ಶನಿವಾರ, ಮೇ 9, 2020

ಸಂಕಷ್ಟದಲ್ಲಿದೆ ಸರಕಾರ; ಪ್ರಾಧಿಕಾರದ ನಾಗಾಭರಣರಿಗೆ ಬೇಕಂತೆ ಅನುದಾನ..


ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರ್ನಾಟಕದಲ್ಲಿ ಇರುವಷ್ಟು ಅಕಾಡೆಮಿ ಪ್ರಾಧಿಕಾರಗಳು ಬಹುಷಃ  ಇಡೀ ಭಾರತದ ಬೇರಾವ ರಾಜ್ಯದಲ್ಲೂ ಇಲ್ಲ. ಹೀಗೆ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಹಿತಾಸಕ್ತಿಗಾಗಿ ಸ್ಥಾಪನೆಯಾದ ಅಕಾಡೆಮಿ ಪ್ರಾಧಿಕಾರಗಳು ತಮ್ಮ ಉದ್ದೇಶದಲ್ಲಿ ಸಫಲವಾಗಿದ್ದಾವೋ ಇಲ್ಲವೋ ಎನ್ನುವ ಚರ್ಚೆಗೆ ಇದು ಸಮಯವಲ್ಲ. ಹಾಗೇನಾದರೂ ಸಫಲವಾಗಿದ್ದರೆ ಕನ್ನಡ ಭಾಷೆ ತನ್ನ ರಾಜಧಾನಿಯಲ್ಲೇ ಇಷ್ಟೊಂದು ಶೋಚನೀಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಕನ್ನಡನಾಡಿನ ಸಂಸ್ಕೃತಿ  ಹೀಗೆಲ್ಲಾ ಕಲಸುಮೆಲೋಗರ  ವಾಗುತ್ತಿರಲಿಲ್ಲ. ಕೇವಲ ಅಕಾಡೆಮಿ ಪ್ರಾಧಿಕಾರಗಳಿಂದಲೇ ಭಾಷೆ ಸಂಸ್ಕೃತಿ ಉಳಿದು ಬೆಳೆಯುತ್ತದೆ ಎನ್ನುವ ಭ್ರಮೆಯೂ ಕನ್ನಡಿಗರಿಗಿಲ್ಲ. ಯಾವುದೇ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಯ ಉನ್ನತಿ ಹಾಗೂ ಅವನತಿಗೆ ಅನೇಕಾನೇಕ  ಕಾರಣಗಳಿವೆ. 

ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಮೂಲಕ  ವಾರ್ಷಿಕ ಅನುದಾನವನ್ನು ಕೊಟ್ಟು ಕನ್ನಡ ನಾಡಿನ ಭಾಷೆ ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲು ಹನ್ನೆರಡು ಅಕಾಡೆಮಿಗಳು ಹಾಗೂ ಮೂರು ಪ್ರಾಧಿಕಾರಗಳನ್ನು ರಚಿಸಿ ಸಾಕುತ್ತಾ ಬಂದಿದೆ. ಆಯಾ ಕಾಲದ ಆಳುವ ಸರಕಾರಗಳು ಹಾಗೂ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ  ಧೋರಣೆಗನುಗುಣವಾಗಿ ಅಕಾಡೆಮಿ ಪ್ರಾಧಿಕಾರಗಳು ಕೆಲಸ ಮಾಡುತ್ತಾ ತಮ್ಮ ಇತಿ ಮಿತಿಯಲ್ಲಿ ಒಂದಿಷ್ಟು ಕೆಲಸ ಮಾಡುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿವೆ. ಯಾಕೆಂದರೆ ಬರೀ ಹೆಸರಿಗೆ ಸ್ವಾಯತ್ತ ಸಂಸ್ಥೆಗಳು ಎಂದು ಕರೆಯಬಹುದಾದ ಈ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ  ಸ್ವಾಯತ್ತತೆಯೂ ಇಲ್ಲಾ, ಸ್ವಾತಂತ್ರ್ಯವಂತೂ ಮೊದಲೇ ಇಲ್ಲ. ಆಳುವ ಪಕ್ಷದ ಸರಕಾರದ ಮರ್ಜಿ ಹಾಗೂ ಹಸ್ತಕ್ಷೇಪದಿಂದಾಗಿಯೇ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ  ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ ಆಗುವುದೇ ಇತ್ತೀಚೆಗೆ ಮಾನ್ಯವಾಗಿದ್ದಿರಿಂದ ಹೀಗೆ ಆಯ್ಕೆಯಾದವರು ಆಯಾ ಪಕ್ಷದ ಸರಕಾರದ ನಿರ್ಣಯ ನಿಲುವುಗಳಿಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ  ಸಹಕಾರಿಯಾಗಿರುತ್ತಾರೆ. ಇನ್ನು ಸಂಸ್ಕತಿ ಇಲಾಖೆಯ ಅಧಿಕಾರಿ ವರ್ಗ ಯಾವತ್ತೂ ಯಾವುದೇ ಅಕಾಡೆಮಿಗೆ ಸ್ವಾಯತ್ತತೆಯನ್ನು ಕೊಡಲು ಬಯಸದೇ ಸದಾ ತಮ್ಮ ನಿಯಂತ್ರಣದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗೇನಾದರೂ ಸ್ವಾಯತ್ತತೆಯನ್ನು ಯಾವುದಾದರೂ ಅಕಾಡೆಮಿ ಕೇಳಿದರೆ ಅಸಹಕಾರ ಮನೋಭವ ತೋರುತ್ತಾ ಯಾವುದೇ ಕೆಲಸಗಳೂ ಆಗದ ಹಾಗೆ ರೆಜಿಸ್ಟ್ರಾರ್ ಮೂಲಕ  ನೋಡಿಕೊಳ್ಳುತ್ತಾರೆ. 

ಪ್ರತಿ ವರ್ಷ ಸರಕಾರವು ತನ್ನ ಬಜೆಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾರ್ಷಿಕ ಅನುದಾನವನ್ನು ಕೊಡುತ್ತಾ ಬರುತ್ತದೆ. ನಲವತ್ತು ವರ್ಷಗಳ ಹಿಂದೆ ವಾರ್ಷಿಕ ಹತ್ತು ಕೋಟಿ ಇದ್ದದ್ದು ಬರುಬರುತ್ತಾ ನಾನೂರಾ ಇಪ್ಪತ್ತು ಕೋಟಿಯಷ್ಟು ಅನುದಾನ ಇಲಾಖೆಗೆ ಕೊಡಮಾಡಲಾಗುತ್ತದೆ.  ಸಂಸ್ಕೃತಿ ಇಲಾಖೆಯು ತನಗೆ ದೊರೆತ ಅನುದಾನದಲ್ಲಿ ಅಕಾಡೆಮಿಗಳಿಗೆ  ತಲಾ ಒಂದು ಕೋಟಿ ಹಾಗೂ  ಪ್ರಾಧಿಕಾರಗಳಿಗೆ ಎಂಟು ಕೋಟಿಯಷ್ಟು ಹಣವನ್ನು ಹಂಚಿಗೆ  ಮಾಡಿ ಕೊಡುತ್ತಿತ್ತು. ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಒಟ್ಟು ಅನುದಾನ ಮೂವತ್ತು ಕೋಟಿಯಷ್ಟಾಗುತ್ತದೆ.  ಈಗ ಅದಕ್ಕೂ ಸಂಚಕಾರ ಬಂದಿದೆ.

ಆಳುವ ವರ್ಗಗಳಿಗೆ ಈ ನಾಡಿನ ಭಾಷೆ ಸಂಸ್ಕೃತಿಯ ಬಗ್ಗೆ ತೋರಿಕೆಯ ಪ್ರೀತಿ ಇದೆಯೇ ಹೊರತು ಅದರ ಅಗತ್ಯತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ  ಶ್ರೀಯುತ ಡಿ.ಕೆ.ಶಿವಕುಮಾರರವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ಅಕಾಡೆಮಿಗಳ ವಾರ್ಷಿಕ ಅನುದಾನದಲ್ಲಿ ಕಡಿತಗೊಳಿಸಿದ್ದರು. ಅನುದಾನ ಪಡೆಯುವ ಕಲಾಸಂಸ್ಥೆಗಳಲ್ಲಿ ಕಳ್ಳರೇ ಹೆಚ್ಚಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ  ಕಲಾಸಂಸ್ಥೆಗಳ  ಅನುದಾನಕ್ಕೆ ಕತ್ತರಿ ಹಾಕಲು ಪ್ರಯತ್ನಿಸಿದರು. ಆ ನಂತರ ಬಂದ ಬಿಜೆಪಿ ಸರಕಾರದಲ್ಲಿ ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅವರ ಸಿದ್ದಾಂತವನ್ನು ಒಪ್ಪದ ಕಲಾವಿದರು ಹಾಗೂ ಸಾಹಿತಿಗಳನ್ನು ಮನೆಹಾಳರು ಎಂದು ನಿಂದಿಸಿದರು ಹಾಗೂ ಅಕಾಡೆಮಿ ಹಾಗೂ ಪ್ರಾಧಿಕಾರಗಳ ವಾರ್ಷಿಕ ಅನುದಾನವನ್ನ ಕಡಿತಗೊಳಿಸಿದರು. ಇದನ್ನು ಪ್ರಶ್ನಿಸಬೇಕಾಗಿದ್ದ ಮತ್ತು ಹಕ್ಕುಗಳಿಗಾಗಿ ಹೋರಾಡಬೇಕಾಗಿದ್ದ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಂಘಪರಿವಾರದ  ಸರಕಾರದ  ಊಳಿಗದಲ್ಲಿ ಜೀತಕ್ಕಿದ್ದವರಂತೆ ಮೌನವಾದರು. 

ಈಗ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶ್ರೀಯುತ ನಾಗಾಭರಣರವರು ಎಚ್ಚೆತ್ತುಗೊಂಡು ತಮ್ಮ ಪ್ರಾಧಿಕಾರಕ್ಕೆ ಅನುದಾನ ಕಡಿತವಾಗಿದ್ದರ ಕುರಿತು ಒಂಚೂರು ತಣ್ಣನೆಯ ಅಸಮಾಧಾನ ಹೊರಹಾಗಿದ್ದಾರೆ. ‘ವಾರ್ಷಿಕವಾಗಿ ಎಂಟು ಕೋಟಿ ಕೊಡಬೇಕಾಗಿದ್ದ ಅನುದಾದ ಎರಡು ಕೋಟಿಗೆ ಇಳಿದಿದೆ’ ಎಂದು ಪ್ರಜಾವಾಣಿಯ ವರದಿಗಾರರ ಮುಂದೆ  ಅವಲತ್ತುಕೊಂಡಿದ್ದಾರೆ. ಹಾಗಂತ ಸಂಘ ಪರಿವಾರದ ಶಿಸ್ತಿನ ಅನುಯಾಯಿಯಾದ ಅವರು ಸರಕಾರದ ಧೋರಣೆಯ ವಿರುದ್ದ ಸಿಡಿದೆದ್ದಿದ್ದಾರೆ ಎಂದು ಅರ್ಥವಲ್ಲ. ‘ಎಷ್ಟು ಕೊಡುತ್ತಾರೋ ಅಷ್ಟರಲ್ಲಿ ಅಂದರೆ ಎರಡೇ ಕೋಟಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವೆ. ವಾರ್ಷಿಕ ಪ್ರಶಸ್ತಿ ಹಾಗೂ ಹೊರನಾಡ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ  ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿರುವೆ’ ಎಂದು ಘೋಷಿಸಿದ್ದಾರೆ.  ಹಾಗೂ ಬಾಕಿ ಆರು ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಮನವಿ ಮಾಡಿ ಪತ್ರವನ್ನೂ ಬರೆದು ಸುಮ್ಮನಾಗಿದ್ದಾರೆ. 

ಈಗ ಪ್ರಶ್ನೆ ಇರುವುದು ಕೇವಲ ಒಂದು ಪ್ರಾಧಿಕಾರದ್ದಲ್ಲ, ಎಲ್ಲಾ ಅಕಾಡೆಮಿಗಳದ್ದೂ ಸಹ ಇದೇ ಪಾಡು. ನಾಗಾಭರಣರವರು ಕೇವಲ ತಮ್ಮ ಪ್ರಾಧಿಕಾರದ ಅಧ್ಯಕ್ಷರಾಗಿ ಮಾತಾಡಿದ್ದಾರೆಯೇ ಹೊರತು ಸಾಂಸ್ಕೃತಿಕ ನಾಯಕನಾಗಿ ಅಲ್ಲ. ಸರಕಾರ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ವಾರ್ಷಿಕ ಅನುದಾನದಲ್ಲಿ ಕಡಿತ ಮಾಡಿದ್ದರ ವಿರುದ್ದ ಭರಣರವರು ದ್ವನಿ ಎತ್ತಲಿಲ್ಲ.  ಈ ಹಿಂದೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಅನುದಾನ ಕಡಿತದ ವಿರುದ್ದ ಸರಕಾರದ ನಿರ್ಧಾರ ವಿರೋಧಿಸಿ ದ್ವನಿ ಎತ್ತಿದಾಗ ಎಂದೂ ಭರಣರವರು ದ್ವನಿಗೂಡಿಸಲಿಲ್ಲ. ಆದರೆ ಯಾವಾಗ ತಮ್ಮ ಪ್ರಾಧಿಕಾರಕ್ಕೆ ಅನುದಾನ ಕೊರತೆಯಾಯಿತೋ  ಆಗ  ಬಾಯಿಬಿಟ್ಟಿದ್ದಾರೆ. 

ಈಗ ನಾಡಿನ ಪರಿಸ್ಥಿತಿ ಗಂಭೀರವಾಗಿದೆ. ಕೊರೋನಾ ವೈರಾಣುವಿನ ಹಾವಳಿಯಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿಯೇ ಹೈರಾಣಾಗಿ ಹೋಗಿದೆ. ಮದ್ಯಮಾರಾಟದ  ಆದಾಯದಿಂದ ಬಂದ ಹಣದಲ್ಲಿ ಸರಕಾರಿ ನೌಕರರಿಗೆ ಸಂಬಳ ಕೊಡುವಂತಹ ದುಸ್ತಿತಿಗೆ ಸರಕಾರ ಬಂದಿದೆ. ಇಂತಹ ಸಂದರ್ಭದಲ್ಲಿ  ಪ್ರಶಸ್ತಿ ಕೊಡಲು ಹಣ ಬೇಕು ಎಂದು ಕೇಳುವ ಹಾಗಿಲ್ಲ. ಇಷ್ಟಕ್ಕೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿಗಾಗಿಯೇ ಖರ್ಚು ಮಾಡುವ ವಾರ್ಷಿಕ ಹಣದ ಬಾಬತ್ತು ಕೇಳಿದರೆ ಬೆಚ್ಚಿಬೀಳಬೇಕಾಗುತ್ತದೆ. ವಾರ್ಷಿಕವಾಗಿ ಮೂರು ಕೋಟಿಯಷ್ಟು ಹಣವನ್ನು ಕಳೆದ ಸಾಲಿನಲ್ಲಿ ಬರೀ ಪ್ರಶಸ್ತಿಗಳಿಗಾಗಿ  ವೆಚ್ಚಮಾಡಲಾಗಿದೆ. ಕನ್ನಡ ಮಾಧ್ಯಮ ಪ್ರಶಸ್ತಿಗೆ ಒಂದೂ ಮುಕ್ಕಾಲು ಕೋಟಿ ಹಣ ಬೇರೆ ಪ್ರತ್ಯೇಕವಾಗಿ ಖರ್ಚಾಗಿದೆ. ಶಾಲೆಗಳಿಗೆ ಪೀಠೋಪಕರಣ ಹಾಗೂ ಪಾಠೋಪಕರಣಗಳಿಗಾಗಿ ಒಂದೂ ಕಾಲು ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಕಳೆದ ವರ್ಷ ಎಂಬತ್ತು ಲಕ್ಷ ಹಣ ಕೊಡಲಾಗಿದೆ. ಪ್ರಾಧಿಕಾರದ ಸಿಬ್ಬಂದಿಯ ವೇತನಕ್ಕೆ ವಾರ್ಷಿಕ ಒಂದುಕೋಟಿ ಬೇಕಿದೆ. ಇದರಲ್ಲಿ ಬಹುತೇಕ ದುಂದುಗಾರಿಕೆಯೇ ಎದ್ದು ಕಾಣುತ್ತದೆ. ಅನಗತ್ಯ ವೆಚ್ಚಗಳೇ  ಬೇಕಾದಷ್ಟಿವೆ. ತೆರಿಗೆದಾರರ ಹಣ ಹೀಗೆಲ್ಲಾ ಕರಗುವುದನ್ನು ಪ್ರಶ್ನಿಸಲೇಬೇಕಿದೆ.

“ಹನುಮಪ್ಪ ಹಗ್ಗ ಕಡಿಯುವಾಗ ಪೂಜಾರಿ ಶ್ಯಾವಗಿ ಕೇಳಿದ್ನಂತೆ” ಹೀಗಿದೆ ನಮ್ಮ ನಾಗಾಭರಣರವರ ಕಥೆ ಮತ್ತು ಅಭಿವೃದ್ದಿ ಪ್ರಾಧಿಕಾರದ ವ್ಯಥೆ. ರಾಜ್ಯ ಶ್ರೀಮಂತವಿದ್ದಾಗ ಬೇರೆ ಮಾತು, ಸಂಕಷ್ಟದಲ್ಲಿದ್ದಾಗ ಈ ಎಲ್ಲಾ ದುಂದುಗಾರಿಕೆ ಅಭಿವೃದ್ದಿ ಪ್ರಾಧಿಕಾರಕ್ಕೆ ಬೇಕಾ? ಪ್ರಾಧಿಕಾರವೊಂದು ವಾರ್ಷಿಕವಾಗಿ ಅಂದಾಜು ಐದು ಕೋಟಿಗಳನ್ನು ಕೇವಲ ಪ್ರಶಸ್ತಿಗಾಗಿ ವೆಚ್ಚಮಾಡುವುದು ಎಷ್ಟು ಸಮರ್ಥನೀಯ?  ಪ್ರಶಸ್ತಿಗಳನ್ನು ಕೊಡುವುದರಿಂದ  ಕನ್ನಡದ ಅಭಿವೃದ್ದಿಯಾಗುತ್ತದಾ? ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಿರುವ ಪ್ರಾಧಿಕಾರದ ಆಡಳಿಗಾತ್ಮಕ ಖರ್ಚನ್ನು ಕಡಿಮೆ ಮಾಡುವತ್ತ ನಾಗಾಭರಣರ ಚಿತ್ತ ಹರಿಯಲಿ.  ಸಾಧ್ಯವಾದರೆ ಪ್ರಾಧಿಕಾರಕ್ಕೆ ಅನಗತ್ಯವಾಗಿರುವ ಹೊರಗುತ್ತಿಗೆ ನೌಕರರನ್ನು ಕಡಿತಗೊಳಿಸಲಿ. ಆಡಳಿತಾತ್ಮಕ ಖರ್ಚುಗಳಿಗೆ ಕಡಿವಾಣ ಹಾಕಲಿ. ಸಾಧ್ಯವಾದರೆ ಅಧ್ಯಕ್ಷರಾಗಿ ತೆಗೆದುಕೊಳ್ಳುತ್ತಿರುವ ಮಾಸಿಕ ಒಂದು ಲಕ್ಷದಷ್ಟು ಸಂಬಳ ಸಾರಿಗೆಯನ್ನು ಭರಣರವರು ನಿರಾಕರಿಸಿ ತಮ್ಮ ಸಾಂಸ್ಕೃತಿಕ ಬದ್ಧತೆಯನ್ನು ಸಾಬೀತುಗೊಳಿಸಲಿ. ಕನ್ನಡದಲ್ಲಿ ಸ್ನಾತ್ತಕೋತ್ತರ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ನೂರು ಜನ ವಿದ್ಯಾರ್ಥಿಗಳಿಗೆ ತಲಾ ಇಪ್ಪತ್ತೈದು ಸಾವಿರದಂತೆ ವಾರ್ಷಿಕವಾಗಿ ಇಪ್ಪತ್ತೈದು ಲಕ್ಷ ಹಣ ಮೀಸಲಾಗಿರಿಸಲಿ. ಶಾಲೆಗಳಿಗೆ ಅಭಿವೃದ್ದಿ ಪ್ರಾಧಿಕಾರದಿಂದ ಕೊಡಮಾಡುವ ಪೀಠೋಪಕರಣಗಳನ್ನು ಶಿಕ್ಷಣ ಇಲಾಖೆಯ ಅನುದಾನದಿಂದ ಕೊಡಿಸಲು ತಮ್ಮ ಪ್ರಭಾವವನ್ನು ಭರಣರವರು ಉಪಯೋಗಿಸಲಿ. 

ಇಷ್ಟು ಮಾಡಿದರೆ ಸಾಕು ಸರಕಾರ ಈಗ ಸಂಕಷ್ಟಕಾಲದಲ್ಲಿ ಕೊಟ್ಟಿರುವ ಎರಡು ಕೋಟಿಗಳನ್ನೇ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಸಿಕ್ಕಷ್ಟೇ ಹಣದಲ್ಲಿ ಕನ್ನಡ ಅಭಿವೃದ್ದಿಗೆ ಪೂರಕವಾಗಿ ಹಲವಾರು ಕ್ರಿಯಾಶೀಲ ಕೆಲಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಇದಕ್ಕೆಲ್ಲಾ ಬೇಕಾದದ್ದು ಕೇವಲ ಹಣ ಅನುದಾನಗಳಲ್ಲ. ಅದನ್ನೂ ಮೀರಿದ ಇಚ್ಚಾಶಕ್ತಿ ಹಾಗೂ ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಆಸಕ್ತಿ. ಇವೆರಡನ್ನೂ ಕನ್ನಡಾಂಬೆ ನಾಗಾಭರಣರವರಿಗೆ ಕೊಡಲಿ ಎಂದು ಕನ್ನಡಿಗರೆಲ್ಲರೂ ಪ್ರಾರ್ಥಿಸೋಣ. 

-ಶಶಿಕಾಂತ  ಯಡಹಳ್ಳಿ.
  

1 ಕಾಮೆಂಟ್‌: