ಸೋಮವಾರ, ಜುಲೈ 31, 2017

ಅರ್ಚನಾ ಮೇಡಂ ನಿರ್ಗಮಿತ; ವಿಶುಕುಮಾರ್ ರವರಿಗೆ ಸ್ವಾಗತ

ಕಾನೂನಿಗೆ ಕರುಣೆ  ಇಲ್ಲದಿದ್ದರೂ  ಕಾನೂನು ರಕ್ಷಕರಿಗೆ  ಕರುಳಿರಬೇಕು:



ಈ ಆದೇಶ ಮುಂದೆಂದೋ ಆಗಬಹುದೆಂಬ ಊಹೆ ಇತ್ತು.. ಆದರೆ ಇಷ್ಟು ಬೇಗ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ದೀಢಿರ್ ನಿರ್ದಾರ ತೆಗೆದುಕೊಳ್ಳುತ್ತಾರೆಂದು ಯಾರೆಂದರೆ ಯಾರೂ ಊಹಿಸಿರಲಿಲ್ಲಾ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೇವಲ ಮೂರು ತಿಂಗಳ ಹಿಂದೆ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿದ್ದ ಎಂ.ಎಸ್. ಅರ್ಚನಾರವರು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗೆ ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾಗಿದ್ದ ಎನ್.ಆರ್.ವಿಶುಕುಮಾರ್‌ರವರನ್ನು ನೇಮಿಸಲಾಗಿದೆ. ವಿಶುಕುಮಾರರವರ ಜಾಗಕ್ಕೆ ಐಪಿಎಸ್ ಅಧಿಕಾರಿ ಈಶಾನ್ಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷರವರನ್ನು ವರ್ಗಾವಣೆ ಮಾಡಲಾಗಿದೆ. ಕಾನೂನು ರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತ ಪೋಲೀಸ್ ಅಧಿಕಾರಿಯೊಬ್ಬರನ್ನು ವಾರ್ತಾ ಇಲಾಖೆಗೆ ಸರಕಾರ ತಂದು ಕೂಡಿಸಿರುವುದು ಪ್ರಶ್ನಾರ್ಹ, ಆದರೆ ಡೈನಾಮಿಕ್ ಆಗಿ ಕೆಲಸಮಾಡುವ ವಿಶುಕುಮಾರ್‌ರವರು ಸಂಸ್ಕೃತಿ ಇಲಾಖೆಗೆ ನಿರ್ದೇಶಕರನ್ನಾಗಿಸಿದ್ದು ಸ್ತುತ್ಯಾರ್ಹ.     


ಅದ್ಯಾಕೆ ಮೂರೇ ತಿಂಗಳಲ್ಲಿ ಅಕಾಲಿಕವಾಗಿ ಅರ್ಚನಾರವರು ಸಂಸ್ಕೃತಿ ಇಲಾಖೆಯಿಂದಾ ಎತ್ತಂಗಡಿಯಾದರು? ಯಾಕೆಂದರೆ ಕಲೆ ಮತ್ತು ಸಂಸ್ಕೃತಿ ಇಲಾಖೆಗೆ ಅವರ ಅತಿರೇಕದ ನಿಲುವುಗಳು ಹೊಂದಾಣಿಕೆಯಾಗದಂತಿದ್ದವು. ಹಲವಾರು ಕಲಾವಿದರು ಹಾಗೂ ರಂಗಕರ್ಮಿಗಳು ಅರ್ಚನಾರವರ ಬಿಗಿ ಕಟ್ಟಳೆಗಳಿಂದ ಬೇಸರಗೊಂಡಿದ್ದರು. ಕಾನೂನುಗಳನ್ನು ಮುಂದಿಟ್ಟುಕೊಂಡು ಸ್ಟ್ರಿಕ್ಟ್ ಆಗಿ ಅಧಿಕಾರ ಮಾಡುವುದು ಬೇರೆ ಇಲಾಖೆಗಳಿಗೆ ಸರಿಹೋಗಬಹುದಾದರೂ ಸಂಸ್ಕೃತಿ ಇಲಾಖೆಗೆ ಸರಿಹೊಂದುವಂತಹುದಲ್ಲಾ. ಇಲ್ಲಿ ಕೆಲಸ ಮಾಡಬೇಕಾದವರಿಗೆ ಕಲೆ ಸಾಹಿತ್ಯ ಸಂಸ್ಕೃತಿ ಕುರಿತು ಸ್ಪಂದನೆ ಇರಬೇಕು, ಕಲಾವಿದರ ಬಗ್ಗೆ ಮಾನವೀಯ ತುಡಿತ ಇರಬೇಕು. ಕಲೆ ಸಾಹಿತ್ಯಕ್ಕೆ ಅನುಕೂಲ ಆಗುವ ಹಾಗಿದ್ದರೆ ಕಾನೂನಿನ ಬಿಗಿ ಮುಷ್ಟಿಯನ್ನು ಸಡಿಲಿಸುವ ಇರಾದೆ ಇರಬೇಕು. ಆದರೆ.. ಅರ್ಚನಾ ಮೇಡಂ ಕಟ್ಟಳೆಗಳ ಕಟ್ಟನ್ನು ತಲೆಯಲ್ಲಿಟ್ಟುಕೊಂಡು ಕಲಾವಿದರನ್ನು ಅವುಗಳಲ್ಲಿ ಕಟ್ಟಿಹಾಕುವ ಕೆಲಸವನ್ನು ಮಾಡತೊಡಗಿದಾಗ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ಹಲವಾರು ಉದಾಹರಣೆ ಕೊಡಬಹುದು. 


ಮೇ 14 ರಂದು ಶಿವು ಹೊನ್ನಗಾಣಹಳ್ಳಿ ಎನ್ನುವ ಯುವ ರಂಗಕರ್ಮಿ ತಾನು ಪ್ರೀತಿಸಿದ ಪೂಜಾ ಎನ್ನುವ ಯುವತಿಯನ್ನು ಅತ್ಯಂತ ಸರಳವಾಗಿ ಕಲಾಕ್ಷೇತ್ರದ ಆವರಣದೊಳಗಿನ ಕ್ಯಾಂಟೀನ್ ಬಳಿ ಇರುವ ಆಲದ ಮರದ ಬುಡದಲ್ಲಿ ವಿವಾಹವಾದ. ಈ ವಿಷಯ ಒಂದು ದಿನ ಮೊದಲೆ ಗೊತ್ತಾದಾಗ ಅರ್ಚನಾರವರು ಪೊಲೀಸ್‌ರನ್ನು ಕರೆಸಿ ಹಾಕಿದ ಪುಟ್ಟ ಚಪ್ಪರವನ್ನು ತೆರುವುಗೊಳಿಸಿದರು. ಆದರೂ ಪಟ್ಟು ಬಿಡದೇ ಇನ್ನೂರು ಜನ ರಂಗಕಲಾವಿದರ ಸಮ್ಮುಖದಲ್ಲಿ ಶಿವು ಸಾಂಕೇತಿಕವಾಗಿ ಮಂತ್ರಮಾಂಗಲ್ಯ ಪಠಣದೊಂದಿಗೆ ಮದುವೆಯಾದ. ಇದು ಗೊತ್ತಾಗಿದ್ದೇ ತಡ ಕೆಂಡಾಮಂಡಲವಾದ ಅರ್ಚನಾ ಮೇಡಂ ಕಲಾಕ್ಷೇತ್ರದ ಸಿಬ್ಬಂದಿಯನ್ನು ತಾರಾಮಾರಾ ತರಾಟೆಗೆ ತೆಗೆದುಕೊಂಡರು. ಇಬ್ಬರು ಸೆಕ್ಯೂರಿಟಿ ಗಾರ್ಡಗಳಿಗೆ ನೋಟೀಸ್ ನೀಡಿದರು. ಮದುವೆಯಾದ ದಂಪತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು. ಇದೆಲ್ಲಾ ಬೇಕಿರಲಿಲ್ಲಾ.. ಕೆಲವೊಮ್ಮೆ ಕೆಲವೊಂದನ್ನು ಮಾನವೀಯ ನೆಲೆಯಲ್ಲಿ ನೋಡಿ ಜಾಣ ಕುರುಡನ್ನು ತೋರಿಸುವುದು ಅಧಿಕಾರಿಗಳಿಗೆ ಉತ್ತಮ. ಕಾನೂನಿಗೆ ಕರುಣೆ ಇಲ್ಲದಿದ್ದರೂ ಕಾನೂನು ರಕ್ಷಕರಿಗೆ ಕರುಳಿರಬೇಕು. ಅದೂ ಮಹಿಳೆಯಾದ ಅರ್ಚನಾರಂತವರಿಗೆ ಮಾತೃತ್ವದ ಗುಣವೂ ಇರಬೇಕು. ಕಲಾಕ್ಷೇತ್ರದ ಒಳಗಾಗಲಿ ಇಲ್ಲವೇ ಆವರಣದಲ್ಲಾಗಲೀ ಮದುವೆಗಳಿಗೆ ಅವಕಾಶವಿಲ್ಲವೆಂದು ಇಲಾಖೆಯ ಕಾನೂನು ಹೇಳುತ್ತದೆ. ಆದರೆ ಅಲ್ಲಿ ಆಗಿದ್ದು ಅದ್ದೂರಿ ವಿವಾಹವಲ್ಲ. ಅರ್ಧ ಗಂಟೆಯ ಸಾಂಕೇತಿಕ ಮದುವೆ. ಅದೂ ಇಬ್ಬರು ಕಲಾವಿದರು ಪ್ರೀತಿಸಿ ಒಂದಾಗುವ ಸಂತಸದ ಗಳಿಗೆ.  ಪೊಲೀಸ್ ಸ್ಟೇಶನ್ನುಗಳಲ್ಲೇ ಪ್ರೇಮವಿವಾಹ ಮಾಡಿಸಿ ಪೊಲೀಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. ಅಂತಹುದರಲ್ಲಿ ಕಲಾವಿದರ ಸಾಂಕೇತಿಕ ಮದುವೆಗೆ ಸಾಕ್ಷಿಯಾಗದಿದ್ದರೂ ಸುಮ್ಮನಿದ್ದರೆ ಸಾಕಾಗಿತ್ತು. ಅದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವ ನಿರ್ಧಾರವೇ ಅತಿರೇಕವಾಗಿತ್ತು.

ಇನ್ನೂ ಒಂದು ಉದಾಹರಣೆ ಹೀಗಿದೆ. ಹಿರಿಯ ರಂಗಕರ್ಮಿಗಳೆಲ್ಲಾ ಸೇರಿ ಜುಲೈ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ (ಸುಬ್ಬಣ್ಣ) ನವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದರು. ಅದಕ್ಕೂ ಮುಂಚೆ ಸುಬ್ಬಣ್ಣನವರ ಕುರಿತು ಸಾಕ್ಷಚಿತ್ರವೊಂದನ್ನು ನಿರ್ಮಿಸಲು ಬಿ.ಸುರೇಶರವರು ಮುಂದಾದರು. ಸಾಕ್ಷಚಿತ್ರವನ್ನು ನಿರ್ದೇಶಿಸುವ ಹೊಣೆಗಾರಿಕೆ ಚಿಕ್ಕಸುರೇಶ ವಹಿಸಿಕೊಂಡರು. ಆ ಸಾಕ್ಷಚಿತ್ರಕ್ಕೆ ಸುಬ್ಬಣ್ಣ ಹಾಗೂ ಜೆ.ಲೋಕೇಶರವರ ಬೈಟ್ ಬೇಕಾಗಿತ್ತು. ಅದು ಕಲಾಕ್ಷೇತ್ರದ ಆವರಣದಲ್ಲಿ ಶೂಟ್ ಮಾಡಿದರೆ ಚೆನ್ನಾಗಿತ್ತೆಂದು ಚಿಕ್ಕಸುರೇಶ್ ನಿರ್ಧರಿಸಿದರು. ಸುಮ್ಮನೇ ತಮ್ಮ ಪಾಡಿಗೆ ತಾವು ಹತ್ತು ನಿಮಿಷಗಳ ಕಾಲ ಕಲಾಕ್ಷೇತ್ರದ ಮೆಟ್ಟಲುಗಳ ಮೇಲೆ ಸುಬ್ಬಣ್ಣನವರನ್ನು ಕೂರಿಸಿ ಚಿತ್ರೀಕರಿಸಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ.. ಒಂದು ದಿನ ಮುಂಚೆ ಚಿಕ್ಕಸುರೇಶ್ ಹೋಗಿ ಅರ್ಚನಾರವರನ್ನು ಬೇಟಿಯಾಗಿ ಚಿತ್ರೀಕರಣಕ್ಕೆ ಅನುಮತಿ ಕೇಳಿದಾಗ ಕಲಾಕ್ಷೇತ್ರದಲ್ಲಿ ಚಿತ್ರೀಕರಣ ಸಾಧ್ಯವೇ ಇಲ್ಲಾ. ಶೂಟಿಂಗ್ ಮಾಡಲೇ ಕೂಡದು ಎಂದು ಕೋರಿಕೆಯನ್ನು ನಿರಾಕರಿಸಿದರು. ಇದರಿಂದ ಅತೀವವಾಗಿ ಬೇಸರಗೊಂಡ ಚಿಕ್ಕಸುರೇಶ್ ಸುಬ್ಬಣ್ಣನವರ ಮನೆಗೆ ಹೋಗಿ ಶೂಟಿಂಗ್ ಮುಗಿಸಿದರು. ಆದರೆ ಅರ್ಚನಾರವರ ಅತಾರ್ಕಿಕ ನಿರ್ಧಾರದಿಂದ ನೊಂದುಕೊಂಡ ಡಾ.ವಿಜಯಮ್ಮನವರು ಹಾಗೂ ರಂಗಸಂಪದದ ಲೊಕೇಶರವರು ತಮ್ಮ ಅಸಮಾಧಾನವನ್ನು ಸಚಿವೆ ಉಮಾಶ್ರೀಯವರ ಗಮನಕ್ಕೆ ತಂದರು.

ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಯಾವುದೇ ಅಭ್ಯಂತರಗಳಿಲ್ಲಾ. ಟಿವಿ ವಾಹಿನಿಗಳು ಬಂದು ಚಿತ್ರೀಕರಿಸುವಾಗ ಯಾವುದೇ ಅಡೆ ತಡೆಗಳಿಲ್ಲಾ. ಆದರೆ.. ಸಾಕ್ಷಚಿತ್ರವೊಂದಕ್ಕೆ ಹಿರಿಯ ರಂಗಕರ್ಮಿಗಳ ಮಾತುಗಳನ್ನು ಚಿತ್ರೀಕರಿಸಬೇಕೆಂದರೆ ಅದಕ್ಕೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಎಂದು ರಂಗಕಲಾವಿದರುಗಳು ತಮ್ಮ ತಮ್ಮಲ್ಲೇ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಹಿಳೆಯೊಬ್ಬಳು ಸಂಸ್ಕೃತಿ ಇಲಾಖೆಗೆ ಬಂದರೆ ಇನ್ನೂ ಹೆಚ್ಚು ಸಮರ್ಥವಾಗಿ ಕಲೆ ಮತ್ತು ಸಂಸ್ಕೃತಿಯ ಕೆಲಸಗಳು ಆಗಬಲ್ಲವು ಎನ್ನುವ ಉಮಾಶ್ರೀಯವರ ಮಹಿಳಾಪರ ಆಲೋಚನೆಯನ್ನು ಅರ್ಚನಾರವರು ಬುಡಮೇಲುಗೊಳಿಸಿದ್ದರು. ಕಲೆ ಮತ್ತು ಸಂಸ್ಕೃತಿಯ ಗಂಧ ಗಾಳಿ ಇರದ, ಕಾನೂನಾಸ್ತ್ರವನ್ನು ಹಿಡಿದ ಅರ್ಚನಾರಂತಹ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತವಲ್ಲ ಎನ್ನುವುದು ಸಚಿವೆ ಉಮಾಶ್ರೀಯವರಿಗೆ ಮನದಟ್ಟಾದ ತಕ್ಷಣ ಅವರ ವರ್ಗಾವಣೆ ಮಾಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಕಲೆಯ ಬಗ್ಗೆ ಒಲವಿರುವ, ಕಲಾವಿದರ ಬಗ್ಗೆ ಆದರವಿರುವ ಹಾಗೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಅಧಿಕಾರಿಯನ್ನು ಸಂಸ್ಕೃತಿ ಇಲಾಖೆಗೆ ಕೊಡಿ ಎಂದು ಒತ್ತಾಯಿಸಿದರು. ಉಮಾಶ್ರೀಯವರ ಆಗ್ರಹವನ್ನು ಪುರಸ್ಕರಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸ್ಕೃತಿ ಇಲಾಖೆಗೆ ಸೂಕ್ತವೆನ್ನಿಸುವ ಅಧಿಕಾರಿ ಎನ್.ಆರ್.ವಿಶುಕುಮಾರ್‌ರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸಿ ಜುಲೈ ೩೧ರಂದು ಆದೇಶಿಸಿದರು. ಅರ್ಚನಾರವರು ಅಕಾಲಿಕವಾಗಿ ಎತ್ತಂಡಿಯಾದರು. ಅರ್ಚನಾರವರ ಅತಿರೇಕದ ನಿರ್ಧಾರಗಳಿಂದ ನೊಂದುಕೊಂಡಿದ್ದ ಹಲವಾರು ಕಲಾವಿದರು ಹಾಗೂ ರಂಗಕರ್ಮಿಗಳು ನಿಟ್ಟುಸಿರು ಬಿಟ್ಟರು.

ವಿಶುಕುಮಾರ್‌ರವರು ವಾರ್ತಾ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಿದವರು.  ಇತ್ತೀಚೆಗೆ ಭಾರತ ಭಾಗ್ಯವಿಧಾತ ಎನ್ನುವ ಅಂಬೇಡ್ಕರ್‌ರವರ ಕುರಿತ ಬೆಳಕು ದ್ವನಿ ರೂಪಕವನ್ನು ಅಪಾರ ಆಸಕ್ತಿ ವಹಿಸಿ ವಾರ್ತಾ ಇಲಾಖೆಯಿಂದ ವಿಶುಕುಮಾರರು ಆಯೋಜಿಸಿ ಯಶಸ್ವಿಯಾಗಿದ್ದರು. ಕಲಾವಿದರು ಹಾಗೂ ರಂಗಕರ್ಮಿಗಳ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿದವರು. ಎಲ್ಲಕ್ಕಿಂತ ಹೆಚ್ಚಾಗಿ ಕಲೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಒಲವುಳ್ಳವರು. ಇಂತಹ ಅಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಈ ಹಿಂದೆ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ದಯಾನಂದರವರು ಇಲಾಖೆಯಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳ ರೂವಾರಿಯಾಗಿದ್ದರು. ಸಚಿವೆ ಉಮಾಶ್ರೀಯವರ ಯೋಜನೆಗಳನ್ನು ಕ್ರಿಯಾಶೀಲವಾಗಿ ಕಾರ್ಯರೂಪಕ್ಕೆ ತಂದರು. ಕಲಾಕ್ಷೇತ್ರವನ್ನು ಅಕರ್ಷನೀಯವಾಗಿ ಕಂಗೊಳಿಸುವಂತೆ ಮಾಡಿದವರು. ಆನ್‌ಲೈನ್ ಪೇಮೇಂಟ್ ವ್ಯವಸ್ಥೆಯನ್ನು ಜಾರಿಗೊಳಿಸಿ ರಂಗದಲ್ಲಾಳಿಗಳ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು. ಇಲಾಖೆಯ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ನಲವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದರು. ಕೆಲವರ ಮೇಲೆ ಪೊಲೀಸ್ ಕೇಸುಗಳನ್ನೂ ಹಾಕಿ ರಂಗಭೂಮಿಯ ಖದೀಮ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ್ದರು.  ದಯಾನಂದರವರ ಕಾರ್ಯತತ್ಪರತೆ, ನಿಷ್ಟುರತೆ, ಸ್ನೇಹಪರತೆ ಮತ್ತು ಕಲೆ ಸಂಸ್ಕೃತಿಯ ಮೇಲಿರುವ ಆಸಕ್ತಿಗಳು ವಿಶುಕುಮಾರರಿಗೆ ಮಾದರಿಯಾಗಬೇಕಿದೆ. ಸಚಿವೆ ಉಮಾಶ್ರೀಯವರ ಉತ್ತಮ ಆಲೋಚನೆಗಳನ್ನು ಸಮರ್ಥವಾಗಿ ಕಾರ್ಯಗತಗೊಳಿಸುವ ಕೆಲಸವನ್ನು ವಿಶುಕುಮಾರವರು ಮಾಡುತ್ತಾರೆಂಬ ನಂಬಿಕೆಯೂ ಇದೆ. ತಮ್ಮ ಸಂಘಟನಾ ಸಾಮರ್ಥ್ಯವನ್ನು ಈಗಾಗಲೇ ವಾರ್ತಾ ಇಲಾಖೆಯ ನಿರ್ದೇಶಕರಾಗಿ ವಿಶುಕುಮಾರರವರು ಸಾಬೀತು ಪಡಿಸಿದ್ದಾರೆ. ಕಾನೂನುಗಳ ಕಟ್ಟಳೆಗಳ ಚೌಕಟ್ಟುಗಳಾಚೆಗೂ ಕಲೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ.ಹಾಗೆಯೇ ಈ ವರ್ಷದ ಕೊನೆಗೆ ವಿಶ್ವ ಕನ್ನಡ ಸಮ್ಮೇಳನವನ್ನು ಬೇರೆ ಸರಕಾರ ಅದ್ದೂರಿಯಾಗಿ ಆಚರಿಸಬೇಕಿದೆ. ಅಂತಹ ಬೃಹತ್ ಈವೆಂಟನ್ನು ಸಂಘಟಿಸುವ ಸಾಮರ್ಥ್ಯ ಅರ್ಚನಾರವರಂತಹ ಅಕಾಡೆಮಿಕ್ ಅಧಿಕಾರಿಗೆ ಇಲ್ಲವೆಂಬುದು ಸರಕಾರಕ್ಕೂ ಮನವರಿಕೆಯಾಗಿದೆ. ಹಲವಾರು ಸರಕಾರಿ ಈವೆಂಟ್ ಗಳನ್ನು ಯಶಸ್ವಿಯಾಗಿ ಸಂಘಟಿಸಿದ ವಿಶುಕುಮಾರ್ ರಂತವರ ಸಾರಥ್ಯ ಅಗತ್ಯವಾಗಿದೆ. ಇದನ್ನೂ ಸಹ ಗಮನದಲ್ಲಿಟ್ಟುಕೊಂಡು ಸರಕಾರ ವಿಶುಕುಮಾರರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕರೆತಂದಿದೆ.. ಏಕಾಏಕಿ ಅರ್ಚನಾರವರನ್ನು ಸದರಿ ಇಲಾಖೆಯಿಂದ ತೆರವುಗೊಳಿಸಿದೆ.


ದಯಾನಂದರವರು ವರ್ಗಾವಣೆಯಾಗಿ ಹೋಗುವ ಮುನ್ನ ಮೂರು ತಿಂಗಳ ಒಳಗಾಗಿ ರವೀಂದ್ರ ಕಲಾಕ್ಷೇತ್ರದ ಬೆಳಕು ಹಾಗೂ ದ್ವನಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದಾಗ ಎಪ್ರೀಲ್ 5 ರಂದು ಹೋರಾಟನಿರತ ರಂಗ-ಗೆಳೆಯರಿಗೆ ಮಾತು ಕೊಟ್ಟಿದ್ದರು. ಆದರೆ ಈಗಾಗಲೇ ನಾಲ್ಕು ತಿಂಗಳುಗಳು ಕಳೆದರೂ ಇನ್ನೂ ಟೆಂಡರ್ ಪ್ರಕ್ರಿಯೆಯೇ ಫೈನಲ್ ಆಗಿಲ್ಲಾ. ರಂಗಗೆಳೆಯರ ಕೋರಿಕೆಗೆ ಕೂಡಲೇ ಸ್ಪಂದಿಸಿದ್ದ ಸಚಿವೆ ಉಮಾಶ್ರೀಯವರು ಲೊಕೋಪಯೋಗಿ ಇಲಾಖೆಯ ಮೇಲೆ ಒತ್ತಡ ತಂದು ಟೆಂಡರ್ ಪ್ರಕ್ರಿಯೆ ತೀವ್ರಗೊಳಿಸಲು ಒತ್ತಾಯಿಸಿದ್ದರು. ದಯಾನಂದರವರು ಹೋದ ನಂತರ ನಿರ್ದೇಶಕಿಯಾಗಿ ಬಂದ ಅರ್ಚನಾರವರು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರದೇ ಕಾಲಹರಣ ಮಾಡಿದರು.. ಹೀಗಾಗಿ ಇಡೀ ಯೋಜನೆ ನೆನಗುದಿಗೆ ಬಿದ್ದಿತು. ವಿಶುಕುಮಾರರವರು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಬಂದ ತಕ್ಷಣ ಮೊಟ್ಟ ಮೊದಲು ಕಲಾಕ್ಷೇತ್ರದ ಬೆಳಕು ಹಾಗೂ ದ್ವನಿಯ ಆಧುನೀಕರಣವನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನು ತೀವ್ರಗೊಳಿಸಬೇಕಿದೆ. ಇದಕ್ಕೆ ಸಚಿವೆ ಉಮಾಶ್ರೀಯವರ ಬೆಂಬಲವೂ ಇದೆ. ಲೊಕೋಪಯೋಗಿ ಇಲಾಖೆಯ ಹಿಂದೆ ಬಿದ್ದು ಟೆಂಡರ್ ಪ್ರಕ್ರಿಯಯನ್ನು ಆದಷ್ಟು ಬೇಗ ಮುಗಿಸಲು ಒತ್ತಡ ತರಬೇಕಿದೆ. ಇಲ್ಲವಾದರೆ ಮತ್ತೊಮ್ಮೆ ರಂಗಗೆಳೆಯರು ಕಲಾಕ್ಷೇತ್ರದ ಮುಂದೆ ಹೋರಾಟಕ್ಕಿಳಿಯುವ ಅನಿವಾರ್ಯತೆ ಉಂಟಾಗುತ್ತದೆ. 

ಸ್ವತಃ ಉತ್ತಮ ಕಲಾವಿದೆಯಾದ ಉಮಾಶ್ರೀಯವರೇ ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದು ಸಾಧ್ಯವಾದಷ್ಟೂ ಕಲೆ ಮತ್ತು ಸಂಸ್ಕೃತಿ ಕಟ್ಟಲು ತಮ್ಮ ಬದ್ಧತೆಯನ್ನು ತಮ್ಮ ರಾಜಕೀಯ ಒತ್ತಡಗಳ ನಡುವೆಯೂ ಆಗಾಗ ತೋರಿಸುತ್ತಲೇ ಇದ್ದಾರೆ. ಕಲಾವಿದರ ಬೇಡಿಕೆಗಳ ಒತ್ತಾಯಗಳಿಗೆ ತೀವ್ರವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ. ಆದರೆ ಅವರೊಬ್ಬರೇ ಏನು ತಾನೆ ಮಾಡಲು ಸಾಧ್ಯ? ಈಗ ನಿರ್ದೇಶಕರಾಗಿ ನಿಯುಕ್ತಿಗೊಂಡಿರುವ ವಿಶುಕುಮಾರರವರೂ ಸಹ ಕಲೆಯತ್ತ ಒಲವನ್ನು ಹೊಂದಿರುವುದು ಸಾಬೀತಾಗಿದೆ. ವಿಶುಕುಮಾರರ ಮೇಲೆ ಎಲ್ಲಾ ಕಲಾವಿದರುಗಳು. ಸಾಹಿತಿಗಳು ಹಾಗೂ ರಂಗಕರ್ಮಿಗಳು ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಂಗದಲ್ಲಾಳಿಗಳಿಂದ ಒಂದು ಅಂತರವನ್ನು ಕಾಪಾಡಿಕೊಂಡು., ನಿಜವಾಗಿ ಕೆಲಸ ಮಾಡುತ್ತಿರುವ ಕಲಾವಿದರುಗಳಿಗೆ ಆರ್ಥಿಕ, ನೈತಿಕ ಬೆಂಬಲವನ್ನು ಕೊಡುತ್ತಾ ಸಂಸ್ಕೃತಿ ಇಲಾಖೆಯನ್ನು ಜನಮುಖಿಯಾಗಿ ಮುನ್ನಡೆಸುವ ಕೆಲಸವನ್ನು ವಿಶುಕುಮಾರರವರು ಮಾಡಲಿ ಹಾಗೂ ಮಾಡುತ್ತಾರೆ ಎನ್ನುವುದೇ ನಮ್ಮೆಲ್ಲರ ನಿರೀಕ್ಷೆಯಾಗಿದೆ. ಕಲೆಯ ಉಳಿವು ಹಾಗೂ ಬೆಳವಣಿಗೆಗೆ ಕೇಳಿದಷ್ಟು ಹಣ ಕೊಡಲು ಸಿದ್ದರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಬೇಕಾದ ಅನುಕೂಲತೆಗಳನ್ನು ಕೊಟ್ಟು ಹಲವಾರು ಹೊಸ ಹೊಸ ಪ್ರಾಜೆಕ್ಟಗಳಿಗೆ ಅನುಮೋದನೆಯನ್ನು ಕೊಡಲು ಮಾನ್ಯ ಸಚಿವೆ ಉಮಾಶ್ರೀಯವರು ಸಿದ್ದರಾಗಿದ್ದಾರೆ.. ಇಷ್ಟೆಲ್ಲಾ ಇದ್ದರೂ ಸರಕಾರ ಕೊಟ್ಟ ಹಣವನ್ನು ಕ್ರಿಯಾಶೀಲ ಕೆಲಸಗಳಿಗಾಗಿ ಬಳಸುವ ಹಾಗೂ ಸರಕಾರಿ ಪ್ರಾಜೆಕ್ಟಗಳನ್ನು ರಂಗಗುತ್ತಿಗೆದಾರರ ಹಿಡಿತದಿಂದ ಬಿಡಿಸಿ ರಂಗಬದ್ದತೆ ಇರುವ ಸಂಘಟಕರಿಗೆ ವಹಿಸಿಕೊಟ್ಟು ಜನಮೆಚ್ಚುವ ಕೆಲಸಗಳನ್ನು ವಿಶುಕುಮಾರರವರು ಅಪಾರ ಸಿದ್ದತೆ ಹಾಗೂ ಅನನ್ಯ ಬದ್ದತೆಗಳಿಂದ ಮಾಡಬೇಕಿದೆ ಹಾಗೂ ಮಾಡುತ್ತಾರೆಂಬ ನಂಬಿಕೆಯೂ ಎಲ್ಲಾ ಕಲಾವಿದರು ಹಾಗೂ ರಂಗಕರ್ಮಿಗಳದ್ದಾಗಿದೆ. ಅಪಾರವಾದ ನಿರೀಕ್ಷೆಗಳನ್ನು ನಿರಾಸೆಗೊಳಿಸಲಾರರು ಎನ್ನುವ ಭರವಸೆಯೊಂದಿಗೆ ನಾವೆಲ್ಲರೂ ವಿಶುಕುಮಾರರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಕರನ್ನಾಗಿ ಒಪ್ಪಿಕೊಂಡು ಅಹ್ವಾನಿಸಬೇಕಿದೆ ಹಾಗೂ ಅಭಿನಂದಿಸಬೇಕಿದೆ . ಹಾಗೆಯೇ ಸಚಿವೆ ಉಮಾಶ್ರೀಯವರಿಗೂ ಅಭಿನಂದನೆಗಳು.

ವೆಲ್ ಕಮ್ ಟು ವಿಶುಕುಮಾರ್ ಸರ್, ಗುಡ್ ಬೈ ಅರ್ಚನಾ ಮೇಡಂ...

-ಶಶಿಕಾಂತ ಯಡಹಳ್ಳಿ



ಮಂಗಳವಾರ, ಜುಲೈ 25, 2017

ರೂಪಕಗಳಲಿ ರೂಪಗೊಂಡ ರಂಗಪ್ರಯೋಗ “ನನ್ನ ಅಂಬೇಡ್ಕರ್” :

ನನ್ನ ಅಂಬೇಡ್ಕರ್; ಮುಕ್ಕಾಲು ಭಾಗ ನೀರಸ, ಮಿಕ್ಕಿದ್ದು ರೂಪಕದ ವಿನ್ಯಾಸ 



ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೇ ವರ್ಷದ ಸ್ಮರಣೆಗಾಗಿ ಕರ್ನಾಟಕ ಸರಕಾರ ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದ್ದು ಅದರ ಭಾಗವಾಗಿ ಜುಲೈ 19 ರಂದ 24ರ ವರೆಗೆ ವಸಂತನಗರದ ಗುರುನಾನಕ ಭವನದಲ್ಲಿ ಅಂಬೇಡ್ಕರ್ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಅಂಬೇಡ್ಕರ್‌ರವರ ಬದುಕು ಸಾಧನೆ ಹಾಗೂ ಧಮ್ಮಗಳ ಕುರಿತು ಐದು ನಾಟಕಗಳು ಪ್ರದರ್ಶನಗೊಂಡವು. ಕೋಟಿಗಾನಹಳ್ಳಿ ರಾಮಯ್ಯನವರು ರಚಿಸಿದ ನನ್ನ ಅಂಬೇಡ್ಕರ್ ನಾಟಕವನ್ನು ಪ್ರಮೋಧ್ ಶಿಗ್ಗಾಂವ್ ರವರು ನಿರ್ದೇಶಿಸಿದ್ದು ಕೋಲಾರದ ಕಾಪಾಲಿಕ ತಂಡದ ಕಲಾವಿದರು ಜುಲೈ 24ರಂದು ಅಭಿನಯಿಸಿದರು.

ಇದೊಂದು ವಿಭಿನ್ನವಾದ ರೀತಿಯಲ್ಲಿ ಬೌದ್ದಿಕ ನೆಲೆಯಲ್ಲಿ ರೂಪಗೊಂಡ ನಾಟಕ. ರಾಮಯ್ಯನವರು ಅಂಬೇಡ್ಕರರವರನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದನ್ನು ನನ್ನ ಅಂಬೇಡ್ಕರ್ನಲ್ಲಿ ನೋಡಬಹುದು. ಅಂಬೇಡ್ಕರ್ ಎನ್ನುವ ಜ್ಞಾನ ಸಾಗರವನ್ನು ಒಂದು ನಾಟಕದಲ್ಲಿ ಹಿಡಿದಿಡಲಂತೂ ಸಾಧ್ಯವಿಲ್ಲಾ. ಅವರವರಿಗೆ ಸಿಕ್ಕಿದಷ್ಟು.. ದಕ್ಕಿಸಿಕೊಂಡಷ್ಟು ಅಂಬೇಡ್ಕರ್‌ರವರನ್ನು ನಾಟಕವಾಗಿಸುವ ಪ್ರಯತ್ನವನ್ನು ಹಲವಾರು ಕ್ರಿಯಾಶೀಲ ನಾಟಕಕಾರರು ಮಾಡುತ್ತಲೇ ಬಂದಿದ್ದಾರೆ. ವ್ಯಕ್ತಿಯೊಬ್ಬರ ಬದುಕು ಹಾಗೂ ಅವರ ಸೈಂದ್ದಾಂತಿಕ ಸಂಘರ್ಷಗಳನ್ನು ಕುರಿತು ನಾಟಕ ಮಾಡುವುದು ಕಷ್ಟಸಾಧ್ಯ. ಅಲ್ಲಿ ಕಥೆಗಿಂತಲೂ ಘಟನೆಗಳ ಜೋಡಣೆಯೇ ಮುಖ್ಯವಾಗಿರುತ್ತದೆ. ಒಂದು ರೀತಿಯಲ್ಲಿ ಸಾಕ್ಷ್ಯಚಿತ್ರದ ಮಾದರಿಯಲ್ಲಿ ನಾಟಕವನ್ನು ಕಟ್ಟಿಕೊಡಬಹುದಾಗಿದೆ. ನನ್ನ ಅಂಬೇಡ್ಕರ್ ಸಹ ಅದೇ ರೀತಿಯಲ್ಲಿ ಅಂಬೇಡ್ಕರ್‌ರವರ ಬದುಕಿನ ಕೆಲವಾರು ಘಟನೆಗಳನ್ನು ಜೋಡಿಸಿ ದೃಶ್ಯಗಳ ರೂಪದಲ್ಲಿ ಕಟ್ಟಿಕೊಟ್ಟಿದೆ.

ಆದರೆ.. ಹಾಗೆ ದೃಶ್ಯಗಳನ್ನು ಜೋಡಿಸುವಾಗ ಕ್ರಮಬದ್ದತೆಯಾಗಲೀ ಇಲ್ಲವೇ ಒಂದು ದೃಶ್ಯಕ್ಕೆ ಇನ್ನೊಂದು ದೃಶ್ಯ ಪೂರಕವಾಗಿ ಬೆಳೆಯುವ ರೀತಿಯಾಗಲಿ ಈ ನಾಟಕದಲ್ಲಿ ಹುಡುಕಿದರೂ ಸಿಕ್ಕುವುದಿಲ್ಲಾ. ದೃಶ್ಯಗಳು ನಾಟಕಕಾರ ಹಾಗೂ ನಿರ್ದೇಶಕರ ಚಿತ್ತ ಬಂದಂತೆ ಮೂಡಿಬಂದಿವೆ. ಇಡೀ ನಾಟಕವನ್ನು ಅಸಂಗತ ಮಾದರಿಯಲ್ಲಿ ಕೊಲ್ಯಾಜ್ ರೀತಿಯಲ್ಲಿ ಕಟ್ಟುವ ವಿಶಿಷ್ಟ ಪ್ರಯತ್ನ ಮಾಡಲಾಗಿದೆ. ಇಲ್ಲಿ ಪಾತ್ರಗಳು ಕಾಲಾತೀತವಾಗಿ ಮೂಡಿಬರುತ್ತವೆ. ಅಂಬೇಡ್ಕರ್‌ರವರನ್ನು ಆವಾಹಿಸಿಕೊಂಡು ತಾವು ಅನುಭವಿಸಿದ ಹಳವಂಡಗಳನ್ನು ರಾಮಯ್ಯನವರು ನಾಟಕವಾಗಿಸಿದ್ದಾರೆ. ಜನಸಾಮಾನ್ಯ ಪ್ರೇಕ್ಷಕರಿಗಂತೂ ಅರ್ಥವಾಗದ ನೆಲೆಯಲ್ಲಿ ಮೂಡಿಬರುವ ಈ ನಾಟಕವು ಅಂಬೇಡ್ಕರ್ ಕುರಿತು ಒಂದಿಷ್ಟು ಓದಿಕೊಂಡವರಿಗೆ ಹಾಗೂ ನಾಟಕದ ತಂತ್ರಗಾರಿಕೆಗಳ ಬಗ್ಗೆ ಅರಿವಿರುವವರಿಗೆ ಆಪ್ಯಾಯಮಾನವಾಗುವುದರಲ್ಲಿ ಸಂದೇಹವಿಲ್ಲಾ. 

ಅಂಬೇಡ್ಕರ್‌ರವರ ಜನುಮ ದಿನಾಚರಣೆಯ ಮೆರವಣಿಗೆ ಹಾಗೂ ಅವರ ಪುತ್ತಳಿಗೆ ನಾಯಕನೊಬ್ಬ ಹಾರ ಹಾಕುವುದನ್ನು ಅಂಬೇಡ್ಕರವರು ವೀಕ್ಷಿಸುವ ಮೂಲಕ ನಾಟಕ ಆರಂಭವಾಗುತ್ತದೆ. ತದನಂತರ ಅವರ ಜನುಮ ದಿನದಂದು ಮೆತ್ತಗೆ ಬಂದು ಹೂ ಕೊಡುವ ಪೌರಕಾರ್ಮಿಕರು, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಅನಾಮಿಕ ಆಧುನಿಕ ಪಾತ್ರ. ಜೊತೆಗೆ ಸ್ವತಃ ಜ್ಯೋತಿಬಾ ಪುಲೆಯವರೇ ಅವತರಿಸುವುದು, ತದನಂತರ ರಮಾಬಾಯಿಯವರ ಛಾಯೆಯೇ ಪಾತ್ರವಾಗಿ ಪ್ರವಹಿಸಿ ಪತ್ರಗಳನ್ನು ಓದುವುದು.. ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಹಲವಾರು ಅಸಂಗತ ದೃಶ್ಯಗಳು ಹಾಗೂ ಕಾಲಾತೀತ ಪಾತ್ರಗಳು ರಂಗವೇದಿಕೆಯಲ್ಲಿ ತರ್ಕಾತೀತ ನೆಲೆಯಲ್ಲಿ ಪ್ರತ್ಯಕ್ಷವಾಗುತ್ತವೆ. ಪ್ರೇಕ್ಷಕರ ಮೆದುಳಿಗೆ ಕೈಹಾಕಿ ಗೊಂದಲ ಗೋಜಲುಗಳನ್ನುಂಟುಮಾಡುತ್ತವೆ. ಇದ್ದಕ್ಕಿದ್ದಂತೆ ಅಂಬೇಡ್ಕರ್‌ರವರ ಬಾಲ್ಯದ ಕೆಲವು ನೆನಪುಗಳು, ಬರೋಡದಲ್ಲಿ ಇರಲು ಜಾಗ ಸಿಗದೇ ಸುಳ್ಳು ಹೇಳಿ ಪಾರ್ಸಿ ನಿವಾಸದಲ್ಲಿದ್ದು ಹೊರಹಾಕಿಸಿಕೊಂಡ ದೃಶ್ಯಗಳು ಅಚಾನಕ್ಕಾಗಿ ಬಂದು ಹೋಗುತ್ತವೆ. ನಾಟಕಗಳಿಗೆ ರೂಪಕತೆ ಇರಬೇಕು ಆದರೆ ಅವು ಪ್ರೇಕ್ಷಕರನ್ನು ಗೊಂದಲದಲ್ಲಿ ಸಿಕ್ಕಿಸಿ ಪರದಾಡುವಂತೆ ಮಾಡಬಾರದು. ಮುಕ್ಕಾಲು ಭಾಗ ನಾಟಕ ಮಾಡುವುದೂ ಇದನ್ನೇ. ನಾಟಕದ ತಲೆಬುಡ ಅರ್ಥವಾಗದೇ ಇನ್ನೇನು ಪ್ರೇಕ್ಷಕರು ಆಕಳಿಸಿ ಎದ್ದುಹೋಗಬೇಕು ಎನ್ನುವುದರೊಳಗೇ ಗಾಂಧಿ ಪಾತ್ರ ಪ್ರವೇಶಿಸಿದಾಗ ನಾಟಕದ ದಿಕ್ಕೇ ಬದಲಾಗಿ ಹೋಗುತ್ತದೆ. ನಿಜವಾದ ನಾಟಕ ಶುರುವಾಗುವುದೇ ಅಲ್ಲಿಂದಾ.. ನಾಟಕ ಇಡೀಯಾಗಿ ಯಾವುದನ್ನೂ ನೆಟ್ಟಗೆ ಕಟ್ಟಿಕೊಡದೇ ಹೋದರೂ ಬಿಡಿಯಾಗಿ ಕೆಲವು ದೃಶ್ಯಗಳು ಹಾಗೂ ಅದರಲ್ಲಿ ಮೂಡಿಬರುವ ರೂಪಕಾತ್ಮಕ ಮಾರ್ಮಿಕ ಸಂಭಾಷಣೆಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.

ನಾನೊಬ್ಬ ದಲಿತ ಪ್ರಜ್ಞೆಯ ನಾಟಕಕಾರ.. ನನಗೆ ಅಂಟಿಕೊಂಡ ದಲಿತ ಎನ್ನುವ ಪದದಿಂದ ಅವಮಾನ ಅಭಿಮಾನ ಅನುಕೂಲ ಹಾಗೂ ಅನಾನೂಕೂಲಗಳಾಗಿವೆ.. ಜಾತಿ ಲೇಬಲ್ ಅಂಟಿದ್ದರಿಂದ ನನ್ನ ಪ್ರಜ್ಞೆ ಆಲೋಚನೆ ಬರವಣಿಗೆ ಕ್ರಿಯೆ ಎಲ್ಲವೂ ಒಂದು ನಿರ್ದಿಷ್ಟ ನಿರ್ದೇಶನ ಹಾಗೂ ನಿರ್ಬಂಧಕ್ಕೆ ಒಳಪಟ್ಟಿದೆ, ಇಂತಹ ಸಂಕಟ ಹಾಗೂ ಗೊಂದಲದ ನಡುವೆ ಬಾಬಾಸಾಹೇಬರ ಮೇಲೆ ನಾಟಕ ಬರೆದಿದ್ದೇನೆ... ನನ್ನ ಅಂಬೇಡ್ಕರ್ ಬೇರೆಯದೇ ಅಂಬೇಡ್ಕರ್.. ಎಂದು ನಾಟಕಕಾರ ರಾಮಯ್ಯನವರೆ ತಮ್ಮದೇ ಪಾತ್ರವನ್ನು ಸೃಷ್ಟಿಮಾಡಿ ಆತ್ಮನಿವೇದನೆ ಮಾಡಿಕೊಳ್ಳುತ್ತಾ ತಮ್ಮ ಮಿತಿ ಹಾಗೂ ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತಾರೆ. ಇದು ತಾನು ಕಂಡ ಅಂಬೇಡ್ಕರ್ ಎಂದು ಹೇಳಿ ಪ್ರೇಕ್ಷಕರ ನಿರೀಕ್ಷಣಾ ಜಾಮೀನು ಪಡೆದೇ ನಾಟಕವನ್ನು ಆರಂಭಿಸುತ್ತಾರೆ. ನಾಟಕದಿಂದ ಹುಟ್ಟಿಕೊಳ್ಳಬಹುದಾದ ವಾದವಿವಾದಗಳಿಗೆ ಸಮರ್ಥನೆ ಕೊಡುತ್ತಾರೆ. ಇದೊಂದು ಪ್ರಯೋಗಶೀಲ ನಾಟಕ. ಪ್ರಯೋಗ ಹೌದೋ ಅಲ್ಲವೋ ಗೊತ್ತಿಲ್ಲಾ ಆದರೆ ಶೀಲ ಅಂತೂ ಇದ್ದೇ ಇರುತ್ತದೆ.. ಎಂದು ನಾಟಕಕಾರನ ಪಾತ್ರ ಹೇಳಿದ್ದು ನಾಟಕದಾದ್ಯಂತ ಸತ್ಯವಾಗಿದೆ. ಪ್ರಯೋಗ ಫೇಲಾದರೂ ಶೀಲ ಪಾಸಾಗಿದೆ. ಅಂಬೇಡ್ಕರ್ ಕುರಿತ ಕೆಲವು ವಿಚಾರಗಳು ಆಗಾಗ ಮನಮುಟ್ಟುತ್ತವೆ.
  
ಇವರಿಗೆ ನಾನಾಗಲೀ ನನ್ನ ಆಲೋಚನೆಗಳಾಗಲೀ ಬೇಕಾಗಿಲ್ಲಾ. ನನ್ನ ಹೆಸರೊಂದಿದ್ದರೆ ಸಾಕು. ಈ ಹೆಸರಿನ ಹಿಂದೆ ನಡೆದು ಬಂದ ವಿಸ್ತಾರವಾದ ಚರಿತ್ರೆಯ ಹೆಜ್ಜೆಗಳು ಇದ್ದಾವೆಂಬ ಅರಿವೂ ಇವರಿಗಿಲ್ಲಾ.. ನನ್ನ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಪೀಳಿಗೆ ಬಂದೇ ಬರುತ್ತದೆಂಬ ಭರವಸೆ ನಂದು.. ಎಂದು ಈ ನಾಟಕದ ಅಂಬೇಡ್ಕರ್ ಬೇಸರ ಹಾಗೂ ಭರವಸೆಯನ್ನು  ವ್ಯಕ್ತಪಡಿಸುತ್ತಾರೆ. ಇದು ಸತ್ಯವೂ ಸಹ. ಈಗ ಅಂಬೇಡ್ಕರ್ ಹೆಸರು ಅವರ ವಿಚಾರಗಳಿಗಿಂತಾ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಅಂಬೇಡ್ಕರ್‌ರವರನ್ನು ಶತಾಯ ಗತಾಯ ವಿರೋಧಿಸಿ ಅವರನ್ನು ಕಾನೂನು ಮಂತ್ರಿ ಸ್ಥಾನದಿಂದ ರಾಜೀನಾಮೆಕೊಡುವಂತೆ ಮಾಡಿ, ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅಂಬೇಡ್ಕರ್ ಹೆಸರು ಮತಗಳಿಕೆಗೆ ಬೇಕಾಗಿದೆ. ಬಾಬಾಸಾಹೇಬರ ವಿಚಾರಗಳು ಎಲ್ಲಿ ತಮ್ಮ ವೈದಿಕಶಾಹಿ ಮನುವಾದಿ ಬೇರುಗಳನ್ನು ಸಡಿಲಗೊಳಿಸುತ್ತವೋ ಎಂದು ವಿರೋಧಿಸುತ್ತಲೇ ಬಂದಿದ್ದ ಬಲಪಂಥೀಯ ಸಂಘಪರಿವಾರವೂ ಸಹ ಇಂದು ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ದಲಿತ ಸಮುದಾಯವನ್ನು ಮರಳು ಮಾಡುತ್ತಿದೆ. ಅಷ್ಟೇ ಯಾಕೆ ಸ್ವತಃ ದಲಿತ ಸಮುದಾಯದ ನಾಯಕರುಗಳೇ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಬದ್ಧರಾಗಿದ್ದಾರೆ. ಯಾವಾಗ ಅಂಬೇಡ್ಕರ್ ಹೆಸರು ಓಟು ಗಳಿಸಲು ಹಾಗೂ ಅಧಿಕಾರ ಪಡೆಯಲು ಮತ್ತು ವ್ಯವಸ್ಥೆಯಲ್ಲಿ ಫಲಾನುಭವಿಯಾಗಲು ಮೆಟ್ಟಿಲಾಯಿತೋ ಆಗ ಎಲ್ಲರೂ ಆ ಅವಕಾಶವನ್ನು ಬಳಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಅವಕಾಶವಾದಿಗಳ ಕುರಿತು ನಾಟಕದಾರಂಭದಲ್ಲೇ ಅಂಬೇಡ್ಕರ್ ಪಾತ್ರ ಬೇಸರ ವ್ಯಕ್ತಪಡಿಸಿರುವುದು ಪ್ರಸ್ತುತ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಹಾಗೂ ಮುಂದಿನ ಪೀಳಿಗೆಯಾದರೂ ಅಂಬೇಡ್ಕರ್‌ರವರ ವಿಚಾರವನ್ನು ಅರ್ಥಮಾಡಿಕೊಳ್ಳಬಹುದು ಎನ್ನುವ ಆಶಾವಾದವನ್ನೂ ಈ ನಾಟಕ ವ್ಯಕ್ತಪಡಿಸುತ್ತದೆ.


1922 ಮಾರ್ಚ 20ರಂದು ಅಂಬೇಡ್ಕರರ ನೇತೃತ್ವದಲ್ಲಿ ನಡೆದ ಚೌದಾರ್ ಕೆರೆಗೆ ಅಸ್ಪೃಶ್ಯರ ಪ್ರವೇಶದ ಸನ್ನಿವೇಶ ಹಾಗೂ ಸವರ್ಣೀಯರ ದಾಳಿ ಮತ್ತು ಪುರೋಹಿತರ ಶುದ್ದೀಕರಣದ ದೃಶ್ಯವನ್ನು ಸಾಂಕೇತಿಕವಾಗಿ ಒಂದೇ ನಿಮಿಷದಲ್ಲಿ ತೋರಿಸಿದ ರೀತಿ ಅನನ್ಯವಾಗಿದೆ. ಅದೇ ಕೆರೆಯ ನೀರನ್ನು ಗಾಂಧಿ ಕುಡಿಯುತ್ತಿರುವ ಸಂದರ್ಭದಲ್ಲಿ ಬಾಬಾಸಾಹೇಬರು ಯಾರು ಎಂದು ಕೇಳಿದಾಗ. ನಾನಯ್ಯಾ ಧರ್ಮಾ ಎನ್ನುವ ಗಾಂಧಿ ಮಾತು ಹಾಗೂ ನಿಮ್ಮ ಧರ್ಮ ನೀರಲ್ಲಿ ಹೂತು ಹೋಗಿದೆಯೇನು? ಎಂದು ಪ್ರಶ್ನಿಸುವ ಅಂಬೇಡ್ಕರರ ಪ್ರತಿಕ್ರಿಯೆ ಎಷ್ಟೊಂದು ಅರ್ಥಗಳನ್ನು ದ್ವನಿಸುವಂತಿದೆ. ವಾಸ್ತವ ಹಾಗೂ ಕಲ್ಪನೆ ಎರಡನ್ನೂ ಸೇರಿಸಿ ಕಟ್ಟಿದ ಗಾಂಧಿ ಮತ್ತು ಅಂಬೇಡ್ಕರರ ಸಂವಾದ ಮಾರ್ಮಿಕವಾಗಿದೆ. ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಗಾಂಧಿ ಅಂಬೇಡ್ಕರರವರಿಗೆ ಹೇಳಿದಾಗ ನಾನು ದೇಶದ ಬಗ್ಗೆ ಮಾತಾಡುವಾಗ ನೀವು ದೇಹದ ಬಗ್ಗೆ ಮಾತಾಡ್ತೀರಾ. ದೇಹದ ಬಗ್ಗೆ ಮಾತಾಡುವಾಗ ದೇಶದ ಕುರಿತು ಮಾತಾಡ್ತೀರಾ.. ಎಂದು ಹೇಳುವ ಬಾಬಾಸಾಹೇಬರು ಗಾಂಧೀಜಿಯ ತಂತ್ರಗಾರಿಕೆಯನ್ನು ಮಾತಿನಲ್ಲೇ ಚುಚ್ಚುತ್ತಾರೆ. ನಮ್ಮಿಬ್ಬರ ನಡುವಿನ ಬೇಟಿ ಇಬ್ಬರು ವ್ಯಕ್ತಿಗಳದ್ದಾಗಿರದೇ ಎರಡು ಹಿತಾಸಕ್ತಿಗಳದ್ದಾಗಿತ್ತು.. ಎನ್ನುವ ಅಂಬೇಡ್ಕರರ ಮಾತಂತೂ ಮೇಲ್ವರ್ಗದ ಪರವಾಗಿರುವ ಗಾಂಧೀಜಿಯನ್ನು ವಿಮರ್ಶೆ ಮಾಡುವಂತಿತ್ತು. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಿಂತಾ ಪರಸ್ಪರ ಘಾಸಿಮಾಡಿಕೊಳ್ತಿದ್ದೇವೆ ಎನ್ನುವ ಗಾಂಧೀಜಿಗೆ ಪ್ರತಿ  ಸಲ ತೀರ್ಮಾನಿಸುವ ಅವಕಾಶ ನನ್ನ ಕೈಜಾರಿ ನಿಮ್ಮದಾಗಿದೆ... ಚಿಕ್ಕ ಮಕ್ಕಳಂತೆ ರಚ್ಚೆ ಹಿಡಿದು ನನ್ನ ಮುಷ್ಟಿಯಲ್ಲಿದ್ದದ್ದನ್ನು ಬಾಚಿ ಕಿತ್ಕೊಂಡ್ರಿ.. ಯಾಕೆ ಗಾಂಧೀಜಿ ಹೇಳಿ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ನಿಮ್ಮ ಮುಷ್ಟಿಯಲ್ಲಿ ಹಿಂದೂ ಧರ್ಮದ ಜುಟ್ಟಿತ್ತು, ದೇಶದ ಭವಿಷ್ಯದ ಗುಟ್ಟೂ ಇತ್ತೂ.. ಅವೆರಡರ ಅಳಿವೂ ಉಳಿವೂ ನನ್ನ ಪ್ರಾಣವೇ ಆಗಿತ್ತು.. ಅದಕ್ಕಾಗಿ ನಿಮ್ಮ ಪ್ರತ್ಯೇಕ ಮತದಾನದ ಹಕ್ಕಿಗೆ ನಾನು ಅಡ್ಡನಿಂತಿದ್ದು.. ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಗಾಂಧೀಜಿ ತಮ್ಮ ತಂತ್ರಗಾರಿಕೆಗಳಿಗೆ ಸಮರ್ಥನೆ ಕೊಡುತ್ತಾರೆ. ಈ ದೃಶ್ಯದಲ್ಲಿ ಅಂಬೇಡ್ಕರರ ಪ್ರಶ್ನೆಗಳು ಹಾಗೂ ಅದಕ್ಕೆ ಗಾಂಧೀಜಿ ಕೊಡುವ ಸಮರ್ಥನೆಗಳನ್ನು ಕೇಳಿಸಿಕೊಳ್ಳುವುದೇ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ. ಹಿಂದುತ್ವದ ಕುರಿತು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗಾಂಧೀಜಿಗೆ ಹಿಂದುತ್ವವಾದಿಗಳೇ ಹಾಕಿದ ಗುಂಡು ಅವರಿಬ್ಬರ ಮಾತುಗಳ ಮೊಟಕುಗೊಳಿಸಿ ನೋಡುಗರನ್ನು ಬೆರಗುಗೊಳಿಸಿತು. ಜೊತೆಗೆ ಬೆರಗಿನ ರೂಪಕವೊಂದು ರಂಗದಂಗಳದಲ್ಲಿ ಪ್ರಸ್ತುತಗೊಂಡಿತು. 

ಓ ನನ್ನ ಕರುಣಾಜನಕ ಕುಬ್ಜ ಆಲದ ಮರವೇ.. ಈ ನಿನ್ನ ಗಂಟು ಗಂಟು ಪ್ರಾಚೀನ ರೋಗಾಣುಗಳ ಗೂಡು. ನಾನಂತೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲಾ, ನನ್ನವರು ಯಾರೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲಾ.. ಎಂದು ಕುಬ್ಜವಾದ ಆಲದ ಮರವನ್ನು ನೋಡಿ ನಾಟಕದ ಕೊನೆಗೆ ಅಂಬೇಡ್ಕರ್ ಹೇಳುವ ಮಾತುಗಳು ಅದೆಷ್ಟು ಪ್ರತಿಮಾತ್ಮಕವಾಗಿವೆ ಎಂದರೆ ದೇಶವನ್ನು ಆಕ್ರಮಿಸಿಕೊಂಡ ಮನುವಾದಿ ಪ್ರೇರಿತ ಹಿಂದುತ್ವ ಎನ್ನುವ ಆಲದ ಮರದ ನೆರಳೂ ದಲಿತ ದುಡಿಯುವ ವರ್ಗಗಳಿಗೆ ಮಾರಕವಾಗಿದೆ ಹಾಗೂ ಅದರ ನೆರಳಿಂದ ಹೊರಗೆ ಬರುವುದರಲ್ಲಿ ದಮನಿತರ ವಿಮೋಚನೆ ಇದೆ ಎಂಬುದನ್ನು ಆಲದ ಮರದ ರೂಪಕದಲ್ಲಿ ಹೇಳಿದ್ದು ಈ ನಾಟಕದ ಅತ್ಯಂತ ಮನನೀಯ ಅಂಶವಾಗಿದೆ. ವೈದಿಕಶಾಹಿ ಸಂತಾನ ಈಗ ಹಿಂದುತ್ವವಾದದ ಉನ್ಮಾದವನ್ನು ಶೂದ್ರವರ್ಗಗಳಲ್ಲಿ ತುಂಬಿ, ಆಹಾರದ ಹಕ್ಕನ್ನು ಹರಣ ಮಾಡಿ, ದಲಿತರ ಮೇಲೆ ಹಲ್ಲೆ ಮಾಡುತ್ತಿರುವಾಗ ಹಿಂದುತ್ವದ ನೆರಳಿನಿಂದ ಹೊರಬರಬೇಕು ಎನ್ನುವ ಈ ನಾಟಕದ ಅಂತ್ಯದ ಆಶಯ ನಿಜಕ್ಕೂ ಅರ್ಥಗರ್ಭಿತವಾಗಿದೆ. ಕೊನೆಗೆ ಬಾಬಾಸಾಹೇಬರು ಬೌದ್ದ ಧರ್ಮ ಸ್ವೀಕರಿಸಿ ಬಿಕ್ಕುಗಳ ಜೊತೆಗೆ ಬುದ್ದಂ ಶರಣಂ ಗಚ್ಚಾಮಿ ಹೇಳುತ್ತಾ ಹೊರಡುವುದರ ಮೂಲಕ ನಾಟಕ ಕೊನೆಗೊಳ್ಳುತ್ತದೆ. ಕೊಟ್ಟ ಕೊನೆಯ ಎರಡು ದೃಶ್ಯಗಳು ನೋಡುಗರನ್ನು ಇನ್ನಿಲ್ಲದಂತೆ ಕಾಡುತ್ತವೆ.
    
ನಾಟಕದಾರಂಭದಲ್ಲಿ ಶುರುವಾದ ಮೂರುವರೆ ನಿಮಿಷಗಳಷ್ಟು ಸುದೀರ್ಘವಾದ ಬಾಬಾರೋ ಬಾರೋ ರಣಧೀರ.. ಸಿನೆಮಾ ಹಾಡಿನ ಹಿನ್ನೆಲೆ ಸಂಗೀತದ ಅಬ್ಬರ ಕೇಳುಗರ ಸಹನೆಯನ್ನು ಕೆಣಕುವಂತಿತ್ತು ಹಾಗೂ ಈ ಸಿನೆಮಾ ಟ್ಯೂನ್ ಇಲ್ಲಿ ಬೇಡವಾಗಿತ್ತು. ಒಂದೇ ಮಾತರಂ.. ಎನ್ನುವ ಬಲಪಂಥೀಯರ ರಾಷ್ಟ್ರೀಯ ಗೀತೆಯ ಸಂಗೀತವನ್ನು ಯಾಕೆ ಇಲ್ಲಿ ಈ ಅಂಬೇಡ್ಕರ್ ನಾಟಕದಲ್ಲಿ ಬಳಸಿಕೊಳ್ಳಲಾಗಿದೆಯೋ ನಿರ್ದೇಶಕರೇ ಹೇಳಬೇಕು. ಕೆಲವು ಹೋರಾಟದ ಹಾಡುಗಳನ್ನು ಅದೇ ತೀವ್ರತೆಯಲ್ಲೇ ಬಳಸಿಕೊಳ್ಳಲಾಗಿದೆ. ಎಚ್ಚರ..ಎಚ್ಚರ.. ಇದು ಮೋಹದ ಕಾಲಾ.. ಇದು ದ್ರೋಹದ ಕಾಲಾ.. ಹಾಡಲ್ಲಿ ಆಕ್ರೋಶ ಅತಿಯಾಯಿತು. ಬಳಸಿದ ಕೆಲವು ಹಾಡುಗಳ ವೇಗ ಮತ್ತು ಅಬ್ಬರ  ಎಷ್ಟಿತ್ತೆಂದರೆ ಸಾಹಿತ್ಯದ ಸಾಲುಗಳೇ ಅರ್ಥವಾಗದಷ್ಟು. 

ಮೂರು ವಿವಿಧ ವಯೋಮಾನದ ಅಂಬೇಡ್ಕರ್‌ಗಳನ್ನು ನಾಟಕದಲ್ಲಿ ಸೃಷ್ಟಿಸಲಾಗಿದೆ. ತಾಂತ್ರಿಕವಾಗಿ ಈ ಪಾತ್ರಸೃಷ್ಟಿ ಸೊಗಸಾಗಿದೆಯಾದರೂ ಪಾತ್ರಗಳ ಆಗಮನ ಕ್ರಮಬದ್ದವಾಗಿಲ್ಲದೆ ಇರುವುದರಿಂದ ಕೆಲವೊಮ್ಮೆ ನೋಡುಗರಿಗೆ ಗೊಂದಲವಾಗಿದೆ. ಕಲಾವಿದರುಗಳು ಇನ್ನೂ ಆಡುವ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕಿದೆ. ಪ್ರತಿ ಸಂಭಾಷಣೆಯಲ್ಲೂ ಸ್ಪಷ್ಟತೆ ರೂಢಿಸಿಕೊಳ್ಳಬೇಕಿದೆ. ಯುವ ಅಂಬೇಡ್ಕರ್ ಪಾತ್ರಕ್ಕೆ ಬಸವರಾಜು ಜೀವ ತುಂಬಲು ಪ್ರಯತ್ನಿಸಿದರೆ, ಸೀನಿಯರ್ ಅಂಬೇಡ್ಕರ್ ಆಗಿ ರಾಕೇಶ್ ಪಾತ್ರವೇ ಆಗಿದ್ದಾರೆ. ಗಾಂಧಿ ಪಾತ್ರಕ್ಕೆ ಹರಿಕಥೆ ಮಂಜು ವಿಶಿಷ್ಟ ಮಾತಿನ ಶೈಲಿಯನ್ನು ಬಳಸಿ ನೋಡುಗರ ಗಮನ ಸೆಳೆಯುತ್ತಾರೆ. ಸಾಣೇಹಳ್ಳಿ ಹಾಗೂ ರಂಗಾಯಣದಲ್ಲಿ ತರಬೇತಾದ ನಾಲ್ಕಾರು ಜನರನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಪಾತ್ರದಾರಿಗಳೂ ಸಹ ಗ್ರಾಮೀಣ ಪ್ರದೇಶದವರಾಗಿದ್ದು ಅಭಿನಯದ ಕಲಿಕೆಯಲ್ಲಿದ್ದಾರೆ. ಇನ್ನೂ ಕಲಿಕೆಯ ಹಂತದಲ್ಲಿರುವ ಯುವಕ ಯುವತಿಯರನ್ನು ಪಾತ್ರವಾಗಿಸುವಲ್ಲಿ ಪ್ರಮೋಧ ಶಿಗ್ಗಾವ್‌ರವರು ಅಪಾರ ಪರಿಶ್ರಮ ವಹಿಸಿದ್ದು ನಾಟಕದಾದ್ಯಂತ ಕಂಡುಬರುತ್ತದೆ.

ನಿರ್ದೇಶನದ ಜೊತೆಗೆ ರಂಗವಿನ್ಯಾಸ ಹಾಗೂ ವಸ್ತ್ರವಿನ್ಯಾಸದ ಹೊಣೆಗಾರಿಕೆಯನ್ನೂ ಸಹ ಶಿಗ್ಗಾಂವರವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರತಿ ದೃಶ್ಯಕ್ಕೆ ಬಳಸಿದ ಸೆಟ್‌ಗಳು ನಾಟಕದಾದ್ಯಂತ ಗಮನಸೆಳೆಯುವಲ್ಲಿ ಯಶಸ್ವಿಯಾದವು. ಪಾತ್ರದಾರಿಯನ್ನೇ ಅಂಬೇಡ್ಕರ್ ಪುತ್ತಳಿಯನ್ನಾಗಿಸಿ ನಿಲ್ಲಿಸಿದ್ದು, ಕಂದೀಲುಗಳನ್ನು ಸಂಕೇತವಾಗಿ ಬಳಸಿದ್ದು, ಪಾರ್ಸಿ ವಸತಿಗೃಹದ ಕೋಣೆಯನ್ನೇ ಸೃಷ್ಟಿಸಿದ್ದು, ಸೈಕಲ್ಲನ್ನೂ ಸಹ ರೂಪಕವಾಗಿ ಉಪಯೋಗಿಸಿದ್ದು ನಾಟಕದ ದೃಶ್ಯಗಳ ಅರ್ಥವ್ಯಾಪ್ತಿಯನ್ನು ವಿಸ್ತರಿಸುವಂತಿದ್ದವು. ದೃಶ್ಯ ಜೋಡಣೆಯಲ್ಲಿ ಹಾಗೂ ಪಾತ್ರ ಸೃಷ್ಟಿಯಲ್ಲಿ ಕೆಲವೊಂದು ಗೋಜಲುಗಳಿದ್ದರೂ ರಂಗವಿನ್ಯಾಸದ ಮಜಲುಗಳು ಮಾತ್ರ ನಾಟಕದ ಮೆರುಗನ್ನು ಹೆಚ್ಚಿಸಿದವು. ದೃಶ್ಯಗಳಿಗೆ ಪೂರಕವಾಗಿ ನವೀನ್ ವಿನ್ಯಾಸಗೊಳಿಸಿದ ಬೆಳಕಿನ ಸಂಯೋಜನೆ ಮೂಡಿಬಂದಿತಾದರೂ ಇನ್ನೂ ಮೂಡ್ ಸೃಷ್ಟಿಸುವಲ್ಲಿ ಬೆಳಕಿನ ಬಣ್ಣಗಳ ಬಳಕೆ ಅಗತ್ಯವಿತ್ತು. ರಾಮಕೃಷ್ಣ ಬೆಳ್ತೂರರ ಪ್ರಸಾದನ ಪ್ರತಿ ವ್ಯಕ್ತಿಯನ್ನೂ ಪಾತ್ರವಾಗಿಸುವ, ಪ್ರತಿ ಪಾತ್ರವನ್ನೂ ಗಮನಾರ್ಹವಾಗಿಸುವ ಕೆಲಸದಲ್ಲಿ ಸಫಲವಾಯಿತು.

ನನ್ನ ಅಂಬೇಡ್ಕರ್ ನಾಟಕವನ್ನು ರಾಮಯ್ಯನವರು ಸಾಣೇಹಳ್ಳಿಯ ಶ್ರೀಮಠದ ಶಿವಸಂಚಾರ ರೆಪರ್ಟರಿಗಾಗಿ ಬರೆದಿದ್ದು ಶಿವಸಂಚಾರದಿಂದ ಈಗಾಗಲೇ ಮೂವತ್ತೈದಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಆ ನಾಟಕವನ್ನೂ ಸಹ ಪ್ರಮೋದ್ ಶಿಗ್ಗಾಂವ್‌ರವರೇ ನಿರ್ದೇಶಿಸಿದ್ದರು. ಈಗ ಕಾಪಾಲಿಕ ತಂಡಕ್ಕೆ ಈ ನಾಟಕ ಮರುನಿರ್ಮಾಣಗೊಂಡಿದೆ. ಶಿವಸಂಚಾರದಲ್ಲಿ ಈ ನಾಟಕ ಮಾಡಿದ ನಾಲ್ಕಾರು ಕಲಾವಿದರನ್ನೂ ಕರೆಸಿಕೊಂಡು ನಾಟಕವನ್ನು ಮರುಸೃಷ್ಟಿ ಮಾಡಲಾಗಿದೆ. 

ಕೋಲಾರದ ತೇರಹಳ್ಳಿಬೆಟ್ಟದಲ್ಲಿ ತಾವೇ ಕಟ್ಟಿದ್ದ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಹೊರಬಂದ ನಂತರ ಕೋಟಗಾನಹಳ್ಳಿ ರಾಮಯ್ಯನವರು ಕಾಪಾಲಿಕ ಎನ್ನುವ ಅರೆಕಾಲಿಕ ರೆಪರ್ಟರಿ ರಂಗ ತಂಡವನ್ನು ಕಟ್ಟಿದ್ದಾರೆ. ಈ ತಂಡದ ಮೊಟ್ಟಮೊದಲ ನಾಟಕವಾಗಿ ನನ್ನ ಅಂಬೇಡ್ಕರ್ ನಿರ್ಮಾಣಗೊಂಡಿದೆ. ಗ್ರಾಮೀಣ ಪ್ರದೇಶದ ಸಂಪನ್ಮೂಲಗಳು ಹಾಗೂ ಕಲಾವಿದರುಗಳನ್ನು ಒಗ್ಗೂಡಿಸಿಕೊಂಡು ಕೋಲಾರದ ತೇರಹಳ್ಳಿಬೆಟ್ಟದ ಗುಡ್ಡುಗಾಡಿನ ಹಳ್ಳಿಗಳಲ್ಲಿ ರಂಗ ಚಟುವಟಿಕೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವ ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ನಾಟಕಕಾರ ಹಾಗೂ ಸಂಘಟಕ ರಾಮಯ್ಯನವರು ನಿಜಕ್ಕೂ ಅಭಿನಂದನಾರ್ಹರು. ಆದರೆ... ಸರಕಾರಿ ಪ್ರಾಜೆಕ್ಟ್ ಆಗಿರುವ ಅಂಬೇಡ್ಕರ್ ನಾಟಕೋತ್ಸವದ ಸಾಂಸ್ಕೃತಿಕ ಸಮಿತಿಯ ನೇತೃತ್ವವನ್ನು ವಹಿಸಿರುವ ರಾಮಯ್ಯನವರು ತಾವೇ ರಚಿಸಿದ ನಾಟಕ ಹಾಗೂ ತಮ್ಮದೇ ನೇತೃತ್ವದ ರಂಗತಂಡವನ್ನು ತಾವೇ ಆಯ್ಕೆ ಮಾಡಿ ಒಂದೂವರೆ ಲಕ್ಷ ಹಣವನ್ನು ಪಡೆದಿದ್ದು ಪ್ರಶ್ನಾರ್ಹವಾಗಿದೆ. ಇದೇ ನೆಪದಲ್ಲಿ ತಯಾರಾದ ಈ ನಾಟಕ ರಾಜ್ಯಾದ್ಯಂತ ಇನ್ನೂ ಹೆಚ್ಚು ಪ್ರದರ್ಶನ ಕಾಣುವಂತಾಗಲಿ. ರಾಮಯ್ಯನವರ ಅಂಬೇಡ್ಕರ್ ಹೆಚ್ಚು ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸಬಹುದಾಗಿದೆ. 

                               -ಶಶಿಕಾಂತ ಯಡಹಳ್ಳಿ    


 (ಪೋಟೋ ಕರ್ಟಸಿ ಥಾಯ್ ಲೋಕೇಶ್)




ಶುಕ್ರವಾರ, ಜುಲೈ 21, 2017

ಕಲಬುರಗಿ ರಂಗಾಯಣ; ನಿಷ್ಕ್ರೀಯತೆಗೆ ಅನಾನುಕೂಲಗಳೇ ಕಾರಣ:

ಆಡಳಿತಾಧಿಕಾರಿಯ ಅಸಹಕಾರ; ರಂಗಾಯಣದ ಕಲಾವಿದರು ತತ್ತರ :



ಸಧ್ಯ ಕಲಬುರಗಿ ರಂಗಾಯಣಕ್ಕೆ ಕಲಾವಿದರುಗಳು ಹಾಗೂ ನಿರ್ದೇಶಕರ ಆಯ್ಕೆ ಆಯ್ತಲ್ಲಾ, ಇನ್ನು ಮೇಲೆ ಅಲ್ಲಿ ರಂಗಚಟುವಟಿಕೆಗಳು ಗರಿಗೆದರುತ್ತವೆ ಎಂದು ಕಲಬುರಗಿಯ ರಂಗಾಸಕ್ತರ ಜೊತೆಗೆ ಇಡೀ  ಕರ್ನಾಟಕದ ರಂಗಕರ್ಮಿಗಳು ನಿಟ್ಟುಸಿರಿಟ್ಟಿದ್ದರು. ಯಾಕೆಂದರೆ ಈ ಹಿಂದೆ ಅಲ್ಲಿ ರಂಗಾಯಣದ ಕಲಾವಿದರು ಹಾಗೂ ನಿರ್ದೇಶಕರಾಗಿದ್ದ ಹುಡಗಿ ಮಾಸ್ತರ್ ನಡುವೆ ಹಾದಿ ಬೀದಿ ಜಗಳಗಳೇ ಆಗಿ ಹೋಗಿ ಪೊಲೀಸ್ ಕೇಸ್‌ಗಳಾಗಿದ್ದವು. ಈ ರಂಗಾಯಣದೊಳಗಿನ ಆಂತರಿಕ ಹಾಗೂ ಬಾಹ್ಯ ಸಂಘರ್ಷಗಳಿಂದ ಬೇಸತ್ತು ಹೋದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2016 ಜುಲೈ 26 ರಂದು ನಿರ್ದೇಶಕರ ಜೊತೆಗೆ ಅಲ್ಲಿರುವ ಎಲ್ಲಾ ಕಲಾವಿದರನ್ನೂ ಮನೆಗೆ ಕಳುಹಿಸಿ ತನ್ನ ಮಾನ ಉಳಿಸಿಕೊಳ್ಳಲು ನೋಡಿತು. ಮತ್ತೆ ಕಲಾವಿದರು ಹಾಗೂ ನಿರ್ದೇಶಕರ ಆಯ್ಕೆ ಮಾಡುವ ಆಸಕ್ತಿಯೇ ಸರಕಾರಕ್ಕೆ ಇಲ್ಲವಾಗಿತ್ತು. ರಂಗಸಮಾಜದವರನ್ನೂ ಸಹ ಗುಲಬರ್ಗಾ ಹಾಗೂ ಶಿವಮೊಗ್ಗ ರಂಗಾಯಣದ ಹಗರಣಗಳು ಹೈರಾಣು ಮಾಡಿದ್ದವು. ಅಪ್ಪ ಅಮ್ಮಂದಿರಿಗೇ ಬೇಡದ ಕೂಸಾದ ಈ ಎರಡೂ ರಂಗಾಯಣಗಳು ಅನಾಥವಾಗಿ ನಿಷ್ಕ್ರೀಯವಾಗಿದ್ದವು. 

ಕೊನೆಗೆ ಕೆಲವು ಪ್ರಜ್ಞಾವಂತ ರಂಗಕರ್ಮಿಗಳ ಒತ್ತಾಯ ಹಾಗೂ ರಂಗಸಮಾಜದ ಸದಸ್ಯರಾಗಿರುವ ಪ್ರೊ.ಜಿ.ಕೆ.ಗೋವಿಂದರಾವ್‌ರವರು ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದ ಪರಿಣಾಮದಿಂದಾಗಿ ಹತ್ತು ತಿಂಗಳುಗಳ ನಂತರ ಅಳೆದು ಸುರಿದು ನಿರ್ದೇಶಕರ ಆಯ್ಕೆಯನ್ನು ಮಾಡಲಾಯಿತು. ಅದಕ್ಕಿಂತ ಎರಡು ತಿಂಗಳು ಮೊದಲೇ ಈ ಎರಡೂ ರಂಗಾಯಣಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಯಡವಟ್ಟು ನಿರ್ಧಾರವನ್ನೂ ತೆಗೆದುಕೊಳ್ಳಲಾಗಿತ್ತು. ಆಯ್ಕೆಯಾಗಿ ಬಂದ ಕಲಾವಿದರುಗಳಿಗೆ ಆದೇಶಗಳನ್ನು ಕೊಡಲು ನಿರ್ದೇಶಕರೇ ಇಲ್ಲದ್ದರಿಂದ ಕಲಾವಿದರೆಲ್ಲಾ ಸಂಬಳ ತೆಗೆದುಕೊಂಡು ಕಾಲಹರಣ ಮಾಡಿಕೊಂಡಿದ್ದರು. ಅಂತೂ ಇಂತೂ 2017 ಮೇ 25ರಂದು ನಡೆದ ಸಭೆಯಲ್ಲಿ ಸಂಭಾವ್ಯ ನಿರ್ದೇಶಕರುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂತೂ ಇಂತೂ ಜೂನ್ 14 ರಂದು ಸಂಸ್ಕೃತಿ ಇಲಾಖೆಯ ಸಚಿವಾಲಯದಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಅಂತಿಮ ಆದೇಶ ಹೊರಬಿತ್ತು. ಮೈಸೂರು ರಂಗಾಯಣಕ್ಕೆ ಭಾಗೀರತಿಬಾಯಿ ಕದಂ, ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್ ಹಾಗೂ ಕಲಬುರಗಿ ರಂಗಾಯಣಕ್ಕೆ ಮಹೇಶ ಪಾಟೀಲರವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದೇಶ ತಲುಪಿ ನಿರ್ದೇಶಕರಾದವರು ಹೋಗಿ ರಂಗಾಯಣದ ಹೊಣೆಗಾರಿಕೆ ವಹಿಸಿಕೊಳ್ಳಲು ಮತ್ತೆ ಒಂದು ತಿಂಗಳು ಸರಿದಿತ್ತು.

ಈಗ ಕಲಬುರಗಿ ರಂಗಾಯಣದ ವಿಷಯಕ್ಕೆ ಬಂದರೆ.. ಏನೇನೋ ಕನಸುಗಳನ್ನು ಇಟ್ಟುಕೊಂಡು.. ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಲ್ಲರೂ ಮೆಚ್ಚುವಂತಾ ಕೆಲಸ ಮಾಡಬೇಕೆಂಬ ಮಹತ್ವಾಂಕಾಂಕ್ಷೆ ಇಟ್ಟುಕೊಂಡು ಹೋದ ಮಹೇಶ ಪಾಟೀಲರಿಗೆ ಆಘಾತ ಕಾದಿತ್ತು.  ಯಾಕೆಂದರೆ ಅಲ್ಲಿ ರಂಗಕ್ರಿಯೆಗಳನ್ನು ನಡೆಸಲು ಬೇಕಾದ ಯಾವುದೇ ಅನುಕೂಲಗಳೂ ಇರಲೇ ಇಲ್ಲಾ. ಈಗಾಗಲೇ ಆಯ್ಕೆಯಾದ ಕಲಾವಿದರು ದಿನವೂ ನಿಯಮದಂತೆ ಬಂದು ಹಾಜರಿ ಹಾಕಿ ಸಂಜೆ ಮನೆಗೆ ಹೋಗುತ್ತಿದ್ದರು. ಹೊಸ ನಿರ್ದೇಶಕರು ಬಂದಾಗ ಹೊಸ ಹುರುಪಿನಿಂದ ಕಲಾವಿದರೆಲ್ಲಾ ಸಿದ್ದಗೊಂಡರು. ಆದರೆ.. ಮಾಡುವುದಾದರೂ ಏನು? 

ತಾಲಿಂ ಕೊಠಡಿ, ಒಡೆದ ಕಿಡಕಿ ಗ್ಲಾಸು, ಕಿತ್ತೋದ ನೆಲಹಾಸು..
ಕಲಬುರಗಿಯ ಊರ ಹೊರಗಿರುವ ರಂಗಾಯಣಕ್ಕೆ ಕಟ್ಟಡವೊಂದಿದೆ. ಆದರೆ ಕಸ ದೂಳು ಮೆತ್ತಿಕೊಂಡ ಬೂತ ಬಂಗಲೆಯಾಗಿದೆ. ಕೆಳಗೆ ಪುಟ್ಟದಾದ ರಂಗಮಂದಿರವೊಂದಿದೆ.. ಅದರ ಕೀಲಿ ಕೈ ಆಡಳಿತಾಧಿಕಾರಿಯ ಸೊಂಟದಲ್ಲಿದೆ. ಮೊದಲ ಮಹಡಿಯಲ್ಲಿ ಖಾಲಿ ಹಾಲ್ ಒಂದಿದೆ.. ಆದರೆ ಮೇಲೆ ಇರುವ ವೆಂಟಿಲೇಟರ್ ಕಿಟಕಿಯ ಗಾಜುಗಳೆಲ್ಲಾ ಒಡೆದು ಹೋಗಿದ್ದರಿಂದ ಮಳೆಯ ನೀರು ಒಳಕ್ಕಿಳಿದು ರೇಜಿಗೆ ಹುಟ್ಟಿಸುವಂತಿದೆ. ಹೋಗಲಿ ಮಳೆ ಇಲ್ಲದಾಲಾದರೂ ತರಬೇತಿಯನ್ನೋ ಇಲ್ಲವೇ ತಾಲೀಮನ್ನೋ ಮಾಡಬೇಕೆಂದರೆ ನೆಲಹಾಸಿನ ಟೈಲ್‌ಗಳು ಹಾಲ್‌ನ ನಡುಮಧ್ಯದಲ್ಲಿ ಕಿತ್ತು ಬಂದು ಹಳ್ಳ ಸೃಷ್ಟಿಯಾಗಿದೆ. ನೃತ್ಯದ ಹೆಜ್ಜೆಗಳನ್ನು ಹಾಕಲು ಹೋದ ಕಲಾವಿದನೊಬ್ಬನ ಕಾಲಿಗೆ ಗುಂಡಿಯ ಪಕ್ಕದಲ್ಲಿದ್ದ ಟೈಲ್ ಚುಚ್ಚಿ ಗಾಯವಾಗಿ ಅಪಾರವಾದ ರಕ್ತಸ್ರಾವವಾಯಿತು.

ಆಡಳಿತಾಧಿಕಾರಿ ದತ್ತಪ್ಪ
ಅದು ಹೇಗೋ ಆಡಳಿತಾಧಿಕಾರಿ ದತ್ತಪ್ಪನವರಿಂದ ಕೆಳಗಿನ ರಂಗಮಂದಿರದ ಕೀಲಿಯನ್ನು ಪಡೆದು ಓಪನ್ ಮಾಡಲಾಯಿತಾದರೂ ಅದನ್ನು ಕ್ಲೀನ್ ಮಾಡಿ ಬಳಸಲು ನಾಲ್ಕು ದಿನಗಳೇ ಬೇಕಾಯಿತು. ಕ್ಲಾಸ್ ಹಾಗೂ ತಾಲಿಂ ಕೊಠಡಿಗಳ ಮಾತು ಬಿಡಿ.. ಅಲ್ಲಿ ಕನಿಷ್ಟ ನೀರು ಹಾಗೂ ಶೌಚಾಲಯದ ಅಗತ್ಯತೆಗಳೇ ನೆಟ್ಟಗಿರಲಿಲ್ಲಾ. ನಲ್ಲಿಯಲ್ಲಿ ಬರುತ್ತಿದ್ದ ಬೋರವೆಲ್ ನೀರನ್ನು ಕುಡಿದು ದಿನಕ್ಕೊಬ್ಬರು ಕಲಾವಿದರು ಅನಾರೋಗ್ಯಕ್ಕೊಳಗಾಗತೊಡಗಿದರು. ಮಹೇಶ್ ಪಾಟೀಲರಿಗೆ ಕಲಾವಿದರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವುದೇ ಹೆಚ್ಚುವರಿ  ಕೆಲಸವಾಯಿತು. ಏನೋ ಅನುಮಾನ ಬಂದು ಓವರ್ ಹೆಡ್ ಟ್ಯಾಂಕ್ ಪರಿಶೀಲಿಸಿದರೆ ಅದಕ್ಕೆ ಮುಚ್ಚಳವೇ ಇರಲಿಲ್ಲಾ. ಒಳಗೆ ನೋಡಿದರೆ ಕಾಗೆ ಸತ್ತು ಬಿದ್ದು ದುರ್ವಾಸನೆ ಬರುತ್ತಿತ್ತು. ಅದನ್ನು ನೋಡಿದ ಕಲಾವಿದರಿಗೆ ವಾಂತಿ ಬರದೇ ಇನ್ನೇನು ತಾನೆ ಆದೀತು. ಟ್ಯಾಂಕ್ ಕ್ಲೀನ್ ಮಾಡಿಸಲೂ ಆಡಳಿತಾದಿಕಾರಿ ಸಿದ್ಧವಿಲ್ಲಾ. ಅದೇ ನೀರನ್ನು ಕುಡಿದರೆ ಕಲಾವಿದರು ಅನಾರೋಗ್ಯಪೀಡತರಾಗುವುದು ತಪ್ಪುವುದಿಲ್ಲಾ. ಕೊನೆಗೆ ದೂರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಗೆ ಹೋಗಿ ಅಲ್ಲಿರುವ ಪಿಲ್ಟರ್ ನೀರು ಕುಡಿದು ಬರುವ ಅನಿವಾರ್ಯತೆಗೆ ಕಲಾವಿದರು ಗೊಣಗುತ್ತಲೇ ಹೊಂದಾಣಿಕೆ ಮಾಡಿಕೊಂಡರಾದರೂ ಕೆಲವೇ ದಿನಗಳಲ್ಲಿ ಆ ಪಿಲ್ಟರ್ ಸಹ ಕೆಟ್ಟು ನಿಂತಿತು.

ರಂಗಪರಿಕರಗಳನ್ನಿಡಲು ಜಾಗವಿಲ್ಲದೇ ಮೂಲೆಗೆ ಬಿದ್ದ ಪರಿಕರಗಳು.
ಹೋಗಲಿ ತಮ್ಮ ಮನೆಯಿಂದಲೇ ಪ್ರತಿದಿನ ಪ್ರತಿಯೊಬ್ಬರೂ ಒಂದೊಂದು ಬಾಟೆಲ್ ನೀರು ತಂದು ಕುಡಿಯಬಹುದು ಅಂತಾ ಇಟ್ಟುಕೊಂಡರೂ ಶೌಚಕ್ಕಾದರೂ ನೀರು ಬೇಕೆ ಬೇಕಲ್ಲಾ. ಇನ್ನೂ ಬುಡಕ್ಕೆ ಪೇಪರ್ ಒರೆಸಿಕೊಳ್ಳುವ ಅಬ್ಯಾಸ ಭಾರತೀಯರಿಗೆ ಕರಗತವಾಗಿಲ್ಲವಲ್ಲಾ. ಶೌಚಾಲಯಗಳು ಇವೆ ಆದರೆ ಸ್ವಚ್ಚವಾಗಿಲ್ಲಾ. ಯಾರೋ ಒಬ್ಬರು ಸ್ವಚ್ಚ ಮಾಡಬೇಕೆಂದರೂ ನೀರೇ ಇಲ್ಲಾ. ಮೂಗು ಮುಚ್ಚಿಕೊಂಡೇ ಒಳಗೆ ಹೋಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಮಹಿಳೆಯರ ಶೌಚಾಲಯಕ್ಕೆ ಚಿಲಕಗಳೇ ಇಲ್ಲಾ. ಹೊರಗೆ ಒಬ್ಬ ಕಲಾವಿದೆ ಕಾವಲು ನಿಂತಾಗ ಇನ್ನೊಬ್ಬಳು ಒಳಗೆ ಹೋಗಿ ಒತ್ತಡ ನಿವಾರಿಸಿಕೊಳ್ಳುವ ದುರಂತಕ್ಕೆ ಆಡಳಿತಾಧಿಕಾರಿಗಳು ಅಂಧರಾಗಿದ್ದೊಂದು ವಿಪರ್ಯಾಸ. ಚೆಂಬಿಲ್ಲಾ.. ಬಕೆಟಿಲ್ಲಾ, ಕಸಬರಿಗೆಗಳಿಲ್ಲಾ, ಡಸ್ಟ್ ಬಿನ್ ಗಳಿಲ್ಲಾ.. ಏನು ಕೇಳಿದರೂ ಇಲ್ಲಾ ಎನ್ನುವುದನ್ನು ಬಿಟ್ಟು ಬೇರೆ ಉತ್ತರಗಳೇ ಆಡಳಿತ ಕಛೇರಿಯಿಂದ ಹೊರಬರುವುದಿಲ್ಲಾ. ಇಂತಹ ವಾತಾವರಣದಲ್ಲಿ ಕಲೆ ಅರಳೀತು ಹೇಗೆ? ಕಲಾವಿದರ ಪ್ರತಿಭೆ ಬೆಳಗೀತು ಹೇಗೆ? ನಿಜಕ್ಕೂ ಕನಿಷ್ಟ ಅಗತ್ಯಗಳೇ ಇಲ್ಲದ ಇಂತಹ ವಾತಾವರಣದಲ್ಲಿ ನಾಟಕ ಕಟ್ಟುವುದೇ ಸಹಿಸಲಾಗದ ಬೇಗೆ!

ಭೂತ ಬಂಗಲೆಯಂತಿರುವ ರಂಗಾಯಣದ ಕಟ್ಟಡ
ಇನ್ನು ರಂಗಕಲೆಗೆ ಬೇಕಾದ ಪರಿಕರಗಳಾದರೂ ಇದ್ದಾವಾ ಎಂದು ನೋಡಿದರೆ ಯಾವುದೂ ಅಲ್ಲಿ ನೆಟ್ಟಗಿಲ್ಲ. ಕಟ್ಟಿಂಗ್ ಪ್ಲೇಯರ್ ಇದ್ದರೆ ಮೊಳೆಗಳಿಲ್ಲಾ, ಕೆಟ್ಟು ನಿಂತ ಕಟ್ಟರ್ ಇದ್ದರೆ ಟೂಲ್ ಬಾಕ್ಸೇ ಇಲ್ಲಾ, ಸರಳವಾಗಿ ಒಂದು ಕಟ್ಟಿಗೆಯ ಕಟೌಟ್ ಮಾಡಲು ಬೇಕಾದ ಸಲಕರಣೆಗಳಂತೂ ಮೊದಲೇ ಇಲ್ಲಾ. ರಂಗಪರಿಕರಗಳಿಗಾಗಿಯೇ ಒಬ್ಬ ತಂತ್ರಜ್ಞನನ್ನು ಆಯ್ಕೆ ಮಾಡಲಾಗಿದೆ. ಆದರೆ ಇಲ್ಲಗಳ ಲೋಕದಲ್ಲಿ ಆತ ಇದ್ದರೂ ಇಲ್ಲವಾಗಿದ್ದಾನೆ. ಪ್ರಾಯೋಗಿಕವಾಗಿ ಪುಟ್ಟ ನಾಟಕ ಮಾಡಿದರೂ ಲೈಟ್ಸ್‌ಗಳು ಬೇಕೆ ಬೇಕಲ್ಲವೇ. ಆದರೆ ಅಲ್ಲಿ ಲೈಟಿಂಗ್ ವ್ಯವಸ್ಥೆಯೇ ಇಲ್ಲವಾಗಿದೆ. ಕನಿಷ್ಟ ಆರು ಪಾರ್ ಲೈಟ್ ಗಳಾದರೂ ಒಂದು ನಾಟಕಕ್ಕೆ ಬೇಕೆ ಬೇಕು. ಅವುಗಳನ್ನು ಫಿಕ್ಸ್ ಮಾಡಲು ಸ್ಟ್ಯಾಂಡ್ ಬೇಕು. ಲೈಟ್ ಆಪರೇಟ್ ಮಾಡಲು ಡಿಮ್ಮರ್ ಗಳು ಹಾಗೂ ಲೈಟ್ ಕಂಟ್ರೋಲರ್‌ಗಳು ಬೇಕೆ ಬೇಕು. ಆದರೆ ಆಯ್ಕೆಗೊಂಡ ಬೆಳಕಿನ ತಂತ್ರಜ್ಞ ಅಸಹಾಯಕನಾಗಿ ಆಕಾಶ ನೋಡುತ್ತಿದ್ದಾನೆ. ಅಲ್ಲಿ ಕಲಬುರಗಿಯಲ್ಲಿ ದಿನದಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಹಗಲೊತ್ತು ಕರೆಂಟ್ ಇರುವುದಿಲ್ಲಾ. ಬೇಕಾದಾಗ ಬೆಳಕು ಬೇಕೆಂದರೂ ಇನ್ವರ್ಟರ್ ಇಲ್ಲವೇ ಯುಪಿಎಸ್ ವ್ಯವಸ್ಥೆ ಇಲ್ಲವೇ ಇಲ್ಲಾ. ಸಂಗೀತ ಪರಿಕರಗಳೂ ಒಂದಿದ್ದರೆ ಒಂದಿಲ್ಲಾ. ಇರುವ ಒಂದೇ ಹಾರ್ಮೋನಿಯಂ ಸಹ ಕಳುವಾಗಿ ಹೋಗಿದೆ. ಇನ್ನು ಕಲಾವಿದರು ಸಂಗೀತಾಭ್ಯಾಸ ಮಾಡೋದಾದರೂ ಹೇಗೆ.. ಸಂಗೀತಕ್ಕೆಂದೇ ಇರುವ ಕಲಾವಿದ ಮಾಡೋದಾದರೂ ಏನು? ಏನೇನು ಬೇಸಿಕ್ ಅಗತ್ಯಗಳೇ ಇಲ್ಲವಾಗಿರುವಾಗ ಕ್ರಿಯೇಟಿವ್ ನಿರ್ದೇಶಕ ಬಂದು ಮಾಡುವುದಾದರೂ ಏನಿದೆ?

ಕನಿಷ್ಟ ಅಗತ್ಯಗಳನ್ನಾದರೂ ಒದಗಿಸಿ ಕೊಡಿ ಎಂದು ಕಲಾವಿದರು ಆಡಳಿತಾಧಿಕಾರಿಯನ್ನು ಅಂಗಲಾಚಿ ಕೇಳಿದರೆ "ಇರೋದನ್ನೇ ಬಳಸಿ ಇಲ್ಲವಾದರೆ ಸುಮ್ಮನೇ ಕೂಡಿ.." ಎನ್ನುವ ಅಹಂಕಾರದ ಉತ್ತರ ಬರುತ್ತದೆ. ಒಂದೇ ಒಂದು ಹಾಳೆ ಬೇಕಾದರೂ ಇನ್ನೊಂದು ಹಾಳೆಯಲ್ಲಿ ಬರೆದುಕೊಡಬೇಕಂತೆ. ಮೇಲೆ ಕಲಾವಿದರು ದ್ವನಿ ಅಭ್ಯಾಸ ಮಾಡುತ್ತಿದ್ದರೆ ಆಡಳಿತಾಧಿಕಾರಿಗೆ ಕಿರಿಕಿರಿಯಾಗುತ್ತಂತೆ. ಕಲೆಯ ಗಂಧ ಗಾಳಿ ಗೊತ್ತಿಲ್ಲದ ಈ ದತ್ತಪ್ಪ ಎನ್ನವ ಸಂಸ್ಕೃತಿ ಇಲಾಖೆಯ  ಸಹ ನಿರ್ದೇಶಕ ಕಮ್ ರಂಗಾಯಣದ ಪಾರ್ಟ ಟೈಂ ಆಡಳಿತಾಧಿಕಾರಿ ದತ್ತಪ್ಪ ಕಲಾವಿದರೊಂದಿಗೆ ಅಸಹಕಾರ ಚಳುವಳಿಯನ್ನೇ ಆರಂಭಿಸಿದಂತಿದೆ. ಕಲಾವಿದರು ಎಂದರೆ ಕೂಲಿಯವರು ಎಂದು ತಿಳಿದಂತಿದೆ. ಕನಿಷ್ಟ ಅಗತ್ಯಗಳನ್ನೂ ಒದಗಿಸದೇ ರಂಗಾಯಣವನ್ನು ನಿಷ್ಕ್ರೀಯಗೊಳಿಸಲು ಶಪಥ ಮಾಡಿದಂತಿದೆ. ರಂಗಾಯಣದ ವಿರೋಧಿ ಶಕ್ತಿಗಳ ಜೊತೆಗೆ ಶಾಮೀಲಾದಂತಿದೆ. ಇಂತಹ ಅವಿವೇಕಿ ಅಹಂಕಾರಿ ಕಲಾವಿರೋಧಿ ಆಡಳಿತಾಧಿಕಾರಿಯನ್ನು ಇಟ್ಟುಕೊಂಡು ಅದ್ಯಾವ ಕಲಾವಿದರು ತಾನೇ ನಾಟಕ ಮಾಡಲು ಸಾಧ್ಯ? ಅದೆಂತಾ ನಿರ್ದೇಶಕರು ತಾನೆ ನಾಟಕಗಳನ್ನು ಕಟ್ಟಲು ಸಾಧ್ಯ? ಅದು ಹೇಗೆ ಈ ಕಲಾವಿದರು ಹಾಗೂ ನಿರ್ದೇಶಕರು ಸೇರಿ ರಂಗಾಯಣವನ್ನು ಉಳಿಸಿ ಬೆಳೆಸಲು ಸಾಧ್ಯ?

ಕಲಬುರಗಿ ರಂಗಾಯಣದ ಹಾಲಿ ನಿರ್ದೇಶಕ  ಮಹೇಶ್ ಪಾಟೀಲ್
ಇಷ್ಟೆಲ್ಲಾ ಅನಾನೂಕಲತೆಗಳ ನಡುವೆಯೇ ರಂಗಾಯಣದ ನಿರ್ದೇಶಕರಾದ ಮಹೇಶ ಪಾಟೀಲರು ತಮ್ಮ ಪ್ರಯತ್ನವನ್ನು ನಿಲ್ಲಿಸಿಲ್ಲ. ಅನಾರೋಗ್ಯಪೀಡಿತರಾದ ಕಲಾವಿದರುಗಳನ್ನು ತಮ್ಮದೇ ಕಾರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಿಲ್ ಕೂಡಾ ಕೊಡುತ್ತಿದ್ದಾರೆ. ಕನಿಷ್ಟ ಅನುಕೂಲತೆಗಳನ್ನು ಪಡೆಯಲು ಆಡಳಿತಾಧಿಕಾರಿಗಳ ಜೊತೆಗೆ ಅನಿವಾರ್ಯವಾಗಿ ಸಂಘರ್ಷಕ್ಕಿಳಿದಿದ್ದಾರೆ. ದತ್ತಪ್ಪನಂತಹ ಪಾರ್ಟ ಟೈಂ ಆಡಳಿತಾಧಿಕಾರಿ ನಮಗೆ ಬೇಕಾಗಿಲ್ಲಾ.. "ಕಲೆಗೆ ಪ್ರೋತ್ಸಾಹ ಕೊಡುವ, ಕಲಾವಿದರುಗಳಿಗೆ ಗೌರವ ಕೊಡುವಂತಹ ಆಡಳಿತಾಧಿಕಾರಿಗಳನ್ನು ನಮಗೆ ಕೊಡಿ" ಎಂದು ಪಾಟೀಲರು ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ರಂಗಸಮಾಜದ ಸದಸ್ಯರುಗಳ ಮುಂದೆ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ. ಆದರೆ.. ಇಲ್ಲಿವರೆಗೂ ಅಲ್ಲಿ ಯಾವ ಸಕಾರಾತ್ಮಕ ಬದಲಾವಣೆಗಳೂ ಆಗಿಲ್ಲಾ.. ಕಲಾವಿದರ ಗೋಳು ತಪ್ಪಿಲ್ಲಾ. ಹೀಗೆಯೇ ಆದರೆ ಮತ್ತೆ ರಂಗಾಯಣ ಕಲಬುರುಗಿ ಜನರ ಬಾಯಿಗೆ ಎಲೆ ಅಡಿಕೆ ಆಗುವುದಂತೂ ತಪ್ಪೊದಿಲ್ಲ. ಇಂತಹುದಕ್ಕಾಗಿ ಕಾಯುತ್ತಿರುವ ಮಾಧ್ಯಮದವರಿಗೆ ಪುಷ್ಕಳ ಆಹಾರವಾಗುವುದನ್ನೂ ತಪ್ಪಿಸಲಾಗೋದಿಲ್ಲಾ.

ಮಹೇಶ ಪಾಟೀಲ್‌ರವರು ತುಂಬಾ ಕ್ರಿಯಾಶೀಲ ವ್ಯಕ್ತಿ ಎನ್ನುವುದರಲ್ಲಿ ಸಂದೇಹವಿಲ್ಲಾ. ರಾಷ್ಟ್ರೀಯ ರಂಗಶಾಲೆ ಎನ್‌ಎಸ್‌ಡಿಯಲ್ಲಿ ತರಬೇತಿ ಪಡೆದು ಬಾಂಬೆ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡವರು. ರಾಷ್ಟ್ರೀಯ ರಂಗಭೂಮಿಯಲ್ಲಿ ಅನೇಕ ಖ್ಯಾತನಾಮರ ಜೊತೆಗೆ ಕೆಲಸ ಮಾಡಿದವರು. ಪಾದರಸದಂತಾ ವ್ಯಕ್ತಿತ್ವ. ಹೊಸ ಹೊಸ ಆಲೋಚನೆಗಳಿವೆ. ಏನಾದರೂ ಮಾಡಬೇಕೆಂಬ ಅದಮ್ಯ ತುಡಿತವೂ ಇದೆ. ಆದರೆ.. ಅವರ ಆಲೋಚನೆಗಳ ಬೀಜ ಮೊಳೆತು ಬೆಳೆಯಾಗಿ ಮರವಾಗಿ ಫಲಕೊಡುವಂತಹ ವಾತಾವರಣದ ಅಗತ್ಯವಿದೆ. ಆದರೆ ಅಲ್ಲಿ ರಂಗಾಯಣದಲ್ಲಿ ಸಧ್ಯಕ್ಕಂತೂ ಅವರನ್ನು ನಿರುತ್ಸಾಹ ಗೊಳಿಸುವಂತಹ ದೃಶ್ಯಗಳೇ  ಗೋಚರಿಸುತ್ತಿವೆ. ಈ  ಮೊದಲು ರಂಗಾಯಣದಲ್ಲಿ ಕಲಾವಿದರು ಹಾಗೂ ನಿರ್ದೇಶಕರ ನಡುವೆ ಸಂಘರ್ಷ ತೀವ್ರಗೊಂಡು ರಂಗಾಯಣ ಒಡೆದ ಮನೆಯಾಗಿತ್ತು. ಆಗ ಆಡಳಿತಾಧಿಕಾರಿಗಳು ನಿರ್ಲಿಪ್ತರಾಗಿದ್ದರು.  ಈಗ ಕಲಾವಿದರು ಹಾಗೂ ನಿರ್ದೇಶಕರ ನಡುವೆ ಉತ್ತಮ ಬಾಂಧವ್ಯ ಇದೆ. ಈ ಎರಡೂ ವಲಯದಲ್ಲೂ ಏನನ್ನಾದರೂ ಮಾಡಿ ತೋರಿಸುವ ಆಸಕ್ತಿ ಇದೆ. ಆದರೆ ಆಡಳಿತವು ಖಳನಾಯಕನ ಪಾತ್ರ ವಹಿಸುತ್ತಿದೆ. ರಂಗಚಟುವಟಿಕೆಗಳು ಸೂಸೂತ್ರವಾಗಿ ನಡೆಯದಂತೆ ಅಡ್ಡಗಾಲು ಹಾಕುತ್ತಿದೆ.

ರಂಗಾಯಣದ ಕಲಾವಿದರು ಹಾಗೂ ತಂತ್ರಜ್ಞರು
ಕಲಾವಿದರು ಹಾಗೂ ಆಡಳಿತಾಧಿಕಾರಿಗಳ ನಡುವಿನ ಆಂತರಿಕ ಸಂಘರ್ಷವನ್ನು ರಂಗಸಮಾಜದ ಸದಸ್ಯರು ಆರಂಭದಲ್ಲೇ ಶಮನಗೊಳಿಸುವುದು ಉತ್ತಮ. ಈಗಿರುವ ಪ್ರಭಾರೆ ಆಡಳಿತಾಧಿಕಾರಿ ದತ್ತಪ್ಪನವರ ದುರಹಂಕಾರದ ನಡೆ ನುಡಿಗಳು ರಂಗಾಯಣದಂತಹ ಕಲಾ ಸಂಸ್ಥೆಗಳಿಗೆ ಮಾರಕವಾಗಿವೆ. ಮೊದಲು ಈ ಅಧಿಕಾರಿಯನ್ನು ಬದಲಾಯಿಸಿ ರಂಗಾಯಣಕ್ಕೆ ಪೂರ್ಣವಧಿಯ ಕಲಾಪೋಷಕ ಆಡಳಿತಾಧಿಕಾರಿಯನ್ನು ಆದಷ್ಟು ಬೇಗ ಕಳಿಸಿಕೊಡಬೇಕೆಂದು ರಂಗಸಮಾಜದ ಸದಸ್ಯರುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಹಾಗೂ ಸಚಿವೆಯವರನ್ನು ಒತ್ತಾಯಿಸಬೇಕಾಗಿದೆ. ಹಾಗೆಯೇ ಈ ಹಿಂದೆ ಕಲಬುರಗಿ ರಂಗಾಯಣದಲ್ಲಿ ಆದ ಅವಘಡಗಳಿಂದ ಪಾಠ ಕಲಿತು ರಂಗಾಯಣದ ಸಮಗ್ರ  ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ ಸಂಸ್ಕೃತಿ ಇಲಾಖೆ ಸ್ಪಂದಿಸಬೇಕಾಗಿದೆ. ಸಮಸ್ಯೆಗಳು ಉಲ್ಬಣಗೊಂಡಾಗ ಎಚ್ಚೆತ್ತುಕೊಳ್ಳುವ ಬದಲು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಈ ಕೂಡಲೇ ಮುತುವರ್ಜಿ ವಹಿಸಿ ಕಲಬುರಗಿ ರಂಗಾಯಣಕ್ಕೆ ಒಬ್ಬ ಸಮರ್ಥ ಹಾಗೂ ಕಲಾಭಿರುಚಿ ಇರುವ ಆಡಳಿತಾಧಿಕಾರಿಗಳನ್ನು ನಿಯಮಿಸಲು ಅಧಿಕಾರಿಗಳಿಗೆ ಆದೇಶಿಸಬೇಕಿದೆ. ಹಾಗೂ ರಂಗಾಯಣದ ಕಲಾವಿದರುಗಳಿಗೆ ಅಗತ್ಯ ಅನುಕೂಲತೆಗಳನ್ನು ಒದಗಿಸಲು ಮತ್ತು ನಾಟಕಗಳನ್ನು ಕಟ್ಟಲು ಬೇಕಾದ ಪರಿಕರಗಳನ್ನು ಕೊಳ್ಳಲು ಮೊದಲ ಆದ್ಯತೆಯನ್ನು ಕೊಡಬೇಕಿದೆ. ಇಲ್ಲವಾದರೆ ರಂಗಾಯಣ ಸಾವಕಾಶವಾಗಿ ನಿಷ್ಕ್ರೀಯವಾಗುತ್ತದೆ. ಸರಕಾರದ ಹಣ ಅನಗತ್ಯವಾಗಿ ಪೋಲಾಗುತ್ತದೆ. ರಂಗದಿಗ್ಗಜ ಬಿ.ವಿ.ಕಾರಂತರು ಕಂಡ ಕನಸುಗಳು ನನಸಾಗದೆ ಸರ್ವನಾಶವಾಗುತ್ತದೆ.

ಸಂಸ್ಕೃತಿ ಇಲಾಖೆಯು ತಕ್ಷಣಕ್ಕೆ ರಂಗಾಯಣಕ್ಕೆ ಮಾಡಿಕೊಡಬೇಕಾದ ಅನುಕೂಲತೆಗಳು ಹಾಗೂ ಅದಕ್ಕಾಗಿ  ರಂಗಸಮಾಜ ಒತ್ತಾಯಿಸಲೇಬೇಕಾದ ವಿಷಯಗಳು ಹೀಗಿವೆ.  
  • · ಕುಡಿಯುವ ನೀರಿನ ಪ್ಯೂರಿಪಾಯರ್‌ನ್ನು ಈ ಕೂಡಲೇ ರಂಗಾಯಣದೊಳಗೆ ಅಳವಡಿಸಿ ಕಲಾವಿದರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. 
  • ·  ಶೌಚಾಲಯಗಳ ಒಳ ಚಿಲುಕಗಳನ್ನು ಸರಿಪಡಿಸಿ, ದಿನನಿತ್ಯ ಸ್ವಚ್ಚಗೊಳಿಸಲು ಕಾರ್ಮಿಕರನ್ನು ನಿಯಮಿಸಿ, ನಿರಂತರ ನೀರು ಸರಬರಾಜಾಗುವಂತೆ ನೋಡಿಕೊಳ್ಳಬೇಕು.
  • ·ಮೊದಲ ಮಹಡಿಯ ತಾಲಿಂ ಕೊಠಡಿಯಲ್ಲಿ ಒಡೆದು ಹೋಗಿರುವ ಕಿಟಕಿಯ ಗಾಜುಗಳನ್ನೆಲ್ಲಾ ತಡಮಾಡದೇ ಸರಿಪಡಿಸಬೇಕು ಹಾಗೂ ಕಿತ್ತು ಗುಂಡಿ ಬಿದ್ದ ನೆಲಹಾಸಿನಲ್ಲಿ ಹೊಸ ಟೈಲ್ಸ್‌ಗಳನ್ನು ಅಳವಡಿಸಿ ಕಲಾವಿದರ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.
  • · ಬಣ್ಣ ಮಾಸಿಹೋದ ರಂಗಾಯಣದ ಸಮುಚ್ಚಯಕ್ಕೆ ಹೊಸದಾಗಿ ಪೇಂಟಿಂಗ್ ಮಾಡಿಸಿ ಆಕರ್ಷಕವಾಗಿ ಕಾಣುವಂತೆ ಕ್ರಮಕೈಗೊಳ್ಳಬೇಕು ಹಾಗೂ ಕಲಾತ್ಮಕ ಚಿತ್ರಗಳನ್ನು ಅಗತ್ಯವಿದ್ದಲ್ಲಿ ಚಿತ್ರಿಸಿ ಅಲ್ಲಿ ಕಲಾತ್ಮಕ ವಾತಾವರಣವನ್ನು ನಿರ್ಮಿಸಬೇಕು..
  • · ಕಲಾವಿದರಿಗೆ ಬೇಕಾಗುವಷ್ಟು ಪೇಪರ್ ಪೆನ್ನು ಹಾಗೂ ಇತರೇ ಅತೀ ಅಗತ್ಯದ ತರಬೇತಿಗೆ ಪೂರಕ ವಸ್ತುಗಳನ್ನು ಕೇಳಿದಾಗಲೆಲ್ಲಾ ಮರು ಪ್ರಶ್ನೆ ಕೇಳದೇ ಒದಗಿಸುವ ವ್ಯವಸ್ಥೆ ಆಗಬೇಕು.
  • ·ಯಾವುದೇ ಕಾರಣಕ್ಕೂ ಆಡಳಿತಾಧಿಕಾರಗಳೇ ಆಗಲಿ ಇಲ್ಲವೇ ಕಛೇರಿಯ ಸಿಬ್ಬಂದಿಯೇ ಆಗಲಿ ಕಲಾವಿದರ ಜೊತೆಗೆ ಯಾವುದೇ ರೀತಿಯಲ್ಲಿ ನೇರವಾಗಿ ವ್ಯವಹರಿಸದೇ ನಿರ್ದೇಶಕರ ಮೂಲಕವೇ ಸಲಹೆ ಸೂಚನೆಗಳನ್ನು ಕೊಡಸುವಂತಾಗಬೇಕು. ಹಾಗೂ ಕಲಾವಿದರೂ ಸಹ ಏನೇ ಅನುಕೂಲತೆಗಳು ಬೇಕಾದರೂ ನಿರ್ದೇಶಕರ ಮೂಲಕವೇ ಪಡೆಯುವಂತೆ ಮೌಖಿಕ ಆದೇಶವಾದರೂ ಆಗಬೇಕು.
  • ·ಮೈಸೂರು ರಂಗಾಯಣದ ಕಲಾವಿದರುಗಳಿಗೆ ಮೆಡಿಕಲ್ ಅಲಾವನ್ಸ್ ಕೊಡವ ಹಾಗೆ ರಂಗಾಯಣದ ಕಲಾವಿದರುಗಳ ವೈದ್ಯಕೀಯ ಖರ್ಚುವೆಚ್ಚವನ್ನು ಇಲಾಖೆಯೇ ಭರಿಸುವಂತಾಗಬೇಕು ಹಾಗೂ ಕಲಾವಿದರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯೂ ಆಗಿದೆ. 
  • ·ರಂಗಾಯಣದ ಸುತ್ತಮುತ್ತಲೂ ವಿಪರೀತ ಕಸದ ಗಿಡಗಳು ಬೆಳೆದು ಸೊಳ್ಳೆಗಳ ಕಾಟ ಅತಿಯಾಗಿದೆ. ಕಲಾವಿದರುಗಳಿಗೆ ಸೊಳ್ಳೆಗಳಿಂದ ಬರುವ ಎಲ್ಲಾ ಖಯಿಲೆಗಳೂ ಬರುವ ಸಾಧ್ಯತೆಗಳಿವೆ. ಹೀಗಾಗಿ ರಂಗಾಯಣದ ಪರಿಸರವನ್ನು ಕಸಮುಕ್ತವಾಗಿಸಿ ಅಲ್ಲಿ ಅಂದವಾದ ಗಾರ್ಡನ್ ಬೆಳೆಸಲು ಇಲಾಖೆ ಪ್ರಯತ್ನಿಸಬೇಕು.
  • · ಅಗತ್ಯ ರಂಗಪರಿಕರಗಳಿಲ್ಲದೇ ಯಾವ ನಾಟಕಗಳನ್ನೂ ಕಟ್ಟಲು ಸಾಧ್ಯವಿಲ್ಲವಾದ್ದರಿಂದ ಈ ಕೂಡಲೇ ಸೆಟ್ ನಿರ್ಮಾಣಕ್ಕೆ ಬೇಕಾದ ಬೇಸಿಕ್ ಟೂಲ್ಸ್‌ಗಳನ್ನು ಒದಗಿಸಬೇಕು. ರಂಗಸಜ್ಜಿಕೆಗೆ ಬೇಕಾದ ಮೂಲ ವಸ್ತುಗಳನ್ನು ಕೊಂಡುಕೊಡಬೇಕು.
  • ·ಬೆಳಕಿನ ವಿನ್ಯಾಸ ಮಾಡಲು ಅಗತ್ಯವಾದ ಲೈಟಿಂಗ್ಸ್ ಹಾಗೂ ಅದಕ್ಕೆ ಪೂರಕವಾದ ಅಸಸ್ಸೆರಿಗಳನ್ನು ಇಲಾಖೆ ಕೊಂಡು ಒದಗಿಸಬೇಕು. ಹಾಗೂ ಕರೆಂಟ್ ಇಲ್ಲದಾಗ ಉಪಯೋಗಿಸಬಹುದಾದ ಇನ್ವರ್ಟರ್, ಯುಪಿಎಸ್ ಹಾಗೂ ಜನರೇಟರ್‌ಗಳನ್ನು ಅಳವಡಿಸಿ ನಾಟಕ ಕಟ್ಟುವ ಕೆಲಸ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
  • ·ಅಗತ್ಯವಾದ ಸಂಗೀತದ ಪರಿಕರಗಳನ್ನು ಎರಡೆರಡು ಸೆಟ್ ಕೊಂಡುಕೊಡಬೇಕು. ಉತ್ಕೃಷ್ಟವಾದ ಮೈಕ್ ಹಾಗೂ ಸೌಂಡ್ ಸಿಸ್ಟಂಗಳನ್ನು ಒದಗಿಸಿಕೊಡಬೇಕು.  ಕಲಬುರಗಿಯಲ್ಲಿ ನಾಟಕಕ್ಕೆ ಬೇಕಾದ ಲೈಟ್ಸ ಮತ್ತು ಸೌಂಡ್ ಸಿಸ್ಟಂಗಳು ಬಾಡಿಗೆಗೂ ದೊರಕುವುದಿಲ್ಲ. ರಂಗಾಯಣದ ಹೊರಗೆ ನಾಟಕ ಮಾಡುವಾಗ ಬೇಕಾಗುವ ಎಲ್ಲಾ ರಂಗಪರಿಕರಗಳೂ ರಂಗಾಯಣದೊಳಗೆ ಇರುವಂತೆ ನೋಡಿಕೊಳ್ಳಬೇಕು.
  • ·   ಸಾಧ್ಯವಾದರೆ ಒಂದು ಮಿನಿಬಸ್‌ನ್ನು  ಒದಗಿಸಿ ರಂಗಾಯಣದ ನಾಟಕಗಳು ರೆಪರ್ಟರಿ ರೂಪದಲ್ಲಿ ನಾಡಿನಾದ್ಯಂತ ಪ್ರದರ್ಶನಗೊಳ್ಳಲು ಅನುಕೂಲವಾಗುವಂತೆ ಮಾಡಬೇಕು.
  • ಕಲಾವಿದರುಗಳಿಗೆ ತಾಲಿಂ ಮಾಡುವಾಗ ಹಾಗೂ ತರಬೇತಿಯಲ್ಲಿರುವಾಗ ಧರಿಸಲು ಬೇಕಾದ ಸಡಿಲವಾದ ಉಡುಪುಗಳನ್ನು ಇಲಾಖೆಯೇ ಒದಗಿಸಿಕೊಡಬೇಕು.
  •  ಕಲಾವಿದರ ಬಗ್ಗೆ, ನಾಟಕದ ನಿರ್ಮಿತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಅಧಿಕಾರವನ್ನೂ ರಂಗಾಯಣದ ನಿರ್ದೇಶಕರ ವಿವೇಚನೆಗೆ ಬಿಡಬೇಕು ಹಾಗೂ ಆಡಳಿತಾಧಿಕಾರಿಗಳು ಯಾವುದಕ್ಕೂ ನಡುವೆ ಮೂಗು ತೂರಿಸದಂತೆ ಆದೇಶಿಸಬೇಕು. ಆಡಳಿತಾಧಿಕಾರಿಗಳ ಕೆಲಸ ಸರಕಾರದ ಹಣ ಉದ್ದೇಶಿತ ಕೆಲಸಕ್ಕೆ ವ್ಯಯವಾಗುತ್ತದೋ ಇಲ್ಲವೋ ಎಂದು ಪರಿಶೀಲಿಸಿ ಲೆಕ್ಕಪತ್ರಗಳನ್ನು ಸರಿಯಾಗಿ ಇಡುವುದು ಮಾತ್ರವೇ ಹೊರತು ನಾಟಕ ನಿರ್ಮಿತಿಯಲ್ಲಿ ಹಸ್ತಕ್ಷೇಪ ಮಾಡುವುದಲ್ಲ ಎನ್ನುವುದನ್ನು ಅವರಿಗೆ ತಿಳಿಸಿ ಹೇಳಬೇಕು. ಅಂಕುಶ ಹಾಕಿದಲ್ಲಿ ಕಲೆ ಅರಳದು ಎಂಬುದರ ಅರಿವೂ ಅಧಿಕಾರಿಗಳಿಗೆ ಇರಬೇಕು. 

ಯುವಕ ಯುವತಿಯರು ರಂಗಕಲೆಯಲ್ಲಿ ಆಸಕ್ತಿ ಇಟ್ಟುಕೊಂಡು ರಂಗಾಯಣ ಕೊಡುವ ಕನಿಷ್ಟ ಸಂಬಳಕ್ಕೆ ಸೇರಿರುತ್ತಾರೆ. ಅವರ ಉತ್ಸಹವನ್ನು ಕುಗ್ಗಿಸುವ ಅಥವಾ ಸ್ವಾಭಿಮಾನಿಯಾದ ಕಲಾವಿದರನ್ನು ಅವಮಾನಿಸುವ ಅತಿರೇಕದ ಕೆಲಸಗಳು ರಂಗಾಯಣದಲ್ಲಿ ನಡೆದರೆ ಒತ್ತಡದ ವಾತಾವರಣದಲ್ಲಿ  ನಾಟಕ ನಿರ್ಮಿತಿ ಅಸಾಧ್ಯವೆಂಬ ಅರಿವು ನಿರ್ದೇಶಕರಿಗೂ ಹಾಗೂ ಆಡಳಿತಾಧಿಕಾರಿಗಳಿಗೂ ಇರಬೇಕಾಗಿದೆ. ಇಲ್ಲವಾದರಲ್ಲಿ ರಂಗಾಯಣಕ್ಕೆ ಮಾರ್ಗದರ್ಶನ ಮಾಡಲೇಂದೇ ಆಯ್ಕೆಗೊಂಡಿರುವ ರಂಗಸಮಾಜದ ಸದಸ್ಯರುಗಳು ಅಲ್ಲಿ ಕಲಾಭಿವ್ಯಕ್ತಿಗೆ ಅನುಕೂಲಕರವಾದ  ವಾತಾವರಣವೊಂದು ಸೃಷ್ಟಿಯಾಗುವಂತೆ ಪರಿಶ್ರಮವಹಿಸಬೇಕು. ಅವರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಹೋದಲ್ಲಿ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರೇ ರಂಗಾಯಣ ಹಾಗೂ ಅಲ್ಲಿಯ ಚಟುವಟಿಕೆಗಳ ಕುರಿತು ವ್ಯಯಕ್ತಿಕವಾದ ಕಾಳಜಿ ವಹಿಸಿ ಮೇಲೆ ತಿಳಿಸಿದಂತೆ  ರಂಗನಿರ್ಮಿತಿಗೆ ಪೂರಕವಾದ ಕೆಲಸಗಳ ಬಗ್ಗೆ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು ಇಲ್ಲವೇ ಜವಾಬ್ದಾರಿ ಇರುವ ತಮ್ಮ ಆಡಳಿತಾಧಿಕಾರಿಗಳಿಗೆ ಆ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು.

ಒಟ್ಟಿನ ಮೇಲೆ ಕಾರಂತರ ಕನಸಿನ ಪ್ರಾದೇಶಿಕ ರಂಗಾಯಣವು ಸಮೃದ್ದವಾಗಿ ಬೆಳೆದು ಆಯಾ ಪ್ರದೇಶದಲ್ಲಿ ರಂಗಕಲೆಯ ಕಂಪನ್ನು ಪಸರಿಸಿಬೇಕಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ರಂಗಸಮಾಜ ಹಾಗೂ ಸರಕಾರ ಒದಗಿಸಿಕೊಡಬೇಕಿದೆ. ನಿರ್ದೇಶಕರು ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತಾಧಿಕಾರಿಗಳ ಜೊತೆಗೆ ಉತ್ತಮ ಸಮನ್ವಯವನ್ನು ಸಾಧಿಸಿ ರಂಗಾಯಣವನ್ನು ಉಳಿಸಿ ಬೆಳೆಸಿ ಪೋಷಿಸಬೇಕಿದೆ. ಅದಕ್ಕಾಗಿ ಸಂಸ್ಕೃತಿ ಇಲಾಖೆ, ರಂಗಸಮಾಜ, ಆಡಳಿತಾಧಿಕರಿಗಳು, ರಂಗಾಯಣದ ನಿರ್ದೇಶಕರು ಹಾಗೂ ಎಲ್ಲಾ ಕಲಾವಿದರುಗಳು ಸೌಹಾರ್ಧತೆಯಿಂದಾ ಪರಿಶ್ರಮವಹಿಸಬೇಕಿದೆ. ಒಟ್ಟಿನ ಮೇಲೆ ಸದೃಢವಾದ ರಂಗಾಯಣವನ್ನು ಎಲ್ಲರೂ ಸೇರಿ ಕಟ್ಟಬೇಕಿದೆ. ಕಲಬುರಗಿ ರಂಗಾಯಣವು ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಹೆಮ್ಮೆಯ ರಂಗಸಂಸ್ಥೆಯಾಗಬೇಕಿದೆ.   

-ಶಶಿಕಾಂತ ಯಡಹಳ್ಳಿ