ಬುಧವಾರ, ಆಗಸ್ಟ್ 30, 2023

ಸುವರ್ಣ ಸಂಭ್ರಮದಲಿ ರಂಗಸಂಪದ

 ಹವ್ಯಾಸಿ ರಂಗತಂಡದ ಅರ್ಧ ಶತಕದ ಪಯಣ



ರಂಗಸಂಪದದ ತ್ರಿಶಂಕು ನಾಟಕದ ಪೋಟೋ

ಸರಿ ಸುಮಾರು ನೂರು ವರ್ಷಗಳ ಇತಿಹಾಸವಿರುವ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಐವತ್ತು ವರ್ಷಗಳ ಕಾಲ ಒಂದು ರಂಗತಂಡ ಬೆಳೆದು ಉಳಿದು ಕ್ರಿಯಾಶೀಲವಾಗಿ ಸ್ಮರಣೀಯ ಕೊಡುಗೆ ಕೊಟ್ಟಿರುವುದು ರಂಗ ಚರಿತ್ರೆಯಲ್ಲಿ ದಾಖಲಾರ್ಹ ಸಂಗತಿ. ಅಂತಹ ರಂಗಬದ್ದತೆ ಇರುವ ರಂಗಸಂಪದ ತಂಡಕ್ಕೆ ಈಗ ಸುವರ್ಣ ವರ್ಷದ ಸಂಭ್ರಮ.

ಕಾಲಕಾಲಕ್ಕೆ ಹಲವಾರು ರಂಗತಂಡಗಳು ಹುಟ್ಟುತ್ತವೆ, ತಂಡದ ನಾಯಕನಿಗೆ ಆಸಕ್ತಿ ಹಾಗೂ ಸಂಘಟನೆಯ ಶಕ್ತಿ ಇರುವವರೆಗೆ ಮುನ್ನಡೆಯುತ್ತವೆ ಹಾಗೂ ಕೊನೆಗೆ ಕಣ್ಮರೆಯಾಗುತ್ತವೆ. ಪ್ರಕ್ರಿಯೆಯೇ ನಿರಂತರವಾಗಿ ನಡೆಯುತ್ತಾ ರಂಗಭೂಮಿಯನ್ನು ಜೀವಂತವಾಗಿ ಕಾಪಿಟ್ಟುಕೊಂಡು ಬರುವ ಜೀವದ್ರವ್ಯವಾಗಿದೆ. ರಂಗಾಸಕ್ತಿಯಿಂದ ಹುಟ್ಡಿಕೊಂಡ ಏಕವ್ಯಕ್ತಿ ಯಜಮಾನಿಕೆಯ ಕೆಲವಾರು ತಂಡಗಳು ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ಬಸವಳಿಯುತ್ತವೆ. ಆದರೆ ರಂಗಸಂಪದ ಇದಕ್ಕೆ ಅಪವಾದವಾಗಿದೆ. ಹವ್ಯಾಸಿ ರಂಗಭೂಮಿ ಬರುಬರುತ್ತಾ ರಂಗಪ್ರಯೋಗಗಳಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳುವ ಬದಲಾಗಿ ರಂಗಭೂಮಿಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುವ ರಂಗಕರ್ಮಿಗಳು ಹೆಚ್ಚಾದಂತೆ ಹವ್ಯಾಸಿ ಪರಿಕಲ್ಪನೆಗೆ ಹಿನ್ನಡೆಯಾಗಿದ್ದಂತೂ ನಿಜ. ಆದರೆ ರಂಗಸಂಪದ ಅರ್ಧ ಶತಮಾನದಿಂದ ಪಕ್ಕಾ ಹವ್ಯಾಸಿ ತಂಡವಾಗಿಯೇ ರಂಗಬದ್ದತೆ ಹಾಗೂ ವೃತ್ತಿಪರತೆಯನ್ನು ಉಳಿಸಿಕೊಂಡು ಬಂದಿರುವುದೇ ವಿಸ್ಮಯ. ತಂಡದ ಬಹುತೇಕ ಆಧಾರ ಸ್ಥಂಭಗಳಾಗಿರುವವರು ಬದುಕಿಗಾಗಿ ಬೇರೆ ವೃತ್ತಿ ಮಾಡುತ್ತಲೇ ರಂಗಭೂಮಿಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ವೃತ್ತಿಪರವಾಗಿ ನಾಟಕ ಕಟ್ಟುವ ಕ್ರಿಯೆಯಲ್ಲಿ ಕ್ರಿಯಾಶೀಲರಾಗಿರುವುದು ರಂಗಸಂಪದದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಹಾಗೂ ಹವ್ಯಾಸಿ ರಂಗಭೂಮಿಯ ನಿಜವಾದ ಆಶಯವನ್ನು ಉಳಿಸಿಕೊಳ್ಳುವಲ್ಲಿ ತಂಡ ಬೇರೆಯವರಿಗೆ ಮಾದರಿಯಾಗಿದೆ

ಆರ್.ನಾಗೇಶ್, ರಂಗಸಂಪದದ ರೂವಾರಿ

ಐದು ದಶಕಗಳ ಹಿಂದೆ ಹರೆಯದ ಹುಮ್ಮಸ್ಸಿನಲ್ಲಿದ್ದು ರಂಗಾಸಕ್ತಿಯನ್ನು ಬೆಳೆಸಿಕೊಂಡಿದ್ದ ಮಾನ್ಯರಾದ ಆರ್.ನಾಗೇಶ್ಜೆ.ಲೊಕೇಶ್, ಸುಬ್ರಹ್ಮಣ್ಯಂ, ಎಂ.ಸಿ.ಆನಂದ, ಹರಿಕೃಷ್ಣ ಮತ್ತು ಕೇಶವರಾವ್ ರವರು ರಂಗಸಂಪದದ ಹುಟ್ಟಿಗೆ ಕಾರಣೀಕರ್ತರಾದ ಮೊಟ್ಟ ಮೊದಲಿಗ ರೂವಾರಿಗಳು. ತದನಂತರ ಚಡ್ಡಿ ನಾಗೇಶ್, ಚಂದ್ರಕಾಂತ, ಶಿವಲಿಂಗ ಪ್ರಸಾದ್, ಚನ್ನಕೇಶವಮೂರ್ತಿ ಮುಂತಾದವರು ಜೊತೆಗೂಡಿ ರಂಗಸಂಪದವನ್ನು ಕಟ್ಟಿ ಬೆಳೆಸಿದವರುಕೆಲವರು ನಿರ್ಗಮಿಸಿದರೆ ಹಲವರು ಜೊತೆಯಾದರು. ಅದೆಷ್ಟೋ ರಂಗಸಂಪದಿಗರು ತಮ್ಮ ಮನೆ ಕಚೇರಿಗಳ ಕೆಲಸವನ್ನು ಬದಿಗಿರಿಸಿ, ವೃತ್ತಿಯಲ್ಲಿ ಸಂಪಾದಿಸಿದ ಹಣವನ್ನು ವಿನಿಯೋಗಿಸಿ ರಂಗಸಂಪದಕ್ಕೆ ಯಶಸ್ವಿ ರಂಗಪ್ರಯೋಗಗಳನ್ನು ಕಟ್ಟಿಕೊಟ್ಟು ಕನ್ನಡ ಹವ್ಯಾಸಿ ರಂಗಭೂಮಿಯ ಬುನಾದಿಯನ್ನು ಗಟ್ಟಿಗೊಳಿಸಿದರು

ಕ್ರಿಯಾಶೀಲ ರಂಗನಿರ್ದೇಶಕರಾದ ಆರ್.ನಾಗೇಶ್, ಪ್ರಸನ್ನ, ಸಿಜಿಕೆ, ಎನ್.ಎಸ್.ವೆಂಕಟರಾಂ, ಗೋಪಾಲಕೃಷ್ಣ ನಾಯರಿ, ಹೆಚ್.ವಿ.ವೆಂಕಟಸುಬ್ಬಯ್ಯ, ನಾಗಾಭರಣ, ಡಿ.ಟಿ.ಚೆನ್ನಕೇಶವಮೂರ್ತಿ, ಅಶೋಕ ಬಾದರದಿನ್ನಿ, ಬಿ.ವಿ.ವೈಕುಂಟರಾಜು, ಪ್ರಮೋದ್ ಶಿಗ್ಗಾಂವ್ ಮುಂತಾದವರು ರಂಗಸಂಪದಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಯಯಾತಿ, ಕದಡಿದ ನೀರು, ಏವಂ ಇಂದ್ರಜಿತ್, ಚೋಮ, ಕತ್ತಲೆ ಬೆಳಕು, ಸಂಗ್ಯಾ ಬಾಳ್ಯಾ, ಸಾಕ್ಷಿಕಲ್ಲು, ಸಂದರ್ಭ, ಚಿದಂಬರ ರಹಸ್ಯ, ಹರಕೆಯ ಕುರಿ, ಒಡಲಾಳ, ಮಹಾಚೈತ್ರ.. ಹೀಗೆ ನಲವತ್ತಕ್ಕೂ ಹೆಚ್ಚು ಸುಪ್ರಸಿದ್ದ ನಾಟಕಗಳನ್ನು ರಂಗಸಂಪದವು ನಿರ್ಮಿಸಿ ರಂಗಚರಿತ್ರೆಯಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ.

ಜೆ.ಲೊಕೇಶ್, ರಂಗಸಂಪದದ ರೂವಾರಿ

ಕೇವಲ ರಂಗಪ್ರದರ್ಶನಗಳ ನಿರ್ಮಿತಿಗಾಗಿ ಮಾತ್ರ ಸೀಮಿತವಾಗಿರದ ರಂಗಸಂಪದವು ಕನ್ನಡ ರಂಗಭೂಮಿಯ ಸರ್ವತೋಮುಖಿ ಬೆಳವಣಿಗೆಗೆ ಬಹುಮುಖಿ ಆಯಾಮಗಳಲ್ಲಿ ಶ್ರಮಿಸಿದೆ. ನಾಟಕ ರಚನಾ ಸ್ಪರ್ಧೆ ಹಾಗೂ ಕಾರ್ಯಾಗಾರಗಳನ್ನು  ಆಯೋಜಿಸಿದೆ. ನಾಟಕ ರಚನಾ ಸ್ಪರ್ಧೆಯ ಮೂಲಕ ಹೂಲಿಶೇಖರ್, ಗೋಪಾಲ್ ವಾಜಪೇಯಿ, ನಿಸರ್ಗಪ್ರೀಯರಂತಹ ನಾಟಕಕಾರರು ರೂಪಗೊಂಡರು. ಸಿಜಿಕೆ ಯವರು ದೇವನೂರು ಮಹಾದೇವರ ಕಾದಂಬರಿಯನ್ನು ನಾಟಕವಾಗಿ ಬರೆದರುರಂಗಸಂಪದವು ಸಾಹಿತಿಗಳಾದ ಎಚ್.ಎಸ್.ಶಿವಪ್ರಕಾಶ್, ಕೀರಂ ನಾಗರಾಜರಂತಹ ದಿಗ್ಗಜರನ್ನು ನಾಟಕಕಾರರನ್ನಾಗಿಸಿದೆ. ಸಿಜಿಕೆ ಯವರ ನಿರ್ದೇಶನದಲ್ಲಿ ಒಡಲಾಳದಂತಹ ಅದ್ಬುತ ನಾಟಕ ಸಿದ್ದಗೊಳಿಸಿ ಉಮಾಶ್ರೀಯಂತಹ ಮೇರು ನಟಿಯನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ ಕೀರ್ತಿಯೂ ರಂಗಸಂಪದಕ್ಕೇ ದಕ್ಕಬೇಕು. ವೈಜಯಂತಿ ಕಾಶಿ, ವಿಜಯ್ ಕಾಶಿ, ನಾಗೇಶ್ ಕಶ್ಯಪ್, ಬಿ.ಎಸ್.ರಾಮಮೂರ್ತಿ, ವೆಂಕಟೇಶಮೂರ್ತಿ ಮುಂತಾದ ಕಲಾವಿದರಿಗೆ ಅವಕಾಶ ಕೊಟ್ಟು ಕಲಾವಿದರನ್ನಾಗಿ ಬೆಳೆಸಿದ್ದು ರಂಗಸಂಪದ. ಹೀಗೆ ಅನೇಕಾನೇಕ ರಂಗಾಸಕ್ತ ನಟ ನಟಿಯರನ್ನು, ಹಲವಾರು ರಂಗನೇಪತ್ಯ ತಜ್ಞರನ್ನು, ನಾಟಕಕಾರರನ್ನು ರಂಗಭೂಮಿಗೆ ಕೊಟ್ಟ ರಂಗಸಂಪದದ ಕಾರ್ಯ ಸ್ತುತ್ಯಾರ್ಹ. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ನಾಟಕಗಳ ಕೊರತೆ ಕಂಡುಬಂದಾಗ ಚೋಮ, ಚಿದಂಬರ ರಹಸ್ಯ, ಒಡಲಾಳದಂತಹ ಕೆಲವಾರು ಸಾಹಿತ್ಯ ಕೃತಿಗಳನ್ನು ರಂಗರೂಪಾಂತರಿಸಿ ಪ್ರದರ್ಶನಗೊಳಿಸಿದ್ದು ರಂಗಸಂಪದದ ಹಿರಿಮೆ. ಪ್ರಸನ್ನರವರಂತಹ ನಿರ್ದೇಶಕರನ್ನು ಮೊಟ್ಟ ಮೊದಲ ಬಾರಿಗೆ ಕನ್ನಡ ರಂಗಭೂಮಿಗೆ ಕದಡಿದ ನೀರು ನಾಟಕದ ಮೂಲಕ ಪರಿಚಯಿಸಿದ್ದೂ ರಂಗಸಂಪದದ ಸಾಧನೆ. "ರಂಗಸಂಪದ ಒಂದು ರಂಗ ಗರಡಿಮನೆ ಇದ್ದಂತೆ" ಎಂದು ಚಂದ್ರಶೇಖರ್ ಕಂಬಾರರು ಹೇಳಿದ್ದರಲ್ಲಿ ಅತಿಶಯವೇನಿಲ್ಲ.

ಕೇವಲ ತಮ್ಮ ತಂಡದ ಅಭ್ಯುದಯಕ್ಕೆ ಮಾತ್ರ ಸೀಮಿತವಾಗಿರದ ರಂಗಸಂಪದದ ರಂಗಕರ್ಮಿಗಳು ಆಗಿನ ಕಾಲದ ಹಲವಾರು ರಂಗತಂಡಗಳ ಜೊತೆ ಸೌಹಾರ್ಧ ಸಂಬಂಧವನ್ನೂ ಹೊಂದಿ ಬೇರೆ ತಂಡಗಳ ನಾಟಕ ನಿರ್ಮಿತಿಯಲ್ಲಿ ಸಹಾಯ ಸಹಕಾರವನ್ನು ಕೊಡುತ್ತಾ ಒಟ್ಟಾರೆಯಾಗಿ ಕನ್ನಡ ರಂಗಭೂಮಿ ಬೆಳೆಯಬೇಕು ಎನ್ನುವ ಆಶಯವನ್ನು ಹೊಂದಿದ್ದು ಸಾರ್ವಕಾಲಿಕ ಮಾದರಿ ಕಾಯಕವಾಗಿದೆ. ಬಹುತೇಕ ರಂಗತಂಡಗಳು  ನಿರ್ದಿಷ್ಟ ವ್ಯಕ್ತಿ, ನಾಟಕಕಾರ, ನಿರ್ದೇಶಕರ ಸುತ್ತ ಸುತ್ತಿದರೆ ರಂಗಸಂಪದವು ತನ್ನ ಸುತ್ತ ಹಲವಾರು ನಿರ್ದೇಶಕರು ನಾಟಕಕಾರರು ನೇಪತ್ಯ ತಜ್ಞರನ್ನು ಬೆಳೆಸುತ್ತಾ ನಾಟಕಗಳ ನಿರ್ಮಿತಿಯಲ್ಲಿ ತೊಡಗಿಕೊಂಡಿದ್ದು ವಿಶೇಷ.

ರಂಗಸಂಪದದ ತ್ರಿಶಂಕು ನಾಟಕದ ಪೋಟೋ

ರಂಗಸಂಪದದ ಯಶಸ್ಸಿಗೆ ಹಾಗೂ ದೀರ್ಘಾವಧಿ ಆಯಸ್ಸಿಗೆ ಕಾರಣಗಳು ಹಲವಾರಿವೆ ಹಾಗೂ ಅವುಗಳು ಬೇರೆ ತಂಡಗಳಿಗೆ ಮಾರ್ಗದರ್ಶಿಯಾಗಿವೆ.ರಂಗಸಂಪದವು ಏಕವ್ಯಕ್ತಿ ಮಾಲೀಕತ್ವದ ತಂಡವಾಗಿರದೇ ಸಾಮೂಹಿಕ ನಾಯಕತ್ವ ಹಾಗೂ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಹಾಗೂ ಯಾವುದೇ ಯೋಜನೆಯೊಂದನ್ನು ಎತ್ತಿಕೊಂಡರೂ ಸಹಮತ ಇಲ್ಲವೇ ಬಹುಮತದ ಮೂಲಕ ಎಲ್ಲರ ಸಹಭಾಗಿತ್ವದಲ್ಲಿ ಅನುಷ್ಟಾನಕ್ಕೆ ತಂದಿದೆ. ಅಭಿಪ್ರಾಯಬೇಧಗಳನ್ನು ಚರ್ಚೆ ಸಂವಾದಗಳ ಮೂಲಕ ಬಗೆಹರಿಸಿಕೊಂಡು ಸಾಮೂಹಿಕವಾಗಿ ರಂಗಬದ್ದತೆಯಿಂದ ತೊಡಗಿಸಿಕೊಂಡು ಇಟ್ಟ ಗುರಿ ತಲುಪಲು ಪ್ರಯತ್ನಿಸಿದೆಸರಕಾರದ ಅನುದಾನಗಳನ್ನೇ ನೆಚ್ಚಿಕೊಳ್ಳದೇ ರಂಗಸಂಪದದ ಎಲ್ಲರೂ ತಮ್ಮ ವೃತ್ತಿ ಆದಾಯದ  ಭಾಗವನ್ನು ಕಾಂಟ್ರಿಬ್ಯುಟ್ ಮಾಡುವುದು. ಹಾಗೂ ರಂಗಪೋಷಕರಿಂದ ದಾನ ಪಡೆದು ಅಂದುಕೊಂಡ ಉದ್ದೇಶಕ್ಕೇ ಬಳಸುವುದು. ಸಂಗ್ರಹಗೊಂಡ ಹಣವನ್ನು ಯಾರೂ ಯಾವುದೇ ಕಾರಣಕ್ಕೂ ಸ್ವಂತಕ್ಕೆ ಬಳಸಿಕೊಳ್ಳದೇ ಲೆಕ್ಕಪತ್ರದಲ್ಲಿ ಪಾರದರ್ಶಕತೆ ಹಾಗೂ ಪರಸ್ಪರ ನಂಬಿಕೆಯನ್ನು ಹೊಂದಿದ್ದರಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ. ತಂಡದಲ್ಲಿರುವ ಎಲ್ಲರೂ ತಮ್ಮ ಆಸಕ್ತಿ ಪ್ರತಿಭೆ ಕೌಶಲಕ್ಕೆ ತಕ್ಕಂತೆ ರಂಗವಿಭಾಗದಲ್ಲಿ ಶ್ರದ್ದೆಯಿಂದ ತೊಡಗಿಸಿಕೊಂಡು ಕೆಲಸಗಳನ್ನು ಹಂಚಿಕೊಂಡು ಶ್ರದ್ದೆಯಿಂದ ಕೆಲಸ ಮಾಡಿದ್ದರಿಂದ ವೃತ್ತಿಪರತೆ ಸಾಧ್ಯವಾಗಿದೆಪ್ರತಿಯೊಂದು ನಾಟಕದ ನಿರ್ಮಿತಿಯಲ್ಲೂ ವೃತ್ತಿಪರತೆಯನ್ನು ಕಾಪಾಡಿಕೊಳ್ಳುವುದು ಹಾಗೂ ನಾಟಕದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರೇಕ್ಷಕರನ್ನು ರಂಗಮಂದಿರಕ್ಕೆ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದರಿಂದ ರಂಗಸಂಪದದ ನಾಟಕಗಳು ಹೆಚ್ಚು ಪಾಪುಲಾರಿಟಿ ಪಡೆದಿವೆ.

ಎಲ್ಲಾ ಪ್ರಮುಖ ಅಂಶಗಳನ್ನು ಸ್ವಪ್ರೇರಣೆಯಿಂದ ಅಳವಡಿಸಿಕೊಂಡಿದ್ದರಿಂದ ರಂಗಸಂಪದವು ಕನ್ನಡ ರಂಗಭೂಮಿಯ ಮಹತ್ವದ ರಂಗತಂಡವಾಗಿ ಅರ್ಧ ದಶಕ ಪೂರೈಸಿದೆ. ರಂಗಭೂಮಿಯನ್ನು ಹವ್ಯಾಸವಾಗಿ ಮಾತ್ರವಲ್ಲ ರಂಗಧರ್ಮವಾಗಿ ಪರಿಗಣಿಸಿದ್ದರಿಂದ ಸಾರ್ವತ್ರಿಕ ಮನ್ನಣೆಯನ್ನೂ ಪಡೆದಿದೆ. ಹಾಗೂ ರಂಗಸಂಪದ ತಂಡದ ಬಹುತೇಕ ಹಿರಿಯ ರಂಗಕರ್ಮಿಗಳನ್ನು ಸರಕಾರ ಗುರುತಿಸಿ ಪ್ರಮುಖ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದೆ. ರಂಗಸಂಪದದ ಸಂಘಟನಾತ್ಮಕ  ಮೆದುಳಾಗಿ ಬದ್ದತೆಯಿಂದ ಕೆಲಸಮಾಡಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ ಜೆ.ಲೊಕೇಶರವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿಯೂ ಕರ್ನಾಟಕ ಸರಕಾರ ಆಯ್ಕೆಮಾಡಿತ್ತು.

ಎಲ್ಲದಕ್ಕೂ ಎಕ್ಸಪೈರಿ ಡೇಟ್ ಅನ್ನೋದು ಇದ್ದೇ ಇರುತ್ತದೆ. ಈಗ ಎಪ್ಪತ್ತು ಎಂಬತ್ತು ವಯೋಮಿತಿಯಲ್ಲಿರುವ ರಂಗಸಂಪದದ ಆರಂಭಿಕ ರೂವಾರಿಗಳಿಂದ ಇನ್ನೂ ಎಷ್ಟೋಂತಾ ರಂಗಕಾಯಕ ಮಾಡಲು ಸಾಧ್ಯ? ಹೀಗಾಗಿ ಕಳೆದೊಂದು ದಶಕದಿಂದ ರಂಗಸಂಪದದ ಕಾರ್ಯಚಟುವಟಿಕೆ ಕುಂಟಿತವಾಗಿದೆಯಾದರೂ ಸ್ಥಗಿತಗೊಂಡಿಲ್ಲ. ಇನ್ನೂ ಮೂಲ ರಂಗಸಂಪದಿಗರ ಉತ್ಸಾಹ ತಗ್ಗಿಲ್ಲ. ಆದರೆ ವಯಸ್ಸು ಅನುಮತಿಸುತ್ತಿಲ್ಲ. ಬದಲಾದ ಕಾಲಘಟ್ಟದಲ್ಲಿ ಕಲಾವಿದರನ್ನು ಹೊಂದಿಸಿಕೊಂಡು ನಾಟಕ ನಿರ್ಮಿಸಿ ಮರುಪ್ರದರ್ಶನಗಳನ್ನು ಮಾಡುವುದು ಅಂದುಕೊಂಡಷ್ಟು ಸುಲಭಸಾಧ್ಯವಾಗಿಲ್ಲ. ಹೊಸ ಚಿಗುರು ಬರದೇ ಬೇರು ಅದೆಷ್ಟೇ ಬಲಿಷ್ಟವಾಗಿದ್ದರೂ ಅಂದುಕೊಂಡ ಬೆಳವಣಿಗೆ ಸಾಧ್ಯವಿಲ್ಲ. ಇದೆಲ್ಲವನ್ನೂ ಮನಗಂಡೇ ರಂಗಸಂಪದವು ತನ್ನ ಸುವರ್ಣ ಸಂಭ್ರಮದ ನೆಪದಲ್ಲಿ ಮತ್ತೆ ಹೊಸ  ನಾಟಕವೊಂದನ್ನು ನಿರ್ಮಿಸಿದೆ

ರಂಗಸಂಪದದ ‘ಲೋಕದ ಒಳಹೊರಗೆ’ ನಾಟಕದ ಪೋಟೋ

ರಂಗಸಂಪದದವರ ಮನವಿಯ ಮೇರೆಗೆ ದನಿವರಿಯದ ಕ್ರಿಯಾಶೀಲ ನಿರ್ದೇಶಕ ಬಿ.ಸುರೇಶರವರು ಬರೆದು ನಿರ್ದೇಶಿಸಿದ "ಲೋಕದ ಒಳಹೊರಗೆ" ನಾಟಕವನ್ನು ನಿರ್ಮಿಸಲಾಗಿದ್ದು ಆಗಸ್ಟ್ 26 ಮತ್ತು 27 ರಂದು ಕಲಾಗ್ರಾಮದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಗಳಿಸಿದೆ. ನಾಟಕದ ವಿಶೇಷತೆ ಏನೆಂದರೆ ಇದು ಬಿ.ಸುರೇಶರವರು ರಚಿಸಿದ 25 ನೇ ನಾಟಕ ಹಾಗೂ ನಿರ್ದೇಶಿಸಿದ 50 ನೇ ರಂಗಪ್ರಯೋಗ. ಸುರೇಶರವರ 60 ನೇ ವರ್ಷದ ಜನುಮ ದಿನದಂದು ಪ್ರದರ್ಶನಗೊಳ್ಳುತ್ತಿದೆ ಹಾಗೂ ರಂಗ ಸಂಪದಕ್ಕೆ 50 ವರ್ಷ ತುಂಬಿದೆ. ಎಲ್ಲಾ ಕಾರಣಗಳಿಗಾಗಿ ಪ್ರದರ್ಶನ ಸ್ಮರಣೀಯವೆನ್ನಿಸುತ್ತದೆ.

ಪ್ರೊಡಕ್ಷನ್ ವಿಷಯ ಅಂತಾ ಬಂದರೆ ರಂಗಸಂಪದ ರಾಜಿರಹಿತವಾಗಿ ತನ್ನ ವೃತ್ತಿಪರತೆಗೆ ಬದ್ದವಾಗಿರುತ್ತದೆ. ಹೊಸ ನಾಟಕದ ಪ್ರೊಡಕ್ಷನ್ ಕಾಸ್ಟ್ ಎರಡೂವರೆ ಲಕ್ಷ ರೂಪಾಯಿಗಳು. ಕೆಲವೊಂದಿಷ್ಟನ್ನು ದಾನಿಗಳಿಂದ ಹಣ ಸಂಗ್ರಹಿಸಿ, ಇನ್ನೊಂದಿಷ್ಟನ್ನು ರಂಗಸಂಪದದವರೇ ಕೈಯಿಂದ ಹಣ ಹಾಕಿ, ಮತ್ತೊಂದಿಷ್ಟನ್ನು ಉದರಿ ಸಾಲ ಹೇಳಿ ಅತ್ಯುತ್ತಮ ನಾಟಕವನ್ನು ನಿರ್ಮಿಸಲಾಗಿದೆ. ಸಲ ಚಡ್ಡಿ ನಾಗೇಶರವರು ನಾಟಕದ ಸಂಘಟನೆಯ ಮುಖ್ಯ ಹೊಣೆಯನ್ನು ಹೊತ್ತು ನಿಭಾಯಿಸಿದ್ದು ಉಳಿದೆಲ್ಲಾ ರಂಗಸಂಪದಿಗರೂ ತಮ್ಮ ಕೈಲಾದಷ್ಟು ಕೈಗೂಡಿಸಿದ್ದಾರೆ. ಜೊತೆಗೆ ನಾಟಕದ ಎಲ್ಲಾ ಕಲಾವಿದರೂ ಯುವಕ ಯುವತಿಯರು. ಹಿನ್ನೆಲೆ ಸಂಗೀತದಿಂದ ಹಿಡಿದು ಬೆಳಕಿನ ವಿನ್ಯಾಸದ ವರೆಗೆ ತೊಡಗಿಸಿಕೊಂಡವರು ಯುವರಂಗಕರ್ಮಿಗಳು. ರಂಗತಂಡವೊಂದು ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯಬೇಕೆಂದರೆ ಹೀಗೆ ಹೊಸಬರನ್ನು ಸೇರಿಸಿಕೊಂಡು ಮುಂದುವರೆಯಬೇಕಾಗುತ್ತದೆ. ಹಿರಿಯರು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಯುವರಂಗಕರ್ಮಿಗಳಿಗೆ ದಾರೆ ಎರೆದುಕೊಟ್ಟು ರಂಗಬದ್ದತೆ ಹಾಗೂ ವೃತ್ತಿಪರತೆ ಜೊತೆಗೆ ಸಂಘಟನಾತ್ಮಕ ತಂತ್ರಗಾರಿಕೆಯನ್ನು ಕಲಿಸಿಕೊಡಬೇಕಿದೆ. ರಂಗಾಸಕ್ತ ಯುವಪ್ರತಿಭೆಗಳನ್ನು ಗುರುತಿಸಿ ತರಬೇತುಗೊಳಿಸಿ ಹೊಣೆಗಾರಿಕೆ ವಹಿಸಿಕೊಟ್ಟು ರಂಗಕಾಯಕ ಮುಂದುವರೆಯುವಂತೆ ನೋಡಿಕೊಳ್ಳಬೇಕಿದೆ. ನಿಟ್ಟಿನಲ್ಲೂ ರಂಗಸಂಪದ ಹೊಸ ನಾಟಕ ನಿರ್ಮಿಸಿ ಯುವಕರಿಗೆ ಆದ್ಯತೆಕೊಟ್ಟು ತನ್ನ ಪರಂಪರೆಯನ್ನು ಮುಂದುವರೆಸಿದ್ದು ನಿಜಕ್ಕೂ ಅಭಿನಂದನೀಯ. ಇನ್ನೂ ಐವತ್ತು ವರ್ಷ ರಂಗಸಂಪದದ ರಂಗ ಕಾಯಕ ಯುವಕರ ನಾಯಕತ್ವ ಹಾಗೂ ಭಾಗಿದಾರಿಕೆಯಲ್ಲಿ ನಿರಂತರವಾಗಿ ಸಾಗಲಿ. ರಂಗಭೂಮಿ ಇತಿಹಾಸದಲ್ಲಿ ಇನ್ನೂ ದಾಖಲಾರ್ಹ ಕೆಲಸಗಳನ್ನು ಮಾಡಲಿ. ಮುಂದಿನ ತಲೆಮಾರಿನ ರಂಗತಂಡಗಳಿಗೆಲ್ಲಾ ಮಾದರಿಯಾಗಲಿ ಎಂದು ಹಾರೈಸಬಹುದಾಗಿದೆ

 -ಶಶಿಕಾಂತ ಯಡಹಳ್ಳಿ