ಸೋಮವಾರ, ಜನವರಿ 20, 2020

ನಾಟಕ ಅಕಾಡೆಮಿ ಅಧ್ಯಕ್ಷರಿಗೊಂದು ಆತ್ಮೀಯ ಪತ್ರ


ಇ/ಗೆ
ಮಾನ್ಯ ಆರ್. ಭೀಮಸೇನರವರು
ಸನ್ಮಾನ್ಯ ಅಧ್ಯಕ್ಷರು
ಕನಾ೵ಟಕ ನಾಟಕ ಅಕಾಡೆಮಿ
                                               ದಿನಾಂಕ : 20-01-2020
ಸನ್ಮಾನ್ಯ ಅಧ್ಯಕ್ಷರಿಗೆ..

ಕನ್ನಡ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯಾದಂತಹ ಕನಾ೵ಟಕ ನಾಟಕ ಅಕಾಡೆಮಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಆದೇಶದಂತೆ ಅಕ್ಟೋಬರ್ 15ರಿಂದ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡ ನಿಮಗೆ ಹಾಗೂ ಉಳಿದೆಲ್ಲ ಸದಸ್ಯರಿಗೆ ಅಭಿನಂದನೆಗಳು. ಹೊಸದಾಗಿ ಆಯ್ಕೆಯಾದ ನಿಮ್ಮೆಲ್ಲರಿಂದ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಹಾಗೂ ಕಲಾವಿದರುಗಳ ಹಿತಾಸಕ್ತಿಗೆ ಪೂರಕವಾಗಿ ಉತ್ತಮ ಸಕಾರಾತ್ಮಕ ಕೆಲಸಗಳು ಆಗುತ್ತವೆ ಎಂದು ಕನ್ನಡ ರಂಗಭೂಮಿಯವರ ನಿರೀಕ್ಷೆಯಾಗಿತ್ತು. ಆದರೆ.. ಎರಡೂವರೆ ತಿಂಗಳ ಒಳಗೆ ಕಲಾವಿದರುಗಳಿಗೆ ಅವಮಾನ ಮಾಡುವಂತಹ ಪ್ರಯತ್ನವೊಂದು ನಾಟಕ ಅಕಾಡೆಮಿಯಿಂದ ನಡೆದಿದ್ದು ಅತ್ಯಂತ ಖೇದಕರ ಸಂಗತಿಯಾಗಿದೆ.
     
ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಕಾಲಮಿತಿಯಲ್ಲಿ  ಬಹುಮತದಿಂದ  ಹಮ್ಮಿಕೊಂಡ ಯೋಜನೆಗಳನ್ನು ಮುಂದಿನ ಕಾಲಾವಧಿಯಲ್ಲಿ ಆಯ್ಕೆಗೊಂಡ ಅಕಾಡೆಮಿಯ ಅಧ್ಯಕ್ಷರ ಸಮಿತಿಯು ರದ್ದುಗೊಳಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಹೀಗೆ ಮಾಡಿದರೆ ಅಕಾಡೆಮಿಯ ವಿಶ್ವಾಸಾರ್ಹತೆಗೆ ದಕ್ಕೆಯಾಗುತ್ತದೆ ಎಂಬುದಕ್ಕೆ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನಿಮ್ಮ ಮುಂದಾಳುತ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ.

ನಾಟಕ ಅಕಾಡೆಮಿ ಇರುವುದು ರಂಗಕಲೆಯನ್ನು ಉಳಿಸಿ ಬೆಳೆಸಲು. ಕಲಾವಿದರು ಇದ್ದಾಗ ಮಾತ್ರ ಕಲೆ ಇರುತ್ತದೆ ಹಾಗೂ ಉಳಿದು ಬೆಳೆಯುತ್ತದೆ. ಕಲಾವಿದರನ್ನೇ ಅವಮಾನಿಸುವ, ಅವರ ಸ್ವಾಭಿಮಾನಕ್ಕೆ ಕಂಟಕ ತರುವ ಕೆಲಸವನ್ನು ನಾಟಕ ಅಕಾಡೆಮಿಯೇ ಮಾಡಿದರೆ ಅದು ಸಾರ್ವಕಾಲಿಕ ಅಕ್ಷಮ್ಯ. ಈಗ ಆಗಿದ್ದೂ ಸಹ ಅದೇ. ನಾಟಕ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಮೂವತ್ತು ಜನ ರಂಗಸಾಧಕ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಆದರೆ ನಿಮ್ಮ ಘನಅಧ್ಯಕ್ಷತೆಯಲ್ಲಿ ಜನವರಿ 3 ರಂದು ನಡೆದ ಸವ೵ಸದಸ್ಯರ ಸಭೆಯಲ್ಲಿ ಘೋಷಿತ ಪ್ರಶಸ್ತಿಗಳನ್ನು ಅಸಿಂಧುಗೊಳಿಸಿ ಹೊಸದಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ನಾಲ್ಕು ದಶಕಗಳ ಅಕಾಡೆಮಿಗಳ ಇತಿಹಾಸದಲ್ಲಿ ಕೊಟ್ಟ ಪ್ರಶಸ್ತಿಗಳನ್ನು ರದ್ದು ಮಾಡಿದ ಘಟನೆ ಇಲ್ಲಿವರೆಗೂ ನಡೆದಿರಲಿಲ್ಲ. ಅಂತಹ ಅನಪೇಕ್ಷಿತ ಅನಗತ್ಯ ಘಟನೆಗೆ  ನಾಂದಿಹಾಡಿದ್ದಕ್ಕೆ ಇಡೀ ಕನ್ನಡ ರಂಗಭೂಮಿ ಹಾಗೂ ಪತ್ರಿಕಾ ಮಾಧ್ಯಮ ತಮ್ಮ ಪ್ರತಿರೋಧ ಮತ್ತು ಅಸಹನೆಯನ್ನು ಪ್ರಕಟಿಸಿತು. ಕಲಾವಿದರ ಸ್ವಾಭಿಮಾನವನ್ನು ಅವಮಾನಿಸಿದ ನಾಟಕ ಅಕಾಡೆಮಿಯ ಘನತೆಗೂ ಸಹ ಈ ನಕಾರಾತ್ಮಕ ನಿರ್ಧಾರದಿಂದಾಗಿ ದಕ್ಕೆಯಾಯಿತು. ಅಕಾಡೆಮಿಯ ಚರಿತ್ರೆಯಲ್ಲಿ ಕಪ್ಪುಚುಕ್ಕೆಯಾಯಿತು.

ಅಕಾಡೆಮಿಗೆ ಹೊಸದಾಗಿ ಆಯ್ಕೆಗೊಂಡ ತಮಗೆ ಹಾಗೂ ತಮ್ಮ ಸದಸ್ಯರಿಗೆ ಘೋಷಿತ ಪ್ರಶಸ್ತಿ ಆಯ್ಕೆಯ ಕುರಿತು ಸರಿಯಾದ ಮಾಹಿತಿ ನೀಡಬೇಕಾದ ಅಕಾಡೆಮಿಯ ರಿಜಿಸ್ಟ್ರಾರರವರು ತಪ್ಪು ಮಾಹಿತಿಯನ್ನು ನೀಡಿ ನಿಮ್ಮನ್ನೆಲ್ಲಾ ನಂಬಿಸಿದ್ದಾರೆ ಹಾಗೂ ದಿಕ್ಕುತಪ್ಪಿಸಿದ್ದಾರೆ. ಅವರು ಹೇಳಿದ ಮಾಹಿತಿಗಳನ್ನು ನಂಬಿದ ಸವ೵ಸದಸ್ಯರ ಸಭೆ ಘೋಷಿತ ಪ್ರಶಸ್ತಿಗಳನ್ನು ಅಸಿಂಧುಗೊಳಿಸುವಂತಹ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ ಹಾಗೂ ಅದನ್ನು ಸಮಥಿ೵ಸಿಕೊಳ್ಳುವ ಅನಿವಾಯ೵ತೆ ನಿಮ್ಮದಾಗಿದೆ. ಜನವರಿ 4 ರಂದು ಸಂಸ್ಕೃತಿ ಇಲಾಖೆಯ ಸಚಿವರನ್ನು ಬೇಟಿಯಾದ ನೀವೂ ಸಹ ನಿಮಗೆ ದೊರೆತ ಸುಳ್ಳು ಮಾಹಿತಿಗಳನ್ನೇ ಹೇಳಿ ಅವರನ್ನು ಒಪ್ಪಿಸಲು ಪ್ರಯತ್ನಿಸಿದ್ದನ್ನು ಖುದ್ದಾಗಿ ಸಚಿವರೇ ನಮಗೆ ತಿಳಿಸಿದ್ದಾರೆ.

ನಾಟಕ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಸದಸ್ಯನಾಗಿದ್ದ ನನಗೆ ಗೊತ್ತಿರುವ ಕೆಲವಾರು ನಿಜ ಮಾಹಿತಿಗಳನ್ನು ನಿಮ್ಮ ಮುಂದಿಟ್ಟು ಮನದಟ್ಟುಮಾಡಲೆಂದೇ ಈ ಪತ್ರವನ್ನು ಬರೆಯುತ್ತಿರುವೆ. ಅಕಾಡೆಮಿಯ ಅಧ್ಯಕ್ಷರು ಸದಸ್ಯರುಗಳು ಬದಲಾದರೂ ಅಕಾಡೆಮಿಯೊಂದು ಕೈಗೊಂಡ ಸಕಾರಾತ್ಮಕ  ನಿಣ೵ಯ ಬದಲಾಗಬಾರದು ಹಾಗೂ ನಾಟಕ ಅಕಾಡೆಮಿಯ ಘನತೆಗೆ ಯಾವುದೇ ಕಾರಣಕ್ಕೂ ಕಳಂಕ ಬರಬಾರದು, ನಾಟಕ ಅಕಾಡೆಮಿಯ ಚರಿತ್ರೆಯಲ್ಲಿ ನೀವು ಖಳನಾಯಕರಾಗಿ ದಾಖಲಾಗಬಾರದು ಎನ್ನುವುದೇ ಈ ಪತ್ರ ಬರೆಯುವುದರ ಹಿಂದಿರುವ ಪ್ರಾಮಾಣಿಕ ಉದ್ದೇಶವಾಗಿದೆ. ತಾವು ಮಾನ್ಯ ಸಚಿವರಾದ ಸಿ.ಟಿ.ರವಿಯವರ ಮುಂದೆ ಹೇಳಿದ ಹಾಗೂ ಕೆಲವು ಪತ್ರಿಕೆಗಳಿಗೆ ಕೊಟ್ಟ ಕೆಲವಾರು ತಪ್ಪು ಮಾಹಿತಿಗಳಿಗೆ ಸರಿಯಾದ ಉತ್ತರಗಳು ಇಲ್ಲಿವೆ. ಇದಕ್ಕೆ ಪೂರಕವಾಗಿ ಅಗತ್ಯ ದಾಖಲೆಗಳನ್ನೂ ಸಹ ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ.  
  
1.     ಅಕಾಡೆಮಿಯ ಹಿಂದಿನ ಅಧ್ಯಕ್ಷರು ತರಾತುರಿಯಲ್ಲಿ ಪ್ರಶಸ್ತಿಗಳನ್ನು ಘೋಷಿಸಿದ್ದು ಅಸಿಂಧು..?

ವಾರ್ಷಿಕವಾಗಿ ಕನಿಷ್ಟ ಮೂರು ಸರ್ವಸದಸ್ಯರ ಸಭೆಯನ್ನು ಕರೆಯಲಾಗುತ್ತದೆ. ಎರಡನೇ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಕಾರ್ಯಕಾರಿ ಸಮಿತಿ ಆಯ್ಕೆ ಮಾಡುತ್ತದೆ. ಹಾಗೂ ಮೂರನೆಯ ಸಭೆಯ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹೀಗೆಯೇ ಎರಡನೆಯ ಸರ್ವ ಸದಸ್ಯರ ಸಭೆಯನ್ನು 2019, ಜುಲೈ 29ರಂದು ನಡೆಸಲು ಮೂರು ವಾರಗಳ ಮೊದಲೇ ಪೂರ್ವಭಾವಿಯಾಗಿ ನಿರ್ಧರಿಸಿ 17 ದಿನಗಳ ಮುನ್ನವೇ ಅಕಾಡೆಮಿಯ ಎಲ್ಲಾ ಸದಸ್ಯರುಗಳಿಗೂ ಜುಲೈ 12ರಂದು ಪತ್ರಗಳನ್ನು ಕಳುಹಿಸಲಾಗಿತ್ತು. ಈ ಪತ್ರಕ್ಕೆ ಅಕಾಡೆಮಿಯ ರಿಜಿಸ್ಟ್ರಾರ್‍ರವರೇ ಖುದ್ದಾಗಿ ಸಹಿ ಮಾಡಿದ್ದು ಅದರಲ್ಲಿ ‘2019-20ನೇ ಸಾಲಿನ ಪ್ರಶಸ್ತಿ ಬಗ್ಗೆ’ ಎಂದು ಕಾರ್ಯಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆಗ ಇನ್ನೂ ಬಿಜೆಪಿ ಸರಕಾರ ಆಡಳಿತದಲ್ಲಿದ್ದಿಲ್ಲ. 29ನೇ ದಿನಾಂಕದಂದು ಸರ್ವಸದಸ್ಯರ ಸಭೆಯಲ್ಲಿ ಕಾರ್ಯಸೂಚಿಗೆ ಅನುಗುಣವಾಗಿ ಅರ್ಹ ಸಾಧಕರನ್ನು ಸವಾ೵ನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅದು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಹೀಗೆ ಪ್ರಕಟವಾದ ನಂತರ ಆಗಸ್ಟ್ 1 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಂದ ಅಕಾಡೆಮಿಗಳ ನೇಮಕಾತಿಗಳನ್ನು ರದ್ದು ಮಾಡಿದ ಬಗ್ಗೆ ಆದೇಶ ಪತ್ರ ಬಂದಿದೆಯೇ ಹೊರತು ಪ್ರಶಸ್ತಿ ಪ್ರಕಟವಾಗುವುದಕ್ಕಿಂತ ಮುಂಚೆಯಲ್ಲ. ಸರಕಾರದಿಂದ ನಾಮನಿರ್ದೇಶನದ ರದ್ದತಿ ಕುರಿತ ಆದೇಶ ಬರುವುದಕ್ಕಿಂತಾ ಮುಂಚೆ ತೆಗೆದುಕೊಂಡ ಅಕಾಡೆಮಿಯ ಸರ್ವಸದಸ್ಯರ ನಿರ್ಧಾರವನ್ನು ಅಸಿಂಧು, ಅಕ್ರಮ ಎಂದು ಕರೆಯುವುದರಲ್ಲಿ ಯಾವುದೇ ಸಮಥ೵ನೀಯ ಅಥ೵ವಿಲ್ಲ. 

ರಿಜಿಸ್ಟ್ರಾರ್ ರವರೇ ಖುದ್ದಾಗಿ ಸಹಿ ಮಾಡಿದ ಅಧೀಕೃತ ಪತ್ರ
 
ಇಲಾಖೆ ನಿರ್ದೇಶಕರಿಂದ ಅಕಾಡೆಮಿ ರದ್ದತಿಯ  ಆದೇಶ ಪತ್ರ

2.     ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನಡೆಯುವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಜುಲೈ ಕೊನೆಯಲ್ಲಿ ಮಾಡಿದ್ದೇ ತಪ್ಪು..?

ಇಂತಹುದೇ ತಿಂಗಳಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಬೇಕು ಎನ್ನುವ ನಿಯಮ ನಾಟಕ ಅಕಾಡೆಮಿಯ ಬೈಲಾದಲ್ಲಿ ಎಲ್ಲಿಯೂ ನಮೂದಾಗಿಲ್ಲ. ಅಕಸ್ಮಾತ್ ವರ್ಷದ ಕೊನೆಗೇ ಪ್ರಶಸ್ತಿ ಆಯ್ಕೆಗಳು ಆಗಬೇಕೆಂಬುದೇ ನಿಯಮ ಇದ್ದಲ್ಲಿ ಅದನ್ನು ಅಧ್ಯಕ್ಷರ ಗಮನಕ್ಕೆ ತರಬೇಕಾದದ್ದು ಅಕಾಡೆಮಿಯ ರಿಜಿಸ್ಟ್ರಾರ್ ರವರ ಕೆಲಸವಾಗಿತ್ತು. ‘2019-20ನೇ ಸಾಲಿನ ಪ್ರಶಸ್ತಿ ಬಗ್ಗೆ’ ಎಂದು ಕಾರ್ಯಸೂಚಿಯಲ್ಲಿ ನಮೂದಿಸಿ ಎಲ್ಲಾ ಸದಸ್ಯರಿಗೂ ಲಿಖಿತ ಪತ್ರದ ಮೂಲಕ ಸವ೵ಸದಸ್ಯರ ಸಭೆಗೆ ಆಹ್ವಾನಿಸಿದ್ದು ರಿಜಿಸ್ಟ್ರಾರ್ ರವರೇ ಹೊರತು ಅಧ್ಯಕ್ಷರಲ್ಲ. ಬೇಕಿದ್ದರೆ ಅವರು ಎಲ್ಲಾ ಸದಸ್ಯರಿಗೂ ಬರೆದ ಪತ್ರದ ಪ್ರತಿಗಳನ್ನು ನೀವು ಪರಿಶೀಲಿಸಿ ಅದರಲ್ಲಿ ರಿಜಿಸ್ಟ್ರಾರರವರ ಸಹಿ ಇದ್ದರೆ ಅವರೇ ಇದಕ್ಕೆಲ್ಲಾ ಹೊಣೆಗಾರರಾಗುತ್ತಾರೆಯೇ ಹೊರತು ಬೇರೆಯವರಲ್ಲ. ರಿಜಿಸ್ಟ್ರಾರ್ ಮಾಡಿದ ತಪ್ಪಿಗೆ ಘೋಷಿತ ಪ್ರಶಸ್ತಿಗಳನ್ನು ರದ್ದು ಮಾಡಿ ಕಲಾವಿದರಿಗೆ ಮಾನಸಿಕವಾಗಿ ನೋವು ಕೊಡುವುದು ತಪ್ಪಲ್ಲವೇ..?

3.     ರಿಜಿಸ್ಟ್ರಾರ್‍ರವರ ಸಹಿ ಇಲ್ಲದೇ ಅಧ್ಯಕ್ಷರೇ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ್ದಾರೆ..

ಇದು ಇನ್ನೊಂದು ಸುಳ್ಳು ಮಾಹಿತಿ. ಇದನ್ನೇ ರಿಜಿಸ್ಟ್ರಾರ್‍ರವರು ಹೇಳುತ್ತಾ ನಿಮ್ಮನ್ನೆಲ್ಲಾ ನಂಬಿಸಿದ್ದಾರೆ ಹಾಗೂ ನೀವು ಅದನ್ನೇ ಸಚಿವರಿಗೆ ಹೇಳಿ ನಂಬಿಸಿದ್ದೀರಿ. ರಿಜಿಸ್ಟ್ರಾರರವರು ಆಡಿದ ಚದುರಂಗದ ಆಟಕ್ಕೆ ನೀವೆಲ್ಲಾ ಕಾಯಿಗಳಾಗಿದ್ದೀರಿ ಹಾಗೂ ಪ್ರಶಸ್ತಿ ವಂಚಿತ ಕಲಾವಿದರು ಬಲುಪಶುಗಳಾಗಿದ್ದಾರೆ. ಹಿಂದಿನ ಅಕಾಡೆಮಿಯಲ್ಲಿ ನಡೆದ ಸವ೵ಸದಸ್ಯರ ಸಭೆಯ ನಡಾವಳಿಗಳ ಪ್ರತಿ ಕೊಡಲು ಲೊಕೇಶರವರು ಅದೆಷ್ಟು ಸಲ ಮನವಿ ಮಾಡಿಕೊಂಡರೂ ರಿಜಿಸ್ಟ್ರಾರ್‍ರವರು ಕೊಡಲು ನಿರಾಕರಿಸಿದ್ದರ ಹಿಂದೆ ಅವರ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳುವ ಹುನ್ನಾರವಿತ್ತು. ಅವರು ಹೇಳಿದ ಸುಳ್ಳು ಅದೆಲ್ಲಿ ಬಯಲಾಗುತ್ತದೋ ಎನ್ನುವ ಆತಂಕ ಅವರದು. ಆದರೆ ಪಟ್ಟು ಬಿಡದೇ ಆರ್‍ಟಿಐ ನಲ್ಲಿ ಅರ್ಜಿ ಸಲ್ಲಿಸಿ ಸರ್ವಸದಸ್ಯರ ಸಭೆಯ ನಡಾವಳಿಗಳ ಪ್ರತಿಯನ್ನು ಲೊಕೇಶರವರು ಪಡೆಯಬೇಕಾಯ್ತು. ಹಾಗೂ 29ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಬಹುಮತದ ತೀರ್ಮಾನದಿಂದ ಆಯ್ಕೆಯಾದ ಪ್ರಶಸ್ತಿ ಆಯ್ಕೆಯ ಪಟ್ಟಿಗೆ ಅಧ್ಯಕ್ಷರ ಜೊತೆಗೆ ರಿಜಿಸ್ಟ್ರಾರ್‍ರವರ ಸಹಿಯೂ ಇತ್ತು. ಅಧ್ಯಕ್ಷರು ಹಾಗೂ ಸದಸ್ಯರುಗಳ ಕಾರ್ಯಕಾರಿ ಸಮಿತಿ ಒಂದಾಗಿ ಒಪ್ಪಿದ ಪ್ರಶಸ್ತಿ ಆಯ್ಕೆ ಪಟ್ಟಿಗೆ ಅನುಮತಿಸಿ ರಿಜಿಸ್ಟ್ರಾರ್ ಸಹಿ ಮಾಡಿದ ಮೇಲೆ ಘೋಷಿತ ಪ್ರಶಸ್ತಿಗಳು ಅಕ್ರಮ ಆಯ್ಕೆ ಹೇಗಾಗುತ್ತವೆ.. ಅಕಾಡೆಮಿಗೆ ಸರ್ವಸದಸ್ಯರ ಸಭೆಯ ನಿರ್ಣಯವೇ ಅಂತಿಮ ಅಲ್ಲವೇ. ನಿಮ್ಮ ಪ್ರಕಾರ ಇದೆಲ್ಲವೂ ಅಕ್ರಮ ಎನ್ನುವುದೇ ನಿಜವಾದಲ್ಲಿ ಅದಕ್ಕೆ ಮೂಲಭೂತ ಕಾರಣರಾದ ಆಡಳಿತಾಧಿಕಾರಿ ರಿಜಿಸ್ಟ್ರಾರ್‍ರವರು ಇನ್ನೂ ಅಲ್ಲಿ ಯಾಕಿದ್ದಾರೆ.? ಮೊದಲು ಶಿಕ್ಷೆಯಾಗಬೇಕಾದದ್ದು ಅವರಿಗಲ್ಲವೆ? ಅವರ ಮೇಲೆ ಇಲಾಖೆಯ ವಿಚಾರಣೆಗೆ ನೀವು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಮನವಿ ಮಾಡಬೇಕಲ್ಲವೆ? ಅಕಾಡೆಮಿಯ ಹಿಂದಿನ ಸವ೵ಸದಸ್ಯರ ಸಭೆ ಪ್ರಶಸ್ತಿ ಪುರಸ್ಕೃತರ ಕುರಿತು ತೆಗೆದುಕೊಂಡ ನಿಣ೵ಯವನ್ನೂ ಒಪ್ಪಿ ಸಹಿ ಮಾಡಿದ ಇದೇ ರಿಜಿಸ್ಟ್ರಾರ್‍ರವರು, ಈಗಿನ ಅಕಾಡೆಮಿಯವರ ಸವ೵ಸದಸ್ಯರ ಸಭೆಯ ಅನುಮೋದಿಸಿದ ಪ್ರಶಸ್ತಿ ಪುರಸ್ಕೃತರ ಪಟ್ಟಿಗೂ ಸಹಿ ಮಾಡಿದ್ದಾರೆ. ಹಾಗಾದರೆ ಈ ಎರಡು ಪಟ್ಟಿಗಳಲ್ಲಿ ಯಾವುದು ಅಕ್ರಮ, ಯಾವುದು ಸಕ್ರಮ..?

4.     ಪ್ರೆಸ್ ಮೀಟ್ ಮಾಡದೇ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು ಸರಿಯಲ್ಲ.

ಹಾಗಂತ ಯಾವ ಬೈಲಾದಲ್ಲಿ ಹೇಳಿದೆ ಸರ್.. ಘೋಷಿತಗೊಂಡ ಪ್ರಶಸ್ತಿಯ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಬೇಕೆಂದರೆ ಪ್ರೆಸ್ ಮೀಟ್ ಮಾಡಬೇಕೆಂಬ ನಿಯಮವೇನಿಲ್ಲವಲ್ಲಾ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪತ್ರಿಕಾ ಕಾರ್ಯಾಲಯಗಳಿಗೆ ತಲುಪಿ ಮಾರನೆಯ ದಿನ ಪ್ರಕಟಗೊಂಡಿತು. ಇದರಲ್ಲಿ ತಪ್ಪೇನು. ಪ್ರಶಸ್ತಿ ಆಯ್ಕೆ ಎಂದರೆ ಯಾರಿಗೂ ಗೊತ್ತಾಗದಂತೆ ಮಾಡುವ ರಹಸ್ಯ ಕಾರ್ಯಾಚರಣೆ ಏನಲ್ಲವಲ್ಲ. ಈ ಹಿಂದೆ 2018-19ರ ಸಾಲಿನ ಪ್ರಶಸ್ತಿಗಳನ್ನೂ ಸಹ ಸರ್ವಸದಸ್ಯರ ಸಭೆಯಲ್ಲಿ ಅನುಮೋದನೆಗೊಂಡ ಕೂಡಲೇ ಪ್ರೆಸ್‍ಮೀಟ್ ಕರೆದು ಹಾಗೂ ಈಮೇಲ್ ಮೂಲಕ ವಿವರಗಳನ್ನು ಪತ್ರಿಕೆಗಳಿಗೆ ಕೊಡಲಾಗಿತ್ತು. ಈ ಸಲ ಪತ್ರಿಕೆಯವರೇ ಯಾವುಯಾವುದೋ ಮೂಲಗಳಿಂದ ವಿವರ ಪಡೆದು ಪ್ರಕಟಿಸಿದ್ದಾರೆ. ಯಾವುದರ ಮೂಲಕ ಹೇಗೆ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತೀರೆಂಬುದು ಮುಖ್ಯವೋ, ಇಲ್ಲಾ ಪ್ರಶಸ್ತಿ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಮುಖ್ಯವೋ. ಪ್ರಶಸ್ತಿ ಘೋಷಣೆಯಾದ ಕೂಡಲೇ ಪತ್ರಿಕೆಗಳಿಗೆ ಸುದ್ದಿ ಹೋಗದೇ ವಿಳಂಬ ಮಾಡಿದರೆ ಕುತೂಹಲ ತಾಳದ ಸದಸ್ಯರುಗಳೇ ವಿಷಯವನ್ನು ಪಬ್ಲಿಕ್ ಮಾಡುವ ಸಾಧ್ಯತೆಗಳಿಗೆ ಹಿಂದಿನ ಅನುಭವಗಳೇ ಸಾಕ್ಷಿಯಾಗಿದ್ದರಿಂದ ಆದಷ್ಟು ಬೇಗ ಪತ್ರಿಕೆಗಳಿಗೆ ಕಳುಹಿಸುವ ಇಲ್ಲವೇ ಪ್ರೆಸ್ ಮೀಟ್ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ನೀವೂ ಈಗ ಮಾಡಿದ್ದೂ ಹೀಗೆ ಅಲ್ಲವೇ.. ಜನವರಿ 3ರಂದು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ ನೀವು ಜನವರಿ 4 ರಂದು ಅಧೀಕೃತವಾಗಿ ಪತ್ರಿಕಾಗೋಷ್ಠಿ ಕರೆಯದೇ ಪಟ್ಟಿಯನ್ನು ಪತ್ರಿಕೆಗಳಿಗೆ ಕಳುಹಿಸಿದ್ದು ನಿಮ್ಮ ಆತುರದ ನಿಧಾ೵ರವಲ್ಲವೇ.?

5. ಅಕಾಡೆಮಿ ಘೋಷಿಸಿದ ಪ್ರಶಸ್ತಿಯ ಪಟ್ಟಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅನುಮತಿ ಇರಲಿಲ್ಲ.

ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ನಡೆಯುತ್ತಿದ್ದರೂ ಸ್ವಾಯತ್ತತೆ ಹೊಂದಿರುವ ಸಂಸ್ಥೆಗಳು. ಇದನ್ನು ಸರಕಾರವೇ ಒಪ್ಪಿಕೊಂಡ ಬರುಗೂರರ ಸಾಂಸ್ಕೃತಿಕ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸ್ವಾಯತ್ತ ಸಂಸ್ಥೆಯಲ್ಲಿ ಸರ್ವಸದಸ್ಯರ ಸಭೆಯ ತೀರ್ಮಾನವೇ ಅಂತಿಮ. ಅಧ್ಯಕ್ಷರು ಹಾಗೂ ಸದಸ್ಯರು ಇರುವ ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯ ಬೈಲಾ ಪ್ರಕಾರ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಅನುಮೋದಿಸುವುದು ಮಾತ್ರ ರಿಜಿಸ್ಟ್ರಾರ್‍ರವರ ಕರ್ತವ್ಯ. ಹೀಗೆ ಕಾರ್ಯಕಾರಿ ಸಮಿತಿಯೊಂದು ಬಹುಮತದಿಂದ ಆಯ್ಕೆ ಮಾಡಲಾದ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಇಲಾಖೆಯ ನಿರ್ದೇಶಕರ ಅನುಮತಿ ಬೇಕೆಂಬುದು ಯಾವ ಬೈಲಾದಲ್ಲೂ ಹೇಳಿಲ್ಲ. ಬೈಲಾ ಪ್ರಕಾರವೇ ಮಾಡಲಾದ ಕಾರ್ಯಕಾರೀ ಸಮಿತಿಯ ತೀರ್ಮಾನದಲ್ಲಿ ಅನಗತ್ಯವಾಗಿ ಮೂಗುತೂರಿಸುವ ಅಧಿಕಾರ ರೆಜಿಸ್ಟ್ರಾರ್‍ರವರಿಗೂ ಇಲ್ಲಾ, ಇಲಾಖೆಯ ನಿರ್ದೇಶಕರಿಗೂ ಬೈಲಾ ಕೊಟ್ಟಿಲ್ಲಾ. ಇದು ಗೊತ್ತಿದ್ದರೂ ರಿಜಿಸ್ಟ್ರಾರ್ ಮೇಡಂ ತಮಗಿಲ್ಲದ ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸುತ್ತಿರುವುದೇ ಅಕಾಡೆಮಿಯ ಸ್ವಾಯತ್ತತೆಗೆ ದಕ್ಕೆಯನ್ನುಂಟುಮಾಡುವಂತಹುದು. ಅಧ್ಯಕ್ಷರುಗಳ ಜೊತೆಗೆ ಸಂಘರ್ಷಕ್ಕೆ ಕಾರಣವಾಗುವಂತಹುದು. ತಾವು ಮಾಡಿದ ತಪ್ಪನ್ನು ಮರೆಮಾಚಲು ರಿಜಿಸ್ಟ್ರಾರ್‍ರವರು ಆಗಿದ್ದ ಈಗಿಲ್ಲದ ಇಲಾಖೆಯ ನಿರ್ದೇಶಕರ ಮೇಲೆ ಹೇಳುತ್ತಾ ಎಲ್ಲರನ್ನೂ ದಿಕ್ಕುತಪ್ಪಿಸುತ್ತಿದ್ದಾರೆ. 

6.     ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಬರೆಯಲಾದ ಪತ್ರಕ್ಕೆ ರೆಜಿಸ್ಟ್ರಾರ್ ಸಹಿ ಮಾಡಿಲ್ಲ.

ಅರೆ.. ಸರ್ವಸದಸ್ಯರ ಸಭೆಯೇ ಅಂಗೀಕರಿಸಿದ ನಿರ್ಣಯಗಳಿಗೆ ಒಪ್ಪಿ ಸ್ವತಃ ರಿಜಿಸ್ಟ್ರಾರ್‍ರವರೇ ಸಹಿ ಮಾಡಿ ತಮ್ಮ ಅನುಮೋದನೆಯನ್ನು ತಿಳಿಸಿದ ಮೇಲೆ ಮತ್ತೇನಿದೆ. ಕಾರ್ಯಕಾರಿ ಸಮಿತಿ ನಿರ್ಧರಿಸಿಯಾಗಿದೆ, ಹೇಗೋ ಪತ್ರಿಕೆಗಳಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಸ್ವಾಯತ್ತ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಅಕಾಡೆಮಿ ಅಧ್ಯಕ್ಷರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಪತ್ರ ಬರೆಯುವುದು ತಪ್ಪಾ? ಯಾಕೆ ಬರೆಯಬಾರದು? ಅಧ್ಯಕ್ಷರು ಪತ್ರ ಬರೆಯಬಾರದು ಅಂತಾ ಯಾವ ಬೈಲಾದಲ್ಲಿದೆ. ಅಕಾಡೆಮಿಗಳ ಸ್ವಾಯತ್ತತೆಯನ್ನು ಶತಾಯ ಗತಾಯ ಮೊಟಕುಗೊಳಿಸುವುದೇ ಈ ಅಧಿಕಾರಿವರ್ಗದವರ ತಂತ್ರಗಾರಿಕೆಯಾಗಿದೆ. ಎಲ್ಲಾ ಅಧಿಕಾರಗಳನ್ನೂ ತಮ್ಮ ಕೈಯಲ್ಲಿ ಇಟ್ಟುಕೊಂಡು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸೂತ್ರದ ಬೊಂಬೆಯಂತೆ ಆಟ ಆಡಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅಧಿಕಾರಗಳ ಒಳಪೆಟ್ಟುಗಳಿಗೆ ಸವಾಲು ಹಾಕಿ ಅಕಾಡೆಮಿಯ ಸ್ವಾಯತ್ತತೆಯನ್ನು ಎತ್ತಿ ಹಿಡಿಯ ಬಯಸುವ ಜೆ.ಲೊಕೇಶ್‍ರವರಂತಹ ಖಡಕ್ ಅಧ್ಯಕ್ಷರಿಗೆ ಇನ್ನಿಲ್ಲದಂತೆ ತೊಂದರೆ ಕೊಟ್ಟು ಕಾನೂನಿನ ಕೊಕ್ಕೆಯಲ್ಲಿ ಸಿಕ್ಕಿಸಲು ನೋಡುತ್ತಾರೆ. ಈಗಲೂ ಆಗಿದ್ದು ಅಕಾಡೆಮಿಯ ಸ್ವಾಯತ್ತತೆಯ ಮೇಲೆ ಅಧಿಕಾರಿಶಾಹಿಯ ಸವಾರಿ ಮಾತ್ರ. ಇದಕ್ಕೆ ಬಲಿಪಶುವಾಗಿದ್ದು ಮಾತ್ರ ಪ್ರಶಸ್ತಿ ಪುರಸ್ಕೃತಿ ರಂಗಕಲಾವಿದರು. ಈಗ ನೀವು ಅಧಿಕಾರಿಗಳ ಅಡಿಯಾಳಾಗುತ್ತೀರೋ ಇಲ್ಲವೇ ಅಕಾಡೆಮಿಯ ಸ್ವಾಯತ್ತತೆಯನ್ನು ಎತ್ತಿ ಹಿಡಿಯುತ್ತೀರೋ ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಷಯ.

7.     ಉಮಾಶ್ರೀಯವರೇ ಆಯ್ಕೆ ಮಾಡಿದ ಟೀಂ ಅವರಿಗೇ ಜೀವಮಾನದ ಸಾಧನೆ ಪ್ರಶಸ್ತಿ ಕೊಟ್ಟಿದ್ದು ತಪ್ಪು..

ಇಂತವರಿಗೆ ಪ್ರಶಸ್ತಿ ಕೊಡಬೇಕು, ಇಂತವರಿಗೆ ಬೇಡವೆಂದು ಬೈಲಾದಲ್ಲಾಗಲಿ ಇಲ್ಲವೇ ಸಾಂಸ್ಕೃತಿಕ ನೀತಿಯಲ್ಲಾಗಲೀ ಎಲ್ಲೂ ನಮೂದಾಗಿಲ್ಲ. ನಾಟಕ ಅಕಾಡೆಮಿ ರಾಜಕಾರಣಿ ಉಮಾಶ್ರೀಯವರಿಗೆ ಪ್ರಶಸ್ತಿಯನ್ನು ಕೊಟ್ಟಿಲ್ಲಾ ಹಾಗೂ ರಾಜಕಾರಣಿಗಳಿಗೆ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಕೊಡುವುದಿಲ್ಲ. ಪ್ರಶಸ್ತಿ ಘೋಷಣೆಯಾದಾಗ ಉಮಾಶ್ರೀಯವರು ಸಚಿವರೇನು ಶಾಸಕರೂ ಆಗಿರಲಿಲ್ಲ. ಕನ್ನಡ ರಂಗಭೂಮಿಯ ಜನಪ್ರೀಯ ಅಭಿನೇತ್ರಿ ಉಮಾಶ್ರೀಯವರ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಅದರ ಹಿಂದೆ ಪ್ರಬಲ ಕಾರಣವೂ ಇದೆ. ಕಳೆದ ಎರಡು ವರ್ಷಗಳಲ್ಲಿ ನಾಟಕ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ಹಾಗೂ ಗಂಗಾಧರಸ್ವಾಮಿಯವರಿಗೆ ಕೊಟ್ಟು ಗೌರವಿಸಲಾಗಿತ್ತು. ಈ ಇಬ್ಬರೂ ಸಹ ರಂಗ ನಿರ್ದೇಶಕರಾಗಿದ್ದು ಹವ್ಯಾಸಿ ರಂಗಭೂಮಿಯವರಾಗಿದ್ದರು. ಈ ಸಲ ಅಭಿನಯ ಕಲಾವಿದರನ್ನು ಆಯ್ಕೆಮಾಡುವುದು ಸೂಕ್ತವಾಗಿತ್ತು. ಎರಡೂ ಸಲ ಪುರುಷರನ್ನೇ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಈ ಸಲ ಸಾಧಕ ಮಹಿಳೆಯೊಬ್ಬರಿಗೆ ಪ್ರಶಸ್ತಿ ಕೊಡುವುದು ಲಿಂಗಸಮಾನತೆ ದೃಷ್ಟಿಯಿಂದ ಸರಿಯಾದ ಕ್ರಮವಾಗಿತ್ತು. ವೃತ್ತಿರಂಗಭೂಮಿ, ಗ್ರಾಮೀಣ ರಂಗಭೂಮಿ ಹಾಗೂ ಪೌರಾಣಿಕ ರಂಗಭೂಮಿಯವರು ತಮ್ಮ ಕ್ಷೇತ್ರದ ಸಾಧಕರೊಬ್ಬರಿಗೆ ಜೀವಮಾನದ ಪ್ರಶಸ್ತಿಯನ್ನು ಕೊಡಲೇಬೇಕು ಎಂದು ಅಧ್ಯಕ್ಷರನ್ನು ಒತ್ತಾಯಿಸತೊಡಗಿದ್ದರು. ಇರುವುದೊಂದೇ ಪ್ರಶಸ್ತಿ ರಂಗಭೂಮಿಯ ಯಾವ ವಿಭಾಗದವರಿಗೆ ಕೊಡುವುದು? ಎಂಬ ಪ್ರಶ್ನೆ ಕಾರ್ಯಕಾರಿ ಸಮಿತಿಯ ಮುಂದೆ ಬಂದಾಗ ಹವ್ಯಾಸಿ, ಗ್ರಾಮೀಣ, ವೃತ್ತಿ, ಪೌರಾಣಿಕ ಹಾಗೂ ಕೈಗಾರಿಕಾ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟ ಮಹಿಳಾ ಕಲಾವಿದೆಯೊಬ್ಬರಿಗೆ ಈ ಸಲದ ಜೀವಮಾನದ ಪ್ರಶಸ್ತಿಯನ್ನು ಕೊಡುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಈ ಮಾನದಂಡಕ್ಕೆ ಉಮಾಶ್ರೀಯವರ ಹೆಸರು ಸೂಕ್ತವಾದ ಆಯ್ಕೆಯಾಗಿತ್ತು. ಹೀಗಾಗಿ ಸರ್ವಸಮ್ಮತದ ಆಯ್ಕೆಯಾಗಿ ಉಮಾಶ್ರೀಯವರನ್ನು ಪ್ರಶಸ್ತಿಗೆ ಪರಿಗಣಿಸಿ ಆಯ್ಕೆ ಮಾಡಲಾಯಿತು. ಕಲಾವಿದೆ ಉಮಾಶ್ರೀಯವರ ಆಯ್ಕೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಯಾಕೆಂದರೆ ಅವರು ಜೀವಮಾನದ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದಾರೆ. ಅವರ ಹಾಗೆ ಸಮಗ್ರ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಜನಪ್ರೀಯವಾದ ಇನ್ನೊಬ್ಬ ಕಲಾವಿದೆಯ ಹೆಸರನ್ನು ಹುಡುಕುವುದೂ ಕಷ್ಟಸಾಧ್ಯ. ಇಷ್ಟಕ್ಕೂ ಈಗೇನು ನೀವು ಪ್ರಶಸ್ತಿಗಳನ್ನು ಘೋಷಿಸಿದ್ದೀರಲ್ಲಾ, ಆ ಎಲ್ಲಾ ಪ್ರಶಸ್ತಿಗಳ ಸಂಖ್ಯೆಗಳನ್ನು ಹಾಗೂ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಿದ್ದೂ ಸಹ ಇದೇ ಉಮಾಶ್ರೀಯವರು ಎನ್ನುವುದನ್ನು ಮರೆಯದೇ ನೆನಪಿಸಿಕೊಳ್ಳುವುದುತ್ತಮ.

ಉಮಾಶ್ರೀಯವರಂತಹ ಅಭಿನೇತ್ರಿಗೆ ಪ್ರಶಸ್ತಿ ಕೊಟ್ಟಿದ್ದನ್ನು ನೀವು ವಿರೋಧಿಸುತ್ತಿದ್ದೀರಲ್ಲಾ ಅಧ್ಯಕ್ಷರೆ.. ಈ ಹಿಂದೆ ರಾಜಾರಾಂರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ನೀವು ಸದಸ್ಯರಾಗಿದ್ದೀರಿ. ಆಗ ಹಠಕ್ಕೆ ಬಿದ್ದು ನೀವು ರಂಗಕಮಿ೵ಯಲ್ಲದ ಗೊಬ್ಬರದ ವ್ಯಾಪಾರಿ, ಶಿಕ್ಷಣೋದ್ಯಮಿ ಕೆ.ಚನ್ನಪ್ಪ ನವರಿಗೆ 2010ರಲ್ಲಿ ನಾಟಕ ಅಕಾಡೆಮಿಯ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಕೊಡಿಸಿದಿರಲ್ಲಾ. ಅದೂ ರಂಗಸಾಧನೆಯ ಪಟ್ಟಿ, ಬಯೋಡಾಟಾ ಏನೂ ಇಲ್ಲದೇ  ಇರುವ ವ್ಯಕ್ತಿಗೆ ನಿಮ್ಮ ಸ್ವಾಥ೵ಕ್ಕಾಗಿ ಪ್ರಶಸ್ತಿ ಕೊಡಿಸಿ ರಂಗದ್ರೋಹ ಮಾಡಿದಿರಲ್ಲಾ, ಇದನ್ನು ಹೇಗೆ ಸಮಥಿ೵ಸಿಕೊಳ್ಳುತ್ತೀರಿ. ದಿ.ಎಂ.ಪಿ.ಪ್ರಕಾಶರ ರಂಗಭಾರತಿ ಸಂಸ್ಥೆಯು ರಂಗಮಂದಿರವನ್ನು ಕಟ್ಟುವುದಕ್ಕೆ  ಘೋಷಿತವಾದ 1 ಕೋಟಿ ರೂಪಾಯಿ ಅನುದಾನವನ್ನು ತಾರಾತಿಗಡಿ ಮಾಡಿ ರಂಗಮಂದಿರ ನಿಮಿ೵ಸುತ್ತೇನೆಂದು ನಿಮ್ಮ ರಂಗತೋರಣ ಸಂಸ್ಥೆಗೆ ಅದೂ ಹನ್ನೊಂದು ದಿನಗಳ ಹಿಂದೆ ಹುಟ್ಟಿಸಿದ ಸಂಸ್ಥೆಗೆ ಅಕ್ರಮವಾಗಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಶಾಲೆಗಾಗಿ ಇದ್ದ ಜಾಗದಲ್ಲಿ ಅಧ೵ಂಬಂಧ೵ ರಂಗಮಂದಿರ ಕಟ್ಟಿ ನಿಲ್ಲಿಸಿದ್ದೀರಲ್ಲಾ,, ಇದೂ  ಸಹ ರಂಗದ್ರೋಹದ ಕೆಲಸವಲ್ಲವೇ. ಅಗೆಯುತ್ತಾ ಹೋದರೆ ತಮ್ಮ ಇಂತಹ ಅನೇಕ ತಪ್ಪುಗಳು ಹೊರಬೀಳುತ್ತವೆ. ಹೂವಿನ ಹಡಗಲಿಯಲ್ಲಿ ರಂಗಮಂದಿರ ಆಗುವುದಕ್ಕೆ ಅಡ್ಡಗಾಲು ಹಾಕಿದ ನೀವು ಸಂಸ್ಕೃತಿ ಇಲಾಖೆಯು ನಿವ೵ಹಿಸುತ್ತಿರುವ ಕನಾ೵ಟಕದ ಎಲ್ಲಾ ರಂಗಮಂದಿರಗಳನ್ನೂ ಆನ್ ಲೈನ್ ಮಾಡಿ ಕೇವಲ 2 ಸಾವಿರ ರೂಪಾಯಿಗಳಿಗೆ ರಂಗಕಾಯ೵ಗಳಿಗೆ ಸಿಕ್ಕುವ ಹಾಗೆ ಆದೇಶಿಸಿದ ಉಮಾಶ್ರೀಯವರಿಗೆ ಗೌರವದಿಂದ ಕೊಟ್ಟ ಪ್ರಶಸ್ತಿಯನ್ನು ರದ್ದು ಮಾಡಿದ್ದೀರಲ್ಲಾ.. ಇದರಲ್ಲಿ ನಿಮ್ಮ ಯಾವ ನೈತಿಕತೆ ಇದೆ.?  

ಈಗಲೂ ಕಾಲ ಮಿಂಚಿಲ್ಲ. ಮೇಲೆ ಹೇಳಿದ ಸತ್ಯ ಸಂಗತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ. ರಿಜಿಸ್ಟ್ರಾರ್ ರವರು ಹೇಳಿದ ತಪ್ಪು ಮಾಹಿತಿಗಳ ಹಿಂದಿರುವ ಸತ್ಯವನ್ನು ಅರಿಯಲು ಪ್ರಯತ್ನಿಸಿ. ಆಯ್ಕೆಯ ಹಿಂದೆ ತಾಂತ್ರಿಕ ದೋಷಗಳಿವೆಯಾ? ಎನ್ನುವುದು ಈಗ ಮುಖ್ಯವಾದ ಸಂಗತಿಯಲ್ಲಾ. 30 ಜನ ಕಲಾವಿದರ ಸ್ವಾಭಿಮಾನದ ಪ್ರಶ್ನೆ ಇದರಲ್ಲಿದೆ. ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಬಹುತೇಕರು ಕನ್ನಡ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ಹಲವಾರು ವರ್ಷಗಳ ಕಾಲ ಪರಿಶ್ರಮ ವಹಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಕ್ಷಗಳ ಪಕ್ಷಪಾತವಿಲ್ಲದೇ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪಟ್ಟಿಯಲ್ಲಿರುವ ಬಹುತೇಕರು ತಮಗೆ ಪ್ರಶಸ್ತಿ ಕೊಡಬೇಕೆಂದು ಅರ್ಜಿ ಸಲ್ಲಿಸಿಲ್ಲ, ದುಂಬಾಲು ಬಿದ್ದಿಲ್ಲ, ಲಾಭಿ ಮಾಡಿಲ್ಲ. ಅಕಾಡೆಮಿಯೇ ಕರೆದು ಕೊಡುತ್ತೇನೆ ಎಂದು ಘೋಷಿಸಿದ ಪ್ರಶಸ್ತಿಯನ್ನು ಅಕಾಡೆಮಿಯೇ ರದ್ದು ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. 

ಕಲಾವಿದರು ಮೂಲಭೂತವಾಗಿ ಭಾವುಕ ಜೀವಿಗಳು. ಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದಾರೆ. ತಮ್ಮ ಶ್ರಮ ಸಾರ್ಥಕವಾಯಿತು ಎಂದು ಸಂತಸ ಪಟ್ಟಿದ್ದಾರೆ. ಪ್ರಶಸ್ತಿ ಬಂದಿದ್ದನ್ನೇ ನೆಪವಾಗಿಟ್ಟುಕೊಂಡು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪಡೆಯುವವರನ್ನು ಸನ್ಮಾನಿಸಿ ಗೌರವಿಸಿದೆ. ಪ್ರಶಸ್ತಿ ಕೊಡಲಾಗುತ್ತದೆ ಎಂದು ಭರವಸೆ ಕೊಟ್ಟು ಇದ್ದಕ್ಕಿದ್ದಂತೆ ರದ್ದು ಮಾಡಿದರೆ ಕಲಾವಿದರ ಸ್ವಾಭಿಮಾನಕ್ಕೆ ಪೆಟ್ಟುಬೀಳುತ್ತದೆ. ಕಲಾವಿದರು ಅತೀವವಾದ ಮಾನಸಿಕ ವೇದನೆ ಮತ್ತು  ಅವಮಾನಕ್ಕೆ ತುತ್ತಾಗುತ್ತಾರೆ. ಕಲಾವಿದರ ಬಗ್ಗೆ ಪ್ರೀತಿ, ಕಕ್ಕುಲಾತಿ, ಮಮತೆ, ಗೌರವ ಇಲ್ಲದ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ರಂಗಭೂಮಿಯ ಚರಿತ್ರೆಯಲ್ಲಿ ಪ್ರಶ್ನಾರ್ಹರಾಗುತ್ತಾರೆ. ಪ್ರಶಸ್ತಿಯನ್ನು ಘೋಷಿಸಿ ರದ್ದುಪಡಿಸಿದ್ದಕ್ಕಾಗಿ ಇಡೀ ಅಕಾಡೆಮಿಯೇ ಅವಮಾನಪೀಡಿತವಾಗಬೇಕಾಗುತ್ತದೆ. ಯಾರೋ ಒಂದಿಬ್ಬರು ಸದಸ್ಯರು ಹಾಗೂ ಅಧಿಕಾರಿಗಳ ಸೇಡಿನ ರಾಜಕೀಯಕ್ಕೆ ರಂಗಸಾಧಕ ಕಲಾವಿದರು ಬಲಿಪಶುವಾಗುವುದನ್ನು ಇಡೀ ರಂಗಭೂಮಿ ಒಂದಾಗಿ ಖಂಡಿಸುತ್ತಿದೆ.

ನೈತಿಕವಾಗಿ ಹಾಗೂ ತಾಂತ್ರಿಕವಾಗಿ ನೋಡಿದರೆ ನಿಮ್ಮ ಘನ ಅಧ್ಯಕ್ಷತೆಯ ಈಗಿನ ನಾಟಕ ಅಕಾಡೆಮಿಯು ಸವ೵ ಸದಸ್ಯರ ಸಭೆ ನಡೆಸುವುದೇ ಸೂಕ್ತವಲ್ಲ. ಯಾಕೆಂದರೆ ಇನ್ನೂ ಬೈಲಾ ಪ್ರಕಾರ ಪೂರ್ಣವಾಗಿ ಸರ್ವಸದಸ್ಯರು ಅಯ್ಕೆಯೇ ಆಗಿಲ್ಲ. ಅಕಾಡೆಮಿಯ ನಡಾವಳಿಯ ಪ್ರಕಾರ ಹದಿನೈದು ಜನ ಸದಸ್ಯರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಆಯ್ಕೆ ಮಾಡಬೇಕು ಹಾಗೂ ಮೂರು ಜನ ಪರಿಣಿತರನ್ನು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೋಆಪ್ಟ್ ಮಾಡಿಕೊಳ್ಳಬೇಕು. ಅಂದರೆ ಅಧ್ಯಕ್ಷರನ್ನು ಹೊರತು ಪಡಿಸಿ ಒಟ್ಟು ಹದಿನೆಂಟು ಜನ ಸದಸ್ಯರುಗಳು ಸೇರಿ ಸರ್ವಸದಸ್ಯರಾಗುತ್ತಾರೆ. ಅಕಾಡೆಮಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ಎಲ್ಲಾ ಸದಸ್ಯರುಗಳು ಸೇರಿ ತೆಗೆದುಕೊಂಡ ಬಹುಮತದ ನಿರ್ಣಯಗಳನ್ನು ರೆಜಿಸ್ಟ್ರಾರ್ ಎನ್ನುವ ಸರಕಾರಿ ಅಧಿಕಾರಿ ದಾಖಲಿಸಬೇಕಾಗುತ್ತದೆ. ಇದು ನಡಾವಳಿಗಳಲ್ಲಿರುವ ನಿಯಮ. ಪೂರ್ಣ ಪ್ರಮಾಣದ ಸದಸ್ಯರೇ ಇಲ್ಲದಿರುವಾಗ ಸರ್ವಸದಸ್ಯರ ಸಭೆ ಕರೆದು ಪ್ರಶಸ್ತಿಗಳ ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳುವುದೇ ತಾಂತ್ರಿಕವಾಗಿ ಕಾರ್ಯಸಾಧುವಲ್ಲ. ಆದರೂ ಅದನ್ನು ಮಾಡಿದ್ದೀರಿ. ಪೂಣ೵ ಕೋರಮ್ ಇರುವ ಸವ೵ಸದಸ್ಯರ ಸಭೆಯ ನಡಾವಳಿಯನ್ನು ಪ್ರಶ್ನಿಸುವ, ಅನುಷ್ಠಾನಕ್ಕೆ ತರಲು ತಾಂತ್ರಿಕ ನೆಪಗಳನ್ನು ಹೇಳುತ್ತಿರುವ ರಿಜಿಸ್ಟ್ರಾರ್ ರವರು ಈಗ ಅಪೂಣ೵ವಾದ ಸರ್ವಸದಸ್ಯರ ಸಭೆಯ ನಡಾವಳಿಯನ್ನು ಒಪ್ಪಿಕೊಂಡಿರುವುದೇ ವಿಪಯಾ೵ಸ.

ಇಷ್ಟಕ್ಕೂ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿ ನಿಮ್ಮ ನೇಮಕಾತಿಯೇ ನೈತಿಕವಾಗಿ ಹಾಗೂ ತಾಂತ್ರಿಕವಾಗಿ ಅಕ್ರಮವಾಗಿದೆ. ಯಾಕೆಂದರೆ. ಅಕಾಡೆಮಿಗಳ ಬೈಲಾ ನಡಾವಳಿಗಳ ಪ್ರಕಾರ ಅಕಾಡೆಮಿ ಅಧ್ಯಕ್ಷರಾಗಬೇಕಾದವರು ಬೇರೆ ಕಡೆ ನೌಕರಿ ಮಾಡಕೂಡದು ಎಂದಿದೆ. ಯಾಕೆಂದರೆ ಅಕಾಡೆಮಿಗೆ ಪೂಣಾ೵ವಧಿ ಅಧ್ಯಕ್ಷ ಇರಲಿ ಎಂಬುದು ಅದರ ಹಿಂದಿರುವ ಉದ್ದೇಶ. ಆದರೆ ನೀವು ತುಮಕೂರಿನ ಮೆಡಿಕಲ್ ಕಾಲೇಜಿನಲ್ಲೂ ಪ್ರೊಪೆಸರ್ ಆಗಿ ಕೆಲಸ ಮಾಡುತ್ತಿದ್ದು ಈಗ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಪೂಣಾ೵ವಧಿ ಹೆಸರಲ್ಲಿ ಪಾಟ೵ಟೈಂ ಕಾಯಕ ಮಾಡುತ್ತಿದ್ದೀರಿ. ಎರಡೂ ಕಡೆ ಸಂಬಳ ಸಾರಿಗೆ ಸವಲತ್ತುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಇದು ತಪ್ಪಲ್ಲವೆ. ಯಾವಾಗ ನೀವು ಪೂಣಾ೵ವಧಿಯಾಗಿ ನಿಮ್ಮನ್ನು ನಾಟಕ ಅಕಾಡೆಮಿಯ ಕಾಯ೵ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲವೋ ಆಗ ನೀವು ಅಧ್ಯಕ್ಷರಾಗಿ ಮುಂದುವರೆಯಬಾರದಿತ್ತು. ಅಧ್ಯಕ್ಷತೆಯೇ ಬೇಕೆಂದಿದ್ದರೆ ಮೆಡಿಕಲ್ ಕಾಲೇಜಿನ ನೌಕರಿ ಬಿಡಬೇಕಾಗಿತ್ತು. ಈ ಹಿಂದೆ ವಾತಾ೵ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಆರ್.ನಾಗೇಶ್ ರವರು ಹಾಗೂ ಕಪ್ಪಣ್ಣನವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಪೂಣಾ೵ವಧಿಯಾಗಿ ತೊಡಗಿಸಿಕೊಂಡಿದ್ದರು. ಆದರೆ.. ನೀವು ಅದಕ್ಕೆ ವ್ಯತಿರಿಕ್ತವಾಗಿ ಬೈಲಾಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಎರಡೂ ಕಡೆಗೆ ನ್ಯಾಯ ಸಲ್ಲಿಸಲಾಗದೇ ಸೋತಿದ್ದೀರಿ. ನೀವೇ ಒಪ್ಪಿಕೊಂಡ ಯಾವುದೇ ರಂಗಭೂಮಿ ಕಾಯ೵ಕ್ರಮಗಳಿಗೂ ಹೋಗಲಾರದೇ ರಂಗಸಂಘಟಕರಿಗೆ ತೊಂದರೆ ಕೊಡುತ್ತಿದ್ದೀರಿ. ಮನಸಾಕ್ಷಿ ಅಂತಾ ಒಂದಿದ್ದರೆ ಈ ಕುರಿತು ಇನ್ನೊಮ್ಮೆ ಯೋಚಿಸಿ. ಅಕಾಡೆಮಿಯಲ್ಲಿ ಕೆಟ್ಟ ಸಂಪ್ರದಾಯಗಳನ್ನು ಹುಟ್ಟು ಹಾಕುವುದನ್ನು ನಿಲ್ಲಿಸಿ. 

ಈಗ ಪ್ರಶಸ್ತಿಗೆ ಪಾತ್ರರಾಗಿರುವ ಕಲಾವಿದರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆ ಹಾಗೂ ನಾಟಕ ಅಕಾಡೆಮಿಯ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅಕಾಡೆಮಿಯ ಅಧ್ಯಕ್ಷರಾದ ನಿಮ್ಮ ಕೈಯಲ್ಲಿದೆ. ಯಾರೇ ಆಗಲಿ ಕಲಾವಿದರು ಕಲಾವಿದರೆ,, ರಂಗಭೂಮಿಯವರು ರಂಗಭೂಮಿಯವರೇ.. ಯಾವುದೇ ಕಲಾವಿದರಿಗೆ ಅವಮಾನವಾದರೂ ಅದು ರಂಗಭೂಮಿಯವರಿಗಾದ ಅವಮಾನವೇ. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಎಲ್ಲರೂ ಕಲಾಕುಲಬಾಂಧವರೇ. ಬಂಧುಗಳ ಸ್ವಾಭಿಮಾನಕ್ಕೆ ದಕ್ಕೆಯಾಗುವುದನ್ನು ಸಹಿಸಲಾಗದು, ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ರಂಗಭೂಮಿಯ ಐಕ್ಯತೆಯನ್ನು ಉಳಿಸಲು, ಅಕಾಡೆಮಿಯ ಸ್ವಾಯತ್ತತೆಯನ್ನು ಕಾಪಾಡಲು, ಕಲಾವಿದರುಗಳ ಸ್ವಾಭಿಮಾನವನ್ನು ಎತ್ತಿಹಿಡಿಯಲು, ಅಧಿಕಾರಿಗಳ ಕುತಂತ್ರವನ್ನು ಬಯಲುಮಾಡಲು ಒಂದಾಗಬೇಕಿದೆ. ಏನಕೇನ ಪ್ರಕಾರೇಣ ಘೋಷಿತಗೊಂಡ ಪ್ರಶಸ್ತಿಗಳನ್ನು ಕಲಾವಿದರುಗಳಿಗೆ ಕೊಟ್ಟು ಗೌರವಿಸುವ ಮೂಲಕ ಅಕಾಡೆಮಿಯ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಯಾಕೆಂದರೆ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಬದಲಾಗುತ್ತಾರೆಯೇ ಹೊರತು ಅಕಾಡೆಮಿ ಅಲ್ಲಾ. 

ಈಗಾಗಲೇ ಹೊಸ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಘೋಷಿಸಲಾಗಿದೆ. ಈಗೇನು ಮಾಡುವುದು? 

1.      ಕಲಾವಿದರ ಗೌರವವನ್ನು ಎತ್ತಿ ಹಿಡಿಯಲು ಹೊಸದಾಗಿ ಪ್ರಕಟಗೊಂಡ ಪ್ರಶಸ್ತಿ ಪುರಸ್ಕೃತರ ಜೊತೆಗೆ  ಈಗಾಗಲೇ ಘೋಷಿತವಾದ ಪ್ರಶಸ್ತಿಗಳನ್ನು  ಒಟ್ಟಿಗೆ ಪ್ರದಾನ ಮಾಡುವುದರಿಂದ ಅಕಾಡೆಮಿ ಮಯಾ೵ದೆ ಉಳಿಯುತ್ತದೆ. ಕಲಾವಿದರಿಗೂ ನೆಮ್ಮದಿ ಸಿಗುತ್ತದೆ. 

2.     ಇದಕ್ಕೂ ರಿಜಿಸ್ಟ್ರಾರ್ ರವರು ತಕರಾರು ಮಾಡುತ್ತಾರೆ. 30 ಜನರಿಗೆ ಮಾತ್ರ ಪ್ರಶಸ್ತಿ ಕೊಡಲು ಬೈಲಾ ಪ್ರಕಾರ ಸಾಧ್ಯ, ಹಾಗೂ ಹೆಚ್ಚಿನವರಿಗೆ ಪ್ರಶಸ್ತಿ ಕೊಡಲು ಹಣ ಎಲ್ಲಿಂದ ತರುವುದು ಎಂದು ಅಡ್ಡಗಾಲು ಹಾಕುತ್ತಾರೆ. ಇದಕ್ಕಾಗಿ ಮಾನ್ಯ ಸಚಿವರನ್ನು ಕೇಳಿ ವಿಶೇಷ ಅನುಮತಿಗಾಗಿ ಹಾಗೂ ಹದಿನೈದು ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಕೊಡಲು ವಿನಂತಿಸಿಕೊಳ್ಳಿ. ಈಗಾಗಲೇ ಸಚಿವರನ್ನು ಈ ಕುರಿತು ಮನದಟ್ಟು ಮಾಡುವ ಕೆಲಸವನ್ನು ಕೆಲವು ರಂಗಕಮಿ೵ಗಳು ಮಾಡಿದ್ದಾರೆ. ಅಧೀಕೃತವಾಗಿ ನಾಟಕ ಅಕಾಡೆಮಿ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿಕೊಳ್ಳುವುದು ಸೂಕ್ತ.

3.     ಇಲ್ಲವಾದರೆ.. ಈಗಾಗಲೇ ಘೋಷಿತವಾದಂತೆ 2019-20ರ ಸಾಲಿನ ಪ್ರಶಸ್ತಿಗಳ ಜೊತೆಗೆ ಈಗ ಹೊಸದಾಗಿ ಆಯ್ಕೆಗೊಂಡ ಪ್ರಶಸ್ತಿಗಳನ್ನು 2020-21ನೇ ಸಾಲಿನದೆಂದು ಪರಿಗಣಿಸಿ ಮಾಚ೵ ತಿಂಗಳು ಕಳೆದ ನಂತರ ಎರಡೂ ವಷ೵ದ ಪ್ರಶಸ್ತಿಗಳನ್ನು ಒಂದೇ ದಿನ ಪ್ರದಾನ ಮಾಡುವುದರಿಂದ ಅಕಾಡೆಮಿಯ ಘನತೆ ಹೆಚ್ಚುತ್ತದೆ. ಇದಕ್ಕೆ ಕಾರಣವಾದವರೆಲ್ಲಾ ದೊಡ್ಡವರೆಣಿಸಿಕೊಳ್ಳುತ್ತಾರೆ. ಹಾಗೂ ಮಾಚ೵ ನಂತರ ಹೊಸ ಅನುದಾನವೂ ಬರುವುದರಿಂದ ಹೆಚ್ಚುವರಿ ಆಥಿ೵ಕ ಭಾರವೂ ಅಕಾಡೆಮಿಗೆ ಬೀಳಲಾರದು. ಈ ಹಿಂದೆ ಶೇಖ ಮಾಸ್ತರ್‍ರವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಎರಡೂ ವರ್ಷಗಳ ಪ್ರಶಸ್ತಿಗಳನ್ನೂ ಒಂದೇ ಬಾರಿಗೆ ಕೊಟ್ಟ ಉದಾಹರಣೆಯೂ ಇದೆ.

4.     ಅಕಾಡೆಮಿಗೆ ಅಧ್ಯಕ್ಷರು ಸದಸ್ಯರುಗಳು ಯಾವುದೇ ರಾಜಕೀಯ ಕಾರಣಗಳಿಗೆ ಆಯ್ಕೆಯಾಗಿರಲಿ. ಆದರೆ ಒಮ್ಮೆ ರಂಗಭೂಮಿಯನ್ನು ಪ್ರತಿನಿಧಿಸುವ ನಾಟಕ ಅಕಾಡೆಮಿಗೆ ನೇಮಕವಾದಮೇಲೆ ಸಮಗ್ರ ರಂಗಭೂಮಿಯ ಹಿತಾಸಕ್ತಿಯೇ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಧ್ಯೇಯವಾಗಿರಲಿ.

5.     ಈಗಾಗಲೇ ಸರಕಾರದಿಂದ ಅನುಮೋದನೆಗೊಂಡು ಅಧಿಕಾರಿಗಳ ನಿರ್ಲಕ್ಷಕ್ಕೊಳಗಾಗಿ ಇಲಾಖೆಯ ಕಡತದಲ್ಲಿ ದೂಳುತಿನ್ನುತ್ತಿರುವ ಸಾಂಸ್ಕತಿಕ ನೀತಿಯ ಅನುಷ್ಟಾನಕ್ಕೆ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಒತ್ತಾಯಿಸಲಿ. ಯಾಕೆಂದರೆ ಅದರಲ್ಲಿ ನಾಟಕ ಅಕಾಡೆಮಿಯ ಸ್ವಾಯತ್ತತೆ ಅಡಗಿದೆ. ಅಧಿಕಾರಿಗಳ ಸರ್ವಾಧಿಕಾರಿ ದೋರಣೆಯಿಂದ ಅಕಾಡೆಮಿ ಸ್ವಾತಂತ್ರ್ಯವನ್ನು ಪಡೆಯಬೇಕೆಂದರೆ ಸ್ವಾಯತ್ತತೆ ಪಡೆಯುವುದು ಅತೀ ಮುಖ್ಯವಾಗಿದೆ.

6. ಈ ಎಲ್ಲಾ ಅವಘಡಕ್ಕೆ ಮೂಲ ಕಾರಣೀಕತ೵ರಾಗಿರುವ ರಿಜಿಸ್ಟ್ರಾರ್ ರವರನ್ನು ತಪ್ಪು ಮಾಹಿತಿ ಕೊಟ್ಟು ಅಕಾಡೆಮಿಯವರ ದಿಕ್ಕು ತಪ್ಪಿಸಿದ್ದಕ್ಕಾಗಿ ವಿಚಾರಣೆಗೆ ಒಳಪಡಿಸಿ ವಗಾ೵ವಣೆ ಮಾಡಲು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಸಚಿವರನ್ನು ಕೋರಿ ಪತ್ರ ಬರೆಯುವುದು ಈಗಿನ ಅಗತ್ಯವಾಗಿದೆ. ಇಲ್ಲವಾದರೆ ಸ್ವಾಯತ್ತ ಸಂಸ್ಥೆಯಾದ ನಾಟಕ ಅಕಾಡೆಮಿಯನ್ನು ದಾರಿ ತಪ್ಪಿಸಿ ಅದಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮುಂದುವರೆಯುತ್ತದೆ. 

ಮಾನ್ಯ ಅಧ್ಯಕ್ಷರೆ..

ಇಷ್ಟಕ್ಕೂ ನಿಮಗಿನ್ನೂ ಸಂದೇಹಗಳಿದ್ದರೆ ದಾಖಲೆಗಳ ಸಮೇತ ಬಂದು ನಿಮಗೆ ಮನದಟ್ಟು ಮಾಡಲು ಸಿದ್ದನಾಗಿರುವೆ.  ಕಲಾವಿದರೇ ರಂಗಭೂಮಿಯ ಉಳಿವಿಗೆ ಮೂಲ ಆಕರ. ಅವರ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ವ್ಯಕ್ತಿಯಾಗಲಿ ಇಲ್ಲವೇ ಸಂಸ್ಥೆಯಾಗಲಿ ರಂಗಭೂಮಿಯ ಇತಿಹಾಸದಲ್ಲಿ ಖಳನಾಯಕರಾಗಿ ದಾಖಲಾಗುತ್ತಾರೆ. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೆ ರಂಗಕರ್ಮಿಗಳು ರಂಗಭೂಮಿಯಲ್ಲೇ ಕಾಯಕನಿರತರಾಗಿ ಇರಬೇಕಾಗುತ್ತದೆ. ಕಲಾವಿದರಿಗೆ ಅಗೌರವ ತರುವಂತಹ ಯಾವುದೇ ಪ್ರಯತ್ನಗಳನ್ನು ಎಲ್ಲರೂ ವಿರೋಧಿಸಲೇಬೇಕಲ್ಲವೇ.. ಇಂತಹ ಯಾವುದೇ ಪ್ರತಿರೋಧಕ್ಕೆ ಅವಕಾಶವನ್ನು ಕೊಡದೇ ಈ ಹಿಂದೆ ಘೋಷಿತವಾದಂತೆ ಕಲಾವಿದರಿಗೆ ಪ್ರಶಸ್ತಿಗಳನ್ನು ನಿಮ್ಮ ಅಧ್ಯಕ್ಷತೆಯಲ್ಲಿ ಕೊಟ್ಟು ಕಲಾವಿದರ ಆತ್ಮಗೌರವವನ್ನು ಕಾಪಾಡುತ್ತೀರಿ ಹಾಗೂ ನಾಟಕ ಅಕಾಡೆಮಿಯ ಘನತೆಯನ್ನೂ ಉಳಿಸುತ್ತೀರಿ ಎಂದು ನಂಬಿದ್ದೇನೆ. 

-ಶಶಿಕಾಂತ ಯಡಹಳ್ಳಿ




ರಿಜಿಸ್ಟ್ರಾರ್ ಸಹಿ ಮಾಡಿದ ಸರ್ವ ಸದಸ್ಯರ ನಡಾವಳಿ ದಾಖಲೆಗಳು ಇಲ್ಲಿವೆ



















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ