ಮಂಗಳವಾರ, ನವೆಂಬರ್ 22, 2016

ವಾರ್ಡಿಗೊಂದು ರಂಗಮಂದಿರ ಇದ್ದರೆಷ್ಟು ಸುಂದರ :

                                 
                      
ಯಾವತ್ತೂ ಪೋನ್ ಮಾಡದ ಶ್ರೀಮಾನ್ ಕಪ್ಪಣ್ಣರವರು ಇದ್ದಕ್ಕಿದ್ದಂತೆ ಪೋನ್ ಮಾಡಿದ್ದರು. ಯಾಕೆಂದು ಕೇಳುವಷ್ಟರಲ್ಲಿ ವಾರ್ಡಿಗೊಂದು ರಂಗಮಂದಿರ ಬೇಕೆಂಬ ನಿಮ್ಮ ಬೇಡಿಕೆಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸೋಣ. ಅದರ ವಿವರಗಳನ್ನು ಪ್ರೆಸ್‌ನೋಟ್ ಮಾದರಿಯಲ್ಲಿ ಬರೆದು ಮೇಲ್ ಮಾಡಿ. ನವೆಂಬರ್ 23 ರಂದು ವೃತ್ತಿ ನಾಟಕ ಕಂಪನಿಗಳ ಮಾಲೀಕರು ಗುಬ್ಬಿ ವೀರಣ್ಣ ರಂಗಮಂದಿರದ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆಗ ನಮ್ಮ ಡಿಮಾಂಡಗಳನ್ನೂ ಇಟ್ಟು ಸರಕಾರಕ್ಕೆ ಒತ್ತಾಯಿಸೋಣ. ಎಂದರು ಕಪ್ಪಣ್ಣ. ರಂಗಭೂಮಿಗೆ ಒಳಿತಾಗುವ ಕೆಲಸವನ್ನು ಯಾರು ಮಾಡಿದರೇನು?. ಹಲವಾರು ಪ್ರಮುಖ ಅಂಶಗಳನ್ನೆಲ್ಲಾ ಸೇರಿಸಿ ಪ್ರೆಸ್‌ನೋಟ್ ಸಿದ್ದಗೊಳಿಸಿ ಕಪ್ಪಣ್ಣನವರಿಗೆ ಮೇಲ್ ಮಾಡಿ ಯೋಚಿಸತೊಡಗಿದೆ.

ಎಂಟು ತಿಂಗಳ ಹಿಂದೆ ಮಾಲತೇಶ್ ಬಡಿಗೇರರು ಹೊಸದಾಗಿ ಕಟ್ಟಿಸಿದ ಮನೆಯಿರುವ ಮೈಸೂರು ರಸ್ತೆಯ ಬಡಾವಣೆಯಲ್ಲಿರುವ ಗಣೇಶ ದೇವಸ್ಥಾನದ ಪ್ರಾಂಗಣದಲ್ಲಿ ಸಾಣೇಹಳ್ಳಿ ಶಿವಸಂಚಾರದ ನಾಟಕಗಳ ಉತ್ಸವವನ್ನು ಹಮ್ಮಿಕೊಂಡಿದ್ದರು. ಆ ಉತ್ಸವಕ್ಕೆ ಅತಿಥಿಯಾಗಿ ಆಹ್ವಾನಿತನಾಗಿ ಹೋಗಿದ್ದ ನಾನು ಸಭೆಯನ್ನುದ್ದೇಶಿಸಿ ಬಡಾವಣೆ ರಂಗಭೂಮಿಯ ಅಗತ್ಯತೆಯನ್ನು ನನ್ನ ಭಾಷಣದುದ್ದಕ್ಕೂ ಪ್ರತಿಪಾದಿಸಿದೆ. ಆಗ ವೇದಿಕೆಯ ಅಧ್ಯಕ್ಷತೆಯನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾದ್ಯ ಸ್ವಾಮಿಗಳು ವಹಿಸಿಕೊಂಡಿದ್ದರು. ಕಪ್ಪಣ್ಣನವರೂ ಸಹ ಅತಿಥಿಯಾಗಿ ವೇದಿಕೆಯಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದರು. ನನ್ನ ಮಾತುಗಳು ಮುಗಿದಾದ ಮೇಲೆ ಕಪ್ಪಣ್ಣರವರು ನಿಮ್ಮ ಆಲೋಚನೆ ನಿಜಕ್ಕೂ ಉತ್ತಮವಾಗಿದೆ. ಬಡಾವಣೆಗೊಂದು ರಂಗಮಂದಿರ ಇರಲೇಬೇಕಿದೆ. ನಾವೆಲ್ಲಾ ಕೂತೊಮ್ಮೆ ಈ ಕುರಿತು ಚರ್ಚಿಸಿ ಸರಕಾರವನ್ನು ಒತ್ತಾಯಿಸೋಣವೆಂದು ಹೇಳಿ ಕೈಕುಲುಕಿದರು.

ಅವತ್ತಿನ ನನ್ನ ಭಾಷಣದ ಸಾರವನ್ನು ಲೇಖನ ರೂಪದಲ್ಲಿ ಬರೆದು ನಾನು ಮರೆತೇ ಬಿಟ್ಟಿದ್ದೆ. ಆದರೆ ಸಾಂಸ್ಕೃತಿಕ ರಾಜಕಾರಣಿಯಾದ ಕಪ್ಪಣ್ಣ ಅದನ್ನು ಮರೆಯದೇ ತಲೆಯಲ್ಲಿಟ್ಟುಕೊಂಡೇ ತಿರುಗುತ್ತಿರುವಂತಿತ್ತು. ಮೊದಲಿನಿಂದಲೂ ಕಪ್ಪಣ್ಣನವರ ಬಗ್ಗೆ ವ್ಯಯಕ್ತಿಕವಾಗಿ ನನಗೆ ಯಾವ ರಾಗದ್ವೇಷಗಳಿಲ್ಲದಿದ್ದರೂ ರಂಗಭೂಮಿಯ ಬೆಳವಣಿಗೆಗೆ ಅವರ ನೀತಿ ನಿರ್ಧಾರಗಳು ಮಾರಕ ಎಣಿಸಿದಾಗಲೆಲ್ಲಾ ಪತ್ರಿಕೆಗಳಲ್ಲಿ ಬರೆದು ನನ್ನ ಪ್ರತಿಭಟನೆಯನ್ನು ಸಲ್ಲಿಸಿ ತೀವ್ರವಾಗಿ  ವಿರೋಧಿಸಿದ್ದೇನೆ. ಆದರೆ ನನ್ನೆಲ್ಲಾ ಟೀಕೆಗಳನ್ನೂ ಸಹಿಸಿಕೊಂಡು ಕಪ್ಪಣ್ಣ ಸಾಹೇಬರು ರಂಗಭೂಮಿಗಾಗಿ ಪೋನ್ ಮಾಡಿ ಸಲಹೆ ಸಹಕಾರ ಕೇಳಿದಾಗ ಇಲ್ಲವೆಂದು ಹೇಳಲು ಆಗಲೇ ಇಲ್ಲ. ಸತ್ಯವಾಗಿ ಹೇಳಬೇಕೆಂದರೆ ನನಗೆ ಯಾವ ವ್ಯಕ್ತಿಗಳ ಮೇಲೆಯೂ ವ್ಯಯಕ್ತಿಕ ದ್ವೇಷಾಸೂಯೆಗಳಿಲ್ಲ. ರಂಗಭೂಮಿಯ ಒಳಿತಿಗೆ ಯಾರೇ ಪ್ರಯತ್ನಿಸಿದರೂ ಅವರಿಗೆ ಸಹಕಾರ ಕೊಡಬೇಕಾದದ್ದು ನನ್ನ ಕರ್ತವ್ಯವೆಂದು ಭಾವಿಸಿರುವೆ. ಕೆಲವೊಮ್ಮೆ ನಿರ್ಲಿಪ್ತ ಸಂತರಿಗಿಂತಾ ಕ್ರಿಯಾಶೀಲವಾಗಿ ಕೆಲಸಮಾಡುವ ಸೈತಾನರೇ ವಾಸಿ ಎನ್ನುವಂತಾ ವ್ಯವಸ್ಥೆ ನಮ್ಮದಾಗಿದೆ. ಹೀಗಾಗಿ ಕಪ್ಪಣ್ಣ ಏನೇ ಆಗಿರಲಿ.. ಏನೇ ಮಾಡಿರಲಿ. ಅವರ ನೇತೃತ್ವದಲ್ಲಿಯಾದರೂ ಬೆಂಗಳೂರಿನ ಬಡಾವಣೆಗಳಲ್ಲಿ ರಂಗಮಂದಿರಗಳು ನಿರ್ಮಾಣವಾಗುವಂತಿದ್ದರೆ ಅದಕ್ಕೆ ನನ್ನ ಬೆಂಬಲವಿದೆ. ಇವತ್ತೂ ಸಹ ಕಪ್ಪಣ್ಣನಂತಹ ಯಾವುದೇ ಸಾಂಸ್ಕೃತಿಕ ರಾಜಕಾರಣಿ ಸ್ವಾರ್ಥವನ್ನು ಪಕ್ಕಕ್ಕಿಟ್ಟು ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ದುಡಿದರೆ ಅವರನ್ನು ಸಾಂದರ್ಭಿಕವಾಗಿ ಬೆಂಬಲಿಸುವುದಕ್ಕೆ ಹಾಗೂ ಎಲ್ಲಾ ಸಹಕಾರವನ್ನು ಕೊಡಲಿಕ್ಕೆ ನಾನು ಬದ್ದನಾಗಿರುವೆ. ರಂಗಭೂಮಿ ಯಾರ‍್ಯಾರಿಗೆ ಒಂದು ಐಡೆಂಟಿಟಿ ಎನ್ನುವುದನ್ನು ಕೊಟ್ಟಿದೆಯೋ ಅವರೆಲ್ಲಾ ರಂಗಭೂಮಿಯ ಹಿತಾಸಕ್ತಿಗಾಗಿ ತುಡಿದರೆ ಸಾಂಸ್ಕೃತಿಕ ಕ್ಷೇತ್ರ ಸಕಾರಾತ್ಮವಾಗಿ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ.

ಬಡಾವಣಾ ರಂಗಭೂಮಿಯ ಬಯಕೆ ನನ್ನನ್ನು ಕಾಡಿದ್ದು ಎಂಟು ವರ್ಷಗಳ ಹಿಂದೆ. ಆಗ ಮಲ್ಲಿಕಾರ್ಜುನ ಮಹಾಮನೆಯೊಂದಿಗೆ ಸೇರಿ ರಂಗ ಜಾಗೃತಿ ವೇದಿಕೆ ಯನ್ನು ಕಟ್ಟಿಕೊಂಡಿದ್ದೆವು. ಸಣ್ಣ ಕಥೆಯಾಧಾರಿತ ಹತ್ತು ನಾಟಕಗಳನ್ನು  ಹತ್ತು ತಂಡಗಳಿಂದ ಸಿದ್ದಗೊಳಿಸಿ ಹತ್ತು ಬಡವಾಣೆಗಳಲ್ಲಿ  ರೊಟೇಶನ್ ರೀತಿಯಲ್ಲಿ ಪ್ರದರ್ಶಿಸುವ ಯೋಜನೆಯನ್ನು  ಹಾಕಿಕೊಂಡಿದ್ದೆವು. ಹಲವಾರು ಪ್ರಾಥಮಿಕ ಸಭೆಗಳನ್ನೂ ಮಾಡಲಾಯಿತು. ಆದರೆ ಮಹಾಮನೆಯ ಅರಾಜಕ ಮನೋಭಾವದಿಂದಾಗಿ ಇಡೀ ಯೋಜನೆ ಹಾಳಾಗಿ ಹೋಯಿತು. ರಂಗಜಾಗ್ರತಿ ವೇದಿಕೆಯೂ ನೇಪತ್ಯ ಸೇರಿತು.  ಆದರೆ ಬಡಾವಣಾ ರಂಗಭೂಮಿಯ ಕನಸಂತೂ ಮಾಸಲೇ ಇಲ್ಲಾ.

ತದನಂತರ ಗೆಳೆಯರ ಬಳಗದ ಶ್ರೀನಿವಾಸ ಜೊತೆಗೆ ಸೇರಿ ರಂಗಭೂಮಿ ಹಿತರಕ್ಷಣಾ ವೇದಿಕೆಯನ್ನು ಕಟ್ಟಿಕೊಂಡು ರಂಗತಂಡಗಳ ಒಕ್ಕೂಟವೊಂದನ್ನು ಕಟ್ಟಲು ಪ್ರಯತ್ನಿಸಿದೆ. ಹಲವಾರು ಸಭೆಗಳು, ಸೆಮಿನಾರಗಳು ಮತ್ತು ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಲಾಯಿತು. ಕಲಾಕ್ಷೇತ್ರವನ್ನು ಬಿಟ್ಟು ಬೆಂಗಳೂರಿನ ಬಡಾವಣೆಗಳಲ್ಲಿ ನಾಟಕೋತ್ಸವವನ್ನು ಮಾಡಲು ಶ್ರೀನಿವಾಸ್ ಮುಂದಾದರು. ಶ್ರೀನಗರ ಪಿಇಎಸ್ ಕಾಲೇಜಲ್ಲಿ ಹಾಗೂ ಗಿರಿನಗರದ ಬಿಬಿಎಂಪಿ ಪಾರ್ಕಗಳಲ್ಲಿ ನಾಟಕೋತ್ಸವಗಳು ಆಯೋಜನೆಗೊಂಡವು. ಬಡಾವಣಾ ರಂಗಭೂಮಿಯ ಕುರಿತ ಚಟುವಟಿಕೆಗಳು ಇನ್ನೇನು ಗರಿಗೆದರಬೇಕು ಎನ್ನುವಂತಹ ಸಂದರ್ಭದಲ್ಲಿ ಮುಖ್ಯ ಸಂಘಟಕ ಶ್ರೀನಿವಾಸ್ ರೈಲು ದುರಂತದಲ್ಲಿ ಅಸುನೀಗಿದರು. ಬಡಾವಣಾ ರಂಗಭೂಮಿ ಕಟ್ಟುವ ನನ್ನ ಎರಡನೇ ಪ್ರಯತ್ನವೂ ಕನಸಾಗಿಯೇ ಉಳಿಯಿತು.  ಆಗಲೇ ಬಡಾವಣೆಗೊಂದು ರಂಗಮಂದಿರದ ಅಗತ್ಯತೆಯ ಕುರಿತು ಲೇಖನವನ್ನು ಬರೆದು ನನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ತದನಂತರ ಬೆಂಗಳೂರಿನಲ್ಲಿ ನಡೆದ ಕೆಲವಾರು ಸೆಮಿನಾರುಗಳಲ್ಲಿ  ಭಾಗವಹಿಸಿ  ಬಡಾವಣಾ ರಂಗಭೂಮಿಯ ಅಗತ್ಯತೆಯ ಬಗ್ಗೆ ನನ್ನ ವಾದವನ್ನು ಮಂಡಿಸುತ್ತಲೇ ಬಂದಿರುವೆ. ಆದರೆ.. ನನ್ನ ಆಸೆ ಕೇವಲ ಬರವಣಿಗೆ ಹಾಗೂ ಭಾಷಣಗಳಲ್ಲೇ ಉಳಿಯಿತು. ಅನುಷ್ಠಾನಕ್ಕೆ ಬರಲೇ ಇಲ್ಲ.

ಆದರೆ.. ಈಗ ಕಪ್ಪಣ್ಣನಂತಹ ದೈತ್ಯ ಸಂಘಟಕರೊಬ್ಬರು ಬಡಾವಣಾ ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ  ಪ್ರಯತ್ನವನ್ನು ಮಾಡಲು ಮುಂದೆ ಬಂದಾಗ ಅಂತವರಿಗೆ ಸಹಕಾರ ಕೊಡುವುದರಲ್ಲಿ  ತಪ್ಪೇನಿಲ್ಲವೆನಿಸಿತು. ಯಾಕೆಂದರೆ ಇದರಲ್ಲಿ  ರಂಗಭೂಮಿಯ ಹಿತಾಸಕ್ತಿಯೇ ಪ್ರಮುಖವಾದದ್ದಾಗಿದೆ. ಹೀಗಾಗಿ ವಾರ್ಡಿಗೊಂದು ರಂಗಮಂದಿರ ಬೇಕೆಂಬ ನನ್ನ ಬಯಕೆಗೆ ಪೂರಕವಾಗಿ ಇಲ್ಲಿವರೆಗೂ ಯಾರೂ ಸ್ಪಂದಿಸದೇ ಇರುವಂತಹ ಸಂದರ್ಭದಲ್ಲಿ ಕಪ್ಪಣ್ಣನವರಾದರೂ ಮುಂದೆ ಬಂದಿದ್ದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಏನಾದರೂ ಆಗಲಿ ಕೇವಲ ಬರಹ ಭಾಷಣಗಳಿಂದ ನಿರೀಕ್ಷಿತ ಫಲಿತಾಂಶವಂತೂ ಸಾಧ್ಯವಿಲ್ಲ. ಇಂತವುಗಳೆಲ್ಲಾ ಕೇವಲ ಪ್ರೇರಣೆ ನೀಡಬಲ್ಲವು. ಇಂತಹ ಪ್ರೇರಣೆಗಳು ಯಾರದೋ ಮೆದುಳನ್ನು ಹೊಕ್ಕು ಅನುಷ್ಟಾನಗೊಳಿಸುವಲ್ಲಿ ಕಿಂಚಿತ್ ಪ್ರಯೋಜನಕ್ಕೆ ಬಂದರೂ ಬರಹ ಭಾಷಣಗಳು ಸಾರ್ಥಕವಾಗುತ್ತವೆ. ಹೀಗಾಗಿ ರಂಗಭೂಮಿಯ ಹಿತದೃಷ್ಟಿಯಿಂದಾ ಕಪ್ಪಣ್ಣನವರ ಪ್ರಯತ್ನ ಫಲಕಾರಿಯಾಗಲಿ ಎನ್ನುವುದು ನನ್ನ ಸದಾಶಯವಾಗಿದೆ. ಇದು ಕೇವಲ ಬರಹ ಭಾಷಣಗಳಿಂದ ಇಲ್ಲವೇ ಕಪ್ಪಣ್ಣನಂತಹ ಒಬ್ಬಿಬ್ಬರ ಪ್ರಯತ್ನದಿಂದ ಆಗುವ ಕೆಲಸವಲ್ಲ. ಪಂಚೇದ್ರಿಯಗಳ ಸಂವೇದನೆಯನ್ನು ಕಳೆದುಕೊಂಡ ಸರಕಾರವನ್ನು ಎಚ್ಚರಿಸಿ.. ಆಳುವ ವರ್ಗಗಳ ಮೇಲೆ ನಿರಂತರ ಒತ್ತಡ ತಂದು ವಾರ್ಡಿಗೊಂದು ರಂಗಮಂದಿರಗಳ ಸ್ಥಾಪನೆಗೆ ಇಡೀ ರಂಗಭೂಮಿ ಸಂಘಟಿತವಾಗಿ ಪ್ರಯತ್ನಿಸಬೇಕಿದೆ.  ಈ ನಿಟ್ಟಿನಲ್ಲಿ ನವೆಂಬರ್ 22 ರಂದು ನಾನು ಸಿದ್ದಪಡಿಸಿದ ಪ್ರೆಸ್‌ನೋಟ್ ವಿಷಯ ಈ ರೀತಿಯಲ್ಲಿದೆ. 

ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ರಂಗಕರ್ಮಿಗಳ ಬೇಡಿಕೆ :

ಬೆಳೆಯುತ್ತಿರುವ ಬೆಂಗಳೂರಿನ ವಿಸ್ತಾರ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ರಂಗಮಂದಿರಗಳ ಸಂಖ್ಯೆ ಹೆಚ್ಚಾಗುವ ಅಗತ್ಯವಿದ್ದು ಕನಿಷ್ಟ ವಾರ್ಡಿಗೊಂದಾದರೂ ಪುಟ್ಟದಾದ ಸುಸಜ್ಜಿತ ರಂಗಮಂದಿರಗಳನ್ನು ಸರಕಾರ ನಿರ್ಮಿಸುವ ಅಗತ್ಯವಿದೆ..

ಕನ್ನಡ ಭಾಷಿಕ ನೆಲೆಗಳು ಏಕೀಕರಣಗೊಂಡು ಕರ್ನಾಟಕ ರಾಜ್ಯವಾಗಿ  ಅರವತ್ತು ವರ್ಷಗಳು ತುಂಬಿದ ಸವಿ ನೆನಪಿಗಾಗಿ ಬೆಂಗಳೂರಿನ 60 ವಾರ್ಡಗಳಲ್ಲಿ ಸುಸಜ್ಜಿತ ರಂಗಮಂದಿರಗಳನ್ನಾದರೂ ನಿರ್ಮಿಸುವ ಅಗತ್ಯವಿದ್ದು ಸರಕಾರ ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮಕೈಗೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡಲು ಹಾಗೂ ಸಾಮಾಜಿಕ ಸ್ವಾಸ್ತ್ಯವನ್ನು ಹೆಚ್ಚಿಸಲು ಹೆಚ್ಚೆಚ್ಚು ರಂಗಮಂದಿರಗಳನ್ನು ನಿರ್ಮಿಸಿ ಅದರ ಮೇಲ್ವಿಚಾರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿಕೊಟ್ಟು ರಂಗಮಂದಿರಗಳ ನಿರ್ವಹಣೆಯನ್ನು ಅನುಭವಿ ಪೂರ್ಣಾವಧಿ ರಂಗಕರ್ಮಿಗಳಿಗೆ ವಹಿಸಿಕೊಟ್ಟರೆ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆದುಕೊಂಡು ಹೋಗಲು ಅನುಕೂಲವಾಗುತ್ತದೆ. (ಉದಾಹರಣೆಗೆ. ಕೆ.ಹೆಚ್.ಕಲಾಸೌಧ)

ಈಗಾಗಲೇ ಅಸ್ತಿತ್ವದಲ್ಲಿದ್ದೂ ನಿಷ್ಕ್ರೀಯವಾಗಿರುವ ರಂಗಮಂದಿರಗಳನ್ನು ಈ ಕೂಡಲೇ ಅಗತ್ಯ ರಿಪೇರಿ ಮಾಡಿ ಸಂಸ್ಕೃತಿ ಇಲಾಖೆಗೆ ವಹಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ. ಮಾಸ್ತಿ ಅಯ್ಯಂಗಾರ ರಂಗಮಂದಿರವನ್ನು ಪುನರುಜ್ಜೀವನಗೊಳಿಸಿ ರಂಗ ಚಟುವಟಿಕೆಗಳಿಗೆ ಮೀಸಲಿಡಬೇಕು ಹಾಗೂ ಮೂರು ವರ್ಷಗಳಿಂದ ಮುಚ್ಚಿರುವ ಗುಬ್ಬಿ ವೀರಣ್ಣ ರಂಗಮಂದಿರವನ್ನು ಅಗತ್ಯ ನಿರ್ವಹನೆಯೊಂದಿಗೆ ಸಿದ್ದಗೊಳಿಸಿ ವೃತಿ ಕಂಪನಿ ನಾಟಕಗಳ ಪ್ರದರ್ಶನಕ್ಕೆ ನೀಡಬೇಕೆಂಬ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

ಬೆಂಗಳೂರಿನಲ್ಲಿರುವ ಎಲ್ಲಾ ಸರಕಾರಿ ಸಾಮ್ಯದ ಹಾಗೂ ಬಿಬಿಎಂಪಿ ಆಧೀನದಲ್ಲಿರುವ ಎಲ್ಲಾ ರಂಗಮಂದಿರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನಕ್ಕೊಳಪಡಿಸಿ ಈಗ ಕಲಾಕ್ಷೇತ್ರಕ್ಕೆ ನಿಗಧಿಪಡಿಸಿದಂತೆ ಏಕರೂಪದ ಬಾಡಿಗೆಯನ್ನು ಅಂತಿಮಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ದೊಡ್ಡ ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆ ಕಷ್ಟಕರವಾಗಿದ್ದರಿಂದ ಮುನ್ನೂರು ಆಸನಗಳ ಚಿಕ್ಕ ಪುಟ್ಟ ಒಳಾಂಗಣ ರಂಗಮಂದಿರಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರಕಾರ ಪ್ರೋತ್ಸಾಹವನ್ನು ಕೊಡಬೇಕು ಎನ್ನುವುದು ರಂಗಕರ್ಮಿಗಳೆಲ್ಲರ ಹೆಬ್ಬಯಕೆಯಾಗಿದೆ.

ಸಾಹಿತ್ಯ ಕಲೆ ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಲಾಭದಾಯಕ ಉದ್ದಿಮೆಗಳಲ್ಲವಾದ್ದರಿಂದ ಸರಕಾರವು ಹಾಕಿದ ಬಂಡವಾಳಕ್ಕೆ ಯಾವುದೇ ರೂಪದ ಲಾಭವನ್ನು ನಿರೀಕ್ಷಿಸದೇ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಜನತಾ ರಂಗಮಂದಿರಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡಬೇಕೆಂದು ಕೋರುತ್ತಿದ್ದೇವೆ.

ಕೇವಲ ಸಂಸ್ಕೃತಿ  ಇಲಾಖೆಯೊಂದೇ ಎಲ್ಲಾ ರಂಗಮಂದಿರಗಳನ್ನು ನೇರವಾಗಿ ನಿರ್ವಹಣೆ ಮಾಡಲು ಸಾಧ್ಯವಿಲ್ಲದ್ದರಿಂದ ಸರಕಾರ ನಿರ್ಮಿಸುವ ಎಲ್ಲಾ ರಂಗಮಂದಿರಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ವಹಿಸಬಹುದಾಗಿದೆ. ಹಾಗೂ ಗುತ್ತಿಗೆ ಪಡೆಯುವವರು ಅನುಭವಿ ಪೂರ್ಣಾವಧಿ ರಂಗಕರ್ಮಿಗಳೇ ಆಗಿದ್ದರೆ ನಿರಂತರವಾಗಿ ಲಾಭರಹಿತವಾಗಿ ರಂಗಮಂದಿರಗಳನ್ನು ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರು ಗಮನಹರಿಸಬೇಕು ಹಾಗೂ ರಂಗಮಂದಿರಗಳಿಗಾಗಿ ಜಾಗವನ್ನು ಗುರುತಿಸಲು ಮತ್ತು ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅದ್ಯಕ್ಷತೆಯಲ್ಲಿ ರಂಗತಜ್ಞರ ಕಮೀಟಿಯೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ಎಲ್ಲಾ ರಂಗಕರ್ಮಿಗಳ ಪರವಾಗಿ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಸರಕಾರವೇನಾದರೂ ಕನಿಷ್ಟ 60 ರಂಗಮಂದಿರಗಳನ್ನು ಕಟ್ಟಿಸಿ ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯನ್ನೇನಾದರೂ ಮಾಡಿದ್ದೇ ಆದಲ್ಲಿ ಭವಿಷ್ಯದಲ್ಲಿ ಈ ಸರಕಾರದ ಹೆಸರು ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. ಹಾಗೂ ಕಲಾಕ್ಷೇತ್ರ ಕೇಂದ್ರಿತವಾದ ಸಾಂಸ್ಕೃತಿಕ ಚಟುವಟಿಕೆಗಳು ವಿಕೇಂದ್ರೀಕರಣಗೊಂಡು ಪ್ರತಿ ಬಡಾವಣೆಯಲ್ಲೂ ಸಾಂಸ್ಕೃತಿಕ ಸಂಭ್ರಮ ಪಸರಿಸುವುದರಲ್ಲಿ ಸಂದೇಹವಿಲ್ಲ. ಪುಟ್ಟ ರಂಗಮಂದಿರಗಳ ನಿರ್ಮಾಣ ಸರಕಾರಕ್ಕೆ ಹೊರೆಯೂ ಆಗುವುದಿಲ್ಲ. ಈ ರಂಗಮಂದಿರ ನಿರ್ಮಾಣದ ಕನಸನ್ನು ಸರಕಾರ ನನಸನ್ನು ಮಾಡಿದ್ದೇ ಆದಲ್ಲಿ ಇಡೀ ಸಾಂಸ್ಕೃತಿಕ ಲೋಕ ಸರಕಾರದ ಸಹಕಾರಕ್ಕೆ ಋಣಿಯಾಗಿರುವುದು. ಸರಕಾರಕ್ಕೂ ಉತ್ತಮ ಹೆಸರು ಬರುವುದರಲ್ಲಿ ಸಂದೇಹವಿಲ್ಲ.

ಈ ಅತ್ಯಗತ್ಯ ವಿಷಯಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾದ ಉಮಾಶ್ರೀಯವರೂ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗಮನಹರಿಸಿ ಆದಷ್ಟು ಬೇಗ ರಂಗಮಂದಿರಗಳ ಸ್ಥಾಪನೆ ಹಾಗೂ ನಿರ್ವಹಣೆ ಕುರಿತು ಆದೇಶವನ್ನು ಹೊರಡಿಸಬೇಕೆಂಬುದು ರಂಗಕರ್ಮಿಗಳ ಆಗ್ರಹವಾಗಿದೆ..

ಹೀಗೆ.,, ಪ್ರೆಸ್‌ನೋಟ್‌ನಲ್ಲಿ  ತಿಳಿಸಿದ ವಿಷಯಗಳ ಬಗ್ಗೆ ಸಹಮತ ಇರುವ ಎಲ್ಲರೂ ಒಗ್ಗಟ್ಟಾಗಿ ನಿಂತು ಸರಕಾರದ ಮೇಲೆ ಸಾಧ್ಯವಾದ ಎಲ್ಲಾ ನಿಟ್ಟಿನಿಂದ ಒತ್ತಡಗಳನ್ನು ತಂದರೆ ಇವತ್ತಿಲ್ಲದಿದ್ದರೆ ಇನ್ನೊಂದು ವರ್ಷಕ್ಕಾದರೂ ಬೆಂಗಳೂರಿನಲ್ಲಿ  ಕನಿಷ್ಟ 60 ಬಡಾವಣೆಗಳಲ್ಲಾದರೂ ಪುಟ್ಟದಾದ ಸುಸಜ್ಜಿತ ರಂಗಮಂದಿರಗಳು ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ. ಕಲಾಕ್ಷೇತ್ರ-50 ನೆನಪಿನೋಕಳಿ ಕಾರ್ಯಕ್ರಮಕ್ಕೆ 5 ಕೋಟಿ ಮೀಸಲಿಟ್ಟಿರುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಭಾಷಣದಲ್ಲಿ ಹೇಳಿದ್ದರು. ಇಷ್ಟೇ 5 ಕೋಟಿಗಳನ್ನು ರಂಗಮಂದಿರಗಳಿಗೆ ಮೀಸಲಿಟ್ಟು ಬಿಬಿಎಂಪಿ ಜಾಗಗಳಲ್ಲಿ ತಲಾ 50 ಲಕ್ಷಕ್ಕೊಂದರಂತೆ ಪುಟ್ಟ ರಂಗಮಂದಿರಗಳ ಸ್ಥಾಪನೆಗೆ ಸರಕಾರ ಮುಂದಾಗಿದ್ದರೂ. ಕನಿಷ್ಟ 10 ರಂಗಮಂದಿರಗಳನ್ನಾದರೂ ಕಟ್ಟಬಹುದಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಡಮಾಡುವ ವಾರ್ಷಿಕ ಅನುದಾನದಲ್ಲಿ ಶೇಕಡ ಹತ್ತರಷ್ಟಾದರೂ ಹಣವನ್ನು ರಂಗಮಂದಿರಗಳ ನಿರ್ಮಾಣಕ್ಕೆ ಮೀಸಲಿಟ್ಟರೆ ಪ್ರತಿ ವಾರ್ಡಿಗೊಂದು ರಂಗಮಂದಿರ ಕಟ್ಟಬಹುದಾಗಿದೆ.  ಹಾಗೂ ಈ ರಂಗಮಂದಿರಗಳು ನೂರಾರು ವರುಷಗಳ ಕಾಲ ಆ ಬಡಾವಣಾ ವಾಸಿಗಳ ಸಾಂಸ್ಕೃತಿಕ ಹಸಿವನ್ನು ಹಿಂಗಿಸಬಹುದಾಗಿದೆ. ಸರಕಾರ ತಾತ್ಕಾಲಿಕ ದೃಷ್ಟಿಕೋನವನ್ನು ಪಕ್ಕಕ್ಕಿಟ್ಟು ದೂರದೃಷ್ಟಿಕೋನವನ್ನು ಬೆಳೆಸಿಕೊಂಡರೆ ಮುಂದಿನ ತಲೆಮಾರಿಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬಹುದಾಗಿದೆ.

ಆದರೆ ಇದೆಲ್ಲಾ ಯಾವ ಸರಕಾರಗಳಿಗೂ ಅರ್ಥವಾಗುವುದಿಲ್ಲ. ರಂಗಕರ್ಮಿಗಳು ಇದನ್ನು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಆ ಅಧಿಕಾರಿ ಹಾಗೂ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು. ರಂಗಭೂಮಿಯಿಂದಾ ಫಲಾನುಭವಿಗಳಾದವರೆಲ್ಲರೂ ರಂಗಭೂಮಿಯ ಋಣತೀರಿಸಲಾದರೂ ಸರಕಾರದ ಮೇಲೆ ಒತ್ತಡ ಹೇರಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು. ಒಟ್ಟಾರೆಯಾಗಿ ಬರೀ ಯಾಂತ್ರಿಕ ನಗರಿಯಾಗಿರುವ ಬೆಂಗಳೂರಿನ ಎಲ್ಲಾ ವಾರ್ಡಗಳಲ್ಲೂ ರಂಗಮಂದಿರಗಳು ರೂಪಗೊಂಡು ಅಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಬೆಂಗಳೂರು ಸಾಂಸ್ಕೃತಿಕ ನಗರಿಯಾಗಿ ಮಾರ್ಪಡಬೇಕು. ಅದಕ್ಕಾಗಿ ಮೇಲೆ ಪ್ರೆಸ್‌ನೋಟ್‌ನಲ್ಲಿ  ತಿಳಿಸಿದ ಅಂಶಗಳ ಜಾರಿಗಾಗಿ ಎಲ್ಲರೂ ಸರಕಾರವನ್ನು ಒತ್ತಾಯಿಸಿ ಅದು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಒಟ್ಟಿನ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳು ಬೆಂಗಳೂರಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಾ ನಮ್ಮೆಲ್ಲರಿಗೂ ಆಶ್ರಯಕೊಟ್ಟ ಬೆಂಗಳೂರು ಸಾಂಸ್ಕೃತಿಕ ಕ್ಷೇತ್ರವಾಗಿ ಉಳಿದು ಬೆಳೆಯಬೇಕು ಹಾಗೂ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯಬೇಕು..

                                         -ಶಶಿಕಾಂತ ಯಡಹಳ್ಳಿ






 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ