ಗುರುವಾರ, ನವೆಂಬರ್ 24, 2016

ರಂಗಗುರು ಅಶೋಕ ಬಾದರದಿನ್ನಿ ಅಗಲಿಕೆಯಲ್ಲಿ ಬಿಚ್ಚಿಕೊಂಡ ನೆನಪಿನ ಬುತ್ತಿ :


ನನ್ನ ರಂಗಭೂಮಿಯ ಅರಿವನ್ನು ವಿಸ್ತರಿಸಿದ ರಂಗಗುರು ಅಶೋಕ ಬಾದರದಿನ್ನಿಯವರು ತಮ್ಮ ಪಾತ್ರವನ್ನು ಮುಗಿಸಿ ವೇಷ ಕಳಿಚಿಟ್ಟು ನವೆಂಬರ್ 24 ರಂದು ಬೆಳ್ಳಂಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಖಾಯಂ ಆಗಿ ನೇಪತ್ಯಕ್ಕೆ ಹೊರಟುಹೋದರು. ವ್ಯಯಕ್ತಿಕವಾಗಿ ನನ್ನ ರಂಗಭೂಮಿಯ ಬದುಕಲ್ಲಿ ಅಪಾರವಾದ ಪ್ರಭಾವಬೀರಿದವರಲ್ಲಿ ಬಾದರದಿನ್ನಿಯವರೂ ಒಬ್ಬರು. ಅದೇಕೆ ಹೀಗಾಗುತ್ತೋ ಗೊತ್ತಿಲ್ಲ. ಬಿಸಿ, ಸಿಜಿಕೆ, ಆರ್.ನಾಗೇಶ್, ಎ.ಎಸ್.ಮೂರ್ತಿ ಹೀಗೆ... ನನಗೆ ರಂಗಪಾಠ ಹೇಳಿಕೊಟ್ಟ ರಂಗಗುರುಗಳೆಲ್ಲಾ ಒಬ್ಬೊಬ್ಬರಾಗಿ ತಮ್ಮ ಸಾಧನೆ ಮುಗಿಸಿ ನೆನಪುಗಳ ಬಳವಳಿ ಕೊಟ್ಟು ಹೊರಟುಹೋದರು.  ಈಗ ಕೊಟ್ಟ ಕೊನೆಯ ಗುರು ಬಾದರದಿನ್ನಿಯವರೂ ನಿರ್ಗಮಿಸಿದ್ದು ಮುಂದಿನ ದಾರಿ ಗುರಿ ತೋರಿಸಲು ಜೀವಂತ ಗುರುಗಳೇ ಇಲ್ಲದ ಶೂನ್ಯ ಸ್ಥಿತಿ ನನ್ನದಾಗಿದೆ. ಬಾದರದಿನ್ನಿಯವರ ಜೊತೆಗೆ ನನ್ನ ಖಾಸಗಿ ಒಡನಾಟಗಳನ್ನಿಟ್ಟುಕೊಂಡೇ ಅವರ ವ್ಯಕ್ತಿತ್ವದ ಕೆಲವು ಆಯಾಮಗಳನ್ನು ತೆರೆದಿಡಲು ಈ ಲೇಖನದಲ್ಲಿ ಪ್ರಯತ್ನಿಸುತ್ತಾ ಗುರುಗೆಳೆಯನಿಗೆ ಅಕ್ಷರ ನಮನ ಸಲ್ಲಿಸುತ್ತಿರುವೆ.

ಬಾದರದಿನ್ನಿ ಎನ್ನುವ ಅರ್ಥವಿಲ್ಲದ ವಿಕ್ಷಿಪ್ತ ಹೆಸರಿನಷ್ಟೇ ವಿಚಿತ್ರವಾಗಿರುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಅಶೋಕ್ ತಮ್ಮಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಇತರರಿಗೆ ಹಂಚಿಕೊಂಡೇ ಬಂದವರು. ಸಾಮಾನ್ಯ ಅಸಾಮಾನ್ಯ ಹಾಗೂ ಅತಿರೇಕ ಎನ್ನುವ ಮೂರು ರೀತಿಯ ವ್ಯಕ್ತಿತ್ವಗಳು ಅಶೋಕರವರ ಬದುಕಿನ ಭಾಗವಾಗಿಯೇ ಬೆಳೆದು ಬಂದಿದ್ದನ್ನು ನಾನು ಗಮನಿಸಿದೆ. ಯಾಕೋ ಏನೋ ನನ್ನ ಜೊತೆಗೆ ಮೊದಲಿನಿಂದ ಗುರು ಎನ್ನುವ ಹಾಗೆ ಅವರು ಇರಲೇ ಇಲ್ಲಾ. ಗೆಳೆಯನಂತೆಯೇ ಸಂವಾದ ಮಾಡುತ್ತಿದ್ದರು. ಎಲ್ಲರ ಜೊತೆಗೂಡಿರುವಾಗ ಅವರು ಇರುವುದೇ ಹಾಗೆ.. ಅತೀ  ಸಾಮಾನ್ಯನಂತೆಯೇ ನಗು, ಜೋಕ್ಸು, ಹಾಸ್ಯಲಹರಿ ಮಾಡುತ್ತಲೇ ಆತ್ಮೀಯತೆಯನ್ನು ಸುತ್ತಲಿರುವವರ ಜೊತೆಗೆ ಅನಾವರಣ ಗೊಳಿಸುತ್ತಿದ್ದರು. ಆದರೆ.. ನಾಟಕ ನಿರ್ದೇಶನ ಮಾಡುವಾಗ ತಾಲಿಂ ಆರಂಭವಾದರೆ ಸಾಕು ಅವರ ಅಸಾಮಾನ್ಯ ಪ್ರತಿಭೆಯ ಆವರಣ ಬಿಚ್ಚಿಕೊಳ್ಳುತ್ತಿತ್ತು. ಪ್ರತಿಯೊಂದು ಪಾತ್ರಗಳ ಮಾತು, ಕೃತಿ, ಚಲನೆ, ಭಾವನೆಗಳನ್ನು ರೂಪಿಸುವಲ್ಲಿ  ಬಾದರದಿನ್ನಿಗೆ ಬಾದರದಿನ್ನಿಯೇ ಸಾಟಿ ಎನ್ನುವಂತಿತ್ತು. ಹೊರಗಿದ್ದಾಗ ಸಾಮಾನ್ಯನಂತೆ ಗೋಚರಿಸುವ ಅಶೋಕ್ ತಾಲೀಮಿನ ಸಂದರ್ಭದಲ್ಲಿ ಉಗ್ರಾವತಾರ ತಾಳುವುದನ್ನು ನೋಡಿದವರಿಗೆ ಭಯ ಹಾಗೂ ಭಕ್ತಿ ಎರಡೂ ಏಕಕಾಲದಲ್ಲಿ ಉಂಟಾಗುತ್ತಿತ್ತು. ವ್ಯಯಕ್ತಿಕವಾಗಿ ಅತೀ ಅರಾಜಕ ಅಶಿಸ್ತಿನ ವ್ಯಕ್ತಿಯಾಗಿದ್ದ ಬಾದರದಿನ್ನಿ ಅದೆಷ್ಟು ರಂಗಬದ್ದತೆಯನ್ನು ಹೊಂದಿದ್ದರೆಂದರೆ ಯಾವುದೇ ಕಲಾವಿದ ಒಂಚೂರು ಅಶಿಸ್ತಿನಿಂದ ವರ್ತಿಸಿದರೂ ಉತ್ತರ ಕರ್ನಾಟಕದ ದೇಸಿ ಸಂಸ್ಕೃತ ಭಾಷೆಯ ದಾಳಿಗೆ ಒಳಗಾಗಬೇಕಾಗುತ್ತಿತ್ತು. ಸಾಮಾನ್ಯ ವ್ಯಕ್ತಿಯಾಗಿ ಆತ್ಮೀಯತೆಯನ್ನೂ ಅಸಾಮಾನ್ಯ ವ್ಯಕ್ತಿಯಾಗಿ ಶಿಸ್ತನ್ನೂ ತೋರಿಸುತ್ತಿದ್ದ ಬಾದರದಿನ್ನಿಯವರು ಕೆಲವೊಮ್ಮೆ ಕಲಾವಿದರ ಜೊತೆಗೆ ಅತಿರೇಕದ ವರ್ತನೆಯನ್ನೂ ತೋರುತ್ತಿದ್ದರು.


ಯಾಕೆ ಗುರುಗಳೇ ಹೀಗೆಲ್ಲಾ ಕೂಗಾಡಿ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ತೀರಿ ಎಂದೊಮ್ಮೆ ಕೇಳಿದ್ದೆ.  ಗುರುಗಳು ಎಂದು ಹೇಳುವುದನ್ನು ಮೊದಲು ನಿಲ್ಲಿಸು.. ಗೆಳೆಯಾ ಅಂದರೆ ಸಾಕು. ಕಲಾವಿದರನ್ನು ನಾನು ಎಲ್ಲಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತೇನೆ. ಆದರೆ.. ಅವರನ್ನು ತಿದ್ದುವ ಸಂದರ್ಭ ಬಂದಾಗ ಸ್ಟ್ರಿಕ್ಟ್ ಮೇಷ್ಟ್ರಾಗ ಬೇಕಾಗುತ್ತದೆ. ಇದು ಕೂಡಾ ಕಲಿಕೆಯ ಭಾಗವೇ ಆಗಿದೆ. ನಾನು ಕೇವಲ ನಾಟಕವನ್ನು ಮಾತ್ರ ನಿರ್ದೇಶಿಸಲು ಬಯಸುವುದಿಲ್ಲ. ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ತಿದ್ದಿ ತೀಡಿ ಕಲಾವಿದರನ್ನಾಗಿ ರೂಪಿಸಲು ಶ್ರಮಿಸುತ್ತಿರುವೆ. ಅದಕ್ಕಾಗಿ ಕೆಲವೊಮ್ಮೆ ಜೋರು ಮಾಡುವ ಅನಿವಾರ್ಯತೆ ಇರುತ್ತದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಕೋಪ ಮಾಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಾಗಲೂ ಒಂದಿಲ್ಲೊಂದು ದಿನ ಎಲ್ಲರಿಗೂ ಸಾವು ಬಂದೇ ಬರುತ್ತದೆ. ಸಾವಿಗೆ ಮುನ್ನ ಕೆಲವರನ್ನಾದರೂ ಕಲಾವಿದರನ್ನಾಗಿ ರೂಪಿಸಿದರೆ ಸಾರ್ಥಕತೆ ಲಭಿಸುತ್ತದೆಂದು ಫಿಲಾಸಪಿ ಹೇಳಿ ಬಾಯಿಮುಚ್ಚಿಸುತ್ತಿದ್ದರು.

ಇಂತಾ ವಿಕ್ಷಿಪ್ತ ಗುರು ನನಗೆ ಸಿಕ್ಕಿದ್ದು ಅಭಿನಯ ತರಂಗದಲ್ಲಿ. 1988 ರಲ್ಲಿ  ಎ.ಎಸ್.ಮೂರ್ತಿಗಳ ಅಭಿನಯ ತರಂಗದಲ್ಲಿ ನಾನು ರಂಗಾಭ್ಯಾಸ ಮಾಡುತ್ತಿದ್ದಾಗ ಪಾಠ ಹೇಳಲು ಬಂದವರು ಅಶೋಕ ಬಾದರದಿನ್ನಿ. ಆಗ ರಂಗಭೂಮಿಯ ಶಿಸ್ತಿನ ಕ್ಯಾಪ್ಟನ್ ಬಿ.ಸಿ ಯವರು ಅಲ್ಲಿ ಪ್ರಾಂಶುಪಾಲರಾಗಿದ್ದರು. ಪಾಠದ ಆರಂಭಕ್ಕಿಂತಾ ಮೊದಲು ಬಾದರದಿನ್ನಿಯವರನ್ನು ನೋಡಿ ಮಾತಾಡಿಸಿದಾಗ ನಾಯಿ ಹೊಡೆಯುವ ಕೋಲಿನಂತಿರುವ ಈ ಪೀಚಲು ದೇಹದ ವಿಚಿತ್ರ ಮನುಷ್ಯ ಅದೇನು ಪಾಠ ಮಾಡಿಯಾರು? ಎಂಬ ಸಂದೇಹ ನನ್ನನ್ನು ಕಾಡಿದ್ದಂತೂ ಸತ್ಯ.  ಆದರೆ.. ಯಾವಾಗ ಪಾಠ ಆರಂಭಿಸಿದರೋ ಆಗ ನನ್ನ ತಿಳುವಳಿಕೆ ತಪ್ಪೆಂದು ಮನವರಿಕೆ ಆಯಿತು. ರಂಗಭೂಮಿಯ ತಂತ್ರಗಳನ್ನೆಲ್ಲಾ ತಮ್ಮದೇ ಆದ ವಿಡಂಬಣಾತ್ಮಕ ಶೈಲಿಯಲ್ಲಿ ಬಿಡಿಬಿಡಿಸಿ ಹೇಳಿದಾಗಿ ನನ್ನ ಮೈಯೆಲ್ಲಾ ಕಣ್ಣಾಗಿದ್ದು ಸುಳ್ಳಲ್ಲ. ವೇದಿಕೆಯನ್ನು ಹೇಗೆ ಒಂಬತ್ತು ಬಾಗಗಳಾಗಿ ವಿಂಗಡಿಸಬೇಕು, ಯಾವ ಪಾತ್ರಗಳು ತಮ್ಮ ಗುಣಲಕ್ಷಣಗಳಿಗೆ ತಕ್ಕಂತೆ ಯಾವ ಭಾಗದಲ್ಲಿ ಇರಬೇಕು. ಯಾವ ಪಾತ್ರ ಯಾವ ರೀತಿಯ ಚಲನೆಯನ್ನು ಮಾಡಬೇಕು. ಚಲನೆ ಹಾಗೂ ಭಾವನೆಗಳಿಗಿರುವ ಅಂತರ್ ಸಂಬಂಧ ಹೇಗಿರಬೇಕು. ವ್ಯಕ್ತಿ ಪಾತ್ರವಾಗುವ ರೀತಿ ರಿವಾಜುಗಳೇನು.. ಹೀಗೆ ಹಲವಾರು ನಟನೆ ಹಾಗೂ ನಾಟಕದ ಗುಟ್ಟುಗಳನ್ನು ಹೇಳಿಕೊಟ್ಟರು. ಇಂತದೇ ವಿಷಯಗಳನ್ನು ಬಿ.ಸಿ ಯವರೂ ಹೇಳುತ್ತಿದ್ದರಾದರು ಅವರದು ಅತಿಯಾದ ಉನ್ನತ ಭಾಷೆ ಹಾಗೂ ಗಾಂಭೀರ್ಯವಾದ ತೂಕದ ಮಾತು. ತುಂಬಾನೇ ಅಕಾಡೆಮಿಕ್ ಆಗಿ ಹೇಳುತ್ತಿದ್ದುದರಿಂದ ಅದ್ಯಾಕೋ ಬಿ.ಸಿ ಯವರ ಪಾಠಗಳು ನನಗಂತೂ ಕೇವಲ ಮಾಹಿತಿಯ ಮಹಾಪೂರ ಎನ್ನಿಸುವಂತಿತ್ತು.  ಆದರೆ ಈ  ಬಾದರದಿನ್ನಿ ಗುರುಗಳ ಮಾತುಗಳಲ್ಲಿ ಹೊರಹೊಮ್ಮುತ್ತಿದ್ದ  ಹಾಸ್ಯಗಾರಿಕೆ, ತುಂಟುತನ ಹಾಗೂ ರಸಿಕತನಗಳು ಆಗ ಯುವಕನಾಗಿದ್ದ ನನ್ನನ್ನು ಬಹುವಾಗಿ ಆಕರ್ಷಿಸಿದ್ದವು. ರಂಜನೆಯ ಮೂಲಕ ಭೋದನೆ ಎನ್ನುವುದರ ಪ್ರಾತ್ಯಕ್ಷಿತತೆಯನ್ನು ನಾನು ಮೊದಲು ನೋಡಿದ್ದು ಎ.ಎಸ್.ಮೂರ್ತಿಗಳಲ್ಲಿ ತದನಂತರ ಬಾದರದಿನ್ನಿರವರಲ್ಲಿ.

ಅಭಿನಯ ತರಂಗಕ್ಕೆ ಮೇಜರ್ ಪ್ರೊಡಕ್ಷನ್ ಯಾವುದನ್ನು ತೆಗೆದುಕೊಳ್ಳುತ್ತೀರಿ ಎಂದು ಮೂರ್ತಿಗಳು ಬಾದರದಿನ್ನಿಯವರನ್ನು ಕೇಳಿದಾಗ  ಅಭಿಜ್ಞಾನ ಶಾಕುಂತಲೆ  ಎಂದು ಉತ್ತರಿಸಿದರು. ಸರಳ ನಾಟಕಗಳನ್ನು ಬಿಟ್ಟು ಈ ಕ್ಲಿಷ್ಟಕರ ನಾಟಕವನ್ನು ಆಯ್ದುಕೊಂಡು ನಿರ್ದೇಶಿಸಲು ಒಪ್ಪಿಕೊಂಡ ಬಾದರದಿನ್ನಿಯವರಲ್ಲಿ ಆಗ ತಾಲಿಂ ಮಾಡಿಸಲೂ ಸಮಯವಿರಲಿಲ್ಲ. ಯಾಕೆಂದರೆ ಚಿತ್ರದುರ್ಗದ ಮುರಘಾಮಠದ ಜಮುರಾ ರೆಪರ್ಟರಿಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅಭಿನಯದ ತರಂಗದ ನಟರು ಚಿತ್ರದುರ್ಗದ ಮಠಕ್ಕೆ ಬಂದರೆ ಮಾತ್ರ ಅಲ್ಲಿ ತಾಲಿಂ ಮಾಡಿಸುವ ಶರತ್ತಿನ ಮೇಲೆ ನಾಟಕ ನಿರ್ದೇಶಿಸಲು ಒಪ್ಪಿಕೊಂಡರು. ನನಗೆ ನಾಟಕದಲ್ಲಿ ಪಾತ್ರವಾಗಲು ಬಹಳ ಆಸೆ ಇದ್ದರೂ ನಾನು ಕೆಲಸ ಮಾಡುತ್ತಿದ್ದ ಕಂಪನಿ ರಜೆ ಕೊಡಲು ನಿರಾಕರಿಸಿತು. ಆಗ ನನಗೆ ಹೊಟ್ಟೆಪಾಡು ಸಹ ಅನಿವಾರ್ಯವಾಗಿತ್ತು. ಇರುವುದನ್ನು ಹೇಳಿದೆ. ಸರಿ ಇಲ್ಲಿಯೇ ಇರು ಎಂದು ಹೇಳಿದ ಬಾದರದಿನ್ನಿ ಬಾಕಿ ಯುವಕರನ್ನು  ಕರೆದುಕೊಂಡು ಚಿತ್ರದುರ್ಗಕ್ಕೆ ಹೊರಟರು. ಹದಿನೈದು ದಿನಗಳ ಕಾಲ ತಾಲಿಂ ಮುಗಿಸಿ ಅದೊಂದು ಭಾನುವಾರ ಎಲ್ಲರೂ ಮರಳಿ ಬಂದಾಗ ನನಗೆ ಅದೆಂತದೋ ತಳಮಳ. ನಾಟಕದಲ್ಲಿ ಪಾತ್ರವಾಗಲು ಸಾಧ್ಯವಾಗದೇ ಇದ್ದುದಕ್ಕೆ ಅತೀವ ಬೇಸರವಾಯಿತು. ಆದರೂ ಗ್ರ್ಯಾಂಡ್ ರಿಹರ್ಸಲ್ ಅಭಿನಯ ತರಂಗದಲ್ಲಿ ಶುರುವಾಯಿತು. ಇನ್ನು ಮೂರು ದಿನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಫಿಕ್ಸಾಗಿತ್ತು. ಬೇಸರದಿಂದ ಒಂಟಿಯಾಗಿ ನಿಂತಿದ್ದ ನನ್ನ ಹೆಗಲ ಮೇಲೆ ಬಾದರದಿನ್ನಿಯವರ ಕೈಬಿತ್ತು. ಶಶಿ ಬೇಸರ ಮಾಡ್ಕೋಬೇಡಾ ಬಾರೋ ಇಲ್ಲಿ. ನೀನಿಲ್ಲದೇ ನಾಟಕ ಮಾಡುತ್ತೇನೇನೋ. ನೀನು ಈ ನಾಟಕದಲ್ಲಿ ಕಣ್ವ ಮಹರ್ಷಿಯ ಪಾತ್ರ ನಿರ್ವಹಿಸಬೇಕು ಎಂದು ಆತ್ಮೀಯವಾಗಿ ಬೆನ್ನು ತಟ್ಟಿದರು. ನನಗೆ ನಿಜಕ್ಕೂ ಅಚ್ಚರಿಯಾಯ್ತು. ದಾನ ಮಾಡದೇ ಪುಣ್ಯ ಸಿಕ್ಕಂತಾಯ್ತು. ಆಮೇಲೆ ಗೊತ್ತಾಗಿದ್ದೇನೆಂದರೆ ಶಕುಂತಲೆಯ ಸಾಕು ತಂದೆಯಾದ ಆ ಋಷಿಯ ಪಾತ್ರವನ್ನು ಯಾರಿಗೂ ಕೊಡದೇ ನನಗಾಗಿಯೇ ಬಾದರದಿನ್ನಿಯವರು ಮೀಸಲಿರಿಸಿದ್ದರು. ಅವರ ಪ್ರೀತಿ ಹಾಗೂ ನನ್ನ ಮೇಲಿಟ್ಟಿದ್ದ ನಂಬಿಕೆಗೆ ನಾನಿವತ್ತಿಗೂ ಅವರಿಗೆ ಋಣಿಯಾಗಿರುವೆ. ಏನು ಕೊಟ್ಟು ನಿರ್ದೇಶಕರನ್ನು ಬುಕ್ ಮಾಡಿಕೊಂಡಿರುವೆ, ನಿನಗಾಗಿಯೇ ಪಾತ್ರವನ್ನು ರಿಸರ್ವ ಮಾಡಿಸಿಕೊಂಡಿದ್ದೀಯಾ ಎಂದು ಎ.ಎಸ್.ಮೂರ್ತಿಗಳು ನನ್ನ ಕಾಲೆಳೆದರು. ಆದರೆ ಅಲ್ಲೇ ಇದ್ದ ಬಾದರದಿನ್ನಿ ಎಷ್ಟೇ ಆದರು ನಮ್ಮೂರು ಎನ್ನುವ ಸೆಳೆತ ಇದ್ದೇ ಇರುತ್ತಲ್ಲಾ ಮೂರ್ತಿಗಳೇ ಎಂದು ಉತ್ತರಿಸಿದರು.

ಯಾಕೆಂದರೆ ನಾವು ಗುರುಶಿಷ್ಯರಿಬ್ಬರೂ ಬಾಗಲಕೋಟೆ ಜಿಲ್ಲೆಯವರಾಗಿದ್ದೆವು.  ಬಾಗಲಕೋಟೆಯಿಂದಾ ನನ್ನೂರು ಹತ್ತು ಕಿಲೋಮಿಟರ್ ದೂರದಲ್ಲಿದ್ದರೆ, ಬಾದರದಿನ್ನಿಯವರ ಊರು ಅಚನೂರು ಹದಿನೈದು ಕಿ.ಮಿ. ದೂರದಲ್ಲಿದೆ. ಅವರು ಹುಟ್ಟಿದೂರನ್ನು ತೊರೆದು ಅದೆಷ್ಟೋ ವರ್ಷಗಳಾದರೂ ನೆರೆಹೊರೆಯ ಊರಿನವ ಎನ್ನುವ ಪ್ರೀತಿಗೆ ಮಹತ್ವ ಕೊಟ್ಟಿದ್ದರು. ಅದರಿಂದಾಗಿಯೇ ನನಗೆ ತಾಲಿಂಗೆ ಹೋಗದೇ ಪಾತ್ರ ಕೊಟ್ಟಿದ್ದರು. ನೆಲ ಹಾಗೂ ನುಡಿಯ ಸೆಳೆತ ಎಂದರೆ ಇದೇ ಇರಬೇಕು. ಪಾತ್ರವೇನೋ ಕೊಟ್ಟರು. ಆದರೆ ಮೂರೇ ದಿನಗಳಲ್ಲಿ ಹೇಗೆ ಪ್ರಮುಖ ಪಾತ್ರವೊಂದಕ್ಕೆ ಸಿದ್ದವಾಗುವುದು. ಸಹ ಪಾತ್ರಗಳೊಂದಿಗೆ ಹೊಂದಿಕೊಳ್ಳುವುದು. ಆಂತರಿಕ ಹಿಂಜರಿಕೆ ಹೆಚ್ಚಿತು. ಆದರೂ ಅದಕ್ಕೂ ಸಮಾಧಾನ ಹೇಳಿದ ಬಾದರದಿನ್ನಿಯವರು ನಿನ್ನ ಮೇಲೆ ನನಗೆ ನಂಬಿಕೆ ಇದೆ. ಅಳುಕದೇ ನಟನೆ ಮಾಡು ಎಂದು ದೈರ್ಯ ತುಂಬಿದರು.  ಅದು ಹೇಗೋ ಬಾದರದಿನ್ನಿಯವರ ಮೇಲೆ ಭಾರ ಹಾಕಿ ಸಿದ್ದತೆ ಶುರುಮಾಡಿಕೊಂಡೆ.


ಎಲ್ಲರಿಗೂ ಒಂದು ದಾರಿಯಾದರೆ ಯಡವಟ್ಟನಿಗೆ ಇನ್ನೊಂದು ದಾರಿ ಎಂಬಂತೆ ಇದ್ದವರು ಬಾದರದಿನ್ನಿ ಎಂಬುದು ಸಾಬೀತಾಗಲು ರವೀಂದ್ರ ಕಲಾಕ್ಷೇತ್ರಕ್ಕೆ ಬಂದಾಗ ಅರಿವಿಗೆ ಬಂತು.  ಎಲ್ಲರೂ ವೇದಿಕೆಯ ಮೇಲೆ ನಾಟಕ ಮಾಡಿ ಸಭಾಂಗಣದಲ್ಲಿ ಪ್ರೇಕ್ಷಕರನ್ನು ಕೂಡಿಸಿದರೆ ಈ ಪುಣ್ಯಾತ್ಮ ಕಲಾಕ್ಷೇತ್ರದ ವೇದಿಕೆಯಲ್ಲೇ ಪ್ರೇಕ್ಷಕರನ್ನು ಸುತ್ತಲೂ ಕೂಡಿಸುವ ವ್ಯವಸ್ಥೆ ಮಾಡಿದ್ದರು. ಕಲಾಕ್ಷೇತ್ರದ ಸೈಡ್ ವಿಂಗ್ಸಗಳನ್ನೆಲ್ಲಾ ತೆಗೆದಿರಿಸಿ ಬಟಾಬಯಲು ಮಾಡಿಸಿದ್ದರು. ವೃತ್ತಾಕಾರದಲ್ಲಿ ಗೆರೆ ಎಳೆದು ವೃತ್ತದ ಒಳಗೆ ಕಲಾವಿದರುಗಳು ಹಾಗೂ ವೃತ್ತದ ಹೊರಗೆ ಪ್ರೇಕ್ಷಕರು ಎಂದು ವಿಭಾಗೀಕರಿಸಿದರು. ಕಲಾಕ್ಷೇತ್ರದ ಬೆಳಕಿನ ವ್ಯವಸ್ಥೆಯನ್ನೇ ಬಳಸದೇ ಕೇವಲ ಪಂಜುಗಳ ದೀಪದಲ್ಲಿ ಇಡೀ ನಾಟಕವನ್ನು ಪ್ರದರ್ಶಿಸುವಂತೆ ಸಂಯೋಜನೆ ಮಾಡಿದ್ದರು. ಇದು ಆಧುನಿಕ ರಂಗಭೂಮಿಯಲ್ಲಿ ವಿಶಿಷ್ಟವಾದ ಪ್ರಯೋಗವಾಗಿತ್ತು. ನನಗೋ ಒಳಗೊಳಗೆ ದಿಗಿಲಾಗಿತ್ತು. ಎ.ಎಸ್.ಮೂರ್ತಿಯವರ ಜೊತೆ ಸೇರಿ ಕೆಲವಾರು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದರಿಂದ ವೃತ್ತ ರಂಗಭೂಮಿಯ ಅಭ್ಯಾಸವಾಗಿತ್ತು. ಆದರೂ ಏನಾಗುತ್ತೋ ಏನೋ ಎನ್ನುವ ಆತಂಕ ಕಾಡುತ್ತಿತ್ತು. ಅದೆಲ್ಲಿದ್ದರೋ ಏನೋ ಬಾದರದಿನ್ನಿ ಸಾಹೇಬರು ಇನ್ನೇನು ನಾಟಕ ಶುರುವಾಗುವ ಕೆಲವೇ ನಿಮಿಷಗಳ ಮುನ್ನ ಹತ್ತಿರ ಬಂದು ಬೆನ್ನು ತಟ್ಟಿದರು. ನಾನು ಗುರುಶಿಷ್ಯ ಪರಂಪರೆಯಂತೆ ಕಾಲು ಮುಟ್ಟಲು ಹೋದೆ. ಅದನ್ನು ವಿಫಲಗೊಳಿಸಿ ಅಪ್ಪಿಕೊಂಡರು.

ಅಂತೂ ಇಂತೂ ನಾಟಕ ಆರಂಭವಾಯಿತು. ಪ್ರತಿಯೊಬ್ಬರೂ ಚೆನ್ನಾಗಿ ಅಭಿನಯಿಸಿದರು ಯಾಕೆಂದರೆ ಅವರಿಗೆ ಬೇಕಾದಷ್ಟು ರಿಹರ್ಸಲ್ಸಗಳಾಗಿದ್ದವು. ಆದರೆ ನನಗಾಗಿರಲಿಲ್ಲ. ಅದ್ಯಾಕೋ ಅಭಿನಯಿಸುವಾಗ ನಂತರದ ಸಂಬಾಷಣೆ ಮೊದಲು ಹೇಳಿ ಮೊದಲಿನ ಮಾತು ಆಮೇಲೆ ಹೇಳಿಬಿಟ್ಟೆ. ಈ ವ್ಯತ್ಯಾಸ ನನಗೆ ಹಾಗೂ ನಿರ್ದೇಶಕರಿಗೆ ಬಿಟ್ಟು ಯಾರೆಂದರೆ ಯಾರಿಗೂ ಗೊತ್ತಾಗಲೇ ಇಲ್ಲ. ನಾಟಕದ ನಂತರ ಬಾದರದಿನ್ನಿ ದೂರ್ವಾಸಾವತಾರದಲ್ಲಿ ಬಂದು ಬೈಯುತ್ತಾರೇನೋ ಎನ್ನುವ ಆತಂಕ ನಿಜವಾಗಲಿಲ್ಲ. ಬೆನ್ನಿಗೊಂದು ಪುಟ್ಟ ಪೆಟ್ಟು ಕೊಟ್ಟ ನಿರ್ದೇಶಕರು ಪರವಾಗಿಲ್ಲಾ ಸೈಕಲ್ ಹೊಡೆದರೂ ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳುವ ಕಲೆಯಾದರೂ ಸಿದ್ದಿಸಿದೆಯಲ್ಲಾ.. ನಟ ಆಗದಿದ್ದರೂ ನಿರ್ದೇಶಕನಾದರೂ ಆಗುತ್ತೀ ಬಿಡು ಎಂದು ಭವಿಷ್ಯ ನುಡಿದರು. ಅವರು ಹೇಳಿದಂತೆಯೇ ಆಯ್ತು. ನಾನು ಮುಂದೆ ನಟನೆಯನ್ನು ಕಡಿಮೆ ಮಾಡಿ ನಿರ್ದೇಶನ ಹಾಗೂ ಬರವಣಿಗೆಯತ್ತ ಹೆಚ್ಚು ತೊಡಗಿಕೊಂಡೆ. ನಿರ್ದೇಶನಕ್ಕೆ ಇಳಿಯಿಲು ಬಾದರದಿನ್ನಿ ನನಗೆ ಸ್ಪೂರ್ತಿಯಾದರೆ ಬರವಣಿಗೆಗೆ ನಿಸ್ಸಂದೇಹವಾಗಿ ಎ.ಎಸ್.ಮೂರ್ತಿಗಳೇ ಪ್ರೇರಕರಾದರು.

ರಂಗಕರ್ಮಿ ಸಿಜಿಕೆಯವರು ತೀರಿಕೊಂಡಾಗ ಅವರ ಬದುಕು ಹಾಗೂ ಸಾಧನೆಗಳನ್ನು ಆಧರಿಸಿ ರಂಗಜಂಗಮನಿಗೆ ನುಡಿ ನಮನ ಎನ್ನುವ ಸಿಜಿಕೆ ಕುರಿತ ಲೇಖನಗಳ ಸಂಕಲನಗಳ ಪುಸ್ತಕವನ್ನು ಬರೆದಿದ್ದೆ. ರಂಗನಿರಂತರ ತಂಡವು ಅದನ್ನು ಪ್ರಕಟಿಸಿತ್ತು. ಅದರ ಒಂದು ಪ್ರತಿಯನ್ನು ಬಾದರದಿನ್ನಿಯವರಿದ್ದ ಚಿತ್ರದುರ್ಗಕ್ಕೂ ಕಳುಹಿಸಿ ಕೊಟ್ಟಿದ್ದೆ. ಒಂದು ವಾರದ ನಂತರ ಬೆಂಗಳೂರಿಗೆ ಬಂದಿದ್ದ ಬಾದರದಿನ್ನಿಯವರು ಅರ್ಜೆಂಟಾಗಿ ಕಲಾಕ್ಷೇತ್ರಕ್ಕೆ ಬಂದು ಬೇಟಿಯಾಗಲು ಹೇಳಿ ಕಳುಹಿಸಿದ್ದರು. ಯಾಕಿರಬಹುದು ಎಂದು ಕುತೂಹಲದಿಂದ ಹೋಗಿ ಬೇಟಿಯಾದರೆ ಅವರದೇ ಶೈಲಿಯಲ್ಲಿ  ತಬ್ಬಿಕೊಂಡು ಆಹಾ ಎಂತಾ ಪುಸ್ತಕ ಬರೆದಿದ್ದೀಯಾ? ಸಿಜಿಕೆ ಪುಸ್ತಕ ಓದಿ ಸಿಜಿಕೆ ಒಡನಾಟವೇ ನೆನಪಾದಂತಾಯ್ತು ಎಂದು ಆತ್ಮೀಯವಾಗಿ ಮಾತಾಡಿದರು. ಆಗ ಅವರಿಗೆ ಸಾಣೇಹಳ್ಳಿ ಶ್ರೀಮಠವು ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿತ್ತು.  ನಾನು ಗೆಳೆಯನಂತಿದ್ದ ಗುರುವನ್ನು ಅಭಿನಂದಿಸಿ ಎರಡು ಗಂಟೆಗಳ ಕಾಲ ಸಂಸ ಕಟ್ಟೆಯ ಮೇಲೆ ಕುಳಿತು ಸಂದರ್ಶನವನ್ನು ಮಾಡಿ ನನ್ನ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯಲ್ಲಿ ಮುದ್ರಿಸಿದೆ.

ಅದೊಂದು ದಿನ ಬಾದರದಿನ್ನಿಯವರಿಂದ ಪೋನ್ ಬಂದಿತು. ಸಾಣೇಹಳ್ಳಿ ರೆಪರ್ಟರಿಗೆ ಕಲಾವಿದರ ಕೊರತೆ ಇದೆ. ಯಾರಾದರೂ ಹತ್ತು ಜನ ಯುವಕರನ್ನು ಕಳುಹಿಸಿಕೊಡು ಎಂದು ವಿನಂತಿಪೂರ್ವಕ ಆದೇಶಿಸಿದರು. ಈಗಾಗಲೇ ಸಾಣೇಹಳ್ಳಿ ಸ್ವಾಮಿಗಳೂ ಪೋನ್ ಮಾಡಿದ್ದಾರೆ ಇನ್ನು ಮೂರು ದಿನಗಳಲ್ಲಿ  ಕಳುಹಿಸುವೆ ಎಂದು ಭರವಸೆ ಕೊಟ್ಟು ಅದನ್ನು ನೆರವೇರಿಸಿದೆ.  ಆಯ್ದ ಹತ್ತು  ಜನ ನನ್ನ ಸೃಷ್ಟಿ ಸಂಸ್ಥೆಯ ಹುಡುಗರನ್ನು ಪುಸಲಾಯಿಸಿ ಸಾಣೇಹಳ್ಳಿ ಶಿವಸಂಚಾರ ರೆಪರ್ಟರಿಗೆ ಕಳುಹಿಸಿಕೊಟ್ಟೆ. ಆಗ ನಮ್ಮ ಹುಡುಗರಿಗೆ ಸಮಯ ಸಿಕ್ಕಾಗಲೆಲ್ಲಾ ನೀವು ನನ್ನ ಶಿಷ್ಯನ ಶಿಷ್ಯರು. ನಾನು ನಿಮಗೆ ಗುರುವಿನ ಗುರು, ಹೀಗಾಗಿ ನಾಟಕ ಚೆನ್ನಾಗಿ ಮಾಡಿ ಎಂದು ಪ್ರೋತ್ಸಾಹಿಸುತ್ತಿದ್ದರಂತೆ. ಸಾಣೇಹಳ್ಳಿಯಲ್ಲಿ ಅವರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನಾನು ಹೋಗಿದ್ದಾಗ ಅತ್ಯಂತ ಭಾವುಕರಾಗಿದ್ದರು. ವೇದಿಕೆಯ ಮೇಲೆ ಚಿಕ್ಕಮಕ್ಕಳಂತೆ ಅತ್ತೇ ಬಿಟ್ಟರು. ಆ ನಂತರ ಯಾಕೆ ಕಣ್ಣೀರು ಹಾಕಿದಿರಿ ಎಂದು ಕೇಳಿದಾಗ ಅದ್ಯಾಕೋ ಭಾವಾತೀರೇಕ ತಡೆಯಲಾಗಲಿಲ್ಲ. ನನ್ನ ನಿಯಂತ್ರಣ ಮೀರಿ ಕಣ್ಣೀರು ಹರಿಯಿತು ಎಂದು ಸಮಜಾಯಿಸಿ ಕೊಟ್ಟರು. ಏನಾದರೂ ಮಾಡಿ ಬಿಡುವು ಮಾಡಿಕೊಂದು ಹತ್ತಾರು ದಿನ ಚಿತ್ರದುರ್ಗಕ್ಕೆ ಬಂದು ನನ್ನ ಬದುಕಿನ ರಂಗನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಬೇಕೆಂದು ಕೇಳಿಕೊಂಡರು. ಆಗಲಿ ಎಂದು ನಾನು ಹೇಳಿದೆನಾದರೂ ಮುಂದಿನ ತಿಂಗಳು ಹೋಗೋಣವೆಂದುಕೊಂಡು ಪೋಸ್ಟಪೋನ್ ಮಾಡುತ್ತಲೇ ಬಂದೆ. ಬೆಂಗಳೂರಿನ ಯಾಂತ್ರಿಕ ಬದುಕಿನಲ್ಲಿ ಸಮಯವೆನ್ನುವುದು ಸಿಗಲೇ ಇಲ್ಲ. ಗುರುಗೆಳೆಯ ಬಾದರದಿನ್ನಿಯವರ ಕೊನೆಯ ಆಸೆ ನೆರವೇರಿಸಲು ಆಗಲೇ ಇಲ್ಲ. ನಮ್ಮನ್ನಗಲಿ  ಹೋದ ಅವರನ್ನು ಇನ್ನೊಮ್ಮೆ ಬೇಟಿ ಮಾಡಿ ಮಾತಾಡಿಸಲಂತೂ ಸಾಧ್ಯವೇ ಇಲ್ಲ. ಗುರುವಿನ ಬಯಕೆ ಇಡೇರಿಸಲಾಗದ ನನಗೆ ಕೊನೆಯವರೆಗೂ ಈ ಗುರುದ್ರೋಹ ಕಾಡದೇ ಬಿಡುವುದಿಲ್ಲ.

ತೀರಿಕೊಂಡವರ ಬಗ್ಗೆ ನಕಾರಾತ್ಮಕವಾಗಿ ಮಾತಾಡಬಾರದು ಹಾಗೂ ಬರೆಯಬಾರದು ಎನ್ನುವ ಅಘೋಷಿತ ನಿಯಮವೊಂದಿದೆ. ಆದರೆ.. ಬಾದರದಿನ್ನಿಯಂತವರ ಸಾಧನೆ ನಮಗೆಲ್ಲಾ ಪ್ರೇರಣೆ ಆಗಿರುವಂತೆಯೇ ಅವರ ವ್ಯಯಕ್ತಿಕ ದೌರ್ಬಲ್ಯಗಳು ಪಾಠವಾಗಿದ್ದಂತೂ ಸುಳ್ಳಲ್ಲ. ಬಾದರದಿನ್ನಿಯವರು ಗ್ರಾಮೀಣ ಪ್ರದೇಶದಿಂದ ಬಂದ ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಸಂದೇಹವೇ ಇಲ್ಲ. ಅದೆಷ್ಟೋ ಯುವಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿ ಬೆಳೆಸಿದರು ಎನ್ನುವುದರಲ್ಲೂ ಹುಸಿಯಿಲ್ಲ. ಆಧುನಿಕ ಕನ್ನಡ ರಂಗಭೂಮಿಗೆ ಅವರ ಕೊಡುಗೆ ಅಪಾರವಾಗಿದೆ. ಆದರೆ.. 65 ವರ್ಷ ಸಾಯುವ ವಯಸ್ಸೇನಲ್ಲಾ. ವ್ಯಯಕ್ತಿಕ ಬದುಕಲ್ಲಿ  ವ್ಯಸನದಿಂದ ದೂರವಿದ್ದು ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದರೆ ಬಾದರದಿನ್ನಿ ಇನ್ನೂ ಕನಿಷ್ಟ ಹತ್ತಾರು ವರ್ಷವಾದರೂ ನಾಟಕಗಳನ್ನು ಕಟ್ಟುತ್ತಲೇ ಇರುತ್ತಿದ್ದರು. ಆದರೆ.. ಕುಡಿತ ಎನ್ನುವ ವ್ಯಸನ ಅವರನ್ನು ಆದಷ್ಟು ಬೇಗ ಬಲಿ ತೆಗೆದುಕೊಂಡಿತು. ಒಂದಲ್ಲಾ ಶಶಿ.. ಒಟ್ಟು ಏಳು ಜನ್ಮಕ್ಕಾಗುವಷ್ಟು ಕುಡಿದಿದ್ದೇನೆ. ಈಗ ನಾನು ಹೆಂಡಾ ಕುಡೀತಿಲ್ಲಾ.. ಹೆಂಡವೇ ನನ್ನನ್ನು ಕುಡೀತಿದೆ ಎಂದು ಅಂದು ಬಾದರದಿನ್ನಿಯವರು ವಿನೋದವಾಗಿ ಹೇಳಿದರೂ ಅದರ ಹಿಂದಿರುವ ವಿಶಾದ ನನ್ನ ಗ್ರಹಿಕೆಗೆ ಬಂದಿತ್ತು. ಹವ್ಯಾಸವಾಗಿ ಆರಂಭವಾಗಿದ್ದ ಕುಡಿತವೆನ್ನುವುದು ಸಾವಕಾಶವಾಗಿ ವ್ಯಸನವಾಗಿ ಬದಲಾಗಿ ಬಾದರದಿನ್ನಿಯಂತಹ ಮಹಾನ್ ಪ್ರತಿಭೆಯನ್ನು ಕಂತುಕಂತಲ್ಲಿ ಸತಾಯಿಸಿ ಅಕಾಲಿಕವಾಗಿ ಬಲಿತೆಗೆದುಕೊಂಡಿತು. ಕೊನೆಕಾಲದಲ್ಲಿ ವೈದ್ಯರ ಸಲಹೆಯ ಮೇರೆಗೆ ಕುಡತವನ್ನು ತ್ಯಜಿಸಿದರಾದರೂ ಅಷ್ಟರಲ್ಲಾಗಲೇ ರಿಕವರಿ ಮಾಡಿಕೊಳ್ಳುವ ಕಾಲ ಮಿಂಚಿಹೋಗಿತ್ತು.  ದೇಹದ ಅಂಗಾಗಗಳು ಅಸಹಕಾರ ಚಳುವಳಿಗಿಳಿದಿದ್ದವು. ಕೈಕಾಲುಗಳಿಗೆ ಲಕ್ವಾ ಹೊಡೆದು ಅರ್ಧ ದೇಹ ಸ್ವಾದೀನ ಕಳೆದುಕೊಂಡಿತ್ತು. ಮಾತುಗಳು ಅಸ್ಪಷ್ಟವಾದವು. ಕರುಳು ಕಮರಿಹೋಗಿತ್ತು. ಅಲ್ಸರ್ ಉಲ್ಬಣಗೊಂಡಿತ್ತು. ಆದರೂ ಅದು ಗಟ್ಟಿ ಜೀವ ಬೇಗ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಹೀಗೆಯೇ ಏಳೆಂಟು ವರ್ಷಗಳ ಕಾಲ ಬದುಕನ್ನು ಸವೆಸಿ ಸೋತ ಜೀವ ಸಾವಿನ ಜೊತೆಗೆ ನಿತ್ಯ ಸೆನೆಸಿತು. ಆದರೆ.. ಕೊನೆಗೂ ಸಾವೇ ಮೇಲುಗೈ ಸಾಧಿಸಿ ಬಾದರದಿನ್ನಿಯವರನ್ನು ಸೋಲಿಸಿ ಸೆಳೆದೊಯ್ಯಿತು. ಅಸಾಮಾನ್ಯ ಪ್ರತಿಭೆಯೊಂದು ಅಕಾಲದಲ್ಲಿ ಕಾಲವಶವಾಯಿತು.

ಅಶೋಕ ಬಾದರದಿನ್ನಿಯವರದು ಕಲಾಲೋಕದಲ್ಲಿ ಬಹುಮುಖಿ ಪ್ರತಿಭೆ.  ಇಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಇನ್ನೂರಕ್ಕೂ ಹೆಚ್ಚು ವಿಭಿನ್ನ ಬಗೆಯ ನಾಟಕವನ್ನು ನಿರ್ದೇಶಿಸಿದ್ದರು. ರಾಷ್ಟ್ರೀಯ ನಾಟಕ ಶಾಲೆಯ ಗೋಲ್ಡ್ ಮೆಡಲ್ ಪದವೀಧರರಾಗಿದ್ದ ಅಶೋಕ್ ಎನ್‌ಎಸ್‌ಡಿ ಪ್ರಣೀತ ಹಮ್ಮುಬಿಮ್ಮುಗಳಿಲ್ಲದ ಸರಳ ವ್ಯಕ್ತಿಯಾಗಿದ್ದರು. ಎನ್ ಎಸ್ ಡಿ ಯಿಂದ ರಂಗಶಿಕ್ಷಣ ಪಡೆದು ಬಂದು ಮೊದಲು ನಿರ್ದೇಶಿಸಿದ ನಾಟಕವೇ ಬಿ.ವಿ.ವೈಕುಂಟರಾಜುರವರ ಬರೆದ "ಸಂದರ್ಭ". ಆಗ ಕ್ರಿಯಾಶೀಲವಾಗಿದ್ದ ರಂಗಸಂಪದ ತಂಡವು ಈ ನಾಟಕವನ್ನು ಪ್ರಾಯೋಜಿಸಿತ್ತು. ಮೊದಲ ನಾಟಕದಲ್ಲೇ ತಮ್ಮ ಅಭಿನಯದ ಪ್ರತಿಭೆಯನ್ನು ಸಾಬೀತು ಪಡಿಸಿದ ಬಾದರದಿನ್ನಿಯವರು ಎರಡನೇ ನಾಟಕವಾದ ಹ್ಯಾಮ್ಲೆಟನ್ನು  ಬೆನಕ ತಂಡಕ್ಕೆ ವಿಶಿಷ್ಟವಾಗಿ ನಿರ್ದೇಶಿಸಿ ರಂಗಭೂಮಿಯಲ್ಲಿ ಹೊಸ ಸಂಚಲನವನ್ನುಂಟು ಮಾಡಿದರು. ನಾಟಕದಲ್ಲಿ ನಟರ ಪ್ರಾಮುಖ್ಯತೆಯನ್ನು ಕಡಿಮೆ ಗೊಳಿಸಿ ಕೇವಲ ರಂಗತಂತ್ರಗಳ ವೈಭವೀಕರಣ ಮಾಡುತ್ತಿರುವ ಹಲವಾರು ಎನ್‌ಎಸ್‌ಡಿ ನಿರ್ದೇಶಕರನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಎನ್‌ಎಸ್‌ಡಿ ತಂತ್ರಗಾರಿಕೆಗಳಿಗೆ ವ್ಯತಿರಿಕ್ತವಾಗಿ ಸರಳ ರೂಪದಲ್ಲಿ ನಟ ಪ್ರಧಾನವಾದ ನಾಟಕಗಳನ್ನು ಬಾದರದಿನ್ನಿಯವರು ಕಟ್ಟಿಕೊಡುತ್ತಿದ್ದರು. ಎ.ಎಸ್.ಮೂರ್ತಿಗಳು ಹಾಗೂ ಡಾ.ವಿಜಯಮ್ಮನವರು ಸೇರಿ ಅಶೋಕರವರ ನಿರ್ದೇಶನದ ಪ್ರತಿಭೆಯನ್ನು ಗುರುತಿಸಿ ಅಭಿನಯ ತರಂಗ ಎನ್ನುವ ಭಾನುವಾರದ ರಂಗಶಾಲೆಯಿನ್ನು ಬಾದರದಿನ್ನಿಯವರಿಗಾಗಿಯೇ ಹುಟ್ಟುಹಾಕಿದ್ದೊಂದು ಇತಿಹಾಸ. ಅಭಿನಯ ತರಂಗದ ಮೊದಲ ಪ್ರಾಂಶುಪಾಲರಾಗಿದ್ದ ಬಾದರದಿನ್ನಿಯವರು ಹಲವಾರು ನಾಟಕಗಳನ್ನು ರಂಗಶಾಲೆಗೆ ನಿರ್ದೇಶಿಸಿದರು. ಅದೆಷ್ಟೋ ವರ್ಷಗಳ ಕಾಲ ಬೆಂಗಳೂರಿನಲ್ಲಿ ಅಭಿನಯ ತರಂಗವೇ ಬಾದರದಿನ್ನಿಯವರ ಮನೆಯಾಗಿಬಿಟ್ಟಿತ್ತು. ತದನಂತರ ಸಾಣೇಹಳ್ಳಿ  ಶ್ರೀಮಠದ ಶಿವಸಂಚಾರ ಹಾಗೂ ಚಿತ್ರದುರ್ಗದ ಮುರಘಾಮಠದ ಜಮುರಾ ರೆಪರ್ಟರಿಗಳ ನಿರ್ದೇಶಕರಾಗಿ ಹಲವಾರು ನಾಟಕಗಳನ್ನು ನಿರ್ದೇಶಿಸಿ ನೂರಾರು ನಟರಿಗೆ ಅಭಿನಯದ ತರಬೇತಿಯನ್ನು ಕೊಟ್ಟಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಹಲವಾರು ರಂಗಶಿಬಿರಗಳ ನಿರ್ದೇಶಕರಾಗಿ ಸಾವಿರಾರು ಯುವಕರಿಗೆ ರಂಗತರಬೇತಿಯನ್ನು ಕೊಟ್ಟು ನಾಟಕಗಳನ್ನೂ ಮಾಡಿಸಿದ್ದಾರೆ. ರಂಗಭೂಮಿಯಲ್ಲಿ ಒಂದು ತಲೆಮಾರು ಸಿದ್ದವಾಗಿ ರಂಗಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಬಾದರದಿನ್ನಿಯವರ ಶ್ರಮ ಹಾಗೂ ಪ್ರಯತ್ನವೂ ದೊಡ್ಡದಿದೆ.  


ಕೇವಲ ರಂಗಭೂಮಿ ಮಾತ್ರವಲ್ಲ ಸಿನೆಮಾ ರಂಗದಲ್ಲೂ ಬಾದರದಿನ್ನಿಯವರು ತಮ್ಮ ವಿಶಿಷ್ಟ ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದರು. ಎಂಬತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಅಭಿನಯಿಸಿ ಪ್ರೇಕ್ಷಕರನ್ನು ನಕ್ಕು ನಗಿಸಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. ಗೀಜಗನ ಗೂಡು ಚಲನಚಿತ್ರದಿಂದ ಸಿನೆಮಾ ರಂಗದಲ್ಲಿ ಅಭಿನಯ ಆರಂಭಿಸಿದ ಬಾದರದಿನ್ನಿಯವರು ಮನಮೆಚ್ಚಿದ ಹುಡುಗಿ, ಅಂಜದ ಗಂಡು, ಸಂಭವಾಮಿ ಯುಗೇ ಯುಗೇ, ತಾಳಿಗಾಗಿ, ಚುಕ್ಕಿ ಚಂದ್ರಮ, ಕಿಲಾಡಿ ತಾತಾ, ಬೂತಯ್ಯನ ಮಕ್ಕಳು, ಏಕಲವ್ಯ, ಒಂದು ಮುತ್ತಿನ ಕಥೆ, ಆಸ್ಪೋಟ, ನವತಾರೆ, ಧರ್ಮಪತ್ನಿ .. ಹೀಗೆ ಅನೇಕ ಸಿನೆಮಾಗಳಲ್ಲಿ ತಮ್ಮ ಅಭಿನಯ ಪ್ರತಿಭೆಯಿಂದಾ ಬಾದರದಿನ್ನಿ ಜನಮನ್ನನೆಗೆ ಪಾತ್ರವಾದರು. ಕೆಲವು ಸಿನೆಮಾಗಳ ಯಶಸ್ಸಿಗೆ ಬಾದರದಿನ್ನಿಯವರು ಉಣಬಡಿಸಿದ ಹಾಸ್ಯ ದೃಶ್ಯವೇ ಕಾರಣವಾಗಿದ್ದನ್ನು ಅಲ್ಲಗಳೆಯಲಾಗದು.  ರಾಜಕುಮಾರರ ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಸಿನೆಮಾಗಳಲ್ಲಿ ಖಾಯಂ ಹಾಸ್ಯ ನಟನಾಗಿದ್ದರು. ಆದರೆ ಅದೇನೋ ಅವಘಡ ಮಾಡಿಕೊಂಡು ಆ ಪ್ರೊಡಕ್ಷನ್ ಹೌಸನಿಂದ ದೂರಾದರು. ಅವರು ಕೊಟ್ಟ ಕೊನೆಗೆ ಅಭಿನಯಿಸಿದ ಚಲನಚಿತ್ರ ಬಿಡಲಾರೆ ಎಂದೂ ನಿನ್ನ” ವನ್ನು ನಿರ್ದೇಶಿಸಿದ್ದು ಅಶೋಕರವರ ಸಹೋದರ ಉಮೇಶ್ ಬಾದರದಿನ್ನಿಯವರು. ಮನಮೆಚ್ಚಿದ ಹುಡುಗಿ ಸಿನೆಮಾದ ಅಭಿನಯಕ್ಕಾಗಿ ರಾಜ್ಯಸರಕಾರದ ಅತ್ಯುತ್ತಮ ಹಾಸ್ಯಕಲಾವಿದ ಪ್ರಶಸ್ತಿಯನ್ನು ಪಡೆದರು. ನಲವತ್ತಕ್ಕೂ ಹೆಚ್ಚು ಟಿವಿ ದಾರಾವಾಹಿಗಳಲ್ಲೂ ಅಭಿನಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಗೌರಿಶಂಕರ ಎನ್ನುವ ಸಿನೆಮಾವನ್ನೂ ಸಹ ಬಾದರದಿನ್ನಿಯವರು ನಿರ್ದೇಶಿಸಿದ್ದರು. ಚಲನಚಿತ್ರ ರಂಗದಲ್ಲಿ ಇಷ್ಟೆಲ್ಲಾ ತೊಡಗಿಸಿಕೊಂಡಿದ್ದರೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತಿಮ ದಿನಗಳಲ್ಲಿ ಸಿನೆಮಾ ರಂಗ ಸಹಾಯ ಮಾಡುವುದಿರಲಿ ಯಾರೂ ಬಂದು ಸಾಂತ್ವನವನ್ನೂ ಹೇಳಲಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.

ಹೀಗೆ.. ರಂಗಭೂಮಿ ಹಾಗೂ ಚಲನಚಿತ್ರ ಈ ಎರಡೂ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಶೋಕ ಬಾದರದಿನ್ನಿ ಎನ್ನುವ ಪ್ರತಿಭೆಯನ್ನು ಜನರು ಗುರುತಿಸಿ ಗೌರವಿಸಿದಷ್ಟು ಸರಕಾರಗಳು ಗೌರವಿಸಿ ಸನ್ಮಾನಿಸಲಿಲ್ಲ. ಇಲ್ಲಿವರೆಗೆ 1990 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೊಂದು ಮಾತ್ರ ದೊರಕಿದ್ದು ಇವರ ಸೇವೆಯನ್ನು ಗುರುತಿಸಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಗೌರವಿಸಲಾಗಿದೆ. ಮಠಮಾನ್ಯ ಸಂಘ ಸಂಸ್ಥೆಗಳು ಬಾದರದಿನ್ನಿಯವರ ಸಾಧನೆಯನ್ನು ಗೌರವಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. 2008 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ. ಆದರೆ.. ಬಾದರದಿನ್ನಿಯವರ ಪ್ರತಿಭೆ ಹಾಗೂ ಸಾಧನೆಗೆ ಹೋಲಿಸಿದರೆ ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಅವರನ್ನು ನಿರ್ಲಕ್ಷಿಸಿದೆ. ಅದಕ್ಕೆ ಬಹುಮುಖ್ಯ ಕಾರಣ ಬಾದರದಿನ್ನಿ ಯಾವುದೇ ಲಾಬಿ  ಮಾಡಲು ಸಾಧ್ಯವಾಗದೇ ಹೋಗಿದ್ದು ಹಾಗೂ ತಮ್ಮ ನೇರವಾದ ಮಾತುಗಳಿಂದ ಎಲ್ಲವನ್ನೂ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದುದು.  ಬಾದರದಿನ್ನಿಯವರ ಸಾಧನೆಯನ್ನು ಗುರುತಿಸಿ ನಾಟಕ ಅಕಾಡೆಮಿಯ ಅದ್ಯಕ್ಷರನ್ನಾಗಿಸಬಹುದಾಗಿತ್ತು. ಮಾಡಲಿಲ್ಲ. ರಂಗಾಯಣಕ್ಕಾದರೂ ನಿರ್ದೇಶಕರನ್ನಾಗಿ ನಿಯಮಿಸಬೇಕಾಗಿತ್ತು.  ಅದೂ ಆಗಲಿಲ್ಲ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು ಸಿಗಲಿಲ್ಲ. ಆದರೂ ಎಂದೂ ಯಾವುದಕ್ಕೂ ಬಾದರದಿನ್ನಿಯವರು ಗೊಣಗಲಿಲ್ಲ. ತಾನು ಮಾಡಿದ ರಂಗಕಾರ್ಯಕ್ಕೆ ಬದಲಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸಲಿಲ್ಲ. ತನ್ನಿಚ್ಚೆ ಬಂದಂತೆ ಬದುಕಿ, ತಾನೊಲೆದಂತೆ ಹಾಡಿ ಕೊನೆಗೊಮ್ಮೆ ಮೌನವಾದರು. ಆಧುನಿಕ ರಂಗಭೂಮಿಯಲ್ಲಿ ಬಾದರದಿನ್ನಿ ಯುಗವೊಂದು ಸಮಾಪ್ತಿಯಾಯ್ತು. ಇನ್ನು ಮೇಲೆ ಅಶೋಕರಂತವರ ನೆನಪೊಂದೇ ನಮಗೆ ಸ್ಥಿರಸ್ಥಾಯಿಯಾಯ್ತು. ಬಾದರದಿನ್ನಿ ಎನ್ನುವ ದೈತ್ಯ ರಂಗಸಾಧಕನಿಗೆ ರಂಗನಮನಗಳು.

    -ಶಶಿಕಾಂತ ಯಡಹಳ್ಳಿ






ಮಂಗಳವಾರ, ನವೆಂಬರ್ 22, 2016

ವಾರ್ಡಿಗೊಂದು ರಂಗಮಂದಿರ ಇದ್ದರೆಷ್ಟು ಸುಂದರ :

                                 
                      
ಯಾವತ್ತೂ ಪೋನ್ ಮಾಡದ ಶ್ರೀಮಾನ್ ಕಪ್ಪಣ್ಣರವರು ಇದ್ದಕ್ಕಿದ್ದಂತೆ ಪೋನ್ ಮಾಡಿದ್ದರು. ಯಾಕೆಂದು ಕೇಳುವಷ್ಟರಲ್ಲಿ ವಾರ್ಡಿಗೊಂದು ರಂಗಮಂದಿರ ಬೇಕೆಂಬ ನಿಮ್ಮ ಬೇಡಿಕೆಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸೋಣ. ಅದರ ವಿವರಗಳನ್ನು ಪ್ರೆಸ್‌ನೋಟ್ ಮಾದರಿಯಲ್ಲಿ ಬರೆದು ಮೇಲ್ ಮಾಡಿ. ನವೆಂಬರ್ 23 ರಂದು ವೃತ್ತಿ ನಾಟಕ ಕಂಪನಿಗಳ ಮಾಲೀಕರು ಗುಬ್ಬಿ ವೀರಣ್ಣ ರಂಗಮಂದಿರದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆಗ ನಮ್ಮ ಡಿಮಾಂಡಗಳನ್ನೂ ಇಟ್ಟು ಸರಕಾರಕ್ಕೆ ಒತ್ತಾಯಿಸೋಣ. ಎಂದರು ಕಪ್ಪಣ್ಣ. ರಂಗಭೂಮಿಗೆ ಒಳಿತಾಗುವ ಕೆಲಸವನ್ನು ಯಾರು ಮಾಡಿದರೇನು?. ಹಲವಾರು ಪ್ರಮುಖ ಅಂಶಗಳನ್ನೆಲ್ಲಾ ಸೇರಿಸಿ ಪ್ರೆಸ್‌ನೋಟ್ ಸಿದ್ದಗೊಳಿಸಿ ಕಪ್ಪಣ್ಣನವರಿಗೆ ಮೇಲ್ ಮಾಡಿ ಯೋಚಿಸತೊಡಗಿದೆ.

ಎಂಟು ತಿಂಗಳ ಹಿಂದೆ ಮಾಲತೇಶ್ ಬಡಿಗೇರರು ಹೊಸದಾಗಿ ಕಟ್ಟಿಸಿದ ಮನೆಯಿರುವ ಮೈಸೂರು ರಸ್ತೆಯ ಬಡಾವಣೆಯಲ್ಲಿರುವ ಗಣೇಶ ದೇವಸ್ಥಾನದ ಪ್ರಾಂಗಣದಲ್ಲಿ ಸಾಣೇಹಳ್ಳಿ ಶಿವಸಂಚಾರದ ನಾಟಕಗಳ ಉತ್ಸವವನ್ನು ಹಮ್ಮಿಕೊಂಡಿದ್ದರು. ಆ ಉತ್ಸವಕ್ಕೆ ಅತಿಥಿಯಾಗಿ ಆಹ್ವಾನಿತನಾಗಿ ಹೋಗಿದ್ದ ನಾನು ಸಭೆಯನ್ನುದ್ದೇಶಿಸಿ ಬಡಾವಣೆ ರಂಗಭೂಮಿಯ ಅಗತ್ಯತೆಯನ್ನು ನನ್ನ ಭಾಷಣದುದ್ದಕ್ಕೂ ಪ್ರತಿಪಾದಿಸಿದೆ. ಆಗ ವೇದಿಕೆಯ ಅಧ್ಯಕ್ಷತೆಯನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾದ್ಯ ಸ್ವಾಮಿಗಳು ವಹಿಸಿಕೊಂಡಿದ್ದರು. ಕಪ್ಪಣ್ಣನವರೂ ಸಹ ಅತಿಥಿಯಾಗಿ ವೇದಿಕೆಯಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದರು. ನನ್ನ ಮಾತುಗಳು ಮುಗಿದಾದ ಮೇಲೆ ಕಪ್ಪಣ್ಣರವರು ನಿಮ್ಮ ಆಲೋಚನೆ ನಿಜಕ್ಕೂ ಉತ್ತಮವಾಗಿದೆ. ಬಡಾವಣೆಗೊಂದು ರಂಗಮಂದಿರ ಇರಲೇಬೇಕಿದೆ. ನಾವೆಲ್ಲಾ ಕೂತೊಮ್ಮೆ ಈ ಕುರಿತು ಚರ್ಚಿಸಿ ಸರಕಾರವನ್ನು ಒತ್ತಾಯಿಸೋಣವೆಂದು ಹೇಳಿ ಕೈಕುಲುಕಿದರು.

ಅವತ್ತಿನ ನನ್ನ ಭಾಷಣದ ಸಾರವನ್ನು ಲೇಖನ ರೂಪದಲ್ಲಿ ಬರೆದು ನಾನು ಮರೆತೇ ಬಿಟ್ಟಿದ್ದೆ. ಆದರೆ ಸಾಂಸ್ಕೃತಿಕ ರಾಜಕಾರಣಿಯಾದ ಕಪ್ಪಣ್ಣ ಅದನ್ನು ಮರೆಯದೇ ತಲೆಯಲ್ಲಿಟ್ಟುಕೊಂಡೇ ತಿರುಗುತ್ತಿರುವಂತಿತ್ತು. ಮೊದಲಿನಿಂದಲೂ ಕಪ್ಪಣ್ಣನವರ ಬಗ್ಗೆ ವ್ಯಯಕ್ತಿಕವಾಗಿ ನನಗೆ ಯಾವ ರಾಗದ್ವೇಷಗಳಿಲ್ಲದಿದ್ದರೂ ರಂಗಭೂಮಿಯ ಬೆಳವಣಿಗೆಗೆ ಅವರ ನೀತಿ ನಿರ್ಧಾರಗಳು ಮಾರಕ ಎಣಿಸಿದಾಗಲೆಲ್ಲಾ ಪತ್ರಿಕೆಗಳಲ್ಲಿ ಬರೆದು ನನ್ನ ಪ್ರತಿಭಟನೆಯನ್ನು ಸಲ್ಲಿಸಿ ತೀವ್ರವಾಗಿ  ವಿರೋಧಿಸಿದ್ದೇನೆ. ಆದರೆ ನನ್ನೆಲ್ಲಾ ಟೀಕೆಗಳನ್ನೂ ಸಹಿಸಿಕೊಂಡು ಕಪ್ಪಣ್ಣ ಸಾಹೇಬರು ರಂಗಭೂಮಿಗಾಗಿ ಪೋನ್ ಮಾಡಿ ಸಲಹೆ ಸಹಕಾರ ಕೇಳಿದಾಗ ಇಲ್ಲವೆಂದು ಹೇಳಲು ಆಗಲೇ ಇಲ್ಲ. ಸತ್ಯವಾಗಿ ಹೇಳಬೇಕೆಂದರೆ ನನಗೆ ಯಾವ ವ್ಯಕ್ತಿಗಳ ಮೇಲೆಯೂ ವ್ಯಯಕ್ತಿಕ ದ್ವೇಷಾಸೂಯೆಗಳಿಲ್ಲ. ರಂಗಭೂಮಿಯ ಒಳಿತಿಗೆ ಯಾರೇ ಪ್ರಯತ್ನಿಸಿದರೂ ಅವರಿಗೆ ಸಹಕಾರ ಕೊಡಬೇಕಾದದ್ದು ನನ್ನ ಕರ್ತವ್ಯವೆಂದು ಭಾವಿಸಿರುವೆ. ಕೆಲವೊಮ್ಮೆ ನಿರ್ಲಿಪ್ತ ಸಂತರಿಗಿಂತಾ ಕ್ರಿಯಾಶೀಲವಾಗಿ ಕೆಲಸಮಾಡುವ ಸೈತಾನರೇ ವಾಸಿ ಎನ್ನುವಂತಾ ವ್ಯವಸ್ಥೆ ನಮ್ಮದಾಗಿದೆ. ಹೀಗಾಗಿ ಕಪ್ಪಣ್ಣ ಏನೇ ಆಗಿರಲಿ.. ಏನೇ ಮಾಡಿರಲಿ. ಅವರ ನೇತೃತ್ವದಲ್ಲಿಯಾದರೂ ಬೆಂಗಳೂರಿನ ಬಡಾವಣೆಗಳಲ್ಲಿ ರಂಗಮಂದಿರಗಳು ನಿರ್ಮಾಣವಾಗುವಂತಿದ್ದರೆ ಅದಕ್ಕೆ ನನ್ನ ಬೆಂಬಲವಿದೆ. ಇವತ್ತೂ ಸಹ ಕಪ್ಪಣ್ಣನಂತಹ ಯಾವುದೇ ಸಾಂಸ್ಕೃತಿಕ ರಾಜಕಾರಣಿ ಸ್ವಾರ್ಥವನ್ನು ಪಕ್ಕಕ್ಕಿಟ್ಟು ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ದುಡಿದರೆ ಅವರನ್ನು ಸಾಂದರ್ಭಿಕವಾಗಿ ಬೆಂಬಲಿಸುವುದಕ್ಕೆ ಹಾಗೂ ಎಲ್ಲಾ ಸಹಕಾರವನ್ನು ಕೊಡಲಿಕ್ಕೆ ನಾನು ಬದ್ದನಾಗಿರುವೆ. ರಂಗಭೂಮಿ ಯಾರ‍್ಯಾರಿಗೆ ಒಂದು ಐಡೆಂಟಿಟಿ ಎನ್ನುವುದನ್ನು ಕೊಟ್ಟಿದೆಯೋ ಅವರೆಲ್ಲಾ ರಂಗಭೂಮಿಯ ಹಿತಾಸಕ್ತಿಗಾಗಿ ತುಡಿದರೆ ಸಾಂಸ್ಕೃತಿಕ ಕ್ಷೇತ್ರ ಸಕಾರಾತ್ಮವಾಗಿ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ.

ಬಡಾವಣಾ ರಂಗಭೂಮಿಯ ಬಯಕೆ ನನ್ನನ್ನು ಕಾಡಿದ್ದು ಎಂಟು ವರ್ಷಗಳ ಹಿಂದೆ. ಆಗ ಮಲ್ಲಿಕಾರ್ಜುನ ಮಹಾಮನೆಯೊಂದಿಗೆ ಸೇರಿ ರಂಗ ಜಾಗೃತಿ ವೇದಿಕೆ ಯನ್ನು ಕಟ್ಟಿಕೊಂಡಿದ್ದೆವು. ಸಣ್ಣ ಕಥೆಯಾಧಾರಿತ ಹತ್ತು ನಾಟಕಗಳನ್ನು  ಹತ್ತು ತಂಡಗಳಿಂದ ಸಿದ್ದಗೊಳಿಸಿ ಹತ್ತು ಬಡವಾಣೆಗಳಲ್ಲಿ  ರೊಟೇಶನ್ ರೀತಿಯಲ್ಲಿ ಪ್ರದರ್ಶಿಸುವ ಯೋಜನೆಯನ್ನು  ಹಾಕಿಕೊಂಡಿದ್ದೆವು. ಹಲವಾರು ಪ್ರಾಥಮಿಕ ಸಭೆಗಳನ್ನೂ ಮಾಡಲಾಯಿತು. ಆದರೆ ಮಹಾಮನೆಯ ಅರಾಜಕ ಮನೋಭಾವದಿಂದಾಗಿ ಇಡೀ ಯೋಜನೆ ಹಾಳಾಗಿ ಹೋಯಿತು. ರಂಗಜಾಗ್ರತಿ ವೇದಿಕೆಯೂ ನೇಪತ್ಯ ಸೇರಿತು.  ಆದರೆ ಬಡಾವಣಾ ರಂಗಭೂಮಿಯ ಕನಸಂತೂ ಮಾಸಲೇ ಇಲ್ಲಾ.

ತದನಂತರ ಗೆಳೆಯರ ಬಳಗದ ಶ್ರೀನಿವಾಸ ಜೊತೆಗೆ ಸೇರಿ ರಂಗಭೂಮಿ ಹಿತರಕ್ಷಣಾ ವೇದಿಕೆಯನ್ನು ಕಟ್ಟಿಕೊಂಡು ರಂಗತಂಡಗಳ ಒಕ್ಕೂಟವೊಂದನ್ನು ಕಟ್ಟಲು ಪ್ರಯತ್ನಿಸಿದೆ. ಹಲವಾರು ಸಭೆಗಳು, ಸೆಮಿನಾರಗಳು ಮತ್ತು ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಲಾಯಿತು. ಕಲಾಕ್ಷೇತ್ರವನ್ನು ಬಿಟ್ಟು ಬೆಂಗಳೂರಿನ ಬಡಾವಣೆಗಳಲ್ಲಿ ನಾಟಕೋತ್ಸವವನ್ನು ಮಾಡಲು ಶ್ರೀನಿವಾಸ್ ಮುಂದಾದರು. ಶ್ರೀನಗರ ಪಿಇಎಸ್ ಕಾಲೇಜಲ್ಲಿ ಹಾಗೂ ಗಿರಿನಗರದ ಬಿಬಿಎಂಪಿ ಪಾರ್ಕಗಳಲ್ಲಿ ನಾಟಕೋತ್ಸವಗಳು ಆಯೋಜನೆಗೊಂಡವು. ಬಡಾವಣಾ ರಂಗಭೂಮಿಯ ಕುರಿತ ಚಟುವಟಿಕೆಗಳು ಇನ್ನೇನು ಗರಿಗೆದರಬೇಕು ಎನ್ನುವಂತಹ ಸಂದರ್ಭದಲ್ಲಿ ಮುಖ್ಯ ಸಂಘಟಕ ಶ್ರೀನಿವಾಸ್ ರೈಲು ದುರಂತದಲ್ಲಿ ಅಸುನೀಗಿದರು. ಬಡಾವಣಾ ರಂಗಭೂಮಿ ಕಟ್ಟುವ ನನ್ನ ಎರಡನೇ ಪ್ರಯತ್ನವೂ ಕನಸಾಗಿಯೇ ಉಳಿಯಿತು.  ಆಗಲೇ ಬಡಾವಣೆಗೊಂದು ರಂಗಮಂದಿರದ ಅಗತ್ಯತೆಯ ಕುರಿತು ಲೇಖನವನ್ನು ಬರೆದು ನನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ತದನಂತರ ಬೆಂಗಳೂರಿನಲ್ಲಿ ನಡೆದ ಕೆಲವಾರು ಸೆಮಿನಾರುಗಳಲ್ಲಿ  ಭಾಗವಹಿಸಿ  ಬಡಾವಣಾ ರಂಗಭೂಮಿಯ ಅಗತ್ಯತೆಯ ಬಗ್ಗೆ ನನ್ನ ವಾದವನ್ನು ಮಂಡಿಸುತ್ತಲೇ ಬಂದಿರುವೆ. ಆದರೆ.. ನನ್ನ ಆಸೆ ಕೇವಲ ಬರವಣಿಗೆ ಹಾಗೂ ಭಾಷಣಗಳಲ್ಲೇ ಉಳಿಯಿತು. ಅನುಷ್ಠಾನಕ್ಕೆ ಬರಲೇ ಇಲ್ಲ.

ಆದರೆ.. ಈಗ ಕಪ್ಪಣ್ಣನಂತಹ ದೈತ್ಯ ಸಂಘಟಕರೊಬ್ಬರು ಬಡಾವಣಾ ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ  ಪ್ರಯತ್ನವನ್ನು ಮಾಡಲು ಮುಂದೆ ಬಂದಾಗ ಅಂತವರಿಗೆ ಸಹಕಾರ ಕೊಡುವುದರಲ್ಲಿ  ತಪ್ಪೇನಿಲ್ಲವೆನಿಸಿತು. ಯಾಕೆಂದರೆ ಇದರಲ್ಲಿ  ರಂಗಭೂಮಿಯ ಹಿತಾಸಕ್ತಿಯೇ ಪ್ರಮುಖವಾದದ್ದಾಗಿದೆ. ಹೀಗಾಗಿ ವಾರ್ಡಿಗೊಂದು ರಂಗಮಂದಿರ ಬೇಕೆಂಬ ನನ್ನ ಬಯಕೆಗೆ ಪೂರಕವಾಗಿ ಇಲ್ಲಿವರೆಗೂ ಯಾರೂ ಸ್ಪಂದಿಸದೇ ಇರುವಂತಹ ಸಂದರ್ಭದಲ್ಲಿ ಕಪ್ಪಣ್ಣನವರಾದರೂ ಮುಂದೆ ಬಂದಿದ್ದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಏನಾದರೂ ಆಗಲಿ ಕೇವಲ ಬರಹ ಭಾಷಣಗಳಿಂದ ನಿರೀಕ್ಷಿತ ಫಲಿತಾಂಶವಂತೂ ಸಾಧ್ಯವಿಲ್ಲ. ಇಂತವುಗಳೆಲ್ಲಾ ಕೇವಲ ಪ್ರೇರಣೆ ನೀಡಬಲ್ಲವು. ಇಂತಹ ಪ್ರೇರಣೆಗಳು ಯಾರದೋ ಮೆದುಳನ್ನು ಹೊಕ್ಕು ಅನುಷ್ಟಾನಗೊಳಿಸುವಲ್ಲಿ ಕಿಂಚಿತ್ ಪ್ರಯೋಜನಕ್ಕೆ ಬಂದರೂ ಬರಹ ಭಾಷಣಗಳು ಸಾರ್ಥಕವಾಗುತ್ತವೆ. ಹೀಗಾಗಿ ರಂಗಭೂಮಿಯ ಹಿತದೃಷ್ಟಿಯಿಂದಾ ಕಪ್ಪಣ್ಣನವರ ಪ್ರಯತ್ನ ಫಲಕಾರಿಯಾಗಲಿ ಎನ್ನುವುದು ನನ್ನ ಸದಾಶಯವಾಗಿದೆ. ಇದು ಕೇವಲ ಬರಹ ಭಾಷಣಗಳಿಂದ ಇಲ್ಲವೇ ಕಪ್ಪಣ್ಣನಂತಹ ಒಬ್ಬಿಬ್ಬರ ಪ್ರಯತ್ನದಿಂದ ಆಗುವ ಕೆಲಸವಲ್ಲ. ಪಂಚೇದ್ರಿಯಗಳ ಸಂವೇದನೆಯನ್ನು ಕಳೆದುಕೊಂಡ ಸರಕಾರವನ್ನು ಎಚ್ಚರಿಸಿ.. ಆಳುವ ವರ್ಗಗಳ ಮೇಲೆ ನಿರಂತರ ಒತ್ತಡ ತಂದು ವಾರ್ಡಿಗೊಂದು ರಂಗಮಂದಿರಗಳ ಸ್ಥಾಪನೆಗೆ ಇಡೀ ರಂಗಭೂಮಿ ಸಂಘಟಿತವಾಗಿ ಪ್ರಯತ್ನಿಸಬೇಕಿದೆ.  ಈ ನಿಟ್ಟಿನಲ್ಲಿ ನವೆಂಬರ್ 22 ರಂದು ನಾನು ಸಿದ್ದಪಡಿಸಿದ ಪ್ರೆಸ್‌ನೋಟ್ ವಿಷಯ ಈ ರೀತಿಯಲ್ಲಿದೆ. 

ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ರಂಗಕರ್ಮಿಗಳ ಬೇಡಿಕೆ :

ಬೆಳೆಯುತ್ತಿರುವ ಬೆಂಗಳೂರಿನ ವಿಸ್ತಾರ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ರಂಗಮಂದಿರಗಳ ಸಂಖ್ಯೆ ಹೆಚ್ಚಾಗುವ ಅಗತ್ಯವಿದ್ದು ಕನಿಷ್ಟ ವಾರ್ಡಿಗೊಂದಾದರೂ ಪುಟ್ಟದಾದ ಸುಸಜ್ಜಿತ ರಂಗಮಂದಿರಗಳನ್ನು ಸರಕಾರ ನಿರ್ಮಿಸುವ ಅಗತ್ಯವಿದೆ..

ಕನ್ನಡ ಭಾಷಿಕ ನೆಲೆಗಳು ಏಕೀಕರಣಗೊಂಡು ಕರ್ನಾಟಕ ರಾಜ್ಯವಾಗಿ  ಅರವತ್ತು ವರ್ಷಗಳು ತುಂಬಿದ ಸವಿ ನೆನಪಿಗಾಗಿ ಬೆಂಗಳೂರಿನ 60 ವಾರ್ಡಗಳಲ್ಲಿ ಸುಸಜ್ಜಿತ ರಂಗಮಂದಿರಗಳನ್ನಾದರೂ ನಿರ್ಮಿಸುವ ಅಗತ್ಯವಿದ್ದು ಸರಕಾರ ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮಕೈಗೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡಲು ಹಾಗೂ ಸಾಮಾಜಿಕ ಸ್ವಾಸ್ತ್ಯವನ್ನು ಹೆಚ್ಚಿಸಲು ಹೆಚ್ಚೆಚ್ಚು ರಂಗಮಂದಿರಗಳನ್ನು ನಿರ್ಮಿಸಿ ಅದರ ಮೇಲ್ವಿಚಾರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿಕೊಟ್ಟು ರಂಗಮಂದಿರಗಳ ನಿರ್ವಹಣೆಯನ್ನು ಅನುಭವಿ ಪೂರ್ಣಾವಧಿ ರಂಗಕರ್ಮಿಗಳಿಗೆ ವಹಿಸಿಕೊಟ್ಟರೆ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆದುಕೊಂಡು ಹೋಗಲು ಅನುಕೂಲವಾಗುತ್ತದೆ. (ಉದಾಹರಣೆಗೆ. ಕೆ.ಹೆಚ್.ಕಲಾಸೌಧ)

ಈಗಾಗಲೇ ಅಸ್ತಿತ್ವದಲ್ಲಿದ್ದೂ ನಿಷ್ಕ್ರೀಯವಾಗಿರುವ ರಂಗಮಂದಿರಗಳನ್ನು ಈ ಕೂಡಲೇ ಅಗತ್ಯ ರಿಪೇರಿ ಮಾಡಿ ಸಂಸ್ಕೃತಿ ಇಲಾಖೆಗೆ ವಹಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ. ಮಾಸ್ತಿ ಅಯ್ಯಂಗಾರ ರಂಗಮಂದಿರವನ್ನು ಪುನರುಜ್ಜೀವನಗೊಳಿಸಿ ರಂಗ ಚಟುವಟಿಕೆಗಳಿಗೆ ಮೀಸಲಿಡಬೇಕು ಹಾಗೂ ಮೂರು ವರ್ಷಗಳಿಂದ ಮುಚ್ಚಿರುವ ಗುಬ್ಬಿ ವೀರಣ್ಣ ರಂಗಮಂದಿರವನ್ನು ಅಗತ್ಯ ನಿರ್ವಹನೆಯೊಂದಿಗೆ ಸಿದ್ದಗೊಳಿಸಿ ವೃತಿ ಕಂಪನಿ ನಾಟಕಗಳ ಪ್ರದರ್ಶನಕ್ಕೆ ನೀಡಬೇಕೆಂಬ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

ಬೆಂಗಳೂರಿನಲ್ಲಿರುವ ಎಲ್ಲಾ ಸರಕಾರಿ ಸಾಮ್ಯದ ಹಾಗೂ ಬಿಬಿಎಂಪಿ ಆಧೀನದಲ್ಲಿರುವ ಎಲ್ಲಾ ರಂಗಮಂದಿರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನಕ್ಕೊಳಪಡಿಸಿ ಈಗ ಕಲಾಕ್ಷೇತ್ರಕ್ಕೆ ನಿಗಧಿಪಡಿಸಿದಂತೆ ಏಕರೂಪದ ಬಾಡಿಗೆಯನ್ನು ಅಂತಿಮಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ದೊಡ್ಡ ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆ ಕಷ್ಟಕರವಾಗಿದ್ದರಿಂದ ಮುನ್ನೂರು ಆಸನಗಳ ಚಿಕ್ಕ ಪುಟ್ಟ ಒಳಾಂಗಣ ರಂಗಮಂದಿರಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರಕಾರ ಪ್ರೋತ್ಸಾಹವನ್ನು ಕೊಡಬೇಕು ಎನ್ನುವುದು ರಂಗಕರ್ಮಿಗಳೆಲ್ಲರ ಹೆಬ್ಬಯಕೆಯಾಗಿದೆ.

ಸಾಹಿತ್ಯ ಕಲೆ ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಲಾಭದಾಯಕ ಉದ್ದಿಮೆಗಳಲ್ಲವಾದ್ದರಿಂದ ಸರಕಾರವು ಹಾಕಿದ ಬಂಡವಾಳಕ್ಕೆ ಯಾವುದೇ ರೂಪದ ಲಾಭವನ್ನು ನಿರೀಕ್ಷಿಸದೇ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಜನತಾ ರಂಗಮಂದಿರಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡಬೇಕೆಂದು ಕೋರುತ್ತಿದ್ದೇವೆ.

ಕೇವಲ ಸಂಸ್ಕೃತಿ  ಇಲಾಖೆಯೊಂದೇ ಎಲ್ಲಾ ರಂಗಮಂದಿರಗಳನ್ನು ನೇರವಾಗಿ ನಿರ್ವಹಣೆ ಮಾಡಲು ಸಾಧ್ಯವಿಲ್ಲದ್ದರಿಂದ ಸರಕಾರ ನಿರ್ಮಿಸುವ ಎಲ್ಲಾ ರಂಗಮಂದಿರಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ವಹಿಸಬಹುದಾಗಿದೆ. ಹಾಗೂ ಗುತ್ತಿಗೆ ಪಡೆಯುವವರು ಅನುಭವಿ ಪೂರ್ಣಾವಧಿ ರಂಗಕರ್ಮಿಗಳೇ ಆಗಿದ್ದರೆ ನಿರಂತರವಾಗಿ ಲಾಭರಹಿತವಾಗಿ ರಂಗಮಂದಿರಗಳನ್ನು ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರು ಗಮನಹರಿಸಬೇಕು ಹಾಗೂ ರಂಗಮಂದಿರಗಳಿಗಾಗಿ ಜಾಗವನ್ನು ಗುರುತಿಸಲು ಮತ್ತು ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅದ್ಯಕ್ಷತೆಯಲ್ಲಿ ರಂಗತಜ್ಞರ ಕಮೀಟಿಯೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ಎಲ್ಲಾ ರಂಗಕರ್ಮಿಗಳ ಪರವಾಗಿ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಸರಕಾರವೇನಾದರೂ ಕನಿಷ್ಟ 60 ರಂಗಮಂದಿರಗಳನ್ನು ಕಟ್ಟಿಸಿ ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯನ್ನೇನಾದರೂ ಮಾಡಿದ್ದೇ ಆದಲ್ಲಿ ಭವಿಷ್ಯದಲ್ಲಿ ಈ ಸರಕಾರದ ಹೆಸರು ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. ಹಾಗೂ ಕಲಾಕ್ಷೇತ್ರ ಕೇಂದ್ರಿತವಾದ ಸಾಂಸ್ಕೃತಿಕ ಚಟುವಟಿಕೆಗಳು ವಿಕೇಂದ್ರೀಕರಣಗೊಂಡು ಪ್ರತಿ ಬಡಾವಣೆಯಲ್ಲೂ ಸಾಂಸ್ಕೃತಿಕ ಸಂಭ್ರಮ ಪಸರಿಸುವುದರಲ್ಲಿ ಸಂದೇಹವಿಲ್ಲ. ಪುಟ್ಟ ರಂಗಮಂದಿರಗಳ ನಿರ್ಮಾಣ ಸರಕಾರಕ್ಕೆ ಹೊರೆಯೂ ಆಗುವುದಿಲ್ಲ. ಈ ರಂಗಮಂದಿರ ನಿರ್ಮಾಣದ ಕನಸನ್ನು ಸರಕಾರ ನನಸನ್ನು ಮಾಡಿದ್ದೇ ಆದಲ್ಲಿ ಇಡೀ ಸಾಂಸ್ಕೃತಿಕ ಲೋಕ ಸರಕಾರದ ಸಹಕಾರಕ್ಕೆ ಋಣಿಯಾಗಿರುವುದು. ಸರಕಾರಕ್ಕೂ ಉತ್ತಮ ಹೆಸರು ಬರುವುದರಲ್ಲಿ ಸಂದೇಹವಿಲ್ಲ.

ಈ ಅತ್ಯಗತ್ಯ ವಿಷಯಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾದ ಉಮಾಶ್ರೀಯವರೂ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗಮನಹರಿಸಿ ಆದಷ್ಟು ಬೇಗ ರಂಗಮಂದಿರಗಳ ಸ್ಥಾಪನೆ ಹಾಗೂ ನಿರ್ವಹಣೆ ಕುರಿತು ಆದೇಶವನ್ನು ಹೊರಡಿಸಬೇಕೆಂಬುದು ರಂಗಕರ್ಮಿಗಳ ಆಗ್ರಹವಾಗಿದೆ..

ಹೀಗೆ.,, ಪ್ರೆಸ್‌ನೋಟ್‌ನಲ್ಲಿ  ತಿಳಿಸಿದ ವಿಷಯಗಳ ಬಗ್ಗೆ ಸಹಮತ ಇರುವ ಎಲ್ಲರೂ ಒಗ್ಗಟ್ಟಾಗಿ ನಿಂತು ಸರಕಾರದ ಮೇಲೆ ಸಾಧ್ಯವಾದ ಎಲ್ಲಾ ನಿಟ್ಟಿನಿಂದ ಒತ್ತಡಗಳನ್ನು ತಂದರೆ ಇವತ್ತಿಲ್ಲದಿದ್ದರೆ ಇನ್ನೊಂದು ವರ್ಷಕ್ಕಾದರೂ ಬೆಂಗಳೂರಿನಲ್ಲಿ  ಕನಿಷ್ಟ 60 ಬಡಾವಣೆಗಳಲ್ಲಾದರೂ ಪುಟ್ಟದಾದ ಸುಸಜ್ಜಿತ ರಂಗಮಂದಿರಗಳು ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ. ಕಲಾಕ್ಷೇತ್ರ-50 ನೆನಪಿನೋಕಳಿ ಕಾರ್ಯಕ್ರಮಕ್ಕೆ 5 ಕೋಟಿ ಮೀಸಲಿಟ್ಟಿರುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಭಾಷಣದಲ್ಲಿ ಹೇಳಿದ್ದರು. ಇಷ್ಟೇ 5 ಕೋಟಿಗಳನ್ನು ರಂಗಮಂದಿರಗಳಿಗೆ ಮೀಸಲಿಟ್ಟು ಬಿಬಿಎಂಪಿ ಜಾಗಗಳಲ್ಲಿ ತಲಾ 50 ಲಕ್ಷಕ್ಕೊಂದರಂತೆ ಪುಟ್ಟ ರಂಗಮಂದಿರಗಳ ಸ್ಥಾಪನೆಗೆ ಸರಕಾರ ಮುಂದಾಗಿದ್ದರೂ. ಕನಿಷ್ಟ 10 ರಂಗಮಂದಿರಗಳನ್ನಾದರೂ ಕಟ್ಟಬಹುದಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಡಮಾಡುವ ವಾರ್ಷಿಕ ಅನುದಾನದಲ್ಲಿ ಶೇಕಡ ಹತ್ತರಷ್ಟಾದರೂ ಹಣವನ್ನು ರಂಗಮಂದಿರಗಳ ನಿರ್ಮಾಣಕ್ಕೆ ಮೀಸಲಿಟ್ಟರೆ ಪ್ರತಿ ವಾರ್ಡಿಗೊಂದು ರಂಗಮಂದಿರ ಕಟ್ಟಬಹುದಾಗಿದೆ.  ಹಾಗೂ ಈ ರಂಗಮಂದಿರಗಳು ನೂರಾರು ವರುಷಗಳ ಕಾಲ ಆ ಬಡಾವಣಾ ವಾಸಿಗಳ ಸಾಂಸ್ಕೃತಿಕ ಹಸಿವನ್ನು ಹಿಂಗಿಸಬಹುದಾಗಿದೆ. ಸರಕಾರ ತಾತ್ಕಾಲಿಕ ದೃಷ್ಟಿಕೋನವನ್ನು ಪಕ್ಕಕ್ಕಿಟ್ಟು ದೂರದೃಷ್ಟಿಕೋನವನ್ನು ಬೆಳೆಸಿಕೊಂಡರೆ ಮುಂದಿನ ತಲೆಮಾರಿಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬಹುದಾಗಿದೆ.

ಆದರೆ ಇದೆಲ್ಲಾ ಯಾವ ಸರಕಾರಗಳಿಗೂ ಅರ್ಥವಾಗುವುದಿಲ್ಲ. ರಂಗಕರ್ಮಿಗಳು ಇದನ್ನು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಆ ಅಧಿಕಾರಿ ಹಾಗೂ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು. ರಂಗಭೂಮಿಯಿಂದಾ ಫಲಾನುಭವಿಗಳಾದವರೆಲ್ಲರೂ ರಂಗಭೂಮಿಯ ಋಣತೀರಿಸಲಾದರೂ ಸರಕಾರದ ಮೇಲೆ ಒತ್ತಡ ಹೇರಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು. ಒಟ್ಟಾರೆಯಾಗಿ ಬರೀ ಯಾಂತ್ರಿಕ ನಗರಿಯಾಗಿರುವ ಬೆಂಗಳೂರಿನ ಎಲ್ಲಾ ವಾರ್ಡಗಳಲ್ಲೂ ರಂಗಮಂದಿರಗಳು ರೂಪಗೊಂಡು ಅಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಬೆಂಗಳೂರು ಸಾಂಸ್ಕೃತಿಕ ನಗರಿಯಾಗಿ ಮಾರ್ಪಡಬೇಕು. ಅದಕ್ಕಾಗಿ ಮೇಲೆ ಪ್ರೆಸ್‌ನೋಟ್‌ನಲ್ಲಿ  ತಿಳಿಸಿದ ಅಂಶಗಳ ಜಾರಿಗಾಗಿ ಎಲ್ಲರೂ ಸರಕಾರವನ್ನು ಒತ್ತಾಯಿಸಿ ಅದು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಒಟ್ಟಿನ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳು ಬೆಂಗಳೂರಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಾ ನಮ್ಮೆಲ್ಲರಿಗೂ ಆಶ್ರಯಕೊಟ್ಟ ಬೆಂಗಳೂರು ಸಾಂಸ್ಕೃತಿಕ ಕ್ಷೇತ್ರವಾಗಿ ಉಳಿದು ಬೆಳೆಯಬೇಕು ಹಾಗೂ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯಬೇಕು..

                                         -ಶಶಿಕಾಂತ ಯಡಹಳ್ಳಿ