ಶುಕ್ರವಾರ, ಮಾರ್ಚ್ 20, 2015

ದೃಶ್ಯವೈಭವ ಕಟ್ಟಿಕೊಡುವ “ಮಲೆಗಳಲಿ ಮದುಮಗಳು ’’ ; ಒಂದು ಸಾರ್ಥಕ ಪ್ರಯತ್ನ.

ಮತ್ತೆ  ಕಲಾಗ್ರಾಮಕ್ಕೆ ಬಂದ ಕುವೆಂಪುರವರ ಮದುಮಗಳು :
  




ಮದುಮಗಳು ಮತ್ತೆ ಕಲಾಗ್ರಾಮಕ್ಕೆ ಬಂದಿದ್ದಾಳೆ. ಬೆಂಗಳೂರಿಗರು ಕಕ್ಕುಲತೆಯಿಂದ ಹೋಗಿ ಮದುಮಗಳನ್ನು ನೋಡಿ ಖುಷಿಪಡುತ್ತಿದ್ದಾರೆ. ಇವಳು ಯಾರದೋ ಮದುವೆಗೆ ತಯಾರಾದ ಮದುಮಗಳಲ್ಲ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸುಪ್ರಸಿದ್ಧ ಮದುಮಗಳು. ರಾಷ್ಟ್ರಕವಿ ಕುವೆಂಪುರವರ ಮಾನಸ ಪುತ್ರಿ. ಪೂರ್ಣ ಹೆಸರುಮಲೆಗಳಲಿ ಮದುಮಗಳು’. ಕುವೆಂಪುರವರ ಅಕ್ಷರ ರೂಪದ ಮಲೆಗಳಲಿ ಮದುಮಗಳುಕಾದಂಬರಿ ಈಗ ಮತ್ತೊಮ್ಮೆ ಡಾ.ಕೆ.ವೈ.ನಾರಾಯಣಸ್ವಾಮಿರವರ ಕಾವ್ಯಾತ್ಮಕ ನಿರೂಪನೆಯಲ್ಲಿ ರಂಗರೂಪ ತೊಟ್ಟು ಹೊಸ ವೇಷದಲ್ಲಿ ಅಹೋರಾತ್ರಿ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಕನ್ನಡಿಗರ ಭಾಗ್ಯ, ನೋಡಿ ಕಣ್ಮನ ತುಂಬಿಕೊಂಡವರ ಸೌಭಾಗ್ಯ.

 ಹ್ಯಾಟ್ಸ ಆಪ್ ಟು ಸಿ. ಬಸವಲಿಂಗಯ್ಯ. ಕನ್ನಡ ರಂಗಭೂಮಿಯಲ್ಲಿ ದಾಖಲೆಯೊಂದನ್ನ ಮಾಡಿ ತೊರಿಸಿದ್ದಾರೆ. ಕುವೆಂಪುರವರ ಮಲೆಗಳಲಿ ಮದುಮಗಳು ಎನ್ನುವ ಬ್ರಹತ್ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕಳವಡಿಸಿ 8 ಗಂಟೆಗಳ ಸುದೀರ್ಘ ನಾಟಕವನ್ನು ನಿರ್ದೇಶಿಸಿ ರಂಗದಂಗಳದಲ್ಲಿ ವಿಸ್ಮಯ ಲೋಕವೊಂದನ್ನು ಸೃಷ್ಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ಅನುಭವಿ ವೃತ್ತಿಪರ ಕಲಾವಿದರಿಂದ ಇದೇ ನಾಟಕವನ್ನು ಪ್ರದರ್ಶಿಸಿ ಮೈಸೂರಿಗರನ್ನು ಬೆಚ್ಚಿ ಬೀಳಿಸಿ ಅಚ್ಚಳಿಯದ ನೆನಪುಗಳನ್ನು ಕೊಟ್ಟ ಬಸವಲಿಂಗಯ್ಯನವರು ಮತ್ತೆ ಅದೇ ನಾಟಕವನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಕಲಾಗ್ರಾಮದಲ್ಲಿ ಕಳೆದ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ಹೊಸ ಕಲಾವಿದರನ್ನು ಇಟ್ಟುಕೊಂಡು ಮರುಸೃಷ್ಟಿ ಮಾಡಿ ಅಚ್ಚರಿಯನ್ನು ಸೃಷ್ಟಿಸಿದರು.   ಈಗ ಮತ್ತೆ  2015 ಫೆಬ್ರುವರಿ 16 ರಿಂದ ’.... ಮದುಮಗಳುಮೂರನೇ ಬಾರಿಗೆ ಮರುಹುಟ್ಟು ಪಡೆದು ಮತ್ತದೇ ಬೆಂಗಳೂರಿನ ಮಲ್ಲತ್ತಳ್ಳಿಯ ಕಲಾಗ್ರಾಮದ ಬಯಲು ಪರಿಸರದಲ್ಲಿ ಪ್ರದರ್ಶನಗೊಳ್ಳುತ್ತಾ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಮಾರ್ಚ 21 ರವರೆಗೆ ವಾರಕ್ಕೆ ನಾಲ್ಕು ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ.


 20 ಜನ ಎನ್ಎಸ್ಡಿ ತರಬೇತಿಯಲ್ಲಿರುವ ಕಲಾವಿದರು, 50 ಜನ ಹವ್ಯಾಸಿ ಕಲಾವಿದರು25 ಕ್ಕೂ ಹೆಚ್ಚು  ತಂತ್ರಜ್ಞರು, 1 ತಿಂಗಳು ಕಾಲ ಸತತ ರಿಹರ್ಸಲ್ಸ್, 2 ತಿಂಗಳು ಪ್ರದರ್ಶನ, ಅಂದಾಜು 15 ಸಹಸ್ರ ಜನ ಪ್ರೇಕ್ಷಕರು, 8 ಗಂಟೆಗಳ ಅಹೋರಾತ್ರಿ ಪ್ರದರ್ಶನ, ಒಂದೇ ನಾಟಕ 4 ರಂಗಭೂಮಿಕೆಯಲ್ಲಿ ಪ್ರಯೋಗ, 50 ಲಕ್ಷ ನಾಟಕದ ಅಂದಾಜು ವೆಚ್ಚ...... 20 ಲಕ್ಷದಷ್ಟು ಟಿಕೆಟ್ ಆದಾಯ.... ಹೀಗೆ ಎಲ್ಲವೂ ದಾಖಲೆಗಳೇ. ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದೇ ಇರಬಹುದು ಆದರೆ ವ್ಯಕ್ತಿಯೊಬ್ಬ ದೊಡ್ಡದಾಗಿ ಕನಸು ಕಂಡರೆ, ಅದನ್ನು ನನಸು ಮಾಡಲು ಮನಸ್ಸು ಮಾಡಿದರೆ ವಿಸ್ವಯಗಳನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ  ಸಿ.ಬಸವಲಿಂಗಯ್ಯನವರ ರಂಗ ಸಾಹಸವೇ ಸಾಕ್ಷಿ. ಯಾಕೆಂದರೆ ಸರಕಾರಿ ಇಲಾಖೆಯನ್ನು, ಅಲ್ಲಿರುವ ಬುರಾಕ್ರಾಟ್ಸಗಳನ್ನು ಇಂತಹ ಮೆಘಾ ಈವೆಂಟ್ಗಳಿಗೆ ಹಣ ಹೂಡಲು ಒಪ್ಪಿಸುವುದೇ ಒಂದು ಸವಾಲು. ಒಪ್ಪಿಸಿದರೂ ಸರಕಾರಿ ರೂಲ್ಸು ಮತ್ತು ನಿಯಂತ್ರಣಗಳಿಗೆ ಒಳಪಟ್ಟು ಸಾಂಸ್ಕೃತಿಕ ಅಚ್ಚರಿ ಸೃಷ್ಟಿಸುವುದು ಇನ್ನೂ ಕಷ್ಟಸಾಧ್ಯ. ಆದರೆ ಇವರೆಡನ್ನೂ ನಿಭಾಯಿಸಿ ಇಲ್ಲಿವರೆಗೂ ಯಾರೂ ಮಾಡದಂತಹ ಅದ್ಬುತವೊಂದನ್ನು ಬಸವಲಿಂಗಯ್ಯನವರು ಮಾಡಿತೋರಿಸಿದ್ದಕ್ಕೆ ಕನ್ನಡ ರಂಗಭೂಮಿ ಸಂಭ್ರಮಿಸಲೇ ಬೇಕು.. ಕನಸುಗಾರ ನಿರ್ದೇಶಕರನ್ನು ತುಂಬು ಮನಸ್ಸಿನಿಂದ ಅಭಿನಂದಿಸಲೇಬೇಕು.



ಭಾರಿಯ ’... ಮದುಮಗಳುನಾಟಕದ ವಿಶೇಷತೆ ಏನೆಂದರೆ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿಯಲ್ಲಿರುವ 20 ಕಲಾವಿದರು ನಾಟಕದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿರುವುದು. ಇದರಲ್ಲಂತ ವಿಶೇಷತೆ ಏನಿದೆ ಎಂದರೆ ಹದಿನೈದು ಕಲಾವಿದರು ಕನ್ನಡಿಗರಲ್ಲ. ತಮಿಳು ಮಲಯಾಳಿ ತೆಲುಗು ಭಾಷಿಕರಾದ ಇವರಿಗೆ ಮೂರು ತಿಂಗಳ ಹಿಂದೆ ಕನ್ನಡದ ಗಂಧಗಾಳಿ  ಗೊತ್ತಿರಲಿಲ್ಲ. ಆದರೆ ಈಗ ಅವರೆಲ್ಲರಿಗೂ ಅಭಿನಯದ ಜೊತೆಗೆ ಕನ್ನಡವನ್ನೂ ಕಲಿಸಲಾಗಿದೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪ್ರಮುಖಪಾತ್ರಗಳಲ್ಲಿ ನಟಿಸುತ್ತಾ ಸುದೀರ್ಘವಾದ ಕನ್ನಡ ಸಂಭಾಷಣೆಗಳನ್ನು ಹೇಳುತ್ತಿದ್ದಾರೆಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವು ಕನ್ನಡೇತರ ಕಲಾವಿದರಿಗೆ ಮಾಡಿಕೊಟ್ಟು ಅವರನ್ನು ಕನ್ನಡ ರಂಗನಾಟಕ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದು ನಿಜಕ್ಕೂ ವಿಶೇಷವಾದದ್ದು. ಬೆಂಗಳೂರಿನ ಎನ್.ಎಸ್.ಡಿ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು ರಾಷ್ಟ್ರೀಯ ನಾಟಕ ಶಾಲೆಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಕನ್ನಡ ನಾಟಕವನ್ನು ಕಟ್ಟಿ ತೋರಿಸಿದ್ದು ಕಡಿಮೆ ಸಾಧನೆ ಏನಲ್ಲಾ.


ಕುವೆಂಪುರವರು 1967 ರಲ್ಲಿ ಮಲೆಗಳಲಿ ಮದುಮಗಳು ಕಾದಂಬರಿಯನ್ನು ಬರೆದಾಗ ಸಾಹಿತ್ಯಲೋಕ ಬೆಕ್ಕಸ ಬೆರಗಾಗಿತ್ತು. ಸಾಂಪ್ರದಾಯಕ ಸಾಹಿತ್ಯದ ಹಾಗೂ ಸಾಹಿತ್ಯ ವಿಮರ್ಶೆಯ ಯಾವುದೇ ಮಾನದಂಡಗಳಿಗೂ ಒಗ್ಗದ ಕಾದಂಬರಿ ಹೊಸದೊಂದು ಸಾಹಿತ್ಯಕ ಆಯಾಮವನ್ನೇ ತೆರೆದಿಟ್ಟಿತ್ತು. ಮತ್ತೆ ಈಗ ಆಗಿದ್ದು ಅದೇ. ಕನ್ನಡ ರಂಗಭೂಮಿ ಕತಾಕಥಿತ ಚೌಕಟ್ಟಿನ ನಾಟಕಗಳ ಪೊರೆಯನ್ನು ಕಳಚಿಕೊಂಡಂತೆ ಮಲೆಗಳಲಿ ಮದುಮಗಳು ನಾಟಕ ಮೂಡಿ ಬಂದಿದೆ, ಬ್ರಹತ್ ಕಾದಂಬರಿಯೊಂದನ್ನು ರಂಗರೂಪಮಾಡುವುದು ಸುಲಭಸಾಧ್ಯವಲ್ಲ. ಮಲೆಗಳಲ್ಲಿ ಮದುಮಗಳು ಸಿದ್ದ ಕಥೆಯೂ ಅಲ್ಲ, ಒಂದು ಚೌಕಟ್ಟಿನಲ್ಲಿರಬಹುದಾದ ಕಾದಂಬರಿಯೂ ಅಲ್ಲ, ಸಾಂಪ್ರದಾಯಿಕ ಕಥಾನಕದ ನೆಲಗಟ್ಟು ಇಲ್ಲ. ಚಿತ್ತ ಬಂದತ್ತ ಹೊರಡುವ ಕಥಾನಕಕ್ಕೆ, ಚದುರಿದ ಚಿತ್ರಗಳ ಕಟ್ಟಿಕೊಡುವ ಕೌಶಲಕ್ಕೆ ಓದುಗ ದಿಗ್ಬ್ರಮೆಗೊಳಗಾಗುವುದರಲ್ಲಿ ಸಂದೇಹವಿಲ್ಲ. ಇದು ಒಬ್ಬ ವ್ಯಕ್ತಿಕೇಂದ್ರಿತ ಕಥೆಯಲ್ಲ, ಒಂದು ಕುಟುಂಬದ ವ್ಯಥೆಯೂ ಅಲ್ಲ, ಒಂದು ನಿರ್ದಿಷ್ಟ ಜಾತಿ, ಜನಾಂಗ, ಧರ್ಮ, ವರ್ಗಕ್ಕೆ ಸೇರಿದ ಕಥಾನಕವೂ ಇದಲ್ಲ. ಇಲ್ಲಿ ಎಲ್ಲವೂ ಇದೆ. ಪ್ರೀತಿ ದ್ವೇಷ, ಸ್ವಾರ್ಥ, ಈರ್ಶೆ, ಜಾತಿ ಧರ್ಮಗಳ ಅಸಮಾನತೆ, ಮೇಲುಕೀಳುಗಳ ಅಂತರ, ಆರ್ಥಿಕ ಸ್ಥಿತ್ಯಂತರಗಳೆಲ್ಲಾ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನಾವರಣಗೊಂಡಿದೆ. ಆದರೆ ಎಲ್ಲವೂ ಚದುರಿದ ಚಿತ್ರಗಳು. ಒಂದಕ್ಕೂ ಚೌಕಟ್ಟಿಲ್ಲ, ಕಥಾ ಹಂದರಕ್ಕೊಂದು ಚಂದದ ಮಂದಿರವಿಲ್ಲ, ಸಿದ್ದ ಕಥಾರೂಪದ ಹಂಗಿಲ್ಲಆದರೆ ಎಲ್ಲವನ್ನೂ ಮೀರಿದ, ಯಾವುದನ್ನೂ ಕೇಂದ್ರೀಕರಿಸದ, ಆದರೆ ಎಲ್ಲವನ್ನೂ ಒಳಗೊಂಡ ಅದ್ವುತ ದೃಶ್ಯ ವೈಭವವೊಂದು ಮಲೆಗಳಲಿ ಮದುಮಗಳಲ್ಲಿ ಮೂಡಿಬಂದಿದೆ. ಆರಂಭ ಮತ್ತು ಅಂತ್ಯ ಎನ್ನುವ ಪರಿಕಲ್ಪನೆಯನ್ನೇ ಬದಲಾಯಿಸಿದ ಕೃತಿ ಇದು.


ಸ್ವಾತಂತ್ರ್ಯಪೂರ್ವದಲ್ಲಿ ಮಲೆನಾಡಿನ ತೀರ್ಥಹಳ್ಳಿಯ ಸುತ್ತಮುತ್ತಲ ಗ್ರಾಮಪ್ರದೇಶದಲ್ಲಿ ನಡೆಯುವ ಸಾಮಾಜಿಕ ಸ್ಥಿತ್ಯಂತರಗಳನ್ನು ಕಟ್ಟಿಕೊಡುವ ಮಲೆಗಳಲಿ ಮದುಮಗಳು ನಾಟಕವು ನೈತಿಕತೆ-ಅನೈತಿಕತೆ, ಧಾರ್ಮಿಕ ಹೇರಿಕೆ, ನಾಗರೀಕತೆಯ ದುಷ್ಟರಿಣಾಮ, ಮನುಷ್ಯನ ಸಣ್ಣತನ, ಸ್ವಾರ್ಥ, ದೌರ್ಬಲ್ಯಗಳು ಹಾಗೂ ಶೋಷಣೆಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತದೆ. ಇಡೀ ಕಥಾನಕದಲ್ಲಿ ಕುವೆಂಪುರವರ ಜೀವನ ಪ್ರೀತಿ, ಸಾಮಾಜಿಕ ಒಳನೋಟ, ಪ್ರಗತಿಪರ ನಿಲುವು ಮತ್ತು ಪ್ರೀತಿಯ ಕಡೆಗೆ ಒಲವುಗಳು ಬಿಚ್ಚಿಕೊಳ್ಳುತ್ತವೆ. ಅವುಗಳನ್ನು ನವೀರಾದ ಹಾಸ್ಯದೊಂದಿಗೆ ನಿರೂಪಿಸಿರುವ ಕ್ರಮ ಅಚ್ಚರಿ ಹುಟ್ಟಿಸುತ್ತದೆ. ಒಂದು ನಿರ್ದಿಷ್ಟ ಕಾಲಘಟ್ಟದ ಜನಜೀವನದ ಜೀವನ ದರ್ಶನವನ್ನು ಮಲೆಗಳಲಿ ಮದುಮಗಳು ಮಾಡಿಕೊಡುತ್ತದೆ. ಇಡೀ ನಾಟಕ ನಿರೂಪನಾ ಪ್ರಧಾನವಾಗಿದ್ದು ಕಥಾನಕವನ್ನು ಹೇಳಲು ಬಳಸಿದ ನಿರೂಪನಾ ವಿಧಾನವೇ ನಾಟಕದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಪ್ರತಿ ಪಾತ್ರ ಸೃಷ್ಟಿ ಮತ್ತು ಪಾತ್ರಪೋಷಣೆಗಳು ನಾಟಕದಲ್ಲಿ ವಿಶೇಷತೆಯನ್ನು ಕಟ್ಟಿಕೊಟ್ಟಿವೆ. ಇಲ್ಲಿ ನಾಯಕ ನಾಯಕರಿಲ್ಲ, ಪ್ರಮುಖ ಎನ್ನಿಸುವ ಪಾತ್ರಗಳೂ ಇಲ್ಲ. ನಗಣ್ಯ ಪಾತ್ರಗಳನ್ನಿಟ್ಟುಕೊಂಡು ಕಥೆ ಕಟ್ಟುವ ರೀತಿ ಮತ್ತು ಅದು ಪ್ರೇಕ್ಷಕರ ಮೇಲೆ ಮಾಡಿದ ಪರಿಣಾಮ ನಾಟಕದ ಬಹು ಮುಖ್ಯ ಅಂಶಗಳಾಗಿವೆ. ಒಂದು ಕಡೆ ಕೂತು ಒಂದು ಗ್ರಾಮದ ಆಗುಹೋಗುಗಳನ್ನು ಜೀವಂತವಾಗಿ ನೋಡಿ ಆನಂದಿಸಬಹುದಾದ ಅನುಭೂತಿಯನ್ನು ನಾಟಕ ಪ್ರೇಕ್ಷಕರಿಗೆ ನೀಡುತ್ತದೆ.
   
ಕುವೆಂಪುರವರ ಕಾದಂಬರಿಯನ್ನು ಓದಿದಾಗ ಸಿಗುವ ಅನುಭವವೇ ಬೇರೆ, ನಾಟಕವನ್ನು ನೋಡಿದಾಗ ದಕ್ಕುವ ಅನುಭವವೇ ಬೇರೆ. ಕಾದಂಬರಿ ನೆನಪಿನಂತೆ ಕಾಡುತ್ತದೆ. ಓದಿದ ನಂತರ ಚಿಂತನೆಗೆ ಹಚ್ಚುತ್ತದೆ. ವಿಚಾರಕ್ಕೆ ಆಹ್ವಾನವನ್ನು ನೀಡುತ್ತದೆ. ಓದುತ್ತಾ ಹೋದಂತೆ ಆರ್ದತೆಯನ್ನು ಹುಟ್ಟಿಸುತ್ತದೆ. ಅಸಮಾನ ವ್ಯವಸ್ಥೆಯ ಆಯಾಮಗಳನ್ನು ತೆರೆದಿಡುತ್ತದೆ. ಆದರೆ ಕಾದಂಬರಿಯ ರಂಗರೂಪ ಹಾಸ್ಯಪ್ರಧಾನವಾಗಿದೆ. ಮನರಂಜನೆಯೇ ಇಲ್ಲಿ ಸ್ಥಾಯಿಭಾವವಾಗಿದ್ದು ಪ್ರೇಕ್ಷಕರನ್ನು ಹಿಡಿದಿಡುವುದೇ ನಾಟಕದ ಮೂಲ ಉದ್ದೇಶವೂ ಆಗಿದೆ. ಇದು ನಿರ್ದೇಶಕರ ಅನಿವಾರ್ಯತೆಯೂ ಆಗಿದೆ, ಇಲ್ಲವಾದಲ್ಲಿ 8 ಗಂಟೆಗಳ ಕಾಲ ಅಹೋರಾತ್ರಿ ನೋಡುಗರನ್ನು ಹಿಡಿದಿಡಲು ಹೇಗೆ ಸಾಧ್ಯ? ವ್ಯಂಗ್ಯ ವಿಡಂಬಣೆ, ಆಂಗಿಕ ಚೇಷ್ಟೆ, ಹಾಡು ಕುಣಿತಗಳು, ದ್ವಂದ್ವಾರ್ಥಕ ಸನ್ನಿವೇಶ ಮತ್ತು ಸಂಭಾಷಣೆಗಳು ನೋಡುಗರಲ್ಲಿ ಕಚಗುಳಿಯನ್ನುಂಟು ಮಾಡಿದ್ದಂತೂ ಸತ್ಯ. ಕಾದಂಬರಿ ಓದದೇ ಇದ್ದವರಿಗೆ, ಓದಿದವರೂ ಅದನ್ನು ಮರೆತು ನಾಟಕ ನೋಡಿದರೆ  ಇಡೀ ರಂಗಪ್ರಯೋಗ ಬರಪೂರ್ ನಾನ್ಸ್ಟಾಪ್ ಮನರಂಜನೆಯನ್ನು ಕೊಡುತ್ತದೆ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಹೀಗಾಗಿ ನಾಟಕ ಯಾರನ್ನೂ ತೀವ್ರವಾಗಿ ಕಾಡುವುದೂ ಇಲ್ಲ.... ಹೃದಯವನ್ನು ತಟ್ಟುವುದೂ ಇಲ್ಲಾ..... ರಂಜನೆಗೆ ಇಲ್ಲಿ ಯಾವುದೇ ಕೊರತೆ ಇಲ್ಲಾ.
ನಾಟಕ ಮನರಂಜನಾ ಮಾಧ್ಯಮವೆಂದು ನಿರ್ದೇಶಕರು ನಂಬಿಕೊಂಡಿದ್ದರಿಂದ ಕುವೆಂಪುರವರ ಕಾದಂಬರಿಯ ಆಶಯಗಳನ್ನು ಪಕ್ಕಕ್ಕಿಟ್ಟಿದ್ದಾರೆ. ನಾಟಕದಲ್ಲಿ ಸಂಭಾಷಣೆಗಳ ಅಬ್ಬರದಲ್ಲಿ ಕಾದಂಬರಿಯೊಳಗಿನ ಮಾತಾಗುವ ಮೌನ ಕಾಣೆಯಾಗಿದೆ. ಕೇವಲ ಕಾದಂಬರಿಯೊಳಗಿನ ಪಾತ್ರಗಳು ಎದ್ದು ಬಂದು ಮಾಡುವ ಹಾಡು ಕುಣಿತ ಮಾತುಗಳನ್ನು ವೈಭವೀಕರಿಸಲಾಗಿದ್ದು, ನೋಡುಗರು ನಕ್ಕು ನಲಿದು ಖುಷಿಪಡುವ ದಿವ್ಯಾನುಭವಕ್ಕೆ ಅಹೋರಾತ್ರಿಯ ನಾಟಕ ಸಾಕ್ಷಿಯಾಗಿದೆ.

ಕಾದಂಬರಿಯನ್ನು ನಾಟಕಕ್ಕೆ ಹೋಲಿಸದೇ ಅರಿವಿಗಾಗಿ ಕಾದಂಬರಿಯನ್ನು ಮನೋರಂಗಭೂಮಿಕೆಯಲ್ಲಿ ಓದಿ, ಮನರಂಜನೆಗಾಗಿ ನಾಟಕವನ್ನು ರಂಗದಂಗಳದಲ್ಲಿ ನೋಡಿ ಕೃತಾರ್ಥರಾಗುವುದುತ್ತಮ. ಒಂದು ಮಾಧ್ಯಮದ ಅನುಭವವನ್ನು ಇನ್ನೊಂದು ಮಾಧ್ಯಮದಲ್ಲಿ ಕಟ್ಟಿಕೊಡಲು ಸಾಧ್ಯವೂ ಇಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಕುವೆಂಪುರವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಗಿರೀಶ ಕಾರ್ನಾಡರು ಸಿನೆಮಾ ಮಾಡಿದಾಗಲೂ ಕಾದಂಬರಿಯ ಆಶಯಗಳನ್ನು ಹಾಗೂ ಅನುಭವವನ್ನು ಕಟ್ಟಿಕೊಡಲಾಗಲಿಲ್ಲ ಎಂಬ ವಿವಾದ ಎದ್ದಿತ್ತು. ತರಾಸುರವರ ನಾಗರಹಾವು ಕಾದಂಬರಿಯನ್ನು ಪುಟ್ಟಣ್ಣ ಕಣಗಾಲರವರು ಸಿನೆಮಾ ಮಾಡಿದಾಗ ಸ್ವತಃ ತರಾಸುರವರೇ ಅದೊಂದು ಕೆರೆಹಾವು ಎಂದು ಲೇವಡಿ ಮಾಡಿದ್ದರು. ಅಕ್ಷರಮಾಧ್ಯಮದ ಸಾಧ್ಯತೆಗಳೇ ಬೇರೆ, ದೃಶ್ಯಮಾಧ್ಯಮದ ಸಾಧ್ಯತೆಗಳೇ ಬೇರೆ. ಎರಡನ್ನೂ ಭಿನ್ನವಾಗಿಯೇ ಅನುಭವಿಸಿ ಸಾರ್ಥಕತೆವುದುತ್ತಮ.

ಇಡೀ ಕಾದಂಬರಿಯನ್ನು ನೋಡುವ ಕಣ್ಣಾಗಿ, ಹೇಳುವ ಬಾಯಾಗಿ, ತಲೆಮಾರುಗಳಿಂದ ತಲೆಮಾರಿಗೆ ಕಥಾನಕವೊಂದನ್ನು ದಾಟಿಸುವ ಮಾಧ್ಯಮವಾಗಿ ಅಲೆಮಾರಿ ಸಮುದಾಯವನ್ನು ನಾಟಕದಲ್ಲಿ ಪ್ರಮುಖವಾಗಿ ನಿರೂಪಕರಾಗಿ ಬಳಸಿದ್ದು ಅರ್ಥಪೂರ್ಣವಾಗಿದೆ. ಜನಪದ ಕಥೆ ಕಾವ್ಯಗಳ ಸಂದೇಶವಾಹಕರಾಗಿರುವ ಅಲೆಮಾರಿಗಳು ನಿಜವಾಗಿಯೂ ನಮ್ಮ ಸಾಂಸ್ಕೃತಿಕ ರೂವಾರಿಗಳು. ಕಥೆಯನ್ನು ಕಟ್ಟಿದವರು, ಕಟ್ಟಿದ ಕಥೆಯನ್ನು ಬೆಳೆಸಿದವರು, ಉಳಿಸಿದವರು, ಪ್ರಚಾರ ಪಡಿಸಿದವರು. ಅನೇಕ ನಾಟಕಗಳಲ್ಲಿ ನಿರೂಪಕರಾಗಿ ಅಲೆಮಾರಿಗಳನ್ನು ಸಾಂಕೇತಿಕವಾಗಿ ಇಲ್ಲವೇ ಕಥೆಯ ದೃಶ್ಯಗಳಿಗೆ ಲಿಂಕ್ ಒದಗಿಸುವ ಕಥಾ ತಂತ್ರದ ಭಾಗವಾಗಿ ಹಲವಾರು ನಿರ್ದೇಶಕರು ಬಳಸಿದ್ದಾರೆ. ಆದರೆ ಇಷ್ಟೊಂದು ವ್ಯಾಪಕವಾಗಿ, ಕರ್ನಾಟಕದಲ್ಲಿರುವ ಬಹುತೇಕ ಅಲೆಮಾರಿ ಸಾಂಸ್ಕೃತಿಕ ಸಮುದಾಯವನ್ನು ಕಥೆ ಹೇಳುವ ಮಾಧ್ಯಮವಾಗಿ ಬಳಸಿದ್ದು ಬಹುಷಃ ಇದೇ ಮೊದಲನೆಯದು. ಮತ್ತು ಗಂಟೆಗಳ ಸುದೀರ್ಘ ನಾಟಕದ ನಿರೂಪನೆಗೆ ಇದು ಅತ್ಯಗತ್ಯವಾಗಿತ್ತು ಹಾಗೂ ಒಂದೇ ಸಮುದಾಯದವರು ನಿರೂಪಕರಾಗಿದ್ದರೆ ಅದು ಏಕತಾನತೆಗೆ ಕಾರಣವಾಗಿ ನಾಟಕ ಬೋರ್ ಹೊಡಿಸುವ ಸಾಧ್ಯತೆಯೇ ಹೆಚ್ಚಿತ್ತು. ಒಟ್ಟಾರೆಯಾಗಿ ಸಾಮಾಜಿಕ ಕಥೆಯನ್ನು ಜನಪದಗೊಳಿಸುವ ರೀತಿ ನಾಟಕದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಮಲೆನಾಡಿನ ಸೊಗಸು ಕಟ್ಟಿಕೊಟ್ಟ ರಂಗಸಜ್ಜಿಕೆ : 8 ಗಂಟೆಗಳ ಸುದೀರ್ಘ ನಾಟಕ ಕರೆಯಂಗಳ, ಬಯಲುರಂಗ, ಬಿದಿರುಮೇಳೆರಂಗ ಹಾಗೂ ಹೊಂಗೇರಂಗ ಎನ್ನುವ ಒಟ್ಟು 4 ರಂಗಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಕೆರೆಯಂಗಳದಲ್ಲಿ ಮಲೆನಾಡಿನ ಪರಿಸರವನ್ನು ಮರುಸ್ಥಾಪಿಸಲು ಶಶಿಧರ್ ಅಡಪ ತುಂಬಾ ಪರಿಶ್ರಮ ಪಟ್ಟಿದ್ದಾರೆ. ಸೆಟ್ ಇಡೀ ನಾಟಕದ ಪ್ರಮುಖ ಆಕರ್ಷಣೆಯಾಗಿತ್ತು. ದಿಬ್ಬದ ಮೇಲೆ ಸುಬ್ಬಣ್ಣ ಹೆಗ್ಗಡೆಯವರ ಮನೆ, ತಗ್ಗು ದಿಣ್ಣೆ, ಕೆರೆಯಂಗಳ, ನೇರವಾದ ಮತ್ತು ಇಳಿಜಾರಿನ ಮರದ ಸೇತುವೆಗಳು. ಅಲ್ಲಲ್ಲಿ ಅಡಿಕೆ ಮರಗಳು, ಬಿದಿರ ಜೋಪಡಿ, ಅಟ್ಟಳಿಕೆ, ವಿವಿಧ ಸ್ಥರಗಳಲ್ಲಿ ನೆಲದ ಸಿದ್ದತೆ.... ಹೀಗೆ ಮಲೆನಾಡಿನ ಪರಿಸರ ಬೆಂಗಳೂರಿಗರಲ್ಲಿ ವಿಸ್ಮಯ ಹುಟ್ಟಿಸಿತು. ಬಹುಷಃ ಇಷ್ಟೊಂದು ವಿಶಾಲವಾದ ಬಯಲು ರಂಗಸಜ್ಜಿಕೆಯನ್ನು ರಂಗಪ್ರೇಕ್ಷಕರು ನೋಡಿಯೇ ಇರಲಿಲ್ಲ. ಅಷ್ಟೊಂದು ದೊಡ್ಡದಾದ ಬಯಲುರಂಗದಂಗಳವನ್ನು ನಟರು ಬಳಸಿಕೊಂಡ ರೀತಿಯೂ ಬಹಳ ವಿಸ್ಮಯಕಾರಿ. ಎಲ್ಲವನ್ನೂ ದೊಡ್ಡದಾಗಿ ತೋರಿಸಬಯಸುವ ನಿರ್ದೇಶಕರು ಇಲ್ಲಿ ಚಿಕ್ಕಕ್ರಿಮಿಗಳಾದ ಜಿಗಣಿ ಹಾಗೂ ಸಗಣಿ ಹುಳುಗಳನ್ನು ಭಾರೀ ಗಾತ್ರದಲ್ಲಿ ಸೃಷ್ಟಿಸಿ ತೋರಿಸಿದ್ದು ಸೋಜಿಗದ ಸಂಗತಿ. ಬಯಲುರಂಗಸ್ಥಳದಲ್ಲಿ ಹಾಕಿದ ರಂಗಸಜ್ಜಿಕೆ ಇನ್ನೊಂದು ಬಗೆಯ ಲೋಕವನ್ನೇ ತೆರೆದಿರಿಸಿತ್ತು. ಹೊರಾಂಗಣದಿಂದ ಒಳಾಂಗಣಕ್ಕೆ ಬಂದಂತಹ ಅನುಭವ. ಹುಲಿಕಲ್ಲು ಗುಡ್ಡ. ವಿವೇಕಾನಂದರ ಭಾಷನದ ವೇದಿಕೆ, ಕಟ್ಟಿಗೆಯ ಅಟ್ಟನಿಗೆ, ನಾಟಕಕ್ಕಿಂತ ನಾಟಕದ ರಂಗಸಜ್ಜಿಕೆಯೇ ಮಜಬೂತಾಗಿತ್ತು..

ತಾತ್ವಿಕ ಭಿನ್ನಾಭಿಪ್ರಾಯಗಳನ್ನು, ಕಾದಂಬರಿಯ ಆಶಯಗಳನ್ನು ಬದಿಗಿಟ್ಟು ಸಾಮಾನ್ಯ ಪ್ರೇಕ್ಷಕರಾಗಿ ನಾಟಕವನ್ನು ನೋಡುವುದಾದರೆ ನಿಜಕ್ಕೂ ಅದ್ಬುತವಾದ ಪ್ರೊಡಕ್ಷನ್. ಪ್ರೇಕ್ಷಕರು ಕೊಡುವ ೨೦೦ ರೂ ಯಾವುದಕ್ಕೂ ಸಾಲದು ಅಷ್ಟೊಂದು ಖುಷಿಯನ್ನು ನಾಟಕ ಕೊಡುತ್ತದೆ. ನಿಜಕ್ಕೂ ಇದೊಂದು ಕನ್ನಡ ರಂಗಭೂಮಿಯಲ್ಲಿ ದಾಖಲಾರ್ಹ ನಾಟಕ. ಇಂತಹುದೊಂದು ಮೆಘಾ ನಾಟಕ ಯಶಸ್ವಿಯಾಗಿದ್ದಕ್ಕೆ ಇಡೀ ರಂಗಭೂಮಿ ಸಂಭ್ರಮಿಸಬೇಕಿತ್ತು. ಆದರೆ ಸಂಭ್ರಮಕ್ಕಿಂತ ಅಪಸ್ವರವೇ ಕೇಳಿಬರುತ್ತಿರುವುದು ವಿಪರ್ಯಾಸ. ಹಲವರ ಮೂಲ ಆಕ್ಷೇಪನೆ ಇರುವುದು ನಾಟಕದ ಆಶಯಕ್ಕಿಂತ ನಾಟಕಕ್ಕಾದ ಖರ್ಚಿನ ಬಗ್ಗೆ. ನಾಟಕದ ಬಿಗ್ ಬಜೆಟ್ ಬಗ್ಗೆ.

ಹೌದು! ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಇಷ್ಟೊಂದು ಅದ್ದೂರಿ ಬಜೆಟ್ಟಿನ ನಾಟಕ ಎಲ್ಲೂ ನಡೆದಿರಲಿಲ್ಲ. ಕಳೆದ ಬಾರಿ ಮುಕ್ಕಾಲು ಕೋಟಿ ಹಣ ಖರ್ಚಾಗಿತ್ತು. ಸಲ ಅರ್ಧ ಕೋಟಿಯ ಬಜೆಟ್ ಇದೆ. ಒಂದು ಲೋ ಬಜೆಟ್ ಕನ್ನಡ ಸಿನೆಮಾಕ್ಕೆ ಆಗಬಹುದಾದಷ್ಟು ಖರ್ಚು ಇದಕ್ಕಾಗಿದೆ. ಸಲದ ಮಲೆಗಳಲಿ ಮದುಮಗಳು ನಾಟಕದ ಒಟ್ಟು 20 ಪ್ರದರ್ಶನಗಳಿಗಾಗಿ ಸಂಸ್ಕೃತಿ ಇಲಾಖೆ ಕೊಟ್ಟಿದ್ದು 30 ಲಕ್ಷ. ಬಾಕಿ ಬೇಕಾದ 20 ಲಕ್ಷಗಳನ್ನು  ನಾಟಕದ ರಂಗಸಜ್ಜಿಕೆ ರಂಗಪರಿಕರಗಳಿಗೆ ಆದ ಖರ್ಚು ಹತ್ತಲ್ಲಾ ಇಪ್ಪತ್ತಲ್ಲಾ ಬರೊಬ್ಬರಿ 30 ಲಕ್ಷಕಲಾವಿದರು, ತಂತ್ರಜ್ಞರ ಸಂಬಳ ಮತ್ತು ಇತರೆ ಖರ್ಚುಗಳು 20 ಲಕ್ಷ ಎನ್ನಲಾಗಿದೆ. ಅಂದರೆ ಅರ್ಧ ಕೋಟಿ ರೂಪಾಯಿಯ ದುಬಾರಿ ನಾಟಕ ಇದು. ಇಷ್ಟು ದೊಡ್ಡ ಬಜೆಟ್ಟಿನ ನಾಟಕವೊಂದು ನಿರ್ಮಾಣವಾಗಿದ್ದಕ್ಕೆ ಕನ್ನಡಿಗರು ಹೆಮ್ಮೆ ಪಡಬೇಕಲ್ಲವೇ? ಆದರೆ ಸರಕಾರಿ ಹಣದ ಅಂದಾದುಂದಿ ಖರ್ಚು, ಹುಚ್ಚು ಮುಂಡೇ ಮದುವೇಲಿ ಉಂಡವನೇ ಬಸವಲಿಂಗಯ್ಯ...ಎಂದೆಲ್ಲಾ ಅಪಸ್ವರಗಳು ನಾಟಕದ ನಿರ್ಮಾಣದ ಬಗ್ಗೆ ಕೇಳಿಬರುತ್ತಿವೆದುಂದುಗಾರಿಕೆ, ಜನರ ಹಣದ ಅಪವ್ಯಯ, ಹುಚ್ಚುತನ ಎಂದೆಲ್ಲಾ ಬಿನ್ನಸ್ವರಗಳು ಆಲಾಪನೆ ಮಾಡಿದವು. ಆದರೆ ಇನ್ನೊಂದು  ಆಯಾಮವನ್ನೂ ನಾವು ಅರಿಯಬೇಕಿದೆ.

ಸರಕಾರದ ಸಂಸ್ಥೆಗಳಾದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಪ್ರಾಯೋಜಿಸುವ ವಿಜಯನಗರ ವೈಭವ, ಕರ್ನಾಟಕ ವೈಭವ... ಮುಂತಾದ ಲೈಟ್ ಆಂಡ್ ಸೌಂಡ್ ಕಾರ್ಯಕ್ರಮಗಳಿಗೆ ಖರ್ಚಾಗುವ ಸರಕಾರದ ಹಣ ಒಂದೊಂದು ಪ್ರದರ್ಶನಕ್ಕೂ 50ಲಕ್ಷದಿಂದ 1 ಕೋಟಿ. ಆದರೆ ಕಾರ್ಯಕ್ರಮದ ಪ್ರದರ್ಶನದಿಂದ ವಾಪಸ್ ಬರುವ ಹಣ ಶೂನ್ಯ. ಹಿಂದೆ ಜಾನಪದ ಜಾತ್ರೆ ಎನ್ನುವ ಕಾರ್ಯಕ್ರಮವನ್ನು ಕಪ್ಪಣ್ಣನವರ ಮುಂದಾಳತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿತ್ತಲ್ಲ. ಅದರ ಒಟ್ಟು ಖರ್ಚು ಕೇಳಿದರೆ ಹುಚ್ಚು ಹಿಡಿಯುತ್ತದೆ. ಜಾತ್ರೆಯಲ್ಲಿ ದುಡಿದ ಸಂಚಾಲಕರುಗಳು ಬಂದ ಹಣದಲ್ಲಿ ಕಾರುಗಳನ್ನು ಕೊಂಡು ಓಡಾಡುತ್ತಿದ್ದಾರೆ. ಉತ್ಸವಗಳಿಗೆ ಇದೇ ಸಂಸ್ಕೃತಿ ಇಲಾಖೆ ಐದು, ಹತ್ತು, ಹದಿನೈದು ಲಕ್ಷಗಳಷ್ಟು ಹಣವನ್ನು ಪ್ರತಿ ವರ್ಷ ಕೆಲವು ತಂಡಗಳಿಗೆ ಕೊಡುತ್ತಲ್ಲಾ ಅದರಿಂದ ಇಲಾಖೆಗೆ ಬಂದ ಲಾಭ ಏನು? ಅಂತಹ ಕಾರ್ಯಕ್ರಮಗಳನ್ನು ಅದೆಷ್ಟು ಜನ ಪ್ರೇಕ್ಷಕರು ನೋಡಿ ಪಾವನರಾಗಿದ್ದಾರೆ. ಸಂಸ್ಕೃತಿ ಇಲಾಖೆ ಒಂದೊಂದು ಸಂಗೀತ ನೃತ್ಯ ಕಾರ್ಯಕ್ರಮಗಳಿಗೆ ಪ್ರಾಯೋಜಿಸುವ ಹಣ ಹತ್ತೆಂಟು ಲಕ್ಷ ರೂಪಾಯಿ. ಹೀಗೆ ವಾರ್ಷಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 280 ಕೋಟಿ ಹಣವನ್ನು ಕಲೆ, ಸಂಸ್ಕೃತಿಯ ಉಳಿಸುವ ಮತ್ತು ಬೆಳೆಸುವ ಸಲುವಾಗಿ ಜನರ ಹಣವನ್ನು ಖರ್ಚು ಮಾಡುತ್ತದೆ. ಆದರೆ ಯಾವುದೇ ಪ್ರೊಜೆಕ್ಟನಿಂದಲೂ ಒಂದು ನಯಾಪೈಸೆ ವಾಪಸ್ ಇಲಾಖೆಗೆ ಬಂದ ಉದಾಹರಣೆಗಳಿಲ್ಲ. ಆದರೆ ಅರ್ಧ ಕೋಟಿ ವೆಚ್ಚದ .... ಮದುಮಗಳು ನಾಟಕದ ಟಿಕೇಟ್ನಿಂದ ಬರುವ ಅಂದಾಜು ಆದಾಯ 20ಲಕ್ಷದಷ್ಟು. ಇದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರಕವಿ ಕುವೆಂಪುರವರ ಅದ್ಬುತ ಕಾದಂಬರಿಯ ರಂಗರೂಪವನ್ನು ಜನ ಸಾಗರೋಪಾದಿಯಲ್ಲಿ ಬಂದು ಚಳಿ ಮಳೆಯಲ್ಲಿ ಅಹೋರಾತ್ರಿ ನೋಡಿ ಖುಷಿಡುತ್ತಿದ್ದಾರೆ. ಇಲ್ಲಿ ಜನರ ಹಣ ಜನರಿಗಾಗಿಯೇ ಖರ್ಚು ಮಾಡಲಾಗಿದ್ದು ಸಾರ್ಥಕತೆಯನ್ನುಂಟುಮಾಡಿದೆ. ಜೊತೆಗೆ ನಿಂತ ನೀರಾಗಿರುವ, ಸರಕಾರಿ ಸಂಸ್ಥೆಯ ಹಣಕಾಸಿನ ಮೇಲೆಯೇ ಜೀವ ಹಿಡಿದುಕೊಂಡಂತಿರುವ ಬೆಂಗಳೂರಿನ ರಂಗಭೂಮಿಗೆ ನಾಟಕ ಹೊಸ ತಿರುವನ್ನುಂಟುಮಾಡುವ ಸಾಧ್ಯತೆ ಇದೆ. ಇದೇ ನಾಟಕವನ್ನು ಇನ್ನೂ 35 ದಿನಗಳ ಕಾಲ ಪ್ರದರ್ಶಿಸಿದ್ದರೆ, ರಾಜ್ಯಾದ್ಯಂತ ಸರಿಯಾಗಿ ಪ್ರಚಾರ ಮಾಡಿದ್ದರೆ ಕಲಾಗ್ರಾಮ ಎನ್ನುವುದು ಪ್ರೇಕ್ಷಣೀಯ ಸ್ಥಳವಾಗುತ್ತಿತ್ತು. ಹೂಡಿದ ಹಣ ವಾಪಸ್ ಬರುತ್ತಿತ್ತು. ಆಡಿಕೊಳ್ಳುವವರ ಬಾಯನ್ನೂ ಮುಚ್ಚಿಸಬಹುದಿತ್ತು. ಮಲೆಮಗಳು ಲಕ್ಷಾಂತರ ಮಂದಿಯನ್ನು ದೃಶ್ಯರೂಪದಲ್ಲಿ ತಲುಪುತ್ತಿತ್ತುಏನೇ ಆಗಲಿ ಇಂತಹುದೊಂದು ಅಪರೂಪದ ದಾಖಲಾರ್ಹ ರಂಗಪ್ರಯತ್ನ ಕನ್ನಡ ರಂಗಭೂಮಿಯಲ್ಲಿ ಆಗಿದ್ದು ಹಾಗೂ ಆಗುತ್ತಿರುವುದು ಕನ್ನಡ ರಂಗಭೂಮಿಗೆ ಹೆಮ್ಮೆ ವಿಷಯವಾಗಿದೆ. ಎಲ್ಲಾ ರಂಗಕರ್ಮಿಗಳು, ರಂಗಪೋಷಕರು ಇಂತಹ ಮಹತ್ಕಾರ್ಯವನ್ನು ಬೆಂಬಲಿಸಿ ಸಂಭ್ರಮಿಸಬೇಕಾಗಿದೆ.


ಈ ಸಲದ 'ಮಲೆಗಳಲಿ ಮದುಮಗಳು' ನಾಟಕದ  ಮೂರನೇ ಬಾರಿಯ ಪ್ರದರ್ಶನಗಳನ್ನು ಈ ಹಿಂದಿನ ಎರಡೂ ಸಲದ ಪ್ರದರ್ಶನಕ್ಕೆ ಹೋಲಿಸಿದರೆ ತುಂಬಾ ಸಪ್ಪೆ ಎನಿಸುವಂತಿದೆ. ಮೊದಲ ಬಾರಿಗೆ  2012 ರಲ್ಲಿ ಈ ನಾಟಕವನ್ನು ಮೈಸೂರಿನಲ್ಲಿ ರಂಗಾಯಣದ ಕಲಾವಿದರು ಅಭಿನಯಿಸಿದ್ದಾಗ  ಅದ್ಭುತವಾಗಿ ನಾಟಕವನ್ನು ಕಟ್ಟಿಕೊಡಲಾಗಿತ್ತು. ಅಭಿನಯ ವಿಭಾಗದಲ್ಲಂತೂ ಕಲಾವಿದರು ಪೈಪೋಟಿಗೆ ಬಿದ್ದಂತೆ ನಟಿಸಿ ನಾಟಕವನ್ನು ಅವಿಸ್ಮರಣೀಯ ಗೊಳಿಸಿದ್ದರು. ತದನಂತರ  2014 ರಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ  ಮತ್ತೆ '...ಮದುಮಗಳ'ನ್ನು ಮರು ಸೃಷ್ಟಿಸಿದಾಗ ಹೊಸ ಕಲಾವಿದರು ತಮ್ಮ ಶಕ್ತಿ ಮೀರಿ ಅಭಿನಯಿಸಿದರಾದರೂ ರಂಗಾಯಣದ ಕಲಾವಿದರ ಗುಣಮಟ್ಟವನ್ನು ಮುಟ್ಟಲಾಗಿರಲಿಲ್ಲ. ಆದರೂ ಮೂರು ತಿಂಗಳ ಸತತ ರಿಹರ್ಸಲ್ಸ್ ಗಳನ್ನು ಮಾಡಿಸಿ  ಯುವ ಕಲಾವಿದರನ್ನು  ತಯಾರಿಗೊಳಿಸಲಾಗಿತ್ತು. ಏನೇ ಆದರೂ ರಂಗಾಯಣದ  ನಾಟಕ ನೋಡಿದವರಿಗೆ ಕಲಾಗ್ರಾಮದಲ್ಲಾದ ಪ್ರಯೋಗ ಸಪ್ಪೆ ಎನಿಸಿತು. ಈಗ ಮತ್ತೆ ಅದೇ ನಾಟಕವನ್ನು ಬಸವಲಿಂಗಯ್ಯನವರು  ಬೆಂಗಳೂರಿನ ಎನ್ಎಸ್ ಡಿ ಯ ವಿದ್ಯಾರ್ಥಿಗಳನ್ನು ಪ್ರಮುಖವಾಗಿಟ್ಟುಕೊಂಡು ಮತ್ತೆ ಸೃಷ್ಟಿಸಿದರು. ಆದರೆ ಈ ವಿದ್ಯಾರ್ಥಿಗಳಿನ್ನೂ ಕಲಿಕೆಯ ಹಂತದಲ್ಲಿದ್ದು ಅನುಭವದ ಕೊರತೆಯಿಂದಾಗಿ ನಾಟಕ ಸೊರಗಿ ಹೋಯಿತು. ಯಾಕೆಂದರೆ ಬಹುತೇಕ ವಿದ್ಯಾರ್ಥಿಗಳು ಕನ್ನಡೇತರರು. ಅದೆಷ್ಟೇ ತರಾತುರಿಯಲ್ಲಿ ಕನ್ನಡ ಕಲಿಸಿದರೂ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಕೆಲವರ ಕನ್ನಡದ ಕೆಟ್ಟ ಉಚ್ಚಾರಣೆಯೇ ಪ್ರೇಕ್ಷಕರಿಗೆ ನಗುವುಕ್ಕಿಸುವಂತಿತ್ತು.  ಕಳೆದ ಸಲ ಅಭಿನಯಿಸಿದ ಕೆಲವು ನಟರು ಈ ಸಲವೂ ಒಂದಿಷ್ಟು ನಾಟಕಕ್ಕೆ ಕಳೆತಂದರು. ಹಿಂದೆ ಮಾಡಿದ ನಾಟಕದ ಸಿಡಿ ತೋರಿಸಿ ಅದರ ಯಥಾವತ್ತು  ಅಭಿನಯವನ್ನು ನೋಡಿ ಕಲಿಯಲು ಹೇಳಿದ್ದರಿಂದ ನಾಟಕದ ಅಭಿನಯದಲ್ಲಿ ಹೊಸತನವಿರಲಿಲ್ಲ. ಜೊತೆಗೆ ಇಷ್ಟೊಂದು ದೊಡ್ಡ ನಾಟಕಕ್ಕೆ ಒಂದು ತಿಂಗಳ ರಿಹರ್ಸಲ್ ಯಾವುದಕ್ಕೂ ಸಾಕಾಗಲಿಲ್ಲ. ತಾಲಿಂ ಕೊರತೆ ನಾಟಕದಲ್ಲಿ ಆಗಾಗ ಕಂಡುಬರುತ್ತಿತ್ತು.  ಕಳೆದೆರಡು ಸಲದ ಪ್ರದರ್ಶನವನ್ನು ನೋಡಿದವರಿಗೆ ಈ ಬಾರಿಯ  ಪ್ರದರ್ಶನ ನಿರಾಶೆಯನ್ನುಂಟು ಮಾಡಿದ್ದಂತೂ ದಿಟ.

'ಮಲೆಗಳಲಿ ಮದುಮಗಳು' ಪ್ರೇಕ್ಷಕರಿಗೆ ನಿರಾಶೆಯನ್ನುಂಟು ಮಾಡಲು ಇನ್ನೂ ಒಂದು ಕಾರಣ ಏನೆಂದರೆ, ನಾಟಕದಲ್ಲಿ ಮಾಡಲಾದ ಎಡಿಟ್. ಹಿಂದಿನ ಸಲದ ಪ್ರದರ್ಶನದ ಕೆಲವು ಅಂಶಗಳಿಗೆ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ತಕರಾರೆತ್ತಿದ್ದರು. ಅದರಲ್ಲಿ ಮುಖ್ಯವಾಗಿ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎನ್ನುವುದು ಪ್ರಮುಖ ಆರೋಪವಾಗಿತ್ತು. ಹೀಗಾಗಿ ಈ ಸಲ ಬಸವಲಿಂಗಯ್ಯನವರು  ಈ ಅಂಶಗಳನ್ನು ಡೈಲ್ಯೂಟ್ ಮಾಡಿಬಿಟ್ಟಿದ್ದಾರೆ. 'ಸ್ವಾಮಿಗೋಳು ನಮ್ಮ ಸ್ವಾಮಿಗೋಳು....' ಹಾಡಿನ ದೃಶ್ಯವಂತೂ ಸಪ್ಪೆ ಎನಿಸುತ್ತದೆ. ಕೊನೆಗೆ ಕ್ರಿಶ್ಚಿಯನ್ ಧರ್ಮಗುರುಗಳ 'ಸಂತೋಷ ಉಕ್ಕೇ ಉಕ್ಕತೈತೆ..." ಹಾಡಿನ ದೃಶ್ಯವೂ ಸಹ ತನ್ನ ತೀವ್ರತೆಯನ್ನು ಕಳೆದು ಕೊಂಡಿದೆ. ಜೊತೆಗೆ ಕಳೆದ ಸಲ ಅಪಾಯಕಾರಿಯಲ್ಲದ ಕೆಲವು ದ್ವಂದ್ವಾರ್ಥದ ಮಾತುಗಳು ನಿದ್ದೆಗೆ ಜಾರುವ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಚಗುಳಿ ಇಟ್ಟು ಎಬ್ಬಿಸುತ್ತಿದ್ದವು.  ಕೆಲವರ ಕಾಮೆಂಟಿಗೆ ಹೆದರಿದ ನಿರ್ದೇಶಕರು ಅಂತಹ ಸಂಭಾಷಣೆಗಳಿಗೆ ಕತ್ತರಿ ಹಾಕಿದ್ದಾರೆ. ಹೀಗೆ ಹಲವಾರು ರೀತಿಯಲ್ಲಿ ರಾಜಿ ಮಾಡಿಕೊಂಡಿದ್ದರಿಂದ ಇಡೀ ನಾಟಕ ನೀರಸವೆನಿಸುತ್ತದೆ.



ಆದರೆ ಈ ಸಲ ಮೊದಲ ರಂಗದಲ್ಲಿ ಒಂದಿಷ್ಟು ಉತ್ತಮ ಬದಲಾವಣೆಗಳಾಗಿವೆ. ಮೊದಲು ಪ್ರೇಕ್ಷಕರಿಂದ ಕಲಾವಿದರು ತುಂಬಾನೇ ದೂರದಲ್ಲಿರುತ್ತಿದ್ದರು. ಎಲ್ಲವನ್ನೂ ಎಕ್ಟ್ರೀಮ್ ಲಾಂಗ್ ಶಾಟ್ ನಲ್ಲಿಯೇ ನೋಡಬೇಕಾಗಿತ್ತು. ಹೀಗಾಗಿ ಕಲಾವಿದರು ಚಿಕ್ಕಪುಟ್ಟ ಗೊಂಬೆಗಳ ಹಾಗೆ ಕಾಣುತ್ತಿದ್ದರು. ಆದರೆ ಈ ಸಲ  ಈ ನ್ಯೂನ್ಯತೆಯನ್ನು ಸರಿಪಡಿಸಲಾಗಿದ್ದು ಪಾತ್ರಗಳು ಪ್ರೇಕ್ಷಕರಿಗೆ ಒಂದಿಷ್ಟು ಹತ್ತಿರವಾಗಿವೆ. ಲಾಂಗ್ ಶಾಟ್ ನಲ್ಲಿ ದೃಶ್ಯಗಳನ್ನು ನೋಡಬಹುದಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಬದಲಾವಣೆ ನಾಲ್ಕನೇ ರಂಗದಲ್ಲಾಗಿದೆ. ಅದೇನೆಂದರೆ  ಈ ಹಿಂದೆ ಪ್ರೇಕ್ಷಕರಿಗೆ ಹತ್ತಿರದಲ್ಲಿದ್ದ ದೃಶ್ಯಗಳು ಹಾಗೂ ಪಾತ್ರಗಳು ಈ ಸಲ ತುಂಬಾ ದೂರವಾಗಿವೆ. ಒಂದನ್ನು ಸರಿಪಡಿಸಿ ಇನ್ನೊಂದನ್ನು ಹದಗೆಡಿಸಿದ್ದು ಅದ್ಯಾಕೋ ಗೊತ್ತಿಲ್ಲ.


ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಪ್ರೇಕ್ಷಕರ ಆಸನ ವ್ಯವಸ್ಥೆ  ಚೆನ್ನಾಗಿದೆ. ಎಲ್ಲೇ ಕೂತರೂ ಎಲ್ಲರಿಗೂ ದೃಶ್ಯಗಳು ಸ್ಪಷ್ಟವಾಗಿ ಕಾಣುವ ಹಾಗಿವೆ. ಮೈನೋವಿಲ್ಲದೇ  ಬೆನ್ನೋವಿಲ್ಲದವರು ಆರಾಮಾಗಿ ಕೂತು ನೋಡಿ ನಲಿಯಬಹುದಾಗಿದೆ, ಬೋರಾಗಿ ನಿದ್ದೆ ಬಂದವರು ಕಾಲು ಚಾಚಿ ಮಲಗಬಹುದಾಗಿದೆ. ಈ ಸಲ ಹೆಚ್ಚು ಎಡವಟ್ಟಾಗಿದ್ದು ಮೈಕ್ ಸಿಸ್ಟಂನಿಂದಾಗಿ. ಕೆಲವೊಮ್ಮೆ ಪಾತ್ರಗಳ ಮಾತುಗಳು ಸ್ಪಷ್ಟವಾಗಿ ಕೇಳಿದರೆ ಇನ್ನು ಕೆಲವೊಮ್ಮೆ ಅಸ್ಪಷ್ಟವಾಗಿ  ಕೇಳಿದ್ದು ಕೇಳುಗರಿಗೆ ಅಸಹನೆಯನ್ನುಂಟು ಮಾಡಿದಂತಿದೆ.  ಒಟ್ಟಾರೆಯಾಗಿ ಎಲ್ಲಾ ಕೊರತೆಗಳ ನಡುವೆಯೂ ಸಂತಸದ ಸಂಗತಿ ಏನೆಂದರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ. ವಾರಾಂತ್ಯದ ಎರಡು ದಿನಗಳಂತೂ ಹೌಸ್ ಫುಲ್. ಟಿಕೆಟ್ ಸಿಗದೇ ಕೆಲವರು ವಾಪಸ್ ಹೋಗಿದ್ದಿದೆ. ಕಳೆದ ಸಲ ನೂರು ರೂಪಾಯಿ ಟಿಕೆಟ್ ಇದ್ದದ್ದು ಈ ಸಲ ಇನ್ನೂರು ರೂಪಾಯಿ ಆಗಿದೆ. ಅದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಳಿ ಮಳೆ ಎನ್ನದೇ ನಿದ್ದೆಗೆಟ್ಟು ನಾಟಕ ನೋಡಿ ಹೋಗಿದ್ದೊಂದು ಮಹಾನಗರದ ಪವಾಡವೇ ಆಗಿದೆ.

ನಿರ್ದೇಶಕ ಸಿ.ಬಸವಲಿಂಗಯ್ಯನವರು
ಮಾರ್ಚ 21 ಕ್ಕೆ ಉಗಾದಿಯ ಮಾರನೆಯ ದಿನ 'ಮಲೆಗಳಲಿ ಮದುಮಗಳು' ತನ್ನ ಕೊನೆಯ ಪ್ರದರ್ಶನವನ್ನು ಕಂಡು ವಿಶ್ರಾಂತಿ ಪಡೆಯುತ್ತದೆ. ಆದರೆ ಈ ನಾಟಕವನ್ನು  ಇಲ್ಲಿಗೆ ನಿಲ್ಲಿಸುವುದುತ್ತಮ ಯಾಕೆಂದರೆ ಬರುಬರುತ್ತಾ ತನ್ನ ಕ್ವಾಲಿಟಿಯನ್ನು ಕಡಿಮೆಗೊಳಿಸುತ್ತಿದೆ. ಇಂತಹುದೆ ಮೆಘಾ ನಾಟಕವನ್ನು ಸಂಸ್ಕೃತಿ ಇಲಾಖೆ ನಿರ್ಮಿಸುವುದಿದ್ದರೆ  ಇದರ ಬದಲಾಗಿ ಬೇರೆ ಮತ್ತೊಂದು ಮಹಾನ್ ಕೃತಿಯನ್ನು ತೆಗೆದುಕೊಳ್ಳುವುದುತ್ತಮ. ಹೊಸ ರಂಗಪಠ್ಯ, ಹೊಸ ಕಲಾವಿದರು, ಹೊಚ್ಚ ಹೊಸದಾದ ರಂಗವಿನ್ಯಾಸ..... ನೋಡುಗರಿಗೆ ಇನ್ನೂ ವಿಶಿಷ್ಟವಾದುದನ್ನು ಕೊಡಬಹುದಾಗಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ಸಿ.ಬಸವಲಿಂಗಯ್ಯನವರು ಹಾಗೂ ಮಹಾಪೋಷಕರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಆಲೋಚಿಸುವುದುತ್ತಮ.

                                                      -ಶಶಿಕಾಂತ ಯಡಹಳ್ಳಿ
   
           






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ