ಬುಧವಾರ, ಆಗಸ್ಟ್ 30, 2023

ರಂಗಸಂಪದ ಸುವರ್ಣ ಸಂಭ್ರಮದಲ್ಲಿ 'ಲೋಕದ ಒಳಹೊರಗೆ

(ರಂಗಪ್ರಯೋಗ ವಿಮರ್ಶೆ)

 


ನಿಜಾ ಹೇಳ್ತೇನೆ, ಪ್ರಸ್ತುತ ಕಾಲಘಟ್ಟದಲ್ಲಿ ಲೋಕದ ಒಳಹೊರಗೆ ಅಸಹನೆ ಅತಿಯಾಗಿದೆ, ಮತೀಯ ದ್ವೇಷ ಮಿತಿಮೀರಿದೆ, ದೇಶಪ್ರೇಮದ ಹೆಸರಲ್ಲಿ ನಕಲಿ ದೇಶಭಕ್ತರ ದಾಂಗುಡಿ ಹೆಚ್ಚಾಗಿದೆ. ರೀತಿಯ ಪ್ರಕ್ಷುಬ್ಧ ಸಮಕಾಲೀನ ಅನಪೇಕ್ಷಿತ ವಿದ್ಯಮಾನಗಳನ್ನು   ಐತಿಹಾಸಿಕ ಎನ್ನಬಹುದಾದ ಪಾತ್ರ ಸನ್ನಿವೇಶಗಳ ಮೂಲಕ ಅನಾವರಣಗೊಳಿಸುವ ದಿಟ್ಟ ಪ್ರಯತ್ನವನ್ನು ಗಟ್ಟಿಯಾದ ದ್ವನಿಯಲ್ಲಿ ಬಿ.ಸುರೇಶರವರ ನಿರ್ದೇಶನದ "ಲೋಕದ ಒಳಹೊರಗೆ" ನಾಟಕ ಮಾಡಿದೆ

ಕನ್ನಡ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆಯನ್ನಿತ್ತ "ರಂಗಸಂಪದ" ರಂಗತಂಡದ ಸುವರ್ಣ ಸಂಭ್ರಮದ ಸ್ಮರಣೀಯ ಸಂದರ್ಭದಲ್ಲಿ ಬಿ.ಸುರೇಶರವರು ರವೀಂದ್ರನಾಥ ಟಾಗೋರ್ ರವರ "ಘರೇಬೈರೇ" ಕಾದಂಬರಿಯನ್ನಾಧರಿಸಿ ರಚಿಸಿ ನಿರ್ದೇಶಿಸಿದ " ಲೋಕದ ಒಳಹೊರಗೆ" ರಂಗಪ್ರಯೋಗವು 2023 ಆಗಸ್ಟ್ 26 ಮತ್ತು 27 ರಂದು ಮಲ್ಲತ್ತಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಪಡೆಯಿತು.



ನಿಜ ಹೇಳಬೇಕೆಂದರೆ ರವೀಂದ್ರನಾಥರು 1905ರಲ್ಲಿ ಆದ ಬಾಂಗ್ಲಾ ವಿಭಜನೆಯ ವಿರುದ್ದವಾಗಿ ನಡೆದ ಸ್ವದೇಶಿ ಆಂದೋಲನದಲ್ಲಾದ ಅತಿರೇಕಗಳ ಕುರಿತಂತೆ ಬರೆದ "ಘರೇಬೈರೇ" ಕಾದಂಬರಿ ಪ್ರಕಟವಾಗಿ ಸರಿಯಾಗಿ ನೂರು ವರ್ಷವಾಗಿದೆ. ಒಂದು ಶತಮಾನದಲ್ಲಿ ಅನೇಕಾನೇಕ ರಾಜಕೀಯ ಸಾಮಾಜಿಕ ಬದಲಾವಣೆಗಳಾಗಿವೆ. ಆದರೆ ದೇಶಭಕ್ತಿಯ ಹೆಸರಲ್ಲಿ ಆಗ ಬಾಂಗ್ಲಾದಲ್ಲಿ ವಿಜ್ರಂಭಿಸಿದ ವಿಭಜಕ ಶಕ್ತಿಗಳು ಈಗಲೂ ಬೇರೆ ರೂಪದಲ್ಲಿ ದೇಶದ ಸಾಮರಸ್ಯ ಸಹಬಾಳ್ವೆ ಹಾಗೂ ನೆಮ್ಮದಿಯನ್ನು ದ್ವೇಷದ ಬೆಂಕಿಯಲ್ಲಿ ಸುಡುತ್ತಿವೆ. ಮಾನವೀಯತೆ ಮತ್ತು ಮತಾಂಧತೆಯ ನಡುವಿನ ಸಮರ ಈಗ ದೇಶದಾದ್ಯಂತ ಜಾರಿಯಲ್ಲಿದೆ. ಅಗಿನಂತೆ ಈಗಲೂ ದೇಶಭಕ್ತಿ, ಒಂದೇ ಮಾತರಂ ಹೆಸರಿನಲ್ಲಿ ದ್ವೇಷ ಹಿಂಸೆ ತಾಂಡವವಾಡುತ್ತಿದೆ. ಆಗ ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳೂ ವಿಜ್ರಂಭಿಸಿದ್ದರೆ ಈಗ ನಕಲಿ ರಾಷ್ಟ್ರವಾದದ ಹೆಸರಲ್ಲಿ ಹಿಂದುತ್ವಶಾಹಿ ಕೋಮುವ್ಯಾಧಿ ಶಕ್ತಿಗಳು ಮೇಲುಗೈ ಸಾಧಿಸಿವೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ನಾಟಕ ಅತ್ಯಂತ ಸಮಕಾಲೀನವೂ ಸಕಾಲಿಕವೂ ಹಾಗೂ ಸಮಯೋಚಿತವೂ ಆಗಿದೆ. ದೇಶವಾಸಿಗಳನ್ನು ದೇಶಭಕ್ತಿಯ ಭ್ರಮೆಯಲ್ಲಿ ಮುಳುಗಿಸಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸ ಬಯಸುವ ನಾಯಕತ್ವದ ವಿಕೃತತೆಯ ಒಳಹೊರಗನ್ನು ಪರೋಕ್ಷವಾಗಿ ನಾಟಕ ತೆರೆದಿಡುವಂತಿದೆ

ಇಡೀ ನಾಟಕದಲ್ಲಿರೋದು ಮೂರೇ ಪ್ರಮುಖ ಪಾತ್ರಗಳು. ಒಂದು ಹೆಣ್ಣು ಮತ್ತು ಎರಡು ಗಂಡು. ನಾಟಕದ ನಾಯಕ  ಸಿದ್ಧಾರ್ಥ ಮಾನವೀಯತೆಯ ಪ್ರತೀಕವಾದರೆ, ಅದಕ್ಕೆ ತದ್ವಿರುದ್ದವಾಗಿರುವ ಇಂದ್ರಜಿತ್   ಭಾಷಣದ ಮೂಲಕ ಭ್ರಮೆಗಳನ್ನು ಬಿತ್ತಿ ತನ್ನ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಖಳನಾಯಕ. ಇಬ್ಬರು ಬಾಲ್ಯದ ಗೆಳೆಯರ ನಡುವೆ ಸಿದ್ಧಾರ್ಥ್ ಪತ್ನಿ ಶಾರದೆ ಅನುಭವಿಸುವ ಒಳಹೊರಗಿನ ಸಂಘರ್ಷವೇ ಇಡೀ ನಾಟಕದ ಕಥಾವಸ್ತು. ವಿದೇಶದಲ್ಲಿ ಓದಿ ಬಂದ ಠಾಕೂರ ವಂಶಸ್ತ ಶ್ರೀಮಂತ ವ್ಯಕ್ತಿ ಸಿದ್ಧಾರ್ಥ್ ತನ್ನ ಸ್ವಂತ ಹಣದಿಂದ ಮಕ್ಕಳಿಗೆ ಶಿಕ್ಷಣಕ್ಕಾಗಿ ಶಾಲೆ, ಬಡವರ ಬದುಕು ಬೆಳಗಲು ಬ್ಯಾಂಕು, ಉದ್ಯೋಗ ಸೃಷ್ಟಿಸಲು ಬಟ್ಟೆ ಕಾರ್ಖಾನೆ ಆರಂಭಿಸಿ ಜನಹಿತದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾನೆ. ಆದರೆ ಮಾತನ್ನೇ ಬಂಡವಾಳ ಮಾಡಿಕೊಂಡ ಇಂದ್ರಜಿತ್ ಸ್ವದೇಶಿ ಚಳುವಳಿಯ ಹೆಸರಲ್ಲಿ ಓದುವ ಮಕ್ಕಳನ್ನೂ ಶಾಲೆ ಬಿಡಿಸಿ ಅಂಗಡಿಗಳನ್ನು ಲೂಟಿ ಮಾಡಿಸಿ ವಿದೇಶಿ ಬಟ್ಟೆಗಳನ್ನು ಬೀದಿಯಲ್ಲಿ ಸುಡಲು ಪ್ರಚೋದಿಸುತ್ತಾನೆ. ಹಣಕ್ಕಾಗಿ ಬ್ಯಾಂಕ್ ಲೂಟಿ ಮಾಡಲೂ ಪ್ರೇರೇಪಿಸುತ್ತಾನೆ. ಗೆಳೆಯ ಸಿದ್ದಾರ್ಥನ ಔದಾರ್ಯವನ್ನು ದುರುಪಯೋಗಪಡಿಸಿಕೊಂಡು ಆತನ ಪತ್ನಿಯನ್ನೇ ಪಡೆಯಲು ದೇಶಭಕ್ತಿಯ ಭ್ರಮೆಯನ್ನೇ ಆಯುಧವಾಗಿ ಬಳಸುತ್ತಾನೆ. ಅಕೆಯಿಂದಲೂ ಹಣ ಪಡೆಯಲು ಪ್ರಯತ್ನಿಸುತ್ತಾನೆ. ಸಿದ್ದಾರ್ಥನ ವಿರುದ್ದ ಅಪಪ್ರಚಾರ ಮಾಡಿ ಜನರನ್ನು ಆತನ ವಿರುದ್ದ ಎತ್ತಿಕಟ್ಟುತ್ತಾನೆ. ಇಂದ್ರಜಿತ್ ಹುಟ್ಟಿಸಿದ ಭ್ರಮೆಯಿಂದ ಮುನ್ನ ಎನ್ನುವ ಯುವಕ ಹೊರಬಂದು ಆತನ ವಿರುದ್ದ ತಿರುಗಿಬೀಳಲು ಶಾರದಳ ಮಮತೆ ಕಾರಣವಾಗುತ್ತದೆ. ಕೊನೆಗೂ ಇಂದ್ರಜಿತನ ದುಷ್ಕೃತ್ಯಗಳ ಬಗ್ಗೆ ಜನರಿಗೆ ಅರಿವಾಗಿ ಆತನನ್ನು ಸಾಯಿಸಲು ಮುನ್ನುಗ್ಗುತ್ತಾರೆ. ಅದನ್ನು ತಡೆಯಲು ಹೋದ ಸಿದ್ದಾರ್ಥ ಬಲಿಯಾಗುತ್ತಾನೆ. ಇಂದ್ರಜಿತ್ ಹಿಡಿತದಿಂದ, ಆತ ಸೃಷ್ಟಿಸಿದ ಭ್ರಮೆಗಳಿಂದ ಬಿಡುಗಡೆ ಬಯಸಿದ ಶಾರದೆ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುತ್ತಾಳೆಸಾಯದೇ ಉಳಿದ ಇಂದ್ರಜಿತ್ ವಿಜ್ರಂಭಿಸುತ್ತಾನೆ. ಇಲ್ಲಿಗೆ ನಾಟಕ ಮುಗಿಯುತ್ತದೆಯಾದರೂ ನೋಡಿದವರ ಅಂತರಾಳದ ಒಳಹೊರಗನ್ನು ಇನ್ನಿಲ್ಲದಂತೆ ಕಾಡುತ್ತದೆ



ನಾಟಕದ ಮೂಲ ಆಶಯವೇ ಬಿಡುಗಡೆ. ವಿಕೃತ ವಿಭಜಕ ಶಕ್ತಿಗಳಿಂದ ಬಿಡುಗಡೆ, ಅಂಧಭಕ್ತಿ ಸೃಷ್ಟಿಸುವ ಭ್ರಮೆಗಳಿಂದ ಬಿಡುಗಡೆ. ಸುಳ್ಳುಗಳಿಂದ ಬಿಡುಗಡೆ. ದ್ವೇಷ ಸೇಡು ಅಸೂಯೆಗಳಿಂದ ಬಿಡುಗಡೆ. ಇಂತಹ ಬಿಡುಗಡೆಯನ್ನು ಭಾರತಮಾತೆ ಅಪೇಕ್ಷಿಸುತ್ತಿದ್ದಾಳೆ. ಹೀಗೆ ಬಿಡುಗಡೆ ಬಯಸುವ ಭಾರತಮಾತೆಯ ರೂಪಕವಾಗಿದ್ದಾಳೆ ನಾಟಕದ ಕೇಂದ್ರಬಿಂದು ಶಾರದೆ. ಕೇಂದ್ರಪಾತ್ರದ ಸುತ್ತ ಪರೀಧಿಯಲ್ಲಿ ಭಾರತಮಾತೆಯ ರಕ್ಷಣೆ ಮತ್ತು ವಿಭಜನೆಯಲ್ಲಿ ಇನ್ನೆರಡು ಪಾತ್ರಗಳು ಪರಿಭ್ರಮಿಸುತ್ತವೆ.

ನಾಟಕದಾದ್ಯಂತ ಬೆಂಕಿ ಎಂಬುದು ಪಾತ್ರವಲ್ಲದ ಪಾತ್ರವಾಗಿ ವಿಜ್ರಂಭಿಸಿದೆ. ಜನರಲ್ಲಿ  ಭ್ರಮೆಗಳನ್ನು ಬಿತ್ತಿ ದ್ವೇಷ ಬೆಳೆಸುವ ಹುಚ್ಚು ನಾಯಕತ್ವ ಹಚ್ಚುವ ಬೆಂಕಿ ನಾಟಕದಾದ್ಯಂತ    ವಿದ್ವಂಸಕತೆಗೆ ಸಂಕೇತವಾಗಿ ಮೂಡಿಬಂದಿದೆ. ಬೆಂಕಿ ಕೇವಲ ಹೊರಗನ್ನು ಮಾತ್ರವಲ್ಲ ಒಳಗನ್ನೂ ಬೇಯಿಸುವ ಸುಡುವಾಗ್ನಿಯಾಗಿದೆ. ಮತಾಂಧತೆಗೆ, ಭ್ರಮಾಂಧತೆಗೆ, ಸೇಡಿಗೆ, ಸಂದೇಹಕ್ಕೆ ರೂಪಕವಾಗಿ ಮೂಡಿಬಂದಿದೆ. ಬೆಂಕಿಯಿಂದಾಗುವ ದುಷ್ಪರಿಣಾಮಗಳು ಲೋಕದ ಒಳಹೊರಗೆ ಪರಿಣಾಮಕಾರಿಯಾಗಿ ಮೂಡಿಬಂದಿವೆ

ಭಾರತ ಮಾತೆಯಾಣೆಯಾಗೂ ನಿಜ ಹೇಳ್ತೇನೆ. ನಾಟಕದ ಪ್ರೊಡಕ್ಷನ್ ಕ್ಲಾಸಿಕ್ ಆಗಿದೆ, ಶ್ರೀಮಂತವಾಗಿದೆ, ಎಲ್ಲಾ ವಿಭಾಗಗಳಲ್ಲೂ ವೃತ್ತಿಪರತೆಯನ್ನು ಕಾಪಾಡಿಕೊಳ್ಳಲಾಗಿದೆ. ಬಂಗಾಲಿ ಶ್ರೀಮಂತ ಠಾಕೂರ್ ಕುಟುಂಬದ ಮನೆಯನ್ನು ಪ್ರತಿಬಿಂಬಿಸುವ ರಿಯಾಲಿಸ್ಟಿಕ್ ರಂಗ ವಿನ್ಯಾಸ ಆಕರ್ಷಣೀಯವಾಗಿದೆ. ರಂಗವೇದಿಕೆ ಚಿಕ್ಕದಾಗಿರುವುದರಿಂದಲೋ ಅಥವಾ ರಂಗಪರಿಕರಗಳು ಹೆಚ್ಚಾಗಿರುವುದರಿಂದಲೋ ನಟರುಗಳ ಚಲನೆ ಸರಾಗವಾಗಲು ಅಡೆತಡೆ ಸೃಷ್ಟಿಯಾಗಿತ್ತು. ಆದರೂ ಇಕ್ಕಟ್ಟಿನ ಸ್ಥಳಾವಕಾಶದಲ್ಲೂ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗದಂತೆ ಯುವ ಕಲಾವಿದರು ಪ್ರಯತ್ನಿಸಿ ಸಫಲರಾದರು. ನಿರ್ದೇಶಕರು ಅಳವಡಿಸಿದ ರಂಗತಂತ್ರಗಳು ವಿಶಿಷ್ಟವಾಗಿದ್ದವು. ಬ್ಲಾಕಿಂಗ್ ಹಾಗೂ ಮೂವ್ಮೆಂಟಗಳು ಚಲನಶೀಲತೆಗೆ ಸಾಕ್ಷಿಯಾದವು. ಬಿಳಿ ಪರದೆ ಬಳಸಿದ್ದು, ಗುಂಪು ಸಂಯೋಜನೆ ಮಾಡಿದ್ದು ನಿರ್ದೇಶಕರ ಅನುಭವಕ್ಕೆ ಪುರಾವೆಯಾಗಿವೆ. ನಾಟಕದ ಪ್ರಮುಖ ರೂಪಕವಾದ ಬೆಂಕಿಯನ್ನು ಮನೆಯ ಪ್ರತಿ ದಿಕ್ಕುಗಳಲ್ಲೂ ಸೃಷ್ಟಿಸಿದ ರೀತಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಬೆಂಕಿಜ್ವಾಲೆಯ ಎಪೆಕ್ಟ್ ಸಿಂಕ್ ಮಾಡಿದ್ದನ್ನು ನೋಡಿಯೇ ಅನುಭವಿಸಬೇಕು. ಜೊತೆಗೆ ನಾಟಕದ ಪಾತ್ರಗಳ ಭಾವತೀವ್ರತೆಯನ್ನು ಪ್ರೇಕ್ಷಕರೆದೆಗೆ ತಲುಪಿಸಲು ಮೇಳದ ಮೂಲಕ ಬಳಸಲಾದ ಹಾಡು, ಹಿನ್ನೆಲೆ ಸಂಗೀತ, ಆಲಾಪ ಹಮ್ಮಿಂಗ್ ಗಳು ಹಾಗೂ ಚಂಡೆ ಮದ್ದಲೆ ನಾದಗಳು ಅನನ್ಯವಾಗಿ ಮೂಡಿಬಂದಿವೆ. ಅಕ್ಷರ ವೇಣುಗೋಪಾಲರವರ ಬೆಳಕಿನ ವಿನ್ಯಾಸ ನಾಟಕದ ಇನ್ನೊಂದು ಹೈಲೈಟ್. ಇರುವ ಸೀನ್ ಸ್ಪೇಸ್ ನ್ನು ಬೆಳಕಿನ ಮೂಲಕ ವಿಭಜನೆ ಮಾಡಿ ಪ್ರೇಕ್ಷಕರ ಗಮನ ಅತ್ತಿತ್ತ ಕದಲದೇ ಪಾತ್ರಗಳ ಮೇಲೆ ಕೇಂದ್ರೀಕರಣವಾಗುವಂತೆ ಮಾಡುವಲ್ಲಿ ಬೆಳಕಿನ ವಿನ್ಯಾಸ ಸಫಲವಾಗಿದೆ. ರಾಮಕೃಷ್ಣ ಬೆಳ್ತೂರರು ವಸ್ತ್ರವಿನ್ಯಾಸದಲ್ಲಿ ಇನ್ನೂ ಸ್ವಲ್ಪ ಜಾಗ್ರತೆ ವಹಿಸಬೇಕಿತ್ತು. ಮುಖ್ಯವಾಗಿ ಶಾರದಾ ಪಾತ್ರಧಾರಿಯ ಕಾಸ್ಟೂಮ್ ಬೆಂಗಾಳಿ ಸಂಸ್ಕೃತಿಗೆ ಪೂರಕವಾಗಿರಬೇಕಿದ್ದರೆ ಚೆನ್ನಾಗಿತ್ತು.



ಬೌದ್ದಿಕ ವೈಚಾರಿಕ ನಾಟಕವನ್ನು ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯುವ ಕಲಾವಿದರ ಕೊಡುಗೆ ಅಪಾರ. ಶಾರದೆಯಾಗಿ ರಚನಾರವರು ಮಾತುಗಳ ನಡುವೆ ಪಾಜ್ ಗಳನ್ನು ಬಳಸಿದ್ದರೆ ಮಾತುಗಳ ವೇಗವನ್ನು ನಿಯಂತ್ರಿಸಬಹುದಾಗಿತ್ರು. ಆದರೂ ಅವರು ಸೃಜಿಸಿದ ಭಾವತೀವ್ರತೆ ನೋಡುಗರ ಅಂತರಂಗಕ್ಕೆ ತಲುಪಿತು. ಸಿದ್ದಾರ್ಥನಾಗಿ ಅನೂಪ್ ರಾಮಮೂರ್ತಿಯವರ ಅಭಿನಯ ಬಹುಕಾಲ ನೆನಪಿನಲ್ಲಿರುವಂತಹುದು. ಖಳನಾಯಕನ ಪಾತ್ರದಲ್ಲಿ ಇಂದ್ರಜಿತ್ ನಾಗಿ ಧನುಷ್ ವಿಜ್ರಂಭಿಸಿದ್ದಾರೆ. ಬಹುತೇಕ ಎಲ್ಲಾ ನಟ ನಟಿಯರೂ ತಮ್ಮ ಪಾತ್ರಕ್ಕೆ ನ್ಯಾಯವದಗಿಸಿದ್ದು ಹೊಸ ತಲೆಮಾರಿನ ನಟರಿಗೆ ವೇದಿಕೆಯನ್ನು ಒದಗಿಸಿದ ರಂಗಸಂಪದ ಮಾದರಿ ಕೆಲಸ ಮಾಡಿದೆ, ರಂಗಸಂಪದದ ಹಿರಿಯ ರಂಗಕರ್ಮಿಗಳು ನೇಪತ್ಯದಲಿ ನಿಂತು ತಮ್ಮ ಉತ್ತರಾಧಿಕಾರಿಗಳನ್ನು ಬೆಳೆಸುವ ಕಾರ್ಯ ಮಾಡಿದ್ದು ಸ್ತುತ್ತಾರ್ಹ.

ಬಿ.ಸುರೇಶರವರು ನಾಟಕದಲ್ಲಿ ಬರೆದು ಬಳಸಿಕೊಂಡ ಕಾವ್ಯಾತ್ಮಕ ಸಂಭಾಷಣೆ ಹಾಗೂ ಪ್ರಸ್ತುತ ಪಡಿಸಿದ ರೀತಿ ನಾಟಕವನ್ನು ದೃಶ್ಯಕಾವ್ಯವನ್ನಾಗಿಸಿದೆ. "ನಾನು ಸಮುದ್ರ ಇದ್ದ ಹಾಗೆ, ನಿರಂತರವಾಗಿ ಅಲೆಯಂತೆ ಬಡಿಯುತ್ತಲೇ ಇರುತ್ತೇನೆ. ಬೇಕಾದದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತೇನೆ, ಬೇಡವಾದದ್ದನ್ನು ಹೊರಗೆ ತಂದು ಬಿಸಾಕುತ್ತೇನೆ" ಎಂದು ಖಳನಾಯಕನ ಬಾಯಲ್ಲಿ ಹೇಳುವ ರೂಪಕಮಯ ಸಂಭಾಷಣೆಯಂತಹ ಹಲವಾರು ಪ್ರತಿಮಾತ್ಮಕ ಮಾತುಗಳ ಬಳಕೆ ನಾಟಕದ ಯಶಸ್ಸಿನಲ್ಲಿ ಪಾಲುಕೇಳುತ್ತವೆ.

ನಾಟಕ ಒಂದು ಕುಟುಂಬದ ಒಳಹೊರಗನ್ನು ತೋರಿಸುವ  ಜೊತೆಗೇ ಇಡೀ ದೇಶದ ಒಳಹೊರಗನ್ನೂ ತೆರೆದಿಡುತ್ತದೆ. ಎಡ ಮತ್ತು ಬಲ ಸಿದ್ದಾಂತಗಳ ನಡುವೆಗಾಂಧಿವಾದ ಮತ್ತು ಹಿಂದುತ್ವವಾದಗಳ ನಡುವೆ, ಮಾನವೀಯತೆ ಮತ್ತು ಮನುವಾದಗಳ ನಡುವೆ, ನಿಜ ದೇಶಪ್ರೇಮ ಮತ್ತು ನಕಲಿ ದೇಶಭಕ್ತಿಗಳ ನಡುವೆ ನಡೆಯುವ ಸಂಘರ್ಷಗಳನ್ನು ನಾಟಕದಾದ್ಯಂತ ನೋಡಬಹುದಾಗಿದೆ. ಬಹುತೇಕ ಕಥಾನಕಗಳಲ್ಲಿ ಒಳಿತಿಗೆ ಜಯವೂ, ಕೆಡುಕಿಗೆ ಸಾವೂ ಆಗುವುದು ಸರ್ವೇಸಾಮಾನ್ಯ. ಆದರೆ ವಾಸ್ತವ ಹಾಗಿಲ್ಲವಲ್ಲ. ಪ್ರಸ್ತುತ ದೇಶದ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಮತೀಯ ಶಕ್ತಿಗಳೇ ತಾಂಡವವಾಡುತ್ತಿರುವುದು ಅಲ್ಲಗಳೆಯಲಾಗದ ವಾಸ್ತವ. ಮಾನವೀಯತೆಗೆ ಹಿನ್ನೆಡೆಯಾಗುತ್ತಿರುವುದೂ ನಿಜ. ದೇಶ ಕಾಲ ಯಾವುದೇ ಇರಲಿ ಹಿಂಸಾತ್ಮಕ ದುಷ್ಟಶಕ್ತಿಗಳು ಅನೇಕಾನೇಕ ರೂಪದಲ್ಲಿ ಹುಟ್ಟಿ ಬರುತ್ತಲೇ ಇರುತ್ತವೆ, ಸಮಾನತೆಗೆ, ಮಾನವೀಯತೆಗೆ ಸವಾಲು ಒಡ್ಡುತ್ತಲೇ ಇರುತ್ತವೆ. ಆದರ್ಶದ ಕಥೆಗಳಲ್ಲಿ ಒಳಿತಿಗೆ ಗೆಲುವಾದರೂ ವಾಸ್ತವದಲ್ಲಿ ಕೇಡಿಗೇ ಗೆಲುವಾಗುವುದು ವಿಷಾದನೀಯ. ಇದನ್ನೇ ಬಿ.ಸುರೇಶರವರು ನಾಟಕದಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಸ್ತುತಪಡಿಸಿದ್ದಾರೆ. ನಾಟಕದ ಕೊನೆಗೆ ಹತ್ತಾರು ವಿಕ್ಷಿಪ್ತ ಮುಖಗಳೊಂದಿಗೆ ಪ್ರತ್ಯಕ್ಷವಾಗುವ ಇಂದ್ರಜಿತ್  "ಹರಿವ ನದಿಗೆ ಮೈಯೆಲ್ಲಾ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ, ಸುಳ್ಳಿಗೆ ಸೋಲುವ ಜನ ಇರುವವರೆಗೆ, ಸಾವಿಲ್ಲ ರಕ್ತಬೀಜಾಸುರನ ಸಂತತಿಗೆ" ಎಂದು ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯವಾಗಿದೆ. ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ, ಹಿಂಸೆ ಮತ್ತು ಅಹಿಂಸೆಯ ಮಧ್ಯದ ಕದನ ಮನುಕುಲ ಇರುವವರೆಗೂ ಇರುವಂತಹುದು. ಸತ್ಯದ ಗೆಲುವಿಗಾಗಿ, ಅಹಿಂಸೆಯ ಸ್ಥಾಪನೆಗಾಗಿ ನಡೆಯುವ ಹೋರಾಟವೂ ನಿರಂತರವಾದದ್ದು. ಸುಳ್ಳನ್ನು, ಮನುವಾದವನ್ನು, ಮತಾಂಧತೆಯನ್ನು ಸೋಲಿಸುವ ಬೀಜಮಂತ್ರವನ್ನೂ ಸಹ ನಾಟಕದ ಅಂತ್ಯಕ್ಕೆ ಮೇಳದ ಹಾಡಿನ ಮೂಲಕ ಹೇಳಿದ್ದು ನಿರಾಸೆಯ ಕಡಲಲ್ಲಿ ಕಂಗಾಲಾದ ಜನರಿಗೆ ಆಸೆಯ ಹಾಯದೋಣಿಯಂತಿದೆ. ನಿದ್ದೆ ಕಳೆದೆದ್ದ ಜನರನು ಕೈಹಿಡಿದು ನಡೆಸುವ ಗುರುವಿನ ನಿರೀಕ್ಷೆ ಹಾಡಿನ ಅಂತ್ಯದಲ್ಲಿದೆ. ಅದೇನೆಂದರೆ..

ಎಲ್ಲಿ ಭಯವು ಇಲ್ಲದೇ ತಲೆ ಎತ್ತಿ ನಿಲಬಹುದೋ

ಎಲ್ಲಿ ಸಣ್ಣತನದ ಗೋಡೆಗಳು ಸಮಾಜವನ್ನು ಛಿದ್ರವಾಗಿಸಿಲ್ಲವೋ....

ಎಲ್ಲಿ ಶುದ್ದನೀರಿನ ಝರಿಯು ಮುಗ್ಗುಲು ಹಿಡಿದ ಸಂಪ್ರದಾಯಸ್ತರಿಂದ ಕೊಳಕಾಗಿಲ್ಲವೋ

ಎಲ್ಲಿ ಸದಾ ಎಲ್ಲವನ್ನೂ ಒಳಗೊಳ್ಳುವ ಚಿಂತನೆಯನ್ನು ಮನಸುಗಳು ನಡೆಸುವವೋ

 ಅಲ್ಲಿಗೆ.. ಅಂತಹ ಸಗ್ಗದ ನೆಲಕೆ  ಗುರುವೇ

ನಿದ್ದೆ ಕಳೆದೆದ್ದ ನನ್ನ ಜನರನು ಕೈ ಹಿಡಿದು ನಡೆಸು

 - ಶಶಿಕಾಂತ ಯಡಹಳ್ಳಿ

photo curtasy  Thai Lokesh

 








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ