ಮಂಗಳವಾರ, ಸೆಪ್ಟೆಂಬರ್ 17, 2019

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗೆ ಸಮಾಲೋಚನಾ ಸಭೆಯ ನಿರ್ಣಯಗಳು..



ಕನ್ನಡದ ಪ್ರಾತಿನಿಧಿಕ ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ರಂಗಾಯಣಗಳಿಗೆ ನೇಮಕಗೊಂಡು ಕಾರ್ಯಪ್ರವೃತ್ತರಾದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರುಗಳ ಅಧಿಕಾರಾವಧಿಯನ್ನು ಸರಕಾರವು ಸೂಕ್ತ ಕಾರಣವೇ ಇಲ್ಲದೇ ಅಕಾಲಿಕವಾಗಿ ವಜಾಗೊಳಿಸುವುದು ಸಾಂಸ್ಕೃತಿಕ ವಿರೋಧಿ ನೀತಿಯಾಗಿದೆ. ಇದನ್ನು ವಿರೋಧಿಸಿ ಬೆಂಗಳೂರಿನ ರಂಗ ಗೆಳೆಯರು ಸೆಪ್ಟಂಬರ್ 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿ ಪ್ರತಿರೋಧದ ಮಾರ್ಗಗಳ ಕುರಿತು ಸಮಾಲೋಚನೆ ಮಾಡಿದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮಾನ್ಯ ಜೆ.ಲೊಕೇಶರವರು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರದ ಹಸ್ತಕ್ಷೇಪವನ್ನು ಖಂಡಿಸಿದರು. ಸರಕಾರ ನಮ್ಮದು ಅಂದರೆ ಜನಗಳದ್ದು. ಆದರೆ ಆಳುವ ಪಕ್ಷಗಳು ಬದಲಾದಂತೆಲ್ಲಾ ಸಾಂಸ್ಕೃತಿಕ ಸಂಸ್ಥೆಗಳನ್ನು ಹೀಗೆಲ್ಲಾ ಅಕಾಲಿಕವಾಗಿ ಬದಲಾಯಿಸುವುದು ಆಘಾತಕಾರಿಯಾಗಿದೆ. ಅಕಾಡೆಮಿ ಹಾಗೂ ರಂಗಾಯಣಗಳ ಬೈಲಾಗಳಿಗೆ ವಿರುದ್ಧವಾದ ನಡೆಯಾಗಿದೆ. ಯಾವುದೇ ಪಕ್ಷದ ನೇತೃತ್ವದ ಸರಕಾರ ಬಂದರೂ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿಗೊಂಡವರಿಗೆ ಪೂರ್ಣಾವಧಿ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ಇರಬೇಕು ಹಾಗೂ ಸರಕಾರದ ಹಸ್ತಕ್ಷೇಪ ಇಲ್ಲದ ಸ್ವಾಯತ್ತತೆ ದೊರೆಯಬೇಕು. ಆಗ ಮಾತ್ರ ಈ ಸಂಸ್ಥೆಗಳನ್ನು ಹುಟ್ಟುಹಾಕಿದ ಉದ್ದೇಶ ಈಡೇರಬಹುದಾಗಿದೆ ಎಂದು ಹೇಳಿದರು.

ಬೆಂಗಳೂರು ಎನ್‌ಎಸ್‌ಡಿಯ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರೂ ಸಹ ಸರಕಾರಗಳ ಸಾಂಸ್ಕೃತಿಕ ವಿರೋಧಿ ದೋರಣೆಯನ್ನು ಸಾಂಸ್ಕೃತಿಕ ಲೋಕ ಪ್ರತಿರೋಧಿಸಬೇಕಾಗಿದೆ. ಇದಕ್ಕಾಗಿ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯ ಕುರಿತು ವಿಸ್ತೃತ ಚರ್ಚೆ ಆಗಬೇಕಾಗಿದೆ. ಇದೇ ವಿಷಯದ ಕುರಿತಾಗಿ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿದ್ದ ಹಲವಾರು ರಂಗಕರ್ಮಿಗಳು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರಗಳ  ಹಸ್ತಕ್ಷೇಪವನ್ನು ವಿರೋಧಿಸಿದರು ಹಾಗೂ ಪ್ರಭುತ್ವದ ಸಾಂಸ್ಕೃತಿಕ ವಿರೋಧಿ ನೀತಿಯ ವಿರುದ್ಧ ರಂಗಕರ್ಮಿ ಕಲಾವಿದರುಗಳು ಹಾಗೂ ಸಾಹಿತಿಗಳು ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದರು.

ಸಮಾಲೋಚನಾ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳು ಹೀಗಿವೆ.
1.        ಸಾಂಸ್ಕೃತಿಕ ಸಂಸ್ಥೆಗಳಿಗೆ ಸರಕಾರವೇ ನಡಾವಳಿಯನ್ನು (ಬೈಲಾ) ರಚಿಸಿ ಅದರ ವಿರುದ್ಧವಾದ ನಿರ್ಣಯವನ್ನು ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಪ್ರತಿರೋಧಿಸಬೇಕು.
2.       ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರದ ಅಕಾಲಿಕ ಹಸ್ತಕ್ಷೇಪದ ವಿರುದ್ಧ ರಾಜ್ಯಾದ್ಯಂತ ವಿವಿಧ ರೀತಿಯಲ್ಲಿ ಪ್ರತಿರೋಧವನ್ನು ತೋರುವುದು.
3.       ಸ್ವಾಯತ್ತತೆಯ ಕುರಿತು ವಿಸ್ತೃತ ಚರ್ಚೆಗೆ ವಿಚಾರ ಸಂಕಿರಣವನ್ನು ಒಂದೆರಡು ದಿನಗಳಲ್ಲಿ ಆಯೋಜಿಸಿ ಅಲ್ಲಿ ಬರುವ ಸಲಹೆ ಸೂಚನೆಗಳನ್ನು ಆಧರಿಸಿ ಮುಂದಿನ ಪ್ರತಿರೋಧದ ಕ್ರಮಗಳನ್ನು ತೆಗೆದುಕೊಳ್ಳುವುದು.
4.       ಕಲಾವಿದರುಗಳ ಸ್ವಾಭಿಮಾನಿ ಸಮಾವೇಶವನ್ನು ರಾಜ್ಯದ ನಾಲ್ಕೂ ವಲಯಗಳಲ್ಲಿ ಏರ್ಪಡಿಸಿ ಸರಕಾರದ ಸಾಂಸ್ಕೃತಿಕ ವಿರೋಧಿ ನೀತಿಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಸರಕಾರಗಳಿಗೆ ಎಚ್ಚರಿಕೆಯನ್ನೂ ನೀಡುವುದು.
5.       ಇನ್ನು ಮುಂದೆ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡವರ ಅಧಿಕಾರಾವಧಿಯನ್ನು ಅಕಾರಣವಾಗಿ ಅವಧಿಪೂರ್ವ ರದ್ದುಪಡಿಸಬಾರದೆಂದು ಸರಕಾರದ ಮೇಲೆ ಒತ್ತಡ ತರುವುದು.
6.    ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡವರ ಅಧಿಕಾರಾವಧಿ ಪೂರ್ಣಗೊಂಡ ನಂತರವೂ ಹೊಸ ನೇಮಕಾತಿಯಾಗುವವರೆಗೆ ಅವರೇ ಮುಂದುವರೆಯಬೇಕೆಂದು ಸರಕಾರವನ್ನು ಆಗ್ರಹಿಸುವುದು. 
7.        ಈಗಾಗಲೇ ಸರಕಾರದಿಂದ ಆದೇಶವಾಗಿರುವ ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಕ್ಕೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವಾಲಯವನ್ನು ಒತ್ತಾಯಿಸುವುದು. 
8.    ಸಾಂಸ್ಕೃತಿಕ ಸಂಸ್ಥೆಗಳ ನಡಾವಳಿಗಳ ರೂಪರೇಷೆಗಳನ್ನು ಹೊಂದಿರುವ ಬೈಲಾಗಳಲ್ಲಿರುವಂತೆಯೇ ಕಾರ್ಯನಿರ್ವಹಿಸಲು ಸಂಸ್ಕೃತಿ ಇಲಾಖೆ ಹಾಗೂ ನಿರ್ದೇಶನಾಲಯವು ಬದ್ಧವಾಗಿರಬೇಕು.

ಹೀಗೆ ಕೆಲವಾರು ಪ್ರಮುಖ ನಿರ್ಣಯಗಳನ್ನು ಸಮಾಲೋಚನಾ ಸಭೆಯಲ್ಲಿ ಚರ್ಚಿಸಿ ಕಾಲಮಿತಿಯಲ್ಲಿ ಅನಿಷ್ಠಾನಕ್ಕೆ ತರಲು ನಿರ್ಧರಿಸಲಾಯಿತು.

- ರಂಗ ಗೆಳೆಯರು  



ಮಂಗಳವಾರ, ಸೆಪ್ಟೆಂಬರ್ 10, 2019

ಅಕಾಡೆಮಿ ಅಧ್ಯಕ್ಷರ ನೇಮಕಾತಿ ರದ್ದು; ಸಂಸ್ಕೃತಿ ಸಚಿವಾಲಯಕ್ಕೆ ನ್ಯಾಯಪೀಠದ ಗುದ್ದು..





ಸೊಕ್ಕಿದ ಬೆಕ್ಕಿಗೆ ಗಂಟೆ ಕಟ್ಟು ಯತ್ನ ; ಸಫಲವಾಗಲಿ ಏಕಾಂಗಿ ಹೋರಾಟದ ಪ್ರಯತ್ನ..



ಕೆಲಸವನ್ನು ಯಾರಾದರೊಬ್ಬರು ಮಾಡಲೇಬೇಕಿತ್ತು. ಸೊಕ್ಕಿದ ಬೆಕ್ಕಿಗೆ ಯಾರಾದರೂ ಗಂಟೆ ಕಟ್ಟಲು ಯತ್ನಿಸಲೇಬೇಕಿತ್ತು

ಆಳುವ ಸರಕಾರಗಳಿಗೆ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಕಾಡೆಮಿ ಪ್ರಾಧಿಕಾರಗಳೆಂದರೆತಮ್ಮ ಇಷ್ಟದಂತೆ ನಡೆಯುವ ಕೃಪಾಪೋಷಿತ ಸಂಸ್ಥೆಗಳು’ ಎನ್ನುವ ಅನಿಷ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಆಗಲೇ ಬೇಕಿತ್ತು

ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆಗಳು ಎಂದು ಹೇಳುತ್ತಲೇ ಅಕಾಡೆಮಿಗಳ ಜುಟ್ಟು ಜನಿವಾರಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು ತಮ್ಮಿಷ್ಟದಂತೆ ನಿಯಂತ್ರಿಸುವ ಅಧಿಕಾರಿವರ್ಗ ಹಾಗೂ ರಾಜಕಾರಣಿಗಳ ಬುಡಕ್ಕೆ ಬಿಸಿ ಮುಟ್ಟಿಸಲೇ ಬೇಕಾಗಿತ್ತು.

ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಜೆ.ಲೊಕೇಶರವರು ಈಗ ಅಂತಹುದೊಂದು ಸ್ತುತ್ಯಾರ್ಹ ಕೆಲಸಕ್ಕೆ ಮುಂದಾಗಿದ್ದಾರೆ. ಸರಕಾರದ ದುಸ್ಸಾಹಸವನ್ನು ನ್ಯಾಯಾಲಯದಲ್ಲಿ  ಪ್ರಶ್ನಿಸಿದ್ದಾರೆ. ಜೊತೆಗೆ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಸಹ ಸಾಥ್ ಕೊಟ್ಟಿದ್ದಾರೆ. 



ಅಕಾಡೆಮಿಗಳ ಅಧ್ಯಕ್ಷರುಗಳ ನೇಮಕಾತಿಯನ್ನು ಸರಕಾರವು 2019 ಜುಲೈ 29ರಂದು ಅವಧಿಪೂರ್ವವಾಗಿ ರದ್ದುಪಡಿಸಿರುವ ಆತುರದ ನಿರ್ಧಾರವನ್ನು ಆಕ್ಷೇಪಿಸಿ ಜೆ.ಲೊಕೇಶರವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಪ್ಟಂಬರ್ 11ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆಲೋಕ್ ಆರಾಧೆಯವರ ಉನ್ನತ ನ್ಯಾಯಪೀಠವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು ಹಾಗೂ ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ರವರುಗಳಿಗೆ ಆಕ್ಷೇಪಣೆ ಸಲ್ಲಿಸಲು ತುರ್ತು ನೋಟೀಸ್ ಜಾರಿ ಮಾಡಿದೆ.

ಈ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಅಕಾಡೆಮಿ-ಪ್ರಾಧಿಕಾರಗಳನ್ನು ಅಕಾಲಿಕವಾಗಿ ರದ್ದು ಪಡಿಸಿತ್ತು. ಈಗ ಅಧಿಕಾರಕ್ಕೇರಿದ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದ ಮೂರೇ ದಿನದಲ್ಲಿ ಅಕಾಡೆಮಿಗಳ ಅಧ್ಯಕ್ಷರ ಮೂರು ವರ್ಷಗಳ ಅಧಿಕಾರಾವಧಿಯನ್ನು ಎರಡೇ ವರ್ಷಕ್ಕೆ ಮೊಟಕುಗೊಳಿಸಲು ಆದೇಶಿಸಿತು. ಸರಕಾರ ಬದಲಾದಂತೆಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಬದಲಾಯಿಸುವುದು ಆತಂಕಕಾರಿಯಾದ ಕ್ರಮವಾಗಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ, ದ್ವೇಷಕಾರಣಕ್ಕೆ ನಾಟಕ ಅಕಾಡೆಮಿಗಳು ಬಲಿಪಶುಗಳಾಗುತ್ತಿರುವುದು ಅಕ್ಷಮ್ಯವಾಗಿದೆ.

ಈ ಹಿಂದೆ ಕೂಡಾ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ಅಕಾಡೆಮಿಗಳನ್ನು ಸಾರಾಸಗಟಾಗಿ ಬರಕಾಸ್ತುಗೊಳಿಸಿದಾಗ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಚಿ.ಸು.ಕೃಷ್ಣಶೆಟ್ಟಿ ಹಾಗೂ ಇನ್ನೂ ಮೂರು ಅಕಾಡೆಮಿಗಳ ಅಧ್ಯಕ್ಷರುಗಳು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯ ಸಿಗದೇ ಸರಕಾರದ ಕೈ ಮೇಲಾಗಿತ್ತು. 

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅದೇ ಕಾಂಗ್ರೆಸ್ ಸರಕಾರ ನಿಯಮಿಸಿದ್ದ ಬರಗೂರು ರಾಮಚಂದ್ರರವರ ನೇತೃತ್ವದ ಸಾಂಸ್ಕೃತಿಕ ನೀತಿಯನ್ನು ಕೆಲವು ತಿದ್ದುಪಡಿಗಳ ಜೊತೆಗೆ ಸರಕಾರ ಮಾನ್ಯಮಾಡಿತ್ತು. ಈ ನೀತಿಯ ಆಧಾರದಲ್ಲಿ ಹಾಗೂ ಅಕಾಡೆಮಿಗಳ ನಿಯಮಾವಳಿಗಳ ಪ್ರಕಾರ ಸರಕಾರಕ್ಕೆ ಈ ಸಲ ಸೋಲಾಗುವುದು ಖಚಿತವಾಗಿದೆ. ಇದೆಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿಯೇ ಜೆ.ಲೊಕೇಶರವರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಧೈರ್ಯ ಮಾಡಿದ್ದಾರೆ. ಪಿ.ಕೆ.ಪೊನ್ನಪ್ಪರವರಂತಹ ಖ್ಯಾತ ನ್ಯಾಯವಾದಿಗಳು ಲೊಕೇಶರವರ ಪರವಾಗಿ ವಾದಿಸುತ್ತಿದ್ದಾರೆ.

ಇಷ್ಟಕ್ಕೂ ಲೊಕೇಶರವರು ಸರಕಾರದ ಆದೇಶವನ್ನು ಪ್ರಶ್ನಿಸುವುದು ಸರಿಯಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿದ್ದಿದೆ. ಲೊಕೇಶರವರಿಗೆ ಅಧಿಕಾರದಾಹ ಅದಕ್ಕಾಗಿಯೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎನ್ನುವವರೂ ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರ ಹೋಗಿ ಸ್ವಜಾತಿ ಟ್ರಂಪ್ ಕಾರ್ಡ್ ಬಳಸಿ ಲೊಕೇಶರವರು ಮತ್ತೆ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಗಳನ್ನೂ ಸಹ ಕೆಲವರು ಹರಡುತ್ತಿದ್ದಾರೆ.



ಆದರೆ.. ಇವೆಲ್ಲವೂ ಗಾಳಿಮಾತುಗಳಷ್ಟೇ. ಲೊಕೇಶರವರು ಮೈಸೂರು ಬ್ಯಾಂಕಿನ ನೌಕರರ ಯೂನಿಯನ್ ಲೀಡರ್ ಆಗಿ ದಶಕಗಳ ಕಾಲ ಬ್ಯಾಂಕ್ ನೌಕರರ ಹಕ್ಕುಗಳಿಗಾಗಿ ಹೋರಾಡಿದವರು.  ಈಗಲೂ ಅವರ ಹೋರಾಟದ ಫಲಾನುಭವಿಗಳಾದ ಸಾವಿರಾರು ಜನ ಬ್ಯಾಂಕ್ ನೌಕರರು ಲೊಕೇಶರವರನ್ನು ನೆನಪಿಸಿಕೊಳ್ಳುತ್ತಾರೆ. ಹೋರಾಟವೇ ಬದುಕಾಗಿಸಿಕೊಂಡ ಲೊಕೇಶರವರು ರಂಗಭೂಮಿಯಲ್ಲೂ ಸಹ ಸಂಘಟಕರಾಗಿ ನಾಟಕ ಕಟ್ಟುವ ಜೊತೆಜೊತೆಗೆ ಧರಣಿ, ಹೋರಾಟ, ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಲೇ  ಬಂದವರು.

ರಂಗಭೂಮಿಗೆ ಆಪತ್ತು ಬಂದಾಗಲೆಲ್ಲಾ ಸಿಡಿದೆದ್ದು ನಿಲ್ಲುವ ಗುಣ ಅವರಲ್ಲಿದೆ. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೂ ಸಹ ರವೀಂದ್ರ ಕಲಾಕ್ಷೇತ್ರ ಮರುಆರಂಭಗೊಳ್ಳಲು, ಮುಚ್ಚಿದ ನಯನ ಗೇಟ್ ತೆರೆಯಿಸಲು. ಬಾಗಿಲೆಳೆದುಕೊಂಡ ಕಲಾಗ್ರಾಮದ ರಂಗಮಂದಿರದ ರೀಪೇರಿ ಕೆಲಸ ತೀವ್ರಗೊಳಿಸಲು ರಂಗ ಕಲಾವಿದರ ಹೋರಾಟ ಸಂಘಟಿಸಿದರು ಹಾಗೂ ಅಧಿಕಾರಸ್ತರ ಮೇಲೆ ಇನ್ನಿಲ್ಲದ ಒತ್ತಡ ತಂದರು. ಅಕಾಡೆಮಿಗಳನ್ನು ಅಧಿಕಾರಿವರ್ಗದ ಕಪಿಮುಷ್ಟಿಯಿಂದ ಸಾಧ್ಯವಾದಷ್ಟೂ ಮುಕ್ತಗೊಳಿಸಿ ನಿಜವಾದ ಅರ್ಥದಲ್ಲಿ ಸ್ವಾಯತ್ತತೆ ದೊರಕುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿದರು. ಸರಕಾರವು ಸಂಘಸಂಸ್ಥೆಗಳ ಅನುದಾನ ನಿಲ್ಲಿಸಿದಾಗ ಅದನ್ನು ಬಿಡುಗಡೆ ಮಾಡಿಸಲು ಅಧಿಕಾರಸ್ತರ ವಿರೋಧವನ್ನು ಕಟ್ಟಿಕೊಂಡು ಕಲಾವಿದರ ಪ್ರತಿಭಟನೆಗೆ ಸಾಥ್ ನೀಡಿದರು. ಸಂಸ್ಕೃತಿ ಸಚಿವಾಲಯವು ಅಕಾಡೆಮಿಗಳಿಗೆ ಕೊಡಮಾಡುವ ವಾರ್ಷಿಕ ಅನುದಾನದಲ್ಲಿ ಶೆ.30ರಷ್ಟು ಕಡಿತಗೊಳಿಸಿದಾಗ ಸಿಡಿದೆದ್ದು ನಿಂತ ಲೊಕೇಶರವರು ಅಧಿಕಾರಿಗಳಿಂದ ಇಲಾಖೆ ಸಚಿವರುಗಳವರೆಗೂ ಪ್ರತಿಭಟನೆ ಸಲ್ಲಿಸಿದರು. ಪತ್ರಿಕೆಗಳಲ್ಲಿ ಬರೆಯಿಸಿದರು. ಸರಕಾರದ ಮೇಲೆ ಒತ್ತಡ ತಂದು ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವವರೆಗೂ ವಿರಮಿಸಲಿಲ್ಲ.

ಲೊಕೇಶರವರೊಬ್ಬರ ಅವಿರತ ಹೋರಾಟದಿಂದ ಎಲ್ಲಾ ಅಕಾಡೆಮಿಗಳಿಗೂ ಅನುದಾನ ಭಾಗ್ಯ ದೊರೆಯಿತು. ಚುನಾವಣೆಯ ಸಮಯದಲ್ಲಿ ನೀತಿಸಂಹಿತೆಯ ಇರುವುದರಿಂದ ವೃತ್ತಿ ರಂಗಭೂಮಿಯ ನಾಟಕಗಳನ್ನು ಮಾಡಕೂಡದು ಎಂದು ಚುನಾವಣಾ ಆಯೋಗ ನಿರ್ಬಂಧಿಸಿ ನಾಟಕ ಕಂಪನಿಗಳ ನಾಟಕ ಪ್ರದರ್ಶನಕ್ಕೆ ತಡೆಯೊಡ್ಡಿದಾಗ ಕೂಡಲೇ ಸ್ಪಂದಿಸಿದ ಲೊಕೇಶರವರು ಚುನಾವಣಾ ಆಯುಕ್ತರನ್ನೇ ಸಂಪರ್ಕಿಸಿ, ಮಾಧ್ಯಮಗಳನ್ನು ಬಳಸಿ ನಾಟಕ ಪ್ರದರ್ಶನಗಳು ಸಾಂಗವಾಗಿ ನಡೆಯುವಂತೆ ಮಾಡಿದರು. ಇವು ಯಾವವೂ ಅಕಾಡೆಮಿಯೊಂದರ ಅಧ್ಯಕ್ಷರಾಗಿರುವವರು ಮಾಡುವಂತಹ ಕೆಲಸಗಳೇ ಅಲ್ಲಾ. ಆದರೆ.. ತಮ್ಮ ಅಧಿಕಾರ ವ್ಯಾಪ್ತಿಯನ್ನೂ ಮೀರಿ ಸಾಂಸ್ಕೃತಿಕ ಹಿತಾಸಕ್ತಿಗಾಗಿ ತಮ್ಮ ಇತಿಮಿತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೊಕೇಶರವರು ಮಾಡಿದ ಕೆಲಸಗಳು ಅಭಿನಂದನೀಯವಾದಂತಹವು.

ಈಗಲೂ ಸಹ ಹೊಸ ಸರಕಾರವು ಇದ್ದಕ್ಕಿದ್ದಂತೆ ಅನಗತ್ಯವಾಗಿ ಪ್ರಸ್ತುತ ಅಕಾಡೆಮಿಗಳ ಅಧಿಕಾರಾವಧಿಯನ್ನು ಮೊಟಕುಗೊಳಿಸಿದಾಗ ಮೊದಲು ಸಿಡಿದೆದ್ದವರೂ ಸಹ ಇದೇ ಮಾಜಿ ಯೂನಿಯನ್ ಲೀಡರ್ ಲೊಕೇಶ್ರವರು. ನಾಟಕ ಅಕಾಡೆಮಿ ಮೂರು ವರ್ಷಕ್ಕೆಂದು ಹಮ್ಮಿಕೊಂಡಿದ್ದ ಹಲವಾರು ಪ್ರಮುಖ ಕೆಲಸಗಳು ಇನ್ನೂ ಅಪೂರ್ಣವಾಗಿದ್ದವು.  ಅವುಗಳನ್ನು ಪೂರ್ಣಗೊಳಿಸಲು ಇನ್ನೊಂದು ವರ್ಷ ಬೇಕಾಗಿತ್ತು. ಈಗ ಎಲ್ಲವನ್ನೂ ಅಪೂರ್ಣವಾಗಿ ಬಿಟ್ಟೆದ್ದರೆ ಅವು ಮತ್ತೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ. ಕಂಡ ಕನಸುಗಳೆಲ್ಲಾ ಹೀಗೆ ಚಿದ್ರವಾಗುವುದು ಬೇಕಿರಲಿಲ್ಲ. ಆದರೆ.. ಸರಕಾರ ಮೊಂಡುಬಿದ್ದು ಇಲಾಖೆಯ ಅಧಿಕಾರಿಗಳ ನಂಜಿನ ಮಾತಿಗೆ ಮನ್ನಣೆಕೊಟ್ಟು ಅಕಾಡೆಮಿಗಳ ಅಧ್ಯಕ್ಷರುಗಳನ್ನೂ ಸಹ ನಿಗಮ ಮಂಡಳಿಗಳ ಸಾಲಿಗೆ ಸೇರಿಸಿ ಸಾರಾಸಗಟಾಗಿ ರದ್ದುಮಾಡಿತು. ಲೊಕೇಶರವರ ಒಳಗಿರುವ ಹೋರಾಟಗಾರನ ರಕ್ತ ಕುದಿಯತೊಡಗಿತು.

ಹಾಲಿ ಅಕಾಡೆಮಿ ಪ್ರಾಧಿಕಾರಗಳ ಅವಧಿಯನ್ನು ಬಿಜೆಪಿ ನೇತೃತ್ವದ ಸರಕಾರ ಮೊಟಕುಗೊಳಿಸುವ ಮೊದಲೇ ಭಿನ್ನ ಸಿದ್ದಾಂತದ ಸರಕಾರದಲ್ಲಿ ಅಧಿಕಾರದಲ್ಲಿರಲು ಬಯಸದೇ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಪ್ರೊ.ಅರವಿಂದ ಮಾಲಗತ್ತಿ ಹಾಗೂ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ.ಜಿ.ಎಸ್.ಸಿದ್ದರಾಮಯ್ಯನವರಿಬ್ಬರೂ ರಾಜೀನಾಮೆಯನ್ನು ಕೊಟ್ಟು ಮಾಧ್ಯಮಗೋಷ್ಟಿ ಮಾಡಿ ಕೋಮುವಾದಿ ಸರಕಾರದ ವಿರುದ್ಧ ತಮ್ಮ ಸೈದ್ದಾಂತಿಕ ಪ್ರತಿಭಟನೆಯನ್ನು ಸಲ್ಲಿಸಿದ್ದರು. ಆದರೆ.. ಎಲ್ಲ ಸಿದ್ದಾಂತಗಳಿಗಿಂತಲೂ ರಂಗಭೂಮಿಯ ಹಿತಾಸಕ್ತಿಯೇ ಬಹಳ ಮುಖ್ಯ ಎಂದು ನಂಬಿರುವ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಲೊಕೇಶರವರು “ಹಾಲಿ ಅಕಾಡೆಮಿ ಅಧ್ಯಕ್ಷರನ್ನು ತೆಗೆದುಹಾಕಿದರೆ ನಾನು ನ್ಯಾಯಾಲಯಕ್ಕೆ ಹೋಗುವ ಮೂಲಕ ಸರಕಾರದ ಸರ್ವಾಧಿಕಾರಿ ದೋರಣೆಯ ವಿರುದ್ಧ ಹೋರಾಡುವೆ” ಎಂದು ಮುದ್ರಣ ಮಾಧ್ಯಮಗಳಲ್ಲಿಯೇ ಹೇಳಿಕೆ ನೀಡಿದ್ದರು. ಹಾಗೂ ನುಡಿದಂತೆಯೇ ನಡೆದರು.

ರಂಗಭೂಮಿ ಎನ್ನುವುದೇ  ಪ್ರತಿಭಟನೆಯ ಮಾಧ್ಯಮ. ಕಲೆ ಸಂಸ್ಕೃತಿಯ ಮೇಲೆ ಆಪತ್ತು ಬಂದಾಗಲೆಲ್ಲಾ ಯಾವುದೋ ರೀತಿಯಲ್ಲಿ ತನ್ನ ಪ್ರತಿರೋಧವನ್ನು ಕನ್ನಡ ರಂಗಭೂಮಿ ತೋರುತ್ತಲೇ ಬಂದಿದೆ. ತುಂಬಾ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದ್ದ ನಾಟಕ ಅಕಾಡೆಮಿಯ ಅಧ್ಯಕ್ಷರ ಅಧಿಕಾರವನ್ನು ಅಕಾಲಿಕವಾಗಿ ರದ್ದು ಮಾಡಿದ್ದೂ ಸಹ ರಂಗಭೂಮಿಯ ಮೇಲೆ ಪ್ರಭುತ್ವ ಮಾಡಿದ ದಮನ ಎಂದುಕೊಂಡ ಲೊಕೇಶರವರು ಈ ದಮನದ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೂಲಕ ಪ್ರತಿಭಟಿಸುವ ಪ್ರಯತ್ನವನ್ನು ಆರಂಭಿಸಿದರು.

ಲೊಕೇಶರವರ ನಿರ್ಧಾರ ಸರಿಯೋ ತಪ್ಪೋ ಎನ್ನುವ ವಾದಗಳನ್ನು ಪಕ್ಕಕ್ಕಿಟ್ಟು ನೋಡಿದರೆ.. ನ್ಯಾಯಾಲಯದಲ್ಲಿ ಲೊಕೇಶರವರಿಗೆ ಗೆಲುವಾದರೆ ಅದು ಇಡೀ ಸಾಂಸ್ಕೃತಿಕ ಲೋಕದ ಗೆಲುವು ಎನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ.. ಹೀಗೆಯೇ ಸರಕಾರಗಳು ಬದಲಾದಂತೆಲ್ಲಾ ಅಕಾಡೆಮಿ ಪ್ರಾಧಿಕಾರಗಳು ಬದಲಾಗುತ್ತಲೇ ಹೋದರೆ ಯಾವ ಅಧ್ಯಕ್ಷರುಗಳಿಗೂ ಹಮ್ಮಿಕೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಒಬ್ಬರು ಅಧ್ಯಕ್ಷರು ಬದಲಾದ ನಂತರ ಇನ್ನೊಬ್ಬರು ಅಧ್ಯಕ್ಷರು ಬಂದಾಗ ಹಿಂದಿನ ಅಧ್ಯಕ್ಷರುಗಳ ಕನಸುಗಳನ್ನು ನನಸಾಗಿಸುತ್ತಾರೆಂಬುದು ಖಚಿತವಿಲ್ಲ. ಹೀಗೆ ಅಪೂರ್ಣಗೊಂಡು ಅಕಾಲಿಕವಾಗಿ ನಿಲ್ಲುವ ಯೋಜನೆಗಳಿಗೆ ವ್ಯಯವಾದ ಜನರ ಹಣ ವ್ಯರ್ಥವಾಗುವುದರ ಜೊತೆಗೆ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರೆಲ್ಲರ ಸಮಯ, ಶ್ರಮವೂ ನೀರಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ. ಮುಂದಿನ ಅಧ್ಯಕ್ಷರನ್ನು ಸರಕಾರ ನೇಮಿಸುವವರೆಗೆ ಅಕಾಡೆಮಿಗಳ ಸಿಬ್ಬಂಧಿ ಹಾಗೂ ರೆಜಿಸ್ಟ್ರಾರ್ ಗಳ ಸಂಬಳ ಸಾರಿಗೆ ಮುಂತಾದವುಗಳೂ ಸಹ ಸರಕಾರದ ಅನುದಾನದ ಪೋಲುತನಕ್ಕೆ ಕಾರಣವಾಗುತ್ತದೆ.

ನಿಜಕ್ಕೂ ಸ್ವಾಯತ್ತ ಸಂಸ್ಥೆಗಳು ಎಂದು ಹೇಳಲಾಗುವ ಅಕಾಡೆಮಿಗಳ ಮೇಲಿನ ಈ ರೀತಿಯ ಪ್ರಭುತ್ವದ ದಬ್ಬಾಳಿಕೆಯನ್ನು  ಇಡೀ ಸಾಂಸ್ಕೃತಿಕ ಲೋಕ  ಒಗ್ಗಟ್ಟಿನಿಂದ ಪ್ರತಿಭಟಿಸಬೇಕಿತ್ತು. ಸರಕಾರ ಬರುತ್ತದೆ ಹೋಗುತ್ತದೆ ಆದರೆ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ಪೂರ್ಣಾವಧಿಯಾಗಿ ಕೆಲಸ ಮಾಡುವ ಅವಕಾಶ ಇರಬೇಕು ಎಂದು ಎಲ್ಲರೂ ಪ್ರಭುತ್ವವನ್ನು ಒತ್ತಾಯಿಸಬೇಕಾಗಿತ್ತು. ಆದರೆ.. ಯಾವ ಮೂಲೆಯಿಂದಲೂ ಪ್ರತಿಭಟನೆಯ ದ್ವನಿ ಬರಲೇ ಇಲ್ಲ. ಬಂದ ಬೆರೆಳೆಣಿಕೆಯಷ್ಟು ದ್ವನಿಗಳಿಗೆ ಸರಕಾರವನ್ನು ಮುಟ್ಟುವಷ್ಟು ತಾಕತ್ತಿರಲಿಲ್ಲ. ಹೀಗಾಗಿ  ಬದಲಾಗುವ ಸರಕಾರಗಳ ಸರ್ವಾಧಿಕಾರಿ ಸಾಂಸ್ಕೃತಿಕ ವಿರೋಧಿ ಧೋರಣೆಗಳಿಗೆ ಕಡಿವಾಣವೇ ಇಲ್ಲವಾದಂತಾಗಿದೆ.

ಹೀಗೆ ಅಕಾಲಿಕವಾಗಿ ಅಧ್ಯಕ್ಷರುಗಳನ್ನು ಬದಲಾಯಿಸುವುದು ಸರಿಯಲ್ಲವೆಂದು ಗೊತ್ತಿದ್ದರೂ ಯಾಕೆ ಬಹುತೇಕರು ವಿರೋಧಿಸುತ್ತಿಲ್ಲಾ..?  ಮತ್ತೆ ಸರಕಾರ ಬದಲಾದರೆ ಈಗಿನ ಅಧ್ಯಕ್ಷರುಗಳಿಗಾದ ಪರಿಸ್ಥಿತಿಯೇ ಮುಂದೆ ಬರುವ ಅಧ್ಯಕ್ಷರುಗಳಿಗೂ ಆಗುತ್ತದೆ ಹಾಗೂ ಇಂತಹ “ಆಡೋಣು ಬಾ, ಕೆಡಿಸೋಣು ಬಾ” ಎನ್ನುವ ಆಟದಲ್ಲಿ ಬಲಿಪಶುವಾಗುವುದು ಅಕಾಡೆಮಿಗಳ ಕಾರ್ಯಯೋಜನೆಗಳು ಹಾಗೂ ಸರಕಾರಿ ಬೊಕ್ಕಸದ ಜನರ ಹಣ ಎನ್ನುವ ಅರಿವಾದರೂ ಸಾಂಸ್ಕೃತಿಕ ಲೋಕದವರಿಗೆ, ಹಿರಿಯ ರಂಗಕರ್ಮಿ ಕಲಾವಿದರುಗಳಿಗೆ ಇರಬೇಕಲ್ಲವೇ.

ಅನ್ಯಾಯವೆಂದು ಗೊತ್ತಿದ್ದೂ ಅನ್ಯಾಯವನ್ನು ವಿರೋಧಿಸುವುದನ್ನು ಬಿಟ್ಟು ಕೆಲವರು ಈಗಾಗಲೇ ಅಕಾಡೆಮಿಗಳಿಗೆ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರಾಗಲು ಟಾವೆಲ್ ಹಾಕಿ ಕಾಯ್ದು ಕೂತು ಲಿಸ್ಟಲ್ಲಿ ತಮ್ಮ ಹೆಸರು ಇರುವ ಹಾಗೆ ನೋಡಿಕೊಳ್ಳಲು ‘ಕೇಶವಕೃಪಾ’ಗೆ ಅಲೆದಾಡುತ್ತಿದ್ದಾರೆ. ಇನ್ನು ಕೆಲವರು ಮಂತ್ರಿಗಳನ್ನೋ ಅವರ ಬಾಲಂಗೋಚಿಗಳನ್ನೋ ಹಿಡಿದುಕೊಂಡು ಶಿಪಾರಸ್ಸು ಮಾಡಿಸಿಕೊಳ್ಳುವುದರಲ್ಲಿ ತಲ್ಲೀಣರಾಗಿದ್ದಾರೆ. ಮತ್ತೆ ಹಲವರು ತಮ್ಮ ಸಂಘಪರಿವಾರದ ಸಹವಾಸ ಹಾಗೂ ಪಕ್ಷ ನಿಷ್ಠೆಗೆ ಪ್ರತಿಫಲ ಸಿಗಬೇಕೆಂಬ ಅಪೇಕ್ಷೆಯಲ್ಲಿದ್ದಾರೆ. ಆದರೆ.. ಯಾರಿಗೂ ಸಹ ಹೀಗೆ ಅಕಾಡೆಮಿಗಳ ಅಧ್ಯಕ್ಷರ ಅವಧಿಯನ್ನು ಅಕಾಲಿಕವಾಗಿ ರದ್ದುಪಡಿಸಿದ್ದು ಅಕ್ಷಮ್ಯ ಹಾಗೂ ಅದರ ವಿರುದ್ಧ ದ್ವನಿ ಎತ್ತಬೇಕು ಎಂಬುದರ ಅರಿವಾಗುತ್ತಿಲ್ಲ. ಅರಿವಿದ್ದವರೂ ಸಹ ತಮಗೆ ಸಿಗಬಹುದಾದ ಅವಕಾಶದಿಂದ ವಂಚಿತರಾಗಲು ಸಿದ್ದರಿಲ್ಲ. ಹೀಗೆಲ್ಲಾ ಅವಕಾಶ ಗಿಟ್ಟಿಸಿಕೊಂಡವರಿಗೆ ಮತ್ತೊಂದು ಸರಕಾರ ಬಂದಾಗ ಜಾಗ ಖಾಲಿ ಮಾಡಬೇಕಾಗುತ್ತದೆಯೆಂಬ  ಕಲ್ಪನೆಯೂ ಈ ಸಧ್ಯಕ್ಕೆ ಬರುತ್ತಿಲ್ಲಾ.

ಪ್ರಭುತ್ವದ ಈ ಸಾಂಸ್ಕೃತಿಕ ಭಯೋತ್ಪಾದನೆಯ ವಿರುದ್ಧ ದ್ವನಿಯೆತ್ತಿ  ಜೆ.ಲೊಕೇಶ್ ರವರು ನ್ಯಾಯಾಲಯದಲ್ಲಿ ಬಹುತೇಕ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಸಿದ್ದಾಂತಗಳ ಬದ್ದತೆಗಿಂತಲೂ ಈಗ ಅವರಿಗೆ ರಂಗಬದ್ದತೆ ಪ್ರಮುಖವಾಗಿದೆ. ಲೊಕೇಶರವರು ನ್ಯಾಯಾಲಯದಲ್ಲಿ ಗೆಲ್ಲಬೇಕೆಂಬುದು ಅಕಾಡೆಮಿಗಳ ಹಿತವನ್ನು ಬಯಸುವವರ ಬಯಕೆಯಾಗಿದೆ. ಯಾಕೆಂದರೆ ಅಕಾಡೆಮಿಗಳ ಸ್ವಾಯತ್ತತೆಗೆ ದಕ್ಕೆಬಂದಿದೆ. ಮುಂದೆ ಬರುವ ಯಾವುದೇ ಸರಕಾರ ಹೀಗೆ ಅವಧಿಪೂರ್ವವಾಗಿ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದರೆ ಲೊಕೇಶರವರು ನ್ಯಾಯಾಲಯದಲ್ಲಿ ಗೆಲ್ಲಲೇಬೇಕಿದೆ. ಸರ್ವಾಧಿಕಾರಿ ಪ್ರಭುತ್ವ ಸೋಲಬೇಕಿದೆ. ಪಿತ್ತ ನೆತ್ತಿಗೇರಿದ ಅಧಿಕಾರಿಶಾಹಿ ವರ್ಗಗಳ ತಲೆಗೆ ನ್ಯಾಯಪೀಠದ ಸುತ್ತಿಗೆ ಬಾರಿಸಬೇಕಿದೆ.



ಸರಕಾರ ಯಾವುದೇ ಬರಲಿ, ಎಲ್ಲಾ ಅಕಾಡೆಮಿಗಳಿಗೆ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು, ಪರಿಣಿತರಾದವರನ್ನು, ಸಾಧಕರನ್ನು ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿರುತ್ತದೆ. ಇದಕ್ಕೆ ಕೆಲವು ಅಪವಾದಗಳೂ ಇರುತ್ತವೆ ಅದೇ ಮುಖ್ಯವಾಗುವುದು ಬೇಡ. ಹೀಗೆ ನೇಮಕಗೊಂಡವರೂ ಸಹ ಆಯಾ ಕ್ಷೇತ್ರದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆಯನ್ನು ಕೊಡುತ್ತಾ ಬರಬೇಕಾಗುತ್ತದೆ. ಹೀಗೆ ನೇಮಕಗೊಂಡವರಲ್ಲಿ ಬಹುತೇಕರು ಯಾವುದೋ ಪಕ್ಷ –ಸಿದ್ದಾಂತದ ಬೆಂಬಲಿಗರಾಗಿರುವ ಸಾಧ್ಯತೆಗಳಿರುತ್ತವೆಯೇ ಹೊರತು ಪೂರ್ಣಾವಧಿ ರಾಜಕಾರಣಿಗಳೋ ಅಲ್ಲವೇ ಪುಡಾರಿಗಳೋ ಆಗಿರುವುದಿಲ್ಲ. ಆದ್ದರಿಂದ ಯಾರೇ ಯಾವುದೇ ಅಕಾಡೆಮಿಗೆ ನೇಮಕಗೊಳ್ಳಲಿ ಅವರು ತಮ್ಮ ಕಾಲಾವಧಿಯನ್ನು ಪೂರ್ಣಗೊಳಿಸಲಿ. ಹಮ್ಮಿಕೊಂಡ ಯೋಜನೆಗಳನ್ನು ಕಾಲಮಿತಿಯಲ್ಲಿ ಯಶಸ್ವಿಗೊಳಿಸಲಿ. ಯಾವುದೇ ಕಾರಣಕ್ಕೂ ಅಕಾಡೆಮಿಗಳ ನಿಯಮಾವಳಿಗಳ ಪ್ರಕಾರ ಮೂರು ವರ್ಷಗಳ ಒಳಗೆ ಯಾವುದೇ ಅಕಾಡೆಮಿ-ಪ್ರಾಧಿಕಾರಗಳ ಅಧ್ಯಕ್ಷರುಗಳ ಅಧಿಕಾರಾವಧಿಯನ್ನು ವಿನಾಕಾರಣ ಸರಕಾರ ರದ್ದುಗೊಳಿಸದಿರಲಿ. ನ್ಯಾಯಪೀಠ ಅಕಾಡೆಮಿ ಮತ್ತು ಪ್ರಾಧಿಕಾರಗಳ ಸಾಂಸ್ಕೃತಿಕ ಮಹತ್ವ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಪ್ರಭುತ್ವಗಳಿಗೆ ಪಾಠವಾಗುವಂತಹ ತೀರ್ಪನ್ನು ನೀಡಬೇಕಿದೆ. ರಾಜಕೀಯ ಹಿತಾಸಕ್ತಿಗಳ ವಿರುದ್ದವಾಗಿ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳ ಪರವಾಗಿ ಬರುವ ನ್ಯಾಯನಿರ್ಣಯಕ್ಕಾಗಿ ಸಾಂಸ್ಕೃತಿಕ ಲೋಕ ಕಾಯುತ್ತಿದೆ. ಲೊಕೇಶರಂತವರ ಏಕಾಂಗಿ ನ್ಯಾಯಾಂಗ ಹೋರಾಟ ಭವಿಷ್ಯದ ಸಾಂಸ್ಕೃತಿಕ ಲೋಕದ ಹಿತದೃಷ್ಟಿಯಿಂದ ಯಶಸ್ವಿಯಾಗಲಿ.

-ಶಶಿಕಾಂತ ಯಡಹಳ್ಳಿ.