ಶುಕ್ರವಾರ, ಸೆಪ್ಟೆಂಬರ್ 11, 2015

ರಂಗದಂಗಳದಲ್ಲಿ ರಂಗಾಯಣದ “ಸಂಸ್ಕಾರ” :

 ರಂಗಾಯಣದ ಬೆಳ್ಳಿಹಬ್ಬದ ಸಡಗರಕೆ  ಸುವರ್ಣ ಸಂಭ್ರಮದ ಸಂಸ್ಕಾರ :




   - ಶಶಿಕಾಂತ ಯಡಹಳ್ಳಿ -




ಕರ್ನಾಟಕದ ಹೆಮ್ಮೆಯ ರಂಗರೆಪರ್ಟರಿ ರಂಗಾಯಣಕ್ಕೆ ಬೆಳ್ಳಿಹಬ್ಬದ ಸಡಗರವಾದರೆ ಡಾ.ಯು.ಆರ್. ಅನಂತಮೂರ್ತಿಯವರ  ಸಂಸ್ಕಾರ ಕಾದಂಬರಿಗೆ ಸುವರ್ಣಹಬ್ಬದ ಸಂಭ್ರಮ. ರಂಗಾಯಣ ತಮ್ಮ 25ನೇ ವರ್ಷದ ರಂಗಪಯಣವನ್ನು ಸಂಸ್ಕಾರ ನಾಟಕ ನಿರ್ಮಾಣದ ಮೂಲಕ ಆಚರಿಸುತ್ತಿರುವುದು ಅಭಿನಂದನೀಯ. ಇದು ರಂಗಾಯಣವನ್ನು ಕಟ್ಟಿ ಬೆಳೆಸಿದ ರಂಗದಿಗ್ಗಜ ದಿ. ಬಿ.ವಿ.ಕಾರಂತರಿಗೂ ಹಾಗೂ ಸಂಸ್ಕಾರದಂತಹ ಅನೂಹ್ಯ ಕಾದಂಬರಿಯನ್ನು ಬರೆದ ದಿ. ಅನಂತಮೂರ್ತಿಯವರಿಗೂ ಸಲ್ಲಿಸಬಹುದಾದ ರಂಗಗೌರವವಾಗಿದೆ.
 
ನವ್ಯ ಸಾಹಿತ್ಯ ಪರಂಪರೆಯ ಅತ್ಯಮೂಲ್ಯ ಕಾದಂಬರಿ ಡಾ.ಯು.ಆರ್.ಅನಂತಮೂರ್ತಿಯವರ ಸಂಸ್ಕಾರ. ಕನ್ನಡದಲ್ಲಿ ಅತೀ ಹೆಚ್ಚು ವಿವಾದಕ್ಕೆ ಈಡಾಗಿರುವ ಹಾಗೂ ಅತೀ ಹೆಚ್ಚು ಚರ್ಚೆಗೊಂಡಿರುವ ಕಾದಂಬರಿ ಕೂಡಾ ಸಂಸ್ಕಾರವೇ. ಹಳೆಯ ಕಂದಾಚಾರವನ್ನು ಪ್ರಶ್ನಿಸುತ್ತಲೇ ಹೊಸ ಆಲೋಚನೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಹೊಸ ಮೌಲ್ಯಗಳನ್ನು ಆನ್ವೇಷಿಸುವ ಪ್ರಜ್ಞೆಯ ಭಾಗವಾಗಿರುವ ನವ್ಯಸಾಹಿತ್ಯ ಪ್ರಕಾರದಲ್ಲಿ ಸಂಸ್ಕಾರ ಕಾದಂಬರಿಗೆ ಅಗ್ರಗಣ್ಯ ಸ್ಥಾನವಿದೆ. ಕನ್ನಡ ಸಾರಸ್ವತ ಲೋಕದಲ್ಲಿ ತೀವ್ರತರವಾದ ಸಂಚಲನ ಹುಟ್ಟಿಸಿದ ಸಂಸ್ಕಾರವನ್ನು ವಿರೋಧಿಸುವ ಒಂದು ಗುಂಪೇ ಹುಟ್ಟಿಕೊಂಡಿತ್ತು. ಪತ್ರಿಕೆಗಳಲ್ಲಿ ಅನಂತಮೂರ್ತಿಯವರನ್ನು ಹೀಯಾಳಿಸಿ ಬರೆಯಲಾಯಿತು. ವಿವಾದವನ್ನೇ ಸೃಷ್ಟಿಸಲಾಯಿತು. 1970 ರಲ್ಲಿ ಪಟ್ಟಾಭಿರಾಮರೆಡ್ಡಿಯವರು ಸಂಸ್ಕಾರ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ದೇಶಿಸಿ ನಿರ್ಮಿಸಿದ್ದರು. ಗಿರೀಶ್ ಕಾರ್ನಾಡರು ಚಿತ್ರಕಥೆ ಬರೆದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆಗ ರಾಜ್ಯಾದ್ಯಂತ ಸಿನೆಮಾ ಕುರಿತು ದೊಡ್ಡ ವಿವಾದವೇ ಹುಟ್ಟಿದ್ದರಿಂದ ಸಿನೆಮಾವನ್ನು ಬಹಿಷ್ಕರಿಸಲಾಯಿತು. ಸಿನೆಮಾ ಪ್ರದರ್ಶನಕ್ಕೆ ಪ್ರಾಂತ್ಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿಗಳಿಂದ ಅನುಮತಿ ಸಿಗದಂತೆ ನೋಡಿಕೊಳ್ಳಲಾಯಿತು. ಕೊನೆಗೆ ದೆಲ್ಲಿಯ ಪಾರ್ಲಿಮೆಂಟ್ ಸಿನೆಮಾ ಸಮಿತಿ ಮುಂದೆ ಪ್ರದರ್ಶಿಸಿ ಅನುಮತಿಯನ್ನು ಸಿನೆಮಾದ ನಿರ್ಮಾಪಕರಾದ ಪಟ್ಟಾಭಿರಾಮರವರು ಪಡೆಯಬೇಕಾಯಿತು. ಅನುಮತಿ ಸಿಕ್ಕಿದ್ದನ್ನೂ ಮರೆಮಾಚಿ ಯಾವ ಪತ್ರಿಕಾ ಮಾಧ್ಯಮಗಳಿಗೂ ತಿಳಿಸದೇ ಗುಟ್ಟಾಗಿ ಸಿನೆಮಾವನ್ನು ಬೆಂಗಳೂರಿನಲ್ಲಿ ಬೆಳಗಿನ ಶೋ ಪ್ರದರ್ಶಿಸಲಾಯ್ತು. ಇದು ಗೊತ್ತಾದ ಪುರೋಹಿತಶಾಹಿ ಪಡೆ ಸಿನೆಮಾ ಪ್ರದರ್ಶನಕ್ಕೆ ತಡೆ ತರಲು ಪ್ರಯತ್ನಿಸಿದರು. ಆದರೆ ಅದಕ್ಕಾಗಿ ಕೋರ್ಟಿಗೆ ಹಣ ಕಟ್ಟಬೇಕಾಗಿದ್ದರಿಂದ ಅದಕ್ಕೆ ಯಾರೂ ಮುಂದೆ ಬರದೇ ಸಿನೆಮಾ ಪ್ರದರ್ಶನ ಮುಂದುವರೆಯಿತು. ಚಲನಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಅತ್ಯುತ್ತಮ ಚಲನಚಿತ್ರ ಅವಾರ್ಡಗಳು ಕೂಡಾ ಸಿಕ್ಕಿದ್ದವು.


ಡಾ.ಯು.ಆರ್.ಅನಂತಮೂರ್ತಿಯವರು
ಡಾ.ಯು.ಆರ್.ಅನಂತಮೂರ್ತಿಯವರು ವಿದೇಶಿ (ಬರ್ಮಿಂಗ್ಯಾಂ) ನೆಲದಲ್ಲಿ ಕುಳಿತು ತಮ್ಮ ಬ್ರಾಹ್ಮಣ ಸಮುದಾಯದಲ್ಲಿ ಜಿಡ್ಡುಗಟ್ಟಿದ ಕಂದಾಚಾರ ಹಾಗೂ ವೈರುದ್ಯಗಳ ಬಗ್ಗೆ ಸಂಸ್ಕಾರ ಕಾದಂಬರಿ ಬರೆದರು. ಕನ್ನಡದ ಕಾದಂಬರಿ ಈಗಾಗಲೇ ಹಿಂದಿ, ಉರ್ದು, ಬೆಂಗಾಳಿ, ಮಲಯಾಳಿ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಜೊತೆಗೆ ಇಂಗ್ಲೀಷ್, ರಷ್ಯನ್, ಪ್ರೆಂಚ್, ಜರ್ಮನ್, ಹಂಗೇರಿಯನ್, ಸ್ವೀಡಿಶ್... ಹೀಗೆ ಕೆಲವಾರು ವಿದೇಶಿ ಭಾಷೆಗಳಲ್ಲೂ ಸಹ ಅನುವಾದಗೊಂಡಿದ್ದು ಭಾರತೀಯ ಕಾದಂಬರಿಗಳಲ್ಲಿ ಜಗತ್ತಿನಾದ್ಯಂತ ಹೆಚ್ಚು ಓದುಗರನ್ನು ತಲುಪಿದ ಕೃತಿಯಾಗಿದೆ. ಅನಂತಮೂರ್ತಿಯವರು ಸಂಸ್ಕಾರ ಕಾದಂಬರಿಯನ್ನು ಬರೆದಿದ್ದು 1965ರಲ್ಲಿ. ಇಂತಹ ಕನ್ನಡದ ಮಹತ್ತದ ಕೃತಿಗೆ ಈಗ ೫೦ ವರ್ಷಗಳು ತುಂಬಿತು. ಸುವರ್ಣ ಸಂಭ್ರಮದ ನೆಪದಲ್ಲಿ ಮೈಸೂರಿನ ರಂಗಾಯಣವು ಕಾದಂಬರಿಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವುದು ಸ್ತುತ್ಯಾರ್ಹ ಕೆಲಸವಾಗಿದೆ. ರಂಗಾಯಣದ ನಿರ್ದೇಶಕರಾದ ಜನಾರ್ಧನ್ (ಜೆನ್ನಿ) ರವರ ನಿರ್ದೇಶನದಲ್ಲಿ  ರಂಗಾಯಣದ ಹಿರಿಯ ಹಾಗೂ ಕಿರಿಯ ಕಲಾವಿದರು ಸಂಸ್ಕಾರ ನಾಟಕವನ್ನು ಅಭಿನಯಿಸಿದ್ದು 2015 ಸೆಪ್ಟಂಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.


ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ದೂರ್ವಾಸಪುರ ಅಗ್ರಹಾರದ ಧರ್ಮಪಾರಂಗತರಾದ ಪ್ರಾಣಾಚಾರ್ಯರಿಗೆ ತಮ್ಮದೇ ಬ್ರಾಹ್ಮಣ ಸಮುದಾಯದ ಜಾತಿಭ್ರಷ್ಟ ನಾರಣಪ್ಪನ ಸಾವು ತೀವ್ರ ಸಮಸ್ಯೆಯನ್ನುಂಟುಮಾಡುತ್ತದೆ. ಹೆಣ್ಣು, ಹೆಂಡಗಳ ಮೋಹಕ್ಕೆ ಬಿದ್ದು ಜಾತಿಗೆಟ್ಟವನ ಶವವನ್ನು ಯಾರು ಸಂಸ್ಕಾರ ಮಾಡಬೇಕು ಎನ್ನುವುದಕ್ಕೆ ಧರ್ಮಶಾಸ್ತ್ರದಲ್ಲೂ ಉತ್ತರ ಸಿಕ್ಕುವುದಿಲ್ಲ. ಶವ ಸಂಸ್ಕಾರವಾಗದೇ ಬ್ರಾಹ್ಮಣರು ಊಟಮಾಡುವಂತಿಲ್ಲವಾದ್ದರಿಂದ ಅಗ್ರಹಾರವೇ ತಲ್ಲಣಿಸಿಹೋಗುತ್ತದೆ. ನಾರಣಪ್ಪನ ಪ್ರೇಯಸಿ ವೇಶ್ಯೆ ಚಂದ್ರಿ ಶವಸಂಸ್ಕಾರಕ್ಕಾಗಿ ಕೊಡುವ ಆಭರಣಗಳ ಗಂಟನ್ನು ಹೊಡೆಯಲು ಕೆಲವು ಬ್ರಾಹ್ಮಣರು ಶವಸಂಸ್ಕಾರಕ್ಕೆ ಸಿದ್ದವಾಗುತ್ತಾರಾದರೂ ಪ್ರಾಣೇಶಾಚಾರ್ಯರ ಅನುಮತಿ ಸಿಗದೇ ಪರಿತಪಿಸುತ್ತಾರೆ. ಹಸಿವು ತಾಳದೇ ಕೆಲವರು ಅಗ್ರಹಾರ ಬಿಟ್ಟು ಬೇರೆಡೆ ಹೋಗಿ ಉದರಪರಿಹಾರ ಕಂಡುಕೊಳ್ಳುತ್ತಾರೆ. ರೋಗಿಷ್ಟ ಪತ್ನಿಯ ಆರೈಕೆ ಹಾಗೂ ಧರ್ಮಕಾರ್ಯದಲ್ಲಿ ಸಾರ್ಥಕ್ಯ ಕಂಡುಕೊಳ್ಳುತ್ತಿರುವ ಪ್ರಾಣೇಶಾಚಾರ್ಯರ ಮನೋನಿಗ್ರಹವು ಬಯಕೆಯ ಬೆಂಕಿಯಲ್ಲಿ ಬೂದಿಯಾಗಿ ಚಂದ್ರಿಯನ್ನು ಕೂಡುತ್ತಾರೆ. ಧರ್ಮದ್ರೋಹಿಯಾದದ್ದಕ್ಕೆ ಪಶ್ಚಾತ್ತಾಪ ಪಟ್ಟು ಅಗ್ರಹಾರವನ್ನೇ ತೊರೆದು ತಮ್ಮ ಗುರುತನ್ನು ಮರೆಮಾಚುತ್ತಾ ಊರೂರು ಅಲೆಯುತ್ತಾರೆಚಂದ್ರಿಯೇ ಮುಸ್ಲಿಂ ವ್ಯಕ್ತಿಯ ಸಹಾಯದಿಂದ ಶವಸಂಸ್ಕಾರ ಮಾಡಿ ತನ್ನ ಊರಿಗೆ ಹೊರಡುತ್ತಾಳೆ. ಚಂದ್ರಿಯ ಅಂಗಸುಖವನ್ನು  ಮರೆಯಲಾರದೇ ತಳಮಳಿಸುವ ಪ್ರಾಣೇಶಾಚಾರ್ಯ ಪ್ಲೇಗು ಪೀಡಿತ ಅಗ್ರಹಾರಕ್ಕೆ ಮರಳಿ ಹೋಗುವ ನಿರ್ದಾರದೊಂದಿಗೆ ನಾಟಕ ಮುಗಿಯುತ್ತಾದರೂ ತದನಂತರವೂ ನೋಡಿದವರ ತಲೆಯಲ್ಲಿ ನೂರಾರು ಆಲೋಚನೆಗಳನ್ನು ಹೊರಹೊಮ್ಮಿಸುತ್ತದೆ.
  
ಜಾತಿಗೆಟ್ಟ ಬ್ರಾಹ್ಮಣ ನಾರಣಪ್ಪನ ಶವವನ್ನು ಯಾರು ಸಂಸ್ಕಾರ ಮಾಡಬೇಕು ಎನ್ನುವ ಪ್ರಶ್ನೆಯನ್ನು ಪ್ರಮುಖವಾಗಿಟ್ಟುಕೊಂಡು ಇಡೀ ಬ್ರಾಹ್ಮಣ ಸಮಾಜದ ಬ್ರಾಹ್ಮಣ್ಯದ ಅತಿರೇಕಗಳನ್ನು ವಿಡಂಬಣಾತ್ಮಕವಾಗಿ ನಾಟಕ ತೋರಿಸುತ್ತದೆ. ಅಗ್ರಹಾರದ ಅನೇಕ ಬ್ರಾಹ್ಮಣರು ತಮ್ಮ ಹಿತಾಸಕ್ತಿಗನುಗುಣವಾಗಿ ಅನಾವರಣಗೊಳ್ಳುತ್ತಾ ಹೋಗುತ್ತಾರೆ. ಜೊತೆಗೆ ಹೆಣ್ಣು, ಹೊಣ್ಣು ಮತ್ತು ಹಸಿವು ಇವುಗಳನ್ನು ಕೇಂದ್ರವಾಗಿಟ್ಟುಕೊಂಡು ಇಡೀ ನಾಟಕ ಪುರೋಹಿತಶಾಹಿಯ ಮುಖವಾಡಗಳನ್ನು ಒಂದೊಂದಾಗಿ ಕಳಚುತ್ತಾ ಬೆತ್ತಲಾಗಿಸುತ್ತದೆ. ಬ್ರಾಹ್ಮಣ್ಯದ ಕಟ್ಟುಪಾಡುಗಳ ಸಂಕೋಲೆಗಳನ್ನು ಕಳಚಿಕೊಳ್ಳುವ ನಾರಣಪ್ಪ ಹಾಗೂ ತಮ್ಮ ಸುತ್ತ  ಮನುಶಾಸ್ತ್ರದ ಬೇಲಿಯನ್ನು ಹಾಕಿಕೊಂಡ ಪ್ರಾಣೇಶಾಚಾರ್ಯ ಇಬ್ಬರ ನಡುವಿನ ಸಂಘರ್ಷಗಳು ಇಡೀ ನಾಟಕದ ಅಂತಸತ್ವವಾಗಿವೆ. ಮನುಷ್ಯ ಸಹಜ ವಾಂಛೆ, ದೌರ್ಬಲ್ಯಗಳನ್ನೇ ಬದುಕಾಗಿಸಿಕೊಂಡ ನಾರಣಪ್ಪ ಹಾಗೂ ಅವುಗಳನ್ನೆಲ್ಲಾ ಧರ್ಮಾಚರಣೆಯ ಹೆಸರಲ್ಲಿ ಮೀರಿನಿಲ್ಲಬಯಸುವ ಪ್ರಾಣೇಶಾಚಾರ್ಯ ಇಬ್ಬರ ನಡುವಿನ ಬದುಕಿನ ಪೈಪೋಟಿಯಲ್ಲಿ ಕೊನೆಗೂ ನಾರಣಪ್ಪ ಗೆದ್ದರೆ, ಪ್ರಕೃತಿ ಸಹಜತೆಯನ್ನು ವಿಕೃತಿಯೆಂದು ತಿಳಿದು ಮನಸನ್ನು ಗೆಲ್ಲಬಯಸುವ ಪ್ರಾಣೇಶಾಚಾರ್ಯರು ಸೋತುಬಿಡುತ್ತಾರೆ. ಇಲ್ಲಿ ಇಬ್ಬರೂ ಕೇವಲ ಸಾಂಕೇತಿಕವೆನಿಸಿದರೂ   ಇಬ್ಬರ ಪೈಪೋಟಿ, ತಾಕಲಾಟಗಳು ಪ್ರತಿಯೊಬ್ಬ ಮನುಷ್ಯರ ಅಂತರಂಗದ ತಲ್ಲಣಗಳೇ ಆಗಿವೆ. ಹೀಗಾಗಿ ಭಾರತೀಯ ಜನರ ಮನೋವಿಶ್ಲೇಷಣಾತ್ಮಕ ರೀತಿಯಲ್ಲಿ ಸಂಸ್ಕಾರ ಮೂಡಿಬಂದಿದೆ.

ಕಾದಂಬರಿಯಲ್ಲಿ ನಾರಣಪ್ಪನ ಶವವನ್ನು ಮುಸ್ಲಿಂ ಬ್ಯಾರಿ ಒಬ್ಬ ಗುಟ್ಟಾಗಿ ಸುಟ್ಟುಬಿಡುತ್ತಾನೆ. ಆದರೆ ಇದು ಗೊತ್ತಿಲ್ಲದ ಅಗ್ರಹಾರದ ಬ್ರಾಹ್ಮಣರು ಹಾಗೂ ಪ್ರಾಣೇಶಾಚಾರ್ಯರು ಶವ ಕೊಳೆಯುತ್ತಿದೆ ಎಂದೇ ಭಾವಿಸಿಕೊಳ್ಳುತ್ತಾರೆ. ಆದರೆ ಇದನ್ನು ತಮ್ಮ  ಸಿನೆಮಾದ ಚಿತ್ರಕಥೆಯಲ್ಲಿ  ಕಾರ್ನಾಡರು ಉದ್ದೇಶಪೂರ್ವಕವಾಗಿಯೇ ಬರೆಯುವುದಿಲ್ಲ. ತೋರಿಸಿದ್ದರೆ ಸಿನೆಮಾ ಬಿಡುಗಡೆಯಾಗುತ್ತಲೇ ಇರಲಿಲ ಎಂದು ಅನಂತಮೂರ್ತಿಯವರೇ ಬರೆದುಕೊಂಡಿದ್ದಾರೆ. ನಾಟಕದಲ್ಲೂ ಸಹ ಕಾದಂಬರಿಯಲ್ಲಿರುವಂತೆ   ಘಟನೆಯನ್ನು ತೋರಿಸದೇ ಶವ ಕೊಳೆಯುತ್ತಿದೆ ಎಂಬುದನ್ನೇ ಪ್ರೇಕ್ಷಕರಿಗೆ ನಂಬಿಸುವ ಪ್ರಯತ್ನ ಮಾಡಲಾಗಿದೆ. ಕೋಮುಸಂಘರ್ಷಕ್ಕೆ ಕಾರಣವಾದೀತೆಂಬ ಆತಂಕದಿಂದ ರೀತಿಯ ಬದಲಾವಣೆಯನ್ನು ನಿರ್ದೇಶಕರು ಮಾಡಿಕೊಂಡಿದ್ದಾರೆನಿಸುತ್ತದೆ. ಸಿನೆಮಾದಲ್ಲಿ ತಮ್ಮ ಕಾದಂಬರಿಯ ಪ್ರಮುಖ ಅಂಶವನ್ನು ತಿರಿಚಿದ್ದರಿಂದ ಅನಂತಮೂರ್ತಿಯವರಿಗೆ ತಕರಾರಿತ್ತು. ನಾಟಕವೂ ಸಹ ಸಿನೆಮಾದ ಹಾದಿಯಲ್ಲೇ ಸಾಗಿದೆಯಾದರೂ ತಕರಾರು ಮಾಡಲು ಅನಂತಮೂರ್ತಿಯವರಿಲ್ಲ.


ಸಂಸ್ಕಾರ ನಾಟಕವು ನಾಲ್ಕು ಪ್ರಮುಖ ಅಂಶಗಳನ್ನು ಚರ್ಚಿಸುತ್ತದೆ. ಧರ್ಮ, ಹೆಣ್ಣು, ಹೊನ್ನು ಮತ್ತು ಹಸಿವು. ಪ್ರಾಣಾಚಾರ್ಯರಂತಹ ಧರ್ಮನಿಷ್ಟರ ನಿರಂಕುಶತೆಯಲ್ಲಿ ಪರರ ಹೆಣ್ಣು ಹೊನ್ನುಗಳು ನಿಶಿದ್ಧ. ಆದರೆ ವೈದಿಕ ಧರ್ಮವನ್ನು ತೋರುಂಬಲಾಭ ಮಾಡಿಕೊಂಡ ಧರ್ಮಾನುಯಾಯಿಗಳು ಅದು ಹೇಗೆ ಹೊನ್ನಿಗಾಗಿ ಧರ್ಮದ ಕಟ್ಟಳೆಗಳನ್ನೂ ಮೀರಲು ಪ್ರಯತ್ನಿಸುತ್ತಾರೆ ಎಂಬುದನ್ನು ನಾಟಕ ದೃಶ್ಯಗಳ ಮೂಲಕ ಚಿತ್ರಿಸಿದೆ. ಕೀಳುಜಾತಿಯ ವೇಶ್ಯೆ ಚಂದ್ರಿಯು ನಾರಣಪ್ಪನ ಸಂಸ್ಕಾರಕ್ಕೆ ಕೊಡುವ ಚಿನ್ನದ ಮೇಲೆ ಅಗ್ರಹಾರದ ಬ್ರಾಹ್ಮಣರ ಕಣ್ಣು. ಧರ್ಮದ್ರೋಹಿಗೆ ಸಂಸ್ಕಾರ ಮಾಡಲು ಸಾಧ್ಯವೇ ಇಲ್ಲ ಎನ್ನುವ ಹಾರವರು ಚಿನ್ನದ ದುರಾಸೆಗೆ ಬಿದ್ದು ಇಲ್ಲದ ಸಂಬಂಧಗಳನ್ನು ಮುಂದೆ ಮಾಡಿಕೊಂಡು ಪೈಪೋಟಿಯ ಮೇಲೆ ಸಂಸ್ಕಾರ ಮಾಡಲು ಮುಂದಾಗುವುದನ್ನು ಸಂಸ್ಕಾರ ನಾಟಕವು ವಿಡಂಬಣಾತ್ಮಕವಾಗಿ ಚಿತ್ರಿಸುತ್ತದೆ. ಅಗ್ರಹಾರ ಅಷ್ಟೇ ಯಾಕೆ ಬ್ರಾಹ್ಮಣರ ಮಠದ ಜಗದ್ಗುರುವಿಗೂ ಸಹ ಹೊನ್ನಿನ ಮೇಲೆ ಆಸೆ. ಸಂಸ್ಕಾರ ಮಾಡಲು ಅನುಮತಿ ಬೇಕೆಂದರೆ ಚಂದ್ರಿಕೊಟ್ಟ ಚಿನ್ನ ಹಾಗೂ ಸತ್ತ ನಾರಣಪ್ಪನ ಆಸ್ತಿ ಮಠಕ್ಕೆ ಕೊಡಬೇಕು ಎನ್ನುವ ಸ್ವಾಮಿಯ ದುರಾಸೆಯನ್ನು ವ್ಯಂಗ್ಯವಾಗಿ ತೋರಿಸುತ್ತಾ ಆಸ್ತಿಗಾಗಿ ಹೊನ್ನಿಗಾಗಿ ಜಗದ್ಗುರುಗಳಂತವರೂ ಸಹ ಹೇಗೆ ಧರ್ಮವನ್ನು ಬಳಸಿಕೊಳ್ಳುತ್ತಾರೆನ್ನುವ ಸಾರ್ವಕಾಲಿಕ ಸತ್ಯವನ್ನು ಹೇಳುವಲ್ಲಿ ನಾಟಕ ಯಶಸ್ವಿಯಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಹಣಕ್ಕಾಗಿ ಮೈಮಾರಿಕೊಳ್ಳುವ ನಾಟಕದ ಸೂಳೆ ಚಂದ್ರಿಗೂ ಹಾಗೂ ಹೊನ್ನಿಗಾಗಿ ಧರ್ಮವನ್ನೇ ಮಾರಾಟಕ್ಕಿಡುವ ಪುರೋಹಿತರಿಗೂ ಅಂತಹ ಯಾವುದೇ ವ್ಯಾತ್ಯಾಸ ಇಲ್ಲವೆಂಬುದು ನಾಟಕ ನೋಡಿದವರಿಗೆ ಅರಿವಾಗದೇ ಇರದು. ಧರ್ಮಕ್ಕಿಂತಲೂ ಹೊನ್ನು ಮಹತ್ತದ್ದು ಎಂದು ಹೇಳುವ ಜೊತೆಗೆ ಧರ್ಮ ಹಾಗೂ ಹೊನ್ನಿಗಿಂತ ಹಸಿವು ಮುಖ್ಯ ಎನ್ನುವುದನ್ನೂ ಸಹ ನಾಟಕ ನೇರವಾಗಿಯೇ ತೋರಿಸುತ್ತದೆ. ಯಾವಾಗ ಶವಸಂಸ್ಕಾರ ಆಗುವವರೆಗೂ ಆಹಾರ ಸೇವಿಸುವ ಹಾಗಿಲ್ಲ ಎಂದು ಧರ್ಮಶಾಸ್ತ್ರ ಹೇಳುತ್ತದೆಯೋ ಆಗ ಅಗ್ರಹಾರದ ಬ್ರಾಹ್ಮಣೋತ್ತಮರು ಧರ್ಮಸಂಕಟಕ್ಕೆ ಬಿದ್ದು ಅಗ್ರಹಾರದ ಹೊರಗಡೆ ಹೋಗಿ ತುತ್ತಿನ ಚೀಲ ತುಂಬಿಸಿಕೊಳ್ಳುವ ದಾರಿಕಂಡುಕೊಳ್ಳಬೇಕಾಗುತ್ತದೆ. ಧರ್ಮದ ಅತಿರೇಕಗಳನ್ನೆಲ್ಲಾ ಮೀರಿದ್ದು ದೈಹಿಕ ಅಗತ್ಯತೆಗಳು, ಅದು ಹೊಟ್ಟೆಯ ಹಸಿವಾಗಿರಬಹುದು ಇಲ್ಲವೇ ದೇಹದ ಹಸಿವಾಗಿರಬಹುದು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾಟಕ ಸೊಗಸಾಗಿ ಹೇಳುತ್ತದೆ. ನಾರಣಪ್ಪ ಇದಕ್ಕೆ ಮಾದರಿಯಾಗುತ್ತಾನೆ. ಎಲ್ಲರೂ ಕದ್ದು ಮಾಡಬಯಸುವುದನ್ನು ಆತ ಬಹಿರಂಗವಾಗಿಯೇ ಮಾಡುತ್ತಾನೆ. ಪ್ರಾಣೇಶಾಚಾರ್ಯರಂತಹ ಧರ್ಮನಿಷ್ಟರೂ ಸಹ ದೈಹಿಕ ಬಯಕೆಗೆ ಹೊರತಲ್ಲ ಎನ್ನುವ ಪರಮಸತ್ಯವನ್ನು ಹೇಳುವಲ್ಲಿ ಸಂಸ್ಕಾರ ನಾಟಕವು ಸಫಲವಾಗಿದೆ.



ಅನಂತಮೂರ್ತಿಯವರು ಸಂಸ್ಕಾರದಲ್ಲಿ ಸೃಷ್ಟಿಸಿದ ಪ್ರಾಣೇಶಾಚಾರ್ಯ ಹಾಗೂ ನಾರಣಪ್ಪ   ಎರಡೂ ಪ್ರಮುಖ ಪಾತ್ರಗಳು ಒಂದು ರೀತಿಯಲ್ಲಿ ಅತಿರೇಕಗಳೇ. ದೈಹಿಕ ಬಯಕೆಗಳನ್ನು ಧರ್ಮದ ಹೆಸರಲ್ಲಿ ನಿಯಂತ್ರಣದಲ್ಲಿಟ್ಟುಕೊಂಡು ಕಂದಾಚಾರದ ಕಟ್ಟುಪಾಡುಗಳಲ್ಲೇ ಆನಂದವನ್ನು ಹೊಂದಬಯಸುವ ಪ್ರಾಣಾಚಾರ್ಯರರದು ಒಂದು ರೀತಿಯ ಅಮಾನುಷ ಅತಿರೇಕವಾದರೆ... ಧರ್ಮವನ್ನು ವಿರೋಧಿಸುವ ಹುಮ್ಮಸ್ಸಿನಲ್ಲಿ ಹೆಣ್ಣು ಹೆಂಡಗಳ ಸಹವಾಸದಲ್ಲೇ ಸುಖ ಕಾಣಬಯಸುವ ನಾರಣಪ್ಪ ಇನ್ನೊಂದು ಅತಿರೇಕ. ಅತಿಯಾದ ಕಟ್ಟುಪಾಡುಗಳಲ್ಲಿ ಬಂಧಿಯಾದ ಆಚಾರ್ಯರು ಹಾಗೂ ಕಟ್ಟುಪಾಡುಗಳೇ ಇಲ್ಲದೇ ತನ್ನಿಷ್ಟದಂತೆ ಸ್ವೇಚ್ಚಾಚಾರದಿ ಬದುಕುವ ನಾರಣಪ್ಪ ಇಬ್ಬರೂ ಸಹ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಕೋನದಲ್ಲಿ ತಪ್ಪಿತಸ್ತರೇ ಆಗಿದ್ದಾರೆ. ಯಾವುದೇ ಕೋನದಲ್ಲಿ  ನೋಡಿದರೂ ಎರಡೂ ಪಾತ್ರಗಳು ಜನರ ಬದುಕಿಗೆ ಮಾದರಿ ಅಲ್ಲವೇ ಅಲ್ಲ. ಧರ್ಮದ ಗೋಡೆ ಒಡೆದು ಹಾಕಿದ್ದಕ್ಕೆ ನಾರಣಪ್ಪನನ್ನು ಅನಿವಾರ್ಯವಾಗಿ ಇಷ್ಟಪಡಬೇಕಾಗಿದೆ ಹಾಗೂ ಕೊನೆಗೂ ಪ್ರಾಣೇಶಾಚಾರ್ಯರೂ ಸಹ ನಾರಣಪ್ಪನ ದಾರಿಗೆ ಬಂದು ಪರಹೆಣ್ಣಿನ ಸಮಾಗಮ ಮಾಡಿದ್ದಕ್ಕೆ ಸಮಾಧಾನ ಪಡಬೇಕಿದೆ. ದೈಹಿಕ ಬಯಕೆಗಳನ್ನು ನಿರ್ಬಂಧಿಸಿ ಬದುಕುವುದು ಅನಗತ್ಯವಾಗಿರುವಂತೆಯೇ, ಇಷ್ಟಾ ಬಂದದ್ದನ್ನೆಲ್ಲ ಮಾಡುತ್ತೇನೆ ಎನ್ನುವ ಸ್ವೇಚ್ಚಾಚಾರ ಮನೋಭಾವವೂ ಸಮಾಜಕ್ಕೆ ಅಪಾಯಕಾರಿಯಾಗಿದೆ. ಒಂದು ರೀತಿಯಲ್ಲಿ ಎರಡೂ ಪಾತ್ರಗಳೂ ಮನುಷ್ಯನ ಮನದೊಳಗಿರುವ ಎರಡು ರೀತಿಯ ಸಕಾರ ನಕಾರ ಭಾವನೆಗಳ ತಾಕಲಾಟವೇ ಆಗಿದ್ದು.. ಬಹುತೇಕ ಸಂದರ್ಭದಲ್ಲಿ ನಕಾರಾತ್ಮಕತೆಯೇ ಗೆಲ್ಲುವುದರ ಮಾದರಿ ನಾಟಕವಾಗಿದೆ. ಒಂದು ರೀತಿಯಲ್ಲಿ ಮನೋವಿಶ್ಲೇಷನಾತ್ಮಕವಾಗಿ ಸಂಸ್ಕಾರ ಮೂಡಿಬಂದಿದೆಯಾದರೂ ಅತಿರೇಕಗಳನ್ನು ಆದರ್ಶವಾಗಿ ಒಪ್ಪಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಮನುಷ್ಯನ ಅನಿವಾರ್ಯ ಅಗತ್ಯಗಳಾದ ಅರಿಷಡ್ವರ್ಗಗಳನ್ನು ಕಟ್ಟುಪಾಡುಗಳಲ್ಲಿ ಬಂಧಿಸುವುದಾಗಲೀ ಇಲ್ಲವೇ ಅವುಗಳನ್ನು ಬಿಡುಗಡೆಗೊಳಿಸಿ ಅನುಭವಿಸುವುದಾಗಲೀ ಉತ್ತಮ ಮಾರ್ಗಗಳಲ್ಲ. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡೇ ಬದುಕನ್ನು ಅನುಭವಿಸುವುದು ಉತ್ತಮ ಮಾರ್ಗವಾಗಿದೆ


ಏನೇ ಆಗಲಿ... ಸಂಸ್ಕಾರ ನಾಟಕ ನೋಡಿದ ಮೇಲೆ ನೋಡುಗರನ್ನು ಇನ್ನಿಲ್ಲದಂತೆ ಕಾಡುವುದರಲ್ಲಿ ಸಂದೇಹವೇ ಇಲ್ಲ. ನಾಟಕದೊಳಗಿನ ಕೆಲವು ಸಂಭಾಷಣೆಗಳಂತೂ ಕೇಳುಗರ ಕಿವಿಯಲ್ಲಿ ಅನುರಣಿಸುವಂತಿವೆ. ಬ್ರಾಹ್ಮಣ್ಯವನ್ನು ನಾರಣಪ್ಪ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ ಎನ್ನುವ ಮಾತಂತೂ ನಾಟಕದಲ್ಲಿ ಕೆಲವಾರು ಸಲ ಪುನರಾವರ್ತಿತವಾಗುತ್ತದೆ. ಜಾತಿ ವ್ಯವಸ್ಥೆಯ ಬೇರುಗಳು ಆಳವಾಗಿರುವ ಸಮಾಜದಲ್ಲಿ ಯಾರೇ ಜಾತಿ ಬಿಟ್ಟರು ಜಾತಿ ಅವರನ್ನು ಬಿಡಲಾರದಂತಹ ಪರಿಸ್ಥಿತಿ ಇದೆ. ಹೀಗಾಗಿ ಜಾತಿಬಿಟ್ಟ, ಜಾತಿಬಿಟ್ಟೆನೆಂದ, ಜಾತಿಗೆಟ್ಟ ಎಲ್ಲರೂ ಜಾತಿಯ ಭೂತವನ್ನು ಬೆನ್ನಿಗೆ ಕಟ್ಟಿಕೊಂಡೇ ಬದುಕಬೇಕಾಗಿರುವುದು ಇಂದಿನ ವಾಸ್ತವವಾಗಿದೆ. ಆದ್ದರಿಂದ ಸಂಭಾಷಣೆ ತೀವ್ರವಾಗಿ ಕಾಡುವುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಆಚಾರ್ಯರು ಕಾಮವನ್ನು ಬಿಟ್ಟರು ಕಾಮ ಅವರನ್ನು ಬಿಡಲಿಲ್ಲ ಎನ್ನುವುದೂ ಸಹ ಮನುಷ್ಯ ಸಹಜ ಭಾವನೆಗಳಿಂದ ಯಾರೂ ಹೊರತಲ್ಲ ಎನ್ನುವ ವಾಸ್ತವವನ್ನು ಸಂಭಾಷಣೆಗಳ ಮೂಲಕ ನಾಟಕ ಮನದಟ್ಟು ಮಾಡಿಕೊಡುತ್ತದೆ. ಬಹುಷಃ ಮೇಲಿನ ಎರಡು ಮಾತುಗಳೇ ಇಡೀ ನಾಟಕದ ಅಂತಃಸ್ಸತ್ವವಾಗಿದೆ. ‘‘ಯಾವತ್ತಿನಿಂದಲೂ ನಾರಯಣಪ್ಪ ನನಗೆ ಸಮಸ್ಯೆಯಾಗಿಯೇ ಉಳಿದ. ಅಗ್ರಹಾರದಲ್ಲಿ ಕೊನೆಗೆ ಗೆಲ್ಲುವುದು ಸನಾತನ ಧರ್ಮವನ್ನು ಹಿಡಿದ ತನ್ನ ತಪಸ್ಸೋ ಇಲ್ಲವೇ ಅವನ ರಾಕ್ಷಸ ಸ್ವಭಾವದ ಹಠವೋ’’ ಎಂದು ಪ್ರಾಣೇಶಾಚಾರ್ಯರು ಕೇಳಿಕೊಳ್ಳುತ್ತಾರೆ. ಆದರೆ ನಾರಣಪ್ಪ ಪ್ಲೇಗ್ ಮಾರಿಯಿಂದ ಸತ್ತನಾದರೂ ಸೋಲುವುದು ಆಚಾರ್ಯರೇ. ಎಲ್ಲಕ್ಕಿಂತ ಹೆಚ್ಚಾಗಿ ಆಚಾರ್ಯರು ಹಾಗೂ ನಾರಣಪ್ಪ ಇಬ್ಬರೂ ಮುಖಾಮುಖಿಯಾಗುವ ದೃಶ್ಯದಲ್ಲಿ ಅವರಿಬ್ಬರ ಮಾತುಗಳನ್ನು ಕೇಳುವುದೇ ಒಂದು ಅನುಭೂತಿ. ನೀವು ರಸಭರಿತವಾದ ಪುರಾಣ ಓದುತ್ತೀರಿ, ಆದರೆ ಗೊಡ್ಡಾಗಿ ಬಾಳೂ ಅಂತಾ ಬೋದಿಸ್ತೀರಿ. ಆದರೆ ನನ್ನ ಮಾತಿಗೆ ಒಂದೇ ಅರ್ಥ, ಹೆಣ್ಣಿನ ಜೊತೆಗೆ ಮಲಗು ಎಂದರೆ ಹೆಣ್ಣಿನ ಜೊತೆಗೆ ಮಲಗು. ಮೀನು ತಿನ್ನು ಅಂದರೆ ಮೀನು ತಿನ್ನು. ನಿಮಗೊಂದು ಬುದ್ದಿ ಮಾತು ಹೇಳಲಾ ಆಚಾರ್ಯರೇ... ಮೊದಲು ನಿಮ್ಮ ರೋಗಗ್ರಸ್ತ ಹೆಂಡತಿಯನ್ನು ಹೊಳೆಗೆ ನೂಕಿಬಿಡಿ. ಪುರಾಣಗಳ ಋಷಿಗಳಂತೆ ಒಳ್ಳೇ ಮೀನು ಸಾರು ಮಾಡಬಲ್ಲ ಒಬ್ಬ ಮತ್ಸ್ಯಗಂಧಿಯನ್ನು ತಬ್ಬಿಕೊಂಡು ಮಲಗಿ. ಕಣ್ಣು ಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನುಭವ ಆಗದಿದ್ದರೆ ನನ್ನ ಹೆಸರು ನಾರಣಪ್ಪನೇ ಅಲ್ಲಾ ಎಂದು ನಾರಣಪ್ಪ ಪ್ರಾಣೇಶಾಚಾರ್ಯರಿಗೆ ಹೇಳಿದಾಗಿ ಪ್ರೇಕ್ಷಕರ ಚಪ್ಪಾಳೆ ಸಪ್ಪಳ ರಂಗಮಂದಿರ ತುಂಬಿದ್ದಂತೂ ಸತ್ಯ. ಚಂದ್ರಿಯ ಸಮಾಗಮದ ನಂತರ ಸುಗಂಧವೆಲ್ಲಾ ದೇವರ ಮುಡಿಯನ್ನು ಸೇರುವ ಹೂವಿನದ್ದು, ಸ್ತ್ರೀ ಸೌಂದರ್ಯವೆಲ್ಲಾ ನಾರಾಯಣನ ಪಾದಸೇವೆ ಮಾಡುವ ಲಕ್ಷ್ಮಿಯದ್ದು, ರತಿಎಲ್ಲಾ ವಸ್ತ್ರಾಪಹರಣ ಮಾಡಿದ ಕೃಷ್ಣನದ್ದು ಎಂದುಕೊಂಡಿದ್ದೆ.... ಆದರೆ ಅವೆಲ್ಲದರಲ್ಲಿ ಒಂದು ಪಾಲು ನನಗೂ ಬೇಕೆನಿಸುತ್ತಿದೆ.... ಎಂದು ಆಚಾರ್ಯರು ಹೇಳುವ ಮಾತು ಅತ್ಯಂತ ಮಾರ್ಮಿಕವಾದದ್ದು. ಹೀಗೆ.... ಕೆಲವಾರು ಮಾರ್ಮಿಕ ಮಾತುಗಳು ನೋಡುಗರನ್ನು ಸೆಳೆಯುವುದರ ಜೊತೆಗೆ ಆಲೋಚನೆಗೆ ಪ್ರೇರೇಪಿಸುವಂತಿವೆ. ನಾಟಕದ ನಂತರವೂ ನಾರಣಪ್ಪ ಹಾಗೂ ಆಚಾರ್ಯ ಇಬ್ಬರೂ ಪ್ರೇಕ್ಷಕರಿಗೆ ಪ್ರಶ್ನೆಯಾಗಿಯೇ ಉಳಿಯುವುದೇ ನಾಟಕದ ನಿಜವಾದ ಮರ್ಮವಾಗಿದೆ.
     
ಇಂತಹ ವಿವಾದಿತ ಕಾದಂಬರಿಯನ್ನು ನಾಟಕವಾಗಿಸಲು ಅಸಾಧ್ಯ ಎದೆಗಾರಿಕೆ ಬೇಕು. ಅದೂ ಸರಕಾರಿ ಪ್ರಾಯೋಜಿತ ರಂಗಾಯಣದಂತಹ ಸಂಸ್ಥೆ ಸಂಸ್ಕಾರ ಬ್ರಾಹ್ಮಣ್ಯವಿರೋಧಿ ನಾಟಕವನ್ನು ನಿರ್ಮಿಸಿದ್ದು ಅಚ್ಚರಿಯನ್ನುಂಟುಮಾಡಿತು. ಪ್ರಸ್ತುತ ರಂಗಾಯಣದ ನಿರ್ದೇಶಕರಾಗಿರುವ ಜನಾರ್ಧನ್ರವರು ಯಮಧೈರ್ಯಮಾಡಿ ವಿವಾದಿತ ಕೃತಿಯನ್ನು ತೆಗೆದುಕೊಂಡು ನಾಟಕವಾಗಿ ನಿರ್ದೇಶಿಸಿದ್ದು ಪ್ರಶಂಸನಾರ್ಹ. ರಂಗಾಯಣದ ನಾಟಕ ಎಂದರೆ ರಂಗಾಸಕ್ತರಿಗೆ ಸಹಜವಾಗಿ ಕುತೂಹಲ ಹೆಚ್ಚಾಗಿರುತ್ತದೆ. ವೃತ್ತಿಪರ ತರಬೇತಿ ಪಡೆದ ಅನುಭವಿ ಕಲಾವಿದರುಗಳು ಯಾವುದೇ ನಾಟಕವನ್ನು ಕಟ್ಟಿಕೊಡುವ ರೀತಿಯೇ ನೋಡುಗರನ್ನು ಸೆಳೆಯುವಂತಿರುತ್ತದೆ. ಜೊತೆಗೆ ರಂಗಾಯಣದ ನಾಟಕ ಎಂದಕೂಡಲೇ ಅಪಾರವಾದ ನಿರೀಕ್ಷೆಯೂ ಇರುತ್ತದೆ. ಇದರಿಂದಾಗಿ ರವೀಂದ್ರ ಕಲಾಕ್ಷೇತ್ರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತು.   ಆದರೆ.... ಅದ್ಯಾಕೋ ಸಂಸ್ಕಾರ ನಾಟಕದಲ್ಲಿ ನಿರೀಕ್ಷೆ ತಲೆಕೆಳಗಾಗಿ ನಿರಾಸೆಯಾಗಿದ್ದೊಂದು ವಿಪರ್ಯಾಸ. ನಾಟಕದ ಮೊದಲಾರ್ಧ ನೋಡಿಸಿಕೊಂಡು ಹೋದರೆ ದ್ವಿತಿಯಾರ್ಧ ತೂಕಡಿಕೆ ತರುವಂತಿದೆ. ರೀತಿ ನಾಟಕ ಮಾಡಲು ರಂಗಾಯಣವೇ ಬೇಕಾಗಿತ್ತಾ... ಯಾವುದೇ ಅನುಭವಿ ಹವ್ಯಾಸಿ ರಂಗತಂಡ ಇದಕ್ಕಿಂತ ಚೆನ್ನಾಗಿಯೇ ಮಾಡಬಹುದಾಗಿತ್ತು ಎನ್ನುವ ಮಾತುಗಳು ಬಹುತೇಕ ಪ್ರೇಕ್ಷಕರಿಂದ ಹೊರಹೊಮ್ಮಿದ್ದಂತೂ ಸುಳ್ಳಲ್ಲ೧೯೮೧ ರಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಗೆ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿದ್ದ ದೇವೆಂದ್ರರಾಜ್ ಠಾಕೂರರವರು ವಾಚನ ರೂಪದಲ್ಲಿ ರಂಗದಂಗಳದಲ್ಲಿ ಕಾದಂಬರಿಯನ್ನು ನಿರೂಪನೆ ಮಾಡಿಸಿದ್ದರು ಪ್ರಯತ್ನವನ್ನು ಹೊರತು ಪಡಿಸಿದರೆ ಸಂಸ್ಕಾರ ಕಾದಂಬರಿ ಬಂದು ಐದು ದಶಕಗಳು ಕಳೆದರೂ ಇಲ್ಲಿವರೆಗೆ ಯಾರೂ ಇದನ್ನು ನಾಟಕವಾಗಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಮತೀಯವಾದಿ ಶಕ್ತಿಗಳೇ ವಿಜ್ರಂಭಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಂಪ್ರದಾಯವನ್ನು ವಿಪರೀತವಾಗಿ ವಿಡಂಬಿಸುವಂತಹ ಸಂಸ್ಕಾರ ನಾಟಕವನ್ನು ಪ್ರದರ್ಶಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.

.ಎಲ್.ನಾಗಭೂಷಣಸ್ವಾಮಿಯವರು ಮಾಯಸಂದ್ರ ಕೃಷ್ಣಪ್ರಸಾದರವರ ಜೊತೆ ಸೇರಿ ಮಾಡಿದ ರಂಗರೂಪವೇ ಜಾಳುಜಾಳಾಗಿದೆ. ಅಕ್ಷರಮಾಧ್ಯಮವನ್ನು ದೃಶ್ಯರೂಪಕ್ಕಿಳಿಸುವಾಗ ಬೇಕಾಗುವ ದೃಶ್ಯಗುಣದ ಕೊರತೆಯಿಂದ ನಾಟಕ ಸೊರಗಿ ಹೋಗಿದೆ. ಮೊದಮೊದಲು ಉತ್ತಮ ಆರಂಭವನ್ನು ಪಡೆದ ನಾಟಕ ಬರುಬರುತ್ತಾ ಎಳೆತವಾದಂತಾಗಿ ನೋಡುಗರಿಗೆ ಬೋರ್ ಹೊಡಿಸಿದ್ದೂ ಸಹ ಇದೇ ಕಾರಣಕ್ಕಾಗಿ. ಸಂಭಾಷಣೆಗಳು ಸಶಕ್ತವಾಗಿದ್ದಂತೂ ಸತ್ಯ ಆದರೆ ಅವೂ ಕೂಡಾ ಕೆಲವೊಮ್ಮೆ ಪುನರಾವರ್ತನೆಗೊಂಡು ಶಕ್ತಿಹೀನವಾದವು. ನಿರೂಪಕರ ಹಂಗಿಲ್ಲದೇ ದೃಶ್ಯ ಹಾಗೂ ಪಾತ್ರಗಳ ಮೂಲಕವೇ ಸಶಕ್ತವಾಗಿ ನಾಟಕ ಕಟ್ಟಿಕೊಡಬಹುದಾದ ಸಾಧ್ಯತೆ ಸಂಸ್ಕಾರ ಕಾದಂಬರಿಗಿದೆ. ಕಾದಂಬರಿಯಲ್ಲಿಯೇ ನಾಯಕ, ಖಳನಾಯಕ, ಇಬ್ಬರಿಗೂ ಬೇಕಾದ ನಾಯಕಿ ಜೊತೆಗೆ ತಾತ್ವಿಕ ಸಂಘರ್ಷ ಹಾಗೂ ಸಶಕ್ತ ಸಂಭಾಷಣೆಗಳು ಹಾಸುಹೊಕ್ಕಾಗಿವೆ. ಅವುಗಳನ್ನೆಲ್ಲಾ ದೃಶ್ಯವಾಗಿ ಕಟ್ಟಿಕೊಡುವುದರಲ್ಲಿಯೇ ನಾಟಕದ ಯಶಸ್ಸಿದೆ. ಆದರೆ ಸಾಧ್ಯತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ರಂಗಾಯಣ ಇನ್ನೂ ನಾಟಕವನ್ನು ಪರಿಷ್ಕರಣೆಗೆ ಒಳಪಡಿಸಬೇಕಿದೆ.



ರಂಗಪಠ್ಯದಲ್ಲಿ ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಬೇಕಾದದ್ದು ನಿರ್ದೇಶಕರ ಕರ್ತವ್ಯ. ಅನುಭವಿ ರಂಗ ನಿರ್ದೇಶಕರೂ ಹಾಗೂ ಎನ್ಎಸ್ಡಿ ಪದವೀದರರೂ ಆದ ಜೆನ್ನಿಯವರು ಅದ್ಯಾಕೆ ನಾಟಕವನ್ನು ಇಷ್ಟು ಸಡಿಲವಾಗಿ ಕಟ್ಟಿಕೊಟ್ಟರೋ ತಿಳಿಯುತ್ತಿಲ್ಲ. ಜನ್ನಿಯವರ ಕ್ರಿಯಾಶೀಲತೆ ಕಡಿಮೆಯಾಯಿತೋ ಇಲ್ಲವೇ ರಂಗಾಯಣದ ಆಡಳಿತಾತ್ಮಕ ಜವಾಬ್ದಾರಿ ಅವರ ಸೃಜನಶೀಲತೆಯನ್ನು ಮಿತಿಗೊಳಿಸಿತೋ ಗೊತ್ತಿಲ್ಲ. ಆದರೆ.. ಸಂಸ್ಕಾರವಂತೂ ನಿರ್ದೇಶಕರಿಗೆ ದಕ್ಕಲಿಲ್ಲ. ನಿರೀಕ್ಷಿಸಿದ್ದು ಪ್ರೇಕ್ಷಕರಿಗೆ ಸಿಕ್ಕಲಿಲ್ಲ. ಇದು ರಂಗಾಯಣದ ಪ್ರೊಡಕ್ಷನ್ ಎಂದು ನಾಟಕ ನೋಡಿದವರಿಗೆ ಅನ್ನಿಸಲೇ ಇಲ್ಲ. ಜೊತೆಗೆ ನೋಡುಗರ ನಿರೀಕ್ಷೆ ಅತಿಯಾಗಿದ್ದೂ ಸಹ ನಾಟಕದ ಸೋಲಿಗೆ ಕಾರಣವಾಗಿದ್ದಂತೂ ಸುಳ್ಳಲ್ಲ.

ರಂಗಾಯಣದ ಕಲಾವಿದರು ಇಡೀ ಭಾರತ ದೇಶದಲ್ಲೇ ಅನುಭವಿಯಾದವರು. ಅವರ ಪ್ರತಿಭೆ ನಾಟಕದಲ್ಲಿ ಸಂಪೂರ್ಣವಾಗಿ ಅನಾವರಣಗೊಳ್ಳಲು ಹೆಚ್ಚಿನ ಅವಕಾಶಗಳಿರಲಿಲ್ಲ. ಇದ್ದವರೂ ಬಳಸಿಕೊಳ್ಳಲಿಲ್ಲ. ಪ್ರಾಣೇಶಾಚಾರ್ಯರಾಗಿ ಜಗದೀಶ ಮನವಾರ್ತೆ ಮತ್ತು ನಾರಣಪ್ಪ  ಪಾತ್ರದಲ್ಲಿ ಹುಲುಗಪ್ಪ ಕಟ್ಟಿಮನಿ ಇಬ್ಬರೂ ನಟರ ಅಭಿನಯ ಇಡೀ ನಾಟಕದ ಜೀವಾಳವಾಗಿತ್ತು. ಜೊತೆಗೆ ಗರುಡಾಚಾರ್ಯರಾಗಿ ವಿನಾಯಕ ಭಟ್, ದಾಸಾಚಾರ್ಯರಾಗಿ ಸಂತೋಷ್ ಕುಮಾರ್ ಹಾಗೂ ಲಕ್ಷ್ಮಣಾಚಾರ್ಯರಾಗಿ ನೂರ್ ಅಹ್ಮದ್ ಶೇಖ್ರವರ ನಟನೆ ಸಾಥ್ ನೀಡಿತ್ತು. ಚಂದ್ರಿಯಾಗಿ ಸರೋಜಾ ಹೆಗಡೆಯವರ ಅಭಿನಯವೂ ಪಸಂದಾಗಿತ್ತು. ಆದರೆ ಯಾವಾಗ ಪ್ರಾಣಾಚಾರ್ಯ ಮನವಾರ್ತೆಯವರು ಬದಲಾಗಿ ಅದೇ ಪಾತ್ರದ ಮುಂದುವರಿಕೆಯಾಗಿ ಪ್ರಶಾಂತ್ ಹಿರೇಮಠರವರು ಬಂದರೋ ಇಡೀ ನಾಟಕದ ಗತಿಯೇ ಬದಲಾಗಿ ಹೋಯಿತು. ಅವರ ಜೊತೆಗೆ ಪುಟ್ಟನ ಪಾತ್ರದಾರಿ ಎಸ್.ರಾಮನಾಥರವರು ಜೊತೆಗೂಡಿ ದೃಶ್ಯಗಳ ಪುನರಾವರ್ತನೆ ಶುರುವಾಯಿತೋ ಪ್ರೇಕ್ಷಕರ ಸಹನೆಯ ಮಿತಿ ಮೀರತೊಡಗಿತು. ಅದ್ಯಾಕೋ ಕೊನೆಯವರೆಗೂ ಪ್ರಶಾಂತ್ ಹಿರೇಮಠರವರು ಪಾತ್ರದೊಳಗೆ ಇಳಿಯಲೂ ಇಲ್ಲಾ...ಪಾತ್ರವಾಗಲೂ  ಇಲ್ಲ.



ವಯೋವೃದ್ದ ಪ್ರಾಣಾಚಾರ್ಯರ ಪಾತ್ರದಾರಿಯು ನಾಟಕದಲ್ಲಿ ಚಂದ್ರಿಯನ್ನು ಸೇರಿದಾಗ ಇದ್ದಕ್ಕಿದ್ದಂತೆ ಹೊಸರೂಪವನ್ನು ಪಡೆದು ಮಧ್ಯವಯಸ್ಕನಾಗಿ ಬದಲಾದ ಎನ್ನುವ ಹಾಗೆ ರಂಗತಂತ್ರವನ್ನು ನಿರ್ದೇಶಕರು ಅಳವಡಿಸಿದ್ದಾರೆ. ಆದರೆ ಪಾತ್ರದಾರಿಯನ್ನು ಬದಲಾಯಿಸಿ ಅದೇ ಪಾತ್ರವನ್ನು ಮುಂದುವರೆಸಿದ ಮ್ಯಾಜಿಕ್ ಹಿಂದಿನ ಲಾಜಿಕ್ ಏನು ಎನ್ನುವುದೇ ನೋಡುಗರಲ್ಲಿ ಗೊಂದಲವನ್ನುಂಟುಮಾಡಿತು. ಹೋಗಲಿ ಮೊದಲಿನ ಪ್ರಾಣಾಚಾರ್ಯರಂತೆಯೇ ಕನಿಷ್ಟ ಭೌತಿಕ ಚಹರೆ ಪ್ರಸಾಧನಗಳಿದ್ದರೆ ಹಾಗೂ ನಡೆ ನುಡಿಗಳು ಹೋಲುತ್ತಿದ್ದರೆ ಪಾತ್ರ ಬದಲಾವಣೆಯ ತಂತ್ರಗಾರಿಕೆ ಫಲಿಸಬಹುದಾಗಿತ್ತು. ಆದರೆ ಎಲ್ಲದರಲ್ಲೂ ಸಂಪೂರ್ಣ ಭಿನ್ನವಾದ ವ್ಯಕ್ತಿಯನ್ನು ತಂದು ಇವನೇ ಅವನು ಎಂದು ನಂಬಿಸುವ ಪ್ರಯತ್ನ ನಾಟಕದಲ್ಲಿ ವಿಫಲವಾಗಿದೆ ಹಾಗೂ ನಾಟಕದ ಪ್ರಮುಖ ದೌರ್ಬಲ್ಯವೂ ಆಗಿದೆ. ಯಾವುದೇ ರಂಗತಂತ್ರಗಳು ನಾಟಕಕ್ಕೆ ಪೂರಕವಾಗಿರಬೇಕೆ ಹೊರತು ವ್ಯತಿರಿಕ್ತವಾಗಿರಬಾರದು ಎನ್ನುವುದಕ್ಕೆ ಪ್ರಾಣಾಚಾರ್ಯರ ಅಕಾರಣ ಪರಕಾಯ ಪ್ರವೇಶವೇ ಉದಾಹರಣೆಯಾಗಿದೆ.

ಕಾದಂಬರಿಯಲ್ಲಿರುವುದನ್ನೆಲ್ಲಾ ರಂಗದ ಮೇಲೆ ತರಬೇಕು ಎನ್ನುವ ನಿರ್ದೇಶಕರ ಅತೀಉತ್ಸಾಹವೇ ನಾಟಕದಲ್ಲಿ ಅನಗತ್ಯ ದೃಶ್ಯಸೃಷ್ಟಿಗೆ ಕಾರಣವಾಗಿವೆ. ಧರ್ಮಭ್ರಷ್ಟತೆಯ ಸಂಕೇತವಾಗಿ ನಾರಣಪ್ಪನ ಪಾತ್ರ ಈಗಾಗಲೇ ಇದ್ದು ಚಂದ್ರಿಯ ಸಂಗವೂ ಆತನ ಜೊತೆಯಲ್ಲಿತ್ತು. ಆದರೆ ನಾರಣಪ್ಪನ ಸ್ವಭಾವವನ್ನೇ ಉಳ್ಳ ಆತನ ಗೆಳೆಯ ಯಕ್ಷಗಾನ ಕಲಾವಿದ ಶ್ರೀಪತಿ ಪಾತ್ರವನ್ನು ಹಾಗೂ ಆತನಿಗೊಬ್ಬಳು ಮತ್ಸ್ಯಗಂಧೆ ಪಾತ್ರವನ್ನು ರಂಗದಂಗಳದಲ್ಲಿ ತರುವ ಅಗತ್ಯವೇ ಇರಲಿಲ್ಲ. ಎರಡೂ ಪಾತ್ರಗಳು ಇಲ್ಲದಿದ್ದರೂ ನಾಟಕಕ್ಕೆ ಯಾವುದೇ ತೊಂದರೆಯೂ ಇರಲಿಲ್ಲ. ಪ್ರಾಣಾಚಾರ್ಯರು ತಮ್ಮಿಂದಾದ ಅಪಚಾರದಿಂದ ಪಶ್ಚಾತ್ತಾಪ ಪಟ್ಟು ಅಗ್ರಹಾರವನ್ನು ಬಿಟ್ಟು ಹೋಗುವಷ್ಟಕ್ಕೆ ನಾಟಕವನ್ನು ಮುಗಿಸಿಬಿಟ್ಟಿದ್ದರೆ ನಾಟಕ ಸಾರ್ಥಕವಾಗುತ್ತಿತ್ತು ಹಾಗೂ ತನ್ನ ಉದ್ದೇಶದಲ್ಲಿ ಗೆಲ್ಲಬಹುದಾಗಿತ್ತು. ಆದರೆ ನಾಟಕವನ್ನು ಅನಗತ್ಯವಾಗಿ ಎಳೆಎಳೆದು ಮುಂದುವರೆಸಲಾಯಿತು. ಪ್ರಾಣೇಶಾಚಾರ್ಯರಿಗೆ ಮಾಲೇರ ಪುಟ್ಟ ಸಿಕ್ಕಿದ್ದು, ಅರ್ಧಗಂಟೆಗೂ ಮಿಕ್ಕಿ ಅನಗತ್ಯ ಮಾತುಗಳನ್ನು ಮಾತಾಡಿದ್ದು. ಮೇಳಕ್ಕೆ ಹೋಗುವ ಮೊದಲು ಪುಟ್ಟನು ಇನ್ನೊಬ್ಬಳು ವ್ಯೇಶ್ಯೆ ಪದ್ಮಾವತಿಯ ಜೊತೆಗೆ ರಾತ್ರಿ ಕಳೆಯಲು ಪ್ರಾಣೇಶಾಚಾರ್ಯರಿಗೆ ಒತ್ತಾಯಿಸಿದ್ದು. ಮೇಳ, ಕೋಳಿ ಕಾಳಗ ಮುಗಿಸಿಕೊಂಡು ದೇವಸ್ಥಾನವೊಂದರಲ್ಲಿ ಆಚಾರ್ಯರು ಊಟಮಾಡುವಾಗ ಇನ್ಯಾರೋ ಬ್ರಾಹ್ಮಣ ಅಪರಿಚಿತರದ ಆಚಾರ್ಯರಲ್ಲಿ ತನ್ನ ಅಪ್ರಾಪ್ತ ಮಗಳಿಗೆ ವರ ಹುಡುಕಿಕೊಡೆಂದು ಗೋಳಾಡಿದ್ದು. ಯಾರೋ ಗುರುತು ಹಿಡಿದರೆಂದು ಊಟ ಮಾಡುವುದನ್ನು ಬಿಟ್ಟು ಪ್ರಾಣಾಚಾರ್ಯರು ಓಡಿಹೋಗಿದ್ದು. ಪ್ಲಾಶ್ಬ್ಯಾಕ್ನಲ್ಲಿ ಸಹಪಾಠಿ ಮಹಾಬಲ ಬಂದುಹೋಗುವುದುಕೊನೆಗೆ ತಮ್ಮ ಅಗ್ರಹಾರಕ್ಕೆ ವಾಪಸ್ ಹೋಗಿದ್ದು... ಎಲ್ಲಾ ಘಟನೆಗಳಿಗೂ ನಾಟಕದ ಪ್ರಮುಖ ಉದ್ದೇಶಕ್ಕೂ ಯಾವುದೇ ರೀತಿಯ ಗಂಭೀರ ಸಂಬಂಧಗಳಿಲ್ಲ. ನಾರಣಪ್ಪ ಬ್ರಾಹ್ಮಣ್ಯವನ್ನು ಬಿಟ್ಟು ಧರ್ಮವಿರೋಧಿಯಾಗಿದ್ದನ್ನು ವಿರೋಧಿಸಿದ ಪ್ರಾಣಾಚಾರ್ಯರನ್ನೂ ಸಹ ಪ್ರಕೃತಿ ಸಹಜ ವಾಂಛೆ ಬಿಡಲಿಲ್ಲ ಹಾಗೂ ಧರ್ಮದ ಕಟ್ಟಳೆಗಳನ್ನು ಮೀರಿದ್ದು ಪ್ರಕೃತಿದತ್ತ ಬಯಕೆಗಳು ಎನ್ನುವುದನ್ನು ಹೇಳುವುದೇ ಸಂಸ್ಕಾರ ನಾಟಕದ ಆಶಯವಾಗಿದೆ. ಬ್ರಾಹ್ಮಣ್ಯದ ಜೀವವಿರೋಧಿ ಯಾಂತ್ರಿಕ ಆಚರಣೆಗಳನ್ನು ಪ್ರಶ್ನಿಸುವ ಮಹತ್ತರವಾದ ಉದ್ದೇಶವನ್ನು ನಾಟಕ ಹೊಂದಿದೆ. ಶುಷ್ಕ ಧರ್ಮಾಚರಣೆಯಲ್ಲಿ ಮುಳುಗಿ ತನ್ನ ವ್ಯಯಕ್ತಿಕ ಬದುಕನ್ನೇ ಕಳೆದುಕೊಂಡ ಪ್ರಾಣೇಶಾಚಾರ್ಯ ಹಾಗೂ ಪ್ರಕೃತಿದತ್ತ ಬಯಕೆಗಳನ್ನು ಈಡೇರಿಸಿಕೊಳ್ಳಲು ತನ್ನ ಜಾತಿ ಧರ್ಮಾಚರಣೆಯನ್ನೇ ತ್ಯಜಿಸಿದ ನಾರಣಪ್ಪ ಇಬ್ಬರ ನಡುವಿನ ಸಂಘರ್ಷ ಹಾಗೂ ಅದರ ಅಂತಿಮ ಪರಿಣಾಮವನ್ನು ಸಂಸ್ಕಾರ ನೆಪದಲ್ಲಿ ನಾಟಕ ಹೇಳಬೇಕಾಗಿತ್ತು. ಅದನ್ನು ಹೇಳಿಯಾದ ಮೇಲೂ ನಾಟಕವನ್ನು ಅನಗತ್ಯವಾಗಿ ಎಳೆದೆಳೆದು ವಿಸ್ತರಿಸಿದ್ದೇ ಸಂಸ್ಕಾರ ನಾಟಕದ ವಿಫಲತೆಗೆ ಮೂಲ ಕಾರಣವಾಯಿತು. ಉತ್ತಮ ನಾಟಕವೊಂದು ಅನಗತ್ಯ ಮುಂದುವರಿಕೆಯಿಂದಾಗಿ ವ್ಯರ್ಥವಾಯಿತು. ರಂಗದಂಗಳದಲ್ಲಿ ರಂಗಾಯಣದ ಸಂಸ್ಕಾರ ನೀರಸವೆನಿಸಿತು. ಕಾದಂಬರಿಯ ಬಹುತೇಕ ಅಂಶಗಳನ್ನು ನಾಟಕದಲ್ಲಿ ತರಲೇಬೇಕು ಎನ್ನುವ ದಾವಂತಕ್ಕೆ ಬಿದ್ದು ಭಾಗಷಃ  ನಾಟಕವನ್ನೇ ಜಾಳುಜಾಳಾಗಿಸಲಾಯಿತು.


ಬ್ರಿಜ್ ಮ್ಯೂಸಿಕ್ ಆಗಿ ಬ್ಲಾಕೌಟ್ಗಳಲ್ಲಿ ಅಲ್ಲಮನ ವಚನಗಳು ಜರಗನಹಳ್ಳಿ  ಶಿವಶಂಕರವರ ವಚನ ರೂಪದ ಕವಿತೆಯೊಂದನ್ನು ಬಳಸಲಾಯಿತು. ಪ್ರತ್ಯೇಕವಾಗಿ ವಚನಗಳನ್ನು ಕೇಳಲು ಚೆನ್ನಾಗಿವೆಯಾದರೂ ನಾಟಕಕ್ಕೆನೂ ಅಂತಹ ಕಾಂಟ್ರೀಬ್ಯೂಟ್ ಮಾಡದೇ ಗ್ಯಾಪ್ ಪಿಲ್ಲಿಂಗ್ ರೀತಿಯಲ್ಲಿ ಬಳಕೆಯಾದವು. ದೃಶ್ಯಕ್ಕೆ ಹೊರತಾಗಿ ಹಾಡು ಸಂಗೀತ ಬಳಸಿದ್ದರಿಂದ ದೃಶ್ಯದೊಳಗೆ ಮೂಡ್ ಸೃಷ್ಟಿಸಲು ಸಹಕಾರಿಯಾಗಲಿಲ್ಲ. ಸಗಾಯ್ರಾಜುರವರ ಬೆಳಕಿನ ವಿನ್ಯಾಸ ನಾಟಕದ ದೃಶ್ಯಗಳನ್ನು ಬೆಳಗಿವೆಯಾದರೂ ಅಗತ್ಯ ಮೂಡ್ ಸೃಷ್ಟಿಸಲು ಇನ್ನೂ ಪ್ರಯತ್ನಿಸಬೇಕಿದೆ. ಸೈಕನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸಬಹುದಾದ ಸಾಧ್ಯತೆಗಳಿದ್ದವು. ಸಂಗೀತ ಹಾಗೂ ಬೆಳಕಿನ ವಿನ್ಯಾಸಗಳು ಅಗತ್ಯವಿರುವಷ್ಟು ಪರಿಣಾಮಕಾರಿಯಾಗದಿರುವುದಕ್ಕೆ ರವೀಂದ್ರ ಕಲಾಕ್ಷೇತ್ರದ ಕೆಟ್ಟದಾದ ವ್ಯವಸ್ಥೆ ಕೂಡಾ ಪ್ರಮುಖ ಕಾರಣವಾಗಿರುವುದನ್ನು ಮರೆಯಲು ಸಾಧ್ಯವೇ ಇಲ್ಲ. ಇರುವ ಅವ್ಯವಸ್ಥೆಯನ್ನೇ ಬಳಸಿಕೊಂಡು ತಾಂತ್ರಿಕವಾಗಿ ಸಾಧ್ಯವಾದಷ್ಟು ಶ್ರಮವಹಿಸಿದ ನೇಪತ್ಯದ ತಂತ್ರಜ್ಞರ ಸಾಹಸ ಮೆಚ್ಚತಕ್ಕದ್ದುಸೆಟ್ ಹಾಗೂ ಕಾಸ್ಟೂಮ್ಗಳನ್ನು ತುಂಬಾನೇ ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಅಭಿನಯ ಹಾಗೂ ಸಂಭಾಷಣಾ ಪ್ರಧಾನ ನಾಟಕವಾಗಿದ್ದರಿಂದ ರಂಗಸಜ್ಜಿಕೆಯನ್ನು ವೈಭವೀಕರಿಸದಿರುವುದೇ ನಾಟಕದ ಪ್ಲಸ್ ಪಾಯಿಂಟ್ ಆಗಿದೆ. ಕೇವಲ ನಾಲ್ಕು ಕಂಬಗಳನ್ನಿಟ್ಟು ದೇವಸ್ಥಾನದ ದಾಸೋಹ ಚಿತ್ರಣವನ್ನು ಕಟ್ಟಿಕೊಟ್ಟಿದ್ದು. ಕೆಲವೇ ಪರಿಕರಗಳಲ್ಲಿ ಮೇಳವನ್ನು ಸೃಷ್ಟಿಸಿದ್ದು, ಮನೆಯ ಮೇಲೆ ರಣಹದ್ದುಗಳ ರಣಕೇಕೆಯನ್ನು ತೋರಿಸಿದ್ದು.... ನೋಡುಗರನ್ನು ಸೆಳೆಯುವಂತಿದ್ದವು.

    
ಅಗ್ರಹಾರ ಬಿಟ್ಟು ಮೂರು ದಿನ ಹೊರಗೆ ಹೋದ ಗರುಡಾಚಾರ್ಯರಿಗೆ ಪ್ರಾಣಾಚಾರ್ಯರ ಹೆಂಡತಿ ಸತ್ತ ಸುದ್ದಿ ತಿಳಿಯುತ್ತದೆಯೇ ಹೊರತು ನಾರಣಪ್ಪನ ಸಂಸ್ಕಾರವಾಗಿದ್ದು ತಿಳಿಯೋದಿಲ್ಲ ಎನ್ನುವುದು ನಂಬಲಾಗದ ಸಂಗತಿಯಾಗಿದೆ. ಮಠಾಧಿಪತಿಯನ್ನು ಲೇವಡಿ ಮಾಡಿದ್ದೇನೋ ಸರಿ... ಆದರೆ ಸ್ವಾಮಿ ಕಾಲುಗಳಿಂದ ಆಶೀರ್ವಾದ ಮಾಡಿದ್ದು ಸ್ವಲ್ಪ ಅತಿರೇಕವೆನಿಸುವಂತಿದೆ. ನಾಟಕದಲ್ಲಿ ಅಗ್ರಹಾರದ ಮಡಿವಂತ ವಿಧವೆ ಕೆಳಜಾತಿಯ ವೇಶ್ಯೆಯನ್ನು ಮುಟ್ಟಿ ಸಂತೈಸುವುದು ವಾಸ್ತವಕ್ಕೆ ವಿರೋಧವೆನಿಸುತ್ತದೆ. ಚಂದ್ರಿಯು ಆಭರಣದ ಚಿಕ್ಕ ಗಂಟನ್ನು ಕೇಸರಿ ಬಟ್ಟೆಯಲ್ಲಿ ಸುತ್ತಿ ಕೊಟ್ಟಿದ್ದನ್ನು ಪ್ರಾಣೇಶಾಚಾರ್ಯರು ತೆಗೆದುಕೊಂಡು ಮತ್ತೆ ವಾಪಸ್ ಅವಳಿಗೆ ಕೊಡುವಾಗ ಗಂಟು ದೊಡ್ಡದಾಗಿರುತ್ತದೆ ಹಾಗೂ ಕೆಂಪು ಬಟ್ಟೆಯನ್ನು ಸುತ್ತಲಾಗಿರುತ್ತದೆ. ಅದ್ಯಾಕೆ ರೀತಿಯ ಕಂಟಿನ್ಯೂಟಿ ಸಮಸ್ಯೆ ನಿರ್ದೇಶಕರ ಗಮನಕ್ಕೆ ಬರಲಿಲ್ಲವೋ ಗೊತ್ತಿಲ್ಲ. ಚಿಕ್ಕಪುಟ್ಟವೆನಿಸಬಹುದಾದ ಇಂತಹ ಅವಾಸ್ತವಗಳನ್ನು ಸರಿಪಡಿಸಿಕೊಂಡರೆ, ನಾಟಕದ ದ್ವಿತಿಯಾರ್ಧವನ್ನು ಎಡಿಟ್ ಮಾಡಿದರೆ, ಪ್ರಾಣೇಶಾಚಾರ್ಯರ ಪ್ರತಿಯವತಾರ ಹುಟ್ಟಿಹಾಕುವ ಗೊಂದಲವನ್ನು ನಿವಾರಿಸಿಕೊಂಡರೆ, ರೀಪೀಟೆಡ್ ಸಂಭಾಷಣೆಗಳನ್ನು ಬದಲಾಯಿಸಿದರೆ, ಅನಗತ್ಯ ದೃಶ್ಯಗಳನ್ನು ಕೈಬಿಟ್ಟರೆ ರಂಗಾಯಣದ ಮಹತ್ವಾಂಕಾಂಕ್ಷಿ ಸಂಸ್ಕಾರ ನಾಟಕವು ಕನ್ನಡ ರಂಗಭೂಮಿಯಲ್ಲಿ ಒಂದು ಮೈಲುಗಲ್ಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.


ಹೆಚ್. ಜನಾರ್ಧನ್ (ಜೆನ್ನಿ) : ಪ್ರಸ್ತುತ ರಂಗಾಯಣದ ನಿರ್ದೇಶಕರಾಗಿರುವ ಜನಾರ್ಧನ್ ರವರು ಅನಂತಮೂರ್ತಿಯವರ ವಿವಾದಿತ ಕಾದಂಬರಿ  'ಸಂಸ್ಕಾರ' ವನ್ನು ನಾಟಕವಾಗಿ ನಿರ್ದೇಶಿಸುವ ಸಾಹಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ  ಹಾಡು, ಸಂಗೀತ, ನಾಟಕಗಳಲ್ಲಿ  ಅಪಾರ ಆಸಕ್ತಿಯನ್ನು ಹೊಂದಿ ಮುಂದೆ ರಂಗಭೂಮಿಯಲ್ಲೆ ತಮ್ಮನ್ನು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡರು. ಬಾಲ್ಯದಿಂದಲೂ ತಮಗೊಲಿದ ಕಂಠಸಿರಿಯಿಂದಾಗಿ ದಲಿತ ಚಳುವಳಿ ಹಾಗೂ ನಂತರ ಸಮುದಾಯ ತಂಡದ ರಂಗ ಚಳುವಳಿಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಸಕ್ರೀಯರಾದರುದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಯಲ್ಲಿ ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದು ಬಂದು ತಮ್ಮ ಪ್ರತಿಭೆಯನ್ನು ಕರ್ನಾಟಕದ ರಂಗಭೂಮಿಗೆ ಧಾರೆಯೆರೆದರು. ನಾಟಕ ಶಿಕ್ಷಕರಾಗಿ ಅನೇಕ ರಂಗಾಸಕ್ತರಿಗೆ ರಂಗತರಬೇತಿಯನ್ನು ನೀಡಿದರು. ಇಪ್ಟಾ, ಸಮುದಾಯ ಸಂಘಟನೆಗಳಿಗೆ ಬೀದಿ ನಾಟಕಗಳನ್ನು ನಿರ್ದೇಶಿಸಿದರು. ಕಾವ್ಯ ರಂಗಪ್ರಯೋಗಗಳಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿದರು. ರಂಗಗುರು ಬಿ.ವಿ.ಕಾರಂತರೂ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ರಂಗ ನಿರ್ದೇಶಕರ ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವವನ್ನು ಪಡೆದರು. ನಟರಾಗಿ, ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ, ಹಾಡುಗಾರರಾಗಿ ಕನ್ನಡ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ನಾಡಿನಾದ್ಯಂತ ರಂಗಶಿಬಿರಗಳನ್ನೇರ್ಪಡಿಸಿ, ಅನೇಕ ರಂಗತಂಡಗಳ ಜೊತೆ ಒಡನಾಡಿ ಸಾವಿರಾರು ಯುವಜನರಿಗೆ ರಂಗತರಬೇತಿಯನ್ನು ಕೊಟ್ಟು ರಂಗಕಾರ್ಯಕರ್ತರನ್ನು ರಂಗಭೂಮಿಯಲ್ಲಿ ಕ್ರಿಯಾಶೀಲರಾಗುವಂತೆ ಮಾಡಿದ್ದಾರೆ.
ದೂರದರ್ಶನ, ಚಲನಚಿತ್ರ ರಂಗದಲ್ಲೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಮೆರೆದ ಜೆನ್ನಿಯವರು ವಿದೇಶಗಳಲ್ಲಿ ಸಹ ಜನಪದ ಕಾರ್ಯಕ್ರಮಗಳನ್ನು ನೀಡಿ ಕನ್ನಡ ಜಾನಪದ ಹಾಡುಗಳ ಸೊಗಡನ್ನು ಬೇರೆ ದೇಶಗಳಲ್ಲಿ ಪಸರಿಸಿದ್ದಾರೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪುರಸ್ಕಾರ ಸನ್ಮಾನಗಳಿಗೆ ಭಾಜನರಾಗಿರುವ ಜನ್ನಿರವರು ಈಗ ಮೈಸೂರು ರಂಗಾಯಣವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆಎಲ್ಲಕ್ಕಿಂತ ಹೆಚ್ಚಾಗಿ ಸ್ನೇಹಪರ ಸಹೃದಯ ವ್ಯಕ್ತಿತ್ವದ ಜನಾರ್ಧನ್ರವರು ಎಲ್ಲರೊಂದಿಗೆ ಹೊಂದಿಕೊಳ್ಳುತ್ತಲೇ ತಮ್ಮ ಸುತ್ತಲೂ ಆತ್ಮೀಯ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದು ಅವರ ಆತ್ಮೀಯತೆಗೆ ಸಾಕ್ಷಿಯಾಗಿದೆ.

                                 -ಶಶಿಕಾಂತ ಯಡಹಳ್ಳಿ