ಶನಿವಾರ, ಆಗಸ್ಟ್ 1, 2015

“ಪುರಭವನ ದುಬಾರಿ ; ಬೀದಿಗಿಳಿದ ಕಲಾವಿದರು”

ಟೌನ್ಹಾಲ್ ಶ್ರೀಮಂತರಿಗೆ, ಕಲಾವಿದರು ಬೀದಿಗೆ....



ಮತ್ತೊಮ್ಮೆ ರಂಗಕರ್ಮಿಗಳು ಬೀದಿಗಿಳಿದಿದ್ದಾರೆಯಾವಾಗ ರಂಗಭೂಮಿಯವರು ಬೀದಿಗಿಳಿದು ಪ್ರತಿಭಟಿಸುತ್ತಾರೆಂದರೆ ಅಲ್ಲಿ ಸಾಂಸ್ಕೃತಿಕ ಬಿಕ್ಕಟ್ಟು ಶುರುವಾಗಿದೆ ಎಂದೇ ಅರ್ಥ. ಬೆಂಗಳೂರಿನಲ್ಲಿ ಇರುವ ಜನಸಂಖ್ಯೆಗೆ ಅನುಗುಣವಾಗಿ ಸಾಂಸ್ಕೃತಿಕ ಸಭಾಂಗಣಗಳು ಹಾಗೂ ರಂಗಮಂದಿರಗಳು ಇಲ್ಲವೇ ಇಲ್ಲ. ಕೆಲವು ಬಡಾವಣೆಗಳಲ್ಲಿ ಬಯಲು ರಂಗಮಂದಿರಗಳಿವೆಯಾದರೂ ಅವು ನಾಟಕ ಪ್ರದರ್ಶನಕ್ಕೆ ಅನುಕೂಲಕರವಾಗಿಲ್ಲ. ಅವುಗಳಲ್ಲಿ ಬಹುತೇಕ ಬಯಲು ರಂಗಮಂದಿರಗಳು ಅವ್ಯವಸ್ಥೆಯ ಆಗರಗಳಾಗಿವೆ. ಇಂತಹುದರಲ್ಲಿ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರ ಭಾಗದಲ್ಲಿರುವ ಪುರಭವನವನ್ನೂ ಸಹ ರಂಗಭೂಮಿಗೆ ದಕ್ಕದ ಹಾಗೆ ಮಾಡುವ ಹುನ್ನಾರವೊಂದು ಬಿಬಿಎಂಪಿ ಯಿಂದ ವ್ಯವಸ್ಥಿತವಾಗಿ ನಡೆದಿದೆ.

ಅರ್ಧ ದಿನಕ್ಕೆ ಐದು ಸಾವಿರಕ್ಕೆ ಬಾಡಿಗೆಗೆ ಸಿಗುತ್ತಿದ್ದ ಟೌನ್ಹಾಲ್ ದರವನ್ನು ಏಕಾಏಕಿಯಾಗಿ ಒಂದೂಕಾಲು ಲಕ್ಷ ರೂಪಾಯಿಗೇರಿಸಲಾಗಿದೆ. ಇದು ಸಾಂಸ್ಕೃತಿಕ ಕ್ಷೇತ್ರದ ಮೇಲೆ ಮಾಡಿದ ಗಧಾಪ್ರಹಾರ. ಇನ್ನು ಮೇಲೆ ಟೌನ್ಹಾಲ್ನಲ್ಲಿ ಯಾವುದೇ ರಂಗಚಟುವಟಿಕೆಗಳು ಹಾಗೂ ಇತರೇ ಕಲಾ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ದಿನಕ್ಕೆ ಒಂದೂಕಾಲು ಲಕ್ಷ ರೂಪಾಯಿ ಬಾಡಿಗೆಯನ್ನು ತೆತ್ತು ನಾಟಕಗಳನ್ನು ಮಾಡುವ ತಾಕತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನವನ್ನೇ ಬಹುತೇಕ ನಂಬಿಕೊಂಡಿರುವ ಬೆಂಗಳೂರಿನ ಕನ್ನಡ ರಂಗಭೂಮಿಗಂತೂ ಇಲ್ಲವೇ ಇಲ್ಲ. ಇನ್ನು ಕೇವಲ ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಟೌನ್ಹಾಲ್ನಲ್ಲಿ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ. ಇದೇ ಬಿಬಿಎಂಪಿಯವರ ಹಿಡನ್ ಅಜೆಂಡಾ ಸಹ ಆಗಿದೆ. ಯಾಕೆಂದರೆ  ಟೌನ್ಹಾಲ್ನ್ನು ಕಲೆ ಮತ್ತು ರಂಗಭೂಮಿ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕಿದೆ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ತಮ್ಮ ಹಿಡಿತವನ್ನು ಸಾಧಿಸಿದ ಬ್ರಹತ್ ಕಂಪನಿಗಳ ಹಾಗೂ ಕ್ಯಾಪಿಟೇಶನ್ ಶಾಲೆ ಕಾಲೇಜುಗಳ ಮತ್ತು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಟೌನ್ಹಾಲ್ನ್ನು ಬೇಕೆಂದಾಗಲೆಲ್ಲಾ ಒದಗಿಸಿಕೊಡಬೇಕಿದೆ.

ಇನ್ನೊಂದು ಪ್ರಮುಖ ಕಾರಣವೇನೆಂದರೆ... ಟೌನ್ಹಾಲ್ ಎನ್ನುವುದು ನಗರದ ಹೃದಯ ಭಾಗದಲ್ಲಿರುವುದರಿಂದ ಅದು ಜನಪರ ಸಂಘಟನೆಗಳ ಕಾರ್ಯಕ್ರಗಳಿಗೆ ವೇದಿಕೆಯನ್ನೊದಗಿಸುತ್ತಾ ಬಂದಿದೆ. ಕನ್ನಡಪರ, ದಲಿತ, ಬಂಡಾಯ, ರೈತ, ಮಹಿಳಾ ಚಳುವಳಿಯ ಸಂಘಟನೆಗಳೆಲ್ಲಾ ಇದೇ ಟೌನ್ಹಾಲ್ನ್ನು ವೇದಿಕೆಯನ್ನಾಗಿಸಿಕೊಂಡು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿವೆ. ಟೌನ್ಹಾಲ್ ಮುಂದಿನ ಮೆಟ್ಟಿಲುಗಳ ಮೇಲಂತೂ ಪ್ರತಿದಿನ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಕಡಿಮೆ ಬಾಡಿಗೆಗೆ ಸಿಗುತ್ತಿದ್ದ ಟೌನ್ಹಾಲ್ನ್ನು ಯಾವುದೇ ಜನಪರ ಸಂಘಟನೆಗಳ ಕೈಗೆಟುಕದಂತೆ ಏರಿಸಿದರೆ ಅಲ್ಲಿ ವ್ಯವಸ್ಥೆ ವಿರೋಧಿ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಹಾಗೂ ಪ್ರತಿಭಟನೆಗಳಿಗೆ ಜಾಗವಿಲ್ಲದಂತೆ ಮಾಡುವುದು ಸರಕಾರದ ಭಾಗವೇ ಆಗಿರುವ ಬಿಬಿಎಂಪಿಯ ಒಳಹುನ್ನಾರವಾಗಿದೆ. ಟೌನ್ಹಾಲ್ ಒಳಗೆ ಯಾವಾಗ ಸಂಘಟನೆಗಳ ಕಾರ್ಯಕ್ರಮಗಳು ಬಾಡಿಗೆ ಭಾರದಿಂದಾಗಿ ಕ್ಷೀಣಿಸುತ್ತವೆಯೋ ಆಗ ಟೌನ್ಹಾಲ್ ಹೊರಗೆ ನಡೆಯುವ ಪ್ರತಿಭಟನೆಗಳೂ ಸಹ  ಸಾವಕಾಶವಾಗಿ ನಶಿಸುತ್ತವೆ ಎನ್ನುವ ಶಡ್ಯಂತ್ರ ಆಳುವ ವರ್ಗದ್ದಾಗಿದೆ. ಜನನಿಬಿಢ ಪ್ರದೇಶಗಳಲ್ಲಿ ವ್ಯವಸ್ಥೆ ವಿರೋಧಿ ಪ್ರತಿಭಟನೆಗಳು ನಡೆಯಬಾರದು ಎನ್ನುವುದು ಎಲ್ಲಾ ಸರಕಾರಗಳ ಉದ್ದೇಶವಾಗಿದೆ. ಇದಕ್ಕೆ ಉದಾಹರಣೆಯಾಗಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗಳನ್ನು ನಿರ್ಭಂಧಿಸಿ ಹೆಚ್ಚು ಜನರು ಗಮನಿಸದ ಸ್ವಾತಂತ್ರ್ಯ ಉದ್ಯಾನವನದ ಮುಂದೆ ಜನಸಾಮಾನ್ಯರು ಸಂಚರಿಸದ  ಜಾಗದಲ್ಲಿ ಪ್ರತಿಭಟನೆ ಮಾಡಿಕೊಳ್ಳುವವರಿಗೆ ಸರಕಾರ ಅವಕಾಶ ಮಾಡಿ ಕೊಡಲಾಗಿದೆ. ಅಂದರೆ ಪ್ರತಿಭಟನೆಯ ಕಿಚ್ಚು ಸಾಮಾನ್ಯ ಜನರಿಗೆ ತಲುಪದಿರಲಿ ಎನ್ನುವ ಹುನ್ನಾರ ಆಳುವ ವ್ಯವಸ್ಥೆಯದ್ದಾಗಿದೆ. ಇದರ ಭಾಗವಾಗಿಯೇ ಈಗ ಟೌನ್ಹಾಲ್ನ್ನು ಸಹ ರಂಗಕ್ರಿಯೆಗಳು ಹಾಗೂ ಪ್ರತಿಭಟನಾ ಚಟುವಟಿಕೆಗಳಿಂದ ವ್ಯವಸ್ಥಿತವಾಗಿ ಮುಕ್ತಗೊಳಿಸುವ ಒಳಸಂಚು ನಡೆಯುತ್ತಿದೆ. ರಂಗಕರ್ಮಿಗಳ ಪ್ರತಿಭಟನೆಯ ಕುರಿತು ತಿಳಿಯುವುದಕ್ಕಿಂತ ಮೊದಲು ಟೌನ್ಹಾಲ್ ಕುರಿತು ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.
          
ಪಾರಂಪರಿಕ ಸಾಂಸ್ಕೃತಿಕ ಕೇಂದ್ರವಾದ ಪುರಭವನ (ಟೌನ್ಹಾಲ್) ಬೆಂಗಳೂರಿಗೆ ಒಂದು ಹೆಮ್ಮೆಯ ಕಟ್ಟಡ. ಇದು ಕೇವಲ ಕಲ್ಲು ಕಾಂಕ್ರೀಟಿನ ಕಟ್ಟಡವಾಗಿರದೇ ಸ್ವಾತಂತ್ರ್ಯಪೂರ್ವಕಾಲದಿಂದಲೂ ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನೊದಗಿಸಿದ ಶ್ರೀಮಂತ ಕಲಾಸೌಧವೇ ಆಗಿದೆ. ಸಾಂಸ್ಕೃತಿಕ ಕಟ್ಟಡದ ವಿನ್ಯಾಸ ನಿಯೋ ಕ್ಲಾಸಿಕಲ್ ರೋಮನ್ ಮಾದರಿಯದ್ದಾಗಿದೆ. ಆಗ 1913 ರಿಂದ 1920 ಅವಧಿಯಲ್ಲಿ ಬೆಂಗಳೂರಿನ ಪುರಸಭೆಯ ಅಧ್ಯಕ್ಷರಾಗಿದ್ದ ಪುಟ್ಟಣ್ಣಚೆಟ್ಟಿಯವರು ಅಧ್ಯಕ್ಷರಾದ ತಕ್ಷಣ ಮೊದಲು ಮಾಡಿದ ಕೆಲಸವೇ  ಇಂತಹುದೊಂದು ಭವ್ಯಕಟ್ಟಡವನ್ನು ಕಟ್ಟುವಲ್ಲಿ ಆಸಕ್ತಿವಹಿಸಿದ್ದು. ಅವರು ಮೈಸೂರು ಸಂಸ್ಥಾನಕ್ಕೆ ಮನವಿ ಮಾಡಿಕೊಂಡು ತಮ್ಮ ಯೋಜನೆಯನ್ನು ತಿಳಿಸಿ ಕಟ್ಟಡದ ನಿರ್ಮಾಣಕ್ಕೆ ಆಗ್ರಹಿಸಿದರು. ಅವರ ಯೋಜನೆ ಹಾಗೂ ಒತ್ತಾಸೆಯ ಫಲವಾಗಿ 1933 ಮಾರ್ಚ 6 ರಂದು ಮೈಸೂರಿನ ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರರವರು ಈಗಿರುವ ಪುರಭವನ ನಿರ್ಮಾಣದ ಆರಂಭಿಕ ಅಡಿಕಲ್ಲನ್ನು ನೆಟ್ಟು ಉದ್ಘಾಟನೆ ಮಾಡಿದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮೈಲ್ರವರಿಗೆ ಪುರಭವನ ಕಟ್ಟಿಸುವ ಜವಾಬ್ದಾರಿ ವಹಿಸಲಾಗಿತ್ತು. ಎಸ್. ಲಕ್ಷ್ಮೀನಾರಾಯಣರವರು ಕಟ್ಟಡದ ವಿನ್ಯಾಸನವನ್ನು ಮಾಡಿದ ಆರ್ಕಿಟೆಕ್ಟ್ ಆಗಿದ್ದರು. ಕೇವಲ ಎರಡೂವರೆ ವರ್ಷದಲ್ಲಿ ಯುರೋಪಿಯನ್ ಸಾಂಪ್ರದಾಯಿಕ ಗ್ರೀಕೋ-ರೋಮನ್ ಶೈಲಿಯ ಎರಡು ಅಂತಸ್ತಿರುವ ೧೦೩೨ ಆಸನಗಳ ಸಾಮರ್ಥ್ಯದ ಭವ್ಯ ಸಭಾಂಗಣ ಪೂರ್ತಿಗೊಂಡಿತು. 1935, ಸೆಪ್ಟಂಬರ್ 11  ರಂದು ಪುರಭವನವನ್ನು ಮೈಸೂರಿನ ರಾಜಕುಮಾರ ಕಂಠೀರವ ನರಸಿಂಹರಾಜ ಒಡೆಯರ್ರವರು ಉದ್ಘಾಟಿಸಿದರು. ಇಡೀ ಪುರಭವನದ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಒಟ್ಟು ಖರ್ಚಾದ ಹಣ ಕೇವಲ ಒಂದೂಮುಕ್ಕಾಲು ಲಕ್ಷ ರೂಪಾಯಿಗಳು. ಇಡೀ ಪುರಭವನದ ನಿರ್ಮಾಣಕ್ಕೆ ಮೂಲ ಕಾರಣೀಕರ್ತರಾದ ಪುಟ್ಟಣ್ಣಚೆಟ್ಟಿಯವರ ಹೆಸರನ್ನೇ ಪುರಭವನಕ್ಕೆ
ಇಡಲಾಯಿತು. ಅಂದಿನಿಂದಿ ಇಲ್ಲಿವರೆಗೂ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಲಕ್ಷಾಂತರ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಬೆಂಗಳೂರಿನ ಜನರ ಸಾಂಸ್ಕೃತಿಕ ಹಸಿವನ್ನು ತಣಿಸುವ ತಾಣವಾಗಿ ಟೌನ್ಹಾಲ್ ರೂಪಗೊಂಡಿದೆ1976 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರಾಗಿದ್ದ ದೇವರಾಜ ಅರಸುರವರು ಟೌನ್ಹಾಲ್ನಲ್ಲಿ ರಶಿಯನ್ ಬ್ಯಾಲೆ ನೋಡಲು ಬಂದಾಗಿ ಅಲ್ಲಿಯ ಅವ್ಯವಸ್ಥೆಗಳನ್ನು ನೋಡಿ ನವೀಕರಣ ಮಾಡಲು ಆಜ್ಞಾಪಿಸಿದರು. ಪಿಡಬ್ಲುಡಿಯವರ ನಿಧಾನಗತಿಯಿಂದಾಗಿ ರಿಪೇರಿ ಕಾರ್ಯ ಮುಗಿದಿದ್ದು 1990ರಲ್ಲಿ ಪುರಭವನವನ್ನು ನವೀಕರಣಕ್ಕಾಗಿ ಮುಚ್ಚಿದ್ದಾಗ ಆಸನ ಸಂಖ್ಯೆಯನ್ನು 810 ಕ್ಕೆ ಇಳಿಸಲಾಯಿತು. ಆಗ ಒಳಾಂಗಣ ಹಾಗೂ ಹೊರಾಂಗಣದ ರಿನಿವೇಟ್ ಮಾಡಲು ಖರ್ಚಾಗಿದ್ದು ಕೇವಲ 65 ಲಕ್ಷ ರೂಪಾಯಿಗಳು ಮಾತ್ರ. ಸಾರ್ವಜನಿಕ ಕಟ್ಟಡ ಇಲಾಖೆ (ಪಿಡಬ್ಲುಡಿ) ಆಧೀನದಲ್ಲಿದ್ದ ಟೌನ್ಹಾಲ್ನ್ನು ಮುಂದೆ ನಗರಪಾಲಿಕೆ ವ್ಯಾಪ್ತಿಗೆ ತರಲಾಯಿತು. ಹಾಗೂ ಸಭಾಂಗಣದ ಅರ್ಧದಿನದ ಬಾಡಿಗೆ ಗರಿಷ್ಟ ಐದು ಸಾವಿರವಾಗಿತ್ತು.


2014 ಜೂನ್ 25 ರಂದು ಟೌನ್ಹಾಲ್ನ್ನು ನವೀಕರಣಕ್ಕಾಗಿ ಮತ್ತೊಮ್ಮೆ ಮುಚ್ಚಿ ನವೀಕರಣದ ಆರಂಭಕ್ಕಾಗಿ ಪೂಜೆಯನ್ನೂ ಮಾಡಲಾಯಿತು. ಸುಮಾರು ಐದು ಕೋಟಿಗಳ ಅಂದಾಜು ವೆಚ್ಚವೆಂದು ಲೆಕ್ಕಹಾಕಲಾಗಿತ್ತು. ಪುರಭವನದ ನವೀಕರಣಕ್ಕಾಗಿ ಕೇಂದ್ರ ಸರಕಾರಿ ಸಾಮ್ಯದ ಬ್ರಾಡಕಾಸ್ಟಿಂಗ್ ಇಂಜನೀಯರಿಂಗ್ ಕನ್ಸಲ್ಟಂಟ್ ಎನ್ನುವ ಸಂಸ್ಥೆಯಿಂದ ಯೋಜನೆಯನ್ನು ಸಿದ್ದಗೊಳಿಸಲಾಯಿತು. ಸಂಜಯ್ ಮಾರ್ಕೆಟಿಂಗ್ ಆಂಡ್ ಪಬ್ಲಿಸಿಟಿ ಸರ್ವಿಸಸ್ ಎನ್ನುವ ಸಂಸ್ಥೆಗೆ ನವೀಕರಣದ ಗುತ್ತಿಗೆ ಕೊಡಲಾಯಿತು. ಗಿರೀಶ್ ಕಾರ್ನಾಡ ಹಾಗೂ ಆರುಂಧತಿ ನಾಗ್ ರವರವರಂತಹ ಹಿರಿಯರ ಅಭಿಪ್ರಾಯ ಪಡೆದು ಸಭಾಂಗಣದ ಒಳವಿನ್ಯಾಸವನ್ನು ನವೀಕರಿಸಲಾಗುವುದು ಹಾಗೂ ಆಗಸ್ಟ್ 15 ರೊಳಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಆಗಿನ ಬಿಬಿಎಂಪಿ ಮೇರ್ ಸತ್ಯನಾರಾಯಣ ಹಾಗೂ ಆಯುಕ್ತ ಎಂ.ಲಕ್ಷ್ಮೀನಾರಾಯಣರವರು ಪತ್ರಿಕಾಗೋಷ್ಠಿಯಲ್ಲಿ ಭರವಸೆ ಕೊಟ್ಟಿದ್ದರು.

ನವೀಕರಣಗೊಂಡ ಟೌನಹಾಲ್ ಉದ್ಘಾಟನಾ ಸಮಾರಂಭ 8-4-2015

ಆದರೆ.... ಮೊದಲ ಹಂತದ ನವೀಕರಣ ಕಾರ್ಯಮುಗಿದು ಮರುಉದ್ಭಾಟನೆಯಾಗಿದ್ದು 2015 ಎಪ್ರಿಲ್ 8 ರಂದು. ಇನ್ನೂ ಎರಡನೇ ಹಂತದ ನವೀಕರಣ ಬಾಕಿ ಇದ್ದು ಅದಕ್ಕೆ 6 ಕೋಟಿ ಹಣ ಬೇಕಂತೆ. 5 ಕೋಟಿ ವೆಚ್ಚದಲ್ಲಿ ಆಗಬಹುದೆಂದಿದ್ದ ನವೀಕರಣ ಕಾರ್ಯ ವಿಳಂಬದಿಂದಾಗಿ ಕೊನೆಗೆ 8 ಕೋಟಿಯಷ್ಟು ಖರ್ಚಾಗಿದೆಯಂತೆದ್ವನಿವರ್ಧಕ ವ್ಯವಸ್ಥೆ, ಹವಾನಿಯಂತ್ರಣ, ಪಾಲ್ಸ್ ಸೀಲಿಂಗ್, ನೂತನ ವೇದಿಕೆ, ಹೊಸ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರಕಾರಿ ವ್ಯವಸ್ಥೆಯಲ್ಲಿ ಇದೆಲ್ಲವೂ ಮಾಮೂಲು ಎನ್ನಿಸುವಂತಿದೆ. ನಿಜವಾಗಿ ಖರ್ಚಾದ ಹಣ ಮೂರ್ನಾಲ್ಕು ಕೋಟಿಗಳಿದ್ದರೆ ಅದಕ್ಕೆ ಲೆಕ್ಕ ತೋರಿಸುವುದು ಮಾತ್ರ ಕೋಟಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾರೂ ಇದನ್ನು ಕೇಳಲೂ ಹೋಗುವುದಿಲ್ಲ. ಕೇಳಿದರೂ ಸರಿಯಾದ ಲೆಕ್ಕ ಯಾರೂ ಕೊಡುವುದೂ ಇಲ್ಲಾ. ಸರಕಾರ ಎತ್ತಿಕೊಂಡ ಯಾವುದೇ ಕೆಲಸ ಹೇಳಿದ ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿದ್ದಕ್ಕೆ ಸಾಕ್ಷಿಗಳೂ ಇಲ್ಲ. ಹೀಗಾಗಿ ಸಮಯವೂ ಹೆಚ್ಚಾಯಿತು ಹಾಗೂ ಖರ್ಚೂ ಮಿತಿಮೀರಿತು. ಆದರೂ ರಂಗಭೂಮಿಯವರು ಸಹನೆಯಿಂದ ಕಾಯ್ದರು. ಇಂದಿಲ್ಲ ನಾಳೆ ನಮ್ಮ ನಾಟಕಗಳನ್ನಾಡಲು ಸುಸಜ್ಜಿತವಾದ ಟೌನ್ಹಾಲ್ ದೊರೆಯುತ್ತದೆ ಎಂಬುದು ರಂಗಕರ್ಮಿಗಳ ನಿರೀಕ್ಷೆಯಾಗಿತ್ತು. ಆದರೆ... ಬಿಬಿಎಂಪಿಯಿಂದ ಎರಡನೇ ಬಾರಿ ಆಘಾತಕ್ಕೊಳಗಾಗಬೇಕಾಗಿತ್ತು. ಮೊದಲ ಬಾರಿಗೆ ಬಿಬಿಎಂಪಿ 2014 ಜನವರಿಯಲ್ಲಿ ತನ್ನ ಸಾಲಕ್ಕೆ ಪ್ರತಿಯಾಗಿ ಟೌನಹಾಲ್ನ್ನೇ ಒತ್ತೆ ಇಡಲು ಪ್ರಯತ್ನಿಸಿದಾಗ ಮೊದಲ ಆಘಾತವಾಗಿತ್ತು. ಆದರೆ ಎಲ್ಲಡೆಯಿಂದ ವ್ಯಕ್ತವಾದ ಪ್ರತಿರೋಧದಿಂದಾಗಿ ಟೌನ್ಹಾಲ್ ಒತ್ತೆಯಾಗುವುದನ್ನು ತಡೆಯಲಾಯಿತು. ಈಗ ಬಿಬಿಎಂಪಿ ಕೌನ್ಸಿಲ್ಸಭೆ  ಟೌನ್ಹಾಲ್ಗೆ ದಿನವೊಂದಕ್ಕೆ ಒಂದೂಕಾಲು ಲಕ್ಷ ಬಾಡಿಗೆ ವಿಧಿಸಿದ್ದು ತಿಳಿದು ಬೆಂಗಳೂರಿನ ಸಾಂಸ್ಕೃತಿಕ ಕ್ಷೇತ್ರದ ಜನ ದಿಗ್ಬ್ರಾಂತರಾದರು. ರಂಗಭೂಮಿಯವರ ನಿರೀಕ್ಷೆ ತಲೆಕೆಳಗಾಗಿ ತಳಮಳಗೊಂಡರು. ಹಿಂದಿರುವ ಐದು ಸಾವಿರ ಬಾಡಿಗೆಯನ್ನು ಕಟ್ಟುವುದೇ ದುಸ್ತರ ಎನ್ನುವ ಹಂತದಲ್ಲಿದ್ದ ರಂಗಸಂಘಟಕರಿಗೆ ಒಂದೂಕಾಲು ಲಕ್ಷ ಕಟ್ಟಿ ಎಂದರೆ ಹೇಗಾಗಬೇಡ.... ಎಲ್ಲಾ ಕಡೆಗೆ ಅಸಹನೆ ಬುಗಿಲೆದ್ದಿತು.

ನವೀಕರಣಗೊಂಡ ಪುರಭವನದ ಒಳಾಂಗಣ
ನಿಷ್ಕ್ರೀಯಗೊಂಡಿದ್ದ ರಂಗಭೂಮಿ ಕ್ರಿಯಾಸಮಿತಿ ಇದ್ದಕ್ಕಿದ್ದಂತೆ ಸಕ್ರೀಯಗೊಂಡಿತು. 2015 ಜುಲೈ 29ರಂದು ನೂರಾರು ಜನ ರಂಗಕಲಾವಿದರು ಹಾಗೂ ರಂಗಸಂಘಟಕರು ಟೌನ್ಹಾಲ್ ಮುಂದೆ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡರು. ಹೆಗ್ಗೋಡಿನ ಪ್ರಸನ್ನ, ನಾಗರಾಜಮೂರ್ತಿ, ಕಾಲಬೈರವ ಗಂಗಾಧರ್ ಹಾಗೂ ಬಿ.ವಿ.ರಾಜಾರಾಂರವರ ನೇತೃತ್ವದ ರಂಗಕರ್ಮಿಗಳ ತಂಡವೊಂದು ಹೋಗಿ ಬಿಬಿಎಂಪಿಯ ಹಾಲಿ ಆಯುಕ್ತ ಜಿ.ಕುಮಾರನಾಯಕ್ ರವರಿಗೆ ಬಾಡಿಗೆದರವನ್ನು ಮೊದಲಿನಂತೆ ಇರಿಸಲು ಮನವಿ ಮಾಡಿಕೊಂಡಿತು. ಆಯುಕ್ತರೂ ಸಹ ಪುರಭವನದಬಾಡಿಗೆ ದರ ಇಳಿಕೆ ಸಂಬಂಧ ವಿಶೇಷ ಆಯುಕ್ತರ ನೇತೃತ್ವದ ಸಮಿತಿಯನ್ನು ರಚಿಸಿ ಅವರು ಕೊಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಮೂಲಿ ಸರಕಾರಿ ಆಶ್ವಾಸನೆಗಳನ್ನು ಕೊಟ್ಟು ಕೈತೊಳೆದುಕೊಂಡರು. ನಂತರ ಪ್ರಶ್ನಿಸಿದ ಪತ್ರಕರ್ತರಿಗೆ ಆಯುಕ್ತರು ಪುರಭವನವನ್ನು ಪ್ರತಿನಿತ್ಯ ಯಾರೂ ಬಾಡಿಗೆ ಪಡೆಯುವುದಿಲ್ಲ. ತಿಂಗಳಲ್ಲಿ 15 ರಿಂದ 20 ದಿನ ಬಾಡಿಗೆ ಸಿಗಬಹುದಷ್ಟೇ. ಬಾಡಿಗೆಯಿಂದ ಸಂಗ್ರಹವಾಗುವ ಆದಾಯ ನಿರ್ವಹಣಾ ವೆಚ್ಚಕ್ಕೆ ಸಮಾನವಾಗಿದ್ದು, ಪಾಲಿಕ ಯಾವುದೇ ಲಾಭವನ್ನು ಪಡೆಯುತ್ತಿಲ್ಲ. ಹೀಗಾಗಿ ಯಾವ ವಿಧಾನಗಳ ಮೂಲಕ ದರ ಇಳಿಕೆ ಮಾಡಬಹುದು ಎಂಬ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ಕೊಟ್ಟರು. ಅವರ ಮಾತಿನ ಅರ್ಥ ಇಷ್ಟೇ... ಏನೇ ಆದರೂ ಪುರಭವನದ ಬಾಡಿಗೆ ಹಿಂದಿನಷ್ಟು ಇರಲು ಸಾಧ್ಯವಿಲ್ಲ... ನಷ್ಟ ಮಾಡಿಕೊಂಡು ಪುರಭವನ ಬಾಡಿಗೆಗೆ ಕೊಡಲಾಗುವುದಿಲ್ಲ ಎನ್ನುವುದಾಗಿದೆ.

ಬ್ಯೂರಾಕ್ರಸಿ ಆಲೋಚನಾ ಕ್ರಮ ಅಂದರೆ ಇದೇನಾ? ಅಧಿಕಾರಶಾಹಿ ವರ್ಗ ಯಾವಾಗಲೂ ಲಾಭ ನಷ್ಟದ ಲೆಕ್ಕಾಚಾರದಲ್ಲೇ ಆಡಳಿತ ನಡೆಸುತ್ತದೆ. ಅವರಿಗೆ ಕಲೆ ಸಂಸ್ಕೃತಿಯ ಅಗತ್ಯದ ಅರಿವಿರೋದಿಲ್ಲ. ತಮಗೆ ಲಾಭದಾಯಕವಾಗಿದ್ದರೆ ಯಾವುದೇ ಸರಕಾರಿ ಆಸ್ತಿ ಕಟ್ಟಡಗಳನ್ನು ಕನಿಷ್ಟ ಬಾಡಿಗೆಗೆ ಕೊಡುತ್ತಾರೆ. ಮಹಾನಗರ ಪಾಲಿಕೆಗೆ ಬೇಕಾದಷ್ಟು ನಷ್ಟವಾದರೂ ಲಂಚ ರುಸುವತ್ತುಗಳನ್ನು ಕೊಡುವವರಿಗೆ ಅನುಕೂಲ ಮಾಡಿಕೊಡುತ್ತಾರೆ... ಆದರೆ... ಕಲೆ ಸಂಸ್ಕೃತಿಯ ವಿಚಾರಕ್ಕೆ ಬಂದರೆ ಇವರಿಗೆ ಲಾಭ ನಷ್ಟದ ವ್ಯವಹಾರಿಕ ಆಲೋಚನೆಗಳು ಬಂದು ಬಿಡುತ್ತವೆ. ಸಾಂಸ್ಕೃತಿಕ ಕ್ಷೇತ್ರವೆನ್ನುವುದು ಬಂಡವಾಳ ಹೂಡಿ ಲಾಭ ಬೆಳೆಯುವ ಉಧ್ಯಮವಲ್ಲ ಎನ್ನುವುದನ್ನು ಅಧಿಕಾರಿಶಾಹಿಗಳಿಗೆ ಯಾರು ಹೇಳಿಕೊಡುವುದು. ಹೇಳಿದರೂ ಅರ್ಥಮಾಡಿಕೊಳ್ಳುವಂತವರೆಲ್ಲಿದ್ದಾರೆ. ಈಗ ಟೌನ್ ಹಾಲ್ ನವೀಕರಣಕ್ಕೆ ಹೇಗೇ ಲೆಕ್ಕಾ ಹಾಕಿದರೂ ಮೂರು ಕೋಟಿ ಹಣ ಖರ್ಚಾಗಿರುವುದಿಲ್ಲ. ಆದರೂ ಲೆಕ್ಕ ತೋರಿಸಿದ್ದು ಮಾತ್ರ 8 ಕೋಟಿಗೂ ಹೆಚ್ಚು. ಇನ್ನೂ ಎರಡನೇ ಹಂತದ ನವೀಕರಣ ಬೇರೆ ಬಾಕಿ ಇದೆಯಂತೆ.. ಅದಕ್ಕೂ 6 ಕೋಟಿ ಅಂದಾಜು ವೆಚ್ಚ ಮಾಡಬೇಕಂತೆ. ಆರು ಕೋಟಿ ಹೋಗಿ ಕಾಮಗಾರಿ ಮುಗಿಯುವುದರೊಳಗೆ ಹತ್ತು ಕೋಟಿಗೆ ಬಂದಿರುತ್ತದೆ. ಹಲವಾರು ಜನ ಅನಧೀಕೃತವಾಗಿ ಫಲಾನುಭವಿಗಳಾಗಿರುತ್ತಾರೆ. ಎಲ್ಲಾ ಬಿಳಿಯಾನೆಗಳು ನುಂಗಿದ್ದನ್ನು ಸಾಂಸ್ಕೃತಿಕ ಲೋಕ ಬಾಡಿಗೆ ರೂಪದಲ್ಲಿ ಕಂತು ಕಂತಾಗಿ ಕೊಡಬೇಕಂತೆ..


ಹೇಗಿದೆ ನೋಡಿ ಸರಕಾರಿ ಅಧಿಕಾರಿಗಳು ಹಾಗೂ ಅವರ ಮಾಲೀಕರುಗಳಾದ ರಾಜಕಾರಣಿಗಳ ಲೆಕ್ಕಾಚಾರ. ಪುರಭವನದ ಸಂಪೂರ್ಣ ನವೀಕರಣಕ್ಕಾಗಿರುವ ಹಾಗೂ ಆಗುವ ಖರ್ಚನ್ನು ಲೆಕ್ಕ ಹಾಕಿದರೆ ಇನ್ನೊಂದು ಹೊಸ ಪುರಭವನವನ್ನೇ ಕಟ್ಟಬಹುದಾಗಿದೆ. ಬಿಬಿಎಂಪಿ ಎನ್ನುವ ಹೆಗ್ಗಣಗಳೇ ತುಂಬಿರುವ ಭ್ರಷ್ಟಾಚಾರ ತಾಂಡವವಾಡುತ್ತಿರುವ ಸಂಸ್ಥೆಯೊಂದು ಬೇಕಾಬಿಟ್ಟಿ ಪೋಲು ಮಾಡಿದ ಹಣಕ್ಕೆ ಕಲಾವಿದರು ಬಾಡಿಗೆ ರೂಪದಲ್ಲಿ ಹಣ ವಾಪಸ್ ಕೊಡಬೇಕೆಂದರೆ ಅದ್ಯಾವ ನ್ಯಾಯ? ಕಲೆ ಸಂಸ್ಕೃತಿಯ ಅಭಿವೃದ್ದಿಗಾಗಿ ಸರಕಾರ ಅತಿ ಕಡಿಮೆ ದರದಲ್ಲಿ ರಂಗಮಂದಿರಗಳನ್ನು ಒದಗಿಸಬೇಕಾದದ್ದು ಅದರ ನೈತಿಕ ಜವಾಬ್ದಾರಿಯಾಗಿದೆ. ಇರುವ ಸಭಾಂಗಣಗಳನ್ನು ಕಾಲಕಾಲಕ್ಕೆ ನವೀಕರಿಸಬೇಕಾದದ್ದು ಸಂಬಂಧಿತ ಸರಕಾರಿ ಸಂಸ್ಥೆಗಳ ಕರ್ತವ್ಯವಾಗಿದೆ. ಮುಂದೆ ಸಭಾಂಗಣದ ನೌಕರರು ಹಾಗೂ ಮೆಂಟನನ್ಸಗೆ ಬೇಕಾಗುವಷ್ಟು ಹಣವನ್ನು ಬಾಡಿಗೆ ರೂಪದಲ್ಲಿ ಪಡೆಯುವುದು ನ್ಯಾಯಯುತವಾದದ್ದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಹಾಗೂ ನಿರಾತಂಕವಾಗಿ ಸಾಗಲಿ ಎನ್ನುವುದು ಮೈಸೂರು ಅರಸರ ಆಶಯವಾಗಿತ್ತು. ಸರ್.ಪುಟ್ಟಣ್ಣ ಚೆಟ್ಟಿಯವರ ಕನಸಾಗಿತ್ತು. ಟೌನ್ಹಾಲ್ ನಿರ್ಮಾತೃಗಳ ಆಶಯಕ್ಕೆ ವಿರುದ್ಧವಾಗಿ ಅದನ್ನೊಂದು ವ್ಯಾಪಾರಿ ಸ್ಥಳವನ್ನಾಗಿ ಮಾಡಲು ಹೊರಟಿರುವ ಬಿಬಿಎಂಪಿಯ ಸಂಸ್ಕೃತಿ ವಿರೋಧಿ ಹಾಗೂ ಸರಕಾರದ ಜನವಿರೋಧಿ ಕೆಸವನ್ನು ಕೇವಲ ರಂಗಕರ್ಮಿಗಳು ಮಾತ್ರವಲ್ಲ ಎಲ್ಲಾ ಸಂಘ ಸಂಸ್ಥೆಗಳೂ ತೀವ್ರವಾಗಿ ವಿರೋಧಿಸಲೇಬೇಕಿದೆ. ಒಗ್ಗಟ್ಟಾಗಿ ಪ್ರತಿಭಟಿಸಲೇ ಬೇಕಿದೆ.


ಆದರೆ... ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ವ್ಯಾಪಕ ಪ್ರತಿರೋಧವನ್ನು ಒಡ್ಡುವಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಂಗಭೂಮಿ ಕ್ರಿಯಾಸಮಿತಿ ವಿಫಲವಾಗಿದೆ. ಬೇರೆ ಸಂಘಟನೆಗಳನ್ನು ಬಿಡಿ... ಬೆಂಗಳೂರಿನಲ್ಲಿರುವ ರಂಗತಂಡಗಳನ್ನು ಒಗ್ಗೂಡಿಸಿಕೊಂಡು ಹೋರಾಟ ಹಮ್ಮಿಕೊಳ್ಳುವಲ್ಲೂ ಸಹ ಯಶಸ್ಸಿಯಾಗದೇ ಹೋಗಿದೆ. ಎಲ್ಲಕ್ಕಿಂತ ಬೇಸರದ ಸಂಗತಿ ಏನೆಂದರೆ... ಕರಪತ್ರದಲ್ಲಿ ಯಾವ್ಯಾವ ರಂಗಕರ್ಮಿಗಳ ಹೆಸರನ್ನು ಹಾಕಲಾಗಿತ್ತೋ ಅದರಲ್ಲಿ ಬಹುತೇಕರು ಪ್ರತಿಭಟನೆಗೆ ಗೈರುಹಾಜರಾಗಿದ್ದರು. ಪೌರಾಣಿಕ ರಂಗಭೂಮಿಯ ಕೆಲವು ಕಲಾವಿದರೇನಾದರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಹೋಗಿದ್ದರೆ ಇಡೀ ಪ್ರತಿಭಟನೆಯೇ ಹಾಸ್ಯಾಸ್ಪದವಾಗುತ್ತಿತ್ತು. ಯಾಕೆಂದರೆ ಹೇಳದ್ದು ಭ್ರಹತ್ ಪ್ರತಿಭಟನೆ ಎಂದು. ಅಲ್ಲಿ ಸೇರಿದ್ದು ನೂರಾರು ಜನ ಕಲಾವಿದರು ಮಾತ್ರ. ನೂರಾರು ಜನ ಸೇರಿದ್ದನ್ನು ಬ್ರಹತ್ ಎಂದು ಕರೆಯುವುದು ಸೂಕ್ತವೇ? ಹೋಗಲಿ ಸೇರಿದಷ್ಟು ಜನರನ್ನಾದರೂ ಬಳಸಿಕೊಂಡು ಒಂದು ಅರ್ಥಪೂರ್ಣ ವಿರೋಧವನ್ನು ಮಾಡಬಹುದಾಗಿತ್ತು. ಆದರೆ... ನಾಲ್ಕು ಗಂಟೆಗೆ ಸೇರಿ ಕೆಲವರು ಮಾತಾಡಿ ಐದು ಗಂಟೆಗೆಲ್ಲಾ ಪ್ರತಿಭಟನೆಯನ್ನು ನಿಲ್ಲಿಸಿ ಮನವಿ ಪತ್ರ ಸಲ್ಲಿಸಲು ನಲ್ಕೈದು ಜನ ಪೊಲೀಸ್ ಜೀಪಿನಲ್ಲಿ ಹೊರಟರು. ನಿಯೋಗ ಹೋಗಲಿ ಆದರೆ ಬಂದಿರುವ ಜನರನ್ನು ಅಲ್ಲಿಯೇ ಇರಿಸಿ ಘೋಷನೆ ಹಾಗೂ ಹಾಡುಗಳ ಮೂಲಕವಾದರೂ ಜನರ ಗಮನವನ್ನು ಸೆಳೆಯಬಹುದಾಗಿತ್ತು. ಆದರೆ ಯಾವಾಗ ಮೀಡಿಯಾದವರೆಲ್ಲಾ ಪೋಟೋ, ವಿಡಿಯೋ ಮಾಡಿಕೊಂಡು ತೆರಳಿದರೋ... ಯಾವಾಗ ಕೆಲವರು ಮೈಕಿನಲ್ಲಿ ಮಾತಾಡುವುದು ಮುಗಿಯಿತೋ ಆಗ ಪ್ರತಿಭಟನೆಯೂ ನಿಂತು ಹೋಯಿತು... ಇದು ನಿಜವಾಗಿ ಪ್ರತಿಭಟಿಸುವವರ ಬದ್ಧತೆಯಂತೂ ಅಲ್ಲವೇ ಅಲ್ಲ. ನಾಮಕಾವಸ್ತೆ ಹೋರಾಟ ಎನ್ನುವಂತೆ ಎಲ್ಲವೂ ನಡೆದು ಹೋಯಿತು. ಏನೇ ಆದರೂ ಇಷ್ಟಾದರೂ ಮಾಡಿದರಲ್ಲ ಎನ್ನುವ ಸಮಾಧಾನ ಪಡಬೇಕಿದೆ. ಸಾಂಕೇತಿಕವಾದರೂ ಪ್ರತಿಭಟಿಸಿದ್ದಕ್ಕೆ ಆಯೋಜಕರನ್ನು ಅಭಿನಂದಿಸಬೇಕಿದೆ. ಆದರೆ...

ಯಾಕೆ ರಂಗಕರ್ಮಿಗಳೆಲ್ಲಾ ಬಂದು ರಂಗಭೂಮಿ ಕ್ರಿಯಾಸಮಿತಿ ಹೋರಾಟವನ್ನು ಬೆಂಬಲಿಸಲಿಲ್ಲ? ಯಾಕೆಂದರೆ ಎಲ್ಲಾ ರಂಗತಂಡಗಳನ್ನು ಯಾರೂ ಆಹ್ವಾನಿಸಿರಲಿಲ್ಲ. iಗೆ ಬೇಕಾದರವರಿಗೆ ಮಾತ್ರ ಹೇಳಿ ಮಿಕ್ಕವರನ್ನು ನಿರ್ಲಕ್ಷಿಸಲಾಗಿತ್ತು. ಪ್ರತಿಭಟನೆ ಕುರಿತು ಹೆಚ್ಚು ಪ್ರಚಾರವನ್ನೂ ಮಾಡಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ ...ಕ್ರಿಯಾಸಮಿತಿ ಎನ್ನುವುದು ಎಂದೂ ಕ್ರಿಯಾಶೀಲವಾಗಿರದೇ ಯಾವತ್ತೋ ಒಂದು ದಿನ ಒಂದು ಪ್ರತಿಭಟನೆ ಮಾಡಿ ಮತ್ತೆ ನಿಷ್ಕ್ರೀಯವಾಗುವುದು ಬಹುತೇಕ ರಂಗಕರ್ಮಿಗಳಿಗೆ ಗೊತ್ತಿರುವಂತಹುದೇ ಆಗಿದೆ. ಯಾವಾಗ ನಾಯಕತ್ವ ವಹಿಸಿಕೊಂಡವರ ಬದ್ಧತೆಯ ಮೇಲೆ ಅನುಮಾನಗಳು ಶುರುವಾಗುತ್ತವೆಯೋ ಆಗ ಇಡೀ ರಂಗಭೂಮಿ ಒಂದಾಗಿ ನಿಲ್ಲುವುದು ಅಸಾಧ್ಯವಾಗುತ್ತದೆ. ಹೀಗಾಗಿಯೇ ಹಲವಾರು ಪ್ರಮುಖ ರಂಗಕರ್ಮಿಗಳು ಪ್ರತಿಭಟನೆಗೆ ಬರದೇ ಹೋದರು. ಇಡೀ ಪ್ರತಿಭಟನೆಯೆನ್ನುವುದು ಒಂದು ಪ್ರಹಸನವಾಯಿತೇ ಹೊರತು ಸರಕಾರಕ್ಕೆ ಬಿಸಿ ಮುಟ್ಟಿಸುವಂತಾಗಲಿಲ್ಲ. ಹೀಗೆ ನೂರು ಜನ ಒಂದು ಗಂಟೆ ಧರಣಿ ಕುಳಿತು ಘೋಷಣೆ ಕೂಗಿ ಒಂದು ಮನವಿ ಪತ್ರ ಸಲ್ಲಿಸಿದರೆ ಪಂಚೇಂದ್ರಿಯಗಳನ್ನು ಎಂದೋ ಕಳೆದುಕೊಂಡ ಆಳುವ ವರ್ಗ ಸ್ಪಂದಿಸಲು ಸಾಧ್ಯವೇ? ಜನ ಸಂಘಟನೆಗಳು ಒಂದಾಗಿ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಅಧಿಕಾರಶಾಹಿಗಳು ಹಾಗೂ ರಾಜಕಾರಣಿಗಳು ನಡೆಸುವ ಹೇರಿಕೆಯನ್ನು ಪ್ರತಿರೋಧಿಸದೇ ಇದ್ದರೆ ಸರಕಾರಿ ಮಟ್ಟದಲ್ಲಿ ಸಂಚಲನಉಂಟಾಗಲೂ ಎಂದಾದರೂ ಸಾಧ್ಯವೇ?

ಪುರಭವನದ ಬಾಡಿಗೆ ದರ ಇಳಿಯಬೇಕು ಹಾಗೂ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ನಡೆಯಬೇಕು ಎಂದರೆ ಮೊದಲು ಮಾಡಬೇಕಿರುವುದು ಸಂಘಟಿತ ಹೋರಾಟ. ಇದು ಕೇವಲ ರಂಗಭೂಮಿಯ ಒಂದು ಗುಂಪು ಮಾಡಿದರೆ ಸಾಧ್ಯವಾಗದು. ಎಲ್ಲಾ ರಂಗತಂಡಗಳನ್ನು, ರಂಗಕರ್ಮಿ ಕಲಾವಿದರನ್ನು ಒಟ್ಟಿಗೆ ಸೇರಿಸಬೇಕು. ಪ್ರಸನ್ನರವರಂತವರು ಟೌನ್ಹಾಲ್ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಬೇಕು. ಅದಕ್ಕೆ ಬೆಂಗಳೂರಿನ ಎಲ್ಲಾ ಸಂಘ, ಸಂಸ್ಥೆಗಳ ಬೆಂಬಲವನ್ನು ಪಡೆಯಬೇಕು. ಟೌನ್ಹಾಲ್ಗೆ ಬೀಗ ಜಡಿದು ಅಹೋರಾತ್ರಿ ಹೋರಾಟಗಳು ನಡೆಯಬೇಕು. ಪುರಭವನದ ಎದುರಿರುವ ಜಾಗದಲ್ಲಿ ನಿರಂತರ ಸಂಗೀತ, ಹಾಡು, ನೃತ್ಯ, ನಾಟಕಗಳು ನಡೆಯಬೇಕು... ಬೆಂಗಳೂರಿನ ಜನಪ್ರತಿನಿಧಿಗಳ ಮೇಲೆ ಅಸಾಧ್ಯ ಒತ್ತಡವನ್ನು ಹೇರಬೇಕು. ಚುನಾವಣೆ ಬಂದಾಗ ಹಲವು ರಂಗಕರ್ಮಿಗಳು ಬೇರೆ ಬೇರೆ ಪಕ್ಷಗಳಿಗೆ ತಮ್ಮ ನಿಷ್ಟೆಯನ್ನು ಧಾರೆಯೆರಿದಿದ್ದರಲ್ಲಾ... ಅಂತವರೆಲ್ಲಾ ಸೇರಿ ಆಯಾ ಪಕ್ಷಗಳ ಬೆಂಬಲವನ್ನು ಪಡೆಯಬೇಕು. ಅಧಿವೇಶನದಲ್ಲಿನಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಲು ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕು. ಹೀಗೆ ಹಲವು ಆಯಾಮಗಳಲ್ಲಿ ಬದ್ಧತೆಯಿಂದ ಚಳುವಳಿಯನ್ನು ಪ್ರಾಮಾಣಿಕವಾಗಿ ಹಾಗೂ ಸ್ವಾರ್ಥರಹಿತವಾಗಿ ಮುನ್ನೆಡಿಸಿದರೆ ಪುರಭವನವನ್ನು ಸಾಂಸ್ಕೃತಿಕ ಕ್ಷೇತ್ರದ ಚಟುವಟಿಕೆಗಳಿಗಾಗಿ ಕಡಿಮೆ ಬಾಡಿಗೆ ದರದಲ್ಲಿ ಉಳಿಸಿಕೊಳ್ಳಬಹುದು. ಇಲ್ಲವಾದರೆ... ಯಾರು ಏನೇ ಮಾಡಿದರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಅಮ್ಮಮ್ಮಾ ಅಂದರೆ ಒಂದೂಕಾಲು ಲಕ್ಷದ ಬದಲಾಗಿ ಒಂದು ಲಕ್ಷ ಬಾಡಿಗೆ ವಿಧಿಸಬಹುದು. ಅದನ್ನು ಕಟ್ಟುವ ತಾಕತ್ತಂತೂ ರಂಗಸಂಘಟಕರಿಗಿಲ್ಲ.

ಇಷ್ಟಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಣಿ ಆಗಿರುವವರು ರಂಗಭೂಮಿಯಿಂದ ಹೋದ ಉಮಾಶ್ರೀಯವರೇ ಆಗಿದ್ದಾರೆ. ಯಾಕೆ ರಂಗಕರ್ಮಿಗಳೆಲ್ಲಾ ಹೋಗಿ ಅವರ ಮನೆಯ ಮುಂದೆ ಧರಣಿ ಮಾಡಬಾರದು? ಉಮಾಶ್ರೀಯವರೇ ನೀವು ಬೆಳೆದು ಹೋದ ರಂಗಮನೆಗೆ ಬೆಂಕಿ ಬಿದ್ದಿದೆ ಬಂದು ತಣ್ಣಗಾಗಿಸಿ ಎಂದು ಆಗ್ರಹಿಸಬಾರದು. ಉಮಾಶ್ರೀಯವರ ಕೃಪಾಕಟಾಕ್ಷದಿಂದಲೇ ರಾಜ್ಯಪ್ರಶಸ್ತಿ, ರಂಗಪ್ರಶಸ್ತಿ ಪಡೆದವರು ಹಾಗೂ ಅಕಾಡೆಮಿಗಳ ಅಧಿಕಾರವನ್ನು ಅನುಭವಿಸುತ್ತಿರುವವರು ಯಾಕೆ ಮಂತ್ರಿಣಿಗೆ ಮನವಿ ಮಾಡಿಕೊಳ್ಳಬಾರದು. ಹೋಗಲಿ ರಂಗೇತರ ಹೋರಾಟಗಳಿಗೆ ತಕ್ಷಣ ಸ್ಪಂದಿಸುವ ನಮ್ಮ ಜ್ಞಾನಪೀಠಿಗಳಾದ ಕಾರ್ನಾಡ ಕಂಬಾರರು ಇಂತಹ ಸಂದರ್ಭದಲ್ಲಿ ಯಾಕೆ ಮೌನಿಗಳಾಗುತ್ತಾರೆ?. ರಂಗಭೂಮಿ ಎನ್ನುವುದು ಎಲ್ಲರಿಗೂ ಬೆಳೆಯುವ ಹಾಗೂ ತಮ್ಮ ಬದುಕನ್ನು ಕಟ್ಟಿಕೊಡುವ ಸಾಧನವಾಗಿದೆ. ಆದರೆ ರಂಗಭೂಮಿಯನ್ನು ಬೆಳೆಸುವ ಹಾಗೂ ರಂಗಭೂಮಿಗೆ ಅನ್ಯಾಯವಾದಾಗ ಅದರ ಪರವಾಗಿ ನಿಲ್ಲುವ ಬದ್ದತೆ ಇಲ್ಲವಾಗಿದೆ. ರಂಗಮನೆಯೇ ಒಗ್ಗಟ್ಟಿಲ್ಲದೇ ಒಡೆದು ಹೋದಂತಿರುವಾಗ ಆಳುವ ವರ್ಗಗಳು ಬೆಂದ ಮನೆಯಲ್ಲಿ  ಗಳ ಹಿರಿಯದೇ ಇರುತ್ತಾರಾ? ರಂಗಭೂಮಿಯಲ್ಲಿ ಚಟುವಟಿಕೆಗಳು ನಿರಂತರವಾಗಿವೆ, ಆದರೆ ಚಳುವಳಿಗಳು ನಿಂತೇ ಹೋಗಿವೆ. ಈಗ ರಂಗಚಟುವಟಿಕೆಗಳನ್ನು ಮಾಡಲೂ ಸಹ ಸಾಧ್ಯವಾಗದ ಹಾಗೆ ಒಂದೊಂದೇ ಸಭಾಂಗಣಗಳ ಬಾಡಿಗೆಯನ್ನೂ ಕೈಗೆಟುಕದಂತೆ ಸರಕಾರಿ ಸಂಸ್ಥೆಗಳು ಮಾಡುತ್ತಿವೆ. ತಮ್ಮ ಬುಡಕ್ಕೇ ನೀರು ಬಂದಾಗಲಾದರೂ ರಂಗಕರ್ಮಿಗಳು ಎಚ್ಚೆತ್ತು ಒಂದಾಗಿ ಪ್ರತಿಭಟಿಸದೇ ಇದ್ದರೆ ನಾಳೆ ಬೇರೆ ರಂಗಮಂದಿರಗಳಿಂದಲೂ ವಂಚಿತರಾಗಬೇಕಾಗುತ್ತದೆ.

ಎಲ್ಲಾ ಭವಿಷ್ಯದ ಅಪಾಯಗಳನ್ನು ಮನಗಂಡು ಚಳುವಳಿ ತೀವ್ರವಾಗಲೇಬೇಕು. ರಂಗಕರ್ಮಿಗಳು ಒಂದಾಗಿ ನಿಲ್ಲಲೇಬೇಕು. ಇಡೀ ಸಾಂಸ್ಕೃತಿಕ ಕ್ಷೇತ್ರವನ್ನೇ ಸಾವಕಾಶವಾಗಿ ನಿರ್ಣಾಮ ಮಾಡಿ  ಅಲ್ಲಿ ಕಾರ್ಪೋರೇಟ್ ಸಂಸ್ಕೃತಿಯನ್ನು ಪ್ರತಿಷ್ಟಾಪಿಸಲು ಪ್ರಯತ್ನಿಸುತ್ತಿರುವ ಜಾಗತಿಕ ಹುನ್ನಾರಗಳನ್ನು ಹಾಗೂ ದಲ್ಲಾಳಿ ಆಳುವ ವರ್ಗಗಳ ಕುತಂತ್ರಗಳನ್ನು ರಂಗಕರ್ಮಿಗಳು ಮೆಟ್ಟಿನಿಲ್ಲಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಂಗಭೂಮಿಯನ್ನು ಚಳುವಳಿಗೆ ಸಿದ್ಧಗೊಳಸಿಬೇಕಾದಂತಹ ರಂಗನಿಷ್ಠೆ ಇರುವ ಪ್ರಾಮಾಣಿಕ ನಾಯಕತ್ವದ ಅಗತ್ಯ ಇಡೀ ಕನ್ನಡ ರಂಗಭೂಮಿಗಿದೆ. ನಿಟ್ಟಿನಲ್ಲಿ ಎಲ್ಲಾ ರಂಗಕರ್ಮಿಗಳು ಆಲೋಚಿಸಿ ಸಂಘಟಿತ ಹೋರಾಟಕ್ಕೆ ಣಿಯಾಗುವುದರಲ್ಲಿಯೇ ರಂಗಭೂಮಿಯ ಹಿತವಿದೆ.... 

                            -ಶಶಿಕಾಂತ ಯಡಹಳ್ಳಿ         




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ