ಕಲಾಗ್ರಾಮದ ರಂಗಮಂದಿರವನ್ನೇ ಮಾಯ ಮಾಡಿದ ಅಧಿಕಾರಿ; ಹೋರಾಟವೊಂದೇ ಮುಂದಿರುವ ದಾರಿ..
ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಸುವರ್ಣ ಸಮುಚ್ಚಯವನ್ನು ಕಟ್ಟಿಸಿದ್ದ ಸರಕಾರ ವರ್ಷಗಳ ಕಾಲ ಹಾಗೇ ಸುಮ್ಮನೇ ಬಿಟ್ಟಿತ್ತು. ಭೂತಬಂಗಲೆಯಂತಾಗಿ ಹಾಳು ಬಿದ್ದಿದ್ದ ಸಮುಚ್ಚಯವನ್ನು ಸ್ವಚ್ಚಗೊಳಿಸಿ ನಾಟಕ ಚಟುವಟಿಕೆಗಳನ್ನು ಆರಂಭಿಸಿದ್ದು ತೊ.ನಂ ಮತ್ತು ಡಾ.ಬೈರೇಗೌಡರು. ತದನಂತರ ಇದು ಸರಕಾರಿ ಕಡತದಲ್ಲಷ್ಟೇ ಸಮುಚ್ಚಯವಂತಿದ್ದು ನಾಟಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದುದರಿಂದ ಕಲಾಗ್ರಾಮ ರಂಗಮಂದಿರ ಎನ್ನುವುದೇ ರೂಢಿಯೊಳಗೆ ಬಂದಿತು. ಎಲ್ಲಾ ರೀತಿಯ ಅನಾನುಕೂಲಗಳ ನಡುವೆಯೂ ತಿಂಗಳಿಗೆ ಹತ್ತಿಪ್ಪತ್ತು ರಂಗ ತಂಡಗಳು ಇಲ್ಲಿ ನಾಟಕಗಳನ್ನು ಮಾಡತೊಡಗಿದವು. ಬರಬರುತ್ತಾ ಅಕ್ಕಪಕ್ಕದ ಪ್ರದೇಶದ ಜನರು ಖಾಯಂ ಪ್ರೇಕ್ಷಕರಾದರು. ಎನ್ ಎಸ್ ಡಿ ಬೆಂಗಳೂರಿನ ರಂಗ ಚಟುವಟಿಕೆಗಳಿಗೂ ಈ ರಂಗಮಂದಿರ ಆಶ್ರಯಧಾಮವಾಗಿತ್ತು.
ಆದರೆ ಯಾವಾಗ ಆ ಒಬ್ಬ ದುಷ್ಟ ಅಧಿಕಾರಿಯ ಮಾರಿ ಕಣ್ಣು ಈ ರಂಗಮಂದಿರದ ಮೇಲೆ ಬಿತ್ತೋ ಆಗ ಈ ರಂಗಮಂದಿರದ ದ್ವನಿ ಬೆಳಕು ನಿಯಂತ್ರಣ ಕೊಠಡಿಗೆ ಬೆಂಕಿ ಬಿತ್ತು. ಎಲ್ಲಾ ಅಧಿಕಾರಿಗಳೂ ಸೇರಿ ಇದೊಂದು ಶಾರ್ಟ ಸರ್ಕೀಟ್ ದುರಂತವೆಂದು ರಿಪೋರ್ಟ ಸೃಷ್ಟಿಸಿ ಅಸಲಿ ಸತ್ಯವನ್ನು ಮುಚ್ಚಿ ಹಾಕಿದರು. 2018, ಡಿಸೆಂಬರ್ 13 ರಂದು ರಾತ್ರಿ ನಾಟಕ ಮುಗಿದಾದ ಮೇಲೆ ಇಡೀ ಸಮುಚ್ಚಯದ ಮೇನ್ ಡಿಪಿ ಸ್ವಿಚ್ಚನ್ನು ಆಪ್ ಮಾಡಲಾಗಿತ್ತು. ಕರೆಂಟ್ ವೈರ್ ಗಳಲ್ಲಿ ಕರೆಂಟ್ ಹರಿಯದಿದ್ದರೂ ಶಾರ್ಟ್ ಸರ್ಕ್ಯೂಟ್ ಆಯಿತು ಎಂದರೆ ನಂಬಲು ರಂಗಕರ್ಮಿಗಳು ಅಷ್ಟು ದಡ್ಡರಲ್ಲ. ಆದರೂ ಸಂಸ್ಕೃತಿ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲಾಟದಲ್ಲಿ ಕಲಾಗ್ರಾಮದ ಕಂಟ್ರೋಲ್ ರೂಂ ಬೂದಿಯಾಗಿದ್ದಂತೂ ಸತ್ಯ. ಇದಾಗಿ ಇಂದಿಗೆ ಎರಡು ವರ್ಷಗಳೇ ಕಳೆದಿವೆ. ರಂಗಮಂದಿರ ಮತ್ತೆ ಸ್ಮಶಾನದೊಳಗಿನ ಭೂತ ಬಂಗಲೆಯಂತೆ ಮಲಗಿದೆ.
ಈ ಎರಡು ವರ್ಷಗಳಲ್ಲಿ ಕಲಾಗ್ರಾಮದ ರಂಗಮಂದಿವನ್ನು ರಿಪೇರಿ ಮಾಡಿ ಮತ್ತರ ಆರಂಭಿಸಲು ಅದೆಷ್ಟು ಮನವಿಗಳನ್ನು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಾಗಿದೆ. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಲೊಕೇಶರವರಂತೂ ಇಲಾಖೆಯ ನಿರ್ದೇಶಕರ ಕಛೇರಿ ಬಾಗಿಲಿಗೆ ದಿನನಿತ್ಯ ಅಲೆದಾಡಿ ಚಪ್ಪಲಿ ಸವೆಸಿಯಾಗಿದೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲಿನ ಮೇಲೆ ಧರಣಿ ಕೂಡಾ ಮಾಡಲಾಗಿದೆ. ಯುವರಂಗಕರ್ಮಿಗಳು ಕಲಾಗ್ರಾಮದಿಂದ ಕಲಾಕ್ಷೇತ್ರದವರೆಗೂ ಬೈಕ್ ರ‌್ಯಾಲಿ ಮಾಡಿ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಿ.ಟಿ.ರವಿಯವರಿಗೆ ಮನವಿಯನ್ನೂ ಕೊಟ್ಟಾಗಿದೆ. ಅಧಿಕಾರಿಗಳಿಂದ ಹಿಡಿದು ಸಚಿವರವರೆಗೂ ಬಂದಿದ್ದು ಒಂದೇ ರೀತಿಯ ಆಶ್ವಾಸನೆ ಅದೇನೆಂದರೆ "ಇನ್ನು ಎರಡೇ ವಾರದಲ್ಲಿ ರಿಪೇರಿ ಮಾಡಲಾಗುತ್ತದೆ... ಇನ್ನೊಂದು ತಿಂಗಳಲ್ಲಿ ಆರಂಭಿಸಲಾಗುತ್ತದೆ.. ಟೆಂಡರ್ ಕೊಟ್ಟಾಗಿದೆ, ಕಾಮಗಾರಿ ಶುರುವಾಗಿದೆ..'' ಇಂತಹ ಹುಸಿ ಭರವಸೆಗಳನ್ನು ನೀಡುತ್ತಾ ಬೀಸೋ ದೊಣ್ಣೆಯಿಂದ ಈ ಅಧಿಕಾರಸ್ತರು ತಪ್ಪಿಸಿಕೊಂಡರೇ ಹೊರತು ಕಲಾಗ್ರಾಮದ ಶಾಪಗ್ರಸ್ತ ರಂಗಮಂದಿರದ ವಿಮೋಚನೆಯಂತೂ ಆಗಲೇ ಇಲ್ಲ.
ಬಾಯಿಮಾತಿನ ಸುಳ್ಳು ಆಶ್ವಾಸನೆಗಳಿಂದ ರೋಸಿ ಹೋದ ರಂಗ ಕಲಾವಿದ ಅಜಯ್ ಕುಮಾರ್ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿ ವಿವರಗಳನ್ನು ಕೇಳಿದರು. ನಮ್ಮ ಅಧಿಕಾರಿಶಾಹಿಯ ಕೆಲಸದ ವೇಗ ಎಷ್ಟೊಂದು ಪಾಸ್ಟ್ ಎಂದು ತಿಳಿದರೆ ನಿಜಕ್ಕೂ ಅಚ್ಚರಿಪಡುವಂತಹುದೇನಿಲ್ಲ. ಯಾಕೆಂದರೆ 4-10-2019 ರಲ್ಲಿ ಸಲ್ಲಿಸಿದ ಅರ್ಜಿಗೆ ಕೊನೆಗೂ ಉತ್ತರ ಬಂದಿದ್ದು 18-12-2020 ರಂದು. ಅಧಿಕಾರಿಗಳು ಉತ್ತರ ಕೊಡಲು ತೆಗೆದುಕೊಂಡದ್ದು ಕೇವಲ ಒಂದು ವರ್ಷದ ಮೇಲೆ ಎರಡೂವರೆ ತಿಂಗಳಷ್ಟೇ. ಸಧ್ಯ ಏನೋ ಒಂದು ಉತ್ತರ ಸಂಸ್ಕೃತಿ ಇಲಾಖೆಯಿಂದ ಬಂದಿತೆಂದು ತೆರೆದು ನೋಡಿದವರಿಗೆ ಆಘಾತವಾಗಿ ಮೂರ್ಚೆ ಬೀಳುವುದಷ್ಟೇ ಬಾಕಿ ಇತ್ತು. ಯಾಕೆಂದರೆ ಕಲಾಗ್ರಾಮದಲ್ಲಿದ್ದ ರಂಗಮಂದಿರವೇ ನಾಪತ್ತೆಯಾಗಿತ್ತು. ಕಲಾಗ್ರಾಮದಲ್ಲಿ ರಂಗಮಂದಿರವೇ ಇಲ್ಲಾ ಎಂದು ಬರೆಯಲಾಗಿತ್ತು.
"ಯಾಕ್ರೀ ಹಿಂಗ್ ಉತ್ತರ ಕೊಟ್ಟೀದ್ದೀರಿ" ಅಂತಾ ಸಂಸ್ಕತಿ ಇಲಾಖೆಯ ಜಂಟಿ ನಿರ್ದೇಶಕ ಚೆನ್ನೂರರವರನ್ನು ಕೇಳಿದಾಗ "ಹೌದು ಕಲಾಗ್ರಾಮದಲ್ಲಿರೋದು ರಂಗಮಂದಿರ ಅಲ್ಲಾ ಅದು ಸಾಂಸ್ಕೃತಿಕ ಸಮುಚ್ಚಯ.. ಅದನ್ನು ರಂಗಮಂದಿರವೆಂದು ಪರಿಗಣಿಸಲು ಬರುವುದಿಲ್ಲ" ಎಂದು ಉಡಾಫೆ ಉತ್ತರ ದೊರೆಯಿತು. ಇದು ಸಾಂಸ್ಕೃತಿಕ ಸಮುಚ್ಚಯವಲ್ಲ ಅದು ಸುವರ್ಣ ಸಮುಚ್ಚಯ ಎಂಬ ಅರಿವೂ ಈ ಅಧಿಕಾರಿಗೆ ಗೊತ್ತಿಲ್ಲ ಹಾಗೂ ವರ್ಷವಿಡೀ ಈ ಸಮುಚ್ಚಯದಲ್ಲಿ ಬಹುತೇಕ ನಾಟಕಗಳೇ ನಡೆಯುತ್ತಿದ್ದವು ಎಂಬ ತಿಳುವಳಿಕೆ ಇಲ್ಲ. ಎಲ್ಲಿ ರಂಗಚಟುವಟಿಕೆಗಳು ನಡೆಯುತ್ತವೆಯೋ ಅದಕ್ಕೆ ರಂಗಮಂದಿರ ಎನ್ನುತ್ತಾರೆ ಎನ್ನುವ ಕನಿಷ್ಟ ಪರಿಜ್ಞಾನವೂ ಇಲ್ಲ. ಇದ್ದಿದ್ದರೆ ಈ ರೀತಿ ವಿಲಕ್ಷಣ ಉತ್ತರ ಕೊಡುತ್ತಿರಲಿಲ್ಲ. ರಂಗಮಂದಿರವೇ ಅಲ್ಲವಾದರೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿದ್ಯಾಕೆ.. ರಂಗತಂಡಗಳಿಂದ ಹಣ ಕಟ್ಟಿಸಿಕೊಂಡಿದ್ಯಾಕೆ.
ಬೆಂಗಳೂರು ರಂಗಭೂಮಿಯ ಒಂದು ಪ್ರಮುಖ ಅಂಗವಾಗಿದ್ದ ಕಲಾಗ್ರಾಮ ಸಮುಚ್ಚಯದ ಈ ದುಸ್ಥಿತಿಗೆ ಅಧಿಕಾರಿ ವರ್ಗಗಳೇ ಕಾರಣವಾಗಿವೆ. ಈ ಯಾರಿಗೂ ಅಲ್ಲಿ ನಾಟಕ ಚಟುವಟಿಕೆಗಳು ನಡೆಯುವುದು ಬೇಕಿಲ್ಲ. ನಾಟಕಗಳು ನಡೆದರೆ ರಂಗತಂಡಗಳು ಕನಿಷ್ಟ ಅನುಕೂಲಕ್ಕಾಗಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರು. ಅಸ್ಥವ್ಯಸ್ತವಾಗಿದ್ದ ದ್ವನಿ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸುತ್ತಿದ್ದರು. ಜನರೇಟರ್ ವ್ಯವಸ್ಥೆ ಮಾಡಿಕೊಡಲು ಪೀಡಿಸುತ್ತಿದ್ದರು. ನೀರಿನ ವ್ಯವಸ್ಥೆ ಮಾಡಿ ಸ್ವಚ್ಚತೆ ಕಾಪಾಡಿ ಎಂದು ಕೇಳುತ್ತಿದ್ದರು. ಆದರೆ ಇವುಗಳನ್ನು ಮಾಡಲು ಅಧಿಕಾರಿಗಳಿಗೆ ಆಸಕ್ತಿಯೇ ಇರಲಿಲ್ಲ. ಈ ರಂಗಮಂದಿರದಿಂದ ಬಾಡಿಗೆ ರೂಪದಲ್ಲಿ ಬರುವ ಆದಾಯವಂತೂ ಕರೆಂಟ್ ಬಿಲ್ ಕಟ್ಟಲೂ ಸಾಲುತ್ತಿರಲಿಲ್ಲ. ಮಾನ್ಯ ಉಮಾಶ್ರೀಯವರು ಇಲಾಖೆಯ ಸಚಿವೆಯಾಗಿದ್ದಾಗ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲೋ ರಂಗಮಂದಿರಗಳ ಬಾಡಿಗೆ ದಿನಕ್ಕೆ ಎರಡು ಸಾವಿರ ಮೀರಬಾರದು ಎಂದು ಆದೇಶ ಮಾಡಿ ಹೋಗಿದ್ದರು. ಜೊತೆಗೆ ಕಲಾಗ್ರಾಮವನ್ನು ಮೇಂಟೇನ್ ಮಾಡಲು ಇಲಾಖೆಯಲ್ಲಿ ಕೆಲಸಗಾರರು ಹಾಗೂ ಸ್ಟಾಪ್ ಕೊರತೆಯಾಗಿತ್ತು. ಕಸ ಹೊಡೆಯುವವರನ್ನೂ ಸಹ ರವೀಂದ್ರ ಕಲಾಕ್ಷೇತ್ರದಿಂದ ಕಳಿಸಬೇಕಿತ್ತು. ಹಾಗೂ ಯಾವುದೇ ಅಧಿಕಾರಿಗೂ ವ್ಯಯಕ್ತಿಕವಾಗಿ ಇಲ್ಲಿಂದ ಯಾವ ರೀತಿಯ ಲಾಭವೂ ಇರಲಿಲ್ಲ. ಹೀಗಾಗಿ ಸಂಸ್ಕೃತಿ ಇಲಾಖೆಗೆ ಕಲಾಗ್ರಾಮ ಎನ್ನುವುದು ಹೊರಲಾರದ ಭಾರವಾಗಿತ್ತು. ಯಾರದೋ ಚಿತಾವಣೆಯಿಂದ ಬೆಂಕಿ ಹತ್ತಿದ್ದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಕಲಾಗ್ರಾಮವನ್ನು ಸರಿಪಡಿಸುವತ್ತ ಆಸಕ್ತಿಯನ್ನೇ ತೋರಲಿಲ್ಲ. ಅಧಿಕಾರಿಗಳ ಜಾಣ ನಿರ್ಲಕ್ಷಕ್ಕೆ ತುತ್ತಾದ ರಂಗಮಂದಿರ ಮತ್ತೆ ಸಕ್ರೀಯವಾಗಲೇ ಇಲ್ಲಾ.. ಸಕ್ರೀಯಗೊಳಿಸುವ ಇಚ್ಛಾಶಕ್ತಿ ಇರುವ ಅಧಿಕಾರಿಗಳು ಇಲಾಖೆಗೆ ಬರಲೇ ಇಲ್ಲ. ಇರುವ ಅಧಿಕಾರಿಗಳಲ್ಲಿ ಇರುವ ಜಾತಿಯಾಧಾರಿತ ಗುಂಪುಗಾರಿಕೆ, ಒಳಮತ್ಸರ, ಅಸಹನೆ ಮೇಲಾಟಕ್ಕಂತೂ ಕೊರತೆಯಿಲ್ಲ. ರಂಗಮಂದಿರವೊಂದರ ಉದ್ದೇಶಪೂರ್ವಕ ಕೊಲೆಯಿಂದಾಗಿ ರಂಗಭೂಮಿಗೆ, ರಂಗತಂಡಗಳಿಗೆ, ರಂಗಕಲಾವಿದರಿಗೆ ಆದ ಆಗುವ ನಷ್ಟವನ್ನು ಅಳತೆ ಮಾಡಲು ಮಾನದಂಡಗಳೇ ಇಲ್ಲ. ಇಂತಹ ರಂಗವಿರೋಧಿ, ಸಾಂಸ್ಕೃತಿಕ ದ್ರೋಹಿ ಅಧಿಕಾರಿಗಳನ್ನು ಹಿಡಿದೆಳೆದು ಕೇಳುವ ಪ್ರತಿಭಟನಾ ಶಕ್ತಿ ಹಾಗೂ ಸಾಂಸ್ಕೃತಿಕ ನಾಯಕತ್ವ ರಂಗಭೂಮಿಯಲ್ಲೂ ಈಗಿಲ್ಲ.
ಮಾನ್ಯ ಸಿ.ಟಿ.ರವಿಯವರು ಸಚಿವರಾಗಿದ್ದಾರೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರದಂತಹ ರಂಗಮಂದಿರಗಳನ್ನು ಕಟ್ಟಲಾಗುವುದು ಎಂದು ಘೋಷಿಸಿದರು. ಅದಕ್ಕಾಗಿ ಬಜೆಟ್ಟಲ್ಲಿ ಐವತ್ತು ಕೋಟಿಯಷ್ಟು ಹಣವನ್ನೂ ಮೀಸಲಾಗಿರಿಸಿದರು. ಸೀಟಿ ಹೊಡೆದು ರಾಜೀನಾಮೆ ಇತ್ತು ಸಚಿವರು ದಿಲ್ಲಿಯ ದಾರಿ ಹಿಡಿಯುತ್ತಿದ್ದಂತೆಯೇ ಅಧಿಕಾರಿಗಳು ಪ್ರಪೋಜಲ್ ಕಡತಗಳ ಮೇಲೆ ಕುಂಡಿಯೂರಿ ಕುಳಿತುಕೊಂಡರು. ಇರುವ ರಂಗಮಂದಿರಗಳನ್ನೇ ಸರಿಯಾಗಿ ಮೆಂಟೇನ್ ಮಾಡಲಾಗದ ಪರಿಸ್ಥಿತಿಯಲ್ಲಿ ಸಂಸ್ಕೃತಿ ಇಲಾಖೆ ಇರುವಾಗ, ಎರಡು ವರ್ಷಗಳಿಂದ ದುರಂತಕ್ಕೊಳಗಾಗಿ ನಿಷ್ಕ್ರೀಯವಾದ ರಂಗಮಂದಿರದ ದುರಸ್ತಿಕಾರ್ಯವನ್ನೇ ಮಾಡಿಸುವಲ್ಲಿ ಅಧಿಕಾರಶಾಹಿ ವಿಫಲವಾದಾಗ ಯಾವ ಭವ್ಯ ರಂಗಮಂದಿರ ಕಟ್ಟುವ ಭರವಸೆಯಿಂದ ಏನು ಪ್ರಯೋಜನ. ಮೊದಲು ಈ ಅಧಿಕಾರಿಶಾಹಿಗಳಿಂದ ರಂಗಮಂದಿರಗಳಿಗೆ ಮುಕ್ತಿ ಕೊಡಿಸಬೇಕಿದೆ. ಇದಕ್ಕಾಗಿಯೇ ಜೆ.ಲೊಕೇಶರವರು ರಂಗಮಂದಿರ ಪ್ರಾಧಿಕಾರ ಸ್ಥಾಪನೆಯ ನೀಲಿನಕ್ಷೆಯನ್ನು ಸರಕಾರದ ಮುಂದಿಟ್ಟಿದ್ದರು. ಈ ಪ್ರಾಧಿಕಾರವನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಿ ಅದರ ಮೂಲಕ ಈಗಿರುವ ರಂಗಮಂದಿರಗಳ ನಿರ್ವಹಣೆ ಹಾಗೂ ಹೊಸ ರಂಗಮಂದಿರಗಳ ಸ್ಥಾಪನೆ ಮಾಡಬಹುದೆಂದು ಸಚಿವರ ಮುಂದೆ ಪ್ರಪೋಜಲ್ ಇಟ್ಟಿದ್ದರು. ಆದರೆ ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದರೂ ಅಧಿಕಾರಿಗಳು ಇಚ್ಚಾಸಕ್ತಿ ತೋರಿಸಲೇ ಇಲ್ಲ. ಪ್ರಾಧಿಕಾರದ ಅಸ್ತಿತ್ವ ಕನಸಾಗಿಯೇ ಉಳಿಯಿತು. ನನಸಾಗುವ ಸಾಧ್ಯತೆಯಂತೂ ಈಗಿಲ್ಲ.
ಮೊದಲು ರಂಗಕರ್ಮಿಗಳು ಈ ಅಧಿಕಾರಿಗಳ ರಂಗವಿರೋಧಿತನವನ್ನು ಸಂಘಟನಾತ್ಮಕವಾಗಿ ವಿರೋಧಿಸಬೇಕಿದೆ. ಕಲಾಗ್ರಾಮದ ರಂಗಮಂದಿರದ ಪುನರಾರಂಭವನ್ನು ಕಾಲಮಿತಿಯಲ್ಲಿ ಮಾಡಲೇಬೇಕೆಂದು ಒತ್ತಾಯಿಸಬೇಕಿದೆ. ರಂಗಭೂಮಿಯ ಹಿತಾಸಕ್ತಿಗಾಗಿ ರಂಗಮಂದಿರ ಪ್ರಾಧಿಕಾರವನ್ನು ರಚಿಸಬೇಕೆಂದು ಸರಕಾರದ ಮೇಲೆ ಹೋರಾಟದ ಮೂಲಕ ಒತ್ತಡ ತರಬೇಕಿದೆ. ಇದ್ಯಾವುದನ್ನೂ ಮಾಡದೇ ಹೋದರೆ ಇವತ್ತು ಕಲಾಗ್ರಾಮದ ರಂಗಮಂದಿರಕ್ಕೆ ಬಂದ ದುಸ್ಥಿತಿಯೇ ಬೇರೆಲ್ಲಾ ರಂಗಮಂದಿರಗಳಿಗೆ ಇಂದಿಲ್ಲಾ ನಾಳೆ ಬಂದೇ ಬರುತ್ತದೆ. ಹಾಗೇನಾದರೂ ಆದರೆ ರಂಗಭೂಮಿಯ ಬೆಳವಣಿಗೆ ಖಂಡಿತಾ ಕುಂಟಿತಗೊಳ್ಳುತ್ತದೆ. ಎಲ್ಲಾ ರಂಗಕರ್ಮಿಗಳಿಗೂ ಈ ಕುರಿತು ಗೊತ್ತಿದೆ. ಆದರೆ ಸರಕಾರ ಎನ್ನುವ ಬೆಕ್ಕಿಗೆ ಗಂಟೆ ಕಟ್ಟುವವರು, ಅಧಿಕಾರಿಗಳೆಂಬ ಗೂಳಿಗಳಿಗೆ ಮೂಗುದಾರ ಹಾಕುವವರು ಕನ್ನಡ ರಂಗಭೂಮಿಗೆ ತುರ್ತಾಗಿ ಬೇಕಾಗಿದ್ದಾರೆ..
- ಶಶಿಕಾಂತ ಯಡಹಳ್ಳಿ