ಗುರುವಾರ, ಅಕ್ಟೋಬರ್ 20, 2016

ಕಲಾಕ್ಷೇತ್ರ-50 ರ ವೇಷ; ಮುಖ್ಯಮಂತ್ರಿ ಚಂದ್ರು ಆಕ್ರೋಶ



ಕನ್ನಡ ರಂಗಭೂಮಿಯಲ್ಲಿ ಅನೇಕಾನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನ ಕೊಡದ ಸಂಸ್ಕೃತಿ ಇಲಾಖೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ರವಿಂದ್ರ ಕಲಾಕ್ಷೇತ್ರ-50 ಎನ್ನುವ ಸಾಂಸ್ಕೃತಿಕ ಜಾತ್ರೆ ಮಾಡುವ ಅಗತ್ಯವಾದರೂ ಏನಿತ್ತು.. ಎಂದು ಕಲಾವಿದ ಮುಖ್ಯಮಂತ್ರಿ ಚಂದ್ರುರವರು ಸಂಸ ಬಯಲು  ರಂಗಮಂದಿರದಲ್ಲಿ ಗುಡುಗಿದ್ದನ್ನು ಕೇಳಿ ಸಭಾಂಗಣ ತಣ್ಣಗಾಗಿ ಹೋಯ್ತು. ಸರಕಾರದ ವೈಪಲ್ಯ, ಆಯೋಜಕರ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ನಿರ್ಲಕ್ಷಗಳನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿಡುತ್ತಾ ತಮ್ಮ ಮಾಮೂಲಿ ವಿಡಂಬಣಾತ್ಮಕ ಶೈಲಿಯಲ್ಲಿ ಸಂಬಂಧಿಸಿದವರಿಗೆಲ್ಲಾ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರೆ ಕೇಳಿದವರೆಲ್ಲಾ ಚಪ್ಪರಿಸುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರಕ್ಕೆ ಐವತ್ತು ವರ್ಷ ಮೀರಿದ ಸಂಭ್ರಮವನ್ನು ಆಚರಿಸುತ್ತಿದ್ದು ಅದರ ಭಾಗವಾಗಿ 2016, ಅಕ್ಟೋಬರ್ 19 ರಿಂದ 22 ರವರೆಗೆ ರವೀಂದ್ರ ಕಲಾಕ್ಷೇತ್ರ ಹಾಗೂ ಸಂಸ ಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಿದೆಅಕೋಬರ್ 19 ರಂದು ಸಂಜೆ ಸಂಸ ಬಯಸು ಮಂದಿರದಲ್ಲಿ ನಡೆದ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಮುಖ್ಯಮಂತ್ರಿ ಚಂದ್ರುರವರು ತಮ್ಮ ಮನದಾಳದ ತಲ್ಲಣಗಳನ್ನು ಬಿಡಿಸಿಟ್ಟರು.

ಕಲಾಕ್ಷೇತ್ರಕ್ಕೆ ಐವತ್ತಾಗಿ ಮೂರು ವರ್ಷ ಕಳೆದು ಹೋದ ನಂತರ ಸಾಂಸ್ಕೃತಿಕ ಸಂಭ್ರಮ ಆಚರಿಸುವ ಅಗತ್ಯವೇನಿತ್ತು? ಆಯಿತು ಮಾಡಿದ ಮೇಲೆ ಕಲಾಕ್ಷೇತ್ರಕ್ಕಾಗಿ ಶ್ರಮಿಸಿದವರು ಹಾಗೂ ಇಲ್ಲಿನ ರಂಗಚಟುವಟಿಕೆಗಳಿಗೆಯನ್ನು ಜೀವಂತವಾಗಿಟ್ಟ ರಂಗಕರ್ಮಿಗಳನ್ನು ಯಾಕೆ ಸಂಭ್ರಮದ ಸಂದರ್ಭದಲ್ಲಿ ಕರೆಸಿ ನೆನಪಿಸಿಕೊಂಡಿಲ್ಲ.. ಎಂಬ ಮೂಲಭೂತವಾದ ಪ್ರಶ್ನೆಯನ್ನು ಚಂದ್ರುರವರು ಎತ್ತಿದ್ದರಲ್ಲಿ ತಪ್ಪೇನಿರಲಿಲ್ಲ. ಯಾಕೆಂದರೆ ಯಾವುದನ್ನೇ ಆದರೂ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ಮಾಡುವ ಆಚರಣೆಗೊಂದು ಬೆಲೆ ಇರುತ್ತದೆ. ಇಂತಹ ಸಾಂಸ್ಕೃತಿಕ ಸಂಭ್ರಮಗಳನ್ನು ಆಯೋಜಿಸಲು ಬ್ರಹತ್ ಇಲಾಖೆ ಇದೆ. ಹಲವಾರು ಶ್ರೇಣಿಯ ಅಧಿಕಾರಗಳ ಪಡೆಯೇ ಇದೆ. ಇಲಾಖೆಯಲ್ಲಿ ಇದಕ್ಕಾಗಿಯೇ ಹಣವನ್ನು ಮೀಸಲಿರಿಸಲಾಗಿದೆ. ಹಲವಾರು ರಂಗಕರ್ಮಿಗಳ ಒಂದು ಸಾಂಸ್ಕೃತಿಕ ಕಮಿಟಿಯನ್ನೂ ನಿಯಮಿಸಲಾಗಿದೆ. ಇದಕ್ಕೂ ಮಿಗಿಲಾಗಿ ಸಂಸ್ಕೃತಿ ಇಲಾಖೆಯ ಸಚಿವೆ ಮಾನ್ಯ ಉಮಾಶ್ರೀಯವರೇ ಖುದ್ದಾಗಿ ಮುತುವರ್ಜಿ ವಹಿಸಿದ್ದಾರೆ. ಆದರೂ ಸಹ ಕಲಾಕ್ಷೇತ್ರ-50 ಹೋಗಿ ಅವಧಿ ಮೀರಿದ ಕಲಾಕ್ಷೇತ್ರ-50 ಆಗಿದ್ದೊಂದು ವಿಪರ್ಯಾಸ. ಎಲ್ಲವೂ ಇದ್ದೂ ಮಾಡುವ ಇಚ್ಚಾಶಕ್ತಿ ಇಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಸ್ಯಾಸ್ಪದವಾಗುವುದಕ್ಕೆ ಸಂದರ್ಭವೇ ಸಾಕ್ಷಿಯಾಗಿದೆ. ಕಲಾಕ್ಷೇತ್ರದ ಸಾಂಸ್ಕೃತಿಕ ಸಂಭ್ರಮ ನೆನಪಿನೋಕಳಿಯ ಉದ್ಘಾಟನೆಯೇ ಮೂರು ಬಾರಿ ದಿನಾಂಕ ನಿರ್ಧಾರಗೊಂಡು ಮುಂದಕ್ಕೆ ಹೋಗಿ ನಾಲ್ಕನೇ ಬಾರಿಗೆ ರಂಗಕಲಾವಿದರ ಅನುಪಸ್ಥಿತಿಯಲ್ಲಿ ಶುರುವಾಗಿದ್ದು ಸರಕಾರಿ ಕಾರ್ಯಕ್ರಮಗಳ ನಿರ್ಲಕ್ಷ ಧೋರಣೆಗೆ ಕೈಗನ್ನಡಿಯಾಗಿದೆ

ಹೋಗಲಿ... ಬೇಕಾದಷ್ಟು ವಿಳಂಬವಾದರೂ ಸಧ್ಯ ಶುರುವಾಯಿತಲ್ಲ ಎಂದುಕೊಂಡರೆ ಏನನ್ನು ಮಾಡಬೇಕಾಗಿತ್ತೋ ಅದನ್ನು ಬಿಟ್ಟು ಯಾರದೋ ರೊಕ್ಕ ಎಲ್ಲಮ್ಮನ ಜಾತ್ರೆ ಎನ್ನುವಂತೆ ಕಾರ್ಯಕ್ರಮ ಆಯೋಜಿಸಿದ್ದಂತೂ ಅಕ್ಷಮ್ಯ. ಇಲ್ಲಿ ಇರುವ ಕಮಿಟಿಯವರಿಗಾಗಲೀ ಇಲ್ಲವೇ ಸರಕಾರಿ ಅಧಿಕಾರಿಗಳಿಗಾಗಲೀ ಮಾಡುವ ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ಸ್ಪಷ್ಟತೆಯಾಗಲೀ ಇಲ್ಲವೇ ದೂರದೃಷ್ಟಿಯಾಗಲೀ ಇಲ್ಲವೆಂಬುದು ಅವರು ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಗೊತ್ತಾಗದೇ ಇರದು. ಚಂದ್ರುರವರು ಹೇಳಿದ್ದು  ಸೂಕ್ತವಾಗಿದೆ. ರವೀಂದ್ರ ಕಲಾಕ್ಷೇತ್ರದ ಅರ್ಧ ದಶಕದ ಇತಿಹಾಸದಲ್ಲಿ ರಂಗಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದ ಅಳಿದುಳಿದ ಹಿರಿಯ ರಂಗಕರ್ಮಿಗಳೆಲ್ಲರನ್ನು ಕರೆದು ಸನ್ಮಾನಿಸಿದ್ದರೆ, ಹಿರಿಯರು ತಮ್ಮ ರಂಗನೆನಪಿನ ಬುತ್ತಿಯನ್ನು ಬಿಚ್ಚಿಕೊಂಡು ಈಗಿನ ತಲೆಮಾರಿನವರಿಗೆ ಒಂದಿಷ್ಟು ಹಿತನುಡಿಗಳನ್ನು ಹೇಳಿಸಿದ್ದರೆ ನೆನಪಿನೋಕಳಿ ಕಾರ್ಯಕ್ರಮ ಒಂದಿಷ್ಟು ಸಾರ್ಥಕತೆಯನ್ನು ಪಡೆಯುತ್ತಿತ್ತು. ಹಿರಿಯ ಜೀವಗಳಿಗೂ ಸಹ ತೃಪ್ತಿಯಾಗುತ್ತಿತ್ತು. ಆದರೆ.. ವೆಂಕಟಸುಬ್ಬಯ್ಯ, ವಿ.ರಾಮಮೂರ್ತಿಯವರಂತಹ ಅನೇಕಾನೇಕ ಹಿರಿಯ ರಂಗಕರ್ಮಿಗಳು ರವೀಂದ್ರ ಕಲಾಕ್ಷೇತ್ರಕ್ಕಾಗಿ ಹಾಗೂ ರಂಗಭೂಮಿಗಾಗಿ ತಮ್ಮ ಬದುಕನ್ನು ಸವೆಸಿದ್ದಾರೆ. ನೆನಪಿನೋಕಳಿಯ ಸಂದರ್ಭದಲ್ಲಿ ಎಲ್ಲಾ ಹಿರಿಯರ ನೆನಪುಗಳನ್ನು ದಾಖಲಿಸಿದ್ದರೆ ಸೂಕ್ತವಾಗಿತ್ತು. ಇಂತಹ ಅಗತ್ಯ ಕಾರ್ಯವನ್ನು ನಿರ್ಲಕ್ಷಿಸಿದ್ದಕ್ಕೆ ಮುಖ್ಯ ಮಂತ್ರಿ ಚಂದ್ರು ತಕರಾರು ತೆಗೆದಿದ್ದು ಸಂಬಂಧಪಟ್ಟವರ ಕಣ್ಣು ತೆರೆಸುವಂತಹುದು. ಇನ್ನೂ ಆರು ತಿಂಗಳ ಕಾಲ ನಾಲ್ಕಾರು ಕಂತುಗಳಲ್ಲಿ ನಡೆಯುವ ನೆನಪಿನೋಕಳಿಯಲ್ಲಿ ಹಿರಿಯರನ್ನೂ ಭಾಗಿದಾರರನ್ನಾಗಿಸುವಂತೆ ಮಾಡುವುದು ಸೂಕ್ತ.

ಕಲಾಕ್ಷೇತ್ರದ ಹೆಸರಲ್ಲಿ ಮಾಡುವ ಕಾರ್ಯಕ್ರಮಕ್ಕಿಂತಾ ರವೀಂದ್ರ ಕಲಾಕ್ಷೇತ್ರದ ಅಭಿವೃದ್ದಿ ಬಹಳ ಮುಖ್ಯವಾಗಬೇಕಿತ್ತು. ಇಲ್ಲಿ ಟಾಯ್ಲೆಟ್ಗೆ ಹೋದರೆ ನಲ್ಲಿಯಲ್ಲಿ ನೀರು ಬರದಂತಹ ದುಸ್ತಿತಿ ಇದೆ. ಮೂರು ತಿಂಗಳುಗಳ ಕಾಲ ಕಲಾಕ್ಷೇತ್ರವನ್ನು ರಿಪೇರಿಗೆಂದು ಮುಚ್ಚಿ ತೆರೆದದ್ದಷ್ಟೇ ಬಂತು, ಆದರೆ ಹೇಳಿಕೊಳ್ಳುವಂತಹ ರಿಪೇರಿ ಆಗಲೇ ಇಲ್ಲ. ಈಗಲೂ ಅದೇ ಕಿತ್ತೋದ ಖುರ್ಚಿಗಳು, ಅಸಮರ್ಪಕ ಬೆಳಕು ಹಾಗೂ ದ್ವನಿವರ್ಧಕ ವ್ಯವಸ್ಥೆಗಳಿವೆ. ಕಲಾಕ್ಷೇತ್ರವನ್ನು ಮೊದಲು ಅಭಿವೃದ್ದಿ ಮಾಡುವುದನ್ನು ಬಿಟ್ಟು ಅದರ ಹೆಸರಲ್ಲಿ ಸಂಭ್ರಮ ಆಚರಿಸುವ ಅಗತ್ಯವೇನಿತ್ತು ಎಂದು ಬಹಳ ಮೌಲಿಕವಾದ ಪ್ರಶ್ನೆಯನ್ನು  ಮುಖ್ಯಮಂತ್ರಿ ಚಂದ್ರು ಎತ್ತಿದರು ನೆನಪಿನೋಕಳಿ ಸಾಂಸ್ಕೃತಿಕ ಸಂಭ್ರಮಕ್ಕೆ ಐದು ಕೋಟಿ ರೂಪಾಯಿಗಳನ್ನು ಸರಕಾರ ಖರ್ಚು ಮಾಡುತ್ತಿದೆ. ಐದು ಕೋಟಿಯಲ್ಲಿ ಇನ್ನೊಂದು ಕಲಾಕ್ಷೇತ್ರವನ್ನೇ ಕಟ್ಟಬಹುದಾಗಿತ್ತು. ಇಲ್ಲವೇ ಇದೇ ಹಣದಲ್ಲಿ ಬೆಂಗಳೂರಿನ ಐದು ಭಾಗಗಳಲ್ಲಿ ಮಿನಿ ಕಲಾಕ್ಷೇತ್ರಗಳನ್ನು ಕಟ್ಟಿಸಿದ್ದರೆ ಕಲಾಕ್ಷೇತ್ರದ ನೆನಪು ಶತಮಾನಗಳ ಕಾಲ ಅಜರಾಮರವಾಗುತ್ತಿತ್ತು. ಪ್ರದರ್ಶನಾ ಮಂದಿರಗಳಿಲ್ಲದೇ ಪರದಾಡುತ್ತಿರುವ ರಂಗತಂಡಗಳಿಗೆ ವರದಾನವಾಗುತ್ತಿತ್ತು. ರವೀಂದ್ರನಾಥ ಠಾಗೋರರ ಜನ್ಮಶತಮಾನೋತ್ಸವದ ನೆನಪಿನಲ್ಲಿ ಕೇಂದ್ರ ಸರಕಾರ ೫೩ ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವು ಬೆಂಗಳೂರಿನ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಿದೆ. ಅದೇ ರೀತಿ ಕಲಾಕ್ಷೇತ್ರದ ಸುವರ್ಣ ಸಂಭ್ರಮದ ನೆನಪಿನಲ್ಲಿ ಇನ್ನೂ ನಾಲ್ಕು ಪುಟ್ಟ ಕಲಾಕ್ಷೇತ್ರಗಳನ್ನು ಕಟ್ಟಿದ್ದರೂ ಅದು ಮುಂದಿನ ತಲೆಮಾರಿಗೆ ಸರಕಾರದ ಕೊಡುಗೆಯಾಗಬಹುದಾಗಿತ್ತು. ಆದರೆ.. ಹಾಗಾಗಲಿಲ್ಲವೆನ್ನುವುದಕ್ಕೆ ಸಂಸ್ಕೃತಿ ಇಲಾಖೆಯ ದೂರದೃಷ್ಟಿದೋಷವೇ ಕಾರಣವಾಗಿದೆ.

ಮುಖ್ಯ ಮಂತ್ರಿ ಚಂದ್ರುರವರು ಹೇಳಿದಂತೆ ರವೀಂದ್ರ ಕಲಾಕ್ಷೇತ್ರದ ಮೂಲಭೂತ ಸೌಲಭ್ಯಗಳಲ್ಲಿ ಅನೇಕ ಕೊರತೆಗಳಿವೆ. ಹಲವಾರು ಸಲ ಶೌಚಾಲಯದಲ್ಲಿ ನೀರಿಲ್ಲದ ಸ್ಥಿತಿ ಇರುತ್ತದೆ. ಕಲಾಕ್ಷೇತ್ರದ ಆವರಣದಲ್ಲಿರುವ ತಾಲಿಂ ಕೊಠಡಿಯೊಳಗಿನ ಶೌಚಾಲಯಗಳನ್ನಂತೂ ಮೂಗು ಮುಚ್ಚಿಕೊಂಡೇ ಉಪಯೋಗಿಸಬೇಕು. ಅಲ್ಲಿ ಟಾಯ್ಲಟ್ಗಳ ಬಾಗಿಲಿಗಳಿಗೆ ಒಳಚಿಲಕಗಳೇ ಇಲ್ಲ. ಇನ್ನು ಕಲಾಕ್ಷೇತ್ರದಲ್ಲಿ ನಾಟಕ ಮಾಡುವವರಿಗೆ ಅಲ್ಲಿಯ ಕೆಟ್ಟ ದ್ವನಿವರ್ಧಕ ವ್ಯವಸ್ಥೆಯನ್ನು ನಿಭಾಯಿಸುವುದೇ ಬಲು ದೊಡ್ಡ ಸವಾಲಾಗಿದೆ. ನಾಟಕ ಒಂದಕ್ಕೆ ಅಗತ್ಯವಾದ ಬೆಳಕಿನ ಪರಿಕರಗಳಿಲ್ಲದೇ ಅನೇಕ ತಂಡಗಳು ಹೊರಗಡೆಯಿಂದ ಲೈಟಿಂಗ್ಸಗಳನ್ನು ಬಾಡಿಗೆ ತರಿಸುವ ಅನಿವಾರ್ಯತೆಗೊಳಗಾಗಿದ್ದಾರೆ. ಎಸಿ ಇದೆ ಕೆಲಸ ಮಾಡೋದಿಲ್ಲ, ಪ್ಯಾನಗಳಿವೆ ಪ್ರೇಕ್ಷಾಂಗನದಾದ್ಯಂತ ಗಾಳಿ ಬೀಸೋದಿಲ್ಲ. ಖುರ್ಚಿಗಳಿವೆ ಕಂಪರ್ಟಾಗಿಲ್ಲ... ಹೀಗೆ ಹೇಳುತ್ತಾ ಹೋದರೆ ನ್ಯೂನ್ಯತೆಗಳ ಪಟ್ಟಿಯೇ ಇದೆ. ಹೊರಗೆ ತಳುಕಾಗಿ ಕಾಣುವ ಕಲಾಕ್ಷೇತ್ರದೊಳಗಿನ ಕೊರತೆಗಳನ್ನು ನೀಗಿಸುವ ಕೆಲಸವನ್ನು ಮೊದಲು ಸಂಸ್ಕೃತಿ ಇಲಾಖೆ ಮಾಡಬೇಕಿದೆ ನಂತರ ಬೇಕಾದರೆ ಏನಾದರೂ ಸಂಭ್ರಮ ಮಾಡಿಕೊಳ್ಳಬಹುದಾಗಿದೆ. ಅಗತ್ಯವಿರುವುದನ್ನು ಸರಿಪಡಿಸುವುದು ಬಿಟ್ಟು ಅನಗತ್ಯ ಜಾತ್ರೆ ಮಾಡಿದರೆ ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆಯಿಟ್ಟು ಊರೆಲ್ಲಾ ಮರೆದಂತಾಗುತ್ತದೆ. ಹರಿದ ಒಳಅಂಗಿಯ ಮೇಲೆ ಕೋಟು ಹಾಕಿಕೊಂಡು ದರ್ಭಾರು ಮಾಡಿದಂತಾಗುತ್ತದೆ.

ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಗಮನಿಸಿದರೆ ಸಚಿವೆಯ, ಸರಕಾರಿ ಅಧಿಕಾರಿಗಳ ಹಾಗೂ ಸಂಚಾಲಕರುಗಳ ನಿರ್ಲಕ್ಷತೆ ಕಂಡುಬರುತ್ತದೆ ಎಂದು ಎಲ್ಲರನ್ನೂ ಸಾರಾಸಗಟಾಗಿ ತರಾಟೆಗೆ ತೆಗೆದುಕೊಂಡ ಚಂದ್ರುರವರು ತಾವು ಹೇಳುವ ಮಾತುಗಳನ್ನು ಕೇಳಲು ಸರಕಾರಕ್ಕೆ ಸಂಬಂಧಿಸಿದವರು ಇಲ್ಲಿಲ್ಲ ಹಾಗೂ   ಕಪ್ಪಣ್ಣ, ನಾಗರಾಜಮೂರ್ತಿಯಂತವರು ಸರಕಾರಿ ಇಲಾಖೆಯ ಕೃಪಾಕಟಾಕ್ಷದಲ್ಲಿರೋದರಿಂದ ಅವರೂ ಹೋಗಿ  ಸಂಬಂಧಿಸಿದವರಿಗೆ ಬುದ್ದಿಹೇಳಲು ಸಾಧ್ಯವಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆಯೂ ಆಗುವುದಿಲ್ಲ ಎಂದು ಅವಲತ್ತುಕೊಂಡರು. ಅವರಿವರು ಬರಲಿ ಎಂದು  ಒಂದು ಗಂಟೆಗಳ ಕಾಲ ಕಾರ್ಯಕ್ರಮದ ಆರಂಭವನ್ನು ವಿಳಂಬ ಮಾಡಲಾಯಿತು. ಅನೇಕ ಕಾಲೇಜಿನ ವಿದ್ಯಾರ್ಥಿಗಳು ಮುಖಕ್ಕೆ ಬಣ್ಣ ಬಳಿದುಕೊಂಡು ತಮ್ಮ ಪ್ರತಿಭೆಯನ್ನು ತೋರಿಸಲು ಕಾಯಬೇಕಾಯಿತು. ಆದರೂ ಬರಬೇಕಾದ ಸಚಿವೆ ಬರಲೇ ಇಲ್ಲ. ಕ್ಯಾಬಿನೆಟ್ ಮೀಟಿಂಗ್ ನೆಪ ಹೇಳಿ ತಪ್ಪಿಸಿಕೊಂಡರು. ಸಂಸ್ಕೃತಿ ಇಲಾಖೆಯ ನಿರ್ದೇಶಕರು ನೆಪಕ್ಕೆ ಬಂದಂತೆ ಮಾಡಿ ನಾಪತ್ತೆಯಾದರು. ಯಾರು ಕಾರ್ಯಕ್ರಮದಲ್ಲಿ ಇರಬೇಕಿತ್ತೋ ಅವರೇ ಬರದೇ ಇದ್ದದ್ದು ಮುಖ್ಯ ಮಂತ್ರಿ ಚಂದ್ರುರವರಂತೆ ಅನೇಕರನ್ನು ಬಾಧಿಸಿತು. ಸಮಯಪ್ರಜ್ಞೆ ಎನ್ನುವುದು ಇಲ್ಲದ ಸಾಂಸ್ಕೃತಿಕ ಕಮಿಟಿಯ ಅಧ್ಯಕ್ಷ ಶ್ರೀಮಾನ್ ಕಪ್ಪಣ್ಣ ಹಾಗೂ ಸಂಚಾಲಕ ನಾಗರಾಜಮೂರ್ತಿಯವರ ಕುರಿತು ಚಂದ್ರುರವರು ಬಾಯಿತುಂಬಾ ನಿಂದಾಸ್ತುತಿ ಮಾಡಿದ್ದನ್ನು ಕೇಳಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದರೆ ಸಾಂಸ್ಕೃತಿಕ ಕಮಿಟಿಯ ಆಯೋಜಕರುಗಳು ಕನಿಷ್ಟ ಪಾಪಪ್ರಜ್ಞೆಯೂ ಇಲ್ಲದೇ ದೇಶಾವರಿ ನಗೆ ನಗುತ್ತಿದ್ದರು.

ಲಾಬಿ ಮೂಲಕ ಅಸಮರ್ಥರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೊಡುತ್ತಿರುವುದು, ಸಮಯಕ್ಕೆ ಸರಿಯಾಗಿ ಸರಕಾರಿ ಪ್ರಶಸ್ತಿಗಳನ್ನು ಕೊಡಮಾಡದಿರುವುದು, ನಿಜಕ್ಕೂ ಕಲೆ ಸಂಸ್ಕೃತಿಕಗಾಗಿ ಬದುಕನ್ನು ಸವೆಸಿದವರನ್ನು ಬಿಟ್ಟು ಶಿಪಾರಸ್ಸುಗಳ ಮೂಲಕ ಅವಾರ್ಡಗಳ ಹಂಚಿಕೆಯಾಗುತ್ತಿರುವುದು.. ಹೀಗೆ ಹಲವಾರು ಪ್ರಸ್ತುತ ಸಮಸ್ಯೆಗಳನ್ನು ತಮ್ಮ ಮಾತಿನ ಮೂಲಕ ತರಾಟೆಗೆ ತೆಗೆದುಕೊಂಡ ಚಂದ್ರುರವರು ವಿನೋದದ ಮೂಲಕವೇ ವಿಷಾದವನ್ನು ಅನಾವರಣಗೊಳಿಸಿದರು... ಸಾಂಸ್ಕೃತಿಕ ಸಂಭ್ರಮದ ಪ್ರಾಯೋಜಕರಿಗೂ ಹಾಗೂ ಆಯೋಜಕರಿಗೂ ನೀರಿಳಿಸಿದರು. ಸರಕಾರಿ ವ್ಯವಸ್ಥೆಯನ್ನು ಹೊಗಳುತ್ತಾ ಫಲಾನುಭವಿಗಳಾಗಿ ಅವ್ಯವಸ್ಥೆಯ ವಿರುದ್ಧ ಮಾತಾಡುವ ಸಾಮರ್ಥ್ಯವನ್ನೇ ಕಳೆದುಕೊಂಡ ಕೆಲವಾರು ದಲ್ಲಾಳಿ ರಂಗಕರ್ಮಿಗಳ ನಡುವೆ ಒಬ್ಬ ಮುಖ್ಯಮಂತ್ರಿ ಚಂದ್ರುರವರಾದರೂ ಇದ್ದದ್ದನ್ನು ಇದ್ದಂಗೆ ಹೇಳಿದ್ದನ್ನು ಕೇಳಿದ ಕೆಲವಾರು ರಂಗಕರ್ಮಿಗಳಿಗೆ ಒಂದಿಷ್ಟು ಸಮಾಧಾನ ತಂದಿದ್ದಂತೂ ಸುಳ್ಳಲ್ಲ. ಮುಖ್ಯಮಂತ್ರಿ ಚಂದ್ರುರವರ ರಾಜಕೀಯ ಒಲವು ಹಾಗೂ ನಿಲುವುಗಳು ಏನೇ ಇರಲಿ, ಆದರೆ ಕಣ್ಣಿಗೆ ಕಾಣುವ ಸತ್ಯಗಳನ್ನು ಸಾರ್ವತ್ರಿಕವಾಗಿ ನಿಷ್ಟುರವಾಗಿ ಹೇಳಿದ್ದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಿದೆ. ಭೂತದ ಬಾಯಲ್ಲಿ ಕಠೋರ ಸತ್ಯಗಳು ಅನಾವರಣಗೊಂಡರೂ ಅದು ಸ್ವಾಗತಾರ್ಹವೇ ಆಗಿದೆ.

ಆದರೆ.. ಮುಖ್ಯಮಂತ್ರಿ ಚಂದ್ರುರವರು ಮಾಡಿದ ಎಲ್ಲಾ ಟೀಕೆಗಳೂ ಸತ್ಯವಾದರೂ ಸಾಂದರ್ಭಿಕವಾಗಿರಲಿಲ್ಲ. ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು ಎನ್ನುವ ಅರಿವು ಮಾಜಿ ಕಲಾವಿದ ಹಾಗೂ ಹಾಲಿ ರಾಜಕಾರಣಿಗೆ ಇರಬೇಕಾಗಿತ್ತು. ಯಾಕೆಂದರೆ ಇಲ್ಲಿ ನಡೆಯುತ್ತಿದ್ದದ್ದು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ. ಬೆಂಗಳೂರು ವಿಶ್ವವಿದ್ಯಾಲಯದ ಹಲವಾರು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಲು ಇಲ್ಲಿ ಸೇರಿದ್ದಾರೆ. ವಿಶ್ವವಿದ್ಯಾಲಯದ ಅದ್ಯಾಪಕರುಗಳು, ಉಪಕುಲಪತಿಗಳೂ ಹಾಜರಾಗಿದ್ದಾರೆ. ಸಂಸ ಬಯಲು ಮಂದಿರದ ಪ್ರೇಕ್ಷಾಂಗಣದಲ್ಲೂ ಸಹ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳೇ ತುಂಬಿದ್ದರು. ರಂಗಭೂಮಿಯ ಸಕ್ರೀಯ ಕಲಾವಿದರು ಹಾಗೂ ರಂಗಕರ್ಮಿಗಳು ತುಂಬಾನೇ ಕಡಿಮೆ ಸಂಖ್ಯೆಯಲ್ಲಿದ್ದರು. ರಂಗಭೂಮಿಯತ್ತ ಒಂದು ಕುತೂಹಲವನ್ನಿಟ್ಟುಕೊಂಡಿರುವ ವಿದ್ಯಾರ್ಥಿಯುವಜನಾಂಗದ ಎದುರಲ್ಲಿ ಚಂದ್ರುರವರು ರಂಗಭೂಮಿಯ ಹುಳುಗಳು ಹಾಗೂ ಹುಳುಕಗಳನ್ನು ಕುರಿತು ಟೀಕಿಸಿದರೆ ಅದು ಯುವಜನಾಂಗದ ಮೇಲೆ ನಕಾರಾತ್ಮಕ  ಪರಿಣಾಮವನ್ನು ಬೀರುವುದರಲ್ಲಿ ಸಂದೇಹವಿಲ್ಲ. ಚಂದ್ರೂರವರಂತಹ ಹಿರಿಯರು ಕಿರಿಯರ ಸಮ್ಮುಖದಲ್ಲಿ ಮಾತಾಡುವಾಗ ಹೊಸಬರನ್ನು  ರಂಗಭೂಮಿಯತ್ತ ಆಕರ್ಷಿಸುವಂತೆ ಮಾತಾಡಬೇಕೇ ವಿನಃ ವಿಮುಖರಾಗುವಂತೆ ಪ್ರೇರೇಪಿಸಬಾರದು.

ಎಲ್ಲಾ ಕ್ಷೇತ್ರಗಳಲ್ಲಿರುವಂತೆ ರಂಗಭೂಮಿಯಲ್ಲೂ ಸಹ ನ್ಯೂನ್ಯತೆಗಳಿವೆ. ದಲ್ಲಾಳಿ ದಗಾಕೋರರಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳೂ ಇದ್ದಾರೆ. ಅವುಗಳ ಕುರಿತು ಸಂಬಂಧಿಸಿದವರೊಂದಿಗೆ ಮಾತಾಡಬೇಕು. ಇಲ್ಲವೇ ರಂಗಕರ್ಮಿಗಳೇ ಹೆಚ್ಚಾಗಿರುವ ವೇದಿಕೆಯಲ್ಲಿ ತಮ್ಮ ಮನದಾಳದ ಆಕ್ರೋಶವನ್ನು ಹೊರಗೆ ಹಾಕಬೇಕು. ದಿನನಿತ್ಯ ರಾತ್ರಿಯಾದರೆ ಇದೇ ಕಪ್ಪಣ್ಣ ನಾಗರಾಜಮೂರ್ತಿಯವರ ಜೊತೆಗೆ ಸತತ ಒಡನಾಟದಲ್ಲಿರುವ ಹಾಗೂ ಸಚಿವೆ ಉಮಾಶ್ರೀಯವರ ಜೊತೆಗೆ ಆತ್ಮೀಯತೆಯನ್ನು ಹೊಂದಿದ ಚಂದ್ರುರವರು ವ್ಯಯಕ್ತಿಕವಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ತಿಳಿಸಿ ಸಲಹೆ ಸೂಚನೆ ಕೊಡಬಹುದಾಗಿತ್ತು. ಆದರೆ.. ಹೀಗೆ ವಿದ್ಯಾರ್ಥಿಯುವಜನರೇ ಇರುವ ವೇದಿಕೆಯನ್ನು ತಮ್ಮ ಟೀಕೆ ಟಿಪ್ಪಣೆಗೆ ಬಳಸಿಕೊಂಡಿದ್ದು ಖಂಡಿತಾ ಸಮರ್ಥನೀಯವಲ್ಲ. ರಂಗಭೂಮಿಯ ಹಿರಿಯರು ಮಾತಾಡುವಾಗ ಯಾರನ್ನು ಉದ್ದೇಶಿಸಿ ಮಾತಾಡುತ್ತೇವೆ ಎನ್ನುವ ಅರಿವನ್ನು ಹೊಂದಿರಬೇಕು ಹಾಗೂ ಹೊಸ ತಲೆಮಾರಿನ ಯುವಜನರನ್ನು ಸಾಧ್ಯವಾದಷ್ಟೂ ರಂಗಕಲೆಯತ್ತ ಆಕರ್ಷಿಸುವಂತೆ ಪ್ರೇರೇಪಿಸಬೇಕು. ಮುಖ್ಯ ಮಂತ್ರಿ ಚಂದ್ರೂರಂತವರು ಸಾಂದರ್ಭಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಮಾತಾಡುವುದನ್ನು ಕಲಿತರೆ ಅದು ರಂಗಭೂಮಿಯ ಬೆಳವಣಿಗೆಗೆ ಸೂಕ್ತವಾಗುತ್ತದೆ. ಹಾಗೂ ಎಲ್ಲಾ ರಂಗಕರ್ಮಿಗಳ ಪರವಾಗಿ ಸೂಕ್ತ ವೇದಿಕೆಯಲ್ಲಿ, ಸೂಕ್ತ ಸಂದರ್ಭದಲ್ಲಿ, ಸಂಬಂಧಿಸಿದ ವ್ಯಕ್ತಿಗಳ ಮುಂದೆ ತಮ್ಮ ಅನಿಸಿಕೆ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದರೆ ಅದಕ್ಕೊಂದು ಬೆಲೆಯೂ ಬರುತ್ತದೆ. ಚಂದ್ರೂರವರ ಕಾಳಜಿ ಕಳಕಳಿಗೊಂದು ಅರ್ಥವೂ ಇರುತ್ತದೆ.

                                                      -ಶಶಿಕಾಂತ ಯಡಹಳ್ಳಿ    



 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ