ಸೋಮವಾರ, ಜನವರಿ 16, 2017

“ಬಿಡುಗಡೆಯಾಯ್ತು ಕನ್ನಡಿಯೊಳಗಿನಗಂಟು; ರಂಗಾಯಣದ ಕಲಾವಿದರಿಗೆ ಸಿಕ್ಕಿತು ಇಡಿಗಂಟು”:


 


ರಂಗಾಯಣಕ್ಕೆ ಸಂಬಂಧಿಸಿದಂತೆ ಒಂದು ಸಂತಸದ ಸುದ್ದಿ ಏನೆಂದರೆ, ಮೈಸೂರು ರಂಗಾಯಣದ ಕಲಾವಿದರಿಗೆ ನಿವೃತ್ತಿ ನಂತರದ  ಇಡಿಗಂಟಿನ ಹಣವನ್ನು ಸರಕಾರ ಬಿಡುಗಡೆ ಮಾಡಿದೆ. ರಂಗಾಯಣ ಕಲಾವಿದರ ಹಿತರಕ್ಷಣಾ ನಿಧಿಗೆ ಸರಕಾರವು 5.67 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು ರಂಗಾಯಣ ಕಲಾವಿದರುಗಳ ಸೇವಾವಧಿಯನ್ನು ಪರಿಗಣಿಸಿ ಈಗಾಗಲೆ ನಿವೃತ್ತರಾದವರಿಗೆ ಹಾಗೂ ಅಕಾಲಿಕ ಸಾವಿಗೀಡಾದವರಿಗೆ ಹಣವನ್ನು ಮಂಜೂರು ಮಾಡಲಾಗಿದೆ. ಕಳೆದ ಹತ್ತು ವರ್ಷಗಳಿಂದ ರಂಗಾಯಣದ ಕಲಾವಿದರುಗಳು ನಿವೃತ್ತಿ ವೇತನದ ಬೇಡಿಕೆಯನ್ನಿಟ್ಟು ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಸರಕಾರವು ಕೇವಲ ಎರಡೇ ವಾರದಲ್ಲಿ ತರಾತುರಿಯಲ್ಲಿ ಹಣವನ್ನು ಬಿಡುಗಡೆ ಮಾಡಲು ತೆಗೆದುಕೊಂಡ ನಿರ್ದಾರದ ಹಿಂದೆ ರಂಗಾಯಣದ ಕಲಾವಿದ ಮಂಜುನಾಥ ಬೆಳೆಕೆರೆಯವರ ಅಕಾಲಿಕ ಸಾವು ಪ್ರಮುಖ ಕಾರಣವಾಗಿದ್ದೊಂದು ವಿಪರ್ಯಾಸ.

ಮಂಜುನಾಥ ಬೆಳಕೆರೆ
ಡಿಸೆಂಬರ್ 19ರಂದು ಬೆಳೆಕೆರೆಯವರು ಹೃದಯಾಘಾತದಿಂದ ನಿಧನರಾದಾಗ ರಂಗಾಯಣದ ಕಲಾವಿದರುಗಳೆಲ್ಲಾ ತಲ್ಲಣಿಸಿಹೋದರು. ಸಹದ್ಯೋಗಿಯ ಸಾವಿನ ಜೊತೆಗೆ ಬಾಕಿ ಕಲಾವಿದರುಗಳ ಬರಿಗೈ ಭವಿಷ್ಯವು ಎಲ್ಲರನ್ನೂ ಚಿಂತಿತರನ್ನಾಗಿಸಿತ್ತು. ಎರಡೂವರೆ ದಶಕಗಳ ಕಾಲ ರಂಗಾಯಣಕ್ಕೆ ದುಡಿದಿದ್ದ ಬೆಳೆಕರೆಯವರು ತೀರಿಕೊಂಡಾಗ ಅವರ ಕುಟುಂಬ ಅನಾಥವಾಯಿತು. ಸರಕಾರದಿಂದ ಪೆನ್ಶನ್ ಸೌಲಬ್ಯವೂ ಸಿಗುವಂತಿರಲಿಲ್ಲ. ಇಡಿಗಂಟನ್ನಾದರೂ ಕೊಡಬೇಕು ಎನ್ನುವ ಕಲಾವಿದರುಗಳ ಬಯಕೆಗೆ ಸರಕಾರ ಸ್ಪಂದಿಸಿರಲಿಲ್ಲ. ಬೆಳೆಕೆರೆಯವರ ಕುಟಂಬಕ್ಕಾದ ಗತಿಯೇ  ತಮಗೂ ಆಗುತ್ತದೆಂದು ಆತಂಕಗೊಂಡ ರಂಗಾಯಣದ ಕಲಾವಿದರುಗಳು ಸಚಿವೆ ಉಮಾಶ್ರೀಯವರನ್ನು ಒತ್ತಾಯಿಸಿದರು. ಆದರೆ ಸಚಿವೆಯ ಹಾರಿಕೆಯ ಮಾತಿಗೆ ಆಕ್ರೋಶಗೊಂಡ ರಂಗಾಯಣದ ಕಲಾವಿದರುಗಳು ಕಪ್ಪು ಪಟ್ಟಿ ಧರಿಸಿ ಅಸಹಕಾರ ಚಳುವಳಿ ಆರಂಭಿಸಿದರು. ಹಾಗೂ ಜನವರಿ 13ರಿಂದ 18ರ ವರೆಗೆ ರಂಗಾಯಣ ಆಯೋಜಿಸಿದ ಬಹುರೂಪಿ ಅಂತರಾಷ್ಟ್ರೀಯ ನಾಟಕೋತ್ಸವಕ್ಕೆ ಸಹಕಾರ ಕೊಡುವುದಿಲ್ಲವೆಂದು ಕಲಾವಿದರುಗಳು ಘೋಷಿಸಿ ಧರಣಿ ಕುಳಿತರು. ಆಗಲಾದರೂ ಕಲಾವಿದರುಗಳ ಆತಂಕಕ್ಕೆ ಸಚಿವೆ ಉಮಾಶ್ರೀ ಸಮಾಧಾನ ಹೇಳಿ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಆದರೆ ಸಚಿವೆಗೆ ಕಲಾವಿದರುಗಳ ಸಾವು ಬದುಕಿನ ಸಮಸ್ಯೆಯ ತೀವ್ರತೆ ಅರ್ಥವಾಗಲೇ ಇಲ್ಲಾ.

ಇದೆಲ್ಲವನ್ನೂ ವಿವರಿಸಿ ನಾನು ವಿವರವಾದ ಲೇಖನವನ್ನು ಡಿಸೆಂಬರ್ 21ರಂದು ಬರೆದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಿದ್ದೆ. ಹಾಗೂ  ಅದು ತಲುಪಬೇಕಾದವರಿಗೆಲ್ಲಾ ತಲುಪುವ ವ್ಯವಸ್ಥೆ ಮಾಡಿದ್ದೆ. ಅದರಿಂದ ಯಾರಿಗೆ ಅದೆಷ್ಟು ಅರಿವು ಮೂಡಿತೋ ಹಾಗೂ ಪ್ರಯೋಜನವಾಯಿತೋ ಗೊತ್ತಿಲ್ಲಾ.. ಆದರೆ ರಂಗಾಯಣದ ಕಲಾವಿದರುಗಳ ಸುದೀರ್ಘ ಕಾಲದ ಬೇಡಿಕೆಯೊಂದು ಈಡೇರಿ ಅವರೆಲ್ಲಾ ನಿಟ್ಟುಸಿರುಬಿಡುವಂತಾಯಿತು. ಮುಂದೆ ನಿವೃತ್ತಿಯಾಗುವವರಿಗೆ ಮಾತ್ರವಲ್ಲಾ ಹಿಂದೆ ನಿವೃತ್ರಿ ಹೊಂದಿದ ಹಾಗೂ ಅಕಾಲಿಕವಾಗಿ ತೀರಿಕೊಂಡ ಎಲ್ಲರಿಗೂ ಅವರವರ ಸೇವಾವಧಿಗನುಗುಣವಾಗಿ ಹಣ ದೊರೆಯಿತು. ಹತ್ತು ವರ್ಷದಿಂದ ಆಗದ ಕೆಲಸ ಹತ್ತೇ ದಿನದಲ್ಲಿ ಆಗಿದ್ದರ ಹಿನ್ನಲೆ ಏನು? ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಮತ್ತು ಅದಕ್ಕೆ ಹಲವಾರು ಕಾರಣಗಳೂ ಇವೆ.

ಡಾ.ಹೆಚ್.ಸಿ.ಮಹದೇವಪ್ಪ
ಅವತ್ತು ಡಿಸೆಂಬರ್ 19. ಅತ್ತ ಮಂಜುನಾಥ ಬೆಳಕೆರೆಯವರ ಅಂತ್ಯಕ್ರಿಯೆಗೆ ಸಿದ್ದತೆ ನಡೆದಿತ್ತು. ಇತ್ತ ಅವರ ಕುಟುಂಬಕ್ಕೆ ಆರ್ಥಿಕ ನೆರವು ದೊರಕಿಸಿಕೊಡುವ ಕುರಿತು ರಂಗಸಮಾಜದ ಕೆಲವು ಸದಸ್ಯರು ಮೈಸೂರಿನ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಜೊತೆ ಸಭೆ ಸೇರಿದ್ದರು. ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರೂ ಜೊತೆಗಿದ್ದರು. ಖುದ್ದು ಮಹಾದೇವಪ್ಪನವರೇ ಸಚಿವೆ ಉಮಾಶ್ರೀಯವರ ಜೊತೆಗೆ ಪೋನಲ್ಲಿ ಮಾತಾಡಿ ತಕ್ಷಣ ರಂಗಾಯಣದ ಕಲಾವಿದರಿಗೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು. ಸ್ವತಃ ಸಚಿವ ಮಹಾದೇವಪ್ಪನವರೇ ಉಮಾಶ್ರೀಯವರಿಗೆ ರಂಗಾಯಣದ ಕಲಾವಿದರುಗಳ ಹಿತರಕ್ಷಣೆ ಕುರಿತು ಮನವರಿಗೆ ಮಾಡಿಕೊಟ್ಟರು. ತಾಂತ್ರಿಕ ಸಮಸ್ಯೆಗಳಿವೆ.. ಆಯಿತು ನೋಡೋಣ,, ಮಾಡೋಣ.. ಪ್ರಯತ್ನಿಸುವೆ.. ಎಂದು ತಮ್ಮ ಎಂದಿನ ಸಿದ್ದಮಾದರಿಯ ಮಾತುಗಳನ್ನೇ ಉಮಾಶ್ರೀಯವರು ಆಡಿದರು. ಮತ್ತದೇ ಮಾತುಗಳನ್ನು ಬೆಳಕೆರೆಯವರ ಶ್ರದ್ದಾಂಜಲಿ  ಸಭೆಯಲ್ಲೂ ಉಮಾಶ್ರೀಯವರು ಪುನರಾವರ್ತಿಸಿದರು. ಹೀಗೆ ಆದರೆ.. ಈ ಸಮಸ್ಯೆ ಪರಿಹಾರವಾಗದು.. ಉಮಾಶ್ರೀಯವರ ಮಾತುಗಳನ್ನು ನಂಬಲಾಗದು..  ಎಂಬ ಅರಿವಿದ್ದ ರಂಗಸಮಾಜದ ಸದಸ್ಯರು ಈ ಸಂದರ್ಭವನ್ನು ಬಿಟ್ಟುಕೊಟ್ಟರೆ ಕಲಾವಿದರುಗಳ ನ್ಯಾಯಯುತವಾದ ಬೇಡಿಕೆ ಈಡೇರಲು ಸಾಧ್ಯವೇ ಇಲ್ಲಾ ಎಂದುಕೊಂಡು ಮತ್ತೆ ಮಹದೇವಪ್ಪನವರ ಜೊತೆಗೆ ಎರಡು ಮೂರು ವಿಸ್ತೃತ ಸಭೆಗಳನ್ನು ನಡೆಸಿದರು.

ಇತ್ತ ಕಡೆ ರಂಗಾಯಣದ ಕಲಾವಿದರುಗಳು ಕಪ್ಪು ಪಟ್ಟಿ ಧರಿಸಿ ಅಸಹಕಾರ ಚಳುವಳಿ ಹಾಗೂ ಧರಣಿ ಕಾರ್ಯಕ್ರಮ ಹಮ್ಮಿಕೊಂಡು ಬಹುರೂಪಿ ನಾಟಕೋತ್ಸವವನ್ನು ಬಹಿಷ್ಕರಿಸಿ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಿದರೆ, ಅತ್ತ ಸಚಿವ ಮಹಾದೇವಪ್ಪನವರ ಸಹಕಾರ ಪಡೆದು ರಂಗಸಮಾಜದ ಸದಸ್ಯರಾದ ಜಿ.ಕೆ.ಗೋವಿಂದರಾವ್,  ಮಂಡ್ಯ ರಮೇಶ್, ಚೌಗಲೆ ಹಾಗೂ ಕನ್ನಡಪರ ಹೊರಾಟಗಾರ ಪಾ.ಮಲ್ಲೇಶ್ ಮತ್ತು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಹೆಚ್.ಜಿ.ಸಿದ್ದರಾಮಯ್ಯನವರೆಲ್ಲಾ ಸೇರಿ ನೇರವಾಗಿ ಸಿಎಂ ಸಿದ್ದರಾಮಯ್ಯನವರನ್ನೇ ಮೈಸೂರಿನ ಮನೆಯಲ್ಲಿ ಬೇಟಿಯಾಗಿ ರಂಗಾಯಣದ ಕಲಾವಿದರುಗಳ ಆತಂಕ ಹಾಗೂ ಬೆಳೆಕರೆಯವರ ಕುಟುಂಬದ ಅತಂತ್ರತೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.  ಎಲ್ಲವನ್ನೂ ಅಪಾರ ಸಹನೆಯಿಂದ ಕೇಳಿದ ಸಿದ್ದರಾಮಯ್ಯನವರು ಕೂಡಲೇ ಪೈನಾನ್ಸ್ ಸೆಕ್ರಟರಿಗೆ ಪೋನ್ ಮಾಡಿ ಹಣ ಬಿಡುಗಡೆ ಮಾಡಲು ಮೌಖಿಕವಾಗಿಯೇ ಆದೇಶಿಸಿದರು. ರಂಗಾಯಣದಿಂದ ನಿರ್ಗಮಿಸಿದ ಹಾಗೂ ಇನ್ನು ಆರೇಳು ವರ್ಷಗಳಲ್ಲಿ ನಿರ್ಗಮಿಸಬಹುದಾದ ಎಲ್ಲಾ ಕಲಾವಿದರುಗಳ ಪರಿಹಾರವನ್ನು ಲೆಕ್ಕ ಹಾಕಿ ಐದೂವರೆ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲಿ ಸಚಿವೆ ಉಮಾಶ್ರೀಯವರು ಈ ಆದೇಶಕ್ಕೂ ಅಡ್ಡಗಾಲು ಹಾಕುತ್ತಾರೋ ಎನ್ನುವ ಭಯದಿಂದ ಅವರನ್ನು ಹೊರಗಿಟ್ಟೇ ಈ ಎಲ್ಲಾ ಪ್ರಯತ್ನಗಳೂ ಪ್ರಾಮಾಣಿಕವಾಗಿ ನಡೆದವು. ಇದಕ್ಕೆ ರಂಗಾಯಣದ ಹಾಲಿ ಇನ್ಚಾರ್ಜ ಆಗಿರುವ ಹಾಗೂ ಸಂಸ್ಕೃತಿ ಇಲಾಖೆಯ ನಿರ್ದೇಶಕರೂ ಆಗಿರುವ ದಯಾನಂದರವರು ಮುತುವರ್ಜಿ ವಹಿಸಿ ಸಹಕಾರ ಕೊಟ್ಟರು. ಈ ಎಲ್ಲರ ಪ್ರಯತ್ನದ ಫಲವಾಗಿ ಅದೆಷ್ಟೋ ವರ್ಷಗಳಿಂದ ರಂಗಾಯಣದ ಕಲಾವಿದರುಗಳು ತಮಗೆ ನ್ಯಾಯವಾಗಿ ಬರಬೇಕೆಂದು ಬಯಸಿದ ಕನ್ನಡಿಯ ಗಂಟು ನಿಜವಾಗಿಯೂ ದೊರಕಿದಂತಾಯಿತು. ಕಲಾವಿದರುಗಳ ಆತಂಕ ದೂರಾಯಿತು. ಬೆಳಕೆರೆಯವರ ಕುಟುಂಬ ಒಂದಿಷ್ಟು ನಿರಾಳವಾಗಿ ಉಸಿರಾಡಿಸುವಂತಾಯಿತು. ಇದೆಲ್ಲದರ ಕ್ರೆಡಿಟ್ ಸಲ್ಲಲೇ ಬೇಕಾದದ್ದು ಸಚಿವ ಮಹಾದೇವಪ್ಪ, ಪ್ರೊ.ಹೆಚ್.ಜಿ.ಸಿದ್ದರಾಮಯ್ಯ, ಇಲಾಖೆಯ ನಿರ್ದೇಶಕರಾದ ದಯಾನಂದ್ ಹಾಗೂ ರಂಗಾಯಣದ ಕೆಲವು ಸದಸ್ಯರುಗಳಿಗೆ ಅನ್ನುವುದು ನಿರ್ವಿವಾದ. 
ಆದರೆ.. ರಂಗಾಯಣದ ಕಲಾವಿದರ ಬಹುದಿನದ ಬೇಡಿಕೆ ಹಾಗೂ ಹೋರಾಟಕ್ಕೆ ಸಿಕ್ಕ ಯಶಸ್ಸು ಉಮಾಶ್ರೀಯವರ ಹೊಟ್ಟೆಯಲ್ಲಿ ಅಕ್ಕಿ ಕುಟ್ಟಿದಂತೆ ಆಗಿದ್ದಂತೂ ಸುಳ್ಳಲ್ಲ. ಯಾಕೆಂದರೆ ಈ ಎಲ್ಲಾ ಎಪಿಸೋಡಿನಲ್ಲಿ ಸಚಿವೆಯನ್ನು ಎಲ್ಲರೂ ಉದ್ದೇಶಪೂರ್ವಕವಾಗಿಯೇ ಅವೈಡ್ ಮಾಡಿದ್ದರು. ಎಲ್ಲಿ ಆಗುತ್ತಿರುವ ಕೆಲಸಕ್ಕೆ ಸಚಿವೆ ಅಡ್ಡಗಾಲು ಹಾಕುತ್ತಾರೋ ಎನ್ನುವ ಆತಂಕ ಎಲ್ಲರನ್ನೂ ಕಾಡಿತ್ತು. ಯಾವಾಗ ತಮ್ಮ ಇಲಾಖೆಯ ಸುಪರ್ಧಿಗೆ ಬರುವ ಸಮಸ್ಯೆಗೆ ಸಚಿವ ಮಹಾದೇವಪ್ಪನವರು ಕೈಹಾಕಿದರೋ ಆಗಲೇ ಉಮಾಶ್ರೀಯವರು ತಳಮಳಗೊಂಡಿದ್ದರು. ಯಾವಾಗ ಪ್ರೊ.ಸಿದ್ದರಾಮಯ್ಯನವರ ನೇತೃತ್ವದ ತಂಡ ನೇರವಾಗಿ ಮುಖ್ಯಮಂತ್ರಿಗಳನ್ನೇ ಬೇಟಿಮಾಡಿದ್ದು ಗೊತ್ತಾಯಿತೋ ಆಗ ಉಮಾಶ್ರೀಯವರು ಕೆಂಡಾಮಂಡಲವಾದರು. ಆದರೆ ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರಿಗೆ ಆತ್ಮೀಯರಾದ ಮಹಾದೇವಪ್ಪನವರನ್ನಾಗಲೀ ಇಲ್ಲವೇ ಹೆಚ್.ಜಿ.ಸಿದ್ದರಾಮಯ್ಯನವರನ್ನಾಗಲೀ ಎದುರು ಹಾಕಿಕೊಳ್ಳಲು ರಾಜಕೀಯವಾಗಿ ಉಮಾಶ್ರೀಯವರಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಎಲ್ಲವನ್ನೂ ಅನಿವಾರ್ಯವಾಗಿ ಸಹಿಸಿಕೊಂಡೇ ಬಂದರು. ಉಮಾಶ್ರೀಯವರೇ ನೆಪಗಳನ್ನು ಹೇಳದೇ ಖುದ್ದು ಆಸಕ್ತಿ ವಹಿಸಿ ರಂಗಾಯಣದ ಕಲಾವಿದರುಗಳ ಬೇಡಿಕೆಯನ್ನು ಈಡೇರಿಸಿದ್ದರೆ ಈ ರೀತಿಯ ಅವಮಾನ ಅನುಭವಿಸುವುದು ತಪ್ಪುತ್ತಿತ್ತು ಹಾಗೂ ಬಹುದಿನಗಳ ಸಮಸ್ಯೆಯನ್ನು ಬಗೆಹರಿಸಿದ ಕ್ರೆಡಿಟ್ ಕೂಡಾ ದಕ್ಕುತ್ತಿತ್ತು ಮತ್ತು ರಂಗಭೂಮಿಯ ಕಲಾವಿದರುಗಳ ಕಣ್ಣಲ್ಲಿ ಬಲುದೊಡ್ಡ ಗೌರವಾನ್ವಿತ ವ್ಯಕ್ತಿ ಆಗಬಹುದಾಗಿತ್ತು. ಆದರೆ.. ವಿಶಾಲ ಮನೋಭಾವವನ್ನು ಬಿಟ್ಟು ಯಾವಾಗ ಸಂಕುಚಿತವಾಗಿ ಸಚಿವೆ ತಮ್ಮ ನಡೆಯನ್ನು ಮುಂದುವರೆಸಿಕೊಂಡೇ ಹೋದರೋ ಆಗ ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಕಣ್ಣಲ್ಲಿ ಹಾಗೂ ರಂಗ ಕಲಾವಿದರುಗಳ ದೃಷ್ಟಿಯಲ್ಲಿ ಕುಬ್ಜರಾಗಿ ಹೋದರು. ತಮ್ಮೊಳಗೆ ಇನ್ನೂ ಕಳಕಳಿಯ ಕಲಾವಿದೆ ಬದುಕಿದ್ದಾಳೆ ಎಂದು ಸಾಬೀತು ಪಡಿಸುವ ಉತ್ತಮ ಅವಕಾಶವೊಂದನ್ನು ತಾವೇ ತಮ್ಮ ಕೈಯಾರೆ ಕಳೆದುಕೊಂಡು ಪರಿತಪಿಸುವಂತಾಯಿತು. 

ಜನವರಿ 13ರಂದು ಮೈಸೂರಿನ ರಂಗಾಯಣದಲ್ಲಿ ನಡೆದ ಬಹುರೂಪಿ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಮಾಶ್ರೀಯವರು ರಂಗಾಯಣದ ಕಲಾವಿದರುಗಳ ಪರಿಹಾರ ಯೋಜನೆಯನ್ನು ಪ್ರಸ್ತಾಪಿಸುತ್ತಾ ಮನಸ್ಸು ಮಾಡಿದ್ದರೆ ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದರವರು ಒಂದು ವರ್ಷದ ಹಿಂದೆಯೇ ಈ ಸಮಸ್ಯೆಯನ್ನು ಪರಿಹಾರ ಮಾಡಬಹುದಾಗಿತ್ತು ಎಂದು ಹೇಳಿ ತಾವು ಮಾಡಿದ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿ ಜಾರಿಕೊಳ್ಳುವ ರಾಜಕಾರಣಿಯ ಕೆಲಸವನ್ನು ಮಾಡಿ ತಮ್ಮ ಸಾಚಾತನವನ್ನು ಪ್ರಕಟಿಸಲು ನೋಡಿದರು. ಈ ಅನಿರೀಕ್ಷಿತ ಹೇಳಿಕೆಯಿಂದ ದಯಾನಂದರವರು ಆಕ್ಷಣ ಆಘಾತಕ್ಕೊಳಗಾದರೆ, ಸತ್ಯ ಏನೆಂದು ಗೊತ್ತಿದ್ದ ರಂಗಾಯಣದ ಕಲಾವಿದರು ಹಾಗೂ ರಂಗಸಮಾಜದ ಸದಸ್ಯರುಗಳು ತಮ್ಮೊಳಗೇ ನಗತೊಡಗಿದ್ದರು. ತದನಂತರ ರಂಗಾಯಣದಿಂದ ನಿವೃತ್ತರಾದ ಕಲಾವಿದರುಗಳಿಗೆ ಹಾಗೂ ತೀರಿಕೊಂಡವರ ಕುಟುಂಬದವರಿಗೆ ಪರಿಹಾರದ ಹಣದ ಚಕ್ ವಿತರಿಸಲು ರಂಗಸಮಾಜದ ಸದಸ್ಯರುಗಳು ವಿನಂತಿಸಿಕೊಂಡಾಗ ಉಮಾಶ್ರೀ ನಿರಾಕರಿಸಿದರು. ಈ ಪರಿಹಾರ ವಿತರಿಸಲು ತಾವು ಯೋಗ್ಯರು ಅಲ್ಲವೆಂದು ಅಂದುಕೊಂಡರೋ, ಇಲ್ಲವೇ ತಮ್ಮ ಇಚ್ಚೆಗೆ ವಿರುದ್ದವಾಗಿ ಬೇರೆಯವರ ಪ್ರಯತ್ನದಿಂದ ಈ ಪರಿಹಾರ ದೊರಕಿದ್ದಕ್ಕೆ ಸಿಟ್ಟಾಗಿದ್ದರೋ ಗೊತ್ತಿಲ್ಲಾ. ಆದರೆ ಸಾರ್ವಜನಿಕವಾಗಿ ಚೆಕ್ ವಿತರಿಸಲು ಅದ್ಯಾಕೋ ಸಚಿವೆ ಒಪ್ಪಲೇ ಇಲ್ಲಾ. ಉಮಾಶ್ರೀಯವರ ಹಠದಿಂದ ಬೇಸತ್ತ ರಂಗಸಮಾಜದವರು ಕನಿಷ್ಟ ಅಗಲಿದ ಮಂಜುನಾಥ ಬೆಳೆಕೆರೆಯವರ ಪತ್ನಿಗಾದರೂ ಚೆಕ್ ವಿತರಿಸಿ ಆ ನೊಂದ ಜೀವಕ್ಕೆ ಸಾಂತ್ವನ ಹೇಳಿ ಎಂದು ಬಗೆಬಗೆಯಾಗಿ ಕೋರಿದಾಗ ರಂಗಾಯಣದ ಕಛೇರಿಯ ಒಳಗೆ ಕೆಲವೇ ಜನರ ಸಮ್ಮುಖದಲ್ಲಿ ಚೆಕ್ ವಿತರಿಸಿದ ಸಚಿವೆ ಆ ಕ್ಷಣದ ನೆನಪಿಗೆ ಪೊಟೋ ತೆಗೆಯಲೂ ಅವಕಾಶ ಕೊಡಲಿಲ್ಲವೆಂದರೆ ಅವರ ಗಿಲ್ಟ್  ಅವರನ್ನು ಅದೆಷ್ಟು ಕಾಡಿರಬಹುದು. ಈ ಎಲ್ಲಾ ಘಟನೆಗಳಿಂದಾಗಿ ಕಲಾವಿದರುಗಳ ಘನತೆಯನ್ನು ಕಾಪಾಡಬೇಕಾಗಿದ್ದ ಮಾಜಿ  ಕಲಾವಿದೆ ಉಮಾಶ್ರೀಯವರು ಎಲ್ಲರ ಕಣ್ಣಲ್ಲಿ ಖಳನಾಯಕಿಯಾಗಿ ಗೋಚರಿಸಿದ್ದಂತೂ ಸುಳ್ಳಲ್ಲ. ಮಂತ್ರಿಣಿಯ ವೇಷ ಕಳಚುವವರೆಗೂ ಈ ನೆಗೆಟಿವ್ ಪಾತ್ರದ ಇಮೇಜನ್ನು ಉಮಾಶ್ರೀಯವರು ಬದಲಾಯಿಸಿಕೊಳ್ಳುವ ಲಕ್ಷಣಗಳಂತೂ ಕಾಣುತ್ತಿಲ್ಲಾ.

ಯಾರು ಮಾಡಿದರೇನು? ಅಂತೂ ಇಂತೂ ರಂಗಾಯಣದ ಕಲಾವಿದರುಗಳು ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಅಂತಿಮ ಪರಿಹಾರವೆನ್ನುವುದು ಸಿಕ್ಕಂತಾಗಿ ಬದುಕಿನ ಇಳಿಸಂಜೆಯಲ್ಲಿ ಆ ಕಲಾಜೀವಗಳಿಗೆ ಒಂದಿಷ್ಟಾದರೂ ನೆಮ್ಮದಿ ಮೂಡಿತು. ಆದರೆ.. ಎಂದೋ ಆಗಬೇಕಾಗಿದ್ದ ಈ ಕೆಲಸ ಈಗ ಆಗಬೇಕಾದರೆ ರಂಗಾಯಣದ ಕಲಾವಿದರೊಬ್ಬರ ಸಾವೇ ಆಗಬೇಕಾಗಿತ್ತಾ? ಮಂಜುನಾಥ ಬೆಳಕೆರೆಯವರ ಅಕಾಲಿಕ ಸಾವು ರಂಗಾಯಣದ ಕಲಾವಿದರುಗಳ ಹತ್ತಾರು ವರ್ಷಗಳ ಬೇಡಿಕೆ ಮಂಜೂರಾಗಲು ಮೂಲ ಕಾರಣವಾಗಿದ್ದು  ತುಂಬಾ ಬೇಸರದ ಸಂಗತಿ. ನಮ್ಮ ವ್ಯವಸ್ಥೆಯೇ ಹೀಗಿದೆ. ಏನಾದರೂ ದುರಂತವಾಗಿ ಜನರಿಂದ ಒತ್ತಾಯ ಬಂದಾಗಲೇ ಪರಿಹಾರವನ್ನು ಹುಡುಕುವ ವಿಕ್ಷಿಪ್ತ ವ್ಯವಸ್ಥೆ ನಮ್ಮದಾಗಿದೆ. ನಮ್ಮನ್ನು ಆಳುವವರು ಕಾಲಕಾಲಕ್ಕೆ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದರೆ ನಮ್ಮದು ನಿಜವಾದ ಪ್ರಜಾಪ್ರಭುತ್ವ ಎನ್ನಿಸಿಕೊಳ್ಳುತ್ತಿತ್ತು. ಪ್ರಭುಗಳಾದವರು ಪ್ರಜೆಗಳನ್ನು ಕಡೆಗಣಿಸಿದ್ದರಿಂದ ಜನರು ಪರದಾಡಬೇಕಿದೆ. ಕಲಾವಿದೆಯಾದವಳು ಮಂತ್ರಿಣಿಯಾದಾಗ ಕಲಾವಿದರನ್ನೇ ಉದಾಸೀನ ಮಾಡಿದ್ದರಿಂದಾಗಿ ರಂಗಭೂಮಿಯವರ ನಿರೀಕ್ಷೆಗಳೆಲ್ಲಾ ತಲೆಕೆಳಗಾಗಿ ಕಲಾವಿದರುಗಳು ನರಳಬೇಕಿದೆ. 

- ಶಶಿಕಾಂತ ಯಡಹಳ್ಳಿ