ಮಂಗಳವಾರ, ಡಿಸೆಂಬರ್ 27, 2016

ಸಿಂಗಾರೆವ್ವನ ಅರಮನೆಯಲ್ಲಿ ಮಹಿಳೆಯ ತಲ್ಲಣಗಳ ಅನಾವರಣ :



ರಂಗವಿಮರ್ಶೆ

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಲಿಪಶುವಾಗುವ ಮಹಿಳೆಯ ತಳಮಳಗಳನ್ನು ತೋರಿಸುವ ಕಂಚುಕಿ ನಾಟಕವು ಸಹಿಸುವಷ್ಟು ಸಹಿಸಿದ ಮಹಿಳೆ ಸಿಡಿದೆದ್ದು ಪ್ರತಿಕಾರಕ್ಕೆ ನಿಂತರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತದೆ.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಟಕೋತ್ಸವದಲ್ಲಿ  ಡಿಸೆಂಬರ್ 27ರಂದು ನಟರಂಗದ ಕಲಾವಿದರುಗಳು ಕಂಚುಕಿ ನಾಟಕವನ್ನು ಅಭಿನಯಿಸಿದರು. ಡಾ.ಚಂದ್ರಶೇಖರ್ ಕಂಬಾರರರು ಬರೆದ ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಯನ್ನು  ದಿವ್ಯಾ ಕಾರಂತರು ಕಂಚುಕಿ ಹೆಸರಲ್ಲಿ ರಂಗರೂಪಾಂತರಗೊಳಿಸಿ ನಿರ್ದೇಶಿಸಿದ್ದಾರೆ.

ಆಸ್ತಿ ಆಸೆಗೆ ಮಗಳನ್ನು ರೋಗಿಷ್ಟ ದೇಸಾಯಿಗೆ ಮದುವೆ ಮಾಡಿಕೊಡುವ ಗೌಡನು ಮಗಳನ್ನು ದಾಳವಾಗಿ ಬಳಸಿ ಶೋಷಿಸಿದರೆ... ನಪುಂಸಕನಾದ ದೇಸಾಯಿ ಬಯಲಾಟದ ಖಯಾಲಿಗೆ ಬಿದ್ದು ಸಿಂಗಾರೆವ್ವನನ್ನು ನಿರ್ಲಕ್ಷಿಸಿ ಆಕೆಯ ವಯೋಸಹಜ ಭಾವನೆ ಬಯಕೆಗಳನ್ನು ಅರ್ಥಮಾಡಿಕೊಳ್ಳದೇ ಮಾನಸಿಕ ಹಿಂಸೆಗೆ ಕಾರಣನಾಗುತ್ತಾನೆ. ಗೌಡನು ತನ್ನ ತಾಯಿಯ ಕೊಲೆಮಾಡಿ ತನ್ನನ್ನು ಜೈಲುಪಾಲು ಮಾಡಿದ ಸೇಡು ತೀರಿಸಿಕೊಳ್ಳಲು ಕಾತರಿಸುವ ಮಾರಿಯಾ ದೇಸಾಯಿಯವರ ನಂಬಿಕೆ ಸಂಪಾದಿಸಿ ಸಿಂಗಾರೆವ್ವನನ್ನು ಹಿಂಸಿಸುತ್ತಾನೆ. ದೇಸಾಯಿಯ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಶೆಟ್ಟಿ ಆತನ ಅರಮನೆಯನ್ನು ಪಡೆಯಲು ಕುತಂತ್ರ ಮಾಡುತ್ತಾನೆ. ಹೀಗೆ.. ಈ ಎಲ್ಲಾ ಗಂಡಸರ ಸ್ವಾರ್ಥ ಹಾಗೂ ದುರಹಂಕಾರಗಳಿಂದಾಗಿ ಅಮಾಯಕ ಸಿಂಗಾರೆವ್ವ ನಲುಗಿ ಹೋಗುತ್ತಾಳೆ. ಕೊನೆಗೆ ರೋಸತ್ತು ಹೋಗಿ ವಾರಸುದಾರರಿಲ್ಲದಿದ್ದರೆ ಇಡೀ ಅರಮನೆ ಅನ್ಯರ ಪಾಲಾಗುವುದೆಂದು ಅರಿತು ಮಾರಿಯಾನನ್ನೇ ಕೂಡಿ ಬಸಿರಾಗುತ್ತಾಳೆ. ಆ ವಿಷಯ ತಿಳಿದ ದೇಸಾಯಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಗಂಡನನ್ನು ಕೊಲೆ ಮಾಡಿದ ಆರೋಪವನ್ನು ಹೊತ್ತುಕೊಂಡ ಸಿಂಗಾರೆವ್ವ ಜೈಲಿಗೆ ಹೋಗುತ್ತಾಳೆ. ಇದು ಕಂಚುಕಿ ನಾಟಕದ ಸಂಕ್ಷಿಪ್ತ ಕಥೆ.

ಉಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೇಗೆಲ್ಲಾ ಶೋಷಣೆಗೆ ಒಳಗಾಗುತ್ತಾಳೆ ಎನ್ನುವುದನ್ನು ಈ ನಾಟಕ ಸೊಗಸಾಗಿ ಹೇಳುತ್ತದೆ.  ಸಿಂಗಾರೆವ್ವನನ್ನು ಪುರುಷರೆಲ್ಲಾ ಒಂದೊಂದು ರೀತಿ ಬಳಸಿಕೊಳ್ಳಲು ನೋಡುತ್ತಾರೆ.  ಅಪ್ಪ ಆಸ್ತಿಗಾಗಿ ಮಗಳನ್ನೇ ದಾಳವಾಗಿ ಬಳಿಸಿದರೆ.. ಗಂಡ ತನ್ನ ಪ್ರತಿಷ್ಟೆಗಾಗಿ ಮದುವೆಯಾಗಿ ಹೆಂಡತಿಯ ಬೇಡಿಕೆಗೆ ಸ್ಪಂದಿಸದೇ ಕಡೆಗಣಿಸುತ್ತಾನೆ. ಮನೆಯ ಆಳು ಮಾರಿಯಾ ಸಹ ಆಕೆಯ ಮೇಲೆ ದೌರ್ಜನ್ಯ ಮಾಡಿ ಆಕೆಯ ಅಪ್ಪನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಹೀಗೆ.. ಪಿತ, ಪತಿ ಹಾಗೂ ಆಳು ಈ ಮೂವರ ವಿಭಿನ್ನ ರೀತಿಯ ದಮನಕ್ಕೆ ತುತ್ತಾಗಿ ಸಿಂಗಾರೆವ್ವ ತತ್ತರಿಸಿ ಹೋಗುತ್ತಾಳೆ. ಹೆಣ್ಣು ಪ್ರಕೃತಿಯ ಪ್ರತೀಕವಾಗಿದ್ದು ಸಹಿಸಿಕೊಳ್ಳುವಷ್ಟು ಸಹಿಸಿಕೊಂಡು ಸಿಡಿದೇಳುವುದು ಶತಸಿದ್ಧ. ಅದೇ ರೀತಿ ಸಿಂಗಾರೆವ್ವ ಸಹ ಆಳುಮಗ ಮಾರಿಯಾನನ್ನು ಬಳಸಿಕೊಂಡು ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ. ಆಕೆಗೆ ಎಲ್ಲದರಿಂದ ಪಾರಾಗುವ ಏಕೈಕ ಮಾರ್ಗವಾಗಿ ಮಾರಿಯಾ ಗೋಚರಿಸುತ್ತಾನೆ. ಅರಮನೆಗೆ ವಾರಸುದಾರನನ್ನು ಕೊಡುವುದು, ದೈಹಿಕ ಬಯಕೆ ತೀರಿಸಿಕೊಳ್ಳುವುದು ಹಾಗೂ ದೌರ್ಬಲ್ಯ ಗೊತ್ತಿದ್ದೂ ವಂಚಿಸಿದ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳುವುದು ಸಿಂಗಾರೆವ್ವನ ನಿರ್ಧಾರವಾಗಿತ್ತು. ಅದೆಲ್ಲದರಲ್ಲೂ ಯಶಸ್ವಿಯೂ ಆದ ಆಕೆ ಯಾಕೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಗಂಡನನ್ನು ಕೊಲೆ ಮಾಡಿದೆನೆಂದು ಒಪ್ಪಿಕೊಂಡು ಜೈಲಿಗೆ ಹೋದಳು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.


ನೈತಿಕ ಅನೈತಿಕತೆಗಳನ್ನು ಮೀರಿ ಸಿಂಗಾರೆವ್ವನ ವ್ಯಕ್ತಿತ್ವವನ್ನು ಕಂಬಾರರು ಬಲು ಸಂಕೀರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ದುರ್ಬಲ ಪತಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಪರಪತ್ನೀ ಪೀಡಕ ಮಾರಿಯಾನನ್ನೇ ಬಯಸಿ ಕೂಡುತ್ತಾಳೆ. ಇದು ಸಹ ದೈಹಿಕ ಬಯಕೆಗಾಗಿ ಅಥವಾ ವಾರಸುದಾರಿಕೆಗಾಗಿ ಎಂದೇ ತಿಳಿದರೂ ಹೆಂಡತಿ ಗರ್ಭಿಣಿ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ಗಂಡನನ್ನು ತಾನೇ ಕೊಲೆ ಮಾಡಿದೆ ಎಂದು ಯಾಕೆ ಒಪ್ಪಿಕೊಂಡಳು?. ಮಾಡದ ಕೊಲೆಯನ್ನು ಮಾಡಿದ್ದೇನೆಂದು ಒಪ್ಪಿಕೊಳ್ಳುವಷ್ಟು ತಪ್ಪಿತಸ್ತ ಭಾವನೆ ಅವಳನ್ನು ಕಾಡಿತಾ? ಗೊತ್ತಿಲ್ಲ. ಒಂದು ಹಂತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದೆದ್ದ ಮಹಿಳೆಯೆಂದು ಸಿಂಗಾರೆವ್ವನನ್ನು ಪರಿಗಣಿಸುವಷ್ಟರಲ್ಲಿ ಆಕೆ ಪೊಲೀಸರಿಗೆ ಶರಣಾಗಿದ್ದು ಪಲಾಯಣವಾದವೆನಿಸುತ್ತದೆ. ತನ್ನ ಅಹಮಿಕೆಗೆ ಏಟು ಬಿದ್ದಾಗ ಸಹಿಸದೇ ತಾನೇ ತಾನಾಗಿ ಸತ್ತ ದೇಸಾಯಿಯ ಸಾವನ್ನು ಸಿಂಗಾರೆವ್ವ ಒಪ್ಪಿಕೊಂಡು ಏನು ಸಾಧಿಸಿದಳು? ಅರಮನೆ ಅನಾಥವಾಯಿತು. ಇಲ್ಲದ ಅಪವಾದ ತಲೆಗೇರಿತು. ಇನ್ನೂ ಹುಟ್ಟದ ಮಗುವೂ ತಾಯಿಯ ಜೊತೆಗೆ ಜೈಲು ಪಾಲಾಯಿತು. ಒಂದು ಅನರ್ಥದ ವಿರುದ್ದ ಪ್ರತಿಭಟಿಸಲು ಹೋಗಿ ಇನ್ನೊಂದಿಷ್ಟು ಅನರ್ಥಗಳನ್ನು ಆಹ್ವಾನಿಸಿದಂತಾಯಿತು. 
ಹೆಣ್ಣು ಅದೆಷ್ಟೇ ದೈರ್ಯ ತೋರಿದರೂ ಮಾನಸಿಕವಾಗಿ ದುರ್ಬಲಳೇ ಎನ್ನುವುದನ್ನು ಸಿಂಗಾರೆವ್ವನ ಪ್ರಕರಣ ಸಾಬೀತುಪಡಿಸಿದಂತಾಗಿದೆ. ಮಹಿಳೆ ರೆಬೆಲ್ ಆದಷ್ಟೂ ದುರಂತಕ್ಕೆ ಒಳಗಾಗುತ್ತಾಳೆಂಬ ಸನಾತನವಾದಿಗಳ ಥೀಯರಿಯನ್ನು ಪುರುಷರಾಗಿ ಕಂಬಾರರು ಕಾದಂಬರಿಯಲ್ಲಿ ಪ್ರತಿಪಾದಿಸಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಒಬ್ಬ ಮಹಿಳೆಯಾಗಿ ಈ ನಾಟಕದ ನಿರ್ದೇಶಕಿ ಕ್ಲೈಮ್ಯಾಕ್ಸನ್ನು ಬದಲಾಯಿಸಬಹುದಾಗಿತ್ತು. ಅರಸೊತ್ತಿಗೆಯ ಹುಸಿ ಪ್ರತಿಷ್ಟೆಯನ್ನು ಒಡೆದು ಹಾಕಿದ ಸಿಂಗಾರೆವ್ವ ಅರಮನೆಯಲ್ಲೇ ಇದ್ದು ವಾರಸುದಾರ ಮಗುವನ್ನು ಬೆಳೆಸುವ ನಿರ್ಧಾರ ಕೈಗೊಂಡಿದ್ದರೆ ನಿಜಕ್ಕೂ ಶೋಷಿತ ಮಹಿಳೆಯರಿಗೆ ಮಾದರಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ನಿರ್ದೇಶಕಿ ಯೋಚಿಸುವುದುತ್ತಮ. ಕಾದಂಬರಿಯಲ್ಲಿ ಇದ್ದದ್ದನ್ನು ಇದ್ದಂಗೆ ಹೇಳದೇ ನಿರ್ದೇಶಕಿ ತಮ್ಮ ಕ್ರಿಯಾಶೀಲತೆ ಹಾಗೂ ವಿವೇಚನೆಯನ್ನು ಬಳಸಿಕೊಂಡರೆ ಗಂಡಸರ ದಬ್ಬಾಳಿಕೆಗೆ ಈಡಾದ ಸಿಂಗಾರೆವ್ವನಂತಹ ಅನೇಕ ನೊಂದು ಬೆಂದ ಮಹಿಳೆಯರಿಗೆ ಸಾಂತ್ವನ ಹೇಳಬಹುದಾಗಿದೆ ಹಾಗೂ ಮಹಿಳೆಯನ್ನು ಶೋಷಿಸುವ ಪುರುಷರಿಗೂ ಎಚ್ಚರಿಕೆ ಕೊಡಬಹುದಾಗಿದೆ.

ಉಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯ ದುರಹಂಕಾರ, ದೌರ್ಬಲ್ಯಗಳನ್ನು ಅನಾವರಣಗೊಳಿಸುತ್ತಲೇ ಪಾಳೇಗಾರಿಕೆಯ ಸಂಸ್ಕೃತಿಯ ಅವನತಿಯನ್ನು ಕಟ್ಟಿಕೊಡುವ ಕಂಬಾರರ ಸಿಂಗಾರೆವ್ವ... ಕಾದಂಬರಿಯು ಈಗಾಗಲೇ ನಾಟಕವಾಗಿ ಪ್ರದರ್ಶನವಾಗಿದೆ.. ಲಕ್ಷ್ಮೀಚಂದ್ರಶೇಖರವರು ಏಕವ್ಯಕ್ತಿ ಪ್ರಯೋಗವಾಗಿಸಿದ್ದಾರೆ ಹಾಗೂ ನಾಗಾಭರಣರವರು ಚಲನಚಿತ್ರವಾಗಿ ನಿರ್ದೇಶಿಸಿದ್ದಾರೆ. ಮನೆಯ ಕೆಲಸದಾಳು ಸೀನಿಂಗಿಯ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುವ ಕಾದಂಬರಿಯ ನಿರೂಪಣಾ ಶೈಲಿಯನ್ನು ಬದಲಾಯಿಸಿ ಪಾತ್ರ ಹಾಗೂ ಸನ್ನಿವೇಶಗಳ ಮೂಲಕವೇ ಪ್ರಸ್ತುತಗೊಂಡ ಈ ಕಂಚುಕಿ ನಾಟಕದ ರೀತಿ ಅನನ್ಯವಾಗಿದೆ. ನಿರ್ದೇಶಕಿ ತಮ್ಮ ದೃಶ್ಯ ನಿರ್ಮಿತಿಯ ಮಿತಿಯಲ್ಲಿಯೇ ಉತ್ತಮ ನಾಟಕವನು ಕಟ್ಟಿಕೊಟ್ಟಿದ್ದಾರೆ.


ಆರಂಭದ ಚಿಮನಾ ನೃತ್ಯದ ದೃಶ್ಯ ಅಸಂಗತವೂ ಹಾಗೂ ಅಸಂಬದ್ದವಾಗಿಯೂ ಮೂಡಿಬಂದಿದೆ. ಆ ದೃಶ್ಯವನ್ನು ತೆಗೆದಿದ್ದರೂ ನಾಟಕಕ್ಕೆ ಯಾವುದೇ ಬಾಧೆ ಬರುತ್ತಿರಲಿಲ್ಲ. ತದನಂತರದ ದೃಶ್ಯಗಳು ದೃಶ್ಯ ಶ್ರೀಮಂತಿಕೆಯಿಂದಾ ಕೂಡಿವೆ. ದೇಸಾಯಿಯ ಅರಮನೆಯಂತೆ ಅದ್ದೂರಿ ರಿಯಾಲಿಸ್ಟಿಕ್ ಮಾದರಿಯ ಸೆಟ್ ಹಾಕಿ ನಾಟಕಕ್ಕೆ ಭವ್ಯತೆಯನ್ನು ತಂದುಕೊಟ್ಟಿದ್ದಾರೆ. ಆದರೆ.. ರಂಗವೇದಿಕೆಯ ತುಂಬಾ ದೊಡ್ಡ ಸೆಟ್‌ಗಳನ್ನು ಹಾಕಿದಷ್ಟೂ ನಟರು ಅದೆಷ್ಟೇ ಎಫರ್ಟ ಹಾಕಿದರೂ ಕುಬ್ಜರಾಗುತ್ತಾ ಹೋಗುತ್ತಾರೆಂಬುದು ಈ ನಾಟಕ ನೋಡಿದವರಿಗೆ ಅನ್ನಿಸದೇ ಇರದು. ಈ ನಾಟಕದ ಎಲ್ಲಾ ಕಲಾವಿದರೂ ಪಾತ್ರೋಚಿತವಾಗಿ ಪೈಪೋಟಿಯ ಮೇಲೆ ನಟಿಸಿ ಪ್ರದರ್ಶವನ್ನು ಯಶಸ್ವಿಯಾಗಿಸಿದ್ದಾರೆ. ಸಿಂಗಾರೆವ್ವಳಾಗಿ ನಂದಿನಿ ಮೂರ್ತಿಯವರ ಭಾವಪೂರ್ಣ ಅಭಿನಯ ನೋಡುಗರನ್ನು ಕಾಡುವಂತಿದೆ. ಸಿಂಗಾರೆವ್ವನನ್ನು ಮೀರಿಸುವಂತಹ ನಟನೆಯನ್ನು ಶೀನಿಂಗಿ ಪಾತ್ರದ ಸವಿತಾ ಕೊಟ್ಟಿದ್ದಾರೆ. ಸರಗಮ್ ದೇಸಾಯಿ ಪಾತ್ರದ ಪಡಿಯಚ್ಚೇನೋ ಎನ್ನುವ ಹಾಗೆ ಭಾರದ್ವಾಜ್ ನಟಿಸಿದ್ದು, ಮಾರ‍್ಯಾನ ಪಾತ್ರಕ್ಕೆ ಕೌಸ್ತುಭ ಜಯಕುಮಾರ್ ಜೀವತುಂಬಿದ್ದಾರೆ.

ದೃಶ್ಯದ ಅಗತ್ಯಕ್ಕೆ ತಕ್ಕಂತೆ ಮೂಡಿ ಬಂದ ಭಾವಗೀತೆಗಳು ಹಾಗೂ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ಬೆಳವಾಡಿಯವರ ಬೆಳಕಿನ ವಿನ್ಯಾಸ ನೋಡುಗರಲ್ಲಿ ಮೂಡ್ ಸೃಷ್ಟಿಸುವಲ್ಲಿ ಸಫಲವಾಗಿದೆ. ವಿಜಯ್ ಬೆನಚರವರ ಪ್ರಸಾಧನವೂ ಸಹ ಪ್ರತಿ ವ್ಯಕ್ತಿಗಳನ್ನು ಸೂಕ್ತ ಪಾತ್ರವಾಗಿಸುವಲ್ಲಿ ಸಹಕರಿಸಿದೆ. ಒಟ್ಟಾರೆಯಾಗಿ ಇಡೀ ನಾಟಕ ಎಲ್ಲಾ ವಿಭಾಗಗಳಲ್ಲಿ ಸಶಕ್ತವಾಗಿ ಮೂಡಿಬಂದಿದೆ. ನಾಟಕದಾದ್ಯಂತ ನಿರ್ದೇಶಕಿಯ ಶ್ರಮ ಎದ್ದುಕಾಣುತ್ತದೆ. ಈ ನಾಟಕದ ಮೂಲಕ ಕನ್ನಡ ರಂಗಭೂಮಿಗೆ ಕ್ರಿಯಾಶೀಲ ಮಹಿಳಾ ನಿರ್ದೇಶಕಿಯೊಬ್ಬರು ದಕ್ಕಿದಂತಾಗಿದೆ. ಒಂದು ಕಾಲದಲ್ಲಿ ಕ್ರಿಯಾಶೀಲ ರಂಗತಂಡವಾಗಿದ್ದ ನಟರಂಗವು ಬರುಬರುತ್ತಾ ಬಹುತೇಕ ನಿಷ್ಕ್ರೀಯವಾಗಿತ್ತು. ಈಗ ಮತ್ತೆ ಈ ಹೊಸ ಪ್ರೊಡಕ್ಷನ್ ಮೂಲಕ ನಾಟಕ ನಿರ್ಮಿತಿಗೆ ಮುಂದಾಗಿರುವುದು ಸಂತಸದ ಸಂಗತಿ. ದಿವ್ಯಾ ಕಾರಂತರಂತಹ ಹೊಸ ತಲೆಮಾರಿನವರು ಮತ್ತೆ ನಟರಂಗಕ್ಕೆ ಜೀವ ತುಂಬಿ ನಿರಂತರವಾಗಿ ನಾಟಕಗಳನ್ನು ಕಟ್ಟಿಕೊಡಲಿ ಎನ್ನುವುದೇ ರಂಗಾಸಕ್ತರ ಬಯಕೆಯಾಗಿದೆ. 


  -ಶಶಿಕಾಂತ ಯಡಹಳ್ಳಿ
        



ಶುಕ್ರವಾರ, ಡಿಸೆಂಬರ್ 23, 2016

ಸಚಿವೆಗೆ ಚೆಲ್ಲಾಟ ; ರಂಗಾಯಣಿಗರಿಗೆ ಪ್ರಾಣಸಂಕಟ:



 ರಂಗಾಯಣದ ಕಲಾವಿದರ ಅಸಹಕಾರ ಚಳುವಳಿ; ಸರಕಾರದ ನಿರ್ಲಕ್ಷದ ಬಳವಳಿ..


ಮೈಸೂರು ರಂಗಾಯಣದ ಹಿರಿಯ ಕಲಾವಿದರು ಡಿಸೆಂಬರ್ 23ರಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಎಲ್ಲಾ ರೀತಿಯ ಸಾಂಸ್ಕೃತಿಕ ಕೆಲಸಗಳನ್ನು ಬದಿಗಿರಿಸಿ ಕಪ್ಪು ಪಟ್ಟಿ ಧರಿಸಿ ರಂಗಾಯಣದಂಗಳದಲ್ಲಿ ಧರಣಿ ಕೂತಿದ್ದಾರೆ. ಜನವರಿ 13 ರಿಂದ ಆರು ದಿನಗಳ ಕಾಲ ಆಯೋಜನೆಗೊಂಡಿದ್ದ ಬಹುರೂಪಿ ಅಂತರಾಷ್ಟ್ರೀಯ  ನಾಟಕೋತ್ಸವದ ಸಿದ್ದತೆಯ ಕೆಲಸಗಳನ್ನೂ ಕೈಬಿಟ್ಟಿದ್ದಾರೆ. ಎಲ್ಲಾ ಕಲಾವಿದರ ಬೇಡಿಕೆ ಒಂದೇ ಅದು ನಿವೃತ್ತಿ ಭದ್ರತೆ.

1999ರಿಂದ ಸರಕಾರೀ ನೌಕರರೆಂದೇ ಪರಿಗಣಿತರಾದ ರಂಗಾಯಣದ ಕಲಾವಿದರುಗಳು ತಮ್ಮ ಕೆಲಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಡಿಯಲ್ಲಿ ಮಾಸಿಕ ಸಂಬಳ ಪಡೆಯುತ್ತಿದ್ದಾರೆ. ಆದರೆ.. ಕಲಾವಿದರು ಅಕಾಲಿಕವಾಗಿ ತೀರಿಕೊಂಡರೆ ಇಲ್ಲವೇ ನಿವೃತ್ತರಾದರೆ ಸರಕಾರದಿಂದ ಯಾವುದೇ ಸವಲತ್ತು ಇಲ್ಲವಾಗಿದೆ. ಮೂರು ದಶಕಗಳ ಕಾಲ ರಂಗಾಯಣಕ್ಕಾಗಿ ಶ್ರಮಿಸಿರುವ ಈ ಎಲ್ಲಾ ಕಲಾಜೀವಗಳು ಅಂತ್ಯದಲ್ಲಿ ಯಾವ ಸವಲತ್ತುಗಳೂ ಇಲ್ಲದೇ ರಂಗಾಯಣದಿಂದ ನಿವೃತ್ತರಾಗಬೇಕಾದಂತಹ ಅತಂತ್ರ ಸ್ಥಿತಿಗೆ ಸರಕಾರವೇ ಹೊಣೆಯಾಗಿದೆ. ಕಳೆದ ಹತ್ತು ವರ್ಷಗಳಿಂದ ನಿವೃತ್ತಿ  ವೇತನದ ಬೇಡಿಕೆಯನ್ನು ರಂಗಾಯಣದ ಕಲಾವಿದರುಗಳು ಸರಕಾರ ಹಾಗೂ ಸಂಸ್ಕೃತಿ ಇಲಾಖೆಯ ಮುಂದೆ ಇಡುತ್ತಲೇ ಬಂದಿದ್ದಾರೆ. ಆದರೂ ಪರಿಹಾರವಂತೂ ಸಿಕ್ಕಿಲ್ಲ.. ಕಲಾವಿದರೊಳಗಿನ ಅಭದ್ರತೆಗೆ ಕೊನೆಮೊದಲಿಲ್ಲ. ಈಗ ಪ್ರತಿಭಟನೆಯ ಖಾವು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದ್ದು ರಂಗಾಯಣದ ಕಲಾವಿದ ಮಂಜುನಾಥ ಬೆಳಕೆರೆಯವರ ಅಕಾಲಿಕ ಸಾವು ಹುಟ್ಟಿಸಿದ ಆತಂಕ ಎನ್ನುವುದೂ ಸುಳ್ಳಲ್ಲ.


ಡಿಸೆಂಬರ್ 19ರಂದು ಹೃದಯಾಘಾತದಿಂದಾಗಿ ಮಂಜುನಾಥ ಬೆಳಕೆರೆ ತೀರಿಕೊಂಡರು. ಸಂಬಳ ಬಿಟ್ಟರೆ ಬೇರೇನೂ ಆದಾಯವಿಲ್ಲದ..  ಬರುವ ಸಂಬಳದಲ್ಲಿ ಇರಲೊಂದು ಸ್ವಂತ ಮನೆಯನ್ನೂ ಸಹ ಮಾಡಿಕೊಳ್ಳಲಾಗದ ಬೆಳಕೆರೆಯವರ ಅಗಲಿಕೆ ಅವರ ಕುಟಂಬವರ್ಗವನ್ನು ಅತಂತ್ರವಾಗಿಸಿತು. ಈ ಘಟನೆಯು ಬಾಕಿ ಇರುವ ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದ್ದಂತೂ ನಿಜ. ಅವರೆಲ್ಲರಿಗೂ ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಬೆಳಕೆರೆಯವರ ಕುರಿತು ಡಿಸೆಂಬರ್ 21ರಂದು ರಂಗಾಯಣದಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಹಾಗೂ ಅನೇಕ ರಂಗಕರ್ಮಿಗಳು ಭಾಗವಹಿಸಿದ್ದರು. ಬೆಳಕೆರೆ ಕುಟಂಬದ ಮುಂದಿನ ಭವಿಷ್ಯವೇನು? ಎನ್ನುವುದೇ ಅಲ್ಲಿ ಸೇರಿದ ಎಲ್ಲಾ ರಂಗಕರ್ಮಿ ಕಲಾವಿದರುಗಳ ಮನದಾಳದ ಆತಂಕವಾಗಿತ್ತು. ಶೃದ್ದಾಂಜಲಿಯ ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಹಾಗೂ ಕೆಲವಾರು ರಂಗಕರ್ಮಿಗಳು ಬೆಳಕೆರೆ ಕುಟುಂಬಕ್ಕೆ ತುರ್ತಾಗಿ ಆರ್ಥಿಕ ಸಹಾಯ ಮಾಡಬೇಕು ಹಾಗೂ ಎಲ್ಲಾ ಕಲಾವಿದರಿಗೂ ನಿವೃತ್ತಿ ಬದ್ರತೆಯನ್ನು ಒದಗಿಸಬೇಕು ಎಂದು ಸಚಿವೆ ಉಮಾಶ್ರೀಯವರನ್ನು  ಬಹಳವಾಗಿ ಒತ್ತಾಯಿಸಿದರು. ಆದರೆ ಅದಕ್ಕೆ ಪರಿಹಾರವನ್ನು ಕೊಡಬೇಕಾದ ಸಚಿವೆ ನೋಡೋಣ ಮಾಡೋಣ ಮಾತಾಡೋಣ.. ಎನ್ನುವ ನಿರಾಶಾದಾಯಕ ಭರವಸೆಯನ್ನು ಹೊರತುಪಡಿಸಿ ಬೇರೇನೂ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲೇ ಇಲ್ಲಾ.

ಇದು ಒಬ್ಬ ಬೆಳಕೆರೆಯವರ ಕುಟುಂಬದ ಪ್ರಶ್ನೆಯಾಗಿರಲಿಲ್ಲ. ರಂಗಾಯಣದಿಂದ ಈಗಾಗಲೇ ನಿವೃತ್ತಿ ಹೊಂದಿದ ಹಾಗೂ ಇನ್ನು ಮುಂದೆ ಹೊಂದುತ್ತಿರುವ ಎಲ್ಲಾ ಕಲಾವಿದರ ಭವಿಷ್ಯದ ಬದುಕಿನ ಪ್ರಶ್ನೆಯಾಗಿತ್ತು. ಆದರೆ.. ಯಾವಾಗ ಸಚಿವೆಯಿಂದ ಸೂಕ್ತವಾದ ನಿರ್ಧಾರ ಬರಲಿಲ್ಲವೋ ಕಲಾವಿದರಿಗೆ ಪ್ರತಿಭಟನೆಯನ್ನು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇಂದಿಲ್ಲಾ ನಾಳೆ ಕಲಾವಿದರ ರಿಟೈರ‍್ಮೆಂಟ್ ಸ್ಕೀಮ್ ಜಾರಿ ಆಗುತ್ತೆ ಎಂದು ಹತ್ತು ವರ್ಷದಿಂದ ಸಹನೆಯಿಂದಾ ಕಾಯುತ್ತಿದ್ದ ಕಲಾವಿದರ ತಾಳ್ಮೆ ಮೀರಿಹೋಗಿತ್ತು. ಯಾಕೆಂದರೆ ಇದು ಅವರ ಹಾಗೂ ಅವರ ಕುಟುಂಬದವರ ಬದುಕಿನ ಬಗೆಗಿನ ಆತಂಕವಾಗಿತ್ತು. ಇನ್ನೈದು ವರ್ಷಗಳಲ್ಲಿ ಮೊದಲ ತಲೆಮಾರಿನ ಬಹುತೇಕ ರಂಗಾಯಣದ ಕಲಾವಿದರು ನಿವೃತ್ತರಾಗುತ್ತಿದ್ದಾರೆ. ನಿವೃತ್ತರಾದ ಮೇಲೆ ಸರಕಾರದಿಂದ ಏನನ್ನೂ ಅಪೇಕ್ಷಿಸುವಂತಿಲ್ಲಾ. ಅವರೆಲ್ಲಾ ತಮ್ಮ ಬದುಕಿನ ಬಗ್ಗೆ ತೀವ್ರವಾಗಿ ಯೋಚಿಸುವಂತಾಗಿದೆ.  ಹೀಗಾಗಿ ಶೃದ್ದಾಂಜಲಿ ಸಭೆಯ ಮರುದಿನದಿಂದಾ ಎಲ್ಲಾ ಕಲಾವಿದರುಗಳು ಮೊದಲ ಹಂತವಾಗಿ ಅನಿರ್ದಿಷ್ಟ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಸರಕಾರ ಸ್ಪಂದಿಸದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಲ್ಲಾ ಕಲಾವಿದರುಗಳು ನಿರ್ಧರಿಸಿದ್ದಾರೆ.
 
ರಂಗಾಯಣ ಶುರುವಾಗಿದ್ದು 1989 ರಲ್ಲಿ ಬಿ.ವಿ.ಕಾರಂತರ ನಾಯಕತ್ವದಲ್ಲಿ ತೀವ್ರ ಶೋಧ ನಡೆಸಿ ಪ್ರತಿಭಾನ್ವಿತ ಅನುಭವಿ ಯುವ ನಟಿ ನಟಿಯರನ್ನು ಆಯ್ಕೆ ಮಾಡಲಾಗಿತ್ತು. ಆರಂಭದ ಕೆಲವು ವರ್ಷಗಳ ಕಾಲ ಉಮೇದಿನಲ್ಲಿ ಎಲ್ಲಾ ಕಲಾವಿದರುಗಳು ನಾಟಕಗಳನ್ನು ಮಾಡುತ್ತಲೇ ಬಂದರು. ಯಾವಾಗ ಕಲಾವಿದರುಗಳು ಮದುವೆಯಾಗಿ ಮಕ್ಕಳಾಗಿ ಕುಟುಂಬ ವಿಸ್ತರಿಸಿತೋ ಆಗ ಅತಂತ್ರತೆ ಕಾಡತೊಡಗಿತು. ತಮ್ಮ ಕೆಲಸವನ್ನು ಖಾಯಂ ಮಾಡಬೇಕು ಎನ್ನುವ ಬೇಡಿಕೆಯನ್ನು 1999 ರಲ್ಲಿ ಕಲಾವಿದರುಗಳು ಸರಕಾರದ ಮುಂದಿಟ್ಟರು. ಇದಕ್ಕೆ ಕಾರಂತರು ವಿರೋಧ ವ್ಯಕ್ತಪಡಿಸಿದಾಗ ಕಲಾವಿದರುಗಳು ತಿರುಗಿ ಬಿದ್ದರು.  ಆಗ ಹಣಕಾಸು ಮಂತ್ರಿಯಾಗಿದ್ದವರು ನಮ್ಮ ಈಗಿನ ಸಿಎಂ ಸಿದ್ದರಾಮಯ್ಯನವರು. ಕಲಾವಿದರುಗಳ ಆತಂಕವನ್ನು ಮನಗಂಡ ಸಿದ್ದರಾಮಯ್ಯನವರು ಎಲ್ಲಾ ಕಲಾವಿದರನ್ನೂ ಸರಕಾರಿ ನೌಕರರಾಗಿ ಪರಿಗಣಿಸಿ ಖಾಯಂಗೊಳಿಸಿದರು.

ತದನಂತರ ಯಾವಾಗ ಗಂಗಾಧರಸ್ವಾಮಿ ಹಾಗೂ ಶ್ರಿನಿವಾಸಭಟ್‌ರವರು ವಯೋಮಿತಿಯ ಲೆಕ್ಕಾಚಾರದಲ್ಲಿ ರಂಗಾಯಣದಿಂದ ನಿವೃತ್ತಿ ಹೊಂದಿದರೋ ಆಗ ಅವರಿಗೆ ಯಾವುದೇ ನಿವೃತ್ತಿ ಪರಿಹಾರಗಳು ಸಿಗದೇ ಬಾಕಿ ಬದುಕು ನಿರ್ವಹಿಸಲು ಪರದಾಡಬೇಕಾಯಿತು. ಹಾಗೂ ರಂಗಾಯಣದ ಕಲಾವಿದರಾಗಿದ್ದು ಅಕಾಲಿಕವಾಗಿ ತೀರಿಕೊಂಡ ಬಸವರಾಜ ಕೊಡಗೆ, ಜಯರಾಮ್ ಹಾಗೂ ಪುಟ್ಟಣ್ಣನವರ ಅಕಾಲಿಕ ಸಾವಿನ ನಂತರ ಅವರ ಕುಟಂಬದವರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಸರಕಾರದಿಂದ ಸಿಗದೇ ಅವರ ಕುಟುಂಬ ಪರಿತಪಿಸಿತು.  ಆಗಲೇ ಬಾಕಿ ಕಲಾವಿದರುಗಳಿಗೆ ಚಿಂತೆ ಶುರುವಾಯಿತು. ತಮ್ಮ ನಿವೃತ್ತಿ ನಂತರ ಪೆನ್ಶನ್ ಸಹ ಇಲ್ಲದೇ ಕುಟುಂಬ ನಿರ್ವಹಣೆ ಹೇಗೆ ಅನ್ನುವ ಸಮಸ್ಯೆ ಬೆಟ್ಟವಾಯಿತು. ಆಗಿನಿಂದಲೇ ನಿವೃತ್ತಿ ವೇತನ ಕೊಡಬೇಕು ಎನ್ನುವ ಬೇಡಿಕೆಯನ್ನು ಸರಕಾರಿ ಇಲಾಖೆಯ ಮುಂದಿಟ್ಟು ಕಲಾವಿದರುಗಳೆಲ್ಲಾ ಕಾಲಕಾಲಕ್ಕೆ ಒತ್ತಾಯಿಸತೊಡಗಿದರು. ಹೀಗೆಯೇ ಕೆಲವಾರು ವರ್ಷಗಳ ಹಗ್ಗಜಗ್ಗಾಟ ಸರಕಾರ ಹಾಗೂ ಕಲಾವಿದರುಗಳ ನಡುವೆ ಶುರುವಾಗಿತ್ತು. ಯಾವಾಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿತೋ.. ಯಾವಾಗ ರಂಗಭೂಮಿಯ ಕಲಾವಿದೆ ಉಮಾಶ್ರೀಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾದರೋ ಆಗ ಕಲಾವಿದರಿಗೆಲ್ಲಾ ಭರವಸೆಯ ಬೆಳಕು ಕಾಣಿಸಿತು. ತಮಗೆ ನಿವೃತಿ ವೇತನ ಸಿಗುತ್ತದೆ ಎನ್ನುವ ಆಸೆಯಿಂದಲೇ ತಮ್ಮ ಪ್ರಯತ್ನವನ್ನು ಕಲಾವಿದರೆಲ್ಲಾ ಮುಂದುವರೆಸಿದರು.


ಆಗ ಕಲಾವಿದರಿ ಬಯಕೆಗೆ ಒತ್ತಾಸೆಯಾಗಿ ನಿಂತಿದ್ದು ರಂಗಸಮಾಜದ ಸದಸ್ಯರುಗಳು. ಕಲಾವಿದರ ಬೇಡಿಕೆಗೆ ರಂಗಸಮಾಜ ತೀವ್ರವಾಗಿ ಸ್ಪಂದಿಸಿತು. ಇಲಾಖೆಯ ಸಭೆಗಳಲ್ಲಿ ಒತ್ತಡ ಹೇರಲಾಯಿತು. ಆಗ ಸರಕಾರದ ಅಂಡರ್ ಸೆಕ್ರೇಟರಿಯವರು ರಂಗಾಯಣದ ನೌಕರರಿಗೆ ಕೆಸಿಎಸ್‌ಆರ್ ಸೇವಾನಿಯಮದಡಿಯಲ್ಲಿ ನಿವೃತ್ತಿ ವೇತನ ಕೊಡಲು ಬರುವುದಿಲ್ಲಾ. ಹೀಗಾಗಿ ಸಂಸ್ಕೃತಿ ಇಲಾಖೆಯ ಗ್ರ್ಯಾಂಟನಲ್ಲಿಯೇ ಕಲಾವಿದರಿಗೆ ಇಡುಗಂಟನ್ನು ತೆಗೆದಿರಿಸಿ ನಿವೃತ್ತರಾಗುವ ಕಲಾವಿದರುಗಳಿಗೆ ಕೊಡುವ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಲಹೆ ಕೊಟ್ಟರು. ಆಗ ಇಡಿಗಂಟು ಸಾಧ್ಯತೆಗಳ ಅಧ್ಯಯನಕ್ಕಾಗಿ ಎರಡು ವರ್ಷಗಳ ಹಿಂದೆ ರಂಗಸಮಾಜದ ಸದಸ್ಯರಲ್ಲೆ ಆಯ್ದ ಮೂರು ಜನರ ಉಪಸಮಿತಿಯನ್ನು ಡಾ.ಕೆ.ವೈ.ನಾರಾಯಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ನಿವೃತಿಯಾಗುವ ಪ್ರತಿಯೊಬ್ಬ ಕಲಾವಿದರುಗಳಿಗೆ ಇಪ್ಪತ್ತು ಲಕ್ಷದಷ್ಟು ಇಡಗಂಟನ್ನು ಕೊಡಬೇಕು ಎಂದು ಆ ಉಪಸಮಿತಿಯು ತನ್ನ ಅಧ್ಯಯನದ ವರದಿಯನ್ನು ಸಲ್ಲಿಸಿ ಸರಕಾರಿ ಇಲಾಖೆಗೆ ರೆಕಮೆಂಡ್ ಮಾಡಿತು. ಈ ವರದಿಯನ್ನು ರಂಗಸಮಾಜದ ಎಕ್ಸಿಕ್ಯೂಟಿವ್ ಸಭೆಯಲ್ಲೂ ಅನುಮೋದಿಸಲಾಯಿತು. ಹಾಗೂ ಸಚಿವೆ ಉಮಾಶ್ರೀಯವರು ಕಳೆದ ಸಲದ ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯ  ಗ್ರ್ಯಾಂಟಿನಲ್ಲಿ ರಂಗಾಯಣದ ಕಲಾವಿದರಿಗಾಗಿ ಐವತ್ತು ಲಕ್ಷ ರೂಪಾಯಿಗಳನ್ನು ತೆಗೆದಿರಿಸಲು ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದರು. ಇದರಿಂದ ರಂಗಾಯಣದ ಕಲಾವಿದರುಗಳಿಗೆ ಸ್ವಲ್ಪ ನೆಮ್ಮದಿ ದೊರಕಿತ್ತು.

ಆದರೆ.. ಅತ್ತ ಆ ಹಣ ಈಗಲೂ ಇಲಾಖೆಯಲ್ಲಿ ಕನ್ನಡಿಯ ಗಂಟಂತೆ ಸುಭದ್ರವಾಗಿದೆ. ಇತ್ತ ಕಲಾವಿದರ ಭವಿಷ್ಯದ ಬದುಕು ಅಭದ್ರವಾಗಿದೆ. ಇರುವ ಹಣವನ್ನಾದರೂ ಈಗ ತೀರಿಕೊಂಡ ಹಾಗೂ ನಿವೃತ್ತಿ ಹೊಂದುವವರಿಗೆ ಕೊಡುವ ವ್ಯವಸ್ಥೆಯಾದರೂ ಮಾಡಬೇಕಲ್ಲವೆ? ಯಾಕೆಂದು ಕೇಳಿದರೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸಚಿವೆ ಉಮಾಶ್ರೀಯವರು ಹೊಣೆಗಾರಿಕೆಯಿಂದಾ ಜಾರಿಕೊಳ್ಳುತ್ತಿದ್ದಾರೆ. ಸಚಿವರೇ ಹೀಗೆ ಮಾಡಿದರೆ ಇನ್ನು ಅಧಿಕಾರಿಗಳು ಮೈಮನಸಿಗೆಲ್ಲಾ ಎಣ್ಣೆ ಹಚ್ಚಿಕೊಂಡೇ ಜಾರಿಕೊಳ್ಳಲು ಕಾದಿರುತ್ತಾರೆ. ರಾಜ್ಯ ಹಣಕಾಸು ವಿಭಾಗದವರು ಸಂಸ್ಕೃತಿ ಇಲಾಖೆಯ ಗ್ರ್ಯಾಂಟಿನಲ್ಲಿಯೇ ನಿವೃತ್ತರಾಗುವ ಕಲಾವಿದರುಗಳು ಇಡಿಗಂಟು ಪಡೆಯಬಹುದು ಎಂದು ಹೇಳಿದರೆ.. ಸಂಸ್ಕೃತಿ ಇಲಾಖೆಯವರು ಹಣಕಾಸು ವಿಭಾಗದ ಅನುಮತಿ ಬೇಕೆಂದು ಹೇಳುತ್ತಾರೆ. ಈ ಎರಡೂ ಇಲಾಖೆಯ ಆಟದಲಿ ಕಲಾವಿದರ ಭವಿಷ್ಯದ ಬದುಕು ಅತಂತ್ರಗೊಂಡಿದೆ. ಮಂಜುನಾಥ ಬೆಳಕೆರೆಯವರ ಅನಿರೀಕ್ಷಿತ ನಿರ್ಗಮನ ಅವರ ಕುಟುಂಬದ ಮೇಲೆ ಬೀರಿದ ಆರ್ಥಿಕ ದುಷ್ಪರಿಣಾಮದಿಂದಾಗಿ ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿ ವರ್ಗದವರನ್ನೆಲ್ಲಾ ಅತೀವ ಆತಂಕಕ್ಕೆ ಗುರಿಮಾಡಿದೆ. ತಮ್ಮ ಹಕ್ಕಿಗಾಗಿ  ಹೋರಾಡುವುದು ಅನಿವಾರ್ಯವಾಗಿದೆ.


ಸಚಿವೆ ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ ರಂಗಸಮಾಜದ ಜನರಲ್‌ಬಾಡಿ ಮೀಟಿಂಗ್ ಕರೆದು ಉಪಸಮಿತಿಯ ವರದಿಯನ್ನು ಅಧಿಕೃತವಾಗಿ ಪಾಸ್ ಮಾಡಿ ಆದೇಶ ಹೊರಡಿಸುವುದು ಎರಡು ವರ್ಷದಿಂದಾ ಬಾಕಿ ಇದೆ. ವರದಿ ಸಲ್ಲಿಕೆಯಾಗಿ ಎರಡು ವರ್ಷಗಳೇ ಕಳೆದರೂ ಪರಿಣಾಮ ಮಾತ್ರ ಶೂನ್ಯವಾಗಿದೆ. ಆದರೆ ಉಮಾಶ್ರೀಯವರು ಅದ್ಯಾಕೋ ಮನಸ್ಸು ಮಾಡುತ್ತಿಲ್ಲಾ. ಯಾರ ಒತ್ತಡಕ್ಕೂ ಒಂಚೂರೂ ಮಣಿಯುತ್ತಿಲ್ಲಾ. ಕಲಾವಿದರೊಬ್ಬರ ಅಕಾಲಿಕ ಸಾವೂ ಸಹ ಅವರನ್ನು ಕಾಡುತ್ತಿಲ್ಲಾ. ಪಕ್ಕಾ ರಾಜಕಾರಣಿಯಾಗಿ ಬದಲಾಗಿರುವ ಉಮಾಶ್ರೀಯವರು ಈಗ ಕಕ್ಕುಲತೆಯುಳ್ಳ ರಂಗಭೂಮಿಯ ಕಲಾವಿದೆಯಾಗಿ ಉಳಿದಿಲ್ಲ. ಈ ದರಿದ್ರ ರಾಜಕಾರಣದ ದುರ್ಗಾಳಿಯೇ ಅಂತಹುದು. ಎಂತೆಂತವರ ನಿಯತ್ತನ್ನೇ ಹಾಳು ಮಾಡಿಬಿಡುತ್ತದೆ. ಈಗ ಸಚಿವೆ ಹಾಗೂ ಇಲಾಖೆಯ ಅಧಿಕಾರಿಗಳು ರಂಗಾಯಣದ ಕಲಾವಿದರ ಬದುಕನ್ನು ಸರಕಾರಿ ಕಾನೂನುಗಳ ಸಿಕ್ಕುಗಳಲ್ಲಿ ಸಿಕ್ಕಿಸಿ ಆಟ ಆಡುತ್ತಿರುವುದು ನಿಜಕ್ಕೂ ಅಕ್ಷಮ್ಯ.

ಅವರು ಕಲಾವಿದರುಗಳು, ಕಳೆದ ಮೂರು ದಶಕಗಳಿಂದ ತಮ್ಮ ಬದುಕನ್ನೇ ಕಲೆಗಾಗಿ ಬಸಿದಿದ್ದಾರೆ. ಸಮಸ್ತ ಕನ್ನಡಿಗರಿಗೆ ರಂಗರಸದೌತನವನ್ನು ಉಣಬಡಿಸಿದ್ದಾರೆ. ಹೊಸ ತಲೆಮಾರಿನ ಯುವಕರಿಗೆ ತರಬೇತಿ ಕೊಟ್ಟು ಕಲಾವಿದರನ್ನಾಗಿಸಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ನಾಟಕ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ರಾಜ್ಯ ಮಾತ್ರವಲ್ಲಾ ದೇಶ ವಿದೇಶಗಳಲ್ಲೂ ಸಹ ಕನ್ನಡ ರಂಗಭೂಮಿಯ ಸೊಗಡನ್ನು ಹರಡಿ ಬಂದಿದ್ದಾರೆ. ಇಂತವರು ತಮ್ಮ ನಿವೃತ್ತಿ ವೇತನ ಕೊಡಿ ಎಂದು ಸರಕಾರಗಳ ಮುಂದೆ ಬೇಡಿಕೊಳ್ಳುವುದೇ ನಾಗರೀಕ ಸಮಾಜಕ್ಕೆ ಅವಮಾನಕರವಾದದ್ದು. ಕಲಾವಿದರ ಬದುಕಿಗೆ ಸೂಕ್ತ ಬದ್ರತೆಯನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಬಳಸಿ ಬಿಸಾಕುವ ತಂತ್ರಗಾರಿಕೆಯನ್ನು ಸರಕಾರ ಕಲಾವಿದರ ಬದುಕಿಗೆ ಅನ್ವಯಿಸಿದರೆ ಇದರಂತಾ ಅಮಾನವೀಯತೆ ಇನ್ನೆಲ್ಲೂ ಇಲ್ಲಾ. ಸಚಿವೆ ಉಮಾಶ್ರೀಯವರಿಗೆ ತಮ್ಮನ್ನು ಕಲಾವಿದೆಯಾಗಿ ಬೆಳೆಸಿದ ರಂಗಭೂಮಿಯ ಬಗ್ಗೆ ಕನಿಷ್ಟ ಕೃತಜ್ಞತೆ ಎನ್ನುವುದು ಇದ್ದಲ್ಲಿ ಮೊದಲು ಆತಂಕಕ್ಕೊಳಗಾದ ರಂಗಾಯಣದ ಕಲಾವಿದರ ಸಹಾಯಕ್ಕೆ ಮುಂದಾಗಲಿ.  ವ್ಯರ್ಥ ಸಬೂಬುಗಳನ್ನು ಹೇಳದೇ ಈಗಾಗಲೇ ಕಾಯ್ದಿರಿಸಿದ ಹಣವನ್ನು ತೀರಿಕೊಂಡ ಹಾಗೂ ನಿವೃತ್ತರಾದ ರಂಗಾಯಣದ ಕಲಾವಿದರಿಗೆ ಹಂಚುವ ವ್ಯವಸ್ಥೆಯಾಗಲಿ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಳಕೆರೆಯವರ ಕುಟುಂಬಕ್ಕೆ ತಕ್ಷಣ ಅವರ ಪಾಲಿನ ಇಡಿಗಂಟನ್ನು ಬಿಡುಗಡೆ ಮಾಡಲಿ.  ಕೊಟ್ಯಾಂತರ ರೂಪಾಯಿ ಹಣವನ್ನು ಅಂದಾದುಂದಿ ಖರ್ಚುಮಾಡಿ ಕಲೆಯ ಹೆಸರಲ್ಲಿ ಓಕಳಿ, ಜಾತ್ರೆಗಳನ್ನು ಮಾಡಿ ದಲ್ಲಾಳಿಗಳ ಆದಾಯ ಹೆಚ್ಚಿಸುತ್ತಿರುವ ಪ್ರಾಜೆಕ್ಟಗಳನ್ನು ಪಕ್ಕಕ್ಕಿಟ್ಟು ಮೊದಲು ಕಲಾವಿದರುಗಳ ಬದುಕನ್ನು ಬೆಳಗುವ ಕೆಲಸವನ್ನು ಮಾಡಿ ಮುಗಿಸಲಿ.


ರಂಗಾಯಣದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯನವರು ರಂಗಾಯಣದ ಅಭಿವೃದ್ದಿಗಾಗಿ ಹಾಗೂ ಕಲಾವಿದರಿಗಾಗಿ ಸರಕಾರ ಬೇಕಾದಷ್ಟು ಹಣವನ್ನು ಮೀಸಲಿಟ್ಟಿದೆ. ಕಲೆಯ ಸದುಪಯೋಗಕ್ಕಾಗಿಯೇ ಸಂಸ್ಕೃತಿ ಇಲಾಖೆಗೆ ಸರಕಾರ ಬೇಕಾದಷ್ಟು ಹಣವನ್ನು ಕೊಡುತ್ತಿದೆ. ನೀವು ಅದನ್ನು ಖರ್ಚು ಮಾಡಿ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಸಚಿವೆ ಉಮಾಶ್ರೀಯವರ ಸಮ್ಮುಖದಲ್ಲೇ ವೇದಿಕೆಯ ಮೇಲೆ ಹೇಳಿಕೆ ಕೊಟ್ಟರು. ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎನ್ನುವ ಗಾದೆಯಂತೆ ಮುಖ್ಯಮಂತ್ರಿಗಳು ಕೊಡಲು ಸಿದ್ದವಾಗಿದ್ದರೂ ಸಚಿವೆ ಯಾಕೆ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಲಾವಿದರಿಗೆ ನಿವೃತ್ತಿ ಮೊತ್ತ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ. ಈಗಾಗಲೇ ಕಲಾವಿದರಿಗಾಗಿಯೇ ಮೀಸಲಿಟ್ಟ ಐವತ್ತು ಲಕ್ಷಗಳನ್ನಾದರೂ ಉಪಸಮಿತಿಯ ವರದಿಯನ್ನು ಆಧರಿಸಿ ತೀರಿಕೊಂಡವರ ಕುಟುಂಬಕ್ಕೆ ತಕ್ಷಣಕ್ಕೆ ಬಿಡುಗಡೆಗೊಳಿಸಲು ಸಚಿವೆಗೆ ಇರುವ ತಾಪತ್ರಯವಾದರೂ ಏನು? ಅಕಸ್ಮಾತ್ ಉಮಾಶ್ರೀಯವರು ಹೇಳಿದಂತೆ ತಾಂತ್ರಿಕ ಸಮಸ್ಯೆ ಇದ್ದರೆ ಅದನ್ನು ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳಲಿ ಬೇಡ ಎಂದವರ‍್ಯಾರು? ಸಿಎಂ ಹಣ ಕೊಡಲು ಸಿದ್ದರಾಗಿದ್ದೇವೆಂದು ಹೇಳುತ್ತಾರೆ, ಕಲಾವಿದರು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ, ರಂಗಾಯಣದ ಆಗುಹೋಗುಗಳನ್ನು  ನಿರ್ಧರಿಸುವ ರಂಗಸಮಾಜವೇ ಕಲಾವಿದರ ನಿವೃತ್ತ ಬದುಕಿಗೆ ಬದ್ರತೆ ಒಸಗಿಸಬೇಕು ಎಂದು ವರದಿ  ಕೊಟ್ಟು ಒತ್ತಾಯಿಸಿದೆ.. ಸಂಸ್ಕೃತಿ ಇಲಾಖೆಯಲ್ಲಿ ಅರ್ಧಕೋಟಿ ಹಣ ಕಲಾವಿದರಿಗಾಗಿಯೇ ಮೀಸಲಿಡಲಾಗಿದೆ. ಆದರೂ ಯಾಕೆ ಇನ್ನೂ ಆದೇಶ ಜಾರಿಯಾಗಿಲ್ಲ? ತಲುಪಬೇಕಾದವರಿಗೆ ಹಣ ತಲುಪಿಲ್ಲಾ..?

ಒಂದು ಕಾಲದಲ್ಲಿ ಕಲಾವಿದೆಯಾಗಿ ಎಲ್ಲಾ ರೀತಿಯ ಬಾಧೆಗಳನ್ನು ಅನುಭವಿಸಿದ್ದ ಸಚಿವೆಗೆ ನಿಜಕ್ಕೂ ತೀರಿಕೊಂಡ ಕಲಾವಿದನ ಕುಟುಂಬದ ಕುರಿತು ಒಂದಿಷ್ಟಾದರೂ ಅನುಕಂಪ ಇದ್ದಲ್ಲಿ.. ಮೂರು ದಶಕಗಳ ಕಾಲ ರಂಗಾಯಣಕ್ಕೆ ಬದುಕು ಸವೆಸಿದ ಕಲಾವಿದರ ಮೇಲೆ ಸ್ವಲ್ಪವಾದರೂ ಅಭಿಮಾನವಿದ್ದಲ್ಲಿ ಕೂಡಲೇ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಕಲಾವಿದರುಗಳ ಬದುಕಿಗೆ ಆರ್ಥಿಕ ಬದ್ರತೆಯನ್ನು  ಕೊಡಲು ತಕ್ಷಣವೇ ಆದೇಶಿಸಲಿ. ಇಲ್ಲವಾದರೆ ಇರುವ ತಾಂತ್ರಿಕ ಸಮಸ್ಯೆಗಳಾದರೂ ಏನು ಎನ್ನುವುದನ್ನು ಬಹಿರಂಗ ಪಡಿಸಲಿ.  ಅದು ಬಿಟ್ಟು ಕೇವಲ ವಿಳಂಬ ನೀತಿಯನ್ನು ಅನುಸರಿಸಿ ಕಾಲಹರಣ ಮಾಡಿ ಕಲಾವಿದರ ಬದುಕಿನ ಜೊತೆಗೆ ಆಟವಾಡುವುದು ಅಕ್ಷಮ್ಯ.

ಯಾರು ಏನೇ ಹೇಳಲಿ ರಂಗಾಯಣದ ಕುರಿತು ಅದ್ಯಾಕೋ ಉಮಾಶ್ರೀಯವರು ಮೊದಲಿಂದಲೂ ಒಲವು ತೋರುತ್ತಿಲ್ಲಾ. ಯಾವುದೇ ಸಮಸ್ಯೆಗೆ ಕಾಲಬದ್ದವಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ ಆಗಿಲ್ಲಾ. ಶಿವಮೊಗ್ಗ ರಂಗಾಯಣಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಿ ವರ್ಷಗಳೇ ಉರುಳಿದರೂ ಕಲಾವಿದರನ್ನು ಆಯ್ಕೆ ಮಾಡದೇ ಆ ರಂಗಾಯಣವನ್ನು ನಿಷ್ಕ್ರೀಯ ಮಾಡಲಾಯಿತು. ಅಲ್ಲಿಯ ನಿರ್ದೇಶಕರ ಮೇಲೆ ಅತಿರೇಕದ ವರ್ತನೆ ಹಾಗೂ ಆರ್ಥಿಕ ಅವ್ಯವಹಾರದ ಕುರಿತು ರಂಗಸಮಾಜವೇ ಆರೋಪ ಮಾಡಿ ವರದಿ ಕೊಟ್ಟರೂ ಸಚಿವೆ ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದೇ ಕಾಲಹರಣಮಾಡಿದರು. ಇನ್ನು ಗುಲಬರ್ಗಾ ರಂಗಾಯಣದಲ್ಲಿ ಕಲಾವಿದರು ಹಾಗೂ ಅಲ್ಲಿಯ ನಿರ್ದೇಶಕ ಆರ‍್ಕೆ ಹುಡಗಿಯವರ ನಡುವೆ ಜಂಗಿ ನಿಕಾಲಿ ಕುಸ್ತಿಯೇ ನಡೆದು ಹೋಗಿ ನಿರ್ದೇಶಕರ ಮೇಲೆ ಅಟ್ರಾಸಿಟಿ ಹಾಗೂ ಲೈಂಗಿಕ ಕಿರುಕುಳದ ಕೇಸುಗಳೇ ಆಗಿ ಹೋಗಿ ರಂಗಾಯಣದ ಮಾನ ಬೀದಿ ಬೀದಿಯಲ್ಲಿ ಹರಾಜಾಗಿ ಹೋಯಿತು. ಆಗಲೂ ಉಮಾಶ್ರೀ ನಿರ್ಲಪ್ತರಾದರು. ಯಾವಾಗ ರಂಗಸಮಾಜದ ಸದಸ್ಯರೆಲ್ಲಾ ರಾಜೀನಾಮೆ ಕೊಟ್ಟು ರಂಪಾಟ ಮಾಡಿದರೋ  ಆಗ ಎರಡೂ ರಂಗಾಯಣಗಳ ನಿರ್ದೇಶಕರ ಜೊತೆಗೆ ಕಲಬುರ್ಗಿಯ ಕಲಾವಿದರುಗಳನ್ನೂ ವಜಾಗೊಳಿಸಿ ಮನೆಗೆ ಕಳುಹಿಸಿದರು. ಈಗ ಈ ಎರಡೂ ರಂಗಾಯಣಗಳೂ ಅನಾಥವಾಗಿ  ಆರು ತಿಂಗಳುಗಳೇ ಕಳೆದಿವೆ ಇಲ್ಲಿವರೆಗೂ ನಿರ್ದೇಶಕರುಗಳ ಆಯ್ಕೆ ಆಗದೇ ಆಡಳಿತಾಧಿಕರಿಗಳನ್ನು ನಿಯಮಿಸಲಾಗಿದೆ.

ಅದು ಹೋಗಲಿ... ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿಯವರ ಅವಧಿ ಮುಗಿದು ಮೂರು ತಿಂಗಳುಗಳೇ ಕಳೆದಿವೆ.. ಅವರ ಜಾಗಕ್ಕೆ ಇನ್ನೊಬ್ಬ ನಿರ್ದೇಶಕರನ್ನು ಆಯ್ಕೆ ಮಾಡುವ ಪ್ರಯತ್ನವೂ ಇಲಾಖೆ ಮಟ್ಟದಲ್ಲಿ ಸಾಗುತ್ತಿಲ್ಲಾ. ಅಲ್ಲಿ ಕೂಡಾ ಕಲೆಯ ಗಂಧ ಗಾಳಿ ಗೊತ್ತಲ್ಲದ ಅಧಿಕಾರಿಗಳೇ ರಂಗಾಯಣವನ್ನು ಮುನ್ನಡೆಸುತ್ತಿದ್ದಾರೆ. ಅಂದರೆ.. ರಂಗಸಮಾಜದ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡದ, ಅಧಿಕಾರಿಗಳು ಹೇಳುವ ಸಲಹೆಗಳಿಗೆ ಮಹತ್ವವನ್ನೇ ಕೊಡದ  ಉಮಾಶ್ರೀಯವರ ವರ್ತನೆಯು ಅವರ ಸರ್ವಾಧಿಕಾರಿ ಮನಸ್ಥಿತಿಯನ್ನು ತೋರಿಸುತ್ತದೆ. ರಂಗಾಯಣದ ಕುರಿತು ಸಚಿವೆಯ ಆಟಿಟ್ಯೂಡ್ ಗಮನಿಸಿದಾಗ ಇಡೀ ರಂಗಾಯಣವನ್ನೇ ಅಭದ್ರಗೊಳಿಸಿ ಮುಚ್ಚಿಬಿಡಬೇಕು ಎನ್ನುವಂತಿದೆ.  ಒಬ್ಬ ಕಲಾವಿದೆಯಾಗಿ ಕಲೆಗೆ ಕೊಡುವ ಬೆಲೆ ಇದಲ್ಲಾ.. ಆಕಸ್ಮಿಕವಾಗಿ ದೊರೆತ ಸಚಿವೆ ಹುದ್ದೆ ಎನ್ನುವುದು ಖಾಯಂ ಅಲ್ಲವೇ ಅಲ್ಲಾ. ಉಳಿದ ಅವಧಿ ಮುಗಿದ ಬಳಿಕ ಸಚಿವೆಗಿರಿ ಬಿಟ್ಟು ಉಮಾಶ್ರೀಯವರು ಮನೆಗೆ ಹೋಗಲೇ ಬೇಕು. ಆಗ ರಂಗಭೂಮಿಯವರು ಐದು ವರ್ಷದ ಅವಧಿಯಲ್ಲಿ ಅದೇನು ರಂಗಭೂಮಿಗೆ.. ರಂಗ ಕಲಾವಿದರಿಗೆ ಒಳಿತು ಮಾಡಿ ಕಡಿದು ಕಟ್ಟೆಹಾಕಿದೆ ಎಂದು ಪ್ರಶ್ನಿಸಿದರೆ ಮತ್ತದೇ ಓಕಳಿ, ಜಾತ್ರೆಗಳದ್ದೇ ವರದಿ ಹೇಳಬೇಕಾಗುತ್ತದೆ. ಸಮಸ್ತ ರಂಗಭೂಮಿಯ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುವ ಮುಂಚೆ ಬಾಕಿ ಉಳಿದ ದಿನಗಳಲ್ಲಾದರೂ ರಂಗದ್ರೋಹಿ ಸ್ವಾರ್ಥಿ ದಲ್ಲಾಳಿಗಳನ್ನು ದೂರವಿಟ್ಟು ನಿಜವಾದ ಕಲಾವಿದರಗಳ ಪರವಾದ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ. ಸ್ವಂತ ಬುದ್ದಿ ಇಲ್ಲವಾದರೆ ಕನಿಷ್ಟ ರಂಗಸಮಾಜದ ನಿರ್ಧಾರವನ್ನಾದರೂ ಆಲಿಸಿ ಅವರ ನಿಲುವುಗಳಿಗೆ ಒಲವು ತೋರಬೇಕಾಗಿದೆ. ಇಲ್ಲವಾದರೆ ರಂಗಾಯಣವನ್ನು ಅಭದ್ರಗೊಳಿಸಿದ ಅಪಕೀರ್ತಿ ಉಮಾಶ್ರೀಯವರನ್ನು ಬಿಡದೇ ಕಾಡುತ್ತದೆ.

ಸಚಿವೆ ಉಮಾಶ್ರೀಯವರು ಅಧಿಕಾರದ ಅಮಲಿನಲ್ಲಿ ಏನಾದರೂ ಮಾಡಿಕೊಳ್ಳಲಿ.. ಆದರೆ ರಂಗಸಮಾಜದವರೇನು ಮಾಡುತ್ತಿದ್ದಾರೆ. ರಂಗಾಯಣದ ಒಳಿತಿಗಾಗಿ ತಾನೇ ರಂಗಸಮಾಜ ಇರುವುದು? ಈಗ ಶಿವಮೊಗ್ಗ ಹಾಗೂ ಕಲಬುರ್ಗಿ ರಂಗಾಯಣಗಳೆರಡೂ ನಾಯಕತ್ವ ಇಲ್ಲದೇ ಅನಾಥವಾಗಿವೆ. ಮೈಸೂರು ರಂಗಾಯಣಕ್ಕೂ ನಿರ್ದೇಶಕರಿಲ್ಲವಾಗಿದೆ. ಅಲ್ಲಿಯ ಕಲಾವಿದರ ಭವಿಷ್ಯದ ಬದುಕೇ ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ವರದಿ ಕೊಟ್ಟು ಸುಮ್ಮನಾದರೆ ರಂಗಸಮಾಜದ ಹೊಣೆಗಾರಿಕೆ ಮುಗಿದಂತಲ್ಲಾ. ರಂಗಸಮಾಜದ ಸರ್ವಸದಸ್ಯರ ಒಕ್ಕೋರಲಿನ ನಿಲುವನ್ನು ಸಚಿವೆ ಬೆಂಬಲಿಸದೇ ಹೋದರೆ ಅಲ್ಲಿ ಇದ್ದು ಏನು ಪ್ರಯೋಜನ. ತಮ್ಮ ಮಾತಿಗೆ ಕನಿಷ್ಟ ಗೌರವ ಇಲ್ಲದಿದ್ದಲ್ಲಿ ಇರುವ ಅಗತ್ಯವಾದರೂ ಏನಿದೆ? ಮೊದಲು ಎಲ್ಲಾ ಸದಸ್ಯರೂ ರಾಜೀನಾಮೆ ಕೊಟ್ಟು ಹೊರಗೆ ಬಂದು ಪ್ರೆಸ್ ಮೀಟ್ ಮಾಡಿ ಜನರಿಗೆ ಸತ್ಯ ಸಂಗತಿಯನ್ನು ತಿಳಿಸಲಿ. ಅದು  ಬಿಟ್ಟು ಕಲಬುರ್ಗಿ ವಿವಾದದ ಸಂದರ್ಭದಲ್ಲಿ ಕೊಟ್ಟ ರಾಜೀನಾಮೆಯ ನೆಪ ಹೇಳಿ ಅಯ್ಯೋ ನಾವು ರಾಜೀನಾಮೆ ಕೊಟ್ಟಿದ್ದೇವೆ.. ಸರಕಾರ ಅಂಗೀಕರಿಸದಿದ್ದರೆ ಏನು ಮಾಡೋದು? ಎನ್ನುವ ಅವಕಾಶವಾದಿತನವನ್ನು ಮೊದಲು ಬಿಡಲಿ. ರಂಗಾಯಣದ ಮೇಲೆ.. ಅಲ್ಲಿಯ ಕಲಾವಿದರ ಹಿತರಕ್ಷಣೆಯ ಮೇಲೆ ರಂಗಸಮಾಜದ ಸದಸ್ಯರುಗಳಿಗೆ ಕನಿಷ್ಟ ಬದ್ದತೆ ಇದ್ದಲ್ಲಿ ಎಲ್ಲರೂ ಸೇರಿ ಸಚಿವೆಯ ಮೇಲೆ ಒತ್ತಡವನ್ನು ಹಾಕಲಿ. ಅದೂ ಆಗದಿದ್ದರೆ ಮುಖ್ಯಮಂತ್ರಿಗಳನ್ನೇ ಬೇಟಿಯಾಗಿ ಸಮಸ್ಯೆಗಳನ್ನು ಮನದಟ್ಟು ಮಾಡಿ ಪರಿಹಾರ ಕಂಡುಕೊಳ್ಳಲಿ. ಅದೂ ಸಹ ಅಸಾಧ್ಯವಾಗದೇ ಹೋದರೆ ಇನ್ನೊಮ್ಮೆ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆಯನ್ನು ಕೊಟ್ಟು ಮಾಧ್ಯಮಗಳ ಮುಂದೆ ಬಂದು ಆಳುವ ವರ್ಗಗಳ ರಂಗಾಯಣ ವಿರೋಧಿತನವನ್ನು ಹಾಗೂ ಕಲಾವಿದರ ಕುರಿತು ತೋರುವ ನಿರ್ಲಕ್ಷ ದೋರಣೆಯನ್ನು ಬಹಿರಂಗ ಪಡಿಸಲಿ. ರಂಗಸಮಾಜದ ಸದಸ್ಯರುಗಳು ಈ  ತಕ್ಷಣವೇ ಹೋಗಿ ರಂಗಾಯಣದ ಕಲಾವಿದರು ನಡೆಸುತ್ತಿರುವ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಅವರ ಪರವಾದ ಹೋರಾಟಕ್ಕೆ ಬೆಂಬಲ ಕೊಡಲಿ. ಇದ್ಯಾವುದನ್ನೂ ಮಾಡದೇ ಕೇವಲ ಬಾಯಿಮಾತಲ್ಲಿ ನಾವು ವರದಿ  ಸಲ್ಲಿಸಿದ್ದೇವೆ.. ನಾವು ರಾಜೀನಾಮೆ ಕೊಟ್ಟಿದ್ದೇವೆ.. ಎನ್ನುವ ಪಲಾಯಣವಾದಿತನವನ್ನು ತೋರಿದರೆ ಇವರೂ ಸಹ ಕಲಾ ವಿರೋಧಿ ವ್ಯವಸ್ಥೆಯ ಭಾಗವೆಂದೇ ರಂಗಭೂಮಿ ತಿಳಿಯುತ್ತದೆ. ಕಲೆ ಹಾಗೂ ಕಲಾವಿದರ ಪರವಾಗಿದ್ದೇವೆ ಎಂಬುದನ್ನು ರಂಗಸಮಾಜದ ಎಲ್ಲಾ ಸದಸ್ಯರೂ ಬಹಿರಂಗವಾಗಿ ಸಾಬೀತು ಪಡಿಸುವ ಸಮಯ ಬಂದಿದೆ. ಅವರ ರಂಗಬದ್ದತೆ ಈಗ ನಿರ್ಧಾರವಾಗಬೇಕಿದೆ. ಅವರೆಲ್ಲಾ ಈಗ ಸರಕಾರದ ಪರವಾಗಿ ನಿರ್ಲಿಪ್ತ ಧೋರಣೆ ಅನುಸರಿಸುತ್ತಾರೋ ಇಲ್ಲವೇ ಕಲಾವಿದರ ಪರವಾಗಿ ಪ್ರತಿಭಟನಾ ಮಾರ್ಗ ಹೊಡಿಯುತ್ತಾರೋ ಅನ್ನುವುದರ ಮೇಲೆ ರಂಗಸಮಾಜದ ಸದಸ್ಯರ ರಂಗಕಾಳಜಿ ನಿಂತಿದೆ. 
ಜೊತೆಗೆ ಈಗ ಹೋರಾಟ ನಿರತ ರಂಗಾಯಣದ ಕಲಾವಿದರುಗಳು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಕರ್ನಾಟಕದ ರಂಗಕರ್ಮಿ ಕಲಾವಿದರುಗಳನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಹೋರಾಟವನ್ನು ವಿನ್ಯಾಸಗೊಳಿಸಬೇಕಿದೆ. ಕೇವಲ ನಿವೃತ್ತಿ ಸೌಲಭ್ಯದ ಒಂದಂಶದ ಹೋರಾಟದ ಜೊತೆಗೆ ಶಿವಮೊಗ್ಗ, ಕಲಬುರ್ಗಿ ಹಾಗೂ ಮೈಸೂರು ರಂಗಾಯಣಕ್ಕೆ ನಿರ್ದೇಶಕರನ್ನು ಈ ಕೂಡಲೇ ನಿಯಮಿಸಬೇಕೆಂಬ ಪ್ರಮುಖ ಅಂಶವನ್ನೂ ತಮ್ಮ ಬೇಡಿಕೆಯ ಭಾಗವಾಗಿ ಸೇರಿಸಿಕೊಳ್ಳಬೇಕಿದೆ. ಇಲ್ಲವಾದರೆ ಕಲಾವಿದರು ತಮ್ಮ ಅನುಕೂಲಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ ಅದಕ್ಕೆ ನಾವ್ಯಾಕೆ ಬೆಂಬಲಿಸಬೇಕೆಂದು ಬಹುತೇಕ ರಂಗಕರ್ಮಿಗಳು ದೂರವೇ ಉಳಿಯುತ್ತಾರೆ. ಆದರೆ.. ಸಮಗ್ರ ರಂಗಾಯಣದ ಉಳಿವು ಹಾಗೂ ಬೆಳವಣಿಗೆಯನ್ನು ಮುಖ್ಯವಾಗಿಟ್ಟುಕೊಂಡು ಅದರ ಭಾಗವಾಗಿ ಕಲಾವಿದರ ಹಿತರಕ್ಷಣೆಯನ್ನು  ಸೇರಿಸಿದರೆ ಸಮಗ್ರ ಕನ್ನಡ ರಂಗಭೂಮಿ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ.

ಜೊತೆಗೆ ಆಳುವ ವರ್ಗ ಯಾವಾಗಲೂ ತಮಗೆ ಹೊರೆಯಾದ ರಂಗಾಯಣದಂತಾ ಕಲಾಸಂಸ್ಥೆಗಳನ್ನು ಹೇಗಾದರೂ ಮಾಡಿ ಮುಚ್ಚಲು ಪ್ರಯತ್ನಿಸುತ್ತಿರುತ್ತವೆ. ಪ್ರಭುತ್ವ ಯಾವುದೇ ಇರಲಿ  ಅದು ಮಣಿಯುವುದು ಒತ್ತಡ ಹಾಗೂ ಜನಾಂದೋಲನಗಳಿಗೆ ಮಾತ್ರ. ಆದ್ದರಿಂದ ಕರ್ನಾಟಕದ ಎಲ್ಲಾ ರಂಗಕರ್ಮಿ ಹಾಗೂ ಕಲಾವಿದರುಗಳ ಸಹಕಾರವನ್ನು ಪಡೆದು ಹೋರಾಟದ ಮಜಲುಗಳನ್ನು ನಿರ್ಧರಿಸುವುದು ರಂಗಾಯಣದ ಹಿತದೃಷ್ಟಿಯಿಂದಾ ಒಳ್ಳೆಯದು. ಪ್ರಸನ್ನರವರ ಮುಂದಾಳತ್ವದಲ್ಲಿ ಒಂದು ನಿಯೋಗ ಹೋಗಿ ಮುಖ್ಯ ಮಂತ್ರಿಗಳನ್ನು ಬೇಟಿಯಾಗಿ ರಂಗಾಯಣದ ಸಮಸ್ಯೆ ಹಾಗೂ ಕಲಾವಿದರುಗಳ ಅತಂತ್ರತೆಯ ಬಗ್ಗೆ ವಿವರಿಸಿ ಪರಿಹಾರೋಪಾಯಗಳನ್ನು  ಸೂಚಿಸುವುದು ಈ ತಕ್ಷಣದ ಸಕಾರಾತ್ಮಕ ದಾರಿಯಾಗಿದೆ. ಪ್ರಸನ್ನರವರು ಇನ್ನೊಮ್ಮೆ ರಂಗಾಯಣ ಹಾಗೂ ಕಲಾವಿದರುಗಳ ಹಿತರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡು ರಂಗಕರ್ಮಿಗಳೆಲ್ಲಾ ಅದಕ್ಕೆ ಸಾತ್ ಕೊಟ್ಟರೆ ಆದಷ್ಟು ಬೇಗ ರಾಜ್ಯದ ದೊರೆಗಳ ಗಮನ ಸೆಳೆದು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.  ಒಟ್ಟಿನ ಮೇಲೆ ಕಲಾವಿದರ ಭವಿಷ್ಯದ ಬದುಕು ಹಸನಾಗಬೇಕು ಹಾಗೂ ಎಲ್ಲಾ ರಂಗಾಯಣಗಳೂ ಸಹ ದೇಶಕ್ಕೆ ಮಾದರಿಯಾಗುವಂತೆ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಅದಕ್ಕೆ ಆಳುವ ವ್ಯವಸ್ಥೆ ಅಗತ್ಯ ನೆರವನ್ನು ಕೊಡಬೇಕು ಎನ್ನುವುದೇ ಎಲ್ಲಾ ರಂಗಕರ್ಮಿಗಳ  ಆಶಯವಾಗಿದೆ. ಆ ಆಶಯಕ್ಕೆ ಪೂರಕವಾಗಿ ರಂಗಾಯಣದ ಕಲಾವಿದರುಗಳು, ರಂಗಸಮಾಜದ ಸದಸ್ಯರುಗಳು ಹಾಗೂ ಕನ್ನಡ ರಂಗಭೂಮಿಯ ಸಮಸ್ತ ರಂಗಕರ್ಮಿ ಕಲಾವಿದರುಗಳು ಸ್ಪಂದಿಸಬೇಕಿದೆ. ಸರಕಾರದ ಮೇಲೆ ಎಲ್ಲಾ ರೀತಿಯಲ್ಲಿ ಒತ್ತಡ ಹೇರಬೇಕಿದೆ. ಒಟ್ಟಿನ ಮೇಲೆ ನಾಟಕಗಳ ಮೂಲಕ ದಶಕಗಳ ಕಾಲ ಜನರನ್ನು ರಂಜಿಸಿ ಎಚ್ಚರಿಸಿದ ಕಲಾವಿದರುಗಳ ಬದುಕು ನೆಮ್ಮದಿಯಿಂದ ಇರಬೇಕಿದೆ. ರಂಗಾಯಣ ಉಳಿದು ಬೆಳೆಯಬೇಕಿದೆ.

-ಶಶಿಕಾಂತ ಯಡಹಳ್ಳಿ             

            


ಮಂಗಳವಾರ, ಡಿಸೆಂಬರ್ 20, 2016

ಕಲಾವಿದ ಮಂಜುನಾಥ ಬೆಳಕೆರೆ ಅಕಾಲಿಕ ನಿರ್ಗಮನ; ರಂಗಕರ್ಮಿಗೆ ಅಂತಿಮ ನಮನ





 

ಯಾರಾದರೂ ಸಾಧಕರು ಸತ್ತರೆ ತುಂಬಲಾಗದ ನಷ್ಟ, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಅನಾಥವಾಯಿತು, ಶೂನ್ಯವೊಂದು ಆವರಿಸಿತು ಎಂಬೆಲ್ಲಾ ಅತಿಶಯೋಕ್ತಿಯ ಮಾತುಗಳನ್ನು ಹೇಳುವುದು ಹಾಗೂ ಬರೆಯುವುದನ್ನು ಗಮನಿಸಬಹುದು. ಸಾಧಕ ವ್ಯಕ್ತಿ ತೀರಿಕೊಂಡಾಗ ಅನುಕಂಪದಿಂದ ಈ ರೀತಿಯ ಹೇಳಿಕೆಗಳು ಬರುವುದು ಸಾಮಾನ್ಯ. ಒಬ್ಬ ವ್ಯಕ್ತಿ ತನ್ನ ಇತಿಮಿತಿಯಲ್ಲಿ ಸಾಧನೆ ಮಾಡಿ ಮಡಿದಾಗ ಅವರ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕಾದದ್ದು ಬದುಕಿದವರ ಕರ್ತವ್ಯ. ಆದರೆ.. ವಯಸ್ಸಾಗಿಯೋ ಅಥವಾ ಅನಾರೋಗ್ಯದಿಂದಲೋ ಇಲ್ಲವೇ ನಿರಾಸಕ್ತಿಯಿಂದಲೋ ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ ನಿಂತು ಹೋದ ನಂತರ ಮರಣಹೊಂದಿದಾಗ ತುಂಬಲಾರದ ನಷ್ಟವಾಯಿತು, ಶೂನ್ಯ ಸೃಷ್ಟಿಯಾಯಿತು ಎಂದರೆ ಅದು ಸತ್ಯಕ್ಕೆ ದೂರದ ಮಾತು. ಯಾಕೆಂದರೆ ಅವರ ಕೊಡುಗೆ ಈಗಾಗಲೇ ಸಮಾಜಕ್ಕೆ ಸಂದಾಗಿದೆ. ಇನ್ನು ಯಾವುದೇ ರೀತಿಯ ಸಾಧನೆ ಅವರಿಂದ ಸಾಧ್ಯವೇ ಇಲ್ಲವಾಗಿರುತ್ತದೆ, ಆಗ ಅವರ ಕೆಲಸಗಳನ್ನು ಸ್ಮರಿಸಿಕೊಳ್ಳುವ ಕೆಲಸ ಆಗಬೇಕೆ ಹೊರತು ಅತಿರೇಕದ ಅವಾಸ್ತವಿಕ ಶೂನ್ಯಗಳನ್ನು ಸೃಷ್ಟಿಸುವುದು ಸಮಂಜಸವಲ್ಲಾ. ಆದರೆ.. ರಂಗಾಯಣದ ಕಲಾವಿದ ಮಂಜುನಾಥ ಬೆಳಗೆರೆಯಂತವರಿಗೆ ಈ ಮಾತು ಅನ್ವಯಿಸುವುದಿಲ್ಲ.

ಯಾಕೆಂದರೆ ಅವರಲ್ಲಿ ಇನ್ನೂ ಪುಟಿಯುತ್ತಿದ್ದ ಕ್ರಿಯಾಶೀಲತೆ ಇತ್ತು, ಪ್ರತಿ ದಿನ ಏನಾದರೂ ಮಾಡಬೇಕೆಂಬ ತುಡಿತವಿತ್ತು, ಪ್ರತಿಕ್ಷಣ ಯಾವುದೋ ನಾಟಕದ ಬಗ್ಗೆಯೋ, ರಂಗತರಬೇತಿಯ ಕುರಿತೋ ಇಲ್ಲವೇ ತಾವು ನಟಿಸುವ ಪಾತ್ರದ ಕುರಿತೋ ಯೋಚಿಸುತ್ತಲೇ ತೊಡಗಿಕೊಳ್ಳುವ ದಾವಂತ ಇರುತ್ತಿತ್ತು. ಅವರಿಗೆ ಇನ್ನೂ ಕೇವಲ ಐವತ್ತೆರಡು ವರ್ಷ ವಯಸ್ಸಷ್ಟೇ. ಇನ್ನೂ ಸಾಧಿಸಬೇಕಾದದ್ದು ಬೇಕಾದಷ್ಟಿತ್ತು. ಅಯಸ್ಸು ಗಟ್ಟಿಯಾಗಿದ್ದರೆ ನಟಿಸಲು ಬೇಕಾದಷ್ಟು ನಾಟಕಗಳಿದ್ದವು, ನಾಟಕವಾಗಿ ಬರೆಯಲು ಬೇಕಾದಷ್ಟು ವಿಷಯಗಳಿದ್ದವು, ತರಬೇತಿಗೊಳಿಸಲು ನೂರಾರು ಯುವಕ ಯುವತಿಯರಿದ್ದರು. ಆದರೇನು ಮಾಡೋದು ಅವರ ಆಯಸ್ಸು ಅರ್ಧ ದಾರಿಯ ಪಯಣದಲ್ಲೇ ಮುಗಿದೇ ಹೋಯಿತು. ಬೆಳಕೆರೆಯವರಿಂದ ಇನ್ನೂ ರಂಗಭೂಮಿಗೆ ಸಲ್ಲಬಹುದಾದ ಕೊಡುಗೆ ಇನ್ನಿಲ್ಲದಾಯಿತು. ಅಷ್ಟರ ಮಟ್ಟಿಗೆ ಮಂಜುನಾಥರವರ ಅಗಲಿಕೆಯಿಂದಾಗಿ ರಂಗಭೂಮಿಗೆ ನಷ್ಟವಾಯಿತು. ಬಹುಪ್ರತಿಭೆಯ ಕಲಾವಿದನ ನಿರ್ಗಮನ ಒಂದಿಷ್ಟಾದರೂ ಶೂನ್ಯವನ್ನು ಸೃಷ್ಟಿಸಿತು.   ಕಾಲನಿಗೆ ಕರುಣೆ ಎಂಬುದಿಲ್ಲ. ಫಲ ಕೊಡುವ ಮರವನ್ನೇ ಉರುಳಿಸಿಬಿಟ್ಟ. ಮಂಜುನಾಥ ಬೆಳಕೆರೆ ಎನ್ನುವ ರಂಗಮಿತ್ರ ಇನ್ನಿಲ್ಲ ಎನ್ನುವ ಸುದ್ದಿಯೇ ಅವರನ್ನು ಬಲ್ಲ ಅನೇಕರಿಗೆ ತಳಮಳವನ್ನು ಹುಟ್ಟಿಸಿದ್ದಂತೂ ದಿಟ.


ಡಿಸೆಂಬರ್ 18ರ ರಾತ್ರಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ಭಾರತದ ವಿವಿಧ ಯುನಿವರ್ಸಿಟಿಗಳ ಕಾಲೇಜುಗಳ ನಾಟಕ ಸ್ಪರ್ಧೆಯ ತೀರ್ಪುಗಾರನಾಗಿ ಹೋಗಿದ್ದ ನಾನು ಬೆಳಿಗ್ಗೆಯಿಂದಾ ಹದಿನಾಲ್ಕು ನಾಟಕಗಳನ್ನು ನೋಡಿ ನನ್ನ ತೀರ್ಪು ಬರೆದುಕೊಟ್ಟು ಮನೆಗೆ ಬಂದು ಉಸ್ಸಪ್ಪಾ ಅಂತಾ ಕೂತಿದ್ದೆ. ಆಗ ನನಗೆ ಪೋನ್ ಮಾಡಿದ ರಂಗ ಗೆಳೆಯ ಮಂಜುನಾಥ ಬೆಳಕೆರೆ ರಂಗಾಯಣದ ಬಹುರೂಪಿ ರಂಗೋತ್ಸವಕ್ಕೆ ಈ ಸಲ ತಪ್ಪದೇ ಬರಲೇಬೇಕು, ಬಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಲೇಖನ ಬರೆಯಲೇಬೇಕುಎಂದು ಆಗ್ರಹಿಸಿದ. ರಂಗಾಯಣಕ್ಕೆ ಚಂದ್ರಲೇಖೆ ಎನ್ನುವ ಹೊಸ ನಾಟಕವೊಂದನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹರ್ಷದಿಂದ ತಿಳಿಸಿದ. ಆ ನಾಟಕದ ತಾಲಿಂ ಆರಂಭವಾಗಿದ್ದು ಅದನ್ನು ಮುಗಿಸಿಕೊಂಡ ಬರಲು ಇಷ್ಟು ತಡವಾಯಿತೆಂದೂ ಹೇಳಿದ. ನಾನು ಬರೆದ ಬಾದರದಿನ್ನಿಯವರ ಲೇಖನದ ಕುರಿತು ಮಾತಾಡಿದ. ಅವರ ಮಾತುಗಳಲ್ಲಿ ಅದೇನೋ ಅವಸರ ಇದ್ದಂತಿತ್ತು. ದ್ವನಿ ಸಣ್ಣಗೆ ನಡುಗುತ್ತಿರುವಂತೆ ಭಾಸವಾಯಿತು. ಯಾಕೆಂದು ಕೇಳಿದೆ. ಇಲ್ಲಾ ಒಂಚೂರು ಸುಸ್ತೆಂದು ಸಬೂಬು ಹೇಳಿದ. ಆರೋಗ್ಯದ ಬಗ್ಗೆ ಗಮನಕೊಡು ಮಾರಾಯಾ.. ಈ ನಾಟಕ ಮಾಡೋದು ಮಾಡಿಸೋದೆಲ್ಲಾ ಜೀವನ ಪೂರ್ತಿ ಇರೋದೆ ಎಂದು ಆತಂಕದಿಂದಲೇ ಹೇಳಿದೆ.. ಆದರೆ.. ಮರುದಿನ ಡಿಸೆಂಬರ್ ೧೯ರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಊಹಿಸದ ಸುದ್ದಿಯೊಂದು ಮೈಸೂರಿನಿಂದ ಬಂತು. ಬೆಳಕೆರೆಯವರಿಗೆ ಹೃದಯಾಘಾತವಾಗಿ ತೀರಿಕೊಂಡರೆಂದು ರಂಗಾಯಣದ ರಂಗಶಿಕ್ಷಣ ಕೇಂದ್ರದಲ್ಲಿರುವ ನನ್ನ ಶಿಷ್ಯನೊಬ್ಬ ಪೋನಾಯಿಸಿದ. ಬೇರೆ ಗೆಳೆಯರಿಗೆ ಪೋನ್ ಮಾಡಿ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ ಎನ್ನುವಷ್ಟರಲ್ಲೇ ಬೆಳಕೆರೆ ಎನ್ನುವ ಹೃದಯವಂತ ರಂಗಜೀವಿಯ ಹೃದಯಬಡಿತ ನಿಂತ ಸುದ್ದಿಯೇ ಎಲ್ಲಾ ಕಡೆಯಿಂದ ಹರಿದು ಬಂತು. ನಿನ್ನೆ ಇದ್ದವ ಇಂದಿಲ್ಲಾ ಎಂದು ನಂಬುವುದೇ ಅಸಾಧ್ಯವೆನಿಸಿತ್ತು. ಆದರೂ ಹೇಗಾದರೂ ಇದೊಂದು ಸುದ್ದಿ ಸುಳ್ಳಾಗಬಹುದೆಂಬ ನಿರೀಕ್ಷೆಯೂ ಸುಳ್ಳಾಯಿತು. ಕ್ರಿಯಾಶೀಲ ಜೀವವೊಂದು ಅಕಾಲಿಕವಾಗಿ ಕಾಲನ ವಶವಾಯಿತು.

ಬದುಕು ಅಂದರೆ ಇಷ್ಟೇನಾ? ಆಗಿದ್ದು ಈಗಿಲ್ಲ ಎನ್ನುವುದು ಬದುಕಿನ ಅನಿಶ್ಚಿತತೆಯ ಸಂಕೇತಾನಾ? ಅಥವಾ ಕೆಲಸದ ಒತ್ತಡದ ದಾವಂತದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದ್ದಕ್ಕೆ  ದೇಹ ವ್ಯಕ್ತಿಗೆ ಕೊಡುವ ಅಂತಿಮ ಶಿಕ್ಷೇನಾ? ನಿಜಕ್ಕೂ ಕ್ರಿಯಾಶೀಲ ವ್ಯಕ್ತಿಗಳ ಅಕಾಲಿಕ ನಿರ್ಗಮನವಾದಾಗಲೆಲ್ಲಾ ಈ ಪ್ರಶ್ನೆಗಳು ಕಾಡತೊಡಗುತ್ತವೆ. ಇನ್ನೂ ಬದುಕಿ ಬಾಳಿ ಅನೇಕ ಜನರಿಗೆ ನೆರಳಾಗುವ ಹೆಮ್ಮರ ಧರಶಾಹಿಯಾದಾಗ ಬೇಸರ ಮಡುಗಟ್ಟುತ್ತದೆ. ಬೆಳಕೆರೆಯಂತಹ ರಂಗಕರ್ಮಿಗಳು ಸಾಧನೆಯ ಹಾದಿಯ ನಡುವೆ ಕೆಲಸ ಬಿಟ್ಟೆದ್ದು ಹೋದಾಗ ನಿರಾಸೆ ಮನಸನ್ನು ಹಿಂಡುತ್ತದೆ. ಆದರೂ ಸಾವೆಂಬುದ ತಡೆಯುವುದು ಯಾರ ಕೈಯಲ್ಲೂ ಇಲ್ಲವಲ್ಲಾ.. ಅಗಲಿದ ರಂಗಮಿತ್ರನಿಗೆ ಅಂತಿಮ ನಮನ ಸಲ್ಲಿಸಿ ಅವರು ಕಲಾಲೋಕಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುವುದೊಂದೇ ಬದುಕಿರುವ ನಮಗಿರುವ ಏಕೈಕ ಮಾರ್ಗ ಹಾಗೂ ಕರ್ತವ್ಯವಾಗಿದೆ.


ಮೂರು ತಿಂಗಳ ಹಿಂದೆ ಮೂರು ದಿನಗಳ ಕಾಲ ಕುಪ್ಪಳ್ಳಿಯಲ್ಲಿ ನಾಟಕ ರಚನಾ ಕಮ್ಮಟದಲ್ಲಿ ಬೆಳಕೆರೆ ಭಾಗವಹಿಸಿದ್ದರು. ಅವರೊಂದಿಗೆ ನಾನು ಕಳೆದ ಆ ಮೂರು ದಿನಗಳು ಹಾಗೂ ಅವರೊಂದಿಗೆ ಆಗ ನಡೆದ ರಂಗಭೂಮಿ ಕುರಿತ ಚರ್ಚೆಗಳು ಅವಿಸ್ಮರಣೀಯ. ನಾಟಕವೊಂದನ್ನು ಬರೆದುಕೊಂಡು ಬಂದು ಅದರ ಕುರಿತು ಕಮ್ಮಟದಲ್ಲಿ  ಚರ್ಚಿಸಬೇಕಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ಮಂಜುನಾಥ ಬೆಳಕೆರೆಗೆ ನಾಟಕ ಬರೆದುಕೊಂಡು ಬರಲು ಆಗಲೇ ಇಲ್ಲಾ. ಬೆಳಿಗ್ಗೆಯಲ್ಲಾ ಬೇರೆಯವರ ನಾಟಕಗಳ ಕುರಿತ ಚರ್ಚೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಬೆಳಕೆರೆ ರಾತ್ರಿ ಎಲ್ಲಾ ಶಿಭಿರಾರ್ಥಿಗಳು ಊಟ ಮುಗಿಸಿ ಮಲಗಿದ ನಂತರ ನಾಟಕ ಬರೆಯಲು ಕುಳಿತುಕೊಳ್ಳುತ್ತಿದ್ದರು. ಆ ಕಡೆ ರಂಗಾಯಣದ ರಾಮನಾಥರು ಈ ಕಡೆ ಬೆಳಕೆರೆ ಮಂಜುನಾಥರು ತಮ್ಮ ನಾಟಕಗಳ ದೃಶ್ಯಗಳನ್ನು ಬರೆಯುತ್ತಾ ಕೂತರೆಂದರೆ ಜಗದ ಪರಿವನ್ನೇ ಮರೆಯುತ್ತಿದ್ದರು. ರಾತ್ರಿ ಎರಡು ಮೂರು ಗಂಟೆಗಳ ಕಾಲ ಆದಷ್ಟು ತನ್ಮಯತೆಯಿಂದ ದೃಶ್ಯಗಳನ್ನು ಕಟ್ಟಿ ಬೆಳಿಗ್ಗೆ ಮತ್ತೆ ಎಲ್ಲರ ಜೊತೆಗೆ ಚರ್ಚೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದ ಮಂಜುನಾಥರ ರಂಗಬದ್ದತೆಗೆ ಉಘೇ ಹೇಳಲೇಬೇಕು.

ಹೀಗೆ ಕಮ್ಮಟದಲ್ಲಿ ಬರೆದ ರಥಯಾತ್ರೆ ನಾಟಕದ ದೃಶ್ಯಗಳನ್ನು ಬೆಳಿಗ್ಗೆ ಕೂತು ನನಗೆ ವಿವರಿಸುತ್ತಾ.. ತಿಳಿಸಿದ ಬದಲಾವಣೆಗಳನ್ನು ಅರಿತು ಮತ್ತೆ ತಮ್ಮ ಸ್ಕ್ರಿಪ್ಟನ್ನು ತಿದ್ದುತ್ತಾ ಮೂರನೆಯ ದಿನದ ಹೊತ್ತಿಗೆ ಕೋಮುಸಂಘರ್ಷದಲ್ಲಿ ದಮನಕ್ಕೊಳಗಾದ ಹೆಣ್ಣಿನ ಕುರಿತ ಒಂದು ಒಳ್ಳೆಯ ನಾಟಕದ ರೀಡಿಂಗ್ ಕೊಟ್ಟೇ ಬಿಟ್ಟರು. ಅವರ ದೃಶ್ಯಗಳನ್ನು ಕಟ್ಟುವ ಶಕ್ತಿ ಸಶಕ್ತವಾಗಿತ್ತು. ಅವರು ಮೊದಲು ನಾಟಕದ ಕಥಾಸಾರಾಂಶ ಹೇಳಿದಾಗ ಇದನ್ನು ಹೇಗಪ್ಪಾ ನಾಟಕ ಮಾಡ್ತಾರೆ ಎನ್ನುವ ಆತಂಕ ನನ್ನನ್ನು ಕಾಡಿದ್ದಂತೂ ಸತ್ಯ. ಆದರೆ ಅದು ದೃಶ್ಯರೂಪದಲ್ಲಿ ರಂಗಪಠ್ಯವಾದಾಗ ಕೊಟ್ಟ ಹೊಳಹುಗಳೇ ಅನನ್ಯವಾಗಿದ್ದವು. ಮಹಿಳೆಯ ಮೇಲೆ ಪುರುಷರ ನೇರ ಕ್ರೌರ್ಯವನ್ನು ಎಲ್ಲಿಯೂ ಹೇಳದ ಈ ರಥಯಾತ್ರೆ ನಾಟಕ ಭಾವನಾತ್ಮಕವಾಗಿಯೇ ಮಹಿಳೆ ಅನುಭವಿಸುವ ಮಾನಸಿಕ ಹಿಂಸೆಯನ್ನು ತಣ್ಣಗೆ ಹೇಳುತ್ತಾ ಹೋಗುತ್ತದೆ. ಪುರುಷರ ಅತಿರೇಕದ ಸಿದ್ದಾಂತಗಳು ಅದು ಹೇಗೆ ಮನೆಯೊಳಗಿರುವ ಮಹಿಳೆಯನ್ನು ಬಾಧಿಸುತ್ತವೆ ಎನ್ನುವುದರ ಮೇಲೆ ಈ ನಾಟಕ ಬೆಳಕು ಚೆಲ್ಲುತ್ತದೆ. ಈಗ ಈ ರಥಯಾತ್ರೆ ನಾಟಕವು ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ತಂಡದಿಂದ ರಂಗವೇದಿಕೆಯ ಮೇಲೆ ಪ್ರದರ್ಶನಕ್ಕೆ ಸಿದ್ದವಾಗಿದೆ. ಆದರೆ ತಮ್ಮದೇ ನಾಟಕವನ್ನು ನೋಡುವ ಭಾಗ್ಯ ಬೆಳಕೆರೆಗೆ ಇಲ್ಲದೇ ಹೋಯಿತು. ಈ ನಾಟಕದ ಟೆಕ್ನಿಕಲ್ ಶೋ ಆದಾಗ ಕೆಲಸದ ಒತ್ತಡದಿಂದ ಬರಲಿಲ್ಲ. ಆ ನಾಟಕಕ್ಕೆ ಒಂದೆರಡು ಹಾಡು ಬರೆದು ಕೊಡುವುದು ಬಾಕಿ ಇತ್ತು. ಅದನ್ನೂ ಮಾಡಲಿಲ್ಲ. ಮಹತ್ವಾಂಕಾಂಕ್ಷೆಯಿಂದ ಬರೆದ ನಾಟಕದ ಪ್ರದರ್ಶನವನ್ನು ನೋಡುವ ಮೊದಲೇ ನಾಟಕಕಾರ ನಿರ್ಗಮಿಸಿಯಾಗಿತ್ತು. ಇತ್ತ ಬೆಳಕೆರೆ ಬರೆದ ಕೊಟ್ಟ ಕೊನೆಯ ನಾಟಕ ರಥಯಾತ್ರೆ ರಂಗಭೂಮಿಗೆ ದಕ್ಕಿತು. ಅತ್ತ ಮೈಸೂರಲ್ಲಿ ಬೆಳಕೆರೆಯ ಅಂತಿಮಯಾತ್ರೆಯೂ ಮುಗಿದಿತ್ತು.


ಬೆಳಕೆರೆಯವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ. ಎಪ್ಪತ್ತರ ದಶಕದಲ್ಲಿ ರಂಗಭೂಮಿಯತ್ತ ಆಕರ್ಷಿತರಾದ ಬೆಳಗೆರೆ ರಂಗಶಿಕ್ಷಣ ಕಲಿಯುವ ಅದಮ್ಯ ಆಸೆಯಿಂದ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಸೇರಿದರು. ಒಂದು ವರ್ಷದ ಶಿಕ್ಷಣ ಪಡೆದು ಕೆಲವಾರು ನಾಟಕಗಳಲ್ಲಿ ನಟಿಸಿ ಗಮನಸೆಳೆದರು. ನೀನಾಸಮ್‌ನಲ್ಲಿದ್ದಾಗಲೇ ತಮ್ಮ ಅಭಿನಯದ ಮೂಲಕ ರಂಗದಿಗ್ಗಜ ಬಿವಿ ಕಾರಂತರ ಗಮನ ಸೆಳೆದರು. ೧೯೮೯ರಲ್ಲಿ ಮೈಸೂರಿನಲ್ಲಿ ರಂಗಾಯಣವನ್ನು ರಂಗಕರ್ಮಿಗಳ ಒತ್ತಾಯದ ಮೇರೆಗೆ ಸರಕಾರ ಆರಂಭಿಸಿದಾಗ ಅದರ ಮೊದಲ ನಿರ್ದೇಶಕರಾದ ಕಾರಂತರು ರಂಗಾಯಣಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಂಡಾಗ ಅದರಲ್ಲಿ ಮಂಜುನಾಥವರ ಹೆಸರೂ ಮುಂಚೂಣಿಯಲ್ಲಿತ್ತು. ಅವತ್ತಿನಿಂದ ಕೊನೆಯ ಉಸಿರಿರುವವರೆಗೂ ಅಂದರೆ ಇಪ್ಪತ್ತೇಳು ವರ್ಷಗಳಿಂದ ಸತತವಾಗಿ ರಂಗಾಯಣದ ಕಲಾವಿದರಾಗಿ ಸೇವೆ ಸಲ್ಲಿಸಿದ ಬೆಳಕೆರೆ ರಂಗಾಯಣದ ಬಹುತೇಕ ನಾಟಕಗಳಲ್ಲಿ ನಟಿಸಿದ್ದಾರೆ. ಪ್ರಸನ್ನರವರ ನಿರ್ದೇಶನದಲ್ಲಿ ಮೂಡಿಬಂದ ಪುಗಳೇಂದಿ ನಾಟಕದ ಪುಗಳೇಂದಿ ಪಾತ್ರವನ್ನು ಬೆಳಕೆರೆ ಅಭಿನಯಿದ್ದ ರೀತಿ ಆ ನಾಟಕ ನೋಡಿದವರ ಮನಸ್ಸಲ್ಲಿ ಇವತ್ತಿಗೂ ಅಚ್ಚಳಿಯದೇ ಉಳಿಯುವಂತಿದೆ. ತಮ್ಮ ವಿಶಿಷ್ಟವಾದ ಮಾನರಿಸಂ ಮತ್ತು ವಿಕ್ಷಿಪ್ತ ದ್ವನಿಯಿಂದಾಗಿ ಯಾವುದೇ ಪಾತ್ರಕ್ಕೆ ಜೀವತುಂಬುತ್ತಿದ್ದ ಮಂಜುನಾಥ ಬೆಳಕೆರೆ ನೋಡುಗರ ಮನಸ್ಸು ಸೆಳೆಯುತ್ತಿದ್ದರು. ತಮಗೆ ಕೊಟ್ಟ ಪಾತ್ರ ಅದೆಷ್ಟೇ ಪುಟ್ಟದಾಗಿದ್ದರೂ ಸಿಕ್ಕ ಅವಕಾಶದಲ್ಲೇ ಮಿಂಚಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಬೆಳಕೆರೆ ಸಿದ್ದಹಸ್ತರಾಗಿದ್ದರು. ಅವರು ಬರೆದ ನನ್ನೊಲು ನೀ ನಿನ್ನೊಳು ನಾ’ ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆರ್ಯಭಟ ಹಾಗೂ ಗ್ರಾಮ ರಂಗ ಪ್ರಶಸ್ತಿಗಳು ಲಭಿಸಿವೆ. ಜೀವಮಾನ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟು ಗೌರವಿಸಿದೆ. ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯ ಜ್ಯೂನಿಯರ್ ಫೆಲೋಶಿಪ್ ಕೂಡಾ ಲಭಿಸಿತ್ತು. ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಿಕ್ಕುವುದು ಬಾಕಿ ಇತ್ತು.. ಅಷ್ಟರಲ್ಲಿ….


ಬೆಳಕೆರೆಯವರ ದ್ವನಿ ಎಲ್ಲರಂತಿರದೇ ಒಂಚೂರು ಕೀರಲಾಗಿತ್ತು. ಗಂಡು ಮತ್ತು ಹೆಣ್ಣು ದ್ವನಿಗಳ ಮಿಶ್ರಣದಂತಿತ್ತು. ಭಾಷಾ ಪ್ರಯೋಗದಲ್ಲೂ ನ್ಯೂನ್ಯತೆಯಿತ್ತು. ಅದನ್ನು ಕುರಿತು ಕೆಲವರು ಅಪಹಾಸ್ಯ ಮಾಡಿದ್ದೂ ಇದೆ. ಆದರೆ ತಮಗಿರುವ ಕೊರತೆಯನ್ನೇ ಶಕ್ತಿಯನ್ನಾಗಿಸಿಕೊಂಡು ಪಾತ್ರಕ್ಕೆ ಜೀವತುಂಬುತ್ತಿದ್ದರು. ಈ ದ್ವನಿಯ ಸಮಸ್ಯೆಯಿಂದಾಗಿ ರಂಗಾಯಣದ ಬಹುತೇಕ ನಾಟಕಗಳಲ್ಲಿ ಹಾಸ್ಯ ಪಾತ್ರಗಳೇ ಸಿಕ್ಕುತ್ತಿದ್ದವು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಬೆಳಕೆರೆ ಸದಾ ಪ್ರಯತ್ನಿಸುತ್ತಿದ್ದರು. ಆದರೂ ಒಳಗೊಳಗೆ ತಮ್ಮ ದ್ವನಿಯ ಕುರಿತು ಹಾಗೂ ಸಿಗುವ ಪಾತ್ರಗಳ ಕುರಿತು ಹಾಗೂ ಜನರಾಡಿಕೊಳ್ಳುವುದರ ಕುರಿತು ಬೇಸರ ಇದ್ದೇ ಇತ್ತು. ಆಗ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ನಟನೆಯ ಜೊತೆಜೊತೆಗೆ ಸಾಹಿತ್ಯದತ್ತ ತೊಡಗಿಸಿಕೊಂಡು ಬರವಣಿಗೆಯನ್ನು ಹಠಕ್ಕೆ ಬಿದ್ದು ರೂಢಿಸಿಕೊಂಡರು. ಮೊದಲು ಕವಿತೆಗಳಿಂದ ಆರಂಭವಾದ ಸಾಹಿತ್ಯ ಕೃಷಿ ನಂತರ ಕೆಲವಾರು ಪತ್ರಿಕೆಗಳಿಗೆ ಬಿಡಿ ಲೇಖನಗಳನ್ನು ಬರೆಯುವಷ್ಟು ತೀವ್ರಗೊಂಡಿತು. ಆ ನಂತರ ನಾಟಕಗಳನ್ನು ಬರೆಯಲು ಆರಂಭಿಸಿದರು.  ಇದಿ ಮುಂಡೆ ಮಗಳು, ಶರೀಫ, ನನ್ನೊಳು ನೀ ನಿನ್ನೊಳು ನಾ, ರಾಜಾಶ್ರಯ, ಕುಂಕುಮ, ಕುಹೂ ಕುಹೂ ಕೋಗಿಲೆ.. ಹೀಗೆ ಹದಿನೆಂಟಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಾಟಕದ ಕೊರತೆಯನ್ನು ಅನುಭವಿಸುತ್ತಿದ್ದ ರಂಗಭೂಮಿಗೆ ರಂಗಪಠ್ಯಗಳ ಕೊಡುಗೆಯನ್ನು ಕೊಟ್ಟರು. 1997ರಲ್ಲಿ ಶರೀಪ್ ನಾಟಕ ಬರೆದು ಸಾಣೆಹಳ್ಳಿಯ ಶಿವಕುಮಾರ ಕಲಾಸಂಘಕ್ಕೆ ನಿರ್ದೆಶಿಸಿದ್ದರು.  ಆ ನಾಟಕವನ್ನು 2002 ರಲ್ಲಿ ಸಿಜಿಕೆಯವರು ಸಾಣೇಹಳ್ಳಿಯ ಶಿವಸಂಚಾರಕ್ಕೆ ಸೋರುತಿಹುದು ಮನೆಯ ಮಾಳಿಗೆ ಹೆಸರಲ್ಲಿ ನಿರ್ದೇಶಿಸಿದ್ದರು. ಆ ನಂತರ ಇಪ್ಟಾ ಸೇರಿದಂತೆ ಹಲವಾರು ತಂಡಗಳು ಈ ಶರೀಫ್ ನಾಟಕವನ್ನು ಆಡಿಸಿದ್ದಾರೆ.  ಪರಸ್ಪರ ಎನ್ನುವ ರಂಗತಂಡವನ್ನೂ ಹುಟ್ಟು ಹಾಕಿ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದರು. ರಂಗಾಯಣದ ರಜಾ ಕಾಲದಲ್ಲಿ ಹೊರಗಿನ ಬೇರೆ ತಂಡಗಳಿಗೂ ನಾಟಕಗಳನ್ನು ನಿರ್ದೇಶಿಸಿ ರಜಾಕಾಲವನ್ನೂ ಸಹ ರಂಗಕ್ರಿಯೆಗೆ ಮುಡುಪಾಗಿಡುವ ಬದ್ದತೆಯನ್ನು ಹೊಂದಿದ್ದರು. ರಂಗಾಯಣದ ವತಿಯಿಂದ ದೆಹಲಿಗೂ ಹೋಗಿ ಕನ್ನಡ ಸಂಘಕ್ಕೆ ಸೇವಂತಿ ಪ್ರಸಂಗ ನಾಟಕವನ್ನು ನಿರ್ದೇಶಿಸಿ ಬಂದಿದ್ದರು.


ರಂಗಾಯಣದ ಚೌಕಟ್ಟಿನ ಆಚೆಯೂ ಗುರುತಿಸಿಕೊಳ್ಳುವ ಮಹತ್ವಾಂಕಾಂಕ್ಷೆ ಬೆಳಕೆರೆಯವರಿಗಿತ್ತು. ನಾಗಾಭರಣರವರ ಕೆಲವು ಸಿನೆಮಾ ಹಾಗೂ ಸೀರಿಯಲ್‌ಗಳಿಗೆ ಸ್ಕ್ರಿಪ್ಟ್ ಹಾಗೂ ಸಂಭಾಷಣೆಗಳನ್ನು ಬರೆದರು. ನಾಲ್ಕಾರು ಸಿನೆಮಾಗಳಲ್ಲೂ ಸಹ ನಟಿಸಿದರಾದರೂ ಅದ್ಯಾಕೋ ರಂಗಭೂಮಿ ಅವರನ್ನು ಸಿನೆಮಾಕ್ಷೇತ್ರಕ್ಕೆ ಬಿಟ್ಟುಕೊಡಲಿಲ್ಲ. ಕೆಲವು ನಾಟಕಗಳನ್ನು ನಿರ್ದೇಶಿಸಿದ ಬೆಳಕೆರೆಯವರಿಗೆ ಜಾನಪದದತ್ತ ಅದೆಂತದೋ ಒಲವು. ಹೆಚ್ಚೆಚ್ಚು ಓದುವುದು ಹಾಗೂ ಅದನ್ನು ಕುರಿತು ಬರೆಯುವುದು ಅವರ ಬದುಕಿನ ಭಾಗವೇ ಆಗಿತ್ತು. ಕೆಳವರ್ಗದಿಂದ ಬಂದು ತನ್ನ ಪ್ರತಿಭೆ ಹಾಗೂ ಸಾಧಿಸುವ ಛಲದಿಂದಾಗಿ ಅಸ್ಮಿತೆಯನ್ನು ಕಂಡುಕೊಂಡ ಬೆಳಕೆರೆಯವರಿಗೆ ಹಠಕ್ಕೆ ಬಿದ್ದು ಏನನ್ನಾದರೂ ಸಾಧಿಸುವ ಛಲ ರೂಢಿಯಾಗಿತ್ತು. ತಾನು ಅಂದುಕೊಂಡಿದ್ದೇ ಆಗಬೇಕು ಎನ್ನುವ ತುಡಿತವೂ ಅವರಲ್ಲಿ ಹಠಮಾರಿತನವನ್ನು ಬೆಳೆಸಿತ್ತು. ಆ ಹಠಮಾರಿ ಜಿದ್ದಿನ ವ್ಯಕ್ತಿತ್ವ ಬೆಳಕೆರೆಯ ಶಕ್ತಿಯೂ ಹಾಗೂ ದೌರ್ಬಲ್ಯವೂ ಆಗಿತ್ತು.  ಹಲವಾರು ಸಲ ರಂಗಾಯಣದ ಕಲಾವಿದರೆಲ್ಲಾ ಒಂದು ಕಡೆಯಾದರೆ ತಾವೊಬ್ಬರೇ ಇನ್ನೊಂದು ಕಡೆ ಇದ್ದು ತಮ್ಮ ನಿಲುವಿಗೆ ಅಂಟಿಕೊಂಡಿದ್ದಿದೆ. ರಂಗಾಯಣದಲ್ಲಿ ಆಡಳಿತ ವರ್ಗ ಹಾಗೂ ಕಲಾವಿದರುಗಳ ನಡುವೆ ಸಂಘರ್ಷಗಳಾದಾಗ ಆಳುವ ವ್ಯವಸ್ಥೆಯ ಜೊತೆಗೆ ಇದ್ದದ್ದು ಕೆಲವರಲ್ಲಿ ಆತಂಕ ಹುಟ್ಟಿಸಿದರೂ ಯಾವುದೇ ಕಾರಣಕ್ಕೂ ರಂಗಾಯಣ ಮುಚ್ಚಬಾರದು.. ಆಡಳಿತ ವ್ಯವಸ್ಥೆಯ ವಿರುದ್ಧ ಹೋದರೆ ರಂಗಾಯಣಕ್ಕೆ ಉಳಿಗಾಲವಿಲ್ಲ ಎಂಬುದು ಬೆಳಕೆರೆಯವರ ಅಚಲ ನಿಲುವಾಗಿತ್ತು. ಸಹಕಲಾವಿದರ ವಿರೋಧವನ್ನು ಕಟ್ಟಿಕೊಂಡು ರಂಗಾಯಣದ ಅಸ್ತಿತ್ವ ಉಳಿಸಿಕೊಳ್ಳಲು ಹಲವಾರು ಸಲ ಪ್ರಯತ್ನಿಸಿದ್ದಿದೆ. ಕೆಲವರು ಅವಕಾಶವಾದಿ ಎಂದು ಜರಿದರೂ ಲೆಕ್ಕಿಸದೇ ರಂಗಾಯಣ ಉಳಿಯಬೇಕು ಎನ್ನುವತ್ತಲೇ ತಮ್ಮ ಪ್ರಯತ್ನವನ್ನು ಬೆಳಕೆರೆ ಮಾಡಿದ್ದಿದೆ. ಅವರ ನಿರ್ಧಾರಗಳ ಹಿಂದೆ ಮಹತ್ವಾಕಾಂಕ್ಷೆಯೊಂದು ಯಾವಾಗಲೂ ಕೆಲಸ ಮಾಡುತ್ತಲೇ ಇರುವುದನ್ನು ಗಮನಿಸಬಹುದಾಗಿದೆ. ಆ ಮಹತ್ವಾಕಾಂಕ್ಷೆಗಾಗಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದೂ ಅವರ ಅಕಾಲಿಕ ನಿರ್ಗಮನಕ್ಕೆ ಒಂದು ಕಾರಣವೂ ಆಗಿದೆ.


ಏಕಕಾಲಕ್ಕೆ ಹಲವು ಕೆಲಸಗಳನ್ನು ಹಠಕ್ಕೆ ಬಿದ್ದು ಮಾಡುತ್ತಿದ್ದ ಬೆಳಕೆರೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಮಯವೇ ಇರಲಿಲ್ಲ. ಅನಿಯಮಿತ ಕೆಲಸ, ಅಕಾಲಿಕ ಊಟೋಪಚಾರ ಜೊತೆಗೆ ಸದಾ ಒತ್ತಡಗಳಲ್ಲಿ ಇರುತ್ತಿದ್ದ ಮಂಜುನಾಥ ಆರೋಗ್ಯವನ್ನು ತೀರಾ ನಿರ್ಲಕ್ಷಿಸಿದ್ದರು. ನಲವತ್ತಕ್ಕೆಲ್ಲಾ ಬಿಪಿ ಶುಗರ್‌ಗಳನ್ನು ಖಾಯಂ ಅತಿಥಿಗಳನ್ನಾಗಿ ಆಹ್ವಾನಿಸಿಕೊಂಡಿದ್ದರು. ಅಲೋಪತಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೂ ಅದರಲ್ಲೂ ಒಂದು ಶಿಸ್ತಿರಲಿಲ್ಲ. ಕೊನೆಗೆ ಆ ಔಷಧಗಳಿಂದಾಗಿ ಬೇಸತ್ತು ಅವುಗಳ ಸೇವನೆಯನ್ನೇ ಕೈಬಿಟ್ಟು ಇದ್ದಕ್ಕಿದ್ದಂತೆ ಆಯುರ್ವೇದದ ಔಷದೋಪಚಾರಗಳನ್ನು ಶುರುಮಾಡಿಕೊಂಡಿದ್ದರು. ಹೀಗಾಗಿ ಅಲೋಪತಿಗೆ ಒಗ್ಗಿಕೊಂಡಿದ್ದ ದೇಹ ಇದ್ದಕ್ಕಿದಂತೆ ಬದಲಾದ ಆಯುರ‍್ವೇದದ ಔಷಧಿಗಳಿಗೆ ಹೊಂದಿಕೊಳ್ಳಲಾರದೇ ಪರಿತಪಿಸಿತು. ನೋಡುವಷ್ಟು ದಿನ ನೋಡಿ, ತಾಳುವಷ್ಟು ದಿನ ತಾಳಿ.. ತನ್ನ ಶಕ್ತಿ ಮೀರಿ ಮಿಡಿಯುವಷ್ಟು ಕ್ಷಣ ಬಡಿಯುತ್ತಿದ್ದ ಹೃದಯ ಇದ್ದಕ್ಕಿದ್ದಂತೆ ಒಂದು ಮಾತನ್ನೂ ಹೇಳದೇ ಕೊಡದೇ ನಿಂತೇ ಹೋಯಿತು. ಅನುದಿನ ಜೊತೆಯಲಿದ್ದ ಜೀವವೆಂಬೂ ಹಂಸ ಒಂದು ಮಾತು ಹೇಳದೇ ಹಾರಿಹೋಯಿತು. ಇನ್ನೂ ಏನೇನೋ ಸಾಧಿಸಬೇಕೆಂದು ಹಾತೊರೆಯುತ್ತಿದ್ದ ಮಹತ್ವಾಂಕಾಂಕ್ಷೆಯ ಬುದ್ದಿ ಮನಸ್ಸು ಹಾಗೂ ದೇಹಗಳು ಹೃದಯಸ್ಥಂಬನದ ಜೊತೆಗೆ ಸ್ಥಬ್ದವಾದವು. ಯಾರೂ ನಿರೀಕ್ಷಿಸದೇ ಇದ್ದ ಬೆಳಕೆರೆಯ ಸಾವು ರಂಗಕರ್ಮಿಗಳಿಗೆ ಅನಿರೀಕ್ಷಿತವಾದ ಆಘಾತವನ್ನುಂಟು ಮಾಡಿತು. ಬರೆಯುತ್ತಿದ್ದ ನಾಟಕಗಳನ್ನು ಅರ್ಧಕ್ಕೆ ಬಿಟ್ಟು.. ಹೊಸ ನಾಟಕದ ತಾಲಿಮನ್ನು ಎರಡೇ ದಿನಕ್ಕೆ ನಿಲ್ಲಿಸಿ, ಒಪ್ಪಿಕೊಂಡ ಬಹುರೂಪಿ ನಾಟಕೋತ್ಸವದ ಆಯೋಜನೆಯ ಕರ್ತವ್ಯದಿಂದ ವಿಮುಖನಾಗಿ ಶಾಶ್ವತವಾಗಿ ಈ ಲೋಕದಿಂದ ವಿದಾಯ ಹೇಳಿದ ಮಂಜುನಾಥ ಬೆಳೆಕೆರೆ ಎಂಬ ಕಲಾವಿದ ಮಿತ್ರನಿಗೆ ಅದು ಹೇಗೆ ಅಂತಿಮ ನಮನ ಸಲ್ಲಿಸೋದು.

ಮಂಜುನಾಥ ನಟಿಸಿದ ಕೊಟ್ಟ ಕೊನೆಯ ನಾಟಕ ಮಹಾಮಾಯೆ. ಆ ನಾಟಕದಲ್ಲಿ ಅವರದು ಗೋರಿ ತೋಡುವ ಮಾರನ ಪಾತ್ರ. ಬೆಳಕೆರೆಯವರ ಪಾರ್ಥೀವ ಶರೀರವನ್ನು ಹುಗಿಯಲು ಸ್ಮಶಾನದಲ್ಲಿ  ಗೋರಿ ತೋಡುತ್ತಿರುವುದನ್ನು ನೋಡಿದ ನಟ ಮಂಡ್ಯರಮೇಶರವರಿಗೆ ಕಣ್ಣೀರು ಮಡುಗಟ್ಟಿತಂತೆ. ನಾಟಕದಲ್ಲಿ ಗೋರಿ ತೋಡುವ ಪಾತ್ರದಾರಿಗೆ ಈಗ ಇಲ್ಲಿ ಇನ್ಯಾರೋ ಗೋರಿ ತೋಡುವ ವಾಸ್ತವ ರೂಪಕವನ್ನು ನೋಡಿ ಕರುಳು ಕಿವಿಚಿದ್ದಂತೂ ದಿಟ. ನಾಟಕದ ಮಾರನ ಹಾಗೆಯೇ ಮಂಜುನಾಥರವರೂ ಸಹ ತಮ್ಮ ಬದುಕಿನ ಗೋರಿಯನ್ನು ತಾವೇ ತೋಡಿಕೊಂಡರಾ? ದೇಹದ ಕನಿಷ್ಟ ಅಗತ್ಯತೆಗಳನ್ನು ನಿರ್ಲಕ್ಷಿಸಿ ಒತ್ತಡದ  ಕೆಲಸಗಳಲ್ಲಿ ತೊಡಗಿ ಸಾವನ್ನು ತಮಗರಿವಾದಂತೆ ಆಹ್ವಾನಿಸಿಕೊಂಡರಾ? ಹೌದು ಹಾಗೊಂದು ಅನುಮಾನ ಕಾಡದೇ ಇರದು. ಮೂರು ವರ್ಷಗಳ ಹಿಂದೇನೇ ಹೃದಯ ಮೈಲ್ಡ್ ಅಟ್ಯಾಕ್ ಕೊಟ್ಟು ಎಚ್ಚರಿಕೆಯನ್ನು ಹೇಳಿತ್ತು. ನನ್ನನ್ನು ಸರಿಯಾಗಿ ನೋಡಿಕೋ ಎಂದು ಸಾಂಕೇತಿಕವಾಗಿ ಕೇಳಿಕೊಂಡಿತ್ತು. ಆದರೆ.. ಅದರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದಾಗ ಮತ್ತೆ ನಿಲ್ಲುವ ಸೂಚನೆಯನ್ನು ಡಿಸೆಂಬರ್ ೧೯ರಂದು ಜೋರಾಗಿಯೇ ಕೊಟ್ಟಿತು. ಕೊನೆಯ ಕ್ಷಣಗಳಲ್ಲಿ ಅದರ ಅರಿವಾಗಿ ತಲ್ಲಣಿಸಿ ಹೋದ ಬೆಳಕೆರೆ ಬಿಎಂ ಹಾಸ್ಪಿಟಲ್ ಸಿಬ್ಬಂದಿಗೆ ಶೀಘ್ರವಾಗಿ ಚಿಕಿತ್ಸೆ ಕೊಡಲು ಆಗ್ರಹಿಸಿದರು. ಆದರೆ ಆಸ್ಪತ್ರೆಯಲ್ಲಿ ಡಾಕ್ಟರಗಳೇ ಆಗ ಇರಲಿಲ್ಲ. ನರ್ಸಗಳಿಗೆ ಅನುಭವವಿಲ್ಲ. ವೈದ್ಯರು ಬಂದು ಚಿಕಿತ್ಸೆ ಆರಂಭಿಸುವ ಹೊತ್ತಿಗೆ ನೊಂದುಕೊಂಡ ಹೃದಯ ನಿಂತೇ ಹೋಗಿತ್ತು. ಅದರ ಎಚ್ಚರಿಕೆಯನ್ನೂ ಗಮನಿಸದ ಮಂಜುನಾಥ ನಿಜ ಜೀವನದಲ್ಲೂ ಗೋರಿ ಅಗೆಯುವ ಮಾರನ ಪಾತ್ರಕ್ಕೆ ಪಾತ್ರದಾರಿಯ ಬದುಕೇ ರೂಪಕವಾಗಿದ್ದೊಂದು ದೊಡ್ಡ ವಿಪರ್ಯಾಸ.


ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ನಾಟಕಗಳನ್ನು ಕಟ್ಟಿಕೊಡುತ್ತಿದ್ದ ಮಂಜುನಾಥ ಬೆಳಕೆರೆಗೆ ಇದುವರೆಗೂ ಸ್ವಂತ ಮನೆಯನ್ನೂ ಮಾಡಿಕೊಳ್ಳಲಾಗಲಿಲ್ಲ. ರಂಗಾಯಣದ ಸರಕಾರಿ ನೌಕರಿ ಹೆಸರಿಗೆ ಖಾಯಂ ಅನ್ನೋದನ್ನ ಬಿಟ್ಟರೆ ಬೇರೆ ಯಾವುದೇ ವೈಯಕ್ತಿಕ ಹಾಗೂ ಕೌಟುಂಬಿಕ ಭದ್ರತೆಗಳಿಲ್ಲ. ಅರವತ್ತು ವಯಸ್ಸಾದರೆ ರಂಗಾಯಣದ ಬಾಗಿಲಿಗೆ ಕೈಮುಗಿದು ಕಲಾವಿದರು ಮನೆಗೆ ಹೋಗಬೇಕಷ್ಟೇ. ಕಲಾವಿದರಿಗೆ ಪೆನ್ಶನ್ ಅನ್ನೋದು ಇಲ್ಲವೇ ಇಲ್ಲ. ಬದುಕು ಪೂರಾ ರಂಗಾಯಣಕ್ಕೆ ದುಡಿದು ವಯಸ್ಸಾದ ನಂತರದ ಬದುಕಿಗೆ ಏನೂ ಇಲ್ಲದೇ ಆರ್ಥಿಕವಾಗಿ ತೊಂದರೆ ಅನುಭವಿಸುವುದಂತೂ ತಪ್ಪೋದಿಲ್ಲ. ಸಂಬಳದ ಹೊರತು ಇಲ್ಲಿ ಯಾವ ಗಿಂಬಳಗಳೂ ದಕ್ಕೋದಿಲ್ಲ. ಇಂತಹ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಬೆಳಕೆರೆ ಕುಟುಂಬ ಈಗ ಸಂಪೂರ್ಣವಾಗಿ ಅತಂತ್ರ ಸ್ಥಿತಿಯಲ್ಲಿದೆ. ಇಂಜನೀಯರಿಂಗ್ ಓದುತ್ತಿರುವ ಮಗನ ಮುಂದಿನ ಓದಿಗೆ ಬೇರೆ ಆರ್ಥಿಕ ದಾರಿಗಳಿಲ್ಲದಾಗಿದೆ. ಮನೆವಾರ್ತೆ ನೋಡಿಕೊಳ್ಳುತ್ತಿರುವ ಪತ್ನಿ ಪ್ರಶಾಂತಿಯವರಿಗೆ ಈಗ ದಿಕ್ಕೇ ತೋಚದಂತಾ ಪರಿಸ್ಥಿತಿ. ಸಧ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀಯವರು ರಂಗಾಯಣದ ಕ್ವಾರ್ಟರ‍್ಸ್ ಖಾಲಿ ಮಾಡಿಸುವುದು ಬೇಡವೆಂದು ಉದಾತ್ತತೆ ಮೆರೆದಿದ್ದಾರೆ. ಆದರೂ ಎಲ್ಲರ ಅನುಕಂಪ ಕರಗಿದ ಮೇಲೆ, ಸರಕಾರದ ಮನೆಯನ್ನು ಬಿಟ್ಟುಕೊಡಲೇಬೇಕಾಗುತ್ತದೆ. ರಂಗಭೂಮಿಗೆ ಮೂರು ದಶಕಗಳ ಕಾಲ ನಿರಂತರವಾಗಿ ದುಡಿದ ಜೀವವೊಂದು ಮಡಿದಾಗ ಅವರ ಕುಟುಂಬ ಹೀಗೆ ಅನಾಥವಾಗುವುದು ನಿಜಕ್ಕೂ ಅಮಾನವೀಯವಾಗಿದೆ. ರಂಗಾಯಣದ ಕಲಾವಿದರಿಗೆ ನಿವೃತ್ತಿ ವೇತನ ಕೊಡಿ ಇಲ್ಲವೇ ತೀರಿಕೊಂಡರೆ ಅಥವಾ ನಿವೃತ್ತರಾದರೆ ಅವರ ಮುಂದಿನ ಬದುಕಿಗೆ ಬೇಕಾದಷ್ಟು ಹಣವನು ಇಡುಗಂಟಾಗಿಯಾದರೂ ಕೊಡಿ ಎಂದು ರಂಗಾಯಣದ ಕಲಾವಿದರುಗಳು, ನಿರ್ದೇಶಕರುಗಳು, ಕೆಲವು ರಂಗಕರ್ಮಿಗಳು ಅಷ್ಟೇ ಯಾಕೆ ರಂಗಸಮಾಜದ ಸದಸ್ಯರುಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.

ಆದರೆ ಪಂಚೇಂದ್ರಿಯಗಳನ್ನು ಕಳೆದುಕೊಂಡ ಸರಕಾರಕ್ಕೆ ಕಲಾವಿದರ ಬದುಕಿನ ಸೂಕ್ಷ್ಮತೆ ಅರ್ಥ ಆಗುವುದಾದರೂ ಹೇಗೆ? ರಂಗಭೂಮಿಯ ಕಲಾವಿದೆಯಾದ ಉಮಾಶ್ರೀಯವರೇ ಸಂಸ್ಕೃತಿ ಇಲಾಖೆಯ ಮಂತ್ರಿಣಿಯಾಗಿದ್ದರಿಂದ ರಂಗಾಯಣದ ಕಲಾವಿದರ ನಿವೃತ್ತಿ ನಂತರದ ಬದುಕಿಗೆ ಕನಿಷ್ಟ ಭದ್ರತೆ ಸಿಗುತ್ತದೆ ಎಂದೇ ಎಲ್ಲರೂ ಬಯಸಿದ್ದರು. ಆದರೆ ಉಮಾಶ್ರೀಯವರೂ ಸಹ ಈ ಕುರಿತು ಒಲವು ತೋರಲಿಲ್ಲ.  ರಂಗಾಯಣದ ಸದಸ್ಯರಾದ ಮಂಡ್ಯ ರಮೇಶ ಹಾಗೂ ಇತರರು ರಂಗಸಮಾಜಕ್ಕೆ ರಾಜೀನಾಮೆ ಪತ್ರವನ್ನೂ ಕಳುಹಿಸಿಕೊಟ್ಟರು. ಆದರೆ ಇಲ್ಲವರೆಗೂ ರಾಜೀನಾಮೆ ಅಂಗೀಕಾರವೂ ಆಗಿಲ್ಲಾ.. ರಂಗಾಯಣದ ಕಲಾವಿದರಿಗೆ ಆರ್ಥಿಕ ಕನಿಷ್ಟ ಭದ್ರತೆಯೂ ಸಿಕ್ಕಿಲ್ಲ. ರಂಗದ ಮೇಲೆ ತಮ್ಮ ಪ್ರತಿಭೆಯ ಮೂಲಕ ವಿಜ್ರಂಭಿಸುವ ಕಲಾವಿದರ ಅಂತಿಮ ಹಂತದ ಬದುಕು ಹೀಗೆ ತ್ರಿಶಂಕು ಆಗುವುದು ಇಡೀ ಸಮಾಜಕ್ಕೆ ಅವಮಾನಕರವಾದದ್ದು. ಮಂಜುನಾಥ ಬೆಳಕೆರೆಯವರ ಅನಿರೀಕ್ಷಿತ ನಿರ್ಗಮನದ ನಂತರ ಅವರ ಕುಟುಂಬ ವರ್ಗ ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ಪರಿಗಣಿಸಿಯಾದರೂ ರಂಗಾಯಣದ ಕಲಾವಿದರಿಗೆ ನಿವೃತ್ತಿಯ ನಂತರದ ಭದ್ರತೆಯನ್ನು ಒದಗಿಸುವತ್ತ ಸರಕಾರದ ಚಿತ್ತ ಇರಬೇಕಿದೆ. ಉಮಾಶ್ರೀಯವರು ಮನಸ್ಸು ಮಾಡಿದರೆ ಇದು ಅಸಾಧ್ಯವಾದ ಕೆಲಸವೇನಲ್ಲ.


ಮೊಟ್ಟ ಮೊದಲು ರಂಗಕರ್ಮಿಗಳು ಸಂಸ್ಕೃತಿ ಇಲಾಖೆ ಹಾಗೂ ಸರಕಾರದ ಮೇಲೆ ಒತ್ತಡ ತಂದು ಮಂಜುನಾಥರವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಸರಕಾರದಿಂದ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ನಾಟಕಗಳ ಮೂಲಕ ಸಮಾಜಕ್ಕೆ ಕಲೆಯ ಕೊಡುಗೆಯನ್ನು ಕೊಟ್ಟ ಕಲಾವಿದರ ಅಂತಿಮ ಹಂತದ ಬದುಕು ಹಾಗೂ ಅವರ ಕುಟುಂಬ ಪರಿವಾರ ನೆಮ್ಮದಿಯಾಗಿ ಬದುಕುವಂತಹ  ವ್ಯವಸ್ಥೆಯೊಂದನ್ನು ಸರಕಾರ ಈ ಕೂಡಲೇ ಮಾಡಬೇಕಿದೆ. ಬೆಳಕೆರೆಯವರನ್ನೂ ಒಳಗೊಂಡಂತೆ ರಂಗಾಯಣದಿಂದ ನಿವೃತ್ತರಾಗುವ ಎಲ್ಲರಿಗೂ ಆರ್ಥಿಕ ಪರಿಹಾರವನ್ನು ಕೊಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು.. ಮಾಡದಿದ್ದರೆ ಎಲ್ಲಾ ಕಲಾವಿದರು ರಂಗಕರ್ಮಿಗಳು ಒತ್ತಡ ತರುವ ಮೂಲಕ ನೀಗಿಕೊಂಡ ಮಂಜುನಾಥ ಬೆಳಕೆರೆಯವರಿಗೆ ಅಂತಿಮ ನಮನ ಸಲ್ಲಿಸಬೇಕಿದೆ. ಕಲಾವಿದರು ಹಾಗೂ ಅವರ ಕುಟುಂಬವರ್ಗ ಘನತೆವೆತ್ತ ಗೌರವಾನ್ವಿತ ಬದುಕನ್ನು ಬಾಳುವ ಅವಕಾಶವನ್ನು ಸರಕಾರ ಕಲ್ಪಿಸಿಕೊಡುವ ಮೂಲಕ ಅಗಲಿದ ಕಲಾವಿದನ ಪರಿಶ್ರಮಕ್ಕೆ ಪ್ರತಿಫಲವನ್ನು ಕೊಡಬೇಕಾಗಿದೆ. ಇಲ್ಲವಾದರೆ ಕಲೆಯನ್ನೇ ನಂಬಿಕೊಂಡು ಬದುಕುವಂತಹ ಅನೇಕ ಜನರಲ್ಲಿ  ಸಮಾಜ ಹಾಗೂ ಸರಕಾರದ ಮೇಲೆ ವಿಶ್ವಾಸವೇ ಇಲ್ಲವಾಗುತ್ತದೆ. ಮುಂದಿನ ತಲೆಮಾರು ಕಲೆಯಿಂದ ದೂರಾಗುವಂತಹ ಅಪಾಯವೂ ಕಾದಿದೆ. ರಂಗಭೂಮಿಯ ಒಳತಿಗಾಗಿ ಕಲಾವಿದರನ್ನು ಉಳಿಸಬೇಕು, ಬೆಳೆಸಬೇಕು ಹಾಗೂ ಅವರೂ ಈ ಸಮಾಜದ ಅಂಗವಾಗಿ ಗೌರವಯುತವಾಗಿ ಬಾಳಬೇಕು. ಕಲಾವಿದರನ್ನೇ ನಂಬಿದ ಕುಟುಂಬ ವರ್ಗ ನೆಮ್ಮದಿಯಾಗಿ ಬದುಕುವ ವ್ಯವಸ್ಥೆಯೊಂದು ನಿರ್ಮಾಣವಾಗಬೇಕು. ಮಂಜುನಾಥರವರ ಅಗಲಿಕೆ ವ್ಯರ್ಥವಾಗದೇ ಉಳಿದ ಕಲಾವಿದರುಗಳ  ಬದುಕಿನ ಆರ್ಥಿಕ ಸುಬದ್ರತೆಗೆ ದಾರಿಯಾಗಬೇಕು. ಹೋಗಿ  ಬಾ ರಂಗಗೆಳೆಯ ಬೆಳಕೆರೆ.. ನಿಮ್ಮ ನೆನಪೊಂದೇ ಇನ್ನು ನಮಗಾಸರೆ...

-ಶಶಿಕಾಂತ ಯಡಹಳ್ಳಿ