ಶುಕ್ರವಾರ, ಡಿಸೆಂಬರ್ 23, 2016

ಸಚಿವೆಗೆ ಚೆಲ್ಲಾಟ ; ರಂಗಾಯಣಿಗರಿಗೆ ಪ್ರಾಣಸಂಕಟ:



 ರಂಗಾಯಣದ ಕಲಾವಿದರ ಅಸಹಕಾರ ಚಳುವಳಿ; ಸರಕಾರದ ನಿರ್ಲಕ್ಷದ ಬಳವಳಿ..


ಮೈಸೂರು ರಂಗಾಯಣದ ಹಿರಿಯ ಕಲಾವಿದರು ಡಿಸೆಂಬರ್ 23ರಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಎಲ್ಲಾ ರೀತಿಯ ಸಾಂಸ್ಕೃತಿಕ ಕೆಲಸಗಳನ್ನು ಬದಿಗಿರಿಸಿ ಕಪ್ಪು ಪಟ್ಟಿ ಧರಿಸಿ ರಂಗಾಯಣದಂಗಳದಲ್ಲಿ ಧರಣಿ ಕೂತಿದ್ದಾರೆ. ಜನವರಿ 13 ರಿಂದ ಆರು ದಿನಗಳ ಕಾಲ ಆಯೋಜನೆಗೊಂಡಿದ್ದ ಬಹುರೂಪಿ ಅಂತರಾಷ್ಟ್ರೀಯ  ನಾಟಕೋತ್ಸವದ ಸಿದ್ದತೆಯ ಕೆಲಸಗಳನ್ನೂ ಕೈಬಿಟ್ಟಿದ್ದಾರೆ. ಎಲ್ಲಾ ಕಲಾವಿದರ ಬೇಡಿಕೆ ಒಂದೇ ಅದು ನಿವೃತ್ತಿ ಭದ್ರತೆ.

1999ರಿಂದ ಸರಕಾರೀ ನೌಕರರೆಂದೇ ಪರಿಗಣಿತರಾದ ರಂಗಾಯಣದ ಕಲಾವಿದರುಗಳು ತಮ್ಮ ಕೆಲಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಡಿಯಲ್ಲಿ ಮಾಸಿಕ ಸಂಬಳ ಪಡೆಯುತ್ತಿದ್ದಾರೆ. ಆದರೆ.. ಕಲಾವಿದರು ಅಕಾಲಿಕವಾಗಿ ತೀರಿಕೊಂಡರೆ ಇಲ್ಲವೇ ನಿವೃತ್ತರಾದರೆ ಸರಕಾರದಿಂದ ಯಾವುದೇ ಸವಲತ್ತು ಇಲ್ಲವಾಗಿದೆ. ಮೂರು ದಶಕಗಳ ಕಾಲ ರಂಗಾಯಣಕ್ಕಾಗಿ ಶ್ರಮಿಸಿರುವ ಈ ಎಲ್ಲಾ ಕಲಾಜೀವಗಳು ಅಂತ್ಯದಲ್ಲಿ ಯಾವ ಸವಲತ್ತುಗಳೂ ಇಲ್ಲದೇ ರಂಗಾಯಣದಿಂದ ನಿವೃತ್ತರಾಗಬೇಕಾದಂತಹ ಅತಂತ್ರ ಸ್ಥಿತಿಗೆ ಸರಕಾರವೇ ಹೊಣೆಯಾಗಿದೆ. ಕಳೆದ ಹತ್ತು ವರ್ಷಗಳಿಂದ ನಿವೃತ್ತಿ  ವೇತನದ ಬೇಡಿಕೆಯನ್ನು ರಂಗಾಯಣದ ಕಲಾವಿದರುಗಳು ಸರಕಾರ ಹಾಗೂ ಸಂಸ್ಕೃತಿ ಇಲಾಖೆಯ ಮುಂದೆ ಇಡುತ್ತಲೇ ಬಂದಿದ್ದಾರೆ. ಆದರೂ ಪರಿಹಾರವಂತೂ ಸಿಕ್ಕಿಲ್ಲ.. ಕಲಾವಿದರೊಳಗಿನ ಅಭದ್ರತೆಗೆ ಕೊನೆಮೊದಲಿಲ್ಲ. ಈಗ ಪ್ರತಿಭಟನೆಯ ಖಾವು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದ್ದು ರಂಗಾಯಣದ ಕಲಾವಿದ ಮಂಜುನಾಥ ಬೆಳಕೆರೆಯವರ ಅಕಾಲಿಕ ಸಾವು ಹುಟ್ಟಿಸಿದ ಆತಂಕ ಎನ್ನುವುದೂ ಸುಳ್ಳಲ್ಲ.


ಡಿಸೆಂಬರ್ 19ರಂದು ಹೃದಯಾಘಾತದಿಂದಾಗಿ ಮಂಜುನಾಥ ಬೆಳಕೆರೆ ತೀರಿಕೊಂಡರು. ಸಂಬಳ ಬಿಟ್ಟರೆ ಬೇರೇನೂ ಆದಾಯವಿಲ್ಲದ..  ಬರುವ ಸಂಬಳದಲ್ಲಿ ಇರಲೊಂದು ಸ್ವಂತ ಮನೆಯನ್ನೂ ಸಹ ಮಾಡಿಕೊಳ್ಳಲಾಗದ ಬೆಳಕೆರೆಯವರ ಅಗಲಿಕೆ ಅವರ ಕುಟಂಬವರ್ಗವನ್ನು ಅತಂತ್ರವಾಗಿಸಿತು. ಈ ಘಟನೆಯು ಬಾಕಿ ಇರುವ ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದ್ದಂತೂ ನಿಜ. ಅವರೆಲ್ಲರಿಗೂ ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಬೆಳಕೆರೆಯವರ ಕುರಿತು ಡಿಸೆಂಬರ್ 21ರಂದು ರಂಗಾಯಣದಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಹಾಗೂ ಅನೇಕ ರಂಗಕರ್ಮಿಗಳು ಭಾಗವಹಿಸಿದ್ದರು. ಬೆಳಕೆರೆ ಕುಟಂಬದ ಮುಂದಿನ ಭವಿಷ್ಯವೇನು? ಎನ್ನುವುದೇ ಅಲ್ಲಿ ಸೇರಿದ ಎಲ್ಲಾ ರಂಗಕರ್ಮಿ ಕಲಾವಿದರುಗಳ ಮನದಾಳದ ಆತಂಕವಾಗಿತ್ತು. ಶೃದ್ದಾಂಜಲಿಯ ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಹಾಗೂ ಕೆಲವಾರು ರಂಗಕರ್ಮಿಗಳು ಬೆಳಕೆರೆ ಕುಟುಂಬಕ್ಕೆ ತುರ್ತಾಗಿ ಆರ್ಥಿಕ ಸಹಾಯ ಮಾಡಬೇಕು ಹಾಗೂ ಎಲ್ಲಾ ಕಲಾವಿದರಿಗೂ ನಿವೃತ್ತಿ ಬದ್ರತೆಯನ್ನು ಒದಗಿಸಬೇಕು ಎಂದು ಸಚಿವೆ ಉಮಾಶ್ರೀಯವರನ್ನು  ಬಹಳವಾಗಿ ಒತ್ತಾಯಿಸಿದರು. ಆದರೆ ಅದಕ್ಕೆ ಪರಿಹಾರವನ್ನು ಕೊಡಬೇಕಾದ ಸಚಿವೆ ನೋಡೋಣ ಮಾಡೋಣ ಮಾತಾಡೋಣ.. ಎನ್ನುವ ನಿರಾಶಾದಾಯಕ ಭರವಸೆಯನ್ನು ಹೊರತುಪಡಿಸಿ ಬೇರೇನೂ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲೇ ಇಲ್ಲಾ.

ಇದು ಒಬ್ಬ ಬೆಳಕೆರೆಯವರ ಕುಟುಂಬದ ಪ್ರಶ್ನೆಯಾಗಿರಲಿಲ್ಲ. ರಂಗಾಯಣದಿಂದ ಈಗಾಗಲೇ ನಿವೃತ್ತಿ ಹೊಂದಿದ ಹಾಗೂ ಇನ್ನು ಮುಂದೆ ಹೊಂದುತ್ತಿರುವ ಎಲ್ಲಾ ಕಲಾವಿದರ ಭವಿಷ್ಯದ ಬದುಕಿನ ಪ್ರಶ್ನೆಯಾಗಿತ್ತು. ಆದರೆ.. ಯಾವಾಗ ಸಚಿವೆಯಿಂದ ಸೂಕ್ತವಾದ ನಿರ್ಧಾರ ಬರಲಿಲ್ಲವೋ ಕಲಾವಿದರಿಗೆ ಪ್ರತಿಭಟನೆಯನ್ನು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇಂದಿಲ್ಲಾ ನಾಳೆ ಕಲಾವಿದರ ರಿಟೈರ‍್ಮೆಂಟ್ ಸ್ಕೀಮ್ ಜಾರಿ ಆಗುತ್ತೆ ಎಂದು ಹತ್ತು ವರ್ಷದಿಂದ ಸಹನೆಯಿಂದಾ ಕಾಯುತ್ತಿದ್ದ ಕಲಾವಿದರ ತಾಳ್ಮೆ ಮೀರಿಹೋಗಿತ್ತು. ಯಾಕೆಂದರೆ ಇದು ಅವರ ಹಾಗೂ ಅವರ ಕುಟುಂಬದವರ ಬದುಕಿನ ಬಗೆಗಿನ ಆತಂಕವಾಗಿತ್ತು. ಇನ್ನೈದು ವರ್ಷಗಳಲ್ಲಿ ಮೊದಲ ತಲೆಮಾರಿನ ಬಹುತೇಕ ರಂಗಾಯಣದ ಕಲಾವಿದರು ನಿವೃತ್ತರಾಗುತ್ತಿದ್ದಾರೆ. ನಿವೃತ್ತರಾದ ಮೇಲೆ ಸರಕಾರದಿಂದ ಏನನ್ನೂ ಅಪೇಕ್ಷಿಸುವಂತಿಲ್ಲಾ. ಅವರೆಲ್ಲಾ ತಮ್ಮ ಬದುಕಿನ ಬಗ್ಗೆ ತೀವ್ರವಾಗಿ ಯೋಚಿಸುವಂತಾಗಿದೆ.  ಹೀಗಾಗಿ ಶೃದ್ದಾಂಜಲಿ ಸಭೆಯ ಮರುದಿನದಿಂದಾ ಎಲ್ಲಾ ಕಲಾವಿದರುಗಳು ಮೊದಲ ಹಂತವಾಗಿ ಅನಿರ್ದಿಷ್ಟ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಸರಕಾರ ಸ್ಪಂದಿಸದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಲ್ಲಾ ಕಲಾವಿದರುಗಳು ನಿರ್ಧರಿಸಿದ್ದಾರೆ.
 
ರಂಗಾಯಣ ಶುರುವಾಗಿದ್ದು 1989 ರಲ್ಲಿ ಬಿ.ವಿ.ಕಾರಂತರ ನಾಯಕತ್ವದಲ್ಲಿ ತೀವ್ರ ಶೋಧ ನಡೆಸಿ ಪ್ರತಿಭಾನ್ವಿತ ಅನುಭವಿ ಯುವ ನಟಿ ನಟಿಯರನ್ನು ಆಯ್ಕೆ ಮಾಡಲಾಗಿತ್ತು. ಆರಂಭದ ಕೆಲವು ವರ್ಷಗಳ ಕಾಲ ಉಮೇದಿನಲ್ಲಿ ಎಲ್ಲಾ ಕಲಾವಿದರುಗಳು ನಾಟಕಗಳನ್ನು ಮಾಡುತ್ತಲೇ ಬಂದರು. ಯಾವಾಗ ಕಲಾವಿದರುಗಳು ಮದುವೆಯಾಗಿ ಮಕ್ಕಳಾಗಿ ಕುಟುಂಬ ವಿಸ್ತರಿಸಿತೋ ಆಗ ಅತಂತ್ರತೆ ಕಾಡತೊಡಗಿತು. ತಮ್ಮ ಕೆಲಸವನ್ನು ಖಾಯಂ ಮಾಡಬೇಕು ಎನ್ನುವ ಬೇಡಿಕೆಯನ್ನು 1999 ರಲ್ಲಿ ಕಲಾವಿದರುಗಳು ಸರಕಾರದ ಮುಂದಿಟ್ಟರು. ಇದಕ್ಕೆ ಕಾರಂತರು ವಿರೋಧ ವ್ಯಕ್ತಪಡಿಸಿದಾಗ ಕಲಾವಿದರುಗಳು ತಿರುಗಿ ಬಿದ್ದರು.  ಆಗ ಹಣಕಾಸು ಮಂತ್ರಿಯಾಗಿದ್ದವರು ನಮ್ಮ ಈಗಿನ ಸಿಎಂ ಸಿದ್ದರಾಮಯ್ಯನವರು. ಕಲಾವಿದರುಗಳ ಆತಂಕವನ್ನು ಮನಗಂಡ ಸಿದ್ದರಾಮಯ್ಯನವರು ಎಲ್ಲಾ ಕಲಾವಿದರನ್ನೂ ಸರಕಾರಿ ನೌಕರರಾಗಿ ಪರಿಗಣಿಸಿ ಖಾಯಂಗೊಳಿಸಿದರು.

ತದನಂತರ ಯಾವಾಗ ಗಂಗಾಧರಸ್ವಾಮಿ ಹಾಗೂ ಶ್ರಿನಿವಾಸಭಟ್‌ರವರು ವಯೋಮಿತಿಯ ಲೆಕ್ಕಾಚಾರದಲ್ಲಿ ರಂಗಾಯಣದಿಂದ ನಿವೃತ್ತಿ ಹೊಂದಿದರೋ ಆಗ ಅವರಿಗೆ ಯಾವುದೇ ನಿವೃತ್ತಿ ಪರಿಹಾರಗಳು ಸಿಗದೇ ಬಾಕಿ ಬದುಕು ನಿರ್ವಹಿಸಲು ಪರದಾಡಬೇಕಾಯಿತು. ಹಾಗೂ ರಂಗಾಯಣದ ಕಲಾವಿದರಾಗಿದ್ದು ಅಕಾಲಿಕವಾಗಿ ತೀರಿಕೊಂಡ ಬಸವರಾಜ ಕೊಡಗೆ, ಜಯರಾಮ್ ಹಾಗೂ ಪುಟ್ಟಣ್ಣನವರ ಅಕಾಲಿಕ ಸಾವಿನ ನಂತರ ಅವರ ಕುಟಂಬದವರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಸರಕಾರದಿಂದ ಸಿಗದೇ ಅವರ ಕುಟುಂಬ ಪರಿತಪಿಸಿತು.  ಆಗಲೇ ಬಾಕಿ ಕಲಾವಿದರುಗಳಿಗೆ ಚಿಂತೆ ಶುರುವಾಯಿತು. ತಮ್ಮ ನಿವೃತ್ತಿ ನಂತರ ಪೆನ್ಶನ್ ಸಹ ಇಲ್ಲದೇ ಕುಟುಂಬ ನಿರ್ವಹಣೆ ಹೇಗೆ ಅನ್ನುವ ಸಮಸ್ಯೆ ಬೆಟ್ಟವಾಯಿತು. ಆಗಿನಿಂದಲೇ ನಿವೃತ್ತಿ ವೇತನ ಕೊಡಬೇಕು ಎನ್ನುವ ಬೇಡಿಕೆಯನ್ನು ಸರಕಾರಿ ಇಲಾಖೆಯ ಮುಂದಿಟ್ಟು ಕಲಾವಿದರುಗಳೆಲ್ಲಾ ಕಾಲಕಾಲಕ್ಕೆ ಒತ್ತಾಯಿಸತೊಡಗಿದರು. ಹೀಗೆಯೇ ಕೆಲವಾರು ವರ್ಷಗಳ ಹಗ್ಗಜಗ್ಗಾಟ ಸರಕಾರ ಹಾಗೂ ಕಲಾವಿದರುಗಳ ನಡುವೆ ಶುರುವಾಗಿತ್ತು. ಯಾವಾಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿತೋ.. ಯಾವಾಗ ರಂಗಭೂಮಿಯ ಕಲಾವಿದೆ ಉಮಾಶ್ರೀಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾದರೋ ಆಗ ಕಲಾವಿದರಿಗೆಲ್ಲಾ ಭರವಸೆಯ ಬೆಳಕು ಕಾಣಿಸಿತು. ತಮಗೆ ನಿವೃತಿ ವೇತನ ಸಿಗುತ್ತದೆ ಎನ್ನುವ ಆಸೆಯಿಂದಲೇ ತಮ್ಮ ಪ್ರಯತ್ನವನ್ನು ಕಲಾವಿದರೆಲ್ಲಾ ಮುಂದುವರೆಸಿದರು.


ಆಗ ಕಲಾವಿದರಿ ಬಯಕೆಗೆ ಒತ್ತಾಸೆಯಾಗಿ ನಿಂತಿದ್ದು ರಂಗಸಮಾಜದ ಸದಸ್ಯರುಗಳು. ಕಲಾವಿದರ ಬೇಡಿಕೆಗೆ ರಂಗಸಮಾಜ ತೀವ್ರವಾಗಿ ಸ್ಪಂದಿಸಿತು. ಇಲಾಖೆಯ ಸಭೆಗಳಲ್ಲಿ ಒತ್ತಡ ಹೇರಲಾಯಿತು. ಆಗ ಸರಕಾರದ ಅಂಡರ್ ಸೆಕ್ರೇಟರಿಯವರು ರಂಗಾಯಣದ ನೌಕರರಿಗೆ ಕೆಸಿಎಸ್‌ಆರ್ ಸೇವಾನಿಯಮದಡಿಯಲ್ಲಿ ನಿವೃತ್ತಿ ವೇತನ ಕೊಡಲು ಬರುವುದಿಲ್ಲಾ. ಹೀಗಾಗಿ ಸಂಸ್ಕೃತಿ ಇಲಾಖೆಯ ಗ್ರ್ಯಾಂಟನಲ್ಲಿಯೇ ಕಲಾವಿದರಿಗೆ ಇಡುಗಂಟನ್ನು ತೆಗೆದಿರಿಸಿ ನಿವೃತ್ತರಾಗುವ ಕಲಾವಿದರುಗಳಿಗೆ ಕೊಡುವ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಲಹೆ ಕೊಟ್ಟರು. ಆಗ ಇಡಿಗಂಟು ಸಾಧ್ಯತೆಗಳ ಅಧ್ಯಯನಕ್ಕಾಗಿ ಎರಡು ವರ್ಷಗಳ ಹಿಂದೆ ರಂಗಸಮಾಜದ ಸದಸ್ಯರಲ್ಲೆ ಆಯ್ದ ಮೂರು ಜನರ ಉಪಸಮಿತಿಯನ್ನು ಡಾ.ಕೆ.ವೈ.ನಾರಾಯಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ನಿವೃತಿಯಾಗುವ ಪ್ರತಿಯೊಬ್ಬ ಕಲಾವಿದರುಗಳಿಗೆ ಇಪ್ಪತ್ತು ಲಕ್ಷದಷ್ಟು ಇಡಗಂಟನ್ನು ಕೊಡಬೇಕು ಎಂದು ಆ ಉಪಸಮಿತಿಯು ತನ್ನ ಅಧ್ಯಯನದ ವರದಿಯನ್ನು ಸಲ್ಲಿಸಿ ಸರಕಾರಿ ಇಲಾಖೆಗೆ ರೆಕಮೆಂಡ್ ಮಾಡಿತು. ಈ ವರದಿಯನ್ನು ರಂಗಸಮಾಜದ ಎಕ್ಸಿಕ್ಯೂಟಿವ್ ಸಭೆಯಲ್ಲೂ ಅನುಮೋದಿಸಲಾಯಿತು. ಹಾಗೂ ಸಚಿವೆ ಉಮಾಶ್ರೀಯವರು ಕಳೆದ ಸಲದ ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯ  ಗ್ರ್ಯಾಂಟಿನಲ್ಲಿ ರಂಗಾಯಣದ ಕಲಾವಿದರಿಗಾಗಿ ಐವತ್ತು ಲಕ್ಷ ರೂಪಾಯಿಗಳನ್ನು ತೆಗೆದಿರಿಸಲು ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದರು. ಇದರಿಂದ ರಂಗಾಯಣದ ಕಲಾವಿದರುಗಳಿಗೆ ಸ್ವಲ್ಪ ನೆಮ್ಮದಿ ದೊರಕಿತ್ತು.

ಆದರೆ.. ಅತ್ತ ಆ ಹಣ ಈಗಲೂ ಇಲಾಖೆಯಲ್ಲಿ ಕನ್ನಡಿಯ ಗಂಟಂತೆ ಸುಭದ್ರವಾಗಿದೆ. ಇತ್ತ ಕಲಾವಿದರ ಭವಿಷ್ಯದ ಬದುಕು ಅಭದ್ರವಾಗಿದೆ. ಇರುವ ಹಣವನ್ನಾದರೂ ಈಗ ತೀರಿಕೊಂಡ ಹಾಗೂ ನಿವೃತ್ತಿ ಹೊಂದುವವರಿಗೆ ಕೊಡುವ ವ್ಯವಸ್ಥೆಯಾದರೂ ಮಾಡಬೇಕಲ್ಲವೆ? ಯಾಕೆಂದು ಕೇಳಿದರೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸಚಿವೆ ಉಮಾಶ್ರೀಯವರು ಹೊಣೆಗಾರಿಕೆಯಿಂದಾ ಜಾರಿಕೊಳ್ಳುತ್ತಿದ್ದಾರೆ. ಸಚಿವರೇ ಹೀಗೆ ಮಾಡಿದರೆ ಇನ್ನು ಅಧಿಕಾರಿಗಳು ಮೈಮನಸಿಗೆಲ್ಲಾ ಎಣ್ಣೆ ಹಚ್ಚಿಕೊಂಡೇ ಜಾರಿಕೊಳ್ಳಲು ಕಾದಿರುತ್ತಾರೆ. ರಾಜ್ಯ ಹಣಕಾಸು ವಿಭಾಗದವರು ಸಂಸ್ಕೃತಿ ಇಲಾಖೆಯ ಗ್ರ್ಯಾಂಟಿನಲ್ಲಿಯೇ ನಿವೃತ್ತರಾಗುವ ಕಲಾವಿದರುಗಳು ಇಡಿಗಂಟು ಪಡೆಯಬಹುದು ಎಂದು ಹೇಳಿದರೆ.. ಸಂಸ್ಕೃತಿ ಇಲಾಖೆಯವರು ಹಣಕಾಸು ವಿಭಾಗದ ಅನುಮತಿ ಬೇಕೆಂದು ಹೇಳುತ್ತಾರೆ. ಈ ಎರಡೂ ಇಲಾಖೆಯ ಆಟದಲಿ ಕಲಾವಿದರ ಭವಿಷ್ಯದ ಬದುಕು ಅತಂತ್ರಗೊಂಡಿದೆ. ಮಂಜುನಾಥ ಬೆಳಕೆರೆಯವರ ಅನಿರೀಕ್ಷಿತ ನಿರ್ಗಮನ ಅವರ ಕುಟುಂಬದ ಮೇಲೆ ಬೀರಿದ ಆರ್ಥಿಕ ದುಷ್ಪರಿಣಾಮದಿಂದಾಗಿ ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿ ವರ್ಗದವರನ್ನೆಲ್ಲಾ ಅತೀವ ಆತಂಕಕ್ಕೆ ಗುರಿಮಾಡಿದೆ. ತಮ್ಮ ಹಕ್ಕಿಗಾಗಿ  ಹೋರಾಡುವುದು ಅನಿವಾರ್ಯವಾಗಿದೆ.


ಸಚಿವೆ ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ ರಂಗಸಮಾಜದ ಜನರಲ್‌ಬಾಡಿ ಮೀಟಿಂಗ್ ಕರೆದು ಉಪಸಮಿತಿಯ ವರದಿಯನ್ನು ಅಧಿಕೃತವಾಗಿ ಪಾಸ್ ಮಾಡಿ ಆದೇಶ ಹೊರಡಿಸುವುದು ಎರಡು ವರ್ಷದಿಂದಾ ಬಾಕಿ ಇದೆ. ವರದಿ ಸಲ್ಲಿಕೆಯಾಗಿ ಎರಡು ವರ್ಷಗಳೇ ಕಳೆದರೂ ಪರಿಣಾಮ ಮಾತ್ರ ಶೂನ್ಯವಾಗಿದೆ. ಆದರೆ ಉಮಾಶ್ರೀಯವರು ಅದ್ಯಾಕೋ ಮನಸ್ಸು ಮಾಡುತ್ತಿಲ್ಲಾ. ಯಾರ ಒತ್ತಡಕ್ಕೂ ಒಂಚೂರೂ ಮಣಿಯುತ್ತಿಲ್ಲಾ. ಕಲಾವಿದರೊಬ್ಬರ ಅಕಾಲಿಕ ಸಾವೂ ಸಹ ಅವರನ್ನು ಕಾಡುತ್ತಿಲ್ಲಾ. ಪಕ್ಕಾ ರಾಜಕಾರಣಿಯಾಗಿ ಬದಲಾಗಿರುವ ಉಮಾಶ್ರೀಯವರು ಈಗ ಕಕ್ಕುಲತೆಯುಳ್ಳ ರಂಗಭೂಮಿಯ ಕಲಾವಿದೆಯಾಗಿ ಉಳಿದಿಲ್ಲ. ಈ ದರಿದ್ರ ರಾಜಕಾರಣದ ದುರ್ಗಾಳಿಯೇ ಅಂತಹುದು. ಎಂತೆಂತವರ ನಿಯತ್ತನ್ನೇ ಹಾಳು ಮಾಡಿಬಿಡುತ್ತದೆ. ಈಗ ಸಚಿವೆ ಹಾಗೂ ಇಲಾಖೆಯ ಅಧಿಕಾರಿಗಳು ರಂಗಾಯಣದ ಕಲಾವಿದರ ಬದುಕನ್ನು ಸರಕಾರಿ ಕಾನೂನುಗಳ ಸಿಕ್ಕುಗಳಲ್ಲಿ ಸಿಕ್ಕಿಸಿ ಆಟ ಆಡುತ್ತಿರುವುದು ನಿಜಕ್ಕೂ ಅಕ್ಷಮ್ಯ.

ಅವರು ಕಲಾವಿದರುಗಳು, ಕಳೆದ ಮೂರು ದಶಕಗಳಿಂದ ತಮ್ಮ ಬದುಕನ್ನೇ ಕಲೆಗಾಗಿ ಬಸಿದಿದ್ದಾರೆ. ಸಮಸ್ತ ಕನ್ನಡಿಗರಿಗೆ ರಂಗರಸದೌತನವನ್ನು ಉಣಬಡಿಸಿದ್ದಾರೆ. ಹೊಸ ತಲೆಮಾರಿನ ಯುವಕರಿಗೆ ತರಬೇತಿ ಕೊಟ್ಟು ಕಲಾವಿದರನ್ನಾಗಿಸಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ನಾಟಕ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ರಾಜ್ಯ ಮಾತ್ರವಲ್ಲಾ ದೇಶ ವಿದೇಶಗಳಲ್ಲೂ ಸಹ ಕನ್ನಡ ರಂಗಭೂಮಿಯ ಸೊಗಡನ್ನು ಹರಡಿ ಬಂದಿದ್ದಾರೆ. ಇಂತವರು ತಮ್ಮ ನಿವೃತ್ತಿ ವೇತನ ಕೊಡಿ ಎಂದು ಸರಕಾರಗಳ ಮುಂದೆ ಬೇಡಿಕೊಳ್ಳುವುದೇ ನಾಗರೀಕ ಸಮಾಜಕ್ಕೆ ಅವಮಾನಕರವಾದದ್ದು. ಕಲಾವಿದರ ಬದುಕಿಗೆ ಸೂಕ್ತ ಬದ್ರತೆಯನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಬಳಸಿ ಬಿಸಾಕುವ ತಂತ್ರಗಾರಿಕೆಯನ್ನು ಸರಕಾರ ಕಲಾವಿದರ ಬದುಕಿಗೆ ಅನ್ವಯಿಸಿದರೆ ಇದರಂತಾ ಅಮಾನವೀಯತೆ ಇನ್ನೆಲ್ಲೂ ಇಲ್ಲಾ. ಸಚಿವೆ ಉಮಾಶ್ರೀಯವರಿಗೆ ತಮ್ಮನ್ನು ಕಲಾವಿದೆಯಾಗಿ ಬೆಳೆಸಿದ ರಂಗಭೂಮಿಯ ಬಗ್ಗೆ ಕನಿಷ್ಟ ಕೃತಜ್ಞತೆ ಎನ್ನುವುದು ಇದ್ದಲ್ಲಿ ಮೊದಲು ಆತಂಕಕ್ಕೊಳಗಾದ ರಂಗಾಯಣದ ಕಲಾವಿದರ ಸಹಾಯಕ್ಕೆ ಮುಂದಾಗಲಿ.  ವ್ಯರ್ಥ ಸಬೂಬುಗಳನ್ನು ಹೇಳದೇ ಈಗಾಗಲೇ ಕಾಯ್ದಿರಿಸಿದ ಹಣವನ್ನು ತೀರಿಕೊಂಡ ಹಾಗೂ ನಿವೃತ್ತರಾದ ರಂಗಾಯಣದ ಕಲಾವಿದರಿಗೆ ಹಂಚುವ ವ್ಯವಸ್ಥೆಯಾಗಲಿ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಳಕೆರೆಯವರ ಕುಟುಂಬಕ್ಕೆ ತಕ್ಷಣ ಅವರ ಪಾಲಿನ ಇಡಿಗಂಟನ್ನು ಬಿಡುಗಡೆ ಮಾಡಲಿ.  ಕೊಟ್ಯಾಂತರ ರೂಪಾಯಿ ಹಣವನ್ನು ಅಂದಾದುಂದಿ ಖರ್ಚುಮಾಡಿ ಕಲೆಯ ಹೆಸರಲ್ಲಿ ಓಕಳಿ, ಜಾತ್ರೆಗಳನ್ನು ಮಾಡಿ ದಲ್ಲಾಳಿಗಳ ಆದಾಯ ಹೆಚ್ಚಿಸುತ್ತಿರುವ ಪ್ರಾಜೆಕ್ಟಗಳನ್ನು ಪಕ್ಕಕ್ಕಿಟ್ಟು ಮೊದಲು ಕಲಾವಿದರುಗಳ ಬದುಕನ್ನು ಬೆಳಗುವ ಕೆಲಸವನ್ನು ಮಾಡಿ ಮುಗಿಸಲಿ.


ರಂಗಾಯಣದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯನವರು ರಂಗಾಯಣದ ಅಭಿವೃದ್ದಿಗಾಗಿ ಹಾಗೂ ಕಲಾವಿದರಿಗಾಗಿ ಸರಕಾರ ಬೇಕಾದಷ್ಟು ಹಣವನ್ನು ಮೀಸಲಿಟ್ಟಿದೆ. ಕಲೆಯ ಸದುಪಯೋಗಕ್ಕಾಗಿಯೇ ಸಂಸ್ಕೃತಿ ಇಲಾಖೆಗೆ ಸರಕಾರ ಬೇಕಾದಷ್ಟು ಹಣವನ್ನು ಕೊಡುತ್ತಿದೆ. ನೀವು ಅದನ್ನು ಖರ್ಚು ಮಾಡಿ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಸಚಿವೆ ಉಮಾಶ್ರೀಯವರ ಸಮ್ಮುಖದಲ್ಲೇ ವೇದಿಕೆಯ ಮೇಲೆ ಹೇಳಿಕೆ ಕೊಟ್ಟರು. ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎನ್ನುವ ಗಾದೆಯಂತೆ ಮುಖ್ಯಮಂತ್ರಿಗಳು ಕೊಡಲು ಸಿದ್ದವಾಗಿದ್ದರೂ ಸಚಿವೆ ಯಾಕೆ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಲಾವಿದರಿಗೆ ನಿವೃತ್ತಿ ಮೊತ್ತ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ. ಈಗಾಗಲೇ ಕಲಾವಿದರಿಗಾಗಿಯೇ ಮೀಸಲಿಟ್ಟ ಐವತ್ತು ಲಕ್ಷಗಳನ್ನಾದರೂ ಉಪಸಮಿತಿಯ ವರದಿಯನ್ನು ಆಧರಿಸಿ ತೀರಿಕೊಂಡವರ ಕುಟುಂಬಕ್ಕೆ ತಕ್ಷಣಕ್ಕೆ ಬಿಡುಗಡೆಗೊಳಿಸಲು ಸಚಿವೆಗೆ ಇರುವ ತಾಪತ್ರಯವಾದರೂ ಏನು? ಅಕಸ್ಮಾತ್ ಉಮಾಶ್ರೀಯವರು ಹೇಳಿದಂತೆ ತಾಂತ್ರಿಕ ಸಮಸ್ಯೆ ಇದ್ದರೆ ಅದನ್ನು ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳಲಿ ಬೇಡ ಎಂದವರ‍್ಯಾರು? ಸಿಎಂ ಹಣ ಕೊಡಲು ಸಿದ್ದರಾಗಿದ್ದೇವೆಂದು ಹೇಳುತ್ತಾರೆ, ಕಲಾವಿದರು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ, ರಂಗಾಯಣದ ಆಗುಹೋಗುಗಳನ್ನು  ನಿರ್ಧರಿಸುವ ರಂಗಸಮಾಜವೇ ಕಲಾವಿದರ ನಿವೃತ್ತ ಬದುಕಿಗೆ ಬದ್ರತೆ ಒಸಗಿಸಬೇಕು ಎಂದು ವರದಿ  ಕೊಟ್ಟು ಒತ್ತಾಯಿಸಿದೆ.. ಸಂಸ್ಕೃತಿ ಇಲಾಖೆಯಲ್ಲಿ ಅರ್ಧಕೋಟಿ ಹಣ ಕಲಾವಿದರಿಗಾಗಿಯೇ ಮೀಸಲಿಡಲಾಗಿದೆ. ಆದರೂ ಯಾಕೆ ಇನ್ನೂ ಆದೇಶ ಜಾರಿಯಾಗಿಲ್ಲ? ತಲುಪಬೇಕಾದವರಿಗೆ ಹಣ ತಲುಪಿಲ್ಲಾ..?

ಒಂದು ಕಾಲದಲ್ಲಿ ಕಲಾವಿದೆಯಾಗಿ ಎಲ್ಲಾ ರೀತಿಯ ಬಾಧೆಗಳನ್ನು ಅನುಭವಿಸಿದ್ದ ಸಚಿವೆಗೆ ನಿಜಕ್ಕೂ ತೀರಿಕೊಂಡ ಕಲಾವಿದನ ಕುಟುಂಬದ ಕುರಿತು ಒಂದಿಷ್ಟಾದರೂ ಅನುಕಂಪ ಇದ್ದಲ್ಲಿ.. ಮೂರು ದಶಕಗಳ ಕಾಲ ರಂಗಾಯಣಕ್ಕೆ ಬದುಕು ಸವೆಸಿದ ಕಲಾವಿದರ ಮೇಲೆ ಸ್ವಲ್ಪವಾದರೂ ಅಭಿಮಾನವಿದ್ದಲ್ಲಿ ಕೂಡಲೇ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಕಲಾವಿದರುಗಳ ಬದುಕಿಗೆ ಆರ್ಥಿಕ ಬದ್ರತೆಯನ್ನು  ಕೊಡಲು ತಕ್ಷಣವೇ ಆದೇಶಿಸಲಿ. ಇಲ್ಲವಾದರೆ ಇರುವ ತಾಂತ್ರಿಕ ಸಮಸ್ಯೆಗಳಾದರೂ ಏನು ಎನ್ನುವುದನ್ನು ಬಹಿರಂಗ ಪಡಿಸಲಿ.  ಅದು ಬಿಟ್ಟು ಕೇವಲ ವಿಳಂಬ ನೀತಿಯನ್ನು ಅನುಸರಿಸಿ ಕಾಲಹರಣ ಮಾಡಿ ಕಲಾವಿದರ ಬದುಕಿನ ಜೊತೆಗೆ ಆಟವಾಡುವುದು ಅಕ್ಷಮ್ಯ.

ಯಾರು ಏನೇ ಹೇಳಲಿ ರಂಗಾಯಣದ ಕುರಿತು ಅದ್ಯಾಕೋ ಉಮಾಶ್ರೀಯವರು ಮೊದಲಿಂದಲೂ ಒಲವು ತೋರುತ್ತಿಲ್ಲಾ. ಯಾವುದೇ ಸಮಸ್ಯೆಗೆ ಕಾಲಬದ್ದವಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ ಆಗಿಲ್ಲಾ. ಶಿವಮೊಗ್ಗ ರಂಗಾಯಣಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಿ ವರ್ಷಗಳೇ ಉರುಳಿದರೂ ಕಲಾವಿದರನ್ನು ಆಯ್ಕೆ ಮಾಡದೇ ಆ ರಂಗಾಯಣವನ್ನು ನಿಷ್ಕ್ರೀಯ ಮಾಡಲಾಯಿತು. ಅಲ್ಲಿಯ ನಿರ್ದೇಶಕರ ಮೇಲೆ ಅತಿರೇಕದ ವರ್ತನೆ ಹಾಗೂ ಆರ್ಥಿಕ ಅವ್ಯವಹಾರದ ಕುರಿತು ರಂಗಸಮಾಜವೇ ಆರೋಪ ಮಾಡಿ ವರದಿ ಕೊಟ್ಟರೂ ಸಚಿವೆ ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದೇ ಕಾಲಹರಣಮಾಡಿದರು. ಇನ್ನು ಗುಲಬರ್ಗಾ ರಂಗಾಯಣದಲ್ಲಿ ಕಲಾವಿದರು ಹಾಗೂ ಅಲ್ಲಿಯ ನಿರ್ದೇಶಕ ಆರ‍್ಕೆ ಹುಡಗಿಯವರ ನಡುವೆ ಜಂಗಿ ನಿಕಾಲಿ ಕುಸ್ತಿಯೇ ನಡೆದು ಹೋಗಿ ನಿರ್ದೇಶಕರ ಮೇಲೆ ಅಟ್ರಾಸಿಟಿ ಹಾಗೂ ಲೈಂಗಿಕ ಕಿರುಕುಳದ ಕೇಸುಗಳೇ ಆಗಿ ಹೋಗಿ ರಂಗಾಯಣದ ಮಾನ ಬೀದಿ ಬೀದಿಯಲ್ಲಿ ಹರಾಜಾಗಿ ಹೋಯಿತು. ಆಗಲೂ ಉಮಾಶ್ರೀ ನಿರ್ಲಪ್ತರಾದರು. ಯಾವಾಗ ರಂಗಸಮಾಜದ ಸದಸ್ಯರೆಲ್ಲಾ ರಾಜೀನಾಮೆ ಕೊಟ್ಟು ರಂಪಾಟ ಮಾಡಿದರೋ  ಆಗ ಎರಡೂ ರಂಗಾಯಣಗಳ ನಿರ್ದೇಶಕರ ಜೊತೆಗೆ ಕಲಬುರ್ಗಿಯ ಕಲಾವಿದರುಗಳನ್ನೂ ವಜಾಗೊಳಿಸಿ ಮನೆಗೆ ಕಳುಹಿಸಿದರು. ಈಗ ಈ ಎರಡೂ ರಂಗಾಯಣಗಳೂ ಅನಾಥವಾಗಿ  ಆರು ತಿಂಗಳುಗಳೇ ಕಳೆದಿವೆ ಇಲ್ಲಿವರೆಗೂ ನಿರ್ದೇಶಕರುಗಳ ಆಯ್ಕೆ ಆಗದೇ ಆಡಳಿತಾಧಿಕರಿಗಳನ್ನು ನಿಯಮಿಸಲಾಗಿದೆ.

ಅದು ಹೋಗಲಿ... ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿಯವರ ಅವಧಿ ಮುಗಿದು ಮೂರು ತಿಂಗಳುಗಳೇ ಕಳೆದಿವೆ.. ಅವರ ಜಾಗಕ್ಕೆ ಇನ್ನೊಬ್ಬ ನಿರ್ದೇಶಕರನ್ನು ಆಯ್ಕೆ ಮಾಡುವ ಪ್ರಯತ್ನವೂ ಇಲಾಖೆ ಮಟ್ಟದಲ್ಲಿ ಸಾಗುತ್ತಿಲ್ಲಾ. ಅಲ್ಲಿ ಕೂಡಾ ಕಲೆಯ ಗಂಧ ಗಾಳಿ ಗೊತ್ತಲ್ಲದ ಅಧಿಕಾರಿಗಳೇ ರಂಗಾಯಣವನ್ನು ಮುನ್ನಡೆಸುತ್ತಿದ್ದಾರೆ. ಅಂದರೆ.. ರಂಗಸಮಾಜದ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡದ, ಅಧಿಕಾರಿಗಳು ಹೇಳುವ ಸಲಹೆಗಳಿಗೆ ಮಹತ್ವವನ್ನೇ ಕೊಡದ  ಉಮಾಶ್ರೀಯವರ ವರ್ತನೆಯು ಅವರ ಸರ್ವಾಧಿಕಾರಿ ಮನಸ್ಥಿತಿಯನ್ನು ತೋರಿಸುತ್ತದೆ. ರಂಗಾಯಣದ ಕುರಿತು ಸಚಿವೆಯ ಆಟಿಟ್ಯೂಡ್ ಗಮನಿಸಿದಾಗ ಇಡೀ ರಂಗಾಯಣವನ್ನೇ ಅಭದ್ರಗೊಳಿಸಿ ಮುಚ್ಚಿಬಿಡಬೇಕು ಎನ್ನುವಂತಿದೆ.  ಒಬ್ಬ ಕಲಾವಿದೆಯಾಗಿ ಕಲೆಗೆ ಕೊಡುವ ಬೆಲೆ ಇದಲ್ಲಾ.. ಆಕಸ್ಮಿಕವಾಗಿ ದೊರೆತ ಸಚಿವೆ ಹುದ್ದೆ ಎನ್ನುವುದು ಖಾಯಂ ಅಲ್ಲವೇ ಅಲ್ಲಾ. ಉಳಿದ ಅವಧಿ ಮುಗಿದ ಬಳಿಕ ಸಚಿವೆಗಿರಿ ಬಿಟ್ಟು ಉಮಾಶ್ರೀಯವರು ಮನೆಗೆ ಹೋಗಲೇ ಬೇಕು. ಆಗ ರಂಗಭೂಮಿಯವರು ಐದು ವರ್ಷದ ಅವಧಿಯಲ್ಲಿ ಅದೇನು ರಂಗಭೂಮಿಗೆ.. ರಂಗ ಕಲಾವಿದರಿಗೆ ಒಳಿತು ಮಾಡಿ ಕಡಿದು ಕಟ್ಟೆಹಾಕಿದೆ ಎಂದು ಪ್ರಶ್ನಿಸಿದರೆ ಮತ್ತದೇ ಓಕಳಿ, ಜಾತ್ರೆಗಳದ್ದೇ ವರದಿ ಹೇಳಬೇಕಾಗುತ್ತದೆ. ಸಮಸ್ತ ರಂಗಭೂಮಿಯ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುವ ಮುಂಚೆ ಬಾಕಿ ಉಳಿದ ದಿನಗಳಲ್ಲಾದರೂ ರಂಗದ್ರೋಹಿ ಸ್ವಾರ್ಥಿ ದಲ್ಲಾಳಿಗಳನ್ನು ದೂರವಿಟ್ಟು ನಿಜವಾದ ಕಲಾವಿದರಗಳ ಪರವಾದ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ. ಸ್ವಂತ ಬುದ್ದಿ ಇಲ್ಲವಾದರೆ ಕನಿಷ್ಟ ರಂಗಸಮಾಜದ ನಿರ್ಧಾರವನ್ನಾದರೂ ಆಲಿಸಿ ಅವರ ನಿಲುವುಗಳಿಗೆ ಒಲವು ತೋರಬೇಕಾಗಿದೆ. ಇಲ್ಲವಾದರೆ ರಂಗಾಯಣವನ್ನು ಅಭದ್ರಗೊಳಿಸಿದ ಅಪಕೀರ್ತಿ ಉಮಾಶ್ರೀಯವರನ್ನು ಬಿಡದೇ ಕಾಡುತ್ತದೆ.

ಸಚಿವೆ ಉಮಾಶ್ರೀಯವರು ಅಧಿಕಾರದ ಅಮಲಿನಲ್ಲಿ ಏನಾದರೂ ಮಾಡಿಕೊಳ್ಳಲಿ.. ಆದರೆ ರಂಗಸಮಾಜದವರೇನು ಮಾಡುತ್ತಿದ್ದಾರೆ. ರಂಗಾಯಣದ ಒಳಿತಿಗಾಗಿ ತಾನೇ ರಂಗಸಮಾಜ ಇರುವುದು? ಈಗ ಶಿವಮೊಗ್ಗ ಹಾಗೂ ಕಲಬುರ್ಗಿ ರಂಗಾಯಣಗಳೆರಡೂ ನಾಯಕತ್ವ ಇಲ್ಲದೇ ಅನಾಥವಾಗಿವೆ. ಮೈಸೂರು ರಂಗಾಯಣಕ್ಕೂ ನಿರ್ದೇಶಕರಿಲ್ಲವಾಗಿದೆ. ಅಲ್ಲಿಯ ಕಲಾವಿದರ ಭವಿಷ್ಯದ ಬದುಕೇ ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ವರದಿ ಕೊಟ್ಟು ಸುಮ್ಮನಾದರೆ ರಂಗಸಮಾಜದ ಹೊಣೆಗಾರಿಕೆ ಮುಗಿದಂತಲ್ಲಾ. ರಂಗಸಮಾಜದ ಸರ್ವಸದಸ್ಯರ ಒಕ್ಕೋರಲಿನ ನಿಲುವನ್ನು ಸಚಿವೆ ಬೆಂಬಲಿಸದೇ ಹೋದರೆ ಅಲ್ಲಿ ಇದ್ದು ಏನು ಪ್ರಯೋಜನ. ತಮ್ಮ ಮಾತಿಗೆ ಕನಿಷ್ಟ ಗೌರವ ಇಲ್ಲದಿದ್ದಲ್ಲಿ ಇರುವ ಅಗತ್ಯವಾದರೂ ಏನಿದೆ? ಮೊದಲು ಎಲ್ಲಾ ಸದಸ್ಯರೂ ರಾಜೀನಾಮೆ ಕೊಟ್ಟು ಹೊರಗೆ ಬಂದು ಪ್ರೆಸ್ ಮೀಟ್ ಮಾಡಿ ಜನರಿಗೆ ಸತ್ಯ ಸಂಗತಿಯನ್ನು ತಿಳಿಸಲಿ. ಅದು  ಬಿಟ್ಟು ಕಲಬುರ್ಗಿ ವಿವಾದದ ಸಂದರ್ಭದಲ್ಲಿ ಕೊಟ್ಟ ರಾಜೀನಾಮೆಯ ನೆಪ ಹೇಳಿ ಅಯ್ಯೋ ನಾವು ರಾಜೀನಾಮೆ ಕೊಟ್ಟಿದ್ದೇವೆ.. ಸರಕಾರ ಅಂಗೀಕರಿಸದಿದ್ದರೆ ಏನು ಮಾಡೋದು? ಎನ್ನುವ ಅವಕಾಶವಾದಿತನವನ್ನು ಮೊದಲು ಬಿಡಲಿ. ರಂಗಾಯಣದ ಮೇಲೆ.. ಅಲ್ಲಿಯ ಕಲಾವಿದರ ಹಿತರಕ್ಷಣೆಯ ಮೇಲೆ ರಂಗಸಮಾಜದ ಸದಸ್ಯರುಗಳಿಗೆ ಕನಿಷ್ಟ ಬದ್ದತೆ ಇದ್ದಲ್ಲಿ ಎಲ್ಲರೂ ಸೇರಿ ಸಚಿವೆಯ ಮೇಲೆ ಒತ್ತಡವನ್ನು ಹಾಕಲಿ. ಅದೂ ಆಗದಿದ್ದರೆ ಮುಖ್ಯಮಂತ್ರಿಗಳನ್ನೇ ಬೇಟಿಯಾಗಿ ಸಮಸ್ಯೆಗಳನ್ನು ಮನದಟ್ಟು ಮಾಡಿ ಪರಿಹಾರ ಕಂಡುಕೊಳ್ಳಲಿ. ಅದೂ ಸಹ ಅಸಾಧ್ಯವಾಗದೇ ಹೋದರೆ ಇನ್ನೊಮ್ಮೆ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆಯನ್ನು ಕೊಟ್ಟು ಮಾಧ್ಯಮಗಳ ಮುಂದೆ ಬಂದು ಆಳುವ ವರ್ಗಗಳ ರಂಗಾಯಣ ವಿರೋಧಿತನವನ್ನು ಹಾಗೂ ಕಲಾವಿದರ ಕುರಿತು ತೋರುವ ನಿರ್ಲಕ್ಷ ದೋರಣೆಯನ್ನು ಬಹಿರಂಗ ಪಡಿಸಲಿ. ರಂಗಸಮಾಜದ ಸದಸ್ಯರುಗಳು ಈ  ತಕ್ಷಣವೇ ಹೋಗಿ ರಂಗಾಯಣದ ಕಲಾವಿದರು ನಡೆಸುತ್ತಿರುವ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಅವರ ಪರವಾದ ಹೋರಾಟಕ್ಕೆ ಬೆಂಬಲ ಕೊಡಲಿ. ಇದ್ಯಾವುದನ್ನೂ ಮಾಡದೇ ಕೇವಲ ಬಾಯಿಮಾತಲ್ಲಿ ನಾವು ವರದಿ  ಸಲ್ಲಿಸಿದ್ದೇವೆ.. ನಾವು ರಾಜೀನಾಮೆ ಕೊಟ್ಟಿದ್ದೇವೆ.. ಎನ್ನುವ ಪಲಾಯಣವಾದಿತನವನ್ನು ತೋರಿದರೆ ಇವರೂ ಸಹ ಕಲಾ ವಿರೋಧಿ ವ್ಯವಸ್ಥೆಯ ಭಾಗವೆಂದೇ ರಂಗಭೂಮಿ ತಿಳಿಯುತ್ತದೆ. ಕಲೆ ಹಾಗೂ ಕಲಾವಿದರ ಪರವಾಗಿದ್ದೇವೆ ಎಂಬುದನ್ನು ರಂಗಸಮಾಜದ ಎಲ್ಲಾ ಸದಸ್ಯರೂ ಬಹಿರಂಗವಾಗಿ ಸಾಬೀತು ಪಡಿಸುವ ಸಮಯ ಬಂದಿದೆ. ಅವರ ರಂಗಬದ್ದತೆ ಈಗ ನಿರ್ಧಾರವಾಗಬೇಕಿದೆ. ಅವರೆಲ್ಲಾ ಈಗ ಸರಕಾರದ ಪರವಾಗಿ ನಿರ್ಲಿಪ್ತ ಧೋರಣೆ ಅನುಸರಿಸುತ್ತಾರೋ ಇಲ್ಲವೇ ಕಲಾವಿದರ ಪರವಾಗಿ ಪ್ರತಿಭಟನಾ ಮಾರ್ಗ ಹೊಡಿಯುತ್ತಾರೋ ಅನ್ನುವುದರ ಮೇಲೆ ರಂಗಸಮಾಜದ ಸದಸ್ಯರ ರಂಗಕಾಳಜಿ ನಿಂತಿದೆ. 
ಜೊತೆಗೆ ಈಗ ಹೋರಾಟ ನಿರತ ರಂಗಾಯಣದ ಕಲಾವಿದರುಗಳು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಕರ್ನಾಟಕದ ರಂಗಕರ್ಮಿ ಕಲಾವಿದರುಗಳನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಹೋರಾಟವನ್ನು ವಿನ್ಯಾಸಗೊಳಿಸಬೇಕಿದೆ. ಕೇವಲ ನಿವೃತ್ತಿ ಸೌಲಭ್ಯದ ಒಂದಂಶದ ಹೋರಾಟದ ಜೊತೆಗೆ ಶಿವಮೊಗ್ಗ, ಕಲಬುರ್ಗಿ ಹಾಗೂ ಮೈಸೂರು ರಂಗಾಯಣಕ್ಕೆ ನಿರ್ದೇಶಕರನ್ನು ಈ ಕೂಡಲೇ ನಿಯಮಿಸಬೇಕೆಂಬ ಪ್ರಮುಖ ಅಂಶವನ್ನೂ ತಮ್ಮ ಬೇಡಿಕೆಯ ಭಾಗವಾಗಿ ಸೇರಿಸಿಕೊಳ್ಳಬೇಕಿದೆ. ಇಲ್ಲವಾದರೆ ಕಲಾವಿದರು ತಮ್ಮ ಅನುಕೂಲಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ ಅದಕ್ಕೆ ನಾವ್ಯಾಕೆ ಬೆಂಬಲಿಸಬೇಕೆಂದು ಬಹುತೇಕ ರಂಗಕರ್ಮಿಗಳು ದೂರವೇ ಉಳಿಯುತ್ತಾರೆ. ಆದರೆ.. ಸಮಗ್ರ ರಂಗಾಯಣದ ಉಳಿವು ಹಾಗೂ ಬೆಳವಣಿಗೆಯನ್ನು ಮುಖ್ಯವಾಗಿಟ್ಟುಕೊಂಡು ಅದರ ಭಾಗವಾಗಿ ಕಲಾವಿದರ ಹಿತರಕ್ಷಣೆಯನ್ನು  ಸೇರಿಸಿದರೆ ಸಮಗ್ರ ಕನ್ನಡ ರಂಗಭೂಮಿ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ.

ಜೊತೆಗೆ ಆಳುವ ವರ್ಗ ಯಾವಾಗಲೂ ತಮಗೆ ಹೊರೆಯಾದ ರಂಗಾಯಣದಂತಾ ಕಲಾಸಂಸ್ಥೆಗಳನ್ನು ಹೇಗಾದರೂ ಮಾಡಿ ಮುಚ್ಚಲು ಪ್ರಯತ್ನಿಸುತ್ತಿರುತ್ತವೆ. ಪ್ರಭುತ್ವ ಯಾವುದೇ ಇರಲಿ  ಅದು ಮಣಿಯುವುದು ಒತ್ತಡ ಹಾಗೂ ಜನಾಂದೋಲನಗಳಿಗೆ ಮಾತ್ರ. ಆದ್ದರಿಂದ ಕರ್ನಾಟಕದ ಎಲ್ಲಾ ರಂಗಕರ್ಮಿ ಹಾಗೂ ಕಲಾವಿದರುಗಳ ಸಹಕಾರವನ್ನು ಪಡೆದು ಹೋರಾಟದ ಮಜಲುಗಳನ್ನು ನಿರ್ಧರಿಸುವುದು ರಂಗಾಯಣದ ಹಿತದೃಷ್ಟಿಯಿಂದಾ ಒಳ್ಳೆಯದು. ಪ್ರಸನ್ನರವರ ಮುಂದಾಳತ್ವದಲ್ಲಿ ಒಂದು ನಿಯೋಗ ಹೋಗಿ ಮುಖ್ಯ ಮಂತ್ರಿಗಳನ್ನು ಬೇಟಿಯಾಗಿ ರಂಗಾಯಣದ ಸಮಸ್ಯೆ ಹಾಗೂ ಕಲಾವಿದರುಗಳ ಅತಂತ್ರತೆಯ ಬಗ್ಗೆ ವಿವರಿಸಿ ಪರಿಹಾರೋಪಾಯಗಳನ್ನು  ಸೂಚಿಸುವುದು ಈ ತಕ್ಷಣದ ಸಕಾರಾತ್ಮಕ ದಾರಿಯಾಗಿದೆ. ಪ್ರಸನ್ನರವರು ಇನ್ನೊಮ್ಮೆ ರಂಗಾಯಣ ಹಾಗೂ ಕಲಾವಿದರುಗಳ ಹಿತರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡು ರಂಗಕರ್ಮಿಗಳೆಲ್ಲಾ ಅದಕ್ಕೆ ಸಾತ್ ಕೊಟ್ಟರೆ ಆದಷ್ಟು ಬೇಗ ರಾಜ್ಯದ ದೊರೆಗಳ ಗಮನ ಸೆಳೆದು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.  ಒಟ್ಟಿನ ಮೇಲೆ ಕಲಾವಿದರ ಭವಿಷ್ಯದ ಬದುಕು ಹಸನಾಗಬೇಕು ಹಾಗೂ ಎಲ್ಲಾ ರಂಗಾಯಣಗಳೂ ಸಹ ದೇಶಕ್ಕೆ ಮಾದರಿಯಾಗುವಂತೆ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಅದಕ್ಕೆ ಆಳುವ ವ್ಯವಸ್ಥೆ ಅಗತ್ಯ ನೆರವನ್ನು ಕೊಡಬೇಕು ಎನ್ನುವುದೇ ಎಲ್ಲಾ ರಂಗಕರ್ಮಿಗಳ  ಆಶಯವಾಗಿದೆ. ಆ ಆಶಯಕ್ಕೆ ಪೂರಕವಾಗಿ ರಂಗಾಯಣದ ಕಲಾವಿದರುಗಳು, ರಂಗಸಮಾಜದ ಸದಸ್ಯರುಗಳು ಹಾಗೂ ಕನ್ನಡ ರಂಗಭೂಮಿಯ ಸಮಸ್ತ ರಂಗಕರ್ಮಿ ಕಲಾವಿದರುಗಳು ಸ್ಪಂದಿಸಬೇಕಿದೆ. ಸರಕಾರದ ಮೇಲೆ ಎಲ್ಲಾ ರೀತಿಯಲ್ಲಿ ಒತ್ತಡ ಹೇರಬೇಕಿದೆ. ಒಟ್ಟಿನ ಮೇಲೆ ನಾಟಕಗಳ ಮೂಲಕ ದಶಕಗಳ ಕಾಲ ಜನರನ್ನು ರಂಜಿಸಿ ಎಚ್ಚರಿಸಿದ ಕಲಾವಿದರುಗಳ ಬದುಕು ನೆಮ್ಮದಿಯಿಂದ ಇರಬೇಕಿದೆ. ರಂಗಾಯಣ ಉಳಿದು ಬೆಳೆಯಬೇಕಿದೆ.

-ಶಶಿಕಾಂತ ಯಡಹಳ್ಳಿ             

            


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ