ಬುಧವಾರ, ಅಕ್ಟೋಬರ್ 26, 2016

ನಾಟಕ ಅಕಾಡೆಮಿ ಪ್ರಶಸ್ತಿಯಲ್ಲಿ ತಾರತಮ್ಯ; ಸ್ವಜನಪಕ್ಷಪಾತವದು ಅಕ್ಷಮ್ಯ

 ಶೇಖ್ ಮಾಸ್ತರರ ಪ್ರೈವೇಟ್  ಲಿಮಿಟೆಡ್ ಕಂ. ಆದ ನಾಟಕ ಅಕಾಡೆಮಿ:                                
   
ಕರ್ನಾಟಕ ನಾಟಕ ಅಕಾಡೆಮಿ ಅನ್ನೋದೊಂದು ಇದೆ ಎಂದು ಕನ್ನಡ ರಂಗಭೂಮಿಯವರಿಗೆ ನೆನಪಾಗೋದೇ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದಾಗ. ಅಲ್ಲಿವರೆಗೂ ಕೆಲವೇ ಕೆಲವು ಫಲಾನುಭವಿಗಳನ್ನು ಹೊರತು ಪಡಿಸಿ ಯಾರಿಗೂ ನಾಟಕ ಅಕಾಡೆಮಿ ಏನು ಮಾಡುತ್ತದೆ ಎನ್ನುವುದೇ ಗೊತ್ತಿರುವುದಿಲ್ಲ. ಗೊತ್ತು ಮಾಡುವ ಗೋಜಿಗೂ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಹೋಗುವುದಿಲ್ಲ. ಯಾಕೆಂದರೆ ಇಲ್ಲಿರುವವರಲ್ಲಿ ಯಾರಿಗೂ ಸಮಗ್ರ ರಂಗಭೂಮಿಯನ್ನು ಕಟ್ಟಬೇಕು ಎನ್ನುವ ಆಸೆ ಮತ್ತು ಆಸಕ್ತಿ ಎರಡೂ ಇಲ್ಲ ಎನ್ನುವುದು ಎರಡೂ ಕಾಲು ವರ್ಷಗಳ ನಾಟಕ ಅಕಾಡೆಮಿ ನಡೆದು ಬಂದ ದಾರಿಯನ್ನು ಅವಲೋಕಿಸಿದರೆ ಗೊತ್ತಾಗುವುದು. ಅಕಸ್ಮಾತ್ ಡಾ.ಶ್ರೀಪಾದ ಭಟ್ಟರಂತಹ ಸದಸ್ಯರಿಗೆ ಸಕಾರಾತ್ಮಕ ದೃಷ್ಟಿಕೋನವಿದ್ದರೂ ಅಂದುಕೊಂಡದ್ದನ್ನು ಆಚರಣೆಯಲ್ಲಿ  ತರಲು ಪ್ರಸ್ತುತ ಅಕಾಡೆಮಿಯಲ್ಲಿ ಅವಕಾಶಗಳಿಲ್ಲ.  

ರಂಗಭೂಮಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವುದು ನಾಟಕ ಅಕಾಡೆಮಿಯ ಕರ್ತವ್ಯದ ಭಾಗವಾಗಿದೆ. ಆದರೆ ಕಳೆದ ವರ್ಷ ಪ್ರಶಸ್ತಿಯನ್ನು ಘೋಷಿಸಲೂ ಇಲ್ಲಾ. ಯಾಕೆ ಎಂದು ಯಾರೂ ಕೇಳಲೂ ಇಲ್ಲಾ. ಯಾಕೆಂದರೆ ಕನ್ನಡ ರಂಗಭೂಮಿಗೂ ಹಾಗೂ ಸರಕಾರಿ ಕೃಪಾಪೋಷಿತ ನಾಟಕ ಅಕಾಡೆಮಿಗೂ ಕರಳು ಬಳ್ಳಿ ಸಂಬಂಧ ಕಡಿದು ಹೋಗಿ ಎರಡೂಕಾಲು ವರ್ಷವೇ ಆಗಿದೆ. ನಾಟಕ ಅಕಾಡೆಮಿಗೊಬ್ಬ ಅಧ್ಯಕ್ಷ, ಹದಿನೆಂಟು ಜನ ಸದಸ್ಯರು ಕೆಲವಾರು ಕಛೇರಿ ಸಿಬ್ಬಂದಿ ಹಾಗೂ ಖರ್ಚು ಮಾಡಲು ಕೋಟಿ ಹಣ ಎಲ್ಲವೂ ಇದೆ. ಆದರೂ ಸರಿಯಾದ ಸಮಯಕ್ಕೆ ವಾರ್ಷಿಕ ಪ್ರಶಸ್ತಿಯನ್ನು ಕೊಡಲು ಏನು ರೋಗ ಇವರಿಗೆ? ರೋಗದ ಮೂಲ ಅಧ್ಯಕ್ಷರ ಅದಕ್ಷತೆ ಹಾಗೂ ಸದಸ್ಯರುಗಳ ನಿರ್ಲಿಪ್ತತೆಯಲ್ಲಿದೆ.

ಅಕ್ಟೋಬರ್ 19 ರಂದು ನಡೆದ ರವೀಂದ್ರ ಕಲಾಕ್ಷೇತ್ರ ನೆನಪಿನೋಕಳಿ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಮುಖ್ಯಮಂತ್ರಿ ಚಂದ್ರುರವರು ಅಕಾಡೆಮಿ ಹಾಗೂ ಸಂಸ್ಕೃತಿ ಇಲಾಖೆಗಳು ಪ್ರಶಸ್ತಿಗಳನ್ನು ಕೊಡುವುದರಲ್ಲಿ ಮಾಡುತ್ತಿರುವ ವಿಳಂಬ ಧೋರಣೆ ಹಾಗೂ ಅಯೋಗ್ಯರಿಗೆ ಪ್ರಶಸ್ತಿಗಳು ಸಿಗುತ್ತಿರುವುದರ ಬಗ್ಗೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಸಚಿವೆ ಉಮಾಶ್ರೀಯವರನ್ನೂ ಹೊಣೆಗಾರರನ್ನಾಗಿಸಿದ್ದರು. ಚಂದ್ರೂರವರ ವಿಡಂಬನಾತ್ಮಕ ಮಾತುಗಳು ಅಕಾಡೆಮಿಯ ಮೇಲೆ ಅದೆಷ್ಟು ಪರಿಣಾಮ ಬೀರಿತೋ ಗೊತ್ತಿಲ್ಲ. ಆದರೆ.. ಅಕ್ಟೋಬರ್ 24 ರಂದು ನಾಟಕ ಅಕಾಡೆಮಿಯು ಎರಡೂ ವರ್ಷಗಳ ಅವಾರ್ಡಗಳನ್ನು ತಾಬಡ್ ತೋಬಡ್ ಅನೌನ್ಸ್ ಮಾಡಿತು. ಅಥವಾ ಅದು ಕಾಕತಾಳೀಯವೂ ಅಗಿರಬಹುದು.

ಕರ್ನಾಟಕ ನಾಟಕ ಅಕಾಡೆಮಿ ಎನ್ನುವುದು ಸಮಗ್ರ ರಂಗಭೂಮಿಯನ್ನು ಪ್ರತಿನಿಧಿಸಬೇಕು. ಸರಕಾರ ಕೊಡುವ ಅನುದಾನ, ಅನುಕೂಲ ಹಾಗೂ ಎಲ್ಲಾ ಸವಲತ್ತುಗಳೂ ಸಹ ರಂಗಭೂಮಿಯ ಎಲ್ಲಾ ವಿಭಾಗಗಳಿಗೂ ಸಮಾನವಾಗಿ ದೊರಕಬೇಕು. ಆದರೆ.. ಹಾಲಿ ನಾಟಕ ಅಕಾಡೆಮಿಯ ಕಾರ್ಯವೈಖರಿ ಹಾಗೂ ಈಗ ಘೋಷಣೆಯಾದ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ನೋಡಿದಾಗ ಕರ್ನಾಟಕ ನಾಟಕ ಅಕಾಡೆಮಿ ಹೆಸರನ್ನು ಕರ್ನಾಟಕ ವೃತ್ತಿ ಕಂಪನಿ ನಾಟಕ ಅಕಾಡೆಮಿ ಎಂದು ಬದಲಾಯಿಸುವುದು ಸೂಕ್ತವೆನ್ನಿಸುತ್ತದೆ. ಯಾಕೆಂದರೆ ನಾಟಕ ಅಕಾಡೆಮಿಗೆ ದೊರೆತ ಯೋಜನೆಗಳ ಅನುದಾನದ ಸಿಂಹಪಾಲು ದಕ್ಕಿರುವುದೇ ವೃತ್ತಿ ಕಂಪನಿಗಳವರಿಗೆ. ಹಾಗೂ ಸಲದ ಘೋಷಿಸಲಾದ ಪ್ರಶಸ್ತಿಗಳಲ್ಲಿ ಮುಕ್ಕಾಲು ಭಾಗ ವೃತ್ತಿಕಂಪನಿಯವರಿಗೇ ಕೊಡಲಾಗಿದೆ. ನಾಟಕ ಅಕಾಡೆಮಿಯ ಅಧ್ಯಕ್ಷರು ವೃತಿ ಕಂಪನಿಯವರಾಗಿದ್ದರಿಂದ ಅವರಿಗೆ ವೃತ್ತಿ ಕಂಪನಿಯವರು ಮಾತ್ರ ರಂಗಭೂಮಿಯವರಾಗ ಗೋಚರಿಸುತ್ತಾರೆಂದು ಕಾಣುತ್ತದೆ. ಆಧುನಿಕ ಹವ್ಯಾಸಿ ರಂಗಭೂಮಿಯವರು ಅವರ ಲೆಕ್ಕಕ್ಕೇ ಇಲ್ಲವೆಂದೆನಿಸುತ್ತದೆ. ವೃತ್ತಿ ಕಂಪನಿಯವರೂ ಸಹ ಕಲಾವಿದರಾಗಿದ್ದು ಅವರಿಗೆ ಪ್ರಶಸ್ತಿಗಳನ್ನು ಕೊಡಬಾರದು ಎಂದೇನಿಲ್ಲ. ಆದರೆ ಬಹುತೇಕ ಪ್ರಶಸ್ತಿಗಳನ್ನು ಅವರಿಗೆ ಕೊಟ್ಟಿದ್ದು ತಾರತಮ್ಯ ಮಾಡಿದಂತಾಗುತ್ತದೆ. ಹಾಗೆ ನೋಡಿದರೆ ಪ್ರಸ್ತುತ ವೃತ್ತಿ ಕಂಪನಿಗಳ ಸಂಖ್ಯೆಯೇ ಬೆರಳೆಣಿಕೆಯಷ್ಟಿವೆ. ಆದರೆ ಹವ್ಯಾಸಿ ರಂಗ ತಂಡಗಳು ಬೇಕಾದಷ್ಟಿವೆ. ಆಧುನಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಲವಾರು ರಂಗಕರ್ಮಿ ಕಲಾವಿದರು ರಂಗಭೂಮಿಯನ್ನೇ ಬದುಕಾಗಿ ತೆಗೆದುಕೊಂಡಿದ್ದಾರೆ. ಅಂತವರ ಬದ್ಧತೆ ಹಾಗೂ ಪರಿಶ್ರಮವನ್ನು ಲೆಕ್ಕಿಸದೇ ಕೇವಲ ವೃತ್ತಿ ಕಂಪನಿಯ ಮಾಜಿ ಹಾಗೂ ಹಾಲಿ ಕಲಾವಿದರಿಗೆ ಹೆಚ್ಚಿನ ಪ್ರಶಸ್ತಿಗಳನ್ನು ಕೊಟ್ಟಿದ್ದು ನಾಟಕ ಅಕಾಡೆಮಿಯ ಆಶಯಕ್ಕೆ ವಿರುದ್ಧವಾದದ್ದಾಗಿದೆ.     

ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಶೇಖ ಮಾಸ್ತರರು ನಾಟಕ ಅಕಾಡೆಮಿಯನ್ನು ತಮ್ಮ ಖಾಸಗಿ ವೃತ್ತಿ ಕಂಪನಿ ಎಂದೇ ಪರಿಗಣಿಸಿದಂತಿದೆ. ಗುಲಬರ್ಗಾದಲ್ಲಿ ಕುಮಾರೇಶ್ವರ ನಾಟ್ಯ ಸಂಘದ ಮಾಲೀಕರಾದ ಶೇಖರವರು ತಮ್ಮ ಕಂಪನಿಯಲ್ಲಿ ನಟಿಸಿದ್ದ ಹಾಗೂ ನಟಿಸುತ್ತಿರುವ ಕಲಾವಿದರಿಗೆ, ತಬಲಾ, ಹಾರ್ಮೋನಿಯಂ ಬಾರಿಸುವ ಸಂಗೀತ ಕಲಾವಿದರಿಗೆ ಹಾಗೂ ತಮ್ಮ ವೃತಿ ಕಂಪನಿ ಗೆಳೆಯರಿಗೆ ಅಕಾಡೆಮಿ ಪ್ರಶಸ್ತಿಗಳ ಸಿಂಹಪಾಲನ್ನು ದೊರಕಿಸಿಕೊಟ್ಟಿದ್ದಾರೆ. ಉದಾಹರಣೆಗೆ. ತಮ್ಮ ಕಂಪನಿಯಲ್ಲಿ ತಬಲಾ ವಾದಕರಾಗಿರುವ ಎಚ್.ಹನಮಂತ ನರಬೋಳಿ ಹಾಗೂ ಬಸವರಾಜ ಹೂಗಾರರಿಗೆ  2016 ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟು ಋಣಸಂದಾಯ ಮಾಡಿದ್ದಾರೆ. ಇವರ ನಾಟಕ ಕಂಪನಿಯ ಹಾಲಿ ನಟಿ ಉಮಾ ರಾಣೆಬೆನ್ನೂರರವರಿಗೆ ಚಿಂದೋಡಿಲೀಲಾ ದತ್ತಿ ಪ್ರಶಸ್ತಿ ಕೊಡಮಾಡಿದ್ದಾರೆ. ತಮ್ಮ ನಾಟಕ ಕಂಪನಿಯಲ್ಲಿ ನಟನೆ ಮಾಡುತ್ತಿರುವ ಕಲಾವಿದನ ತಾಯಿ ಕಮಲಮ್ಮ ಬೀಳಗಿಯವರಿಗೆ ಪ್ರಶಸ್ತಿ ಕೊಟ್ಟಿದ್ದಾರೆ. ಉಳಿದಂತೆ ತಮ್ಮ ಕಂಪನಿಯಲ್ಲಿ ಹಾರ್ಮೋನಿಯಂ ಬಾರಿಸಿದವರಿಗೂ ಪ್ರಶಸ್ತಿ ಲಬಿಸಿವೆ.   ಒಟ್ಟಾರೆಯಾಗಿ ಅಕಾಡೆಮಿಯ ಅಧ್ಯಕ್ಷಗಿರಿಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಕುಮಾರೇಶ್ವರ ನಾಟಕ ಕಂಪನಿಯ ಕಲಾವಿದರಿಗೆ ಬೋನಸ್ ರೂಪದಲ್ಲಿ ಸರಕಾರಿ ಸಂಸ್ಥೆಯ ಅವಾರ್ಡಗಳನ್ನು ಕೊಟ್ಟು ತಮ್ಮ ಕಂಪನಿಯನ್ನು ಗಟ್ಟಿಕೊಳಿಸಿಕೊಳ್ಳಲು ಪ್ರಶಸ್ತಿಯನ್ನು ದಾಳವಾಗಿ ಬಳಸಿಕೊಂಡಿರುವುದು ಅಕ್ಷಮ್ಯ. ಕುಮಾರೇಶ್ವರ ಕಂಪನಿಯಲ್ಲಿ ತೊಡಗಿಸಿಕೊಂಡವರು ಕಲಾವಿದರು ಅಲ್ಲಾ ಎಂದೇನಲ್ಲಾ. ಆದರೆ ತಮ್ಮದೇ ಕಂಪನಿಯ ಸದಸ್ಯರಿಗೆ ಪ್ರಶಸ್ತಿಗಳನ್ನು ಕೊಟ್ಟಿದ್ದು ನಾಟಕ ಅಧ್ಯಕ್ಷರಾದವರ ಸ್ವಜನಪಕ್ಷಪಾತ ಧೋರಣೆಯಾಗಿದೆ. ಶೇಖ ಮಾಸ್ತರರ ಅಧ್ಯಕ್ಷತೆಯ ಅವಧಿ ಇನ್ನೊಂದು ಒಂಬತ್ತು ತಿಂಗಳಿಗೆ ಮುಗಿಯುತ್ತದೆ. ಪ್ರಶಸ್ತಿ ಹಂಚಿಕೆಗೆ ಇರುವುದು ಇದೇ ಕೊಟ್ಟ ಕೊನೆಯ ಅವಕಾಶ. ಹೀಗಾಗಿ ಹೆಚ್ಚಿನ ಪ್ರಶಸ್ತಿಗಳನ್ನೆಲ್ಲಾ ತಮ್ಮ ವೃತ್ತಿ ಕಂಪನಿ ಬಾಂದವರಿಗೆ ಹಂಚಿ ತಮ್ಮ ಬದುಕನ್ನು ಪಾವನಮಾಡಿಕೊಂಡಿದ್ದಾರೆ. ಮುಂದಿನ ಬದುಕನ್ನು ಸುಗಮಗೊಳಿಸಿಕೊಂಡಿದ್ದಾರೆ.

ವಿಜಯ ಕಾಶಿ
ನಾಟಕ ಅಕಾಡೆಮಿಯ ಪ್ರಶಸ್ತಿ ಪಟ್ಟಿಯಲ್ಲಿ ಆಧುನಿಕ ರಂಗಭೂಮಿಯವರನ್ನು ಹುಡುಕಿದರೂ ಸಿಗದಂತಾಗಿದೆ. ಧಾರವಾಡದ ವಿಠ್ಠಲ್ ಕೊಪ್ಪದ, ಬೆಂಗಳೂರಿನ ವಿಜಯ ಕಾಶಿ, ಉಡುಪಿಯ ವಾಸುದೇವರಾವ್, ಅಲೆಮನೆ ಸುಂದರಮೂರ್ತಿ.. ಹೀಗೆ ನಾಲ್ಕೈದು ಹೆಸರುಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ನಾಟಕ ಅಕಾಡೆಮಿಯಲ್ಲಿ ಹತ್ತಕ್ಕೂ ಹೆಚ್ಚು ಜನ ಸದಸ್ಯರು ಹವ್ಯಾಸಿ ರಂಗಭೂಮಿಯವರೇ ಆಗಿದ್ದರೂ ಅವರೂ ಸಹ ವೃತ್ತಿ ರಂಗಭೂಮಿ ಪರ ಒಲವನ್ನು ತೋರಿದ್ದು ಪ್ರಶ್ನಾರ್ಹವಾಗಿದೆ. ಶೇಖ ಮಾಸ್ತರರಿಗೆ ತಾವು ಪ್ರತಿನಿಧಿಸುತ್ತಿರುವ ವೃತ್ತಿ ಕಂಪನಿಯ ಮೇಲಿರುವ ನಿಷ್ಟೆಯೂ ಹವ್ಯಾಸಿ ರಂಗಭೂಮಿಯನ್ನು ಪ್ರತಿನಿಧಿಸುವ ಅಕಾಡೆಮಿಯ ಸದಸ್ಯರುಗಳಿಗಿಲ್ಲವಲ್ಲಾ ಎನ್ನುವುದೇ ದುರಂತವಾಗಿದೆಪ್ರಶಸ್ತಿಗೆ ಹವ್ಯಾಸಿ ರಂಗಭೂಮಿಯಲ್ಲಿ ಆಯ್ಕೆಯಾದವರ ಬಗ್ಗೆಯೂ ಅಸಮಾಧಾನವಿದೆ. ವಿಜಯ ಕಾಶಿಯವರನ್ನು ಶಿವಮೊಗ್ಗ ಜಿಲ್ಲಾ ಕೋಟಾದಲ್ಲಿ ಆಯ್ಕೆ ಮಾಡಿದ್ದಕ್ಕೆ ಈಗಾಗಲೇ ಶಿವಮೊಗ್ಗದ ರಂಗಕರ್ಮಿಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಪತ್ರಿಕೆಗಳಲ್ಲೂ ವರದಿ ಪ್ರಕಟಗೊಂಡಿದೆ. ಕಳೆದ ನಾಲ್ಕೈದು ದಶಕಗಳಿಂದ ಬೆಂಗಳೂರು ವಾಸಿಯಾಗಿರುವ ವಿಜಯಕಾಶಿಯವರು ಅದು ಹೇಗೆ ಶಿವಮೊಗ್ಗ ರಂಗಭೂಮಿಯನ್ನು ಪ್ರತಿನಿಧಿಸುತ್ತಾರೆ? ಎನ್ನುವುದು ಜಿಲ್ಲೆಯವರ ಆಕ್ಷೇಪ. ಅದಕ್ಕಿಂತಲೂ ಸಿನೆಮಾ ಹಾಗೂ ಟಿವಿ ಕ್ಷೇತ್ರದಲ್ಲೇ ತಮ್ಮ ಕಲಾಬದುಕನ್ನು ಕಂಡುಕೊಂಡ ವಿಜಯಕಾಶಿಯವರು ರಂಗಭೂಮಿಗೆ ಕೊಟ್ಟ ಕೊಡುಗೆ ಏನು? ಎನ್ನುವುದೂ ಹಲವರ ಪ್ರಶ್ನೆಯಾಗಿದೆ. 'ರಂಗಸಂಪದ'ದ ಋಣ ತೀರಿಸಲು ಉಮಾಶ್ರೀಯವರ ಒತ್ತಾಸೆಯಂತೆ ವಿಜಯ ಕಾಶಿಯವರಿಗೆ ಪ್ರಶಸ್ತಿಯನ್ನು ಕೊಡಲಾಗಿದ್ದು ಶಿವಮೊಗ್ಗ ಜಿಲ್ಲೆಯ ರಂಗಕರ್ಮಿಯೊಬ್ಬರಿಗೆ ದೊರೆಯಬಹುದಾದ ಅವಕಾಶವೊಂದನ್ನು ತಪ್ಪಿಸಿದಂತಾಗಿದ್ದಂತೂ ಸತ್ಯ. ಅದೇ ರೀತಿ ರಂಗಸಂಪದದಲ್ಲಿದ್ದ ಎಲ್.ರಾಮಕೃಷ್ಣರವರಿಗೂ ಸಹ ಉಮಾಶ್ರೀಯವರು ಅಕಾಡೆಮಿ ಪ್ರಶಸ್ತಿ ಕೊಡಿಸಿದ್ದಾರೆ. ರಂಗಭೂಮಿಗೆ ರಾಮಕೃಷ್ಣರವರು ಕೊಟ್ಟ ಕೊಡುಗೆ ಪ್ರಶ್ನಾರ್ಹವಾಗಿದ್ದರೂ ಉಮಾಶ್ರೀಯವರ ಕೃಪಾಕೃಟಾಕ್ಷವೇ ಅವರಿಗೆ ಪ್ರಶಸ್ತಿ ದೊರೆಯಲು ಕಾರಣವಾಗಿದೆ. ಉಡುಪಿಯ ವಾಸುದೇವರಾವ್ರವರು ಕಲಾಪೋಷಕರಾಗಿ, ಸಂಘಟಕರಾಗಿ 'ರಂಗಭೂಮಿ ಉಡುಪಿ' 'ಯಲ್ಲಿ ಗುರುತಿಸಿಕೊಂಡಿದ್ದಾರೆಯೇ ಹೊರತು ನಟರಾಗಿಯಂತೂ ಅಲ್ಲಾ. ಯೌವನದಲ್ಲಿ ಕೆಲವು ನಾಟಕಗಳಲ್ಲಿ ಪಾತ್ರ ಅಭಿನಯಿಸಿದ್ದನ್ನು ಬಿಟ್ಟರೆ ಕಲಾವಿದರಾಗಿ ಎಂದೂ ಹೆಸರಾಗಿರಲಿಲ್ಲ. ಆದರೂ ಅವರಿಗೆ ನಟನೆಗಾಗಿ ಪ್ರಶಸ್ತಿ ಕೊಟ್ಟಿದ್ದಕ್ಕೆ ಅಕಾಡೆಮಿಯಲ್ಲಿರುವವರ ಮಾಹಿತಿ ಕೊರತೆಯಿಂದಾದ ಅಜ್ಞಾನವೇ ಕಾರಣವಾಗಿದೆ. ಇರುವುದರಲ್ಲಿ ಶಿರಶಿಯ ಚಂದ್ರು ಉಡುಪಿಯವರದ್ದೊಂದು ಸೂಕ್ತ ಆಯ್ಕೆ. ಯಾಕೆಂದರೆ ನಟನಾಗಿ, ರಂಗಸಂಘಟಕನಾಗಿ ಹಾಗೂ ಮೇಕಪ್ ಕಲಾವಿದನಾಗಿ ಚಂದ್ರು ಮಾಡಿದ ಕೆಲಸ ಬಲು ದೊಡ್ಡದು. ಅದೂ ಡಾ.ಶ್ರೀಪಾದ ಭಟ್ ರಂತಹ ಸೂಕ್ಷ್ಮ ಪ್ರಜ್ಞೆಯ ರಂಗಕರ್ಮಿ ನಾಟಕ ಅಕಾಡೆಮಿಯ ಸದಸ್ಯರಾಗಿದ್ದಕ್ಕೆ ಚಂದ್ರೂರವರಿಗೆ ಪ್ರಶಸ್ತಿ ದೊರತಿದೆಯೇ ಹೊರತು ಇಲ್ಲವಾದರೆ ಇನ್ಯಾರೋ ಅಪಾತ್ರರಿಗೆ ದಕ್ಕುತ್ತಿತ್ತು.


ಸಿನೆಮಾರಂಗದ ವಿಜಯಕಾಶಿಯವರಿಗೆ ಪ್ರಶಸ್ತಿ ಕೊಟ್ಟಿದ್ದಷ್ಟೇ ಅಲ್ಲದೇ ಚಲನಚಿತ್ರ ರಂಗದ ಭಾಗವೇ ಆಗಿರುವ, ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಪ್ರಸಿದ್ದ ಸಂಗೀತ ನಿರ್ದೇಶಕ ಹಂಸಲೇಖರವರಿಗೆ 2016 ಗೌರವ ಪ್ರಶಸ್ತಿಯನ್ನು ನೀಡಲಾಗಿದೆ. ಯಾರು ಏನೇ ಹೇಳಲಿ ಕನ್ನಡ ರಂಗಭೂಮಿಗೆ ಹಂಸಲೇಖರವರ ಕೊಡುಗೆ ನಗಣ್ಯವಾಗಿದೆ. ಮಲೆಗಳಲ್ಲಿ ಮದುಮಗಳು ಎನ್ನುವ ಸರಕಾರಿ ಪ್ರಾಜೆಕ್ಟ್ ನಾಟಕಕ್ಕೆ ಅಪಾರ ಸಂಭಾವನೆ ಪಡೆದು ಸಂಗೀತ ನಿರ್ದೇಶನ ಮಾಡಿದ್ದನ್ನು ಬಿಟ್ಟರೆ ಹಂಸಲೇಖಾರವರು ರಂಗತಂಡಗಳ ಜೊತೆಯಲ್ಲಿ ಕೂತು ಕೆಲಸ ಮಾಡಿದ್ದೇ ಅಪರೂಪ. ಅತ್ಯಧಿಕ ಸಂಭಾವನೆಯನ್ನು ಕೊಟ್ಟು ಹಂಸಲೇಖರವರಿಂದ ಸಂಗೀತ ಸಂಯೋಜನೆ ಮಾಡಿಸಿಕೊಳ್ಳುವಷ್ಟು ಕನ್ನಡ ರಂಗಭೂಮಿ ಶ್ರೀಮಂತವಾಗಿಲ್ಲ. ಸಿನೆಮಾರಂಗಕ್ಕೆ ಹೋಗುವುದಕ್ಕಿಂತಾ ಮೊದಲು ನಾಟಕಗಳನ್ನು ಮಾಡಿಸಿದ್ದಾರಾದರೂ ಅವುಗಳಲ್ಲಿ ಯಾವವೂ ರಂಗಭೂಮಿಯಲ್ಲಿ ಗಮನಾರ್ಹವಾದವುಗಳಲ್ಲ. ಈಗಂತೂ ಅವರು ರಂಗಭೂಮಿಯಲ್ಲಿ ಸಕ್ರೀಯವಾಗೂ ಇಲ್ಲಾ ಆದರೂ ಹಂಸಲೇಖರವರಿಗೆ ಅದ್ಯಾವ ಮಾನದಂಡದಲ್ಲಿ ಗೌರವ ಪ್ರಶಸ್ತಿ  ಕೊಟ್ಟರೋ ಶೇಖ್ ಮಾಸ್ತರರೇ ಬಲ್ಲರು. ಹಾಗೆಯೇ 2015ರ ರಂಗಗೌರವ ಪ್ರಶಸ್ತಿಯನ್ನು ವೃತ್ತಿ ರಂಗ ಕಲಾವಿದೆ ಮಾನುಬಾಯಿಯವರಿಗೆ ಕೊಟ್ಟಿದ್ದು ಅಭಿನಂದನೀಯ ಆದರೆ.. ಇದರಲ್ಲೂ ಶೇಖ್ ಸಾಹೇಬರ ಸ್ವಾರ್ಥವಿದೆ. ಮಾನುಬಾಯಿಯವರ ಮಗಳಾದ ಭಾರತಿ ದಾವಣಗೆರೆಯವರು ಶೇಖ್ ಮಾಸ್ತರರ ಕುಮಾರೇಶ್ವರ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಕಂಪನಿಯ ನಟಿಯ ತಾಯಿಗೆ ಗೌರವ ಪ್ರಶಸ್ತಿಯನ್ನು ಕೊಡುವ ಮೂಲಕ  ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರು ಸ್ವಜನಪಕ್ಷಪಾತ ಮಾಡಿದ್ದಾರೆ. ತಮ್ಮ ಹುದ್ದೆಯ ಲಾಭವನ್ನು ತಮ್ಮ ಸ್ವಂತ ಕಂಪನಿಯ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆ. ಅಧ್ಯಕ್ಷರಾದವರೊಬ್ಬರ ಇಂತಹ ಸ್ವಾರ್ಥವನ್ನು ಪ್ರಶ್ನಿಸಬೇಕಾದ ಅಕಾಡೆಮಿಯ ಸದಸ್ಯರುಗಳು ತಮ್ಮ ಕೋಟಾದಲ್ಲಿ ಒಬ್ಬರ ಹೆಸರನ್ನು ಸೂಚಿಸಿ ಜಾಣ ಮೌನವನ್ನು ವಹಿಸಿದ್ದಾರೆ. ಪ್ರತಿಭಟಿಸಬೇಕಾದ ರಂಗಕರ್ಮಿಗಳು ಅಕಾಡೆಮಿಗೂ ನಮಗೂ ಸಂಬಂಧವೇ ಇಲ್ಲವೆನ್ನುವಂತೆ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಇಡೀ ನಾಟಕ ಅಕಾಡೆಮಿ ಎನ್ನುವುದು ಶೇಖ ಮಾಸ್ತರರ ಪ್ರೈವೇಟ್ ಲಿಮಿಟೆಡ್ ಕಂಪನಿಯಾದಂತಾಗಿದೆ. 

ಪ್ರಶಸ್ತಿಗಳ ಆಯ್ಕೆಗೆ ಸೀನಿಯಾರಿಟಿಯನ್ನು ಮಾನದಂಡವಾಗಿ ಬಳಸಲಾಗಿದೆಯಂತೆ. ಅಂದರೆ ಈಗ ರಂಗಭೂಮಿಯಲ್ಲಿ ಸಕ್ರೀಯವಾಗಿ ಇಲ್ಲದವರಿಗೆ ಪ್ರಶಸ್ತಿಗಳಲ್ಲಿ ಬಹುಪಾಲು ಲಭಿಸಿದೆ. ಹಿರಿಯರಿಗೆ ಪ್ರಶಸ್ತಿ  ಕೊಡಬಾರದು ಎಂದಲ್ಲಾ. ಅವರಿಗೆ ಜೀವಮಾನದ ಸಾಧನೆಗೆ ಗೌರವ ಪ್ರಶಸ್ತಿ ಕೊಟ್ಟು ಗೌರವಿಸಲಿ. ಆದರೆ.. ರಂಗಭೂಮಿಯಲ್ಲಿ ಯಾರು ಈಗಲೂ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೋ ಅಂತವರನ್ನು ಗುರುತಿಸಿ ಪ್ರಶಸ್ತಿಯನ್ನು ಕೊಟ್ಟಿದ್ದರೆ ರಂಗಭೂಮಿಯಲ್ಲಿ ಇನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ. ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಪ್ಯಾರಲೈಸಿಸ್ ಆಗಿ ಮಲಗಿದವರು, ರಂಗಭೂಮಿಯಲ್ಲಿ ಸಕ್ರೀಯರಾಗಿಲ್ಲದವರು ಹಾಗೂ ವಯೋವೃದ್ದರಿಗೆ ಪ್ರಶಸ್ತಿಗಳನ್ನು ಕೊಡುವುದರಿಂದ ಅವರನ್ನು ಮತ್ತೆ ರಂಗಭೂಮಿಯಲ್ಲಿ ಸಕ್ರೀಯಗೊಳಿಸಲಂತೂ ಸಾಧ್ಯವಿಲ್ಲ. ಅಂತವರು ಹಿಂದೆ ರಂಗಭೂಮಿಗೆ ಕೊಟ್ಟ ಕೊಡುಗೆಗಾಗಿ ಗೌರವ ಪ್ರಶಸ್ತಿಯನ್ನು ಕೊಡುವ ಮೂಲಕ ಸನ್ಮಾನಿಸಿದರೆ ಸಾಕಾಗಿತ್ತುಆದರೆ ಪ್ರಸ್ತುತ ನಿಷ್ಕ್ರೀಯರಾದವರಿಗೇ ಅತೀ ಹೆಚ್ಚು ಪ್ರಶಸ್ತಿಗಳನ್ನು ಕೊಡುವುದರಿಂದ ಅದು ರಂಗಭೂಮಿಯ ಬೆಳವಣಿಗೆಯಲ್ಲಿ ಸಹಕಾರಿಯಾಗುವಂತಿಲ್ಲ. ಇದರ ಕುರಿತು ಅರಿವೂ ಅಕಾಡೆಮಿಯವರಿಗಿಲ್ಲ. ಆದ್ದರಿಂದಲೇ ರಂಗಭೂಮಿಯಲ್ಲಿ ಸಕ್ರೀಯರಾದವರು ಅಕಾಡೆಮಿಯ ಸಹವಾಸಕ್ಕೇ ಹೋಗುವುದಿಲ್ಲ. ಇದರಿಂದಾಗಿ ಅಕಾಡೆಮಿ ಎನ್ನುವುದು ಇದ್ದರೂ ಇಲ್ಲದಂತಾಗಿದೆ.

ಕಳೆದ ವರ್ಷದವರೆಗೂ ವಾರ್ಷಿಕವಾಗಿ ಕೇವಲ 15 ಕಲಾವಿದರಿಗೆ ಮಾತ್ರ ಪ್ರಶಸ್ತಿಗಳನ್ನು ಕೊಡುವ ಮಿತಿಯಿತ್ತು. ಹಾಗೂ ಐದು ಸಾವಿರ ಹಣವನ್ನು ಪ್ರಶಸ್ತಿಯೊಂದಿಗೆ ಕೊಡಮಾಡಲಾಗುತ್ತಿತ್ತು. ಆದರೆ ಸಚಿವೆ ಉಮಾಶ್ರೀಯವರು ಪ್ರಶಸ್ತಿಯ ಮೊತ್ತವನ್ನು ತಲಾ ಇಪ್ಪತ್ತೈದು ಸಾವಿರಕ್ಕೆ ಏರಿಸುವ ಜೊತೆಗೆ ಪ್ರಶಸ್ತಿಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಿದರು. ಇದು ನಿಜಕ್ಕೂ  ಅಕಾಡೆಮಿಯ ಪ್ರಶಸ್ತಿಯ ಇತಿಹಾಸದಲ್ಲಿ  ಉತ್ತಮವಾದ ಬೆಳವಣಿಗೆಯಾಗಿತ್ತು. ಆದರೆ.. ಪ್ರಶಸ್ತಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ನಾಟಕ ಅಕಾಡೆಮಿ ಎಡವಿದೆ. ಅಕಾಡೆಮಿ ಅಧ್ಯಕ್ಷರೇ ವೃತಿಕಂಪನಿ ಪಕ್ಷಪಾತಿಯಾಗಿ ವರ್ತಿಸಿದ್ದಾರೆ. ತಮ್ಮ ನಾಟಕ ಕಂಪನಿಯ ಸಂಪರ್ಕದಲ್ಲಿದ್ದವರಿಗೆ ಹೆಚ್ಚು ಪ್ರಶಸ್ತಿಗಳನ್ನು ಕೊಟ್ಟು ಸ್ವಜನಪಕ್ಷಪಾತಿಯಾಗಿ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಂತೂ ಸ್ಪಷ್ಟ. ಇನ್ನು ಬಹುತೇಕ ಅಕಾಡೆಮಿಯ ಸದಸ್ಯರುಗಳು ಆಧುನಿಕ ರಂಗಭೂಮಿಗೆ ಅನ್ಯಾಯ ಮಾಡಿದ್ದು ವೃತ್ತಿ ರಂಗಭೂಮಿಯವರತ್ತ ಒಲವು ತೋರಿದ್ದಾರೆ. ನಾಟಕ ಅಕಾಡೆಮಿ ಆಯ್ಕೆ ಮಾಡಿದ ಪ್ರಶಸ್ತಿ ಪಟ್ಟಿಯನ್ನು ಪರಿಶೀಲಿಸಿ ಒಪ್ಪಿಗೆ ಕೊಡಬೇಕಾಗಿದ್ದ ಸಚಿವೆ ಉಮಾಶ್ರೀಯವರೂ ಸಹ ರಂಗಭೂಮಿಗೆ ಪ್ರವೇಶ ಕೊಟ್ಟ ಹವ್ಯಾಸಿ ರಂಗಭೂಮಿಯನ್ನು ಕಡೆಗಣಿಸಿ, ತಮ್ಮ ಅನ್ನಕ್ಕೆ ದಾರಿಯಾದ ವೃತ್ತಿ ರಂಗಭೂಮಿಯತ್ತಲೇ ಹೆಚ್ಚು ಒಲವು ತೋರಿಸಿದ್ದಾರೆ. ಹೀಗಾಗಿ. ಯಾವ ಅಕಾಡೆಮಿ ವೃತ್ತಿ, ಹವ್ಯಾಸಿ, ರೆಪರ್ಟರಿ ರಂಗಭೂಮಿಯನ್ನು ಸಮಾನವಾಗಿ ಪ್ರಶಸ್ತಿ ಆಯ್ಕೆಯಲ್ಲಿ ಪ್ರತಿನಿಧಿಸಬೇಕಿತ್ತೋ ಅದು ಆಗದೇ ಕೇವಲ ವೃತ್ತಿ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಮಾತ್ರ ಹೆಚ್ಚು  ಪ್ರಾಶಸ್ತ್ಯಕೊಟ್ಟಿದ್ದು ಆಧುನಿಕ ರಂಗಕರ್ಮಿಗಳಿಗೆ ಅಸಮಾಧಾನವನ್ನುಂಟು ಮಾಡಿದ್ದಂತು ಸತ್ಯ. ತಾರತಮ್ಯ ಮಾಡುವ ಅಧ್ಯಕ್ಷರಿಂದ, ಹವ್ಯಾಸಿ ರಂಗಭೂಮಿಯಿಂದಲೇ ಐಡೆಂಟಿಟಿ ಪಡೆದು ಆಧುನಿಕ ರಂಗಭೂಮಿಯನ್ನೇ ಕಡೆಗಣಿಸಿದ ನಾಟಕ ಅಕಾಡೆಮಿಯ ಸದಸ್ಯರುಗಳಿಂದ ನಾಟಕ ಅಕಾಡೆಮಿಗೆ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಪ್ರಸ್ತುತ ಅಕಾಡೆಮಿಯ ಅವಧಿ ಮುಗಿಯುವವರೆಗೂ ನಾಟಕ ಅಕಾಡೆಮಿಯ ಹೆಸರನ್ನು ಕರ್ನಾಟಕ ವೃತಿಕಂಪನಿ ನಾಟಕ ಅಕಾಡೆಮಿ ಎಂದು ಬದಲಾಯಿಸಲು ರಂಗಕರ್ಮಿಗಳೆಲ್ಲಾ ಸೇರಿ ಸಚಿವೆ ಉಮಾಶ್ರೀಯವರನ್ನು ಒತ್ತಾಯಿಸುವುದು ಉತ್ತಮ. ಇಲ್ಲವಾದರೆ ಕುಮಾರೇಶ್ವರ ವೃತ್ತಿ ಕಂಪನಿ ನಾಟಕ ಅಕಾಡೆಮಿ ಎಂದು ಬದಲಾಯಿಸಿದರೂ ಒಳ್ಳೆಯದು.

ಯಾರು ಏನೇ ಹೇಳಲಿ. ನಾಟಕ ಅಕಾಡೆಮಿಯ ಘನತೆ ಗೌರವವನ್ನು ಸಂಪೂರ್ಣವಾಗಿ ಹಾಳುಮಾಡಿದ ಕೀರ್ತಿ ಹಾಲಿ ಅಧ್ಯಕ್ಷ ಹಾಗೂ ಸದಸ್ಯರುಗಳಿಗೆ ಸಲ್ಲಲೇಬೇಕಿದೆ. ಇಲ್ಲಿರುವವರ ವ್ಯಯಕ್ತಿಕ ಸ್ವಾರ್ಥಕ್ಕಾಗಿ ಇಡೀ ಅಕಾಡೆಮಿ ಬಳಕೆಯಾಗುತ್ತಿರುವುದು ಅಕಾಡೆಮಿಗೆ ಕಳಂಕವಾಗಿದೆ. ಇಂತಹ ಟೀಂ ಒಂದನ್ನು ಆಯ್ಕೆ ಮಾಡಿ ರಂಗಭೂಮಿಯ ಮೇಲೆ ಹೇರಿದ ಸಚಿವೆ ಉಮಾಶ್ರೀಯವರು ನಾಟಕ ಅಕಾಡೆಮಿಯ ವಿಫಲತೆಯ ಹೊಣೆಗಾರಿಕೆಯನ್ನು ಹೊರಲೇಬೇಕಿದೆ. ಮುಂದಿನ ಸಲವಾದರೂ ರಂಗಭೂಮಿಯಲ್ಲಿ ಸಕ್ರೀಯವಾಗಿರುವವರನ್ನು ಹಾಗೂ ರಂಗಭೂಮಿಯ ಸಮಗ್ರ ಬೆಳವಣಿಗೆಯ ಕುರಿತು ಬದ್ದತೆ ಇರುವವರನ್ನು ನಾಟಕ ಅಕಾಡೆಮಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಈಗ ಮಾಡಿದ ಪಾಪಕ್ಕೆ ಉಮಾಶ್ರೀಯವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಏನಾದರಾಗಲಿ ಕರ್ನಾಟಕ ನಾಟಕ ಅಕಾಡೆಮಿಯು ಸಮಗ್ರ ಕನ್ನಡ ರಂಗಭೂಮಿಯ ಸಶಕ್ತ ಪ್ರಾತಿನಿಧಿಕ ಸಂಸ್ಥೆಯಾಗಬೇಕಿದೆ. ಅಕಾಡೆಮಿಗೂ ನಮಗೂ ಏನೇನೂ ಸಂಬಂಧವೇ ಇಲ್ಲ ಎನ್ನುವಂತಿರುವ ರಂಗಕರ್ಮಿಗಳೂ ಸಹ ನಾಟಕ ಅಕಾಡೆಮಿಯನ್ನು ಸದೃಡಗೊಳಿಸಲು ಪ್ರಯತ್ನಿಸಬೇಕಿದೆ. ಅಕಾಡೆಮಿ ಹಾದಿತಪ್ಪಿದಾಗಿ ಪ್ರತಿಭಟಿಸುವ ಮೂಲಕ ಅದನ್ನು ಸರಿದಾರಿಗೆ ತರುವಂತಹ ಜವಾಬ್ದಾರಿಯನ್ನು ರಂಗಬದ್ದತೆಯಿರುವ ಎಲ್ಲಾ ರಂಗಕರ್ಮಿ ಕಲಾವಿದರುಗಳೂಳ ನಿಷ್ಟೆಯಿಂದ ನಿರ್ವಹಿಸಬೇಕಿದೆ.  

                                      -ಶಶಿಕಾಂತ ಯಡಹಳ್ಳಿ








    







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ