ರಂಗವಿಮರ್ಶೆ
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ
ಬಲಿಪಶುವಾಗುವ ಮಹಿಳೆಯ ತಳಮಳಗಳನ್ನು ತೋರಿಸುವ ‘ಕಂಚುಕಿ’ ನಾಟಕವು ಸಹಿಸುವಷ್ಟು ಸಹಿಸಿದ
ಮಹಿಳೆ ಸಿಡಿದೆದ್ದು ಪ್ರತಿಕಾರಕ್ಕೆ ನಿಂತರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಮಾರ್ಮಿಕವಾಗಿ
ಹೇಳುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ‘ನಾಟಕ ಬೆಂಗಳೂರು’ ಆಯೋಜಿಸಿದ ನಾಟಕೋತ್ಸವದಲ್ಲಿ ಡಿಸೆಂಬರ್ 27ರಂದು ‘ನಟರಂಗ’ದ ಕಲಾವಿದರುಗಳು ‘ಕಂಚುಕಿ’ ನಾಟಕವನ್ನು ಅಭಿನಯಿಸಿದರು.
ಡಾ.ಚಂದ್ರಶೇಖರ್ ಕಂಬಾರರರು ಬರೆದ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ದಿವ್ಯಾ ಕಾರಂತರು ‘ಕಂಚುಕಿ’ ಹೆಸರಲ್ಲಿ ರಂಗರೂಪಾಂತರಗೊಳಿಸಿ
ನಿರ್ದೇಶಿಸಿದ್ದಾರೆ.
ಆಸ್ತಿ ಆಸೆಗೆ ಮಗಳನ್ನು ರೋಗಿಷ್ಟ
ದೇಸಾಯಿಗೆ ಮದುವೆ ಮಾಡಿಕೊಡುವ ಗೌಡನು ಮಗಳನ್ನು ದಾಳವಾಗಿ ಬಳಸಿ ಶೋಷಿಸಿದರೆ... ನಪುಂಸಕನಾದ ದೇಸಾಯಿ
ಬಯಲಾಟದ ಖಯಾಲಿಗೆ ಬಿದ್ದು ಸಿಂಗಾರೆವ್ವನನ್ನು ನಿರ್ಲಕ್ಷಿಸಿ ಆಕೆಯ ವಯೋಸಹಜ ಭಾವನೆ ಬಯಕೆಗಳನ್ನು ಅರ್ಥಮಾಡಿಕೊಳ್ಳದೇ
ಮಾನಸಿಕ ಹಿಂಸೆಗೆ ಕಾರಣನಾಗುತ್ತಾನೆ. ಗೌಡನು ತನ್ನ ತಾಯಿಯ ಕೊಲೆಮಾಡಿ ತನ್ನನ್ನು ಜೈಲುಪಾಲು ಮಾಡಿದ
ಸೇಡು ತೀರಿಸಿಕೊಳ್ಳಲು ಕಾತರಿಸುವ ಮಾರಿಯಾ ದೇಸಾಯಿಯವರ ನಂಬಿಕೆ ಸಂಪಾದಿಸಿ ಸಿಂಗಾರೆವ್ವನನ್ನು ಹಿಂಸಿಸುತ್ತಾನೆ.
ದೇಸಾಯಿಯ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಶೆಟ್ಟಿ ಆತನ ಅರಮನೆಯನ್ನು ಪಡೆಯಲು ಕುತಂತ್ರ
ಮಾಡುತ್ತಾನೆ. ಹೀಗೆ.. ಈ ಎಲ್ಲಾ ಗಂಡಸರ ಸ್ವಾರ್ಥ ಹಾಗೂ ದುರಹಂಕಾರಗಳಿಂದಾಗಿ ಅಮಾಯಕ ಸಿಂಗಾರೆವ್ವ
ನಲುಗಿ ಹೋಗುತ್ತಾಳೆ. ಕೊನೆಗೆ ರೋಸತ್ತು ಹೋಗಿ ವಾರಸುದಾರರಿಲ್ಲದಿದ್ದರೆ ಇಡೀ ಅರಮನೆ ಅನ್ಯರ ಪಾಲಾಗುವುದೆಂದು
ಅರಿತು ಮಾರಿಯಾನನ್ನೇ ಕೂಡಿ ಬಸಿರಾಗುತ್ತಾಳೆ. ಆ ವಿಷಯ ತಿಳಿದ ದೇಸಾಯಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮಾಡಿಕೊಳ್ಳುತ್ತಾನೆ. ಗಂಡನನ್ನು ಕೊಲೆ ಮಾಡಿದ ಆರೋಪವನ್ನು ಹೊತ್ತುಕೊಂಡ ಸಿಂಗಾರೆವ್ವ ಜೈಲಿಗೆ ಹೋಗುತ್ತಾಳೆ.
ಇದು ‘ಕಂಚುಕಿ’ ನಾಟಕದ ಸಂಕ್ಷಿಪ್ತ ಕಥೆ.
ಉಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯಲ್ಲಿ
ಮಹಿಳೆ ಹೇಗೆಲ್ಲಾ ಶೋಷಣೆಗೆ ಒಳಗಾಗುತ್ತಾಳೆ ಎನ್ನುವುದನ್ನು ಈ ನಾಟಕ ಸೊಗಸಾಗಿ ಹೇಳುತ್ತದೆ. ಸಿಂಗಾರೆವ್ವನನ್ನು ಪುರುಷರೆಲ್ಲಾ ಒಂದೊಂದು ರೀತಿ ಬಳಸಿಕೊಳ್ಳಲು
ನೋಡುತ್ತಾರೆ. ಅಪ್ಪ ಆಸ್ತಿಗಾಗಿ ಮಗಳನ್ನೇ ದಾಳವಾಗಿ
ಬಳಿಸಿದರೆ.. ಗಂಡ ತನ್ನ ಪ್ರತಿಷ್ಟೆಗಾಗಿ ಮದುವೆಯಾಗಿ ಹೆಂಡತಿಯ ಬೇಡಿಕೆಗೆ ಸ್ಪಂದಿಸದೇ ಕಡೆಗಣಿಸುತ್ತಾನೆ.
ಮನೆಯ ಆಳು ಮಾರಿಯಾ ಸಹ ಆಕೆಯ ಮೇಲೆ ದೌರ್ಜನ್ಯ ಮಾಡಿ ಆಕೆಯ ಅಪ್ಪನ ವಿರುದ್ಧ ಸೇಡು ತೀರಿಸಿಕೊಳ್ಳಲು
ಹವಣಿಸುತ್ತಾನೆ. ಹೀಗೆ.. ಪಿತ, ಪತಿ ಹಾಗೂ ಆಳು ಈ ಮೂವರ ವಿಭಿನ್ನ ರೀತಿಯ ದಮನಕ್ಕೆ ತುತ್ತಾಗಿ ಸಿಂಗಾರೆವ್ವ
ತತ್ತರಿಸಿ ಹೋಗುತ್ತಾಳೆ. ಹೆಣ್ಣು ಪ್ರಕೃತಿಯ ಪ್ರತೀಕವಾಗಿದ್ದು ಸಹಿಸಿಕೊಳ್ಳುವಷ್ಟು ಸಹಿಸಿಕೊಂಡು
ಸಿಡಿದೇಳುವುದು ಶತಸಿದ್ಧ. ಅದೇ ರೀತಿ ಸಿಂಗಾರೆವ್ವ ಸಹ ಆಳುಮಗ ಮಾರಿಯಾನನ್ನು ಬಳಸಿಕೊಂಡು ತನಗಾದ ಅನ್ಯಾಯಕ್ಕೆ
ಪ್ರತೀಕಾರ ತೀರಿಸಿಕೊಳ್ಳುತ್ತಾಳೆ. ಆಕೆಗೆ ಎಲ್ಲದರಿಂದ ಪಾರಾಗುವ ಏಕೈಕ ಮಾರ್ಗವಾಗಿ ಮಾರಿಯಾ ಗೋಚರಿಸುತ್ತಾನೆ.
ಅರಮನೆಗೆ ವಾರಸುದಾರನನ್ನು ಕೊಡುವುದು, ದೈಹಿಕ ಬಯಕೆ ತೀರಿಸಿಕೊಳ್ಳುವುದು ಹಾಗೂ ದೌರ್ಬಲ್ಯ ಗೊತ್ತಿದ್ದೂ
ವಂಚಿಸಿದ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳುವುದು ಸಿಂಗಾರೆವ್ವನ ನಿರ್ಧಾರವಾಗಿತ್ತು. ಅದೆಲ್ಲದರಲ್ಲೂ
ಯಶಸ್ವಿಯೂ ಆದ ಆಕೆ ಯಾಕೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಗಂಡನನ್ನು ಕೊಲೆ ಮಾಡಿದೆನೆಂದು ಒಪ್ಪಿಕೊಂಡು
ಜೈಲಿಗೆ ಹೋದಳು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ನೈತಿಕ ಅನೈತಿಕತೆಗಳನ್ನು ಮೀರಿ
ಸಿಂಗಾರೆವ್ವನ ವ್ಯಕ್ತಿತ್ವವನ್ನು ಕಂಬಾರರು ಬಲು ಸಂಕೀರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ದುರ್ಬಲ ಪತಿಯ
ವಿರುದ್ದ ಸೇಡು ತೀರಿಸಿಕೊಳ್ಳಲು ಪರಪತ್ನೀ ಪೀಡಕ ಮಾರಿಯಾನನ್ನೇ ಬಯಸಿ ಕೂಡುತ್ತಾಳೆ. ಇದು ಸಹ ದೈಹಿಕ
ಬಯಕೆಗಾಗಿ ಅಥವಾ ವಾರಸುದಾರಿಕೆಗಾಗಿ ಎಂದೇ ತಿಳಿದರೂ ಹೆಂಡತಿ ಗರ್ಭಿಣಿ ಎಂದು ತಿಳಿದು ಆತ್ಮಹತ್ಯೆ
ಮಾಡಿಕೊಂಡ ಗಂಡನನ್ನು ತಾನೇ ಕೊಲೆ ಮಾಡಿದೆ ಎಂದು ಯಾಕೆ ಒಪ್ಪಿಕೊಂಡಳು?. ಮಾಡದ ಕೊಲೆಯನ್ನು ಮಾಡಿದ್ದೇನೆಂದು
ಒಪ್ಪಿಕೊಳ್ಳುವಷ್ಟು ತಪ್ಪಿತಸ್ತ ಭಾವನೆ ಅವಳನ್ನು ಕಾಡಿತಾ? ಗೊತ್ತಿಲ್ಲ. ಒಂದು ಹಂತದಲ್ಲಿ ಪುರುಷ
ಪ್ರಧಾನ ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದೆದ್ದ ಮಹಿಳೆಯೆಂದು ಸಿಂಗಾರೆವ್ವನನ್ನು ಪರಿಗಣಿಸುವಷ್ಟರಲ್ಲಿ
ಆಕೆ ಪೊಲೀಸರಿಗೆ ಶರಣಾಗಿದ್ದು ಪಲಾಯಣವಾದವೆನಿಸುತ್ತದೆ. ತನ್ನ ಅಹಮಿಕೆಗೆ ಏಟು ಬಿದ್ದಾಗ ಸಹಿಸದೇ ತಾನೇ
ತಾನಾಗಿ ಸತ್ತ ದೇಸಾಯಿಯ ಸಾವನ್ನು ಸಿಂಗಾರೆವ್ವ ಒಪ್ಪಿಕೊಂಡು ಏನು ಸಾಧಿಸಿದಳು? ಅರಮನೆ ಅನಾಥವಾಯಿತು.
ಇಲ್ಲದ ಅಪವಾದ ತಲೆಗೇರಿತು. ಇನ್ನೂ ಹುಟ್ಟದ ಮಗುವೂ ತಾಯಿಯ ಜೊತೆಗೆ ಜೈಲು ಪಾಲಾಯಿತು. ಒಂದು ಅನರ್ಥದ
ವಿರುದ್ದ ಪ್ರತಿಭಟಿಸಲು ಹೋಗಿ ಇನ್ನೊಂದಿಷ್ಟು ಅನರ್ಥಗಳನ್ನು ಆಹ್ವಾನಿಸಿದಂತಾಯಿತು.
ಹೆಣ್ಣು ಅದೆಷ್ಟೇ ದೈರ್ಯ ತೋರಿದರೂ
ಮಾನಸಿಕವಾಗಿ ದುರ್ಬಲಳೇ ಎನ್ನುವುದನ್ನು ಸಿಂಗಾರೆವ್ವನ ಪ್ರಕರಣ ಸಾಬೀತುಪಡಿಸಿದಂತಾಗಿದೆ. ಮಹಿಳೆ ರೆಬೆಲ್
ಆದಷ್ಟೂ ದುರಂತಕ್ಕೆ ಒಳಗಾಗುತ್ತಾಳೆಂಬ ಸನಾತನವಾದಿಗಳ ಥೀಯರಿಯನ್ನು ಪುರುಷರಾಗಿ ಕಂಬಾರರು ಕಾದಂಬರಿಯಲ್ಲಿ
ಪ್ರತಿಪಾದಿಸಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಒಬ್ಬ ಮಹಿಳೆಯಾಗಿ ಈ ನಾಟಕದ ನಿರ್ದೇಶಕಿ ಕ್ಲೈಮ್ಯಾಕ್ಸನ್ನು
ಬದಲಾಯಿಸಬಹುದಾಗಿತ್ತು. ಅರಸೊತ್ತಿಗೆಯ ಹುಸಿ ಪ್ರತಿಷ್ಟೆಯನ್ನು ಒಡೆದು ಹಾಕಿದ ಸಿಂಗಾರೆವ್ವ ಅರಮನೆಯಲ್ಲೇ
ಇದ್ದು ವಾರಸುದಾರ ಮಗುವನ್ನು ಬೆಳೆಸುವ ನಿರ್ಧಾರ ಕೈಗೊಂಡಿದ್ದರೆ ನಿಜಕ್ಕೂ ಶೋಷಿತ ಮಹಿಳೆಯರಿಗೆ ಮಾದರಿಯಾಗುತ್ತಿತ್ತು.
ಈ ನಿಟ್ಟಿನಲ್ಲಿ ನಿರ್ದೇಶಕಿ ಯೋಚಿಸುವುದುತ್ತಮ. ಕಾದಂಬರಿಯಲ್ಲಿ ಇದ್ದದ್ದನ್ನು ಇದ್ದಂಗೆ ಹೇಳದೇ ನಿರ್ದೇಶಕಿ
ತಮ್ಮ ಕ್ರಿಯಾಶೀಲತೆ ಹಾಗೂ ವಿವೇಚನೆಯನ್ನು ಬಳಸಿಕೊಂಡರೆ ಗಂಡಸರ ದಬ್ಬಾಳಿಕೆಗೆ ಈಡಾದ ಸಿಂಗಾರೆವ್ವನಂತಹ
ಅನೇಕ ನೊಂದು ಬೆಂದ ಮಹಿಳೆಯರಿಗೆ ಸಾಂತ್ವನ ಹೇಳಬಹುದಾಗಿದೆ ಹಾಗೂ ಮಹಿಳೆಯನ್ನು ಶೋಷಿಸುವ ಪುರುಷರಿಗೂ
ಎಚ್ಚರಿಕೆ ಕೊಡಬಹುದಾಗಿದೆ.
ಉಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯ
ದುರಹಂಕಾರ, ದೌರ್ಬಲ್ಯಗಳನ್ನು ಅನಾವರಣಗೊಳಿಸುತ್ತಲೇ ಪಾಳೇಗಾರಿಕೆಯ ಸಂಸ್ಕೃತಿಯ ಅವನತಿಯನ್ನು ಕಟ್ಟಿಕೊಡುವ
ಕಂಬಾರರ ಸಿಂಗಾರೆವ್ವ... ಕಾದಂಬರಿಯು ಈಗಾಗಲೇ ನಾಟಕವಾಗಿ ಪ್ರದರ್ಶನವಾಗಿದೆ.. ಲಕ್ಷ್ಮೀಚಂದ್ರಶೇಖರವರು
ಏಕವ್ಯಕ್ತಿ ಪ್ರಯೋಗವಾಗಿಸಿದ್ದಾರೆ ಹಾಗೂ ನಾಗಾಭರಣರವರು ಚಲನಚಿತ್ರವಾಗಿ ನಿರ್ದೇಶಿಸಿದ್ದಾರೆ. ಮನೆಯ
ಕೆಲಸದಾಳು ಸೀನಿಂಗಿಯ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುವ ಕಾದಂಬರಿಯ ನಿರೂಪಣಾ ಶೈಲಿಯನ್ನು ಬದಲಾಯಿಸಿ
ಪಾತ್ರ ಹಾಗೂ ಸನ್ನಿವೇಶಗಳ ಮೂಲಕವೇ ಪ್ರಸ್ತುತಗೊಂಡ ಈ ‘ಕಂಚುಕಿ’ ನಾಟಕದ ರೀತಿ ಅನನ್ಯವಾಗಿದೆ.
ನಿರ್ದೇಶಕಿ ತಮ್ಮ ದೃಶ್ಯ ನಿರ್ಮಿತಿಯ ಮಿತಿಯಲ್ಲಿಯೇ ಉತ್ತಮ ನಾಟಕವನು ಕಟ್ಟಿಕೊಟ್ಟಿದ್ದಾರೆ.
ಆರಂಭದ ಚಿಮನಾ ನೃತ್ಯದ ದೃಶ್ಯ
ಅಸಂಗತವೂ ಹಾಗೂ ಅಸಂಬದ್ದವಾಗಿಯೂ ಮೂಡಿಬಂದಿದೆ. ಆ ದೃಶ್ಯವನ್ನು ತೆಗೆದಿದ್ದರೂ ನಾಟಕಕ್ಕೆ ಯಾವುದೇ
ಬಾಧೆ ಬರುತ್ತಿರಲಿಲ್ಲ. ತದನಂತರದ ದೃಶ್ಯಗಳು ದೃಶ್ಯ ಶ್ರೀಮಂತಿಕೆಯಿಂದಾ ಕೂಡಿವೆ. ದೇಸಾಯಿಯ ಅರಮನೆಯಂತೆ
ಅದ್ದೂರಿ ರಿಯಾಲಿಸ್ಟಿಕ್ ಮಾದರಿಯ ಸೆಟ್ ಹಾಕಿ ನಾಟಕಕ್ಕೆ ಭವ್ಯತೆಯನ್ನು ತಂದುಕೊಟ್ಟಿದ್ದಾರೆ. ಆದರೆ..
ರಂಗವೇದಿಕೆಯ ತುಂಬಾ ದೊಡ್ಡ ಸೆಟ್‌ಗಳನ್ನು ಹಾಕಿದಷ್ಟೂ ನಟರು ಅದೆಷ್ಟೇ ಎಫರ್ಟ ಹಾಕಿದರೂ ಕುಬ್ಜರಾಗುತ್ತಾ
ಹೋಗುತ್ತಾರೆಂಬುದು ಈ ನಾಟಕ ನೋಡಿದವರಿಗೆ ಅನ್ನಿಸದೇ ಇರದು. ಈ ನಾಟಕದ ಎಲ್ಲಾ ಕಲಾವಿದರೂ ಪಾತ್ರೋಚಿತವಾಗಿ
ಪೈಪೋಟಿಯ ಮೇಲೆ ನಟಿಸಿ ಪ್ರದರ್ಶವನ್ನು ಯಶಸ್ವಿಯಾಗಿಸಿದ್ದಾರೆ. ಸಿಂಗಾರೆವ್ವಳಾಗಿ ನಂದಿನಿ ಮೂರ್ತಿಯವರ
ಭಾವಪೂರ್ಣ ಅಭಿನಯ ನೋಡುಗರನ್ನು ಕಾಡುವಂತಿದೆ. ಸಿಂಗಾರೆವ್ವನನ್ನು ಮೀರಿಸುವಂತಹ ನಟನೆಯನ್ನು ಶೀನಿಂಗಿ
ಪಾತ್ರದ ಸವಿತಾ ಕೊಟ್ಟಿದ್ದಾರೆ. ಸರಗಮ್ ದೇಸಾಯಿ ಪಾತ್ರದ ಪಡಿಯಚ್ಚೇನೋ ಎನ್ನುವ ಹಾಗೆ ಭಾರದ್ವಾಜ್
ನಟಿಸಿದ್ದು, ಮಾರ‍್ಯಾನ ಪಾತ್ರಕ್ಕೆ ಕೌಸ್ತುಭ ಜಯಕುಮಾರ್ ಜೀವತುಂಬಿದ್ದಾರೆ.
ದೃಶ್ಯದ ಅಗತ್ಯಕ್ಕೆ ತಕ್ಕಂತೆ
ಮೂಡಿ ಬಂದ ಭಾವಗೀತೆಗಳು ಹಾಗೂ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ಬೆಳವಾಡಿಯವರ ಬೆಳಕಿನ ವಿನ್ಯಾಸ
ನೋಡುಗರಲ್ಲಿ ಮೂಡ್ ಸೃಷ್ಟಿಸುವಲ್ಲಿ ಸಫಲವಾಗಿದೆ. ವಿಜಯ್ ಬೆನಚರವರ ಪ್ರಸಾಧನವೂ ಸಹ ಪ್ರತಿ ವ್ಯಕ್ತಿಗಳನ್ನು
ಸೂಕ್ತ ಪಾತ್ರವಾಗಿಸುವಲ್ಲಿ ಸಹಕರಿಸಿದೆ. ಒಟ್ಟಾರೆಯಾಗಿ ಇಡೀ ನಾಟಕ ಎಲ್ಲಾ ವಿಭಾಗಗಳಲ್ಲಿ ಸಶಕ್ತವಾಗಿ
ಮೂಡಿಬಂದಿದೆ. ನಾಟಕದಾದ್ಯಂತ ನಿರ್ದೇಶಕಿಯ ಶ್ರಮ ಎದ್ದುಕಾಣುತ್ತದೆ. ಈ ನಾಟಕದ ಮೂಲಕ ಕನ್ನಡ ರಂಗಭೂಮಿಗೆ
ಕ್ರಿಯಾಶೀಲ ಮಹಿಳಾ ನಿರ್ದೇಶಕಿಯೊಬ್ಬರು ದಕ್ಕಿದಂತಾಗಿದೆ. ಒಂದು ಕಾಲದಲ್ಲಿ ಕ್ರಿಯಾಶೀಲ ರಂಗತಂಡವಾಗಿದ್ದ
“ನಟರಂಗ”ವು ಬರುಬರುತ್ತಾ ಬಹುತೇಕ ನಿಷ್ಕ್ರೀಯವಾಗಿತ್ತು.
ಈಗ ಮತ್ತೆ ಈ ಹೊಸ ಪ್ರೊಡಕ್ಷನ್ ಮೂಲಕ ನಾಟಕ ನಿರ್ಮಿತಿಗೆ ಮುಂದಾಗಿರುವುದು ಸಂತಸದ ಸಂಗತಿ. ದಿವ್ಯಾ
ಕಾರಂತರಂತಹ ಹೊಸ ತಲೆಮಾರಿನವರು ಮತ್ತೆ ನಟರಂಗಕ್ಕೆ ಜೀವ ತುಂಬಿ ನಿರಂತರವಾಗಿ ನಾಟಕಗಳನ್ನು ಕಟ್ಟಿಕೊಡಲಿ
ಎನ್ನುವುದೇ ರಂಗಾಸಕ್ತರ ಬಯಕೆಯಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ