ಗುರುವಾರ, ಜುಲೈ 4, 2019

ಸಂಸ್ಕೃತಿ ಇಲಾಖೆ ಸಚಿವರ ಬದಲಾದ ವರಸೆ.. ಕಮರಿಹೋಯ್ತು ಅನುದಾನದ ಆಸೆ..



ಹಲವು ತಿಂಗಳುಗಳ ಕಾಲ ಸತಾಯಿಸಿ ಕೊನೆಗೂ ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಡಿ.ಕೆ.ಶಿವಕುಮಾರರವರು ಎರಡು ದಿನಗಳ ಹಿಂದಷ್ಟೇ ಸಂಘ ಸಂಸ್ಥೆಗಳ ಅನುದಾನ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸಿಹಿ ಸುದ್ದಿ ಕೇಳಿ ಅದೆಷ್ಟೋ ಸಂಘ ಸಂಸ್ಥೆಗಳ ರೂವಾರಿಗಳು ಸಂತಸಪಟ್ಟಿದ್ದರು. ಇಲಾಖೆಯಿಂದ ಕಳೆದ ವರ್ಷದ ಅನುದಾನ ಬಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಈಗಾಗಲೇ ಮಾಡಿರುವ ಸಾಲವನ್ನು ತೀರಿಸಬಹುದು, ಮಾಡಬಹುದಾದ ಸಾಲವನ್ನು ನಿಲ್ಲಿಸಿ ಹೊಸ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ಆಸೆ ಪಟ್ಟಿದ್ದರು. ಎರಡು ಲಕ್ಷದೊಳಗಿನ ಅನುದಾನವನ್ನು ಹಾಗೂ ಹೊರನಾಡಿನ ಸಂಘಸಂಸ್ಥೆಗಳಿಗೆ ನೀಡಬಹುದಾದ ಧನಸಹಾಯವನ್ನು ಬಿಡುಗಡೆ ಮಾಡುವುದಾಗಿ ಸಚಿವಾಲಯ ಹೇಳಿತ್ತು ಅದು ಪತ್ರಿಕೆಯಲ್ಲೂ ವರದಿಯಾಗಿತ್ತು. ಎರಡು ಲಕ್ಷ ರೂಪಾಯಿಗಳನ್ನೂ ಮೀರಿದ ದೊಡ್ಡ ಮೊತ್ತದ ಅನುದಾನ ಕೊಡಬಹುದಾದ ಸಂಘಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಮೂಲಕ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಣ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ ಎಂದೂ ಸುದ್ದಿಯಾಗಿತ್ತು. ಇನ್ನೇನು ನಾಲ್ಕು ದಿನಗಳಲ್ಲಿ ಸಚಿವಾಲಯದ ಆದೇಶ ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ತಲುಪಿ ಹತ್ತು ದಿನಗಳಲ್ಲಿ ಅನುದಾನಕ್ಕೆ ಆಯ್ಕೆಯಾದ ಸಂಘಸಂಸ್ಥೆಗಳ ಬ್ಯಾಂಕ್ ಅಕೌಂಟಿಗೆ ಧನಸಹಾಯ ಬಂದು ಬೀಳುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ..

ಜುಲೈ 4ರಂದು ಬೆಳಿಗ್ಗೆ ದಿನಪತ್ರಿಕೆ ನೋಡಿದ ಅನುದಾನಿತ ಸಂಘ-ಸಂಸ್ಥೆಗಳಿಗೆ ನಿಜಕ್ಕೂ ಶಾಕ್ ಆಗಿತ್ತು. ಕಲಾ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ವಿಧಾನಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೆಯೊಂದನ್ನು ನೀಡಿದರು. ಪ್ರತಿ ವರ್ಷ ಅನೇಕ ಸಂಘ ಸಂಸ್ಥೆಗಳು ಕಾರ್ಯಕ್ರಮ ಏರ್ಪಡಿಸಲು ಅರ್ಜಿ ಸಲ್ಲಿಸುತ್ತಿವೆ. ಹಲವು ಸಂಸ್ಥೆಗಳು ಒಂದೇ ಕಾರ್ಯಕ್ರಮಕ್ಕೆ ಮತ್ತೆ ಮತ್ತೆ ಅರ್ಜಿ ಸಲ್ಲಿಸುತ್ತಿದ್ದರೆ, ಇನ್ನು  ಕೆಲವು ಸಂಸ್ಥೆಗಳು ಕಾರ್ಯಕ್ರಮ ಮಾಡದೇ ಅನುದಾನ ಪಡೆಯುತ್ತಿವೆ. ಸರ್ಕಾರದ ಅನುದಾನದ ದುರುಪಯೋಗ ತಡೆಯಲು ಈ ಅನುದಾನದ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗುವುದು. ಹಾಗೂ ಅರ್ಹ ಸಂಸ್ಥೆಗಳಿಗೆ ಅನುದಾನ ಕೊಡಲೇಬೇಕೆಂದರೆ ಸಿಎಂ ವಿವೇಚನೆಗೆ ಒಳಪಟ್ಟು ಅನುದಾನ ಮೀಸಲಿಡಲಾಗುವುದು ಎಂದು ಡಿಕೆಸಿ ಸಾಹೇಬರು ಹೇಳಿದರು.

ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಪರ್ಯಾಯವಾಗಿ ಕರ್ನಾಟಕ ಸಂಸ್ಕೃತಿ ಎನ್ನುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ನಾನಾ ಕ್ಷೇತ್ರಗಳ,ಆಯಾ ಜಿಲ್ಲೆಗಳ ಕಲಾ ಪರಕಾರಗಳಲ್ಲಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿಧಾನಸಭೆ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಯುವಕ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ವಿಜೇತರಾದವರನ್ನು ವಾರ್ಷಿಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ಹೀಗೆ ಪ್ರಶಸ್ತಿ ಪಡೆದ ಯುವ ಕಲಾವಿದರಿಗೆ ಇಲಾಖೆಯಿಂದ ನಡೆಸುವ ವಿವಿಧ ಉತ್ಸವಗಳಲ್ಲಿ ಅವಕಾಶ ನೀಡಿ ಅವರ ಕಲೆಗೆ ಪ್ರೋತ್ಸಾಹ ನೀಡುವುದು ಈ ಹೊಸ ಕಾರ್ಯಸೂಚಿಯ ಉದ್ದೇಶ ಎಂದು ತಮ್ಮ ಹೊಸ ಯೋಜನೆಯ ಬಗ್ಗೆ ವಿವರಗಳನ್ನು ಸಚಿವರು ಕೊಟ್ಟರು.

ಯಾಕೆ ಹೀಗೆ ಸಚಿವ ಮಹೋದಯರು ತಮ್ಮ ಮಾತಿನ ವರಸೆ ಬದಲಾಯಿಸಿದರು? ಯಾಕೆ ಅನುದಾನವನ್ನು  ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದರು? ಡಿಕೆಸಿಯವರ ಈ ಹೊಸ ಯೋಜನೆಯ ಹಿಂದಿರುವ ಉದ್ದೇಶವಾದರೂ ಏನು? ಎನ್ನುವುದರ ಹಿನ್ನೆಲೆಯನ್ನು ಮೊದಲು ಅರಿಯಬೇಕಾಗಿದೆ.

ಇಷ್ಟಕ್ಕೂ ಡಿಕೆಶಿಯವರ ಬದಲಾದ ನಿಲುವಿಗೆ ಕಾರಣಗಳಾದರೂ ಯಾವವು ?

1.        ಪಳಗಿದ ವೃತ್ತಿಪರ ರಾಜಕಾರಣಿಯಾಗಿರುವ ಡಿಕೆಶಿಯವರಿಗೆ ಭಾಷೆ ಕಲೆ ಸಾಹಿತ್ಯ ಸಂಸ್ಕೃತಿಗಳಿಗಿಂತ ಅತೀ ಮುಖ್ಯವಾಗಿರುವುದು ಜನಪ್ರೀಯತೆ ಮತ್ತು ಅದರಿಂದ ಬರಬಹುದಾದ ಓಟು. ಜನರ ಓಟನ್ನು ಗಿಟ್ಟಿಸಲು ಅವರಿಗೆ ಜನಪರವಾದ ಯೋಜನೆಯೊಂದರ ಅಗತ್ಯವಿತ್ತು. ಸಂಘಸಂಸ್ಥೆಗಳಿಗೆ ಅನುದಾನ ಕೊಡುವುದು ಎಲ್ಲಾ ಸರಕಾರಗಳು ಇದ್ದಾಗಲೂ ಇರುವ ವಾರ್ಷಿಕ ಸಾಂಪ್ರದಾಯಿಕ ಯೋಜನೆಯಾಗಿದ್ದು ಇದರಿಂದ ಓಟು ಗಿಟ್ಟುವುದಿಲ್ಲಾ ಹಾಗೂ ಆಳುವ ಸರಕಾರಕ್ಕೆ ಹೆಸರೂ ಬರುವುದಿಲ್ಲ. ಹೊಸ ಯೋಜನೆಯೊಂದನ್ನು ಜಾರಿ ಮಾಡಿದರೆ ಅದರ ಕ್ರೆಡಿಟ್ ಸಚಿವರಿಗೆ ಮತ್ತು ಅವರು ಪ್ರತಿನಿಧಿಸುವ ಸರಕಾರಕ್ಕೆ ಬರುತ್ತದೆ ಎನ್ನುವ ರಾಜಕೀಯ ಉದ್ದೇಶವು ಸಚಿವ ಡಿ.ಕೆ.ಶಿವಕುಮಾರರವರದ್ದಾಗಿದೆ. ತಾಲ್ಲೂಕು ಮಟ್ಟದಿಂದ ಯುವಕಲಾವಿದರನ್ನು ಉತ್ತೇಜಿಸುವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಜನಬೆಂಬಲ ಸಿಗಬಹುದೆಂಬ ದೂರದೃಷ್ಟಿಯೂ ಸಚಿವರದ್ದಾಗಿದೆ.

2.       ಈಗಾಗಲೇ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಜಾನಪದ ಜಾತ್ರೆ ಎಂಬ ತಮ್ಮ ನೇತೃತ್ವದ ಹಿಂದಿನ ಸರಕಾರದ ಜನಪ್ರೀಯ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಮತ್ತೆ ಮರಳಿ ಜಾರಿಗೊಳಿಸಲು ಆದೇಶಿಸಿ ಅದಕ್ಕಾಗಿ ಎರಡು ಕೋಟಿಗಳಷ್ಟು ಅನುದಾನವನ್ನೂ ಮೀಸಲಿಟ್ಟಿದ್ದಾರೆ. ಈ ಜಾನಪದ ಜಾತ್ರೆ ಮತ್ತೆ ಮರುಚಾಲನೆಗೊಂಡರೆ ಅದರ ಯಶಸ್ಸು ಕುಮಾರಸ್ವಾಮಿಯವರಿಗೆ ಹಾಗೂ ಅವರ ಜನತಾದಳಕ್ಕೆ ದಕ್ಕುತ್ತದೆ. ಆದ್ದರಿಂದ ಇದಕ್ಕೆ ಪರ್ಯಾಯವಾಗಿ ತಾವೂ ಒಂದು ಕರ್ನಾಟಕ ಸಂಸ್ಕೃತಿ ಎನ್ನುವ ಯೋಜನೆ ರೂಪಿಸಿ ಜನಬೆಂಬಲ ಪಡೆಯಬೇಕು ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದು ಸಚಿವರಾದ ಡಿಕೆಶಿಯವರ ಉದ್ದೇಶವಾಗಿದೆ.

3.       ಅನುದಾನ ಪಡೆಯುವ ಬಹುತೇಕ ಸಂಘಸಂಸ್ಥೆಗಳು ಫೇಕ್ ಆಗಿದ್ದು ಇಲಾಖೆಯ ಹಣ ದುರ್ಬಳಕೆಯಾಗುತ್ತದೆ ಎಂದು ಅದ್ಯಾರೋ ಕೆಲವರು ಸಚಿವರ ಕಿವಿ ತುಂಬಿಸಿದ್ದಾರೆ. ಇದನ್ನೇ ನಂಬಿದ ಸಚಿವರು ಕಳೆದ ನಾಲ್ಕು  ತಿಂಗಳಿನಿಂದ ಅನುದಾನದ ಕಡತಕ್ಕೆ ಸಹಿ ಹಾಕದೇ ಸತಾಯಿಸುತ್ತಿದ್ದಾರೆ. ಇಲಾಖೆಯ ಸಭೆಗೂ ಚಕ್ಕರ್ ಹಾಕುತ್ತಿದ್ದಾರೆ. ಅನುದಾನಕ್ಕೆ ಆಯ್ಕೆಯಾದ ಬಹುತೇಕ ಕಲಾ ಸಂಸ್ಥೆಗಳು ಸುಳ್ಳು ದಾಖಲೆ ಕೊಟ್ಟು ಸರಕಾರಿ ಹಣ ಪಡೆಯುತ್ತಾರೆ ಎಂಬುದು ಸತ್ಯವೇ ಆಗಿದ್ದರೆ ಅದಕ್ಕೆ ಮೂಲ ಕಾರಣೀಕರ್ತರಾದವರು ಅಂತಹ ಸಂಸ್ಥೆಗಳನ್ನು ಅನುದಾನಕ್ಕೆ ರೆಕಮೆಂಡ್ ಮಾಡಿದ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೇ ಹೊರತು ಬೇರೆ ಯಾರೂ ಅಲ್ಲಾ. ಅನುದಾನಕ್ಕೆ ಅರ್ಹ ಸಂಸ್ಥೆಗಳನ್ನು ಆಯ್ಕೆ ಮಾಡಲು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂ ಎಲ್ಲಾ ಅಕಾಡೆಮಿಗಳ ಅಧ್ಯಕ್ಷರುಗಳ ಕಮಿಟಿ ಇರುತ್ತದೆ. ಅನರ್ಹ ತಂಡ ಅನುದಾನಕ್ಕೆ ಆಯ್ಕೆಯಾದದ್ದೇ ನಿಜವಾದರೆ ಇವರೆಲ್ಲರೂ ಸಹ ಹೊಣೆಗಾರರಾಗಿರುತ್ತಾರೆ. ಅಂದರೆ.. ಸಚಿವರಿಗೆ ತಮ್ಮದೇ ಇಲಾಖೆಯ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ? ನಂಬಿಕೆ ಇರದಿದ್ದರೆ ನಂಬಿಕಸ್ತರೆಂದುಕೊಂಡ ಅಧಿಕಾರಿಗಳನ್ನೊಳಗೊಂಡ ಇನ್ನೊಂದು ರಿವ್ಯೂವ್ ಕಮಿಟಿ ಮಾಡಿ ನಕಲಿ ಲೆಟರ್‌ಹೆಡ್ ಸಂಸ್ಥೆಗಳನ್ನು ಅನುದಾನದ ಪಟ್ಟಿಯಿಂದ ತೆಗೆದುಹಾಕಿ ನಿಜವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿಬಹುದಾಗಿತ್ತು. ಆದರೆ ಸಚಿವರು ಹಾಗೆ ಮಾಡಲು ಹೋಗದೇ ನೆಗಡಿಗೆ ಔಷಧಿ ಕೊಡುವ ಬದಲು ಮೂಗನ್ನೇ ಕೊಯ್ಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಲ್ಲಣವನ್ನು ಸೃಷ್ಟಿಸಿದೆ.

4.       ಸಂಘ ಸಂಸ್ಥೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದರೆ ಸಚಿವರಿಗೆ ಬರುವ ಮಾಮೂಲು ಅಂದುಕೊಂಡಷ್ಟು ಬರುವುದಿಲ್ಲ. ಕೆಳಹಂತದ ಕೆಲವು ಭ್ರಷ್ಟ ಅಧಿಕಾರಿಗಳೇ ಫೇಕ್ ಸಂಸ್ಥೆಯವರ ಜೊತೆ ಸೇರಿ ಹಣ ಹಂಚಿಕೊಳ್ಳುತ್ತಾರೆ. ಆದ್ದರಿಂದ ಸಾಧಕರ ಜಯಂತಿಗಳನ್ನು ಮಾಡುವ ಹಾಗೆ ಕರ್ನಾಟಕ ಸಂಸ್ಕೃತಿ ಎನ್ನುವ ದೊಡ್ಡ ಈವೆಂಟ್ ಆಯೋಜಿಸಿದರೆ ಅಧಿಕಾರಿಗಳ ಸಹಕಾರದಿಂದ ನೇರವಾಗಿ ಕಿಕ್‌ಬ್ಯಾಕ್ ಸಚಿವರಿಗೆ ತಲುಪುತ್ತದೆ. ಯಾವಾಗ ಈ ಮೈತ್ರಿ ಸರಕಾರ ಉರುಳಿ ಮತ್ತೆ ಚುನಾವಣೆಗಳು ಬರುತ್ತದೋ ಎನ್ನುವ ಆತಂಕದಲ್ಲಿರುವ ಸಚಿವರುಗಳು ಈಗಿನಿಂದಲೇ ಆರ್ಥಿಕ ಸಂಪನ್ಮೂಲಗಳ ಕ್ರೂಢೀಕರಣ ಕಾರ್ಯ ಶುರುಮಾಡಿದ್ದಾರಂತೆ. ಅದರ ಭಾಗವಾಗಿಯೇ ಕರ್ನಾಟಕ ಸಂಸ್ಕೃತಿ ಎನ್ನುವ ಈವೆಂಟ್ ಶುರುಮಾಡಲು ಸಚಿವರು ಉತ್ಸುಕರಾಗಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

5.       ಯಾವಾಗ ಕಲಾಸಂಸ್ಥೆಗಳಿಗೆ ನಾಲ್ಕು ತಿಂಗಳಾದರೂ ಕಳೆದ ವರ್ಷದ ಅನುದಾನ ಬಿಡುಗಡೆಯಾಗಲಿಲ್ಲವೋ ಆಗ ಕೆಲವು ಸಂಘಸಂಸ್ಥೆಗಳ ನಾಯಕರುಗಳು ಡಿಕೆಶಿಯವರ ವಿರುದ್ಧ ತಿರುಗಿ ಬಿದ್ದರು. ಕೆಲವರು ಪತ್ರ ಚಳುವಳಿಯನ್ನು ನಡೆಸಿದರು, ಡಿಕೆಶಿ ಮನೆಯ ಮುಂದೆ ಧರಣಿ, ಹೋರಾಟ ಮಾಡುತ್ತೇವೆಂದು ಸಚಿವಾಲಯದ ಮೇಲೆ ಒತ್ತಡ ತರಲು ಪ್ರಯತ್ನಿಸಿದರು. ಲೋಕಾಯುಕ್ತಕ್ಕೆ ದೂರು ಕೊಡುತ್ತೇವೆ ಎಂದೂ ಸಚಿವರನ್ನು ಹೆದರಿಸಲು ನೋಡಿದರು. ಬೇರೆ ಬೇರೆ ಆಯಾಮಗಳಿಂದ ಸಚಿವರ ಮೇಲೆ ಅತೀವ ಒತ್ತಾಯ ಮಾಡತೊಡಗಿದರು. ಇದೆಲ್ಲದರಿಂದ ಕೆರಳಿದ ಸಚಿವರು ಅದ್ಯಾರು ಅದೇನು ಹೋರಾಟ ಮಾಡುತ್ತಾರೋ ಮಾಡಲಿ ನೋಡಿಯೇ ಬಿಡುತ್ತೇನೆ ಎಂದು ಎದೆಸೆಟಿಸಿ ನಿಂತರು. ಈಗ ನಡೆದ ಸುದ್ದಿಗೋಷ್ಟಿಯಲ್ಲಿಯೂ ಸಹ ಕೆಲವು ಸಂಸ್ಥೆಗಳು ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ನನ್ನ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಬ್ಲಾಕ್ ಮೇಲ್ ಮಾಡುತ್ತಿವೆ ಎಂದೂ ಸಚಿವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಕೆಲವು ಕಲಾಸಂಸ್ಥೆಗಳ ಈ ರೀತಿಯ ಒತ್ತಾಯ ಹೆಚ್ಚಾಗುತ್ತಿದ್ದಂತೆಯೇ ಸೇಡಿನ ಭಾವನೆಯನ್ನು ಮೂಡಿಸಿಕೊಂಡ ಸಚಿವರು ಅನುದಾನದ ಹಂಚಿಕೆಯನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದರು.

ಈ ಮೇಲಿನ ಎಲ್ಲಾ ಕಾರಣಗಳೂ ಒಟ್ಟು ಗೂಡಿ ಸಂಘಸಂಸ್ಥೆಗಳಿಗೆ ಇಲಾಖೆಯ ಅನುದಾನ ನಿಲ್ಲಿಸುವ ತೀರ್ಮಾನವನ್ನು ಸಚಿವರು ಮಾಡಿದ್ದು ಅನುದಾನಿತ ಸಂಸ್ಥೆಗಳ ಮುಖಂಡರುಗಳ ಕೋಪಕ್ಕೆ ಕಾರಣವಾಗಿದೆ. ಅನುದಾನದ ಬದಲು ಕರ್ನಾಟಕ ಸಂಸ್ಕೃತಿ ಕಾರ್ಯಕ್ರಮ ಜಾರಿಗೊಳಿಸಿ ಪ್ರತಿ ತಾಲೂಕಿನಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ ಸಚಿವರು ಎಲ್ಲಿ ಸಂಘಸಂಸ್ಥೆಯವರು ಪ್ರತಿಭಟಿಸುತ್ತಾರೋ ಎನ್ನುವ ಆತಂಕದಿಂದ ನಿಜವಾಗಿಯೂ ಕಲೆ ಸಂಸ್ಕೃತಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂಸ್ಥೆಗಳಿಗೆ ಅನುದಾನ ನೀಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸುವುದಿಲ್ಲ ಎಂದೂ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳ ವಿವೇಚನೆಗೂ ಅನುದಾನವನ್ನು ಮೀಸಲಾಗಿಡಲಾಗುವುದು ಎಂದು ಹೇಳುತ್ತಾ ವಾಟಾಳ್ ನಾಗರಾಜರಂತಹ ದೊಡ್ಡ ಪ್ರಭಾವಶಾಲಿಗಳಿಗೆ ಅನುದಾನದ ಬಾಗಿಲನ್ನೂ ತೆರೆದಿರಿಸಿದ್ದಾರೆ. ನಿಜ ಹೇಳಬೇಕೆಂದರೆ ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವುದು ಸಚಿವರಿಗೆ ಸ್ಪಷ್ಟತೆಯಿಲ್ಲಾ. ಅದಕ್ಕಾಗಿ ಸಾರ್ವಜನಿಕರಿಂದಲೇ ಸಲಹೆ ಮತ್ತು ಅಭಿಪ್ರಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ಕರ್ನಾಟಕ ಸಂಸ್ಕೃತಿ ಕಾರ್ಯಕ್ರಮದ ಭಾಗವಾಗಿ ಮಾಡುತ್ತೇವೆಂದು ಹೇಳಲಾದ ಸಾಂಸ್ಕೃತಿಕ ಸ್ಪರ್ಧಾ ಯೋಜನೆ ಹೊಸದೇನೂ ಅಲ್ಲಾ. ಈಗಾಗಲೇ ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಾಯಣಗಳ ಸಹಕಾರದಿಂದ ಕರ್ನಾಟಕದ ನಾಲ್ಕೂ ಕಂದಾಯ ವಯಲಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಟಕ ಹಾಗೂ ಜಾನಪದ ಕಲೆಗಳ ಸ್ಪರ್ಧೆಯನ್ನು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಏರ್ಪಡಿಸುತ್ತಲೇ ಬಂದಿದೆ. ಇದನ್ನೇ ಇನ್ನೊಂದಿಷ್ಟು ವಿಸ್ತರಿಸುವ ಕೆಲಸವನ್ನು ಮಾಡಬಹುದೇನೋ. ಆದರೆ ಪರಿಣಾಮ ಮಾತ್ರ ಅಂದುಕೊಂಡಷ್ಟು ಆಗದೇ ಸರಕಾರಿ ಹಣ ಖರ್ಚಾಗುವುದೊಂದೇ ಸತ್ಯ.



ಹೊಸ ಸರಕಾರ, ಹೊಸ ಇಲಾಖಾ ಸಚಿವರು ಬಂದಾಗ ಹೊಸ ಆಲೋಚನೆ ಯೋಜನೆಗಳು ಬರಬಾರದೆಂದೇನೂ ಇಲ್ಲಾ. ಎಷ್ಟು ಬೇಕಾದರೂ ಹೊಸ ಕಾರ್ಯಸೂಚಿಗಳು ಜಾರಿಯಾಗಲಿ. ಡಿಕೆಶಿಯವರ ಕನಸಿನ “ಕರ್ನಾಟಕ ಸಂಸ್ಕೃತಿ” ಯೋಜನೆಯೂ ಸ್ವಾಗತಾರ್ಹವೇ. ರಾಜ್ಯಾದ್ಯಂತ ಪ್ರತಿಭಾನ್ವೇಷಣೆಗಾಗಿ ಸರಕಾರದ ಯೋಜನೆಯೊಂದು ಬಂದರೆ ಬೇಡ ಎನ್ನುವವರಾದರೂ ಯಾರು.  ಆದರೆ.. ಈಗಾಗಲೇ ಸರಕಾರಿ ಇಲಾಖೆಯ ಅನುದಾನವನ್ನೇ ನಂಬಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬದ್ದತೆಯಿಂದ ರೂಪಿಸಿಕೊಳ್ಳುತ್ತಾ ಬಂದಿರುವ ಸಂಸ್ಥೆಗಳಿಗೆ ಅನುದಾನ ಸ್ಥಗಿತ ಗೊಳಿಸಿದರೆ ಅಷ್ಟರ ಮಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಂಟಿತವಾಗುತ್ತವೆ. ಆಸಕ್ತಿ ಹಾಗೂ ಬದ್ದತೆಯಿಂದ ನಿಜಕ್ಕೂ ಕಲಾಕಾಯಕ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಅವರು ರೂಪಿಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರೀ ಇಲಾಖೆ ಧನಸಹಾಯವನ್ನು ಕೊಡುವುದರಲ್ಲಿ ತಪ್ಪೇನೂ ಇಲ್ಲಾ. ನಕಲಿ ಸಂಸ್ಥೆಗಳನ್ನು, ಲೆಟರ್ ಹೆಡ್ ಸಂಘಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸುವುದರ ಮೂಲಕ ಕಂಡುಹಿಡಿದು ಅಂತವುಗಳನ್ನು ಬ್ಲಾಕ್‌ಲಿಸ್ಟಿಗೆ ಸೇರಿಸಿ ತೆಗೆದುಹಾಕುವುದರಲ್ಲಿ ಯಾರ ಭಿನ್ನಾಭಿಪ್ರಾಯವೂ ಇಲ್ಲಾ. ಹೊಸ ಯೋಜನೆಯಿಂದ ಕಲಾಪ್ರತಿಭೆಗಳನ್ನು ಆನ್ವೇಷಿಸುವುದೇನೋ ಸರಿ ಆದರೆ ಅಂತಹ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುವುದು ಮತ್ತದೇ ಸಂಘಸಂಸ್ಥೆ ತಂಡಗಳೇ ಆಗಿವೆ. ಅನುದಾನವನ್ನು ನಿಲ್ಲಿಸಿ ಸಂಸ್ಥೆಗಳ ಕಾರ್ಯಚಟುವಟಿಕೆಗಳೇ ನಿಂತುಹೋದರೆ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ವದಗಿಸಿಕೊಡುವವರು ಯಾರು?  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸವೇ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲು. ನೇರವಾಗಿ ಸರಕಾರಿ ಇಲಾಖೆಗಳೇ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಿಲ್ಲಾ, ಅದನ್ನೆಲ್ಲಾ ಮಾಡಲು ಸರಕಾರಿ ಅಧಿಕಾರಿಗಳಿಗೆ ಕಲೆಯ ಬಗ್ಗೆ ಆಸಕ್ತಿ ಹಾಗೂ ಅನುಭವ ಎರಡೂ ಇರುವುದಿಲ್ಲ.

ಇಷ್ಟಕ್ಕೂ ರಾಜ್ಯಾದ್ಯಂತ ಇರುವ ಕಲಾಸಂಸ್ಥೆಗಳಿಗೆ ವಾರ್ಷಿಕವಾಗಿ ನೀಡುವ ಅನುದಾನ ನೂರಾರು ಕೋಟಿ ಲೆಕ್ಕದಲ್ಲೇನೂ ಇಲ್ಲ. ಕೇವಲ ಹದಿಮೂರು ಕೋಟಿ ರೂಪಾಯಿಗಳಷ್ಟೇ. ಸರಕಾರ ಒಂದು ವೈಭವದ ಜಯಂತಿಯನ್ನು ಮಾಡಲು ಬಳಸುವ ಹಣಕ್ಕಿಂತಲೂ ಕಡಿಮೆಯಾಗಿದೆ. ಕರ್ನಾಟಕ ಸರಕಾರ ಸಂಸ್ಕೃತಿ ಇಲಾಖೆಗೆ ವಾರ್ಷಿಕವಾಗಿ ನಾನೂರಕ್ಕೂ ಹೆಚ್ಚು ಕೋಟಿ ಹಣವನ್ನು ಬಿಡುಗಡೆ ಮಾಡಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಿ ಎಂದು  ಹೇಳುತ್ತದೆ. ಅಷ್ಟೊಂದು ದೊಡ್ಡ ಮೊತ್ತದಲ್ಲಿ ಹದಿಮೂರು ಕೋಟಿ ರೂಪಾಯಿ ಯಾವ ಲೆಕ್ಕ. ಈ ಹಣದಲ್ಲಿ ಒಂದಿಷ್ಟು ಸಂಘಸಂಸ್ಥೆಗಳು ಕಲಾವಿದರುಗಳು ಸಂಸ್ಕೃತಿಯ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಇದಕ್ಯಾಕೆ ಮಾನ್ಯ ಸಚಿವರು ಕೊಕ್ಕೆ ಹಾಕುತ್ತಾರೋ ಗೊತ್ತಿಲ್ಲ. ನೂರಾರು ಕೋಟಿ ಹಣಗಳಷ್ಟು ದುರುಪಯೋಗ ಮಾಡಿಕೊಳ್ಳುವ ಇಲಾಖೆಯ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಇರುವಾಗ ಕಲಾವಿದರಾದವರಿಗೆ ಹದಿಮೂರು ಕೋಟಿ ಹಣ ಬಿಡುಗಡೆ ಮಾಡುವುದರಲ್ಲಿ ತಪ್ಪೇನೂ ಇಲ್ಲಾ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಯಾರು ಅದೇನೇ ಮಾಡಿದರೂ ಸರಕಾರಿ ಹಣದ ಸೋರಿಕೆ ಮತ್ತು ದುರುಪಯೋಗವನ್ನಂತೂ ತಡೆಯಲು ಸಾಧ್ಯವೇ ಇಲ್ಲಾ. ಆ ಸೋರಿಕೆಯಲ್ಲಿ  ಕಲಾವಿದರಿಗೂ ಒಂದೆರಡು ಹನಿ ಸಿಕ್ಕುವುದಾದರೆ ಸಿಕ್ಕಲಿ. ಒಂದಿಷ್ಟು ಅನುದಾನ ದಕ್ಕುವುದಾದರೆ ದಕ್ಕಲಿ. ಕನ್ನಡ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳಾದರೂ ಆಗಲಿ ಎನ್ನುವುದೇ ಎಲ್ಲಾ ರಂಗಕರ್ಮಿ ಕಲಾವಿದರುಗಳ ಆಶಯವಾಗಿದೆ.

ಇಷ್ಟಕ್ಕೂ ಈ ಸಂಕಷ್ಟದ ಸಮಯದಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಸಂಘಸಂಸ್ಥೆಯ ರೂವಾರಿಗಳು ಹಾಗೂ ಹಿರಿಯ ರಂಗಕರ್ಮಿಗಳು ಏನು ಮಾಡಬೇಕು? ಎಂಬುದರ ಬಗ್ಗೆ ಆವೇಶಕ್ಕೊಳಗಾಗದೇ ಯೋಚಿಸಬೇಕಾಗಿದೆ. ಅನುದಾನ ನಿಲ್ಲಿಸುತ್ತೇನೆ ಹಾಗೂ ಅನುದಾನ ಸ್ಥಗಿತಗೊಳಿಸುವುದಿಲ್ಲ ಎನ್ನುವ ಸಚಿವರ ಮಾತುಗಳಲ್ಲೇ ದ್ವಂದ್ವಗಳಿವೆ. ಕಲಾಸಂಸ್ಥೆಗಳು ಹೋರಾಟಕ್ಕೆ ಇಳಿದರೆ ನಾನೆಲ್ಲಿ ಅರ್ಹ ಸಂಸ್ಥೆಗಳಿಗೆ ಅನುದಾನ ನಿಲ್ಲಿಸುತ್ತೇನೆಂದು ಹೇಳಿದ್ದೇನೆ ಎಂದು ಸಚಿವರು ಸಮಜಾಯಿಸಿ ಕೊಟ್ಟು ನುಣುಚಿಕೊಳ್ಳುತ್ತಾರೆ. ಆದ್ದರಿಂದ..

1.        ಸಚಿವರ ಮಾತುಗಳು ಲಿಖಿತ ಆದೇಶವಾಗಿ  ಇಲಾಖೆಯ ನಿರ್ದೇಶಕರುಗಳಿಗೆ ಬಂದಿದೆಯಾ ಹಾಗೂ ಅದರಲ್ಲಿ ಏನಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

2.       ತಕ್ಷಣಕ್ಕೆ ಧರಣಿ ಹೋರಾಟ ಚಳುವಳಿ ಎಂದು ಹೋಗದೇ ಕಾಲಮಿತಿಯಲ್ಲಿ ಅರ್ಹ ಸಂಸ್ಥೆಗಳಿಗೆ ನೀವೇ ಹೇಳಿದಂತೆ ಅನುದಾನವನ್ನು ಬಿಡುಗಡೆ ಮಾಡಿ ಎಂದು ಸಚಿವರ ಮಾತುಗಳಲ್ಲೇ ಅವರನ್ನು ಕಟ್ಟಿ ಹಾಕಿ ಅನುದಾನ ಬಿಡುಗಡೆಗೆ ಒತ್ತಾಯಿಸಬೇಕು. ಅದಕ್ಕೂ ಒಪ್ಪದೇ ಹೋದರೆ ಹೋರಾಟ ಅನಿವಾರ್ಯ.

3.       ಹಿರಿಯ ರಂಗಕರ್ಮಿಗಳು ಒಂದು ನಿಯೋಗ ಮಾಡಿಕೊಂಡು ಸಂಸ್ಕೃತಿ ಇಲಾಖೆಯ ಸಚಿವರ ಸಮಯ ನಿಗಧಿ ಪಡಿಸಿಕೊಂಡು ಹೋಗಿ ಬೇಟಿಯಾಗಿ ಅನುದಾನ ಸ್ಥಗಿತದ ಸಾಧಕ ಬಾದಕಗಳನ್ನು ಕುರಿತು ಮನದಟ್ಟು ಮಾಡಿಕೊಡಬೇಕು ಹಾಗೂ ಅನುದಾನ ಸ್ಥಗಿತ ಆದೇಶವನ್ನು ಹಿಂತೆಗೆದುಕೊಂಡು ಅರ್ಹ ಸಂಸ್ಥೆಗಳಿಗಾದರೂ ಧನಸಹಾಯವನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಒತ್ತಾಯಿಸಿಬೇಕು.

4.     ಕರ್ನಾಟದ ಸಂಸ್ಕೃತಿ ಎನ್ನುವ ಸಚಿವರ ತಲೆ ಹೊಕ್ಕ ಭೂತದ ರೂಪರೇಷೆಗಳ ಕುರಿತು ಅವರಿಗೆ ಸ್ಪಷ್ಟತೆ ಇಲ್ಲದ ಕಾರಣ, ಸಾರ್ವಜನಿಕವಾಗಿ ಸಲಹೆಗಳನ್ನು ಕೇಳಿರುವ ಕಾರಣ ನಾಟಕ ಅಕಾಡೆಮಿಯ ಅಧ್ಯಕ್ಷರ ಸಾರಥ್ಯದಲ್ಲಿ ಕರ್ನಾಟಕ ಸಂಸ್ಕೃತಿ ಯೋಜನೆಯ ನೀಲಿನಕ್ಷೆಯೊಂದನ್ನು ರಂಗಕರ್ಮಿಗಳ ತಂಡವೊಂದು ತಯಾರಿಸಿ ಸಂಸ್ಕೃತಿ ಇಲಾಖೆಯ ನಿರ್ದೇಶಕಿಯವರಿಗೆ ಹಾಗೂ  ಸಚಿವಾಲಯಕ್ಕೆ ಸಲ್ಲಿಸಿ ಅದರ ಅನುಷ್ಟಾನಕ್ಕೆ ಒತ್ತಾಯಿಸಿಬೇಕು.

5.       ಈ ಯಾವ ಪ್ರಯತ್ನಗಳೂ ಫಲಕೊಡದಿದ್ದರೆ ನೇರವಾಗಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಹಾಗೂ ಮೈತ್ರಿ ಸರಕಾರದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರನ್ನು ರಂಗಭೂಮಿಯ ಹಿರಿಯರು ಬೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಿ ಡಿಕೆಶಿಯವರ ಮೇಲೆ ರಾಜಕೀಯ ಒತ್ತಡ ತರುವ ಕೆಲಸವನ್ನು ಮಾಡಬೇಕು.

6.       ಇವೆಲ್ಲವೂ ವಿಫಲವಾಗಿ ಸಚಿವರು ಜಿದ್ದಿಗೆ ಬಿದ್ದು ಅನುದಾನವನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶ ಹೊರಡಿಸಿದರೆ ಅನಿವಾರ್ಯವಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಕಲಾವಿದರುಗಳು ವಿವಿಧ ಸ್ಥರಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲು ಸಿದ್ದವಾಗಬೇಕು. ಇದಕ್ಕೆ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಉತ್ಸಾಹ ಎರಡೂ ಬೇಕಿದೆ.

ಇಲ್ಲವಾದರೆ..  ಭಾಷೆ ಸಾಹಿತ್ಯ ಕಲೆ ಸಂಸ್ಕೃತಿಯ ಮೇಲೆ ಒಲವು ಮಮತೆ ಇಲ್ಲದ ರಾಜಕಾರಣಿಗಳು ಹಾಗೂ ಅಧಿಕಾರಿಗಳೂ ಸೇರಿ ಸಂಸ್ಕೃತಿ ಇಲಾಖೆಯನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬಳಸಿಕೊಂಡು ಜನರ ತೆರಿಗೆ ಹಣವನ್ನು ಹಂಚಿಕೊಂಡು ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರವನ್ನು ನಿರ್ಲಕ್ಷಿಸುವುದು ಶತಸಿದ್ಧ. ಕಲಾವಿದರನ್ನು ನಿರ್ಲಕ್ಷಿಸುವುದಕ್ಕೆ ಈ ಶಕ್ತಿಗಳು ಸದಾ ಬದ್ದ. ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಹಾಗೂ ಕಲೆ ಮತ್ತು ಕಲಾವಿದರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಾಂಸ್ಕೃತಿಕ ಲೋಕದ ಹಿರಿಯರ, ಗಣ್ಯರ ಹೊಣೆಗಾರಿಕೆಯಾಗಿದೆ. ಏನೇ ಆಗಲಿ ಮುಂದಿನ ತಲೆಮಾರಿಗೆ ಕನ್ನಡ ಕಲೆ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಿದೆ.

-ಶಶಿಕಾಂತ ಯಡಹಳ್ಳಿ

  



4 ಕಾಮೆಂಟ್‌ಗಳು: