯಾಗಿ ಹೊಂದಾಣಿಕೆಯಾಗುವಂತೆಮೃತ್ಯುಂಜಯನಾಟಕ ಮೂಡಿಬಂದಿದ್ದು ಕಾಕತಾಳೀಯವಾಗಿದ್ದರೂ ಸಾರ್ವಕಾಲಿಕ ಸತ್ಯವನ್ನು ಹೇಳುವಂತಿದೆ. ದೇಶ ಯಾವುದಾದರೇನು ಆಳುವ ಜನವಿರೋಧಿ ಪ್ರಭುತ್ವದೇಶದ್ರೋಹಎನ್ನುವ ಬ್ರಹ್ಮಾಸ್ತ್ರವನ್ನು ಬಳಸಿ ತಮ್ಮ ವಿರೋಧಿಗಳನ್ನು, ಹೋರಾಟಗಾರರನ್ನು ಸಂವರಿಸುತ್ತಾ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಅದಕ್ಕೆ ಪೂರಕವಾಗಿ ನಾಟಕವು ಐತಿಹಾಸಿಕ ಹಾಗೂ ಪೌರಾಣಿಕ ಪುರಾವೆಗಳನ್ನು ವದಗಿಸುವಂತಿದೆ. ಜನವಿರೋಧಿ ಸರಕಾರಗಳಿರುವವರೆಗೂ ಮತ್ತು ಅದಕ್ಕೆ ಪ್ರತಿಭಟನಾತ್ಮಕವಾಗಿ ಜನಪರ ಹೋರಾಟಗಳು ಇರುವವರೆಗೂಮೃತ್ಯುಂಜಯನಾಟಕವು ಪ್ರಸ್ತುತವಾಗಿರುತ್ತದೆ.

ರಾಜಪ್ರಭುತ್ವ ಹಾಗೂ ವಸಾಹತುಶಾಹಿ ಪ್ರಭುತ್ವದ ಸನ್ನಿವೇಶಗಳು ಬೇರೆ ಬೇರೆ ಕಾಲ ದೇಶಗಳಲ್ಲಾದ ಘಟನೆಗಳಾದರೂ, ಎರಡೂ ಕಥಾನಕಗಳ ಕಾಲಘಟ್ಟದ ನಡುವೆ ಐದು ಸಾವಿರ ವರ್ಷಗಳಷ್ಟು ಅಂತರವಿದ್ದರೂ ಎರಡೂ ಒಂದೇ ಆಶಯವನ್ನು ಹೇಳುವಂತಿವೆ. ಜೊತೆಗೆ ಇವೆರಡೂ ಕಥೆಗಳು ಒಂದಕ್ಕೊಂದು ಸಂಯೋಜನೆಗೊಂಡು ಪ್ರಸ್ತುತ ಪ್ರಜಾಪ್ರಭುತ್ವದೊಳಗಿನ ಪ್ಯಾಸಿಸ್ಟ್ ಪ್ರಭುತ್ವದ ಪ್ರತಿಬಿಂಬವೇನೋ ಎನ್ನುವಂತೆ ಮೂಡಿಬಂದಿವೆ. ಪುರಾಣ ಇತಿಹಾಸಗಳನ್ನು ಸಮಕಾಲೀನಗೊಳಿಸುವ ಮೂಲಕ ಸರ್ವಾಧಿಕಾರಿ ಆಡಳಿತದ ಅಪಾಯಗಳ ಕುರಿತು ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನುಮೃತ್ಯುಂಜಯನಾಟಕವು ಯಶಸ್ವಿಯಾಗಿ ಮಾಡಿ ತನ್ನ ಉದ್ದೇಶಿತ ಗುರಿ ಮುಟ್ಟುವಲ್ಲಿ ಸಫಲವಾಗಿದೆ. ಮೂರೂ ಕಾಲಘಟ್ಟದಲ್ಲಿ ಸಾಮ್ಯತೆ ಇರುವ ಅಂಶವೆಂದರೆ ಅದು ಪ್ರಭುತ್ವದ ಶೋಷಣೆ ಹಾಗೂ ತಿರುಗಿಬಿದ್ದವರ ಮೇಲೆ ವಿಚಾರಣೆ. ಕಾಲಕಾಲಕ್ಕೆ ಅಪ್ಪು ಚಿರಕುಂಡ ಕುಂಯಿಬು ಹಾಗೂ ಮನೆಪ್ಟಾನಂತಹ ಅನೇಕ ಜನಹೋರಾಟಗಾರರು ಆಯಾ ದೇಶ ಕಾಲದ ನೆಲದಲ್ಲಿ ಹುಟ್ಟಿ ಜನರ ವಿಮೋಚನೆಗೆ ಪ್ರಯತ್ನಿಸಿದ್ದಾರೆ. ಆದರೆ ಕೊನೆಗೂ ಪ್ರಭುತ್ವದ ದೌರ್ಜನ್ಯಕ್ಕೆ ಬಲಿಯಾಗಿ ಹುತಾತ್ಮರಾಗಿದ್ದಾರೆ. ಏಸು ಬಸವಣ್ಣನಂತಹ ಮಹಾತ್ಮರೂ ಸಹ ಆಳುವ ವರ್ಗದ ಶಡ್ಯಂತ್ರಕ್ಕೆ ಬಲಿಯಾದವರೇ. ಆದರೆ ಬಂಡಾಯಗಾರರು ವ್ಯವಸ್ಥೆಯ ವ್ಯವಸ್ಥಿತ ಷಡ್ಯಂತ್ರಕ್ಕೆ ಬಲಿಯಾಗಿ ದೈಹಿಕವಾಗಿ ಇಲ್ಲವಾದರೂ ಜನರ ಮನದಲ್ಲಿ ಮೃತ್ಯುಂಜಯರಾಗಿದ್ದಾರೆ. ಮುಂದಿನ ತಲೆಮಾರಿನವರ ಪ್ರಭುತ್ವವಿರೋಧಿ ಹೋರಾಟಕ್ಕೆ ಪ್ರೇರಣೆಯಾಗಿದ್ದಾರೆ. ಹೋರಾಟ ಕಾಲಕ್ಕೆ ನಿಷ್ಪಲವಾದರೂ, ಹೋರಾಟಗಾರರು ಮೋಸದ ವಿಚಾರಣೆಗೆ ಬಲಿಯಾದರೂ ಇತಿಹಾಸದಂತೆ ವರ್ತಮಾನದಲ್ಲೂ ಚಿರಂಜೀವಿಯಾಗಿರುತ್ತಾರೆಂಬ ಸಾರ್ವಕಾಲಿಕ ಸತ್ಯವನ್ನುಮೃತ್ಯುಂಜಯನಾಟಕವು ಮನದಟ್ಟು ಮಾಡುವಂತೆ ಪ್ರಯೋಗಗೊಂಡಿದೆ.

ಆದರೆ.... ಗುರಿ ಮುಟ್ಟುವ ಮುಂಚೆ ಸಾಗುವ ದಾರಿಯ ನಡೆಯ ಬಗ್ಗೆಯೂ ನಿರ್ದೇಶಕರು ಒಂದಿಷ್ಟು ಗಮನ ಕೊಡಬಹುದಾಗಿತ್ತು. ಆಶಯದ ಸಾಕಾರದ ದಾವಂತದಲ್ಲಿ ಆಕೃತಿಯನ್ನು ಅನಾವರಣಗೊಳಿಸುವಾಗ ಇನ್ನಷ್ಟು ಸ್ಪಷ್ಟತೆಗಳು ಬೇಕಾಗಿತ್ತು. ಆಶಯಕ್ಕೆ ಬದ್ಧವಾಗಿ ದೃಶ್ಯಗಳನ್ನು ಕಟ್ಟುವಾಗ ಸಂವಹನದ ಮಾಧ್ಯಮಕಾರರಾದ ನಟರನ್ನೂ ಹಾಗೂ ಸಮ್ಮೋಹನಕ್ಕೊಳಗಾಗುವ ಪ್ರೇಕ್ಷಕರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು. ಯಾಕೆಂದರೆ ಇಡೀ ನಾಟಕ ನೋಡಿದ ಮೇಲೆ ನಾಟಕದ ಆಶಯ ಪ್ರೇಕ್ಷಕರಿಗೆ ದಕ್ಕಿದಷ್ಟು ದೃಶ್ಯದೊಳಗಿನ ಭಾವತೀವ್ರತೆ ಕಾಡಲಿಲ್ಲ. ಮೃತುಂಜಯವು ನೋಡುಗರ ಮೆದುಳಿಗೆ ದಕ್ಕಿದಷ್ಟು ಹೃದಯಕ್ಕೆ ಹತ್ತಿರವಾಗಲಿಲ್ಲ.


ಇದಕ್ಕೆ ಪ್ರಮುಖ ಕಾರಣ ರೆಪರ್ಟರಿಯ ಅನಿವಾರ್ಯತೆಗಳಾಗಿವೆ ಎಂಬುದನ್ನೂ ಮರೆಯುವಂತಿಲ್ಲ. ಸೀಮಿತ ನಟರು, ನಿರ್ದಿಷ್ಟ ಸೆಟ್ಗಳು, ಪೂರ್ವಮುದ್ರಿತ ಸಂಗೀತಗಳು ಪ್ರೇಕ್ಷಕರಲ್ಲಿ ನೈಜತೆಯ ಭಾವನೆ ಹಾಗೂ ರಸಾನುಭೂತಿಯನ್ನು ಸ್ಪುರಿಸುವಲ್ಲಿ ವಿಫಲವಾದವು. ಹನ್ನೆರಡು ಜನ ನಟವರ್ಗ ನಾಟಕದಲ್ಲಿರುವ 36 ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಬೇಕಾದ ಒತ್ತಡಕ್ಕೊಳಗಾಗಿದ್ದರಿಂದ ಕಲಾವಿದರುಗಳು ತಮ್ಮ ಪಾತ್ರದೊಳಗೆ ತಲ್ಲೀಣರಾಗಲು ಸಾಧ್ಯವಾಗದೇ ಹೋಯಿತು. ಒಂದು ಪಾತ್ರ ಮುಗಿದ ತಕ್ಷಣ ಮುಂದಿನ ಪಾತ್ರಕ್ಕೆ ಕಾಸ್ಟೂಮ್ ಬದಲಾಯಿಸಿಕೊಂಡು ಸಿದ್ದರಾಗುವ ಗಡಿಬಿಡಿಯಲ್ಲಿ ಪಾತ್ರಪ್ರವೇಶ ಮಾಡಲು ಕಲಾವಿದರುಗಳಿಗೆ ಸಾಧ್ಯವಾಗಲೇ ಇಲ್ಲ. ಕನಿಷ್ಟ ಸಂಖ್ಯೆಯ ನಟರನ್ನು ಬಳಸಿ ಅವರ ಮೂರು ಪಟ್ಟು ಹೆಚ್ಚು ಪಾತ್ರಗಳನ್ನು ನಿರ್ವಹಿಸುವಂತೆ ಮಾಡಿದ ನಿರ್ದೇಶಕರ ಪರಿಶ್ರಮವನ್ನು ಮೆಚ್ಚಲೇಬೇಕಿದೆ. ಆದರೆ ಹೀಗೆ ಮಾಡುವುದರಿಂದ ನಟರುಗಳು ಅಭಿನಯಿಸುವಾಗ ಪಾತ್ರವಾಗದೇ ಭಾವನೆಗಳಿಲ್ಲದ ಯಂತ್ರಗಳಂತಾದದ್ದು ಗೋಚರವಾಗುತ್ತದೆ. ಭಾವಾಭಿನಯದಲ್ಲಿ ಸೋತ ನಾಟಕ ವಾಚಿಕ ಹಾಗೂ ಆಂಗಿಕಾಭಿನಯದಲ್ಲಿ ಗಮನ ಸೆಳೆಯುತ್ತದೆ. ರಾಣಿಯ ಪಾತ್ರದಲ್ಲಿ ಅಕ್ಷತಾ.ಆರ್ ಅಭಿನಯ ಗಮನಾರ್ಹವಾಗಿತ್ತು. ನಟರನ್ನು ಪಳಗಿಸಿ ಪಾತ್ರವಾಗಿಸುವಲ್ಲಿ ಹೆಚ್ಚು ಪರಿಶ್ರಮವಹಿಸುವ ಶ್ರೀಪಾದಭಟ್ರವರು ನಾಟಕದಲ್ಲಿ ಅದ್ಯಾಕೋ ಅಭಿನಯಕ್ಕಿಂತ ರಂಗ ತಂತ್ರಗಾರಿಕೆಗೆ ಹೆಚ್ಚು ಗಮನಕೊಟ್ಟಿದ್ದಾರೆ. ಅಥವಾ ಪ್ರತಿಯೊಬ್ಬ ನಟರಿಂದ ಹಲವು ಪಾತ್ರಗಳನ್ನು ಮಾಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿ  ಅಭಿನಯ ವಿಭಾಗದಲ್ಲಿ ಒಂದಿಷ್ಟು ರಾಜಿ ಮಾಡಿಕೊಂಡಿದ್ದಾರೆ.

ನಾಟಕದೊಳಗಿನ ಈಜಿಪ್ತ್ ಕಾಲದ ದೃಶ್ಯಗಳಲ್ಲಿ ಅಳವಡಿಸಿದ ಆಹಾರ್ಯಾಭಿನಯ ನೋಡುವುದೇ ಒಂದು ಸೊಗಸು. ಪಾತ್ರಧಾರಿಗಳಿಗಿಂತಲೂ ಅವರು ತೊಟ್ಟ ಉಡುಗೆ ತೊಡುಗೆ ಆಭರಣಗಳ ನಿರ್ಮಾಣ ಹಾಗೂ ಬಳಕೆ ಇಡೀ ನಾಟಕದ ಹೈಲೈಟ್ ಆಗಿವೆ. ವಿಶಿಷ್ಟ ವಸ್ತ್ರವಿನ್ಯಾಸ ಮಾಡಿದ ದಾಮೋದರ ನಾಯ್ಕರನ್ನು ಅಭಿನಂದಿಸಲೇಬೇಕಿದೆ. ಆದರೆ... ಕೆಲವೊಮ್ಮೆ ಲುಂಗಿಯೊಳಗೆ ಲೆಗ್ಗಿನ್ಸ್ ಕಾಣುವುದು, ಅಂಗಿಯೊಳಗೆ ಕರಿತೋಳು ಚಾಚಿರುವುದು.... ಹೀಗೆ ಕೆಲವಾರು ಆಭಾಸಗಳೂ ಕಾಣಿಸುತ್ತವೆ ಹಾಗೂ ನಿಮಿಷಾರ್ಧದಲ್ಲಿ ವೇಷ ಕಳಚಿ ಪಾತ್ರವಾಗುವ ದಾವಂತದಲ್ಲಿ ಇದು ಅನಿವಾರ್ಯವೂ ಆಗಿದೆ. ಇದೇ ನಾಟಕವನ್ನು ರೆಪರ್ಟರಿಗೆ ಬಿಟ್ಟು ಕಲಾವಿದರು ಹೆಚ್ಚಿರುವ ರಂಗತಂಡಕ್ಕೆ ಭಟ್ರು ನಿರ್ದೇಶಿಸಿದ್ದರೆ ಅದರ ರೀತಿಯೇ ಬೇರೆಯಾಗಿರುತ್ತಿತ್ತೇನೋ?.

ಹಾಗೆಯೇ ಎಂ.ಎಸ್.ಸತ್ಯುರವರು ವಿನ್ಯಾಸಗೊಳಿಸಿದ ಸ್ಥಾಪಿತ ಸ್ಥಿರ ಸೆಟ್ ಕೂಡಾ ನಾಟಕದ ಆಕರ್ಷಕ ಶಕ್ತಿಯೂ ಹಾಗೂ ದೌರ್ಬಲ್ಯವೂ ಆಗಿದೆ. ಪಿರಾಮಿಡ್ ಆಕಾರದ ತ್ರಿಕೋನದಲ್ಲಿ ಬಾಗಿಲು ಮಾಡಿ ತಲಬಾಗಿಲಮೇಲೆ ಸಿಂಹದ ಮುಖವನ್ನು ಅಳವಡಿಸಲಾಗಿದ್ದು ಅಕ್ಕಪಕ್ಕ ಕೆಲವು ಬಣ್ಣದ ಬಾವುಟಗಳನ್ನು ಹಾಕಲಾಗಿದೆ. ಮುಂದೆ ಎಂಟಡಿಗೆ ಎಂಟಡಿ ವಿಸ್ತಾರದ ಪ್ಲಾಟಫಾರಂ ವೇದಿಕೆ ಹಾಕಲಾಗಿದೆ. ಕೆಲವೊಂದು ಪೂರಕ ದೃಶ್ಯಗಳಲ್ಲಿ ಅದ್ಭುತವಾಗಿ ಅನಾವರಣಗೊಳ್ಳುವ ರಂಗಸಜ್ಜಿಕೆಯು ಪೂರಕವಲ್ಲದ ದೃಶ್ಯಗಳಲ್ಲಿ ಆಭಾಸಕಾರಿಯಾಗಿದೆ. ಎರಡು ವಿಭಿನ್ನ ಕಾಲಘಟ್ಟ ಹಾಗೂ ಸಂಸ್ಕೃತಿಯಲ್ಲಿ ನಡೆಯುವ ನಾಟಕದ ದೃಶ್ಯಗಳು ಒಂದೇ ರೀತಿಯ ಸ್ಥಿರವಾದ ಸೆಟ್ ಮುಂದೆನೇ ಪ್ರದರ್ಶನಗೊಳ್ಳುವಾಗ ನೋಡುಗರಲ್ಲಿ ಅದೇನೋ ಗೊಂದಲ ಉಂಟಾಗುತ್ತದೆ. ಊರಿನ ಹೊರಗೆ ಮೇಷ್ಟ್ರನ್ನು ಪಂಡಿತ ಬೇಟಿಯಾಗುವಾಗ ಇರುವ ಸೆಟ್ ಹಾಗೂ ಮರವು ತದನಂತರ ಅನಾಮದೇಯ ಸ್ಥಳದಲ್ಲಿ ರಹಸ್ಯ ಸಭೆ ನಡೆಸುವಾಗಲೂ ಅದೇ ಸೆಟ್ ಇರುತ್ತದೆ. ಕನಿಷ್ಟ ಮರವನ್ನಾದರೂ ಬದಲಾಯಿಸಿದ್ದರೆ ಚೆನ್ನಾಗಿತ್ತು. ಹೀಗೆ ಕಂಟಿನ್ಯೂಟಿ ಸಮಸ್ಯೆಗಳು ನಾಟಕದಾದ್ಯಂತ ಇವೆ. ಸನ್ನಿವೇಶದ ಲೊಕೇಶನ್ ಬದಲಾದರೂ ಹಿನ್ನೆಲೆ ಮಾತ್ರ ಒಂದೇ ಆಗಿದೆಕೆಲವೊಂದು ದೃಶ್ಯಕ್ಕೂ ಬ್ಯಾಕ್ಡ್ರಾಪ್ಗೂ ಸಂಬಂಧವೇ ಇಲ್ಲವಾಗಿದೆ. ಪುಟ್ಟದಾದ ಪ್ಲಾಟಪಾರಂ ಹಾಕಿರುವ ವೇದಿಕೆಯ ಮೇಲೆಯೇ ಹೆಚ್ಚು ದೃಶ್ಯಗಳನ್ನು ಕೇಂದ್ರಿಕರಿಸಿದ್ದರಿಂದ ಕಲಾಕ್ಷೇತ್ರದಂತಹ ದೊಡ್ಡ ವೇದಿಕೆ ಖಾಲಿಯೆನಿಸುತ್ತದೆ. ವೇದಿಕೆಯನ್ನು ಇನ್ನೂ ಸಮರ್ಥವಾಗಿ  ಬಳಸಿಕೊಂಡಿದ್ದರೆ, ಮೇಷ್ಟ್ರು ಹಾಗೂ ಪಂಡಿತರ ರಹಸ್ಯ ಸಭೆಯಂತಹ ಕೆಲವು ದೃಶ್ಯಗಳನ್ನು ವೇದಿಕೆಯ ಬಲ ಇಲ್ಲವೆ ಎಡಬದಿಗೆ ಸ್ಥಳಾಂತರ ಮಾಡಿದ್ದರೆ ನಾಟಕ ಇನ್ನೂ ಕಳೆಗಟ್ಟುತ್ತಿತ್ತು. ಬರಿಗಾಲಿನ ಪೊಲೀಸ್ ತಲೆಗೆ ಅದ್ಯಾಕೆ ಕೆಂಪು ಟೋಪಿ ಹಾಕಿದ್ದಾರೋ ಗೊತ್ತಿಲ್ಲ. ವಕೀಲನಿಗೂ ನ್ಯಾಯಾಧೀಶನಿಗೂ ಒಂದೇ ರೀತಿಯ ಕಾಸ್ಟೂಮ್ ಹಾಕಿದ್ಯಾಕೋ ತಿಳಿತೀಲ್ಲ. ಮಹಾರಾಣಿಗೂ ಪ್ರಾಂತ್ಯಾಧಿಕಾರಿಯ ಹೆಂಡತಿಗೂ ಯಾಕೆ ಕಾಸ್ಟೂಮ್ ಒಂದೇ ಬಗೆಯದ್ದಾಗಿವೆ ಎಂಬ ಪ್ರಶ್ನೆ ಬೇಕಿಲ್ಲ. ನಾಟಕದಲ್ಲಿ ವರ್ಗಸಂಘರ್ಷದ ಆಶಯಕ್ಕೆ ಪೂರಕವಾಗಿ ಅನೇಕ ಪ್ರತಿಮೆ, ರಂಗತಂತ್ರ ವಿನ್ಯಾಸಗಳನ್ನು ಬಳಸಲಾಗಿದ್ದು ವಾಸ್ತವವಾದಿ ತರ್ಕಗಳೆಲ್ಲವ ಪಕ್ಕಕ್ಕಿಟ್ಟು ನೋಡಿದರೆ ನಾಟಕ ಒಂದಿಷ್ಟು ದಕ್ಕಬಹುದಾಗಿದೆ.
 
ಹಾಡು ಸಂಗೀತಗಳು ಅದ್ಯಾಕೋ ನಾಟಕದ ದೃಶ್ಯಗಳಿಗೆ ಸಿಂಕ್ ಆಗಲೇ ಇಲ್ಲ. ನಟರೇ ಹಾಡುವ ಕೋರಸ್ ಹಾಡಿನ ಒಳಗಿನ ಸಾಹಿತ್ಯ ಕೇಳುಗರಿಗೆ ಅರ್ಥವಾಗುತ್ತಿರಲಿಲ್ಲ. ಮನೆಪ್ಟಾ ಊರು ಬಿಟ್ಟು ಹೋಗುವಾಗ ಕೇಳು ಬರುವ ಹಾಡು ಸಿನೆಮಾ ಹಾಡಿನ ಶೈಲಿಯಲ್ಲಿ ಸಂಯೋಜಿಸಲಾಗಿದ್ದು ದೃಶ್ಯಕ್ಕದು ಬೇಕಿರಲಿಲ್ಲ. ಆದರೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಮೂಡಿಬಂದ ಹಿನ್ನೆಲೆ ಸಂಗೀತದ ಎಫೆಕ್ಟ್ ಮಾತ್ರ ರೋಮಾಂಚನವನ್ನುಂಟು ಮಾಡುವಂತಿತ್ತುಬೆಳಕಿನ ವಿನ್ಯಾಸ (ವಿನಯ್ ಚಂದ್ರ) ಪ್ರತಿ ದೃಶ್ಯಗಳನ್ನೂ ನಿರ್ಣಾಯಕವಾಗಿ ಬೆಳಗಿದೆ. ನಾಟಕದ ಆರಂಭ ಹಾಗೂ ಅಂತ್ಯಗಳ ದೃಶ್ಯಗಳನ್ನಂತೂ ಮಾರ್ಮಿಕವಾಗಿಸಿದೆ. ಈಜಿಪ್ತ್ ಕಾಲದ ದೃಶ್ಯ ಸಂಯೋಜನೆಯಲ್ಲಿ ಸಿನಮೀಯಾಟಿಕ್ ಅದ್ಭುತವಾಗಿ ವರ್ಕಔಟ್ ಆಗಿದೆ. ದಾಮೋದರ ನಾಯ್ಕರ ನಿರ್ಮಿಸಿದ ರಂಗಪರಿಕರಗಳನ್ನಂತೂ ನೋಡುವುದೇ ಚೆಂದ.

ಶೀರ್ಷಿಕೆ ಸೇರಿಸಿ
ಕಾಲದ ಕರೆಗೆ ಸ್ಪಂದಿಸುವ ಮೃತ್ಯುಂಜಯನಾಟಕವು ಸೃಜನಶೀಲತೆಗೂ ಹೆಚ್ಚಾಗಿ ಸ್ಪಂದಿಸಿದ್ದರೆ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ನಾಟಕವಾಗಬಹುದಾಗಿತ್ತು. ಒಂದು ರೀತಿಯಲ್ಲಿ ಬೀದಿ ನಾಟಕದ ಕೆಲವು ತಂತ್ರಗಾರಿಕೆಯನ್ನು  ರಂಗನಾಟಕ ಪ್ರಸ್ತುತಿಗೆ ಅಳವಡಿಸಿದಂತಿತ್ತು. ಬೀದಿನಾಟಕದಲ್ಲೂ ಹೀಗೆಯೇ ಕೆಲವು ನಟರು ಹಲವು ಪಾತ್ರಗಳಾಗುತ್ತಾರೆ, ಇದ್ದಕ್ಕಿದ್ದಂತೆ ವೇಷ ಬದಲಾಯಿಸುತ್ತಾರೆ. ಲೈವ್ ಹಾಡು ಕುಣಿತಗಳಿರುತ್ತವೆ. ಸೆಟ್ ಬದಲಾಯಿಸುವ ಗೋಜಿರುವುದಿಲ್ಲ. ಭಾವತೀವ್ರತೆಗಿಂತ ವಿಷಯ ಪ್ರಸಾರ ಅಲ್ಲಿ ಮುಖ್ಯವಾಗಿರುತ್ತದೆ. ಕಲಾತ್ಮಕತೆಗಿಂತ ಆಶಯವೇ ಬೀದಿನಾಟಕಗಳಲ್ಲಿ ಪ್ರಮುಖವಾಗಿರುತ್ತವೆ. ಬೀದಿನಾಟಕ ಹಾಗೂ ರೆಪರ್ಟರಿ ನಾಟಕಗಳೆರಡೂ ಸಂಚಾರಿ ರಂಗಪ್ರಯೋಗಗಳಾಗಿದ್ದರಿಂದ ನಟರಲ್ಲಿ ಯಾಂತ್ರಿಕ ಅಭಿನಯ ಮೈಗೂಡಿರುತ್ತದೆ. ಇವೆಲ್ಲಾ ಅಂಶಗಳೂಮೃತ್ಯುಂಜಯನಾಟಕಗಳಲ್ಲಿವೆ. ಚಿಕ್ಕಪುಟ್ಟ ದೃಶ್ಯಗಳು, ಇದ್ದಕ್ಕಿದ್ದಂತೆ ಬದಲಾಗುವ ಪಾತ್ರಗಳು ನಟರಿಗೂ ಹಾಗೂ ನೋಡುಗರಿಗೂ ನಾಟಕದ ರಸಾನುಭವವನ್ನು ಅನುಭವಿಸಲು ಅಸಾಧ್ಯವಾಗಿಸಿವೆ. ಎರಡು ದೊಡ್ಡ ಕಾದಂಬರಿಗಳನ್ನು ಸೇರಿಸಿ, ಎರಡು ವಿಭಿನ್ನ ಕಾಲಘಟ್ಟದ ಸನ್ನಿವೇಶಗಳನ್ನು ಪೋಣಿಸಿ ಕಟ್ಟಿದ ನಾಟಕವು ರಂಗಭೂಮಿಗೆ ಹೊಸದಾಗಿ ಬಂದ ಯುವ ನಟರಿಗೆ ಭಾರವೆನಿಸುವಂತಿದೆ. ಆಶಯದ ಹೊಣೆಗಾರಿಕೆಯನ್ನು ಹೊರಲು ಆಕೃತಿ ಇನ್ನೂ ತನ್ನ ಇತಿಮಿತಿಗಳನ್ನು ಮೀರಿ ಸಶಕ್ತವಾಗಬೇಕಿದೆ

                             ಶಶಿಕಾಂತ ಯಡಹಳ್ಳಿ 
  
 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ