ಸಾಂಸ್ಕೃತಿಕ ನೀತಿ ಆಟಕ್ಕಿಲ್ಲ ಲೆಕ್ಕಕ್ಕುಂಟು; ಸ್ವಾಯತ್ತತೆ ಎಂಬುದು
ಕನ್ನಡಿಯ ಗಂಟು :
ಕಲೆ ಸಾಹಿತ್ಯ ಮತ್ತು ಸಂಸ್ಕೃತಿ
ಕೇಂದ್ರಗಳ ಮೇಲೆ ಆಳುವ ಸರಕಾರಗಳಾಗಲೀ, ರಾಜಕೀಯ ಪಕ್ಷದವರಾಗಲೀ ಹಸ್ತಕ್ಷೇಪ ಮಾಡುವುದು ಅಕ್ಷಮ್ಯ. ಸರಕಾರ
ಇರುವುದು ಕಲೆ ಸಾಹಿತ್ಯಗಳನ್ನು ಬೆಳೆಸಲು, ಭಾಷೆ ಸಂಸ್ಕೃತಿಯನ್ನು ಉಳಿಸಲು. ಆದರೆ.. ಸರಕಾರಗಳು ಬದಲಾದಂತೆ
ಅವುಗಳ ಆದ್ಯತೆಗಳೂ ಬದಲಾಗುತ್ತಿವೆ. ಅದರ ನಕಾರಾತ್ಮಕ ಪರಿಣಾಮ ಕಲೆ ಸಾಹಿತ್ಯ ಕೇಂದ್ರಗಳ ಕೆಲಸ ಕಾರ್ಯಗಳ
ಮೇಲಾಗುತ್ತಿರುವುದು ಖಂಡನೀಯ.
ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವುದು
ಹೀಗೆಯೇ. ಕನ್ನಡ ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ರಕ್ಷಿಸಿ ಬೆಳೆಸುವ ಮಹೋನ್ನತ ಉದ್ದೇಶದಿಂದ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯನ್ನು ಸರಕಾರ ಹೊಂದಿದೆ. ಈ ಇಲಾಖೆಯ ನೇತೃತ್ವದಲ್ಲಿ ಬೇರೆ ಬೇರೆ ಕಲೆ ಸಾಹಿತ್ಯ
ಭಾಷೆಗಳಿಗೆ ಸಂಬಂಧಿಸಿದಂತೆ ಹಲವಾರು ಅಕಾಡೆಮಿ ಮತ್ತು ಪ್ರಾಧಿಕಾರಗಳು ರೂಪಗೊಂಡಿವೆ. ನಾಟಕ, ಶಿಲ್ಪಕಲೆ,
ಸಂಗೀತ-ನೃತ್ಯ, ಜಾನಪದ, ಸಾಹಿತ್ಯ, ಯಕ್ಷಗಾನ, ಬಯಲಾಟ, ಲಲಿತಕಲೆ, ತುಳು ಸಾಹಿತ್ಯ, ಕೊಂಕಣಿ ಸಾಹಿತ್ಯ,
ಬ್ಯಾರಿ ಸಾಹಿತ್ಯ, ಕೊಡವ ಸಾಹಿತ್ಯ, ಅರಭಾಷೆ ಸಾಹಿತ್ಯಗಳೆಂದು ಒಟ್ಟು ಹದಿಮೂರು ಅಕಾಡೆಮಿಗಳನ್ನು ಅಸ್ತಿತ್ವಕ್ಕೆ
ತರಲಾಗಿದೆ. ಜೊತೆಗೆ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳನ್ನೂ ರಚಿಸಲಾಗಿದೆ.
ಇವೆಲ್ಲದರ ಆಶಯ ಒಂದೇ. ಸಂಬಂಧಿಸಿದ ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಹಾಗೂ ಅವುಗಳಲ್ಲಿ
ತೊಡಗಿಸಿಕೊಂಡ ಕ್ರಿಯಾಶೀಲ ಕಲಾವಿದ ಲೇಖಕರನ್ನು ಪ್ರೋತ್ಸಾಹಿಸುವುದು.
ಇದಕ್ಕಾಗಿಯೇ ಪ್ರತಿ ಅಕಾಡೆಮಿಗಳಿಗೂ
ಆಯಾ ವಿಷಯಗಳಲ್ಲಿ ಅನುಭವಿಯಾಗಿರುವ ಒಬ್ಬ ಅಧ್ಯಕ್ಷರನ್ನೂ ಹಾಗೂ ಕೆಲವು ಸದಸ್ಯರುಗಳನ್ನು ಸರಕಾರವು
ಸಂಸ್ಕೃತಿ ಇಲಾಖೆಯ ಮೂಲಕ ಆಯ್ಕೆ ಮಾಡಿ ಮೂರು ವರ್ಷಗಳ ಅವಧಿಗೆ ನಿಯಮಿಸುತ್ತಾ ಬಂದಿದೆ. ಈಗ ವಾರ್ಷಿಕವಾಗಿ
ಪ್ರತಿ ಅಕಾಡೆಮಿಗೂ ಒಂದು ಕೋಟಿ ರೂಪಾಯಿಗಳ ಅನುದಾನವನ್ನೂ ಕೊಡುತ್ತದೆ. ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತಿ ವರ್ಷ ಬಿಡುಗಡೆ ಮಾಡುವ ನಾನೂರಕ್ಕೂ
ಹೆಚ್ಚು ಕೋಟಿ ಹಣದಲ್ಲಿ ಈ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಕೊಡುವ ಹದಿನೈದು ಲಕ್ಷ ರೂಪಾಯಿಗಳು
ಹೆಚ್ಚೇನೂ ಅಲ್ಲಾ. ಲಕ್ಷಾಂತರ ಕೋಟಿ ಬಜೆಟ್ ಮಂಡಿಸುವ ಸರಕಾರಗಳಿಗೆ ಸಂಸ್ಕೃತಿ ಕೆಲಸಕ್ಕೆ ಕೊಡಮಾಡುವ
ಹಣವೂ ನಗಣ್ಯ. ಇಲ್ಲಿ ಸಮಸ್ಯೆ ಇರುವುದು ಮುಖ್ಯವಾಗಿ ಅನುದಾನದ್ದಲ್ಲಾ, ಅನುಷ್ಠಾನದ್ದು.
ಪ್ರತಿಯೊಂದು ಅಕಾಡೆಮಿಗೆ ಅಧ್ಯಕ್ಷರು
ಮತ್ತು ಸದಸ್ಯರುಗಳನ್ನು ಮೂರು ವರ್ಷದ ಅವಧಿಗೆ ಆಳುವ ಸರಕಾರವು ನೇಮಕ ಮಾಡುವುದರಿಂದ ಹಾಗೆ ಆಯ್ಕೆಯಾದ
ಅಧ್ಯಕ್ಷರುಗಳು ತಾತ್ಕಾಲಿಕ ಹಾಗೂ ದೀರ್ಘಕಾಲಿಕ ಕಾರ್ಯಯೋಜನೆಗಳನ್ನು ಹಾಕಿಕೊಂಡು ಕೆಲಸ ಶುರುಮಾಡಿರುತ್ತಾರೆ.
ಆ ವರ್ಷ ಶುರುಮಾಡಿದ ಯೋಜನೆಗಳನ್ನು ಅದೇ ವರ್ಷದಲ್ಲಿ ಮುಗಿಸಬೇಕು ಎಂದು ಗೆರೆಕೊರೆದುಕೊಂಡು ಕೆಲಸ ಮಾಡಲು
ಸಾಧ್ಯವಿಲ್ಲ. ಆಯಾ ವರ್ಷದ ಕಾರ್ಯಗಳ ಕೋಟಾವನ್ನು ಅದೇ ವರ್ಷದಲ್ಲಿ ಪೂರ್ಣಗೊಳಿಸಲು ಅಕಾಡೆಮಿಗಳ ಕೆಲಸ
ಕೇವಲ ಪ್ರಶಸ್ತಿಗಳನ್ನು ಕೊಡುವುದು ಮಾತ್ರವಲ್ಲ. ಉದಾಹರಣೆಗೆ
ದಾಖಲೀಕರಣ, ಫೆಲೋಶಿಪ್, ಬ್ರಹತ್ ಗ್ರಂಥಗಳ ಪ್ರಕಟಣೆಗಳಂತಹ ಹಲವಾರು ದೀರ್ಘಕಾಲಿಕ ಯೋಜನೆಗಳನ್ನು ಪೂರ್ಣಗೊಳಿಸಲು
ಕನಿಷ್ಟ ಮೂರು ವರ್ಷಗಳಾದರೂ ಬೇಕಾಗುತ್ತದೆ.
ಆದರೆ.. ಆಳುವ ಸರಕಾರಗಳು ಬದಲಾದ
ಕೂಡಲೇ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷ ಸದಸ್ಯರುಗಳ ಅಧಿಕಾರವನ್ನು ರದ್ದುಗೊಳಿಸುವುದು ಅಕಾಡೆಮಿಗಳ
ಆಶಯಕ್ಕೆ ಮಾರಕವಾಗುವ ಸಾಧ್ಯತೆಗಳೇ ಅಧಿಕವಾಗಿವೆ. ಅಕಾಲಿಕವಾಗಿ ಅಕಾಡೆಮಿಗಳು ಬರಕಾಸ್ತುಗೊಂಡರೆ ಈಗಾಗಲೇ
ಹಮ್ಮಿಕೊಂಡ ಕಾರ್ಯಯೋಜನೆಗಳ ಗತಿಯೇನು? ಅದಕ್ಕೆ ಖರ್ಚಾದ ಹಣ ಎಷ್ಟೋ ಸಲ ಹೊಳೆಯಲ್ಲಿ ಹುಣಸೇ ಹಣ್ಣು
ತೊಳೆದಂತಾಗುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅಕಾಡೆಮಿ ಪ್ರಾಧಿಕಾರಗಳಿಗೆ ನೇಮಕಗೊಂಡು ಬರುವ ಪ್ರತಿಯೊಬ್ಬ
ಅಧ್ಯಕ್ಷರಿಗೂ ಅವರದೇ ಆದ ಯೋಜನೆಗಳು ಹಾಗೂ ಕನಸುಗಳಿರುತ್ತವೆ. ಅವರು ತಮ್ಮ ಆಶಯಗಳ ಸಾಕಾರಕ್ಕಾಗಿ ಗಮನ
ಹರಿಸುತ್ತಾರೆಯೇ ಹೊರತು ಹಿಂದಿನ ಅಧ್ಯಕ್ಷರು ಅಪೂರ್ಣವಾಗಿ ಬಿಟ್ಟುಹೋದ ಕೆಲಸಗಳನ್ನು ಮಾಡಿ ಮುಗಿಸಲು
ಆಸಕ್ತಿ ತೋರುವುದಿಲ್ಲ ಎನ್ನುವುದಕ್ಕೆ ಈ ಹಿಂದಿನ ಹಲವಾರು ಉದಾಹರಣೆಗಳೇ ಸಾಕ್ಷಿ. ಹೀಗಾಗಿ.. ಅಪೂರ್ಣ
ಯೋಜನೆಗಳು ಅಪೂರ್ಣವಾಗಿಯೇ ಉಳಿಯುತ್ತವೆ ಹಾಗೂ ಅದಕ್ಕೆ ವೆಚ್ಚ ಮಾಡಲಾದ ಆರ್ಥಿಕ ಸಂಪನ್ಮೂಲ, ಕಚೇರಿ
ಮತ್ತು ಸಿಬ್ಬಂದಿಗಳಿಗಾಗಿ ವ್ಯಯಿಸಿದ ಹಣ ಹಾಗೂ ಹಲವರ ಪರಿಶ್ರಮ ವ್ಯರ್ಥವಾಗುತ್ತದೆ.
ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ
ಯಾರು ಅಧ್ಯಕ್ಷರಾಗಿದ್ದರೇನು ಉದ್ದೇಶಿತ ಕೆಲಸಗಳು ಆದರೆ ಸಾಕಲ್ಲವೇ? ಸರಕಾರ ಕೊಟ್ಟ ಅನುದಾನ ಸರಿಯಾಗಿ
ಬಳಕೆಯಾದರೆ ಒಳಿತಲ್ಲವೇ? ಎಂದು ಕೇಳುವುದು ಈಗ ಆದರ್ಶದ ಮಾತಾಗುತ್ತವೆ. ಯಾಕೆಂದರೆ ಸರಕಾರಗಳಿಗೆ ಅದೆಲ್ಲ
ಬೇಕಾಗಿಲ್ಲ. ‘ಅದೆಷ್ಟು ಜನತೆಯ ತೆರಿಗೆ ಹಣ ಪೋಲಾಗುತ್ತದೆ, ಅದೆಷ್ಟು ಜನರ
ಶ್ರಮ ವ್ಯರ್ಥವಾಗುತ್ತದೆ’ ಎಂಬುದರ ಬಗ್ಗೆ ಸರಕಾರದಲ್ಲಿರುವವರು ತಲೆ ಕೆಡಿಸಿಕೊಳ್ಳುವುದೇ
ಇಲ್ಲ. ಯಾಕೆಂದರೆ ಈಗಿನ ರಾಜಕೀಯ ಪಕ್ಷಗಳ ಪ್ರಮುಖ ಆಧ್ಯತೆ ಇರುವುದು ನೆಲ, ಜಲ, ಜನರ ಅಭಿವೃದ್ದಿ ಅಥವಾ
ಸಂಸ್ಕೃತಿಯ ಉಳಿವಿನ ಕುರಿತಾದದ್ದಲ್ಲ, ಅವರ ಗುರಿ ಇರುವುದು ಅಧಿಕಾರವನ್ನು ಹಿಡಿಯುವುದರತ್ತ. ಅದನ್ನು
ಹಿಡಿಯಲು ದಾರಿಯಾಗುವುದು ಚುನಾವಣೆ, ಚುನಾವಣೆಗೆ ಗೆಲ್ಲಬೇಕಾದರೆ ಮತಗಳನ್ನು ಪಡೆಯಬೇಕು. ಹೀಗೆ ಮತಗಳನ್ನು
ಪಡೆಯಲು ಯಾರು ಸಹಕರಿಸುತ್ತಾರೋ, ಯಾರು ಪ್ರಚಾರ ಮಾಡುತ್ತಾರೋ ಅಂತವರಿಗೆಲ್ಲಾ ಸೂಕ್ತ ಸ್ಥಾನಮಾನ ಅಧಿಕಾರಗಳನ್ನು
ಕೊಡುವ ಹೊಣೆಗಾರಿಕೆ ಪಕ್ಷಗಳದ್ದು. ಹೀಗಾಗಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಅಂತಹ ಪಕ್ಷಕ್ಕೆ ಯಾವುಯಾವುದೋ
ರೀತಿಯಲ್ಲಿ ಸಹಕರಿಸಿದವರಿಗೆ, ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿರುವವರಿಗೆ ಅಕಾಡೆಮಿ ಪ್ರಾಧಿಕಾರಗಳಂತಹ
ರಾಜಕಿಯೇತರ ಸಂಸ್ಥೆಗಳ ಸಾರಥ್ಯವನ್ನು ವಹಿಸಿಕೊಡಲಾಗುತ್ತಿದೆ.
ಮೊದಲು ದಶಕಗಳ ಹಿಂದೆ ಇದೆಲ್ಲಾ
ಹೀಗಿರಲಿಲ್ಲ. ಸರಕಾರಗಳು ರಾಜಕೀಯೇತರ ಸಂಸ್ಥೆಗಳಾದ ಅಕಾಡೆಮಿ ಪ್ರಾಧಿಕಾರಗಳ ಉಸಾಬರಿಗೆ ಬರುತ್ತಿರಲಿಲ್ಲ.
ಮೂರು ವರ್ಷಗಳ ಕಾಲ ಇದ್ದಕ್ಕಿದ್ದಂತೆ ಯಾವ ಅಧ್ಯಕ್ಷರ ಅಧಿಕಾರವನ್ನೂ ರದ್ದು ಮಾಡುತ್ತಿರಲಿಲ್ಲ. ಅಧ್ಯಕ್ಷ
ಸದಸ್ಯರನ್ನು ಆಯ್ಕೆ ಮಾಡಬೇಕಾದರೂ ಅಂತವರ ಸಾಧನೆ, ಅನುಭವಗಳಿಗೆ ಮಾನ್ಯತೆ ಕೊಡಲಾಗುತ್ತಿತ್ತು. ಬಲ
ಸಿದ್ದಾಂತಿಗಳಿಗೆ ಆಗ ಹೆಚ್ಚು ಬಲ ಇಲ್ಲದ್ದರಿಂದ ಕಲೆ ಸಾಹಿತ್ಯ ಕ್ಷೇತ್ರಗಳಲ್ಲಿದ್ದವರು ಎಡ-ಬಲವೆಂದು
ಸಾರ್ವಜನಿಕವಾಗಿ ಗುರುತಿಸಿಕೊಂಡಿರಲಿಲ್ಲ. ನೇರವಾಗಿ ಚುನಾವಣಾ ಪ್ರಚಾರಗಳಿಗೂ ಹೋಗುತ್ತಿರಲಿಲ್ಲ. ಆದರೆ..
ಬರುಬರುತ್ತಾ ರಾಜಕೀಯ ಎನ್ನುವುದು ಎಲ್ಲ ಕ್ಷೇತ್ರಗಳನ್ನೂ ಆಪೋಷಣ ತೆಗೆದುಕೊಂಡಂತೆ ಕಲೆ ಸಾಹಿತ್ಯ ಸಂಸ್ಕೃತಿ
ಕ್ಷೇತ್ರಗಳನ್ನೂ ಸಹ ಆಕ್ರಮಿಸತೊಡಗಿತು. ಕಲಾವಿದರು ಹಾಗೂ ಸಾಹಿತಿಗಳು ಒಂದೊಂದು ಸಿದ್ದಾಂತ ಹಾಗೂ ಪಕ್ಷಗಳ
ಜೊತೆಗೆ ಗುರುತಿಸಿಕೊಳ್ಳತೊಡಗಿದರು. ಇನ್ನು ಕೆಲವರು ತಮಗೆ ಅಧಿಕಾರ ಸಿಕ್ಕಬಹುದಾದ ಪಕ್ಷಗಳ ಜೊತೆ ತೆರೆಮರೆಯಲ್ಲಿ
ಲಾಭಿ ಮಾಡತೊಡಗಿದರು. ಹೀಗಾಗಿ ಕಲೆ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವರು ನಿಧಾನವಾಗಿ
ಪದವಿ ಪ್ರಶಸ್ತಿ ಅಧಿಕಾರಕ್ಕಾಗಿ ರಾಜಕಾರಣಿಗಳ ಬೆನ್ನಿಗೆ ಬಿದ್ದರು. ರಾಜಕಾರಣಿಗಳು ತಮ್ಮ ಚುನಾವಣಾ
ರಾಜಕೀಯಕ್ಕೆ ದಾಳವಾಗಿ ಹಲವಾರು ಸಾಹಿತಿ ಕಲಾವಿದರುಗಳನ್ನು ಬಳಸಿಕೊಳ್ಳತೊಡಗಿದರು. ಎಲ್ಲಾ ಕಲಾವಿದರು
ಹಾಗೂ ಸಾಹಿತಿಗಳು ಹೀಗೆಯೇ ಇಲ್ಲವಾದರೂ ಬಹುತೇಕರು ಪಕ್ಷವಾರು ಹಂಚಿಹೋಗಿದ್ದನ್ನಂತೂ ಅಲ್ಲಗಳೆಯುವಂತಿಲ್ಲ.
ಈ ಹಿಂದೆ ಯಡಿಯೂರಪ್ಪನವರ ನೇತೃತ್ವದ
ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಾಗ ಸಂಘಪರಿವಾರದ ಪ್ರತಿಪಾದಕರಾದವರಿಗೆ ಅಕಾಡೆಮಿ ಹಾಗೂ ಪ್ರಾಧಿಕಾರಗಳ
ಅಧ್ಯಕ್ಷಗಿರಿ ಒಲಿದು ಬಂದಿತ್ತು. ತದನಂತರ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ
ಬರುತ್ತಿದ್ದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ರಂಗಕಲಾವಿದೆ ಉಮಾಶ್ರೀಯವರು ನೇಮಿಸಲ್ಪಟ್ಟರು.
ಉಮಾಶ್ರೀಯವರು ಹೀಗೆ ಮಾಡಬಾರದಾಗಿತ್ತು ಮಾಡಿಬಿಟ್ಟರು. ಕೆಟ್ಟ ಮಾದರಿಯೊಂದನ್ನು ಅಕಾಡೆಮಿ ಪ್ರಾಧಿಕಾರಗಳಿಗೆ
ಹಾಕಿಕೊಟ್ಟರು. ಬಿಜೆಪಿ ಸರಕಾರದ ಆಡಳಿತದಲ್ಲಿ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳು
ನೇಮಕವಾಗಿ ಇನ್ನೂ ಒಂದು ವರ್ಷ ಕಳೆದಿರಲಿಲ್ಲ ಅಷ್ಟರಲ್ಲೇ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳನ್ನು ಅಕಾಲಿಕವಾಗಿ
ಬರಕಾಸ್ತು ಮಾಡಿಬಿಟ್ಟರು. ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಕೃಷ್ಣಶೆಟ್ಟಿ ಹಾಗೂ ಇನ್ನೂ ಮೂರು ಜನ
ಬೇರೆ ಅಕಾಡೆಮಿಗಳ ಅಧ್ಯಕ್ಷರುಗಳು ನ್ಯಾಯಾಲಯಕ್ಕೆ ಹೋದರಾದರೂ ಅಲ್ಲಿ ನ್ಯಾಯ ಸಿಗಲಿಲ್ಲ. ಯಾಕೆಂದರೆ
ಅಧ್ಯಕ್ಷರಿಗೆ ಅಧಿಕಾರ ವಹಿಸಿಕೊಡುವ ಆದೇಶದಲ್ಲಿಯೇ “ಮೂರು ವರ್ಷಗಳ ಅವಧಿ ಅಥವಾ
ಮುಂದಿನ ಆದೇಶದವರೆಗೆ” ಎಂದು ಲಿಖಿತವಾಗಿ ಸೂಚಿಸಲಾಗಿತ್ತು. ಹೀಗಾಗಿ ಈ ಬಂಡಾಯಗಾರರ
ಬಂಡಾಯ ನ್ಯಾಯಾಲಯದಲ್ಲಿ ಬಿದ್ದು ಹೋಯಿತು.
ಆದರೆ.. ಕಾಂಗ್ರೆಸ್ ಸರಕಾರಕ್ಕೆ,
ಸಚಿವೆಯಾಗಿದ್ದ ಉಮಾಶ್ರೀಯವರಿಗೆ ಇದರಿಂದ ಒಂದು ಗಿಲ್ಟ್ ಅಂತೂ ಕಾಡತೊಡಗಿತ್ತು. ಮುಂದೆ ಬಂದ ಸರಕಾರವೂ
ಹೀಗೆಯೇ ಕಾಂಗ್ರೆಸ್ ಆಡಳಿತದಲ್ಲಿ ನೇಮಿಸಲ್ಪಟ್ಟವರನ್ನು ಅಕಾಲಿಕವಾಗಿ ಮನೆಗೆ ಕಳುಹಿಸಬಹುದು ಎನ್ನುವ
ಆತಂಕವೂ ಇತ್ತು. ಅದಕ್ಕಾಗಿಯೇ ಬರಗೂರು ರಾಮಚಂದ್ರಪ್ಪರವರ ನೇತೃತ್ವದಲ್ಲಿ “ಸಾಂಸ್ಕೃತಿಕ ನೀತಿ” ಯೊಂದನ್ನು ರೂಪಿಸಲು ಅಧೀಕೃತವಾಗಿ
ಸಮಿತಿ ರಚಿಸಲಾಯಿತು. ಬರಗೂರರೂ ಸಹ ರಾಜ್ಯಾದ್ಯಂತ ಸಂಚರಿಸಿ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ,
ತಮ್ಮ ವಿವೇಚನೆಯನ್ನೂ ಬಳಸಿ “ಸಾಂಸ್ಕೃತಿಕ ನೀತಿ”ಯ ಕರುಡನ್ನು 2014ರಲ್ಲಿ ಆಳುವ
ಸರಕಾರಕ್ಕೆ ಸಲ್ಲಿಸಿದರು. ಅದರಲ್ಲಿ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳ
ನೇಮಕಕ್ಕೆ ಕೆಲವು ಶಿಪಾರಸ್ಸುಗಳನ್ನೂ ಮಾಡಲಾಗಿತ್ತು. “ಸರಕಾರಗಳು ಬದಲಾದರೂ ಅವಧಿ
ಮುಗಿಯುವವರೆಗೆ ಅಧ್ಯಕ್ಷರು ಮತ್ತು ಸದಸ್ಯರ ಆಡಳಿತಾವಧಿ ಮೊಟಕುಗೊಳಿಸಬಾರದು ಅಥವಾ ಅವರ ರಾಜೀನಾಮೆ
ಕೇಳಬಾರದು. ಅಕಾಡೆಮಿಗಳ ನಿಯಮಾವಳಿಯಲ್ಲಿ ಸರಕಾರದ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಿರುವ ಪರಿಚ್ಛೆದಗಳನ್ನು
ರದ್ದು ಮಾಡಿ ಸಂಪೂರ್ಣ ಸಾಂಸ್ಕೃತಿಕ ಸ್ವಾಯತ್ತತೆ
ನೀಡಬೇಕು... ಶೋಧನಾ ಸಮಿತಿ ರಚನೆಯ ಮೂಲಕ ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ಪ್ರತಿಷ್ಠಾನಗಳ
ಅಧ್ಯಕ್ಷರು ಮತ್ತು ಸದಸ್ಯರುಗಳ ಆಯ್ಕೆಯ ಪ್ರಕ್ರಿಯೆ ನಡೆಸಬೇಕು” ಎಂದು ಬರಗೂರರ ವರದಿಯ ಶಿಪಾರಸ್ಸುಗಳಲ್ಲಿ
ಸ್ಪಷ್ಟವಾಗಿ ನಮೂದಿಸಲಾಗಿತ್ತು.
ಆದರೆ.. ಅಧಿವೇಶನದಲ್ಲಿ ಅದನ್ನು
ಅಂಗೀಕರಿಸಲು ಪ್ರತಿಪಕ್ಷಗಳು ತಕರಾರೆತ್ತಿದವು. ಈ ಸಾಂಸ್ಕೃತಿಕ ನೀತಿಯ ಕರಡು ಯಥಾವತ್ತಾಗಿ ಜಾರಿಯಾದರೆ
ಎಲ್ಲಿ ಸಾಂಸ್ಕೃತಿಕ ಲೋಕದ ಮೇಲೆ ರಾಜಕಾರಣಿಗಳ ಪ್ರಭಾವ ಹಾಗೂ ಹಿಡಿತ ಕಡಿಮೆಯಾಗುತ್ತದೋ ಎನ್ನುವ ಆತಂಕಕ್ಕೆ ಬಿದ್ದ ಪ್ರತಿಪಕ್ಷದವರು ಹಾಗೂ ಕೆಲವು ಆಳುವ ಪಕ್ಷದವರು ತಡೆಯೊಡ್ಡಿದರು.
ಅದಕ್ಕೆ ಮತ್ತೆ ಹೆಚ್.ಕೆ.ಪಾಟೀಲರ ನೇತೃತ್ವದಲ್ಲಿ ಮರುಪರಿಶೀಲನಾ ಸಮಿತಿಯೊಂದನ್ನು ಸಿ.ಎಂ ಸಿದ್ದರಾಮಯ್ಯನವರು
ನೇಮಿಸಿದರು. ರಾಜಕಾರಣಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ
ಸಚಿವ ಪಾಟೀಲರು ಅಧಿವೇಶನದಲ್ಲಿ ವಿಕಲಾಂಗ ಸಾಂಸ್ಕೃತಿಕ ನೀತಿಯನ್ನು ಮಂಡಿಸಿ ಬಹುಮತದ ಒಪ್ಪಿಗೆ ಪಡೆದರು.
ಆದರೆ.. ಅಧಿವೇಶನದಲ್ಲಿ ರಾಜಕಾರಣಿಗಳೇನೋ ಒಪ್ಪಿಗೆ ಸೂಚಿಸಿದರಾದರೂ ಅಧಿಕಾರಿಗಳು ಅದನ್ನು ಅನುಷ್ಠಾನಕ್ಕೆ
ತರಲು ಹಿಂದೆ ಮುಂದೆ ನೋಡಿದರು. ಅಷ್ಟರಲ್ಲಿ ಕಾಂಗ್ರೆಸ್ ಸರಕಾರ ಹೋಗಿ ಸಮ್ಮಿಶ್ರ ಸರಕಾರ ಬಂದಿತ್ತು.
ಸಾಂಸ್ಕೃತಿಕ ನೀತಿಯ ಜಾರಿಯ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದ ಉಮಾಶ್ರೀಯವರೂ ಮಾಜಿಯಾಗಿದ್ದರು.
ಹೀಗಾಗಿ.. ಬರಗೂರರ ವರದಿಯಂತೆ ಸಾಂಸ್ಕೃತಿಕ ನೀತಿಯು ಆದೇಶವಾಗಿದೆಯಾದರೂ ಇನ್ನೂ ಕನ್ನಡ ಮತ್ತು ಸಂಸ್ಕೃತಿ
ನಿರ್ದೇಶನಾಲಯವು ಅದನ್ನು ಅನುಪಾಲನೆ ಮಾಡುವ ಆದೇಶವನ್ನು ಅನುಷ್ಠಾನಕ್ಕೆ ತರಲೇ ಇಲ್ಲ. ಹೀಗಾಗಿ ಅಧಿಕಾರಾವಧಿ
ಮೂರು ವರ್ಷ ಎನ್ನುವುದು ಹಿನ್ನೆಲೆಗೆ ಹೋಗಿ ಮುಂದಿನ ಆದೇಶದವರೆಗೂ ಎನ್ನುವುದು ಮುನ್ನಲೆಗೆ ಬಂದಿತು.
ಉಮಾಶ್ರೀಯವರು ಆರಂಭಿಸಿದ ಕೆಟ್ಟ
ಮಾದರಿಯೊಂದನ್ನು ಸಮ್ಮಿಶ್ರ ಸರಕಾರ ಜಾರಿಗೆ ತರಲಿಲ್ಲವಾದರೂ ಈಗ ಬಂದಿರುವ ಬಿಜೆಪಿ ಸರಕಾರ ಮುಂದುವರೆಸಿತು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಇನ್ನೂ ಮೂರು ದಿನಗಳಾಗಿರಲಿಲ್ಲ 2019, ಜುಲೈ 29 ಕ್ಕೆ ಎಲ್ಲಾ
ನಿಗಮ, ಮಂಡಳಿ, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರವನ್ನು ರದ್ದುಮಾಡಿ ಸರಕಾರದ
ಮುಖ್ಯ ಕಾರ್ಯದರ್ಶಿಯವರ ಹೆಸರಲ್ಲಿ ಆದೇಶಿಸಿದ್ದರು. ಅದನ್ನು ಆಧರಿಸಿ ಮುಂದೆ ಆಗಸ್ಟ್ 1ನೇ ತಾರೀಖಿಗೆ
ಸಂಸ್ಕೃತಿ ಇಲಾಖೆಯ ನಿರ್ದೇಶಕರು ನಾಮನಿರ್ದೇಶಿತ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ
ಸದಸ್ಯರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಅಧೀಕೃತವಾಗಿ ಆದೇಶ ಹೊರಡಿಸಿದರು.
ಇದೇನು ಸೇಡಿನ ಕ್ರಮವಾ? ಕಾಂಗ್ರೆಸ್
ಸರಕಾರ ಮಾಡಿತೆಂದು ಬಿಜೆಪಿ ಸರಕಾರವೂ ಮಾಡಿತಾ? ಯಡಿಯೂರಪ್ಪನವರು
ತೋರಿದ ಆತುರ ನೋಡಿದರೆ ಹೀಗೇಯೇ ಇರುವುದು ಖಾತ್ರಿಯಾಗುತ್ತದೆ. ಸೇಡಿನ ರಾಜಕಾರಣ ಮಾಡುವುದಿಲ್ಲವೆಂದು
ಹೇಳುತ್ತಲೇ ಅದನ್ನೇ ಮುಂದುವರೆಸಿದ ಯಡಿಯೂರಪ್ಪರವರನ್ನೂ ದೂರುವ ಮುನ್ನ ಈ ಕೆಟ್ಟ ಮಾದರಿಯನ್ನು ಆರಂಭಿಸಿದವರು
ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಾಗೂ ಇದೇನು ಯಡಿಯೂರಪ್ಪನವರು ತಕ್ಷಣಕ್ಕೆ ತೆಗೆದುಕೊಂಡ ಅನಿರೀಕ್ಷತ
ನಿರ್ಧಾರವೂ ಅಲ್ಲಾ. ಯಾಕೆಂದರೆ ಯಾವಾಗ ಅತೃಪ್ತರು ಹೋಗಿ ಬಾಂಬೆಯಲ್ಲಿ ಕುಳಿತು ಮೈತ್ರಿ ಸರಕಾರ ಬೀಳುವುದು
ಖಚಿತವೆಂದು ಬಿಜೆಪಿಯವರಿಗೆ ತಿಳಿಯಿತೋ ಆಗಲೇ ಆರ್‌ಎಸ್‌ಎಸ್ ಪಂಡಿತರು ಜಾಗೃತಗೊಂಡರು. ಬಿಜೆಪಿ ಪಕ್ಷದ
ಕಛೇರಿಯಾದ ಕೇಶವಕೃಪಾದಲ್ಲಿ ಸಂಘಪರಿವಾರದ ಪರವಾಗಿರುವ ಸಾಹಿತಿಗಳು ಕಲಾವಿದರುಗಳ ಸಭೆಯೊಂದನ್ನು ಕರೆದರು.
ಅಲ್ಲಿ ಎಲ್ಲರ ಅಭಿಪ್ರಾಯವನ್ನೂ ಪಡೆದು ಚೀಟಿಯಲ್ಲಿ ಪ್ರತಿಯೊಬ್ಬರ ಪರಿಚಯ ಹಾಗೂ ಅಪೇಕ್ಷೆಗಳನ್ನು ಬರೆಸಿಕೊಂಡು
ಜೋಳಿಗೆಗೆ ಹಾಕಿಸಿಕೊಂಡರು. ತದನಂತರ ಅದನ್ನೆಲ್ಲಾ ವಿಭಾಗೀಕರಿಸಿ ಈಗಾಗಲೇ ಯಾವ ಅಕಾಡೆಮಿ, ಪ್ರಾಧಿಕಾರಕ್ಕೆ
ಯಾವ ಸಂಘ ಪರಿವಾರದ ಸಮರ್ಥಕರನ್ನು ಆಯ್ಕೆ ಮಾಡಬೇಕು ಎಂಬುದನ್ನು ಆರ್‌ಎಸ್‌ಎಸ್ಸಿಗರು ನಿರ್ಧರಿಸಿ ಇಟ್ಟುಕೊಂಡಿದ್ದಾರೆ.
ಯಡಿಯೂರಪ್ಪನವರ ಆಯ್ಕೆಗೂ ಬಿಡದೇ ಎಲ್ಲವನ್ನೂ ಮಾಡಿ ಮುಗಿಸಿದ್ದಾರೆ. ಇದನ್ನೆಲ್ಲಾ ಮಾಡಬೇಕಾದವರು ಸಂಸ್ಕೃತಿ
ಇಲಾಖೆಯ ಸಚಿವರು. ಆದರೆ ಇನ್ನೂ ಸಚಿವ ಸಂಪುಟವೇ ಅಸ್ಥಿತ್ವಕ್ಕೆ ಬಂದಿಲ್ಲಾ. ಮುಖ್ಯಮಂತ್ರಿಗಳಿಗೂ ಆಯ್ಕೆ
ಸ್ವಾತಂತ್ರ್ಯವಿಲ್ಲ. ಎಲ್ಲವನ್ನೂ ಸಂಘಿಗಳ ಮೆದುಳುಗಳು ಮಾಡಿ ಮುಗಿಸಿವೆ. ಸಂಸ್ಕೃತಿ ಇಲಾಖೆಯ ಸಚಿವರು
ಬಂದ ತಕ್ಷಣ ಈಗಾಗಲೇ ಸಿದ್ದಗೊಂಡ ಪಟ್ಟಿಗೆ ಸಹಿ ಹಾಕುವುದಷ್ಟನ್ನು ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.
ಇದು ಸಂಘಪರಿವಾರ ಮಾಡುವ ತೆರೆಮರೆಯ ತರಾವರಿ ಕೆಲಸ. ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕವನ್ನೂ ಕೇಸರೀಕರಣಗೊಳಿಸುವ
ಹಿಡನ್ ಅಜೆಂಡಾ ಇದರ ಹಿಂದಿದೆ. ಇಲ್ಲಿ ಯಡಿಯೂರಪ್ಪನವರೂ ಸಹ ಒಂದು ಚದುರಂಗದಾಟದ ಕಾಯಿ ಮಾತ್ರ. ಕಾಯಿಯನ್ನು
ನಡೆಸುವ ಕೈಗಳು ಮಾತ್ರ ನೇಪತ್ಯದಲ್ಲಿದ್ದೇ ಆಟವಾಡುತ್ತಿವೆ. ಇದಕ್ಕಾಗಿ ಸ್ವಾಯತ್ತ ಸಂಸ್ಥೆಗಳು ಎಂಬ
ಹುಸಿ ಭ್ರಮೆಯಲ್ಲಿರುವ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಬಲಿಪಶುಗಳಾದರು.
ಸ್ಪಷ್ಟವಾದ ಸಾಂಸ್ಕೃತಿಕ ನೀತಿಯೇ
ಇಲ್ಲದಿರುವ, ಇದ್ದರೂ ಅನುಷ್ಠಾನಕ್ಕೆ ಬರದಿರುವ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳು ಅಧಿಕಾರಿಗಳು
ಸರಕಾರಿ ಅನುದಾನಿತ ಸಾಂಸ್ಕೃತಿಕ ಕೇಂದ್ರಗಳ ಮೇಲೆ ಸವಾರಿ ಮಾಡುತ್ತಲೇ ಬಂದಿರುವುದು ಸಾಂಸ್ಕೃತಿಕ ಲೋಕದ
ದುರಂತ. ಹೋಗಲಿ ಅನುದಾನಿತ ಸಂಸ್ಥೆಗಳಿಗೆ ನಾಮನಿರ್ದೇಶಿತರಾದವರ ಅಧಿಕಾರವನ್ನು ರಾಜಕೀಯದ ಸ್ವಾರ್ಥಕ್ಕೆ
ಆಪೋಷಣ ತೆಗೆದುಕೊಳ್ಳುವುದೇ ಆಳುವ ವರ್ಗಗಳ ಕಾರ್ಯಸೂಚಿಯಾದರೆ ಅದಕ್ಕೆ ಈ ಸದ್ಯಕ್ಕೆ ಉತ್ತರವಿಲ್ಲ.
ಆದರೆ ರದ್ದುಗೊಳಿಸಿದಷ್ಟೇ ಅವಸರದಲ್ಲಿ ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಅಕಾಡೆಮಿ ಪ್ರಾಧಿಕಾರಗಳನ್ನು
ನಿಷ್ಕ್ರೀಯಗೊಳ್ಳುವಂತೆ ಮಾಡುವುದು ಸಮರ್ಥನೀಯ ಕ್ರಮವಲ್ಲ. ಈ ಹಿಂದೆ ಉಮಾಶ್ರೀಯವರು ಸಚಿವರಾಗಿದ್ದಾಗ
ಪ್ರಾಧಿಕಾರ-ಅಕಾಡೆಮಿಗಳ ಅಧ್ಯಕ್ಷರುಗಳ ಅವಧಿ ಮೂರು ವರ್ಷ ಪೂರೈಸಿತ್ತು. ಮುಂದಿನ ವ್ಯವಸ್ಥೆ ಆಗುವವರೆಗಾದರೂ
ಇದ್ದವರನ್ನೇ ಮುಂದುವರೆಸುವ ಬದಲು ಸಾರಾಸಗಟಾಗಿ ರದ್ದು ಮಾಡಲಾಯಿತು. ತದನಂತರ ಯಾವುಯಾವುದೋ ಕಾರಣಗಳಿಂದಾಗಿ
ಎಂಟು ತಿಂಗಳವರೆಗೂ ಯಾರನ್ನೂ ನೇಮಕ ಮಾಡಲೇ ಇಲ್ಲ. ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ,
ರೆಜಿಸ್ಟ್ರಾರ್‌ರವರಿಗೆ ಕೆಲಸ ಮಾಡದೇ ಪ್ರತಿ ತಿಂಗಳ ಸಂಬಳ ಮಾತ್ರ ಸಂದಾಯವಾಗುತ್ತಲೇ ಇತ್ತು. ಜನರ
ತೆರಿಗೆ ಹಣ ವ್ಯರ್ಥವಾಯಿತು. ಅಕಸ್ಮಾತ್ ಹಿಂದಿನವರ ಅಧಿಕಾರಾವಧಿ ಮುಗಿದ ತಕ್ಷಣ ಮಾನ್ಯ ಉಮಾಶ್ರೀಯವರು
ಹೊಸಬರನ್ನು ನಾಮನಿರ್ದೇಶನ ಮಾಡಿದ್ದೇ ಆಗಿದ್ದರೆ ಹೀಗೆ ಎರಡೇ ವರ್ಷಕ್ಕೆ ಅಕಾಡೆಮಿ ಪ್ರಾಧಿಕಾರಗಳ ಅವಧಿ
ಅಕಾಲಿಕವಾಗಿ ಸ್ಥಗಿತವಾಗುವ ಅವಕಾಶವೇ ಇರುತ್ತಿರಲಿಲ್ಲ. ಹಮ್ಮಿಕೊಂಡ ಯೋಜನೆಗಳು ಅಪೂರ್ಣವಾಗುತ್ತಿರಲಿಲ್ಲ.
ಈಗಲೂ ಸಹ ಬಿಜೆಪಿ ಸರಕಾರ ಪ್ರಸ್ತುತ
ಚಾಲ್ತಿಯಲ್ಲಿದ್ದ ಅಕಾಡೆಮಿ ಪ್ರಾಧಿಕಾರಗಳನ್ನೇನೋ ರದ್ದುಮಾಡಿದೆ. ಆದರೆ ಪರ್ಯಾಯ ವ್ಯವಸ್ಥೆಯನ್ನೇ
ಮಾಡಿಲ್ಲ. ಮುಖ್ಯಸ್ಥರಿಲ್ಲದೇ ಸ್ಥಗಿತಗೊಂಡ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಅನುಭವ, ಆಸಕ್ತಿ
ಹಾಗೂ ಅಧಿಕಾರಗಳೂ ಸಂಬಂಧಪಟ್ಟ ರೆಜಿಸ್ಟ್ರಾರ್‌ಗಳಿಗಾಗಲೀ ಇಲ್ಲವೇ ಇಲಾಖೆಯ ಇತರೇ ಅಧಿಕಾರಿಗಳಿಗಾಗಲೀ
ಇಲ್ಲ. ಸಂಸ್ಕೃತಿ ನೀತಿ ಯಾವಾಗ ಅನುಷ್ಟಾನಕ್ಕೆ ಬರುತ್ತೋ ಬರಲಿ, ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸುವ
ಭಾಗ್ಯ ಯಾವಾಗ ಸಿಗುತ್ತೋ ಸಿಗಲಿ. ಆದರೆ.. ಅಲ್ಲಿವರೆಗೂ ಮುಂದಿನ ನಾಮನಿರ್ದೇಶಿತರು ಬರುವವರೆಗೂ ಹಿಂದಿನವರೇ
ಮುಂದುವರೆಯುವಂತಾಗಲಿ. ಹೀಗಾದರೆ ಕನಿಷ್ಟ ಅಕಾಡೆಮಿ ಪ್ರಾಧಿಕಾರಗಳು ಹಮ್ಮಿಕೊಂಡ ಕೆಲಸಗಳಾದರೂ ಮುಂದುವರೆಯುತ್ತವೆ.
ಕಚೇರಿ ಹಾಗೂ ಸಿಬ್ಬಂಧಿಗಳಿಗೆ ಖರ್ಚುಮಾಡುವ ಜನತೆಯ ತೆರಿಗೆ ಹಣ ಸದ್ಬಳಕೆಯಾಗುತ್ತದೆ. ರೂವಾರಿಗಳು
ಬದಲಾದರೂ ಕಲೆ ಭಾಷೆ ಸಾಹಿತ್ಯಗಳ ಕಾಯಕ ನಿರಂತರವಾಗುತ್ತದೆ. ಯಾವುದೇ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡರೆ
ಮುಂದಿನ ವ್ಯವಸ್ಥೆ ಆಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ರಾಜ್ಯಪಾಲರು ಆದೇಶಿಸುತ್ತಾರೆ.
ಆದೇ ರೀತಿಯಲ್ಲಾದರೂ ಮುಂದಿನ ನಾಮನಿರ್ದೇಶಿತ ಅಧ್ಯಕ್ಷರು ಬರುವವರೆಗೂ ಈಗ ಇದ್ದ ಅಧ್ಯಕ್ಷರುಗಳೇ ಹಂಗಾಮಿಯಾಗಿಯಾದರೂ
ಇರಲಿ.. ಬಾಕಿ ಕೆಲಸಗಳನ್ನಾದರೂ ಪೂರೈಸಲಿ.
ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು
ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆಯೋ, ಪ್ರಚಾರಕರಂತೆಯೋ ನೋಡುವ ಆಳುವ ವರ್ಗಗಳ ದುರುದ್ದೇಶ ಕನ್ನಡ ಸಾಂಸ್ಕೃತಿಕ
ಲೋಕಕ್ಕೆ ಮಾರಕವಾಗಿದೆ. ಸಮಾಜಕ್ಕೆ ತಮ್ಮ ಕಲಾಕೃತಿಗಳ ಮೂಲಕ ಸತ್ಯ ದರ್ಶನವನ್ನು ಮಾಡುವ, ಸಮಾಜದ ಅವ್ಯವಸ್ಥೆಗಳ
ವಿರುದ್ಧ ‘ಜನರಲ್ಲಿ ಜಾಗೃತಿ’ಯನ್ನು ಮೂಡಿಸುವ ಸಾಹಿತಿ ಕಲಾವಿದರುಗಳನ್ನು
ಸ್ವಾಯತ್ತಗೊಳಿಸಿ ಅಧಿಕಾರವನ್ನೂಕೊಟ್ಟು ಅವರ ಪಾಡಿಗೆ ಅವರನ್ನು ಬಿಟ್ಟರೆ ತಮ್ಮ ಬುಡಕ್ಕೆ ತಾವೇ ಕೊಡಲಿ
ಏಟು ಕೊಟ್ಟುಕೊಂಡಂತೆ’ ಎನ್ನುವ ಅರಿವಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಯಾವಾಗಲೂ
ಸಾಹಿತಿ ಕಲಾವಿದರುಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಪದವಿ ಪ್ರಶಸ್ತಿ
ಅಧಿಕಾರಗಳನ್ನು ಸಾಹಿತಿ ಕಲಾವಿದರಿಗೆ ಕೊಟ್ಟು ತಮ್ಮ ಪಕ್ಷದ, ತಾವು ಪ್ರತಿಪಾದಿಸುವ ಸಿದ್ದಾಂತದ ಪರವಾಗಿ
ಇರುವಂತೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳೂ ಬಯಸುತ್ತಾರೆ. ಎಚ್ಚರದ ದ್ವನಿಗಳನ್ನು ನಿಷ್ಕ್ರೀಯ ಗೊಳಿಸುವುದು
ಅಧಿಕಾರಸ್ತರ ಮೂಲ ಉದ್ದೇಶವಾಗಿದೆ. ಜೊತೆಗೆ ಅಧಿಕಾರ, ಪದವಿ, ಪುರಸ್ಕಾರಕ್ಕಾದರೂ ಅಸೆ ಬಿದ್ದ ಸಾಹಿತಿ
ಕಲಾವಿದರುಗಳು ತಮ್ಮ ಪಕ್ಷದ ಪರವಾಗಿ ಕೆಲಸಮಾಡುತ್ತಾರೆ ಎನ್ನುವ ಭ್ರಮೆಯೂ ಆಳುವ ವರ್ಗಗಳಿಗೆ ಇದೆ.
ಇದಕ್ಕೆ ಪೂರಕವಾಗಿ ಕೆಲವು ಸಾಹಿತಿ ಕಲಾವಿದರುಗಳು ರಾಜಕೀಯ ಪಕ್ಷಗಳ ಪರವಾಗಿ ಪ್ರತ್ಯಕ್ಷವಾಗಿ ಇಲ್ಲವೇ
ಪರೋಕ್ಷವಾಗಿ ಕೆಲಸಮಾಡುತ್ತಾರೆ ಹಾಗೂ ಅದಕ್ಕೆ ಪ್ರತಿಫಲವಾಗಿ ಫಲಾನುಭವಿಗಳಾಗಲು ಹಾತೊರೆಯುತ್ತಾರೆ.
ಈ ಎಲ್ಲದರ ನಡುವೆ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳನ್ನು ಅಸ್ಥಿತ್ವಕ್ಕೆ ತಂದ ಮೂಲ ಉದ್ದೇಶವೇ ಹಾಳಾಗಿ
ಹೋಗುತ್ತದೆ. ಸರಕಾರ ಅಕಾಡೆಮಿ-ಪ್ರಾಧಿಕಾರಗಳಿಗೆ ಕೊಡುವ ಅನುದಾನ ಕಲೆ ಸಂಸ್ಕೃತಿಯನ್ನು ಬೆಳೆಸುವುದಕ್ಕೆ
ಬಳಕೆಯಾಗದೇ ಕೇವಲ ಸಾರಿಗೆ ಸಿಬ್ಬಂದಿ, ಕಛೇರಿ ನಿರ್ವಹಣೆಗೆ ಬಳಕೆಯಾಗುತ್ತದೆ. ಇದರ ಅರಿವು ಆಳುವವರಿಗೆ
ಇಲ್ಲವಾಗಿದೆ. ಇದ್ದವರೂ ಏನೂ ಮಾಡಲಾರದವರಾಗಿದ್ದಾರೆ. ಕನ್ನಡ ನೆಲದ ಕಲೆ ಸಾಹಿತ್ಯ ಸಂಸ್ಕೃತಿಯ ಉಳಿವು
ಜಾಗತೀಕರಣದ ಆಕ್ರಮಣದಿಂದಾಗಿ ಕ್ಷೀಣಿಸುತ್ತಲೇ ಹೋಗುತ್ತಿದೆ. ಬೆಳವಣಿಗೆಯ ನಿರೀಕ್ಷೆಯೂ ಸಹ ಮಸಕಾಗುತ್ತಿದೆ.
ಇದೆಲ್ಲವೂ ಗೊತ್ತಿರುವ ಸಂಗತಿಯೇ
ಆಗಿದೆ. ಆದರೆ.. ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಉದ್ದೇಶಗಳನ್ನು ಅನುಷ್ಟಾನಗೊಳಿಸಲು ಈಗ ಕನ್ನಡ
ನಾಡಿನ ಪ್ರಜ್ಞಾವಂತರು ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಕಿದೆ.
1. 1. ಬರಗೂರರ
ನೇತೃತ್ವದ ಸಮಿತಿ ಶಿಪಾರಸ್ಸು ಮಾಡಿದ “ಸಾಂಸ್ಕೃತಿಕ ನೀತಿ”ಯ ವರದಿಯನ್ನು ಆದಷ್ಟು ಶೀಘ್ರವಾಗಿ
ಅನುಷ್ಠಾನಕ್ಕೆ ತರಬೇಕೆಂದು ಎಲ್ಲಾ ಸಾಹಿತಿ ಕಲಾವಿದರುಗಳು ಸಂಘಟಿತರಾಗಿ ಆಳುವ ವರ್ಗಗಳನ್ನು ಒತ್ತಾಯಿಸಬೇಕಾಗಿದೆ.
ಅದು ಸಾಧ್ಯವಾಗದೇ ಇದ್ದರೆ ಹೋರಾಟಗಳನ್ನು ರೂಪಿಸಬೇಕಾಗಿದೆ.
2. 2. ಸಾಂಸ್ಕೃತಿಕ
ಕ್ಷೇತ್ರದ ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಒಕ್ಕೋರಲಿನ ಆಕ್ಷೇಪವನ್ನು
ವ್ಯಕ್ತಪಡಿಸಿ ಎಲ್ಲಾ ರೀತಿಯಲ್ಲೂ ಒತ್ತಡ ತರಬೇಕಿದೆ.
3. 3. ನಾಮನಿರ್ದೇಶಿತ
ಅಧ್ಯಕ್ಷರುಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಹಾಗೂ ಅನಗತ್ಯ ಅಡೆತಡೆಗಳನ್ನು
ತಪ್ಪಿಸಲು ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಸ್ವಾಯತ್ತತೆಯನ್ನು ಕೊಡುವಂತೆ ಆಗ್ರಹಿಸಬೇಕಾಗಿದೆ.
4. 4. ಅಕಾಡೆಮಿ
ಪ್ರಾಧಿಕಾರಗಳ ಅಧ್ಯಕ್ಷರ ಅವಧಿ ಮುಗಿದರೂ ಮುಂದಿನ ನಾಮನಿರ್ದೇಶತ ಅಧ್ಯಕ್ಷರು ಬರುವವರೆಗೂ ಹಿಂದಿನವರೇ
ಮುಂದುವರೆಯುವುದನ್ನು ಜಾರಿಗೆ ತರುವಂತೆ ಒತ್ತಾಯಿಸಬೇಕಾಗಿದೆ.
5. 5. ಅಕಾಡೆಮಿಗಳು
ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಚಿವಾಲಯಕ್ಕೆ
ಕೊಟ್ಟರೆ ಮತ್ತದೇ ರಾಜಕೀಯ ಪ್ರೇರಿತ ಪಕ್ಷಾಧಾರಿತ ಆಯ್ಕೆಗಳೇ ನಡೆಯುತ್ತವೆ. ಅದಕ್ಕಾಗಿಯೇ ಆಯಾ ಕ್ಷೇತ್ರಗಳ
ತಜ್ಞರ ಆಯ್ಕೆ ಸಮಿತಿಯೊಂದನ್ನು ಮಾಡಿ ಅವರ ಶಿಪಾರಸ್ಸಿನಂತೆ ಅರ್ಹವಾಗಿರುವ ಅನುಭವಿಗಳನ್ನು ಅಕಾಡೆಮಿ
ಪ್ರಾಧಿಕಾರಗಳಿಗೆ ನಾಮನಿರ್ದೇಶನ ಮಾಡುವ ಸಂಪ್ರದಾಯಕ್ಕೆ ಚಾಲನೆ ನೀಡುವ ಅಧೀಕೃತ ಅಧಿಸೂಚನೆಯನ್ನು ಹೊರಡಿಸುವಂತೆ
ಸಂಸ್ಕೃತಿ ಇಲಾಖೆಯ ಸಚಿವಾಲಯವನ್ನು ಹಾಗೂ ಸರಕಾರವನ್ನು ಎಲ್ಲರೂ ಎಲ್ಲಾ ರೀತಿಯಿಂದಲೂ ಒತ್ತಾಯಿಸಬೇಕಾಗಿದೆ.
ಒಟ್ಟಿನ ಮೇಲೆ ಕನ್ನಡ ನಾಡಿನ
ಪ್ರಾತಿನಿಧಿಕ ಸಂಸ್ಥೆಗಳಾಗಿರುವ ಅಕಾಡೆಮಿ ಹಾಗೂ ಪ್ರಾಧಿಕಾರಗಳು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಅನಗತ್ಯ
ಹಸ್ತಕ್ಷೇಪ ಇಲ್ಲದೇ ಸ್ವಾಯತ್ತವಾಗಿ ಆತಂಕಗಳಿಲ್ಲದೇ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಬೇಕಾಗಿದೆ.
ಇದು ಅಷ್ಟು ಸುಲಭಸಾಧ್ಯವಲ್ಲವಾದರೂ ಸತತ ಪ್ರಯತ್ನದಿಂದ ಇಂದಿಲ್ಲಾ ನಾಳೆ ಆಗಬಹುದಾದ ಆಗಬೇಕಾದ ಕೆಲಸವಾಗಿದೆ.
ಸಾಂಸ್ಕೃತಿಕ ಲೋಕದ ದಿಗ್ಗಜರು, ಹಿರಿಯರು, ಪ್ರಜ್ಞಾವಂತರು ಈ ನಿಟ್ಟಿನಲ್ಲಿ ಸಂಘಟಿತರಾಗಿ ಪ್ರಯತ್ನಿಸಬೇಕು
ಹಾಗೂ ಸಾಂಸ್ಕೃತಿ ಸಂಸ್ಥೆಗಳನ್ನು ಸ್ವಾರ್ಥ ಹಿಸಾಸಕ್ತಿಗಳಿಂದ ಬಂಧಮುಕ್ತಗೊಳಿಸಬೇಕು ಎನ್ನುವುದೇ ಬಹುತೇಕರ
ಬಯಕೆಯಾಗಿದೆ.
-ಶಶಿಕಾಂತ ಯಡಹಳ್ಳಿ
yes your are right.sir
ಪ್ರತ್ಯುತ್ತರಅಳಿಸಿbut
ನಾಟಕ ಆಕಾಢಮಿಯ sri lokeh ರವರು
ಶ್ರಿಮತಿ ಉಮಾಶ್ರೀ ಯವರನ್ನು ಆಯ್ಕೆ ಮಾಡಿದ್ಧು ಸರಿ ಇಲ್ಲ ......ಸರ
ಸಾಹಿತಿ ಕಲಾವಿದರು ಎಲ್ಲಿಯವರೆಗೆ ವಶೀಲಿ ಬಾಜಿ ನಡೆಸುತ್ತಿರುತ್ತಾರೋ ಅಲ್ಲಿಯವರೆಗೆ ಇಂಥಹ ಹೀನ ವ್ಯವಸ್ಥೆ ಮುಂದುವರೆಯುತ್ತದೆ. ರಾಜಕೀಯದಿಂದ ದೂರ ಇರುವ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ಮಾನಸಿಕ ಬದ್ಧತೆ ಮೂಡಿದಾಗ ಮಾತ್ರ ನಮ್ಮತನವನ್ನು ರಕ್ಷಿಸಿಕೊಳ್ಳಬಹುದು
ಪ್ರತ್ಯುತ್ತರಅಳಿಸಿಸಾಂಸ್ಕೃತಿಕ ನೀತಿಯನ್ನು ಸರ್ಕಾರ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬಂದಿಲ್ಲ ಎಲ್ಲಾ ಕಲಾವಿದರ ಕಲೆ ಬದುಕುವುದು ಇಲ್ಲವೇ ಸಾಯುವುದು.ಇದಕೆ ಎಲ್ಲ ಕಲಾವಿದರೂ ಹೋರಾಟ ನಡೆಸಿ ವರದಿಯನ್ನು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ನೋಡಿ.ಇಲ್ಲಾ ಹೋರಾಟ ನಡೆಯ ಬೇಕು.
ಪ್ರತ್ಯುತ್ತರಅಳಿಸಿಸಾಂಸ್ಕೃತಿಕ ನೀತಿಯನ್ನು ಸರ್ಕಾರ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತಂದರೆ ಎಲ್ಲಾ ಕಲಾವಿದರು ಬದುಕುವುದು ಇಲ್ಲವೇ ಸಾಯಬಹುದು.ಎಲ್ಲಾ ಕಲಾವಿದರು ತಮ್ಮ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸ ಬೇಕು.ಸರ್ಕಾರ ಅನುಷ್ಠಾನಕ್ಕೆ ತರುವಲ್ಲಿ ಹೋಯ್ತು ಅಂದ್ರೆ ಕಲ್ಲಾವಿದರು ಹೋರಾಟ ಮಾಡಬೇಕು.ಜಯ ನಿಮ್ಮಗೆ ಬೇಕು ಇದು ಎಲ್ಲಾ ಕಲಾವಿದರ ಜನ್ಮಸಿದ್ಧ ಹಕ್ಕು.
ಪ್ರತ್ಯುತ್ತರಅಳಿಸಿಸಿ ಟಿ.ಬ್ರಹ್ಮಾಚಾರ್.ಸಾಗರ
ಅಳಿಸಿ