ಮಂಗಳವಾರ, ಜುಲೈ 9, 2019

ರಂಗದಂಗಳದಲ್ಲಿ ಬೆರಗು ಸೃಷ್ಟಿಸಿದ ಪ್ರಾಣಿ ಪ್ರಪಂಚ “ಅನಿಮಲ್ ಫಾರ್ಮ”:



ವಿಡಂಬಣೆಯೆಂಬ ರೂಪಕದಚ್ಚರಿ: ರಂಗಪ್ರಯೋಗದ ವೃತ್ತಿಪರತೆಗೆ ಮಾದರಿ:



ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ಸ್ವಾತಂತ್ರ್ಯ ಸಮಾನತೆಗಾಗಿ ಹೋರಾಡಿದ ಸಮೂಹವೊಂದರ ನಾಯಕತ್ವ ಅದು ಹೇಗೆ ಸ್ವಾತಂತ್ರ್ಯ ದೊರೆತ ಮೇಲೆ ಸರ್ವಾಧಿಕಾರಿಯಾಗಿ ಬದಲಾಗಿ ತನ್ನದೇ ಸಮೂಹದ ಮೇಲೆ ದಬ್ಬಾಳಿಕೆ ಮಾಡುತ್ತದೆ ಎನ್ನುವುದನ್ನು ಪ್ರಾಣಿ ಪ್ರಪಂಚದ ರೂಪಕದ ಮೂಲಕ ಹೇಳುವ ನಾಟಕವೇ ಅನಿಮಲ್ ಫಾರ್ಮ.

ಜಾರ್ಜ ಆರ್ವಲ್ ಕಾವ್ಯನಾಮದಲ್ಲಿ ಏರಿಕ್ ಅರ್ಥಕ್ ಬ್ಲೇರ್‌ರವರು 1945ರಲ್ಲಿ ಆಂಗ್ಲ ಭಾಷೆಯಲ್ಲಿ ಬರೆದ ಬರೆದ ಅನಿಮಲ್ ಫಾರ್ಮ ಕಾದಂಬರಿಯನ್ನು ಆಂಗ್ಲ ರಂಗಕರ್ಮಿ(ಬ್ರಿಟನ್ ರಾಯಲ್ ಶೇಕ್ಸಫೀಯರ್ ಕಂಪನಿ ಸ್ಥಾಪಕ) ಸರ್ ಪೀಟರ್ ರೆಜೆನಾಲ್ಡ್ ಹಾಲ್‌ರವರು ರಂಗರೂಪಗೊಳಿಸಿದ್ದರು. ಇದನ್ನು ಕನ್ನಡದ ಹಿರಿಯ ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯನವರು ಕನ್ನಡಕ್ಕೆ ಅನುವಾದಿಸಿದ್ದಾರೆ. 2019 ಜುಲೈ 3 ಮತ್ತು 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಆನಿಮಲ್ ಫಾರ್ಮ ನಾಟಕವನ್ನು ಎನ್‌ಎಸ್‌ಡಿ ಪದವೀಧರರಾದ ಖ್ಯಾತ ರಂಗದೃಶ್ಯ ತಜ್ಞ, ರಂಗನಿರ್ದೇಶಕ ಪ್ರೊ.ಸತ್ಯಬ್ರತ ರೌತ್‌ರವರು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ಐದನೇ ಬ್ಯಾಚಿನ ವಿದ್ಯಾರ್ಥಿಗಳಿಗಾಗಿ ನಿರ್ದೇಶಿಸಿದ್ದು ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅದೊಂದು ವಿವಿಧ ಪ್ರಾಣಿಗಳಿರುವ ಆನಿಮಲ್ ಫಾರ್ಮ ಹೌಸ್. ಅದರ ಮಾಲೀಕ ಅಂಕಲ್ ಜಾನ್ ಎನ್ನುವವ ಹಂದಿ, ಹಸು, ಕತ್ತೆ ಮುಂತಾದ ಪ್ರಾಣಿಗಳನ್ನು ಸಾಕಿ ಅವುಗಳನ್ನು ತನ್ನ ಲಾಭಕ್ಕಾಗಿ ದುಡಿಸಿಕೊಂಡು ಸರಿಯಾಗಿ ಆಹಾರ ಕೊಡದೇ ದೈಹಿಕವಾಗಿ ಹಿಂಸಿಸುತ್ತಿರುತ್ತಾನೆ. ಪ್ರಾಣಿಗಳೆಲ್ಲವನ್ನೂ ಹೆದರಿಸಿ ಹತೋಟಿಯಲ್ಲಿಡಲು ನಾಯಿಗಳನ್ನೂ ಸಾಕಿರುತ್ತಾನೆ. ಮುದಿ ಹಂದಿಯೊಂದರ ನಾಯಕತ್ವದಲ್ಲಿ ನಡೆದ ಕ್ರಾಂತಿಯ ಯತ್ನದ ಬಗ್ಗೆ ಬೇಹುಗಾರ ನಾಯಿಗಳಿಂದ ಅರಿತ ಮಾಲೀಕ ಆ  ಹಂದಿಯನ್ನು ಕೊಲ್ಲುವುದರ ಮೂಲಕ ಕ್ರಾಂತಿಯ ಪ್ರಯತ್ನವೊಂದನ್ನು ವಿಫಲಗೊಳಿಸುತ್ತಾನೆ. ಮಾಲೀಕನ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಕೆಲವು ಹಂದಿಗಳು ಮಿಕ್ಕೆಲ್ಲಾ ಪ್ರಾಣಿಗಳನ್ನು ಪ್ರಚೋದಿಸಿ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ದಂಗೆಯೆದ್ದು ದುಷ್ಟ ಮಾಲೀಕನ ಮೇಲೆ ಹಲ್ಲೆ ಮಾಡಿ ಓಡಿಸುತ್ತವೆ. ಸಿಕ್ಕ ಸ್ವಾತಂತ್ರ್ಯವನ್ನು ಅನಿಮಲಿಸಂ ಎಂದು ಕರೆದು ಪ್ರಾಣಿಗಳೆಲ್ಲಾ ಸಮಾನರು ಎಂದು ಘೋಷಿಸಿ ಐದು ನಿಯಮಗಳನ್ನು ರೂಪಿಸಲಾಗುತ್ತದೆ. ಬರುಬರುತ್ತಾ ಕೆಲವು ಬುದ್ದಿವಂತ ಹಂದಿಗಳು ಇತರ ಪ್ರಾಣಿಗಳನ್ನು ಸಮಾನತೆಯ ಹೆಸರಲ್ಲಿ ಮೋಸಗೊಳಿಸಿ ತಮ್ಮ ಸ್ವಾರ್ಥವನ್ನು ಸಾಧಿಸಲು ಪ್ರಯತ್ನಿಸುತ್ತವೆ. ಇತರರ ಶ್ರಮದ ಫಲವನ್ನು ತಮಗೆ ಹಾಗೂ ತಮ್ಮ ಸಂತಾನಕ್ಕೆ ಬಳಸಲು ಆರಂಭಿಸುತ್ತವೆ. ನೆಪೋನಿಯನ್ ಎನ್ನುವ ಹಂದಿ ಸ್ವಘೋಷಿತ ನಾಯಕನಾಗಿ ಶತ್ರುಗಳಾದ ಮನುಷ್ಯರ ಸಂಭವನೀಯ ಆಕ್ರಮಣ ತಡೆಯಲು ಬಂಧೂಕುಗಳು ಬೇಕೆಂದು ಪ್ರತಿಪಾದಿಸುತ್ತದೆ. ಪ್ರಾಣಿಗಳಿಗೆಲ್ಲಾ ಮೂಲಭೂತ ಸೌಲಭ್ಯಗಳು ಬೇಕೆಂದು ಹೇಳುವ ಬೇರೆ ಹಂದಿಯ ಮಾತನ್ನು ನಿರಾಕರಿಸಿ ಪ್ರಾಣಿಗಳಲ್ಲಿ ಯುದ್ದಭೀತಿಯನ್ನು ಹುಟ್ಟಿಸುವ ನೆಪೋಲಿಯನ್ ಸರ್ವಾಧಿಕಾರಿಯಾಗುತ್ತದೆ. ಶೋಷಣೆಯ ವಿರುದ್ಧ ಹೋರಾಡಿ ಗೆದ್ದು ಸ್ವಾತಂತ್ರ್ಯ ಗಳಿಸಿಕೊಂಡು ಸಮಾನತೆಯ ಕನಸು ಕಾಣುತ್ತಿದ್ದ ಪ್ರಾಣಿ ಪ್ರಪಂಚ ಮತ್ತೆ ಸರ್ವಾಧಿಕಾರಿಯೊಬ್ಬನ ದಮನಪೀಡಿತ ಆಡಳಿತದಲ್ಲಿ ಬಂಧಿಯಾಗುತ್ತದೆ. ಕಾವಲು ನಾಯಿಗಳ ಕ್ರೌರ್ಯದಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ. ಇದು ಈ ನಾಟಕದ ಸಂಕ್ಷಿಪ್ತ ತಿರುಳು.



ಎರಡನೇ ವಿಶ್ವಮಹಾಯುದ್ಧ ಕೊನೆಗೊಳ್ಳುವ ಸಮಯದಲ್ಲಿ ಈ ಆನಿಮಲ್ ಫಾರ್ಮ ಕಾದಂಬರಿ ಪ್ರಕಟಗೊಂಡಿತ್ತು. ಕಮ್ಯೂನಿಸ್ಟ್ ಸಿದ್ದಾಂತದ ರಷ್ಯಾದಲ್ಲಿ ಸ್ಟಾಲಿನ್‌ನನ್ನು ಸರ್ವಾಧಿಕಾರಿ ಎನ್ನುವಂತೆ ಬಿಂಬಿಸುವ ಪ್ರಯತ್ನವನ್ನು ದೇಶಭ್ರಷ್ಠರಾದ ಟ್ರಾಟಸ್ಕೀಯನ್ ಗುಂಪೊಂದು ಮಾಡಿತು. ಅದಕ್ಕೆ ಬಂಡವಾಳಶಾಹಿಗಳು ಕುಮ್ಮಕ್ಕು ಕೊಟ್ಟಿದ್ದರು. ಈ ನಾಟಕದಲ್ಲೂ ಸಹ ಸಮಾನತೆಯ ಆಶಯದ ಮೇಲೆ ಅಧಿಕಾರಕ್ಕೆ ಬಂದ ಹಂದಿಯೊಂದು ತದನಂತರ ಹೇಗೆ ಸರ್ವಾಧಿಕಾರಿ ಆಯಿತು ಎಂಬುದನ್ನು ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನವಿದೆ. ಇದು ನೇರವಾಗಿ ಕಮ್ಯೂನಿಸಂ ಕುರಿತು ಮಾಡಿದ ವಿಡಂಬನೆಯಾಗಿದ್ದು, ಸ್ಟಾಲಿನ್ ಬಗ್ಗೆ ಮಾಡಿದ ಲೇವಡಿಯಾಗಿದೆ. ಆದರೆ.. ಆಗ ಇದೇ ಸ್ಟಾಲಿನ್ ಇಲ್ಲದೇ ಹೋಗಿದ್ದರೆ, ಯುದ್ದಕಾಲದಲ್ಲಿ ಸರ್ವಾಧಿಕಾರಿ ಮನೋಭಾವನೆ ತೋರದೇ ಹೋಗಿದ್ದರೆ ಜಗತ್ತಿನ ಅತೀದೊಡ್ಡ ಕ್ರೂರ ರಾಕ್ಷಸ ಹಿಟ್ಲರ್‌ನನ್ನು ಸೋಲಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂಬ ಸತ್ಯವನ್ನು ಮರೆಮಾಚುವ ಜಾರ್ಜ ಆರ್ವೆಲ್, ನಾಜಿಗಳ ಯುದ್ದೋನ್ಮಾದದಿಂದ ಜಗತ್ತನ್ನು ಕಾಪಾಡಿದ ಸ್ಟಾಲಿನ್ ಹಾಗೂ ಅವರ ಸಂಗಾತಿಗಳನ್ನು ಹಂದಿಗೆ ಹೋಲಿಸಿ ಸ್ವಾರ್ಥಿಗಳು ಎಂದು ತೋರಿಸಿದ್ದು ಅಕ್ಷಮ್ಯ. ಕಮ್ಯೂನಿಸಂ ಎನ್ನುವ ಆದರ್ಶವಾದೀ ಪರಿಕಲ್ಪನೆಯನ್ನೇ ಪರಿಹಾಸ್ಯ ಮಾಡುವ ಈ ನಾಟಕವು ಅದಕ್ಕೆ ಎನಮಿಲಿಸಂ ಎನ್ನುವ ಪರಿಭಾಷೆಯನು ಕೊಟ್ಟು ಅಪಹಾಸ್ಯ ಮಾಡಿದ್ದು ಸಮಸಮಾಜದ ಬಗ್ಗೆ ಇರುವ ಅಸಹನೆಯನ್ನು ತೋರಿಸುತ್ತದೆ.

ಆಗ ರಷ್ಯಾವನ್ನು ಝಾರ್ ರಾಜರು ಆಳುತ್ತಿದ್ದರು. ಜನರನ್ನು ಕ್ರೂರವಾಗಿ ಶೋಷಿಸಿ ಬಂಡಾಯವನ್ನು ದಮನಿಸುತ್ತಿದ್ದರು. ದೇಶಾದ್ಯಂತ ಬಡತನ, ಹಸಿವು ತಾಂಡವವಾಡುತ್ತಿತ್ತು. ಆಗ ಶೋಷಿತರಾದ ಕಾರ್ಮಿಕ ವರ್ಗ ಅಸಮಾನತೆಯ ವಿರುದ್ಧ ಸಿಡಿದೆದ್ದಿತು. ಲೇನಿನ್ ನೇತೃತ್ವದಲ್ಲಿ ದೇಶಾದ್ಯಂತ ಬಂಡಾಯ ಬುಗಿಲೆದ್ದಿತು. ಸಮಸಮಾಜ ನಿರ್ಮಾಣವನ್ನೇ ಗುರಿಯಾಗಿಸಿಕೊಂಡು ಜನರನ್ನು ಸಂಘಟಿಸಿ ಝಾರ್ ದೊರೆಗಳ ಅಟ್ಟಹಾಸವನ್ನು ಮಟ್ಟಹಾಕಿ ಶ್ರಮಜೀವಿ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಕಮ್ಯೂನಿಸ್ಟ್ ಸರಕಾರ ಅಸ್ತಿತ್ವಕ್ಕೆ ಬಂದಿತು. ಲೇನಿನ್ ನಂತರ ದೇಶದ ಚುಕ್ಕಾಣಿ ಹಿಡಿದ ಸ್ಟಾಲಿನ್‌ಗೆ ನಾಜಿಗಳ ಆಕ್ರಮಣವನ್ನು ಹಿಮ್ಮೆಟ್ಟಿಸಬೇಕಾಗಿತ್ತು. ಜೊತೆಗೆ ದೇಶದ ಜನರ ಹಸಿವೆಯನ್ನೂ ಪರಿಹರಿಸಬೇಕಾಗಿತ್ತು. ಮೊದಲು ವೈರಿಗಳ ನಾಶ ಆಮೇಲೆ ದೇಶವಾಸಿಗಳ ಬಗ್ಗೆ ಕಾಳಜಿ ಎನ್ನುವುದನ್ನು ಮನಗಂಡು ಶಸ್ತ್ರಾಸ್ತ್ರಗಳನ್ನು ಸಿದ್ದವಾಗಿಸಿಕೊಂಡು ರಷ್ಯಾದ ಮೇಲೆ ಆಕ್ರಮಣಕ್ಕೆ ಬಂದ ಹಿಟ್ಲರನ ನಾಜಿ ಸೈನ್ಯವನ್ನು ಸೆದೆಬಡಿಯುವ ಮೂಲಕ ಎರಡನೇ ಯುದ್ದ ಕೊನೆಯಾಯಿತು. ತದನಂತರ ರಷ್ಯಾದಲ್ಲಾದ ಪಾಸಿಟಿವ್ ಬದಲಾವಣೆಗಳನ್ನು ನೋಡಲು ಜಾರ್ಜ ಆರ್ವೆಲ್ ಬದುಕಿರಲಿಲ್ಲ. 1950ರಲ್ಲೇ ತನ್ನ 47ನೇ ವಯಸ್ಸಿನಲ್ಲಿ ಅಸುನೀಗಿದ್ದ. ಅಷ್ಟರಲ್ಲೇ ತಾನು ಕಂಡದ್ದನ್ನು, ಟ್ರಾಟಸ್ಕೀಯನ್‌ರ ವಿಚಾರಗಳನ್ನು, ಬಂಡವಾಳಶಾಹಿಗಳ ಕಮ್ಯೂನಿಸಂ ವಿರೋಧಿತನವನ್ನು ತನ್ನ ಆನಿಮಲ್ ಫಾರ್ಮ ಕಾದಂಬರಿಯಲ್ಲಿ ಬರೆದು ದಾಖಲಿಸಿದ. ಸ್ಟಾಲಿನ್ ಹಾಗೂ ಅವರ ಜೊತೆಗಾರರನ್ನು ಹಂದಿಗಳು ಎಂದು ನಿಂದಿಸಿದ. ಸ್ಟಾಲಿನ್ ವಿರೋಧಿಗಳಾಗಿದ್ದ ದೇಶದ್ರೋಹಿ ಟ್ರಾಟಸ್ಕೀಯನ್ಸ್‌ರನ್ನು ಅಭಿವೃದ್ದಿಯ ಆಶಯಕಾರರು ಎಂದು ಬಿಂಬಿಸಿದ. ತಂತ್ರ ಕುತಂತ್ರಗಳಿಂದ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಆಳುವವರು ದುಡಿಯುವವರ ಶ್ರಮವನ್ನು ದೋಚಿ ಜನರನ್ನು ಹಸಿವೆಯಿಂದ ಬಳಲುವಂತೆ ಮಾಡಿದರು ಎಂದು ಆರೋಪಿಸಿದ. ಎಲ್ಲರನ್ನೂ ತುಳಿದು, ಅಭಿವೃದ್ದಿಯನ್ನು ಕಡೆಗಣಿಸಿ, ಶಸ್ತ್ರಗಳ ಬಲದಿಂದ ವಿಕ್ಷಿಪ್ತ ವಿರಾಟ ಸರ್ವಾಧಿಕಾರಿಯೊಬ್ಬ ಸೃಷ್ಟಿಯಾದನೆಂದು ನಂಬಿಸಲು ಪ್ರಯತ್ನಿಸಿದ.



ಆದರೆ.. ವಸ್ತುಸ್ಥಿತಿ ಹಾಗಿರಲಿಲ್ಲ. ವಿಶ್ವಯುದ್ದದ ನಂತರ ರಷ್ಯಾದ ಬೆಳವಣಿಗೆಯನ್ನು ನೋಡಲು ಈ ಆನಿಮಲ್ ಫಾರ್ಮಿನ ಲೇಖಕ ಇರಲಿಲ್ಲವಾದ್ದರಿಂದ ಅವರ ಗ್ರಹಿಕೆ ಅಪೂರ್ಣವಾಗಿತ್ತು. ಝಾರ್ ಅರಸರ ವಿಪರೀತ ಶೋಷಣೆಯಿಂದ ಬಸವಳಿದಿದ್ದ ದೇಶ ಯುದ್ದಾನಂತರ ಪವಾಡ ಸದೃಶವಾಗಿ ಅಭಿವೃದ್ದಿ ಹೊಂದಿತು. ಬಡತನದಿಂದ ಬಳಲಿದ್ದ ಜನರು ಹಸಿವೆಯಿಂದ ಹೊರಬಂದರು. ಜಗತ್ತಿನ ಅತ್ಯಂತ ಬಡದೇಶವಾಗಿದ್ದ ರಷ್ಯಾ ವಿಶ್ವದ ಶ್ರೀಮಂತ ದೇಶವಾಗಿ ಬದಲಾಗಿತ್ತು. ಅಮೇರಿಕ ಇಂಗ್ಲೆಂಡಿನಂತಹ ಬಂಡವಾಳಶಾಹಿ ದೇಶಗಳು ಸಮಾನತೆಯ ಆಶಯದ ಕಮ್ಯೂನಿಸಂ ಸಿದ್ದಾಂತವನ್ನು ವಿರೋಧಿಸಿ ಅದನ್ನು ನಾಶಮಾಡಲು ಪ್ರಯತ್ನಿಸಿದರು. ಸಾಮ್ರಾಜ್ಯಶಾಹಿಗಳ ಕುತಂತ್ರಕ್ಕೆ, ವಿಶ್ವ ಬಂಡವಾಳಶಾಹಿಗಳು ಹೆಣೆದ ಜಾಗತೀಕರಣದ ತಂತ್ರಕ್ಕೆ ರಷ್ಯಾ ಕೂಡಾ ಬಲಿಯಾಯಿತು. ಈ ನಾಟಕದಲ್ಲಿ ತೋರಿಸಿದ ಹಾಗೆ ಸರ್ವಾಧಿಕಾರಿತನದಿಂದ ರಷ್ಯಾ ದರಿದ್ರ ದೇಶವಾಗಲಿಲ್ಲ. ಈ ದೇಶ ಕಮ್ಯೂನಿಸಂನಿಂದಾ ಕ್ಯಾಪಿಟಲಿಸಂಗೆ ಬರಲು ಅಲ್ಲಿರುವ ಸರ್ವಾಧಿಕಾರಿ ಆಡಳಿತಕ್ಕಿಂತಾ ಹೊರಗಿನ ಸಾಮ್ರಾಜ್ಯಶಾಹಿಗಳ ಹುನ್ನಾರವೇ ಹೆಚ್ಚಾಗಿತ್ತು. ತದನಂತರ ರಷ್ಯಾದಲ್ಲಿ ಕಮ್ಯೂನಿಸಂಗೆ ಹಿನ್ನಡೆಯಾಗಿದ್ದು ನಿಜ, ಸಮಾನತೆಯ ಆಶಯಕ್ಕೆ ಸೋಲಾಗಿದ್ದೂ ಸತ್ಯ. ಆದರೆ... ಕಮ್ಯೂನಿಸಂ ಎನ್ನುವ ಸಿದ್ದಾಂತ ಅಲ್ಲಿ ಅನುಷ್ಟಾನಕ್ಕೆ ಬರದೇ ಇದ್ದಲ್ಲಿ ಝಾರ್ ದೊರೆಗಳ ಶೋಷಣೆ ಮುಂದುವರೆಯುತ್ತಿತ್ತು. ಹಸಿವು ಮುಕ್ತವಾಗಿರುವ ಈಗಿನ ಸಮಾಜ ದಾರಿದ್ರ್ಯದಿಂದ ತತ್ತರಿಸುತ್ತಿತ್ತು. ಇಲ್ಲವೇ ಯಾವುದಾದರೂ ಸಾಮ್ರಾಜ್ಯಶಾಹಿಯ ಹಿಡಿತದಲ್ಲಿ ಬಳಲುತ್ತಿತ್ತು. ಇದೆಲ್ಲವನ್ನೂ ಗಮನಿಸುವಷ್ಟು ಆಯಸ್ಸು ಜಾರ್ಜ ಆರ್ವೆಲ್‌ಗೆ ಇರಲಿಲ್ಲ.

ಆದರೆ.. ಈ ನಾಟಕದ ವಿಷಯವು ಈಗ ಭಾರತದಲ್ಲಿ ಪ್ರಬದ್ಧಮಾನಕ್ಕೆ ಬಂದು ಆಧಿಕಾರದ ಚಿಕ್ಕಾಣಿ ಹಿಡಿದ ಪ್ಯಾಸಿಸ್ಟ್ ಮನೋಭಾವದ ಪ್ರಧಾನಿಗೆ ಬಹಳ ಸೂಕ್ತವಾಗಿ ಅನ್ವಯವಾಗುತ್ತದೆ. ಎಲ್ಲರಿಗೂ ಅಚ್ಚೇ ದಿನ್ ಎನ್ನುತ್ತಾ, ಎಲ್ಲರ ವಿಕಾಸ ಮತ್ತು ಅಭಿವೃದ್ದಿಯೇ ಗುರಿ ಎಂದು ಹೇಳುತ್ತಾ, ಇಡೀ ದೇಶದ ಬಹುಸಂಖ್ಯಾತ ಜನರನ್ನು ದೇಶಭಕ್ತಿಯ ಹೆಸರಲ್ಲಿ ಸಮ್ಮೋಹಿತಗೊಳಿಸಲಾಗಿದೆ. ವಿರೋಧಿಸುವವರನ್ನು ಸಾಮ ಬೇಧ ದಂಡಾದಿಗಳಿಂದ ಹತ್ತಿಕ್ಕಲಾಗುತ್ತಿದೆ. ಇವು ನಿಜವಾದ ಸರ್ವಾಧಿಕಾರದ ಲಕ್ಷಣಗಳು. ಹಸಿವು ಬಡತನ ನಿರುದ್ಯೋಗಗಳು ದೇಶಾದ್ಯಂತ ತಾಂಡವವಾಡುತ್ತಿದ್ದರೂ ಹುಸಿ ರಾಷ್ಟ್ರೀಯವಾದವನ್ನು ವೈಭವೀಕರಿಸಿ, ಯುದ್ದೋನ್ಮಾದವನ್ನು ಬಿತ್ತುವ ಪ್ರಯತ್ನಗಳು ಸರ್ವಾಧಿಕಾರಿಯೊಬ್ಬ ಸೃಷ್ಟಿಗೊಳ್ಳುತ್ತಿರುವ ಗುಣಲಕ್ಷಣಗಳಾಗಿವೆ. ತನಗೆ ಪೂರಕವಾಗಿರುವ ಬ್ರಹತ್ ಬಂಡವಾಳಿಶಾಹಿಗಳನ್ನು ಪೋಷಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸಿ, ಸಮಾನತೆಯ ಆಧಾರದ ಮೇಲಿರುವ ಸಂವಿಧಾನವನ್ನು ದುರ್ಬಲಗೊಳಿಸಿ, ಕಾನೂನು ಮಿಲಿಟರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ನಿಯಂತ್ರಿಸಿ, ಪ್ರತಿರೋಧವನ್ನು ಪ್ರತಿಹಂತದಲ್ಲೂ ದಮನಿಸುತ್ತಾ ಸಾಗುತ್ತಿರುವ ಪ್ರಸ್ತುತ ಭಾರತದ ಪ್ರಧಾನಿಯ ನಡೆಗಳು ಈ ನಾಟಕದಲ್ಲಿ ಸೃಷ್ಟಿಗೊಳ್ಳುವ ಸರ್ವಾಧಿಕಾರಿಗೆ ಸಮನಾಗಿವೆ.





ನಾಟಕದ ಆಶಯವನ್ನು ಹೊರತು ಪಡಿಸಿ ನಾಟಕದ ಆಕೃತಿಯ ಬಗ್ಗೆ ಹೇಳಬೇಕಾದದ್ದು ಬಹಳವಿದೆ. ಮನುಷ್ಯ ಪ್ರಪಂಚದ ವ್ಯವಹಾರಗಳನ್ನು ಪ್ರಾಣಿಗಳ ರೂಪಕದ ಮೂಲಕ ಹೇಳುವ ಪ್ರಯತ್ನದಲ್ಲಿ ಈ ನಾಟಕ ಸಫಲವಾಗಿದೆ.
ನಾಟಕವೊಂದರಲ್ಲಿ ವೃತ್ತಿಪರತೆ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿ ಆನಿಮಲ್ ಫಾರ್ಮ ಎನ್ನುವ ಈ ಕನ್ನಡ ನಾಟಕ. ಆರಂಭದಿಂದ ಕೊನೆಯವರೆಗೂ ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಈ ನಾಟಕವು ಎಲ್ಲಾ ವಿಭಾಗಗಳಲ್ಲೂ ಪ್ರೊಫೆಶನಲಿಸಂನ್ನು ಉಳಿಸಿಕೊಂಡು ಬಂದಿದೆ. ರಂಗದಂಗಳದಲ್ಲಿ ದೃಶ್ಯಕಾವ್ಯವೊಂದನ್ನು ಸೃಷ್ಟಿಸಿ ಎಲ್ಲಾ ವಯೋಮಾನದವರ ಮನರಂಜಿಸಿದೆ.

ಈ ನಾಟಕದ ವಿಶೇಷತೆ ಏನೆಂದರೆ ನಿರ್ದೇಶಕರು ಕನ್ನಡದವರಲ್ಲಾ, ಕನ್ನಡ ಭಾಷೆ ಗೊತ್ತಿಲ್ಲಾ, ನಟಿಸಿದ ಬಹುತೇಕ ಕಲಾವಿದರು ಕನ್ನಡೇತರರು ಹಾಗೂ ಎನ್‌ಎಸ್‌ಡಿ ಸೇರಿದ ಮೇಲೆ ಕನ್ನಡ ಕಲಿತವರು. ಆದರೂ ಕನ್ನಡ ಪ್ರೇಕ್ಷಕರೇ ಬೆಕ್ಕಸ ಬೆರಗಾಗುವಂತೆ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭೆ, ಕ್ರಿಯಾಶೀಲತೆ ಮತ್ತು ಅಗತ್ಯ ಸಂಪನ್ಮೂಲಗಳಿದ್ದಲ್ಲಿ ಭಾಷೆಯನ್ನೂ ಮೀರಿ ದೃಶ್ಯಕಾವ್ಯವೊಂದನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಈ ಆನಿಮಲ್ ಫಾರ್ಮ ರಂಗಪ್ರಯೋಗ.

ಆನಿಮಲ್ ಫಾರ್ಮ ನಾಟಕದ ಫಾರಂ ಬಗ್ಗೆ ವರ್ಣಿಸಲು ಶಬ್ದಗಳು ಸಾಲದು. ಕಾಲ್ಪನಿಕ ಲೋಕವೊಂದನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರಂಗತಂತ್ರಗಳನ್ನು ಅತ್ಯಂತ ಆಕರ್ಷಣೀಯವಾಗಿ ಬಳಸಲಾಗಿದೆ. ನಾಟಕದ ವಸ್ತು-ವಿಷಯವನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಬೆಳಕು, ಸಂಗೀತ ಹಾಗೂ ವಸ್ತ್ರವಿನ್ಯಾಸಗಳು ಅನನ್ಯವಾದ ಕೊಡುಗೆಯನ್ನು ಕೊಟ್ಟಿವೆ. ಕತ್ತೆ, ಕುದುರೆ, ಹಂದಿ, ಹಸು, ನಾಯಿ ಮುಂತಾದ ಪ್ರಾಣಿಪಾತ್ರಗಳಿಗೆ ಸೃಷ್ಟಿಸಲಾದ ಕಾಸ್ಟ್ರೂಮ್ಸ್ ಹಾಗೂ ಮುಖವಾಡಗಳನ್ನು ನೋಡುವುದೇ ಚೆಂದ.



ಕಲಾವಿದರುಗಳ ಸಾತ್ವಿಕಾಭಿನಯವನ್ನು ಹೊರತು ಪಡಿಸಿ ಆಂಗಿಕ ವಾಚಿಕ ಆಹಾರ್ಯಾಭಿನಯಗಳೆಲ್ಲಾ ನಾಟಕದಾದ್ಯಂತ ಒಂದಕ್ಕೊಂದು ಅಪೂರ್ವ ಹೊಂದಾಣಿಕೆಯನ್ನು ಹೊಂದಿ ನೋಡುಗರನ್ನು ಬೆರಗುಗೊಳಿಸಿವೆ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿಯಲು ಬಂದ ವಿದ್ಯಾರ್ಥಿಗಳ ನಾಟಕವಾ ಇದು ಎಂದು ನಂಬಲು ಸಾಧ್ಯವೇ ಇಲ್ಲದ ಹಾಗೆ ವೃತ್ತಿಪರತೆಯ ಅಭಿನಯ ಮೂಡಿಬಂದಿದೆ. ನಟರ ದೇಹಭಾಷೆಯನ್ನು ಹೇಗೆ ರಂಗಪ್ರಯೋಗದಲ್ಲಿ ದುಡಿಸಿಕೊಳ್ಳಬೇಕು ಎನ್ನುವುದನ್ನು ಈ ನಾಟಕದ ನಿರ್ದೇಶಕರನ್ನು ನೋಡಿ ಕಲಿತುಕೊಳ್ಳಬೇಕು. ನಾಟಕದಾದ್ಯಂತ ಅಳವಡಿಸಿದ ಪಾತ್ರಗಳ ಚಲನೆ, ಬ್ಲಾಕಿಂಗ್ ಸಂಯೋಜನೆ, ಆಗಮನ ನಿರ್ಗಮನಗಳು ನಿರ್ದೇಶಕರ ಪ್ರತಿಭೆಗೆ ಸಾಕ್ಷಿಯಾಗಿದ್ದವು.

ಪಾತ್ರಗಳ ಮುಖದ ಮೇಲೆ ಪ್ರಾಣಿಗಳ ಮುಖವಾಡಗಳಿದ್ದುದರಿಂದ ಭಾವನೆಗಳಿಲ್ಲಿ ಅವ್ಯಕ್ತವಾಗಿದ್ದವು. ಆದರೆ.. ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಬೆಳಕಿನ ಬಣ್ಣಗಳಿಂದಾಗಿ ದೃಶ್ಯದ ಮೂಡ್ ವ್ಯಕ್ತವಾಗುವಂತಿತ್ತು. ಅಗತ್ಯವಿದ್ದಾಗಲೆಲ್ಲಾ ಬೆಳಕಿನ ಬಣ್ಣದ ಜೊತೆಗೆ ಮೂಡಿಬಂದ ಸ್ಮೋಕ್ ಎಫೆಕ್ಟ್ ದೃಶ್ಯಗಳನ್ನು ಎನರಿಚ್ ಮಾಡಿ ಭಾವುಕ ಲೋಕವೊಂದನ್ನು ಸೃಷ್ಟಿಸಲು ಸಹಕಾರಿಯಾಗಿತ್ತು. ನೋಡುಗರಿಗೆ ಇಡೀ ನಾಟಕ ಒಂದು ಈಸ್ಟಮನ್ ಕಲರ್ ಸಿನೆಮಾ ನೋಡಿದಂತಹ ಅನುಭವವನ್ನು ಕಟ್ಟಿಕೊಟ್ಟಿತು.



ಈ ನಾಟಕದಲ್ಲಿ ಗಮನಾರ್ಹವಾಗಿ ಮೂಡಿಬಂದ ಹಾಡು ಮತ್ತು ಸಂಗೀತಗಳು ಒಂದಿಷ್ಟು ಅಬ್ಬರ ಎಂತೆನ್ನಿಸಿದರೂ ಕೇಳುಗರ ಎದೆಯಲ್ಲಿ ಸಂಚಲನವನ್ನುಂಟು ಮಾಡಿದವು. ಸಂಗೀತ ಸಂಯೋಜನೆ ಮಾಡಿದ ಎಸ್.ಡಿ.ಅರವಿಂದ ಹಾಗೂ ರಾಘವ ಕಮ್ಮಾರ್‌ರವರು ಮೆಚ್ಚುಗೆಗೆ ಅರ್ಹರು. ಪಾರ್ಥ ಭಾರಧ್ವಾಜ್‌ರವರ ನೃತ್ಯ ಸಂಯೋಜನೆಂತೂ ಅತ್ಯಂತ ಆಕರ್ಷಕವಾಗಿತ್ತು. ಪೀಟರ್ ಹಾಲ್‌ರವರ ಇಂಗ್ಲೀಷ್ ರಂಗರೂಪವನ್ನು ಕನ್ನಡಕ್ಕೆ ಅನುವಾದಿಸಿದ ಬಸವಲಿಂಗಯ್ಯನವರು ಭಾಷಾಂತರಕಾರರಾಗಿ ಗೆದ್ದಿದ್ದಾರೆ. ಪ್ರತಿ ಪಾತ್ರದ ಪ್ರತಿ ಮಾತುಗಳೂ ಸಹ ಪ್ರೇಕ್ಷಕರ ಜೊತೆಗೆ ಸಂವಾದಿಸುತ್ತಾ ನಾಟಕವನ್ನು ಈ ನೆಲದ ಸೊಗಡಿಗೆ ಹೊಂದಾಣಿಕೆಯಾಗುವಂತೆ ಮಾಡಿವೆ. ನಿರ್ದೇಶಕರು ವಿನ್ಯಾಸಗೊಳಿಸಿ, ಶಶಿಧರ್ ಅಡಪರವರು ನಿರ್ಮಿಸಿದ ರಂಗಸಜ್ಜಿಕೆ ಅತ್ಯಂತ ಸರಳ ಹಾಗೂ ಸೊಗಸಾಗಿದ್ದು ನಾಟಕದ ಥೀಮಿಗೆ ಸೂಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ವೃತ್ತಿಪರತೆಯನ್ನು ಮೆರೆದ, ಕನ್ನಡ ಭಾಷೆಯಲ್ಲಿ ಮೂಡಿಬಂದ ರಿಚ್ ಪ್ರೊಡಕ್ಷನ್ ಈ ಅನಿಮಲ್ ಫಾರ್ಮ ನಾಟಕ. ನಾಟಕವೊಂದನ್ನು ಕಟ್ಟುವ ಕಾಯಕ ಹೇಗಿರಬೇಕು ಎಂದು ಈ ನಾಟಕದ ನಿರ್ಮಿತಿಯನ್ನು ನೋಡಿ ಕನ್ನಡದ ಯುವ ರಂಗನಿರ್ದೇಶಕರು ಕಲಿಯುವುದು ಬೇಕಾದಷ್ಟಿದೆ. ಇಂತಹ ಅದ್ಭುತವಾದ ರಂಗಪ್ರಯೋಗವೊಂದನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ಪ್ರೊ.ಸತ್ಯಬ್ರತ ರೌತ್‌ರವರು ನಿಜಕ್ಕೂ ಅಭಿನಂದನಾರ್ಹರು. ಬಹುಕಾಲದ ನಂತರ ಇಂತಹ ಅರ್ಥಪೂರ್ಣ ನಾಟಕವನ್ನು  ಮಾಡಿದ ಬೆಂಗಳೂರು ಕೇಂದ್ರದ ರಾಷ್ಟ್ರೀಯ ನಾಟಕ ಶಾಲೆಗೆ ಧನ್ಯವಾದಗಳು.

-ಶಶಿಕಾಂತ ಯಡಹಳ್ಳಿ      
             

ಪೊಟೋ ಕೃಪೆ : ತಾಯಿ ಲೊಕೇಶ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ