ಬುಧವಾರ, ಮಾರ್ಚ್ 4, 2015

“ಯಡಹಳ್ಳಿಗೆ ಹೆದರಿ ಪಲಾಯನವಾದಿಯಾದ ಗುಡಿಹಳ್ಳಿ” :




ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡು ಬಾರದೇ ತಪ್ಪಿಸಿಕೊಳ್ಳುವವರಿಗೆ ಏನೆನ್ನಬೇಕು? ತುಂಬಾ ತುಂಬಾನೇ ದೊಡ್ಡವರೆನ್ನಬೇಕು ಇಲ್ಲವೇ ಬೇಜವಾಬ್ದಾರಿ ವ್ಯಕ್ತಿಗಳೆನ್ನಬೇಕು. ಇಂತಹುದೆಲ್ಲಾ ರಾಜಕಾರಣಿಗಳ ವಿಷಯದಲ್ಲಿ ಹೆಚ್ಚಾಗಿ ಆಗುತ್ತದೆ. ಆದರೆ ರಂಗಭೂಮಿಯಲ್ಲಿ ಒಂದು ಕಮಿಟ್ಮೆಂಟ್ ಎನ್ನುವುದು ಇರುತ್ತದೆ ಹಾಗೂ ಇರಬೇಕು. ಒಂದು ಸಾರಿ ಒಪ್ಪಿಕೊಂಡರೆ ಅದೆಂತುಹುದೇ ಅಡೆತಡೆ ಬಂದರೂ ಕಾರ್ಯಕ್ರಮಕ್ಕೆ ಬರಲೇಬೇಕು, ಅಕಸ್ಮಾತ್ ಬರೋದಿಕ್ಕೆ ಆಗೋದಿಲ್ಲ ಎನ್ನುವಂತಹ ಅನಿವಾರ್ಯ ಪರಿಸ್ಥಿತಿ ತಲೆದೋರಿದರೆ ಕನಿಷ್ಟ ಕಾರ್ಯಕ್ರಮದ ಆಯೋಜಕರಿಗೆ ಪೋನ್ ಮಾಡಿ ತಿಳಿಸುವ ಸೌಜನ್ಯವನ್ನಾದರೂ ತೋರಿಸಬೇಕು. ಆದರೆ ಇವೆರಡನ್ನೂ ಮಾಡದೇ ಇರುವವರನ್ನು ಉಡಾಫೆಯ ವ್ಯಕ್ತಿ ಎಂದು ಕರೆಯಬಹುದಾಗಿದೆ. ಇಂತಹ ಬೇಜವಾಬ್ದಾರಿಯನ್ನು ಮೆರೆದಿದ್ದು ಬೇರೆ ಯಾರೂ ಅಲ್ಲಾ ಹಿರಿಯ ಪತ್ರಕರ್ತ ಹಾಗೂ ಹಾಲಿ ಕರ್ನಾಟಕ ನಾಟಕ ಅಕಾಡೆಮಿಯ ಕೋಆಪ್ಟ್ ಸದಸ್ಯ ಗುಡಿಹಳ್ಳಿ ನಾಗರಾಜ್.

ಫೆಬ್ರುವರಿ 27 ಹಾಗೂ 28 ರಂದು ರಂಗಕಿರಣ ಕಲಾವೇದಿಕೆ ಯು ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಶಿವರಾತ್ರಿ ರಂಗೋತ್ಸವದ ಹೆಸರಲ್ಲಿ ಎರಡು ದಿನಗಳ ನಾಟಕೋತ್ಸವ, ರಂಗಸನ್ಮಾನ ಹಾಗೂ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಮೊದಲ ದಿನದ ಉದ್ಘಾಟನೆಗೆ ಪ್ರೊ.ಚಂದ್ರಶೇಖರ್ ಪಾಟೀಲರನ್ನು ಹಾಗೂ ವಿಚಾರ ಸಂಕಿರಣಕ್ಕೆ ರಾಜಶೇಖರ ಮಠಪತಿ ಹಾಗೂ ನನ್ನನ್ನು ಆಹ್ವಾನಿಸಲಾಗಿತ್ತು. ಎರಡನೇ ದಿನದ ಕಾರ್ಯಕ್ರಮಕ್ಕೆ ಪ್ರೊ. ಎಸ್.ಜಿ.ಸಿದ್ದರಾಮಯ್ಯನವರು ಅಧ್ಯಕ್ಷರಾಗಿದ್ದರೆ, ಅಕಾಡೆಮಿ ಸದಸ್ಯರಾದ ಗುಡಿಹಳ್ಳಿ ನಾಗರಾಜ್ರವರು ಹಾಗೂ ಕಲಾವಿದೆ ಕಮನೀಧರನ್ರವರು ಅತಿಥಿಗಳಾಗಿದ್ದರು. ಕಾರ್ಯಕ್ರಮಕ್ಕೆ ಒಂದು ವಾರ ಮುಂಚೆಯೇ ರಂಗೋತ್ಸವದ ಕುರಿತು ಮೇಲೆ ತಿಳಿಸಿದ ಎಲ್ಲಾ ಗಣ್ಯರಿಗೂ ತಿಳಿಸಿ ಅನುಮತಿಯನ್ನು ಪಡೆಯಲಾಗಿತ್ತು. ಗುಡಿಹಳ್ಳಿಯವರೂ ಸಹ ಆಯಿತು ಫೆಬ್ರುವರಿ 28ಕ್ಕೆ ಬಂದೇ ಬರುತ್ತೇನೆ ಎಂದೂ ಒಪ್ಪಿಕೊಂಡಿದ್ದರು. ಆಹ್ವಾನ ಪತ್ರಿಕೆ ಮುದ್ರಣಗೊಂಡು ಹಂಚಲಾಯಿತು. ಮೂರು ದಿನಗಳ ಮುಂಚೆ ರಂಗಕಿರಣದ ಅನಂತ ಪದ್ಮನಾಭರವರು ಆಹ್ವಾನ ಪತ್ರಿಕೆ ಕೊಡಲು ಬರುತ್ತೇನೆಂದಾಗ ‘‘ಅಯ್ಯೋ ನನಗೆ 28ಕ್ಕೆ ಮೈಸೂರಲ್ಲಿ ಕಾರ್ಯಕ್ರಮವಿದೆ. ಆದ್ದರಿಂದ 27 ಕ್ಕೆ ಬರುತ್ತೇನೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ’’ ಎಂದರು. ಸರಿ ಇನ್ನೇನು ಮಾಡಲಾಗುತ್ತದೆ ಎಂದುಕೊಂಡ ಅನಂತರವರು 27ನೇ ತಾರೀಖಿನಂದು ಕಾರ್ಯಕ್ರಮದ ಅತಿಥಿಗಳಾಗಿದ್ದ ರಾಜಶೇಖರ್ ಮಠಪತಿಯವರನ್ನು ವಿನಂತಿಸಿಕೊಂಡು 27 ಬದಲಾಗಿ 28ನೇ ತಾರೀಖಿನಂದು ಬರಬೇಕೆಂದು ಕೇಳಿಕೊಂಡರು. ವಿನಯವಂತ ಸಾಹಿತಿ ಮಠಪತಿಯವರು ಆಯಿತು ಎಂದು ಒಪ್ಪಿಕೊಂಡಾಗಲೇ ಅನಂತ್ ನಿಟ್ಟುಸಿರುಬಿಟ್ಟರು. ಅವತ್ತೇ ಹೋಗಿ ಆಹ್ವಾನ ಪತ್ರಿಕೆಯ ಪ್ರತಿಯೊಂದನ್ನು ಗುಡಿಹಳ್ಳಿಯವರಿಗೆ ತಲುಪಿಸಿದರು. ಆಹ್ವಾನ ಪತ್ರಿಕೆ ನೋಡುತ್ತಲೇ ಅದ್ಯಾಕೋ ಗುಡಿಹಳ್ಳಿಯವರ ಮುಖ ಗಂಟುಗೊಂಡ ಸೂಕ್ಷ್ಮತೆಯನ್ನು ಅನಂತ್ ಗುರುತಿಸಿದರು. ಸರಿ ಆಯಿತು 27ಕ್ಕೆ ಬರುತ್ತೇನೆಂದು ಒಪ್ಪಿಕೊಂಡ ಗುಡಿಹಳ್ಳಿಯವರ ಮಾತನ್ನು ನಂಬಿದ ಆಯೋಜಕರು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾದರು.


 ಅಂದು ಫೆಬ್ರುವರಿ 27, ಶಿವರಾತ್ರಿ ರಂಗೋತ್ಸವದ ಮೊದಲನೇ ದಿನ. ಬೆಳ್ಳಂಬೆಳಿಗ್ಗೆ ಕಾರ್ಯಕ್ರಮವನ್ನು ನೆನಪಿಸಲೆಂದು ಗುಡಿಹಳ್ಳಿಯವರಿಗೆ ಪೋನ್ ಮಾಡಿದ ಅನಂತ್ ಹಾಗೂ ರೇಣುಕಾ ರೆಡ್ಡಿಯವರಿಗೆ ಆಘಾತಕಾರಿ ಪ್ರತಿಕ್ರಿಯೆ ಸಿಕ್ಕಿತ್ತು. ಇಲ್ಲಾ ನನಗೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಅರ್ಜೆಂಟಾಗಿ ಮೈಸೂರಿಗೆ ಹೋಗಬೇಕಾಗಿದೆ ಎಂದು ಗುಡಿಹಳ್ಳಿಯವರು ಪೋನಲ್ಲೇ ಗುಡುಗಿದರು. ಗುಡಿಹಳ್ಳಿ ಮಹಾಶಯರು ಹೇಳಿದ ಹಾಗೆ ಡೇಟ್ಸ್ ಹೊಂದಾಣಿಕೆ ಮಾಡಿದರೂ ಯಾಕೆ ಕೊನೆಗಳಿಗೆಯಲ್ಲಿ ಕೈಕೊಟ್ಟರು ಎಂಬುದು ಆಯೋಜಕರಿಗೆ ಅರ್ಥವಾಗಲೇ ಇಲ್ಲ. ಗುಡಿಹಳ್ಳಿಯವರ ಅದ್ಭುತ ಕಮಿಟ್ಮೆಂಟ್ ಒಳಮರ್ಮವನ್ನು ಬಲ್ಲವರಿಗೆ ಇದೇನೂ ಹೊಸದಾಗಿರಲಿಲ್ಲ. ಅವರ ರಂಗರಾಜಕೀಯದ ಆಳ ಅಗಲದ ಅರಿವು ಆಯೋಜಕರಿಗೆ ಗೊತ್ತೇ ಇರಲಿಲ್ಲ. ಕೊನೆಗೆ ಹೇಗೋ ಕಾರ್ಯಕ್ರಮ ಶುರುವಾಯಿತು. ಗುಡಿಹಳ್ಳಿಯವರ ವೇದಿಕೆಯ ಮೇಲೆ ಕೂಡಬೇಕಾದ ಖುರ್ಚಿಯನ್ನು ರಂಗಕರ್ಮಿ ಸಿ.ಬಸವಲಿಂಗಯ್ಯವನವರು ತುಂಬಿ ಸಭಾಮರ್ಯಾದೆ ಕಾಪಾಡಿದರು. ಚಂಪಾರವರಿಗೆ ವಿಷ್ ಮಾಡಲು ಬಂದ ಬಸವಲಿಂಗಯ್ಯನವರು ಆಯೋಜಕರ ಮಾತಿಗೆ ಸ್ಪಂದಿಸಿ ವಿಚಾರಸಂಕಿರಣದಲ್ಲಿ ಭಾಗಿಯಾಗಿ ಹಲವು ಉಪಯುಕ್ತ ಮಾತುಗಳನ್ನು ಮಾತಾಡಿದ್ದು ಅವರ ರಂಗಬದ್ಧತೆಗೆ ಸಾಕ್ಷಿಯಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲೋದಿಲ್ಲ ಎನ್ನುವ ಹಾಗೆ ಬರುತ್ತೇನೆಂದವರು ನೆಪ ಹೇಳಿ ತಪ್ಪಿಸಿಕೊಂಡರೆ ಇನ್ನೊಬ್ಬರು ಬಂದು ಕಾರ್ಯಕ್ರಮವನ್ನು ಚೆಂದಗಾಣಿಸುತ್ತಾರೆ ಎಂಬುದು ಸಾಬೀತಾಯಿತು. ಯಾರೇ ಬರಲಿ ಬಿಡಲಿ ಶೋ ಮಸ್ಟ್ ಗೋ ಆನ್ ಎನ್ನುವುದು ರಂಗಭೂಮಿಯ ಮೂಲಮಂತ್ರವಾಗಿದೆ.

ರಂಗಕ್ರಿಯೆಯಲ್ಲಿ ಎಂದೂ ತೀವ್ರವಾಗಿ ತೊಡಗಿಸಿಕೊಳ್ಳದ, ರಂಗನಿರ್ಮಿತಿಯಲ್ಲಿ ಎಂದೂ ಪ್ರತ್ಯಕ್ಷವಾಗಿ ಭಾಗಿಯಾಗದ ಗುಡಿಹಳ್ಳಿಯಂತವರಿಗೆ ರಂಗಭೂಮಿಯಿಂದ ದೊರಕುವ ಎಲ್ಲಾ ಪ್ರಶಸ್ತಿ ಸನ್ಮಾನ ಅಧಿಕಾರಗಳು ದಕ್ಕಿವೆ. ಅವುಗಳನ್ನು ದಕ್ಕಿಸಿಕೊಳ್ಳುವ ಛಾತಿಯೂ ಅವರಿಗಿದೆ. ಆದರೆ ಯಾವ ರಂಗಭೂಮಿಯು ಹೆಸರು ಹಾಗೂ ಗೌರವವನ್ನು ಕೊಟ್ಟಿದೆಯೋ ಅದಕ್ಕೆ ನಿಷ್ಟರಾಗಿರಬೇಕಾದುದು ಗುಡಿಹಳ್ಳಿಯಂತಹ ಹಿರಿಯ ಪತ್ರಕರ್ತರ ಜವಾಬ್ದಾರಿಯಾಗಬೇಕಾಗಿತ್ತು. ಹೊಸಬರು ರಂಗಭೂಮಿಯಲ್ಲಿ ಏನಾದರೂ ಮಾಡುತ್ತಾರೆಂದರೆ ಅವರಿಗೆ ಉತ್ತೇಜನ ಕೊಡುವುದು ಗುಡಿಹಳ್ಳಿಯಂತವರ ಗುಣವಾಗಬೇಕಿತ್ತೆ ಹೊರತು ನಿರುತ್ಸಾಹಗೊಳಿಸುವುದಾಗಬಾರದಿತ್ತು. ಜೊತೆಗೆ ಹಾಲಿ ನಾಟಕ ಅಕಾಡೆಮಿಯ ಸದಸ್ಯರಾಗಿ ಗುಡಿಹಳ್ಳಿಯವರು ವಿಶೇಷ ಆಸಕ್ತಿ ವಹಿಸಿ ತಮ್ಮನ್ನು ಆಯ್ಕೆಗೊಳಿಸಿಕೊಂಡಿರುವುದರಿಂದ ಒಪ್ಪಿಕೊಂಡ ರಂಗಕಾರ್ಯಕ್ರಮಗಳಿಗೆ ತಪ್ಪದೇ ಹೋಗಲೇಬೇಕೆಂಬ ಪ್ರಜ್ಞೆ ಹಾಗೂ ಪರಿಜ್ಞಾನ ಇರಲೇಬೇಕಾಗಿತ್ತು. ಹೋಗಲು ಆಗದೇ ಇದಲ್ಲಿ ಮುಂಚಿತವಾಗಿ ಬರಲು ಆಗೋದಿಲ್ಲ ಎಂದು ಆಯೋಜಕರಿಗೆ ತಿಳಿಸುವ ಸೌಜನ್ಯವನ್ನಾದರೂ ತೋರಿಸಬೇಕಾಗಿತ್ತು. ಆಯೋಜಕರು ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗುತ್ತಿತ್ತು. ಇದು ಅಕಾಡೆಮಿಯ ಸದಸ್ಯರ ಆದ್ಯ ಕರ್ತವ್ಯವೂ ಆಗಿತ್ತು. ರಂಗಕ್ರಿಯೆಗೆ ಭಂಗ ತರುವವರು, ಕೊಟ್ಟ ಮಾತನ್ನು ತಪ್ಪುವವರು ರಂಗಭೂಮಿ ಸಂಸ್ಕೃತಿಯ ವಿರೋಧಿಗಳೆನಿಸಿಕೊಳ್ಳುತ್ತಾರೆ. ಯಾರಲ್ಲಿ ಬದ್ದತೆ ಹಾಗೂ ನಿಷ್ಟೆ ಇಲ್ಲವೋ ಅವರು ರಂಗಭೂಮಿಯಲ್ಲಿ ಇರಲು ಅನರ್ಹರು ಎಂದು ಸಿಜಿಕೆ ಆವಾಗಾವಾಗ ಹೇಳುತ್ತಲೇ ಇದ್ದರು.


ಇಷ್ಟಕ್ಕೂ ಗುಡಿಹಳ್ಳಿ ಯಾಕೆ ಕಾರ್ಯಕ್ರಮಕ್ಕೆ ಕೈಕೊಟ್ಟರು? ಆಹ್ವಾನ ಪತ್ರಿಕೆಯನ್ನು ನೋಡುವ ಮೊದಲು ಬಂದೇ ಬರುತ್ತೇನೆಂದವರು ಇನ್ವಿಟೇಶನ್ ಕಾರ್ಡ ನೋಡಿದ ತಕ್ಷಣ ಬಣ್ಣ ಬದಲಾಯಿಸಿದರು? ಅವರಿಗೆ ಅನುಕೂಲಕರವಾದ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಟ್ಟರೂ ಯಾಕೆ ಕಾರ್ಯಕ್ರಮದ ದಿನ ಹೇಳದೇ ಕೇಳದೇ ಗೈರುಹಾಜರಾದರು? ಇದೆಲ್ಲಕ್ಕೂ ಕಾರಣ ಆಹ್ವಾನ ಪತ್ರಿಕೆಯಲ್ಲಿದ್ದ ಒಂದು ಹೆಸರು ! ಅದು ಶಶಿಕಾಂತ ಯಡಹಳ್ಳಿ,. ನನ್ನ ಹೆಸರನ್ನೂ ನೋಡಿಯೇ ಗುಡಿಹಳ್ಳಿ ಕಾರ್ಯಕ್ರಮಕ್ಕೆ ಗೈರಾಗುವುದಕ್ಕೆ ಕಾರಣಗಳಾದರೂ ಏನು? ಮೊದಲನೆಯದಾಗಿ ಗುಡಿಹಳ್ಳಿಯಂತಹ ಹಿರಿಯ ಪತ್ರಕರ್ತರಿಗೆ ಟೀಕೆ ಮಾಡಿ ಗೊತ್ತೇ ಹೊರತು ಟೀಕೆಗಳನ್ನು ತೆಗೆದುಕೊಳ್ಳುವುದು ಗೊತ್ತಿಲ್ಲ. ಯಾವಾಗ ನಾನು ನಾಟಕ ಅಕಾಡೆಮಿಯ ಕೋಆಪ್ಟ್ ಆಯ್ಕೆಯಲ್ಲಿ ಗುಡಿಹಳ್ಳಿಯವರ ಲಾಭೀಕೋರತನದ ಬಗ್ಗೆ ಬ್ಲಾಗಲ್ಲಿ ಪತ್ರಿಕೆಗಳಲ್ಲಿ ಬರೆದೆನೋ ಆವತ್ತಿನಿಂದ ಅಪತ್ಯನಾಗಿಹೋದೆ. ಯಾವಾಗ ಇಡೀ ನಾಟಕ ಅಕಾಡೆಮಿಯ ಎಲ್ಲಾ ಸದಸ್ಯರನ್ನು ಎದರು ಹಾಕಿಕೊಂಡು ತಮಗೆ ಬೇಕಾದವರಿಗೆ ಅಕಾಡೆಮಿ ಪ್ರಶಸ್ತಿ ಕೊಡಿಸಲು ಹೋಗಿ ಗುಡಿಹಳ್ಳಿ ಮುಖಭಂಗ ಅನುಭವಿಸಿದ್ದನ್ನು  ಹಾಗೂ ತಮ್ಮ ಅಂತರಂಗದ ಗೆಳತಿಗೆ ಪ್ರಶಸ್ತಿಯನ್ನು ಕೊಡಿಸಿದ್ದನ್ನು ನಾನು ಖಂಡಿಸಿ ಬರೆದೆನೋ ಆಗ ಗುಡಿಹಳ್ಳಿ ಕಣ್ಣಲ್ಲಿ ನಾನು ಆಜನ್ಮ ಶತ್ರುವಾಗಿ ಹೋದೆ. ಸಿಕ್ಕಾಗೆಲ್ಲಾ ನಾನಾಗಲೇ ಮಾತಾಡಿಸಿದರೂ ತಪ್ಪಿಸಿಕೊಳ್ಳಲು ನೋಡಿದ ಗುಡಿಹಳ್ಳಿಯಂತಹ ಹಿರಿಯರಿಗೆ ಕ್ರಿಯೆಗೆ ಪ್ರತಿಕ್ರಿಯೆ ಕೊಡಬೇಕು ಎನ್ನುವ ಕನಿಷ್ಟ ಮಾನವೀಯ ಪ್ರಜ್ಞೆಯೂ ಇಲ್ಲದೇ ಹೋಯಿತು. ನಾನು ಹೇಳಿದ್ದು ಬರೆದಿದ್ದು ಸುಳ್ಳಾಗಿದ್ದರೆ ಸಾಕ್ಷಿಗಳ ಸಮರ್ಥನೆ ಮಾಡಿಕೊಳ್ಳಲಿ ಬೇಡವೆಂದವರಾರು? ಬರೆದಿದ್ದು ದಿಟವಾಗಿದ್ದರೆ ಒಪ್ಪಿಕೊಳ್ಳುವ ದೊಡ್ಡತನ ತೋರಿ ದೊಡ್ಡವರಾಗಲಿ. ಆದರೆ ಏನನ್ನೂ ಮಾಡದೇ ದೊಡ್ಡವರ ಸಣ್ಣತನವನ್ನು ಸಾರ್ವಜನಿಕ ಗೊಳಿಸಿದ್ದನ್ನೇ ಮನಸ್ಸಲ್ಲಿಟ್ಟುಕೊಂಡು ವಿಷಕಾರುವುದು ಗುಡಿಹಳ್ಳಿಯಂತವರಿಗೆ ಶೋಭೆತರುವಂತಹುದಲ್ಲ.


ಗುಡಿಹಳ್ಳಿಯವರಿಗೆ ಭಿನ್ನಾಭಿಪ್ರಾಯವಿದ್ದರೆ ನೇರವಾಗಿ ಹೇಳಲಿ, ಇಲ್ಲವಾದರೆ ಸಾರ್ವಜನಿಕ ವೇದಿಕೆಯಲ್ಲೇ ಸಂವಾದ ನಡೆಸಲಿ. ಶಿವರಾತ್ರಿ ರಂಗೋತ್ಸವದ ವೇದಿಕೆ ಅದಕ್ಕೆ ಮುಕ್ತವಾಗಿತ್ತು. ಒಂದೇ ವೇದಿಕೆಯಲ್ಲಿ ಯಡಹಳ್ಳಿ ಮತ್ತು ಗುಡಿಹಳ್ಳಿ ಇಬ್ಬರೂ ಇದ್ದುದರಿಂದ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹೇಳುವ ಅವಕಾಶವೂ ಇತ್ತು. ಅಂತಹ ಅವಕಾಶಕ್ಕೆ ವಿಮುಖರಾದ ಗುಡಿಹಳ್ಳಿ ಪಲಾಯಣವಾದಿ ಆಗಿದ್ದೊಂದು ವಿಪರ್ಯಾಸ. ಕಾರ್ಯಕ್ರಮಕ್ಕೆ ಬರಬೇಕಾದವರು ತಪ್ಪಿಸಿಕೊಂಡಿದ್ದಕ್ಕೆ ಕಾರಣ ಹೀಗಿವೆ. 1. ಯಡಹಳ್ಳಿಯಂತಹ ಟೀಕಾಕಾರರಿಗೆ ಸಾರ್ವತ್ರಿಕವಾಗಿ ಕಮೆಂಟ್ ಮಾಡಲು ಯಾಕೆ ಅವಕಾಶ ಕೊಡಬೇಕು? 2. ನನ್ನ ಹಿರಿತನಕ್ಕೆ ಎಲ್ಲೂ ಸಮಾನನಲ್ಲದವನ ಜೊತೆಗೆ ಯಾಕೆ ವೇದಿಕೆ ಹಂಚಿಕೊಳ್ಳಬೇಕು. 3. ತನ್ನ ನ್ಯೂನ್ಯತೆಗಳನ್ನು ಪ್ರಶ್ನಿಸಿದವರ ಜೊತೆ ಹೇಗೆ ಕೂಡಬೇಕು. 4. ಸಾರ್ವಜನಿಕ ವೇದಿಕೆಯಲ್ಲಿ ತನ್ನ ವ್ಯಯಕ್ತಿಕ ದೌರ್ಬಲ್ಯಗಳನ್ನು ಯಡಹಳ್ಳಿ ಪ್ರಶ್ನಿಸಿದರೆ ಏನು ಮಾಡುವುದು.... ಇಂತಹ ಹಲವಾರು ಆತಂಕಗಳೇ ಗುಡಿಹಳ್ಳಿಯವರನ್ನು ಉದ್ದೇಶಿತ ಕಾರ್ಯಕ್ರಮದಿಂದ ತಪ್ಪಿಸಿಕೊಳ್ಳಲು ಪ್ರೇರೇಪಿಸಿವೆ. ಬೇಕಾಗಿರಲಿಲ್ಲ. ನನ್ನ ಜೊತೆಗೆ ವೇದಿಕೆ ಹಂಚಿಕೊಳ್ಳಲು ಗುಡಿಹಳ್ಳಿಯವರಿಗೆ ಮುಜುಗರವಾಗಿದ್ದರೆ, ಅದನ್ನು ಆಯೋಜಕರಿಗೆ ತಿಳಿಸಿದ್ದರೆ.... ನಾನೇ ವೇದಿಕೆಯಿಂದ ಹಿಂದೆ ಸರಿಯುತ್ತಿದ್ದೆ. ಅಂದಲ್ಲದಿದ್ದರೆ ಮರುದಿನದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದೆ. ಇದ್ದದ್ದನ್ನು ನೇರವಾಗಿ ಹೇಳುವ, ತಿಳಿಸುವ ಛಾತಿ ಹಾಗೂ ನೇರವಂತಿಕೆಯನ್ನು ರಂಗಭೂಮಿಯಲ್ಲಿ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಇದ್ದವರು ಬೆಳೆಸಿಕೊಂಡರೆ ಉತ್ತಮ. ತಂತ್ರಗಾರಿಕೆ ರಾಜಕಾರಣಿಗಳಿಗಿರಲಿ. ರಂಗಭೂಮಿ ಸದಾ ಮುಕ್ತ ನಡುವಳಿಕೆಯನ್ನೂ, ನೇರವಂತಿಕೆಯನ್ನು ಬೆಳೆಸಿಕೊಳ್ಳಲಿ.



ಇಷ್ಟಕ್ಕೂ ರಂಗಕಿರಣ ತಂಡದ ರಂಗೋತ್ಸವಕ್ಕೆ ನಾಟಕ ಅಕಾಡೆಮಿಯಾಗಲೀ, ಸಂಸ್ಕೃತಿಕ ಇಲಾಖೆಯಾಗಲೀ ನೈಯಾಪೈಸೆ ಹಣ ಕೊಟ್ಟಿಲ್ಲ. ತಮ್ಮ ಸ್ವಂತ ರಂಗಾಸಕ್ತಿ ಹಾಗೂ ನಾಟಕದ ಬದ್ದತೆಯಿಂದ ತಂಡದ ರೂವಾರಿಗಳು ತುಂಬಾ ಪರಿಶ್ರಮ ಪಟ್ಟು, ತಮ್ಮ ಸ್ವಂತ ಹಣವನ್ನು ಬಳಸಿಕೊಂಡು ಕಳೆದ ಏಳು ವರ್ಷಗಳಿಂದ ರಂಗಕ್ರಿಯೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಅಂತವರ ಕಾರ್ಯವನ್ನು ಮೆಚ್ಚಿ ಸಾಧ್ಯವಾದರೆ ನಾಟಕ ಅಕಾಡೆಮಿಯಿಂದ ಹಣಕಾಸಿನ ನೆರವನ್ನು ಒದಗಿಸಬೇಕಾಗಿರುವುದು ಗುಡಿಹಳ್ಳಿಯಂತಹ ಅಕಾಡೆಮಿಯ ಸದಸ್ಯರ ರಂಗಬದ್ದತೆಯಗಿದೆ. ಆದರೆ.. ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಬಾರದೇ ತಪ್ಪಿಸಿಕೊಳ್ಳುವುದು ರಂಗತಂಡವೊಂದರ ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸವಾಗಿದೆ. ಆದ್ದರಿಂದ ಗುಡಿಹಳ್ಳಿಯವರಿಗೆ ಯಾರ ಮೇಲೆಯೇ ವ್ಯಯಕ್ತಿಕ ಭಿನ್ನಾಭಿಪ್ರಾಯ ಇಲ್ಲವೇ ದ್ವೇಷಗಳಿರಲಿ, ಅದನ್ನು ರಂಗಕ್ರಿಯೆಗೆ ತೊಂದರೆ ಕೊಡುವ ಮೂಲಕ ತೋರಿಸಿಕೊಳ್ಳದಿರಲಿ. ರಂಗಭೂಮಿ ಎನ್ನುವುದು ಸಾಮೂಹಿಕ ನಿರ್ಮಿತಿಯಾಗಿದೆ. ಇಲ್ಲಿ ಅದೆಷ್ಟೇ ವ್ಯಯಕ್ತಿಕ ದ್ವೇಷಬೇಸರಗಳಿದ್ದರೂ ಅವನ್ನು ಬದಿಗಿಟ್ಟು ರಂಗಭೂಮಿಯನ್ನು ಒಕ್ಕೂರಲಿನಿಂದ ಕಟ್ಟಬೇಕಾದ ಅನಿವಾರ್ಯತೆ ಇದೆ. ಇಂತಹ ಗಹನವಾದ ವಿಷಯದ ಕುರಿತು ಗುಡಿಹಳ್ಳಿಯವರು ಇನ್ನೊಮ್ಮೆ ಆಲೋಚಿಸುವುದುತ್ತಮ.

ಯಾವುದೇ ರಂಗಸಂಬಂಧಿತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವ ಮೊದಲು ಬೇಕಾದಷ್ಟು ವಿಚಾರಣೆ ಮಾಡಿಕೊಳ್ಳಲಿ. ಆದರೆ  ಒಂದು ಸಲ ಒಪ್ಪಿಕೊಂಡಮೇಲೆ ಯಾವುದೇ ಕುಂಟು ನೆಪ ತೆಗೆದು ತಪ್ಪಿಸಿಕೊಳ್ಳದೇ ಇರಲಿ. ಇದು ಗುಡಿಹಳ್ಳಿ ನಾಗರಾಜರಂತವರಿಗೆ ರಂಗಬದ್ದತೆಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆಯ ಕುರಿತು ವಿನಯಪೂರ್ವಕ ಮನವಿಯಾಗಿದೆ. ಯಾವುದೇ ವಿಷಯದ ಕುರಿತು ಚರ್ಚೆ ಸಂವಾದಕ್ಕೆ ನಾನು ಮುಕ್ತನಾಗಿದ್ದೇನೆ. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೂ ನನ್ನ ಜೊತೆಗೆ ಯಾವಾಗ ಬೇಕಾದರೂ ಚರ್ಚಿಸಬಹುದಾಗಿದೆ. ಆದರೆ ನಮ್ಮಿಬ್ಬರ ಭಿನ್ನಾಭಿಪ್ರಾಯಗಳಿಂದಾಗಿ ಒಂದು ರಂಗಕ್ರಿಯೆಗೆ ಅಡಚನೆಯಾಗದಿರಲಿ, ರಂಗತಂಡದವರಿಗೆ ನಿರುತ್ಸಾಹವಾಗದಿರಲಿ ಎನ್ನುವ ಕಳಕಳಿಯೇ ಲೇಖನದ ಸೃಷ್ಟಿಗೆ ಕಾರಣವಾಗಿದೆ. ಕಾಳಜಿಯನ್ನೂ ಸಹ ಗುಡಿಹಳ್ಳಿಯವರು ನಕಾರಾತ್ಮಕವಾಗಿ ತೆಗೆದುಕೊಳ್ಳದೇ ಸಕಾರಾತ್ಮಕ ಮನೋಭಾವದಿಂದ ಸ್ವೀಕರಿಸಲಿ ಎಂಬುದು ನನ್ನ ಮಹದಾಸೆಯಾಗಿದೆ

                             -ಶಶಿಕಾಂತ ಯಡಹಳ್ಳಿ      
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ