ಅಕ್ಷರ ಜಾತ್ರೆಯಲ್ಲಿ ರಂಗಕಲೆಗಿಲ್ಲ ಬೆಲೆ :
‘ಗೊಮ್ಮಟನಗರಿ ಶ್ರವಣಬೆಳಗೊಳದಲ್ಲಿ 81ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂಬ ಮೂರುವರೆ ದಿನಗಳ ಅದ್ದೂರಿ ಅಕ್ಷರ ಜಾತ್ರೆ (ಜನವರಿ 31, ಫೆಬ್ರುವರಿ 1, 2, 3 ) ಯಶಸ್ವಿಯಾಗಿ ಸಂಪನ್ನಗೊಂಡಿತು’ ಎಂದು ಮಾಧ್ಯಮಗಳು ಭಾಷ್ಯ ಬರೆದವು. ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಖಡ್ಡಾಯದ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಮೌಢ್ಯ ವಿರೋಧಿ ಕಾನೂನು ಅನುಷ್ಟಾನದ ಕುರಿತ ಒತ್ತಾಯ ವಿಚಾರಗೋಷ್ಠಿಗಳಲ್ಲಿ ಪ್ರತಿದ್ವನಿಸಿತು. ಜಾತ್ರೆ ಎಂದ ಮೇಲೆ ಜನ ಬರದಿದ್ದರೆ ಹೇಗೆ? ಹಿರಿ, ಮರಿ, ಕಿರಿ ಹಾಗೂ ಕಿರಿಕಿರಿ ಸಾಹಿತಿಗಳು, ಕವಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ತಾವು ಸಾಹಿತ್ಯ ಲೋಕದ ವಾರಸುದಾರರು ಎನ್ನುವುದನ್ನು ಸಾಬೀತು ಪಡಿಸಿದರು. ಅಧಿಕೃತ ರಜೆ ದೊರಕಿರುವುದರಿಂದ ಸರಕಾರಿ ನೌಕರರೂ ಸಮ್ಮೇಳನಕ್ಕೆ ಸಾಕ್ಷಿಯಾದರು. ಜೊತೆಗೆ ಕನ್ನಡ ಭಾಷೆಗಾಗಿ ನಿಜವಾಗಿಯೂ ಕಳಕಳಿ ಇರುವ ಸಂಘಟನೆಗಳು, ಹಾಗೂ ಉಟ್ಟು ಓರಾಟಗಾರರು, ತೋರಿಕೆಯ ಹೋರಾಟಗಾರರು, ರೋಲ್ಕಾಲ್ ಚಳುವಳಿಗಾರರು... ಹೀಗೆ ಎಲ್ಲಾ ನಮೂನಿಯ ಕನ್ನಡ ಭಾಷೆಯ ಬ್ರ್ಯಾಂಡ್ ಹೊಂದಿರುವವರು ಗ್ರ್ಯಾಂಡ್ ಆಗಿಯೇ ಸಮ್ಮೇಳನಕ್ಕೆ ಆಗಮಿಸಿ ತಮ್ಮ ತಮ್ಮ ಸಂಘಟನೆಗಳ ಬ್ಯಾನರ್ಗಳನ್ನು ಪ್ರದರ್ಶಿಸಿ ಕನ್ನಡ ಭಾಷೆಯ ಅಕ್ಷರ ಪರಿಷೆಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟು ಪ್ರಚಾರವನ್ನು ಪಡೆದು ಪುಣೀತರಾದರು. ಪುಸ್ತಕ ವ್ಯಾಪಾರಿಗಳು ತಮ್ಮ ಸ್ಟಾಕ್ಗಳನ್ನು ಕ್ಲಿಯರ್ ಮಾಡಿಕೊಂಡರು. ಅಕ್ಕ ಪಕ್ಕದ ಹಳ್ಳಿಯ ಜನ ಗುಂಪು ಗುಂಪಾಗಿ ಬಂದು ಜಾತ್ರೆಯ ವೈಭವ ನೋಡಿ ವಿಸ್ಮಯಗೊಂಡರು. ಇದೆಲ್ಲಾ ಪ್ರತಿಸಲದ ಕನ್ನಡ ಸಾಹಿತ್ಯ ಪರಿಷತ್ತಿನ ಜಾತ್ರೆಯಲ್ಲಿ ನಡೆಯುವಂತಹುದೇ. ಈ ಸಾರಿ ಇನ್ನಷ್ಟು ವೈಭವೀಕರಣಗೊಳಿಸಲಾಗಿತ್ತು.
ಇಲ್ಲಿವರೆಗೂ ಈ ರೀತಿಯ ಎಂಬತ್ತು ಜಾತ್ರೆಗಳು ಜರುಗಿವೆ. ಸಾವಿರಾರು ನಿರ್ಣಯಗಳನ್ನು ಘೋಷಿಸಲಾಗಿದೆ. ಆದರೆ ಇದರಿಂದ ಕನ್ನಡಕ್ಕೆ ಅದೆಷ್ಟು ಭಾಗ್ಯ ಸಿಕ್ಕಿತೋ ಗೊತ್ತಿಲ್ಲ ಆದರೆ ಕನ್ನಡ ಭಾಷೆ ಮಾತ್ರ ಸೊರಗುತ್ತಲೇ ಇದೆ. ಇಂಗ್ಲೀಷ ಭಾಷೆ ಒಡ್ಡಿದ ಸವಾಲಿನ ಮುಂದೆ ಸೋಲುತ್ತಲೇ ಸಾಗಿದೆ. ‘ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಕೊಡಬೇಕು’ ಎನ್ನುವ ಪುರಾತನ ಬೇಡಿಕೆಗೆ ಈ ಸಲ ದೇವನೂರು ಮಹಾದೇವರಿಂದಾಗಿ ಹೊಸ ನಮೂನಿ ಸಂಚಲನ ಮೂಡಿಬಂದಿದೆ. ಇದಕ್ಕಾಗಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದಲಿಂಗಯ್ಯನವರು ಅಹಿಂಸಾ ಚಳುವಳಿ ಮಾಡಬೇಕೆಂದು ಕರೆ ಕೊಟ್ಟಿದ್ದಾರೆ. ಹಾಗೆಯೇ ಸಿಎಂ ಸಿದ್ದರಾಮಯ್ಯನವರು ಕಾನೂನು ಬದಲಾವಣೆಗೆ ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದಾರೆ. ಇದೆಲ್ಲಾ ಬರೀ ಮಾತುಗಳಷ್ಟೇ. ಈ ಅಕ್ಷರ ಜಾತ್ರೆಯಲ್ಲಿ ಉತ್ಸವಮೂರ್ತಿಯಾಗಿ ಮೆರೆದವರು, ಆಯೋಜಿಸಿದ ಪರಿಷತ್ತಿನ ಪದಾಧಿಕಾರಿಗಳು, ಸಮ್ಮೇಳನದ ಯಶಸ್ಸಿಗಾಗಿ ಅಹೋರಾತ್ರಿ ದುಡಿದವರು, ಸಮ್ಮೇಳನದಲ್ಲಿ ಭಾಗವಹಿಸಿದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸರಕಾರಿ ನೌಕರರು, ಸಾಹಿತ್ಯ ಕೃಷ್ಟಿಯಲ್ಲಿ ತೊಡಗಿಕೊಂಡ ಸಾಹಿತಿಗಳು, ಕವಿಗಳು, ಕನ್ನಡ ಸಂಘಟನೆಗಳ ನೇತಾರರು ಹಾಗೂ ಕಾರ್ಯಕರ್ತರೆಲ್ಲಾ ತಮ್ಮ ಎದೆಯ ಮೇಲೆ ಕೈ ಇಟ್ಟುಕೊಂಡು ಸತ್ಯ ಹೇಳಲಿ ಇವರಲ್ಲಿ ಎಷ್ಟು ಜನ ತಮ್ಮ ಮನೆಯ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆಂದು. ಸಾರ್ವಜನಿಕವಾಗಿ ಕನ್ನಡ ಮಾಧ್ಯಮದ ಪರವಾಗಿರುವ ಬಹುತೇಕರು ಇಂಗ್ಲೀಷ್ ಮಾಧ್ಯಮವನ್ನು ವಿರೋಧಿಸುತ್ತಲೇ ಖಾಸಗಿಯಾಗಿ ಆಂಗ್ಲ ಮಾಧ್ಯಮ ಶಾಲೆಗೆ ಕೇಳಿದಷ್ಟು ಡೊನೇಷನ್ ಕೊಟ್ಟು ತಮ್ಮ ಮನೆಯ ಮಕ್ಕಳನ್ನು ಸೇರಿಸಿದ್ದಾರೆ. ಇಂತಹ ಯಾರಿಗೂ ಕೂಡಾ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಕುರಿತು ಮಾತಾಡುವ ನೈತಿಕ ಹಕ್ಕಿಲ್ಲ. ಆದರೂ ಮಾತಾಡುತ್ತಾರೆ, ಭಾಷಣ ಕುಟ್ಟುತ್ತಾರೆ, ಆಶ್ವಾಸನೆಗಳನ್ನು ಕೊಡುತ್ತಾರೆ...
ಇದೆಲ್ಲವನ್ನೂ ನೋಡಿದ ಸದಾಮೌನಿ ವೈರಾಗ್ಯ ಮೂರ್ತಿ ಬಾಹುಬಲಿ ಮಹಾಮೌನಿಯಾಗಿ ನಿಂತಿದ್ದಾನೆ.
ಇದೆಲ್ಲಾ ಹೋಗಲಿ, ಈ ನಮ್ಮ ಕನ್ನಡ ಸಾಹಿತ್ಯ ಹಾಗೂ ಕನ್ನಡ ಭಾಷಾಭಿಮಾನದ ಶ್ರೇಷ್ಠತೆಯ ವ್ಯಸನದಲ್ಲಿ ಎರಡನೇ ದರ್ಜೆಗಿಳಿದು ಪರಿತಪಿಸುತ್ತಿದೆ ರಂಗಮಾಧ್ಯಮ. ಈ ಕುರಿತು ಸಾಹಿತ್ಯ ಪರಿಷತ್ತಿನವರಿಗೆ ಒಂಚೂರು ಗಮನವೂ ಇಲ್ಲ, ಕಾಳಜಿ ಕಳಕಳಿ ಅಂತೂ ಮೊದಲೇ ಇಲ್ಲ ಎಂಬುದು 81ನೇ ಸಾಹಿತ್ಯ ಸಮ್ಮೇಳನದಲ್ಲಂತೂ ನಿಜವೆನಿಸಿತು. ಈ ಕನ್ನಡ ಸಾಹಿತ್ಯದ ಜಾತ್ರೆಯಲ್ಲಿ ರಂಗಭೂಮಿಯನ್ನು ನಿರ್ಲಕ್ಷಿಸಲಾಗಿದೆ. ಕನ್ನಡ ಭಾಷೆ, ಬದುಕು, ಚಳುವಳಿ, ಕೈಗಾರಿಕೆ, ಮೌಡ್ಯಾಚರಣೆ, ಕವಿಗೋಷ್ಟಿ ಅಷ್ಟೇ ಯಾಕೆ ಚಲನಚಿತ್ರ ಕುರಿತು ಚಿಂತನ ಮಂಥನ ಮಾಡಲು ಮೂರು ದಿನಗಳಲ್ಲಿ ಮುಖ್ಯ ವೇದಿಕೆಯಲ್ಲಿ ಎಂಟು ಹಾಗೂ ಸಮಾನಾಂತರ ವೇದಿಕೆಯಲ್ಲಿ ಏಳು ಒಟ್ಟಾರೆ ಹದಿನೈದು ಗೋಷ್ಠಿಗಳನ್ನು ನಡೆಸಲಾಯಿತು. ಆದರೆ... ಒಂದೇ ಒಂದು ಗೋಷ್ಠಿಯಲ್ಲೂ ರಂಗಭೂಮಿಯ ವಿಷಯ ಚರ್ಚಿಸಲು ಸಂಪೂರ್ಣ ಅವಕಾಶವೇ ಇಲ್ಲವಾಗಿದ್ದೊಂದು ವಿಪರ್ಯಾಸ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಪ್ರಸನ್ನರವರಿದ್ದಾರೆ ಆದರೆ ಅವರು ಕೈಗಾರಿಕೆ ಕುರಿತು ಮಾತಾಡುತ್ತಿದ್ದಾರೆ. ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಇದ್ದಾರೆ ಅವರು ಸಾಹಿತ್ಯದ ಸಿದ್ಧಾಂತಗಳ ಬಗ್ಗೆ ವಿಚಾರ ಮಂಡಿಸಿದ್ದಾರೆ, ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಕೆ.ಮರುಳಸಿದ್ದಪ್ಪನವರೂ ಇದ್ದಾರೆ ಆದರೆ ಅವರು ಕನ್ನಡ ಚಳುವಳಿಗಳ ಬಗ್ಗೆ ಮಾತಾಡುತ್ತಿದ್ದಾರೆ. ಅಂದರೆ ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನೂ ಸಹ ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಲು ಆಹ್ವಾನಿಸಲಾಗಿದೆಯೇ ಹೊರತು ರಂಗಭೂಮಿಯ ಕುರಿತು ಒಂದು ಸಂಪೂರ್ಣ ಗೋಷ್ಠಿಯನ್ನು ಆಯೋಜಿಸಲಾಗಿಲ್ಲ. ಎರಡನೇ ದಿನ ಅದೂ ಸಮಾನಾಂತರ ವೇದಿಕೆಯಲ್ಲಿ ಸಂಕೀರ್ಣ ಎನ್ನುವ ಗೋಷ್ಠಿಯಲ್ಲಿ ಒಂದೇ ಒಂದು ಪ್ರಬಂಧ ಮಂಡನೆಗೆ ಅವಕಾಶ ಮಾಡಿಕೊಟ್ಟಿದ್ದಷ್ಟೇ ರಂಗಭೂಮಿಗೆ ಈ ಸಮ್ಮೇಳನದಲ್ಲಿ ದೊರೆತ ಸೌಭಾಗ್ಯ. ರಂಗಭೂಮಿಯ ತಲ್ಲಣಗಳ ಕುರಿತು ಸೊಲ್ಲೆತ್ತಲು ಈ ಸಮ್ಮೇಳನದಲ್ಲಿ ಒಂದು ಸಂಪೂರ್ಣ ಗೋಷ್ಠಿಯನ್ನು ಮೀಸಲಿರಿಸಬೇಕಾಗಿತ್ತು. ಯಾಕೆ ನಾಟಕ ಸಾಹಿತ್ಯವೂ ಸಾಹಿತ್ಯವಲ್ಲವೇ? ನಾಟಕದ ಭಾಷೆ ಕನ್ನಡವಾಗಿಲ್ಲವೇ? ರಂಗಭೂಮಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸುತ್ತಿಲ್ಲವೆ? ರಂಗಭೂಮಿ ಕುರಿತು ಯಾಕೆ ಇಂತಹ ನಿರ್ಲಕ್ಷ. 2013 ರಲ್ಲಿ ಬಿಜಾಪುರದಲ್ಲಿ ನಡೆದ 79ನೇ ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿ ಕುರಿತು ಒಂದು ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಆದರೆ...
ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ 80 ನೇ ಸಾಹಿತ್ಯ ಸಮ್ಮೇಳನದಲ್ಲಂತೂ ಯಾವ ಗೋಷ್ಠಿಯಲ್ಲೂ ರಂಗಭೂಮಿ ಕುರಿತು ಪ್ರಸ್ತಾಪವೇ ಇರಲಿಲ್ಲ.
ಅದೇ ನಮ್ಮ ಚಲನಚಿತ್ರಕ್ಷೇತ್ರದವರನ್ನು ನೋಡಿ. ದಾದಾಗಿರಿ ಮಾಡಿಯಾದರೂ ತಮಗೆ ಬೇಕಾದದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅಂದು ಕೂಡಾ ಹಾಗೇ ಆಯಿತು. ಸಮ್ಮೇಳನದ ಕೊನೆಯ ದಿನ ಬೆಳಿಗ್ಗೆ ಸಮಾನಾಂತರ ವೇದಿಕೆಯಲ್ಲಿ ಚಲನಚಿತ್ರ ರಂಗದ ಕುರಿತು ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಆದರೆ ಈ ವೇದಿಕೆಯಲ್ಲಿ ಅನಾನುಕೂಲಗಳೇ ಹೆಚ್ಚಾಗಿದ್ದನ್ನು ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಬಂದ ಸಿನೆಮಾದವರು ಗಮನಿಸಿದರು. ಮುಂದುಗಡೆ ಖಾಲಿ ಖುರ್ಚಿಗಳಿದ್ದವು. ಮಾತಾಡಿದರೆ ಮೈಕುಗಳು ಮುನಿಸಿಕೊಂಡಿದ್ದವು. ಪರಿಷತ್ತಿನ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಾದ ಸಾ.ರಾ.ಗೋವಿಂದ ಹಾಗೂ ನಂಜುಂಡೇಗೌಡರು ಗೋಷ್ಠಿ ನಡೆಸಲಾಗುವುದಿಲ್ಲವೆಂದು ಪ್ರತಿಭಟಿಸಿದರು. ಗೋಷ್ಠಿಯನ್ನು ಬಹಿಷ್ಕರಿಸಿದರು. ಕೊನೆಗೆ ಸಿನೆಮಾದವರ ಆಗ್ರಹಕ್ಕೆ ಮಣಿದ ಸಾಹಿತ್ಯ ಪರಿಷತ್ತು ಪ್ರಧಾನ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ನಡುವೆ ಅನಿವಾರ್ಯವಾಗಿ ಚಲನಚಿತ್ರ ಗೋಷ್ಠಿಯನ್ನು ನಡೆಸಲು ಅನುಮತಿ ಕೊಡಬೇಕಾಯ್ತು. ಬೆಳಿಗ್ಗೆ 9.30ಕ್ಕೆ ಸಮಯ ನಿಗಧಿಯಾಗಿದ್ದ ಚಲನಚಿತ್ರ ಗೋಷ್ಠಿ ಮುಖ್ಯವೇದಿಕೆಯಲ್ಲಿ ಮಧ್ಯಾಹ್ನ 1.30 ಕ್ಕೆ ಆರಂಭಗೊಂಡು 3.30ಕ್ಕೆ ಮುಗಿಯಿತು. ಇದರಿಂದಾಗಿ ಇಡೀ ಸಮ್ಮೇಳನದ ನಿಗಧಿತ ಸಮಯ ಅಪರಾತಪರಾ ಆಯಿತು. ಸಂಜೆ 4.30ಕ್ಕೆ ಆರಂಭವಾಗಬೇಕಾಗಿದ್ದ ಬಹಿರಂಗ ಅಧಿವೇಶನ ಶುರುವಾಗಿದ್ದು ರಾತ್ರಿ 8 ಗಂಟೆಗೆ. ಅಷ್ಟರಲ್ಲಾಗಲೇ ಅರ್ಧಕ್ಕರ್ದ ಜನ ತಮ್ಮ ಊರಿನ ದಾರಿ ಹಿಡಿದಾಗಿತ್ತು. ಈ ನಮ್ಮ ಚಲನಚಿತ್ರ ರಂಗದವರಿಗಿರುವ ದಾರ್ಷೆ ಯಾಕೆ ರಂಗಭೂಮಿಯವರಿಗಿಲ್ಲ ಎನ್ನುವುದೇ ಸೋಜಿಗದ ವಿಷಯ.
ಎಂತಹ ದುರಂತ ನೋಡಿ, ಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯನ್ನು ಪ್ರತಿನಿಧಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಕಲೆ ಮತ್ತು ಸಂಸ್ಕೃತಿ ಕುರಿತು ದಿವ್ಯ ನಿರ್ಲಕ್ಷ ತೋರಿದ್ದಂತೂ ಅಕ್ಷಮ್ಯ. ಕನ್ನಡಿಗರ ಈ ಮಹಾ ಸಮ್ಮೇಳನದಲ್ಲಿ ರಂಗಭೂಮಿಯ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಬಹುದಾಗಿದ್ದ ಕರ್ನಾಟಕ ನಾಟಕ ಅಕಾಡೆಮಿಯಂತೂ ನಿಷ್ಕ್ರೀಯವಾಗಿ ಲಕ್ವಾಪೀಡಿತವಾಗಿದೆ. ರಂಗಭೂಮಿಯಿಂದಲೇ ಬೆಳೆದು ಇಂದು ಕನ್ನಡ ಮತ್ತು ಸಂಸ್ಕೃತಿಯ ಮಂತ್ರಿಣಿಯಾಗಿರುವ ಉಮಾಶ್ರೀರವರಿಗಾದರೂ ಸಮ್ಮೇಳನದಲ್ಲಿ ರಂಗಭೂಮಿಗೆ ಸೂಕ್ತ ಪ್ರಾಶಸ್ತ್ಯ ಸಿಗಬೇಕು ಎನ್ನುವ ಕನಿಷ್ಟ ಪರಿಜ್ಞಾನ ಇರಬೇಕಾಗಿತ್ತು. ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವವರಿಗಂತೂ ರಂಗಭೂಮಿಯ ಅಗತ್ಯತೆ ಕುರಿತು ಅರಿವೇ ಇಲ್ಲ. ಇನ್ನು ಕನ್ನಡಿಗರಂತೂ ಇದು ಕೇವಲ ಅಕ್ಷರ ಜಾತ್ರೆಯಾಗಿದ್ದು ಸಾಹಿತಿಗಳು ಹಾಗೂ ಕವಿಗಳಿಗೆ ಸಂಬಂಧಿಸಿದ್ದೆಂಬ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಆದರೆ ವ್ಯಕ್ತಿಕೇಂದ್ರಿತವಾದ ಸಾಹಿತ್ಯ ಹಾಗೂ ಕಾವ್ಯಗಳಿಗಿಂತಲೂ ರಂಗಭೂಮಿ ಸಮೂಹ ಕೇಂದ್ರಿತವಾಗಿದೆ. ಯಾರು ಅದೆಷ್ಟೇ ಹೇಳಿಕೊಂಡರೂ ಜನರಲ್ಲಿ ಓದುವ ಸಂಸ್ಕೃತಿಯೇ ಈಗ ನಾಶವಾಗಿ ಕೇವಲ ನೋಡುವ ಸಂಸ್ಕೃತಿ ಮುಂಚೂಣಿಯಲ್ಲಿದೆ. ಎಷ್ಟು ಸಾಹಿತ್ಯಗೋಷ್ಠಿ ಕಾವ್ಯಗೋಷ್ಠಿಗಳನ್ನು ಮಾಡಿದರೂ ಅವು ಜನಸಾಮಾನ್ಯರಿಗೆ ತಲುಪುವುದೇ ಇಲ್ಲ. ಇನ್ನು ಅಕ್ಷರ ಮಾಧ್ಯಮವೆನ್ನುವುದೇ ಅನಕ್ಷರಸ್ತರಿಗೆ ಅಸ್ಪೃಶ್ಯವಾಗಿದೆ.
ಇಂತಹ ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿಯನ್ನುವುದು ಅಕ್ಷರಸ್ತರಂತೆ ಅನಕ್ಷರಸ್ತರನ್ನೂ, ಎಲ್ಲಾ ವರ್ಗದ ಜನತೆಯನ್ನು ನೇರವಾಗಿ ತಲುಪಬಹುದಾದ ಮಾಧ್ಯಮವಾಗಿದೆ. ಪ್ರದರ್ಶನ ಕಲೆಗಳು ಜನರ ಬದುಕಿನ ಭಾಗವಾಗಿಯೇ ಹುಟ್ಟಿ ಬೆಳೆದು ಬಂದಿವೆ. ಉದಾಹರಣೆಗೆ ಕುವೆಂಪುರವರ ‘ಮಲೆಗಳಲಿ ಮದುಮಗಳು’ ಕಾದಂಬರಿಯನ್ನು ಓದಲಾಗದವರಿಗೂ ಸಹ ನಾಟಕ ರೂಪದಲ್ಲಿ ಜನರನ್ನು ತಲುಪಲು ಸಾಧ್ಯವಾಗಿದೆ. ಇಂದು ಕನ್ನಡ ಭಾಷೆ, ಸಾಹಿತ್ಯದಂತೆಯೇ ರಂಗಭೂಮಿಯೂ ಕೂಡಾ ಸಂಕಷ್ಟದಲ್ಲಿದೆ. ರಂಗಭೂಮಿಯನ್ನು ಸರಕಾರಿ ಅನುದಾನದ ಮೂಲಕ ಜೀವಂತವಿಡುವಂತಹ ಅನಿವಾರ್ಯತೆ ನಿರ್ಮಾಣಗೊಂಡಿದೆ. ರಂಗಭೂಮಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಒಂದು ಗೋಷ್ಠಿಯನ್ನು ಆಯೋಜಿಸಬೇಕೆನ್ನುವುದು ನ್ಯಾಯಬದ್ದ ಬೇಡಿಕೆಯಾಗಿದೆ. ಕೇವಲ ಚರ್ಚಿಸುವುದರಿಂದ ಏನೂ ಆಗುವುದಿಲ್ಲವಾದರೂ ಅದೇ ನೆಪದಲ್ಲಿ ಮಾಧ್ಯಮಗಳಲ್ಲಿ ರಂಗಭೂಮಿಯ ಸಂಕಷ್ಟಗಳ ಕುರಿತು ಪ್ರಚಾರವಾಗುತ್ತಿತ್ತು. ಸಂಸ್ಕೃತಿಗೆ ಸಂಬಂಧಪಟ್ಟ ಅಕಾಡೆಮಿ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಇಲಾಖೆಗಳನ್ನು ಅವರ ಹೊಣೆಗಾರಿಕೆ ಕುರಿತು ಎಚ್ಚರಿಸಬಹುದಾಗಿತ್ತು. ಇಂತಹ ಜನಪರ ಮಾಧ್ಯಮವೊಂದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ಇಡೀ ಸಾಹಿತ್ಯ ಸಮ್ಮೇಳನ ಅಪೂರ್ಣಗೊಂಡಂತಿದೆ. ಸಿನೆಮಾ ಕುರಿತು ಗೋಷ್ಠಿಯನ್ನು ಏರ್ಪಡಿಸಿ ರಂಗಭೂಮಿಯನ್ನು ನಿರ್ಲಕ್ಷಿಸಿರುವುದು ತಾಯಿ ಹಳಬಳೆಂದು ಹಿಂದಿಕ್ಕಿ ಮಗಳು ಸುಂದರವಾಗಿದ್ದಾಳೆಂದು ಕರೆದು ಮಣೆ ಹಾಕಿದಂತಾಯಿತು.
ಹೋಗಲಿ ಬಿಡಿ, ಈ ಸಾಹಿತ್ಯ ಪರಿಷತ್ತಿನ ಬ್ರಹಸ್ಪತಿಗಳಿಗೆ ನಾಟಕ ರಂಗದ ಅಳಿವು ಉಳಿವಿನಲ್ಲಿ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆ ಸೇರಿಕೊಂಡಿದೆ ಎಂಬುದು ಗೊತ್ತಾಗುವುದಿಲ್ಲ. ಒಂದು ಕಾಲಕ್ಕೆ ಮರಾಠಿ ಪ್ರಾಭಲ್ಯ ಹೆಚ್ಚಾಗುತ್ತಿದ್ದಾಗ ಕನ್ನಡ ನಾಟಕಗಳು ಕನ್ನಡ ಭಾಷೆಯ ಉಳಿವಿಗೆ ಕಾರಣವಾದವೆಂಬುದು ಶ್ರೇಷ್ಠತೆಯ ವ್ಯಸನ ಹೊಂದಿರುವ ಸಾಹಿತ್ಯ ರತ್ನಗಳ ಅರಿವಿಗೆ ಬರುವುದೂ ಇಲ್ಲ. ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕೋಟಾದಲ್ಲಿ ನಾಟಕಗಳಿಗೆ ಅವಕಾಶ ಕೊಟ್ಟಿದ್ದಾರೆ. ಅದೂ ಕೊಟ್ಟ ಕೊನೆಯ ಶ್ರೇಣಿಯಲ್ಲಿ. ಅಕ್ಷರ ಜಾತ್ರೆಗೆ ಬಂದ ಮಹಾಜನತೆ ಉಂಡು ಮಲಗಿದ ನಟ್ಟನಡುಮಧ್ಯರಾತ್ರಿಯ ನಂತರದ ಸಮಯದಲ್ಲಿ ಖಾಲಿ ಖುರ್ಚಿಗಳಿಗೆ ನಾಟಕ ಮಾಡಲು ಅವಕಾಶವನ್ನು ಒದಗಿಸಿಕೊಟ್ಟಿರುವುದಕ್ಕಾಗಿಯಾದರೂ ರಂಗಭೂಮಿ ಸಾಹಿತ್ಯ ಪರಿಷತ್ತಿಗೆ ಋಣಿಯಾಗಿರಬೇಕಾಗಿದೆ. ಹೋಗಲಿ ನಡುರಾತ್ರಿ ನಿದ್ದೆಗೆಟ್ಟು ನಾಟಕ ಮಾಡಿದ ತಂಡಗಳ ಅನುಭವವನ್ನು ಕೇಳಿದರೆ ಕನ್ನಡ ಸಾಹಿತ್ಯ ಪರಿಷತ್ತು ಈ ಸಮ್ಮೇಳನದಲ್ಲಿ ನಾಟಕ ಕ್ಷೇತ್ರಕ್ಕೆ ತೋರಿದ ಅನಂತ ಅನಾದರವನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
ಈ ನಮ್ಮ ಅಕ್ಷರ ಜಾತ್ರೆಯಲ್ಲಿ ಎರಡು ವೇದಿಕೆಗಳಿವೆ. ಒಂದು ಪ್ರಧಾನ ವೇದಿಕೆ. ಇನ್ನೊಂದು ಸಮಾನಾಂತರ ವೇದಿಕೆ. ಪೆಬ್ರುವರಿ 1 ನೇ ತಾರೀಖಿನಂದು ಪ್ರಧಾನ ವೇದಿಕೆಯಲ್ಲಿ ಮೈಸೂರಿನ ನಟನ ತಂಡದ ‘ಚಾಮಚಲುವೆ’ ನಾಟಕ ಪ್ರದರ್ಶನವಿದ್ದರೆ, ಸಮಾನಾಂತರ ವೇದಿಕೆಯಲ್ಲಿ ಶಿವಮೊಗ್ಗದ ನಂ ಟೀಮ್ ತಂಡದ ‘ಬಯಲುಸೀಮೆ ಕಟ್ಟೇ ಪುರಾಣ’ ನಾಟಕದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾತ್ರಿ ಹತ್ತೂಕಾಲಿಗೆ ಸರಿಯಾಗಿ ನಾಟಕ ಶುರುವಾಗುವುದೆಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಿಂಟಾಗಿತ್ತು. ಹಾಗೆಯೇ ಈ ತಂಡಗಳಿಗೆ ಪರಿಷತ್ತು ಕಳುಹಿಸಿದ ಅಧೀಕೃತ ಪತ್ರದಲ್ಲಿ ‘ಹತ್ತು ಗಂಟೆಯ ಮೇಲೆ ನಾಟಕ ಮಾಡಲು ಬಂದರೆ ನಾಟಕವನ್ನು ರದ್ದು ಮಾಡಲಾಗುವುದು’ ಎನ್ನುವ ಕಠೋರ ಆದೇಶ ಇತ್ತು. ನಾಟಕ ತಂಡಗಳು ಆ ಹೊತ್ತಿಗೆ ಸರಿಯಾಗಿ ವೇದಿಕೆಯ ಹತ್ತಿರ ತಮ್ಮೆಲ್ಲಾ ಸೆಟ್ ಸಾಮಾನು ಸರಂಜಾಮು ಕಲಾವಿದರೊಂದಿಗೆ ಬಂದರೆ ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳು ಅದೇ ತಾನೇ ಆರಂಭಗೊಂಡಿದ್ದವು. ಹತ್ತು ಹನ್ನೊಂದಾಯ್ತು, ಹನ್ನೊಂದು ಹನ್ನೆರಡಾಯ್ತು, ಬಂದ ಜನತೆ ಎದ್ದು ಗೂಡು ಸೇರಿಕೊಂಡಿದ್ದಾಯ್ತು. ಆದರೆ ಇನ್ನೂ ಯೋಜಿತ ಕಾರ್ಯಕ್ರಮಗಳು ಮುಗಿಯುವ ಲಕ್ಷಣಗಳಿರಲಿಲ್ಲ. ನಾಟಕ ಯಾವಾಗ ಮಾಡುವುದು ಎಂದು ಕೇಳಿದರೆ ಯಾರಿಂದಲೂ ಸಮರ್ಪಕ ಉತ್ತರವಿಲ್ಲ. ಕಲಾವಿದರು ಒಂದು ರೌಂಡ್ ನಿದ್ದೆ ಮಾಡಿ ತಮ್ಮ ಸರದಿಗೆ ಕಾಯತೊಡಗಿದರು. ರಂಗತಂಡದವರಿಗೆ ‘ಎಲ್ಲಾ ಜನ ಎದ್ದು ಹೋದರೆ ಯಾರಿಗಾಗಿ ನಾಟಕ ಮಾಡುವುದು’ ಎನ್ನುವ ಆತಂಕ ಕಾಡತೊಡಗಿತು. ಕೊನೆಗೂ ಸಂಗೀತ, ನೃತ್ಯ ಕಾರ್ಯಕ್ರಮಗಳೆಲ್ಲಾ ಮುಗಿದ ನಂತರ ಹನ್ನೆರಡೂವರೆಗೆ ವೇದಿಕೆ ಖಾಲಿಯಾಯಿತು ಜೊತೆಗೆ ಪ್ರೇಕ್ಷಾಗ್ರಹವೂ ಬಣಗುಡತೊಡಗಿತು. ಎಲ್ಲಾ ಖಾಲಿ ಖಾಲಿ. ಚಂದ್ರೇಗೌಡರು ಹಾಗೂ ಸಾಸ್ವೇಹಳ್ಳಿ ಸತೀಶರಂತಹ ಮೇಷ್ಟ್ರುಗಳು ಸಹ ಮೇಕಪ್ ಹಾಕಿಕೊಂಡು ಮೂರುಗಂಟೆಗಳ ಕಾಲ ಕಾಯಬೇಕಾಯ್ತು. ಏನೇ ಆದರೂ ನಾಟಕ ಮಾಡಲೆಂದು ದೂರದೂರದಿಂದ ಬಂದಾಗಿತ್ತು, ಮಾಡಲೇಬೇಕಿತ್ತು. ಖಾಲಿ ಖುರ್ಚಿಗಳಿಗೆ ನಾಟಕ ಪ್ರದರ್ಶಿಸಿ ತೋರಿಸಬೇಕಾಯ್ತು.
ನಾಟಕ ಮಾಡುವುದು ಅಂದರೆ ಕವಿತೆ ಓದಿದಂತಲ್ಲ, ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದಂತಲ್ಲ. ಇವುಗಳನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಮಾಡಬಹುದು. ಅಕ್ಷರ ಮಾಧ್ಯಮಕ್ಕೆ, ಬರೆದಿದ್ದನ್ನು ಓದುವುದಕ್ಕೆ, ಓದಿದ್ದನ್ನು ವಿವರಿಸಿ ಹೇಳುವುದಕ್ಕೆ ಅಂತಹ ಯಾವುದೇ ವಿಶೇಷ ಸೌಲಭ್ಯಗಳ ಅಗತ್ಯವೂ ಬೇಕಾಗಿಲ್ಲ. ಇವೆಲ್ಲಾ ವ್ಯಕ್ತಿಗತ ಪ್ರತಿಭೆಯ ಕೆಲಸಗಳು. ಆದರೆ ನಾಟಕಕಲೆ ಎನ್ನುವುದು ಪ್ರದರ್ಶನ ಮಾಧ್ಯಮ. ಹಲವಾರು ತಾಂತ್ರಿಕ ಅಗತ್ಯಗಳು ಬೇಕಾಗುತ್ತವೆ. ಆದರೆ ಅವುಗಳ್ಯಾವವೂ ಇಲ್ಲದೇ ನಾಟಕ ಮಾಡಲು ಹೇಳಿದ್ದು ನಾಟಕದ ಗಂಧಗಾಳಿ ಗೊತ್ತಿಲ್ಲದವರು ಮಾಡುವ ಕೆಲಸವಾಗಿದೆ. ನಾಟಕ ತಂಡಗಳ ಕಲಾವಿದರುಗಳಿಗೆ ಮೇಕಪ್ ಮಾಡಿಕೊಳ್ಳಲೂ ವೇದಿಕೆಯ ಅಕ್ಕಪಕ್ಕ ಜಾಗವಿರಲಿಲ್ಲ. ಕಲಾವಿದರು ತಾವಿಳಿದುಕೊಂಡ ರೂಮಿನಲ್ಲೇ ಮೇಕಪ್ ಮಾಡಿಕೊಂಡು ಹಾಗೂ ಕಾಸ್ಟೂಮ್ಸಗಳನ್ನು ಧರಿಸಿಕೊಂಡು ಬರಬೇಕಾಗಿತ್ತು. ಆದರೆ ದೃಶ್ಯಗಳ ನಡುವೆ ಮೇಕಪ್ ಮತ್ತು ಕಾಸ್ಟೈಮ್ಸಗಳನ್ನು ಬದಲಾಯಿಸುವ ಸಂದರ್ಭಗಳಿಗೇನು ಮಾಡುವುದು?. ಅದೂ ಕಲಾವಿದೆಯರಿಗಂತೂ ಅದೆಷ್ಟು ಮುಜುಗರ. ಸೈಡ್ವಿಂಗ್ನಲ್ಲಾದರೂ ಬಟ್ಟೆ ಬದಲಾಯಿಸೋಣ ಎಂದುಕೊಂಡರೆ ವೇದಿಕೆಗಳಿಗೆ ಸೈಡ್ ವಿಂಗ್ ಅನ್ನೋದೇ ಇಲ್ಲ. ಎಲ್ಲಾ ಖುಲ್ಲಂ ಖುಲ್ಲಾ ಆರ್ಪಾರ್. ಆದರೂ ನಾಟಕ ತಂಡಗಳು ಇದನ್ನೂ ಸಹಿಸಿಕೊಂಡು ನಿಭಾಯಿಸಿದವರು.
ಆದರೆ ನಾಟಕ ಮಾಡಲು ಲೈಟಿಂಗ್ ಆದರೂ ಬೇಕಲ್ಲಾ. ಸಭಾ ಕಾರ್ಯಕ್ರಮಕ್ಕೆ ಹಾಕಿದ ಲೈಟಿಂಗ್ಗಳನ್ನು ನಾಟಕದ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬೇಕೆಂದರೂ ಸಾಧ್ಯವಿಲ್ಲ. ಪಾರ್ ಲೈಟ್ ಇದ್ದರೆ ಸ್ಪಾಟ್ ಲೈಟ್ ಇಲ್ಲ. ಹೋಗಲಿ ಇರುವುದರಲ್ಲೇ ಒಂದಿಷ್ಟು ಬದಲಾವಣೆ ಮಾಡೋಣವೆಂದರೆ ಹದಿನೆಂಟು ಅಡಿ ಮೇಲಕ್ಕೆ ಹತ್ತಿ ಲೈಟ್ ಹೊಂದಾಣಿಕೆ ಮಾಡಿಕೊಳ್ಳಲು ಬೇಕಾದ ಸ್ಟ್ಯಾಂಡ್ ಇಲ್ಲವೇ ಏಣಿ ಇಲ್ಲವೇ ಇಲ್ಲ. ಬೆಳಕು ಬದಲಾವಣೆ ಇಲ್ಲದೇ ನಾಟಕದಲ್ಲಿ ಮೂಡನ್ನು ಸೃಷ್ಟಿಸುವುದಾದರೂ ಹೇಗೆ. ಹೋಗಲಿ ಕಲಾವಿದರು ಮಾತಾಡಿದ್ದಾದರೂ ಅಳಿದುಳಿದ ಪ್ರೇಕ್ಷಕರಿಗೆ ಕೇಳಿಸುವುದು ಬೇಡವೇ? ಅದೂ ಸಾಧ್ಯವಿರಲಿಲ್ಲ. ಯಾಕೆಂದರೆ ಮೈಕ್ ಮುಂದೆ ನಿಂತು ಭಾಷಣ ಕುಟ್ಟಿದಂತಲ್ಲ ನಾಟಕ ಮಾಡುವುದು. ಅಂದರೆ ನಾಟಕಕ್ಕೆ ಬೇಕಾದ ಹೆಚ್ಚುವರಿ ಮೈಕ್ಗಳೇ ಇಲ್ಲ. ಇರುವ ಮೈಕ್ಗಳ ಮೂತಿಯೊಳಗೆ ನಿಂತು ಉಸಿರಿದರೆ ಮಾತ್ರ ಮಾತಾಡುತ್ತವೆಯೇ ಹೊರತು ಎರಡಡಿ ದೂರ ನಿಂತು ಗಂಟಲು ಹರಿದುಕೊಂಡರೂ ಜನರಿಗೆ ಕೇಳಲಾರದು. ‘ಕಟ್ಟೆ ಪುರಾಣ’ ನಾಟಕ ತಂಡದವರಿಗೆ ಸಿಕ್ಕಿದ್ದೇ ಮೂರು ಸ್ಥಿರವಾದ ಸ್ಟ್ಯಾಂಡಿಂಗ್ ಮೈಕ್‌ಗಳು. ಅದರಲ್ಲಿ ಒಂದಕ್ಕೆ ಉಬ್ಬಸ ರೋಗ, ಇನ್ನೊಂದು ಕೋಮಾಗೆ ಹೋಗಿ ನಾಲ್ಕಾರು ಗಂಟೆಗಳೇ ಆಗಿವೆ. ಇನ್ನು ಮಿಕ್ಕಿದ್ದೊಂದು ಮೈಕಲ್ಲಿ ಸಕಲೆಂಟು ಕಲಾವಿದರೂ ನಟನೆ ಬಿಟ್ಟು ಬಂದು ತಮ್ಮ ಡೈಲಾಗ್ ಒಪ್ಪಿಸಿ ಹೋಗಬೇಕು. ಆಗಾಗ ಆ ಮೈಕೂ ಸಹ ಕೈಕೊಟ್ಟಿದ್ದರಿಂದ ಮೈಕ್ ಅಪರೇಟ್ ಮಾಡುವ ಹುಡುಗ ನಾಟಕ ನಡೆದಿರುವಂತೆಯೇ ವೇದಿಕೆಯ ಮೇಲೆ ಬಂದು ಮೈಕ್ ಸರಿಮಾಡುತ್ತಾ ಇರುವುದು ನಿಜಕ್ಕೂ ನಾಟಕ ಮಾಡುವವರಿಗೂ ಹಾಗೂ ನೋಡುವವರಿಗೂ ಕಿರಿಕಿರಿಯನ್ನುಂಟುಮಾಡಿದ ವಿಷಯ. ಬಾಯಾರಿಕೊಂಡ ಕಲಾವಿದರಿಗೆ ಕುಡಿಯಲೊಂದಿಷ್ಟು ನೀರಿನ ವ್ಯವಸ್ಥೆಯೂ ಇಲ್ಲವೆಂದರೆ ಇದೆಂತಾ ದುರಾವಸ್ಥೆ? ಹನ್ನೊಂದು ಗಂಟೆಯವರೆಗೂ ಮೂರು ಸಾವಿರದಷ್ಟಿದ್ದ ಪ್ರೇಕ್ಷಕರು ಹನ್ನೆರಡು ಗಂಟೆಯ ಸಮಯಕ್ಕೆ ನೂರಕ್ಕಿಳಿದಿದ್ದರು. ಕಲಾವಿದರ ಉತ್ಸಾಹವೂ ಕರಗಿಯಾಗಿತ್ತು. ತುಂಬಾ ನೊಂದುಕೊಂಡೇ ನಾಟಕ ಮಾಡಲಾಯಿತು. ಬಯಲುಸೀಮೆಯ ಕಟ್ಟೆ ಪುರಾಣ ನಾಟಕ ಪ್ರದರ್ಶನದ ವೈಪಲ್ಯ ಸಾಹಿತ್ಯ ಪರಿಷತ್ತಿನ ಅವ್ಯವಸ್ಥೆಯ ಕೆಟ್ಟ ಪುರಾಣವನ್ನು ಸಾರಿತು.
ಕಟ್ಟೆಪುರಾಣ ನಾಟಕದ ನಡುವೆಯೇ ಮೈಕ |
ಪರದೆಗಳಿಲ್ಲದೇ, ಬ್ಯಾಕ್ಡ್ರಾಪ್ ಸ್ಕ್ರೀನ್ ಇಲ್ಲದೇ, ಸೈಡ್ವಿಂಗ್ಗಳಿಲ್ಲದೇ, ಬೇಕಾದ ಕನಿಷ್ಟ ಲೈಟಿಂಗ್ಗಳಿಲ್ಲದೇ, ಸರಿಯಾದ ಮೈಕ್ ಗಳಿಲ್ಲದೇ, ಮೇಕಪ್ಗೆ ರೂಮಿಲ್ಲದೇ, ಪ್ಲಾಟ್ಪಾರಂಗಳಿಲ್ಲದೇ ಖಾಲಿ ಖಾಲಿ ವೇದಿಕೆಯ ಮೇಲೆ ನಡುಮಧ್ಯರಾತ್ರಿ ಖಾಲಿ ಖುರ್ಚಿಗಳಿಗೆ ದೂರದೂರಿನಿಂದ ಬಂದು ನಾಟಕ ಮಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನಾಟಕ ಮಾಡಿಯೇ ತೀರುವೆನೆಂಬ ಛಲದಂಕ ಮಲ್ಲರಾದ ರಂಗಕರ್ಮಿ ಕಲಾವಿದರಿಗೆ ನಿಜಕ್ಕೂ ಅಭಿನಂದನೆಗಳನ್ನು ಹೇಳಲೇಬೇಕು. ನಾಟಕವನ್ನು ಈ ರೀತಿ ನಿರ್ಲಕ್ಷಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಈ ಸಮ್ಮೇಳನದ ಆಯೋಜಕರಿಗೆ ದಿಕ್ಕಾರ ಕೂಗಲೇಬೇಕು.
ಇರುವುದರಲ್ಲಿ ಮುಖ್ಯ ವೇದಿಕೆಯಲ್ಲಿ ನಾಟಕ ಮಾಡಿದ ಮಂಡ್ಯ ರಮೇಶ್‌ರ ‘ನಟನ’ ತಂಡದ ಸ್ಥಿತಿ ಒಂದಿಷ್ಟು ಉತ್ತಮವಾಗಿತ್ತು. ಮಂತ್ರಿಯೊಬ್ಬರ ಸಂಬಂಧಿಕರ ನೃತ್ಯ ಕಾರ್ಯಕ್ರಮದ ನಂತರ ‘ಚಾಮಚೆಲುವೆ’ ನಾಟಕ ಮಾಡಬೇಕಿತ್ತು. ಹೀಗಾಗಿ ನೃತ್ಯ ಕಾರ್ಯಕ್ರಮದ ಕಲಾವಿದರಿಗೆ ದೊರಕಿದ ಟೀ ಕಾಫಿ ಭಾಗ್ಯ ಈ ನಾಟಕದ ಕಲಾವಿದರಿಗೂ ಆಗಾಗ ದೊರೆಯುತ್ತಿತ್ತು. ವೇದಿಕೆಯ ಹಿಂದೆ ದೊಡ್ಡದಾದ ಕಟೌಟ್ ಬ್ಯಾನರ್ ಮುಂದೆ ನಾಟಕ ಮಾಡುವುದು ಆಭಾಸಕಾರಿ ಎಂಬುದನ್ನು ಮೊದಲೇ ಊಹಿಸಿದ್ದ ರಮೇಶ್ರವರು ಹೋಗುವಾಗಲೇ ಒಂದು ಕರಿ ಸ್ಕ್ರೀನನ್ನು ತೆಗೆದುಕೊಂಡೇ ಹೋಗಿ ಅದನ್ನು ಮುಚ್ಚಿ ನಾಟಕ ಮಾಡಿದರು. ಸೈಡ್ವಿಂಗ್ಗಳನ್ನೂ ತಾವೇ ಹೇಗೋ ಸಿದ್ದಗೊಳಿಸಿಕೊಂಡರು. ಅವರಿಗೂ ಮೈಕ್ ಹಾಗೂ ಲೈಟ್ ಸಮಸ್ಯೆಗಳು ಕಾಡಿದವು. ಕನಿಷ್ಟ ಅಗತ್ಯಗಳು ಬೇಕೆಂದು ಯಾರಿಗೆ ಕೇಳುವುದು? ಯಾರನ್ನೇ ಕೇಳಿದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಉತ್ತರಗಳೇ ಬರುತ್ತಿದ್ದವು. ನಾಟಕ ತಂಡಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಜವಾಬ್ದಾರಿ ಇರುವ ಯಾವುದೇ ಒಬ್ಬ ಪದಾಧಿಕಾರಿಯೂ ಅಲ್ಲಿರಲಿಲ್ಲ. ರಂಗತಂಡದವರದಂತೂ ಅಕ್ಷರಷಃ ಅರಣ್ಯ ರೋಧನವಾಯಿತು. ಕೊನೆಗೆ ಹಾಗೂ ಹೀಗೂ ಮಾಡಿ ಹತ್ತೂಕಾಲಿಗೆ ಶುರುವಾಗಬೇಕಾದ ‘ಚಾಮಚೆಲುವೆ’ ಹನ್ನೆರಡೂವರೆಗೆ ಆರಂಭವಾಗಿ ಮೂರುಕಾಲಿಗೆ ಮುಗಿದಿತ್ತು. ಆಗ ಇಡೀ ಶ್ರಮಣಬೆಳ್ಗೊಳವೇ ಶ್ರವಣವಿಹೀನಗೊಂಡು ನಿದ್ರಾವಸ್ಥೆಯಲ್ಲಿತ್ತು. ನಟನ ತಂಡದ ಅದೃಷ್ಟಕ್ಕೆ ಅಕ್ಕಪಕ್ಕ ಹಳ್ಳಿಯಿಂದ ಬಂದಿದ್ದ ಒಂದಿಷ್ಟು ಹಳ್ಳಿಜನ ಜಾನಪದ ನಾಟಕ ಮಾಡಿದ ಮೋಡಿಯಿಂದ ಮೋಹಿತಗೊಂಡು ಕೊನೆವರೆಗೂ ಉಳಿದಿದ್ದರು. ಸಮ್ಮೇಳನದ ಕಾರ್ಯಕರ್ತರು ನಾಪತ್ತೆಯಾಗಿದ್ದರು.
ಮಂಡ್ಯ ರಮೇಶರವರು |
‘ಸಾಹಿತ್ಯ ಲೋಕದ ದಿಗ್ಗಜರು ಹಾಗೂ ಪ್ರಜ್ಞಾವಂತರೆಲ್ಲಾ ಬಂದು ತುಂಬಾ ಶ್ರಮವಹಿಸಿ ಮಾಡಿದ ಈ ಯಶಸ್ವಿ ನಾಟಕವನ್ನು ನೋಡಿ ಮೆಚ್ಚಿಕೊಳ್ಳುತ್ತಾರೆ’ ಎಂಬ ಮಹತ್ವಾಂಕಾಂಕ್ಷೆಯಿಂದ ತಮ್ಮ ತಂಡದೊಂದಿಗೆ ನಾಟಕ ಮಾಡಿಸಲು ಬಂದ ಮಂಡ್ಯ ರಮೇಶರಿಗಂತೂ ತೀವ್ರವಾದ ನಿರಾಶೆಯಾಯಿತು. ಕಡೆಗೆ ಕೆಲವಾರು ಹಳ್ಳಿ ಜನರಾದರೂ ನಾಟಕ ನೋಡಿದರಲ್ಲಾ ಎನ್ನುವ ಹುಸಿ ಸಮಾಧಾನ ಪಡಬೇಕಾಯಿತು. ತುಂಬಾ ನೊಂದುಕೊಂಡ ಸೂಕ್ಷ್ಮ ಮನಸ್ಸಿನ ಕಲಾವಿದ ಮಂಡ್ಯ ರಮೇಶ್ ನಾಟಕದ ನಂತರ ಕೈಗೆ ಚೆಕ್ ಕೊಟ್ಟ ಆಯೋಜಕರಿಗೆ “ನಿಮ್ಮ ಈ ರೀತಿಯ ಆತಿಥ್ಯಕ್ಕೆ ಧನ್ಯವಾದ. ದಯವಿಟ್ಟು ಇನ್ನು ಇಂತಹ ವೇದಿಕೆಗಳಲ್ಲಿ, ಇಂತಹ ಅವೇಳೆಯಲ್ಲಿ ನಾಟಕ ಮಾಡಲು ನಮ್ಮನ್ನು ಕರೆಯಬೇಡಿ, ನಾಟಕ ಪ್ರದರ್ಶನಕ್ಕೆ ಅನುಕೂಲಕರವಾದ ರಂಗಮಂದಿರದಂತಹ ವ್ಯವಸ್ಥೆ ಮಾಡದಿದ್ದರೆ ಇನ್ನೆಂದೂ ನಾಟಕ ಪ್ರದರ್ಶನ ಮಾಡುವುದಿಲ್ಲ” ಎಂದು ಹೇಳಿ ತಮ್ಮ ಅಸಹನೆಯನ್ನು ತೋರಿ ನಮಸ್ಕಾರ ಮಾಡಿ ತಮ್ಮ ಕಲಾವಿದರನ್ನು ಕರೆದುಕೊಂಡು ತೀವ್ರ ಬೇಸರದಲ್ಲಿ ಮೈಸೂರಿನ ದಾರಿ ಹಿಡಿದರು. ಇದೇನಾ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ರಂಗಕಲಾವಿದರಿಗೆ, ನಾಟಕಕ್ಕೆ, ರಂಗಕರ್ಮಿಗಳಿಗೆ ಕೊಡುವ ಮರ್ಯಾದೆ?
ಇನ್ನು ಈ ಸಾಹಿತ್ಯ ಸಮ್ಮೇಳನದ ಆಯೋಜಕರು ನಾಟಕವನ್ನು ಕನಿಷ್ಟವಾಗಿ ನೋಡುವುದರ ಜೊತೆಗೆ ನಾಟಕ ತಂಡಗಳಲ್ಲೂ ಸಹ ಅಸಮಾನತೆಯನ್ನು ಹುಟ್ಟುಹಾಕಿರುವುದು ನಿಜಕ್ಕೂ ಅಕ್ಷಮ್ಯ. ಪ್ರಧಾನ ವೇದಿಕೆಯಲ್ಲಿ ಆದ ನಾಟಕಕ್ಕೆ ನಲವತ್ತು ಸಾವಿರ ಹಣ ಕೊಟ್ಟರೆ, ಸಮಾನ ವೇದಿಕೆಯಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ಮೂವತ್ತೈದು ಸಾವಿರ ಕೊಡುತ್ತೇನೆಂದು ಹೇಳಿ ಕೊನೆಗೆ ಚೌಕಾಸಿ ಮಾಡಿ ಇಪ್ಪತ್ತೈದು ಸಾವಿರ ಹಣ ಕೊಟ್ಟು ಕಳುಹಿಸಿದ್ದಾರೆಂದರೆ ಇವರನ್ನು ಸಾಹಿತ್ಯದ ಪ್ರತಿನಿಧಿಗಳೆನ್ನಬೇಕೋ ಇಲ್ಲವೇ ವ್ಯಾಪಾರಿ ಮನೋಭಾವದ ದಲ್ಲಾಳಿಗಳೆನ್ನಬೇಕೋ?
ಪುಂಡಲೀಕ ಹಾಲಂಬಿ ಕಸಾಪ ಅಧ್ಯಕ್ಷ |
ಯಾಕೆ ಈ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಧಿಯಾಗಿ ಇತರೆಲ್ಲಾ ಪದಾಧಿಕಾರಿಗಳು ನಾಟಕಕ್ಕೆ ಕೊಟ್ಟ ಕೊನೆಯ ಸ್ಥಾನ ಕೊಡುತ್ತಾರೆ. ಯಾಕೆ ನಾಟಕದ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುತ್ತಾರೆ? ನಾಟಕ ಎನ್ನುವುದು ಬಹುತೇಕ ಹಾಡು ನೃತ್ಯಗಳಂತೆ ಕೇವಲ ಮನರಂಜನೆಯ ಸರಕಲ್ಲ. ಅದು ಒಂದು ಸಾಹಿತ್ಯ ಕೃತಿ ಮಾಡಬಹುದಾದ ಹಾಗೂ ಮಾಡಲಾಗದ ಕೆಲಸವನ್ನು ಮಾಡುವಂತಹ ಪ್ರದರ್ಶನ ಮಾಧ್ಯಮವಾಗಿದೆ. ಸಾಹಿತ್ಯವನ್ನೂ ಸೇರಿದಂತೆ ಎಲ್ಲಾ ಕಲೆಗಳ ಸಂಗಮವಾಗಿ ರಂಗಭೂಮಿ ರೂಪಿತಗೊಂಡಿದೆ. ಈ ನಮ್ಮ ಸಾಹಿತ್ಯ ಪರಿಷತ್ತಿನ ಪಂಡಿತರಿಗೆ ಸಾಹಿತ್ಯದ ಶೇಷ್ಠತೆಯ ವ್ಯಸನ ಕಾಡುತ್ತಿದೆಯಾ? ಅಕ್ಷರ ಇಲ್ಲದಿದ್ದಾಗಲೂ ಜನಪದ ರಂಗಭೂಮಿ ಅಸ್ತಿತ್ವದಲ್ಲಿತ್ತು. ಕನ್ನಡಿಗರ ಸಂಸ್ಕೃತಿಯನ್ನು ನಾಟಕಗಳ ಮೂಲಕ ಕಟ್ಟಿಕೊಟ್ಟಿತ್ತು. ಜಾಗತೀಕರಣದ ದಾವಂತದಲ್ಲಿ ಅಕ್ಷರ ಸಂಸ್ಕೃತಿ ಮತ್ತೆ ತೀವ್ರವಾಗಿ ವಿನಾಶಗೊಳ್ಳುತ್ತಿರುವ ಈ ಕಾಲದಲ್ಲೂ ಸಹ ರಂಗಭೂಮಿ ತನ್ನದೇ ಆದ ರೀತಿಯಲ್ಲಿ ಜನರಲ್ಲಿ ಕಲೆ ಸಂಸ್ಕೃತಿ ಹಾಗೂ ಭಾಷಾ ಪ್ರಜ್ಞೆಯನ್ನು ಬೆಳೆಸುತ್ತಿದೆ. ನಾಟಕ ನೇರವಾಗಿ ಜನರನ್ನು ತಲುಪುವ ಜೀವಂತ ಮಾಧ್ಯಮವಾಗಿದೆ. ಸಾಹಿತ್ಯದ ಸತ್ತ ಅಕ್ಷರಗಳಿಗೂ ಜೀವಕೊಡುವ ಮಾಧ್ಯಮವಾಗಿದೆ. ಕೆಟ್ಟ ಕೃತಿಗಳಿಗೂ ದೃಶ್ಯವೈಭವ ಕಟ್ಟಿಕೊಟ್ಟು ನಾಟಕದಲ್ಲಿ ಮರುಜೀವ ಕಲ್ಪಿಸಿದ ಬೇಕಾದಷ್ಟು ಉದಾಹರಣೆಗಳಿವೆ. ಯಾರೂ ಓದದ ಬ್ರಹತ್ ಸಾಹಿತ್ಯಕ ಗ್ರಂಥಗಳನ್ನು ನಾಟಕದ ಮೂಲಕ ಜನರಿಗೆ ಸರಳವಾಗಿ ತಲುಪಿಸಿದ ಕೀರ್ತಿ ರಂಗಭೂಮಿಯದ್ದಾಗಿದೆ. ಕಲೆ ಸಂಸ್ಕೃತಿಯ ಅರಿವಿಲ್ಲದ ಸಾಹಿತ್ಯ ಕೇವಲ ಬೂಸಾ ಸಾಹಿತ್ಯವಾಗಿರಲು ಸಾಧ್ಯ.
ಉತ್ಸವಮೂರ್ತಿಗಳ ಮೆರವಣಿಗೆಗೆ ಅನಗತ್ಯ ದುಂದುಗಾರಿಕೆ ಮಾಡುವ, ಹಾರ ತುರಾಯಿ ಪೇಟ ಶಾಲುಗಳ ಸನ್ಮಾನಗಳಲ್ಲಿ ಆತ್ಮರತಿ ಸುಖ ಅನುಭವಿಸುವರಿಗೇನು ಗೊತ್ತು ರಂಗಭೂಮಿಯ ಪ್ರಾಮುಖ್ಯತೆ. ಕಲಾವಿದರ ಅಗತ್ಯತೆ. ಸಂಸ್ಕೃತಿ ಕಟ್ಟುವವರ ಅನಿವಾರ್ಯತೆ. ಈ ಬಹುತೇಕ ಸಾಹಿತ್ಯವಲಯ (ಎಲ್ಲರೂ ಅಲ್ಲ) ವಾಸ್ತವಕ್ಕೆ ವಿಮುಖವಾಗಿ ಭ್ರಮೆಯಲ್ಲಿ ಅಕ್ಷರ ಕೃಷಿ ಮಾಡುತ್ತಿದ್ದರೆ, ರಂಗಭೂಮಿ ಎನ್ನುವುದು ವಾಸ್ತವವನ್ನು ಪ್ರತಿಬಿಂಬಿಸುವಂತಹುದು. ಏಕವ್ಯಕ್ತಿ ಉತ್ಪಾದನೆಯಾದ ಸಾಹಿತ್ಯದಂತಲ್ಲ ನಾಟಕ. ಇದು ಬಹುಮುಖಿ ಹಾಗೂ ಬಹುವ್ಯಕ್ತಿಗಳ ಪರಿಶ್ರಮದಿಂದ ಸಾಕಾರಗೊಳ್ಳುವಂತಹುದು. ಇದನ್ನು ಮೊದಲು ಸಾಹಿತ್ಯ ಪರಿಷತ್ತಿನವರು ಮನದಟ್ಟು ಮಾಡಿಕೊಳ್ಳಬೇಕಿದೆ. ‘ನಾವು ಕೇವಲ ಹಣ ಕೊಡುತ್ತೇವೆ, ಅನುಕೂಲತೆ ಇರಲಿ ಬಿಡಲಿ, ಜನ ನೋಡಲಿ ಬಿಡಲಿ ನಾಟಕ ಮಾಡಿ ಹೋಗಿ’ ಎನ್ನುವಂತಹ ಪರಿಷತ್ತಿನವರ ಮನೋಭಾವ ಪಕ್ಕಾ ಉಡಾಫೆಯದ್ದಾಗಿದೆ. ಈ ಸಮ್ಮೇಳನದಲ್ಲಿ ನಿಜವಾದ ರಂಗಕರ್ಮಿಗಳನ್ನು ಗುರುತಿಸಿ ಸನ್ಮಾನಿಸುವುದನ್ನು ಬಿಟ್ಟು ರಂಗದಲ್ಲಾಳಿಗಳನ್ನು ಕರೆದು ಸನ್ಮಾನಿಸಿದ್ದು ಸಾಹಿತ್ಯ ಪರಿಷತ್ತಿನ ಸಮಯಸಾಧಕತನಕ್ಕೆ ಸಾಕ್ಷಿಯಾಗಿದೆ.
‘ಕನ್ನಡ ಸಾಹಿತ್ಯ ಪರಿಷತ್ತು’ ಎನ್ನುವುದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳಿಕೊಳ್ಳುತ್ತದೆ. ಆದರೆ ಕನ್ನಡಿಗರ ನರನಾಡಿಯಲ್ಲಿರುವ ಕಲೆ ಸಂಸ್ಕೃತಿಯನ್ನು ಕಡೆಗಣಿಸುತ್ತದೆ. ಇದರಲ್ಲಿ ರಂಗಭೂಮಿಯವರದೂ ತಪ್ಪಿದೆ. ನಮ್ಮ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದ ನಾಟಕ ಅಕಾಡೆಮಿಯವರು ಸಾಹಿತ್ಯ ಸಮ್ಮೇಳನದಲ್ಲಿ ಪಾಲು ಕೇಳಬೇಕಿತ್ತು. ರಂಗಭೂಮಿ ಕುರಿತು ಗೋಷ್ಠಿಗಳನ್ನು ಏರ್ಪಡಿಸಲು ಒತ್ತಾಯಿಸಬೇಕಿತ್ತು. ನಿಜವಾಗಿ ನಾಟಕ ಕಟ್ಟಲು ಶ್ರಮಿಸಿದವರಿಗೆ ಮಾತ್ರ ಸಮ್ಮೇಳನದಲ್ಲಿ ಸನ್ಮಾನ ಮಾಡಲು ಒತ್ತಡ ತರಬೇಕಿತ್ತು. ಸಮ್ಮೇಳನದಲ್ಲಿ ನಾಟಕ ಮಾಡಲು ಆಯ್ಕೆಯಾದ ತಂಡಗಳ ಪ್ರದರ್ಶನಕ್ಕೆ ಕನಿಷ್ಟ ಅನುಕೂಲತೆಗಳನ್ನು ಮಾಡಿಕೊಡಬೇಕು ಎನ್ನುವ ಕೋರಿಕೆಯನ್ನು ಪರಿಷತ್ತಿನ ಮುಂದಿಡಬೇಕಿತ್ತು. ಆದರೇನು ಮಾಡುವುದು? ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಧಿಯಾಗಿ ಪದಾಧಿಕಾರಿಗಳು ನಿಷ್ಕ್ರೀಯರಾಗಿದ್ದಾರೆ. ಅವರಿಗೆ ಎತ್ತಲು ದ್ವನಿಯೂ ಇಲ್ಲಾ ರಂಗಭೂಮಿ ಕುರಿತು ಕನಿಷ್ಟ ಕಾಳಜಿಯೂ ಇಲ್ಲ. ನಾಟಕ ಅಕಾಡೆಮಿ ರಂಗಭೂಮಿಯ ಪಾಲಿಗೆ ಸತ್ತು ಅದೆಷ್ಟೋ ದಿನಗಳಾಗಿವೆ. ತಿಥಿ ಮಾಡಬೇಕಾದದ್ದೊಂದೇ ಬಾಕಿಇದೆ. ಅಕಾಡೆಮಿ ತನ್ನ ಜವಾಬ್ದಾರಿಯನ್ನು ನಿಭಾಯಿಸದೇ ಹೋದಾಗ ಹಿರಿಯ ರಂಗಕರ್ಮಿಗಳಾದರೂ ಒಂದು ನಿಯೋಗವನ್ನು ಮಾಡಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೋಗಿ ರಂಗಭೂಮಿಗೆ ಸಮ್ಮೇಳನದ ಜಾತ್ರೆಯಲ್ಲಿ ಒಂದಿಷ್ಟು ಪಾಲನ್ನು ಕೊಡಬೇಕು ಎಂದು ಕೇಳುವುದು ಉತ್ತಮ. ಆದರೆ ಬೆಂಗಳೂರಿನ ಪ್ರಾಮಾಣಿಕ ರಂಗಕರ್ಮಿಗಳು ಮೌನವಾಗಿದ್ದಾರೆ, ಇನ್ನು ಕೆಲವು ಸಮಯಸಾಧಕರು ಸರಕಾರಿ ಪ್ರಾಜೆಕ್ಟ್ಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡು ಫಲಾನುಭವಿಗಳಾಗಿ ದಲ್ಲಾಳಿಗಳಾಗಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಅರಿತೇ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ರಂಗಭೂಮಿಗೆ ಕನಿಷ್ಠ ಪ್ರಾತಿನಿದ್ಯತೆಯನ್ನೂ ಕೊಡಲಿಲ್ಲ. ನಾಟಕ ಪ್ರದರ್ಶನಕ್ಕೆ ಬೇಕಾದ ಅನುಕೂಲತೆಗಳನ್ನೂ ಮಾಡಿಕೊಡಲಿಲ್ಲ. ಸಾಹಿತ್ಯ ಪರಿಷತ್ತಿನ ವೈಭವಗಳ ಜಗಮಗ ಬೆಳಕಲ್ಲಿ ನಾಟಕ ಎನ್ನುವುದು ನೇಪತ್ಯದಲ್ಲೇ ಉಳಿದುಬಿಟ್ಟಿತು. ಸಾಹಿತ್ಯ ಸಮ್ಮೇಳನವೆನ್ನುವುದು ಅವಕಾಶವಾದಿಗಳನ್ನು ಉತ್ಸವಮೂರ್ತಿಗಳನ್ನಾಗಿಸಿ ಮೆರವಣಿಗೆ ಮಾಡುವುದರಲ್ಲೇ ಸಾರ್ಥಕ್ಯವನ್ನು ಕಂಡಿತು. ಸನ್ಮಾನಗಳ ಭ್ರಮಾಲೋಕದಲ್ಲಿ, ಘೋಷಣೆಗಳ ವಿಜ್ರಂಭನೆಯಲ್ಲಿ, ಅದ್ದೂರಿತನದ ಅಂಧಾನುಕರಣೆಯಲ್ಲಿ, ರಾಜಕಾರಣಿಗಳನ್ನು ಓಲೈಸುವುದರಲ್ಲಿ ಎಂಬತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಿಂದೆದ್ದು ಮೌನವಾಯಿತು. ಮೂರು ದಿನಗಳ ವಾರ್ಷಿಕ ಜಾತ್ರೆಗೆ ತೆರೆಬಿದ್ದಿತು. ‘ಕನ್ನಡ ಭಾಷೆ ಸಂಸ್ಕೃತಿ ಈ ರೀತಿಯ ಅದ್ದೂರಿ ಜಾತ್ರೆಗಳಿಂದ ಉದ್ದಾರವಾದೀತು’ ಎನ್ನುವ ಭ್ರಮೆಯಲ್ಲಿ ಕನ್ನಡಿಗರು ನಿಟ್ಟುಸಿರುಬಿಟ್ಟರು. ಶ್ರವಣ ಬೆಳ್ಗೊಳದ ಬೆಟ್ಟದ ಮೇಲೆ ಇರುವುದೆಲ್ಲವ ಬಿಟ್ಟು ಬೆತ್ತಲೆ ನಿಂತ ವೈರಾಗ್ಯ ಮೂರ್ತಿ ಬಾಹುಬಲಿ ನಕ್ಕಿದ್ದಂತೂ ಯಾರ ಗಮನಕ್ಕೂ ಬರಲೇ ಇಲ್ಲ. ಅಷ್ಟರಲ್ಲಿಯೇ ಮುಂದಿನ ವರ್ಷದ ಜಾತ್ರೆಯ ಸ್ಥಳ ನಿಕ್ಕಿಯಾಯಿತು.
ಸಮ್ಮೇಳನಕ್ಕೆ ಸಾಕ್ಷಿಯಾಗಿ ಹೀಗೊಂದು ಕವಿತೆ ;
ವೈಭವ
ವಿಜ್ರಂಭನೆ
ಮೆರವಣಿಗೆ
ಬಹುಪರಾಕುಗಳನು
ದಿಕ್ಕರಿಸಿ
ಎಲ್ಲ ತೊರೆದು
ಬೆತ್ತಲಾದ
ಬಾಹುಬಲಿಯ
ಸನ್ನಿದಾನದಲ್ಲಿಂದು
ಹಾರ ತುರಾಯಿ
ಸನ್ಮಾನಗಳ ಆತ್ಮರತಿ.
ಸಮಯ ಸಾಧಕರ
ಮೆರೆಸುವ ಸಂಸ್ಕೃತಿ.
ಕನ್ನಡಮ್ಮನ ಜಾತ್ರೆಯಲ್ಲಿ
ತೌಡು ಕುಟ್ಟಿದವರ
ಚಪ್ಪಾಳೆ ತಟ್ಟಿದವರ
ಉತ್ಸವಮೂರ್ತಿಯಾಗಿ
ಮೆರೆದವರ ಕಂಡು
ಬೆಕ್ಕಸ ಬೆರಗಾಗಿ
ನಿಂತಿದೆ ಬಾಹುಬಲಿಯ
ಬೆತ್ತಲೆ ಮೂರ್ತಿ....!!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ