ಮಂಗಳವಾರ, ಸೆಪ್ಟೆಂಬರ್ 17, 2019

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗೆ ಸಮಾಲೋಚನಾ ಸಭೆಯ ನಿರ್ಣಯಗಳು..



ಕನ್ನಡದ ಪ್ರಾತಿನಿಧಿಕ ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ರಂಗಾಯಣಗಳಿಗೆ ನೇಮಕಗೊಂಡು ಕಾರ್ಯಪ್ರವೃತ್ತರಾದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರುಗಳ ಅಧಿಕಾರಾವಧಿಯನ್ನು ಸರಕಾರವು ಸೂಕ್ತ ಕಾರಣವೇ ಇಲ್ಲದೇ ಅಕಾಲಿಕವಾಗಿ ವಜಾಗೊಳಿಸುವುದು ಸಾಂಸ್ಕೃತಿಕ ವಿರೋಧಿ ನೀತಿಯಾಗಿದೆ. ಇದನ್ನು ವಿರೋಧಿಸಿ ಬೆಂಗಳೂರಿನ ರಂಗ ಗೆಳೆಯರು ಸೆಪ್ಟಂಬರ್ 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿ ಪ್ರತಿರೋಧದ ಮಾರ್ಗಗಳ ಕುರಿತು ಸಮಾಲೋಚನೆ ಮಾಡಿದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮಾನ್ಯ ಜೆ.ಲೊಕೇಶರವರು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರದ ಹಸ್ತಕ್ಷೇಪವನ್ನು ಖಂಡಿಸಿದರು. ಸರಕಾರ ನಮ್ಮದು ಅಂದರೆ ಜನಗಳದ್ದು. ಆದರೆ ಆಳುವ ಪಕ್ಷಗಳು ಬದಲಾದಂತೆಲ್ಲಾ ಸಾಂಸ್ಕೃತಿಕ ಸಂಸ್ಥೆಗಳನ್ನು ಹೀಗೆಲ್ಲಾ ಅಕಾಲಿಕವಾಗಿ ಬದಲಾಯಿಸುವುದು ಆಘಾತಕಾರಿಯಾಗಿದೆ. ಅಕಾಡೆಮಿ ಹಾಗೂ ರಂಗಾಯಣಗಳ ಬೈಲಾಗಳಿಗೆ ವಿರುದ್ಧವಾದ ನಡೆಯಾಗಿದೆ. ಯಾವುದೇ ಪಕ್ಷದ ನೇತೃತ್ವದ ಸರಕಾರ ಬಂದರೂ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿಗೊಂಡವರಿಗೆ ಪೂರ್ಣಾವಧಿ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ಇರಬೇಕು ಹಾಗೂ ಸರಕಾರದ ಹಸ್ತಕ್ಷೇಪ ಇಲ್ಲದ ಸ್ವಾಯತ್ತತೆ ದೊರೆಯಬೇಕು. ಆಗ ಮಾತ್ರ ಈ ಸಂಸ್ಥೆಗಳನ್ನು ಹುಟ್ಟುಹಾಕಿದ ಉದ್ದೇಶ ಈಡೇರಬಹುದಾಗಿದೆ ಎಂದು ಹೇಳಿದರು.

ಬೆಂಗಳೂರು ಎನ್‌ಎಸ್‌ಡಿಯ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರೂ ಸಹ ಸರಕಾರಗಳ ಸಾಂಸ್ಕೃತಿಕ ವಿರೋಧಿ ದೋರಣೆಯನ್ನು ಸಾಂಸ್ಕೃತಿಕ ಲೋಕ ಪ್ರತಿರೋಧಿಸಬೇಕಾಗಿದೆ. ಇದಕ್ಕಾಗಿ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯ ಕುರಿತು ವಿಸ್ತೃತ ಚರ್ಚೆ ಆಗಬೇಕಾಗಿದೆ. ಇದೇ ವಿಷಯದ ಕುರಿತಾಗಿ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿದ್ದ ಹಲವಾರು ರಂಗಕರ್ಮಿಗಳು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರಗಳ  ಹಸ್ತಕ್ಷೇಪವನ್ನು ವಿರೋಧಿಸಿದರು ಹಾಗೂ ಪ್ರಭುತ್ವದ ಸಾಂಸ್ಕೃತಿಕ ವಿರೋಧಿ ನೀತಿಯ ವಿರುದ್ಧ ರಂಗಕರ್ಮಿ ಕಲಾವಿದರುಗಳು ಹಾಗೂ ಸಾಹಿತಿಗಳು ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದರು.

ಸಮಾಲೋಚನಾ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳು ಹೀಗಿವೆ.
1.        ಸಾಂಸ್ಕೃತಿಕ ಸಂಸ್ಥೆಗಳಿಗೆ ಸರಕಾರವೇ ನಡಾವಳಿಯನ್ನು (ಬೈಲಾ) ರಚಿಸಿ ಅದರ ವಿರುದ್ಧವಾದ ನಿರ್ಣಯವನ್ನು ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಪ್ರತಿರೋಧಿಸಬೇಕು.
2.       ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರಕಾರದ ಅಕಾಲಿಕ ಹಸ್ತಕ್ಷೇಪದ ವಿರುದ್ಧ ರಾಜ್ಯಾದ್ಯಂತ ವಿವಿಧ ರೀತಿಯಲ್ಲಿ ಪ್ರತಿರೋಧವನ್ನು ತೋರುವುದು.
3.       ಸ್ವಾಯತ್ತತೆಯ ಕುರಿತು ವಿಸ್ತೃತ ಚರ್ಚೆಗೆ ವಿಚಾರ ಸಂಕಿರಣವನ್ನು ಒಂದೆರಡು ದಿನಗಳಲ್ಲಿ ಆಯೋಜಿಸಿ ಅಲ್ಲಿ ಬರುವ ಸಲಹೆ ಸೂಚನೆಗಳನ್ನು ಆಧರಿಸಿ ಮುಂದಿನ ಪ್ರತಿರೋಧದ ಕ್ರಮಗಳನ್ನು ತೆಗೆದುಕೊಳ್ಳುವುದು.
4.       ಕಲಾವಿದರುಗಳ ಸ್ವಾಭಿಮಾನಿ ಸಮಾವೇಶವನ್ನು ರಾಜ್ಯದ ನಾಲ್ಕೂ ವಲಯಗಳಲ್ಲಿ ಏರ್ಪಡಿಸಿ ಸರಕಾರದ ಸಾಂಸ್ಕೃತಿಕ ವಿರೋಧಿ ನೀತಿಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಸರಕಾರಗಳಿಗೆ ಎಚ್ಚರಿಕೆಯನ್ನೂ ನೀಡುವುದು.
5.       ಇನ್ನು ಮುಂದೆ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡವರ ಅಧಿಕಾರಾವಧಿಯನ್ನು ಅಕಾರಣವಾಗಿ ಅವಧಿಪೂರ್ವ ರದ್ದುಪಡಿಸಬಾರದೆಂದು ಸರಕಾರದ ಮೇಲೆ ಒತ್ತಡ ತರುವುದು.
6.    ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡವರ ಅಧಿಕಾರಾವಧಿ ಪೂರ್ಣಗೊಂಡ ನಂತರವೂ ಹೊಸ ನೇಮಕಾತಿಯಾಗುವವರೆಗೆ ಅವರೇ ಮುಂದುವರೆಯಬೇಕೆಂದು ಸರಕಾರವನ್ನು ಆಗ್ರಹಿಸುವುದು. 
7.        ಈಗಾಗಲೇ ಸರಕಾರದಿಂದ ಆದೇಶವಾಗಿರುವ ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಕ್ಕೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವಾಲಯವನ್ನು ಒತ್ತಾಯಿಸುವುದು. 
8.    ಸಾಂಸ್ಕೃತಿಕ ಸಂಸ್ಥೆಗಳ ನಡಾವಳಿಗಳ ರೂಪರೇಷೆಗಳನ್ನು ಹೊಂದಿರುವ ಬೈಲಾಗಳಲ್ಲಿರುವಂತೆಯೇ ಕಾರ್ಯನಿರ್ವಹಿಸಲು ಸಂಸ್ಕೃತಿ ಇಲಾಖೆ ಹಾಗೂ ನಿರ್ದೇಶನಾಲಯವು ಬದ್ಧವಾಗಿರಬೇಕು.

ಹೀಗೆ ಕೆಲವಾರು ಪ್ರಮುಖ ನಿರ್ಣಯಗಳನ್ನು ಸಮಾಲೋಚನಾ ಸಭೆಯಲ್ಲಿ ಚರ್ಚಿಸಿ ಕಾಲಮಿತಿಯಲ್ಲಿ ಅನಿಷ್ಠಾನಕ್ಕೆ ತರಲು ನಿರ್ಧರಿಸಲಾಯಿತು.

- ರಂಗ ಗೆಳೆಯರು  



2 ಕಾಮೆಂಟ್‌ಗಳು:

  1. ನಿರ್ಣಯಗಳು ತುಂಬಾ ಒಳ್ಳೆಯದೇ. ಆದರೆ ಈಗ ತೆರವಾಗಿರುವ ಖುರ್ಚಿಗಳಿಗೆ ವಶೀಲಿ ಬಾಜಿ ನಡೆಸುವುದನ್ನು ಯಾರೂ ವೈಯಕ್ತಿಕವಾಗಿ ಮಾಡಲೇಬಾರದು ಮತ್ತು ಈಗ ಕೈಕೊಂಡಿರುವ ನಿರ್ಣಯಗಳು ಯಾವುದೇ ಸರ್ಕಾರ ಇದ್ದಾಗಲೂ ಕಲಾವಿದರ ಮಾರ್ಗದರ್ಶಕ ಸೂತ್ರಗಳಾಗಿರಬೇಕು.ತೆರವಾಗಿರುವ ಸ್ಥಾನಗಳಿಗೆ ನೇಮಕಗೊಳ್ಳುವವರು ಖಂಡಿತ ತಮ್ಮ ನಿಲುವಿಗೆ... ಅಂದರೆ ಸರ್ಕಾರದ ತಿಕ್ಕಲು ಆದೇಶಗಳಿಗೆ ಸೊಪ್ಪು ಹಾಕದ ನಿಲುವಿಗೆ ಬದ್ಧರಾಗಿರಬೇಕು

    ಪ್ರತ್ಯುತ್ತರಅಳಿಸಿ
  2. ಎಲ್ಲರೂ ಕುರ್ಚಿಗಳನ್ನು ಕುಂಡಿ ಅಂಟಿಸಿ ಕೊಂಡೆ ಹುಟ್ಟಿದ್ದಾರೆ ಎನ್ನುವಂತೆ ಸ್ವಾರ್ಥ ತುಂಬಿಕೊಂಡಿರುವವರ ಮಧ್ಯೆ ಈ ನಿರ್ಣಯಗಳು...

    ಪ್ರತ್ಯುತ್ತರಅಳಿಸಿ