ಶನಿವಾರ, ಅಕ್ಟೋಬರ್ 1, 2016

ಪ್ರತಿಭೆಯ ಕಣಜ ಗೋಪಾಲ ವಾಜಪೇಯಿ ಕಾಕಾನಿಗೆ ಅಂತಿಮ ವಿದಾಯ :





ವಾಜಪೇಯಿ ಕಾಕ ಇನ್ನಿಲ್ಲ ಎನ್ನುವ ಸುದ್ದಿ ಸೆಪ್ಟಂಬರ್ 20ರಂದು ರಾತ್ರಿ ಜಾಲತಾಣಗಳಲ್ಲಿ ಹರಿದಾಡಿದಾಗ ಅವರನ್ನು ಬಲ್ಲವರ ಎದೆಯಲ್ಲಿ ಅಕ್ಕಿ ಕುಟ್ಟಿದಂತಾ ಅನುಭವ. ಗೋಪಾಲ ವಾಜಪೇಯಿಯವರ ಆತ್ಮೀಯತೆಯ ಹಿಡತವೇ ಅಂತಹುದು. ಗೋಪಾಲರವರಿಗೆ ಒಮ್ಮೆ ಯಾರಾದರೂ ಪರಿಚಯ ಆದರೆ ಸಾಕು ಅವರನ್ನು ಜನುಮ ಜನುಮದ ಸಂಬಂಧ ಇರುವವರ ಹಾಗೆ ಆವರಿಸಿಕೊಂಡು ಬಿಡುವ ಸ್ನೇಹಪರ ಜೀವಿಯಾಗಿದ್ದರು. ಅದರಲ್ಲೂ ರಂಗಭೂಮಿಯವರೆಂದರೆ ವಾಜಪೇಯಿಯವರಿಗೇನೋ ಕರುಳಬಳ್ಳಿಯ ಸಂಬಂಧ. ಅದೆಂತದೋ ಅತ್ಮೀಯತೆಯ ಬಂಧವನ್ನು ತಮ್ಮ ಸುತ್ತಲಿರುವವರ ಜೊತೆಗೆ ಬೆಸೆದು ಬಿಡುತ್ತಾ ಅನ್ಯರ ಅಂತಃಕ್ಕರಣಕ್ಕೆ ಆತ್ಮೀಯತೆಯ ಬಲೆ ಬೀಸಿ ಗೆಳೆತನವನ್ನು ಸೆರೆಹಿಡಿಯುವ ಕಲೆ ವಾಜಪೇಯಿಯವರಿಗೆ ಸಿದ್ದಿಸಿತ್ತು.

ವಾಜಪೇಯಿಯವರದು ಖಂಡಿತಾ ಸಾಯುವ ವಯಸ್ಸಲ್ಲ. ಈಗ ಕೇವಲ ಆರವತ್ನಾಲ್ಕರ ಹರೆಯ. ಇನ್ನೂ ಇಪ್ಪತ್ತು ವರ್ಷಗಳ ಕಾಲ ಕ್ರಿಯಾಶೀಲವಾಗಿ ಬಾಳಿ ಬದುಕಬಹುದಾದ ಜೀವವದು. ಆದರೆ ಅದ್ಯಾಕೋ ಕಳೆದ ದಶಕದಿಂದ ಅವರ ಆರೋಗ್ಯ ಒಂದಿಲ್ಲೊಂದು ಕಾರಣಕ್ಕೆ ತೊಂದರೆ ಕೊಡತೊಡಗಿತು. ಕಿಡ್ನಿ ಸಮಸ್ಯೆ, ಹಾರ್ಟ ಪ್ರಾಬ್ಲೆಂ, ಉಸಿರಾಟದ ತೊಂದರೆಗಳು ಒಂದರ ನಂತರ ಒಂದು ಬೆಂಬಡದೇ ಕಾಡಿದವು. ಬೇರೆ ಯಾರಾದರೂ ಆಗಿದ್ದರೆ ಅನಾರೋಗ್ಯದ ಖಿನ್ನತೆಯಿಂದ ಬದುಕಿನ ಆಸೆಯನ್ನೇ ಕಳೆದುಕೊಂಡು ನಿರುತ್ಸಾಹಿಗಳಾಗುತ್ತಾ ಸಾವಿನ ದಿನಗಳನ್ನು ಎಣಿಸುತ್ತಿದ್ದರು. ಆದರೆ ವಾಜಪೇಯಿಯವರು ಅನಾರೋಗ್ಯದಲ್ಲೂ ತಮ್ಮನ್ನು ತಾವು ಕ್ರಿಯಾಶೀಲವಾಗಿ ಪ್ರತಿಕ್ಷಣ ಪ್ರತಿದಿನ ತೊಡಗಿಸಿಕೊಂಡು ಸಾವಿಗೆ ಚಳ್ಳೇಹಣ್ಣು ತಿನ್ನಿಸುತ್ತಲೇ ಬಂದಿದ್ದರು. ಅವರಿಗಿರುವ ಆರೋಗ್ಯದ ಸಮಸ್ಯೆಗಳಿಗೆ ಅವರೆಂದೋ ಕಾಲವಶರಾಗಬೇಕಿತ್ತು. ಆದರೆ ನಿರಂತರ ಸೃಜನಶೀಲತೆ ಹಾಗೂ ಪ್ರತಿಕ್ಷಣದ ಜೀವನೋತ್ಸಾಹಗಳು ವಾಜಪೇಯಿಯವರನ್ನು ಇಲ್ಲಿವರೆಗೂ ಜೀವಂತವಾಗಿಟ್ಟಿದ್ದವು. ದಶಕದಿಂದ ಸಾವಿನ ಜೊತೆಗೆ ಸೆನೆಸುತ್ತಾ ಪ್ರತಿ ಬಾರಿ ಗೆಲ್ಲುತ್ತಲೇ ಇದ್ದ ವಾಜಪೇಯಿ ಕಾಕಾ ಕೊನೆಗೂ ಕಾಲನ ಕಿಂಕರರ ವಂಚನೆಗೆ ಸೋಲಲೇ ಬೇಕಾಯಿತು. ಕ್ರಿಯಾಶೀಲ ಜೀವವೊಂದು ಖಾಯಂ ಆಗಿ ಬದುಕಿನ ನೇಪತ್ಯಕ್ಕೆ ಸೇರಿಹೋಯಿತು.


ಇತ್ತೀಚೆಗಂತೂ ವಾಜಪೇಯಿಯವರಿಗೆ ಪೇಸ್ಬುಕ್ ಎನ್ನುವುದು ಅಭಿವ್ಯಕ್ತಿಯ ಸಂಗಾತಿಯಾಗಿತ್ತು. ತಮಗನ್ನಿಸಿದ್ದನ್ನು ತಮ್ಮ ಮುಖಪುಟದ ಗೋಡೆಯ ಮೇಲೆ ಬರೆದು ಹಂಚಿಕೊಳ್ಳುತ್ತಿದ್ದರು. ಅನಾರೋಗ್ಯ ಬಾಧಿಸುತ್ತಿರುವಾಗಲೂ ಅವರಿಗೆ ಸಮಾಜಿಕ ಸ್ವಾಸ್ಥ್ಯದ ಬಗ್ಗೆ ಕಳಕಳಿ. ಗೆದ್ದ ಮ್ಯಾಲ ನೀವು ಎದಿರೋ ಬಿದ್ದರೋ, ನಿಮ್ಮ ಕಷ್ಟವೇನು, ನಷ್ಟವೇನು?, ಕನಿಷ್ಟ ಪಕ್ಷ ಇಷ್ಟಾದರೂ ಕೇಳೋ ಮನಸೂ ಮಾಡದಿರಾವ್ರನ್ನ ನಮ್ಮ ಪ್ರತಿನಿಧಿ ಅಂತಾ ಹ್ಯಾಂಗನ್ನೂಣು? ನಾವು ಆರಿಸಿ ಕಳಿಸಿರೋ ಈ  ಎಲ್ಲಾ ಶಾಸಕರು, ಸಂಸದರು ಮಸ್ತ್ ಮೇದು ಮಲಗಿಬಿಟ್ಟಾರ, ಇಂಥಾ ಬಕಾಸುರರನ್ನು ಮುಂದಿನ ಚುನಾವಣಿಯೊಳಗ ಹಾರಿಸಿ ಒಗೀರಿ.. ಅಂತಾ ತಮ್ಮ ಪೇಸ್ಬುಕ್ಕಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಮಹದಾಯಿ ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ಮಾಡಿದಾಗ ನೀರು ಕೇಳಿದರೆ ಜೊತೆಗೆ ಬೆಲ್ಲ ಕೊಟ್ಟು ಬಾಯಿ ಸಿಹಿ ಮಾಡುವವರು ನಾವು. ನಮ್ಮ ನೀರು ನಮಗೆ ಕೊಡಿ ಎಂದು ಕೇಳಿದರೆ ಹೊಡೆವ ಪೊಲೀಸರು ಕೊಡುವರು ನೋವು. ರಕ್ಷಕರಲ್ಲ  ಇವರು ರಾಕ್ಷಸರು. ಪೊಲೀಸರಿಗೆ ಧಿಕ್ಕಾರವಿರಲಿ, ಅವರ ಹಿಂದೆ ಅಡಗಿಕೊಂಡ ಮಂತ್ರಿ ಮಹೋದಯರಿಗೆ ಧಿಕ್ಕಾರವಿರಲಿ.. ಎಂದು ತಮ್ಮ ಆಕ್ರೋಶವನ್ನು ವಾಜಪೇಯಿಯವರು ಬರೆದು ಹಂಚಿಕೊಂಡಿದ್ದರು. ಪ್ರತಿಕ್ಷಣ ಉಸಿರಾಡಲೂ ಏದುಸಿರುಬಿಡುತ್ತಿರುವಂತಾ ದುಸ್ತಿತಿಯಲ್ಲೂ ಸಹ ವಾಜಪೇಯಿಯವರು ವ್ಯಕ್ತಪಡಿಸುತ್ತಿದ್ದ ಸಾಮಾಜಿಕ ಕಾಳಜಿ ಹಾಗೂ ಜನಪರ ಕಳಕಳಿಗಳಿಗೆ ಕೊರತೆ ಎಂಬುದಿರಲಿಲ್ಲ. ಸಮಾಜಮುಖಿ ಚಿಂತನೆಯ ಜೀವನೋತ್ಸಾಹವೇ ಅವರನ್ನು ಜೀವಂತವಾಗಿಟ್ಟಿತ್ತು.
   
ಬೆಂಗಳೂರಿನಲ್ಲಿ ಎರಡು ದಶಕಗಳ ಕಾಲ ಇದ್ದರೂ ಅವರ ಪ್ರತಿಯೊಂದು ನಡೆ ನುಡಿಯಲ್ಲೂ ಉತ್ತರ ಕರ್ನಾಟಕದ ದೇಸಿತನವೇ ಎದ್ದು ಕಾಣುತ್ತಿತ್ತು. ಯಾರಾದರೂ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡಿದರೆ ಸಾಕು ತಮ್ಮ ಕುಲಬಾಂಧವರನ್ನೇ ಭೇಟಿಯಾದಷ್ಟು ಸಂತಸಪಟ್ಟು ಮನಬಿಚ್ಚಿ ಮಾತಾಡುವ ಹುರುಪನ್ನು ವಾಜಪೇಯಿಯವರ ಮುಖದಲ್ಲಿ ನೋಡಬಹುದಾಗಿತ್ತು. ವಾಜಪೇಯಿಯವರ ಬರವಣಿಗೆಯ ತಾಕತ್ತಿರುವುದು ಉತ್ತರ ಕರ್ನಾಟಕದ ದೇಸಿ ಸೊಗಡಿನ ಬಳಕೆಯಲ್ಲಿ. ಅವರ ಎಲ್ಲಾ ಬರವಣಿಗೆಯಲ್ಲೂ ಆ ಪ್ರಾಂತ್ಯದ ಭಾಷೆಯ ಸೊಗಸನ್ನು ನೋಡಬಹುದಾಗಿದೆ ಮತ್ತು ಅವರ ಹಾಡುಗಳಲ್ಲಿ ಕೇಳಬಹುದಾಗಿದೆ.

ಗೋಪಾಲ ವಾಜಪೇಯಿ ಅಂದರೆ ಯಾರು ಎಂದರೆ ಗೊತ್ತಿಲ್ಲ ಎನ್ನುವವರಿಗೂ ಸಹ ವಾಜಪೇಯಿಯವರ ಹಾಡುಗಳು ಚಿರಪರಿಚಿತ. ನಾಗಮಂಡಲದ ಸಿನೆಮಾದ ಕಂಬದ ಮ್ಯಾಲಿನ ಗೊಂಬಿಯೇ ನಂಬಲೇನ ನಿನ್ನ ನಗೆಯನ್ನ.. ಹಾಡು ಕನ್ನಡಿಗರ ಮನ ಮೆದುಳಲ್ಲಿ ಈಗಲೂ ಅಚ್ಚೊತ್ತಿದಂತಿದೆ. ವಾಜಪೇಯಿಯವರು ಭೌತಿಕವಾಗಿ ಜಗವನಗಲಿದ್ದರೂ ಅವರು ಶತಮಾನಗಳ ಕಾಲ ತಮ್ಮ ಅರ್ಥಪೂರ್ಣ  ರಂಗಗೀತೆಗಳು ಹಾಗೂ ಸಿನೆಮಾ ಹಾಡುಗಳಿಂದ ಕನ್ನಡಿಗರೆದೆಯಲ್ಲಿ ಜೀವಂತವಾಗಿರುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ಶಿವರಾಜಕುಮಾರ ಅಭಿನಯದ ಸಂತೆಯಲ್ಲಿ ನಿಂತ ಕಬೀರ ಸಿನೆಮಾಕ್ಕೆ ಒಂಬತ್ತು ಹಾಡುಗಳನ್ನು ರಚಿಸಿ, ಸಂಭಾಷಣೆಯನ್ನು ಬರೆದ ವಾಜಪೇಯಿಯವರು ಆ ಸಿನೆಮಾಕ್ಕೆ ಜೀವತುಂಬಿದ್ದರು. ಬಾರೆ ನಿನಗೆ ನಾನು ಚೆಂದದ ದಾವಣಿಯೊಂದ ನೇಯುವೆನೆ, ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ ಎನ್ನುವ ಚೆಂದದ ಹಾಡು ಸೂಪಿ ಸ್ವರಗಳಲ್ಲಿ ಮೂಡಿಬಂದು ಯುವ ಸಮುದಾಯದ ಎದೆಯಲ್ಲಿ ಸಂಚಲನ ಹುಟ್ಟಿಸುವಲ್ಲಿ ಸಫಲವಾಗಿತ್ತು. ಹಳತನ್ನು ಮೀಟುತ್ತಲೇ ಹೊಸತಿಗೆ ನಾಟುವಂತಿರುವ ಅವರ ಹಾಡಿನ ಸಾಲುಗಳಿಗೆ ಕೇಳುಗರು ಮನಸೋತಿದ್ದಂತೂ ಸತ್ಯ. ಕಬೀರನನ್ನು ಮೈಮನದಲ್ಲಿ ಆಹ್ವಾನಿಸಿಕೊಂಡು .... ಕಬೀರ ಸಿನೆಮಾಗೆ ಸಂಭಾಷಣೆಗಳನ್ನು ತನ್ಮಯತೆಯಿಂದ ಬರೆದ ವಾಜಪೇಯಿಯವರು ಕಬೀರನ ಆತ್ಮವನ್ನು ಅನಾವರಣಗೊಳಿಸಿದ್ದಾರೆ. ಸುಪರ್‌ನೋವಾ ಎನ್ನುವ ಮಕ್ಕಳ ಸಿನೆಮಾದಲ್ಲಿ ಅಕ್ಕಸಾಲಿಗನ ಪಾತ್ರದಲ್ಲಿಯೂ ಅಭಿನಯಿಸಿದ ವಾಜಪೇಯಿಯವರು ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದಾರೆ.


ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರಾದ ಗೋಪಾಲ ವಾಜಪೇಯಿಯವರದು ಬಹುಮುಖಿ ಪ್ರತಿಭೆ. ನಾಲ್ಕನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಕಂಡವರ ಮನೆಯ ಕೂಸಾಗಿ ಹತ್ತಾರು ಊರುಗಳಲ್ಲಿ ಬೆಳೆದ ಗೋಪಾಲರವರು ಬದುಕಿನ ಸಂಕಷ್ಟಗಳನ್ನು ಎದುರಿಸುತ್ತಲೇ ಗಟ್ಟಿತನವನ್ನು ರೂಢಿಸಿಕೊಂಡು ದಕ್ಕಿದ ಅನುಭವಗಳನ್ನೆಲ್ಲಾ ತಮ್ಮ ಬರವಣಿಗೆಯಲ್ಲಿ ಹದವಾಗಿ ತೊಡಗಿಸಿಕೊಂಡು ಪತ್ರಿಕೋದ್ಯಮ ಸಾಹಿತ್ಯ ರಂಗಭೂಮಿ ಸಿನೆಮಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದರು. ಅದ್ಯಾಕೋ ಸಾಂಪ್ರದಾಯಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಪತ್ರಿಕೋದ್ಯಮದ ಅಕ್ಷರ ಪ್ರಪಂಚದತ್ತ ಆಕರ್ಷಿತರಾದರು. ಮೊದಲು ಗದಗಿನ ವಾಸವಿ ಮಾಸಪತ್ರಿಕೆಯ ಮೂಲಕ ಪತ್ರಕರ್ತರಾದ ವಾಜಪೇಯಿಯವರು 1971 ರಲ್ಲಿ ಕೆ.ಹೆಚ್.ಪಾಟೀಲರ ವಿಶಾಲ ಕರ್ನಾಟಕ ದೈನಕ ಪತ್ರಿಕೆ ಸೇರಿಕೊಂಡರು. ಮರುವರ್ಷ ಸಂಯುಕ್ತ ಕರ್ನಾಟಕ ಪತ್ರಿಕೆಯ ಕರ್ಮವೀರ ವಾರಪತ್ರಿಕೆಗೆ ಸಹಸಂಪಾದಕರಾಗಿ ನೌಕರಿ ಶುರುಮಾಡಿದರು. ನಂತರ ಕಸ್ತೂರಿ ಮಾಸಪತ್ರಿಕೆಯ ಸಂಪಾದಕೀಯ ವಿಭಾಗಕ್ಕೆ ವರ್ಗಾವಣೆಗೊಂಡರು. 1996 ರಲ್ಲಿ ಮತ್ತೆ ಕರ್ಮವೀರ ಪತ್ರಿಕೆಗೆ ಸಂಪಾದಕರಾಗಿ ಬೆಂಗಳೂರಿಗೆ ವರ್ಗಾವಣೆಯಾದರು. ಕರ್ಮವೀರದಲ್ಲಿ ಅವರು ಬರೆಯುತ್ತಿದ್ದ ವ್ಯಕ್ತಿಚಿತ್ರಣಗಳು ಪ್ರಖ್ಯಾತಿಯನ್ನು ಗಳಿಸಿದ್ದವು. ಬರವಣಿಗೆ ಎನ್ನುವುದೇ ವಾಜಪೇಯಿಯವರ ಬದುಕಿನ ಕಾಯಕವಾಯಿತು. ಪತ್ರಿಕೆಯ ನೌಕರಿ ಬೇಸರ ತರಿಸಿದಾಗ 1999 ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದ ವಾಜಪೇಯಿಯವರು 2006 ರ ವರೆಗೆ ಈಟಿವಿ ಕನ್ನಡ ವಾಹಿನಿಯ ಕಥಾ ವಿಭಾಗದ ಸಂಯೋಜಕರಾಗಿ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದರು. ಈಟಿವಿ ವಾಹಿನಿಯ ಸುಪ್ರಸಿದ್ದ ಎದೆ ತುಂಬಿ ಹಾಡಿದೆನು ರಿಯಾಲಿಟಿ ಶೋಗೆ ನಿರಂತರವಾಗಿ ಹನ್ನೊಂದು ವರ್ಷಗಳ ಕಾಲ ಸಾಹಿತ್ಯ ಸಲಹೆಗಾರರಾಗಿ ಶ್ರಮಿಸಿದರು. ಪ್ರತಿ ವಾರ ಆ ಕಾರ್ಯಕ್ರಮದ ಆರಂಭದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂರವರು ಹಾಡುತ್ತಿದ್ದ ವಚನವನ್ನು ಆಯ್ಕೆ ಮಾಡಿ ಅದಕ್ಕೆ ವ್ಯಾಖ್ಯಾನವನ್ನು ಬರೆದು ಕೊಡುತ್ತಿದ್ದವರೂ ಸಹ ವಾಜಪೇಯಿಯವರೇ ಆಗಿದ್ದರು. 


ಪತ್ರಿಕೋದ್ಯಮಕ್ಕೆ ಮಾತ್ರ ಸೀಮತವಾಗಿ ಬದುಕು ಸವೆಸುವ ಪತ್ರಕರ್ತರಂತೆ ತಮ್ಮ ಸಾಮರ್ಥ್ಯವನ್ನು ಮಿತಿಗೊಳಿಸದ ವಾಜಪೇಯಿಯವರು ತಮ್ಮ ಬರವಣೆಗೆಯ ಸಾಮರ್ಥ್ಯವನ್ನು ಸಾಹಿತ್ಯ, ರಂಗಭೂಮಿ ಸಿನೆಮಾಗಳಂತಹ ಸೃಜನಶೀಲ ಮಾಧ್ಯಮ ಕ್ಷೇತ್ರಗಳಿಗೂ ವಿಸ್ತರಿಸಿದರು. ಸಂತ ಶಿಶುನಾಳ ಷರೀಫ ಸಿನೆಮಾದಿಂದ ಸಂಭಾಷಣೆಕಾರರಾಗಿ ಚಿತ್ರರಂಗ ಪ್ರವೇಶಿಸಿದ ವಾಜಪೇಯಿಯವರು ಸುಂದರಕೃಷ್ಣ ಅರಸರ ಸಂಗ್ಯಾಬಾಳ್ಯಾ ನಾಗಾಭರಣರವರ ನಿರ್ದೆಶನದ ನಾಗಮಂಡಲ ಮತ್ತು ಸಿಂಗಾರೆವ್ವ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ತಾಯಿ ಸಾಹೇಬ, ಶಿವರಾಜಕುಮಾರ ಅಭಿನಯದ ಸಂತೆಯಲ್ಲಿ  ನಿಂತ ಕಬೀರ ಹೀಗೆ ಕೆಲವಾರು ಕನ್ನಡ ಸಿನೆಮಾಗಳಿಗೆ ಸಂಭಾಷಣೆಗಳನ್ನು ರಚಿಸಿದ್ದಾರೆ. ನಾಗಮಂಡಲ, ಕೇಸರಿ ಹರವೂ ರವರ ಭೂಮಿಗೀತ ಸೇರಿದಂತೆ ಹಲವಾರು ಸಿನೆಮಾಗಳಿಗೆ ಅವಿಸ್ಮರಣೀಯ ಎನ್ನುವಂತಹ ಹಾಡುಗಳನ್ನೂ ರಚಿಸಿದ್ದಾರೆ. ಜೋಡಿ ಜೀವ ಎನ್ನುವ ಜಾನಪದ ಶೈಲಿಯ ಕಥನ ಗೀತೆಗಳನ್ನೂ ರಚಿಸಿದ ವಾಜಪೇಯಿಯವರು ಕೆಎಂಎಫ್ ಹಾಲು ಮಂಡಳಿಗೆ ಕ್ಷೀರ ಸಂಪದ ಎಂಬ ದ್ವನಿ ಸುರಳಿಗಾಗಿ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ವಾಜಪೇಯಿಯವರು ಬರೆದ ಹಾಡುಗಳಿಗೆ ಡಾ.ನಾಗರಾಜರಾವ್ ಹವಾಲ್ದಾರ್ ರವರು ದ್ವನಿಯಾಗಿದ್ದು ದ್ವನಿಸುರಳಿಯಾಗಿ ಹೊರಬಂದಿದೆ. ಕಬೀರದಾಸರ ದೋಹಾಗಳನ್ನು ಸರಳಗನ್ನಡಕ್ಕೆ ಭಾವಾನುವಾದ ಮಾಡಿ ಸಿಡಿ ರೂಪದಲ್ಲಿ ತರುವ ಮಹತ್ತರವಾದ ಆಸೆಯನ್ನು ಹೊಂದಿದ್ದ ವಾಜಪೇಯಿಯವರ ಈ ಕನಸು ನನಸಾಗುವ ಮೊದಲೇ ನಿರ್ಗಮಿಸಿದರು.


ಗಿರೀಶ್ ಕಾರ್ನಾಡರು ರಚಿಸಿದ ನಾಗಮಂಡಲ ನಾಟಕವನ್ನು ದಿ.ಶಂಕರನಾಗರವರು ತೆಗೆದುಕೊಂಡಾಗ ಅದಕ್ಕೆ ಹಾಡನ್ನು ಬರೆಯಬೇಕೆಂದು ಶಂಕರನಾಗರವರು ಗೋಪಾಲ ವಾಜಪೇಯಿಯವರನ್ನು ಕೇಳಿಕೊಂಡರು. ಕಾರ್ನಾಡರು ಬರೆದ ಹಾಡುಗಳನ್ನು ಪಕ್ಕಕ್ಕಿಟ್ಟು ನಾಟಕದಲ್ಲಿ ವಾಜಪೇಯಿಯವರ ಹಾಡುಗಳನ್ನು ಬಳಸಿಕೊಂಡಿದ್ದರಿಂದ ಆ ನಾಟಕ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾಯಿತು. ಮುಂದೆ ನಾಗಮಂಡಲ ನಾಟಕವನ್ನೇ ನಾಗಾಭರಣರವರು ಸಿನೆಮಾ ಮಾಡಲು ನಿರ್ಧರಿಸಿದಾಗ ಗೋಪಾಲ ವಾಜಪೇಯಿಯವರ ಹಾಡುಗಳನ್ನು ಬಳಿಸಿಕೊಂಡಿದ್ದಲ್ಲದೇ ಇನ್ನೂ ಕೆವು ಹಾಡುಗಳನ್ನು ಬರೆಯಿಸಿಕೊಳ್ಳಲಾಯಿತು. ಇಡೀ ಸಿನೆಮಾ ಕೂಡಾ ಹಾಡುಗಳಲ್ಲಿರುವ ಆರ್ಧತೆಯಿಂದಾಗಿ ಜನಮನಕೆ ತಲುಪಿತು. ಹೆಣ್ಣಿನ ಮನದಾಳಕ್ಕಿಳಿದು ರಚಿಸಿದ ಈ ಸಿನೆಮಾದ ಹಾಡುಗಳು ಕೇಳುಗರೆದೆಯಲ್ಲಿ ಸದಾ ಹಸಿರಾಗಿರುವಂತಹವು. ಚಿಕ್ಕಿಯಂತಾಕಿ ಅಕ್ಕಾ ಕೇಳವ್ವ ನಿಟ್ಟುಸಿರ, ನಿನಗಿನ್ನ ಸಖಿಯವ್ವಾ ಬಿಕ್ಕು ಯಾತಕ ಬಾಲಿ? ದುಃಖ ಯಾಕವ್ವಾ? ಬಿಟ್ಟುಸಿರ ನಿನ್ನ ಮರಿತಾವ ನೋವ ನಿನ್ನದು ಈ ಜೀವ ನಿನ್ನದು, ಈ  ನೋವ ನಿನ್ನನ್ನ ಇರಿತಾವ, ಎದಿಯು ಉರಿತಾವ, ಮನಸ ಮುರಿತಾವ.. ಎನ್ನುವ ನಾಗಮಂಡಲ ಸಿನೆಮಾದ ಹಾಡು ಹೆಣ್ಣಿನ ತಲ್ಲಣ ತಳಮಳಗಳ ಅನಾವರಣವಾಗಿದೆ. ಇದೇ ಸಿನೆಮಾದ ಈ ಹಸಿರು ಸಿರಿಯಲಿ ಮನಸು ಮರೆಯಲಿ ನವೀಲೆ ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೇ ನಲಿವೆ.. ಎನ್ನುವ ಹಾಡಂತೂ ಕೇಳುಗರ ಮನಸ್ಸನ್ನು ಸೂರೆಗೊಂಡಿದೆ. ನಾಗಮಂಡಲ ಸಿನೆಮಾದ ಹಾಡುಗಳು ಒಂದಕ್ಕಿಂತಾ ಒಂದು ಚೆಂದ. ಅವುಗಳನ್ನು ಕೇಳುವುದೇ ಒಂದು ಆನಂದ.


ರಂಗಭೂಮಿಯತ್ತ ಮೊದಲಿಂದಲೂ ಒಲವನ್ನು ಹೊಂದಿದ್ದ ಗೋಪಾಲ ವಾಜಪೇಯಿಯವರು ತಮ್ಮ ಕಾವ್ಯ ಶಕ್ತಿಯನ್ನು ರಂಗಗೀತೆಗಳನ್ನು ಕಟ್ಟುವುದರಲ್ಲೂ ಸಮರ್ಥವಾಗಿ ಬಳಸಿಕೊಂಡರು.  ವಾಜಪೇಯಿಯವರು  ನಾಗಮಂಡಲ ನಾಟಕಕ್ಕೆ ರಚಿಸಿದ ರಂಗಗೀತೆಗಳು ಸಿ.ಅಶ್ವತ್ ರವರ ಸಂಗೀತ ಸಂಯೋಜನೆಯಲ್ಲಿ ಬಲು ದೊಡ್ಡ ಹೆಸರನ್ನು ಮಾಡಿದವು. ಅವರು ರಚಿಸಿದ ಜಾನಪದ ಶೈಲಿಯ ದೊಡ್ಡಪ್ಪ ನಾಟಕ ವಾಜಪೇಯಿಯವರಿಗೆ ದೊಡ್ಡ ಹೆಸರನ್ನು ತಂದು ಕೊಟ್ಟು ಕರ್ನಾಟಕದ ಬಹುತೇಕ ರಂಗತಂಡಗಳು ಈ ನಾಟಕವನ್ನು ೫೦೦ಕ್ಕೂ ಹೆಚ್ಚು ಸಲ ಪ್ರದರ್ಶಿಸಿವೆ. ಹಲವಾರು ನಾಟಕಗಳಲ್ಲಿ ವಾಜಪೇಯಿಯವರು ಅಭಿನಯಿಸಿದ್ದು ಅವರ ಅಭಿನಯ ಪ್ರತಿಭೆಗೆ ರಾಜ್ಯಮಟ್ಟದ ಯುವನಾಟಕೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದೇ ಸಾಕ್ಷಿಯಾಗಿದೆ. ಹಲವಾರು ನಾಟಕಗಳ ನಿರ್ದೇಶನವನ್ನೂ ಮಾಡಿದ ವಾಜಪೇಯಿಯವರು ಹೂಲಿ ಶೇಖರರವರು ರಚಿಸಿದ ಕಲ್ಯಾಣದಲ್ಲಿ ಒಂದು ಕ್ರಾಂತಿ ನಾಟಕವನ್ನು ಹುಬ್ಬಳ್ಳಿಯ ಕೆಎಂಸಿ ರಂಗತಂಡಕ್ಕೆ ನಿರ್ದೇಶಿಸಿದ್ದರು. ಭೀಷ್ಮ ಸಹಾನಿಯವರು ಹಿಂದಿಯಲ್ಲಿ ಬರೆದ ಕಬೀರ್ ಕಡಾ ಬಾಜಾರ‍್ಮೆ ಎನ್ನುವ ನಾಟಕವನ್ನು ಕನ್ನಡದಲ್ಲಿ ಸಂತೆಯಲ್ಲಿ ನಿಂತಾನ ಕಬೀರ ಹೆಸರಲ್ಲಿ ಅನುವಾದಿಸಿದ್ದಾರೆ. ನಂದಭೂಪತಿ (ಕಿಂಗಲೀಯರ್ ರೂಪಾಂತರ), ಧರ್ಮಪುರಿಯ ಶ್ವೇತವೃತ್ತ (ಬ್ರೆಕ್ಟ್ ನ ಚಾಕ್ ಸರ್ಕಲ್ ರೂಪಾಂತರ) ಆಗಮನ.. ಮುಂತಾದ ನಾಟಕಗಳನ್ನು ಕನ್ನಡಕ್ಕೆ ರಂಗರೂಪಾಂತರ ಮಾಡಿದ್ದಾರೆ. ಈ ನಾಟಕಗಳು ರಂಗಾಯಣ, ಶಿವಸಂಚಾರ ರೆಪರ್ಟರಿಗಳಿಂದ ನಾಡಿನಾದ್ಯಂತ ಪ್ರಯೋಗ ಕಂಡಿವೆ. ಹುಬ್ಬಳ್ಳಿಯಲ್ಲಿ ಪತ್ರಕರ್ತರಾಗಿದ್ದುಕೊಂಡೇ ರಂಗಾಸಕ್ತರನ್ನು ಸೇರಿಸಿಕೊಂಡು ಅಭಿನಯ ಭಾರತಿ ಹೆಸರಿನ ರಂಗ ತಂಡವನ್ನು ಕಟ್ಟಿ ಕೆಲವಾರು ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಿದರು. ಆಕಾಶವಾಣಿಯ ನಾಟಕ ವಿಭಾಗದ ಗ್ರೇಡ್ ಕಲಾವಿದರಾಗಿ ಎಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ವಾಜಪೇಯಿಯವರು ಹಲವಾರು ಬಾನುಲಿ ನಾಟಕಗಳನ್ನೂ ಸಹ ಬರೆದಿದ್ದಾರೆ. ಜೊತೆಗೆ ಹಲವಾರು ಜಾಹೀರಾತು ಚಿತ್ರದಲ್ಲೂ ನಟಿಸಿದ್ದಾರೆ. ಜಿ.ಎನ್.ಮೋಹನರವರ ಅವಧಿ ಎನ್ನುವ ವೆಬ್ ಪತ್ರಿಕೆಗೆ ೪೫ ವಾರಗಳ ಕಾಲ ಸುಮ್ಮನೇ ನೆನಪುಗಳು ಎನ್ನುವ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣದಲ್ಲಿ ತಮ್ಮ ರಂಗಾನುಭವಗಳನ್ನು ದಾಖಲಿಸಿದರು. 1987 ರಿಂದ 1990 ರ ಅವಧಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಗೊಂಡು ರಂಗಸೇವೆಯನ್ನು ವಿಸ್ತರಿಸಿದ್ದರು. ಒಂದು ವರ್ಷದ ಹಿಂದೆ ವಾಜಪೇಯಿಯವರು ಬರೆದ ರಂಗದ ಒಳಹೊರಗೆ ಎನ್ನುವ ರಂಗಲೇಖನಗಳ ಪುಸ್ತಕವೂ ಪ್ರಕಟಗೊಂಡಿತ್ತು.

ಆಗಿನ್ನೂ ಗೋಪಾಲ ವಾಜಪೇಯಿಯವರು ಕರ್ಮವೀರ ಪತ್ರಿಕೆಯ ಸಂಪಾದಕರಾಗಿದ್ದರು. ನಾಗಮಂಡಲ ನಾಟಕಕ್ಕೆ ಹಾಡು ಬರೆದಿದ್ದ ವಾಜಪೇಯಿಯವರಿಂದಲೇ ಸಿನೆಮಾ ಹಾಡುಗಳನ್ನೂ ಬರೆಯಿಸಲೇಬೇಕೆಂಬುದು ನಾಗಾಭರಣರವರಿಗೆ ಸಿ.ಅಶ್ವತ್ ರವರು ಒತ್ತಾಯಿಸಿದರು. ಯಾಕೆಂದರೆ ನಾಗಮಂಡಲ ನಾಟಕದ ಹಾಡುಗಳಿಂದಾಗಿ ಸಿ.ಅಶ್ವತ್ ರವರೂ ಸಹ ರಂಗಭೂಮಿಯಲ್ಲಿ ಇನ್ನೂ ಹೆಚ್ಚು ಜನಪ್ರೀಯತೆ ಸಂಪಾದಿಸಿದ್ದರು. ನಾಗಾಭರಣರವರು ಹಾಡು ಬರೆಯಲು ಕೇಳಿದಾಗ ಬಲು ಮುಜುಗರದಿಂದಲೇ ವಾಜಪೇಯಿಯವರು ನಿರಾಕರಿಸಿದರು. ಕಾರಣ ಏನೆಂದು ಕೇಳಿದಾಗ ತಮ್ಮ ಅನಿವಾರ್ಯತೆಯನ್ನು ವಿವರಿಸಿದರು.  ಆಗ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳ ಮಾಲೀಕತನ ಲೋಕಶಿಕ್ಷಣ ಟ್ರಸ್ಟ್ ಹೊಂದಿದ್ದು ಅದರ ಕಾರ್ಯದರ್ಶಿಯಾಗಿದ್ದವರು ಕೆ.ಶಾಮರಾವ್ ರವರು. ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವವರೊಬ್ಬರು ಸಿನೆಮಾಗೆ ಹಾಡು-ಚಿತ್ರಕಥೆ ಬರೆಯುತ್ತಾರೆಂದು ಗೊತ್ತಾದರೆ ಕೂಡಲೇ ಕೆಲಸದಿಂದ ವಜಾಗೊಳಿಸುತ್ತಾರೆಂಬ ಭಯ ವಾಜಪೇಯಿಯವರದು. ಆದರೂ ನಾಗಾಭರಣ ಹಾಗೂ ಅಶ್ವತ್ ರವರ ಮಾತಿಗೆ ಗೌರವಕೊಟ್ಟು ಹಾಡು ಬರೆಯಲು ಒಪ್ಪಿಕೊಂಡ ವಾಜಪೇಯಿಯವರದು ಒಂದೇ ಕಂಡೀಶನ್ ಏನಂದ್ರೆ ತಮ್ಮ ಹೆಸರನ್ನು ಯಾವಕಾರಣಕ್ಕೂ ಬಹಿರಂಗಪಡಿಸಬಾರದು. ಹಾಗೇನಾದರೂ ಆದರೆ ತಮ್ಮ ಕೆಲಸಕ್ಕೆ ಸಂಚಕಾರ ಬರುವುದೆಂದು ಅವಲತ್ತುಕೊಂಡರು. ಹಾಡು ಬರೆದಾಯಿತು, ಸಿನೆಮಾ ಸಿದ್ದವಾಯಿತು. ಆದರೆ ಪತ್ರಿಕಾಗೋಷ್ಟಿಯಲ್ಲಿ ಸಾಹಿತ್ಯ ಸಂಗೀತ ಬರೆದವರ ಹೆಸರನ್ನು ಪತ್ರಕರ್ತರ ಮುಂದೆ ಹೇಳಲೇಬೇಕಾದ ಅನಿವಾರ್ಯತೆಯಿತ್ತು. ಏನು ಮಾಡೋದು? ಎಂದು ಆಶ್ವತ್‌ರವರ ಕೇಳಿದಾಗ ಆತಂಕಗೊಂಡ ವಾಜಪೇಯಿಯವರು ಹಂಗೇನಾದ್ರೂ ಮಾಡಿದ್ರ ನನ್ನ ಕೆಲ್ಸಾ ಹೊಂಟೋಗುದಂತೂ ಗ್ಯಾರಂಟಿ, ತಿನ್ನುವ ಅನ್ನಕ್ ಕಲ್ಲು ಬಿದ್ದು ಹೊಟ್ಟೆಗೆ ತಣ್ಣೀರ ಬಟ್ಟಿ ಖಾತ್ರಿ ಆಗುತ್ತ, ಹಂಗೆಲ್ಲಾದ್ರೂ ಮಾಡಿಬಿಟ್ಟೀರಿ.. ಅಂತಾ ಕೇಳಿಕೊಂಡರು. ಕೊನೆಗೆ ಈ ಸಮಸ್ಯೆಗೆ ನಾಗಮಂಡಲ ನಾಟಕದ ಕತೃ ಗಿರೀಶ್ ಕಾರ್ನಾಡರು ಗೋಪಾಲ ವಾಜಪೇಯಿಯವರ ಹೆಸರನ್ನು ಬದಲಿಸಿ ಗೋಪಾಲ ಯಾಜ್ಞಿಕ್ ಎಂದು ಬದಲಾಯಿಸಲು ಸಲಹೆ ಕೊಟ್ಟರು. ಹೀಗಾಗಿ ಆ ಸಿನೆಮಾದ ಮಟ್ಟಿಗೆ ವಾಜಪೇಯಿಯವರ ಹೆಸರು ಗೋಪಾಲ್ ಯಾಜ್ಞಿಕ್ ಆಗಿಹೋಗಿ ವಾಜಪೇಯಿಯವರ ನೌಕರಿಯೂ ಉಳಿಯಿತು ಜೊತೆಗೆ ಸಿನೆಮಾ ಕೂಡಾ ಬಿಡುಗಡೆಯಾಗಿ ತಮ್ಮ ಹಾಡು ಸಂಗೀತ ಸಂಭಾಷಣೆಯಿಂದಲೇ ಜನಪ್ರೀಯವಾಯಿತು.

ಗೋಪಾಲ ವಾಜಪೇಯಿಯವರ ಬಹುಮುಖಿ ಸಾಧನೆಗೆ ಹಲವಾರು ಪ್ರಶಸ್ತಿಗಳೂ ಸಹ ಹುಡುಕಿಕೊಂಡು ಬಂದಿವೆ. 1978ರಲ್ಲಿ ರಾಜ್ಯಮಟ್ಟದ ಯುವನಾಟಕೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, 1981 ರಲ್ಲಿ ದೊಡ್ಡಪ್ಪ ನಾಟಕದ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, 1983 ರಲ್ಲಿ ದೊಡ್ಡಪ್ಪ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಹಾಗೂ 1985ರಲ್ಲಿ ಅದೇ ನಾಟಕಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಗ್ರಂಥ ಪುರಸ್ಕಾರ, 2006ರಲ್ಲಿ ಕಸ್ತೂರಿ ಪತ್ರಿಕೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟಿನ ಗೌರವ. 2008 ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಗೋಪಾಲ ವಾಜಪೇಯಿಯವರ ಪ್ರತಿಭೆಗೆ ಸಂದಿವೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿ ಬರಬೇಕಿತ್ತು ಬರಲಿಲ್ಲ. ಆ ಕೊರಗೂ ವಾಜಪೇಯಿಯವರನ್ನೆಂದೂ ಕಾಡಲೂ ಇಲ್ಲ. ಅನೇಕ ಸಂಘ ಸಂಸ್ಥೆಗಳು ಅವರನ್ನು ಕರೆದು ಸನ್ಮಾನಿಸಿ ಗೌರವಿಸಿದ್ದನ್ನಂತೂ ಅವರೆಂದೂ ಮರೆಯಲಿಲ್ಲ. ಒಂದೂವರೆ ತಿಂಗಳ ಹಿಂದೆ ಜುಲೈ 30 ರಂದು ಹೊಸಪೇಟೆಯ ಟಿ.ಬಿ.ಡ್ಯಾಂ ಕನ್ನಡ ಕಲಾ ಸಂಘವು ವಾಜಪೇಯಿಯವರ ರಂಗಸೇವೆಯನ್ನು ಗುರುತಿಸಿ ಕೈಲಾಸಂ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿತ್ತು. ಆದರೆ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಸ್ವತಃ ಹೋಗಿ ಪ್ರಶಸ್ತಿ  ಪಡೆಯಲಾದೇ ತಮ್ಮ ಮಗ ವಿಶ್ವಾಸರವರನ್ನು ಕಳುಹಿಸಿ ಸನ್ಮಾನ ಹಾಗೂ ಗೌರವವನ್ನು ಪಡೆದರು.

ಹೀಗೆ.. ಪತ್ರಿಕೋದ್ಯಮದಲ್ಲಿ ಪತ್ರಕರ್ತರಾಗಿ, ಸಂಪಾದಕರಾಗಿ, ರಂಗಭೂಮಿಯಲ್ಲಿ ನಟ, ನಿರ್ದೇಶಕ, ರಂಗಸಂಘಟಕ, ನಾಟಕಕಾರರಾಗಿ, ಸಿನೆಮಾ ಕ್ಷೇತ್ರದಲ್ಲಿ ನಟ, ಗೀತರಚನೆಕಾರ, ಸಂಭಾಷಣೆ ಬರಹಗಾರರಾಗಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದ ವಾಜಪೇಯಿ ಕಾಕಾ ಅನಿರೀಕ್ಷಿತವಾಗಿ ಕಾಲನ ಮನೆಗೆ ಸೇರಿಬಿಟ್ಟರು. ಪ್ರತಿದಿನ ಏನನ್ನಾದರೂ ಬರೆಯುತ್ತಲೇ ಇದ್ದ ಕ್ರಿಯಾಶೀಲ ಹಿರಿಯ ಜೀವವು ಜೀವಹಿಂಡುತ್ತಿದ್ದ ಅನಾರೋಗ್ಯದ ನೋವಿನಿಂದ ಖಾಯಂ ಆಗಿ ಮುಕ್ತಿಹೊಂದಿ ಚಿರನಿದ್ರೆಗೆ ಜಾರಿತು. ಹೋಗಿ  ಬಾ ಕಾಕಾ.. ನಿಮ್ಮ ನೆನಪು ಬದುಕಿದ್ದವರ ಮನದಂಗಳದಲ್ಲಿ ಸದಾ ಹಸಿರು. ನೀವು ಕಲೆ, ಸಾಹಿತ್ಯ, ಪತ್ರಿಕೋದ್ಯಮಕ್ಕೆ ಕೊಟ್ಟ ಕೊಡುಗೆ ಮುಂದಿನ ತಲೆಮಾರಿಗೆ ದಾರಿದೀಪ. ಅಂತಃಕರಣದ ರಂಗಕರ್ಮಿ ನಿನಗಿದೋ ಅಂತಿಮ ನಮನಗಳು.

                                   - ಶಶಿಕಾಂತ ಯಡಹಳ್ಳಿ






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ