ಗುರುವಾರ, ಸೆಪ್ಟೆಂಬರ್ 3, 2015

ಅಪರೂಪದ ರಂಗಪ್ರಯೋಗ “ಮಾಸ್ತಿಕಲ್ಲು” :

ವಿಡಂಬಣೆಯ ಮೂಲಕ ಮೌಢ್ಯತೆ ಪ್ರಶ್ನಿಸುವ ನಾಟಕ ಮಾಸ್ತಿಕಲ್ಲು




ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿಕೊಂಡಿದ್ದ ಅತ್ಯಂತ ಅಮಾನವೀಯ ಆಚರಣೆಗಳಲ್ಲಿ ಪ್ರಮುಖವಾದದ್ದು ಸತಿಸಹಗಮನ ಪದ್ದತಿ. ಗಂಡ ಸತ್ತಾಗ ಆತನ ಚಿತೆಯೊಡನೆ ಹೆಂಡತಿಯನ್ನೂ ಸುಡುವುದು ಭಾರತೀಯ ಪರಂಪರೆಯ ಅನಿಷ್ಟ ಭಾಗವಾಗಿದ್ದನ್ನಂತೂ ಮನುಕುಲ ಮರೆಯಲು ಸಾಧ್ಯವಿಲ್ಲ. ಹೀಗೆ ಬಲವಂತವಾಗಿ ಸತಿಯಾದವಳ ಭಾಗಷಃ ಆತ್ಮ ಕಥಾನಕವೇ ಸರಸಮ್ಮನ ಸಮಾಧಿ. ಕನ್ನಡದ ಮೇರು ಬರಹಗಾರ ಡಾ.ಶಿವರಾಮ ಕಾರಂತರು 88 ವರ್ಷಗಳ ಹಿಂದೆ (1927ರಲ್ಲಿ) ರಚಿಸಿದ್ದ ಸರಸಮ್ಮನ ಸಮಾಧಿ ಕಾದಂಬರಿಯನ್ನು ರಂಗಕರ್ಮಿ, ಚಲನಚಿತ್ರ ನಿರ್ದೇಶಕರಾದ ಬಿ.ಎಂ.ಗಿರಿರಾಜ್ರವರು ರಂಗರೂಪಕ್ಕೆ ತಂದು ಮಾಸ್ತಿಕಲ್ಲು ಹೆಸರಿನಲ್ಲಿ ನಾಟಕ ನಿರ್ದೇಶಿಸಿ ಅಪರೂಪದ ಕಾದಂಬರಿಯನ್ನು ವಿಶಿಷ್ಟವಾಗಿ ರಂಗದಂಗಳದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರದರ್ಶನ ಕಲಾ ಸಂಸ್ಥೆಯು ನಾಟಕವನ್ನು ನಿರ್ಮಿಸಿದ್ದು 2015, ಆಗಸ್ಟ್ 30 ರಂದು ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ  5 ಬಾರಿಗೆ ಪ್ರದರ್ಶನಗೊಂಡು ಪ್ರೇಕ್ಷಕರಲ್ಲಿ ಸಂಚಲನವನ್ನುಂಟುಮಾಡಿತು.

ಸರಸಮ್ಮನ ಸಮಾಧಿ' ಸಿನೆಮಾದ ಸ್ಟಿಲ್ ಚಿತ್ರ
ಒಂದೂವರೆ ದಶಕದ ಹಿಂದೆ ಭಾಗೀರತಿಬಾಯಿ ಕದಂರವರ ನಿರ್ದೇಶನದಲ್ಲಿ ಸರಸಮ್ಮನ ಸಮಾಧಿ ನಾಟಕವನ್ನು ರಂಗಾಯಣವು ತನ್ನ ರೆಪರ್ಟರಿ ಕಲಾವಿದರಿಗಾಗಿ ನಿರ್ಮಿಸಿತ್ತು. 2012 ರಲ್ಲಿ ಇದೇ ಕಾದಂಬರಿಯನ್ನಾಧರಿಸಿ ಸರಸಮ್ಮನ ಸಮಾಧಿ ಚಲನಚಿತ್ರವನ್ನು ಶಾಸ್ತ್ರಿಯವರ ನಿರ್ದೇಶನದಲ್ಲಿ ಬಸಂತಕುಮಾರ ಪಾಟೀಲರು ನಿರ್ಮಿಸಿದ್ದರು. ಸಿನೆಮಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಗಮನಸೆಳೆಯಿತು. ಆರ್.ನಾಗೇಶರವರು ಚಂದನ ವಾಹಿನಿಗೆ ಸರಸಮ್ಮನ ಸಮಾಧಿ ಯನ್ನು ಧಾರಾವಾಹಿಯಾಗಿ ನಿರ್ದೇಶಿಸಿದ್ದರು. ಈಗ ಮತ್ತೊಮ್ಮೆ ಗಿರಿರಾಜ್ರವರು ಇದೇ ಕಾದಂಬರಿಯನ್ನಾಧರಿಸಿ ಮಾಸ್ತಿಕಲ್ಲು ನಾಟಕವಾಗಿಸಿದ್ದಾರೆ. ಹೀಗಾಗಿ ರಂಗಭೂಮಿ, ದೂರದರ್ಶನ ಹಾಗೂ ಚಲನಚಿತ್ರ ಮೂರು ಮಾಧ್ಯಮಗಳಲ್ಲಿ ಸರಸಮ್ಮನ ಸಮಾಧಿ ಕಾದಂಬರಿ ರೂಪಾಂತರಗೊಂಡಿದ್ದು ಕಾದಂಬರಿಯ ಜನಪ್ರೀಯತೆಯನ್ನು ತೋರಿಸುತ್ತದೆ.
         
ಭಾರತದ ಸ್ವಾತಂತ್ರ್ಯಪೂರ್ವದಲ್ಲಿ ಗಂಡನ ಜೊತೆಗೆ ಬಲವಂತವಾಗಿ ಸಹಗಮನ ಮಾಡಲಾದ ಸರಸಮ್ಮನ ಸಮಾಧಿ ಪತಿವೃತೆಯ ಹೆಸರಲ್ಲಿ ಪವಿತ್ರ  ಶಕ್ತಿ ಕೇಂದ್ರವಾಗುತ್ತದೆ. ಕೌಟುಂಬಿಕ ಸಮಸ್ಯೆಗಳಿಗೆ ಸರಸಮ್ಮ ಪರಿಹಾರ ಕೊಡುತ್ತಾಳೆಂಬ ನಂಬಿಕೆಯನ್ನು ಹಬ್ಬಿಸಲಾಗಿರುತ್ತದೆ. ತಮ್ಮ ಸಂಸಾರದ ತಾಪತ್ರಯಗಳಿಗೆ ಪರಿಹಾರ ಹುಡುಕಿಕೊಂಡು ಸರಸಮ್ಮನ ಸಮಾಧಿಯ ಬಳಿ ಬರುವವರ ಸುತ್ತ ಇಡೀ ನಾಟಕದ ಕಥೆ ಬಿಚ್ಚಿಕೊಳ್ಳುತ್ತದೆ.

ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ...... ಭೂತಗಳ ಅಸ್ತಿತ್ವವನ್ನು ಅರಿಯುವ ತುಡಿತದಲ್ಲಿರುವ ವಿದ್ಯಾವಂತ ಹಾಗೂ ವಿಚಾರವಂತ ಚಂದ್ರು ಸರಸಮ್ಮನ ಸಮಾಧಿ ಸುತ್ತಮುತ್ತ ಅಧ್ಯಯನಕ್ಕೆ ತೊಡಗಿರುತ್ತಾನೆ. ಪತಿಯಿಂದ ಪರಿತ್ಯಕ್ತ ಪರವೂರಿನ ಭಾಗೀರಥಿ ಜೊತೆಗೆ ಆತನಿಗೆ ಪ್ರೀತಿಯುಂಟಾಗುತ್ತದೆ. ಆದರೆ ಆಕೆ ವಿವಾಹಿತೆ ಎಂದು ಗೊತ್ತಾಗಿ ದೂರವಾದಾಗ ಸರಸಮ್ಮನ ಪ್ರೇತಾತ್ಮವೇ ಬಂದು ಪ್ರೇಮಭಿಕ್ಷೆ ಬೇಡುತ್ತದೆ. ಅದಕ್ಕೆ ಒಪ್ಪಿಗೆ ಸೂಚಿಸುವ ಹಂತದಲ್ಲಿ ಭಾಗೀರಥಿ ಗಂಡನಿಂದ ದೂರಾಗಿದ್ದು ಗೊತ್ತಾಗಿ ಮತ್ತೆ ಪ್ರೀತಿ ಬಯಸಿ ಭಾಗೀರಥಿ ಬಳಿಗೆ ತೆರಳುತ್ತಾನೆ. ಇನ್ನೇನು ಭಾಗೀರಥಿ ಜೊತೆಗೆ ಚಂದ್ರು ಓಡಿಹೋಗಬೇಕು ಎನ್ನುವ ಸಮಯಕ್ಕೆ ಸರಿಯಾಗಿ ಸರಸಮ್ಮನಿಗೆ ಹರಕೆ ಕಟ್ಟಿಕೊಂಡಿದ್ದ ಹಿರಣ್ಯ ತನ್ನ ತಂದೆಯನ್ನು ವಿರೋಧಿಸಿ ಹೆಂಡತಿ ಭಾಗೀರಥಿಯನ್ನು ಬಯಸಿ ಬರುತ್ತಾನೆ. ಇದು ಗೊತ್ತಾಗಿ ಚಂದ್ರು ಗಂಡಹೆಂಡಿರು ಒಂದಾಗಲೆಂದು ಬಯಸಿ ಮತ್ತೆ ಪ್ರೇತಾತ್ಮದ ಪ್ರೀತಿಗೆ ಮೊರೆಹೋಗುತ್ತಾನೆ. ಅಲ್ಲಿ ವ್ಯಾಪಾರಿ ಅಣ್ಣಪ್ಪನ ಹೆಂಡತಿ ಸುನಾಲಿನಿಯು ಗಂಡ-ಅತ್ತೆಯರ ಕಾಟದಿಂದ ಬೇಸತ್ತು ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಕಾಪಾಡುವ ಚಂದ್ರ ಆಕೆಗೆ ತನ್ನ ಮನೆಯಲ್ಲಿ ತಾತ್ಕಾಲಿಕ ಆಶ್ರಯ ಕೊಡುತ್ತಾನೆ. ಚಂದ್ರುನ ಮಾನವೀಯತೆಗೆ ಮನಸೋತ ಸರಸಮ್ಮನ ಆತ್ಮ ಆತನನ್ನು ಬಯಸುತ್ತದೆ. ಕೊನೆಗೂ ಆತ್ಮ  ತನ್ನ ಸಾವಿನ ಹಿನ್ನೆಲೆ... ಸತಿ ಮಾಡಿ ಪತಿಯೊಂದಿಗೆ ಸುಟ್ಟು ಹಾಕಿ ಸಮಾಧಿ ಕಟ್ಟಿ ಪೂಜಾಕೇಂದ್ರವಾಗಿಸಿದವರ ಕಥೆಯನ್ನು ಹೇಳುತ್ತಾ ತನ್ನ ಅಸಹಾಯಕತೆ ಹಾಗೂ ಅಳಲನ್ನು ವ್ಯಕ್ತಪಡಿಸುವುದರೊಂದಿಗೆ ನಾಟಕ ಕೊನೆಯಾಗುತ್ತದೆ. ಆದರೆ ನಾಟಕದ ನಂತರವೂ ನೋಡುಗರನ್ನು ಇನ್ನಿಲ್ಲದಂತೆ ಕಾಡುತ್ತದೆ. ವಿನೋದದ ಮೂಲಕ ವಿಷಾದವನ್ನು ಹೇಳುವಲ್ಲಿ ಮಾಸ್ತಿಕಲ್ಲು ಸಫಲವಾಗಿದೆ.
      
ಪ್ರೀತಿಯ ಹುಡುಕಾಟ ಎನ್ನುವುದು ಇಡೀ ನಾಟಕದ ಕೇಂದ್ರ ಬಿಂದುವಾಗಿದೆ. ಪ್ರೀತಿಯನ್ನು ಪಡೆಯಲು ಕೆಲವು ಪಾತ್ರಗಳು ಪ್ರತಿಭಟನೆಯ ದಾರಿಯನ್ನು ಹಿಡಿದರೆ... ಇನ್ನು ಕೆಲವು ಪಾತ್ರಗಳು ಅದಕ್ಕಾಗಿ ಸರಸಮ್ಮನಿಗೆ ಮೊರೆಹೋಗುತ್ತವೆಹಿಡಿ ಪ್ರೀತಿಗಾಗಿ ಹಂಬಲಿಸುವ ಪ್ರೇತಾತ್ಮ ಸರಸಮ್ಮ, ಗಂಡನ ಮನೆಯವರ ಹಿಂಸೆ ತಾಳಲಾರದೇ ತವರು ಸೇರಿ ಪ್ರೀತಿಸುವ ಜೀವಕ್ಕಾಗಿ ಹಂಬಲಿಸುವ ಭಾಗೀರಥಿ ಹಾಗೂ ಧನಪಿಶಾಚಿಯಾದ ಗಂಡನಿಂದ ಒಂಚೂರೂ ಪ್ರೀತಿ ಸಿಗಲಾರದೇ ಪರಿತಪಿಸುವ ಸುನಾಲಿನಿ.... ಹೀಗೆ ಪ್ರೀತಿಗಾಗಿ ಹಂಬಲಿಸುವ ಮೂವರು ಮಹಿಳೆಯರ ಸುತ್ತ ಕಥೆ ಸುತ್ತುತ್ತದೆ. ಇದರ ಜೊತೆಗೆ ಪರಿತ್ಯಕ್ತ ಹೆಂಡತಿಗಾಗಿ ಹಂಬಲಿಸುವ ಹಿರಣ್ಯ ಹಾಗೂ ಪ್ರೀತಿಸುವ ಸಂಗಾತಿಗಾಗಿ ಪ್ರಯತ್ನಿಸುವ ಚಂದ್ರೂ ಪಾತ್ರಗಳೂ ಸಹ ಪ್ರೀತಿಯ ಸೆಳೆತಕ್ಕೆ ಒಳಗಾದವರೇ. ಅಚ್ಚರಿಯೆಂದರೆ ಹಿರಣ್ಯನನ್ನು ಹೊರತುಪಡಿಸಿದರೆ  ಯಾವುದೇ ಪಾತ್ರಗಳಿಗೂ ತಾವು ಬಯಸುವ ಪ್ರೀತಿ ಸಿಗುವುದೇ ಇಲ್ಲ. ಕೊನೆಗೆ ಎಲ್ಲವೂ ಒಂದು ರೀತಿಯಲ್ಲಿ ಅತೃಪ್ತ ಆತ್ಮಗಳೇ... ಪ್ರೇತಾತ್ಮ ಹಾಗೂ ಅತೃಪ್ತ ಆತ್ಮಗಳು ಪ್ರೀತಿಗಾಗಿ ಹಂಬಲಿಸುವ ಪರಿಯನ್ನು ನಾಟಕದಲ್ಲಿ ನಿರ್ದೇಶಕರು ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ.

ಒಂದು ನಂಬಿಕೆಯ ಸುತ್ತ ಲಾಭ ಮಾಡಿಕೊಳ್ಳುವವರ ಮುಖವಾಡವನ್ನೂ  ಸಹ ನಾಟಕ ಬೆತ್ತಲುಗೊಳಿಸುತ್ತದೆ. ಬಲವಂತವಾಗಿ ಮಹಾಸತಿ ಮಾಡಲಾದವಳ ಸಮಾಧಿಯನ್ನೇ ಶಕ್ತಿಕೇಂದ್ರವಾಗಿ ಪರಿವರ್ತಿಸಿ, ಜನರಲ್ಲಿ ಮೌಡ್ಯವನ್ನು ಬಿತ್ತಿ ಲಾಭ ಮಾಡಿಕೊಳ್ಳುವ ಪುರೋಹಿತಶಾಹಿಗಳ ತಂತ್ರವನ್ನು ನಾಟಕದಲ್ಲಿ ವಿಡಂಬನಾತ್ಮಕವಾಗಿ ತೋರಿಸಲಾಗಿದೆ. ಪುರೋಹಿತ ವರ್ಗ ಸರಸಮ್ಮನನ್ನು ಸೀತೆಯವತಾರವೆಂದು ಕಥೆ ಕಟ್ಟಿ ಜನರನ್ನು ನಂಬಿಸಿ ವಂಚಿಸುವ ಪರಿಯನ್ನು   ನಾಟಕ ನೋಡಿಯೇ ತಿಳಿದುಕೊಳ್ಳಬೇಕಾಗಿಲ್ಲ. ಇಂತಹ ಉದಾಹರಣೆಗಳು ಬೇಕಾದಷ್ಟಿವೆ. ಮೊದಲು ಶಕ್ತಿಕೇಂದ್ರವನ್ನೋ ಪೂಜಾ ಕೇಂದ್ರವನ್ನೂ ಪ್ರಮೋಟ್ ಮಾಡಿ ತದನಂತರ ಅದನ್ನು ವ್ಯಾಪಾರೀ ಕೇಂದ್ರವನ್ನಾಗಿ ಪರಿವರ್ತಿಸುವ ಕಲೆಯನ್ನು ಪುರೋಹಿತಶಾಹಿ ಸಂತಾನಕ್ಕೆ ಹೇಳಕೊಡಬೇಕಾಗಿಲ್ಲ. ಈಗಿನ ಶಿರಡಿ, ತಿರುಪತಿ...ಮುಂತಾದ ಯಾವುದೇ ಶೃದ್ದಾ ಕೇಂದ್ರಗಳನ್ನು ನೋಡಿದರೆ ಜನರ ದೌರ್ಬಲ್ಯ ಹಾಗೂ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಬದುಕುವವರ ಪರಂಪರೆಯೇ ತೆರೆದುಕೊಳ್ಳುತ್ತದೆ. ಇಂತಹುದನ್ನು ನಾಟಕ ಸೊಗಸಾಗಿ ಲೇವಡಿ ಮಾಡುವಂತೆ ಮೂಡಿಬಂದಿದೆಜನರ ಮೌಡ್ಯವನ್ನು ಬಳಸಿಕೊಂಡು ಪುರೋಹಿತನು ಸರಸಮ್ಮನ ಹೆಸರಿನ ಟೀಶರ್ಟ ಮಾರುವ ದಂದೆಗಿಳಿದರೆ.... ಸರಸಮ್ಮನ ಶಕ್ತಿಕೇಂದ್ರಕ್ಕೆ ಬರುವ ಗಂಡಸರನ್ನು ಸೆಳೆಯುವ ವೇಶ್ಯೆ ಬೆಳ್ಳಿಯಮ್ಮ ತನ್ನ ದೇಹದ ವ್ಯಾಪಾರವನ್ನು ಶುರುಮಾಡಿಕೊಳ್ಳುತ್ತಾಳೆ. ಬಲು ಸೂಕ್ಷ್ಮವಾಗಿ ಅವಲೋಕಿಸಿದರೆ ಮೌಡ್ಯಗಳನು ಮಾರುವ ಪುರೋಹಿತರಿಗೂ ಹಾಗೂ ದೇಹ ಮಾರಿಕೊಳ್ಳುವ ಸೂಳೆಗೂ ಏನೂ ವ್ಯತ್ಯಾಸವಿಲ್ಲ ಎಂಬ ಕಟುಸತ್ಯವನ್ನು ನಾಟಕ ಪರೋಕ್ಷವಾಗಿ ಚಿತ್ರಿಸುತ್ತದೆ.

ಪ್ರಮುಖ ಮಹಿಳಾ ಪಾತ್ರಗಳು ಪುರುಷರ ದೌರ್ಜನ್ಯವನ್ನು ವಿರೋಧಿಸಿ ಸಿಡಿದೇಳುವುದು ನಾಟಕದ ಇನ್ನೊಂದು ಗಮನಾರ್ಹ ಅಂಶವಾಗಿದೆಭಾಗೀರಥಿ ತನ್ನ ಗಂಡನ ಹೇಡಿತನ ಹಾಗೂ ಮಾವನ ದುರಹಂಕಾರವನ್ನು ಪ್ರತಿಭಟಿಸಿ ತವರು ಸೇರಿದರೆ..., ವಿದ್ಯಾವಂತೆಯಾದ ಸುನಾಲಿನಿಯು ಪ್ರೀತಿಯ ಗಂಧಗಾಳಿಯರಿಯದ ವ್ಯಾಪಾರಿ ಬುದ್ಧಿಯ ಗಂಡನನ್ನು ಪ್ರತಿರೋದಿಸುತ್ತಾಳೆ. ಇಲ್ಲೊಂದು ವಿರೋಧಾಭಾಸ ಗಮನಿಸಲೇ ಬೇಕು. ವಿದ್ಯೆಕಲಿಯದ ಭಾಗೀರಥಿ ತನ್ನ ಮೇಲಾಗುವ ಶೋಷಣೆಯನ್ನು ಧಿಕ್ಕರಿಸಿ ತವರಿಗೆ ಬಂದು ಅಲ್ಲಿ ದೊರಕುವ ಇನ್ನೊಂದು ಪ್ರೇಮದ ಅವಕಾಶವನ್ನು ಒಪ್ಪಿಕೊಂಡು ಹೊಸಬದುಕು ಕಟ್ಟಲು ಹವಣಿಸುತ್ತಾಳೆ. ಆದರೆ ವಿದ್ಯಾವಂತೆಯಾದ ಸುನಾಲಿನಿಯು ಗಂಡ ಹಾಗೂ ಅತ್ತೆಯ ಕಿರುಕುಳದಿಂದ ಬೇಸತ್ತು ಬದುಕನ್ನೇ ಕೊನೆಗಾಣಿಸಲು ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಸಂಕಷ್ಟದಲ್ಲೇ ಬೆಳೆದ ಭಾಗೀರಥಿಯಂತವರು ಹಾಳಾದ ಬದುಕನ್ನು ಮತ್ತೆ ಕಟ್ಟಿಕೊಂಡು ಬಾಳಲು ಪ್ರಯತ್ನಿಸಿದರೆ... ವಿದ್ಯಾವಂತೆಯಾದ ಸುನಾಲಿನಿ ಯಂತವರು ಶೋಷಣೆಯನ್ನು ವಿರೋಧಿಸುವ ಮಾರ್ಗವಾಗಿ ಸಾವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಇನ್ನೂ ಬದುಕಲೇ ಬೇಕು ಎನ್ನುವ ಸರಸಮ್ಮನನ್ನು ಪುರುಷ ಸಮಾಜವೇ ಬಲವಂತವಾಗಿ ಸುಟ್ಟು ಹಾಕಿರುತ್ತದೆ. ಹೀಗೆ.... ಪುರುಷರಿಂದ ದೌರ್ಜನ್ಯಕ್ಕೀಡಾದ ಮಹಿಳೆಯರ ತಲ್ಲಣಗಳನ್ನು ತೋರಿಸುವ ನಿಟ್ಟಿನಲ್ಲಿ ಮಾಸ್ತಿಕಲ್ಲು ನಾಟಕ ಯಶಸ್ವಿಯಾಗಿದೆ. ಮಹಿಳಾ ದೌರ್ಜನ್ಯವನ್ನು ತೆರೆದಿಡುವಲ್ಲಿ ಸಫಲವಾದ ನಾಟಕ ಯಾವುದೇ ಪರಿಹಾರವನ್ನು ಕೊಡಲು ಹೋಗುವುದಿಲ್ಲ. ಕೊನೆಗೂ ಸರಸಮ್ಮನ ಆತ್ಮ ಅತೃಪ್ತವಾಗಿಯೇ ಉಳಿದರೆ... ಸುನಾಲಿನಿ ಬದುಕು ಅತಂತ್ರವಾಗುತ್ತದೆ... ಜೊತೆಗೆ ಭಾಗೀರಥಿ ಸಹ ಅನಿವಾರ್ಯ ಕಾರಣಗಳಿಂದ ಇಚ್ಚೆ ಇಲ್ಲದಿದ್ದರೂ ಹಳೆಯ ಗಂಡನ ಪಾದವೇ ಗತಿಯಾಗಿಸಿಕೊಳ್ಳುತ್ತಾಳೆ. ಇಲ್ಲಿ ಸರಸಮ್ಮ ಸತ್ತ ನಂತರ ಪ್ರೇತಾತ್ಮವಾದರೆ ಭಾಗೀರಥಿ ಹಾಗೂ ಸುನಾಲಿನಿ ಇಬ್ಬರೂ ಬದುಕಿದ್ದೂ ಅತೃಪ್ತ ಆತ್ಮಗಳಾಗಿವೆ. ಪಿತೃ ಪ್ರಧಾನ ಸಮಾಜದಲ್ಲಿ ತಮ್ಮ ಮನಸ್ಸನ್ನು ಕೊಂದುಕೊಂಡು ಬದುಕುವ ಅಗಣಿತ ಮಹಿಳಾ ಅತೃಪ್ತಾತ್ಮಗಳು ಜನತ್ತಿನಾದ್ಯಂತ ತುಂಬಿವೆ. ಎಲ್ಲಾ ಅತೃಪ್ತಾತ್ಮಗಳ ಸಂಕೇತವಾಗಿ ಭಾಗೀರಥಿ, ಸುನಾಲಿನಿ ಪಾತ್ರಗಳು ಮೂಡಿಬಂದಿವೆ. ಮಹಿಳಾ ಹಂತಕ ಪುರುಷರ ಅಮಾನವೀಯ ದೌರ್ಜನ್ಯದ ಪ್ರತೀಕವಾಗಿ ಸರಸಮ್ಮನ ಪಾತ್ರ ಮೂಡಿಬಂದಿದೆ.


ಶಿವರಾಮ ಕಾರಂತರು ತಮ್ಮ 25 ಹರೆಯದಲ್ಲಿ ಕೌಟುಂಬಿಕ ವಿರಸ ದಾಂಪತ್ಯಗಳ ಕುರಿತು ಕಾದಂಬರಿಯನ್ನು ಬರೆದಿದ್ದು ಅಚ್ಚರಿಯ ಸಂಗತಿ ಏಕೆಂದರೆ ಇಡೀ ಕಾದಂಬರಿಯಲ್ಲಿ ಗಂಡ ಹೆಂಡಿರ ನಡುವಿನ ಒಡೆದ ಮನಸುಗಳ ಹಾಗೂ ಚಿದ್ರಗೊಂಡ ಸಂಬಂಧಗಳ ಕುರಿತು ಪರಿಶೀಲನೆ ನಡೆದಿದೆ. ಕಾರಂತರು ಕಾದಂಬರಿಯ ಮುನ್ನುಡಿಯಲ್ಲಿ ದಾಂಪತ್ಯ ವಿರಸಗಳ ದೊಡ್ಡ ಸಮಸ್ಯೆಗಳ ಕುರಿತು ನಮ್ಮ ಮನಸ್ಸು ವಿಚಾರಗ್ರಸ್ತವಾಗಲಿ ಎಂಬುದೇ ನನ್ನ ಉದ್ದೇಶ... ಎಂದು ಬರೆದಿದ್ದಾರೆ. ಮಹಾಸತಿ ಸರಸಮ್ಮನಿಂದ ಹಿಡಿದು ನಾಟಕದ ಎಲ್ಲಾ ಮುಖ್ಯ ಸ್ತ್ರೀ ಪಾತ್ರಗಳೂ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ. ಅಷ್ಟೇ ಯಾಕೆ ಸ್ತ್ರೀ ಶೋಷಣೆ ಸಾಮಾಜಿಕ ಪರಂಪರೆಯೇ ಆಗಿರುವಂತಹ ಕಾಲಘಟ್ಟದಲ್ಲಿ ಕಾರಂತರು ಮಹಿಳೆಯರ ಆಯ್ಕೆ ಸ್ವಾತಂತ್ರ್ಯ ಹಾಗೂ ಶೋಷಣೆಯ ವಿರುದ್ಧ ಪ್ರತಿಭಟನೆಯನ್ನು ದಿಟ್ಟವಾಗಿ ಪ್ರತಿಪಾದಿಸುತ್ತಾರೆ. ಭಾಗೀರತಿ ಮತ್ತು ಸುನಾಲಿನಿ ಎರಡೂ ಇಲ್ಲಿ ರೆಬೆಲ್ ಪಾತ್ರಗಳಾಗಿದ್ದು ಪುರುಷರ ದೌರ್ಜನ್ಯದ ವಿರುದ್ಧ ಸಿಡಿದೇಳುತ್ತವೆ. ಎಂಟು ದಶಕಗಳ ಹಿಂದೆ ಕೃತಿ ರಚನೆಗೊಂಡಿದ್ದರೂ ಈಗಲೂ ಪ್ರಸ್ತುತವಾಗಿದೆ. ಕೌಟುಂಬಿಕ ದೌರ್ಜನ್ಯವೆಂಬುದು ಸಮಾಜದಲ್ಲಿ ಇರುವವರೆಗೂ ಸರಸಮ್ಮನ ಸಮಾಧಿ ಸಮಕಾಲೀನವೆನಿಸುತ್ತಲೇ ಇರುತ್ತದೆ. ರಂಜನೆಯ ಮೂಲಕ ಮೂಢನಂಬಿಕೆಯನ್ನು ಪ್ರಶ್ನಿಸುವಂತಹ ವೈಚಾರಿಕ ನಾಟಕ ಸಾರ್ವಕಾಲಿಕವಾಗಿದೆ.

ಇಂತಹ ಸಾರ್ವಕಾಲಿಕ ಕೃತಿಯನ್ನು ಗಿರಿರಾಜ್ರವರು ಈಗಿನ ಪ್ರಸ್ತುತ ಪ್ರಸಂಗಗಳಿಗೂ ಅನ್ವಯಿಸಿ ಇನ್ನಷ್ಟು ಸಮಕಾಲೀನಗೊಳಿಸಿದ್ದಾರೆ. ಈಗಿನ ರಾಜಕೀಯದ ದುಸ್ಥಿತಿಯನ್ನೂ ಸಹ ನಾಟಕದಲ್ಲಿ ಚರ್ಚಿಸಿದ್ದಾರೆ. ಆದರೆ ಹೀಗೆ ಪ್ರಸ್ತುತ ರಾಜಕೀಯವನ್ನು ವಿಡಂಬಿಸುವ ಹುಮ್ಮಸ್ಸಿನಲ್ಲಿ ಅವಾಸ್ತವಿಕ ಸಂಗತಿಯನ್ನು ನಿರ್ದೇಶಕರು ಪ್ರಸ್ತಾಪಿಸುತ್ತಾರೆ. ಕಮ್ತಿ ಎನ್ನುವ ಪಾತ್ರ ಚಂದ್ರಯ್ಯ ಅಣ್ಣಾ ಹಜಾರೆ ಜೊತೆ ಸೇರಿ ಧರಣಿ ಮಾಡಿ ಜೈಲಿಗೆ ಹೋಗಿ ನಂತರ ಹಜಾರೆ ಧೋರಣೆ ಸರಿಯಿಲ್ಲ ಅಂತಾ ಕೇಜ್ರಿವಾಲ್ ಪಕ್ಷ ಸೇರಿ ಚುನಾವಣೆಗೂ ನಿಂತು ಮೂರು ಓಟು ಪಡೆದು ಹೀನಾಯವಾಗಿ ಸೋತ ಎಂಬರ್ಥದಲ್ಲಿ ಮಾತಾಡುತ್ತದೆ. ಆದರೆ ವಾಸ್ತವ ಏನೆಂದರೆ ಆಮ್ ಆದ್ಮಿ ಪಕ್ಷ ಇಲ್ಲಿವರೆಗೂ ಕರ್ನಾಟಕದಲ್ಲಿ ಯಾವ ಚುನಾವಣೆ ಎದುರಿಸಿಲ್ಲ ಎಂದಮೇಲೆ ಕರಾವಳಿ ಕರ್ನಾಟಕದ ಹೈದನೊಬ್ಬ ಚುನಾವಣೆಗೆ ನಿಂತು ಸೋಲುವ ಅಗತ್ಯವಾದರೂ ಎಲ್ಲಿದೆ. ಯಾರು  ಏನೇ ಹೇಳಲಿ ಆಮ್ ಆದ್ಮೀ ಪಾಲಿಟಿಕಲ್ ಮೂವಮೆಂಟ್ ಎನ್ನುವುದು ಬೇರೆಲ್ಲಾ ಭ್ರಷ್ಟ ಪಕ್ಷಗಳಿಗೆ ಹೋಲಿಸಿದರೆ ಈಗಲೂ ರಾಜಕೀಯ ಅಂಧಕಾರದಲ್ಲಿ  ಬೆಳಕಿನ ಆಶಾಕಿರಣವಾಗಿಯೇ ಇದೆ. ಅದನ್ನೂ ಸಹ ನಂದಿಸುವ ಪ್ರಯತ್ನವನ್ನು ಎಲ್ಲಾ ಭ್ರಷ್ಟಾತಿ ಭ್ರಷ್ಟ ಪಕ್ಷಗಳು ಹಾಗೂ ಕೋಮುವಾದಿಗಳು ಮಾಡುತ್ತಲೇ ಬಂದಿವೆ. ಇಂತಹ ಕೆಲಸಕ್ಕೆ ಪೂರಕವಾದ ಸಂದೇಶವನ್ನು ಗಿರಿರಾಜ್ ತಮ್ಮ ನಾಟಕದಲ್ಲಿ ಕೊಟ್ಟಿದ್ದಾರಾ? ಎನ್ನುವ ಸಂದೇಹ ಕಾಡದಿರದು.

ದೇವರು ದೆವ್ವಗಳನ್ನೆಲ್ಲಾ ನಂಬದ ವಿಚಾರವಾದಿ ಕಾರಂತರು ನಾಟಕದಲ್ಲಿ ಪ್ರೇತವನ್ನೇ ಪಾತ್ರವಾಗಿಸಿದ್ದಾರೆ. ಒಂದು ಮಿಥ್ ಸೃಷ್ಟಿಯ ಮೂಲಕ ಹಲವಾರು ಸತ್ಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇದು ನಾಟಕದಲ್ಲಿ ಸಶಕ್ತವಾಗಿ ಮೂಡಿ ಬಂದಿದೆ. ಛಾಯಾಶರೀರಿಯಾದ ಸರಸಮ್ಮನ ಪ್ರೇತ ಸ್ಪರ್ಷಕ್ಕೆ ದೊರೆತಿದ್ದು ಹೇಗೆ? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ನಾಟಕದಲ್ಲಿ ಹಲವಾರು ಬಾರಿ ದೇಹವಿಲ್ಲದೆ ಗೋಚರಿಸುವ ಛಾಯಾಪ್ರತಿ ಅಂದರೆ ವರ್ಚುವಲ್ ರಿಯಾಲಿಟಿ ಎನ್ನುವ ಹಾಗೇ ಪ್ರೇತವನ್ನು ಬಿಂಬಿಸಲಾಗಿದೆ. ಆದರೆ ಕೊನೆಗೆ ನಾಟಕದ ಕ್ಲೈಮ್ಯಾಕ್ಸಿನಲ್ಲಿ ಚಂದ್ರು ಪಾತ್ರ ಭೂತದ ಕೈಹಿಡಿದಾಗ ಭೂತಕ್ಕೇ ಅಚ್ಚರಿಯಾಗುತ್ತದೆ. ನೀನು ಹೇಗೆ ನನ್ನ ಕೈ ಹಿಡಿದೆ? ಎಂದು ಪ್ರಶ್ನಿಸುತ್ತದೆ. ಇದೇ ಪ್ರಶ್ನೆ ಪ್ರೇಕ್ಷಕರಿಗೂ ಕಾಡುತ್ತದೆ. ಇಷ್ಟು ದಿನಗಳ ಕಾಲ ದೇಹವಿಲ್ಲದ ಆತ್ಮ ಇದ್ದಕ್ಕಿದ್ದಂತೆ ದೇಹ ಆಗಿದ್ದು ಹೇಗೆ? ಎನ್ನುವುದಕ್ಕೆ ಸರಸಮ್ಮನ ಬಳಿ ಎಲ್ಲಾ ಸಾಧ್ಯ.. ಎನ್ನುವ ಹಾರಿಕೆಯ ಉತ್ತರ ಕೊಡಲಾಗುತ್ತದೆ. ಪ್ರೇತಾತ್ಮಕ್ಕೂ ಸಾಧ್ಯವಾಗದ ಪವಾಡವೊಂದನ್ನು ನಿರ್ದೇಶಕರು ಸೃಷ್ಟಿಸಿ ನೋಡುಗರ ತಲೆಯಲ್ಲಿ ಹುಳು ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಟಕದ ಅಂತ್ಯ ಅವಸರದಲ್ಲಿ ಅಸಂಗತರೀತಿಯಲ್ಲಿ ಮುಗಿಸಿದಂತಿದೆ. ಜೊತೆಗೆ ಪ್ರೇಕ್ಷಕರಲ್ಲಿ ಗೊಂದಲವನ್ನುಂಟು ಮಾಡುವಂತಿದೆ. ಗುಡಿಯಲ್ಲಿ ನಮ್ಮ ವಿವಾಹ ಸಾಧ್ಯವಿಲ್ಲ ಎಂದು ಗುಡಿ ಪ್ರವೇಶಿಸಲು ವಿರೋಧಿಸುವ ಪ್ರೇತ ಅದನಂತರ ಅದು ನನ್ನದೇ ಮನೆ, ನನ್ನದೆ ಸಮಾಧಿ ಎಂದಲೂ ಭೂತ ಹೇಳುತ್ತದೆ. ಇವೆರೆಡೂ ಮಾತುಗಳಲ್ಲಿ ಆಭಾಸಗಳಿವೆ. ಸರಸಮ್ಮನ ಸಮಾಧಿಯನ್ನು ಜನರು ಗುಡಿಯೆಂದು ಪೂಜಿಸುತ್ತಿರುತ್ತಾರೆಂಬುದು ನಾಟಕದಲ್ಲಿ  ಸ್ಪಷ್ಟವಾಗಿದೆ. ಅದನ್ನು ಎಲ್ಲರೂ ಒಪ್ಪಿದರೂ ಸ್ವತಃ ಪ್ರೇತವೇ ಒಪ್ಪಿಕೊಳ್ಳುವಲ್ಲಿ ಹಿಂಜರಿಯುತ್ತದೆ. ಮನುಷ್ಯರ ಮೌಡ್ಯದ ತೆವಲಿಗೆ ಪ್ರೇತವೂ ಬಿದ್ದಿತಾ?.  ತನ್ನದೇ ಗೋರಿಯನ್ನು ಗುಡಿ ಎಂದು ನಂಬಿಬಿಡ್ತಾ? ಗೊತ್ತಿಲ್ಲಾ. ಜೊತೆಗೆ ನೀಲಾಚಲನ ಪ್ರೇತ ನನ್ನನ್ನು ಅಂಕೆಯಲ್ಲಿರಿಸುತ್ತಿದೆ ಎನ್ನುವ ಮಾತನ್ನೂ ಸರಸಮ್ಮನ ಭೂತ ಹೇಳುತ್ತದೆ. ಅರೆ... ಸರಸಮ್ಮನ ಪ್ರೇತದ ಜೊತೆಗೆ ಆಕೆಯ ಗಂಡನಾಗಿದ್ದವನ ಪ್ರೇತವೂ ಅಲ್ಲಿದೆ ಅಂದಂಗಾಯ್ತು. ಅದು ಸರಸಮ್ಮನ ಆತ್ಮವನ್ನು ಅಂಕೆಯಲ್ಲಿಟ್ಟುಕೊಂಡಿದೆ ಅಂದಂಗಾತುಹಾಗಾದರೆ ಅದು ಹೇಗೆ ಸರಸಮ್ಮನ ಪ್ರೇತ ಕಂಡ ಕಂಡ ಗಂಡಸರಲ್ಲಿ ಪ್ರೇಮಭಿಕ್ಷೆ ಬೇಡುತ್ತಿದ್ದುದು? ದೇಹರೂಪಿ ಚಂದ್ರುವನ್ನು ಮದುವೆಯಾಗಬಯಸುವುದು. ಅಂಕೆಯಲ್ಲಿಟ್ಟುಕೊಂಡ ಪತಿಪ್ರೇತವೇನು ರಜೆಯ ಮೇಲೆ ತೆರಳಿತ್ತಾ..? ಇಲ್ಲಾ ಮನುಷ್ಯಳ ಹಾಗೆ ಪತಿಯ ಪ್ರೇತಕ್ಕೆ ವಂಚಿಸಿ ಪರಪುರಷರ ಸಂಗಕ್ಕೆ ಸರಸಮ್ಮನ ಪ್ರೇತ ಹಾತೊರೆಯಿತಾ..? ಹೀಗೆ ಕೆಲವಾರು ಪ್ರಶ್ನೆಗಳನ್ನು ಪ್ರೇಕ್ಷಕರ ಮನಸಿನಲ್ಲಿ ಹುಟ್ಟುಸುವಲ್ಲಿ ನಾಟಕದ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸೂಕ್ತವಾಗಿ ಉತ್ತರಿಸುವುದನ್ನು ಮರೆತು ಬಿಟ್ಟಿದ್ದಾರೆ. ನಾಟಕದ ಅಂತ್ಯ ಹುಟ್ಟಿಸುವ ಗೊಂದಲಗಳಿಗೆ ಒಂದಿಷ್ಟು ಕ್ಲಾರಿಪಿಕೇಶನ್ ಕೊಟ್ಟರೆ ಅನಗತ್ಯ ಸಂದೇಹಗಳನ್ನು ಕೊನೆಗಾಣಿಸಬಹುದಾಗಿದೆ. ನಿಟ್ಟಿನಲ್ಲಿ ಗಿರಿರಾಜ್ರವರು ಆಲೋಚಿಸುವುದುತ್ತಮ.
     
ಮಾಸ್ತಿ ಕಲ್ಲು ನಾಟಕದ ಯಶಸ್ಸಿರುವುದು ಅದರ ಚಲನಶೀಲತೆಯಲ್ಲಿ ಹಾಗೂ ಕುತೂಹಲವನ್ನು ಅಂತ್ಯದವರೆಗೂ ಹಿಡಿದಿಡುವುದರಲ್ಲಿ. ಒಂದಾದ ಮೇಲೊಂದು ದೃಶ್ಯಗಳು ಕಥೆಯನ್ನು ಕಟ್ಟಿಕೊಡುತ್ತಾ ಹೋಗುತ್ತವೆ. ಛಿದ್ರಗೊಂಡ ದಾಂಪತ್ಯಗಳ ಚಿತ್ರಣವನ್ನು ಬಿಂಬಿಸುತ್ತವೆ. ಕಾದಂಬರಿಯ ಓದು ಕೆಲವು ಹಂತದಲ್ಲಿ ಬೋರ ಹೊಡೆಸುತ್ತದಾದರೂ ನಾಟಕ ಪ್ರೇಕ್ಷಕರನ್ನು ಖುರ್ಚಿಯ ತುದಿಗೆ ಕೂರಿಸಿ ನೋಡಿಸುವಂತೆ ಮೂಡಿಬಂದಿದೆ. ಕುತೂಹಲಕಾರಿ ದೃಶ್ಯ ಸಂಯೋಜನೆ ಹಾಗೂ ಪಂಚ್ ಸಂಭಾಷಣೆಗಳು ನೋಡುಗರನ್ನು ಕೊನೆಯವರೆಗೂ ಹಿಡಿದು ಕೂಡಿಸುತ್ತವೆ. ಕಾದಂಬರಿಯನ್ನು ರಂಗರೂಪಗೊಳಿಸುವಾಗ ಕಥಾಸಂವಹನದ ಮಾಧ್ಯಮವಾಗಿ ನಿರೂಪಕರನ್ನು ಬಳಸುವುದು ಸಾಮಾನ್ಯ. ಆದರೆ ನಿರೂಪಕರ ಹಂಗಿಲ್ಲದೇ ವಿವರಗಳನ್ನು ಕೊಡುವ ಅಗತ್ಯವಿದ್ದಾಗ ಪಾತ್ರಗಳೇ ನಿರೂಪಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಚಂದ್ರಯ್ಯ ಹಾಗೂ ಭಾಗೀರಥಿಯವರ ಪ್ರೇಮ ಪ್ರಸಂಗವಂತೂ ನಾಟಕದಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ. ಕೇವಲ ಕೊಡೆ ಹಾಗೂ ಮಳೆಯನ್ನು ನೆಪವಾಗಿಸಿಕೊಂಡು ಮೂರು ನಿಮಿಷದಲ್ಲಿ ಪ್ರೇಮಾನುರಾಗದ ದೃಶ್ಯವನ್ನು ಕಟ್ಟಿ ಕೊಟ್ಟ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದು.
 
ರಂಗಸಜ್ಜಿಕೆಯ ವಿನ್ಯಾಸ ಸರಸಮ್ಮನ ಸಮಾಧಿ ಸ್ಥಳಕ್ಕೆ ಬಹುತೇಕ ಮೀಸಲಾಗಿದೆ. ರಂಗಸ್ಥಳದ ಹಿಂಬಾಗ ಕಲರ್ಪುಲ್ ಆಗಿದ್ದು ಸೈಕ್ ಬಳಸಿ ಕೊಳದ ಭ್ರಮೆಯನ್ನು ಮೂಡಿಸಿದ್ದು ಅದ್ಬುತವಾಗಿ ಮೂಡಿಬಂದಿದೆ. ಆದರೆ ಮನೆಯ ದೃಶ್ಯಗಳು ಯಾವುದೇ ಸೆಟ್ಗಳಿಲ್ಲದೇ ಕರೀ ಪರದೆಯ ಮುಂದೆ ಮೂಡಿಬಂದಿದ್ದು ಅಗತ್ಯ ಮೂಡ್ ಹುಟ್ಟಿಸುವಲ್ಲಿ ವಿಫಲವಾಗಿವೆ. ಸಾಂಕೇತಿಕವಾಗಿಯಾದರೂ ಆಯಾ ದೃಶ್ಯಗಳಿಗೆ ಪೂರಕವಾಗಿ ರಂಗವಿನ್ಯಾಸ ಮಾಡಿದ್ದರೆ ನಾಟಕ ಇನ್ನೂ ಹೆಚ್ಚು ಮನನೀಯವಾಗುತ್ತಿತ್ತು. ರಂಗತಂತ್ರಗಳ ಬಳಕೆಯಲ್ಲಾದ ಕೊರತೆಯನ್ನು ಅಭಿನಯ ವಿಭಾಗ ತುಂಬಿಕೊಟ್ಟಿದೆ. ಪಾತ್ರಗಳು ನಾಟಕದಾದ್ಯಂತ ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ದೃಶ್ಯಗಳನ್ನು ಕಟ್ಟಿಕೊಟ್ಟಿವೆ. ಭಾಗೀರಥಿಯಾಗಿ ನವಿತಾ, ಸರಸಮ್ಮನ ಭೂತವಾಗಿ ಉಜ್ವಲಾರಾವ್, ಸುನಾಲಿನಿಯಾಗಿ ಬಿಂದು ರವಿಶಂಕರ್ರವರು ತಮ್ಮ ಪಾತ್ರಕ್ಕೆ ಜೀವದುಂಬಿ ಅಭಿನಯಿಸಿದ್ದಾರೆ. ಹರೀಶ್ರವರ ಚಂದ್ರಯ್ಯ ಪಾತ್ರದ ಸಹಜಾಭಿನಯ ಹಾಗೂ ಪರಮೇಶ್ವರ್ರವರ ಅಣ್ಣಪ್ಪ ಪಾತ್ರದ ಅತೀಶಯದಭಿನಯಗಳು  ನೋಡುಗರಲ್ಲಿ ಸಂಚಲನವನ್ನುಂಟು ಮಾಡುವಂತಿದ್ದವು. ಭಾಗವತನಾಗಿ ಹೇಮರಾಜ್ ಪುಟ್ಟ ಪಾತ್ರದಲ್ಲೂ ಗಮನಾರ್ಹವಾಗಿ ನಟಿಸಿದರು. ಸ್ವತಃ ನಿರ್ದೇಶಕ ಗಿರಿರಾಜ್ರವರು ಈಶ್ವರಭಟ್ಟರ ಪಾತ್ರ ಅಭಿನಯಿಸಿದ ರೀತಿಯನ್ನು ನೋಡಿಯೇ ಸವಿಯಬೇಕು. ಬಹುತೇಕ ಹೊಸಬರನ್ನು ಆಯ್ದುಕೊಂಡು ಅವರಿಗೆ ನಟನೆಯ ಪಾಠಗಳನ್ನು ಹೇಳಿಕೊಟ್ಟು ಪಾತ್ರವಾಗಿಸಿದ ಗಿರಿರಾಜ್ರವರ ಪರಿಶ್ರಮ ಪ್ರತಿ ಪಾತ್ರದ ನಡೆ ನುಡಿಗಳಲ್ಲಿ ಪಲ್ಲವಿಸಿದೆ. ಇದು ಪಕ್ಕಾ ಸಂಭಾಷಣಾ ಪ್ರಧಾನವಾದ ನಟರ ನಾಟಕ. ಗುಂಪು ಬಳಕೆ ಹಾಗೂ ದೃಶ್ಯಗಳ ಬ್ಲಾಕಿಂಗ್ಗಳಲ್ಲಿ ನಿರ್ದೇಶಕರ ಕೌಶಲ್ಯ ವರ್ಕಔಟ್ ಆಗಿದೆ. ಇಡೀ ನಾಟಕ ತಂಡದ ಕಲಾವಿದರೆಲ್ಲಾ ವೈರಲ್ಜ್ವರದಿಂದ ಸಾಮೂಹಿಕವಾಗಿ ಬಳಲುತ್ತಿದ್ದರೂ ಎಲ್ಲೂ ಆಭಾಸವಾಗದಂತೆ ತೂಗಿಸಿಕೊಂಡು ನಾಟಕವನ್ನು ದಡ ಸೇರಿಸಿದ್ದನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಇಡೀ ತಂಡದ   ರಂಗನಿಷ್ಟೆ ಮಾದರಿಯಾಗುವಂತಹುದು.


ನಾಟಕದ ಯಶಸ್ಸಿಗೆ ಪೂರಕವಾಗಿ ಕಾರಣವಾಗಿದ್ದು ಪಿ.ಡಿ.ಸತೀಶಚಂದ್ರರವರ ಬೆಳಕಿನ ವಿನ್ಯಾಸ ಹಾಗೂ ಅಭಿಲಾಶರವರ ಸಂಗೀತ ಸಂಯೋಜನೆ. ಸರಸಮ್ಮನ ಸಮಾಧಿಯ ಸುತ್ತ ನಡೆಯುವ ದೃಶ್ಯಗಳಿಗೆ ಬೆಳಕು ಸಂಯೋಜನೆಯು ದೃಶ್ಯಕಾವ್ಯವನ್ನು ಸೃಷ್ಟಿಸುವಂತೆ ಮೂಡಿಬಂದಿತು. ಹಿನ್ನೆಲೆ ಸಂಗೀತ ಪ್ರತಿ ಹಂತದಲ್ಲೂ ನಾಟಕದ ದೃಶ್ಯಗಳಿಗೆ ಸಾಥ್ ಕೊಟ್ಟು ಕೇಳುಗರಲ್ಲಿ ಕುತೂಹಲವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಚಂದನ್ರವರು ಬರೆದ ಶೀರ್ಷಿಕೆ ಗೀತೆ ಕಲ್ಲು ಶಿಲೆಯಲ್ಲೂ ಕೆತ್ತದ ಕಥೆಯಾ ಹೇಳಾಕ ಬಂದೇವಿ ಕುಂತು ಕೇಳ್ರಯ್ಯಾ.... ಹಾಡು ಇಡೀ ನಾಟಕದ ಆಶಯವನ್ನು ಬಿಂಬಿಸುವಂತೆ ಮೂಡಿಬಂದಿದೆ. ಆದರೆ ಹಾಡಿಗೆ ತಕ್ಕ ಹಾಗೆ ನೃತ್ಯ ಸಂಯೋಜನೆ ಮಾಡಿದ್ದರೆ ಅದ್ಭುತವಾದ ದೃಶ್ಯಕಾವ್ಯ ಸೃಷ್ಟಿಸಬಹುದಾಗಿತ್ತು. ಹಾಡನ್ನು ಮೊದಲೇ ರೆಕಾರ್ಡ ಮಾಡಿ ಪ್ಲೇ ಮಾಡಿದ್ದರಿಂದಾಗಿ ನಿಜವಾದ ಲೈವ್ ಸಂಗೀತದ ಸತ್ವ ಕೇಳುಗರಿಗೆ ದೊರಕದಾಯಿತು. ಲೈವ್ ಸಂಗೀತದಿಂದ ರೆಕಾರ್ಡ ಸಂಗೀತದ ಪ್ರಸ್ತುತಿಯು ನಮ್ಮ ಪ್ರಸ್ತುತ ರಂಗಭೂಮಿಯ ಅನಿವಾರ್ಯತೆಯೂ ಆದಂತಿದೆ. ಇದಕ್ಕೆ ಪ್ರೇಕ್ಷಕರೂ ಹೊಂದಿಕೊಳ್ಳಲೇ ಬೇಕಿದೆ. ಮಾಸ್ತಿ ಕಲ್ಲು ನಾಟಕ ಆಕರ್ಷಿಸಲು ಇನ್ನೊಂದು ಪ್ರಮುಖ ಕಾರಣವಾಗಿದ್ದು ಭಾಷಾ ಬಳಕೆ. ಕಾರಂತರ ನಾಟಕದಲ್ಲಿ ಸಾಹಿತ್ಯಕ ಭಾಷೆಯನ್ನೇ ಬಳಸಲಾಗಿದೆ. ಆದರೆ... ಗಿರಿರಾಜ್ರವರು ನಾಟಕದಲ್ಲಿ ಕುಂದಾಪುರ ಭಾಗದ ಕನ್ನಡ ಭಾಷಾಸೊಗಡನ್ನು ಬಳಿಸಿದ್ದಾರೆ. ವಿಶಿಷ್ಟ ಭಾಷಾ ಪ್ರಯೋಗ ಇಡೀ ನಾಟಕಕ್ಕೆ ಕಾವ್ಯಾತ್ಮಕತೆಯನ್ನು ತಂದುಕೊಟ್ಟಿದೆ. ಕರಾವಳಿಯೇತರ ಪ್ರೇಕ್ಷಕರಿಗಂತೂ ಏನೋ ಹೊಸದೊಂದು ರೀತಿಯಲ್ಲಿ ಕನ್ನಡವನ್ನು ಕೇಳಿಸಿಕೊಳ್ಳುವಂತಹ ಅನುಭವವಾಗಿದ್ದಂತೂ ಸುಳ್ಳಲ್ಲ. ಮೊನಚಾದ ಮಾತುಗಳು ಹಾಗೂ ವಿಡಂಬನಾತ್ಮಕ ದೃಶ್ಯಗಳು ನಾಟಕದ ಯಶಸ್ಸಿನಲ್ಲಿ ಪಾಲುಕೇಳುವಂತಿವೆ.
 
ಮಾಸ್ತಿಕಲ್ಲು ನಾಟಕ ಪ್ರದರ್ಶನವಾಗುವುದೋ ಇಲ್ಲವೊ ಎನ್ನುವ ಆತಂಕ ರಂಗತಂಡದವರಿಗೆ ಇತ್ತು. ಗಿರಿರಾಜ್ರವರಂತೆ ಮುನ್ನುಗ್ಗುವ ಛಾತಿ ಇಲ್ಲದಿದ್ದರೆ ನಾಟಕ ಮಾಡಿಸಲು ಎಂಟೆದೆ ಬೇಕು. ಯಾಕೆಂದರೆ... ನಾಟಕ ಆಡಲು ಅನುಮತಿಯೇ ಸಿಕ್ಕುವುದಿಲ್ಲಅನುಮತಿ ಇಲ್ಲದೇ ನಾಟಕ ಮಾಡಿದರೆ ಕೇಸು ಗ್ಯಾರಂಟಿಶಿವರಾಮ ಕಾರಂತರವರು ಅದ್ಯಾವುದೋ ದುರ್ಬಲ ಗಳಿಗೆಯಲ್ಲಿ ಮಾಲಿನಿ ಮಲ್ಯ ಎನ್ನುವ ಮಹಿಳೆಗೆ ತಮ್ಮೆಲ್ಲಾ ಬರಹಗಳ ಮೇಲಿನ ಹಕ್ಕುಗಳನ್ನು ಬರೆದುಕೊಟ್ಟು ಹೋದರು. ಆದರೆ ನಿಧಿಯ ಮೇಲೆ ಏಳು ಹೆಡೆಯ ಸರ್ಫ ಕೂತು ಯಾರಿಗೂ ಉಪಯೋಗಕ್ಕೆ ಬರದಂತೆ ಕಾಯುವ ಹಾಗೆ ಕಾರಂತರ ಸಮಸ್ತ ಸಾಹಿತ್ಯಕ ಸಂಪತ್ತನ್ನೂ ಮಾಲಿನಿಯಮ್ಮ ಕಾಯುತ್ತಿರುವುದು ದೊಡ್ಡ ದುರಂತವೇ ಹೌದು. ಹಿಂದೆ ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯನ್ನು ರೂಪಾಂತರ ತಂಡವು ನಾಟಕ ಮಾಡಿದಾಗಿ ಕೋರ್ಟು ಕೇಸು ಅಂತೆಲ್ಲಾ ಹೆದರಿಸಿ ನಾಟಕವನ್ನೇ ಮಾಡದಂತೆ ಮಾಡಿದಳು. ಒಂದೇ ಒಂದು ಪ್ರದರ್ಶನವಾಗಿ ಅಪರೂಪದ ನಾಟಕ ನಿಂತುಹೋಯಿತು. ಇತ್ತೀಚೆಗೆ ಕಾರಂತರ ಚದುರಿದ ಕನಸು ಸಿನೆಮಾ ಮಾಡಿದ್ದ ನಾಗಾಭರಣರವರು ಸಿನೆಮಾದ ಚಿತ್ರಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಕ್ಕೆ ಕೇಸು ಹಾಕಿ ನಾಗಾಭರಣರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು ಅಕ್ಷಮ್ಯ. ಹಾಗೆಯೇ ಉಡುಪಿಯ ಎಂಜಿಎಂ ಕಾಲೇಜಿನ ಮೇಲೆಯೂ ಸಹ ಹಕ್ಕುಸಾಮ್ಯದ ಕೇಸ್ ಹಾಕಿ ಕೋರ್ಟಲ್ಲಿ ಸೋತು ಸುಣ್ಣಗಾದ ಮಾಲಿನಿಯಮ್ಮ ಕಾರಂತರ ಸಾಹಿತ್ಯವನ್ನು ಬೇರೆ ಮಾಧ್ಯಮಗಳಲ್ಲಿ ಬಾರದ ಹಾಗೆ ತಡೆಯೊಡ್ಡುತ್ತಿರುವುದು ಖೇದದ ಸಂಗತಿ. ಗಿರಿರಾಜ್ರವರೂ ಸಹ ಸರಸಮ್ಮನ ಸಮಾಧಿ ಕಾದಂಬರಿಯನ್ನು ನಾಟಕ ಮಾಡಿಸುವುದಾಗಿ ಮಾಲಿನಿಯವರನ್ನು ಕೇಳಿದಾಗ ಅನುಮತಿ ಕೊಡಲಾಗುವುದಿಲ್ಲ. ಅನುಮತಿ ಇಲ್ಲದೇ ನಾಟಕ ಮಾಡಿಸಿದರೆ ಕೇಸು ಹಾಕಿ ನಾಟಕ ನಿಲ್ಲಿಸಲಾಗುವುದು.. ಎನ್ನುವ ದುರಹಂಕಾರದ ಮಾತು ಎದುರಾಯಿತು. ಮಾಲಿನಿಯಂತವರು ಚಾಪೆಕೆಳಗೆ ತೂರಿದರೆ ಗಿರಿರಾಜ್ ರಂಗೋಲಿಕೆಳಗೆ ತೂರುವ ತಂತ್ರಗಾರಿಕೆ ಮಾಡಬೇಕಾಯಿತು. ಸರಸಮ್ಮನ ಸಮಾಧಿ ಎನ್ನುವ ಹೆಸರನ್ನೇ ಬದಲಾಯಿಸಿ ಮಾಸ್ತಿಕಲ್ಲು ಎಂದು ಮರುನಾಮಕರಣ ಮಾಡಿದ ಗಿರಿ ನಾಟಕದ ತಯಾರಿಯನ್ನು ಶುರುಮಾಡಿಕೊಂಡರು. ಜೊತೆಗೆ ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಪ್ರೇರಿತ ನಾಟಕ ಎನ್ನುವ ಟ್ಯಾಗಲೈನ್ ಪ್ರಕಟಿಸಲಾಯಿತು. ಇಷ್ಟೆಲ್ಲಾ ಮಾಡಿದರೂ ಮಾಲಿನಿ ಮಲ್ಯ ಯಾವಾಗ ನಾಟಕಕ್ಕೆ ಸ್ಟೇ ತರುತ್ತಾರೋ ಎನ್ನುವ ಆತಂಕದಲ್ಲೇ ನಾಟಕವನ್ನು ಮಾಡಲಾಯಿತು. ಬಹುಷಃ ಇನ್ನೂ ವಿಷಯ ಆಯಮ್ಮನಿಗೆ ಗೊತ್ತಿಲ್ಲದಿದ್ದರಿಂದಲೋ ಅಥವಾ ಪ್ರೇರಿತ ಎನ್ನುವ ಪರ್ಯಾಯ ಪದ ಬಳಕೆಯಿಂದಲೋ ಇಲ್ಲಿವರೆಗೂ ನಾಟಕ ನಿಲ್ಲದೇ ಪ್ರದರ್ಶನಗೊಳ್ಳುತ್ತಿದೆ ಎಂಬುದೇ ರಂಗಭೂಮಿಯವರ ಪುಣ್ಯ. ಯಾರು ಏನೇ ಹೇಳಲಿ ಮಾಲಿನಿ ಮಲ್ಯರವರು ಕಾರಂತರ ಸಾಹಿತ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಕಾಯುತ್ತಿರುವುದಂತೂ ಅಕ್ಷಮ್ಯ. ಲಾಭದ ಆಕಾಂಕ್ಷೆಯಿಲ್ಲದೇ ಖುಷಿಗಾಗಿ, ರಂಗಬದ್ಧತೆಯಿಂದಾಗಿ ನಾಟಕ ಮಾಡುತ್ತೇನೆನ್ನುವವರಿಗೆ ಅನುಮತಿ ಕೊಟ್ಟು ಪ್ರೋತ್ಸಾಹಿಸಬೇಕಿದೆ. ಕಾರಂತರ ಕಾದಂಬರಿಗಳನ್ನು ಓದಲಾಗದ ಅದೆಷ್ಟೋ ಜನರನ್ನು ಅವರ ಸಾಹಿತ್ಯ ನಾಟಕದ ಮೂಲಕ ತಲುಪಬಹುದಾಗಿದೆ. ಇದರಿಂದ ಕಾರಂತರ ಹೆಸರು ಸಾಮಾನ್ಯ ಜನರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುತ್ತದೆ. ಸತ್ಯವನ್ನು ಮಾಲಿನಿ ಮಲ್ಯರಂತಹ ಶಾಪಗ್ರಸ್ತ ಮಹಿಳೆಯರಿಗೆ ತಿಳಿಸಿ ಹೇಳುವವರಾರು? ಹೇಳಿದರೂ ಕೇಳದ ಇಂತಹ ಹಠಮಾರಿಗಳ ಬ್ಲಾಕಮೇಲ್ಗಿರಿಗೆ ವಿರುದ್ಧವಾಗಿ ಗಿರಿರಾಜರಂತವರು ಪ್ರತಿತಂತ್ರವನ್ನು ಹೂಡಿ ಸೆಡ್ಡುಹೊಡೆದು ನಿಲ್ಲುವುದೊಂದೇ ಈಗಿರುವ ಪರ್ಯಾಯೋಪಾಯವಾಗಿದೆಹೇಗಾದರೂ ಮಾಡಿ ರಂಗಮಾಧ್ಯಮದ ಮೂಲಕ ಶಿವರಾಮ ಕಾರಂತರ ವಿಚಾರಗಳು ಜನರಿಗೆ ತಲುಪಿಸಲೇ ಬೇಕಿದೆ. ನಿಟ್ಟಿನಲ್ಲಿ ಮಾಸ್ತಿಕಲ್ಲು ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ್ ನಿಜಕ್ಕೂ ಅಭಿನಂದನಾರ್ಹರು. ಅವರ ದಿಟ್ಟ ನಡೆ ಬೇರೆಯವರಿಗೂ ಮಾದರಿಯಾಗಲಿಮಾಸ್ತಿಕಲ್ಲು ನಾಟಕ ರಾಜ್ಯಾದ್ಯಂತ ಪ್ರದರ್ಶನವಾಗಲಿ ಎಂದು ಆಶಿಸಬಹುದಾಗಿದೆ.

                              - ಶಶಿಕಾಂತ ಯಡಹಳ್ಳಿ



ಬಿ.ಎಂ.ಗಿರಿರಾಜ್ : ಮೂಲತಃ ರಂಗಭೂಮಿಯಲ್ಲಿ ನಟ ಹಾಗೂ ನಿರ್ದೇಶಕರಾಗಿ ತೊಡಗಿಸಿಕೊಂಡಿದ್ದ ಗಿರಿರಾಜ್ರವರು ತಮ್ಮ ರಂಗಭೂಮಿಯ ಅನುಭವವನ್ನು ಸಿನೆಮಾ ಕ್ಷೇತ್ರಕ್ಕೂ ವಿಸ್ತರಿಸಿ ನವಿಲಾದವರು, ಜಟ್ಟ, ಅದ್ವೈತ ಹಾಗೂ ಮೈತ್ರಿ ಎನ್ನುವ ಅಪರೂಪದ ಚಲನಚಿತ್ರಗಳನು ನಿರ್ದೇಶಿಸಿದ್ದಾರೆ. 2001ರಲ್ಲಿ ಭೂಮಿ ಎನ್ನುವ ರಂಗತಂಡವನ್ನು ಹುಟ್ಟು ಹಾಕಿ ತಂಡದಿಂದ ಹತ್ತಕ್ಕ್ಕೂ ಹೆಚ್ಚು ನಾಟಕಗಳು ಹಾಗೂ 35ಕ್ಕೂ ಹೆಚ್ಚು ಬೀದಿನಾಟಕಗಳ ಎರಡು ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ನಾಡಿನಾದ್ಯಂತ ಪ್ರದರ್ಶಿಸಿದೆ. ರಂಗಸಂಘಟಕರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಕಳೆದ ಒಂದೂವರೆ ದಶಕದಿಂದ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಭೂಮಿ ತಂಡದ ಮೊದಲ ನಾಟಕ ಹಿಂದಿ ಭಾಷೆಯ ಜನಾಜ್ನ್ನು ಗಿರಿರಾಜರವರೇ ರಚಿಸಿ ನಿರ್ದೇಶಿಸಿದ್ದರು. ತದನಂತರ ದೂಂದ್ ಎನ್ನುವ ಹಿಂದಿ ಭಾಷೆಯ ನಾಟಕವನ್ನು ಬರೆದು ನಿರ್ದೇಶಿಸಿದ್ದರು. ಅಂಗೂಲಿಮಾಲ ನಾಟಕವನ್ನು ಹಿಂದಿಗೆ ರಂಗರೂಪಾಂತರಿಸಿ ನಾಟಕವಾಗಿಸಿದರು. ಕನ್ನಡದಲ್ಲಿ ತಮ್ಮದೇ ಕಥೆಯಾಧರಿಸಿ ಅಹಂ ಭ್ರಹ್ಮಾಸ್ಮಿ ನಾಟಕ ನಿರ್ದೇಶಿಸಿದ್ದಾರೆಏನೋ ಮಾಡಲು ಹೋಗಿ, ಮಸನವ್ಯೂಹ, ಮಂಥೈಸಿಸು... ನಾಟಕಗಳನ್ನು ರಚಿಸಿ ಭೂಮಿ ತಂಡಕ್ಕೆ ನಿರ್ದೇಶಿಸಿದ್ದಾರೆ. ರವಿಂದ್ರನಾಥ ಟ್ಯಾಗೋರರ ಕಾಬೂಲಿವಾಲ ವನ್ನು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದರು. ಈಗ ಪ್ರದರ್ಶನ ಕಲಾ ಸಂಸ್ಥೆಗೆ ಮಾಸ್ತಿಕಲ್ಲು ನಾಟಕವನ್ನು ರಂಗರೂಪಗೊಳಿಸಿ ನಿರ್ದೇಶಿಸಿದ್ದಾರೆ. ತಾವು ನಿರ್ದೇಶಿಸಿದ ಬಹುತೇಕ ನಾಟಕಗಳಲ್ಲಿ ಹಾಗೂ ಎಲ್ಲಾ ಬೀದಿನಾಟಕಗಳಲ್ಲಿ ಗಿರಿರಾಜರವರು ಪ್ರಮುಖ ಪಾತ್ರದಲಿ ಅಭಿನಯಿಸಿ ನಟನೆಯಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ರಂಗಭೂಮಿಯಿಂದ ಹೋಗಿ ಸಿನೆಮಾ ನಿರ್ದೇಶಕರಾದ ನಂತರವೂ ಮತ್ತೆ ರಂಗಭೂಮಿಗೆ ಮರಳಿ ನಾಟಕವನ್ನು ನಿರ್ದೇಶಿಸುತ್ತಿರುವ ಗಿರಿರಾಜರವರ ರಂಗನಿಷ್ಟೆ ರಂಗವಲಸೆ ಪ್ರತಿಭೆಗಳಿಗೆ ಮಾದರಿಯಾಗಿದೆ.



ಪ್ರಕಸಂ ರೂವಾರಿ  ಪಿ.ಡಿ.ಸತೀಶಚಂದ್ರ
ಪ್ರಕಸಂ : ಪ್ರದರ್ಶನ ಕಲಾ ಸಂಸ್ಥೆ (ಪ್ರಕಸಂ) ಒಂದು ಸರಕಾರೇತರ ಸಂಸ್ಥೆಯಾಗಿದ್ದು ಪ್ರದರ್ಶನ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2001 ರಿಂದ ಪಿ.ಸಿ.ಸತೀಶಚಂದ್ರರವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಪ್ರತಿಭೆಗಳನ್ನು  ಗುರುತಿಸಿ ವೇದಿಕೆಯನ್ನು ಒದಗಿಸಿ ಬೆಳೆಸುವ ಪ್ರಶಂಸಾರ್ಹ ಕೆಲಸವನ್ನು ಕಳೆದ ಒಂದೂವರೆ ದಶಕದಿಂದ ಮಾಡುತ್ತಾ ಬಂದಿದೆ. ರಂಗಭೂಮಿಯ ವಿವಿಧ ಆಯಾಮಗಳ ಕುರಿತು ಯುವಜನರಿಗೆ ತರಬೇತಿಯನ್ನೂ ಸಹ ಕೊಡುತ್ತಾ ಯುವಕರಲ್ಲಿ ರಂಗಸಕ್ತಿ ಮೂಡಿಸಲು ಪ್ರಕಸಂ ಶ್ರಮಿಸುತ್ತಿದೆ. 150 ರಷ್ಟು ಯುವರಂಗಕರ್ಮಿ ಕಲಾವಿದರು ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಕಸಂ 2007 ರಿಂದ ಹನುಮಂತನಗರದ ಕಲಾಸೌಧವನ್ನು ಕೇಂದ್ರವಾಗಿಟ್ಟುಕೊಂಡು ರಂಗಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಪ್ರದರ್ಶನ ಕಲೆಗಳ ಪ್ರಚಾರ ಪಾಲನೆ ಪೋಷಣೆಯಲ್ಲಿ ಶ್ರಮಿಸುತ್ತಿರುವ ಪ್ರಕಸಂ ತಂಡವು ಬ್ರಹತ್ ಬೆಂಗಳೂರು ನಗರಪಾಲಿಕೆಯಿಂದ ಕೆ.ಹೆಚ್.ಕಲಾಸೌಧವನ್ನು ಗುತ್ತಿಗೆ ಪಡೆದುಕೊಂಡು ನಾಟಕ, ನೃತ್ಯ, ಸಂಗೀತ ಕಲೆಗಳಿಗೆ ಆಶ್ರಯತಾಣವಾಗಿದೆ. 2010 ರಿಂದ 2014 ವರೆಗಿನ 4 ವರ್ಷಗಳಲ್ಲಿ ಸರಿಸುಮಾರು 1800 ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನಕ್ಕೆ ಪ್ರಕಸಂ ಕಲಾಸೌಧದಲ್ಲಿ ವೇದಿಕೆಯನ್ನೊದಗಿಸಿದೆ. ಈಗ ಕಲಾಸೌಧವು ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಪ್ರೇಕ್ಷಕರ ಒಂದು ಸಮೂಹವನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ನಾಟಕಗಳ ನಿರ್ಮಾಣವೂ ಸಂಸ್ಥೆಯ ಚಟುವಟಿಕೆಗಳ ಪ್ರಮುಖ ಭಾಗವಾಗಿದೆ. ಈಗಾಗಲೇ ಹೊಸಬೆಳಕು, ಕೈಲಾಸಂರವರ ಅಮ್ಮಾವರ ಗಂಡ, ಮಾರ್ಗೊಸಾ ಮಹಲ್, ರಾಜೇಂದ್ರ ಕಾರಂತರ ನಮ್ಮನಿಮ್ಮೊಳಗೊಬ್ಬಚಂದನ ಶಂಕರರವರ ಸೈರೇಂದ್ರಿ, ಭೂಗಿ, ವಾದ.. ಹೀಗೆ ಕೆಲವಾರು ನಾಟಕಗಳನ್ನು ನಿರ್ಮಿಸಿದೆ. ಎಲ್ಲಾ ನಾಟಕಗಳನು ಪಿ.ಡಿ.ಸತೀಶಚಂದ್ರರವರೇ ನಿರ್ದೇಶಿಸಿದ್ದಾರೆ. ಆದರೆ ಮೊದಲ ಬಾರಿಗೆ ಗಿರಿರಾಜ್ರವರ ನಿರ್ದೇಶನದಲ್ಲಿ ಮಾಸ್ತಿಕಲ್ಲು ನಾಟಕವನ್ನು ಪ್ರಕಸಂ ನಿರ್ಮಿಸಿದೆ. ಯಾರೂ ಬಳಸದೇ ಹಾಳುಬಿದ್ದಿದ್ದ ಕೆ.ಹೆಚ್.ಕಲಾಸೌಧವನ್ನು ಗುತ್ತಿಗೆಗೆ ಪಡೆದು ಅದನ್ನೊಂದು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ದಿಗೊಳಿಸಿದ ಪ್ರಕಸಂ ಸಂಸ್ಥೆ ಬೆಂಗಳೂರಿನ ರಂಗಭೂಮಿಗೆ ಬಹುದೊಡ್ಡ ಕೊಡುಗೆಯನ್ನು ಕೊಡುತ್ತಾ ಬಂದಿದೆ.



              
                 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ