ಸೋಮವಾರ, ಮಾರ್ಚ್ 23, 2015

ನಾಟಕ ಅಕಾಡೆಮಿಯ ಬೇಜವಾಬ್ದಾರಿತನ : ನಾಮಕಾವಸ್ತೆ ‘ಲೈಟಿಂಗ್ ವರ್ಕಶಾಪ್’

ನಾಟಕ ಅಕಾಡೆಮಿಯ ಬೇಜವಾಬ್ದಾರಿತನಕ್ಕೆ ಬಲಿಯಾದ ಬೆಳಕು ವಿನ್ಯಾಸ ಶಿಬಿರ :

ಸರಕಾರಿ ಕೃಪಾ ಪೋಷಿತ ಕರ್ನಾಟಕ ನಾಟಕ ಅಕಾಡೆಮಿ ಎನ್ನುವ ಪ್ರಸ್ತುತ ಬೇಜವಾಬ್ದಾರಿ ಸಂಸ್ಥೆಯು ಸರಕಾರಿ ಹಣವನ್ನು ವಿವೇಚನಾರಹಿತವಾಗಿ ಹಂಚುವ ಕೆಲಸವನ್ನು ಮುಂದುವರೆಸಿದೆ. ರಂಗಭೂಮಿಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಹ ಯಾವುದೇ ಮಹತ್ವಾಂಕಾಂಕ್ಷೆಗಳಿಲ್ಲದ ಹಾಲಿ ಅಕಾಡೆಮಿ ಅಧ್ಯಕ್ಷ ಹಾಗೂ ಸದಸ್ಯರು ರಂಗಭೂಮಿಯ ಹೆಸರಲ್ಲಿ ಹಣವನ್ನು ಪೋಲು ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಲೈಟಿಂಗ್ ವರ್ಕಶಾಪ್!. ಅಂದರೆ ರಂಗ ಬೆಳಕು ವಿನ್ಯಾಸದ ತರಬೇತಿ ಶಿಬಿರ. ಶಿಬಿರದ ನಿರ್ದೇಶಕರು ರಂಗಬೆಳಕಿನ ತಜ್ಞರಾದ ಚಂದ್ರಕುಮಾರ ಸಿಂಗ್. ಇಡೀ ಶಿಬಿರವನ್ನು ಜಂಟಿಯಾಗಿ ವ್ಯವಸ್ಥೆಗೊಳಿಸಿದ್ದು ಲಾಸ್ಯವರ್ಧನ ಟ್ರಸ್ಟ್ ಬೆಂಗಳೂರುಮಲ್ಲೇಶ್ವರಂ ಲಿಂಕ್ ರಸ್ತೆಯಲ್ಲಿ ರವಿಶಂಕರ್ರವರು ಕೇಶವ ಕಲ್ಪ ಸಭಾಂಗಣವನ್ನು ಮುಖ್ಯವಾಗಿ ಭರತನಾಟ್ಯ ತರಬೇತಿ ನಡೆಸಲು ಉಪಯೋಗಿಸುತ್ತಾರೆ. ಭರತನಾಟ್ಯ ಶಾಲೆಯನ್ನು ನಡೆಸುತ್ತಿರುವುದು ಲಾಸ್ಯವರ್ಧನ ಟ್ರಸ್ಟ್. ಭರತನಾಟ್ಯ ತರಬೇತಿ ನಡೆಸುವವರಿಗೂ  ನಾಟಕ ಅಕಾಡೆಮಿಗೂ ಏನು ಸಂಬಂಧ ಎಂದು ಕೇಳಬೇಡಿ. ಪ್ರಶ್ನೆಯನ್ನು ಕೇಳಬೇಕಾದ ಅಕಾಡೆಮಿಯ  ಸದಸ್ಯರೇ ಜಾಣ ಕುರುಡುತನವನ್ನು ವಹಿಸಿದ್ದಾರೆ. ಶೇಖ ಮಾಸ್ತರನ ತುಘಲಕ್ ದರ್ಬಾರಿನಲ್ಲಿ ರಂಗಭೂಮಿಗೆ ಸಂಬಂಧ ಇಲ್ಲದವರೂ ಸಹ ರಂಗಭೂಮಿ ಹೆಸರಲ್ಲಿ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ. ಹಿರಿಯ ರಂಗಕರ್ಮಿ ಚಂದ್ರಕುಮಾರ್ ಸಿಂಗ್ರವರು   ಲೈಟಿಂಗ್ ವರ್ಕಶಾಪ್ ಶಿಬಿರದ ಮಾಸ್ಟರ್ ಮೈಂಡ್. ಹೋಗಲಿ ಬಿಡಿ ರಂಗಭೂಮಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಯಾರು ಮಾಡಿದರೇನು? ಒಟ್ಟಾರೆ ಒಂದು ಶಿಬಿರ ಯಶಸ್ವಿಯಾದರೆ ಸಾಕು ಎಂದುಕೊಂಡರೆ ಅದೂ ಸಹ ನಾಮಕಾವಸ್ತೆ ಶಿಬಿರವಾಗಿದ್ದು ಇನ್ನೊಂದು ದುರಂತ.


 ಮಾರ್ಚ 22 ಹಾಗೂ 23 ರಂದು ಎರಡು ದಿನಗಳ ಅವಧಿಯ ಲೈಟಿಂಗ್ ವರ್ಕಶಾಫ್ ಆರಂಭವಾಯಿತು. ಇದಕ್ಕಿಂತ ಮೊದಲೇ ಹಲವಾರು ಕನ್ನಡ ದಿನಪತ್ರಿಕೆಗಳಲ್ಲಿ ಉಚಿತ ತರಬೇತಿ ಎಂದು ವರದಿಯೂ ಬಂದಿತ್ತು. 22 ರಂದು ಭಾನುವಾರವೂ ಆಗಿತ್ತು. ಕೇಶವ ಕಲ್ಪದಲ್ಲಿ ಮೂವತ್ತು ಖುರ್ಚಿಗಳನ್ನೂ ಹಾಕಲಾಗಿತ್ತು. ಮಧ್ಯಾಹ್ನದ ಊಟವೂ ಸಿದ್ದವಾಗಿತ್ತುಆದರೂ..... ಶಿಬಿರಾರ್ಥಿಗಳ ಸುಳಿವೇ ಇರಲಿಲ್ಲ. ಕೊನೆಗೂ ಬೆಳಕಿನ ವಿನ್ಯಾಸ ಕಲಿಯಲೆಂದು ಎರಡೂ ದಿನ ಕುಳಿತವರು ಏಳು ಜನ. ಅದರಲ್ಲಿ ಮೂವರು ಈಗಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಯುವ ನಿರ್ದೇಶಕರಾದರೆ ಇನ್ನು ನಾಲ್ಕು ಜನ ಹೊಸಬರು. ಹೋಗಲಿ ಇವರಾದರೂ ಬಂದರಲ್ಲ ಎಂದು ಸಮಾಧಾನಪಟ್ಟುಕೊಂಡು ಚಂಕು ಸಿಂಗರವರು ಶಿಬಿರವನ್ನು ಶುರು ಮಾಡಿದರು. ಆದರೆ ಕಾರ್ಯಾಗಾರದ ನಿರ್ದೇಶಕರು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ. ಯಾವುದೇ ಒಂದು ಸಿಲೆಬಸ್ ಎನ್ನುವುದು ಸಿದ್ದವಾಗಿರಲಿಲ್ಲ. ಏನೇನು ಕಲಿಸಬೇಕು ಎನ್ನುವುದರ ಕುರಿತು ಪ್ಲಾನಿಂಗ್ ಇರಲೇ ಇಲ್ಲ. ಏನೋ ಕಲಿಯುತ್ತೇವೆಂದು ಬಂದಿವರಿಗೆ ನಿರಾಶೆಯಾಗುವುದಂತೂ ತಪ್ಪಲಿಲ್ಲ. ಚಂಕು ಸಿಂಗರಂತಹ ಹಿರಿಯ ರಂಗಕರ್ಮಿ, ಬೆಳಕಿನ ತಜ್ಞರು ರೀತಿ ಸಿದ್ದತೆ ಇಲ್ಲದೇ ನೀರಸವಾಗಿ ಕಾರ್ಯಾಗಾರವನ್ನು ನಡೆಸಿಕೊಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಮೊದಲ ದಿನ ಹನ್ನೊಂದುವರೆಗೆ ಶುರುವಾದ ಕ್ಲಾಸ್ ಮೂರು ಗಂಟೆಗೆ ಮುಕ್ತಾಯ ಹಾಡಿತು. ನಡುವೆ ಒಂದೂ ಕಾಲು ಗಂಟೆಗಳ ಕಾಲದ ಊಟದ ಬಿಡುವು. ಅಂದರೆ ಎರಡೂವರೆ ಗಂಟೆಗಳ ಕಾಲದ ಪಾಠ. ಎರಡನೇ ದಿನವೂ ಹನ್ನೊಂದಕ್ಕೆ ಶುರುವಾಗಿ ನಾಲ್ಕು ಗಂಟೆಗೆ ಪ್ಯಾಕಪ್. ಊಟದ ಬಿಡುವನ್ನು ಕಳೆದರೆ ಒಟ್ಟು ಮೂರುವರೆ ಗಂಟೆಗಳ ಪಾಠ. ಅಂದರೆ ಎರಡು ದಿನಗಳ ಶಿಬಿರದಲ್ಲಿ ಒಟ್ಟು ಆರು ಗಂಟೆಗಳ ಕಾಲ ಪಾಠವನ್ನು ಮಾಡಲಾಯಿತು. ಹೋಗಲಿ ಆರು ಗಂಟೆಗಳಾದರೂ ಸರಿಯಾಗಿ ಬಳಕೆಯಾಯಿತಾ ಎಂದರೆ ಅದೂ ಇಲ್ಲ. ಕೇವಲ ಟೈಂ ಪಾಸ್. ಯಾವೊಂದು ವಿಷಯದ ಕುರಿತು ನೆಟ್ಟಗೆ ಪಾಠ ಹೇಳದೆ ನಾಮಕಾವಸ್ತೆ ತರಬೇತಿಯನ್ನು ನಡೆಸಿದ್ದು ನಿಜಕ್ಕೂ ಅಸಮಾಧಾನಕರ.

ಶಿಬಿರಾರ್ಥಿಗಳು
ಮೊದಲನೆಯದಾಗಿ ಶಿಬಿರಕ್ಕೆ ಆರಿಸಿಕೊಂಡ ಸಭಾಂಗಣವೇ ಲೈಟಿಂಗ್ ವರ್ಕಶಾಪ್ಗೆ ಸೂಕ್ತವಾದದ್ದಲ್ಲಪಕ್ಕಾ ಗೊಡೌನ್ ರೀತಿಯಲ್ಲಿರುವ ಹಾಲ್ನಲ್ಲಿ ಲೈಟಿಂಗ್ ವ್ಯವಸ್ಥೆ ಸೂಕ್ತವಾಗಿಲ್ಲ. ಇರುವಷ್ಟೇ ಲೈಟುಗಳಲ್ಲೇ ಪ್ರಾತ್ಯಕ್ಷಿಕ ಪಾಠ ಮಾಡಬೇಕಾಗುವುದು ಸವಾಲಿನ ಕೆಲಸ. ಲೈಟಿಂಗ್ ಡಿಸೈನ್ ಎಂದರೇನು? ಲೈಟಿಂಗ್ ವೈರಿಂಗ್ ಹೇಗಿರಬೇಕು? ಪ್ಯಾಚ್ ಬೋರ್ಡ ಹೇಗಿರುತ್ತದೆ? ಡಿಮ್ಮರ್ ಎನ್ನುವುದು ಹೇಗೆ ಕೆಲಸ ಮಾಡುತ್ತದೆ? ಪೇಡರ್ ಉಪಯೋಗವೇನು?... ಇಂತಹ ಬೆಳಕಿನ ವಿನ್ಯಾಸದ ಮೂಲ ಪಾಠಗಳನ್ನೂ ಸಹ ಹೇಳಿಕೊಡದ ಮೇಲೆ ಇದೆಂತಾ ವರ್ಕಶಾಪ್?. ಒಂದಿಬ್ಬರು ಆಸಕ್ತರು ತಾವೇ ಹೋಗಿ ರವಿಶಂಕರರವರನ್ನು ಕೇಳಿ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಯಿತೇ ಹೊರತು ಶಿಬಿರದ ನಿರ್ದೇಶಕರು   ಕುರಿತು ಏನನ್ನೂ ಹೇಳದೇ ಹೋಗಿದ್ದೊಂದು ವಿಪರ್ಯಾಸ. ಪಿಸಿ, ಪಾರ್, ಪ್ರೊಪೈಲ್ ಮೂರು ಲೈಟುಗಳ ಪರಿಚಯ ಮಾಡಿಸಲಾಯಿತಾದರೂ ಅವುಗಳ ಉಪಯೋಗಗಳ ಪ್ರಾತ್ಯಕ್ಷಿಕತೆ ಮಾತ್ರ ನಿರಾಶಾದಾಯಕವಾಗಿತ್ತು. ಯಾವುದೇ ಶಿಬಿರ ಮಾಡಲಿ ಅದಕ್ಕೊಂದು ಪಕ್ಕಾ ಪ್ಲಾನಿಂಗ್ ಹಾಗೂ ಮಾದರಿ ಸಿಲೆಬಸ್ ಇಲ್ಲದೇ ಹೋದರೆ ಅದು ಅಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಲೈಟಿಂಗ್ ಶಿಬಿರ ಮಾದರಿಯಾಗಿದೆ.

ಚಂದ್ರಕುಮಾರ ಸಿಂಗ್ರವರಂತಹ ಅನುಭವಿ ಹಿರಿಯ ರಂಗಕರ್ಮಿಗೆ ಇದು ತಿಳಿಯದ್ದೇನಲ್ಲಾ? ಲೆಕ್ಕವಿಲ್ಲದಷ್ಟು ಶಿಬಿರಗಳಲ್ಲಿ ಅವರು ಪಾಠ ಮಾಡಿದ್ದಾರೆ. ಅದೆಷ್ಟೋ ಶಿಷ್ಯರನ್ನು ಹುಟ್ಟುಹಾಕಿದ್ದಾರೆ. ಆದರೆ... ಅದ್ಯಾಕೆ ಶಿಬಿರವನ್ನು ಇಷ್ಟೊಂದು ನೀರಸವಾಗಿ ನಡೆಸಿಕೊಟ್ಟರು?. ಸರಕಾರಿ ಕೆಲಸ ದೇವರ ಕೆಲಸ ಎಂದು ಅಂದುಕೊಂಡರೋ? ಇಲ್ಲಾ  ಇಷ್ಟು ಕಡಿಮೆ ಸಂಖ್ಯೆಯ ಶಿಬಿರಾರ್ಥಿಗಳಿಗೆ ಏನು ಹೇಳಿಕೊಡುವುದು ಎಂದು ನೊಂದುಕೊಂಡರೋ? ಇಲ್ಲವೇ ವಯೋಸಹಜ ಆಲಸ್ಯ ಅವರ ಎನರ್ಜಿಯನ್ನು ಕಡಿಮೆಗೊಳಿಸಿತೋ? ಗೊತ್ತಿಲ್ಲ. ಆದರೆ ಶಿಬಿರದ ನಿರ್ದೆಶಕರಾಗಿ ಚಂಕು ಸಿಂಗರವರು ಸಲ ನ್ಯಾಯಸಲ್ಲಿಸಲಾಗಿಲ್ಲ. ತಮ್ಮ ಅಪೂರ್ವ ಬೆಳಕಿನ ವಿನ್ಯಾಸದ ಪ್ರತಿಭೆಯನ್ನು ಮನಸ್ಸಿಟ್ಟು ಹಂಚಿಕೊಳ್ಳಲಾಗಲಿಲ್ಲ. ಒಟ್ಟಾರೆಯಾಗಿ ಶಿಬಿರ ಯಶಸ್ವಿಯಾಗಲಿಲ್ಲ.

ಚಂದ್ರಕುಮಾರ್ ಸಿಂಗ್
ಹೋಗಲಿ ಶಿಬಿರದ ಪ್ರಾಯೋಜನೆ ಮಾಡಿದ ನಾಟಕ ಅಕಾಡೆಮಿ ಅದೇನು ಗೆಣಸು ಕೆರೆಯುತ್ತಿತ್ತು. ಬೆಂಗಳೂರಿನಲ್ಲೇ ನಾಟಕ ಅಕಾಡೆಮಿಯ ಐದು ಜನ ಸದಸ್ಯರಿದ್ದಾರಲ್ಲಾ ವರು ಯಾಕೆ ನಾಟಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಲೈಟಿಂಗ್ ಶಿಬಿರದತ್ತ ಇಣಿಕಿಯೂ ನೋಡಲಿಲ್ಲ. ಉದ್ಘಾಟನೆಗೂ ಇಲ್ಲಾ, ಸಮಾರೋಪಕ್ಕೂ ಬಂದಿಲ್ಲ, ಹೀಗಾಗಿ ಎರಡೂ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲೇ ಇಲ್ಲ. ನಾಟಕದ ಹೆಸರಿನ ಕಾರ್ಯಕ್ರಮಕ್ಕೆ ಹಣ ಹಂಚಿದರಾಯಿತು, ಕಾರ್ಯಕ್ರಮ ಸರಿಯಾಗಿ ನಡೆಯುತ್ತಾ, ಕೊಟ್ಟ ಸರಕಾರಿ ದುಡ್ಡು ಅಲ್ಲಿ ಸರಿಯಾಗಿ ಉಪಯೋಗವಾಗಿದೆಯಾ? ರಂಗಭೂಮಿಗೆ ಪೂರಕವಾಗಿ ಬದ್ದತೆಯ ಕೆಲಸವಾಗುತ್ತಿದೆಯಾ? ಎನ್ನುವುದನ್ನು   ತಿಳಿದುಕೊಳ್ಳಬೇಕಾದದ್ದು ಅಕಾಡೆಮಿಯ ಕೆಲಸವಾಗಿದೆ. ಯಾರೇ ಆಗಲಿ ಒಂದು ಕೆಲಸಕ್ಕೆ ಕಾಸು ಕೊಟ್ಟರೆ ಅದು ಸರಿಯಾಗಿ ಬಳಕೆ ಆಗುತ್ತೋ ಇಲ್ಲವೋ ಎಂದು ನೋಡಬೇಕು ತಾನೆ? ಆದರೆ ಸಲ ನಾಟಕ ಅಕಾಡೆಮಿಗೆ ಒಕ್ಕರಿಸಿಕೊಂಡವರಿಗೆ ಕನಿಷ್ಟ ಜವಾಬ್ದಾರಿಯೂ ಇಲ್ಲವೆಂದಮೇಲೆ ಅಲ್ಲಿ ಯಾಕಿರಬೇಕು? ರಂಗಭೂಮಿಯನ್ನುವುದು ಇವರಿಗೆಲ್ಲಾ ಒಂದು ಐಡೆಂಟಿಟಿಯನ್ನು ಕೊಟ್ಟಿದೆಯೋಗ್ಯತೆ ಇರಲಿ ಬಿಡಲಿ ಸರಕಾರ ಯಾವುಯಾವುದೋ ಮುಲಾಜಿಗೆ ಒಳಗಾಗಿ ನಾಟಕ ಅಕಾಡೆಮಿಗೆ ನೇಮಕ ಮಾಡಿದೆ. ತಮಗೆ ಕೊಟ್ಟ ಜವಾಬ್ದಾರಿಯನ್ನು ಬದ್ದತೆಯಿಂದ ನಿರ್ವಹಿಸಬೇಕಾದದ್ದು ನಾಟಕ ಅಕಾಡೆಮಿಯ ಪದಾಧಿಕಾರಿಗಳ ಜವಾಬ್ದಾರಿಯಾಗಿದೆ.

ಲೋಕಲ್ ಬೆಂಗಳೂರಿನಲ್ಲಿರುವ ಸದಸ್ಯರಾದರೂ ತಮಗೆ ಸಿಕ್ಕ ಅಕಾಡೆಮಿಯ ಸದಸ್ಯಗಿರಿಯ ಗೌರವಕ್ಕಾದರೂ ಬೆಲೆಕೊಟ್ಟು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿತ್ತುಅವರು ವಾಲೆಂಟರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅಸಮರ್ಥರಾದರೆ ನಾಟಕ ಅಕಾಡೆಮಿಯ ಅಧ್ಯಕ್ಷರೆನ್ನುವವರು ಕೆಲಸವನ್ನು ಹಂಚಿಕೊಡಬೇಕು ಹಾಗೂ ಅದನ್ನು ಮಾನಿಟರ್ ಮಾಡುತ್ತಾ ಇರಬೇಕು. ಆದರೆ ನಮ್ಮ ಶೇಖ ಮಾಸ್ತರ್ ಎರಡು ಕುದುರೆಗಳನ್ನು ಓಡಿಸುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ. ತಮ್ಮ ಕಲಬುರ್ಗಿಯಲ್ಲಿರುವ ವೃತ್ತಿ ನಾಟಕ ಕಂಪನಿಗಳ ಸಮಸ್ಯೆಗಳು ಒಂದು ಕಡೆಯಾದರೆ  ಅಕಾಡೆಮಿಯ ಸದಸ್ಯರುಗಳ ಅಸಹಕಾರ ಇನ್ನೊಂದು ಕಡೆ.   ಎರಡೂ ಕುದುರೆಗಳ ಸವಾರಿ ಮಾಡಲು ಹೋಗಿ ಶೇಖ ಮಾಸ್ತರ್ ಶೇಕ್ ಆಗಿ ಹೋಗಿದ್ದಾರೆ. ಇವರ ಡಬಲ್ ಆಕ್ಟಿಂಗ್ ನಲ್ಲಿ ನಾಟಕ ಅಕಾಡೆಮಿ ಎನ್ನುವುದು ಅಪ್ರಸ್ತುತವೆನಿಸುತ್ತಿದೆ. ಹೀಗಾಗಿಯೇ ವರ್ಷ ನಾಟಕ ಅಕಾಡೆಮಿಗೆ ಸರಕಾರದಿಂದ ಬಂದ 1 ಕೋಟಿ ಹಣದ ಕೋಟಾವನ್ನು ಮಾರ್ಚ 31 ಒಳಗಾಗಿ ಖರ್ಚು ಮಾಡಬೇಕಿದೆ. ಎಸ್ಸಿ, ಎಸ್ಟಿ ಕೋಟಾದ ಹೆಚ್ಚುವರಿ ಹಣದ ಬಾಬತ್ತನ್ನೂ ಕರಗಿಸಬೇಕಿದೆ. ಅದಕ್ಕಾಗಿ ವಿವೇಚನೆ ಇಲ್ಲದೇ ಹಣವನ್ನು ಹಂಚುವ ಕಾಯಕದಲ್ಲಿ ಅಧ್ಯಕ್ಷರಾದಿಯಾಗಿ ಸದಸ್ಯ ಪಡೆ ನಿರತವಾಗಿದೆ. ಅವಿವೇಕದ ಭಾಗವಾಗಿಯೇ ಲೈಟಿಂಗ್ ವರ್ಕಶಾಪ್ ವಿಫಲವಾಗಿದೆ. ಹಾಗೂ ಸರಕಾರಿ ಬೊಕ್ಕಸದಿಂದ ಕಾಲು ಲಕ್ಷ ಹಣ ವ್ಯರ್ಥವಾಗಿದೆ.


ಹೋಗಲಿ ಇಷ್ಟು ಹಣ ಖರ್ಚು ಮಾಡಿದ್ದರ ಪ್ರಯೋಜನವಾದರೂ ಏನು? ಶಿಬಿರದಲ್ಲಿ ಯಾರಾದರೂ ಒಬ್ಬರು ಲೈಟಿಂಗ್ ಡಿಸೈನ್ ಮಾಡಲು ಕಲಿತರಾ? ಹೋಗಲಿ ಕನಿಷ್ಟ ಲೈಟಿಂಗ್ ಆಪರೇಟ್ ಮಾಡುವುದನ್ನಾದರೂ ತಿಳಿದುಕೊಂಡರಾ? ಊಹುಂ ಏನೇನೂ ಇಲ್ಲಾ. ಶಿಬಿರದಲ್ಲಿ ಹೇಳಿದ ಕೆಲವು ವಿವರಗಳು ಈಗಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಮೂವರಿಗೆ ಗೊತ್ತಿರುವಂತಹ ಬೇಸಿಕ್ ಮಾಹಿತಿಗಳಾಗಿದ್ದವು. ಇನ್ನುಳಿದ ನಾಲ್ಕು ಜನರಿಗೆ ತಲೆ ಬುಡ ಅರ್ಥವಾಗಲೇ ಇಲ್ಲ. ಸುಮ್ಮನೇ ಕುತೂಹಲಕ್ಕೆ ಕೊನೆಯ ದಿನ ಬಂದ ಕೆಲವು ಯುವಕರಿಗಂತೂ ಏನೆಂದರೆ ಏನೂ ತಿಳಿಯಲೇ ಇಲ್ಲ. ಲೈಟಿಂಗ್ ಶಿಬಿರ ಪ್ರಾಯೋಜಿಸಿದ ನಾಟಕ ಅಕಾಡೆಮಿ, ಜಂಟಿಯಾಗಿ ವ್ಯವಸ್ಥೆ ಮಾಡಿದ ಲಾಸ್ಯವರ್ಧನ ಟ್ರಸ್ಟ್ ಹಾಗೂ ಶಿಬಿರದ ನಿರ್ದೇಶಕರಾದ ಚಂದ್ರಕುಮಾರ್ ಸಿಂಗ್ ಇವರೆಲ್ಲಾ ತಮ್ಮ ಎದೆಯ ಮೇಲೆ ಕೈಯಿಟ್ಟು ಕೇಳಿಕೊಳ್ಳಬೇಕಾಗಿದೆ ಎರಡು ದಿನಗಳ ಶಿಬಿರದಿಂದ ಯಾರಿಗೆ ಎಷ್ಟು ಹೇಗೆ ಉಪಯೋಗವಾಯಿತು ಎಂದುಹಾಗೆಯೇ ನಾಟಕ ಅಕಾಡೆಮಿಯ ಅಧ್ಯಕ್ಷರಾದಿಯಾಗಿ ಸದಸ್ಯರು ತಮ್ಮ ರೀತಿಯ ಬೇಜವಾಬ್ದಾರಿತನಕ್ಕೆ ಉತ್ತರ ಕೊಡಬೇಕಾಗಿದೆ. ರಂಗಭೂಮಿಗೆ ನಿಷ್ಟರಾಗಿಲ್ಲದಿದ್ದರೆ, ಸರಕಾರ ತಮಗೆ ವಹಿಸಿದ ಜವಾಬ್ದಾರಿಯನ್ನು ಮನಪೂರ್ವಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಗೌರವಾನ್ವಿತವಾಗಿ ತಮ್ಮ ಸ್ಥಾನವನ್ನು ತೊರೆಯಬೇಕಿದೆ.



ರಂಗಭೂಮಿಯಿಂದಲೇ ಹೋಗಿ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಣಿಯಾದ ಉಮಾಶ್ರೀಯವರಾದರೂ ನರಸತ್ತ ಅಕಾಡೆಮಿಗೆ ಮೇಜರ್ ಸರ್ಜರಿ ಮಾಡಬೇಕಿದೆ. ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನಾದರೂ ಮಾಡಿ ನಾಟಕ ಅಕಾಡೆಮಿಯ ವರೆಗಿನ ಎಲ್ಲಾ ಕಾರ್ಯಚಟುವಟಿಕೆಗಳ ಕುರಿತು ವಿಚಾರಣೆ ನಡೆಸಬೇಕಾಗಿದೆ. ಸರಕಾರಿ ಹಣ ಸಮರ್ಪಕವಾಗಿ ಬಳಕೆಯಾಗಿದೆಯಾ? ರಂಗಭೂಮಿಯ ಬೆಳವಣಿಗೆಗೆ ಅಕಾಡೆಮಿ ನಿಜಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡಿದೆಯಾ? ಎಷ್ಟು ಹಣ ಅಕಾಡೆಮಿಯ ಅಧ್ಯಕ್ಷ-ಸದಸ್ಯರ ಸ್ವಜನಪಕ್ಷಪಾತಕ್ಕೆ ಉಪಯೋಗವಾಗಿದೆ. ಬೇಜವಾಬ್ದಾರಿತನಕ್ಕೆ ವ್ಯರ್ಥವಾಗಿದೆ? ಎನ್ನುವುದನ್ನೆಲ್ಲಾ ಕೂಲಂಕುಷವಾಗಿ ವಿಚಾರಣೆ ಮಾಡಬೇಕು. ಇಲ್ಲವಾದರೆ ಮೂರು ವರ್ಷಗಳ ಕಾಲ ಸರಕಾರಿ ದುಡ್ಡು ಎಲ್ಲಮ್ಮನ ಜಾತೆ ಮಾಡುವ ನಾಟಕ ಅಕಾಡೆಮಿಯ ಪದಾಧಿಕಾರಿಗಳು ಹುಚ್ಚು ಮುಂಡೇ ಮದುವೇಲಿ ಉಂಡವನೇ ಜಾಣ ಎನ್ನುವ ಗಾದೆಯನ್ನು ಸಾಬೀತು ಪಡಿಸುವುದರಲ್ಲಿ ಸಂದೇಹವಿಲ್ಲ.  

                              -ಶಶಿಕಾಂತ ಯಡಹಳ್ಳಿ
                  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ