ಬುಧವಾರ, ಅಕ್ಟೋಬರ್ 16, 2019

ಕಣ್ಮನ ಸೆಳೆದ ಮರಾಠಿ ನಾಟಕ “ಸಂಗೀತ್ ದೇವ್‌ಬಭಾಲಿ.”





ಭಾಷಾ ಸಂಹನದ ಸಮಸ್ಯೆಯಿಂದಾಗಿ ಮರಾಠೀಯೇತರ ಪ್ರೇಕ್ಷಕರ ಅರಿವಿಗೆ ಈ ನಾಟಕದ ವಸ್ತು ವಿಷಯ ಸಂಪೂರ್ಣ ದಕ್ಕಲಿಲ್ಲವಾದರೂ ಇಡೀ ರಂಗಪ್ರಯೋಗ ಕೊಟ್ಟ ಅನುಭೂತಿ ಮಾತ್ರ ಅನನ್ಯವಾಗಿತ್ತು.  ಪಾತ್ರಗಳ ಮನೋಜ್ಞ ಅಭಿನಯವಂತೂ ನೋಡುಗರ ಚಿತ್ತಭಿತ್ತಿಯಲ್ಲಿ  ಚಲಿಸುವ ಚಿತ್ತಾರಗಳನ್ನು ಚಿತ್ರಿಸಿದಂತಿತ್ತು. ನಾಟಕದಾದ್ಯಂತ ಬಳಸಲಾದ ಬಣ್ಣ ಬೆಳಕುಗಳಂತೂ ಪ್ರೇಕ್ಷಕರ ಕಣ್ಮನ ಸೂರೆಗೊಂಡಿತು. ನಾಟಕದಲ್ಲಿ ಕಥೆಯನ್ನು ಹುಡುಕುವ ಪ್ರೇಕ್ಷಕರ ಮನಸುಗಳಿಗೆ ಕಥೆಯನ್ನೂ ಮೀರಿದ ಅನುಭವವನ್ನು ಕಟ್ಟಿಕೊಡಲಾಯಿತು. ಅದು ಮರಾಠಿಯ ಜನಪ್ರೀಯ ನಾಟಕ ಸಂಗೀತ್ ದೇವ್‌ಬಭಾಲಿ ರಂಗಪ್ರಯೋಗ.

ಭದ್ರಕಾಳಿ ಪ್ರೊಡಕ್ಷನ್ಸ್‌ರವರ ನಿರ್ಮಾಣದ ಸಂಗೀತ್ ದೇವ್ ಬಭಾಲಿ ನಾಟಕವನ್ನು ಪ್ರಾಜಕ್ತ್ ದೇಶ್‌ಮುಖ್‌ರವರು ನಿರ್ದೇಶಿಸಿದ್ದು ರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಎರಡನೇಯ ದಿನವಾದ 2019, ಅಕ್ಟೋಬರ್ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೂರೆಗೊಂಡಿತು.

ಇಡೀ ನಾಟಕದಲ್ಲಿ ಹೇಳಿಕೊಳ್ಳುವಂತಹ ಕಥಾನಕವೇನಿಲ್ಲ, ಇಬ್ಬರು ಮಹಿಳೆಯರನ್ನು ಹೊರತು ಪಡಿಸಿ ಬೇರೆ ಪಾತ್ರಗಳಿಲ್ಲ. ಕುತೂಹಲಕಾರಿ ಸಂದರ್ಭಗಳಿಲ್ಲ,  ಬದಲಾಗುವ ಸನ್ನಿವೇಶಗಳಿಲ್ಲ. ದೃಶ್ಯವೈಭವಗಳಿಲ್ಲ,  ಸಿದ್ದ ಮಾದರಿ ನಾಟಕಗಳ ಸೂತ್ರಗಳೂ ಇಲ್ಲ. ಕನ್ನಡದ ಪ್ರೇಕ್ಷಕರಿಗೆ ಮರಾಠಿ ಭಾಷೆಯ ಸಂವಹನವೂ ಸಾಧ್ಯವಾಗಲಿಲ್ಲ.. ಆದರೂ ಇಬ್ಬರೇ ಪಾತ್ರದಾರಿಗಳ ಈ ನಾಟಕ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಕದಲದಂತೆ ಕೂಡಿಸಿ ನೋಡಿಸಿಕೊಂಡು ಹೋಗಿದ್ದಂತೂ ವಿಸ್ಮಯದ ಸಂಗತಿ.



ಮಹಾರಾಷ್ಟ್ರದಲ್ಲಿರುವ ಪಂಡರಾಪುರದ ಪಾಂಡುರಂಗ ವಿಠ್ಠಲ ಬಲು ಪ್ರಸಿದ್ಧ ಜನಪ್ರೀಯ ದೇವರು. ಪಾಂಡುರಂಗನ ಪರಮ ಭಕ್ತ ಸಂತ ತುಕಾರಾಮ್ ಅಂತೂ ಮರಾಠಿ ಭಾಷಿಕರ ಸ್ಮರಣೆಯಲ್ಲಿ ಚಿರಸ್ಥಾಯಿಯಾಗಿ ನೆಲೆಗೊಂಡ ಹೆಸರು.  ಈ ಭಗವಂತ ಮತ್ತು ಭಕ್ತನ ಕುರಿತು ದಂತಕತೆಗಳು ಬೇಕಾದಷ್ಟಿವೆ. ಅಂತಹುದೊಂದು ಪವಾಡಸದೃಶ ಸನ್ನಿವೇಶದ ಎಳೆಯನ್ನು ವಿಸ್ತರಿಸಿ ಪ್ರಾಜಕ್ತ್ ದೇಶಮುಖರವರು ಈ ವಿಶಿಷ್ಟ ನಾಟಕವನ್ನು ರಚಿಸಿದ್ದಾರೆ. ಸಂತ ತುಕಾರಾಮ್ ಅಭಂಗಗಳನ್ನು (ಹಾಡುಗಳು) ರಚಿಸಿ ಹಾಡುತ್ತಾ ಕಾಡುಮೇಡುಗಳಲ್ಲಿ ಪಾಂಡುರಂಗನನ್ನು ಹುಡುಕುತ್ತಾ ಅಲೆಯುತ್ತಿರುವಾಗ ತುಂಬು ಬಸುರಿಯಾದ ಆತನ ಹೆಂಡತಿ ಅವಲಿ ಮನೆಯಲ್ಲಿ ಒಬ್ಬಳೇ ಯಾತನೆ ಪಡುತ್ತಿರುತ್ತಾಳೆ. ಅವಲಿಯ ಪಾದಕ್ಕೆ ಮುಳ್ಳೊಂದು ಚುಚ್ಚಿ ಗಾಯವಾದರೆ ಪಾಂಡುರಂಗನ ಪಾದದಲ್ಲಿ ರಕ್ತ ಸುರಿದು ನೋವಾಯಿತಂತೆ. ಅದನ್ನು ನೋಡಿದ ಪಾಂಡುರಂಗನ ಪತ್ನಿ ರುಕ್ಮಿಣಿ (ರುಕ್ಕೂಬಾಯಿ) ದೇವರ ಅಂಗಾಲಿಗಾದ ಗಾಯಕ್ಕೆ ಕಾರಣರಾದವರನ್ನು ಹುಡುಕಿಕೊಂಡು ತುಕಾರಾಮನ ಮನೆಗೆ ಬಂದು ತುಕಾರಾಮನ ಹೆಂಡತಿಯ ಸೇವೆ ಮಾಡಿ ಅವಳ ಕಾಲಿನ ಗಾಯ ವಾಸಿ ಮಾಡಿ ಹೋಗುತ್ತಾಳೆ ಎಂಬುದೊಂದು ದಂತಕತೆ.

ಇದನ್ನೇ ಆಧರಿಸಿ ಭಗವಂತ ಪಾಂಡುರಂಗನ ಪತ್ನಿ ಹಾಗೂ ಭಕ್ತ ತುಕಾರಾಮನ ಹೆಂಡತಿ ಈ ಇಬ್ಬರನ್ನೇ ಇಟ್ಟುಕೊಂಡು ಇಡೀ ನಾಟಕವನ್ನು ಕಟ್ಟಿ ಕೊಡಲಾಗಿದೆ. ಇದೊಂತರ ದ್ವಿಪಾತ್ರಾಭಿನಯವಾದರೂ ಎಲ್ಲಿಯೂ ಬೋರ್ ಹೊಡಿಸದೇ ನೋಡುಗರಿಗೆ ವಿಶಿಷ್ಟವಾದ ಅನುಭವವನ್ನು ಕೊಟ್ಟಿತು. ಇಡೀ ನಾಟಕದ ಕೇಂದ್ರ ಬಿಂದು ಪಾಂಡುರಂಗ ವಿಠ್ಠಲ. ಅವಲಿ ಮತ್ತು ರುಕ್ಕುಬಾಯಿ ಇಬ್ಬರೂ ಪಾಂಡುರಂಗನಿಗಾಗಿ ಹಂಬಲಿಸುವವರೇ.  ಆವಲಿ ನಿಂದಾಸ್ತುತಿಯ ಮೂಲಕ ದೇವನನ್ನು ಆರಾಧಿಸಿದರೆ, ರುಕ್ಕುಬಾಯಿ ಪತಿಯ ಒಲುಮೆಗೆ ಹಾತೊರೆಯುತ್ತಿರುವವಳು. ಪತಿಯಿಂದ ಅಗಲಿ ಒಂಟಿಯಾಗಿದ್ದ ಆವಲಿಗೆ ಬಾಹ್ಯ ಗಾಯವಾದರೆ, ಗಂಡನ ಪ್ರೀತಿಗಾಗಿ ಹಂಬಲಿಸುವ ರುಕ್ಕುವಿಗೆ ಅಂತರಂಗದ ಮನದಗಾಯ. ಆವಲಿಯ ಗಾಯ ವಾಸಿ ಮಾಡುವ ಪ್ರಯತ್ನದಲ್ಲಿ ತನ್ನ ಅಂತರಂಗದ ಗಾಯ ವಾಸಿಮಾಡಿಕೊಳ್ಳಲು ರುಕ್ಕು ಬಯಸುತ್ತಾಳೆ. ಪತಿಯ ಸಾಂಗತ್ಯಕ್ಕಾಗಿ ಜೊತೆಗೆ ಭಗವಂತನ ಕೃಪೆಗಾಗಿ ಹಾತೊರೆಯುತ್ತಿದ್ದ ಈ ಎರಡು ಹೆಣ್ಣು ಜೀವಗಳ ತಳಮಳಗಳನ್ನು ಇಡೀ ನಾಟಕ ಅನಾವರಣಗೊಳಿಸುತ್ತದೆ.



ಭಕ್ತಿಮಾರ್ಗದ ಶಕ್ತಿಯನ್ನು ತೋರುವ, ಭಕ್ತಿಗೆ ಭಗವಂತ ಒಲಿಯುವನೆಂಬ ನಂಬಿಕೆಯನ್ನು ಗಟ್ಟಿಗೊಳಿಸುವ ಹಾಗೂ ನಿಜ ಭಕ್ತರ ಸೇವೆಗೆ ಸ್ವತಃ ದೇವರೇ ಬರುತ್ತಾನೆಂಬ ವಿಶ್ವಾಸವನ್ನು ಹೆಚ್ಚಿಸುವಂತಹ ಅನೇಕಾನೇಕ ದಂತಕತೆಗಳು ನಮ್ಮ ಪುರಾಣೇತಿಹಾಸದಲ್ಲಿ ಹಾಸುಹೊಕ್ಕಾಗಿವೆ. ದಮನಕ್ಕೊಳಗಾದ ಹೇಮರೆಡ್ಡಿ ಮಲ್ಲಮ್ಮಳ ಮನೆಗೆ ಬರುವ ಮಲ್ಲಿಕಾರ್ಜುನ ಮನೆಯ ಕೆಲಸಗಳನ್ನೆಲ್ಲಾ ಮಾಡಿದ್ದು, ಹಿಂದಿನ ಕಲ್ಲಿನ ಗೋಡೆ ಒಡೆದು ಹಿಂತಿರುಗಿ ನಿಂತು ಭಕ್ತ ಕನಕನಿಗೆ ಕೃಷ್ಣ ದರ್ಶನ ಕೊಟ್ಟಿದ್ದು.. ಇಂತಹ ಪವಾಡಗಳಿಗೇನೂ ಕಡಿಮೆಯಿಲ್ಲ. ನಂಬಿಕೆಯ ಅತಿರೇಕದಲ್ಲಿ ಮಿಂದೇಳುವ ಭಕ್ತರಿಗೆ ಇಂತಹ ಪವಾಡ ಪುಣ್ಯಕಥೆಗಳು ಭ್ರಮೆಯ ಲೋಕವನ್ನೇ ಸೃಷ್ಟಿಸಬಲ್ಲುದು, ಜೊತೆಗೆ ತಲ್ಲಣಗೊಂಡ ಮನಸುಗಳಿಗೆ ಸಾಂತ್ವನವನ್ನೂ ಹೇಳಬಲ್ಲವು.  ವೈಚಾರಿಕತೆಯನ್ನು ಪಕ್ಕಕ್ಕಿಟ್ಟು ರೂಢಿಗತ ಪುರೋಹಿತಶಾಹಿ ಪ್ರಣೀತ ನಂಬಿಕೆಗಳಿಗೆ ಇಂಬು ಕೊಡುವಂತಹ ಸಾಧ್ಯತೆಗಳೂ ಸಹ ಈ ನಾಟಕದಲ್ಲಿವೆಯಾದರೂ ಭಗವಂತನನ್ನು ರೂಪಕವಾಗಿಟ್ಟುಕೊಂಡು ಪ್ರೀತಿಗಾಗಿ ಹಂಬಲಿಸುವ ಇಬ್ಬರು ಮಹಿಳೆಯರ ಸಂಕಟಗಳನ್ನು ಹೇಳುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಪುರುಷಪ್ರಧಾನ ಪರಂಪರೆಯಲ್ಲಿ ಭಗವಂತನ ಹೆಂಡತಿಯೇ ಇರಲಿ, ಇಲ್ಲವೇ ಭಕ್ತನ ಪತ್ನಿಯೇ ಆಗಿರಲಿ ಇಬ್ಬರೂ ಸಹ ಸಂಕಷ್ಟ ವೇದನೆಗಳಿಗೆ ತುತ್ತಾಗುತ್ತಾರೆ ಹಾಗೂ ಅದರಿಂದ ಹೊರಬರಲು ದೇವರಲ್ಲಿ ಮೊರೆಯಿಡಬೇಕಾಗುತ್ತದೆ ಎಂಬುದೂ ಈ ನಾಟಕದ ಒಳಾರ್ಥವಾದಂತಿದೆ. ತನ್ನ ಪತಿ ತುಕಾರಾಂ ತನ್ನಿಂದ ಅಗಲಿ ಹೋಗಲು ಕಾರಣವಾದ ಪಾಂಡುರಂಗನನ್ನು ನಿಂದಿಸುತ್ತಲೇ ಸಂಕಷ್ಟ ಪರಿಹಾರಕ್ಕೆ ಅದೇ ದೇವರನ್ನೇ ಆರಾಧಿಸುವ ಅವಲಿ ಹಾಗೂ ತನ್ನ ಪತಿಯ ಒಲುಮೆಗಾಗಿ ಭಕ್ತರ ಪಾದಸೇವೆ ಮಾಡಲೂ ಸಿದ್ದಳಾಗಿರುವ ರುಕ್ಕುಬಾಯಿ ಈ ಇಬ್ಬರೂ ಸಹ ಆರಾಧಕ ಮನಸ್ಥಿತಿಯುಳ್ಳವರೇ. ಇಬ್ಬರೂ ತಮ್ಮ ವೇದನೆಗೆ ಭಗವಂತನ ಕೃಪಾಕಟಾಕ್ಷವನ್ನು ಬಯಸುವವರೇ.  ತಮ್ಮಿಂದ ವಿಮುಖರಾದ ಗಂಡಂದಿರ ಸಾಂಗತ್ಯ ಪಡೆಯಲು ಹಾತೊರೆಯುವ ಮಹಿಳೆಯರ ಅಂತರಂಗದ ತಲ್ಲಣಗಳು ಈ ನಾಟಕದ ಸಾರವಾಗಿದೆ. ಇದೊಂದು ಭಕ್ತಿಮಾರ್ಗದ ದೃಷ್ಟಾಂತವೆಂದು ಮೇಲ್ನೋಟಕ್ಕೆ ಹೇಳಬಹುದಾದರೂ ಈ ನಾಟಕದ ಅಂತರಂಗದಲ್ಲಿ ಮಹಿಳೆಯರ ನೋವು, ಹತಾಷೆ, ಒಂಟಿತನ ಹರಳುಗಟ್ಟಿದೆ. ಪತಿ ದೂರಾದರೂ ಪತ್ನಿ ಮಾತ್ರ ಆತನ ಒಲುಮೆಗಾಗಿ ತಹತಹಿಸುವ, ಸಾಂಗತ್ಯಕ್ಕಾಗಿ ಆರಾಧಿಸುವ ಪರಿಯನ್ನು ಪುರುಷಪ್ರಧಾನ ವ್ಯವಸ್ಥೆ ಮಹಿಳೆಗೆ ಅನಿವಾರ್ಯವಾಗಿಸಿದೆ. ಮಹಿಳೆಯರಲ್ಲಿ ಆ ನಂಬಿಕೆಯನ್ನು ಗಟ್ಟಿಗೊಳಿಸಲು ಇಂತಹ ಪುರಾಣಗಳನ್ನು ಹುಟ್ಟಿಸಿ, ದಂತಕಥೆಗಳನ್ನು ಸೃಷ್ಟಿಸಿ ಮಹಿಳೆಯರನ್ನು ನಂಬಿಕೆಗಳಿಗೆ ಕಟ್ಟಿಹಾಕುವ ಹುನ್ನಾರ ಪರಂಪರೆಯಿಂದ ಮುಂದುವರೆಯುತ್ತಾ ಬಂದಿದೆ. ಇಂತಹ ಆಶಯಗಳೂ ಸಹ ಈ ನಾಟಕದೊಳಗೆ ಅಡಗಿ ಕುಳಿತಿವೆ.



ಈ ಎಲ್ಲಾ ತರ್ಕ ತಾತ್ವಿಕತೆಗಳನ್ನೆಲ್ಲಾ ಬದಿಗಿಟ್ಟು ಕೇವಲ ನಾಟಕವನ್ನು ನಾಟಕವಾಗಿ ನೋಡುತ್ತಾ ಹೋದರೆ ಮನಸಿಗೆ ಹಿತಾನಂದವನ್ನು ತಂದುಕೊಳ್ಳಬಹುದಾಗಿದೆ. ಇಡೀ ನಾಟಕದಲ್ಲಿ ಅತ್ಯಂತ ಗಮನಸೆಳೆಯುವುದು ನಟನೆ. ಅವಲಿಯಾಗಿ ಶುಭಾಂಗಿ ಸದಾವವಾರ್ತೆ ಹಾಗೂ ರುಕ್ಕುಬಾಯಿಯಾಗಿ ಮಾನಸಿ ಜೋಶಿ ಅದ್ಬುತವಾದ ಅಭಿನಯ ನೀಡಿದ್ದಾರೆ. ಪಾತ್ರಗಳೇ ತಾವಾಗಿದ್ದಾರೆ. ಅಭಿನಯ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದಾರೆ.  ಪ್ರದೀಪ್ ಮುಳೆಯವರ ಸ್ಥಿರ ರಂಗಸಜ್ಜಿಕೆ ವಿನ್ಯಾಸ ಅನನ್ಯವಾಗಿತ್ತು.  ಪ್ರಫುಲ್ಲ ದೀಕ್ಷಿತ್‌ರವರ ಬೆಳಕಿನ ವಿನ್ಯಾಸ ಇಡೀ ನಾಟಕಕ್ಕೆ ಕಾವ್ಯಾತ್ಮಕತೆಯನ್ನು ಕಟ್ಟಿಕೊಟ್ಟಿದೆ. ಸಮಯದ ವ್ಯತ್ಯಾಸ, ಹರಿಯುವ ನೀರಿನ ಹರಿವು, ನಟರ ಭಾವತೀವ್ರತೆಗಳನ್ನೆಲ್ಲಾ ಬೆಳಕಿನಲ್ಲಿ ಒಡಮೂಡಿಸಿ ಅಚ್ಚರಿಯನ್ನು ಸೃಷ್ಟಿಸಲಾಗಿದೆ. ಸಂತ ತುಕಾರಾಮ್‌ರವರ ಅಭಂಗ್ ಗೀತೆಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಲಾಗಿದೆ. ಆನಂದ ಓಕ್ ರವರ ಸಂಗೀತ ಸಂಯೋಜನೆ ಕೇಳುಗರ ಕಿವಿಗೆ ಮಾಧುರ್ಯವನ್ನು ಹರಿಸಿದೆ. ಪಾತ್ರದಾರಿಗಳೇ ಹಾಡುಗಳನ್ನು ನಟಿಸುತ್ತಲೇ ಹಾಡಿದ್ದು ವಿಶೇಷ. ಹಾಡುಗಳನ್ನು ಹೆಚ್ಚಾಗಿ ಬಳಸಿದ್ದು ಇಡೀ ರಂಗಪ್ರಯೋಗವೇ ಸಂಗೀತ ಪ್ರಧಾನವಾಗಿದೆ.

ಇಂತಹ ಅಪರೂಪದ ನಾಟಕವನ್ನು ಕಟ್ಟಿಕೊಟ್ಟು ಯುವನಿರ್ದೇಶಕ ಪ್ರಾಜಕ್ತ್ ದೇಶಮುಖರವರಿಗೆ ವಂದನೆಗಳು. ಈಗಾಗಲೇ 275ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡ ಈ ಮರಾಠಿ ನಾಟಕವನ್ನು ಕರೆಸಿ ಕನ್ನಡಿಗರಿಗೆ ತೋರಿಸಿದ ರಂಗನಿರಂತರದ ಸಂಘಟಕರಿಗೆ ಅಭಿನಂದನೆಗಳು.  
   
-ಶಶಿಕಾಂತ ಯಡಹಳ್ಳಿ      

ಚಿತ್ರಗಳ ಕೃಪೆ.. ತಾಯಿ ಲೊಕೇಶ್
 
ನಿರ್ದೇಶಕ ಪ್ರಾಜಕ್ತ್ ದೇಶಮುಖ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ