ಗುರುವಾರ, ಅಕ್ಟೋಬರ್ 29, 2015

ದಾಕ್ಷಾಯಿಣಿ ಭಟ್ ರವರಿಗೆ ಉಸ್ತಾದ್ ಭಿಸ್ಮಿಲ್ಲಾಖಾನ್ ಯುವ ಪುರಸ್ಕಾರ :

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪ್ರಕಟ :
ದಾಕ್ಷಾಯಿಣಿ ಭಟ್ರಿಗೆ ಪ್ರಶಸ್ತಿ  ಕಿರೀಟ :





ಆಧುನಿಕ ಕನ್ನಡ ರಂಗಭೂಮಿಗೆ ಸಂತಸದ ಸುದ್ದಿಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2013-14 ರ ಸಾಲಿನ ಉಸ್ತಾದ್ ಭಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿಯನ್ನು  ಯುವ ರಂಗಕರ್ಮಿ ದಾಕ್ಷಾಯಿಣಿ ಭಟ್ರವರಿಗೆ ರಂಗನಿರ್ದೇಶನಕ್ಕಾಗಿ ನೀಡಲಾಗುವುದೆಂದು ಪ್ರಕಟಿಸಿದೆ. ಕರ್ನಾಟಕದ ಆಧುನಿಕ ರಂಗಭೂಮಿಯಲ್ಲಿ ರಂಗನಿರ್ದೇಶನವನ್ನು ವೃತ್ತಿಯಾಗಿ ತೆಗೆದುಕೊಂಡ ಮಹಿಳೆಯರು ತುಂಬಾ ಅಪರೂಪ. ಅಂತವರಲ್ಲಿ ದಾಕ್ಷಾಯಿಣಿ ಪ್ರಮುಖರಾದವರು. ರಂಗಭೂಮಿಯನ್ನೇ ಬದುಕಾಗಿಸಿಕೊಂಡು ನಾಟಕವನ್ನು ಉಸಿರಾಗಿಕೊಂಡಿರುವ ದಾಕ್ಷಾಯಿಣಿಯವರ ಪರಿಶ್ರಮ ಹಾಗೂ ಬದ್ದತೆಯನ್ನು ಗುರಿತಿಸಿ ಡೆಲ್ಲಿಯಲ್ಲಿರುವ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಪುರಸ್ಕರಿಸಲು ನಿರ್ಧರಿಸಿದ್ದು ಕನ್ನಡ ರಂಗಭೂಮಿಗೆ ಹೆಮ್ಮೆಯ ವಿಷಯ.

ಕನ್ನಡ ರಂಗಭೂಮಿಯಲ್ಲಿ ನಟಿಯರಾಗಿ ಹೆಸರು ಮಾಡಿದವರಿದ್ದಾರೆ, ನಿರ್ದೇಶಕಿಯಾಗಿ ನಾಟಕ ಕಟ್ಟಿದವರಿದ್ದಾರೆ, ವಸ್ತ್ರಾಲಂಕಾರ ಹಾಗೂ ವರ್ಣಾಲಂಕಾರಗಳಲ್ಲಿ ಕೆಲಸ ಮಾಡಿದ ಮಹಿಳೆಯರೂ ಕೆಲವರಿದ್ದಾರೆ. ಆದರೆ... ನಟಿಯಾಗಿ, ನಿರ್ದೇಶಕಿಯಾಗಿ, ನೃತ್ಯ ನಿರ್ದೇಶಕಿಯಾಗಿ, ರಂಗಸಜ್ಜಿಕೆ ವಿನ್ಯಾಸಕಿಯಾಗಿ, ವಸ್ತ್ರವಿನ್ಯಾಸಕಿಯಾಗಿ, ರಂಗಶಿಕ್ಷಕಿಯಾಗಿ, ಪ್ರಸಾದನ ಕಲಾವಿದೆಯಾಗಿ ಅಗತ್ಯ ಬಿದ್ದಾಗ ಬೆಳಕಿನ ವಿನ್ಯಾಸಕಿಯಾಗಿ.. ಹೀಗೆ ರಂಗಭೂಮಿಯಲ್ಲಿ ಆಲ್ರೌಂಡರ್ ಆಗಿ ತೊಡಗಿಸಿಕೊಂಡ ಮಹಿಳೆಯೆಂದರೆ ದಾಕ್ಷಾಯಿಣಿಯವರು ಮಾತ್ರ. 39 ವಯೋಮಾನದ ಚಿಕ್ಕ ವಯಸ್ಸಿನಲ್ಲಿ ದೊಡ್ಡದಾದ ಸಾಧನೆಯನ್ನು ಮಾಡಿದ ದಾಕ್ಷಾಯಿಣಿ ಭಟ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಯೋಗ್ಯವಾದ ಶ್ರಮಜೀವಿ ರಂಗಪ್ರತಿಭೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಶಸ್ತಿಗೂ ಒಂದು ಗೌರವ ಸಿಕ್ಕಂತಾಗಿದೆ.
 
'ಅಹಲ್ಯ' ನಾಟಕದಲ್ಲಿ ದಾಕ್ಷಾಯಿಣಿ ಭಟ್ ಅಹಲ್ಯೆಯಾಗಿ

ದಾಕ್ಷಾಯಿಣಿಯವರು ಹುಟ್ಟಿದ್ದು ಡಿಗ್ರಿ ಮುಗಿಸಿದ್ದು ಶಿಕಾರಿಪುರ, ಓದಿದ್ದು ಆಗುಂಬೆ ಮತ್ತು ಮೇಗರವಳ್ಳಿ. ನಾಟಕದ ಮೇಲಿನ ಆಸಕ್ತಿಯಿಂದ 1998-99 ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮಾ ಮಾಡಲು ಹೋದ ದಾಕ್ಷಾಯಿಣಿ ರಂಗಭೂಮಿಯತ್ತ ಆಕರ್ಷಿತರಾಗಿ ಮುಂದೆ ರಂಗಭೂಮಿಯನ್ನೇ ಬದುಕಾಗಿಸಿಕೊಂಡರು. ನೀನಾಸಂ ನಲ್ಲಿದ್ದಾಗ ಪರಿಚಿತರಾಗಿ ಸ್ನೇಹಿತರಾಗಿದ್ದ ಶ್ರೀಧರ್ ಹೆಗ್ಗೋಡರವರನ್ನು ವಿವಾಹವಾದರು. ಪತಿ ಶ್ರೀಧರ್ ಅಪಘಾತವೊಂದರಲ್ಲಿ ದೇಹದ ಮೇಲೆ ಸ್ವಾದೀನ ಕಳೆದುಕೊಂಡಾಗ ಅಧೀರರಾದರೂ ದೃತಿಗೆಡದ ದಾಕ್ಷಾಯಿಣಿ ತಮ್ಮ ರಂಗಕಾಯಕವನ್ನು ಒಂಟಿಯಾಗಿಯೇ ಮುನ್ನೆಡೆಸಿಕೊಂಡು ಬಂದಿದ್ದು ಅವರ ರಂಗಬದ್ಧತೆ ಮತ್ತು ರಂಗಪ್ರೀತಿಗೆ ಸಾಕ್ಷಿಯಾಗಿದೆ. ತದನಂತರ ಬೆಂಗಳೂರಿನ ರಂಗತಂಡಗಳಲ್ಲಿ ನಟಿಸುತ್ತಾ... ಬೇರೆ ಊರುಗಳಿಂದ ಆಹ್ವಾನ ಬಂದಾಗ ಅಲ್ಲಿ ಹೋಗಿ ರಂಗಕಾರ್ಯಾಗಾರಗಳನ್ನು ನಡೆಸುತ್ತಾ ರಂಗವೃತ್ತಿಯನ್ನು ಆರ್ಥಿಕ-ಸಾಮಾಜಿಕ ಸಂಕಷ್ಟದಲ್ಲೇ ಆರಂಭಿಸಿದ ದಾಕ್ಷಾಯಿಣಿಯವರೊಳಗಿನ ಓದಬೇಕೆಂಬ ಛಲ ಮಾತ್ರ ಕಡಿಮೆಯಾಗಲಿಲ್ಲ. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ನಾಟಕದಲ್ಲೇ ಮಾಸ್ಟರ್ ಡಿಗ್ರಿ ಮಾಡಿದರು. ತದನಂತರ ಈಗ ಗಂಗೂಭಾಯಿ ಹಾನಗಲ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಓದುವ ಪ್ರಯತ್ನವನ್ನೂ  ಮಾಡುತ್ತಿದ್ದಾರೆ.

ಸುಮಾರು ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ದಾಕ್ಷಾಯಿಣಿಯವರು ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಇಪ್ಪತ್ತು ಮಕ್ಕಳ ನಾಟಕಗಳಾದರೆ ಮಿಕ್ಕ ಐವತ್ತು ದೊಡ್ಡವರ ನಾಟಕಗಳು. ಬೆಂಗಳೂರು, ದಾವಣಗೆರೆ, ಧಾರವಾಡ, ಕುದುರೆಮುಖ, ಸಿರಿಗೆರೆ, ಸಾಣೆಹಳ್ಳಿ, ಹೆಚ್ಡಿ ಕೋಟೆ... ಹೀಗೆ ನಾಡಿನಾದ್ಯಂತ ಇಲ್ಲಿವರೆಗೂ ಐವತ್ತಕ್ಕೂ ಹೆಚ್ಚು ರಂಗಶಿಬಿರಗಳನ್ನು ನಿರ್ದೇಶಿಸಿ ಸಾವಿರಾರು ರಂಗಾಸಕ್ತರಿಗೆ ಅಭಿನಯವನ್ನು ಕಲಿಸಿಕೊಟ್ಟು ನಾಟಕಗಳನ್ನು ಮಾಡಿಸಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಯಾವುದಾದರೂ ಒಂದು ಊರಲ್ಲಿ ಮಕ್ಕಳ ಬೇಸಿಗೆ ತರಬೇತಿ ಶಿಬಿರದ ನಿರ್ದೇಶಕಿಯಾಗಿ ಆಹ್ವಾನಿತರಾಗಿ ಹೋಗುವ ಭಟ್ರವರು ಮಕ್ಕಳಿಗಾಗಿ ಒಂದು ತಿಂಗಳ ಥಯಿಟರ್ ವರ್ಕಶಾಪ್ ಮಾಡಿ ನಂತರ ಮಕ್ಕಳ ನಾಟಕವನ್ನು ನಿರ್ದೇಶಿಸುವುದನ್ನು ಕಾಯಕವನ್ನಾಗಿಸಿಕೊಂಡು ಮಕ್ಕಳ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ಪಂಚರಶಾಲೆ, ಹಕ್ಕಿಹಾಡು, ಅದಲು ಬದಲು ಕಂಚಿ ಕದಲು, ಮಲ್ಲಿಗೆ ರಾಜಕುಮಾರಿ, ಕತ್ತೆಬಾಲ ಕುದುರೆ ಜುಟ್ಟು, ಮಾಯವಾದ ಮೊಲ.... ಹೀಗೆ ಕೆಲವಾರು ನಾಟಕಗಳು ಬೇಸಿಗೆ ಶಿಬಿರಗಳಲ್ಲಿ ದಾಕ್ಷಾಯಿಣಿಯವರಿಂದ ನಿರ್ದೇಶಿಸಲ್ಪಟ್ಟಿವೆ. ಬಾಲಭವನದ ಕೋರಿಕೆಯ ಮೇರೆಗೆ ಮೂರು ವರ್ಷಗಳ ಕಾಲ ಬೇಸಿಗೆ ಮಕ್ಕಳ ರಂಗಕಾರ್ಯಾಗಾರಕ್ಕೆ ನಿರ್ದೇಶಕಿಯಾಗಿ ಹೋದ ದಾಕ್ಷಾಯಿಣಿಯವರು ಅಜ್ಜಿಕತೆ, ಹಕ್ಕಿಹಾಡು ಹಾಗೂ ಕತ್ತೆಬಾಲ ಕುದುರೆ ಜುಟ್ಟು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ  ಕಲಾಸಂಘದ ಮಕ್ಕಳಿಗೆ ಒಳ್ಳೇದು ಒಳ್ಳೇದು ನಾಟಕ ಹಾಗೂ ಕಾವೇರಿ ನಗರದ ಕೊಳಗೇರಿ ಮಕ್ಕಳಿಗೆ ಮನೆ ಆಳು ಮಗ ನಾಟಕ ಮತ್ತು ಕುರುಡು ಮಕ್ಕಳ ಶಾಲೆಗೆ ಮಾಯವಾದ ಮೊಲ.... ನಾಟಕಗಳನ್ನು ಕಲಿಸಿಕೊಟ್ಟು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.


2006ರಲ್ಲಿ ತಮ್ಮದೇ ಆದ ದೃಶ್ಯ ರಂಗತಂಡವನ್ನು ಹುಟ್ಟುಹಾಕಿ ಕಾಲೇಜಿನ ಯುವಕ ಯುವತಿಯರಿಗೆ ನಟನೆ ಕುರಿತು ತರಬೇತಿಯನ್ನು ಕೊಡುತ್ತಾ ನಿರಂತರವಾಗಿ ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ. ದೇವರ ಹೆಸರಲ್ಲಿ, ಗಾಜಿಪುರದ ಹಜಾಮ, ಪ್ಲೊಟೋಸ್, ಸಪ್ನ ವಾಸವದತ್ತ, ಮರುಗಡಲು, ಕೆಂಪು ಕಣಗಿಲೆ, ಪೇಯಿಂಗ್ ಗೆಸ್ಟ್, ಕಂಬಳಿ ಸೇವೆ, ಚಾಳೇಶ, ಪೋಲಿಕಿಟ್ಟಿ, ಅಗ್ನಿವರ್ಣ, ಟೆಲ್ವ್ತ್ ನೈಟ್, ನಾನು ಮತ್ತು ಹೆಣ್ಣು, ಬಸ್ತಿ, ಕಾಮಧೇನು, ಸಮಾನತೆ... ಹೀಗೆ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ತಮ್ಮ ತಂಡಕ್ಕೆ ಕಳೆದೊಂದು ದಶಕದಲ್ಲಿ ನಿರ್ದೇಶಿಸಿ ರಂಗನಿರ್ದೇಶನದಲ್ಲಿ ವೃತಿಪರತೆಯನ್ನು ತೋರಿಸಿ ರಂಗಾಸಕ್ತರ ಗಮನ ಸೆಳೆದಿದ್ದಾರೆವಾರ್ತಾ ಮತ್ತು ಪ್ರಸಾರ ಇಲಾಖೆಗೆ ಜಾತಿಮಾಡಬೇಡ್ರಣ್ಣಾ ಎನ್ನುವ ಬೀದಿನಾಟಕವನ್ನೂ ನಿರ್ದೇಶಿಸಿ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ಕೊಟ್ಟಿದ್ದಾರೆ.


ರಂಗಭೂಮಿಯನ್ನು ಅದರಲ್ಲೂ ಹವ್ಯಾಸಿ ರಂಗಭೂಮಿಯನ್ನು ನಂಬಿ ಅದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಗುಂಡಿಗೆ ಗಟ್ಟಿ ಇರಬೇಕು. ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯಾಗಿ ದಿಟ್ಟತನದಿಂದ ಅಡೆತಡೆಗಳನ್ನು ಛಲದಿಂದ ಎದುರಿಸಿ ರಂಗಭೂಮಿಯನ್ನು ವೃತ್ತಿಯಾಗಿ ತೆಗೆದುಕೊಂಡು ನಾಟಕವನ್ನೇ ಬದುಕಾಗಿಸಿಕೊಂಡ ದಾಕ್ಷಾಯಿಣಿಯವರಿಗೆ ಇಂತಹ ಅದೆಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟರೂ ಕಡಿಮೆಯೇ. ಇಂತಹ ಕ್ರಿಯಾಶೀಲ ರಂಗಕರ್ಮಿಗಳನ್ನು ಗುರುತಿಸಿ  ಪ್ರಶಸ್ತಿ ಗೌರವ ಕೊಟ್ಟರೆ ಇನ್ನೂ ಹೆಚ್ಚು ತೀವ್ರತೆಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಂಸ್ಕೃತಿ ಇಲಾಖೆಗಳು ಇಂತಹ ರಂಗಕಾಯಕಜೀವಿ ಮಹಿಳೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಕೊಟ್ಟು ಗೌರವಿಸಬೇಕಾಗಿತ್ತು ಅದಾಗಲಿಲ್ಲ. ಆದರೆ... ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ನಿಜವಾದ ಮಹಿಳಾ ರಂಗಕಾಯಕ ಜೀವಿಯ ಶ್ರಮ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಪುರಸ್ಕರಿಸುತ್ತಿರುವುದು ಇಡೀ ಕನ್ನಡ ರಂಗಭೂಮಿ ಸಂಭ್ರಮಿಸಬೇಕಾದ ಸಂಗತಿ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ದಾಕ್ಷಾಯಿಣಿ ಭಟ್ರವರಿಗೆ   ಕನ್ನಡ ರಂಗಭೂಮಿಯ  ಪರವಾಗಿ ಅಭಿನಂದನೆಗಳು.

                                            ಶಶಿಕಾಂತ ಯಡಹಳ್ಳಿ


ಮಕ್ಕಳ ನಾಟಕದ ವರ್ಕಶಾಪ್


ಅಗ್ನಿವರ್ಣ ನಾಟಕದ ದೃಶ್ಯ


ಕುಣಿಕುಣಿ ನವಿಲೆ ಮಕ್ಕಳ ನಾಟಕ


ಮಂಗಳವಾರ, ಅಕ್ಟೋಬರ್ 27, 2015

‘ವಾಲ್ಮೀಕಿ ಪ್ರಶಸ್ತಿ’ ಆಯ್ಕೆಯಲ್ಲಿ ಲಾಭಿತನ ಹಾಗೂ ಜಾತಿರಾಜಕಾರಣ :


ವಾಲ್ಮೀಕಿ ಪ್ರಶಸ್ತಿ  ಹಿಂದೆ ಯಾರದೋ ಹಿತಾಸಕ್ತಿ :



ವೃತ್ತಿ ಕಂಪನಿ ರಂಗಭೂಮಿ ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ದಶಕಗಳ ಕಾಲ ಕಲಾವಿದೆಯಾಗಿ ತೊಡಗಿಸಿಕೊಂಡಿದ್ದ ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮನವರಿಗೆ 2015 ವಾಲ್ಮೀಕಿ ಪ್ರಶಸ್ತಿ ಯನ್ನು ಅಕ್ಟೋಬರ್ 27 ವಾಲ್ಮೀಕಿ ಜಯಂತಿಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸಚಿವ ಹೆಚ್.ಆಂಜನೇಯರವರು ಕೊಟ್ಟು ಸನ್ಮಾನಿಸಿದ್ದು  ಕನ್ನಡ ರಂಗಭೂಮಿಯವರಿಗೆ ಸಂತಸದ ಸಂಗತಿ. ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪ್ರತಿ ವರ್ಷ ಶ್ರೀ ಮಹಾ ಮಹರ್ಷಿ ವಾಲ್ಮೀಕಿ ಜಯಂತಿಯಂದು  ಆಯ್ದ ಸಾಧಕರೊಬ್ಬರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಕೊಡಮಾಡುತ್ತದೆ. ಐದು ಲಕ್ಷ ರೂಪಾಯಿ ಮೌಲ್ಯದ ಪ್ರಶಸ್ತಿಗೆ ವರ್ಷ ರಂಗಭೂಮಿ ಕಲಾವಿದೆ ನಾಗರತ್ನಮ್ಮನವರನ್ನು ಗುರುತಿಸಿ ಗೌರವಿಸಿದ್ದು ರಂಗಭೂಮಿಗೆ ಹೆಮ್ಮೆಯ ವಿಷಯ.


 ಆದರೆ.. ಗೌರವಾನ್ವಿತ ಪ್ರಶಸ್ತಿ ಯಾವುದೇ ಲಾಬಿ ಇಲ್ಲದೇ, ಯಾರ ಸ್ವಾರ್ಥ ಹಿತಾಸಕ್ತಿಯ ಕೈವಾಡವಿಲ್ಲದೇ ನಾಗರತ್ನಮ್ಮನವರಿಗೆ ದೊರಕಿದ್ದರೆ ವಾಲ್ಮೀಕಿ ಪ್ರಶಸ್ತಿಯ ಸಂಭ್ರಮ ಇನ್ನೂ ಹೆಚ್ಚುತ್ತಿತ್ತು. ಆದರೆ.. ಈಗಿನ ವ್ಯವಸ್ಥೆ ಹೇಗಿದೆ ಎಂದರೆ ಯಾರಿಗಾದರೂ ಪ್ರಶಸ್ತಿ ಬರಬೇಕೆಂದರೆ ಅವರು ಅರ್ಜಿ ಹಾಕಿಕೊಂಡು ಪ್ರಶಸ್ತಿ ಕೊಡಿ ಎಂದು ಕೇಳಿಕೊಳ್ಳಬೇಕು, ಅವರ ಅರ್ಜಿಯ ಹಿಂದೆ ಬಿದ್ದು ಕೆಲವರು ಪ್ರಶಸ್ತಿ ಆಯ್ಕೆ ಕಮಿಟಿಯವರ ಮೇಲೆ ಪ್ರಭಾವ ಬೀರಬೇಕು. ಸಂಬಂಧಿಸಿದ ರಾಜಕಾರಣಿಗಳ ಕೈಕಾಲು ಮತ್ತೊಂದು ಹಿಡಿಯಬೇಕು. ನಾಗರತ್ನಮ್ಮನವರಿಗೆ ದೊರೆತ ಪ್ರಶಸ್ತಿಯ ಹಿಂದೆ ಸಹ ಇಂತಹುದೇ ಕಾಣದ ಕೈವಾಡಗಳ ಮಾಯಾಜಾಲ ಇರುವುದು ಬೇಸರದ ವಿಷಯ.


ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿಯ ಸಾರಥ್ಯವನ್ನು ವಹಿಸಲಾಗಿದ್ದು ಪ್ರೊ.ಬರಗೂರು ರಾಮಚಂದ್ರರವರಿಗೆ. ಆಯ್ಕೆ ವಿಚಾರದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯರವರು ಹೇಳಿಕೆ ನೀಡಿದ್ದಾರೆ. ಹಾಗಾದರೆ ಯಾರ ಪಾತ್ರ ಇರುವುದು ಎಂದು ಒಂಚೂರು ತನಿಖೆ ಮಾಡಿದರೆ ಕಂಡುಬರುವ ಹೆಸರು ಗುಡಿಹಳ್ಳಿ ನಾಗರಾಜರವರದು. ಪ್ರಜಾವಾಣಿ ಬಳಗದಲ್ಲಿ ಪತ್ರಕರ್ತರಾಗಿದ್ದ ಗುಡಿಹಳ್ಳಿಯವರಿಗೆ ಪ್ರಶಸ್ತಿಯನ್ನು ತೆಗೆದುಕೊಳ್ಳುವ ಮತ್ತು ಕೊಡಿಸುವ ವಿದ್ಯೆ ಸಿದ್ದಿಸಿದೆ ಎಂಬುದಕ್ಕೆ ಅವರು ಪ್ರತಿ ವರ್ಷ ತೆಗೆದುಕೊಳ್ಳುವ ಪ್ರಶಸ್ತಿಗಳೇ ಸಾಕ್ಷಿ ಹೇಳುತ್ತವೆ. ಕಳೆದ ವರ್ಷ ರಾಜೋತ್ಸವ ಪ್ರಶಸ್ತಿ, ಅದಕ್ಕಿಂತ ಹಿಂದೆ ಅಕಾಡೆಮಿ ಪ್ರಶಸ್ತಿ... ಹೀಗೆ ಯಾವುದಾದರೊಂದು ಪ್ರಶಸ್ತಿಗಾಗಿ ಲಾಬಿ ನಡೆಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಲೇ ಬಂದಿದ್ದಾರೆ. ಹಾಗೆಯೇ ಗುಬ್ಬಿವೀರಣ್ಣ ಪ್ರಶಸ್ತಿ ಇರಲಿ ಅಥವಾ ಸರಕಾರ ಕೊಡಮಾಡುವ ಯಾವುದೇ ಪ್ರಶಸ್ತಿ ಇರಲಿ ತಮಗೆ ಬೇಕಾದವರಿಗೆ ಕೊಡಿಸುವ ತಂತ್ರಗಾರಿಕೆಯನ್ನು ಗುಡಿಹಳ್ಳಿ ರೂಢಿಸಿಕೊಂಡು ಬಂದಿದ್ದಾರೆ. ಕಳೆದ ಸಲ ಗುಬ್ಬಿ ವೀರಣ್ಣನವರ ಹೆಸರಿನ ಪ್ರಶಸ್ತಿಗೆ ಅವರು ಮಾಡಿದ ಲಾಭಿಕೋರತನದ ಬಗ್ಗೆ ಕೇಳಬೇಕಾದರೆ ಪ್ರಶಸ್ತಿ ಆಯ್ಕೆ ಕಮಿಟಿಯ ಅಧ್ಯಕ್ಷರಾಗಿದ್ದ ಹಿರಿಯ ನಾಟಕಕಾರ ಹಾಲಭಾವಿಯವರನ್ನು ಕೇಳಿದರೆ ಡಿಟೇಲ್ ಆಗಿ ಎಲ್ಲವನ್ನೂ ಹೇಳುತ್ತಾರೆ. ಇಂತಹ ಲಾಭಿಮಾಡುವ ಹಾಗೂ ಪ್ರಭಾವ ಬೀರುವ ಹಿನ್ನಲೆ ಇರುವ ಗುಡಿಹಳ್ಳಿ ನಾಗರಾಜರವರು ಸಲ ವಾಲ್ಮೀಕಿ ಪ್ರಶಸ್ತಿಯನ್ನೂ ಸಹ ತಮ್ಮ ಕುಟುಂಬ ವರ್ಗದವರಿಗೆ ಕೊಡಿಸಿದ್ದು ಸ್ವಜನಪಕ್ಷಪಾತದ ಅತಿರೇಕ ಎನ್ನುವಂತಿದೆ. ಯಾಕೆಂದರೆ ಕೆ.ನಾಗರತ್ಮಮ್ಮ ಬೇರಾರೂ ಅಲ್ಲದೇ ಗುಡಿಹಳ್ಳಿಯವರ ಉಪಪತ್ನಿ ಎಂಬುದು ಅನೇಕ ಜನರಿಗೆ ಗೊತ್ತಿಲ್ಲ

ಪ್ರೊ.ಬರಗೂರು ರಾಮಚಂದ್ರಪ್ಪನವರು
ಪ್ರೊ. ಬರಗೂರರ ಸರ್ವಾಧಿಕಾರ ಮನೋಭಾವಕ್ಕೆ ಬಂಡಾಯ ಸಾಹಿತ್ಯ ಸಂಘಟನೆ ಸರ್ವನಾಶವಾಗಿ ಹೋಯಿತು. ಈಗ ಸಂಘಟನೆಯಲ್ಲಿ ನಾಮಕಾವಸ್ತೆ ಅಳಿದುಳಿದ ಬೆರಳೆಣಿಕೆಯಷ್ಟು ವಿಧೇಯ ಜನರಲ್ಲಿ ಗುಡಿಹಳ್ಳಿ ನಾಗರಾಜರೂ ಒಬ್ಬರು. ಕಳೆದ ಸಲ ನಾಟಕ ಅಕಾಡೆಮಿಗೆ ಎರಡನೇ ಬಾರಿಗೆ ಸದಸ್ಯರಾಗಬೇಕೆಂದು ಪ್ರಯತ್ನಿಸಿದ ಗುಡಿಹಳ್ಳಿಯವರಿಗೆ ಬರಗೂರರು ಇಲಾಖೆ ಮಂತ್ರಿಗಳ ಲೇವಲ್ನಲ್ಲಿ  ಪ್ರಭಾವ ಬೀರಿದರಾದರೂ ಉಮಾಶ್ರೀಯವರು ಗುಡಿಹಳ್ಳಿಯವರ ಹೆಸರನ್ನು ಸದಸ್ಯತ್ವದ ಪಟ್ಟಿಯಿಂದ ತೆಗೆದು ಹಾಕಿದ್ದರು. ಆದರೂ ಪಟ್ಟು ಬಿಡದ ಗುಡಿಹಳ್ಳಿ ನಾಟಕ ಅಕಾಡೆಮಿ ಅಧ್ಯಕ್ಷರ ಬೆನ್ನತ್ತಿ ಹಿಂಬಾಗಿಲ ಮೂಲಕ ಅಡಾಪ್ಟೆಡ್ ಸದಸ್ಯರಾಗಿ ಈಗ ನಾಟಕ ಅಕಾಡೆಮಿಯನ್ನು  ಅಧ್ಯಕ್ಷ ಶೇಖ ಮಾಸ್ತರರ ಹೆಸರಲ್ಲಿ ಆಳುತ್ತಿರುವುದು ರಂಗಕರ್ಮಿಗಳಿಗೆಲ್ಲಾ ಗೊತ್ತಿರುವ ಸಂಗತಿ. ಯಾವಾಗ ವಾಲ್ಮೀಕಿ ಪ್ರಶಸ್ತಿಯ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ಬರಗೂರರನ್ನು ಸರಕಾರ ನಿಯಮಿಸಿತೋ ಆಗ ಅವರ ಹಿಂದೆ ಬಿದ್ದ ಗುಡಿಹಳ್ಳಿಯವರು ತಮ್ಮ ಉಪಪತ್ನಿ ನಾಗರತ್ನಮ್ಮನವರಿಗೆ ಪ್ರಶಸ್ತಿ ಕೊಡಿಸಲೇಬೇಕೆಂದು ದುಂಬಾಲು ಬಿದ್ದರು. ಪ್ರಶಸ್ತಿಗಿಂತಲೂ ಪ್ರಶಸ್ತಿಯ ಜೊತೆಗೆ ಬರುವ ಐದು ಲಕ್ಷ ರೂಪಾಯಿಗಳ ಇಡಿಗಂಟಿನ ಮೇಲೆ ಗುಡಿಹಳ್ಳಿಯವರ ಕಣ್ಣು ಬಿದ್ದಿತ್ತು.


ಗುಡಿಹಳ್ಳಿ ನಾಗರಾಜರವರು
ಗುಡಿಹಳ್ಳಿಯವರ ತಂತ್ರಗಾರಿಕೆಯ ಬಗ್ಗೆ ಒಂದು ಉದಾಹರಣೆ ಕೊಡಬಹುದಾಗಿದೆ. ಡಾ.ಮರುಳಸಿದ್ದಪ್ಪನವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗುಡಿಹಳ್ಳಿಯವರು ಅಕಾಡೆಮಿಯ ಸದಸ್ಯರಾಗಿ ತಮ್ಮನ್ನು ಆಯ್ಕೆ ಮಾಡಿಸಿಕೊಂಡಿದ್ದರು. ಆಗ ಅವರು ಮಾಡಿದ ಮೊದಲ ಕೆಲಸವೇನೆಂದರೆ ತಮ್ಮ ಉಪಪತ್ನಿಗೆ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಕೊಡಿಸಿದ್ದು. ನಂತರ ಸಿಜಿಕೆ ಯವರು ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮತ್ತದೇ ನಾಗರತ್ನಮ್ಮನವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿಸಿದರು. ಆಗ ನಾಗರತ್ನಮ್ಮವರು ಗುಡಿಹಳ್ಳಿಯವರಿಗೆ ಅಕಾಡೆಮಿ ಪ್ರಶಸ್ತಿ ಕೊಡಿಸಲು ಪ್ರಯತ್ನಿಸಿದರಾದರೂ ಸಿಜಿಕೆ ಅದಕ್ಕೆ ಅವಕಾಶ ಕೊಡಲಿಲ್ಲ. ಆಮೇಲೆ ಆರ್.ನಾಗೇಶರವರು ಅಧ್ಯಕ್ಷರಾದ ಅವಧಿಯಲ್ಲಿ ನಾಗರತ್ನಮ್ಮನವರ ಜಾತಿಯವರಾದ ಮಲ್ಲಿಕಾರ್ಜುನ ಕಡಕೋಳರವರು ಅಕಾಡೆಮಿ ಸದಸ್ಯರಾಗಿದ್ದರು. ಆಗ ಕಡಕೋಳರವರ ಮೇಲೆ ಇನ್ನಿಲ್ಲದಂತಹ ಒತ್ತಡ ತಂದು ಆರ್.ನಾಗೇಶರವರ ವಿರೋಧದ ನಡುವೆಯೂ ಗುಡಿಹಳ್ಳಿಯವರು ನಾಟಕ ಅಕಾಡೆಮಿಯ ಅವಾರ್ಡ ಗಿಟ್ಟಿಸಿಕೊಂಡರು. ಹೀಗೆ ನಾಗರತ್ನಮ್ಮನವರ ಹೆಸರು ಹಾಗೂ ಕಲಾಸೇವೆಯನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ನಿರಂತರವಾಗಿ ರೂಢಿಸಿಕೊಂಡ ಗುಡಿಹಳ್ಳಿಯವರು ಸರಕಾರದ ಪ್ರಶಸ್ತಿಗಳನ್ನು ಹಾಗೂ ಅದರಿಂದ ಸಿಗುವ ಬಿಡಿಎ ಸೈಟು ಹಾಗೂ ಇತರೇ ಸರಕಾರಿ ಲಾಭಗಳನ್ನು ಕಾಲಕಾಲಕ್ಕೆ ಪಡೆಯುತ್ತಾ ತಮ್ಮ ಲಾಭಿಕೋರತನವನ್ನು ಮುಂದುವರೆಸಿದ್ದಾರೆ. ಹಿಂದಿನ ಸಲ ಗುಬ್ಬಿವೀರಣ್ಣನವರ ಹೆಸರಿನ ಮೂರು ಲಕ್ಷ ರೂಪಾಯಿಯ ಪ್ರಶಸ್ತಿಯನ್ನು ನಾಗರತ್ನಮ್ಮನವರಿಗೆ ಕೊಡಿಸಲು ಹರಸಾಹಸ ಮಾಡಿ ವಿಫಲರಾಗಿ ಲಕ್ಷ್ಮೀಬಾಯಿ ಏಣಗಿಯವರಿಗೆ ಕೊಡಿಸಿದ್ದರು. ಸಲ ಅದನ್ನು ಪಟ್ಟು ಬಿಡದೇ ಸಾಧಿಸಿ ನಾಗರತ್ನಮ್ಮನವರಿಗೆ ಕೊಡಿಸುವ ಗುರಿಯನ್ನು ಹೊಂದಿದ್ದಾರೆ.

ಗುಡಿಹಳ್ಳಿಯವರು ಪ್ರಜಾವಾಣಿಯಿಂದ ನಿವೃತ್ತರಾಗುವ ಮುನ್ನ ಮನೆಯೊಂದನ್ನು ಕಟ್ಟಿಸಿದ್ದು ಅದಕ್ಕಾಗಿ ಮಾಡಿದ ಸಾಲ ಬೇಕಾದಷ್ಟಿದೆ. ಅದನ್ನು ತೀರಿಸಲು ಹಣದ ಅಗತ್ಯತೆ ತುಂಬಾ ಇದೆ. ಅದಕ್ಕಾಗಿಯೇ ಈಗಾಗಲೇ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಮಂತ್ರಾಲಯದಿಂದ ತಮ್ಮ ಹೆಸರಿಗೂ ಹಾಗೂ ತಮ್ಮ ಮಗನ ಹೆಸರಿಗೂ ನಾಟಕ ಮಾಡಿಸುತ್ತೇನೆಂದು ಲಕ್ಷಾಂತರ ರೂಪಾಯಿ ಅನುದಾನವನ್ನು ಪಡೆದಿದ್ದಾರೆ. ಎಂದೂ ನಾಟಕ ಮಾಡದ ಮಾಡಿಸದ ಗುಡಿಹಳ್ಳಿಯವರು ರಂಗಪ್ರಯೋಗ ಮಾಡಿಸುತ್ತೇನೆಂದು ಹಣ ಪಡೆದಿರುವುದೇ ನಿಜವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಅಚ್ಚರಿಯನ್ನು ತರಿಸಿದೆ. ಈಗ ನಾಗರತ್ನಮ್ಮನವರಿಗೆ ಪ್ರಶಸ್ತಿ ಕೊಡಿಸಿ ಅದರಿಂದ ಬರುವ ಹಣದಿಂದ ಮನೆಯ ಸಾಲ ತೀರಿಸುವ ಅವರ ಯೋಜನೆ ಕಾರ್ಯಗತವಾಗಿದೆ. ಗುಡಿಹಳ್ಳಿಯವರ ಕುಟುಂಬ ಪರಿವಾರದವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ ಬರಗೂರರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ವಾಲ್ಮೀಕಿ ಜನಾಂಗದಲ್ಲಿ ಇನ್ನೂ ಬೇಕಾದಷ್ಟು ಪ್ರಸಿದ್ಧ ಹಾಲಿ ಮಾಜಿ ಕಲಾವಿದೆಯರು ಸಾಧಕರು ಇದ್ದರೂ ನಾಗರತ್ನಮ್ಮನವರನ್ನೇ ಯಾಕೆ ಆಯ್ಕೆ ಮಾಡಿದಿರಿ? ಎಂದು ಪತ್ರಕರ್ತರುಗಳು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯನವರನ್ನು ಕೇಳಿದಾಗ ಪ್ರಶಸ್ತಿ ಆಯ್ಕೆಯಲ್ಲಿ ಸರಕಾರದ ಕೈವಾಡ ಏನೂ ಇಲ್ಲಾ... ಎಲ್ಲಾ ಬರಗೂರು ಸಮಿತಿಯ ನಿರ್ಧಾರ ಎಂದು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡರು.

ಹೌದು.. ಪತ್ರಕರ್ತರ ಪ್ರಶ್ನೆ ಸರಿಯಾಗಿತ್ತು. ರಂಗಕಲಾವಿದರಿಗೆ ಪ್ರಶಸ್ತಿ ಕೊಡಬೇಕು ಎನ್ನುವುದಾಗಿದ್ದರೆ ನಾಗರತ್ನಮ್ಮನವರಿಗಿಂತ ಹಿರಿಯರು ಹಾಗೂ ಸಮಕಾಲೀನರಾದ ಅದೆಷ್ಟೋ ಕಲಾವಿದೆಯರು ಪ್ರಶಸ್ತಿಗೆ ಅರ್ಹರಾಗಿದ್ದರು. ಅದರಲ್ಲಿ ಬಳ್ಳಾರಿ ಜಿಲ್ಲೆಯ ಕಲಾವಿದೆಯರಾಗಿದ್ದ ಸರ್ವಮಂಗಳಾ, ಸೂಗಿ ರತ್ನ, ವರಲಕ್ಷ್ಮೀ, ಶ್ರೀಪದ್ಮಾ, ಎಸ್.ರೇಣುಕಾ, ಭವಾಣಿ... ಮುಂತಾದ ಅದ್ಭುತ ನಟಿಯರಿದ್ದಾರೆ. ಇದರಲ್ಲಿ ಆರ್ಥಿಕವಾಗಿ ಸಮಸ್ಯೆಯಲ್ಲಿರುವವರೂ ಇದ್ದಾರೆ. ಈಗಲೂ ವಿರೂಪಾಪುರ ಅಂಜಿನಮ್ಮ ಎನ್ನುವ ಕಲಾವಿದೆ ಸ್ವತಃ ನಾಟಕಗಳನ್ನು ರಚಿಸಿ, ಇವತ್ತಿಗೂ ಮಹಿಳಾ ತಂಡವನ್ನು ಕಟ್ಟಿಕೊಂಡು ನಾಟಕವಾಡಿಸುತ್ತಿದ್ದಾರೆ. ಅದವಾನಿ ಲಕ್ಷ್ಮೀದೇವಿಯರ ಮಗಳು ವೀಣಾ ಈಗಲೂ ನಟಿಸುತ್ತಲೇ ಇದ್ದಾರೆ. ಆದರೆ ಇವರ ಪರವಾಗಿ ಲಾಭಿ ಮಾಡುವವರಿಲ್ಲ, ಪ್ರಭಾವ ಬೀರುವವರಿಲ್ಲ.. ಹೀಗಾಗಿ ಪ್ರಶಸ್ತಿ ಲಾಭಿಕೋರರ ಸ್ವಹಿತಾಸಕ್ತಿಯ ಪಾಲಾಗಿ ಹೋಯಿತು. ನಾಗರತ್ನಮ್ಮನವರಿಗಿಂತ ಅರ್ಹರಾದ ಅನೇಕ ಕಲಾವಿದರು ಪ್ರಶಸ್ತಿಯಿಂದ ವಂಚಿತರಾದರು.


ನಾಗರತ್ನಮ್ಮ ಮೂಲತಃ ದೇವದಾಸಿಯಾಗಿದ್ದು ನಂತರ ಕಲಾವಿದೆಯಾಗಿ ದೇವದಾಸಿ ಸಮುದಾಯಕ್ಕಾಗಿ ದುಡಿದು ಸಮಾಜಸೇವೆ ಮಾಡಿದ್ದಾರೆ ಎಂದು ಗುಡಿಹಳ್ಳಿ  ಬರಗೂರರ ಮುಂದೆ ಇಲ್ಲಸಲ್ಲದ ಅಂಕಿ ಅಂಶಗಳನ್ನು ಹೇಳಿ ನಂಬಿಸತೊಡಗಿದರು. ಆದರೆ ಸತ್ಯವೇನೆಂದರೆ ನಾಗರತ್ಮಮ್ಮ ದೇವದಾಸಿ ಆಗಿರದೇ ಗುಡಿಹಳ್ಳಿ ಸಿಗುವವರೆಗೂ ಗಂಡುಳ್ಳ ಗರತಿಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಅವರನ್ನು ಒಬ್ಬ ಕಲಾವಿದೆ ಎಂದು ಒಪ್ಪಬಹುದಾದರೂ ಸಮಾಜ ಸೇವಕಿ ಎಂದು ಹೇಳಿದರೆ ಮರಿಯಮ್ಮನಹಳ್ಳಿ ಜನರೇ ನಕ್ಕು ಬಿಡುತ್ತಾರೆ. ಇಷ್ಟಕ್ಕೂ ದೇವದಾಸಿ ಹಾಗೂ ಅವರ ಮಕ್ಕಳುಗಳ ಪುನರ್ವಸತಿ ಬಗ್ಗೆ ಅಥಣಿಯಲ್ಲಿ ಸರಕಾರೇತರ ಸಂಸ್ಥೆಯೊಂದನ್ನು ಮಾಡಿಕೊಂಡ ಬಿ.ಎಲ್.ಪಾಟೀಲ ಎಂಬ ಹಿರಿಯರು ದಶಕಗಳ ಕಾಲದಿಂದ ಕಾರ್ಯತತ್ಪರರಾಗಿದ್ದಾರೆ. ಹಾಗೂ ಬರಗೂರು ಕಮಿಟಿಯ ಮುಂದೆ ಅವರ ಹೆಸರೂ ಪ್ರಸ್ತಾಪವಾಗಿತ್ತುಆದರೆ ಅವರನ್ನು ಬರಗೂರು ಜಾತಿ ಕಾರಣಕ್ಕೆ ರಿಜೆಕ್ಟ್ ಮಾಡಿಬಿಟ್ಟರು. ಯಾಕೆಂದರೆ ಅವರು ಲಿಂಗಾಯತರಾಗಿದ್ದರು. ಬರಗೂರರು ವಾಲ್ಮೀಕಿ ಜನಾಂಗದವರಾಗಿದ್ದರು. ಬರಗೂರರು ತಮ್ಮ ಜಾತಿ ಪ್ರೀತಿಯಿಂದಾಗಿ ವಾಲ್ಮೀಕಿ ಬೇಡ ಜನಾಂಗದವರಿಗೇ ಪ್ರಶಸ್ತಿ ಕೊಡಬೇಕು ಎಂಬ ಹಿಡನ್ ಅಜೆಂಡಾ ಇಟ್ಟುಕೊಂಡಿದ್ದರೆ ಬಿ.ಎಲ್.ವೇಣುರವರಿಗೆ ಕೊಡಬಹುದಾಗಿತ್ತು. 70 ವರ್ಷ ದಾಟಿದ ವೇಣುರವರು ಐವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದರು ಹಾಗೂ ಅದರಲ್ಲಿ ಬಹುತೇಕವು ಸಿನೆಮಾ ಆಗಿವೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿಗಳೂ ದೊರಕಿವೆ. ಜೊತೆಗೆ ಅವರು ವಾಲ್ಮೀಕಿ ಜನಾಂಗದವರೇ ಆಗಿದ್ದಾರೆ. ಅವರ ಹೆಸರೂ ಕೂಡಾ ಆಯ್ಕೆ ಕಮಿಟಿಯಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಬರಗೂರರಿಗೆ ಸಮ್ಮತವಾಗಲಿಲ್ಲ ಯಾಕೆಂದರೆ ಗುಡಿಹಳ್ಳಿ ಎನ್ನುವ ಭೂತ ಹೆಗಲೇರಿ ಕುಳಿತಿತ್ತು.

ಇಷ್ಟಕ್ಕೂ ವಾಲ್ಮೀಕಿ ಪ್ರಶಸ್ತಿಯನ್ನು ಅದೇ ಸಮುದಾಯಕ್ಕೆ ಕೊಡಬೇಕು ಎನ್ನುವ ಯಾವುದೇ ಅಧಿಕೃತ ನಿಯಮಗಳಿಲ್ಲ. ಹಿಂದೆ ಅಂಬೇಡ್ಕರ್ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಜಗಜೀವನರಾವ್ ಪ್ರಶಸ್ತಿ... ಹೀಗೆ ಎಲ್ಲಾ ಸರಕಾರಿ ಪ್ರಶಸ್ತಿಗಳಿಗೆ ಐದಾರು ಜನರನ್ನು ಆಯ್ದು ತಲಾ ಎರಡು ಲಕ್ಷ ರೂಪಾಯಿ ಹಣ ಕೊಟ್ಟು ಗೌರವಿಸಲಾಗುತ್ತಿತ್ತು. ಯಾವಾಗ ಬೇರೆ ಪ್ರಶಸ್ತಿಗಳ ಮೊತ್ತವನ್ನು ಐದು ಲಕ್ಷಕ್ಕೆ ಸರಕಾರ ಏರಿಸಿತೋ ಆಗ ವಾಲ್ಮೀಕಿ ಪ್ರಶಸ್ತಿಗೂ ಐದು ಲಕ್ಷದ ಮೊತ್ತವನ್ನು ನಿಗದಿ ಪಡಿಸಿ ವರ್ಷಕ್ಕೆ ಒಬ್ಬರಿಗೆ ಮಾತ್ರ ಕೊಡಲು ನಿರ್ಧರಿಸಲಾಯಿತು. ಸಮಾಜಕ್ಕೆ ಸಲ್ಲಿಸಿದ ಒಟ್ಟಾರೆ ಸೇವೆಯನ್ನು ಪರಿಗಣಿಸಿ ಯೋಗ್ಯರಾದವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಆದರೆ... ಈಗ ಕನಕಶ್ರೀ ಪ್ರಶಸ್ತಿ ಕುರುಬರಿಗೆ, ಅಂಬೇಡ್ಕರ್ ಪ್ರಶಸ್ತಿ ದಲಿತರಿಗೆ, ವಾಲ್ಮೀಕಿ ಪ್ರಶಸ್ತಿ ಬೇಡರಿಗೆ... ಹೀಗೆ ಜಾತಿಗೊಂದು ಪ್ರಶಸ್ತಿ ಕೊಡುವುದನ್ನು ರೂಢಿಸಿಕೊಳ್ಳಲಾಗಿದೆ. ಬಸವಶ್ರೀ ಪ್ರಶಸ್ತಿ ಮಾತ್ರ ಎಲ್ಲಾ ವರ್ಗದವರಿಗೂ ಎನ್ನುವಂತಾಗಿದೆ. ಎಲ್ಲಾ ವರ್ಗದವರಿಗೂ ಲೇಸನು ಬಯಸಿದ ವಿಶ್ವಮಾನವರಾದ ಬಸವಣ್ಣ, ಕನಕದಾಸ, ಅಂಬೇಡ್ಕರ್, ವಾಲ್ಮೀಕಿಯರನ್ನೆಲ್ಲಾ ಒಂದೊಂದು ಜಾತಿಗೆ ಸೇರಿಸಿ ಅವರ ವ್ಯಾಪ್ತಿಯನ್ನು ಸಂಕುಚಿತಗೊಳಿಸುವುದೇ ದಿವ್ಯ ಚೇತನಗಳಿಗೆ ತೋರಿಸುವ ಅಗೌರವವಾಗಿದೆ. ಇದೆಲ್ಲಾ ಬರಗೂರರಂತಹ ಬುದ್ದಿಜೀವಿಗಳಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಅವರೊಳಗಿರುವ ಜಾತಿಭೂತದ ಬಂಧನದಿಂದ ಬರಗೂರರಿಗೆ ಹೊರಬರಲು ಇಲ್ಲಿವರೆಗೂ ಸಾಧ್ಯವಾಗಿಲ್ಲ.

ಬರಗೂರರ ಜಾತಿ ಪ್ರೀತಿಗೆ ಲೇಟಸ್ಟ್ ಉದಾಹರಣೆ ಹೀಗಿದೆ. ಸರಕಾರ ಇತ್ತೀಚೆಗೆ ಧಾರವಾಡ ಜಿಲ್ಲೆಯ ಶಿಗ್ಗಾಂವನಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯನ್ನು ಆಯ್ಕೆ ಮಾಡಲು ಬರಗೂರು ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿಯನ್ನು ನಿಯಮಿಸಿತ್ತು. ನಿಯಮಾವಳಿಗಳ ಪ್ರಕಾರ ಯಾರಿಗೆ ಇನ್ನೂ ಹತ್ತನ್ನೆರಡು ವರ್ಷ ನಿವೃತ್ತಿಗೆ ಸಮಯವಿದೆಯೋ ಅವರನ್ನು ಉಪಕುಲಪತಿಯಾಗಿ ನಿಯಮಿಸುವಂತಿಲ್ಲ. ಆದರೆ ಬರಗೂರರು ನಿಬಂಧನೆಯನ್ನು ಕಡೆಗಣಿಸಿ ತಮ್ಮ ಜಾತಿಜನಾಂಗದ ಮಂಜುನಾಥ ಬೇವಿನಕಟ್ಟಿಯವರನ್ನು ಉಪಕುಲಪತಿ ಸ್ಥಾನಕ್ಕೆ ರೆಕಮೆಂಡ್ ಮಾಡಿ ತಮ್ಮ ಜಾತಿಪ್ರೀತಿಯನ್ನು ಮೆರೆದು ಜ್ಯಾತ್ಯಾತೀತವಾದಿಗಳ ಕಣ್ಣಲ್ಲಿ ಚಿಕ್ಕವರಾದರು. ಈಗಲೂ ಸಹ ಸರಕಾರ ಮಾಡಿದ ಮೊದಲ ತಪ್ಪೇ ಬರಗೂರರನ್ನು ವಾಲ್ಮೀಕಿ ಪ್ರಶಸ್ತಿಯ ಕಮಿಟಿ ಅಧ್ಯಕ್ಷರನ್ನಾಗಿಸಿದ್ದು. ಯಾಕೆಂದರೆ ಸ್ವತಃ ಬರಗೂರು ಬೇಡ ಜನಾಂಗಕ್ಕೆ ಸೇರಿದವರಾಗಿದ್ದಾರೆ. ವಾಲ್ಮೀಕಿ ಪ್ರಶಸ್ತಿಗೆ ಜ್ಯಾತ್ಯಾತೀತವಾಗಿ ಆಯ್ಕೆ ಮಾಡಬೇಕಾದಾಗ ಅದೇ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಸಮಿತಿಗೆ ಅಧ್ಯಕ್ಷನನ್ನಾಗಿಸಿದರೆ ಸಹಜವಾಗಿ ಆತ ತನ್ನದೇ ಜಾತಿಯವರನ್ನು ಆಯ್ಕೆ ಮಾಡುತ್ತಾನೆ. ಈಗ ಆಗಿದ್ದೂ ಸಹ ಅದೇ. ಜಾತಿ ಟ್ರಂಪ್ ಕಾರ್ಡನ್ನು ಹಿಡಿದುಕೊಂಡೇ ಗುಡಿಹಳ್ಳಿ ಬರಗೂರರ ತಲೆಯೇರಿದ್ದು. ಕೊನೆಗೂ ಬರಗೂರರ ಜ್ಯಾತ್ಯಾತೀತ ಮುಖವಾಡ ಕಳಚಿಬಿದ್ದು ತಮ್ಮದೇ ಸಮುದಾಯದ ನಾಗರತ್ನಮ್ಮನವರಿಗೆ ಪ್ರಶಸ್ತಿ ಕೊಡಮಾಡುವ ಮೂಲಕ ಬಂಡಾಯದ ಅಧಿನಾಯಕನ ಜಾತಿವಾದಿತನ ಜಗಜ್ಜಾಹೀರಾಯಿತು.
  
ಸೀನಿಯಾರಿಟಿಯಲ್ಲಿ, ಪ್ರತಿಭೆಯಲ್ಲಿ, ಸಾಮಾಜಿಕ ಸೇವೆಯಲ್ಲಿ ಹಿರಿಯರಾದ ಹಲವಾರು ಜನರು ಕರ್ನಾಟಕದಲ್ಲಿದ್ದರು. ಕಲಾವಿದರಿಗೇ ಪ್ರಶಸ್ತಿ ಕೊಡಬೇಕು ಎನ್ನುವುದಾಗಿದ್ದರೆ ಈಗಲೂ ಕ್ರಿಯಾಶೀಲರಾಗಿರುವ ಸುಬದ್ರಮ್ಮ ಮನ್ಸೂರರಂತಹ ಪ್ರತಿಭಾನ್ವಿತ ಕಲಾವಿದೆಗೆ ವಾಲ್ಮೀಕಿ ಪ್ರಶಸ್ತಿ ಕೊಡಬೇಕಾಗಿತ್ತು. ಆದರೆ ನಾಗರತ್ನಮ್ಮನವರು ಅಭಿನಯಿಸುವುದನ್ನು ಬಿಟ್ಟು ರಂಗಕ್ರಿಯೆಯಿಂದ ನಿವೃತ್ತರಾಗಿ ಈಗಾಗಲೇ ದಶಕಗಳೇ ಉರುಳಿವೆ ಹಾಗೂ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ಆರ್ಥಿಕವಾಗಿ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿರುವ ಹಾಗೂ ಹಾಲಿ ಇನ್ನೂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಸಾಧಕರಿಗೆ ಪ್ರಶಸ್ತಿ ಕೊಟ್ಟಿದ್ದರೆ ಪ್ರಶಸ್ತಿಗೂ ಒಂದು ತೂಕ ಬರುತ್ತಿತ್ತು ಹಾಗೂ ಆಯ್ಕೆ ಮಾಡಿದವರಿಗೂ ಹೆಸರು ಬರುತ್ತಿತ್ತು. ದೇವದಾಸಿಗಳ ಪುನರ್ವಸತಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಪಾಟೀಲರಿಗೆ 5 ಲಕ್ಷ ರೂಪಾಯಿಗಳ ಪ್ರಶಸ್ತಿ ಬಂದಿದ್ದರೆ ಹಣ ದೇವದಾಸಿಗಳ ಕಲ್ಯಾಣಕ್ಕೆ ಬಳಕೆಯಾಗುತ್ತಿತ್ತು. ಹಾಗೆಯೇ ತಮ್ಮದಲ್ಲದ ಜಾತಿಯವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿದ್ದರೂ ಬರಗೂರರ ಮೇಲಿನ ಜಾತಿವಾದಿ ಆರೋಪ ಕಡಿಮೆಯಾಗಬಹುದಾಗಿತ್ತು. ವಾಲ್ಮೀಕಿ ಪ್ರಶಸ್ತಿ ಆಯ್ಕೆಯಲ್ಲಿ ಕೊನೆಗೂ ಲಾಭಿಕೋರತನ, ಜಾತಿವಾದಿತನ ಹಾಗೂ ಸ್ವಜನಪಕ್ಷಪಾತಗಳು ಗೆದ್ದವು. ಗುಡಿಹಳ್ಳಿ ಹಾಗೂ ಬರಗೂರರಂತಹ ಅವಕಾಶವಾದಿಗಳ ಸಣ್ಣತನಗಳು ಬಯಲಾದವು... ನಿಜವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅರ್ಹ ಸಾಧಕರು ಪ್ರಶಸ್ತಿಯಿಂದ ವಂಚಿತರಾದರು. ಏನೇ ಆಗಲಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕೆ.ನಾಗರತ್ನಮ್ಮನವರನ್ನು ಅಭಿನಂದಿಸಲೇಬೇಕಿದೆ. ಪ್ರಶಸ್ತಿಯ ಹಿಂದಿರುವ ತಂತ್ರಗಾರಿಕೆ, ಸ್ವಜನಪಕ್ಷಪಾತ, ಲಾಭಿಕೋರತನ ಹಾಗೂ ಜಾತೀಯತೆಗಳನ್ನು ಪ್ರಜ್ಞಾವಂತರು ಖಂಡಿಸಲೇಬೇಕಿದೆ


ವಾಲ್ಮೀಕಿ ಪ್ರಶಸ್ತಿ ಪ್ರಧಾನದ ಸಮಯದಲ್ಲಿ ಮಾತಾಡಿದ ಬರಗೂರ ರಾಮಚಂದ್ರಪ್ಪನವರು "ಮಹಾಪುರುಷರ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡುವ ಪ್ರಯತ್ನವನ್ನು ಮಾಡಬಾರದು, ಇಡೀ ಸಮಾಜದ ಆಸ್ತಿಯಾಗಿರುವ ವಾಲ್ಮೀಕಿ ಬಸವಣ್ಣನಂತವರನ್ನು ಜಾತಿಗೆ ಸೀಮಿತಗೊಳಿಸಿ ಮತ ಬ್ಯಾಂಕ್ ಆಗಿ ಪರಿವರ್ತಿಸುವ ರಾಜಕೀಯ ಮುಖಂಡರ ಆಸೆಗೆ ಅವಕಾಶ ನೀಡಬಾರದು ಹಾಗೂ ಮಹಾಪುರುಷರನ್ನು ಜಾತಿಯಿಂದ ನೋಡದೇ ಸಾಂಸ್ಕೃತಿಕ ನಾಯಕರನ್ನಾಗಿ ಉಳಿಸುವ ಜಯಂತಿ ಆಚರಣೆ ಸೂಕ್ತ...." ಎಂದು ಹೇಳಿದರು. ಬರಗೂರರು ಸಾರ್ವಜನಿಕವಾಗಿ ಹೇಳುವುದೊಂದು ಹಾಗೂ ಖಾಸಗಿಯಾದ ಆಚರಣೆ ಮತ್ತೊಂದು ಎನ್ನುವುದು ಅವರ ಜೊತೆಗೆ ಒಡನಾಡಿದವರಿಗೆಲ್ಲಾ ಗೊತ್ತಿರುವ ಸಂಗತಿ. ವಾಲ್ಮೀಕಿಯನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎನ್ನುವುದೇ ಬರಗೂರರ ಅಭಿಮತವಾಗಿದ್ದರೆ ಯಾಕೆ ವಾಲ್ಮೀಕಿ ಜಾತಿಯ ನಾಗರತ್ನಮ್ಮನವರನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದ್ದರು. ಇದು ಜಾತಿವಾದಿತನ ಅಲ್ಲವೇ? ವಾಲ್ಮೀಕಿಯನ್ನು ಜಾತಿಯ ಬಲೆಯಿಂದ ಬಿಡಿಸಬೇಕೆಂದಿದ್ದರೆ ಅನ್ಯ ಜಾತಿಯ ಯೋಗ್ಯ ಸಾಧಕನನ್ನು ಗುರುತಿಸಿ ಪ್ರಶಸ್ತಿ ಕೊಡಿಸಬಹುದಿತ್ತಲ್ಲಾ. ವಾಲ್ಮೀಕಿ ಪ್ರಶಸ್ತಿಯನ್ನು ಅದೇ ಜಾತಿಯವರಿಗೆ  ಕೊಡಬೇಕು ಎನ್ನುವ ಒತ್ತಡ ರಾಜಕೀಯ ವಲಯದಿಂದಲೇ ಬಂದಿತ್ತು ಎನ್ನುವುದಾದರೆ ಪ್ರತಿಭಟಿಸಿ ಪ್ರಶಸ್ತಿ ಆಯ್ಕೆ ಕಮಿಟಿಯಿಂದ ಹೊರಬರಬಹುದಾಗಿತ್ತಲ್ಲವೇ?  ಪ್ರಶಸ್ತಿ ಆಯ್ಕೆಯಲ್ಲಿ ಜಾತೀಯತೆ ಹಾಗೂ ಸ್ವಜನಪಕ್ಷಪಾತ ಮಾಡಿದ ಬರಗೂರರಿಗೆ 'ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು' ಎಂದು ಹೇಳುವ ಹಕ್ಕೇ ಇಲ್ಲ. ಬರಗೂರರೇ ಜಾತಿರಾಜಕಾರಣ ಮಾಡಿದ್ದರಿಂದಾಗಿ ರಾಜಕೀಯ ಮುಖಂಡರ ಮತಬ್ಯಾಂಕ್ ರಾಜಕೀಯದ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲಾ. ಆದರೂ 'ಹೇಳುವುದು ಸಿದ್ದಾಂತ ಮಾಡುವುದು ರಾದ್ದಾಂತ' ಎನ್ನುವ ಕೆಟಗರಿಯ ಬರಗೂರರಿಗೆ ಬುದ್ದಿ ಹೇಳುವವರಾದರೂ ಯಾರು? ಅವರಿಗೆ ತಿಳಿಹೇಳುವುದು ಇಲಿಗಳು ಬೆಕ್ಕಿಗೆ ಗಂಟೆ ಕಟ್ಟುವುದೂ ಒಂದೇ ಆಗಿದೆ.  ಕನಿಷ್ಟ ಬರೆದಂತೆ ಬದುಕುವ, ಹೇಳಿದಂತೆ ನಡೆದುಕೊಳ್ಳುವ ಸಾಮಾನ್ಯ ತಿಳುವಳಿಕೆ ಇದ್ದಲ್ಲಿ ಬರಗೂರು ಹೀಗೆ ವಿರೋಧಾಬಾಸದ ಬದುಕು ಬದುಕುತ್ತಿರಲಿಲ್ಲ. ಇತಿಹಾಸ ಇಂತಹ ಎಡಬಿಡಂಗಿ ಬುದ್ದಿಜೀವಿಗಳನ್ನೆಂದೂ ಕ್ಷಮಿಸುವುದಿಲ್ಲ. ವಿವೇಚನೆ, ಪ್ರಜ್ಞೆ ಎನ್ನುವುದೇನಾದರೂ ಇದ್ದಲ್ಲಿ ಬರಗೂರು ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಹೇಳಿದ ಮಾತಿಗೂ ಹಾಗೂ ಪ್ರಶಸ್ತಿ ಕೊಡಿಸುವಾಗ ತೆಗೆದುಕೊಂಡ ಜಾತಿಪರ ನಿರ್ಧಾರಗಳಿಗೂ ಹೋಲಿಸಿಕೊಂಡು ನೋಡಲಿ.. ಬರಗೂರು ಹಾಗೂ ಗುಡಿಹಳ್ಳಿಯಂತವರಿಗೆ ಮನಸ್ಸಾಕ್ಷಿ ಎನ್ನುವುದು ಇನ್ನು ಒಂದಿಷ್ಟಾದರೂ ಇದ್ದರೆ ಆದ ತಪ್ಪಿಗೆ ಪಶ್ಚಾತ್ತಾಪ  ಪಡಬೇಕಿದೆ. ಸ್ವಜನಪಾತ, ಜಾತಿ ಪ್ರೀತಿಗಳನ್ನೆಲ್ಲಾ ಬದಿಗಿಟ್ಟು ಇವರಿಗೆ ಎಲ್ಲವನ್ನೂ ಕೊಟ್ಟ ಸಮಾಜದ ಋಣಸಂದಾಯವನ್ನು ಪ್ರಾಮಾಣಿಕವಾಗಿ ಮರುಪಾವತಿಸುವುದನ್ನು ರೂಢಿಸಿಕೊಳ್ಳಲಿ.  


                             -ಶಶಿಕಾಂತ ಯಡಹಳ್ಳಿ