ಗುರುವಾರ, ಮಾರ್ಚ್ 12, 2015

“ವರಾಹ ಪುರಾಣ” ದಲ್ಲಿ ಅನಾವರಣಗೊಂಡ ಹಿಂಸಾಯಣ

 ಹೊಸ ರಂಗನಿರ್ದೇಶಕರಿಂದ  ಹಳೇ ಪುರಾಣ ಪಾರಾಯಣ


                    ಯಾರಿವರು ಯಾರಿವರು ಯಾವ ಕಡೆ ನಡೆದವರು
                   ತಲೆಯ ಮೇಲೆ ಬಿಜಲಿ ಖಾವು, ಹೊಟ್ಟೆ ಒಳಗೆ ಹಸಿದ ಗಾವು
                   ಜೀವನವೆಲ್ಲಾ ಕುದ್ದು ಕುದ್ದು ಆವಿಯಾಗಿ ಹೋದವರು....

ವರಾಹ ಪುರಾಣದಲ್ಲಿ ಬಳಿಕೆಯಾದ ಜಂಬಣ್ಣ ಅಮರಚಿಂತರವರ ಹಾಡು ಇಡೀ ನಾಟಕದ ಆಶಯವನ್ನು ಹೇಳುವಂತಿದೆ. ಕೊರವರ ಬದುಕಿನ ಬವಣೆಗೆ ಕನ್ನಡಿ ಹಿಡಿಯುವಂತಿದೆ.

ತಳಸಮುದಾಯವನ್ನು ಮೊದಲಿನಿಂದಲೂ ರಂಗಭೂಮಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಆಗಾಗ ಕೇಳಿಬರುತ್ತದೆ. ಇಂತಹ ಆರೋಪವನ್ನು ಸುಳ್ಳು ಮಾಡಲೆಂದೇ ಇತ್ತೀಚೆಗೆ ತೀವ್ರವಾಗಿ ನಾಗರೀಕ ಸಾಮಾಜದ ನಿರ್ಲಕ್ಷಕ್ಕೊಳಗಾಗಿರುವ ಜನಾಂಗಗಳ ಬದುಕು-ಬವಣೆ ಹಾಗೂ ಶೋಷಣೆಗಳ ಕುರಿತು ಕೆಲವು ನಾಟಕಗಳು ಅಪರೂಪಕ್ಕೊಮ್ಮೆ ಪ್ರದರ್ಶನಗೊಳ್ಳುತ್ತಿವೆ. ಅಲೆಮಾರಿ ಬುಡುಕಟ್ಟು ಜನಾಂಗದ ಕುರಿತು ಡಾ.ಬಾಲಗುರುಮೂರ್ತಿಯವರು ಬರೆದ ಬುಡ್ಗನಾದ ಈಗಾಗಲೇ ಹಲವಾರು ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಈಗ ಕೊರವರ ನಿಕೃಷ್ಟ ಬದುಕನ್ನು ವರಾಹ ಪುರಾಣ ನಾಟಕ ಅನಾವರಣಗೊಳಿಸುತ್ತದೆ.


ಜಂಬಣ್ಣ ಅಮರಚಿಂತರವರು ಬರೆದ ಕುರುಮಯ್ಯ ಮತ್ತು ಅಂಕುಶದೊಡ್ಡಿ ಕಾದಂಬರಿಯನ್ನು ಆಧರಿಸಿ ಸಿದ್ದರಾಮ ಕೊಪ್ಪರ್ ರವರು ವರಾಹ ಪುರಾಣ ಹೆಸರಲ್ಲಿ ರಂಗಪಠ್ಯವನ್ನು ಸಿದ್ದಗೊಳಿಸಿ ರೂಪಾಂತರ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಲಲಿತಕಲಾ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಎಂ.ಎಸ್.ಮೂರ್ತಿರವರ ನೇತೃತ್ವದ ಬೆಂಗಳೂರು ಆರ್ಟ್ಸ ಪೌಂಡೇಶನ್ 2015, ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಭಾಗವಾಗಿ ಕನ್ನಡಭವನದ ನಯನ ರಂಗಮಂದಿರದಲ್ಲಿ ವರಾಹ ಪುರಾಣ ಪ್ರದರ್ಶನಗೊಂಡಿತು.

ನಮ್ಮ ನಾಗರೀಕ ಸಮಾಜದಲ್ಲಿ ಶೋಷಣೆಗೊಳಗಾದ ಕೆಲವಾರು ತಳಸಮುದಾಯಗಳಲ್ಲಿ ಕೊರವರ ಜನಾಂಗ ಕೂಡಾ ಒಂದು.   ಹಂದಿ ಸಾಕುವುದು ಹಾಗೂ ಈಚಲು ಮರದ ಬುಟ್ಟಿ ತಯಾರಿಸಿ ಮಾರಾಟ ಮಾಡುವುದು ಜನಾಂಗದ ಪ್ರಮುಖ ವೃತ್ತಿ. ಜನಾಂಗದಲ್ಲಿರುವ ಬಡತನ, ಮೂಢನಂಬಿಕೆ, ಮಹಿಳಾ ಶೋಷಣೆ ಹಾಗೂ ಅವರ ಮೇಲೆ ನಡೆಯುವ ಮೇಲ್ವರ್ಗದವರ ದಬ್ಬಾಳಿಕೆಗಳನ್ನು ವರಾಹ ಪುರಾಣ ಪ್ರೇಕ್ಷಕರ ಮುಂದೆ ಹಸಿಹಸಿಯಾಗಿಯೇ ಬಿಚ್ಚಿಡುತ್ತದೆ. ಕೊರವ ಜನಾಂಗದ ಆಂತರಿಕ ಹಿಂಸೆ ಹಾಗೂ ಸವರ್ಣೀಯರ ಬಾಹ್ಯ ಕ್ರೌರ್ಯವನ್ನು ತೋರಿಸುವುದೇ ನಾಟಕದ ಉದ್ದೇಶವಾದಂತಿದ್ದು ತನ್ನ ಉದ್ದೇಶದಲ್ಲಿ ಇಡೀ ನಾಟಕ ಸಫಲವಾಗಿದೆ.

ನಾಟಕದ ಕಥೆ ಹೀಗಿದೆ. ಅಂಕುಶದೊಡ್ಡಿ ಗ್ರಾಮದ ಕೊರವರ ಕೇರಿಯ ರೋಗಿಷ್ಠ ಮಾರೆಪ್ಪನ ಹೆಂಡತಿ ಬುಡ್ಡಿಯು ಜಂಬ್ಯಾನ ಜೊತೆ ಸರಸವಾಡುವಾಗ ಸಿಕ್ಕಾಕಿಕೊಂಡು ರಂಪರಾದ್ದಾಂತವಾಗುತ್ತದೆ. ಕೊನೆಗೆ ಪಂಚಾಯತಿಯಲ್ಲಿ ಬುಡ್ಡಿ ಮಾರೆಪ್ಪನ ಬದಲಾಗಿ ಜಂಬ್ಯಾನ ಜೊತೆ ಕೂಡಿಕೆ ಮಾಡಿಕೊಳ್ಳಬೇಕು, ಅದರ ಬದಲಾಗಿ ಜಂಬ್ಯಾ ಮಾರೆಪ್ಪನಿಗೆ ಇನ್ನೂರು ರೂಪಾಯಿ ಕೊಡಬೇಕು ಮತ್ತು ಬುಡ್ಡಿಯ ಮಗು ಮಾರೆಪ್ಪನ ಜೊತೆಗಿರಬೇಕು ಎನ್ನುವ ಅಮಾನವೀಯ ತೀರ್ಮಾನ ಪ್ರಕಟವಾಗುತ್ತದೆ. ಜಂಬ್ಯಾನ ಗುಡಿಸಲಿಗೆ ಬಂದ ಬುಡ್ಡಿಗೆ ಅತ್ತೆ ಕಾಟ ಶುರುವಾಗುತ್ತದೆ. ತದನಂತರ ಮೊದಲಿನ ಗಂಡನ ಜೊತೆಗೆ ಬುಡ್ಡಿ ಇನ್ನೂ ಸಂಪರ್ಕ ಇಟ್ಟುಕೊಂಡಿದ್ದಾಳೆಂದು ಆಪಾದಿಸಿದ ಜಂಬ್ಯಾ ಆಕೆಯ ಇಚ್ಚೆಗೆ ವಿರುದ್ಧವಾಗಿ ಶ್ರೀಮಂತ ಮುದುಕನಿಗೆ ಮಾರಾಟ ಮಾಡುತ್ತಾನೆ. ಮಗುವಿನ ಅಗಲಿಕೆ ಹಾಗೂ ಕೂಡಿಕೆ ಗಂಡನ ದೌರ್ಜನ್ಯದಿಂದ ಬೇಸತ್ತ ಬುಡ್ಡಿ ತನ್ನ ಮಗುವಿನ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದರಿಂದ ನೊಂದ ಮಾರೆಪ್ಪನ ರೋಗ ಉಲ್ಬಣವಾಗಿ ಆತನೂ ಸಾಯುತ್ತಾನೆ. ಜೊತೆಗೆ ಊರಿನ ಗೌಡ ಕುಶಾಲಪ್ಪ ಸಹ ಹಂದಿ ಗೊಬ್ಬರದ ವಿಚಾರವಾಗಿ ಕೊರವರ ಮೇಲೆ ದೌರ್ಜನ್ಯವೆಸಗುತ್ತಾನೆ. ಕುಶಾಲಪ್ಪನ ವಿರೋಧಿ ಹಾಗೂ ಸೋದರ ಸಂಬಂಧಿ ಸಂಶಾಲಪ್ಪನಿಗೆ ಕೊರವರ ವಾಸಿಸುವ ಜಾಗದ ಮೇಲೆ ಕಣ್ಣು ಬೀಳುತ್ತದೆ. ಹಂದಿಜ್ವರ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಹಂದಿಗಳನ್ನು ಸಾಯಿಸಿ ಕೊರವರನ್ನು ಅವರ ಕುಲಕಸುಬಿನಿಂದ ದೂರಮಾಡುತ್ತಾನೆ. ದೈವದ ಹೇಳಿಕೆಯ ತಂತ್ರ ಬಳಸಿದ್ದರಿಂದ ಹಲವಾರು ಕೊರವರು ಕೇರಿ ಬಿಟ್ಟು ಹೋಗುತ್ತಾರೆ. ಅತ್ತ ಕೊರವರಂತವರ ಓಟಿನಿಂದ ಚುನಾವಣೆಯಲ್ಲಿ ಗೆದ್ದು ಬಂದ ಸಂಶಾಲಪ್ಪ ಶಾಸಕನಾಗಿ ಆಯ್ಕೆಯಾದರೆ ಇತ್ತ ಕೊರವರು ಕುಲಕಸುಬು ಕಳೆದುಕೊಂಡು ಕುಲದ ನೆಲೆಯನ್ನೂ ಬಿಟ್ಟುಕೊಡುವ ಅನಿವಾರ್ಯತೆಗೊಳಗಾಗಿ ಅತಂತ್ರರಾಗುತ್ತಾರೆ. ಕೊನೆಗೆ ಗೆದ್ದ ಶಾಸಕನ ಮೆರವಣೆಗೆಯಲ್ಲಿ ಪೆಟ್ರೋಮ್ಯಾಕ್ಸ್ ಹೊರುವ ಕೊರವರು ನಾವು ಉಳ್ಳವರಿಗೆ ಬೆಳಕು ಕೊಡ್ತಾನೇ ಇರಬೇಕು, ನಾವು ಮಾತ್ರ ಕತ್ತಲಲ್ಲೇ ಹೆಜ್ಜೀ ಹಾಕಬೇಕು.... ಎನ್ನುವ ಮಾತಿನೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಆದರೆ ನೋಡುಗರ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಹಾಗೂ ಗೊಂದಲಗಳನ್ನು ಹುಟ್ಟಿಸುತ್ತದೆ.

ಇಡೀ ನಾಟಕ ಯಾವುದೇ ಒಂದು ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ನೆಟ್ಟಗೆ ತಾರ್ಕಿಕ ನೆಲೆಯಲ್ಲಿ ಚರ್ಚಿಸದೇ, ಯಾವುದಕ್ಕೂ ಸೂಕ್ತ ಪರಿಹಾರವನ್ನೂ ಸೂಚಿಸದೇ ಕೇವಲ ಕೆಲವಾರು ಘಟನೆಗಳನ್ನು ಮೇಲ್ಮೇಲೆ ಪ್ರಸ್ತಾಪಿಸುತ್ತಾ ಸಾಗುತ್ತದೆ. ಇದರಿಂದಾಗಿ ನಾಟಕದ ನಿಜವಾದ ಆಶಯವೇ ಡೈಲ್ಯೂಟ್ ಆಗಿದೆ. ಜೊತೆಗೆ ಹಲವಾರು ವಿಷಯಗಳನ್ನು ಒಂದೇ ನಾಟಕದ ಒಂದೂವರೆ ಗಂಟೆ ಸಮಯದಲ್ಲಿ ಹೇಳಲು ಪ್ರಯತ್ನಿಸಿದ್ದರಿಂದ ಯಾವ ಸಮಸ್ಯೆಗೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಇಡೀ ಕಾದಂಬರಿಯ ಅಂಶಗಳು ನಾಟಕದಲ್ಲಿರಬೇಕು ಎನ್ನುವ ದಾವಂತವನ್ನು ಸಿದ್ದರಾಮರವರು ತೋರಿಸಿದ್ದರಿಂದ ನಾಟಕಕ್ಕೆ ಒಂದು ಬಂಧ ಹಾಗೂ ಒಟ್ಟಂದ ಸಿಗದೇ ಹೋಗಿದೆ. ನಾಟಕದ ನಿರ್ಮಿತಿಗೆ ಕೊಟ್ಟಷ್ಟೇ ಮಹತ್ವವನ್ನು ರಂಗಪಠ್ಯ ತಯಾರಿಕೆಗೂ ಕೊಟ್ಟಿದ್ದರೆ ಇನ್ನೂ ಗಟ್ಟಿಯಾದ ನಾಟಕ ಮೂಡಿಬರಬಹುದಾಗಿತ್ತು. ದೃಶ್ಯಗಳು ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಗೆ ಜಂಪ್ ಆಗುತ್ತಾ ಸಾಗುತ್ತವೆ. ಕೊರವರ ದೊಡ್ಡಿಯ ಹಾದರ ಪುರಾಣ ಮಹಿಳೆಯ ಆತ್ಮಹತ್ಯೆಯಿಂದ ಮುಗೀತು ಎನ್ನುವಾಗ ಗೌಡನ ದಬ್ಬಾಳಿಕೆ ಶುರುವಾಗುತ್ತದೆ. ಅದನ್ನು ಅಲ್ಲಿಗೆ ಬಿಟ್ಟು ನಂತರ ಕೊರವರ ಜಾಗ ಹೊಡೆಯಲು ಪುಡಾರಿಯ ಪಟಾಲಂನ ಕುತಂತ್ರಗಳು ಪ್ರಾರಂಭವಾಗುತ್ತವೆ. ಅತಿವೃಷ್ಟಿಯಿಂದಾಗಿ ಕೊರವರು ನಿರಾಶ್ರಿತರಾಗಿ ದೇವಾಲಯ ಸೇರಿಕೊಳ್ಳುತ್ತಾರೆ. ಶಿವಾಲಯದೊಳಗೆ ಜಂಗಮ ಹಾಗೂ ಪುರೋಹಿತರ ಜಟಾಪಟಿ ಬೇರೆ ಶುರುವಾಗುತ್ತದೆ.... ಯಾರದೋ ಮೈಯಲ್ಲಿ ದೇವರು ಬಂದು ಕೊರವರನ್ನು ಊರು ಬಿಡಲು ಹೇಳುತ್ತದೆ.... ಹೀಗೆ ಯಾವುಯಾವುದೋ ಘಟನೆಗಳು ಸಂಬಂಧ ಇರಲಿ ಬಿಡಲಿ ಬಿಚ್ಚಿಕೊಳ್ಳುತ್ತವೆ. ಮಹಿಳಾ ಶೋಷಣೆ, ಪುರುಷ ದೌರ್ಜನ್ಯ, ವರ್ಗಸಂಘರ್ಷ, ರಾಜಕೀಯ ಕುತಂತ್ರಗಳು, ಪುರೋಹಿತಶಾಹಿಯ ಧರ್ಮಾಂಧತೆ, ಕೆಳವರ್ಗದೊಳಗಿನ ಜಾತಿ ತಾರತಮ್ಯ... ಹೀಗೆ ಹಲವಾರು ವಿಷಯಗಳನ್ನು ವರಹ ಪುರಾಣದಲ್ಲಿ ಬಿಂಬಿಸಲಾಗಿದೆ. ಮೇಲ್ವರ್ಗ ಅದು ಹೇಗೆ ಕೊರವರ ಸಂಸ್ಕೃತಿಯನ್ನು ಹಾಳುಗೆಡುವುತ್ತದೆಅವರ ಕುಲಕಸುಬನ್ನು ಕಿತ್ತುಕೊಂಡು ಬದುಕನ್ನು ಅತಂತ್ರಗೊಳಿಸಿ ಕೊನೆಗೆ ಅವರ ನೆಲೆಯನ್ನೂ ಸಹ ಕಬಳಿಸಿ ನಿರ್ವಸಿತರನ್ನಾಗಿ ಮಾಡಿ ಸ್ವಾವಲಂಬಿಗಳಾಗಿದ್ದವರನ್ನು ಪರಾವಲಂಬಿಗಳನ್ನಾಗಿ ಮಾಡಿ ಗುಲಾಮರನ್ನಾಗಿ ದುಡಿಸಿಕೊಳ್ಳುತ್ತದೆ... ಎನ್ನುವುದನ್ನು ಪರೋಕ್ಷವಾಗಿ ನಾಟಕ ಹೇಳುತ್ತದೆ.


  ವರಾಹ ಪುರಾಣ ಹೆಸರಿನಷ್ಟೇ ಹಳೆಯ ವಸ್ತುವಿಷಯವನ್ನು ಚರ್ಚಿಸುತ್ತದೆ. ಕಥೆಯಲ್ಲಿ ಏನೇನೂ ಹೊಸತನವಿಲ್ಲ. ಅದೇ ಹಳೆ ಕಥೆ. ಒಂದೂರು, ಒಂದಿಷ್ಟು ದಲಿತರು, ದಬ್ಬಾಳಿಕೆ ಮಾಡಲು ಗೌಡ ಇಲ್ಲವೇ ರಾಜಕಾರಣಿ.. ಕೊನೆಗೆ ಶೋಷಕರ ಅಟ್ಟಹಾಸಕ್ಕೆ ಬಲಿಯಾಗುವ ಶೋಷಿತರು. ಇಂತಹ ಕಥಾಕಥಿತ ಕಥೆಗಳು ಅದೆಷ್ಟೋ ಸಿನೆಮಾಗಳಲ್ಲಿ ತೋರಿಸಲಾಗಿದೆ. ದಲಿತರ ಮೇಲೆ ಬಲಿತರು ಮಾಡುವ ದೌರ್ಜನ್ಯದ ಹಲವಾರು ಆಯಾಮಗಳು ದೃಶ್ಯಮಾಧ್ಯಮಗಳಲ್ಲಿ ಚಿತ್ರಿತವಾಗಿವೆ. ಪುರುಷರಿಂದ ಮಹಿಳಾ ಶೋಷಣೆಯ ವೈವಿದ್ಯತೆಗಳ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ದಶಮಾನಗಳಿಂದ ಚರ್ಚಿಸಲಾಗಿದೆ. ಹೊಸತೇನಾದರೂ ಇದ್ದರೆ ಅದು ಕೊರವರ ಕುಲದಲ್ಲಿ ಮಹಿಳೆಯರನ್ನು ಮಾರಾಟ ಮಾಡುತ್ತಾರೆ ಎನ್ನುವುದಾಗಿದೆ. ಆದರೆ ಇದೂ ಸಹ ಸಕಾಲಿಕವಾಗಿಲ್ಲ. ಈಗ ಇರುವ ಕಾನೂನುಗಳಲ್ಲಿ ಮಹಿಳೆಯ ಮಾರಾಟಕ್ಕೆ ಆಸ್ಪದವಿಲ್ಲ. ಕಾಲ ಬದಲಾಗಿದೆ. ಕೊರಗರೇನು ಅನೇಕ ದಮನಿತರ ಸ್ಥಿತಿ ಗತಿ ನಾಟಕದಲ್ಲಿ ತೋರಿಸಿದಷ್ಟು ದಮನೀಯವಾಗೇನೂ ಇಲ್ಲಾ. ಮಹಿಳಾ ಶೋಷಣೆ ಇಲ್ಲ ಎನ್ನಲಾಗುವುದಿಲ್ಲ ಆದರೆ ನಾಟಕದಲ್ಲಿ ತೋರಿಸಿದಂತೆ ಮಹಿಳೆಯನ್ನು ಬಹಿರಂಗವಾಗಿ ಮಾರಾಟಮಾಡುವ ಪರಿಸ್ಥಿತಿ ಈಗಿಲ್ಲ. ಹಾಗೂ ಮೇಲ್ವರ್ಗದ ಶ್ರೀಮಂತ ಮುದುಕರು ಕೆಳಜಾತಿಯ ಕೊರಗರ ಹೆಣ್ಣನ್ನು  ಕೊಂಡುಕೊಂಡು ಇಟ್ಟುಕೊಳ್ಳಬಹುದೇನೋ ಆದರೆ ಮದುವೆಯಾಗುತ್ತಾರೆನ್ನುವುದು ಅಸಂಬದ್ದ.
 
ಹೀಗಾಗಿ ಶೋಷಣೆಯ ಹಲವು ಮುಖಗಳನ್ನು ಬಿಚ್ಚಿ ತೋರಿಸಲು ಪ್ರಯತ್ನಿಸುವ ವರಾಹ ಪುರಾಣ ಸವಕಲು ಸಬ್ಜೆಕ್ಟಿನ ಅಪ್ರಸ್ತುತ ನಾಟಕವೆನಿಸುತ್ತದೆ. ಹಳೆಯ ವಸ್ತುವನ್ನಿಟ್ಟುಕೊಂಡು ನಾಟಕ ಮಾಡಬಾರದಂದೇನೂ ಇಲ್ಲಾ, ಆದರೆ ಅದರಲ್ಲಿ ಸಮಕಾಲೀನತೆಯನ್ನು ತಂದರೆ ನಾಟಕ ನೋಡುಗರಿಗೆ ಪ್ರಸ್ತುತವೆನಿಸುತ್ತದೆ. ದಮನಿತ ಜನರ ಅಸಾಹಯಕತೆ ಹಾಗೂ ಮೇಲ್ವರ್ಗದವರ ಕ್ರೌರ್ಯವನ್ನು ಯಥಾವತ್ತಾಗಿ ಹಸಿಹಸಿಯಾಗಿ ತೋರಿಸುವ ನಾಟಕದಲ್ಲಿ ಎಲ್ಲೂ ಯಾವ ಹಂತದಲ್ಲೂ ದೌರ್ಜನ್ಯದ ವಿರುದ್ದ ಪ್ರತಿಭಟನೆಯ ಯಾವ ಅಂಶವೂ ಇಲ್ಲದಿರುವುದು ನಾಟಕದ ಕೊರತೆಯಾಗಿದೆ. ಹಾಗಾದರೆ ಸಮಾಜಕ್ಕೆ ನಾಟಕ ಏನನ್ನು ಹೇಳುತ್ತದೆ? ಪಾಳೆಗಾರಿಕೆ ಹಾಗೂ ಪುರೋಹಿತಶಾಹಿ ಸಂಸ್ಕೃತಿ ಇರೋದೆ ಶೋಷಣೆ ಮಾಡಲು, ದೀನ ದಲಿತರಿರೋದೆ ದಮನಕ್ಕೊಳಗಾಗಲು, ಮಹಿಳೆಯರಿರೋದೇ ಗಂಡಸರ ಅಡಿಯಾಳಾಗಿ ಭೋಗದ ಸರಕಾಗಿ ಬಾಳಲು... ಎನ್ನುವ ಮನುವಾದಿ ಸಿದ್ದಾಂತದ ಪ್ರತಿಪಾದನೆಯ ಪ್ರತೀಕವನ್ನೇ ನಾಟಕ ರೂಪದಲ್ಲಿ ಹೇಳಿದಂತಿದೆ. ಸಮಜದಲ್ಲಿ ತೀವ್ರವಾಗಿ ಶೋಷಣೆಗೊಳಗಾದ ಮಹಿಳೆ ಹಾಗೂ ದುಡಿಯುವ ವರ್ಗಗಳಲ್ಲಿ ಸ್ವಾಭಿಮಾನ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯದ ಕುರಿತು ಜಾಗ್ರತಿಯನ್ನು ಮೂಡಿಸುವ ಸಣ್ಣ ಕೆಲಸವನ್ನು ನಾಟಕ ಮಾಡಿದ್ದರೂ ಸಾರ್ಥಕವೆನಿಸುತ್ತಿತ್ತು. ಆದರೆ ಹಾಗಾಗಲಿಲ್ಲವೆನ್ನುವುದೇ ನಾಟಕದ ಕೊರತೆಯಾಗಿದೆ. ವರಾಹ ಪುರಾಣ ಪ್ರತಿಭಟನೆಯ ಅಸ್ತ್ರವಾಗುವ ಬದಲಾಗಿ ದಬ್ಬಾಳಿಕೆಯ ಯಥಾಸ್ಥಿತಿ ಪುರಾಣವಾಗಿ ಮೂಡಿಬಂದಿದೆ.


  ನಾಟಕಕ್ಕೆ ಮೇಲ್ವರ್ಗದ ಇಬ್ಬಿಬ್ಬರು ವಿಲನ್ಗಳ ಅಗತ್ಯವಿರಲಿಲ್ಲ. ರಾಜಕೀಯ ಪುಡಾರಿಯ ದೌರ್ಜನ್ಯವೊಂದನ್ನೇ ತೋರಿಸಿದ್ದರೆ ಗೌಡ ಅಪ್ರಸ್ತುತನಾಗುತ್ತಿದ್ದ. ಇಲ್ಲವೇ ಗೌಡನನ್ನೇ ರಾಜಕೀಯ ಪುಡಾರಿಯಾಗಿಸಿದ್ದರೂ ಆಗುತ್ತಿತ್ತು. ಆದರೆ ಮೊದಲು ಗೌಡನನ್ನು ತೋರಿಸಿ ಆಮೇಲೆ ಅವನನ್ನು ಅಪ್ರಸ್ತುತಗೊಳಿಸಿ ಮತ್ತೊಬ್ಬ ಪುಡಾರಿಯನ್ನು ಸೃಷ್ಟಿಸುವ ಅಗತ್ಯ ಅನಗತ್ಯವೆನಿಸುತ್ತದೆ. ಹೋಗಲಿ ವರ್ಗ ಸಂಘರ್ಷವೇ ನಾಟಕದ ಉದ್ದೇಶವಾಗಿದ್ದರೆ ಕೊರವರ ಹಾದರದ ಪುರಾಣವನ್ನು ಇಷ್ಟೊಂದು ವಿವರಿಸುವ ಅಗತ್ಯವಿರಲಿಲ್ಲ. ಕೊರವರ ಜನಾಂಗದ ಮಹಿಳಾ ವಿರೋಧಿತನವನ್ನೇ ನಾಟಕ ಆಶಯವಾಗಿಸಿಕೊಂಡಿದ್ದರೆ ಗೌಡ ಪುಡಾರಿ ಪುರೋಹಿತರ ದೃಶ್ಯಗಳ ವಿವರಗಳು ಇಷ್ಟೊಂದು ಬೇಕಾಗಿರಲಿಲ್ಲ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ ಅಲೆಮಾರಿ ಸಂಸ್ಕೃತಿಯ ಬುಡ್ಗನಾದ ನಾಟಕದಲ್ಲಿ  ಜನಾಂಗದ ಆಂತರಿಕ ಸಂಸ್ಕೃತಿ, ಆಚರಣೆ, ಮೌಢ್ಯ, ಮಹಿಳಾ ದೌರ್ಜನ್ಯಗಳನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಆದರೆ ವರಾಹ ಪುರಾಣದಲ್ಲಿ ಜನಾಂಗವೊಂದರ ಆಂತರಿಕ ಸಂಘರ್ಷ ಹಾಗೂ ಹೊರಗಿನ ಶೋಷಕ ಶಕ್ತಿಗಳ ಅಟ್ಟಹಾಸ ಎರಡನ್ನು ಬಿಂಬಿಸಲು ಪ್ರಯತ್ನಿಸಲಾಗಿದ್ದು ಎರಡಕ್ಕೂ ನ್ಯಾಯವೊದಗಿಸುವಲ್ಲಿ  ಇಡೀ ನಾಟಕ ವಿಫಲವಾಗಿದೆ. ದೃಶ್ಯಗಳ ಜೋಡನೆಯಲ್ಲೂ ಇನ್ನೂ ಹೆಚ್ಚಿನ ಕಾಳಜಿಯನ್ನು ನಿರ್ದೇಶಕರು ವಹಿಸಲೇಬೇಕಿದೆ. ನಾಟಕದ ನಿರೂಪಣಾ ಕ್ರಮದಲ್ಲಿ  ಸ್ಪಷ್ಟತೆಯನ್ನು ತರುವುದುತ್ತಮ.
  
ಪುರುಷಹಂಕಾರದಿಂದಾಗುವ ಮಹಿಳಾ ಶೋಷಣೆ ಹಾಗೂ ಮಹಿಳೆಯ ಮೇಲೆ ಪುರುಷರು ಹೊಂದಿರಬಹುದಾದ ಹಕ್ಕುದಾರಿಕೆಯ ಪ್ರತಿಪಾದನೆ ಮತ್ತು ಮಹಿಳಾ ದೌರ್ಜನ್ಯಕ್ಕೆ ಕುಲಾಚಾರದ ಸಮರ್ಥನೆಗಳು ನಾಟಕದಲ್ಲಿವೆ. ಮಹಿಳೆ ಎನ್ನುವವಳು ಎಲ್ಲಾ ಕಾಲಘಟ್ಟದಲ್ಲೂ ಎಲ್ಲಾ ವರ್ಗಗಳಲ್ಲೂ ಹಿಂಸೆಗೊಳಗಾದವಳೇ ಎನ್ನುವುದಕ್ಕೆ ನಾಟಕ ಸಾಕ್ಷಿಯಾಗಿದೆ. ಹಂದಿ ಸಾಕುವ ಮಂದಿ ಕೂಡಾ ಹೆಣ್ಣನ್ನು ಹಂದಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುವಂತಹ ಪಾತಕ ನಾಟಕದಲ್ಲಿ ಅತಿಯಾಗಿಯೇ ಚಿತ್ರಿತವಾಗಿದೆ. ಮಹಿಳೆಯರಿಗೆ ಬುಡ್ಡಿ ಪಾತ್ರದ ಮೂಲಕ ನಾಟಕ ಕೊಡುವ ಸಂದೇಶವೇನೆಂದರೆ ಪರುಷರ ದೌರ್ಜನ್ಯಕ್ಕೊಳಗಾಗಿ ಬಾಳುವುದು ಇಲ್ಲವೇ ಸಾಯುವುದು. ಇದು ನಿಜಕ್ಕೂ ಮಹಿಳಾ ಪ್ರೇಕ್ಷಕರಲ್ಲಿ ವ್ಯತಿರಿಕ್ತ ಭಾವನೆ ಮೂಡಿಸುವಂತಿದೆ. ವರಾಹ ಪುರಾಣ ಮಹಿಳಾ ವಿರೋಧಿ ನಾಟಕವಾ? ಹೀಗೊಂದು ಸಂದೇಹ ಬರಲು ಕಾರಣ ನಾಟಕದಲ್ಲಿ ಮಹಿಳೆಯನ್ನು ಶೋಷಿಸುವ ಪರಿ ಹಾಗೂ ಮಹಿಳಾ ನಿಂದನೆಯ ಮಾತುಗಳು. ಜಂಬ್ಯಾ ಎನ್ನುವವ ತನ್ನ ಹೆಂಡತಿ ಬುಡ್ಡಿಗೆ ರಂಗದಂಗಳದಲ್ಲಿ ಕೊಡುವ ಒದೆತ ಹೊಡೆತ ಬೈಗುಳುಗಳಿಗೆ ನೋಡುಗರೇ ಬೆಚ್ಚಿಬೀಳುವಂತಿದೆ. ಬಡ ಕೊರವ ಜನಾಂಗದ ಕುರಿತ ನಾಟಕ ಬೈಗುಳಗಳ ಬಳಕೆಯಲ್ಲಿ ಮಾತ್ರ ಶ್ರೀಮಂತವಾಗಿದೆ. ಮಾತೆತ್ತಿದರೆ ಮಹಿಳಾ ನಿಂದನೆಯ ಬೈಗುಳಗಳು ಪುಂಕಾನುಪುಂಕವಾಗಿ ಬಂದಿವೆ. ಇದೆನಾದರೂ ಸಿನೆಮಾ ಏನಾದರೂ ಆಗಿದ್ದರೆ  ಬೈಗುಳುಗಳಿದ್ದ ಜಾಗದಲ್ಲಿ ಬರೀ ಟೋಂಯ್ ಎನ್ನುವ ಸದ್ದುಗಳೇ ಇರುತ್ತಿದ್ದವೇನೋ?. ಬೇಕಾಗಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ಜನ ಬೈಗುಳುಗಳಿಲ್ಲದೇ ಮಾತಾಡುವುದೇ ಇಲ್ಲ ಎನ್ನುವುದು ದಿಟವಾದರೂ ನಾಟಕದಲ್ಲಿ ಸಂಯಮವನ್ನು ನಿರ್ದೇಶಕರು ತೋರಿಸಬೇಕು. ನಾಟಕದವರಿಗೆ ಸಾಮಾಜಿಕ ಜವಾಬ್ದಾರಿಯೂ ಇರುವುದರಿಂದ ಪ್ರೇಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಮಾತೃನಿಂದನೆಯ ಹೊಲಸು ಬೈಗುಳಗಳನ್ನು ಅತಿಯಾಗಿ ಬಳಸದೇ ಮಿತಿಗೊಳಿಸಬೇಕು. ಬೈಗುಳಗಳನ್ನು ಬಳಸಿಯೇ ಕೆಲವು ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸುತ್ತೇನೆನ್ನುವುದು ಸಮಂಜಸವಲ್ಲ.

ವಿಶ್ವ ಮಹಿಳಾ ದಿನಾಚರಣೆಯ ದಿನ ಮಹಿಳೆಯರ ಮೇಲೆ ನಡೆಯುವ ಹಿಂಸೆಯನ್ನು ವೈಭವೀಕರಿಸುವ ನಾಟಕವನ್ನು ಪ್ರದರ್ಶಿಸಿ ನಾಟಕದಾದ್ಯಂತ ಪುರುಷ ದೌರ್ಜನ್ಯವನ್ನು ವಿಜ್ರಂಭಿಸಿರುವುದು ವಿಪರ್ಯಾಸವಾಗಿದೆ. ಮಹಿಳೆಯರ ಹಕ್ಕು ಬಾಧ್ಯತೆ ಹಾಗೂ ಪ್ರತಿಭಟನೆಗೆ  ಪೂರಕವಾಗಿ ಸ್ಪಂದಿಸಬಹುದಾದ ದಿನದಂದು ಅವರ ವಿರುದ್ಧ ನಡೆದ ದೌರ್ಜನ್ಯವನ್ನು ಯಥಾವತ್ತಾಗಿ ಹಾಗೂ ಅತಿರಂಜಿತವಾಗಿ ತೋರಿಸುವಂತಹ ನಾಟಕವನ್ನು ಪ್ರದರ್ಶಿಸಿದ್ದು ವಿಶ್ವ ಮಹಿಳಾ ದಿನಾಚರಣೆಯ ಆಶಯಕ್ಕೆ ವ್ಯತಿರಿಕ್ತವಾಗಿದೆ. ಮಹಿಳಾ ನಿಂದನೆಯ ಎಲ್ಲಾ ನಮೂನಿಯ ಬೈಗಳುಗಳನ್ನು ನಾಟಕದಾದ್ಯಂತ ಪುಂಕಾನುಪುಂಕವಾಗಿ ಬಳಸಿದ್ದು ಅಸಹನೀಯವೆನಿಸುವಂತಿದೆ. ಹಾಗೂ ನಾಟಕದಲ್ಲಿ ಒಂದು ಜನಾಂಗದ ಮಹಿಳೆಯರ ಮೇಲೆ ಕುಲಾಚಾರದ ಹೆಸರಲ್ಲಿ ಇಷ್ಟೆಲ್ಲಾ ಅಸಹನೀಯ ದಬ್ಬಾಳಿಕೆ ನಡೆದರೂ ಅನ್ಯಾಯದ ವಿರುದ್ದ ಪ್ರತಿಭಟನೆಯ ಬದಲಾಗಿ ಆತ್ಮಹತ್ಯೆಯ ಪರಿಹಾರವನ್ನು ಪರೋಕ್ಷವಾಗಿ ಸೂಚಿಸಿದ್ದು ಅನಾಹುತಕಾರಿಯಾಗಿದೆ. ಯಾರು ಏನೇ ಹೇಳಲಿ ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಪ್ರದರ್ಶಿಸಲು ನಾಟಕ ಸೂಕ್ತವಾದದ್ದಂತೂ ಅಲ್ಲ. ನಾಟಕದಲ್ಲಿ ಎಲ್ಲೂ ಮಹಿಳೆಯರ ಘನತೆ ಗೌರವ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಅಂಶಗಳಂತೂ ಇಲ್ಲವೇ ಇಲ್ಲ.

ಎಲ್ಲಾ ತಾರ್ಕಿಕ ತಾತ್ವಿಕ ಅಂಶಗಳನ್ನು ಪಕ್ಕಕ್ಕಿಟ್ಟು ನಾಟಕ ಪ್ರಯೋಗವನ್ನು ಮಾತ್ರ ಗಮನಿಸಿದರೆ 70 ದಶಕದ ಕಾದಂಬರಿಯನ್ನು ರಂಗಪಠ್ಯವಾಗಿ ಕಟ್ಟಿಕೊಡುವಲ್ಲಿ ಹಾಗೂ ಸಮಕಾಲೀನಗೊಳಿಸುವಲ್ಲಿ ವಿಫಲರಾದ ಸಿದ್ಧರಾಮ ಕೊಪ್ಪರ್ ನಿರ್ದೇಶನದಲ್ಲಿ ಭಾಗಷಃ ಯಶಸ್ವಿಯಾಗಿದ್ದಾರೆ. ರಂಗನಟನಾಗಿ ತೊಡಗಿಸಿಕೊಂಡು ಹಲವಾರು ನಾಟಕಗಳಲ್ಲಿ ತಮ್ಮದೇ ರೀತಿಯ ಅಭಿನಯದ ಛಾಪನ್ನು ಮೂಡಿಸಿದ್ದ ಸಿದ್ಧರಾಮರವರು ಈಗ ವರಾಹ ಪುರಾಣ ಮೂಲಕ ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ಮುಂಬಯಿಯ ಕರ್ನಾಟಕ ಸಂಘ ನಾಟಕ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನೂ ವರಾಹ ಪುರಾಣ ಗೆದ್ದುಕೊಂಡಿದೆಆದರೆ.... ಚಿತ್ರಕಲೆಯಲ್ಲಿ ಮಾಸ್ಟರ್ ಆರ್ಟ್ಸ ಪದವಿಯನ್ನೂ ಪಡೆದಿರುವ ಹಾಗೂ ಹಲವಾರು ನಾಟಕಗಳಿಗೆ ನೇಪತ್ಯದಲ್ಲಿ ಕೆಲಸ ಮಾಡಿ ಅನುಭವವಿರುವ ಸಿದ್ಧರಾಮರವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು. ಆದರೆ ನಾಟಕದಾದ್ಯಂತ ರಂಗತಂತ್ರಗಳ ಬಳಕೆಗಿಂತ ನಟರ ಅಭಿನಯ ಹಾಗೂ ಸಂಭಾಷಣೆಗಳತ್ತ ಅತೀ ಹೆಚ್ಚು ಗಮನ ಕೊಟ್ಟಿದ್ದರಿಂದ ಸಿದ್ದರಾಮರವರ ಸಂಪೂರ್ಣ ತಾಂತ್ರಿಕ ಸಾಮರ್ಥ್ಯ ನಾಟಕದಲ್ಲಿ ಬಳಕೆಯಾಗಿಲ್ಲ. ನಾಟಕದಾದ್ಯಂತ ಬೈಗುಳಗಳನ್ನು ಹೊರತು ಪಡಿಸಿದರೆ ಸಂಭಾಷಣೆಗಳು ಸಶಕ್ತವಾಗಿ ಮೂಡಿಬಂದಿವೆ. ಹೈದರಾಬಾದ ಕರ್ನಾಟಕದ ಭಾಷೆಯ ಸೊಗಡು ನಾಟಕದಲ್ಲಿ ವಿಶೇಷ ಪೋರ್ಸನ್ನು ತಂದಿದೆ. ಆದರೆ ಬೆಂಗಳೂರು ಭಾಗದ ನಟರಿಗೆ ಭಾಷೆಯ ಸೂಕ್ಷ್ಮತೆಗಳ ಅರಿವು ಮಾಡಿಕೊಡಬೇಕಿತ್ತು. ಅವನೌನ ಅನ್ನೋದಕ್ಕೂ ಅವನಮ್ಮನ್ ಅನ್ನೋದಕ್ಕೂ ನಡುವೆ ಇರುವ ಪ್ರಾಂತೀಯ ಭಾಷಾ ವಿನ್ಯಾಸದ ಭಿನ್ನತೆಯನ್ನು ನಿರ್ದೇಶಕರು ನಟರಿಗೆ ತಿಳಿಸಿಕೊಡಬೇಕಿತ್ತು. ಯಾಕೆಂದರೆ ಸಿದ್ದರಾಮರವರೂ ಸಹ ಹೈದರಾಬಾದ ಕರ್ನಾಟಕದವರಾಗಿದ್ದು ಭಾಷಾ ಶೈಲಿಯಲ್ಲಿ ಪಳಗಿದವರಾಗಿದ್ದಾರೆ.

ಸ್ಥಿರವಾದ ಸೆಟ್ಗಳನ್ನು ಹಾಕಲಾಗಿದ್ದು ಅದು ಎಲ್ಲಾ ದೃಶ್ಯಗಳಿಗೂ ಸೂಕ್ತವೆನಿಸುತ್ತಿಲ್ಲ. ಎಡ ಬಲಕ್ಕೆ ಕೊರವರ ಗುಡಿಸಲು ನಡುವೆ ಗುಡಿಯನ್ನು ಮಾಡಲಾಗಿದೆಯಾದರೂ ಕೊರವರ ಗುಡಿಸಲಿನ ಮುಂದೆ ಖುರ್ಚಿ ಹಾಕಿಕೊಂಡು ಊರಗೌಡ ದರ್ಬಾರ್ ಮಾಡುವುದು ಆಭಾಸಕಾರಿಯಾಗಿದೆ. ಕಲಾಕ್ಷೇತ್ರದಂತಹ ದೊಡ್ಡ ರಂಗಮಂದಿರಗಳಿಗೆ ರೀತಿಯ ಸ್ಥಿರವಾದ ಸೆಟ್ಗಳು ಗಿಟ್ಟಬಹುದೇನೋ, ಆದರೆ ಚಿಕ್ಕ ರಂಗಮಂದಿರದಲ್ಲಿ ನಾಟಕವಾದಾಗ ಗುಂಪು ಕಲಾವಿದರ ಚಲನೆಗೆ ಅನಾನುಕೂಲವುಂಟಾಗುತ್ತದೆ. ಸ್ಥಿರ ಸೆಟ್ಗಳ ಬದಲಾಗಿ ಸಾಂಕೇತಿಕ ಸೆಟ್ ಹಾಕಿದ್ದರೆ ಎಲ್ಲಾ ನಮೂನಿ ರಂಗಮಂದಿರಗಳಲ್ಲೂ ನಾಟಕವನ್ನು ಸುಲಭವಾಗಿ ಹಾಗೂ ಎಲ್ಲಾ ದೃಶ್ಯಗಳಿಗೂ ಸೂಕ್ತವಾಗುವಂತೆ  ಮಾಡಬಹುದಾದ ಸಾಧ್ಯತೆ ಇತ್ತು. ಕೇರಿಯ ಗುಡಿ ನಂತರ ಶಿವಾಲಯವಾದಾಗಲೂ ಅಕ್ಕಪಕ್ಕ ಅದೇ ಕೊರವರ ಗುಡಿಸಲುಗಳಿರುವುದರಿಂದ ದೃಶ್ಯ ಸೃಷ್ಟಿಯಲ್ಲಿ ಗೊಂದಲ ಉಂಟಾಗಿದ್ದಂತೂ ಸುಳ್ಳಲ್ಲ.

ನಾಟಕದಲ್ಲಿ ಗಮನ ಸೆಳೆಯುವುದು ಪಾತ್ರಗಳ ಅಭಿನಯ. ಕೊಪ್ಪರ್ರವರು ಸ್ವತಃ ನಟರೂ ಆಗಿದ್ದರಿಂದ ಅಭಿನಯ ವಿಭಾಗದಲ್ಲಿ ಹೆಚ್ಚು ಪರಿಶ್ರಮ ವಹಿಸಿದ್ದಾರೆ. ಕೊರವರ ಹಿರಿಯ ಕುರುಮಯ್ಯ ಪಾತ್ರದಲ್ಲಿ ಸೂರ್ಯಕಾಂತ ಗುಣಕಿಮಠರವರದು ಪಾತ್ರೋಚಿತವಾದ ಸಂಯಮದ ನಟನೆ. ಬುಡ್ಡಮ್ಮ ಪಾತ್ರದ ಮಹಾಲಕ್ಷ್ಮೀರವರ ನಟನೆ ನೋಡುಗರಲ್ಲಿ ಕರುಣೆ ಹುಟ್ಟಿಸುವಂತಿದೆ. ತಮ್ಮ ಪತಿ ತೀರಿಕೊಂಡು ಇನ್ನೂ ಆರೇ ದಿನವಾಗಿದ್ದರೂ ರಂಗನಿಷ್ಠೆಯನ್ನಿಟ್ಟುಕೊಂಡು ಬಂದು ಜಮಲಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಸುಧಾ ಪೂಜಾರಿಯವರ ರಂಗಬದ್ದತೆಗೆ ಅಭಿನಂದನೆ ಸಲ್ಲಿಸಲೇಬೇಕಿದೆ. ಹನುಮಕ್ಕಜ್ಜಿಯ ಪಾತ್ರದಲ್ಲಿ ಸಿತಾರಾರವರದ್ದಂತೂ ವಯಸ್ಸಿಗೆ ಮೀರಿದ ಮಾಗಿದ ಅಭಿನಯ. ಜಂಬಯ್ಯನಾಗಿ ಮಹೇಶ್ ಹಾಗೂ ಮಾರೆಪ್ಪನಾಗಿ ಯಶವಂತ್ ಇಬ್ಬರೂ ಯುವಕರ ದೈಹಿಕ ನಟನೆ ಸೊಗಸಾಗಿತ್ತು. ನಾಟಕದಾದ್ಯಂತ ನಟನಾ ಕೌಶಲ್ಯದಿಂದ ವಿಜ್ರಂಭಿಸಿದ್ದು ಕುಶಾಲಪ್ಪ ಪಾತ್ರದ ತೇಜಸ್ ಹಾಗೂ ಸಂಶಾಲಪ್ಪ ಪಾತ್ರದ ಅಜಯ್ಕುಮಾರ್. ಎರಡೂ ವಿಲನ್ ಪಾತ್ರಗಳಿಗೆ ವಯಸ್ಸು ಹಾಗೂ ದೈಹಿಕತೆ ಸೂಕ್ತವೆನಿಸದಿದ್ದರೂ ಅಭಿನಯ ಹಾಗೂ ಡೈಲಾಗ್ ಡೆಲಿವರಿಯಲ್ಲಿ ಕೊರತೆಯನ್ನು ನೀಗಿದ್ದು ಇಬ್ಬರು ನಟರ ಅಭಿನಯ ತಾಕತ್ತನ್ನು ತೋರಿಸುತ್ತದೆ. ಉಳಿದೆಲ್ಲಾ ಪಾತ್ರಗಳು ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಟಿಸಿವೆಯಾದರೂ ಇನ್ನೂ ಹೆಚ್ಚು ರಿಹರ್ಸಲ್ಸ ಗಳನ್ನು ಮಾಡುವ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಆದರೆ.... ಕೆಲವು ಬಾರಿ ಗುಂಪು ಬಳಕೆಯಲ್ಲಿ ದೊಂಬಿಯಾಗುವುದನ್ನು ನಿಯಂತ್ರಿಸಬೇಕಾಗಿದೆ. ಗುಂಪಿನ ಅನಿಯಂತ್ರಿತ ಗದ್ದಲ ಗೊಂದಲಗಳು ನೋಡುಗರಲ್ಲಿ  ಕೆಲವೊಮ್ಮೆ ಅಸಹನೆಯನ್ನು ಹುಟ್ಟಿಸುವಂತಿದೆಕಲಾವಿದರ ನಡುವೆ ಹೊಂದಾಣಿಕೆಯ ಅಗತ್ಯ ಅತ್ಯಗತ್ಯವಾಗಿ ಬೇಕಾಗಿದೆ. ಎಂಟ್ರಿ, ಎಕ್ಸಿಟ್ ಹಾಗೂ ಬ್ಲಾಕಿಂಗ್ ಕಡೆಗೆ ನಟರು ಇನ್ನೂ ಹೆಚ್ಚಿನ ಗಮನಕೊಡಬೇಕಿದೆ. ರಿಹರ್ಸಲ್ಸ್ ಕೊರತೆ ನಾಟಕದಾದ್ಯಂತ ಆಗಾಗ ಕಂಡುಬರುತ್ತದೆ. ಮೂರು ವಾರಗಳ ಹಿಂದೆ ಬಾಂಬೆಯಲ್ಲಿ ಪ್ರಶಸ್ತಿಗಳನ್ನು ಸೂರೆ ಮಾಡಿಕೊಂಡು ಬಂದ ವರಾಹ ಪುರಾಣ ನಾಟಕ ಪ್ರದರ್ಶನದಲ್ಲಿ ದುರ್ಬಲವಾಗಿ ಮೂಡಿಬಂದಿದ್ದಕ್ಕೆ ತಾಲಿಂ ಕೊರತೆಯೇ ಕಾರಣವೆನಿಸುತ್ತದೆ.


 ರಿಹರ್ಸಲ್ಸ್ ಕೊರತೆ ಮ್ಯೂಸಿಕ್ ಹಾಗೂ ಲೈಟಂಗ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿತು. ಕಲಾವಿದರಿದ್ದಲ್ಲಿ ಬೆಳಕು ಬರಬೇಕಿತ್ತೋ ಇಲ್ಲವೇ ಬೆಳಕು ಬಿದ್ದಲ್ಲಿ ಕಲಾವಿದರು ಬರಬೇಕಿತ್ತೋ ಗೊತ್ತಿಲ್ಲ. ಆದರೆ ಪ್ರತಿ ದೃಶ್ಯಕ್ಕೆ ಅಗತ್ಯವಾಗಿ ಮೂಡ್ ಸೃಷ್ಟಿಸುವಲ್ಲಿ ಬೆಳಕು ವಿಫಲವಾಯಿತು. ಹಾಡಿಗೂ ದೃಶ್ಯಕ್ಕೂ ಸಂಗೀತಕ್ಕೂ ಅದ್ಯಾಕೋ ತಾಳು ಮೇಳು ಸರಿಹೊಂದಲೇ ಇಲ್ಲ. ನಟರು ಸಂಭಾಷಣೆ ಹೇಳುವಾಗಲೇ ಆಲಾಪ ಹಾಗೂ ಹಿನ್ನಲೆ ಸಂಗೀತ ಆಗಾಗ ಮೂಡಿಬಂದಿದ್ದರಿಂದ ಕೇಳುಗರಿಗೆ ತುಂಬಾನೇ ಡಿಸ್ಟರ್ಬ ಆಯಿತು. ರಾಮಚಂದ್ರ ಹಡಪದ ಪ್ರಸ್ತುತವಾಗಿ ರಂಗಭೂಮಿಯಲ್ಲಿ ಪ್ರತಿಭಾವಂತ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅವರ ಪ್ರತಿಭೆ ಪ್ರಸ್ತುತಗೊಂಡ ಪ್ರಯೋಗದಲ್ಲಿ ಪ್ರಯೋಜನಕ್ಕೆ ಬರಲಿಲ್ಲ. ನಾಟಕದಲ್ಲಿ ಬಳಿಸಿದ ತಾಯಾಗಿ ಹೆಣ್ಣು, ಮಗಳಾಗಿ ಹೆಣ್ಣು, ಜೀವನದ ದಾರಿ ಸವೆಸಿದೆ ನಾರಿ.... ಹಾಗೂ ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿ ಹುಟ್ಟುವುದು ಲೇಸು, ಮಣ್ಣಿನ ಮೇಲೆ ಮರವಾಗಿ ಹುಟ್ಟು ಹೋಗಿಬರುವ ಜಂಗಮಕೆ ನೆರಳಾಗು... ಎನ್ನುವ ಜಾನಪದ ಹಾಡುಗಳಲ್ಲಿ ಹೆಣ್ಣಿನ ನೋವು ಅಸಾಹಯಕತೆಗಳು ಮಾರ್ಮಿಕವಾಗಿ ಮೂಡಿಬಂದಿವೆ. ಜಂಬಣ್ಣ ಅಮರಚಿಂತರವರು ಬರೆದ ರೊಟ್ಟಿ ವಿಸ್ತಾರದಲಿ.... ಬೆಳ್ಳಿಚುಕ್ಕು ಮೂಡುವ ಮುನ್ನ.... ಹಾಗೂ ನಮ್ಮ ನೋವಿನ ಹಾಡು... ಮುಂತಾದ ಹಾಡುಗಳು ತುಂಬಾ ಅರ್ಥಪೂರ್ಣವಾಗಿವೆ. ಆದರೆ ಅವುಗಳು ದೃಶ್ಯಗಳಲ್ಲಿ ದ್ವನಿಸಿ ನೋಡುಗರೆದೆಯಲ್ಲಿ ಪ್ರತಿದ್ವನಿಸುವಲ್ಲಿ ವಿಫಲವಾಗಿವೆ.

                   ಬೆಳ್ಳಿಚುಕ್ಕಿ ಮೂಡುವ ಮುನ್ನ
                   ಬುಡುಬುಡು ನಿದ್ದೆಯಲ್ಲಿ ದುಡಿಹಿಡಿದು
                   ಸುಪ್ರಭಾತದ ಹರಿಕಾರರು ನಾವು....
                   ನಮ್ಮ ನೋವಿನ ಗೀತೆ ನಾವೇ ಹಾಡುತ
                   ಸಂಸ್ಕಾರದಿ ಸೇತುವೆ ಕಟ್ಟುವವರು....

ಎನ್ನುವ ಜಂಬಣ್ಣನವರು ಬರೆದ ಹಾಡು ನಾಟಕದಲ್ಲಿ ಮಾತ್ರವಲ್ಲ ಸಮಸ್ತ ಕೆಳವರ್ಗದ ದುಡಿಯುವವರ ಬದುಕಿನ ದ್ವನಿಯಾಗಿ ಮೂಡಿಬಂದಿದೆ. ಹಾಡುಗಳಲ್ಲಿರುವ ಆಶಯವನ್ನು ದೃಶ್ಯ ಸಂಯೋಜನೆ, ಸಂಗೀತ ಸಂಯೋಜನೆಗಳ ಮೂಲಕ ಇನ್ನೂ ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ನಾಟಕ ಮಾಡಬೇಕಾಗಿದೆ.

ವರಾಹ ಪುರಾಣ ನಿರ್ದೇಶಕ ಸಿದ್ದರಾಮ ಕೊಪ್ಪರ್
ಸಿದ್ದರಾಮ ಕೊಪ್ಪರ್ ಬೆಂಗಳೂರು ವಿಶ್ವವಿದ್ಯಾಲಯದ ಸೋಸಿಯಾಲಜಿ ಎಂ. ಪದವಿ ಜೊತೆಗೆ ಚಿತ್ರಕಲೆಯಲ್ಲಿ ಮಾಸ್ಟರ್ ಆರ್ಟ್ಸ ಪದವಿ ಹೀಗೆ ಡಬಲ್ ಉನ್ನತ ಪದವಿ ಪಡೆದಿದ್ದರೂ ಅವರ ಯೋಗ್ಯತೆಗೆ ತಕ್ಕ ಕೆಲಸ ಕೊಡಲಾಗದ ನಮ್ಮ ವ್ಯವಸ್ಥೆ ನಿಜಕ್ಕೂ ಅಮಾನವೀಯ. ಉದರಂಬರಕ್ಕೆ ಸಿಟಿ ಬಸ್ ನಿರ್ವಹನೆ ವೃತ್ತಿಯಲ್ಲಿರುವ ಸಿದ್ದರಾಮ ಕೊಪ್ಪರ್ ನಾಟಕದ ನಿರ್ದೇಶನವನ್ನೂ ನಿರ್ವಹಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹವಾಗಿರುವುಂತಹುದು. ಗ್ರಾಮೀಣ ಪ್ರದೇಶದಿಂದ ಬಂದು ರಂಗಕಲೆಯಲ್ಲಿ ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡು ತನ್ನದೇ ಆದ ಐಡೆಂಟಿಟಿಯನ್ನು ಕಂಡುಕೊಳ್ಳುತ್ತಿರುವ ಸಿದ್ದರಾಮ ಕೊಪ್ಪರ್ರವರಿಗೆ ಅಭಿನಂದನೆಗಳನ್ನು ಹೇಳಲೇಬೇಕಿದೆ. ಆದರೆ ಕ್ರಿಯಾಶೀಲ ರಂಗನಿರ್ದೇಶಕನಾಗಿ ಗುರುತಿಸಿಕೊಳ್ಳಲು ಕ್ರಮಿಸಬೇಕಾದ ಹಾದಿ ಇನ್ನೂ ದೂರವಿದೆ.  ಅನಿವಾರ್ಯ ವೃತ್ತಿಯಲ್ಲಿ ಕಾಣದ ಖುಷಿಯನ್ನು ರಂಗಕ್ರಿಯೆಯಲ್ಲಿ ಕಾಣುತ್ತಾ ರಂಗಭೂಮಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ಕೊಡುತ್ತಿರುವ ಸಿದ್ದರಾಮರಂತಹ ಯುವ ಕಲಾವಿದರಿಗೆ ನಾಟಕ ನಿರ್ದೇಶಿಸುವ ಅವಕಾಶವನ್ನು ಕೊಟ್ಟ ರೂಪಾಂತರ ರಂಗತಂಡ ಕೂಡಾ ಸ್ತುತ್ಯಾರ್ಹ ಕೆಲಸ ಮಾಡುತ್ತಿದೆ. ಇದಕ್ಕಿಂತಲೂ ಸಂತಸದ ಸಂಗತಿ ಏನೆಂದರೆ ರೂಪಾಂತರ ತಂಡಕ್ಕೆ ಈಗ 25ನೇ ವರ್ಷದ ಸಂಭ್ರಮ. ಒಂದು ಪಕ್ಕ ಹವ್ಯಾಸಿ ತಂಡ ನಿರಂತರವಾಗಿ ಕಾಲು ಶತಮಾನಗಳ ಕಾಲ ಕನ್ನಡ ರಂಗಭೂಮಿಯಲ್ಲಿ ಸಕ್ರೀಯವಾಗಿದ್ದು ಮುಂದುವರೆಯುತ್ತಿರುವುದು ಇಡೀ ಕನ್ನಡ ರಂಗಭೂಮಿಯ ಸಂಭ್ರಮವಾಗಬೇಕಿದೆ

                                  -ಶಶಿಕಾಂತ ಯಡಹಳ್ಳಿ

   
                    

 
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ