ಮಂಗಳವಾರ, ಜುಲೈ 23, 2019

ವೃತ್ತಿರಂಗಭೂಮಿ ಕೇಂದ್ರ ಅಸ್ಥಿತ್ವಕ್ಕೆ; ಜಯವಾಗಲಿ ಗಂಗಾಧರಸ್ವಾಮಿಯವರ ಸಾರಥ್ಯಕ್ಕೆ :






 ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ದಿವಂಗತ ಎಂ.ಪಿ.ಪ್ರಕಾಶರವರಿಗೆ ಕಲೆ, ಸಾಹಿತ್ಯ ಹಾಗೂ ರಂಗಭೂಮಿಯ ಬಗ್ಗೆ ಅಪಾರವಾದ ಒಲವಿತ್ತು. ಅವರು ಸ್ವತಃ ನಾಟಕಗಳಲ್ಲಿ ಅಭಿನಯಿಸಿ, ನಾಟಕ ರಚಿಸಿ, ರಂಗತಂಡವನ್ನೂ ಆರಂಭಿಸಿದ್ದರು. ರಂಗ ರೆಪರ್ಟರಿಯೊಂದನ್ನು ಕಟ್ಟುವ ಆಸೆಯಿಂದಾ ಏಣಗಿ ನಟರಾಜರವರ ಸಾರಥ್ಯದಲ್ಲಿ  ಅದನ್ನೂ ಆರಂಭಿಸಿದರಾದರೂ ಅದು ಹೆಚ್ಚು ಕಾಲ ಮುಂದುವರೆಯಲಿಲ್ಲ. ಬದಲಾಗುತ್ತಿರುವ ಕಾಲದ ತೀವ್ರತೆಯಲ್ಲಿ ಸೊರಗುತ್ತಿರುವ ವೃತ್ತಿರಂಗಭೂಮಿಗೆ ಹೇಗಾದರೂ ಕಾಯಕಲ್ಪ ಕೊಡಬೇಕೆಂಬ ಬಯಕೆ ಎಂ.ಪಿ.ಪ್ರಕಾಶರವರದ್ದಾಗಿತ್ತು. ವೃತ್ತಿಪರವಾದ ವೃತ್ತಿರಂಗಭೂಮಿ ಕೇಂದ್ರವೊಂದನ್ನು ಆರಂಭಿಸಬೇಕು ಹಾಗೂ ಅದರ ಮೂಲಕ ವೃತ್ತಿರಂಗಭೂಮಿಯಲ್ಲಿ ಕಾಲಕ್ಕೆ ತಕ್ಕ ಹಾಗೆ ಸೂಕ್ತ ಬದಲಾವಣೆಗಳನ್ನು ತರುವ ಪ್ರಯತ್ನವಾಗಬೇಕು ಎನ್ನುವುದು ಅವರ ಆಶಯವಾಗಿತ್ತು. ರಂಗಬದ್ದತೆ ಮತ್ತು ಪ್ರತಿಭೆ ಇರುವ ಕಲಾವಿದರ ಕೊರತೆಯನ್ನು ನಾಟಕ ಕಂಪನಿಗಳು ಅನುಭವಿಸುತ್ತಿವೆ. ಅದಕ್ಕಾಗಿ ಯುವಕರಿಗೆ ಅಭಿನಯ ತರಬೇತಿಯನ್ನು ಕೊಟ್ಟು ನಟ ಪರಂಪರೆಯನ್ನು ಮತ್ತೆ ಮುಂದುವರೆಸಬೇಕು.. ನಾಟಕ ಕಂಪನಿಗಳಲ್ಲಿ ದುಡಿಯುವ ರಂಗಕರ್ಮಿಗಳ ಮಕ್ಕಳಿಗೆ ವಸತಿ ಶಾಲೆಯನ್ನು ಸ್ಥಾಪಿಸಬೇಕು..  ಹೀಗೆ ಹಲವಾರು ಕನಸುಗಳನ್ನು ಮಾನ್ಯ ಎಂ.ಪಿ.ಪ್ರಕಾಶರವರು ಕಂಡಿದ್ದರು. ಅವರು ಇನ್ನಷ್ಟು ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿದ್ದರೆ ಈ ಕನಸೂ ಸಹ ನನಸಾಗುತ್ತಿತ್ತೇನೋ.. ಆದರೆ ತಮ್ಮ ಕಣ್ಣಲ್ಲಿ ಕನಸುಗಳನ್ನು ಇಟ್ಟುಕೊಂಡೇ ಬಹು ಬೇಗ ನಿರ್ಗಮಿಸಿದರು.  ಆದರೆ.. ಅವರ ಅಗಲಿಕೆಯ ಎಂಟು ವರ್ಷಗಳ ನಂತರ  ಎಂ.ಪಿ.ಪ್ರಕಾಶರವರು ಬಿತ್ತಿದ ವೃತ್ತಿರಂಗಭೂಮಿ ಕೇಂದ್ರದ ಬೀಜ ಈಗ ಮೊಳೆತು ಬೆಳೆಯಲು ಆರಂಭಿಸಿದೆ. ನನಸಾಗುವ ಲಕ್ಷಣಗಳೂ ಕಾಣುತ್ತಿವೆ ಎಂಬುದು ಕನ್ನಡ ರಂಗಭೂಮಿಗೆ ಸಂತಸದ ಸಂಗತಿ.

ಕೊಂಡಜ್ಜಿ ಮೋಹನ್‌ರವರು

ಎಂ.ಪಿ.ಪ್ರಕಾಶರವರ ಕನಸನ್ನು ನನಸಾಗಿಸಲು ಕೆಲವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಲಕಾಲಕ್ಕೆ ಸರಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಅದರಲ್ಲಿ ಪ್ರಮುಖವಾದವರು ಕೊಂಡಜ್ಜಿ ಮೋಹನ್‌ರವರು. ಎಂಎಲ್‌ಸಿ ಆಗಿರುವ ಮೋಹನ್‌ರವರು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಮನವಿಗಳನ್ನು ಮಾಡಿಕೊಂಡು ಮನವರಿಕೆ ಮಾಡಿಕೊಟ್ಟರು. ದಾವಣಗೆರೆಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳರವರು ವೃತ್ತಿರಂಗಭೂಮಿ ಕೇಂದ್ರದ ಸ್ಥಾಪನೆಯ ಕುರಿತು ಲೇಖನಗಳನ್ನು ಬರೆಬರೆದು ಸರಕಾರವನ್ನು ಹಾಗೂ ಇತರ ರಂಗಕರ್ಮಿಗಳನ್ನು ಎಚ್ಚರಿಸುತ್ತಲೇ ಬಂದರು ಹಾಗೂ ಸಿಎಂ ರವರಿಗೆ ಖುದ್ದಾಗಿ ಮನವಿ ಪತ್ರವನ್ನು ಕೊಟ್ಟು ಒತ್ತಾಯಿಸಿದರು. ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ರಂಗಭೂಮಿಯಿಂದಲೇ ಬಂದ ಕಲಾವಿದೆಯಾಗಿದ್ದರಿಂದ ಅವರೂ ಸಹ ಈ ವಿಷಯದಲ್ಲಿ ಆಸಕ್ತಿಯನ್ನು ತೆಗೆದುಕೊಂಡರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಮಾನ್ಯ ವಿಶುಕುಮಾರರವರೂ ಸಹ ಹೆಚ್ಚು ಮುತುವರ್ಜಿವಹಿಸಿದರು. ಈ ಎಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ಸತತ ಒತ್ತಾಯಗಳಿಂದಾಗಿ ಮಾನ್ಯ ಸಿದ್ದರಾಮಯ್ಯನವರು ವೃತ್ತಿ ರಂಗಭೂಮಿ ಕೇಂದ್ರದ ಸ್ಥಾಪನೆಗೆ ಅಧೀಕೃತ ಅನುಮೋದನೆಯನ್ನು ಕೊಟ್ಟು ಬಜೆಟ್ಟಿನಲ್ಲಿ ಒಂದು ಕೋಟಿ ರೂಪಾಯಿಗಳನ್ನೂ ಮೀಸಲಿಟ್ಟರು. ಕೊಂಡಜ್ಜಿ ಮೋಹನ್‌ರವರ ಒತ್ತಾಯದ ಮೇರೆಗೆ ಮಧ್ಯಕರ್ನಾಟಕದ ದಾವಣಗೆರೆಯ ಕೊಂಡಜ್ಜಿಯಲ್ಲಿ ವೃತಿರಂಗಭೂಮಿ ಕೇಂದ್ರ ಸ್ಥಾಪನೆ ಮಾಡುವುದಾಗಿ ನಿಶ್ಚಯಿಸಲಾಯಿತು. ದಾವಣಗೆರೆಯ ಪ್ರಭಾವಿ ರಾಜಕಾರಣಿಯಾಗಿರುವ ಶಾಮನೂರು ಶಿವಶಂಕರಪ್ಪನವರೂ ಕೂಡಾ ಈ ಪ್ರಸ್ತಾವನೆಗೆ ಬೆಂಬಲಿಸಿದರು.
 
ವಿಶುಕುಮಾರರವರು
ಹೀಗೆ.. ಅಧಿವೇಶನದಲ್ಲಿ ಘೋಷಣೆಯಾಗಿ, ಅನುದಾನ ಮೀಸಲಿಟ್ಟು ಎರಡು ವರ್ಷಗಳೇ ಕಳೆದವು. ಈ ನಡುವೆ ಸಿದ್ದರಾಮಯ್ಯನವರು ಹಾಗೂ ಉಮಾಶ್ರೀಯವರು ಮಾಜಿಗಳಾಗಿದ್ದರು. ಚುನಾವಣೆಯಲ್ಲೆ ಒಂದಿಷ್ಟು ಕಾಲ ಕೊಚ್ಚಿಹೋಯಿತು.  ಕಾಂಗ್ರೆಸ್ ಸರಕಾರ ಹೋಗಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು. ತದನಂತರ ಕೇಂದ್ರ ಚುನಾವಣೆ.. ಆನಂತರ ಅಸ್ಥಿರ ರಾಜಕೀಯ ಬೆಳವಣೆಗೆ.. ಹೀಗೆ ನಮ್ಮ ವೃತಿರಂಗಭೂಮಿ ಕೇಂದ್ರದ ಅನುಷ್ಟಾನಕ್ಕೆ ಕಾಲ ಕೂಡಿ ಬರಲೇ ಇಲ್ಲಾ. ಆದರೆ.. ಅಧಿಕಾರಿಗಳು ಸುಮ್ಮನಿರಲಿಲ್ಲ. ವಿಶುಕುಮಾರರವರು ಮಾಜಿ ಆಗುವ ಮುನ್ನ ಹಲವಾರು ಸಭೆಗಳನ್ನು ನಡೆಸಿದರು. ವೃತಿ ರಂಗಭೂಮಿ ಕೇಂದ್ರ ಎಲ್ಲಿ ಸ್ಥಾಪನೆಯಾಗಬೇಕು, ಯಾರಿಗೆ ಅದರ ಹೊಣೆಗಾರಿಕೆ ಕೊಡಬೇಕು ಎನ್ನುವುದನ್ನೆಲ್ಲಾ ನಿರ್ಧರಿಸಿದರು. ಮೂರು ಜನ ರಂಗಕರ್ಮಿಗಳ ಹೆಸರನ್ನು ಸರಕಾರಕ್ಕೆ ಸೂಚಿಸಲಾಗಿತ್ತು. ಅಷ್ಟರಲ್ಲಿ ಸಂಸ್ಕೃತಿ ಇಲಾಖೆಯಿಂದಾ ಜಯಮಾಲರವರು ಹೋಗಿ ಮಾನ್ಯ ಡಿ.ಕೆ.ಶಿವಕುಮಾರರವರು ಸಚಿವರಾಗಿಯಾಗಿತ್ತು. ಆದರೆ ಕೊಂಡಜ್ಜಿ ಮೋಹನ್‌ರವರು ಮಾತ್ರ ಬೆಂಬಿಡದ ಭೂತದಂತೆ ಕಡತದ ಹಿಂದೆ ಬಿದ್ದಿದ್ದರು, ವಿಶುಕುಮಾರರವರು ನಿವೃತ್ತರಾಗುವ ಕೊನೆಯ ದಿನವೇ ಫೈಲಿಗೆ ಅವರ ಸಹಿ ಮಾಡಿಸಿ ಸಚಿವಾಲಯಕ್ಕೆ ಕಳಿಸುವ ವ್ಯವಸ್ಥೆ ಮಾಡಿ ಫಾಲೋಅಪ್ ಮಾಡುತ್ತಲೇ ಇದ್ದರು. ಕೆಲವು ಅತೃಪ್ತ ಶಾಸಕರ ಮುನಿಸಿನಿಂದ ಅಲ್ಪ ಮತಕ್ಕೆ ಒಳಗಾದ ಸಮ್ಮಿಶ್ರ ಸರಕಾರ ಇನ್ನೇನು ಬೀಳುತ್ತದೆ ಎನ್ನುವ ಸಂದರ್ಭದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರರವರು ಮಾಜಿಯಾಗುವ ಮುನ್ನ ತಮ್ಮ ಇಲಾಖೆಯ ಕಡತಗಳನ್ನು ಅರ್ಜೆಂಟಾಗಿ ವಿಲೇವಾರಿ ಮಾಡತೊಡಗಿದರು. ಹಾಗೆ ಮುಕ್ತಿ ಪಡೆದ ಕಡತದಲ್ಲಿ ಈ ವೃತಿ ರಂಗಭೂಮಿ ಕೇಂದ್ರದ್ದೂ ಒಂದು.

2019 ಜುಲೈ 19ರಂದು ಕರ್ನಾಟಕ ಸರ್ಕಾರದ ಅಧೀಕೃತ ಅಧಿಸೂಚನೆ ಹೊರಬಿತ್ತು. ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ವೃತಿ ರಂಗಭೂಮಿ ಕೇಂದ್ರದ ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಪಿ.ಗಂಗಾಧರಸ್ವಾಮಿಯವರನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯಪಾಲರ ಆದೇಶದಾನುಸಾರ ಅವರ ಹೆಸರಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನ ಕಾರ್ಯದರ್ಶಿಗಳ ಸಹಿಯೊಂದಿಗೆ ಹೊರಬಂದ ಅಧಿಸೂಚನೆಯ ಪತ್ರ ರಂಗಕರ್ಮಿಗಳಲ್ಲಿ ಹರುಷವನ್ನು ತಂದಿತು.

ಈಗ ಉದ್ದೇಶಿತ ವೃತಿ ರಂಗಭೂಮಿ ಕೇಂದ್ರಕ್ಕೆ ಸರಕಾರಿ ಒಪ್ಪಿಗೆಯೂ ದೊರೆತಿದೆ, ಹಣವೂ ಇದೆ, ಅದಕ್ಕೊಬ್ಬರು ವಿಶೇಷ ಅಧಿಕಾರಿಯನ್ನೂ ನಿಯಮಿಸಲಾಗಿದೆ. ಆದರೆ.. ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾಣಕಮ್ಮನವರು ಮಾತ್ರ ವಿಶೇಷಾಧಿಕಾರಿಗಳಿಗೆ ಅಧೀಕೃತ ಸಮ್ಮತಿ ಪತ್ರ ಕೊಡುತ್ತಿಲ್ಲ. ಇನ್ನೂ ಪರಿಶೀಲಿಸಬೇಕು ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ. ಆದಷ್ಟು ಬೇಗ ವಿಶೇಷಾಧಿಕಾರಿಗಳಿಗೆ ಅಧೀಕೃತ ಪತ್ರದ ಮೂಲಕ ಅಧಿಕಾರ ಕೊಡಿ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು ಇಲಾಖೆಯ ನಿರ್ದೇಶಕಿಯವರಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ.. ಜಾಣಕಮ್ಮನವರು ಮನಸ್ಸು ಮಾಡುತ್ತಿಲ್ಲ. ಸರಕಾರದ ಆದೇಶವೇ ಆಗಿರುವಾಗ ಇಂದಿಲ್ಲ ನಾಳೆ ಅಧೀಕೃತ ಆಹ್ವಾನ ಪತ್ರ ಕೊಡಲೇಬೇಕಾಗುತ್ತದೆ. ಕೊಡುತ್ತಾರೆ.

ಆದರೆ.. ಈಗ ಮುಂದಿರುವ ಸವಾಲು ಏನೆಂದರೆ ವೃತ್ತಿ ರಂಗಭೂಮಿ ಕೇಂದ್ರವನ್ನು ಕಟ್ಟುವುದು ಹೇಗೆ ಎನ್ನುವುದು. ಇನ್ನೂ ಯಾರಿಗೂ ಸಾಗುವ ದಾರಿಯ ಸ್ಪಷ್ಟತೆ ಇಲ್ಲಾ. ವೃತ್ತಿರಂಗಭೂಮಿಯನ್ನು ಉಳಿಸಿ ಬೆಳೆಸುವ ಗುರಿ ಮಾತ್ರ ಗೊತ್ತಿದೆ. ಆದರೆ.. ಆ ಗುರಿ ಸಾಧನೆಗೆ ಯಾವ ರೀತಿಯ ರೂಪರೇಷೆಗಳಿವೆ ಎಂದು ಕೇಳಿದರೆ ಸರಿಯಾದ ಉತ್ತರ ಇಲ್ಲ. ದಾರಿಯೇ ಗೊತ್ತಿಲ್ಲದ ದಟ್ಟ ಕಾನನದಲ್ಲಿ ಹೊಸ ದಾರಿ ದಿಕ್ಕು ಹುಡುಕುವ ಪ್ರಯತ್ನವನ್ನು 69 ವರ್ಷ ವಯೋಮಾನದ ಉತ್ಸಾಹಿ ಪಿ.ಗಂಗಾಧರಸ್ವಾಮಿಯವರು ಮಾಡಬೇಕಿದೆ. ಅವರಿಗೂ ಯಾಕೆ ಮಾಡಬೇಕು ಎನ್ನುವುದು ಗೊತ್ತಿದೆಯೇ ಹೊರತು ಹೇಗೆ ಮಾಡಬೇಕು, ಏನು ಮಾಡಬೇಕು, ಯಾರ ಸಹಾಯ ಸಹಕಾರ ಪಡೆದು ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನಗಳಿಲ್ಲ. ಈಗಿರುವ ಒಂದೇ ಒಂದು ಮಾರ್ಗದರ್ಶಿ ಮಾದರಿ ಅಂದರೆ ಅದು ರಂಗಾಯಣದ ಬೈಲಾ.. ಈ ಸಿದ್ಧ ಮಾದರಿಯನ್ನು ಇಟ್ಟುಕೊಂಡು ಹೊಸ ವೃತ್ತಿರಂಗಭೂಮಿ ಕೇಂದ್ರವನ್ನು ಕಟ್ಟುವ ಹರಸಾಹಸವನ್ನು ಶೂನ್ಯದಿಂದ ಆರಂಭಿಸಬೇಕಿದೆ.

ಆಧುನಿಕ ರಂಗಭೂಮಿಗೆ ಪೂರಕವಾಗಿ ಮೈಸೂರು ರಂಗಾಯಣವನ್ನು ಆರಂಭಿಸಲಾಯಿತು. ಆಗಿನಿಂದಲೂ ವೃತ್ತಿ ರಂಗಭೂಮಿಗೂ ಸಹ ರಂಗಾಯಣದಂತಹ ರೆಪರ್ಟರಿ ಬೇಕೆಂಬುದು ಕೆಲವು ವೃತ್ತಿರಂಗಭೂಮಿಯವರ ಬೇಡಿಕೆಯೂ ಆಗಿತ್ತು. ಈಗ ವೃತ್ತಿ ರಂಗಭೂಮಿ ಕೇಂದ್ರವನ್ನೂ ಸಹ ರಂಗಾಯಣದ ಮಾದರಿಯಲ್ಲಿ ಕಂಪನಿ ನಾಟಕ ಶೈಲಿಯ ರೆಪರ್ಟರಿಯನ್ನಾಗಿ  ಮಾಡಬೇಕಾ? ಅದು ಅಷ್ಟು ಸುಲಭವಾ? ರೆಪರ್ಟರಿ ಎಂದರೆ ಊರಿಂದೂರಿಗೆ ನಾಟಕ ತಂಡವನ್ನು ಕರೆದುಕೊಂಡು ಹೋಗುವಂತಹ ಸಂಚಾರಿ ರಂಗಭೂಮಿ. ಆಧುನಿಕ ರಂಗಭೂಮಿ ನಾಟಕಗಳಿಗಾದರೋ ಕಡಿಮೆ ಪರಿಕರಗಳಿರುತ್ತವೆಯಾದ್ದರಿಂದ ಸಂಚಾರ ಸುಲಭ. ಆದರೆ.. ವೃತ್ತಿ ರಂಗಭೂಮಿಯ ಪರದೆ, ಪರಿಕರಗಳನ್ನು ದಿನಕ್ಕೊಂದು ಊರಿಗೆ ತೆಗೆದುಕೊಂಡು ಹೋಗಿ ನಾಟಕವಾಡುವುದು ಕಷ್ಟಸಾಧ್ಯ. ವೃತ್ತಿ ರಂಗಭೂಮಿಯ ನಾಟಕಗಳೆಂದರೆ ಒಂದು ಸ್ಥಳದಲ್ಲಿ ತಿಂಗಳಾನು ಕಾಲ ಟೆಂಟ್ ಹಾಕಿ ನಾಟಕ ಮಾಡಿ ಕಲೆಕ್ಷನ್ ಕಡಿಮೆ ಆದಾಗ ಮತ್ತೊಂದು ಊರಿಗೆ ಹೋಗಿ ಟೆಂಟ್ ಹಾಕಲಾಗುತ್ತದೆ. ಈ ರೀತಿಯಲ್ಲಿ ರೆಪರ್ಟರಿಗೆ ಮಾಡಲು ಸಾಧ್ಯವಿಲ್ಲಾ. ಮಾಡಿದರೆ ಅದು ಇನ್ನೊಂದು ನಾಟಕ ಕಂಪನಿಯಾಗುತ್ತದಷ್ಟೇ.

ವಿಶೇಷಾಧಿಕಾರಿಯಾಗಿರುವ ಗಂಗಾಧರಸ್ವಾಮಿಯವರ ರಂಗಭೂಮಿಯ ಅನುಭವ ಬೇಕಾದಷ್ಟಿದೆ. ಸಮುದಾಯ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ನೀನಾಸಮ್ ರಂಗಶಿಕ್ಷಣ ಸಂಸ್ಥೆಯಲ್ಲಿ ರಂಗಶಿಕ್ಷಕರಾಗಿದ್ದವರು. 1989ರಿಂದ ಇಪ್ಪತ್ತು ವರ್ಷಗಳ ಕಾಲ ಮೈಸೂರಿನ ರಂಗಾಯಣದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಟ, ನಿರ್ದೇಶಕ, ತರಬೇತುದಾರ, ನೇಪತ್ಯ ತಜ್ಞ, ಸಂಘಟಕರಾಗಿ ದುಡಿಯುತ್ತಾ ರಂಗಭೂಮಿಯನ್ನೇ ಬದುಕಾಗಿಸಿಕೊಂಡವರು. ರಾಜ್ಯಾದ್ಯಂತ ಅನೇಕ ರಂಗತರಬೇತಿ ಕಾರ್ಯಾಗಾರಗಳನ್ನು ನಿರ್ದೇಶಿಸಿ ಸಾವಿರಾರು ಯುವಕರಿಗೆ ರಂಗತರಬೇತಿಯನ್ನು ಕೊಟ್ಟವರು. ಇಂತಹ ಗಂಗಾಧರಸ್ವಾಮಿಯವರು ಪ್ರಯತ್ನಿಸಿದರೆ ಮಾದರಿ ವೃತ್ತಿ ರಂಗಭೂಮಿ ಕೇಂದ್ರವನ್ನು ಕಟ್ಟುವುದು ಅಸಾಧ್ಯದ ಸಂಗತಿ ಏನೂ ಅಲ್ಲ. ಆದರೆ.. ಅವರಿಗೂ ಮಿತಿಗಳಿವೆ, ಅವರೊಬ್ಬರಿಂದಲೇ ಈ ಎಲ್ಲವೂ ಆಗಲು ಸಾಧ್ಯವಿಲ್ಲ. ಸಂಸ್ಕೃತಿ ಇಲಾಖೆಯ ಸಹಾಯ, ವೃತ್ತಿ ರಂಗಭೂಮಿಯವರ ಸಹಕಾರ ಅತ್ಯಂತ ಅಗತ್ಯವಾಗಿದೆ.

ಮೊದಲು ಕೊಂಡಜ್ಜಿ ಎನ್ನುವ ಬೆಟ್ಟದಲ್ಲಿರುವ ಸ್ಕೌಟ್ ಮತ್ತು ಗೈಡ್ಸ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಬೇಸಿಕ್ ಇನ್ಪಾಸ್ಟ್ರಕ್ಚರ್ ನಿರ್ಮಿಸಬೇಕಾಗಿದೆ. ಇದಕ್ಕಾಗಿಯೇ ಒಂದು ವರ್ಷ ಬೇಕಾಗಬಹುದೇನೋ. ಅದರ ಜೊತೆಗೆ ವೃತ್ತಿ ರಂಗಭೂಮಿ ಕೇಂದ್ರದ ಉದ್ದೇಶ, ದಾರಿ, ಗುರಿಗಳನ್ನೆಲ್ಲ ನಿರ್ಧರಿಸಿ ವಿಸ್ತೃತ ರೂಪರೇಷೆಗಳನ್ನು ಸಿದ್ದಗೊಳಿಸಬೇಕಾಗಿದೆ. ರಂಗಾಯಣವನ್ನೇ ಮಾದರಿಯಾಗಿಟ್ಟುಕೊಂಡರೆ ಇಡೀ ಯೋಜನೆಗೆ ಸೀಮಿತತೆ ಬರುತ್ತದೆ. ರಂಗಾಯಣದಂತೆಯೇ ಇದು ಇನ್ನೊಂದು ವೃತ್ತಿರಂಗಭೂಮಿಯ ರೆಪರ್ಟರಿಯಾಗುತ್ತದಷ್ಟೇ. ಆದರೆ.. ಅದನ್ನು ಮೀರಿ ದೊಡ್ಡ ಕ್ಯಾನ್ವಾಸ್ ಸಿದ್ದಪಡಿಸಿಕೊಂಡು ಹಂತ ಹಂತವಾಗಿ ಯೋಜನೆ ಜಾರಿಮಾಡಬೇಕಾಗಿದೆ. ತುಂಬ ಅಗತ್ಯವಾಗಿ ಈ ವೃತ್ತಿ ರಂಗಭೂಮಿ ಕೇಂದ್ರದ ಉದ್ದೇಶಗಳಲ್ಲಿ ಇವುಗಳಿದ್ದರೆ ಉತ್ತಮ.

1.        ಹೊಸದಾಗಿ ಆರಂಭವಾಗುತ್ತಿರುವ ವೃತ್ತಿರಂಗಭೂಮಿ ಕೇಂದ್ರವು ಸಮಕಾಲೀನ ವೃತ್ತಿ ರಂಗಭೂಮಿಯ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕಾಗಿದೆ.

2.       ರಂಗಾಸಕ್ತ ಯುವ ಕಲಾವಿದರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ಸಿದ್ದಗೊಳಿಸಿ ವೃತ್ತಿಪರ ಕಲಾವಿದರ ಅಭಾವದಿಂದ ತತ್ತರಿಸುತ್ತಿರುವ ನಾಟಕ ಕಂಪನಿಗಳಿಗೆ ಕಳುಹಿಸುವ ಏರ್ಪಾಡು ಮಾಡಬೇಕಾಗಿದೆ. ಇದಕ್ಕಾಗಿ ಕಂಪನಿ ನಾಟಕ ಶೈಲಿಯ ಅಭಿನಯ ತರಬೇತಿಯು ವೃತ್ತಿರಂಗಭೂಮಿ ಕೇಂದ್ರದ ಮೊದಲ ಆದ್ಯತೆ ಆಗಬೇಕಾಗಿದೆ. ಅದಕ್ಕಾಗಿ  ಕಟ್ಟಡ, ರಂಗಮಂದಿರ ಇತ್ಯಾದಿಗಳಿಗಾಗಿ ಕಾಯದೇ ಕೊಂಡಜ್ಜಿಯಲ್ಲಿ ಈಗಿರುವ ಸಭಾಂಗಣವನ್ನೇ ಬಳಸಿ ರಂಗಾಸಕ್ತ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಂಡು ತರಬೇತಿ ಕಾರ್ಯವನ್ನು ಶುರುಮಾಡಬಹುದಾಗಿದೆ. ಅಭಿನಯ, ರಂಗಸಂಗೀತ, ರಂಗಪರಿಕರ, ನಿರ್ದೇಶನ, ನಾಟಕ ರಚನೆ.. ಹೀಗೆ ಮುಂತಾದ ವಿಭಾಗಗಳಲ್ಲಿ ವೃತ್ತಿಪರ ತರಬೇತಿಯನ್ನು ನೀಡಿದ್ದೇ ಆದರೆ ಮುಳುಗುತ್ತಿರುವ ನಾಟಕ ಕಂಪನಿಗಳು ತೇಲಲು ಬಹಳ ಸಹಾಯವಾಗುತ್ತದೆ.

3.       ವೃತ್ತಿರಂಗಭೂಮಿಯ ವರ್ತಮಾನ ಸಂಕಷ್ಟಕರವಾಗಿದ್ದರೂ ಅದರ ಇತಿಹಾಸ ಶ್ರೀಮಂತವಾಗಿದೆ. ಪಾರ್ಸಿ ಕಂಪನಿಗಳಿಂದ ಆರಂಭಗೊಂಡು ಈವರೆಗಿನ ವೃತ್ತಿರಂಗಭೂಮಿಯ ಪರಂಪರೆಯನ್ನು ಇಂದಿನ ಹಾಗೂ ಮುಂದಿನ ತಲೆಮಾರಿಗೆ ಕಾಯ್ದಿಟ್ಟುಕೊಳ್ಳಲು ಮ್ಯೂಜಿಯಮ್ ಒಂದನ್ನು ಕಾಲಮಿತಿಯಲ್ಲಿ ನಿರ್ಮಿಸಿ ಕೊಂಡಜ್ಜಿಯನ್ನು ವೃತ್ತಿರಂಗಭೂಮಿಯ ಹೆರಿಟೇಜ್ ಕೇಂದ್ರವಾಗಿಸಬಹುದಾಗಿದೆ. ಜೊತೆಗೆ ವೃತ್ತಿ ರಂಗಭೂಮಿಗೆ ಸೇರಿರುವ ಎಲ್ಲಾ ಮಾಹಿತಿಗಳನ್ನು ಡಿಜಟಲ್ ಮಾಧ್ಯಮದಲ್ಲಿ ದಾಖಲೀಕರಿಸಿ ಅಧ್ಯಯನ ಕೇಂದ್ರವೊಂದನ್ನೂ ಆರಂಭಿಸಬಹುದಾಗಿದೆ. 

4.       ವೃತ್ತಿರಂಗಭೂಮಿಯಲ್ಲಿ ಸಾಧನೆ ಮಾಡಿದ ಸಾಧಕರ ಸಂಪೂರ್ಣ ಮಾಹಿಸಿ ಕೇಂದ್ರವೂ ಇಲ್ಲಿ ಇರಬೇಕಾಗಿದ್ದು, ಇಲ್ಲಿವರೆಗೂ ಪ್ರದರ್ಶನ ಕಂಡ ನಾಟಕಗಳ ಸ್ಕ್ರಿಪ್ಟ್ ಬ್ಯಾಂಕ್ ಒಂದನ್ನು ಆರಂಭಿಸಿ ಮುದ್ರಿತ, ಕೈಬರಹದ, ಅಥವಾ ಝರಾಕ್ಸ್ ಪ್ರತಿಗಳ ರಂಗಕೃತಿಗಳನ್ನು ಹಾಗೂ ರಂಗಭೂಮಿ ಸಂಬಂಧಿಸಿದ ಪುಸ್ತಕಗಳನ್ನು ಒಂದು ಕಡೆ ಅನುಕ್ರಮವಾಗಿ ಶೇಖರಿಸಿಟ್ಟು ಗ್ರಂಥಾಲಯವೊಂದನ್ನು ಆರಂಭಿಸಬೇಕಿದೆ.

5.       ವೃತ್ತಿ ರಂಗಭೂಮಿಯ ವೈಫಲ್ಯಕ್ಕೆ ಕಾರಣಗಳೇನು? ನಾಟಕ ಕಂಪನಿಗಳ ಅವನತಿಗೆ ಕಾರಣವಾದ ಅಂಶಗಳೇನು? ಮತ್ತೆ ಕಂಪನಿ ನಾಟಕಗಳು ಪ್ರಬದ್ದಮಾನಕ್ಕೆ ಬರಲು ಆಗಬೇಕಾದ ಬದಲಾವಣೆಗಳೇನು? ಜನಪ್ರೀಯ ಕಲಾಮಾಧ್ಯಮಗಳನ್ನು ಉಳಿಸಿ ಬೆಳೆಸುವಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳೇನು?.. ಇಂತಹ ಅನೇಕ ವಿಷಯಗಳ ಕುರಿತು ಪ್ರಾಯೋಗಿಕ ತಜ್ಞರಿಂದ ವಿಚಾರಸಂಕಿರಣವನ್ನು ಆಗಾಗ ಆಯೋಜಿಸಬೇಕಾಗಿದೆ ಹಾಗೂ ಯುವ ಕಲಾವಿದರುಗಳ ಜೊತೆಗೆ ನಾಟಕ ಕಂಪನಿಗಳ ಮಾಲೀಕರು, ಕಲಾವಿದರುಗಳನ್ನು ಇದು ಒಳಗೊಳ್ಳಬೇಕಿದೆ.

6.       ವೃತ್ತಿ ಕಂಪನಿ ಮಾದರಿಯ ನಾಟಕಗಳನ್ನು ಮಾಡುವುದು ಇಲ್ಲವೇ ಕಂಪನಿ ನಾಟಕಗಳ ಉತ್ಸವವನ್ನು ಆಯೋಜಿಸುವುದೇ ಆದ್ಯತೆಯಾದರೆ ಉದ್ದೇಶಿತ ಕೇಂದ್ರವು ಇನ್ನೊಂದು ನಾಟಕ ಕಂಪನಿಯಾಗಬಹುದಾಗಿದೆ. ಆದರೆ.. ಇದರ ಉದ್ದೇಶ ನಾಟಕ ಮಾಡುವುದು ಇಲ್ಲವೇ ಮಾಡಿಸುವುದು ಆಗಿರದೇ ವೃತ್ತಿರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಬೇಕಾದ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯುವುದು ಹಾಗೂ ಎಲ್ಲಾ ರೀತಿಯ ಸಹಕಾರವನ್ನು ಒದಗಿಸುವುದೇ ಆದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದಕ್ಕೂ ಸಾರ್ಥಕತೆ ಬರುತ್ತದೆ.

7.        ಇದರ ಜೊತೆಗೆ ಮುಂದೆ ಸಾಧ್ಯವಾಗುವುದಾದರೆ ಮಾನ್ಯ ಎಂ.ಪಿ.ಪ್ರಕಾಶರ ಆಶಯದಂತೆ ವೃತ್ತಿ ನಾಟಕ ಕಂಪನಿಯಲ್ಲಿ ದುಡಿದ ಹಾಗೂ ದುಡಿಯುತ್ತಿರುವ ರಂಗಕರ್ಮಿ ಕಲಾವಿದರುಗಳ ಮಕ್ಕಳಿಗೆಂದೇ ಉಚಿತ ವಸತಿ ಶಾಲೆಯೊಂದನ್ನು ಆರಂಭಿಸಬಹುದಾಗಿದೆ.  

ಇದೆಲ್ಲವನ್ನೂ ಹೇಳುವುದಕ್ಕೆ ಬರೆಯುವುದಕ್ಕೆ ಬಲು ಸುಲಭದ ಕೆಲಸ. ಆದರೆ ಅನುಷ್ಟಾನಕ್ಕೆ ತರುವುದು ಬಲು ಕಷ್ಟ. ಈಗಾಗಲೇ ವೃತ್ತಿ ರಂಗಭೂಮಿ ಮತ್ತು ಆಧುನಿಕ ರಂಗಭೂಮಿಯ ನಡುವೆ ಕಂದರವೊಂದು ಮೊದಲಿನಿಂದಲೂ ಸೃಷ್ಟಿಯಾಗಿದೆ. ಅವರನ್ನು ಇವರು, ಇವರನ್ನು ಅವರು ಟೀಕಿಸುವುದು ಹಾಗೂ ತಮ್ಮದೇ ಉತ್ತಮವೆಂದು ಹೇಳಿಕೊಳ್ಳುವುದು ಆಕಾಲದಿಂದಲೂ ನಡೆದುಕೊಂಡೇ ಬಂದಿದೆ. ವೃತ್ತಿ ಕಂಪನಿ ನಾಟಕಗಳನ್ನು ಮೆಲೊಡ್ರಾಮಾಗಳೆಂದು ಹವ್ಯಾಸಿಗಳು ಮೂದಲಿಸಿದರೆ, ಆಧುನಿಕ ನಾಟಕಗಳನ್ನು ಯಾರು ನೋಡುತ್ತಾರೆಂದು ವೃತ್ತಿಯವರು ಟೀಕಿಸುತ್ತಾರೆ. ಯಾರು ಏನೇ ಹೇಳಲಿ ಈಗಲೂ ವೃತ್ತಿರಂಗಭೂಮಿ ತನ್ನ ಜನಪ್ರೀಯತೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಉಳಿಸಿಕೊಂಡಿದೆ ಹಾಗೂ ತನ್ನದೇ ಆದ ಪ್ರೇಕ್ಷಕ ವರ್ಗವನ್ನೂ ಹೊಂದಿದೆ. ಈಗಲೂ ಬಹುತೇಕ ಗ್ರಾಮಗಳಲ್ಲಿ ಗ್ರಾಮೀಣ ಹವ್ಯಾಸಿಗಳಿಂದ ನಿರ್ಮಿತಗೊಂಡು ಪ್ರದರ್ಶನಗೊಳ್ಳುತ್ತಿರುವ ನಾಟಕಗಳಲ್ಲಿ ಬಹುತೇಕವು ಕಂಪನಿ ಶೈಲಿಯ ನಾಟಕಗಳೇ. ಆಧುನಿಕ ರಂಗಭೂಮಿಯವರನ್ನು ವೃತ್ತಿಯವರು ಯಾವಾಗಲೂ ಗುಮಾನಿಯಿಂದಲೇ ನೋಡುತ್ತಾರೆ. ಆದರೆ ಹವ್ಯಾಸಿ, ವೃತ್ತಿ, ರೆಪರ್ಟರಿ.. ಹೀಗೆ ಎಲ್ಲಾ ವಿಧವಾದ ರಂಗಪ್ರಕಾರಗಳು ಸೇರಿಯೇ ಸಮಗ್ರ ಕನ್ನಡ ರಂಗಭೂಮಿಯಾಗಿದೆ.

ಈಗ ಹೊಸದಾಗಿ ಅಸ್ಥಿತ್ವವನ್ನು ಪಡೆಯುತ್ತಿರುವ ವೃತ್ತಿ ರಂಗಭೂಮಿ ಕೇಂದ್ರದ ರೂವಾರಿಗಳು ಯಾರಾಗಬೇಕು ಎನ್ನುವುದೂ ಸಹ ಅನೇಕ ಚರ್ಚೆಗೆ ಕಾರಣವಾಗಿತ್ತು. ವೃತ್ತಿರಂಗಭೂಮಿಯವರಿಗೆ ಇದು ಮೀಸಲಾಗಿರಬೇಕು ಹಾಗೂ ಅವರೇ ಅದನ್ನು ಮುನ್ನಡೆಸಬೇಕು ಎಂಬುದು ವೃತ್ತಿಗರ ಒತ್ತಾಯವಾಗಿತ್ತು. ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶೇಖ ಮಾಸ್ತರರ ನಾಯಕತ್ವದಲ್ಲಿ ದಾವಣಗೆರೆಯಲ್ಲಿ ಸೇರಿದ ನಾಟಕ ಕಂಪನಿಯ ಕೆಲವು ಮಾಲೀಕರು ಸರಕಾರಕ್ಕೆ ಹೀಗೆಂದು ಆಗ್ರಹಿಸಿದ್ದರು. ಕೊಂಡಜ್ಜಿಯಲ್ಲಿ ಈ  ಕೇಂದ್ರ ಆಗುವುದೇ ಬೇಡಾ ದಾವಣಗೆರೆಯ ಚಿಂದೋಡಿ ಲೀಲಾರವರ ರಂಗಮಂದಿರವೇ ಇದಕ್ಕೆ ಸೂಕ್ತ ಎನ್ನುವ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಹಾಗೂ ಈ ಕೇಂದ್ರಕ್ಕೆ ರೂವಾರಿಗಳಾಗಲು ಚಿಂದೋಡಿ ಬಂಗಾರೇಶ್, ಜೇವರಗಿ ರಾಜಣ್ಣ ಹಾಗೂ ಶ್ರೀಧರ್ ಈ ಮೂವರ ಹೆಸರನ್ನು ಶೇಖ ಮಾಸ್ತರರು ಮನವಿ ಪತ್ರದಲ್ಲಿ ಬರೆದು ಸಚಿವೆಯಾಗಿದ್ದ ಉಮಾಶ್ರೀಯವರಿಗೆ ಕೊಡಲಾಗಿತ್ತು. ಆದರೆ.. ಈ  ಯಾವ ಹೆಸರುಗಳನ್ನೂ ಪರಿಗಣಿಸದೇ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲರವರಿಂದ ಸ್ಥಳ ಪರಿಶೀಲನೆ ನಡೆಸಿ ಕೊನೆಗೆ ಕೊಂಡಜ್ಜಿಯಲ್ಲಿಯೇ ಕೇಂದ್ರ ಇರಬೇಕು ಹಾಗೂ ಆಯ್ಕೆ ಸಮಿತಿ ಶಿಪಾರಸ್ಸು ಮಾಡಿದ ಹೆಸರುಗಳಲ್ಲೆ ಒಂದು ಪೈನಲ್ ಆಗಬೇಕು ಎಂದು ಉಮಾಶ್ರೀಯವರು ಮೌಖಿಕವಾಗಿ ಆದೇಶಿಸಿದ್ದರು. ಪಿ.ಗಂಗಾಧರಸ್ವಾಮಿ, ಪ್ರಕಾಶ್ ಗರುಡ ಹಾಗೂ ಗೋಪಾಲಕೃಷ್ಣ ನಾಯರಿ.. ಈ ಮೂವರ ಹೆಸರನ್ನು ಸೂಚಿಸಲಾಗಿತ್ತು. ಕೊನೆಗೆ ಗಂಗಾಧರಸ್ವಾಮಿಯವರು ಆರಂಭಿಕ ವಿಶೇಷಾಧಿಕಾರಿಯಾಗಿ ನೇಮಕಗೊಂಡರು.

ಈಗ ವಿಶೇಷಾಧಿಕಾರಿಯಾಗಿ  ಆಯ್ಕೆಯಾದ ಗಂಗಾಧರಸ್ವಾಮಿಯವರ ದಾರಿಯೇನೂ ಸುಗಮವಾಗಿಲ್ಲ. ಆಧುನಿಕ ರಂಗಭೂಮಿಯವರ ಜೊತೆಯೇ ಹೆಚ್ಚು ಒಡನಾಟ ಇಟ್ಟುಕೊಂಡಿರುವ, ರಂಗಾಯಣದಂತಹ ರೆಪರ್ಟರಿಯಲ್ಲೇ ಎರಡು ದಶಕಗಳ ಕಾಲ ಶ್ರಮಿಸಿದ ಗಂಗಾಧರಸ್ವಾಮಿಯವರು ಮೊದಲು ವೃತ್ತಿರಂಗಭೂಮಿಯ ಆಳ ಅಗಲಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾಕೆಂದರೆ ಕಂಪನಿ ಮಾಲೀಕರ ಇಚ್ಚೆಗೆ ವಿರುದ್ಧವಾಗಿ ಗಂಗಾಧರಸ್ವಾಮಿಯವರನ್ನು ಸರಕಾರ ಆಯ್ಕೆ ಮಾಡಿದೆ. ಆದ್ದರಿಂದ ವೃತ್ತಿಕಂಪನಿಯವರಿಂದ ಸೌಹಾರ್ಧ ಸಹಕಾರವನ್ನು ಪಡೆದುಕೊಂಡು ವಿಶ್ವಾಸ ಗಳಿಸುವುದರ ಮೇಲೆ ಗಂಗಾಧರಸ್ವಾಮಿಯವರ ಕ್ಲಿಷ್ಟಕರದಾರಿಯ ಸುಗಮ ಪಯಣ ಅವಲಂಬಿಸಿದೆ. ಮೊದಲು ಗಂಗಾಧರಸ್ವಾಮಿಯವರು ವೃತ್ತಿರಂಗಭೂಮಿ ಹಾಗೂ ಆಧುನಿಕ ರಂಗಭೂಮಿಯ ಎಲ್ಲಾ ಅನುಭವೀ ರಂಗಕರ್ಮಿಗಳನ್ನು ಆಹ್ವಾನಿಸಿ ಸಭೆಯೊಂದನ್ನು ಕರೆದು ಅವರ ಸಲಹೆ ಸೂಚನೆ ಅನಿಸಿಕೆಗಳನ್ನೆಲ್ಲಾ ಸಮಾಧಾನದಿಂದ ಕೇಳಿ ಬರೆದುಕೊಂಡು ಸಾಧ್ಯವಾದದ್ದನ್ನು ಅಳವಡಿಸಿಕೊಂಡು ವೃತ್ತಿರಂಗಭೂಮಿ ಕೇಂದ್ರದ ರೂಪರೇಷೆಗಳನ್ನು ಸಿದ್ದಗೊಳಿಸಬೇಕಿದೆ. ಇದರಲ್ಲಿ ಯಶಸ್ವಿಯಾದರೆ ಮುಂದೆ ಸಂಸ್ಕೃತಿ  ಇಲಾಖೆಯ ಅಧಿಕಾರಿಗಳ ಮನವೊಲಿಸಿ ಹಂತಹಂತವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸಫಲತೆ ಇದೆ.

ಒಟ್ಟಿನ ಮೇಲೆ ವೃತ್ತಿ ರಂಗಭೂಮಿ ಕೇಂದ್ರವು ರಾಜ್ಯದಲ್ಲಿ ಮಾತ್ರವಲ್ಲಾ ಇಡೀ ದೇಶದಲ್ಲೇ ಮಾದರಿ ಕೇಂದ್ರವಾಗಿ ರೂಪಗೊಳ್ಳಬೇಕು ಎನ್ನುವುದು ಸಮಗ್ರ ಕನ್ನಡ ರಂಗಭೂಮಿಯವರ ಆಶಯವಾಗಿದೆ. ಮಾನ್ಯ ಎಂ.ಪಿ.ಪ್ರಕಾಶರವರು ಕಂಡ ಕನಸು ನನಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಂಗಕರ್ಮಿ ಕಲಾವಿದರುಗಳು  ಪಿ.ಗಂಗಾಧರಸ್ವಾಮಿಯವರಿಗೆ ಬೆಂಬಲಿಸಬೇಕಿದೆ. ಈ ವೃತ್ತಿ ರಂಗಭೂಮಿ ಕೇಂದ್ರದ ಪ್ರಯೋಗ ಯಶಸ್ವಿಯಾಗಲಿ. ಇದೂ ಸಹ ರಂಗಾಯಣದಂತೆ ಸರಕಾರಿ ಬಿಳಿಯಾನೆಯಾಗದೇ ಬಹುಜನರ ಆಶೋತ್ತರಗಳಿಗೆ ಸ್ಪಂದಿಸುವ ಕೇಂದ್ರವಾಗಲಿ.

-ಶಶಿಕಾಂತ ಯಡಹಳ್ಳಿ   
    





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ