ಮಂಗಳವಾರ, ಮಾರ್ಚ್ 3, 2015

ದೇಶಾಭಿಮಾನ ಉತ್ತೇಜಿಸುವ “ರಣದುಂದುಭಿ” :

 ಸ್ವಾಭಿಮಾನದ ಅರಿವು ಮೂಡಿಸುವ ಐತಿಹಾಸಿಕ ನಾಟಕ ;



ದಿ. ಎನ್.ಎಸ್.ರಾವ್ ಕನ್ನಡ ಸಿನೆಮಾ ರಂಗದಲ್ಲಿ ಹಾಸ್ಯನಟರಾಗಿ ಹೆಸರಾದವರು. ಆದರೆ ಅವರು ನಾಟಕಕಾರರಾಗಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆಂಬುದು ಈಗಿನ ತಲೆಮಾರಿನವರಿಗೆ ಗೊತ್ತೇ ಇಲ್ಲ. ಹಾಸ್ಯಪ್ರಧಾನ ನಾಟಕಗಳ ಜೊತೆಗೆ ಗಂಭೀರ ನಾಟಕಗಳನ್ನೂ ಬರೆದ ಎನ್.ಎಸ್.ರಾವ್ ರವರು ತಮ್ಮ ಹಲವಾರು ನಾಟಕಗಳನ್ನು ತಾವೇ ನಿರ್ದೇಶಿಸಿದ್ದಾರೆರಾವ್ರವರ ನಾಟಕಗಳಲ್ಲಿ ರಣದುಂಧುಭಿ ಬಲು ವಿಶೇಷ ಐತಿಹಾಸಿಕ ನಾಟಕವಾಗಿದ್ದು ದೇಶಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸುತ್ತದೆ. ಎಪ್ಪತ್ತರ ದಶಕದಲ್ಲಿ ರಚಿಸಲ್ಪಟ್ಟ ನಾಟಕವನ್ನು ಈಗ ಮತ್ತೆ ನೆನಪಿಸಿಕೊಂಡು ಎಸ್..ಅನಂತ ಪದ್ಮನಾಭರವರು ತಮ್ಮ ರಂಗಕಿರಣ ರಂಗತಂಡಕ್ಕೆ ನಿರ್ದೇಶಿಸಿದ್ದಾರೆ. ದಿ.ಎನ್.ಎಸ್.ರಾವ್ ನಾಟಕಗಳ ಅಭಿಮಾನಿಯಾದ ಅನಂತ ಪದ್ಮನಾಭರವರು ರಾವ್ರವರ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಈವರೆಗೂ ನಿರ್ದೇಶಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 80 ದಶಕದಲ್ಲಿ ರಣದುಂದುಭಿ ನಾಟಕವನ್ನು ನಿರ್ದೇಶಿಸಿ ಕಾರ್ಮಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದರು. ಈಗ 2015 ಫೆಬ್ರವರಿ 27ರಂದು ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡ ರಣದುಂಧುಭಿ ನಾಟಕವು ದೇಶಾಭಿಮಾನ- ಏಕತೆ -ಸಮಗ್ರತೆ ಕುರಿತು ದುಂಧುಭಿಯನ್ನು ಮೊಳಗಿಸಿತು. ರಂಗಕಿರಣ ಕಲಾವೇದಿಕೆ ಫೆಬ್ರವರಿ 27 ಹಾಗೂ 28 ರಂದು ಆಯೋಜಿಸಿ ಎರಡು ದಿನಗಳ 'ಶಿವರಾತ್ರಿ ರಂಗೋತ್ಸವದ ಮೊದಲ ದಿನ ಪ್ರದರ್ಶನಗೊಂಡಿತು. 
      
ಗ್ರೀಕ್ ಸಾಮ್ರಾಟ್ ಅಲೆಕ್ಸಾಂಡರ್ ತನ್ನ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾ ಹಿಂದೂಸ್ಥಾನದ ಮೇಲೆ ಆಕ್ರಮಣಮಾಡಿದಾಗ ದೇಸಿ ದೊರೆ ಪೌರವ ಪ್ರಭಲವಾಗಿ ವಿರೋಧಿಸುತ್ತಾನೆ. ಪೌರವ ರಾಜನ ವೈರಿಯಾಗಿದ್ದ ನೆರೆರಾಜ್ಯದ ಅಂಬಿಯು ಅಲೆಕ್ಸಾಂಡರನಿಗೆ ಶರಣಾಗತನಾಗಿ ಪೌರವನ ಸೈನ್ಯದ ರಹಸ್ಯಗಳನ್ನು ತಿಳಿಸಿ ಪೌರವನ ಬಂಧನಕ್ಕೆ ಸಹಕರಿಸುತ್ತಾನೆ. ಕೊನೆಗೆ ಅಂಬಿಯ ದ್ರೋಹಕ್ಕೆ ಅಲೆಕ್ಸಾಂಡರ್ ಶಿಕ್ಷೆ ವಿಧಿಸಿದರೆ ಪೌರವನ ಪರಾಕ್ರಮಕ್ಕೆ ಬೆರಗಾಗಿ ಸತ್ಕರಿಸಿ ಸ್ವತಂತ್ರಗೊಳಿಸುತ್ತಾನೆ. ಇದು ರಣದುಂಧುಭಿ ನಾಟಕದ ಸಂಕ್ಷಿಪ್ತ ಕಥೆ.


  ನಾಟಕದ ತುಂಬಾ ಜೈ ಭಾರತ, ಭಾರತೀಯರು, ಭಾರತಾಂಬೆ, ರಾಷ್ಟ್ರಭಕ್ತಿ.. ಎಂಬ ಹಲವಾರು ಮಾತುಗಳು ಪುನರಾವರ್ತನೆಗೊಂಡಿವೆ. ಭಾರತಮಾತೆಯ ಪಾತ್ರವನ್ನೂ ಸೃಷ್ಟಿಸಲಾಗಿದೆ. ಎನ್.ಎಸ್.ರಾವ್ರವರ ಭಾರತ ದೇಶದ ಕುರಿತ ಪ್ರೀತಿ ಭಕ್ತಿಗಳು ನಾಟಕದಾದ್ಯಂತ ವಿಜ್ರಂಭಿಸಿವೆ. ಪ್ರೇಕ್ಷಕರಲ್ಲಿ ದೇಶಭಕ್ತಿಯನ್ನು ಎಚ್ಚರಿಸುವ ಉದ್ದೇಶದಿಂದಲೇ ನಾಟಕವನ್ನು ಬರೆಯಲಾಗಿದೆ. ರಾವ್ರವರು ರಚಿಸಿದ ರಂಗಪಠ್ಯಕ್ಕೆ ಅತೀ ನಿಷ್ಠರಾಗಿಯೇ ಅನಂತರವರು ನಾಟಕವನ್ನು ನಿರ್ದೇಶಿಸಿದ್ದಾರೆ. ಹಾಗೂ ಇಡೀ ನಾಟಕವನ್ನು ರಾವ್ರವರು ಹಾಗೂ ಅನಂತರವರು ಐತಿಹಾಸಿಕ ನಾಟಕ ಎಂದೇ ಪ್ರತಿಬಿಂಬಿಸಿದ್ದಾರೆ. ಆದರೆ... ನಾಟಕ ಐತಿಹಾಸಿಕ ಘಟನೆಗಳನ್ನು ಆಧರಿಸಿದ ನಾಟಕವಾಗಿದೆಯೇ ಹೊರತು ಐತಿಹಾಸಿಕ ಬದ್ದತೆಯನ್ನು ಹೊಂದಿದ್ದಲ್ಲ. ಯಾಕೆಂದರೆ ಅಲೆಕ್ಸಾಂಡರ್ನು ಪೌರವನ ರಾಜ್ಯದ ಮೇಲೆ ದಾಳಿಮಾಡಿದ್ದು ಕ್ರಿಸ್ತಪೂರ್ವ 327ನೇ ಇಸವಿಯಲ್ಲಿ. ಆಗ ಭಾರತ ದೇಶವೂ ಇರಲಿಲ್ಲ. ಇನ್ನೂ ಭಾರತಮಾತೆ ಹುಟ್ಟಿರಲೇ ಇಲ್ಲ. ಆಗ ಗಾಂಧಾರ, ಪಾಂಚಾಲ, ಮಗಧ.... ಹೀಗೆ ಹಲವು ರಾಜ್ಯಗಳು ಅಸ್ತಿತ್ವದಲ್ಲಿದ್ದವೇ ಹೊರತು ಈಗಿನ ಹಾಗೆ ಇಡೀ ಭಾರತ ಇರಲೇ ಇಲ್ಲ. ವಾಸ್ತವ ಪ್ರಜ್ಞೆ ಹಾಗೂ ಕಾಲೈಕ್ಯವನ್ನು ಬದಿಗಿಟ್ಟು ರಾಷ್ಟ್ರಭಕ್ತಿಯನ್ನು ಹೇಳುವ ಎನ್.ಎಸ್.ರಾವ್ ರವರ ಆಶಯದ ಭಾಗವಾಗಿ ನಾಟಕ ಮೂಡಿಬಂದಿದೆ. ಐತಿಹಾಸಿಕ ಕಾಲಘಟ್ಟದ ನಿಷ್ಟೆಗಿಂತಲೂ ರಾಷ್ಟ್ರಭಕ್ತಿಯ ಬದ್ದತೆಯನ್ನು ಚಿತ್ರಿಸುವಲ್ಲಿ ರಣದುಂಧುಭಿ ಯಶಸ್ವಿಯಾಗಿದೆ.




ನಾಟಕವು ಒಗ್ಗಟ್ಟಿನಲ್ಲಿ ಬಲವಿದೆ, ದ್ರೋಹದಲ್ಲಿ ದುರಂತವಿದೆ ಎಂಬುದನ್ನು ದೃಶ್ಯಗಳ ರೂಪದಲ್ಲಿ ನೋಡುಗರಿಗೆ ಮನದಟ್ಟು ಮಾಡಿಕೊಡುವಂತಿದೆ. ಕ್ರಿಸ್ತಪೂರ್ವದ ಕಾಲಘಟ್ಟದಲ್ಲಿ ನಡೆದ ಪೌರವ ರಾಜನ ಏಕತೆಯ ಆದರ್ಶಗಳು ನಂತರದ ಎಲ್ಲಾ ರಾಜರುಗಳಿಗೂ ಆದರ್ಶವಾಗಬೇಕಾಗಿತ್ತು. ಹಾಗಾಗದೇ ಇರುವುದರಿಂದ ಅಲೆಗ್ಜಾಂಡರನ ನಂತರ ಹಿಂದೂಸ್ಥಾನದ ಮೇಲೆ ದಂಡೆತ್ತಿ ಬಂದು ಆಕ್ರಮಿಸಿಕೊಂಡ ಮೊಘಲರು ಹಾಗೂ ಬ್ರಿಟೀಶರು ಹಿಂದುಸ್ಥಾನದ ರಾಜ್ಯಗಳನ್ನು ಒಡೆದು ಆಳಿದರು. ವಿಸ್ತರಣಾವಾದಿಗಳ ಕುತಂತ್ರಕ್ಕೆ ಇಡೀ ಹಿಂದುಸ್ಥಾನವೇ ಹಲವು ಶತಮಾನಗಳ ಕಾಲ ಗುಲಾಮಗಿರಿಯಲ್ಲಿ ನರಳಬೇಕಾಯಿತು. ಸ್ವಾಭಿಮಾನ ಹಾಗೂ ಪರಾಕ್ರಮಗಳ ಸಂಗಮವಾದ ಪೌರವ ರಾಜ ಹಿಂದುಸ್ಥಾನದ ಸ್ವಾಭಿಮಾನದ ಸಂಕೇತವಾಗಬೇಕಾಗಿತ್ತು. ಆದರೆ... ಅಂಬಿಯಂತಹ ಬಹುತೇಕ ಹೇಡಿ ರಾಜರುಗಳ ರಾಜೀಕೋರತನದಿಂದಾಗಿ ಹಿಂದುಸ್ಥಾನ ಪರಾಧೀನವಾಯಿತು. ಈಗಲೂ ಸಹ ಸ್ವತಂತ್ರ ಭಾರತವೆಂದು ನಮ್ಮ ದೇಶವನ್ನು ಅದೆಷ್ಟೇ ಹೇಳಿಕೊಂಡರೂ ದೇಶ ಸಾಮ್ರಾಜ್ಯಶಾಹಿ ದೇಶಗಳ ಹಿಡಿತದಲ್ಲೇ ಇದೇ. ಜಾಗತಿಕ ಕಾರ್ಪೋರೇಟ್ ವ್ಯಾಪಾರೋಧ್ಯಮ ವಲಯ ಭಾರತಮಾತೆಗೆ ಸಂಕೋಲೆಗಳನ್ನು ತೊಡಿಸಿ ಲೂಟಿ ಮಾಡುತ್ತಲೇ ಇದೆ. ಭಾರತವೆಂಬುದು ಸ್ವತಂತ್ರವೆಂದು ತೋರುವ ಪರಾತಂತ್ರ ದೇಶವಾಗಿದೆ. ದೇಶವನ್ನು ಆಳುವ ವರ್ಗಗಳು ಅಂಬಿ ರಾಜನ ಹಾಗೆ ಸಾಮ್ರಾಜ್ಯಶಾಹಿಗಳ ದಲ್ಲಾಳಿಗಳಂತಾಗಿದ್ದು ದೇಶದ ಅಸಂಖ್ಯಾತ ದುಡಿಯುವ ಜನತೆ ಶೋಷಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನ ಹಾಗೂ ದೇಶಪ್ರೇಮವನ್ನು ಪ್ರೇರೇಪಿಸುವ ರಣದುಂಧುಭಿ ನಾಟಕವು ಐತಿಹಾಸಿಕವಾದರೂ ಪ್ರಸ್ತುತವೆನಿಸುತ್ತದೆ. ನೋಡುಗರ ನರನಾಡಿಗಳಲ್ಲಿ ರಾಷ್ಟ್ರಪ್ರೇಮವನ್ನು ಉಕ್ಕಿಸುವಂತಿದೆ.



ನಾಟಕದಲ್ಲಿ ಬಳಸಿದ ಭಾಷೆ ಹಾಗೂ ಸಂಭಾಷಣೆಯಲ್ಲಿ ಭಾರೀ ತಾಕತ್ತಿದೆ. ಪದಪದಗಳೂ ಸಶಕ್ತವಾಗಿ ಮೂಡಿಬಂದಿವೆ. ಆದರೆ ಕ್ಷಾತ್ರ ತೇಜದ ಶುದ್ಧರಕ್ತ ಎನ್ನುವುದು ಪೌರವ ಹಾಗೂ ಆತನ ಮಗನ ಬಾಯಲ್ಲಿ ಹಲವು ಬಾರಿ ಪುನರಾವರ್ತನೆಯಾಗುತ್ತವೆ. ಇದು ಪುರೋಹಿತಶಾಹಿ ಭಾಷೆಯಾಗಿದ್ದು ಶುದ್ಧರಕ್ತ ಅಶುದ್ಧರಕ್ತದ ಪರಿಕಲ್ಪನೆಯೇ ಇಲ್ಲಿ ವಿಕ್ಷಿಪ್ತಕಾರಿಯಾಗಿದೆ. ಆಧುನಿಕ ನಾಟಕ ಶೈಲಿಗೆ ವೃತ್ತಿ ಕಂಪನಿ ನಾಟಕದ ಶೈಲಿಯನ್ನು ಕಸಿಮಾಡಿದಂತೆ ನಾಟಕ ಮೂಡಿಬಂದಿದೆ. ನಾಟಕದ ಸ್ಟ್ರಕ್ಚರ್, ಬಳಸಿದ ಭಾಷಾ ಶೈಲಿ ಎಲ್ಲವೂ ವೃತ್ತಿ ಕಂಪನಿ ನಾಟಕಗಳನ್ನೇ ಹೋಲುವಂತಿದೆ. ಪರಾಕ್ರಮಿ ಪೌರವನ ರಾಜ್ಯದಲ್ಲಿ ರಣಹೇಡಿ ಪ್ರಜೆಗಳಿರುವ ದೃಶ್ಯ ನಾಟಕದ ಆಶಯಕ್ಕೆ ದಕ್ಕೆತರುವಂತಿದೆ. ಕಾಮಿಕ್ ರಿಲೀಪ್ಗಾಗಿ ಡಂಗುರದವನ ದೃಶ್ಯ ಸೇರಿಸಲಾಗಿದೆಯಾದರೂ ಅದು ಅನಗತ್ಯ ಹಾಗೂ ಆಭಾಸಕಾರಿಯಾಗಿ ಮೂಡಿಬಂದಿದ್ದು ದೃಶ್ಯ ಇಲ್ಲದಿದ್ದರೂ ನಾಟಕಕ್ಕೇನೂ ಭಂಗಬರುತ್ತಿರಲಿಲ್ಲ. ನಾಟಕದಲ್ಲಿ ಪೌರವ ಎಲ್ಲೂ ಯುದ್ಧ ಮಾಡುವುದಿಲ್ಲ. ಆತನ ಮಗ ಯುದ್ದಮಾಡಿ ವೀರಮರಣವನ್ನಪ್ಪುತ್ತಾನೆ. ಆದರೆ ಅಂತಿಮ ದೃಶ್ಯದಲ್ಲಿ ಅಲೆಗ್ಸಾಂಡರ್ ರಣರಂಗಕ್ಕೆ ಬಾರದ ಪೌರವನ ಯುದ್ದ ಪರಾಕ್ರಮವನ್ನು ಹೊಗಳಿದ್ದು ಸರಿಎನ್ನಿಸುವಂತಿಲ್ಲ. ಪೌರವನ ರಣಕೌಶಲ್ಯವನ್ನು ತೋರಿಸುವ ದೃಶ್ಯವೊಂದು ಮಿಸ್ ಆದಂತಿದೆ.


ನಿರ್ದೇಶಕರು ಸ್ವತಃ ರಂಗಕಲಾವಿದರಾಗಿದ್ದರಿಂದ ಹೊಸ ನಟ ನಟಿಯರನ್ನು ಪಾತ್ರವಾಗಿಸುವಲ್ಲಿ ತುಂಬಾನೇ ಪರಿಶ್ರಮವಹಿಸಿ ಸಫಲರಾಗಿದ್ದಾರೆ. ಪ್ರತಿಯೊಂದು ಪ್ರಮುಖ ಪಾತ್ರಗಳೂ ತಮ್ಮ ಪಾತ್ರಕ್ಕೆ ನ್ಯಾಯವೊದಗಿಸಿವೆ. ಅಲೆಕ್ಸಾಂಡರ್ ಪಾತ್ರದಾರಿ ಅಭಿಷೇಕ್ರವರ ದೈಹಿಕ ಭಾಷೆ ಹಾಗೂ ವಿಚಿತ್ರ ರೀತಿಯ ಸಂಭಾಷಣೆ ಶೈಲಿ ಆಕರ್ಷಣೀಯವಾಗಿದೆ. ಅಂಬಿ ರಾಜನಾಗಿ ಅವಿನಾಶ್ ಹಾಗೂ ಪೌರವ ದೊರೆಯಾಗಿ ಗಂಗಾಧರ್ ಇಬ್ಬರೂ ತಮ್ಮ ಪಾತ್ರಕ್ಕೆ ನ್ಯಾಯವದಗಿಸುವುದರಲ್ಲಿ ಶ್ರಮಿಸಿದ್ದಾರೆ. ಭಾರತ ಮಾತೆಯಾಗಿ ಭಾರ್ಗವಿ ಹಾಗೂ ಪೌರವನ ರಾಣಿಯಾಗಿ ನೇತ್ರಾವತಿ ಇಬ್ಬರೂ ಯುವತಿಯರು ಪುಟ್ಟ ಪಾತ್ರದಲ್ಲೇ ಗಮನಾರ್ಹವಾಗಿ ನಟಿಸಿದ್ದಾರೆ. ಆಚಾರ್ಯ ಚಾಣಕ್ಯನ ಪಾತ್ರವನ್ನು ಸ್ವಕಾಯಪ್ರವೇಶ ಮಾಡಿಕೊಂಡು ಅಭಿನಯಿಸಿದ ದೀಪಕ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪ್ರಮುಖ ಪಾತ್ರಗಳಿಗೆ ಹೆಚ್ಚು ತಾಲಿಂ ಮಾಡಿಸಿ ಪುಟ್ಟ ಪಾತ್ರಗಳನ್ನು ನಿರ್ದೇಶಕರು ನಿರ್ಲಕ್ಷಿಸಿದಂತಿದ್ದು ಸೈನಿಕರು, ಪುರಜನರು, ಡಂಗೂರದವರ ಪಾತ್ರಗಳು ತುಂಬಾ ದುರ್ಬಲವಾಗಿ ಮೂಡಿಬಂದಿವೆ. ಪುಟ್ಟ ಪಾತ್ರಗಳನ್ನೂ ಇನ್ನೂ ತಿದ್ದಿ ತೀಡಿ ರೂಪಗೊಳಿಸಿ ರಂಗಶಿಸ್ತನ್ನು ಕಲಿಸಿದ್ದರೆ ನಾಟಕ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ನಿಟ್ಟಿನಲ್ಲಿ ನಿರ್ದೇಶಕರು ಗಮನ ಹರಿಸುವುದುತ್ತಮ.



ಮಹಾದೇವಸ್ವಾಮಿ ನಿರ್ವಹಿಸಿದ ಬೆಳಕು ನಾಟಕದಾದ್ಯಂತ ಇತ್ತಾದರೂ ದೃಶ್ಯದ ಮೂಡಿಗೆ ತಕ್ಕಹಾಗೆ ಸ್ಪಂದಿಸುವಲ್ಲಿ ವಿಫಲವಾಯಿತು. ಅಗತ್ಯ ಇರಲಿ ಬಿಡಲಿ ಹಿಂಭಾಗದ ಪರದೆ (ಸೈಕ್) ಮೇಲೆ ನಾಟಕದಾದ್ಯಂತ ನೋಡುಗರ ಕಣ್ಣಿಗೆ ಹೊಡೆಯುವಂತೆ ಬೆಳಕನ್ನು ಬಿಟ್ಟಿದ್ದು ನಾಟಕದ ವೀಕ್ಷಕರಿಗೆ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡಿತು. ಮೂಡಿಗೆ ತಕ್ಕಂತೆ ಸೈಕ್ ಬಣ್ಣಬದಲಾಯಿಸಿದ್ದರೆ ನಾಟಕದ ಖದರ್ರೇ ಬೇರೆಯಾಗುತ್ತಿತ್ತು. ರಾಗರಂಗ ರಂಗರಾಜರವರ ಹಿನ್ನೆಲೆ ಸಂಗೀತದ ಎಫೆಕ್ಟ್ ಪರ್ಪೆಕ್ಟಾಗಿ ಮೂಡಿಬರದೇ ನಾಟಕದ ಪಾತ್ರಗಳ ಚಲನೆಯ ಜೊತೆಗೆ ಸಿಂಕ್ ಆಗಲಿಲ್ಲ. ಕೆಲವೊಮ್ಮೆ ಪಾತ್ರಗಳು ಮಾತಾಡುತ್ತಿರುವಾಗಲೇ ಅನಗತ್ಯವಾಗಿ ಹಾರ್ಮೋನಿಯಂ ತನ್ನ ಇರುವನ್ನು ತೋರಿಸಿದ್ದು ಕೇಳುಗರಲ್ಲಿ ಅಸಹನೆಯನ್ನುಂಟುಮಾಡಿದ್ದಂತೂ ಸುಳ್ಳಲ್ಲ. ರಾಮಕೃಷ್ಣ ಬೆಳ್ತೂರರ ಪ್ರಸಾದನ ವ್ಯಕ್ತಿಗಳನ್ನು ಪಾತ್ರವಾಗಿಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಆದರೆ ಪಾತ್ರಗಳ ಕಾಸ್ಟೂಮ್ಗಳತ್ತ ಇನ್ನೂ ತಮ್ಮ ಚಿತ್ತ ಹರಿಸಬೇಕಾಗಿತ್ತು. ನಾಟಕದ ಸೈನಿಕರು ಹಾಗೂ ನಾಗರೀಕರು ಎಲ್ಲಾ ಒಂದೇ ರೀತಿ ಕಾಸ್ಟೂಮ್ ಧರಿಸಿದ್ದು ಗೊಂದಲವನ್ನುಂಟುಮಾಡುವಂತಿತ್ತು. ರಂಗಪರಿಕರಗಳಿವೆಯಾದರೂ ಅವುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ನಿರ್ದೇಶಕರು ಅಭಿನಯಕ್ಕೆ ಕೊಟ್ಟಷ್ಟೇ ಮಹತ್ವವನ್ನು ಇತರೇ ರಂಗತಂತ್ರಗಳ ಬಳಕೆಗೂ ಕೊಟ್ಟಿದ್ದರೆ, ದೃಶ್ಯ ಸಂಯೋಜನೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿದ್ದರೆ... ನಾಟಕ ಅತ್ಯುತ್ತಮವಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ. ಏನೇ ಆದರೂ ಹೊಸ ಯುವ ನಟ ನಟಿಯರನ್ನು ಬಳಸಿಕೊಂಡು ಐತಿಹಾಸಿಕ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕರ ಶ್ರಮವನ್ನು ಹಾಗೂ ರಂಗಕಿರಣ ತಂಡವನ್ನು ನಿರ್ವಹಣೆ ಮಾಡುತ್ತಿರುವ ರೇಣುಕಾ ರೆಡ್ಡಿರವರ ಪರಿಶ್ರಮವನ್ನು ಮೆಚ್ಚಲೇಬೇಕು.


ನಿರ್ದೇಶಕ ಅನಂತ ಪದ್ಮನಾಭ
ಅಂಬಿಯಂತಹ ಅವಕಾಶವಾದಿ ಸ್ವಾರ್ಥಿಗಳೇ ನಮ್ಮ ದೇಶವನ್ನು ಸ್ವಾತಂತ್ರ್ಯಾನಂತರ ಸಾಮ್ರಾಜ್ಯಶಾಹಿಗಳ ಅಣತಿಯಂತೆ ಆಳುತ್ತಿರುವಾಗ, ಅಲೆಕ್ಸಾಂಡರನಂತಹ ಆಕ್ರಮಣಕೋರರು ಈಗ ಸಾವಿರಾರು ಸಂಖ್ಯೆಯಲ್ಲಿ ಕಾರ್ಪೋರೇಟ್ ವೇಷವನ್ನು ತೊಟ್ಟು ನಮ್ಮ ದೇಶವನ್ನು ಲೂಟಿಮಾಡುತ್ತಿರುವಾಗ ಪೌರವ ರಾಜರಂತಹ ಸ್ವಾಭಿಮಾನಿಗಳು ದೇಶದಲ್ಲಿ ಹುಟ್ಟಿಬರಬೇಕಿದೆ. ಏಕಕಾಲಕ್ಕೆ ಆಳುವ ಬಂಡವಾಳಶಾಹಿ ಶೋಷಕ ವರ್ಗ ಹಾಗೂ ಸಾಮ್ರಾಜ್ಯಶಾಹಿ ಲೂಟಿಕೋರರ ವಿರುದ್ಧ ದೇಶದ ಸ್ವಾಭಿಮಾನಿ ಪ್ರಜೆಗಳು ಒಂದಾಗಿ ಪ್ರತಿಭಟಿಸಬೇಕಾಗಿದೆ. ನಿಟ್ಟಿನಲ್ಲಿ ಸ್ವಾತಂತ್ರ್ಯ, ಸ್ವಾವಲಂಬನೆ, ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತಹ, ನರಸತ್ತವರ ನರನಾಡಿಯಲ್ಲಿ ದೇಶಾಭಿಮಾನವನ್ನು ಬಿತ್ತುವಂತಹ ರಣದುಂಧುಭಿ ನಾಟಕ  ಇನ್ನಷ್ಟು ಪರಿಷ್ಕರಣಗೊಂಡು ರಾಜ್ಯಾದ್ಯಂತ ಪ್ರದರ್ಶನಗೊಳ್ಳಬೇಕಾಗಿದೆ. ರಾಜೀಕೋರರ ಹಾಗೂ ಲೂಟಿಕೋರರ ಕುತಂತ್ರಗಳನ್ನು ಬಯಲುಗೊಳಿಸಲೇಬೇಕಿದೆ.

                                       -ಶಶಿಕಾಂತ ಯಡಹಳ್ಳಿ
                        



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ