ಬುಧವಾರ, ಸೆಪ್ಟೆಂಬರ್ 29, 2021

ನಾಗೇಶರವರ ಅಗಲಿಕೆಯ ಹನ್ನೊಂದು ವರ್ಷಗಳ ನಂತರ ಅರಳಿದ ರಂಗವಿಹಂಗಮ :


ಆಧುನಿಕ ಕನ್ನಡ ರಂಗಭೂಮಿಯ ಮಹತ್ತರ ರಂಗನಿರ್ದೇಶಕರಾದ ಆರ್.ನಾಗೇಶರವರು ಭೌತಿಕ ಬದುಕಿನಿಂದ ಶಾಶ್ವತವಾಗಿ ನೇಪತ್ಯಕ್ಕೆ ಸರಿದು ಹನ್ನೊಂದು ವರ್ಷಗಳೇ ಕಳೆದಿವೆ. ರಂಗಭೂಮಿಗೆ ವಿಭಿನ್ನ ಪ್ರಯೋಗಶೀಲತೆಯನ್ನು ತಂದುಕೊಟ್ಟು ಹಲವಾರು ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ತರಬೇತುಗೊಳಿಸಿ ಬೆಳೆಸಿದ ನಾಗೇಶರವರ ಸ್ಮರಣೆಗಾಗಿ ರಂಗಭೂಮಿಯವರು ಹೇಳಿಕೊಳ್ಳುವಂತಹ ಏನನ್ನೂ ಮಾಡಿಲ್ಲವಲ್ಲಾ ಎನ್ನುವ ಕೊರಗು ಕಾಡುತ್ತಲೇ ಇತ್ತು. ಕೆಲವರು ಆಗಾಗ ಹೇಳುವ ಹಾಗೆ ರಂಗಭೂಮಿಯ ಕೆಲಸವೆಂದರೆ ಥ್ಯಾಂಕಲೆಸ್ಸಾ..? ಗೊತ್ತಿಲ್ಲ. ಆದರೆ ನಾಗೇಶರವರು ಕನ್ನಡ ರಂಗಭೂಮಿಗೆ ಕೊಟ್ಟ ಕೊಡುಗೆಗೆ ಹೋಲಿಸಿದರೆ ಅವರ ಹೆಸರು ಮತ್ತು ಸಾಧನೆಯನ್ನು ಮುಂದಿನ ತಲೆಮಾರಿಗೆ ತಿಳಿಸಲು ರಂಗಭೂಮಿಯವರು ಮಾಡಿದ ಪ್ರಯತ್ನ ತೀರಾ ಅಲ್ಪ. ಹನ್ನೊಂದು ವರ್ಷಗಳ ನಂತರವಾದರೂ ನಾಗೇಶರವರ ಬದುಕು ಮತ್ತು ಸಾಧನೆಯ ಕುರಿತುಆರ್.ನಾಗೇಶ್ ರಂಗವಿಹಂಗಮ ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದು ನಿಜಕ್ಕೂ ಶ್ಲಾಘನೀಯ ಸಂಗತಿ


ಬಹುಷಃ ನಾಗೇಶರವರ ಬಹುಕಾಲದ ಒಡನಾಡಿ ಜೆ.ಲೋಕೇಶರವರು ಮನಸ್ಸು ಮಾಡದೇ ಹೋಗಿದ್ದರೆ ಪುಸ್ತಕವೂ ಪ್ರಕಟವಾಗುತ್ತಿರಲಿಲ್ಲ. ನಾಗೇಶರವರ ಸ್ಮರಣೆಯಲ್ಲಿ ಪುಸ್ತಕ ತರಬೇಕೆಂದು ಮೂರು ವರ್ಷಗಳ ಹಿಂದೆಯೇ ಲೊಕೇಶರವರು ಪ್ರಯತ್ನ ಶುರು ಮಾಡಿದ್ದರು. 2018ರಲ್ಲಿ ನಾಗೇಶರವರಿಗೆ 75 ವರ್ಷ ತುಂಬಿದ್ದಾಗರಂಗನೊಗ ಆರ್.ನಾಗೇಶ್ -75” ಎನ್ನುವ ಹೆಸರಲ್ಲಿ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. ಇದುವರೆಗೂ ನಾಗೇಶರವರ ಹೆಸರಲ್ಲಿ ನಡೆದ ಅವರ ನಿರ್ದೇಶಿಸಿದ್ದ ನಾಟಕಗಳ ಮೊದಲ ಹಾಗೂ ಏಕೈಕ ನಾಟಕೋತ್ಸವ ಅದು. ಸಂದರ್ಭದಲ್ಲಿ ನಾಗೇಶರವರ ಸ್ಮರಣೆಯಲ್ಲಿ ಹೊತ್ತಿಗೆಯೊಂದನ್ನು ಹೊರತರುವ ಕುರಿತು ಚರ್ಚಿಸಲಾಗಿತ್ತು. ಅದರ ಹೊಣೆಯನ್ನು ಕೆಲವರಿಗೆ ವಹಿಸಲಾಗಿತ್ತು. ಆದರೆ ನಾಗೇಶರವರ ಕುರಿತು ಲೇಖನಗಳನ್ನು ಬರೆಸುವ, ಬರೆದಿದ್ದ ಲೇಖನಗಳನ್ನು ಸಂಗ್ರಹಿಸುವ ಮತ್ತು ಅವುಗಳನ್ನು ಸಂಕಲಿಸುವ ಕೆಲಸ ಮಾತ್ರ ಪ್ರಗತಿ ಕಾಣಲೇ ಇಲ್ಲ. ಕೊನೆಗೆ ಜೆ.ಲೊಕೇಶರವರು ಹಠಕ್ಕೆ ಬಿದ್ದು ಲೇಖನಗಳ ಸಂಗ್ರಹಕ್ಕೆ ಮುಂದಾದರು.


ಮೊದಮೊದಲು ಪುಸ್ತಕ ಪ್ರಕಟಣೆಯ ಕಾರ್ಯಕ್ಕೆ ಸ್ಪಂದಿಸುವೆನೆಂದವರಲ್ಲಿ ಬಹುತೇಕರು ಹಿಂದೆ ಸರಿದರು. ಕೆಲವರು ನಾಗೇಶರವರ ಮೇಲಿನ ಅಭಿಮಾನ ಹಾಗೂ ಲೊಕೇಶರವರ ಮೇಲಿನ ಪ್ರೀತಿಯಿಂದ ಲೇಖನಗಳನ್ನು ಬರೆದುಕೊಟ್ಟರು. ಹಣ ಕೊಟ್ಟರೆ ಮಾತ್ರ ನಾಗೇಶರವರ ಕುರಿತ ಕೆಲವು ಲೇಖನಗಳನ್ನು ಕೊಡುತ್ತೇನೆಂದು ಗುಡಿಹಳ್ಳಿ ನಾಗರಾಜರವರು ಬೇಡಿಕೆ ಇಟ್ಟು ನಾಲ್ಕು ಸಾವಿರ ಹಣ ಪಡೆದ ನಂತರವೇ ಕೆಲವು ಪೂರ್ವ ಪ್ರಕಟಿತ ಲೇಖನಗಳನ್ನು ಕೊಟ್ಟರು. ಲೇಖನ ಕೊಡದೇ ಇದ್ದವರ ಹಿಂದೆ ಬೇತಾಳದಂತೆ ಬಿದ್ದ ಜೆ.ಲೊಕೇಶರವರು ಹಾಗೂ ಪ್ರಕಾಶ ಅರಸುರವರು ಲೇಖನಗಳನ್ನು ಹಾಗೂ ಹೀಗೂ ಹೇಗೇಗೋ ಮಾಡಿ ತರಿಸಿಕೊಂಡರು. ಹೀಗೆ ಸಂಗ್ರಹಿಸಿದ ಲೇಖನಗಳನ್ನು ಎಡಿಟ್ ಮಾಡಿ ಕ್ರಮಬದ್ದವಾಗಿ ಜೋಡಿಸುವ ಕೆಲಸ ಎನ್.ಕೆ.ಮೋಹನರಾಂರವರ ಹೆಗಲಿಗೇರಿತು. ಮುದ್ರಿಸಿ ಪ್ರಕಟಿಸುವ ಜವಾಬ್ದಾರಿಯನ್ನು ಚಾರುಮತಿ ಪ್ರಕಾಶನದ ವಿದ್ಯಾರಣ್ಯರಿಗೆ ಒಪ್ಪಿಸಿ ಮೂವತ್ತೈದು ಸಾವಿದರದಷ್ಟು ಹಣವನ್ನೂ ಕೊಡಲಾಯಿತು. ಇದರಲ್ಲಿ ಇಪ್ಪತ್ತು ಸಾವಿರದಷ್ಟು ಹಣವನ್ನು ತಮ್ಮ ಜೇಬಿನಿಂದ ಕೊಟ್ಟವರು ಜೆ.ಲೊಕೇಶರವರೇ. ಅಂದುಕೊಂಡದ್ದನ್ನು ಬಿಡದೇ ಪಟ್ಟು ಹಿಡಿದು ಸಾಧಿಸುವ ರಂಗಸಂಘಟಕ ಲೊಕೇಶರವರ ಪ್ರಯತ್ನ ಹಾಗೂ ಅವರ ಜೊತೆಯಲ್ಲಿದ್ದವರ ಸಹಕಾರದಿಂದಾಗಿ ಅಂತೂ ಇಂತೂ ನಾಗೇಶರವರ ಕುರಿತ ಪುಸ್ತಕ ಮುದ್ರಣಗೊಂಡು ಸೆಪ್ಟಂಬರ್ 19ರಂದು ಬಿಡುಗಡೆಯೂ ಆಯಿತು. ನಾಗೇಶರವರ ಒಡನಾಡಿಗಳಿಗೆ ಹಾಗೂ ಅಭಿಮಾನಿಗಳಿಗೆ ನೆಮ್ಮದಿಯೆನಿಸಿತು. ನಾಗೇಶರವರು ದಿವಂಗತರಾದ ನಂತರ ಪ್ರಕಟಗೊಳ್ಳಬೇಕಾಗಿದ್ದ ಸ್ಮರಣ ಸಂಚಿಕೆ ಈಗ ಹನ್ನೊಂದು ವರ್ಷಗಳ ನಂತರವಾದರೂ ಪ್ರಕಟವಾಯಿತಲ್ಲಾ ಎಂದು ಸಮಾಧಾನವಾಯಿತು. ಆಧುನಿಕ ಕನ್ನಡ ರಂಗಭೂಮಿಯ ಇತಿಹಾಸವನ್ನು ಡಿಡಿ9 ವಾಹಿನಿಯಲ್ಲಿ ತಮ್ಮರಂಗವಿಹಂಗಮ ಧಾರಾವಾಹಿಯ ಮೂಲಕ ದಾಖಲಿಸಿದ್ದ ನಾಗೇಶರವರ ಬದುಕು ಮತ್ತು ಸಾಧನೆಯ ಕುರಿತು ಒಂದಿಷ್ಟಾದರು ವಿವರಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಇಂದಿನ ಮತ್ತು ಮುಂದಿನ ತಲೆಮಾರಿನ ರಂಗಾಸಕ್ತರಿಗೆ ತಲುಪಿಸುವ ಪ್ರಯತ್ನ ಮಾಡಿದ ಎಲ್ಲರಿಗೂ ಧನ್ಯವಾದಗಳು.

-ಶಶಿಕಾಂತ ಯಡಹಳ್ಳಿ