ಮಂಗಳವಾರ, ಜನವರಿ 5, 2016

ಚಂದ್ರಗಿರಿ ತೀರದಲ್ಲಿ ಅರಳಿದ ಕಲಾತ್ಮಕ ರಂಗವಲ್ಲಿ :

ಮಹಿಳಾ ಸಂವೇದನೆಯ ಕಲಾತ್ಮಕ ರಂಗಪ್ರಯೋಗ ಚಂದ್ರಗಿರಿ ತೀರದಲ್ಲಿ :


ಸಂವೇದನಾಶೀಲ ಲೇಖಕಿ ಸಾರಾ ಅಬೂಬಕರ್ರವರು ನಾಲ್ಕೂವರೆ ದಶಕಗಳ ಹಿಂದೆ ಬರೆದ ಕಾದಂಬರಿ ಚಂದ್ರಗಿರಿ ತೀರದಲ್ಲಿ. ಮುಸ್ಲಿಂ ಸಮುದಾಯದೊಳಗಿರುವ ಪುರುಷಾಧಿಕಾರ ಹಾಗೂ ಧರ್ಮಗಳ ಹಿಡಿತದಿಂದ ನಲುಗಿರುವ ಮಹಿಳೆಯರ ಸಂಕಟಗಳೆನ್ನೆಲ್ಲಾ ತೆರೆದಿಡುವ ಪ್ರಯತ್ನವನ್ನು ಕಾದಂಬರಿಯಲ್ಲಿ ಮಾಡಲಾಗಿದೆ. ಧರ್ಮಗಳ ಕಟ್ಟುಪಾಡುಗಳು ಅದು ಹೇಗೆ ಮನುಷ್ಯರನ್ನು ನಿಯಂತ್ರಿಸಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತವೆ ಎನ್ನುವುದನ್ನು ಮನಕಲಕುವ ಹಾಗೆ ವಿವರಿಸುವ ಸಾರಾರವರು ತಮ್ಮ ದಟ್ಟ ಅನುಭವಗಳನ್ನು ದಿಟ್ಟವಾಗಿ ಕಾದಂಬರಿಯಲ್ಲಿ ಬರೆದಿದ್ದಾರೆ.   ಕಾದಂಬರಿಯನ್ನು ರೂಪಾ ಕೊಟೇಶ್ವರರವರು ಚಂದ್ರಗಿರಿ ತೀರದಲ್ಲಿ ಎನ್ನುವ ಹೆಸರಿನಲ್ಲೇ ರಂಗರೂಪಗೊಳಿಸಿದ್ದು ನಯನ ಸೂಡಾರವರು ತಮ್ಮ  ರಂಗಪಯಣ ರಂಗತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2016 ಜನವರಿ 4 ರಂದು ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನಗೊಂಡು ನೋಡುಗರಿಗೆ ವಿಶಿಷ್ಟ ಅನುಭವ ನೀಡಿತು.

ಇಡೀ ನಾಟಕವನ್ನು ನೋಡುತ್ತಾ ಹೋದಂತೆಲ್ಲಾ ಒಂದು ಕಲಾತ್ಮಕ ಸಿನೆಮಾವನ್ನು ನೋಡಿದಂತೆ ಭಾಸವಾಯಿತು. ಮಹಿಳೆಯರ ಮೇಲೆ ನಡೆಯುವ ಶೋಷಣೆಯ ವಿವಿಧ ಆಯಾಮಗಳು ತೆರೆದುಕೊಳ್ಳತೊಡಗಿದವು. ಧರ್ಮ ಯಾವುದಾದರೇನು ಮಹಿಳೆಯರ ತಲ್ಲಣಗಳು ಒಂದೇ, ವ್ಯವಸ್ಥೆ ಯಾವುದಾದರೇನು ಪಿತೃಪ್ರಧಾನತೆಯ ಶೋಷಣೆ ಒಂದೇ ಎನ್ನುವುದನ್ನು   ನಾಟಕ ದೃಶ್ಯರೂಪದಲ್ಲಿ ಕಟ್ಟಿಕೊಡುವಲ್ಲಿ ಸಫಲವಾಗಿದೆ.ಕಾಸರಗೋಡಿನ ಹತ್ತಿರ ಹರಿಯುವ ಚಂದ್ರಗಿರಿ ನದಿತೀರದಲ್ಲಿ ವಾಸಿಸುವ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯುವ ಅಮಾನವೀಯ ಘಟನೆಗಳನ್ನು ನಾಟಕವು ತೆರೆದಿಡುತ್ತದೆ. ನಾಟಕ ಎಲ್ಲೂ ಬೋರ್ ಹೊಡಿಸದೇ ನೋಡಿಸಿಕೊಂಡು ಹೋಗುವುದು ನಿರ್ದೇಶಕಿಯ ಪ್ರತಿಭೆಗೆ ಸಾಕ್ಷಿಯಾಗಿದೆ. ಚಲನಶೀಲತೆ   ನಾಟಕದ ಗುಣವಾಗಿದ್ದು ಎಲ್ಲೂ ಸ್ಥಗಿತಗೊಳ್ಳದೇ ಕಥಾನಕ ದೃಶ್ಯಗಳ ಮೂಲಕ ಮುನ್ನೆಡೆಯುತ್ತದೆ. ಅಭಿನಯ ಕಲಾವಿದೆಯಾದ ನಯನ ಸೂಡಾ ರವರು ಮೊಟ್ಟ ಮೊದಲ ಬಾರಿ ನಿರ್ದೇಶನ ಮಾಡಿದ ನಾಟಕ ಇದಾಗಿದ್ದರೂ ಅನುಭವಿ ನಿರ್ದೇಶಕಿಯ ಹಾಗೆ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ.     
         
ಪತ್ನೀ ಪೀಡಕ ಮಹಮದ್ ಹೆಂಡತಿ ಪಾತಿಮಾ ತನ್ನ ಗಂಡನ ದೌರ್ಜನ್ಯಗಳೆಲ್ಲವನ್ನೂ ಸಹಿಸಿಕೊಂಡು ತನ್ನ ಮಕ್ಕಳಾದ ನಾದಿರಾ ಹಾಗೂ ಜಮಿಲಾ ಜೊತೆ ಬೀಡಿ ಕಟ್ಟುವ ಕೆಲಸ ಮಾಡುತ್ತಾ ದಿನಗಳನ್ನು ದೂಡುತ್ತಿರುತ್ತಾಳೆ. ರಶೀದ ಎನ್ನುವ ಯುವಕನ ಜೊತೆಗೆ ಬಾಲೆ ನಾದಿರಾಳ ಮದುವೆ ಮಾಡಿಕೊಡಲಾಗುತ್ತದೆ. ಗಂಡನ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸುಖವಾಗಿದ್ದ ನಾದಿರಾಗೆ ಮಗುವೂ ಆಗುತ್ತದೆತಂಗಿ ಜಮಿಲಾಳ ಮದುವೆಗಾಗಿ ಹಣಸಹಾಯ ಮಾಡಲಿಲ್ಲವೆಂಬ ಕಾರಣಕ್ಕೆ ನಾದಿರಾಳ ಗಂಡನಿಗೂ ಹಾಗೂ ತಂದೆಗೂ ಮನಸ್ಥಾಪವಾಗಿ ಮಹಮದ್ ನಾದಿರಾಳನ್ನು ಮಗುವಿನ ಸಮೇತ ತನ್ನ ಮನೆಗೆ ಕರೆದೊಯ್ಯುತ್ತಾನೆ. ಹೆಂಡತಿ ಮರಳಿ ಬಾರದಾದಾಗ ಆತಂಕಗೊಂಡ ರಶೀದ್ ತನ್ನ ತಾಯಿಯನ್ನು ಕಳುಹಿಸಿ ತನ್ನ ಮಗುವನ್ನು ತರಿಸಿಕೊಳ್ಳುತ್ತಾನೆ. ಕೋಪದಿಂದ ಕುದಿಯುತ್ತಿದ್ದ ಮಹಮದ್ ತನ್ನ ಮಗಳಿಗೆ ತಲ್ಲಾಕ್ ಕೊಡಲು ಅಳಿಯನನ್ನು ಒತ್ತಾಯಿಸಿ ವಿಚ್ಚೇದನೆ ಪಡೆದು ತನ್ನ ಊರಿನ ಶ್ರೀಮಂತ ಮುದುಕನಿಗೆ ನಾದಿರಾಳನ್ನು ಮರುಮದುವೆ ಮಾಡಿಕೊಡಲು ಹವಣಿಸುತ್ತಾನೆ. ಇದನ್ನು ನಾದಿರಾ ವಿರೋಧಿಸುತ್ತಾಳೆ. ಕಾಲ ಕಳೆದಂತೆ ಮಹಮದ್ ಅನಾರೋಗ್ಯಪೀಡಿತನಾಗಿ ತನ್ನ ಮಗಳ ಬದುಕನ್ನು ತಾನೇ ಹಾಳುಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಮತ್ತೆ ರಶೀದನೊಡನೇ ಮದುವೆ ಮಾಡಲು ಒಪ್ಪುತ್ತಾನಾದರೂ ಧರ್ಮ ಅಡ್ಡಿಬರುತ್ತದೆ. ಬೇರೊಬ್ಬನೊಡನೆ ನಿಖಾ ಆಗಿ ಒಂದು ರಾತ್ರಿಯಾದರೂ ಸಂಸಾರ ಮಾಡಿದ ನಂತರ ಆತ ತಲ್ಲಾಕ್ ಕೊಟ್ಟರೆ ಮಾತ್ರ ಮೊದಲ ಗಂಡನೊಂದಿಗೆ ಮತ್ತೆ ನಿಖಾ (ಮದುವೆ) ಆಗಲು ಸಾಧ್ಯ ಎಂದು ಧರ್ಮಶಾಸ್ತ್ರ ಹೇಳುತ್ತದೆ. ಧರ್ಮವನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲದ್ದರಿಂದ ನಾದಿರಾಳ ಇಚ್ಚೆಗೆ ವಿರುದ್ಧವಾಗಿ ಮರುಮದುವೆ ಮಾಡಲಾಗುತ್ತದೆ. ಆದರೆ... ಬೇರೊಬ್ಬನೊಂದಿಗೆ ದೇಹಹಂಚಿಕೊಳ್ಳುವುದಕ್ಕೆ ಒಪ್ಪದ ನಾದಿರಾ ತನ್ನದಲ್ಲದ ತಪ್ಪಿಗೆ ತನಗಾದ ಅನ್ಯಾಯಕ್ಕೆ ನ್ಯಾಯ ಕೇಳಲು ಅಲಾನಲ್ಲಿಗೆ ಹೋಗುತ್ತೇನೆಂದುಕೊಂಡು ಚಂದ್ರಗಿರಿ ನದಿಗೆ ಬೀಳುತ್ತಾಳೆ. ಇಲ್ಲಿಗೆ ನಾಟಕವೆನೋ ಮುಗಿಯುತ್ತದೆ... ತದನಂತರ ನೋಡುಗರ ಮೆದುಳಲ್ಲಿ ಮಿಸುಗಾಡ ತೊಡಗುತ್ತದೆ.

ಮನುಷ್ಯರ ಒಳತಿಗಾಗಿಯೇ ಹುಟ್ಟಿಕೊಂಡಿರುವ ಧರ್ಮಗಳು ಕಾಲಾನುಕ್ರಮದಲ್ಲಿ ಕೆಲವರ ಸ್ವಾರ್ಥಸಾಧನೆಯ ಪರಿಕರವಾಗಿದ್ದಂತೂ ಚಾರಿತ್ರಿಕ ಸತ್ಯ. ಇಸ್ಲಾಂ ಧರ್ಮದಲ್ಲಿ ತಲ್ಲಾಖ್ ಎನ್ನುವುದು ಆರಂಭದಲ್ಲಿ ಹೊಂದಾಣಿಕೆರಹಿತ ದಾಂಪತ್ಯದ ವಿರಸಗಳಿಗೆ ವಿಮೋಚನೆಯ ಮಾರ್ಗವಾಗಿ ರೂಪಗೊಂಡಿತ್ತು. ಆದರೆ ಬರುಬರುತ್ತಾ ಅದು ಮಹಿಳೆಯರನ್ನು ಶೋಷಿಸುವ, ಬಳಸಿ ಬಿಸಾಕುವ ಸಾಧನವಾಯಿತು. ಮದುವೆಯಾದ ನಂತರ ಹೆಂಡತಿ ಬೇಡವೆಂದರೆ ಮೂರು ಸಲ ತಲ್ಲಾಖ್ ಹೇಳಿ ಸಂಬಂಧ ಕಳಚಿಕೊಳ್ಳಬಹುದಾಗಿದೆ. ಆದರೆ... ಒಮ್ಮೆ ತಲ್ಲಾಖ್ ಆದರೆ ಮತ್ತೆ ದಂಪತಿಗಳು ಬಯಸಿದರೂ ಒಂದಾಗುವ ಹಾಗಿಲ್ಲ. ಆಗಬೇಕೆಂದರೂ ಆಕೆ ಮತ್ತೊಬ್ಬನೊಡನೆ ಮತ್ತೆ ಮದುವೆಯಾಗಿ ಆತನಿಂದ ತಲಾಖ್ ಪಡೆದು ಮೊದಲ ಗಂಡನ ಜೊತೆ ಕೂಡಿಬಾಳಬಹುದಾಗಿದೆ. ಕನಿಷ್ಟ ಒಂದು ರಾತ್ರಿಯಾದರೂ ಹೊಸ ಗಂಡನ ಜೊತೆಗೆ ಕಳೆಯಬೇಕು ಹಾಗೂ ಆಕಸ್ಮಿಕವಾಗಿ ಬಸಿರೇನಾದರೂ ನಿಂತರೆ ಮತ್ತೆ ಒಂದು ವರ್ಷ ಒಲ್ಲದ ಗಂಡನ ಜೊತೆಗೆ ಇರಲೇಬೇಕು.... ಎನ್ನುವ ವಿಚಿತ್ರ ಆಚರಣೆಯೊಂದು ಇಸ್ಲಾಂ ಸಮುದಾಯದಲ್ಲಿದೆ ಎನ್ನುವುದನ್ನು ಚಂದ್ರಗಿರಿಯ ತೀರದಲ್ಲಿ ನಾಟಕ ದೃಶ್ಯರೂಪದಲ್ಲಿ ತೋರಿಸುತ್ತದೆ. ಜೀವವಿರೋಧಿಯಾದ ಕಾನೂನನ್ನು  ಬೇರೆಯವರು ಹೋಗಲಿ ಸ್ವತಃ ಮುಲ್ಲಾ ಸಹ ಪ್ರಶ್ನಿಸುವಂತಿಲ್ಲ. ವ್ಯವಸ್ಥೆಯ ವಿರುದ್ಧ ಹೋಗಲು ಯಾರಿಗೂ ಧೈರ್ಯವಿಲ್ಲ. ಮಹಿಳೆಯರಿಗಂತೂ ವಿಮೋಚನೆಯ ಎಲ್ಲಾ ಬಾಗಿಲುಗಳನ್ನೂ ಬಂದ್ ಮಾಡಿ ಬದುಕಿನಾದ್ಯಂತ ಪುರುಷಾಧೀನವಾಗಿರುವಂತೆ ದಿಗ್ಭಂಧನವನ್ನು ವಿಧಿಸಿ ಶೋಷಿಸುವ ರೀತಿಯನ್ನು ನಾಟಕ ನೋಡುಗರ ಮನಕಲಕುವ ಹಾಗೆ ಹೇಳುತ್ತದೆ

ತಲ್ಲಾಖಿನಂತೆಯೇ ಮುಸ್ಲಿಂ ಸಮುದಾಯದ ಮಹಿಳಾ ಕುಲಕ್ಕೆ ಶಾಪದಂತೆ ಅಂಟಿಕೊಂಡಿರುವುದು ಬಾಲ್ಯವಿವಾಹ. ನಾಟಕದಲ್ಲಿ  ಏನೂ ಅರಿಯದ ಪುಟ್ಟ ಬಾಲೆ ಪಾತಿಮಾಳನ್ನು ಆತನ ಪತಿ ಹಿಂಸಿಸಿದ ರೀತಿಯನ್ನು ಪಾತಿಮಾಳ ಬಾಯಲ್ಲೇ ಹೇಳಿಸಲಾಗಿದೆ. ಆದರೆ... ಅದೇ ಪಾತಿಮಾ ಮುಂದೆ ತನ್ನ ಪುಟ್ಟ ಮಗಳಿಗೆ ನಿಖಾ ಮಾಡಬೇಕೆಂದು ಗಂಡನನ್ನು ಒತ್ತಾಯಿಸುವುದು ವಿಪರ್ಯಾಸವಾಗಿದೆ. ಬಾಲ್ಯವಿವಾಹಕ್ಕೆ ಬಲಿಯಾಗಿ ನರಕಯಾತನೆ ಅನುಭವಿಸಿದ ತಾಯಿ ತನ್ನ ಮಗಳಿಗೂ ಸ್ವಯಂಪ್ರೇರಿತವಾಗಿ ಬಾಲ್ಯವಿವಾಹಕ್ಕೆ ಒತ್ತಾಯಿಸುವುದು ಅಸಮಂಜಸವೆನಿಸುತ್ತದೆಆದರೂ ನಾಟಕ ಇಂತಹುದನ್ನು ಹೇಳುತ್ತದೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿ ತಮ್ಮ ಜವಾಬ್ದಾರಿ ಕಳೆದುಕೊಳ್ಳಬಯಸುವ ಗಂಡನ ಆತುರದ ತೀರ್ಮಾನಗಳಿಗೆ ಹೆಂಡತಿಯೂ ಒತ್ತಾಸೆಯಾಗಿ ನಿಂತಂತಾಗುತ್ತದೆ. ಮಹಿಳಾ ನಿರ್ದೇಶಕಿಯು ಪಾತಿಮಾಳ ಸಂಕಟವನ್ನು ಅರಿತಿದ್ದರೆ ಪಾತ್ರವು ಬಾಲ್ಯವಿವಾಹಕ್ಕೆ ಒತ್ತಾಯಿಸುವುದನ್ನು ತಪ್ಪಿಸಬಹುದಾಗಿತ್ತು. ಹಾಗಾಗಲಿಲ್ಲ.

ಪತಿ ಮತ್ತು ತಂದೆಯ ಅಹಮಿಕೆಯ ಜಗಳಗಳ ಸುಳಿಗೆ ಸಿಕ್ಕು ಮಹಿಳೆ ತಾಪತ್ರಯಪಡುವುದೇನೂ ಹೊಸದಲ್ಲ. ಜೊತೆಗೆ ನಾಟಕದ ಕಥೆಯಲ್ಲೂ ಹೊಸತನವೇನೂ ಇಲ್ಲ. ಹಾಗೆಯೇ ನಾಲ್ಕೂವರೆ ದಶಕದ ಹಿಂದೆ ಕಾದಂಬರಿ ಬರೆದಾಗ ಗ್ರಾಮೀಣ ಪ್ರದೇಶಗಳಲ್ಲಿ ಪುರುಷ ಶೋಷಣೆಗೊಳಗಾಗಿ ಬದುಕುತ್ತಿದ್ದ ಮಹಿಳೆಯರ ಸಂಕಟಗಳಲ್ಲಿ ಈಗಲೂ ಅಂತಹ ವ್ಯತ್ಯಾಸವೇನೂ ಇಲ್ಲ. ಹೀಗಾಗಿ ನಾಟಕದ ವಿಷಯ ಈಗಲೂ ಪ್ರಸ್ತುತ ಆಗಿರುವಂತೆಯೇ ಎಲ್ಲರಿಗೂ ಗೊತ್ತಿರುವಂತಹುದೂ ಆಗಿದೆ. ಯಾವುದಾದರೂ ಹೊಸ ತಿರುವುಗಳಾದರೂ ಇವೆಯಾ... ಇಲ್ಲವೇ ಮಹಿಳೆಯರ ವಿಮೋಚನೆಗೆ ಇನ್ಯಾವುದಾದರೂ ವಿಭಿನ್ನ ಪರಿಹಾರವನ್ನಾದರೂ ನಾಟಕದಲ್ಲಿ ಸೂಚಿಸಲಾಗಿದೆಯಾ ಎಂದು ನೋಡಿದರೆ ನಿರಾಶೆಯಾಗುತ್ತದೆ. ಯಾಕೆಂದರೆ ನಾದಿರಾ ಪಾತ್ರ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ತೋರದೇ ಮುಕ್ತಿ ಮಾರ್ಗವನ್ನು ಅಂದರೆ ಸಾವಿನ ಮಾರ್ಗವನ್ನು ಆಯ್ದುಕೊಳ್ಳುತ್ತಾಳೆ. ಬದುಕಿನ ಸಂಕಟಗಳಿಗೆ ಸಾವೇ ಪರ್ಯಾಯವೆನ್ನುವುದನ್ನು ಪರೋಕ್ಷವಾಗಿ   ನಾಟಕ ಹೇಳುವಂತಿದೆ. ಇದು ನಿಜಕ್ಕೂ ನಕಾರಾತ್ಮಕ ಸಂದೇಶವಾಗಿದೆ. ಬದುಕಲ್ಲಿ ತೀವ್ರವಾಗಿ ನೊಂದ ಮಹಿಳೆಯೇನಾದರೂ   ನಾಟಕವನ್ನು ನೋಡಿದರೆ ಆತ್ಮಹತ್ಯೆಯ ಆಲೋಚನೆ ಮಾಡುವಂತೆ ಪ್ರೇರೇಪಿಸುವ ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲ. ಮೂಲ ಕಾದಂಬರಿಯಲ್ಲಿ ಸಾರಾರವರು ನಾದಿರಾಳನ್ನು ಮನೆಬಿಟ್ಟು ಮಸೀದಿಯತ್ತ ಹೊರಡುವಂತೆ ಚಿತ್ರಿಸಿದ್ದರೆ, ನಾಟಕದ ನಿರ್ದೇಶಕಿ ನಯನಾರವರು ನಾದಿರಾ ಪಾತ್ರವನ್ನು ನದಿಪಾಲು ಮಾಡಿದ್ದು ಸಮರ್ಥನೀಯವೂ ಅಲ್ಲ, ಅನುಕರಣೀಯವೂ ಅಲ್ಲ. ಜ್ವಲಂತ ಸಮಸ್ಯೆಗಳಿಗೆ ಪರಿಹಾರವೂ ಅಲ್ಲ. ಆತ್ಮಹತ್ಯೆಗಳು ಮೇನಿಯಾ ರೂಪದಲ್ಲಿ ಆರಂಭವಾಗಿರುವ ಪ್ರಸ್ತುತ ಪ್ರಕ್ಷುಬ್ಧ ಸನ್ನಿವೇಶದಲ್ಲಿ ರಂಗಭೂಮಿ ನೊಂದವರಿಗೆ ಸಾಂತ್ವನ ಹೇಳುತ್ತಾ, ಸಂಕಷ್ಟಗಳನ್ನು ಜಾಣ್ಮೆಯಿಂದ ಎದುರಿಸಿ ನಿಲ್ಲುವಂತೆ ಪ್ರೇರೇಪಿಸಬೇಕಿದೆ. ನಿಟ್ಟಿನಲ್ಲಿ ನಾಟಕದ ನಿರ್ದೇಶಕಿ ಆಲೋಚಿಸುವುದುತ್ತಮ ಎಲ್ಲಾ ತಾತ್ವಿಕತೆಗಳನ್ನು ಬದಿಗಿಟ್ಟು ಪ್ರದರ್ಶನವನ್ನು ಮಾತ್ರ ನೋಡಿದರೆ ನಿಜಕ್ಕೂ ಪ್ರೇಕ್ಷಕರ ನಿರೀಕ್ಷೆಯನ್ನು ನಾಟಕ ನಿರಾಸೆಗೊಳಿಸುವುದಿಲ್ಲ.


ಮುಸ್ಲಿಂ ಸಂವೇದನೆಯ ನಾಟಕವನ್ನು ಆಡಿಸಿದವರು, ಆಡಿದವರೆಲ್ಲಾ ಹಿಂದೂಗಳೇ ಆದರೂ ಪ್ರತಿಯೊಂದು ಪಾತ್ರದ ನಡೆ, ನುಡಿ, ಉಡುಗೆ ತೊಡುಗೆ ಎಲ್ಲವೂ ಇಸ್ಲಾಮಿಕರಣಗೊಂಡಿದ್ದು ನಾಟಕದ ಪ್ಲಸ್ ಪಾಯಿಂಟ್. ಆರಂಭದ ದೃಶ್ಯವನ್ನು ಹೊರತುಪಡಿಸಿ ಎಲ್ಲಾ ದೃಶ್ಯಗಳೂ ಸಮುದಾಯದ ಸಂಸ್ಕೃತಿಯನ್ನು ಹೇಳುವಂತಿತ್ತು. ನಾಟಕದ ಅಂತಃಸ್ಸತ್ವ ಇರುವುದು ಭಾವನಾತ್ಮಕ ದೃಶ್ಯಗಳಲ್ಲಿ. ತಾಯಿ-ಮಗಳು, ಗಂಡ -ಹೆಂಡತಿ, ತಾಯಿ-ಮಗು, ಅಕ್ಕ-ತಂಗಿ.... ಅಗಲುವ ಹಾಗೂ ಕೂಡುವ ಸಂದರ್ಭಗಳಲ್ಲಿ ಉಂಟಾಗುವ ಭಾವತೀವ್ರತೆ ನೋಡುಗರ ಕಣ್ಣನ್ನು ತೇವಗೊಳಿಸಿದ್ದಂತೂ ಸತ್ಯ. ಧರ್ಮ ಸಮುದಾಯಗಳು ಯಾವುದಾದರೇನು ಮನುಷ್ಯರ ನೋವಿಗೆ ಮನುಷ್ಯ ಮಿಡಿಯಲು ಸಾಧ್ಯ ಎನ್ನುವುದಕ್ಕೆ  ಮುಸ್ಲಿಂ ಯುವತಿಯ ದುರಂತದ ಬದುಕಿಗೆ ಬಹುತೇಕ ಹಿಂದೂ ಸಮುದಾಯದ ಪ್ರೇಕ್ಷಕರ ಕಣ್ಣಲ್ಲಿ ನೀರಾಡಿರುವುದೇ ಪರಮ ಸಾಕ್ಷಿಯಾಗಿದೆ. ಬ್ಯಾರಿ ಸಮುದಾಯದ ಕಥೆಯನ್ನು ಬಂಟರ ಹುಡುಗಿಯೊಬ್ಬಳು ನಾಟಕವಾಗಿ ಕಟ್ಟಿಕೊಟ್ಟಿದ್ದು ರಂಗಭೂಮಿಯಲ್ಲಿರುವ ಕೋಮುಸೌಹಾರ್ಧತೆಯ ಪ್ರತೀಕವಾಗಿದೆ.

ಮೂಲತಃ ನಟಿಯಾದ ನಯನರವರು ನಾಟಕದ ಅಭಿನಯ ವಿಭಾಗದಲ್ಲಿ ಪರಿಶ್ರಮವಹಿಸಿದ್ದು ಪ್ರತಿ ಪಾತ್ರದ ನಟನೆಯಲ್ಲೂ ಕಂಡು ಬರುತ್ತದೆ. ಸ್ವತಃ ನಯನಾ ಸೂಡಾರವರೇ ನಾಟಕದ ಕೇಂದ್ರ ಪಾತ್ರವನ್ನು ತದಾತ್ಮತೆಯಿಂದ ನಿರ್ವಹಿಸಿದ್ದು ಭಾವಾಭಿನಯದಲ್ಲಿ ನೋಡುಗರ ಮನದೊಳಗೆ ನಾದಿರಾ ಇಳಿಯುವಂತೆ ನಟಿಸಿ ಪಾತ್ರದೊಳಗೆ ತಲ್ಲೀನರಾಗಿದ್ದಾರೆ. ಪಾತಿಮಾ ಪಾತ್ರದಾರಿ ಶಿಲ್ಪಾರವರ ಸಹಜ ನಟನೆ ನೋಡುವುದು ಇನ್ನೂ ಚೆಂದ. ನಾಟಕದ ಖಳನಾಯಕನಾದ ಮಹಮದ್ ಪಾತ್ರಕ್ಕೆ ವಿನೋದ್ ಜೀವದುಂಬಿ ನಟಿಸಿದ್ದಾರೆ. ರಶೀದ್ ನಾಗಿ ಗೋವಿಂದರಾಜ್, ಜಮೀಲಾ ಆಗಿ ಸಂಗೀತಾ, ಅಮೀನಮ್ಮನಾಗಿ ಪ್ರಶಾಂತಿ... ಹೀಗೆ ನಾಟಕದ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಗೆಲ್ಲಿಸಿದ್ದಾರೆ.


ಸೆಟ್ ಅನ್ನುವುದು ಅಭಿನಯಿಸುವ ಕಲಾವಿದರ ಜಾಗವನ್ನು (ಆಕ್ಟಿಂಗ್ ಸ್ಪೇಸ್) ನುಂಗಿ ನಿಂತಂತೆ ಭಾಸವಾಯಿತು. ರಂಗವೇದಿಕೆಯ ಅರ್ಧಕ್ಕಿಂತಲೂ ಹೆಚ್ಚು ಜಾಗವನ್ನು ಸ್ಥಿರವಾದ ರಂಗಸಜ್ಜಿಕೆ ಕಬಳಿಸಿದಂತಿತ್ತು. ಹಿಂದೆ ವೇದಿಕೆಯ ಉದ್ದಕ್ಕೂ ಹಾಕಲಾದ ಪ್ಲಾಟ್ ಪಾರಂ ಸೆಟ್ನ್ನು ಬಳಸಿದ್ದೇ ಕಡಿಮೆಯಾದರೂ ನಾಟಕದಾದ್ಯಂತ ಪ್ರತಿಷ್ಠಾಪನೆಯಾಗಿತ್ತು. ಭಾರವೆನಿಸುವ ರಂಗಸಜ್ಜಿಕೆಯನ್ನು ಕಡಿತಗೊಳಿಸಿ ಅಗತ್ಯ ಇರುವಷ್ಟನ್ನೇ  ಉಳಿಸಿ ಬಳಸಿದ್ದರೆ ನಾಟಕ ಇನ್ನೂ ಕಳೆಗಟ್ಟುತ್ತಿತ್ತು. ರಂಗಸಜ್ಜಿಕೆಯನ್ನು ಮರುವಿನ್ಯಾಸಗೊಳಿಸಿ, ಸೆಟ್ಗಳ ಭಾರವನ್ನು ಕಡಿತಗೊಳಿಸಿದರೆ ಕಲಾವಿದರ ಅಭಿನಯಕ್ಕೆ ಹಾಗೂ ನೋಡುಗರ ಕಣ್ಣೋಟಕ್ಕೆ ಅನುಕೂಲವಾಗಬಹುದಾಗಿದೆ. ಇಲ್ಲವಾದರೆ ಸೆಟ್ಗಳ ವೈಭವದ ನಡುಮಧ್ಯೆ ಕಲಾವಿದರು ಪುಟ್ಟಪುಟ್ಟದಾಗಿ ಕಾಣುತ್ತಾರೆ.

ವ್ಯಕ್ತಿಗಳನ್ನು ಪಾತ್ರವಾಗಿಸುವಲ್ಲಿ ಜಯರಾಜ್ರವರ ಪ್ರಸಾದನ ಸೂಕ್ತವಾಗಿದೆ. ಆದರೆ... ಯುವಕ ಮಹಮದ್ ತದನಂತರ ಹಿರಿಯ ಮಹಮದ್ನಾಗಿ ಬದಲಾಗುತ್ತಾನಾದರೂ ಆತನ ಪತ್ನಿ ಪಾತಿಮಾಳ ಚಹರೆಗಳಲ್ಲಿ ಯಾವುದೇ ಬದಲಾವಣೆಗಳು ಕೊನೆವರೆಗೂ ಆಗುವುದೇ ಇಲ್ಲ. ಯುವತಿಯೊಬ್ಬಳು ಕಾಲಸರಿದಂತೆ ಅಜ್ಜಿಯಾದಾಗ ಮುಖದ ಮೇಲಿನ ಗೆರೆಗಳು ಬದಲಾಗಬೇಕಿತ್ತು, ಬಿಳಿಕೂದಲುಗಳು ಇರಬೇಕಿತ್ತು. ಪಾತಿಮಾ ಪಾತ್ರದ ಮುಖಚರ್ಯೆಯಲ್ಲಿ ವಯಸ್ಸಿಗನುಗುಣವಾಗಿ ಬದಲಾವಣೆ ಮಾಡಿದ್ದರೆ ಚೆನ್ನಾಗಿತ್ತು. ಶೆಟ್ರೆ ಎಂದು ಶ್ರಮಿಕವರ್ಗದವರು ಸಂಬೋಧಿಸುವ ವ್ಯಕ್ತಿಗೆ ಪುರೋಹಿತಶಾಹಿ ಪೂಜಾರಿಗಳ ರೀತಿ ವೇಶಹಾಕಿ ಮೇಕಪ್ ಮಾಡಿದ್ದು ಅಸಮಂಜಸವಾಗಿದೆ. ಹಾಗೂ ಅದು ಮೇಲ್ವರ್ಗದ ಪಾತ್ರವೇ ಆಗಿದ್ದರೆ ಕೆಳವರ್ಗದವರ ಜೊತೆಗೆ ನೆಲದಲ್ಲಿ ಕೂತು ಕಾಫಿ ಕುಡಿಯುವ ಪ್ರಶ್ನೆಯೇ ಬರುತ್ತಿರಲಿಲ್ಲ. ಇಂತಹ ವ್ಯತ್ಯಾಸಗಳು ಚಿಕ್ಕಪುಟ್ಟದ್ದವೆನಿಸಿದರೂ ಬದಲಾಯಿಸಿಕೊಂಡರೆ ಆಯಾ ಪಾತ್ರಗಳ ಪೋಷಣೆಗೆ ನ್ಯಾಯಸಲ್ಲಿಸಿದಂತಾಗುತ್ತದೆ.   

ನಾಟಕದಲ್ಲಿ ಬಳಸಿದ ಬೇಲೂರು ರಘುನಂದನರವರು ರಚಿಸಿದ ಹಾಡಿನ ತುಣುಕುಗಳು ಹಾಗೂ ರಾಜು ಹೊಸಕೋಟೆಯವರ ಸಂಗೀತ ಸಂಯೋಜನೆಗಳು ತುಂಬಾ ಸೊಗಸಾಗಿವೆ. ಆದರೆ ಕೆಲವೊಮ್ಮೆ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕೇಳುಗರಿಗೆ ಅಬ್ಬರ ಎನ್ನಿಸುವಂತೆ ಮೂಡಿಬಂದಿವೆ. ನಾಟಕದ ಸ್ಥಾಯಿ ಭಾವವೇ ಕರುಣಾರಸ. ಹೀಗಾಗಿ ಕರುಣಾರಸ ಪ್ರೇಕ್ಷಕರಲ್ಲಿ ಸ್ಪುರಿಸಬೇಕಾದರೆ ಸಂಗೀತದಲ್ಲಿ ಅರ್ಭಟಕ್ಕಿಂತ ಆರ್ಧತೆ ಬೇಕಿದೆ. ತಾರಕಕ್ಕಿಂತ ಮಾಧುರ್ಯತೆ ಇರಬೇಕಿದೆ. ಭಾವಗೀತೆಗಳಿಗಿರುವ ಗೇಯತೆ ಬೇಕಿದೆ. ಹಾಗಾದಾಗ ಮಾತ್ರ ಸನ್ನಿವೇಶಕ್ಕೆ ತಕ್ಕ ಮೂಡ್ ಸೃಷ್ಟಿಸಲು ಸಾಧ್ಯವಾಗುತ್ತದೆ. ಹಾಗೂ ಆರಂಭದ ದೃಶ್ಯದಲ್ಲಿ ಮಾತುಗಳನ್ನು ಮೀರಿದ ಹಿನ್ನಲೆ ಸಂಗೀತ ಕೇಳುಗರಿಗೆ ಕಿರಿಕಿರಿಯನ್ನುಂಟು ಮಾಡಿದ್ದನ್ನು ನಿವಾರಿಸಿಕೊಳ್ಳಬೇಕಿದೆ. ನಿಖಾ ಸಂದರ್ಭದಲ್ಲಿ ಬ್ಯಾರಿ ಸಮುದಾಯದ ಹಾಡುಗಳನ್ನು ಬಳಸಿದ್ದು ಸಂದರ್ಭೊಚಿತವಾಗಿದೆ. ಆದರೆ ಹಿಂದಿ ಹಾಡುಗಳ ತುಣುಕನ್ನು ಬಳಸಿದ್ದು ಆಭಾಸಕಾರಿಯಾಗಿದೆ. ಯಾಕೆಂದರೆ ಇದು ಕನ್ನಡ ಭಾಷೆಯ ನಾಟಕ ಹಾಗೂ ನಾಟಕದೊಳಗೆ ಪ್ರಸ್ತುತಗೊಂಡ ಬ್ಯಾರಿ ಸಮುದಾಯದವರು ಹಿಂದಿ ಭಾಷೆ ಮಾತಾಡುವವರೂ ಅಲ್ಲ. ಹೀಗಾಗಿ ಹಿಂದಿ ಹಾಡಿನ ಬದಲು ಬ್ಯಾರಿ ಭಾಷೆಯ ಹಾಡುಗಳನ್ನೇ ಬಳಸಿದ್ದರೆ ಸೂಕ್ತವಾಗುತ್ತಿತ್ತು.  


ಜೊತೆಗೆ ಬೆಳಕಿನ ವಿನ್ಯಾಸವೂ (ತಲಕಾಡ ಗುರುರಾಜ್) ಸಹ ದೃಶ್ಯದ ಮೂಡಿಗೆ ಪೂರಕವಾಗಿ ಸ್ಪಂದಿಸಿದ್ದರೆ ನಾಟಕ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತುಹಿಂದೆ ಹೊಳೆ ಇದೆ ಎಂದು ಎಸ್ಟಾಬ್ಲಿಷ್ ಮಾಡುವಾಗ ನೀಲಿ ಬಣ್ಣದ ಬೆಳಕು ಬಿಡದೇ ಹಳದಿ ಬಣ್ಣದ ಬೆಳಕು ಮೂಡುವುದು..... ರೌದ್ರದ ದೃಶ್ಯದಲ್ಲಿ ಕೆಂಪು ಮಿಶ್ರಿತ ಬೆಳಕಿನ ಬದಲು ಬಿಳಿ ಬೆಳಕು ಬಿಟ್ಟಿರುವುದು ರಸಾನುಭವವನ್ನು ಅಷ್ಟರಮಟ್ಟಿಗೆ ಕಡಿಮೆಮಾಡಿದೆ. ಬೆಳಕಿನ ಬಣ್ಣ ಮತ್ತು ದೃಶ್ಯದ ಭಾವಗಳಿಗೆ ಹೊಂದಾಣಿಕೆಯಾದಾಗಲೇ ಪ್ರೇಕ್ಷಕರಲ್ಲಿ ಉದ್ದೇಶಿತ ಮೂಡ್ ಸೃಷ್ಟಿಸಲು ಸಾಧ್ಯವಾಗುತ್ತದೆ. ಏನೇ ಆದರೂ ಹಾಡು ಸಂಗೀತ ಹಾಗೂ ಬೆಳಕುಗಳು ಪೂರಕವಾಗಿ ಸೃಷ್ಟಿಸಬಹುದಾದ ಮೂಡನ್ನೂ ಮೀರಿ ಕಲಾವಿದರು ತಮ್ಮ ಅಭಿನಯ ಸಾಮರ್ಥ್ಯದ ಮೂಲಕವೇ ನೋಡುಗರ ಮನಸ್ಸನ್ನು ತಲುಪಿದ್ದಕ್ಕೆ, ಭಾವನೆಗಳನ್ನು ಮಿಡಿಸಿದ್ದಕ್ಕೆ ಅಭಿನಂದನಾರ್ಹರು.

ಕಾದಂಬರಿಯನ್ನು ರಂಗರೂಪಗೊಳಿಸುವಾಗಿನ ಅನಿವಾರ್ಯತೆಯೋ ಇಲ್ಲವೇ ನಿರ್ದೇಶಕಿಯ ಮಿತಿಯೋ ಗೊತ್ತಿಲ್ಲ... ಆದರೆ ನಾಟಕದ ತುಂಬಾ ಚಿಕ್ಕ ಪುಟ್ಟ ಸನ್ನಿವೇಶಗಳೇ ತುಂಬಿದ್ದು ವಿಪರೀತ ಬ್ಲಾಕೌಟ್ಗಳನ್ನು ಬಳಸಲಾಗಿದೆ. ಒಂದು ದೃಶ್ಯ ಆರಂಭವಾಗಿ ಇನ್ನೇನು ಪ್ರೇಕ್ಷಕರ ಮನಸ್ಸಲ್ಲಿ ರೆಜಿಸ್ಟರ್ ಆಗಬೇಕು ಅನ್ನುವುದರೊಳಗೆ ಅದು ಮುಗಿದೇ ಹೋಗಿ ಮತ್ತೊಂದು ದೃಶ್ಯ ಮೂಡುತ್ತದೆ. ಒಂದೂಮುಕ್ಕಾಲು ಗಂಟೆಯ ನಾಟಕದಲ್ಲಿ ಮೂವತ್ತೆರಡಕ್ಕೂ ಹೆಚ್ಚು ದೃಶ್ಯಗಳಿವೆ ಹಾಗೂ ಅಷ್ಟೇ ಬ್ಲಾಕೌಟ್ಗಳೂ ಇವೆ. ಕೆಲವು ದೃಶ್ಯಗಳನ್ನು ಮರ್ಜ ಮಾಡಿ, ಬ್ಲಾಕೌಟ್ಗಳನ್ನು ಕಡಿಮೆ ಮಾಡಿ ಒಂದು ದೃಶ್ಯ ಮುಗಿಯುತ್ತಿದ್ದಂತೆ ಇನ್ನೊಂದು ದೃಶ್ಯ ಆರಂಭವಾಗುವಂತಹ ರಂಗತಂತ್ರಗಳನ್ನು ಬಳಸಿಕೊಂಡರೆ ಹೆಚ್ಚುವರಿ ಬ್ಲಾಕೌಟ್ಗಳನ್ನು ನಿಯಂತ್ರಿಸಬಹುದಾಗಿದೆ.
                  
ದೊಡ್ಡದಾದ ಕಾದಂಬರಿಯನ್ನು ಸಮಯದ ಮಿತಿಯೊಳಗೆ ನಾಟಕವಾಗಿಸುವುದು ಸುಲಭ ಸಾಧ್ಯವಾದುದಲ್ಲ. ಬೆಂಗಳೂರಿನಂತಹ ಮೆಟ್ರೋಸಿಟಿಯಲ್ಲಿ ಎರಡು ತಿಂಗಳುಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಕಲಾವಿದರನ್ನಿಟ್ಟುಕೊಂಡು, ಅದರಲ್ಲೂ ಆರೇಳು ಜನ ಮಹಿಳಾ ಕಲಾವಿದರನ್ನೂ ಸೇರಿಸಿಕೊಂಡು ಸತತ ರಿಹರ್ಸಲ್ಸ್ ಮಾಡಿ ನಾಟಕ ಕಟ್ಟುವುದು ಸರಳವೂ ಅಲ್ಲ. ಅಂತಹ ಕಷ್ಟಕರವಾದ ಪ್ರಯತ್ನವನ್ನು ಇಷ್ಟ ಪಟ್ಟು ಮಾಡಿದ ನಿರ್ದೇಶಕಿಯ ಪರಿಶ್ರಮ ಮರೆಯುವಂತಿಲ್ಲ. ಏನೇ ಆಗಲಿ ನಾಟಕದ ಮೂಲಕ ಆಧುನಿಕ ಕನ್ನಡ ರಂಗಭೂಮಿಗೆ ನುರಿತ ಮಹಿಳಾ ನಿರ್ದೇಶಕಿಯೊಬ್ಬರು ದಕ್ಕಿದ್ದಂತೂ ಹೆಮ್ಮೆಯ ವಿಷಯ ಎನ್ನುವುದು ಸುಳ್ಳಲ್ಲ.        

                                                 ಶಶಿಕಾಂತ ಯಡಹಳ್ಳಿ               

 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ