ರಂಗಸಂತೆಯ ಸಂತ ಕನ್ನಯ್ಯಲಾಲ್ ಯುಗಾಂತ್ಯ :
ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಹೈಸ್ನಮ್ ಕನ್ನಯ್ಯಲಾಲ್ ಯುಗ ಅಂತ್ಯವಾಯ್ತು. ಭಾರತದ ಹೆಸರಾಂತ ರಂಗಕರ್ಮಿ, ರಂಗಚಿಂತಕ ಕನ್ನಯ್ಯಲಾಲ್ 2016, ಅಕ್ಟೋಬರ್ 6 ರಂದು ಖಾಯಂ ಆಗಿ ಬದುಕಿನ ನೇಪತ್ಯಕ್ಕೆ ಸೇರಿ ಹೋದರು. ಅವರ ನೆನಪಿಗಿಂತಾ ಅವರು ಹುಟ್ಟುಹಾಕಿದ ವಿಶಿಷ್ಟವಾದ ರಂಗಚಳುವಳಿ ಹಲವಾರು ವರ್ಷಗಳ ಕಾಲ ರಂಗಭೂಮಿಯನ್ನು ಕಾಡುವುದಂತೂ ಸತ್ಯ. ರಂಗಭೂಮಿಯಲ್ಲಿ ಬೇರೆಯವರು ಈಗಾಗಲೇ ಕಟ್ಟಿಕೊಟ್ಟ ಹೆದ್ದಾರಿಯಲ್ಲಿ ಹೋಗದೇ ತಮ್ಮದೇ ಆದ ರಂಗಭಾಷೆಯನ್ನು ಕಂಡುಕೊಂಡು ಹೊಸ ಕಾಲುದಾರಿಯನ್ನು ಸೃಷ್ಟಿಸಿಕೊಂಡು ಅದನ್ನು ವಿಸ್ತರಿಸಿದವರು ಕನ್ನಯ್ಯಲಾಲ್. ಇವರ ವಿಶೇಷತೆ ಏನೆಂದರೆ ಪಾಶ್ಚಾತ್ಯ ಪ್ರಭಾವದ ರಂಗಭೂಮಿಯನ್ನು ಪಕ್ಕಕ್ಕಿಟ್ಟು ತಮ್ಮ ನಾಡಿನ ನೆಲ, ಜಲ, ಭಾಷೆ ಸಂಸ್ಕೃತಿಯನ್ನು ತಮ್ಮ ನಾಟಕಗಳಲ್ಲಿ ಕಟ್ಟಿಕಕೊಡುವ ಮೂಲಕ ಅಪ್ಪಟ ದೇಸಿತನವನ್ನು ರೂಢಿಸಿಕೊಂಡು ಮುಂದಿನ ಯುವರಂಗಕರ್ಮಿಗಳಿಗೆ ಮಾದರಿಯಾದರು.
ಮಣಿಪುರ ರಾಜ್ಯದ ಕನ್ನಯ್ಯಲಾಲ್ರವರು ದೇಶದ ಉದ್ದಗಲಕ್ಕೂ ಹರಿದಾಡಿ ರಂಗಭೂಮಿಯನ್ನು ಕಟ್ಟಲು ಶ್ರಮಿಸಿದವರು. ಕರ್ನಾಟಕದಲ್ಲೂ ಸಹ ಮೈಸೂರಿನಲ್ಲಿ ಬಿ.ವಿ.ಕಾರಂತರ ಆಹ್ವಾನದ ಮೇರೆಗೆ ರಂಗಕಾರ್ಯಾಗಾರವನ್ನು ನಿರ್ದೇಶಿಸಿ ಮೈಸೂರಿನ ರಂಗಾಯಣದ ಕಲಾವಿದರಿಗೆ ‘ರಶೋಮನ್’ ನಾಟಕವನ್ನೂ ನಿರ್ದೇಶಿಸಿದ್ದರು. 1969 ರಲ್ಲಿ “ಕಲಾಕ್ಷೇತ್ರ ಮಣಿಪುರ” ಎನ್ನುವ ರಂಗತಂಡವನ್ನು ಕಟ್ಟಿಕೊಂಡು ರಂಗ ಪ್ರದರ್ಶನ ಕಲೆಯಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಿದರು. ರಂಗಭೂಮಿಯೆಂದರೆ ಕೇವಲ ನಾಟಕವನ್ನು ನಿರ್ಮಿಸುವ ಕಂಪನಿ ಅಲ್ಲಾ. ಅದು ಒಂದು ಪ್ರಯೋಗಶಾಲೆ ಆಗಬೇಕು, ಅಧ್ಯಯನ ಕೇಂದ್ರವಾಗಬೇಕು ಎನ್ನುವ ಆಶಯವನ್ನಿಟ್ಟುಕೊಂಡು ಅದಕ್ಕಾಗಿ ಕೊನೆಯುಸಿರು ಇರುವವರೆಗೂ ಶ್ರಮಿಸಿದರು. ಮಣಿಪುರದ ಸಾಂಪ್ರದಾಯಿಕ ಮೌಲ್ಯಗಳನ್ನು ಸಮಕಾಲೀನ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ನವೀಕರಿಸುವ ಕ್ರಿಯೆಯನ್ನು ನಾಟಕಗಳ ಮೂಲಕ ಕನ್ನಯ್ಯಲಾಲ್ ಮಾಡಿ ಯಶಸ್ವಿಯಾದರು. ಇವರ ತಂಡದ ಕಲಾವಿದರುಗಳು ಮಣಿಪುರದ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಸೃಜನಶೀಲ ಆಸಕ್ತಿಯನ್ನು ಬಲಪಡಿಸಲು ಪ್ರಯತ್ನಿಸಿತು.
ನಾಟಕದ ಉದ್ದೇಶ ಕೇವಲ ಪ್ರದರ್ಶನ ಮಾತ್ರವಲ್ಲ ಜನಸಂಸ್ಕೃತಿಯ ವಿಸ್ತರಣೆಯ ಭಾಗವೆಂದೇ ಕನ್ನಯ್ಯಲಾಲ್ರವರು ತಿಳಿದಿದ್ದರು. 1989ರಲ್ಲಿ ಪ್ರದರ್ಶಿಸಲಾದ ‘ನೂಪಿಲಾನ್’ ಎನ್ನುವ ನಾಟಕದಲ್ಲಿ ಇಂಪಾಲ ಪಟ್ಟಣದ ನೂರಕ್ಕೂ ಹೆಚ್ಚು ವ್ಯಾಪಾರಿ ವೃತ್ತಿಯ ಮಹಿಳೆಯರು ಭಾಗವಹಿಸಿದ್ದರು. 1979ರಲ್ಲಿ ದಕ್ಷಿಣ ಮಣಿಪುರದ ಮೂಲೆಯಲ್ಲಿರುವ ಕುಗ್ರಾಮದ ಜನರಗೆ ನಾಟಕವನ್ನು ಕಲಿಸಿ ಆಡಿಸಿ ಪ್ರದರ್ಶಿಸಿದ ಕನ್ನಯ್ಯಲಾಲ್ ಗ್ರಾಮೀಣ ರಂಗಭೂಮಿಗೂ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. 1980ರಲ್ಲಿ ಚುರುಚಂದಪುರ್ ಜಿಲ್ಲೆಯ ಬುಡುಕಟ್ಟು ಜನಾಂಗದ ಯುವಕರಿಗೆ ನಾಟಕವನ್ನು ನಿರ್ದೇಶಿಸಿ ನಾಟಕವೆಂದರೆ ಏನು ಎಂದು ಗೊತ್ತಿಲ್ಲದ ಜನಾಂಗಕ್ಕೂ ಸಹ ರಂಗಕಲೆಯನ್ನು ಪರಿಚಯಿಸಿದ ಕೀರ್ತಿ ಕನ್ನಯ್ಯರವರದು.
ರಂಗಭೂಮಿ ಎಂದರೆ ನಗರಗಳಲ್ಲಿ ಮಾತ್ರ ನಾಟಕವಾಡಿಸುವುದು ಲಾಭದಾಯಕ ಎಂದು ನಂಬಿಕೊಂಡಿರುವ ಹಲವಾರು ರಂಗಕರ್ಮಿಗಳಿಗಿಂತಾ ಕನ್ನಯ್ಯಲಾಲ್ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಹಳ್ಳಿಯ ರೈತಾಪಿ ಕೂಲಿ ಕಾರ್ಮಿಕ ಜನರ ಜೊತೆಗೆ, ಬುಡಕಟ್ಟಿನ ಅನಕ್ಷರಸ್ತರ ಜೊತೆಗೆ ನಾಟಕ ಕಟ್ಟುವುದು ಬಲು ಆಸಕ್ತಿಯ ವಿಷಯವಾಗಿತ್ತು ಹಾಗೂ ರಂಗಕ್ರಿಯೆ ಎನ್ನುವುದು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೇ ಅದು ಜನರ ಬದುಕನ್ನು ಕಟ್ಟುವ ಮಾಧ್ಯಮವೂ ಆಗಬೇಕು ಎನ್ನುವ ತಮ್ಮ ಆಶಯಕ್ಕೆ ಪೂರಕವಾಗಿ ಜನರ ನಡುವೆ ಹೋಗಿ ನಾಟಕ ಕಟ್ಟಿದರು.
ಪರ್ಯಾಯ ರಂಗಸಾಧ್ಯತೆಗಳತ್ತ ಸದಾ ತುಡಿಯುತ್ತಿದ್ದ ಈ ಹಿರಿಯ ಜೀವ ರಂಗತರಬೇತಿ ಹಾಗೂ ಸಂಶೋಧನೆಯನ್ನು ಮಾಡುತ್ತಲೇ ಎಂದೂ ಮರೆಯಲಾಗದಂತಹ ಭಾರತದ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ಹಲವಾರು ನಾಟಕಗಳನ್ನೂ ಸಹ ಕಟ್ಟಿಕೊಟ್ಟರು. ತಮ್ನಾಲಾಯ್ (1972), ಕಾಬ್ಯೂ ಕಿಯೋಬಾ (1973), ಪೆಬೇತಿ (1975), ಲೈಗಿ ಮಾಚಾಸಿಂಘ (1978), ಮೇಮರೀಸ್ ಆಪ್ ಆಪ್ರಿಕಾ (1986), ಮಿಗಿ ಶರಂಗ್ (1991), ಕರ್ಣ (1997), ದ್ರೌಪದಿ (2000), ದಾಕ್ಗೋರ್ ಆಪ್ ಟ್ಯಾಗೋರ್ (2006), ಉಚೆಕ್ ಲಂಗಮೈಡಾಂಗ್ (2008) ಹೀಗೆ ಬಲು ಮಹತ್ವದ ನಾಟಕಗಳನ್ನು ಕನ್ನಯ್ಯಲಾಲ್ರವರು ನಿರ್ದೇಶಿಸಿ ಮಣಿಪುರಿ ರಂಗಭೂಮಿಗೆ ಅತ್ಯಮೂಲ್ಯ ಕೊಡುಗೆಯನ್ನು ಕೊಟ್ಟರು. ಕನ್ನಯ್ಯರವರ ‘ಕಲಾಕ್ಷೇತ್ರ ಮಣಿಪುರ’ ರಂಗತಂಡವು ಭಾರತದಾದ್ಯಂತ ತಮ್ಮ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಅಪಾರ ಮೆಚ್ಚುಗೆ ಗಳಿಸಿದೆ. ಜಪಾನ್, ಸಿಂಗಪೂರ್, ಮಲೇಶಿಯಾ, ಇಂಡೋನೇಶಿಯಾ, ಬಾಂಗ್ಲಾದೇಶ್ ಹಾಗೂ ಈಜಿಪ್ತ್ ಗಳಲ್ಲೂ ಸಹ ಕನ್ನಯ್ಯಲಾಲ್ರವರು ನಿರ್ದೇಶಿಸಿದ ನಾಟಕಗಳು ಪ್ರದರ್ಶನಗೊಂಡವು. ವಿದೇಶದಲ್ಲೂ ಭಾರತದ ಕೀರ್ತಿಯನ್ನು ಪಸರಿಸಿ ಕನ್ನಯ್ಯಲಾಲ್ರವರನ್ನು ಅಂತರಾಷ್ಟ್ರೀಯ ರಂಗಕರ್ಮಿ ಎಂದೇ ಗುರುತಿಸಲಾಗುತ್ತದೆ. ರಂಗಭೂಮಿಯಲ್ಲಿ ಪ್ರಯೋಗಶೀಲತೆ ಹಾಗೂ ಮುರಿದು ಕಟ್ಟುವ ತಂತ್ರಗಳಿಗೆ ಹೆಸರಾಗಿದ್ದ ಕನ್ನಯ್ಯಲಾಲ್ರವರು ತಮ್ಮ ವಿಶಿಷ್ಟ ಅನುಭವಗಳ ಮೂಲಕ ಹೊಸ ರಂಗಭಾಷೆಯನ್ನು ಆನ್ವೇಷಿಸಿ, ರಂಗತಂತ್ರಗಳನ್ನು ವಿಕಾಸಗೊಳಿಸಿ ಮುಂದಿನ ತಲೆಮಾರಿಗೆ ಬಿಟ್ಟು ಹೋಗಿದ್ದಾರೆ.
ಭಾರತೀಯ ರಂಗಭೂಮಿಯಲ್ಲಿ ಕನ್ನಯ್ಯಲಾಲ್ ಪರ್ಯಾಯ ರಂಗಭೂಮಿಯನ್ನೇ ಹುಟ್ಟಿಹಾಕಿದ್ದಾರೆ. ಕನ್ನಯ್ಯಲಾಲರ ಪತ್ನಿ ಕಲಾವಿದೆ ಸಾವಿತ್ರಿಯವರೂ ಸಹ ಗಂಡನ ರಂಗಬದ್ದತೆಗೆ ಬೆನ್ನುಲುಬಾಗಿ ನಿಂತು ‘ಕನ್ನಯ್ಯಲಾಲ್ ರಂಗಭೂಮಿ’ಯನ್ನು ಕಟ್ಟುವಲ್ಲಿ ಅಪಾರ ಪರಿಶ್ರಮವಹಿಸಿದ್ದಾರೆ. ಕಲಾವಿದರ ತರಬೇತಿ ಪ್ರಕ್ರಿಯೆಯ ವಿಕಾಸವನ್ನು ಅಧ್ಯಯನದ ಮೂಲಕ ಕಂಡುಕೊಂಡ ಕನ್ನಯ್ಯಲಾಲ್ ದಂಪತಿಗಳು ಜೀವಂತ ರಂಗಭೂಮಿಯನ್ನು ಕಟ್ಟಲು ತಮ್ಮ ಬದುಕನ್ನೇ ಮುಡುಪಾಗಿಟ್ಟರು. 2005ರಿಂದ ಕನ್ನಯ್ಯರವರ ತಂಡವು ತಮ್ಮ ನಾಟಕಗಳ ಮೂಲಕ ಜನಾಂಗೀಯ ಸಂಸ್ಕೃತಿಯ ಅನುಭವಗಳನ್ನು ಆಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿದರು. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರಕಾರದ ಸ್ಯಾಲರಿ ಗ್ರ್ಯಾಂಟ್ ಸವಲತ್ತನ್ನು ಬಳಿಸಿಕೊಂಡು ಒಂದು ವೃತ್ತಿಪರ ತಂಡವಾಗಿ ರಂಗಚಟುವಟಿಕೆಗಳನ್ನು ಕನ್ನಯ್ಯಲಾಲ್ ನಡೆಸುತ್ತಾ ಬಂದಿದ್ದರು. ರಂಗಭೂಮಿಯನ್ನು, ಜನಸಂಸ್ಕೃತಿಯನ್ನು ಬದುಕಿನ ಭಾಗವಾಗಿ ಮಾಡಿಕೊಂಡು ಅವಿರತವಾಗಿ ಶ್ರಮಿಸುತ್ತಿದ್ದ ಈ ರಂಗಜೀವ ಈಗ ಖಾಯಂ ಆಗಿ ವಿಶ್ರಾಂತಿ ಪಡೆದಿದೆ. ಅವರ ಬದುಕು ಹಾಗೂ ಸಾಧನೆಯನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವೇ ಈ ಲೇಖನ.
1941 ಜನವರಿ 17 ರಂದು ಮಣಿಪುರದ ಬಡ ಕುಟುಂಬದಲ್ಲಿ ಹುಟ್ಟಿದ ಹೈಸ್ನಮ್ ಕನ್ನಯ್ಯಲಾಲ್ರವರು ಜನಿಸಿದ ಮೂರೇ ತಿಂಗಳಿಗೆ ತಾಯಿಯನ್ನು ಅಗಲಿ ಅನಾಥರಾದರು. ಅಸಹನೀಯ ಬಾಲ್ಯವನ್ನು ಕಳೆದ ಕನ್ನಯ್ಯ ದೊಡ್ಡಪ್ಪನ ಆಶ್ರಯದಲ್ಲಿ ಬೆಳೆದರು. ದೊಡ್ಡಪ್ಪನ ಸಂಗೀತ ಹಾಗೂ ರಂಗಭೂಮಿಯ ಆಸಕ್ತಿ ಕನ್ನಯ್ಯರವರನ್ನೂ ಸಹ ರಂಗಕಲೆಯತ್ತ ಆಕರ್ಷಿಸಿತು. ‘ಮೋಯರಂಗ ಪ್ರಭಾ’ ಎನ್ನುವ ಸಾಂಪ್ರದಾಯಿಕ ರಂಗಭೂಮಿ ಹಾಗೂ ಪಾಶ್ಚಾತ್ಯ ಮಾದರಿಯಾದ ಪ್ರಿಸೀನಿಯಂ ಮಣಿಪುರಿ ರಂಗಭೂಮಿಗಳು ಚಾಲ್ತಿಯಲ್ಲಿದ್ದ ಕಾಲವದು. ಕರ್ನಾಟಕದಲ್ಲಿ ಜಾನಪದ ರಂಗಭೂಮಿ ಹಾಗೂ ಕಂಪನಿ ನಾಟಕಗಳಿದ್ದ ಹಾಗೆ. ಉತ್ತಮ ಕಂಠಸಿರಿಯನ್ನು ಹೊಂದಿದ್ದ ಕನ್ನಯ್ಯ ಶಾಲೆಯ ದಿನಗಳಲ್ಲಿ ಕೆಲವಾರು ನಾಟಕಗಳಲ್ಲಿ ಹಾಡುತ್ತಾ ನಾಟಕಕಲೆಯಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
1959 ರಲ್ಲಿ ಇಂಪಾಲ್ ಕಾಲೇಜಿಗೆ ಸೇರಿದಾಗ ಅಲ್ಲಿ ತೋಂಗ್ಬ್ರಾ ಎನ್ನುವ ಉಪನ್ಯಾಸಕರು ದೊರೆತರು. ಅವರು ಹೆಸರಾಂತ ರಂಗಕರ್ಮಿಗಳೂ ಆಗಿದ್ದು ಕನ್ನಯ್ಯನವರ ರಂಗಬದುಕಿನಲ್ಲಿ ಬಲು ದೊಡ್ಡ ತಿರುವನ್ನು ಕೊಟ್ಟಿತು. ತೋಂಗ್ಬ್ರಾರವರ ‘ಸೋಸೈಟಿ ಥೀಯಟರ್’ ತಂಡವನ್ನು ಸೇರಿದ ಕನ್ನಯ್ಯರವರು ಮೂರು ವರ್ಷಗಳ ಕಾಲ ನಾಟಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರ ಕೆಲವಾರು ರಂಗಾಸಕ್ತ ಸ್ನೇಹಿತರನ್ನು ಸೇರಿಸಿಕೊಂಡು 1961 ರಲ್ಲಿ ವಿದ್ಯಾರ್ಥಿ ಕಲಾವಿದರ ಸಂಘವನ್ನು ಹುಟ್ಟುಹಾಕಿ ಲಾಯೆಂಗ್ ಅಹಂಬಾ (ಪ್ರಥಮ ಚಿಕಿತ್ಸೆ) ನಾಟಕವನ್ನು ಬರೆದು ನಿರ್ದೇಶಿಸಿದರು. ಈ ತಂಡದ ಕಲಾವಿದೆಯಾಗಿದ್ದ ಸಾಬಿತ್ರಿಯವರನ್ನೇ 1962 ರಲ್ಲಿ ಕನ್ಯಯ್ಯರವರು ಪ್ರೀತಿಸಿ ಮದುವೆಯಾದರು.
ತಾಪತ್ರಯಗಳು ಶುರುವಾಗಿದ್ದೇ ಮದುವೆಯಾದಮೇಲೆ. ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಗಳು ತೀವ್ರವಾದವು. ಅನಿವಾರ್ಯವಾಗಿ ಬದುಕು ಕಟ್ಟಿಕೊಳ್ಳಲು ನಾಟಕವನ್ನು ಬಿಟ್ಟು ಬದುಕಿಗಾಗಿ ಬೇಕಾದ ಸಂಪಾದನೆಗಾಗಿ ಬೇರೆ ಬೇರೆ ಕಡೆ ಕೆಲಸವನ್ನು ಕನ್ನಯ್ಯರವರು ಮಾಡತೊಡಗಿದರು. ಮಣಿಪುರದ ರಾಜಧಾನಿ ಇಂಪಾಲ್‌ನ ಬಾಟಾ ಶೋರೂಂನಲ್ಲಿ ಸೇಲ್ಸ್ಮನ್ ಆಗಿ ಕೂಡಾ ಕೆಲಸ ಮಾಡಿದ್ದಿದೆ. ಮನೆ ನಿರ್ಮಾಣದ ಕಂಪನಿಯ ಕಛೇರಿಯಲ್ಲಿ ಕ್ಲರ್ಕ ಆಗಿ, ಖಾಸಗಿ ಶಾಲೆಯಲ್ಲಿ ಮೇಷ್ಟ್ರಾಗಿ, ಆಮೇಲೆ ಅಂಕಿಸಂಖ್ಯೆಗಳ ಇಲಾಖೆಯಲ್ಲಿ ವಿಚಾರಣಾಧಿಕಾರಿಯಾಗಿ ಕೆಲಸ ಮಾಡಿ ಬದುಕಿನ ಬಂಡಿಯನ್ನು ನೂಕತೊಡಗಿದರು. ಆದರೂ ಸಮಾಧಾನವಿರಲಿಲ್ಲ. ರಂಗಭೂಮಿಯನ್ನು ಬಿಟ್ಟಿರಲು ಆಗಲೇ ಇಲ್ಲ. ರಂಗಭೂಮಿಯಲ್ಲಿಯೇ ಏನನ್ನಾದರೂ ಸಾಧಿಸಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಇರುವ ಕೆಲಸವನ್ನು ಬಿಟ್ಟುಕೊಟ್ಟು 1968ರಲ್ಲಿ ದೆಹಲಿಯ ರಾಷ್ಟ್ರೀಯ ಶಾಲೆ (ಎನ್ಎಸ್ಡಿ) ಗೆ ರಂಗಶಿಕ್ಷಣ ಕಲಿಯಲೆಂದು ಸೇರಿಯೇ ಬಿಟ್ಟರು.
ತಾಪತ್ರಯಗಳು ಶುರುವಾಗಿದ್ದೇ ಮದುವೆಯಾದಮೇಲೆ. ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಗಳು ತೀವ್ರವಾದವು. ಅನಿವಾರ್ಯವಾಗಿ ಬದುಕು ಕಟ್ಟಿಕೊಳ್ಳಲು ನಾಟಕವನ್ನು ಬಿಟ್ಟು ಬದುಕಿಗಾಗಿ ಬೇಕಾದ ಸಂಪಾದನೆಗಾಗಿ ಬೇರೆ ಬೇರೆ ಕಡೆ ಕೆಲಸವನ್ನು ಕನ್ನಯ್ಯರವರು ಮಾಡತೊಡಗಿದರು. ಮಣಿಪುರದ ರಾಜಧಾನಿ ಇಂಪಾಲ್‌ನ ಬಾಟಾ ಶೋರೂಂನಲ್ಲಿ ಸೇಲ್ಸ್ಮನ್ ಆಗಿ ಕೂಡಾ ಕೆಲಸ ಮಾಡಿದ್ದಿದೆ. ಮನೆ ನಿರ್ಮಾಣದ ಕಂಪನಿಯ ಕಛೇರಿಯಲ್ಲಿ ಕ್ಲರ್ಕ ಆಗಿ, ಖಾಸಗಿ ಶಾಲೆಯಲ್ಲಿ ಮೇಷ್ಟ್ರಾಗಿ, ಆಮೇಲೆ ಅಂಕಿಸಂಖ್ಯೆಗಳ ಇಲಾಖೆಯಲ್ಲಿ ವಿಚಾರಣಾಧಿಕಾರಿಯಾಗಿ ಕೆಲಸ ಮಾಡಿ ಬದುಕಿನ ಬಂಡಿಯನ್ನು ನೂಕತೊಡಗಿದರು. ಆದರೂ ಸಮಾಧಾನವಿರಲಿಲ್ಲ. ರಂಗಭೂಮಿಯನ್ನು ಬಿಟ್ಟಿರಲು ಆಗಲೇ ಇಲ್ಲ. ರಂಗಭೂಮಿಯಲ್ಲಿಯೇ ಏನನ್ನಾದರೂ ಸಾಧಿಸಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಇರುವ ಕೆಲಸವನ್ನು ಬಿಟ್ಟುಕೊಟ್ಟು 1968ರಲ್ಲಿ ದೆಹಲಿಯ ರಾಷ್ಟ್ರೀಯ ಶಾಲೆ (ಎನ್ಎಸ್ಡಿ) ಗೆ ರಂಗಶಿಕ್ಷಣ ಕಲಿಯಲೆಂದು ಸೇರಿಯೇ ಬಿಟ್ಟರು.
ಆದರೆ.. ಅಲ್ಲಿ ಕೇವಲ ಆರು ತಿಂಗಳುಗಳ ಕಾಲ ಮಾತ್ರ ಇರಲು ಸಾಧ್ಯವಾಗಿ ಅನಿವಾರ್ಯ ಕಾರಣಗಳಿಂದ ರಂಗಶಿಕ್ಷಣವನ್ನು ಪೂರ್ಣಗೊಳಿಸಲು ಕನ್ನಯ್ಯರವರಿಗೆ ಆಗಲಿಲ್ಲ. ಅದೇ ಸಮಯಕ್ಕೆ ಮಣಿಪುರದ ವಾರ್ತಾ ಇಲಾಖೆಯ ನಾಟಕ ವಿಭಾಗದಲ್ಲಿ ಪ್ರೊಡ್ಯೂಸರ್ ಆಗಿ ಕೆಲಸ ದೊರಕಿತು. ಉತ್ತಮ ಸಂಬಳದ ಜೊತೆಗೆ ತಮಗಿಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿದ್ದರಿಂದ ದಿಕ್ಕೆಟ್ಟ ಬದುಕು ನೆಮ್ಮದಿಯ ನೆಲೆಕಂಡುಕೊಂಡಂತಾಗಿ ಹತ್ತು ವರ್ಷಗಳ ಕಾಲ ಸರಕಾರಿ ಸೇವೆಯಲ್ಲಿ ಕನ್ನಯ್ಯಲಾಲ್ ತಮ್ಮನ್ನು ತೊಡಗಿಸಿಕೊಂಡರು. ಸರಕಾರಿ ಕೆಲಸದ ಜೊತೆಗೆ ಮಣೀಪುರಿ ರಂಗಭೂಮಿಯಲ್ಲೂ ಹೆಚ್ಚು ಕ್ರಿಯಾಶೀಲರಾಗಿ ತಮ್ಮದೇ ಆದ ‘ಕಲಾಕ್ಷೇತ್ರ ಮಣಿಪುರ’ ಎನ್ನುವ ತಂಡವನ್ನು 1969ರಲ್ಲಿ ಹುಟ್ಟುಹಾಕಿ ನಿರಂತರವಾಗಿ ರಂಗಚಟುವಟಿಕೆಗಳನ್ನು ನಡೆಸಿದರು. ತಮ್ಮ ನಾಟಕದ ತಂಡದ ಜೊತೆಗೆ ಭಾರತದಾದ್ಯಂತ ನಾಟಕ ಪ್ರದರ್ಶನಗಳಿಗಾಗಿ ಸುತ್ತುವ ಕನ್ನಯ್ಯಲಾಲ್ರವರಿಗೆ ಸರಕಾರಿ ಇಲಾಖೆಯ ಕಿರುಕುಳ ಹೆಚ್ಚಾಯಿತು. ಕನ್ನಯ್ಯಲಾಲ್ ರವರು ಸರಕಾರಿ ಕೆಲಸಕ್ಕಿಂತಾ ತಮ್ಮ ರಂಗತಂಡದ ಕೆಲಸಗಳಲ್ಲಿಯೇ ಬಹುತೇಕ ಸಮಯ ತೊಡಗಿಸಿಕೊಂಡಿದ್ದರಿಂದಾಗಿ ಇಲಾಖೆಯ ಅಧಿಕಾರಿವರ್ಗಕ್ಕೆ ಸಹಿಸದಾಯಿತು. ಅಧಿಕಾರಿಶಾಹಿಗಳ ವಿಪರೀತ ಒತ್ತಡ ತಾಳಲಾರದೇ ಸರಕಾರಿ ಕೆಲಸಕ್ಕೆ ರಾಜೀನಾಮೆ ಬಿಸಾಕಿ ತಮ್ಮ ರಂಗತಂಡದ ಕೆಲಸಕ್ಕೆ ಪೂರ್ಣಾವಧಿಯಾಗಿ ತೊಡಗಿಕೊಂಡ ಕನ್ನಯ್ಯಲಾಲ್ ಕೇವಲ ಮಣಿಪುರಿ ಮಾತ್ರವಲ್ಲ ಭಾರತದ ರಂಗಭೂಮಿಯಲ್ಲಿ ದೊಡ್ಡ ಹೆಸರಾದರು. ಹೆಮ್ಮೆಯ ರಂಗಕರ್ಮಿಯಾದರು.
1972ರಲ್ಲಿ ಇನ್ನೊಬ್ಬ ರಂಗದಿಗ್ಗಜ ಬಾದಲ್ ಸರ್ಕಾರರವರ ಜೊತೆ ಸಂಪರ್ಕಕ್ಕೆ ಬಂದಿದ್ದು ಕನ್ನಯ್ಯಲಾಲ್ ರವರ ರಂಗಬದುಕಿನ ಅತೀ ದೊಡ್ಡ ತಿರುವಾಗಿದೆ. ರಂಗಪಠ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ನಾಟಕವನ್ನು ಕಟ್ಟುತ್ತಿದ್ದ ಕನ್ನಯ್ಯರವರು ಬಾದಲ್ ಸರ್ಕಾರರವರ ಒಡನಾಟ ಹಾಗೂ ಪ್ರೇರಣೆಯಿಂದಾಗಿ ಪ್ರದರ್ಶನಕಲೆಯ ವಿವಿಧ ಆಯಾಮಗಳತ್ತಲೂ ಗಮನ ಹರಿಸಿದರು. ಕಲೆಗಾಗಿ ಕಲೆಯಲ್ಲ ಜನರಿಗಾಗಿ ಜನರಿಂದ ಜನರಿಗೋಸ್ಕರ ಕಲೆ ಎಂಬುದನ್ನು ಅರಿತುಕೊಂಡು ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡರು. ನೂರಾರು ವ್ಯಾಪಾರಿ ವೃತ್ತಿಯ ಮಹಿಳೆಯರನ್ನು ಸೇರಿಸಿಕೊಂಡು “ನೂಪಿ ಲಾನ್” ನಾಟಕವನ್ನು ಸಿದ್ದಮಾದರಿ ರಂಗಮಂದಿರದ ಹೊರಗೆ ಬಯಲು ರಂಗಭೂಮಿಯಲ್ಲಿ ಪ್ರದರ್ಶಿಸಿದರು. ಆನಂತರ ಗ್ರಾಮಾಂತರ ಪ್ರದೇಶದ ಜನರನ್ನು ಬಳಸಿಕೊಂಡು ಬಯಲನ್ನೇ ರಂಗಮಂದಿರ ಮಾಡಿಕೊಂಡು ನಾಟಕಗಳನ್ನು ಕಟ್ಟಿದ ಕನ್ನಯ್ಯರವರು ಜನರತ್ತ ರಂಗಭೂಮಿಯನ್ನು ತೆಗೆದುಕೊಂಡು ಹೋದರು. ಹಿಂದಿ ಮತ್ತು ಇಂಗ್ಲೀಷ್ ರಂಗಭೂಮಿಯ ಪ್ರಭಾವಳಿಗಳನ್ನು ಪಕ್ಕಕ್ಕಿಟ್ಟು ಪ್ರಾದೇಶಿಕ ರಂಗಭೂಮಿಯನ್ನು ಕಟ್ಟಿ ಬೆಳೆಸಿದ್ದು ಕನ್ನಯ್ಯಲಾಲ್ ರವರ ನೇಟಿವಿಟಿ ಬದ್ದತೆಗೆ ಸಾಕ್ಷಿಯಾಗಿದೆ.
ನಾಟಕ ಮಾಡಿಸುವುದು ಮಾತ್ರ ಕನ್ನಯ್ಯರವರ ಕೆಲಸವಾಗಿರದೇ ಕಲಾವಿದರನ್ನು ಸಿದ್ದಗೊಳಿಸುವುದಕ್ಕೂ ಅತೀ ಹೆಚ್ಚು ಮಹತ್ವ ನೀಡಿದರು. ಕಲಾವಿದರುಗಳ ದೇಹಭಾಷೆಯ ಮೇಲೆ ಹೆಚ್ಚು ಕೆಲಸ ಮಾಡುತ್ತಾ ಪೂರಕವಾಗಿ ರಂಗತಂತ್ರಗಳನ್ನು ಬಳಸುತ್ತಾ ಅನನ್ಯ ನಾಟಕಗಳನ್ನು ಕಟ್ಟಿಕೊಟ್ಟರು. ಕಲ್ಕತ್ತಾ , ದೆಹಲಿ , ಮುಂಬೈ , ಚೆನೈ , ಮೈಸೂರು, ಬೆಂಗಳೂರು, ಗೌಹಾತಿ , ಅಗರ್ತಾಲಾ ಪಾಟ್ನಾ …… ಹೀಗೆ ಭಾರತದಾದ್ಯಂತ ಹಲವಾರು ಪ್ರಮುಖ ಸ್ಥಳಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ರಂಗ ಕಾರ್ಯಾಗಾರಗಳನ್ನು ನಡೆಸಿಕೊಟ್ಟು ಹಲವಾರು ಯುವಕಲಾವಿದರಿಗೆ ತರಬೇತಿಯನ್ನು ಕೊಟ್ಟು ಒಂದು ರಂಗತಲೆಮಾರಿನ ಸೃಷ್ಟಿಗೆ ಪ್ರೇರಕರಾದರು.
ಸರಕಾರಿ ಕೆಲಸದಲ್ಲೇ ಇದ್ದಿದ್ದರೆ ಎಲ್ಲರಲ್ಲಿ ಇವರೂ ಒಬ್ಬರಾಗಿ ನಿವೃತಿಯಾಗಿ ಬದುಕು ಸಾಗಿಸುತ್ತಿದ್ದರು. ಆದರೆ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರಿಂದ ಭಾರತದ ರಂಗಭೂಮಿಯ ಇತಿಹಾಸದಲ್ಲಿ ಅಜರಾಮರರಾದರು. ಇವರ ರಂಗಸೇವೆಗಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. 1982ರಲ್ಲಿ ಮಣಿಪುರ ರಾಜ್ಯ ಕಲಾ ಅಕಾಡೆಮಿ ಪ್ರಶಸ್ತಿ ದೊರಕಿದರೆ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಕೂಡಾ ನಿರ್ದೇಶನಕ್ಕಾಗಿ ಕೊಡಮಾಡಲಾಗಿದೆ. 1997ರಲ್ಲಿ ಮಣಿಪುರಿ ಸಾಹಿತ್ಯ ಪರಿಷತ್ತು ‘ನಾಟ್ಯರತ್ನ’ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದೆ. 2003ರಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಕನ್ನಯ್ಯಲಾಲರವರಿಗೆ ಅಪೂರ್ವ ಗೌರವವನ್ನು ಸಲ್ಲಿಸಿದೆ. 2004ರಲ್ಲಿ ಪದ್ಮಶ್ರೀ ಅವಾರ್ಡ, 2016ರಲ್ಲಿ ಪದ್ಮಭೂಷನ್ ಅವಾರ್ಡ.. ಹೇಗೆ ತಮ್ಮ ಬದುಕಿನ ಸಾಧನೆಯ ಹಾದಿಯಲ್ಲಿ ಅನೇಕಾನೇಕ ಸನ್ಮಾನ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕನ್ನಯ್ಯಲಾಲ್ ಅವುಗಳಿಗೆಲ್ಲಾ ಅರ್ಹರಾಗಿದ್ದರು.
ಸರಕಾರಿ ಕೆಲಸದಲ್ಲೇ ಇದ್ದಿದ್ದರೆ ಎಲ್ಲರಲ್ಲಿ ಇವರೂ ಒಬ್ಬರಾಗಿ ನಿವೃತಿಯಾಗಿ ಬದುಕು ಸಾಗಿಸುತ್ತಿದ್ದರು. ಆದರೆ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರಿಂದ ಭಾರತದ ರಂಗಭೂಮಿಯ ಇತಿಹಾಸದಲ್ಲಿ ಅಜರಾಮರರಾದರು. ಇವರ ರಂಗಸೇವೆಗಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. 1982ರಲ್ಲಿ ಮಣಿಪುರ ರಾಜ್ಯ ಕಲಾ ಅಕಾಡೆಮಿ ಪ್ರಶಸ್ತಿ ದೊರಕಿದರೆ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಕೂಡಾ ನಿರ್ದೇಶನಕ್ಕಾಗಿ ಕೊಡಮಾಡಲಾಗಿದೆ. 1997ರಲ್ಲಿ ಮಣಿಪುರಿ ಸಾಹಿತ್ಯ ಪರಿಷತ್ತು ‘ನಾಟ್ಯರತ್ನ’ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದೆ. 2003ರಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಕನ್ನಯ್ಯಲಾಲರವರಿಗೆ ಅಪೂರ್ವ ಗೌರವವನ್ನು ಸಲ್ಲಿಸಿದೆ. 2004ರಲ್ಲಿ ಪದ್ಮಶ್ರೀ ಅವಾರ್ಡ, 2016ರಲ್ಲಿ ಪದ್ಮಭೂಷನ್ ಅವಾರ್ಡ.. ಹೇಗೆ ತಮ್ಮ ಬದುಕಿನ ಸಾಧನೆಯ ಹಾದಿಯಲ್ಲಿ ಅನೇಕಾನೇಕ ಸನ್ಮಾನ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕನ್ನಯ್ಯಲಾಲ್ ಅವುಗಳಿಗೆಲ್ಲಾ ಅರ್ಹರಾಗಿದ್ದರು.
ಕನ್ನಯ್ಯಲಾಲ್ ಬೇರೆ ರಂಗಕರ್ಮಿಗಳಿಗಿಂತಾ ಭಿನ್ನವಾಗಿ ನಿಲ್ಲುವುದು ಅವರ ಪರ್ಯಾಯ ರಂಗಭೂಮಿಯ ಪರಿಕಲ್ಪನೆಗಳಿಂದಾಗಿ. ನಾಟಕದಲ್ಲಿ ವಿಭಿನ್ನ ಭಾವ, ಸಂವೇದನೆ ಹಾಗೂ ಸಂಹವನದ ಆಯಾಮಗಳನ್ನು ಬಳಸುವ ಹೊಸ ರಂಗಭಾಷೆಯನ್ನು ತೋರಿಸಿಕೊಟ್ಟಿದ್ದರಿಂದಾಗಿ ಕನ್ನಯ್ಯರವರು ಭಾರತೀಯ ರಂಗಭೂಮಿಯಲ್ಲಿ ಪ್ರಮುಖರೆನಿಸಿಕೊಳ್ಳುತ್ತಾರೆ. ಹಾಗೂ ಪ್ರಸ್ತುತ ಸಮಕಾಲೀನ ಸಮಾಜವನ್ನು ಪಾರದರ್ಶಕವಾಗಿ ತಮ್ಮ ನಾಟಕದಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರಿಂದಾಗಿ ಕನ್ಯಯ್ಯರವರ ನಾಟಕಗಳು ಜನರಿಗೆ ಹತ್ತಿರವಾದವು. ರಂಗಕಲೆಯ ಮೂಲಕ ಜನಹೋರಾಟಕ್ಕೆ ಬೆಂಬಲಿಸಿದ ಕನ್ನಯ್ಯರವರು ಆಸ್ಸಾಂ ಹಾಗೂ ಮಣಿಪುರದಲ್ಲಿ ಜನರ ಮೇಲೆ ಆಗುತ್ತಿರವ ದಮನ ಹಾಗೂ ದಬ್ಬಾಳಿಕೆಯ ವಿರುದ್ದ ರಂಗಭೂಮಿಯನ್ನು ಪ್ರತಿಭಟನಾಸ್ತ್ರವಾಗಿ ಬಳಸಿದರು. ಅನೇಕಾನೇಕ ಬೀದಿ ನಾಟಕಗಳ ಮೂಲಕ ವ್ಯವಸ್ಥೆಯ ಜನವಿರೋಧಿತನವನ್ನು ಬಯಲಿಗೆಳೆದು ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ಬದುಕು ಹಾಗೂ ರಂಗಭೂಮಿಯ ಹೋರಾಟದ ಹಾದಿ ಯುವರಂಗಕರ್ಮಿಗಳಿಗೆ ಪಾಠವಾಗಿದೆ.
ಕನ್ನಯ್ಯಲಾಲ್ರವರ ಹೆಂಡತಿ ಮಕ್ಕಳು ಸೇರಿ ಇಡೀ ಕುಟುಂಬವೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದೆ. ಕನ್ನಯ್ಯರವರ ಪತ್ನಿ ಸಾವಿತ್ರಿಯವರು ಭಾರತದ ಶ್ರೇಷ್ಟ ನಟಿಯರಲ್ಲಿ ಒಬ್ಬರು. ಸಾವಿತ್ರಿಯವರ ರಂಗಬದ್ದತೆ ಅದೆಷ್ಟಿದೆ ಎಂದರೆ ಕನ್ನಯ್ಯರವರು ನಿರ್ದೇಶಿಸಿದ ದ್ರೌಪತಿ ನಾಟಕದ ಒಂದು ದೃಶ್ಯದಲ್ಲಿ ಸಂಪೂರ್ಣ ಬೆತ್ತಲಾಗಿಯೇ ನಟಿಸಿದರು. ಇಡೀ ದೃಶ್ಯ ಎಲ್ಲಿಯೂ ಅಶ್ಲೀಲವೆನಿಸದೇ ನಾಟಕದ ಭಾಗವಾಗಿ ತೆರೆದುಕೊಂಡು ಜನರ ಅಂತಃಕರಣವನ್ನು ಮಿಡಿಯುವಂತಿತ್ತು.
ಅತೀ ಸರಳ ಜೀವನವನ್ನು ಬದುಕುತ್ತಿದ್ದ ಕನ್ನಯ್ಯರವರಿಗೆ ರಾಜಧಾನಿ ಉಸಿರುಗಟ್ಟಿಸಿದಂತಾಯಿತು. ಕೊನೆಗೆ ಇಂಪಾಲದ ಹೃದಯಭಾಗದಲ್ಲಿದ್ದ ತಮ್ಮ ಮನೆಯನ್ನು ಬಿಟ್ಟು ಲಾಂಗೋಲ್ ಲೈಮಾನೈ ಎನ್ನುವ ಪ್ರಾಕೃತಿಕ ಪರಿಸರವಿರುವ ಸ್ಥಳದಲ್ಲಿ ವಾಸಿಸತೊಡಗಿದ್ದರು. ಜಾಗತೀಕರಣದ ಈ ಕಾಲದಲ್ಲೂ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದ್ದ ಕನ್ನಯ್ಯರವರು ಮಾತು ಕೊಟ್ಟರೆ ಅದನ್ನು ನಡೆಸಿಕೊಡುತ್ತಿದ್ದರು. ಯಾವಾಗಲೂ ಮತ್ತೊಬ್ಬರಿಗೆ ಸಹಾಯ ಮಾಡುತ್ತಲೇ ಮಾನವೀಯತೆಯನ್ನು ಬದುಕಾಗಿಸಿಕೊಂಡಿದ್ದರು. ಸಹಜೀವಿಗಳನ್ನು ಮನುಷ್ಯರನ್ನಾಗಿಯೇ ಪರಿಗಣಿಸಿ ಯಾರಿಗೂ ನೋವು ಕೊಡದಂತೆ ಬದುಕಿದ ಕನ್ನಯ್ಯಲಾಲ್ ರಂಗಭೂಮಿಯಲ್ಲಿದ್ದ ಅಪರೂಪದ ಅನುಭಾವಿ ರಂಗಕರ್ಮಿ. ಒಬ್ಬ ಕ್ರಿಯಾಶೀಲ ವ್ಯಕ್ತಿ ತಮ್ಮ ಬದುಕಿನ ಕಾಲಘಟ್ಟದಲ್ಲಿ ಎಷ್ಟು ಸಾಧಿಸಬಹುದಾಗಿತ್ತೋ ಅಷ್ಟನ್ನು ಸಾಧಿಸಿ, ಕಲೆಯ ಮೂಲಕ ಈ ಸಮಾಜಕ್ಕೆ ಏನು ಕೊಡುಗೆ ಕೊಡಬೇಕಿತ್ತೋ ಅದನ್ನು ಕೊಟ್ಟು ತಮ್ಮ 75ನೇ ವಯಸ್ಸಿನಲ್ಲಿ ಕಾಲನ ಮನೆಗೆ ಕನ್ನಯ್ಯಲಾಲ್ ಹೊರಟುಹೋದರು. ಭಾರತದ ರಂಗಭೂಮಿಯ ಇತಿಹಾಸದಲ್ಲಿ ಚಿರಸ್ಮರಣೀಯರಾದರು. ಮಹಾನ್ ರಂಗಕರ್ಮಿ ಕನ್ನಯ್ಯಲಾಲ್ರವರಿಗೆ ಕರ್ನಾಟಕದ ರಂಗಭೂಮಿಯ ಕಲಾವಿದ ತಂತ್ರಜ್ಞರ ಪರವಾಗಿ ರಂಗನಮನಗಳು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ