ಸೋಮವಾರ, ಜುಲೈ 1, 2019

ಅನಗತ್ಯ ರಂಗತಂತ್ರಗಳ ಭಾರಕ್ಕೆ ಬಲಿಯಾದ “ಕನ್ನಗತ್ತಿ”; ನೋಡುಗರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ.


ಕನ್ನದ ಮಾರಿತಂದೆ.. ರಂಗದಮೇಲೆ  ಹೀಗೇಕೆ  ಬಂದೆ..?



ವಚನಕಾರರಲ್ಲಿ ಆಯ್ದಕ್ಕಿ ಮಾರಯ್ಯ, ಮೋಳಿಗೆ ಮಾರಯ್ಯನವರ ಹೆಸರನ್ನು ಕೇಳಿದ್ದೇವೆ ಹಾಗೂ ಅವರ ಕೆಲವು ವಚನಗಳೂ ದೊರೆತಿವೆ. ಆದರೆ.. ಈ ಕನ್ನದ ಮಾರಯ್ಯನ ಹೆಸರು ಕೇಳಿರಬಹುದಾದರು ವಿವರಗಳು ಹೆಚ್ಚಿಲ್ಲ. ಸಿಕ್ಕ ವಚನಗಳೂ ಸಹ ಐದಾರಕ್ಕಿಂತಾ ಹೆಚ್ಚಿಲ್ಲ. ಅವು ಬಹುತೇಕ ಜನರಿಗೂ ಗೊತ್ತಿಲ್ಲಾ. ಕನ್ನ ಹಾಕಿ ಕಳ್ಳತನ ಮಾಡುವ ಮಾರಯ್ಯ ಎನ್ನುವವ ಬಸವಣ್ಣನವರ ಪ್ರಭಾವದಿಂದ ಶರಣನಾದ ಎನ್ನುವುದು ಮಾತ್ರ ಗೊತ್ತಾಗಿರುವ ಸಂಗತಿ. ಹೀಗೆ ಹೆಚ್ಚಿನ ವಿವರಗಳು ಇಲ್ಲದೇ ಇರುವ ಶಿವಶರಣನ ಬಗ್ಗೆ ನಾಟಕ ಬರೆಯುವುದೆಂದರೆ ಬಲು ಕಷ್ಟಸಾಧ್ಯ. ಇಂತಹ ಕ್ಲಿಷ್ಟಕರ ಕೆಲಸವನ್ನು ಸಾಧಿಸಿ ತಮ್ಮ ಕಲ್ಪನೆಗಳ ಮೂಸೆಯಲ್ಲಿ ಹಲವಾರು ದೃಶ್ಯಗಳನ್ನು ಸೃಷ್ಟಿಸಿ ಸೊಗಸಾದ ನಾಟಕವೊಂದನ್ನು ಬರೆದುಕೊಟ್ಟ ಲಕ್ಷ್ಮೀಪತಿ ಕೋಲಾರರವರನ್ನು ಅಭಿನಂದಿಸಲೇಬೇಕು.

ಮೂರ‍್ನಾಲ್ಕು ವರ್ಷಗಳ ಮೇಲೆ ರಂಗನಿರಂತರ ರಂಗಸಂಘಟನೆಯು ಹೊಸ ನಾಟಕವೊಂದನ್ನು ನಿರ್ಮಿಸಿದೆ. ಲಕ್ಷ್ಮೀಪತಿ ಕೋಲಾರರವರನ್ನು ಆಗ್ರಹಿಸಿ ಕನ್ನಗತ್ತಿ ನಾಟಕವನ್ನು ಬರೆಯಿಸಿದೆ. ಖ್ಯಾತ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು ನಿರ್ದೇಶಿಸಿದ್ದಾರೆ. ರಂಗನಿರಂತರದ ಸಂಸ್ಥಾಪಕರಾದ ದಿ. ಸಿಜಿಕೆ ಯವರ ಜನ್ಮದಿನದ ಸ್ಮರಣಾರ್ಥ 2019. ಜೂನ್ 27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಗತ್ತಿ ನಾಟಕ ಮೊದಲಬಾರಿಗೆ ಪ್ರದರ್ಶನಗೊಂಡು ನೋಡುಗರಲ್ಲಿ ಭಯಂಕರ ಬೆರಗನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. 



ನಾಟಕದ ಕಥಾ ಸಾರಾಂಶ ಹೀಗಿದೆ. ಮಾರಯ್ಯ ಪ್ರೀತಿಸಿದ ಹುಡುಗಿಯ ಮನೆಯನ್ನು ಲಪಟಾಯಿಸಲು ಯತ್ನಿಸುವ ಶ್ರೀಮಂತನೊಬ್ಬನು ಅವಳ ಮನೆಯನ್ನೇ ಸುಟ್ಟುಬಿಡುತ್ತಾನೆ. ಊರನ್ನೇ ತೊರೆದು ಹೋದ ಹುಡುಗಿಯ ಕುಟುಂಬವನ್ನು ಅದು ಹೇಗೋ ಕಂಡು ಹಿಡಿದ ಮಾರಯ್ಯನಿಗೆ ಆಕೆಗೆ ನಿಶ್ಚಯವಾದ ಮದುವೆಯು ಹಣದ ಕೊರತೆಯಿಂದ ಮುರಿದು ಬೀಳುವ ಹಂತಕ್ಕೆ ತಲುಪಿದ್ದು ತಿಳಿಯುತ್ತದೆ.. ತನ್ನ ಪ್ರಿಯತಮೆಯ ಮನೆಯನ್ನು ಸುಟ್ಟ ಶ್ರೀಮಂತನ ಮನೆಗೆ ಕನ್ನಹಾಕಿ ದೋಚುವ ಮಾರಯ್ಯ ಸಿಕ್ಕ ಹೊನ್ನನ್ನೆಲ್ಲಾ ಆಕೆಯ ಗುಡಿಸಲಿನಲ್ಲಿ ಹಾಕಿ ಬರುತ್ತಾನೆ. ಆದರೆ.. ಬಸವಣ್ಣನವರ ಅನುಯಾಯಿಯಾದ ಆಕೆ ತನ್ನದಲ್ಲದ ಹೊನ್ನನ್ನು ಬಳಸದೇ ಕೊನೆಯವರೆಗೂ ಮದುವೆಯಾಗದೇ ಬದುಕುತ್ತಾಳೆ. ಅನಿವಾರ್ಯವಾಗಿ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಮಾರಯ್ಯ ಶ್ರೀಮಂತರ ಮನೆಗಳನ್ನು ಲೂಟಿ ಮಾಡಿ ಬಡವರಿಗೆ ಹಂಚುವ ಕಾಯಕವನ್ನು ಮುಂದುವರೆಸಿ ಕನ್ನದ ಮಾರಯ್ಯ ಎಂದು ಪ್ರಖ್ಯಾತನಾಗುತ್ತಾನೆ. ಇಡೀ ಪ್ರಭುತ್ವಕ್ಕೆ ಸವಾಲಾಗುತ್ತಾನೆ. ಯಾರೂ ಬಂಧಿಸಲು ಸಾಧ್ಯವೇ ಇಲ್ಲದ ಮಾರಯ್ಯನವರನ್ನು ಬಸವಣ್ಣನವರ ಕಣ್ಣುಗಳ ಪ್ರಖರತೆ ತಡೆದು ನಿಲ್ಲಿಸಿದಾಗ ಬಂಧನಕ್ಕೊಳಗಾಗುತ್ತಾನೆ.

ಬಿಜ್ಜಳ ರಾಜನು ಕಳ್ಳ ಮಾರಯ್ಯನಿಗೆ ಶಿಕ್ಷೆ ಕೊಡುವ ಮುನ್ನ ವಿಚಾರಣೆ ಮಾಡುವ ಬಸವಣ್ಣನವರು, ಶ್ರೀಮಂತ ಶ್ರೇಷ್ಠಿಯೇ ಬಲು ದೊಡ್ಡ ತೆರಿಗೆ ವಂಚಕ ಎಂದು ಸಾಬೀತುಪಡಿಸುತ್ತಾರೆ. ಪೂರಕ ಸಾಕ್ಷಿಗಳ ಕೊರತೆಯಿಂದ ಮಾರಯ್ಯ ಬಿಡುಗಡೆಗೊಳ್ಳುತ್ತಾನೆ.. ತನ್ನ ಗುಪ್ತಚರ ವಿಭಾಗಕ್ಕೆ ಸೇರಿಕೋ ಎನ್ನುವ ಬಿಜ್ಜಳನ ಆಗ್ರಹವನ್ನೂ ನಿರಾಕರಿಸುತ್ತಾನೆ. ಮಾರುವೇಷದಲ್ಲಿ ಮಾರಯ್ಯನನ್ನು ಹುಡುಕಿಕೊಂಡು ಸಂತೆಗೆ ಬಂದ ಬಿಜ್ಜಳನಿಗೆ ಮಂಕುಬೂದಿ ಎರಚಿದ ಕನ್ನದ ಮಾರಯ್ಯ ರಾಜನ ರಾಜಮುದ್ರೆಯನ್ನೇ ಕದ್ದು, ತಾನೇ ರಾಜಪೋಷಾಕು ಹಾಕಿಕೊಂಡು ಮಾರುವೇಶದ ಬಿಜ್ಜಳನನ್ನು ಜೊತೆಗೆ ಕರೆದುಕೊಂಡು ರಾಜ್ಯದಾದ್ಯಂತ ಸಂಚರಿಸಿ ಬಿಜ್ಜಳನಿಗೆ ಸಮಾಜದೊಳಗಿರುವ ಅಸಮಾನತೆಯ ದರ್ಶನ ಮಾಡಿಸುತ್ತಾನೆ. ಅನೇಕ ಆಜ್ಞೆಗಳನ್ನು ಹೊರಡಿಸುವ ಮೂಲಕ ನೊಂದವರಿಗೆ ನ್ಯಾಯವನ್ನು ದೊರಕಿಸಿ ಕೊಡುತ್ತಾನೆ. ಕೊನೆಗೆ ತುಂಬಿದ ಸಭೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ರಾಜಮುದ್ರೆಯನ್ನು ಬಿಜ್ಜಳನಿಗೊಬ್ಬಿಸಿದ ಕನ್ನದ ಮಾರಯ್ಯ ಶರಣಾಗತನಾಗುತ್ತಾನೆ. ತನ್ನ ವಿರುದ್ದ ಪಿತೂರಿಗಿಳಿದ ಶ್ರೀಮಂತರು ಹಾಗೂ ಮಾಂಡಲೀಕರ ಒತ್ತಾಯದ ಮೇರೆಗೆ ಬಿಜ್ಜಳ ಕನ್ನದ ಮಾರಯ್ಯನಿಗೆ ವಿಧಿಸುವ ಶಿಕ್ಷೆ ತಲೆದಂಡ. ಬಸವಣ್ಣ ಅಸಹಾಯಕನಾಗುತ್ತಾನೆ. ಮಾರಯ್ಯನ ಹೆಣ ನೇಣುಕುಣಿಕೆಯಲ್ಲಿ ನೇತಾಡುವಾಗ ನಾಟಕದ ಪಾತ್ರಗಳೆಲ್ಲಾ ಬಂದು ದೀಪ ಬೆಳಗುವ ಮೂಲಕ ನಾಟಕ ಮುಕ್ತಾಯವಾಗುತ್ತದೆ.

ರಂಗಪಠ್ಯವಾಗಿ ಕನ್ನಗತ್ತಿ ಬಹಳ ವಿಶಿಷ್ಟವಾದ ನಾಟಕ. ಬಸವಣ್ಣ ಸಾಮಾಜಿಕ ಬದಲಾವಣೆಯ ಹರಿಕಾರನೆಂದು ಹೇಳುವ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವಾರು ಬಂದಿವೆ. ಆದರೆ.. ಬಸವಣ್ಣ ಒಬ್ಬ ಸಮರ್ಥ ಅರ್ಥಿಕ ತಜ್ಞನೂ ಆಗಿದ್ದನೆಂಬುದನ್ನು ಕನ್ನಗತ್ತಿ ನಾಟಕ ಹೇಳುವಂತಿದೆ. ಚಿಕ್ಕಪುಟ್ಟ ಕಳ್ಳತನಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧವಾಗುವುದಾದರೆ, ವ್ಯಾಪಾರ ವ್ಯವಹಾರದ ಮೂಲಕ ಜನರಿಗೆ ಮೋಸ ಮಾಡಿ ಲಾಭವನ್ನು ಲೂಟಿಮಾಡುವುದೂ ಸಹ ಮೋಸವೇ ಆಗಿದೆ. ಪ್ರಭುತ್ವಕ್ಕೆ ಸುಳ್ಳು ಲೆಕ್ಕ ಕೊಟ್ಟು ತೆರಿಗೆ ವಂಚನೆ ಮಾಡುವುದೂ ಸಹ ಮಹಾಪರಾಧವೇ ಆಗಿದೆ ಎನ್ನುವುದನ್ನು ಬಸವಣ್ಣನವರ ಮೂಲಕ ಈ ನಾಟಕ ಹೇಳುತ್ತದೆ. ಪ್ರಸ್ತುತ ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡುವ ಬಂಡವಾಳಶಾಹಿಗಳು, ತೆರಿಗೆ ವಂಚಿಸಲು ಕಳ್ಳದಾರಿಗಳನ್ನು ಹುಡುಕುವ ಶ್ರೀಮಂತರು, ಹಾಗೂ ಉದ್ಯಮಿಗಳು ತುಂಬಿರುವ ಪ್ರಸ್ತುತ ಬಂಡವಾಳಶಾಹಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಕನ್ನಗತ್ತಿ ನಾಟಕದಲ್ಲಿ ಪ್ರಸ್ತುತ ಪಡಿಸಲಾಗಿದೆ. ಆರ್ಥಿಕ ಅಸಮಾನತೆ ಎನ್ನುವುದು ದೇಶಕಾಲಗಳನ್ನೂ ಮೀರಿದ್ದು ಎಂಬುದನ್ನು ಈ ನಾಟಕ ಸಬೀತುಪಡಿಸುವಂತಿದೆ.



ಈ ನಾಟಕದಲ್ಲಿ ಬಳಸಿದ ಕನ್ನಡಿಯ ರೂಪಕ ಅನನ್ಯವಾಗಿದೆ. ರಾಜನ ಅಂತಃಪುರದ ದರ್ಪಣವು ರಾಜನ ಬಹಿರಂಗ ವೈಭವ ತಾಮಸ ಗುಣದ ಪ್ರದರ್ಶನದ ಪ್ರತೀಕವಾದರೆ.. ಮಾರಯ್ಯನ ಮನದ ಕನ್ನಡಿ ಮನುಷ್ಯರೂಪವನ್ನೇ ಪಡೆದು ಬಂದು ಆತನ ಅಂತರಂಗದ ಅರಿವಿನ ಪಾತ್ರವಾಗಿ ಮೂಡಿಬಂದಿದೆ. ಮನುಷ್ಯನ ಮನದಾಳಗಳನ್ನು ವ್ಯಕ್ತಪಡಿಸುವ ಮಾಯಾಕನ್ನಡಿಯ ಪ್ರತಿಮಾವಿಧಾನದ ಸೃಷ್ಟಿಯು ಕನ್ನಗತ್ತಿ ನಾಟಕದ ನಾಟಕಕಾರರ ಉತ್ತಮವಾದ ಪರಿಕಲ್ಪನೆಯಾಗಿದೆ.

ಪ್ರತಿ ವರ್ಷ ಅನ್ಯ ಭಾಷೆಗಳ ಬೇರೆ ಬೇರೆ ರಂಗತಂಡಗಳ ನಾಟಕಗಳನ್ನು ಆಹ್ವಾನಿಸಿ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವವನ್ನು ಶಿಸ್ತುಬದ್ಧವಾಗಿ ನಡೆಸುವ, ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ರಂಗನಿರಂತರವು ಬಹುವರ್ಷಗಳ ನಂತರ ನಾಟಕವೊಂದನ್ನು ನಿರ್ಮಿಸಿದ್ದರಿಂದ,  ಪ್ರಖ್ಯಾತ ಲೇಖಕ ಸಂಶೋಧಕರಾದ ಲಕ್ಷ್ಮೀಪತಿ ಕೋಲಾರರವರು ಈ ನಾಟಕ ಬರೆದಿರುವುದರಿಂದ, ಪ್ರಸ್ತುತ ಬೆಂಗಳೂರು ಎನ್‌ಎಸ್‌ಡಿಯ ನಿರ್ದೇಶಕರಾಗಿರುವ, ರಾಷ್ಟ್ರೀಯವಾಗಿ ಖ್ಯಾತಿಯನ್ನು ಪಡೆದಿರುವ ಸಿ.ಬಸವಲಿಂಗಯ್ಯನವರು ನಿರ್ದೇಶನ ಮಾಡಿರುವುದರಿಂದ ಕನ್ನಗತ್ತಿ ನಾಟಕದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಈ ಮೂರೂ ರಂಗಶಕ್ತಿಗಳು ಕೂಡಿ ಕಟ್ಟಿದ ನಾಟಕವನ್ನು ನೋಡಲು ರವೀಂದ್ರ ಕಲಾಕ್ಷೇತ್ರವೂ ಬಹುತೇಕ ತುಂಬಿತ್ತು. ಅದ್ಭುತವಾದ ನಾಟಕವೊಂದರ ಮೊದಲ ಪ್ರದರ್ಶನಕ್ಕೆ ಸಾಕ್ಷಿಯಾಗಲು ರಂಗಭೂಮಿಯ ಅನೇಕರು ನೂರು ರೂಪಾಯಿಗಳ ಟಿಕೆಟ್ ಖರೀದಿಸಿ ಬಂದಿದ್ದರು. ಆದರೆ... ಈ ಅಪಾರವಾದ ನಿರೀಕ್ಷೆ ನಾಟಕ ಆರಂಭವಾದ ಕೆವೇ ನಿಮಿಷಗಳಲ್ಲಿ ನಿರಾಸೆಯನ್ನುಂಟು ಮಾಡಿತು.

ಒಂದಲ್ಲಾ ಎರಡಲ್ಲಾ ಮೂರು ತಿಂಗಳುಗಳ ಕಾಲ ನಿರಂತರವಾಗಿ ರಿಹರ್ಸಲ್ ನಡೆಸಲಾಗಿತ್ತು. ಮೂರು ಲಕ್ಷದಷ್ಟು ಹಣ ನಾಟಕಕ್ಕೆ ಖರ್ಚಾಗಿತ್ತು. ಸುಮಾರು ಮೂವತ್ತಕ್ಕೂ ಹೆಚ್ಚು ಕಲಾವಿದರು ಹಾಗೂ ನೇಪತ್ಯದವರು ತಮ್ಮ ಪ್ರತಿದಿನದ ಸಂಜೆಗಳನ್ನು ಈ  ನಾಟಕಕ್ಕಾಗಿಯೇ ಮೀಸಲಿಟ್ಟಿದ್ದರು. ರಂಗನಿರಂತರದ ಸಂಘಟಕರು ನಿರ್ದೇಶಕರಿಗೆ ಕೇಳಿಕೇಳಿದ್ದನ್ನೆಲ್ಲಾ ವದಗಿಸಿದ್ದರು. ನಾಟಕ ಪ್ರದರ್ಶನದ ನಂತರ ನೆರೆದ ಪ್ರೇಕ್ಷಕರಿಂದ ಹಿಡಿದು ನಾಟಕ ಬರೆದವರು, ನಾಟಕ ಆಡಿದವರು, ನಾಟಕ ಆಡಿಸಿದವರೆಲ್ಲಾ ಅಪಾರವಾದ ಅಸಹನೆಗೆ ಒಳಗಾದರು. ನಾಟಕ ಮಾಡಿಸುವ ರೀತೀನಾ ಇದು? ಎಂದು ಬೇಸರಿಸಿಕೊಂಡರು. ನೂರು ರೂಪಾಯಿಯ ಜೊತೆಗೆ ಮೂರುಗಂಟೆಗಳೂ ವ್ಯಥವಾದುವಲ್ಲಾ ಎಂದೂ ಹಲವರು ಹಲುಬಿದರು. ಇಷ್ಟೆಲ್ಲಾ ಪರಿಣಾಮಗಳನ್ನು ಒಂದು ನಾಟಕ ಉಂಟುಮಾಡಲು ಕಾರಣಗಳಾದರೂ ಯಾವವು?



ನಮ್ಮ ಹೆಮ್ಮೆಯ ಹಿರಿಯ ರಂಗನಿರ್ದೇಶಕ ಬಸೂ ಸಾಹೇಬರು ಇರುವುದೇ ಹೀಗೆ. ಎಲ್ಲವನ್ನೂ ಮುರಿದು ಕಟ್ಟುತ್ತೇನೆ ಎನ್ನುವುದನ್ನು ಅಪಾರವಾಗಿ ನಂಬಿಕೊಂಡಿದ್ದಾರೆ ಹಾಗೂ ತಮ್ಮ ನಂಬಿಕೆಯನ್ನು ಸಾಬೀತುಗೊಳಿಸಲು ಆಗಾಗ ಪ್ರಯತ್ನಿಸುತ್ತಲೇ ಇರುತ್ತಾರೆ. ಒಡೆಯುವುದರಲ್ಲಿ ಪರಿಣತಿಯನ್ನು ಪಡೆದ ಬಸವಲಿಂಗಯ್ಯನವರಿಗೆ ಮತ್ತೆ ತರ್ಕಬದ್ದವಾಗಿ ನೋಡುಗರು ಒಪ್ಪುವಂತೆ ಕಟ್ಟುವ ಕಲೆ ಇನ್ನೂ ಕರಗತವಾಗಿಲ್ಲ ಎನ್ನುವುದನ್ನು ಹಿಂದಿನ ಕೆಲವಾರು ನಾಟಕಗಳಂತೆ ಈ ಕನ್ನಗತ್ತಿ ನಾಟಕವೂ ಸಬೀತು ಪಡಿಸಿತು. ಒಂದು ಒಳ್ಳೆಯ ನಾಟಕದ ಪಠ್ಯವನ್ನು ಹೇಗೆಲ್ಲಾ ವಿಕೃತಗೊಳಿಸಿ ಪ್ರದರ್ಶನಗೊಳಿಸಬಹುದು ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿಯಾಯಿತು.

ನಾಟಕ ಹಾಗೂ ನೋಡುಗರ ನಡುವೆ ಅಡ್ಡವಾಗಿ ನಿಂತು ಅಪಾರವಾಗಿ ಅಪಸೆಟ್ ಮಾಡಿದ್ದು ನಾಟಕದ ಸೆಟ್ ಹಾಗೂ ಅದನ್ನು ಬಳಸಿದ ರೀತಿ. ಬೇಕಾದಷ್ಟು ಹಣ ಖರ್ಚು ಮಾಡಿ ಕಬ್ಬಿಣದ ಪೈಪ್‌ಗಳನ್ನು ಬಳಸಿ ಪ್ರಿಸೀನಿಯಮ್ಮಿನ ಉದ್ದಗಲಕ್ಕೂ ಹಾಕಿದ ಚೌಕಟ್ಟುಗಳಿಗೂ ಹಾಗೂ ನಾಟಕದ ಕಾಲ, ಪಾತ್ರ, ಸಂದರ್ಭ ಥೀಮಿಗೂ ನಡುವೆ ಇರುವ ಸಂಬಂಧಗಳನ್ನು ಆನ್ವೇಷಿಸಿ ಅರುಹಲು ನಿರ್ದೇಶಕರನ್ನು ಹೊರತು ಪಡಿಸಿ ಬೇರೆ ಯಾರಿಗೂ ಸಾಧ್ಯವೇ ಇಲ್ಲ. ಮತ್ತು ಇದೇನೂ ಬಸವಲಿಂಗಯ್ಯನವರ ಹೊಸ ಅವಿಷ್ಕಾರವೂ ಅಲ್ಲಾ. ಈಗಾಗಲೇ ಇವರೇ ಅಭಿನಯತರಂಗಕ್ಕೆ  ನಿರ್ದೇಶಿಸಿದ ಲಂಕೇಶ್ ಕಥೆಗಳ ಕೊಲ್ಯಾಜ್ ನಾಟಕಕ್ಕೆ ಇದೇ ಮಾದರಿ ವಿನ್ಯಾಸ ಮಾಡಲಾಗಿತ್ತು, ಅದನ್ನೇ ಅಲ್ಪಸ್ವಲ್ಪ ಬದಲಾವಣೆಗಳ ಮೂಲಕ ಕನ್ನಗತ್ತಿ ರಂಗಸ್ಥಳ ವಿನ್ಯಾಸಗೊಂಡಿದೆ. ಕನ್ನಗತ್ತಿ ನಾಟಕದ ಥೀಮಿಗೆ ಸೆಟ್ ಎನ್ನುವುದೇ ಅತೀ ಭಾರವಾಗಿದೆ. ಯಾವುದೇ ನಾಟಕದ ವಸ್ತು ವಿಷಯಗಳಿಗೆ ರಂಗತಂತ್ರಗಳು ಪೂರಕವಾಗಿರಬೇಕೆ ಹೊರತು ಭಾರವಾಗಬಾರದು. ಊಟಕ್ಕೆ ಉಪ್ಪಿನಕಾಯಿ ರುಚಿಗೆ ಬೇಕೆ ಹೊರತು ಉಪ್ಪಿನಕಾಯಿಯೇ ಊಟವಾಗಬಾರದು.



ಇಡೀ ನಾಟಕದಲ್ಲಿ ಬಳಸಿದ ರಂಗತಂತ್ರಗಾರಿಕೆಗಳು ನಾಟಕದ ವಸ್ತು ವಿಷಯದ ಮೇಲೆ ಸವಾರಿ ಮಾಡುವಂತಿವೆ. ಹಗ್ಗದ ಜೊತೆಗೆ ಕೆಲವು ಪಾತ್ರಗಳು ಮಾಡುವ ದೊಂಬರಾಟಕ್ಕೂ ಹಾಗೂ ನಡೆಯುತ್ತಿರುವ ನಾಟಕಕ್ಕೂ ಯಾವುದೇ ರೀತಿಯ ಸಂಬಂಧಗಳೇ ಇಲ್ಲವಾಗಿದ್ದು ನಾಟಕ ಅತ್ತ ಸರ್ಕಸ್ ಆಗದೇ ಇತ್ತ ನೋಡುಗರಿಗೆ ಸಂವಹನ ಮಾಡುವಲ್ಲೂ  ವರ್ಕಔಟ್ ಆಗದೇ ಇರುವುದು ನೋಡುಗರ ಗ್ರಹಿಕೆಯ ಮಿತಿಯೋ ಇಲ್ಲವೇ ನಿರ್ದೇಶಕರ ಬುದ್ದಿವಂತಿಕೆಯ ಅತಿಯೋ ತಿಳಿಯದಂತಾಗಿದೆ. ಕಲಾವಿದರಂತೂ ಹಗ್ಗದ ಮೇಲೆ ಹರಸಾಹಸ ಮಾಡುತ್ತಾ ಎಲ್ಲಿ ಯಾವಾಗ ಬಿದ್ದುಬಿಡುತ್ತೇವೋ ಎನ್ನುವ ಆತಂಕದಿಂದಲೇ ಸಂಭಾಷಣೆಯನ್ನು ಒಪ್ಪಿಸಿದರೆ, ಯಾವ ಪಾತ್ರ ಯಾವಾಗ ಹಗ್ಗದ ಮೇಲಿಂದ ಕೆಳಕ್ಕುರುಳಿ ಏನು ಅನಾಹುತ ಮಾಡಿಕೊಳ್ಳುತ್ತದೋ ಎಂದು ಪ್ರೇಕ್ಷಕ ಪರಿತಪಿಸುವಂತಾಗಿದೆ. ಈ ಹಗ್ಗದ ಟ್ರಿಕ್ ಬಳಸಿದ್ದು ಸಹ ಇದೇನೂ ಮೊದಲನೆಯದಲ್ಲಾ.. ಬಸವಲಿಂಗಯ್ಯನವರೇ ನಿರ್ದೇಶಿಸಿದ ಗಾಂಧಿ-ಅಂಬೇಡ್ಕರ್ ನಾಟಕದಿಂದ ಹಿಡಿದು ಇನ್ನೂ ಎರಡು ಮೂರು ನಾಟಕಗಳಲ್ಲಿ ಹಗ್ಗಗಳೊಂದಿಗೆ ಪಾತ್ರಗಳ ದೊಂಬರಾಟದ ದೃಶ್ಯಗಳು ಆಗಿಹೋಗಿವೆ. ಹೊಸ ರಂಗತಂತ್ರಗಳನ್ನು ಹೊಸೆಯುವ ಬದಲು ಹೊಸ ಲೇಬಲ್ಲಿನ ನಾಟಕದಲ್ಲಿ ಹಳೆಯ ತಂತ್ರಗಾರಿಕೆಯನ್ನೇ ನಿರ್ದೇಶಕರು ಮುಂದುವರೆಸಿದ್ದಾರೆ. ಎಲ್ಲಾ ಕ್ರಿಯಾಶೀಲ ಕಲಾವಿದರಿಗೂ ಒಂದೊಂದು ಪೀಕ್ ಅಂತಾ ಇರುತ್ತದೆ. ಬಸವಲಿಂಗಯ್ಯನವರು ತಮ್ಮ ಸೃಜನಶೀಲತೆಯ ಅಂತಿಮ ಕುದಿಬಿಂದುವನ್ನು ತಲುಪಿದ್ದಾರೆ ಎನ್ನುವ ಅನುಮಾನ ಬರುತ್ತದೆ. ಹಾಗಾಗದಿರಲೆಂದೇ ಎಲ್ಲರ ಹಾರೈಕೆ.

ಅಭಿನಯದ ಬಗ್ಗೆ ಹೇಳುವುದು ಏನಿದೆ.. ಇಲ್ಲಿ ಯಾವ ಪ್ರಮುಖ ಪಾತ್ರದಾರಿಗಳೂ ನಾಟಕದ ಪಾತ್ರಕ್ಕೆ ಪೂರಕವಾಗಿಲ್ಲವೆಂದು ಹೇಳಿದರೆ ಆ ನಟರಿಗೆ ಬೇಸರವಾಗಬಹುದು. ಇದರಲ್ಲಿ ಅವರ ತಪ್ಪೇನೂ ಇಲ್ಲಾ.. ಯಾಕೆಂದರೆ ಇಲ್ಲಿ ಎಲ್ಲವೂ ರಾಂಗ್ ಕಾಸ್ಟಿಂಗ್. ಇಪ್ಪತ್ತೆರಡರ ವಯೋಮಿತಿಯ ಸಣಕಲು ಯುವಕ ಬಿಜ್ಜಳ ರಾಜನ ಪಾತ್ರ ಮಾಡಿದರೆ.. ಐವತ್ತು ಪ್ಲಸ್ ವಯಸ್ಸಿನ ವ್ಯಕ್ತಿ ಕಳ್ಳನ ಪಾತ್ರ ನಿರ್ವಹಿಸಿದ್ದಾರೆ. ಈ ಕಳ್ಳನ ಪಾತ್ರ ಆರಂಭದಲ್ಲಿ ಲವರ್‌ಬಾಯ್ ಎನ್ನುವುದನ್ನೂ ಮರೆಯುವಂತಿಲ್ಲ. ಬಸವಣ್ಣನವರ ಪಾತ್ರಧಾರಿಯಂತೂ ಯಾವುದೇ ಕೋನದಲ್ಲೂ ಬಸವಣ್ಣ ಎಂದು ಹೇಳಲು ಸಾಧ್ಯವೇ ಇಲ್ಲಾ. ಕಲಾವಿದ ರೇವಂತ್ ಮಾಳಿಗೆ ದೈಹಿಕವಾಗಿ ಬಿಜ್ಜಳನ ಪಾತ್ರಕ್ಕೆ ಒಪ್ಪದೇ ಹೋದರೂ ನಟನೆಯಲ್ಲಿ ನೋಡುಗರನ್ನು ಸೆಳೆದಿದ್ದು ಭವಿಷ್ಯದಲ್ಲಿ ಭರವಸೆಯ ಕಲಾವಿದನಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಅನುಭವೀ ನಟ ಮುರುಡಯ್ಯ ಕನ್ನದ ಮಾರಯ್ಯನಾಗಿ ಸಂಭಾಷನೆ ಹೇಳುವುದರಲ್ಲಿ ಗಮನ ಸೆಳೆಯುತ್ತಾರಾದರೂ ಕಳ್ಳನಿಗೆ ಬೇಕಾದ ಚಾಕಚಕ್ಯತೆ ಆಂಗಿಕಾಭಿನಯದಲ್ಲಿ ಕಾಣದೇ ಹೋಗಿ ಪಾತ್ರ ಪೇರಲವಾಗಿದೆ. ಮುರುಡಯ್ಯನವರನ್ನು ಹೊರತು ಪಡಿಸಿ ಬಹುತೇಕ ಪ್ರಮುಖ ಪಾತ್ರಗಳ ಸಂಭಾಷಣಾ ಕ್ರಮದಲ್ಲಿ ಅಗತ್ಯ ಪೋರ್ಸ ಇಲ್ಲವಾಗಿದೆ.



ಈ ನಾಟಕದ ಮೊದಲರ್ಧ ಭಾಗವನ್ನು ತೆಗೆದು ಹಾಕಿದರೂ ನಾಟಕಕ್ಕೆ ಯಾವುದೇ ಬಾಧೆ ಬರುವ ಸಾಧ್ಯತೆಗಳಿಲ್ಲ. ಬಿಜ್ಜಳನ ಒಡ್ಡೋಲಗದ ದೃಶ್ಯದಿಂದಲೇ ನಾಟಕವನ್ನು ಆರಂಭಿಸಿದ್ದರೂ ನಾಟಕ ಒಂದಿಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಮಾರಯ್ಯ ಯಾಕೆ ಕಳ್ಳನಾದ ಎನ್ನುವುದನ್ನು ಮೊದಲು ಹತ್ತಿಪ್ಪತ್ತು ನಿಮಿಷಗಳ  ಕಾಲ ದೃಶ್ಯಗಳ ಮೂಲಕವೂ ತೋರಿಸಿ ಕೊನೆಯ ದೃಶ್ಯದಲ್ಲಿ ಮತ್ತೆ ಅದನ್ನೇ ಅದೇ ಪಾತ್ರದ ಮೂಲಕ ಹೇಳಿಸಿದ್ದು ಪುನರಾವರ್ತನೆಯಾಗಿದೆ. ಕನ್ನದ ಮಾರಯ್ಯನಿಗೆ ತಲೆದಂಡ ಶಿಕ್ಷೆಯನ್ನು ಬಿಜ್ಜಳ ವಿಧಿಸುವ ಮೂಲಕ ನಾಟಕ ಕೊನೆಗೊಂಡಿದ್ದರೆ ಸಾಕಾಗಿತ್ತು. ಮರಯ್ಯನಿಗೆ ನೇಣು ಹಾಕುವ ದೃಶ್ಯವೇ ಅನಗತ್ಯವಾಗಿತ್ತು. ಇನ್ನು ನಾಟಕದ ಕೊನೆಯಲ್ಲಿ ಪಾತ್ರಗಳೆಲ್ಲಾ ಬಂದು ದೀಪ ಬೆಳಗುವುದಂತೂ ಅತೀ ಹಳೆಯ ಸವಕಲು ತಂತ್ರಗಾರಿಕೆ. ದೃಶ್ಯಗಳನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ನಿರ್ದೇಶಕರ ಕ್ರಿಯಾಶೀಲತೆ ಸಾಲದು. ಸಂತೆಯ ದೃಶ್ಯವನ್ನು ಮೂರ‍್ನಾಲ್ಕು ತುಂಡು ಘಟನೆಗಳಾಗಿ ತೋರಿಸಿದ್ದರಿಂದ ಸಂತೆಯ ಎಫೆಕ್ಟ್ ನೋಡುಗರಿಗಂತೂ ಕಾಣದೇ ಹೋಗಿ ಬರೀ ಕುಡುಕರ-ಜೂಜುಗಾರರ ಚಿಕ್ಕ ಗುಂಪಾಗಿ ತೋರಿತು. ಎರಡೂ ಮುಕ್ಕಾಲು ಗಂಟೆಗಳಷ್ಟು ಕಾಲ ಪ್ರೇಕ್ಷಕರನ್ನು ಹಿಡಿದಿಡುವ ತಾಕತ್ತು ಈ ನಾಟಕಕ್ಕಿಲ್ಲ. ಸಾಧ್ಯವಾದಷ್ಟೂ ಎಡಿಟ್ ಮಾಡಿ ಮರಳಿ  ಕಟ್ಟದೇ ಹೋದರೆ ಈ ನಾಟಕಕ್ಕೆ ಭವಿಷ್ಯವೂ ಇಲ್ಲ. ರಂಗನಿರಂತರದ ಪ್ರಯತ್ನ ಹೀಗೆ ವ್ಯರ್ಥವಾಗುವುದು ಯಾರಿಗೂ ಬೇಕಾಗಿಲ್ಲ.



ವೇಷಭೂಷಣಗಳು ಪಾತ್ರಕ್ಕೆ ಪೂರಕವಾಗಿದ್ದರೆ ಚೆನ್ನಾಗಿತ್ತು. ಇಲ್ಲಿ ಕೋತ್ವಾಲ ಹಾಕಿಕೊಳ್ಳಬಹುದಾದ ಕೋಣದ ಕೊಂಬಿನ ಶಿರಸ್ತ್ರಾಣ ಬಿಜ್ಜಳ ರಾಜನ ತಲೆಯನ್ನಲಂಕರಿಸಿದ್ದರೆ.. ರಾಜರು ಹಾಕಿಕೊಳ್ಳಬಹುದಾದ ಚಿನ್ನದ ಬಣ್ಣದ ಕಿರೀಟ ಕೋತ್ವಾಲನ ತಲೆಗೇರಿದೆ. ಬಸವಣ್ಣನವರ ಪಾತ್ರಕ್ಕೂ ಅವರಿಗೆ ತೊಡಿಸಿದ ವೇಷಕ್ಕೂ ಹೊಂದಾಣಿಕೆಯೇ ಇಲ್ಲವಾಗಿದೆ. ಕನ್ನದ ಮಾರಯ್ಯನಿಗೆ ಶಿವನ ವೇಷ ಹಾಕಿಸಿ ರಂಗದ ಮೇಲೆ ಹತ್ತಾರು ನಿಮಿಷ ಸುತ್ತಾಕಿಸಿದ್ದು ಆಭಾಸಕಾರಿಯಾಗಿದೆ. ಬಿಜ್ಜಳ ಪಾತ್ರಧಾರಿಗೆ ಮೇಕಪ್ಪನಲ್ಲಾದರೂ ಒಂದಿಷ್ಟು ವಯಸ್ಸಾದವರಂತೆ ಮಾಡಿದ್ದರೆ ಚೆನ್ನಾಗಿತ್ತು. ಮಾರಯ್ಯನ ಕಾಸ್ಟೂಮ್ ಸಹ ಆ ಪಾತ್ರಕ್ಕೆ ಅದ್ಯಾಕೋ ಸೂಟ್ ಆಗಲೇ ಇಲ್ಲ. ಬೆಳಕಿನ ವಿನ್ಯಾಸದ ಬಗ್ಗೆ ಹೇಳದಿರುವುದೇ ಉತ್ತಮ. ನಾಟಕದಲ್ಲಿ ಕೆಲವು ಪಾತ್ರಗಳು ಬಳಸಿದ ಭಾಷೆಯೇ ಗೊಂದಲಕಾರಿಯಾಗಿತ್ತು. ಕೆಲವೊಮ್ಮೆ ಉತ್ತರ ಕರ್ನಾಟಕದ ಭಾಷೆಯನ್ನು ಬಳಸುವ ಪಾತ್ರಗಳು ಮತ್ತೆ ಹಲವಾರು ಬಾರಿ ಬೆಂಗಳೂರು ಕನ್ನಡದಲ್ಲೇ ಸಂಭಾಷಣೆ ಮಾಡುತ್ತಿದ್ದವು. ಯಾವುದಾದರು ಒಂದು ಭಾಷಾ ಶೈಲಿಯನ್ನು ರೂಢಿಸಿಕೊಂಡರೆ ಪಾತ್ರಕ್ಕೂ ಹಾಗೂ ಭಾಷೆಗೂ ಗೌರವ ಕೊಟ್ಟಂತಾಗುತ್ತದೆ. ನಾಟಕದಾದ್ಯಂತ ಮಾಡಲಾದ ಬ್ಲಾಕಿಂಗ್ ಅಂತೂ ನಿರ್ದೇಶಕರೊಬ್ಬರಿಗೇ ಖುಷಿ ಕೊಟ್ಟಿರಬಹುದಾದರೂ ನೋಡುಗರಿಗಂತೂ ರಸಭಂಗ.

ನಾಟಕದ ನಿರ್ದೇಶನದ ಜೊತೆಗೆ ಮೊದಲ ಬಾರಿಗೆ ಹಾಡುಗಳನ್ನೂ ಸಹ ಸ್ವತಃ ಹಾಡಿ, ತಮ್ಮ ಸಿರಿಕಂಠದ ಪ್ರತಿಭೆಯನ್ನೂ ಪ್ರದರ್ಶಿಸಿ ಕೇಳುಗರ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ ಬಸವಲಿಂಗಯ್ಯನವರನ್ನು ಹೇಗೆ ಅಭಿನಂದಿಸಬೇಕೋ ಗೊತ್ತಿಲ್ಲ. ಆದರೆ ಅವರು ಹಾಡಿದ ರಾಗತಾಳಗಳಿಲ್ಲದ ಗಾರ್ದಭ ಗೀತೆಗಳನ್ನು ಅರಗಿಸಿಕೊಳ್ಳಲು ಮಾತ್ರ ಯಾರಿಗೂ ಸಾಧ್ಯವಾಗಲೇ ಇಲ್ಲ. ದುಡ್ಡಿನ ಕೊರತೆ ಇಲ್ಲದ, ಇರುವುದರಲ್ಲೇ ಶ್ರೀಮಂತ ತಂಡವಾಗಿರುವ ರಂಗನಿರಂತರಕ್ಕೆ ಸಂಗೀತಗಾರರನ್ನು ಹಾಗೂ ಹಾಡುಗಾರರನ್ನು ಹೊಂದಿಸಿಕೊಳ್ಳಲಾರದಷ್ಟು ಬಡತನವೇನಿಲ್ಲ. ಅದರೆ.. ನಿರ್ದೇಶಕರು ತಾವೂ ಹಾಡಬಲ್ಲೆವು ಎನ್ನುವುದನ್ನು ತೋರಿಸಲು ಹಠಕ್ಕೆ ಬಿದ್ದು ತಾನೊಲಿದಂತೆ ಹಾಡಿ ಅದನ್ನು ಮೊದಲೇ ರಿಕಾರ್ಡ ಮಾಡಿ ನಾಟಕ ಪ್ರದರ್ಶನದಲ್ಲಿ ಬಿತ್ತರಿಸಿ, ಕೇಳುಗರ ಕರ್ಣಗಳಿಗೆ ಕಾಯ್ದ ಸೀಸವನ್ನು ಹೊಯ್ದ ಅನುಭವವನ್ನು ಕೊಟ್ಟಿದ್ದನ್ನು ಮರೆಯಲು ಸಾಧ್ಯವೇ ಇಲ್ಲಾ.



ಕೆಲವು ಪಾತ್ರಗಳು ಮಾತು ಮರೆತು ನಿಂತಿದ್ದು, ದೃಶ್ಯ ಬದಲಾದರೂ ಕೆಲವು ರಂಗಪರಿಕರಗಳನ್ನು ಬದಲಾಯಿಸಲಾಗದೇ ಮುಂದಿನ ದೃಶ್ಯ ನಡೆಯುವಾಗಲೇ ಯಾರೋ ಬಂದು ಪ್ರಾಪ್ಸ್‌ಗಳನ್ನು ತೆರವುಗೊಳಿಸುವುದು, ಆರಂಭದಲ್ಲಿ ಟಿವಿ ಪರದೆಯ ಮೇಲೆ ದೃಶ್ಯಗಳು ಮೂಡಿದರೂ ಸರಿಯಾಗಿ ಆಡಿಯೋ ಕೇಳದೇ ಇದ್ದದ್ದು, ಕೆಳಗೆ ಬಿದ್ದ ಡಂಗೂರದವರ ತಲೆಪೇಟ ಒಂದೆರಡು ದೃಶ್ಯಗಳವರೆಗೂ ಅಲ್ಲಿಯೇ ಬಿದ್ದಿರುವುದು.. ಹೀಗೆ ಹಲವಾರು ತಪ್ಪುಗಳನ್ನು ಮೊದಲನೆಯ ಪ್ರದರ್ಶನದ ನೆಪದಲ್ಲಿ ನೋಡುಗರು ಕ್ಷಮಿಸಬಹುದಾಗಿದೆ. ಹಾಗೂ ಇಂತವುಗಳೆಲ್ಲವೂ ಮುಂದಿನ ಪ್ರದರ್ಶನಗಳಲ್ಲಿ ಸುಧಾರಿಸಬಹುದಾಗಿವೆ. ಆದರೆ.. ನಾಟಕದ ಸ್ಟ್ರಕ್ಚರ ಇದೇ ರೀತಿ ಇದ್ದರೆ ಪ್ರೇಕ್ಷಕರ ತಾಳ್ಮೆಯನ್ನು ಕನ್ನಗತ್ತಿ ಪರೀಕ್ಷಿಸುವುದರಲ್ಲಿ ಸಂದೇಹವೇ ಇಲ್ಲ. 
 
ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು
ಯಾಕೆ ಸಾರ್.. ನಾಟಕ ಹೀಗೆ..? ಎಂದು ನಿರ್ದೇಶಕರನ್ನು ಆತಂಕದಿಂದ ಕೇಳಿದರೆ.. ಇದು ಮೊದಲನೇ ಪ್ರದರ್ಶನ. ಕೇವಲ ಟೆಕ್ನಿಕಲ್ ಶೋ ಅಷ್ಟೇ. ನನ್ನ ನಾಟಕದ ನಿಜವಾದ ಪ್ರದರ್ಶನ ಶುರುವಾಗೋದೇ ಐದು ಶೋಗಳ ನಂತರ.. ಎಂದು ಬಸವಲಿಂಗಯ್ಯನವರು ಕೇಳಿದವರ ತಲೆ ಸವರಿ ಕಿವಿಗೆ ಸೂರ್ಯಕಾಂತಿ ಹೂ ಇಡುತ್ತಾರೆ. ಟೆಕ್ನಿಕಲ್ ಶೋ ಆಗಿದ್ದರೆ ನೂರು ರೂಪಾಯಿಯ ಟಿಕೆಟ್ ಇಟ್ಟು, ಪ್ರಚಾರ ಮಾಡಿ, ಪ್ರದರ್ಶನ ತೋರಿಸುತ್ತೇನೆಂದು ಪ್ರೇಕ್ಷಕರನ್ನು ಕರೆಸಿ ಯಾಮಾರಿಸುವ ಅಗತ್ಯವಾದರೂ ಏನಿತ್ತು. ಇಷ್ಟಕ್ಕೂ ಬಸೂರವರು ಹೇಳಿದಂತೆ ಐದು ಶೋಗಳ ನಂತರ ಈ ನಾಟಕ ಪ್ರದರ್ಶನಕ್ಕೆ ಯೋಗ್ಯವಾಗುತ್ತದೆ ಎನ್ನುವುದೇ ಆದರೆ ಆರನೇ ಪ್ರದರ್ಶನಕ್ಕೆ ಪ್ರೇಕ್ಷಕರನ್ನು ಆಹ್ವಾನಿಸಬಹುದಾಗಿತ್ತು. ಇಷ್ಟಕ್ಕೂ ಈ ಕನ್ನಗತ್ತಿ ಆರನೇ ಪ್ರದರ್ಶನ ಕಾಣುತ್ತದಾ ಎನ್ನುವುದೇ ಡೌಟು, ಯಾಕೆಂದರೆ ಇಷ್ಟೊಂದು ಭಾರವಾದ ಸೆಟ್ ಹಾಗೂ ಅದರ ಸಾಗಣೆ ವೆಚ್ಚ ಹಾಗೂ ಜೋಡಿಸುವ ಸಮಯವೇ ಅಧಿಕವಾಗಿರುವಾಗ, ಒಂದೆರಡು ಶೋಗಳಲ್ಲಿ ನಟಿಸಿದ ನಟರೆಲ್ಲಾ ಮುಂದಿನ ಶೋಗಳಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎನ್ನುವುದೂ ಸಮಸ್ಯೆಯಾಗಿರುವಾಗ, ಬದಲಾದ ನಟರಿಗೆ ಮತ್ತೆ ತರಬೇತಿಕೊಟ್ಟು ನಿರಂತರ ರಿಹರ್ಸಲ್ ಮಾಡಿಸಲು ಬಸವಲಿಂಗಯ್ಯವರಿಗೆ ಹೆಚ್ಚುವರಿ  ಸಮಯವೂ ಇಲ್ಲದಿರುವಾಗ ಕನ್ನಗತ್ತಿ ಯ ಆರನೇ ಪ್ರದರ್ಶನ ಆಗುತ್ತಾ..? ಗೊತ್ತಿಲ್ಲಾ. ನಾಟಕದ ಆಶಯಕ್ಕೆ ಪೂರಕವಾಗಿ ಇಡೀ ನಾಟಕವನ್ನು ಮತ್ತೆ ಕಟ್ಟಿ, ಸೆಟ್ಟನ್ನು ಸರಳಗೊಳಿಸಿದರೆ ಈ ನಾಟಕ ಪ್ರದರ್ಶನಯೋಗ್ಯವಾಗುವುದಲ್ಲಿ ಸಂದೇಹವೇ ಇಲ್ಲಾ ಹಾಗೂ ಇನ್ನೂ ಹತ್ತು ಹಲವು ಪ್ರದರ್ಶನಗಳನ್ನು ಕಾಣುಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹಾಗಾಗಲೀ  ಎನ್ನುವುದೇ ಎಲ್ಲರ ಬಯಕೆಯಾಗಿದೆ.

-ಶಶಿಕಾಂತ ಯಡಹಳ್ಳಿ
    

ಪೊಟೋ ಕೃಪೆ : ತಾಯಿ ಲೊಕೇಶ್



2 ಕಾಮೆಂಟ್‌ಗಳು:

  1. ಶಶಿಕಾಂತ ಎಡಹಳ್ಳಿ ಅವರ ವಿಮರ್ಶೆ ವಸ್ತು ನಿಷ್ಠವಾಗಿದೆ. ಯಾವುದೇ ಮುಲಾಜು ಇಲ್ಲದೆ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿದ್ದಾರೆ. ಇದು ಅವರ ರಂಗಭೂಮಿ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.

    ಪ್ರತ್ಯುತ್ತರಅಳಿಸಿ
  2. ಶಶಿಕಾಂತ ಎಡಹಳ್ಳಿ ಅವರ ವಿಮರ್ಶೆ ವಸ್ತು ನಿಷ್ಠವಾಗಿದೆ. ಯಾವುದೇ ಮುಲಾಜು ಇಲ್ಲದೆ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿದ್ದಾರೆ. ಇದು ಅವರ ರಂಗಭೂಮಿ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.

    ಪ್ರತ್ಯುತ್ತರಅಳಿಸಿ