ಬುಧವಾರ, ಮಾರ್ಚ್ 29, 2017

ಬಂಡವಾಳಿಗರ ಬಣ್ಣ ಬಯಲುಗೊಳಿಸುವ ಬೀದಿನಾಟಕ “ಕಾಸ್‌ಲೆಸ್” ;





ನೋಟು ಅಮಾನ್ಯೀಕರಣದಿಂದ ದೇಶಕ್ಕೆ ದೇಶವೇ ತಲ್ಲಣಗೊಂಡಿದೆ. ಲಕ್ಷಾಂತರ ಕೋಟಿ ಕಪ್ಪು ಹಣವನ್ನೆಲ್ಲಾ ಹೊರತೆಗೆದು ಕಳ್ಳನೋಟುಗಳನ್ನೆಲ್ಲಾ ಸರ್ವನಾಶ ಮಾಡಲಾಗುತ್ತದೆಂಬುದನ್ನು ನಂಬಿದ ದೇಶದ ಜನತೆ ಐದು ತಿಂಗಳುಗಳ ಕಾಲ ಬಂದ ಆರ್ಥಿಕ ಸಂಕಷ್ಟಗಳನ್ನೆಲ್ಲಾ ಅನಿವಾರ್ಯವಾಗಿ ಸಹಿಸಿಕೊಂಡರು. ಡಿಮಾನೀಟೇಶನ್ ನಂತರ ಈಗ ಕ್ಯಾಶಲೆಸ್ ವಹಿವಾಟಿಗಾಗಿ ದೇಶಾದ್ಯಂತ ಒತ್ತಡ ತರಲಾಗುತ್ತಿದೆ. ಡಿಜಿಟಲ್ ವ್ಯವಹಾರ ಮಾಡುವುದರಿಂದ ತೆರಿಗೆಯ ಸೋರಿಕೆ ನಿಂತುಹೋಗಿ ದೇಶ ಅಭಿವೃದ್ದಿ ಹೊಂದುತ್ತದೆಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ.. ಈ ನಗದುರಹಿತ ವಹಿವಾಟಿನಿಂದ ನಿಜಕ್ಕೂ ಯಾರಿಗೆ ಲಾಭವಾಗುತ್ತಿದೆ..? ಈ ಕ್ಯಾಶಲೆಸ್ ಹಿಂದಿರುವ ಹುನ್ನಾರಗಳೇನು? ಎನ್ನುವುದನ್ನು ತೋರಿಸುವ ಬೀದಿನಾಟಕ ಕಾಸ್‌ಲೆಸ್.

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಪ್ರೆಸ್ ಕ್ಲಬ್ ಬೆಂಗಳೂರು ಹಾಗೂ ಪ್ರಯೋಗರಂಗವು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ನಾಟಕಗಳ ಸಂಭ್ರಮದಲ್ಲಿ ಮಾರ್ಚ ೨೬ ರಂದು ಪ್ರೆಸ್‌ಕ್ಲಬ್ ಆವರಣದಲ್ಲಿ ಶಶಿಕಾಂತ ಯಡಹಳ್ಳಿಯವರು ರಚಿಸಿ ನಿರ್ದೇಶಿಸಿದ ಕಾಸ್‌ಲೆಸ್ ನಾಟಕವನ್ನು ಸೃಷ್ಟಿ ಜನನಾಟ್ಯ ಕಲಾಕೇಂದ್ರದ ಯುವ ಕಲಾವಿದರುಗಳು ಪ್ರದರ್ಶಿಸಿದರು.


ಹೌದು ಇದು ಡಿಜಿಟಲ್ ಜಮಾನಾ. ದೇಶಕ್ಕೆ ದೇಶವೇ ಡಿಜಿಟಲ್ ಮೋಡಿಗೊಳಗಾಗಿದೆ. ಕ್ರೆಡಿಟ್ ಡೆಬಿಟ್ ಕಾರ್ಡಗಳು ನಗದು ರಹಿತ ವ್ಯವಹಾರಕ್ಕೆ ಮುನ್ನುಡಿ ಬರೆದಿವೆ. ಈಗ ಮೊಬೈಲ್  ಹಾಗೂ ಆಪ್‌ಗಳು ಇಂದು ಬಹುತೇಕರ ಬದುಕಿನ ಭಾಗವೇ ಆಗಿವೆ. ಈ ಮಾಧ್ಯಮವನ್ನು ಬಳಸಿಕೊಂಡು ಇಡೀ ದೇಶದ ವ್ಯವಹಾರವನ್ನೇ ಕ್ಯಾಶಲೆಸ್ ಮಾಡಲು ಕೇಂದ್ರ ಸರಕಾರ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಅವಕಾಶವನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಜನರ ಹಣವನ್ನು ಲೂಟಿಹೊಡೆಯಲು ಬಂಡವಾಳಶಾಹಿಗಳು ಹಾಗೂ  ಬಹುರಾಷ್ಟ್ರೀಯ ಕಂಪನಿಗಳು ಅತೀ ಹೆಚ್ಚು ಕ್ರಿಯಾಶೀಲವಾಗಿವೆ. ಜನರ ಹಣ ಮತ್ತು ವಹಿವಾಟುಗಳ ನಡುವೆ ಮದ್ಯವರ್ತಿಯಾಗಿ ಪೇಟಿಯಂ, ಜಿಯೋ ಮನಿ, ಭೀಮ.. ಮುಂತಾದ ತರಾವರಿ ಆಪ್‌ಗಳು ಕ್ಯಾಶಲೆಸ್ ವ್ಯವಹಾರಕ್ಕೆ ಬಳಕೆಯಾಗುತ್ತಿವೆ. ವಿವಿಧ ಆಕರ್ಷಣೆಯನ್ನು ತೋರಿಸಿ ತಮ್ಮ ಆಪ್ ಬಳಸಿ ಎಂದು ಈ ದಲ್ಲಾಳಿ ಕಂಪನಿಗಳು ಜನರನ್ನು ತಮ್ಮತ್ತ ಸೆಳೆಯಲು ತರಾವರಿ ಆಫರ್‌ಗಳನ್ನು ನೀಡುತ್ತಿವೆ. ಆದರೆ.. ಮೊದಮೊದಲು ಜನರನ್ನು ಅಡಿಕ್ಟ್ ಮಾಡಲು ಪ್ರೀಯಾಗಿ ವಹಿವಾಟನ್ನು ಒದಗಿಸಿದರೂ ತದನಂತರ ಸೇವಾ ತೆರಿಗೆ ರೂಪದಲ್ಲಿ ಹಣವನ್ನು ಪಡೆಯುವ ಈ ಕಂಪನಿಗಳು ಲಕ್ಷಾಂತರ ಕೋಟಿ ಹಣವನ್ನು ಗಳಿಸುತ್ತವೆ. ಈ ತಂತ್ರಗಾರಿಕೆಯನ್ನು ಬಯಲು ಮಾಡುವ ಈ ಬೀದಿನಾಟಕವು ಕೆಲವೊಂದು ನಿರ್ದಿಷ್ಟ ಉದಾಹರಣೆಗಳನ್ನು ದೃಶ್ಯರೂಪದಲ್ಲಿ  ಕಟ್ಟಿಕೊಡುವ ಮೂಲಕ ಕ್ಯಾಶಲೆಸ್ ವಹಿವಾಟಿನ ಹಿಂದಿರುವ ಮರ್ಮವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ.


ನಗದು ಹಣ ಚಲಾವಣೆಯನ್ನು ಅದೆಷ್ಟೇ ಜನರು ಅದೆಷ್ಟೇ ಸಲ ಮಾಡಿದರೂ ಹಣದ ಮೌಲ್ಯ ಕಡಿಮೆಯಾಗಲು ಸಾಧ್ಯವಿಲ್ಲ. ಐನೂರು ರೂಪಾಯಿ ಹಣ ದಿನವೊಂದಕ್ಕೆ ಹತ್ತಾರು ಕೈಬದಲಾದರೂ ಅದರ ಬೆಲೆ ಐನೂರು ರೂಪಾಯಿಯಾಗಿಯೇ ಇರುತ್ತದೆ ಹಾಗೂ ಅನೇಕ ವಹಿವಾಟನ್ನು ಮಾಡುತ್ತದೆ. ಆದರೆ.. ಅದೇ ಐನೂರು ರೂಪಾಯಿ ಪ್ರತಿ ಸಲ ಪೇಟಿಯಂ ಮೂಲಕ ವ್ಯವಹಾರ ಮಾಡುವಾಗ ಕನಿಷ್ಟ 2% ಸೇವಾ ತೆರಿಗೆಯನ್ನು ಆಯಾ ಕಂಪನಿಗಳು ಮುರಿದುಕೊಳ್ಳುವುದರಿಂದ ಆ ಐನೂರು ರೂಪಾಯಿಯ ಬೆಲೆ ನಾನೂರಾ ತೊಂಬತ್ತು ರೂಪಾಯಿಗಳಷ್ಟಾಗುತ್ತದೆ. ಹೀಗೆ ಆ ಹಣ ಅದೆಷ್ಟು ಸಲ ಕೈಬದಲಾಗಿ ವಹಿವಾಟು ಮಾಡುತ್ತದೋ ಅಷ್ಟೂ ಸಲ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ಹಣ ಕಡಿತಗೊಳ್ಳುತ್ತಾ ಸಾಗುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗಾಗಲಿ ಇಲ್ಲವೇ ವ್ಯಾಪಾರಿಗಳಿಗಾಗಲೀ ಯಾವುದೇ ಲಾಭವಿಲ್ಲದೇ ಪೇಟಿಯಂ ಜಿಯೋನಂತಹ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗುತ್ತದೆ. ಸರಕಾರದ ಕ್ಯಾಶಲೆಸ್ ವ್ಯವಹಾರದ ಹಿಂದೆ ಬಂಡವಾಳಶಾಹಿ ಕಂಪನಿಗಳ ಹಿತರಕ್ಷಣೆ ಇರುವುದನ್ನು ಈ ಕಾಸ್‌ಲೆಸ್ ಬೀದಿನಾಟಕವು ಬಲು ಮಾರ್ಮಿಕವಾಗಿ ಹೇಳುತ್ತದೆ.

ಕೊನೆಗೆ ನಮ್ಮ ಶ್ರಮ- ನಮ್ಮ ಹಣ, ನಮ್ಮ ಮನ- ನಮ್ಮ ವಹಿವಾಟು, ಮದ್ಯವರ್ತಿ ಬಂಡವಾಳಶಾಹಿ ಕಂಪನಿಗಳಿಗೆ ದಿಕ್ಕಾರ ಎಂದು ಹೇಳುವ ಮೂಲಕ ಈ ನಾಟಕವು ಪ್ರಸಕ್ತ  ಡಿಜಿಟಲ್ ಆರ್ಥಿಕ ವಹಿವಾಟಿನ ಹಿಂದಿರುವ ಲಾಭಕೋರತನವನ್ನು ತೋರಿಸಿ ನೋಡುಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವಲ್ಲಿ ಸಫಲವಾಗಿದೆ.


ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿರುವ ಈ ಕ್ಯಾಶಲೆಸ ವಹಿವಾಟಿನ ಕುರಿತು ನಾಟಕ ಮಾಡುವುದು ಸವಾಲಿನ ಕೆಲಸ. ಯಾಕೆಂದರೆ ನಿಜಾರ್ಥದಲ್ಲಿ ಕ್ಯಾಶಲೆಸ್ ವ್ಯವಹಾರ ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಿದೆ. ಆದರೆ ಅದರ ನಿರ್ವಹಣೆಯನ್ನು ಬಂಡವಾಳಶಾಹಿ ಕಂಪನಿಗಳಿಗೆ ವಹಿಸಿದ್ದರಿಂದಾ ಕೇವಲ ಕೆಲವು ಕಂಪನಿಗಳಿಗೆ ಮಾತ್ರ ಲಾಭವನ್ನು ತಂದುಕೊಡುತ್ತದೆ. ಇದು ಕೊಟ್ಯಾಂತರ ಜನರ ಬೆವರಿನ ಶ್ರಮವನ್ನು ಬಂಡವಾಳಿಗರು ಲೂಟಿ ಮಾಡಲು ಅವಕಾಶಮಾಡಿಕೊಟ್ಟಂತಾಗುತ್ತದೆ. ಇಂತಹ ಸಂದಿಗ್ದ ವಿಷಯವನ್ನು ನವೀರಾದ ಹಾಸ್ಯದ ಮೂಲಕ ಬೀದಿನಾಟಕದಲ್ಲಿ ವಿಡಂಬನಾತ್ಮಕವಾಗಿ ನಿರೂಪಿಸಿ ತೋರಿಸುವಲ್ಲಿ ನಿರ್ದೆಶಕರಾದ ಶಶಿಕಾಂತ ಯಡಹಳ್ಳಿಯವರು ಯಶಸ್ವಿಯಾಗಿದ್ದಾರೆ. 

ಈ ಬೀದಿ ನಾಟಕವನ್ನು ಬೀದಿಯಲ್ಲಿ ಜನರ ನಡುವೆ ಮಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಪ್ರೆಸ್‌ಕ್ಲಬ್ ವೇದಿಕೆಯ ಮೇಲೆ ಮಾಡಿದ್ದರಿಂದಾ ಅದು ಬೀದಿ ನಾಟಕದ ಸ್ವರೂಪಕ್ಕೆ ವ್ಯತಿರಿಕ್ತವೆನಿಸುವಂತಿತ್ತು. ಆದರೂ.. ಬೀದಿನಾಟಕದ ತಂತ್ರಗಾರಿಕೆಯನ್ನು ಅರ್ಧ ಗಂಟೆಗಳ ಕಾಲ ನಾಟಕದಾದ್ಯಂತ ಬಳಸಲಾಗಿದೆ. ಸೆಟ್ ಪ್ರಾಪರ್ಟಿಗಳ ಹಂಗಿಲ್ಲದೇ ಕೇವಲ ನಟರುಗಳ ಅಭಿನಯವನ್ನೇ ಬಳಸಿಕೊಂಡು ಬಲು ಸೊಗಸಾಗಿ ನಾಟಕವನ್ನು ಕಟ್ಟಿಕೊಡಲಾಗಿದೆ. ಕೊರಸ್ ಬಳಕೆ ಈ ಬೀದಿನಾಟಕದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಲಾವಿದರ ಪಾದರಸದಂತಾ ಚಲನೆ, ಬ್ಲಾಕಿಂಗ್ ಹಾಗೂ ಅಭಿನಯ ನೋಡುಗರನ್ನು ಸೆಳೆಯುವಂತಿದೆ ಹಾಗೂ ಪಂಚ್ ಡೈಲಾಗ್‌ಗಳು ಕೇಳುಗರಲ್ಲಿ ಕಚಗುಳಿ ಇಡುವಂತಿವೆ.


ಪ್ರತಿಭಟನಾ ಮಾಧ್ಯಮವಾದ ಬೀದಿ ನಾಟಕಗಳು ಈಗ ಪ್ರಚಾರ ಮಾಧ್ಯಮಗಳಾಗುತ್ತಿರುವ ಜಾಗತೀಕರಣದ ಕಾಲಘಟ್ಟದಲ್ಲಿ ಮತ್ತೆ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆಯನ್ನು ತೋರುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಶಶಿಕಾಂತ ಯಡಹಳ್ಳಿ ಹಾಗೂ ಅವರ ಸೃಷ್ಟಿ ಸಂಸ್ಥೆ ಅಭಿನಂದನಾರ್ಹವಾಗಿದೆ. ಅಗತ್ಯ ಇರಲಿ ಬಿಡಲಿ ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ಅನಿವಾರ್ಯವಾಗಿ ತೊಡಗಿಸಿಕೊಳ್ಳುತ್ತಿರುವ ಜನರಲ್ಲಿ ಜಾಗೃತಿ ಮೂಡಿಸಿ, ಜನರ ಶ್ರಮದ ಹಣ ಹೇಗೆ ಅಧೀಕೃತವಾಗಿ ಲೂಟಿಯಾಗುತ್ತದೆ ಎಂಬುದನ್ನು ತೋರಿಸುವ ಈ ಕಾಸ್‌ಲೆಸ್ ಬೀದಿ ನಾಟಕವು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಾಗಿರುವುದು ಈಗಿನ ತುರ್ತು ಅಗತ್ಯವಾಗಿದೆ. ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ನಿರಂತರ ಲೂಟಿಯ ವಿರುದ್ಧ ಬಹುಸಂಖ್ಯಾತ ದುಡಿಯುವ ವರ್ಗವನ್ನು ಎಚ್ಚರಿಸಬೇಕಿದೆ. ಹಾಗೂ ಕಾರ್ಪೋರೇಟ್ ಕಂಪನಿಗಳು ಹಾಗೂ ಸರಕಾರಗಳ ನಡುವೆ ಇರುವ ಕೊಡುಕೊಳ್ಳುವ ಒಳ ಒಪ್ಪಂದಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕಾಸ್‌ಲೆಸ್ ನಾಟಕ ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಕಾಣಬೇಕಿದೆ.  


- ಜಗದೀಶ್ ಕೆಂಗನಾಳ    ಉಪನ್ಯಾಸಕರು. ಹೊಸಕೋಟೆ

          



ಗುರುವಾರ, ಮಾರ್ಚ್ 23, 2017

ಗುಡಿಹಳ್ಳಿ ಎಂಬ ನಾಗಣ್ಣನ ಸಣ್ಣತನದ ವೃತ್ತಾಂತ:






ಸ್ವಂತ ಬುದ್ದಿ ಇಲ್ಲದಿದ್ದರೂ ಬುದ್ದಿಜೀವಿ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ಅದೆಷ್ಟರ ಮಟ್ಟಿಗೆ ಸಣ್ಣತನವನ್ನು ತೋರಿಸಬಹುದು? ನಾಟಕಗಳ ವರದಿ  ಬರೆದು ವಿಮರ್ಶಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಇನ್ನೆಷ್ಟು ದುರುಳತನವನ್ನು ವ್ಯಕ್ತಪಡಿಸಬಹುದು ಎನ್ನುವುದಕ್ಕೆ ಪರಮ ಸಾಕ್ಷಿ ಗುಡಿಹಳ್ಳಿ ನಾಗರಾಜ್. ನಾಗರ ಹಾವಿಗೆ ಹಲ್ಲಲ್ಲಿ ಮಾತ್ರ ವಿಷವಿದ್ದರೆ ಈ ವ್ಯಕ್ತಿಗೆ ಮೈಯೆಲ್ಲಾ ವಿಷವೆನ್ನುವುದನ್ನು ತನ್ನ ಕೃತ್ಯಗಳಿಂದಲೇ ಸಾಬೀತುಪಡಿಸುತ್ತಿರುವುದು ಅಕ್ಷಮ್ಯ. ವಯಸ್ಸಾದಂತೆ ವ್ಯಕ್ತಿ ಮಾಗುತ್ತಾ.. ರಾಗದ್ವೇಷಗಳನ್ನು ತ್ಯಜಿಸುತ್ತಾ ಹೋಗಬೇಕು. ಆದರೆ.. ಸ್ವಾರ್ಥ ಹಾಗೂ ಸ್ವಜನಪಕ್ಷಪಾತವನ್ನೇ ರೂಢಿಸಿಕೊಂಡು ದ್ವೇಷ ಅಸೂಯೆಗಳನ್ನೇ ಉಸಿರಾಗಿಸಿಕೊಂಡ ವ್ಯಕ್ತಿ ಸಮಾಜದ ಕಣ್ಣಲ್ಲಿ ಹೇಗೆ ಕಸವಾಗುತ್ತಾನೆ ಎನ್ನುವುದಕ್ಕೆ ಜೀವಂತ ಉದಾಹರಣೆ ಗುಡಿಹಳ್ಳಿ ಸಾಹೇಬರು.


ಅಸಲಿಗೆ ಈಗ ಆಗಿದ್ದಾದರೂ ಏನಪಾಂತಂದ್ರೆ.. ರಂಗಸಂಘಟಕ ನಾಗರಾಜಮೂರ್ತಿಯವರು ವಿಶ್ವರಂಗಭೂಮಿ ದಿನಾಚರಣೆಯನ್ನು ಪ್ರೆಸ್‌ಕ್ಲಬ್ ಸಹಯೋಗದೊಂದಿಗೆ ಆಚರಿಸಬೇಕು ಎನ್ನುವ ಯೋಜನೆ ಹಾಕಿಕೊಂಡರು. ಮಾರ್ಚ 27 ರಂದು ವಿಶ್ವರಂಗಭೂಮಿ ದಿನವಾಗಿದ್ದರಿಂದ ಅದಕ್ಕೂ ಎರಡು ದಿನ ಮುಂಚೆ ಅಂದರೆ ಮಾರ್ಚ 25, 26 ಮತ್ತು 27 ರಂದು ಒಟ್ಟು ಮೂರು ದಿನಗಳ ಕಾಲ ನಾಟಕಗಳ ಸಂಭ್ರಮ, ಸಂವಾದ ಹಾಗೂ ರಂಗಗೌರವ ಕಾರ್ಯಕ್ರಮವನ್ನು ಏರ್ಪಡಿಸಿದರು. ಇದೊಂದು ಸ್ತುತ್ಯಾರ್ಹವಾದ ಸಂಗತಿ. ಯಾಕೆಂದರೆ ಪ್ರೆಸ್‌ಕ್ಲಬ್ಬನ್ನು ರಂಗಭೂಮಿಯ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು ಹಾಗೂ ಪತ್ರಕರ್ತ ಮಿತ್ರರನ್ನು ಒಳಗೊಂಡಂತೆ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುವುದು ರಂಗಭೂಮಿಯ ವ್ಯಾಪ್ತಿಯನ್ನು ಪತ್ರಿಕಾವಲಯಕ್ಕೂ ವಿಸ್ತರಿಸುವ ಉತ್ತಮ ಯೋಜನೆ. ಪ್ರತಿದಿನವೂ ಜ್ಞಾನಪೀಠ ಪುರಸ್ಕೃತರ ನಾಟಕವನ್ನು ಪ್ರದರ್ಶಿಸುವುದು ಹಾಗೂ ಪ್ರತಿದಿನ ಬೀದಿನಾಟಕಗಳನ್ನು ಆಡಿಸುವುದು ಇನ್ನೂ ಅರ್ಥಪೂರ್ಣವಾದಂತಹುದು. ಈ ಕಾರ್ಯಕ್ರಮದ ಭಾಗವಾಗಿ ಮಾ.೨೬ರ ಭಾನುವಾರದಂದು ಹಿರಿಯ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ರವರೊಂದಿಗೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರೀಯ ರಂಗಭೂಮಿ ಎನ್ನುವ ವಿಷಯದ ಮೇಲೆ ಸಂವಾದವನ್ನೂ ಏರ್ಪಡಿಸಿ ಸಂವಾದದಲ್ಲಿ ಭಾಗವಹಿಸುವವರ ಪಟ್ಟಿಯನ್ನು ಸಿದ್ದಗೊಳಿಸಲಾಗಿತ್ತು. ಪೂರ್ವಭಾವಿಯಾಗಿ ಕರೆದ ಸಭೆಯಲ್ಲಿ ಭಾಗವಹಿಸಿದ ಗುಡಿಹಳ್ಳಿ ನಾಗರಾಜರಿಗೆ ಆ ಪಟ್ಟಿಯಲ್ಲಿ ಇರುವ ಒಂದು ಹೆಸರನ್ನು ನೋಡಿದ ಕೂಡಲೇ ಮೈಯೆಲ್ಲಾ ಉರಿ ಎದ್ದಿತು. ಆ ಹೆಸರನ್ನು ತೆಗೆದು ಹಾಕಲೇಬೇಕೆಂದು ಹಠಕ್ಕೆ ಬಿದ್ದರು. ಆ ಹೆಸರೂ ಬೇರೆ ಯಾರದೂ ಅಲ್ಲಾ ಶಶಿಕಾಂತ ಯಡಹಳ್ಳಿ ಅಂದರೆ ನನ್ನ ಹೆಸರು.

ಅದ್ಯಾಕ್ರೀ ಯಡಹಳ್ಳಿ ಹೆಸರು ತೆಗೀಬೇಕು.. ಅವರೇನು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿಲ್ಲವಾ? ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಶ್ರೀಧರರವರು ಪ್ರಶ್ನಿಸಿದಾಗ ಪ್ರೆಸ್‌ಕ್ಲಬ್ ವಾತಾವರಣ ಸರಿಯಿಲ್ಲವಾದ್ದರಿಂದಾ ಯಡಹಳ್ಳಿ ಹೆಸರು ಸಂವಾದದಲ್ಲಿ ಇರಕೂಡದು ಎಂದು ಗುಡಿಹಳ್ಳಿ ವತಾರಕ್ಕೆ ಬಿದ್ದರು. ಅವರ ವಿತಂಡವಾದದಿಂದ ರೋಸಿಹೋದ ನಾಗರಾಜಮೂರ್ತಿ ಯಾಕೆ ನಿಮ್ಮ ಬ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಯಡಹಳ್ಳಿ ಬರೆದು ಬಯಲಿಗೆಳೆದಿದ್ದಕ್ಕೆ ಅವರ ಹೆಸರು ಬೇಡಾ ಎಂದು ಹೇಳುತ್ತಿದ್ದೀಯಲ್ಲಾ, ನೀನೇನು ರಂಗಭೂಮಿಗೆ ಮಾಡಿದ್ದು.. ಒಂದೇ ಒಂದು ನಾಟಕ ಮಾಡಿಲ್ಲಾ, ಮಾಡಿಸಿಲ್ಲಾ ಆದರೂ ರಂಗಭೂಮಿಯವನೆಂದು ಬಡಾಯಿ ಕೊಚ್ಚಿಕೊಳ್ತಿದ್ದೀ. ಯಡಹಳ್ಳಿ ನಾಟಕಗಳನ್ನ ಮಾಡಿಸ್ತಾನೇ ಇದಾನೆ, ಅಭಿನಯದ ಶಾಲೆಯನ್ನೇ ನಡಿಸ್ತಿದ್ದಾನೆ, ರಂಗಭೂಮಿ ಲೇಖನಗಳನ್ನ ಬರೀತಾನೇ ಇದ್ದಾನೆ. ರಂಗಭೂಮಿಯಲ್ಲಿ ಕೆಲಸ ಮಾಡುವವರನ್ನೇ ಬೇಡಾ ಅನ್ನಲು ನೀನ್ಯಾರು?.. ಎಂದು ಜೋರಾಗಿಯೇ ಕೇಳಿದಾಗ ಗುಡಿಹಳ್ಳಿ ತಣ್ಣಗಾದರು. ನಿಮ್ಮ ಹಾಗೆಯೇ ಯಡಹಳ್ಳಿ ಕೂಡಾ ಪ್ರೆಸ್‌ಕ್ಲಬ್ ಮೇಂಬರ್ ಆಗಿದ್ದಾರೆ. ಪ್ರೆಸ್‌ಕ್ಲಬ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರಿಗೆ ಎಲ್ಲಾ ಹಕ್ಕುಗಳೂ ಇವೆ. ಇದಕ್ಕೆಲ್ಲಾ ಬೇಡಾ ಎನ್ನುವುದು ಸರಿಯಲ್ಲಾ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಹಾಗೂ ಕಾರ್ಯದರ್ಶಿ ಶಿವಪ್ರಕಾಶ್ ಹೇಳಿದರು. ತನ್ನ ಮಾತಿಗೆ ಯಾರೂ ಬೆಲೆಕೊಡದಿರುವಾಗ ಒಂಟಿಯಾದ ಗುಡಿಹಳ್ಳಿ ಸಿಟ್ಟಿಗೆದ್ದು ನಾನೇ ಈ ಸಂವಾದದಲ್ಲಿ ಭಾಗವಹಿಸೊದಿಲ್ಲಾ ಎಂದು ಹೇಳಿ ಅಲ್ಲಿಂದಾ ದುಮುಗುಡುತ್ತಲೇ ಜಾಗ ಖಾಲಿ ಮಾಡಿದರು. ಉಳಿದವರೆಲ್ಲಾ ಗುಡಿಹಳ್ಳಿಯ ಬಂಢತನವನ್ನು ನೋಡಿ ನಕ್ಕಿದ್ದು ಅವರಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲಾ. ಆದರೆ ನಾಗರಾಜರ ಬುಸುಗುಡುವಿಕೆ ಏನೂ ಕಡಿಮೆಯಾಗಿಲ್ಲ.

ಗುಡಿಹಳ್ಳಿ ನಾಗಣ್ಣ ಯಾಕೆ ಹೀಗೆ ಬುಸುಗುಟ್ಟಿತು ಎಂಬುದಕ್ಕೂ ಬಲು ದೊಡ್ಡ ಹಿನ್ನೆಲೆ ಇದೆ. ಈಗಾಗಲೇ ಒಮ್ಮೆ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಗುಡಿಹಳ್ಳಿ ಕಳೆದ ಸಲ ಮತ್ತೆ ಸದಸ್ಯರಾಗಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದ್ದ ಅವರ ಹೆಸರನ್ನು ಸಚಿವೆ ಉಮಾಶ್ರೀ ಕಿತ್ತು ಹಾಕಿದ್ದರು. ಎಲ್.ಕೃಷ್ಣಪ್ಪನವರು ಅಕಾಡೆಮಿ ಅಧ್ಯಕ್ಷರಾದರೆ ತಾನೂ ಹೇಗೋ ಕೋಆಪ್ಟ್ ಮೇಂಬರ್ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೃಷ್ಣಪ್ಪನವರ ಬಾಲಬಡಿದುಕೊಂಡು ಓಡಾಡಿದ ಗುಡಿಹಳ್ಳಿಯವರಿಗೆ ಯಾವಾಗ ಶೇಖ ಮಾಸ್ತರ ಹೆಸರು ಅಧ್ಯಕ್ಷಗಿರಿಗೆ ಪೈನಲ್ ಆಯಿತೋ ಆಗ ತಕ್ಷಣ ನಿಷ್ಟ ಬದಲಾಯಿಸಿ ಶೇಖರವರ ಹಿಂದೆ ದುಂಬಾಲು ಬಿದ್ದು ಅಕಾಡೆಮಿಗೆ ಕೋಅಪ್ಟ್ ಸದಸ್ಯರಾದರು. ಇದರ ಹಿಂದೆ ಗುಡಿಹಳ್ಳಿ ಮಾಡಿದ ಜಾತಿಯತೇ ಹಾಗೂ ಕುತಂತ್ರಗಳನ್ನೆಲ್ಲಾ ನಾನು ಲೇಖನದಲ್ಲಿ ಬರೆದು ಜನರ ಮುಂದೆ ಇಟ್ಟಿದ್ದೆ. ರಂಗಭೂಮಿಗೆ ಪ್ರತ್ಯಕ್ಷವಾಗಿ ಯಾವ ಕೊಡುಗೆಯನ್ನೂ ಕೊಡದ ಗುಡಿಹಳ್ಳಿಯವರು ಅರ್ಹರಾಗಿರುವ ಬೇರೆಯವರ ಅವಕಾಶವನ್ನು ಕಿತ್ತುಕೊಂಡಿದ್ದನ್ನು ವಿರೋಧಿಸಿದ್ದೆ. ಅವತ್ತಿಂದಾ ಶುರುವಾಯಿತು ನೋಡಿ ನಾಗಣ್ಣನ ದ್ವೇಷ. ಮೊದಲೆಲ್ಲಾ ನಿಜವಾದ ರಂಗವಿಮರ್ಶೆ ಎಂದರೆ ನಿಮ್ಮದು ಮಾತ್ರ. ಇಲ್ಲಿವರೆಗೂ ನನಗೆ ಕೇವಲ ರಂಗಮಾಹಿತಿಯ ವರದಿ ಮಾತ್ರ ಬರೆಯಲು ಸಾಧ್ಯವಾಯಿತು. ನೀವು ವಸ್ತುನಿಷ್ಟ ವಿಮರ್ಶೆ ಬರೆಯುತ್ತಿರುವುದು ನನಗೆ ಸಂತಸ ತಂದಿದೆ ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ವಿಮರ್ಶೆಗಳನ್ನು ಓದಿ ಪೋನ್ ಮಾಡಿ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುತ್ತಿದ್ದ ಗುಡಿಹಳ್ಳಿ ಇದ್ದಕ್ಕಿದ್ದಂತೆ ವಿಷಕಾರಲು ಶುರುಮಾಡಿದ್ದು ಅವರ ಸ್ವಭಾವ ಗೊತ್ತಿದ್ದ ನನಗೆ ಅಚ್ಚರಿ ಏನೂ ಆಗಲಿಲ್ಲ.

ಗುಡಿಹಳ್ಳಿ ನಾಟಕ ಅಕಾಡೆಮಿಯ ಪ್ರಶಸ್ತಿಯಲ್ಲಿ ಡೀಲ್ ಮಾಡಿಕೊಂಡು ಮುಖಭಂಗವಾಗಿದ್ದು, ಜಾತಿ ಲಾಬಿ ಮಾಡಿ  ತಮ್ಮ ಉಪಪತ್ನಿಗೆ ವಾಲ್ಮೀಕಿ ಪ್ರಶಸ್ತಿ ಕೊಡಿಸಿದ್ದು, ನಾಟಕ ಅಕಾಡೆಮಿಯನ್ನು ಸ್ವಂತ ಕೆಲಸಗಳಿಗೆ ಬಳಸಿಕೊಂಡಿದ್ದು, ನಾಟಕ ಅಕಾಡೆಮಿಯಲ್ಲಿ ತಾವೇ ಸರ್ವಾಧಿಕಾರಿ ಎಂದು ಮೆರೆಯಲು ಪ್ರಯತ್ನಿಸಿದ್ದು,  ಒಂದೇ ಒಂದು ನಾಟಕವನ್ನು ಮಾಡದೇ ಕೇಂದ್ರ ಸರಕಾರದ ಅನುದಾನವನ್ನು ತಾವೂ ತೆಗೆದುಕೊಂಡಿದ್ದೇ ಅಲ್ಲದೇ ತಮ್ಮ ಮಗನಿಗೂ ಕೊಡಿಸಿದ್ದು, ಕೇಂದ್ರ ಸರಕಾರ ಸಾಂಸ್ಕೃತಿಕ ಕೆಲಸಗಳಿಗೆ ಕೊಡಮಾಡುವ ಅನುದಾನವನ್ನು ಅಕ್ರಮವಾಗಿ ಹೊಡೆಯುವ ಕಳ್ಳರ ಗುಂಪನ್ನು ಸೇರಿಕೊಂಡಿದ್ದು.. ಹೀಗೆ ಅನೇಕಾನೇಕ ರಂಗವಿರೋಧಿ ಕೆಲಸಗಳನ್ನು ಗುಡಿಹಳ್ಳಿ ಮಾಡಿದ್ದನ್ನು ಕಾಲಕಾಲಕ್ಕೆ ಲೇಖನಗಳಲ್ಲಿ ಬರೆದು ರಂಗಭೂಮಿಯವರಿಗೆ ತಿಳಿಸುತ್ತಾ ಬಂದಿದ್ದೆ. ಗುಡಿಹಳ್ಳಿಯ ಮೇಲೆ ಯಾವುದೇ ದ್ವೇಷ ಅಸೂಯೆ ಇಲ್ಲದೇ ಕೇವಲ ರಂಗಭೂಮಿಯ ಮೇಲಿನ ಬದ್ದತೆ ಹಾಗೂ ರಂಗಪತ್ರಕರ್ತನಾಗಿ ನನ್ನ ವೃತ್ತಿಯನ್ನು ನಾನು ನಿಷ್ಟೆಯಿಂದ ಮಾಡಿದ್ದಂತೂ ಸತ್ಯ. ಗುಡಿಹಳ್ಳಿ ಮಾತ್ರವಲ್ಲಾ ರಂಗಭೂಮಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಬಹುತೇಕ ರಂಗದಲ್ಲಾಳಿಗಳ ಬಗ್ಗೆಯೂ ಬರೆದು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ.. ಮೂವತ್ತು ವರ್ಷಗಳ ಕಾಲ ಪ್ರಜಾವಾಣಿ ಬಳಗದಲ್ಲಿ ಪತ್ರಕರ್ತನಾಗಿ ವೃತ್ತಿ ಮಾಡಿ ನಿವೃತ್ತರಾದ ಈ ವಯೋವೃದ್ದ ಗುಡಿಹಳ್ಳಿಯವರಿಗೆ ವಸ್ತುನಿಷ್ಟ ಲೇಖನವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಆಗಲಿಲ್ಲವಲ್ಲಾ ಎನ್ನುವುದೇ ಬೇಸರದ ಸಂಗತಿ. ತಪ್ಪು ಮಾಡಿದಾಗ ಬರೆದು ಎಚ್ಚರಿಸಿದವರನ್ನೇ ಶತಾಯ ಗತಾಯ ದ್ವೇಷಿಸುವ ಬೌದ್ದಿಕ ದಾರಿದ್ರ್ಯ ಗುಡಿಹಳ್ಳಿಯವರಿಗೆ ಬರಬಾರದಿತ್ತು.

ಗುಡಿಹಳ್ಳಿ ರಂಗಭೂಮಿಗೆ ಕೊಟ್ಟಿದ್ದು ಅಲ್ಪವಾದರೆ ಪಡೆದದ್ದು ಬೇಕಾದಷ್ಟಿದೆ. ಪದವಿ, ಪುರಸ್ಕಾರ, ಸನ್ಮಾನ, ಬಿಡಿಎ ಸೈಟುಗಳನ್ನೆಲ್ಲಾ ರಂಗಭೂಮಿಯ ಹೆಸರಲ್ಲಿ ಪಡೆದಿದ್ದು ಬಹಿರಂಗ ಸತ್ಯ. ಯೋಗ್ಯತೆ ಇಲ್ಲದಿದ್ದರೂ,  ಎಂದೂ ಪ್ರತ್ಯಕ್ಷವಾಗಿ ರಂಗಕೆಲಸಗಳಲ್ಲಿ ತೊಡಗಿಕೊಳ್ಳದಿದ್ದರೂ ರಂಗಭೂಮಿಯಿಂದಾ ಇಷ್ಟೆಲ್ಲವನ್ನೂ ಪಡೆದ ಗುಡಿಹಳ್ಳಿ ಒಂದಿಷ್ಟಾದರೂ ರಂಗಬದ್ದತೆಯನ್ನು ಬೆಳೆಸಿಕೊಂಡಿದ್ದರೆ ಫಲಾನುಭವಿಯಾಗಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಆದರೆ ಸ್ವಾರ್ಥ, ಸ್ವಜನಪಕ್ಷಪಾತ ಹಾಗೂ ಸಣ್ಣತನಗಳನ್ನೇ ಮೈಗೂಡಿಸಿಕೊಂಡಿರುವ ಗುಡಿಹಳ್ಳಿಯಂತವರು ಇನ್ನೇನು ತಾನೇ ಮಾಡಲು ಸಾಧ್ಯ? ಇವರ ಸಣ್ಣತನಗಳಿಗೆ ಇನ್ನೊಂದಿಷ್ಟು ಉದಾಹರಣೆಗಳನ್ನು ಹೇಳುತ್ತೇನೆ.

ಗುಡಿಹಳ್ಳಿ ನಾಟಕ ಅಕಾಡೆಮಿಯ ಕೋಆಪ್ಟ್ ಮೇಂಬರ್ ಆಗಲು ಏನೆಲ್ಲಾ ಮಾಡಬಾರದ್ದನ್ನು ಮಾಡಿದರು ಎನ್ನುವ ಲೇಖನವನ್ನು ನಾನು ಬರೆದ ಮಾರನೆಯ ದಿನ ನೇರವಾಗಿ ಅಗ್ನಿ ಪತ್ರಿಕೆಯ ಮಾಲೀಕರಾದ ಶ್ರೀಧರ್‌ರವರಿಗೆ ಪೋನ್ ಮಾಡಿದ ಗುಡಿಹಳ್ಳಿ ನೋಡಿ ಅಗ್ನಿ ಸಂಪಾದಕರಾದ ಹತಗುಂದಿಯವರು ನಿಮ್ಮ ಪತ್ರಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಶಶಿಕಾಂತ ಯಡಹಳ್ಳಿ ಜೊತೆಗೆ ಸೇರಿಕೊಂಡು ನನ್ನ ವಿರುದ್ಧ ಬರೆದು ಮಾನಹಾನಿ ಮಾಡುತ್ತಿದ್ದಾರೆ. ಹತಗುಂದಿಯವರಿಂದಾಗಿ ನಿಮ್ಮ ಪತ್ರಿಕೆಯ ಹೆಸರು ಕೆಡುತ್ತಿದೆ.. ಎಂದೆಲ್ಲಾ ಹೇಳಿದ್ದು ಕೇಳಿ ಸಾಕಾಗಿ ರೀ ನಮ್ಮ ಪತ್ರಿಕೆ ವಿಚಾರ ನನಗೆ ಗೊತ್ತು.. ನೀವು ಹೇಳುವುದೇನೂ ಬೇಕಾಗಿಲ್ಲಾ ಎಂದು ಶ್ರೀಧರರವರು ಗದರುವವರೆಗೂ ಗುಡಿಹಳ್ಳಿಯ ಆರೋಪ ಸಾಗೇ ಇತ್ತು. ಲೇಖನ ಬರೆದದ್ದು ನಾನು ಆದರೆ ನನ್ನ ಸ್ನೇಹಿತರು ಎನ್ನುವ ಕಾರಣಕ್ಕೆ ಹತಗುಂದಿಯವರ ಮೇಲೆ ಇಲ್ಲಸಲ್ಲದ ಅರೋಪ ಮಾಡಿ ಶ್ರೀಧರರವರಿಗೆ ಚಾಡಿ ಹೇಳಿ ಅಗ್ನಿ ಸಂಪಾದಕರನ್ನು ಕೆಲಸದಿಂದ ತೆಗೆಸಿಹಾಕುವ ಭಾರೀ ಕುತಂತ್ರ ಮಾಡಿ ತೋಪಾದ ಗುಡಿಹಳ್ಳಿಯ ದ್ವೇಷದ ಬಗ್ಗೆ ಇನ್ನೇನು ಹೇಳುವುದು.

ಕಲಾಗ್ರಾಮದಲ್ಲಿ ರೇಣುಕಾರೆಡ್ಡಿಯವರು ರಂಗಕಿರಣ ತಂಡದಿಂದಾ ರಂಗೋತ್ಸವವನ್ನು ಹಮ್ಮಿಕೊಂಡಿದ್ದರು. ಮೊದಲದಿನ ಅತಿಥಿಯಾಗಿ ನನ್ನ ಜೊತೆಗೆ ಗುಡಿಹಳ್ಳಿ ಹೆಸರೂ ಇತ್ತು. ನನ್ನ ಜೊತೆಗೆ ವೇದಿಕೆ ಹಂಚಿಕೊಳ್ಳಲು ಹಿಂಜರಿದ ಗುಡಿಹಳ್ಳಿಯವರು ಅವತ್ತು ಬೆಂಗಳೂರಿನಲ್ಲೇ ಇದ್ದರೂ ಮೈಸೂರಲ್ಲಿರುವೆನೆಂದು ಸುಳ್ಳು ನೆಪ ಹೇಳಿ ಕಾರ್ಯಕ್ರಮಕ್ಕೆ ಬರದೇ ತಪ್ಪಿಸಿಕೊಂಡರು. ಮೊದಲು ಒಪ್ಪಿಕೊಳ್ಳಬಾರದಿತ್ತು. ಒಪ್ಪಿದ ಮೇಲೆ ತಪ್ಪಿಸಿಕೊಳ್ಳಬಾರದು. ತಪ್ಪಿತಸ್ತ ಮನೋಭಾವ ಇದ್ದವರು ಮಾತ್ರ ಹೀಗೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಿಂತಾ ಸಣ್ಣತನದ ಇನ್ನೊಂದು ಉದಾಹರಣೆ ಹೀಗಿದೆ. ವಾಟ್ಸಾಪ್ ಗುಂಪೊಂದರಲ್ಲಿ ನಾನೂ ಇದ್ದೆ.. ಜೊತೆಗೆ ಗುಡಿಹಳ್ಳಿ ಕೂಡಾ. ನನ್ನ ಕವಿತೆಗಳನ್ನು ಜೆ.ಲೊಕೇಶರವರು ಆ ಗುಂಪಲ್ಲಿ ಯಾವಾಗಲೂ ಶೇರ್ ಮಾಡ್ತಾ ಇದ್ದರು. ಕವಿತೆಗಳು ನನ್ನದೆಂಬ ಕಾರಣಕ್ಕೆ ಸಹಿಸಿಕೊಳ್ಳಲಾಗದ ಗುಡಿಹಳ್ಳಿ ಲೊಕೇಶರವರಿಗೆ ಅದನ್ನು ತಿಳಿಸಿ ಆ ವಾಟ್ಸಾಪ್ ಗುಂಪಿನಿಂದಲೇ ಎಕ್ಸಿಟ್ ಆಗಿ ತಮ್ಮ ದ್ವೇಷದ ಮನೋಭಾವವನ್ನು ತೋರಿಸಿದರು. ಇತ್ತೀಚೆಗೆ ನಾಟಕ ಅಕಾಡೆಮಿಯ ಅವಧಿ ಪೂರ್ಣಗೊಳ್ಳುವ ಮುನ್ನ ಧಾರವಾಡದಲ್ಲಿ ಹವ್ಯಾಸಿ ರಂಗಸಮ್ಮೇಳನವನ್ನು ನಾಟಕ ಅಕಾಡೆಮಿ  ಹಮ್ಮಿಕೊಂಡಿತ್ತು. ಅದರಲ್ಲಿ ಆಹ್ವಾನಿತರಾಗಿ ಭಾಗವಹಿಸುವವರ ಪಟ್ಟಿಯಲ್ಲಿ  ಇದ್ದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿಯೇ ತೆಗೆದುಹಾಕಿದ ಗುಡಿಹಳ್ಳಿ ತಮ್ಮ ಅಸೂಯೆ ಪ್ರವೃತ್ತಿಯನ್ನು ಮುಂದುವರೆಸಿದರು. ಹೆಸರಿಗೆ ತಕ್ಕಹಾಗೆಯೇ ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಹಾಗಿರುವ ಈ  ನಾಗಣ್ಣನ ದ್ವೇಷ ನೂರು ವರುಷ ಎನ್ನುವುದು ಸಾಬೀತಾಗಿದ್ದೇ ಪ್ರೆಸ್ ಕ್ಲಬ್ಬಲ್ಲಿ ನನ್ನ ಹೆಸರನ್ನು ವಿನಾಕಾರಣ ತೆಗೆದುಹಾಕಬೇಕೆಂದು ಹಠಕ್ಕೆ ಬಿದ್ದು ತಾವೇ ಹೊರಗೆ ಹೋದಾಗ.

ಇತ್ತೀಚೆಗೆ ನಡೆದ ಇನ್ನೊಂದು ಘಟನೆಯನ್ನು ಹೇಳಲೇಬೇಕು. ನಾಟಕ ಅಕಾಡೆಮಿಯ ಸದಸ್ಯರಾಗಿ ಕೈಬಾಯಿ ಹೆಸರು ಕೆಡಿಸಿಕೊಂಡಿದ್ದರೂ ಹೇಗಾದರೂ ಮಾಡಿ ಈ ಸಲ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲೇಬೇಕೆಂದು ಗುಡಿಹಳ್ಳಿ ತಮ್ಮ ಪ್ರಯತ್ನ ಶುರುಮಾಡಿಕೊಂಡರು. ಅಕಾಡೆಮಿಯ ಅಧ್ಯಕ್ಷರಾಗಲು ರಂಗಸಂಪದದ ಹಿರಿಯ ರಂಗಸಂಘಟಕರಾದ ಜೆ.ಲೋಕೇಶರವರೇ ಸೂಕ್ತ ಎನ್ನುವುದು ಬಹುತೇಕ ರಂಗಕರ್ಮಿಗಳ ಅಭಿಪ್ರಾಯವಾಗಿತ್ತು. ನಾನೂ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ಆಕಾಂಕ್ಷಿ ಎಂದು ಲೋಕೇಶರವರಿಗೆ ತಿಳಿಸಿದ ಗುಡಿಹಳ್ಳಿ ಹೋಗಿ ತಮ್ಮ ಗುರು ಬರಗೂರರಿಗೆ ದುಂಬಾಲು ಬಿದ್ದರು. ಈಗಾಗಲೇ ಗುಡಿಹಳ್ಳಿಯ ಒತ್ತಾಸೆಯಂತೆ ಅವರ ಉಪಪತ್ನಿಗೆ ವಾಲ್ಮೀಕಿ ಪ್ರಶಸ್ತಿಯನ್ನು ಕೊಟ್ಟು ಜಾತೀವಾದಿ ಎನ್ನುವ ಆರೋಪವನ್ನು ಹೊತ್ತುಕೊಂಡಿದ್ದ ಬರುಗೂರರು ಈ ಸಲ ಗುಡಿಹಳ್ಳಿಯವರನ್ನು ದೂರವೇ ಇಟ್ಟರು. ಗುಡಿಹಳ್ಳಿ ತನ್ನ ಪ್ರಭಾವ ಬೀರಿ ತನ್ನನ್ನು ಈ ಸಲ ನಾಟಕ ಅಕಾಡೆಮಿಗೆ ಅಧ್ಯಕ್ಷನನ್ನಾಗಿ ಮಾಡುತ್ತಾರೆಂದುಕೊಂಡಿದ್ದ ಎಲ್.ಕೃಷ್ಣಪ್ಪನವರಿಗೆ ಗುಡಿಹಳ್ಳಿಯೇ ಅಧ್ಯಕ್ಷರಾಗಲು ಪ್ರಯತ್ನಿಸುವುದನ್ನು ನೋಡಿ ಅಸಹ್ಯಪಟ್ಟುಕೊಂಡು ತಮ್ಮ ಪತ್ರಿಕೆಯ ಸಂಪಾದಕ ಸ್ಥಾನದಿಂದ ಗುಡಿಹಳ್ಳಿಯವರನ್ನು ಹೊರಹಾಕಿ ನಿಟ್ಟುಸಿರು ಬಿಟ್ಟರು. ಯಾವಾಗ ಯಾವ ಕಡೆಗೂ ಬೆಂಬಲ ಸಿಗದೇ ನಾಟಕ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂಬ ಅರಿವು ಗುಡಿಹಳ್ಳಿಯವರಿಗೆ ಆಯಿತೋ ಆಗ ಜೆ.ಲೊಕೇಶರವರಿಗೆ ಪೋನ್ ಮಾಡಿ ನಾನೂ ನಿಮ್ಮನ್ನು ಬೆಂಬಲಿಸುತ್ತೇನೆಂದು ಊಸರವಳ್ಳಿಯ ತರ ಮಾತು ಬದಲಾಯಿಸಿ ಗಾಳಿ ಬಂದತ್ತ ತೂರಿಕೊಳ್ಳಲು ನೋಡಿದರು. ಆದರೆ ಅದಕ್ಕೊಂದು ಪರೋಕ್ಷ ಬೇಡಿಕೆಯನ್ನೂ ಇಟ್ಟರು. ಅದೇನೆಂದರೆ ಹೇಗಾದರೂ ಮಾಡಿ ನಿಮ್ಮ ಆತ್ಮೀಯರಾಗಿರುವ ಶಶಿಕಾಂತ ಯಡಹಳ್ಳಿಯವರನ್ನು ದೂರವಿಡಬೇಕು ಎಂಬುದು. ಇದನ್ನು ಕೇಳಿ ಸಿಟ್ಟಿಗೆದ್ದ ಲೊಕೇಶರವರು ಈ ಗುಡಿಹಳ್ಳಿಯ ನೀಚತನಕ್ಕೆ ಬೇಸತ್ತು ಉಗಿದು ಉಪ್ಪಿನಕಾಯಿ ಹಾಕಿ ಪೋನಿಟ್ಟರು.

ಗುಡಿಹಳ್ಳಿ ಎನ್ನುವ ನಾಗಣ್ಣನ ದ್ವೇಷ ಒಂದೆರಡಲ್ಲಾ.. ಹೇಳುತ್ತಾ ಹೋದರೆ ಪುಟಗಳು ಸಾಲವು. ಬೇರೆಯವರ ಅನುಭವ ಇನ್ನೂ ವಿಸ್ತಾರವಾಗಿವೆ. ಬೇಕಾದಾಗ ಬಳಿಸಿಕೊಂಡು ಬೆನ್ನಿಗೆ ಚೂರಿ ಹಾಕಿದ ಪ್ರಕರಣಗಳು ಬೇಕಾದಷ್ಟಿವೆ. ಅದಕ್ಕೆ ದಾವಣಗೆರೆಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳರವರು ಸಿಟ್ಟಿಗೆದ್ದು ಗುಡಿಹಳ್ಳಿಗೆ ಬಾರಿನಲ್ಲಿ ಹಿಡಿದು ಬಾರಿಸಲು ಹೋಗಿದ್ದೇ ಸಾಕ್ಷಿ. ಆರ್.ನಾಗೇಶರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಕಡಕೋಳರವರು ಸದಸ್ಯರಾಗಿದ್ದರು. ನಾಟಕ ಅಕಾಡೆಮಿಯ ಅವಾರ್ಡ ನನಗೇ ಕೊಡಿಸಬೇಕೆಂದು ಗುಡಿಹಳ್ಳಿಯವರು ಕಡಕೋಳರವರಿಗೆ ದುಂಬಾಲು ಬಿದ್ದರು. ಅಕಾಡೆಮಿಯ ಸಭೆಯಲ್ಲಿ ಗುಡಿಹಳ್ಳಿಯವರ ಹೆಸರನ್ನು ವಾರ್ಷಿಕ ಪ್ರಶಸ್ತಿಗಾಗಿ ಕಡಕೋಳರು ಪ್ರಸ್ತಾಪಿಸಿದಾಗ ಆರ್.ನಾಗೇಶರವರು ಸ್ಪಷ್ಟವಾಗಿ ನಿರಾಕರಿಸಿ ಈ ಗುಡಿಹಳ್ಳಿ ಕೊಡುಗೆ ರಂಗಭೂಮಿಗೆ ಏನಿದೆ? ಎಂದು ಪ್ರಶ್ನಿಸಿದರು. ದಾವಣಗೆರೆಯಿಂದಾ ಅರ್ಹರಾದ ಮೂವರ ಹೆಸರನ್ನು ಶಿಪಾರಸ್ಸು ಮಾಡಿ ಎಂದು ಕಡಕೋಳರವರಿಗೆ ಸೂಚಿಸಿದರು. ಆದರೆ.. ಗುಡಿಹಳ್ಳಿಯವರು ಕಡಕೋಳರ ಹಿಂದೆ ನಕ್ಷತ್ರಿಕನಂತೆ ಬಿದ್ದುಬಿಟ್ಟಿದ್ದರು. ಈ ಸಲ ಕೊಡಿಸದಿದ್ದರೆ ನನಗೆ ಮುಂದೆಂದೂ ಪ್ರಶಸ್ತಿ ಸಿಗಲು ಸಾಧ್ಯವೇ ಇಲ್ಲಾ. ಹೇಗಾದರೂ ಮಾಡಿ ಅವಾರ್ಡ ಕೊಡಿಸಲೇಬೇಕೆಂದು ದಿನಕ್ಕಾರು ಸಲ ಪೋನ್ ಮಾಡಿ ಒತ್ತಡ ತರಲು ಆರಂಭಿಸಿದರು. ಇದರಿಂದಾಗ ಕಡಕೋಳರವರು ಮೂರು ಹೆಸರನ್ನು ಸೂಚಿಸುವ ಬದಲು ಗುಡಿಹಳ್ಳಿಯವರ ಹೆಸರನ್ನೇ ಮೂರು ಸಲ ಹೇಳಿ ಪ್ರಶಸ್ತಿ ಕೊಡಲು ಪಟ್ಟು ಹಿಡಿದರು. ಆಗಲೂ ನಾಗೇಶರವರು ನಿರಾಕರಿಸಿದರಾದರೂ ಸದಸ್ಯರ ಹಕ್ಕನ್ನು ಕೊನೆಗಳಿಗೆಯಲ್ಲಿ ಪುರಸ್ಕರಿಸಿ ಗುಡಿಹಳ್ಳಿಯವರಿಗೆ ಪ್ರಶಸ್ತಿಯನ್ನು ಕೊಟ್ಟರು. ಆದರೆ ಉಪಕಾರ ಪ್ರಜ್ಞೆ ಇಲ್ಲದ ಗುಡಿಹಳ್ಳಿ ಪ್ರಜಾವಾಣಿ ಬಳಗದಲ್ಲಿ ಇದ್ದಷ್ಟೂ ಕಾಲ ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಡಕೋಳರವರ ಪುತ್ರಿಗೆ ರಂಗಭೂಮಿಯ ಕುರಿತು ಒಂದೇ ಒಂದು ಲೇಖನ ಬರೆಯಲೂ ಅವಕಾಶ ಕೊಡದಂತೆ ಮಾಡಿಬಿಟ್ಟರು. ಆ ಯುವ ಪತ್ರಕರ್ತೆಯ ಬೆಳವಣಿಗೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕಿದರು. ಅವತ್ತು ಕಲಾಕ್ಷೇತ್ರದ ಎದುರಿನಲ್ಲಿರುವ ಬಾರಿನಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರರ ಜೊತೆಗೆ ಗುಡಿಹಳ್ಳಿ ಹಾಗೂ ಕಡಕೋಳರವರು ಕುಳಿತು ಗಂಟಲು ಹಸಿ ಮಾಡಿಕೊಳ್ಳುತ್ತಿದ್ದರು. ಒಂದೆರಡು ಪೆಗ್ಗು ಒಳಹೋಗುತ್ತಿದ್ದಂತೆ ತಮ್ಮ ವರಾತ ತೆಗೆದ ಗುಡಿಹಳ್ಳಿ ಕಡಕೋಳರವರನ್ನು ನಿಂದಿಸಿದರು. ಅವರ ಮಗಳಿಗೆ ತಾನೇ ನೌಕರಿ ಕೊಡಿಸಿದ್ದೇನೆಂದು ಬೋಂಗು ಬಿಟ್ಟರು. ಕೇಳುವಷ್ಟು ಕೇಳಿ ರೋಸೆದ್ದುಹೋದ ಕಡಕೋಳರು ಎದ್ದು ಗುಡಿಹಳ್ಳಿಯ ಕಾಲರ್ ಹಿಡಿದು ಇನ್ನೇನು ತದುಕಬೇಕು ಎನ್ನುವಷ್ಟರಲ್ಲಿ ಶೇಖ ಮಾಸ್ತರರು ಕಡಕೋಳರವರ ಕೈಹಿಡಿದು ಕೂಡಿಸಿದರು. ತಡೆಹಿಡಿಯದೇ ಇದ್ದಿದ್ದರೆ ಗುಡಿಹಳ್ಳಿ ಮುಖ ಮೂತಿ ಒಡೆದೇ ಹೋಗಿತ್ತಿತ್ತು. ಅವತ್ತಿನಿಂದಾ ಕಡಕೋಳರ ಮೇಲೆ ದ್ವೇಷಕಾರಲು ಶುರುಮಾಡಿದ ನಾಗಣ್ಣ ಅವರ ಮೇಲೆ ವಿಷ ಕಾರುವುದನು ನಿಲ್ಲಿಸಿಲ್ಲಾ.

ಗುಡಿಹಳ್ಳಿಯವರ ವ್ಯಯಕ್ತಿಕ ತೀಟೆ ತೆವಲು ಲೀಲೆ ದೌರ್ಬಲ್ಯಗಳ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ರಂಗಭೂಮಿಯಲ್ಲಿರುವ ಬಹುತೇಕರಿಗೆ ಅವೆಲ್ಲಾ ಗೊತ್ತಿರುವಂತಹ ಸಂಗತಿಗಳೇ ಆಗಿದ್ದರಿಂದ ಅವುಗಳ ಬಗ್ಗೆ ಮಾತಾಡುವುದು ಅನಗತ್ಯ. ಹಾಗೂ ಅದು ಅವರ ವ್ಯಯಕ್ತಿಕ. ಆದರೆ..  ಗುಡಿಹಳ್ಳಿ ರಂಗಭೂಮಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ನನ್ನ ವಿರೋಧವಿದೆ. ಹಾಗೂ ಪ್ರತಿರೋಧದ ದ್ವನಿಯನ್ನು ಅಡಗಿಸಲು ಪ್ರಯತ್ನಿಸುವ ಗುಡಿಹಳ್ಳಿಯವರ ದೂರ್ತತನದ ಬಗ್ಗೆ ಮಾತ್ರ ಮಾತಾಡುವುದು ಬೇಕಾದಷ್ಟಿದೆ. ಒಬ್ಬನೇ ಒಬ್ಬ ಉತ್ತರಾಧಿಕಾರಿಯನ್ನೂ ಬೆಳಸದೇ, ಸ್ವಾರ್ಥವಿಲ್ಲದೇ ಯಾರಿಗೂ ಸಹಾಯ ಮಾಡದೇ, ಎಲ್ಲವನ್ನೂ ತಾವೊಬ್ಬರೇ ಬಳಸಿಕೊಳ್ಳಬೇಕು ಎನ್ನುವ ಹಪಾಹಪಿಗೆ ಬಿದ್ದ ಗುಡಿಹಳ್ಳಿಯವರು ವಯಸ್ಸಾದಂತೆ ಮಾಗಿದ್ದರೆ ಒಂದಿಷ್ಟು ಹೆಸರಾದರೂ ಉಳಿಯುತ್ತಿತ್ತು. ಸ್ವಾರ್ಥ, ದ್ವೇಷ, ಒಳಹುನ್ನಾರ ಹಾಗೂ ಸಣ್ಣತನಗಳನ್ನು ಬಿಟ್ಟಿದ್ದರೆ ಒಂದಿಷ್ಟಾದರೂ ಸ್ನೇಹಿತರು ಜೊತೆಗಿರುತ್ತಿದ್ದರು. ಯಾರನ್ನೋ ಓಲೈಸಲು ಬರೆಯುವ ರಂಗಪ್ರಯೋಗ ವರದಿಗಳನ್ನು ಬಿಟ್ಟು ವಸ್ತುನಿಷ್ಟವಾಗಿ ವಿಮರ್ಶೆಗಳನ್ನು ಬರೆದಿದ್ದರೆ ಕನಿಷ್ಟ ರಂಗವಿಮರ್ಶಕನಾಗಿ ಗುರುತಿಸಿಕೊಳ್ಳಬಹುದಿತ್ತು. ಹೋಗಲಿ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದರೂ ಹೀಗೆ ಒಂಟಿ ಅತೃಪ್ತ ಆತ್ಮದಂತೆ ಅಲೆದಾಡುವುದು ತಪ್ಪುತ್ತಿತ್ತು. ಏನೂ ಇಲ್ಲದೇ ಎಲ್ಲೂ ಸಲ್ಲದೇ ಪ್ರಶ್ನಿಸಿದವರನ್ನು ದ್ವೇಷಿಸುತ್ತಾ, ವಿರೋಧಿಸಿದವರನ್ನು ಮಟ್ಟಹಾಕಲು ಬಯಸುತ್ತಾ ತಂತ್ರ ಕುತಂತ್ರಗಳಲ್ಲಿಯೇ ಬದುಕುತ್ತಿರುವ ಗುಡಿಹಳ್ಳಿ ಎನ್ನುವ ವಯೋವೃದ್ದರನ್ನು ನೋಡಿದರೆ ಅಯ್ಯೋ ಅನ್ನಿಸದೇ ಇರದು. ಇದೆಲ್ಲಾ ಬೇಕಿರಲಿಲ್ಲಾ. ವಯಸ್ಸಿನ ಗಾಂಭೀರ್ಯತೆಯನ್ನು ಕಾಪಾಡಿಕೊಂಡು, ತನಗಿಂತಾ ಕಿರಿಯರನ್ನು ಪ್ರೋತ್ಸಾಹಿಸಿ ಬೆಳೆಸುವ ಸ್ವಾಭಾವವನ್ನು ರೂಢಿಸಿಕೊಂಡು, ವೃತ್ತಿ ನಿಷ್ಟೆ ಹಾಗೂ ರಂಗಬದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದರೆ ಗುಡಿಹಳ್ಳಿಯವರ ಹೆಸರು ರಂಗಚರಿತ್ರೆಯಲ್ಲಿ ದಾಖಲಾಗುತ್ತಿತ್ತು. ಈಗಲೂ ದ್ವೇಷ ಅಸೂಯೆ ಹಾಗೂ ಸ್ವಾರ್ಥವನ್ನು ತ್ಯಜಿಸಿ ಎಲ್ಲರಿಗೂ ಒಳಿತನ್ನು ಬಯಸಿದರೆ ಒಂದಿಷ್ಟಾದರೂ ಹೆಸರನ್ನು ಉಳಿಸಿಕೊಳ್ಳಬಹುದು. ಎನಗಿಂತ ಕಿರಿಯರಿಲ್ಲಾ. ಎಂದುಕೊಂಡು ಬದುಕಿದ್ದರೆ ಬಸವಣ್ಣನ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಒಡಲೊಳಗಿನ ಕಿಚ್ಚು ತನ್ನ ಸುಡದೇ ಬೇರೆಯವರ ಸುಡದು.. ಎನ್ನುವ ವಚನ ಅರ್ಥಮಾಡಿಕೊಂಡಿದ್ದರೆ ಸಾಕಿತ್ತು ಮನುಷ್ಯನಾಗಲು.

ಯಾವುದೋ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಹಠಕ್ಕೆ ಬಿದ್ದು ತೆಗೆಸಿ ಹಾಕಲು ಪಯತ್ನಿಸುವ ಮೂಲಕ ನನ್ನ ರಂಗಕೆಲಸಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲಾ. ನನ್ನ ಹೆಸರು ಇರಲಿ ಬಿಡಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ರಂಗಭೂಮಿಯ ಬಹುತೇಕ ವಿಭಾಗಗಳಲ್ಲಿ ಕೆಲಸ ಮಾಡಿಕೊಂಡೇ ಬಂದವನು ನಾನು. ಎಂದೂ ಪದವಿ ಪ್ರಶಸ್ತಿ ಅನುದಾನ ಅವಕಾಶಗಳಿಗೆ ಆಸೆಪಟ್ಟವನಲ್ಲ. ಯಾರು ಇವುಗಳಿಗೆಲ್ಲಾ ಆಸೆ ಪಡುತ್ತಾರೋ ಅವರು ಅವಕಾಶವಾದಿಗಳು ಹಾಗೂ ರಾಜೀಕೋರರು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರಸ್‌ಕ್ಲಬ್ಬಿನ ಸಹಯೋಗದೊಂದಿಗೆ ಪ್ರಯೋಗರಂಗ ಹಮ್ಮಿಕೊಂಡ ವಿಶ್ವರಂಗಭೂಮಿ ದಿನಾಚರಣೆಯ ಸಂವಾದದಲ್ಲೂ ಭಾಗವಹಿಸುತ್ತಿದ್ದೇನೆ ಹಾಗೂ ಅವತ್ತು ನಾನು ಬರೆದು ನಿರ್ದೇಶಿಸಿದ ಕಾಸ್‌ಲೆಸ್ ಎನ್ನುವ ಬೀದಿನಾಟಕವನ್ನೂ ನಮ್ಮ ಕಲಾವಿದರೊಂದಿಗೆ ಪ್ರದರ್ಶಿಸುತ್ತಿದ್ದೇನೆ. ಸ್ವಾರ್ಥ ರಹಿತವಾಗಿ ಕೆಲಸ ಮಾಡುವವರಿಗೆ ಅವಕಾಶಗಳು ಸಿಕ್ಕೇ ಸಿಗುತ್ತವೆ. ಗುಡಿಹಳ್ಳಿಯಂತವರ ಕುತಂತ್ರದಿಂದ ಒಂದೆರಡು ಅವಕಾಶಗಳು ಸಿಗದೇ ಹೋದರೂ ಅವಕಾಶಗಳನ್ನು ಹುಟ್ಟುಹಾಕಿಕೊಳ್ಳುವ ಜಾಣ್ಮೆ ಹಾಗೂ ತಾಳ್ಮೆ ಇದ್ದವರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಾರೆ. ಈ ಸತ್ಯ ಗುಡಿಹಳ್ಳಿಯಂತವರಿಗೆ ಅರ್ಥವಾದಷ್ಟೂ ಅವರಿಗೆ ಒಳ್ಳೆಯರು. ಅಂಗೈಯನ್ನು ಅಡ್ಡ ಹಿಡಿದು ಸೂರ್ಯಕಾಂತಿ ತಡೆಯಲಾಗದು. ಬೊಗಸೆ ಅಡ್ಡಗಟ್ಟಿ ಹರಿವ ನೀರ ಸೆಳವು ನಿಲ್ಲಿಸಲಾಗದು. ಹೆಸರು ತೆಗೆಸಿ ಕಾರ್ಯನಿರತರ ಕೈಕಟ್ಟಿಹಾಕಲಾಗದು.. ದ್ವೇಷದಿಂದ ಏನನ್ನೂ ಸಾಧಿಸಲಾಗದು..  ಸಾರ್ವಕಾಲಿಕ ಸತ್ಯ ಗುಡಿಹಳ್ಳಿಯಂತವರಿಗೆ ತಿಳಿಯಬೇಕಿದೆ. ತಿಳಿಯಲಾಗದಿದ್ದರೆ ಕಾಲವೇ ತಿಳಿಸುತ್ತದೆ. ಎಲ್ಲ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಬದಲು ಇನ್ನೂ ಬಾಕಿ ಇರುವಷ್ಟು ಕಾಲವಾದರೂ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಧ್ಯವಾದಷ್ಟೂ ಗುಡಿಹಳ್ಳಿಯವರ ಬದುಕು ಸಾಗಲಿ. ಮುನಿಯದೇ, ತನ್ನಬಣ್ಣಿಸದೇ, ಎದುರು ಹಳಿಯದೇ.. ಜೀವನದ ಅಂತಿಮ ಹಂತದ ಪಯಣ ಸುಖಕರವಾಗಲಿ. ಅದು ಹೇಗೋ ಎಲ್ಲವನ್ನೂ ಪಡೆದಾದ ಮೇಲೆ ಇನ್ನೇನಿದೆ.. ಇನ್ನು ಕಿರಿಯರಿಗೆ ಒಳಿತು ಬಯಸುತ್ತಾ ಮಾರ್ಗದರ್ಶಕರಾಗಿದ್ದರೆ ಗುಡಿಹಳ್ಳಿಯಂತವರಿಗೆ ಒಂದಿಷ್ಟು ಕಿಮ್ಮತ್ತು.. ಇದೇ ಸಾರ್ಥಕ ಬದುಕಿನ ಹಕೀಕತ್ತು. ಗಾಜಿನ ಮನೆಯಲ್ಲಿದ್ದು ಬೇರೆಯವರಿಗೆ ಹಾನಿ ಮಾಡಬಯಸಿದರೆ ಅದರ ಪ್ರತಿಫಲವನ್ನೂ ಅನುಭವಿಸಲೇಬೇಕಾಗುತ್ತದೆ.  ಆದಷ್ಟು ಬೇಗ ದ್ವೇಷ ಅಸೂಯೆ ಸ್ವಾರ್ಥದ ವ್ಯಾಧಿಯಿಂದಾ ಗುಡಿಹಳ್ಳಿಯವರು ಗುಣಮುಖರಾಗಲಿ  ಎಂದು ಮನಸಾರೆ ಹಾರೈಸುವೆ. 

                           -ಶಶಿಕಾಂತ ಯಡಹಳ್ಳಿ                     


ಕೆವೈಎನ್ ‘ಮಲ್ಲಿಗೆ’ ಮೂಲ ಎಲ್ಲಿದೆ..?


ಮೂಲ ಮುಚ್ಚಿಟ್ಟು ನಾಟಕ ಕಟ್ಟು ಪರಂಪರೆ ದಾರಿಯಲ್ಲಿ ಡಾ.ಕೆವೈಎನ್.




ಡಾ.ಕೆ.ವೈ. ನಾರಾಯಣಸ್ವಾಮಿಗಳು 2016ರಲ್ಲಿ ಮಲ್ಲಿಗೆ ಎನ್ನುವ ಒಂದು ಹೊಸ ನಾಟಕ ಬರೆದರು. ಪ್ರಕಾಶ ಶೆಟ್ಟಿಯವರು ತಮ್ಮ ರಂಗಮಂಟಪದ ಕಲಾವಿದರುಗಳಿಗೆ ಈ ನಾಟಕವನ್ನು ನಿರ್ದೇಶಿಸಿದ್ದು ಆಗಸ್ಟ್ 7ರಂದು ರಂಗಶಂಕರದಲ್ಲಿ ಮೊಟ್ಟಮೊದಲ ಪ್ರಯೋಗವಾಯಿತು. ಸೂತ್ರದ ಬೊಂಬೆಗಳನ್ನು ನಿರೂಪಕರನ್ನಾಗಿಟ್ಟುಕೊಂಡು  ಮಲ್ಲಿಗೆ ಪರಿಮಳ ಸೂಸುವ ರಾಜನ ಕಥೆಯನ್ನು ಈ ನಾಟಕ ಹೇಳುತ್ತದೆ. ನಾಟಕದ ವಸ್ತು ವಿಷಯದ ಬಗ್ಗೆ ಅಭಿಪ್ರಾಯಬೇಧಗಳೇನೇ ಇದ್ದರೂ ಪ್ರಕಾಶ ಶೆಟ್ಟಿಯವರು ಕಟ್ಟಿಕೊಟ್ಟ ಈ ನಾಟಕವು ದೃಶ್ಯಕಾವ್ಯದಂತೆ ಮೂಡಿಬಂದಿದ್ದಂತೂ ಸತ್ಯ.


ಒಂದು ವರ್ಷಗಳ ಕಾಲ ಶ್ರಮವಹಿಸಿ ಈ ನಾಟಕವನ್ನು ಕಂತು ಕಂತಲ್ಲಿ ಬರೆದುಕೊಟ್ಟ ಕೆವೈಎನ್‌ರವರು ಎಲ್ಲಿಯೂ ಈ ನಾಟಕದ ಮೂಲ ಆಕರವನ್ನು ಬಿಟ್ಟುಕೊಡಲಿಲ್ಲ. ಬಹುತೇಕರು ಇದು ಕೆವೈಎನ್‌ರವರ ಕಲ್ಪನೆಯ ಮೂಸೆಯಿಂದ ಒಡಮೂಡಿದ ನಾಟಕವೆಂದುಕೊಂಡರು. ಒತ್ತಾಯಿಸಿ ಕೇಳಿದಾಗ ಜಾನಪದದ ಒಂದೆಳೆಯನ್ನು ಎತ್ತಿಕೊಂಡು ನಾಟಕ ಮಾಡಿದ್ದೇನೆಂದು ಕೆವೈಎನ್ ಹೇಳಿದರು. ಬೇರೆ ಆಕರಗಳಿಂದ ವಸ್ತುವನ್ನು ಪಡೆದು ಒಂದಿಷ್ಟು ತಿರುಚಿ ಬರೆದು ತಮ್ಮದೇ ನಾಟಕವೆಂದು ಕ್ಲೈಮ್ ಮಾಡಿಕೊಳ್ಳುವುದು ಕೆವೈಎನ್‌ರವರ ಪಾಂಡಿತ್ಯದ ಹಿಂದಿರುವ ಗುಟ್ಟು ಎನ್ನುವುದು ಕೆಲವೇ ಕೆಲವರಿಗೆ ಮಾತ್ರ ಗೊತ್ತಿರುವ ರಹಸ್ಯ. ಇದು ಹೇಗೆಂದರೆ ಎಲ್ಲೆಲ್ಲಿಯಿಂದಲೋ ಆಕರ ಪುಸ್ತಕಗಳನ್ನು ಓದಿ ಕೆಲವೊಂದಿಷ್ಟನ್ನು ಕಟ್ ಆಂಡ್ ಪೇಸ್ಟ್ ಮಾಡಿಕೊಂಡು ಥೀಸಸ್ ಒಂದನ್ನು ಬರೆದು ಡಾಕ್ಟರೇಟ್ ಪಡೆಯುವವರಂತೆ ಕೆವೈಎನ್ ಕೂಡಾ ನಾಟಕಗಳನ್ನು ಕಟ್ಟಿಕೊಡುತ್ತಾರಾ? ಗೊತ್ತಿಲ್ಲಾ. ಆದರೆ ಅಪಾರ ಪ್ರತಿಭಾವಂತರಾದ ಕೆವೈಎನ್ ರವರನ್ನು ಹಾಗೆಲ್ಲಾ ಕಟ್ ಆಂಡ್ ಪೇಸ್ಟ್ ಅಕಾಡೆಮಿಕ್ ಸಂಶೋಧಕರಿಗೆ ಹೋಲಿಸುವಂತಿಲ್ಲಾ. ಯಾಕೆಂದರೆ ನಾಟಕಕ್ಕೆ ಬೇಕಾದ ವಸ್ತು ವಿಷಯವನ್ನು ಎಲ್ಲಿಂದಲಾದರೂ ತೆಗೆದುಕೊಳ್ಳಲಿ ಅದಕ್ಕೆ ಚೆಂದನೆಯ ಉಡುಗೆ ತೊಡುಗೆ ತೊಡಿಸಿ ಆಕರ್ಷಣೀಯವಾಗಿಸಿ ನೋಡುಗರನ್ನು ಬೆರಗುಗೊಳಿಸುತ್ತಾರೆ. ಬಹುಷಃ ಕಳವು ಎನ್ನುವ ನಾಟಕ ಹೊರತುಪಡಿಸಿ ಅವರು ಬರೆದ ಬಹುತೇಕ ನಾಟಕಗಳು ಸಂಪೂರ್ಣ ಸ್ವಂತದ್ದಾಗಿರದೇ ಬೇರೆ ಆಕರಗಳಿಂದ ಪಡೆದದ್ದವುಗಳೇ ಆಗಿವೆ. ಅವರು ಬರೆದ ಸುಪ್ರಸಿದ್ದ ಅನಭಿಜ್ಞ ಶಾಕುಂತಲ ನಾಟಕವೂ ಸಹ ಆಶಾಡದ ಒಂದು ದಿನ ನಾಟಕದ ಸಾರಸತ್ವವನ್ನೇ ಅವಲಂಬಿಸಿ ವಿಭಿನ್ನ ನಿರೂಪಣೆ ಪಡೆದಿದೆ.

ಈ ಮಲ್ಲಿಗೆ ನಾಟಕದ ಕಥೆಯನ್ನು ಡಾ.ಕೆವೈಎನ್ ಪಂಡಿತರು ಅನಾಮತ್ತಾಗಿ ಎತ್ತಿಕೊಂಡಿದ್ದು ಡಾ.ಎ.ಕೆ.ರಾಮಾನುಜನ್‌ ರವರು ಸಂಗ್ರಹಿಸಿದ ಭಾರತೀಯ ಜನಪದ ಕತೆಗಳು ಪುಸ್ತಕದಿಂದ. ರಾಮಾನುಜನ್‌ರವರು ಭಾರತದ 22 ವಿವಿಧ ಭಾಷೆಗಳಿಂದ ಆಯ್ದ ಕೆಲವು ಜಾನಪದ ಕಥೆಗಳನ್ನು ಇಂಗ್ಲೀಷ್ ಭಾಷೆಯ ಈ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಈ ಪುಸ್ತಕವನ್ನು ಮಹಬಲೇಶ್ವರರಾವ್ ರವರು ಕನ್ನಡಕ್ಕೆ ಅನುವಾದಿಸಿದ್ದು ನ್ಯಾಶನಲ್ ಬುಕ್ ಟ್ರಸ್ಟ್. ಪ್ರಕಟಿಸಿದೆ. ಈ ಸಂಗ್ರಹ ಪುಸ್ತಕದಲ್ಲಿ ತಮಿಳು ಭಾಷೆಯಿಂದಾಯ್ದುಕೊಂಡ ಕಥೆಯೇ ಮಲ್ಲಿಗೆ ನಗೆಯ ದೊರೆ. ಇದೇ ಕಥೆಯ ಮುಕ್ಕಾಲು ಭಾಗ ವಸ್ತುವನ್ನು ತೆಗೆದುಕೊಂಡು ಕಾಲು ಭಾಗ ತಮ್ಮ ಕಲ್ಪನೆಯನ್ನು ಸೇರಿಸಿಕೊಂಡು ಕೆವೈಎನ್‌ರವರು ಮಲ್ಲಿಗೆ ನಾಟಕವನ್ನು ಬರೆದಿದ್ದಾರೆ. ಅಂದರೆ ಈ ನಾಟಕ ನಾಟಕವಾಗಿರದೇ ಜಾನಪದ ಕಥೆಯ ರಂಗರೂಪವಾಗಿದೆ. ತಮಿಳು ಜಾನಪದ ಕಥೆಯಾಧಾರಿತ ಎಂದು ತಮ್ಮ ನಾಟಕ ಕೃತಿಯಲ್ಲಿ ಉಲ್ಲೇಖಿಸಿದ್ದರೆ.. ನಾಟಕ ಪ್ರದರ್ಶನದ ಬೋಷರ್, ಪೋಸ್ಟರ್ ಗಳಲ್ಲಿ ಬರೆದುಕೊಂಡಿದ್ದರೆ ಆ ಅನಾಮಿಕ ಜಾನಪದ ಕಥೆಗಾರನಿಗೆ ನ್ಯಾಯ ಸಲ್ಲಿಸಿದಂತಾಗುತ್ತಿತ್ತು. ಇಲ್ಲವೇ ಈ ಕಥೆಯನ್ನು ಸಂಗ್ರಹಿಸಿದ ರಾಮಾನುಜನ್‌ರವರ ಹೆಸರನ್ನಾದರೂ ಹಾಕಬಹುದಾಗಿತ್ತು. ಆದರೆ.. ಗುಡಿ ಕಟ್ಟಿದವರನ್ನು ಬಿಟ್ಟು ಗೋಪುರ ಇಟ್ಟವರನ್ನು ದೇವಸ್ಥಾನದ ರೂವಾರಿಗಳು ಅಂದ ಹಾಗಾಯ್ತು. ಯಾರೋ ಹುಟ್ಟಿಸಿದ ಕೂಸಿಗೆ ಕುಲಾಯಿ ಹಾಕಿ ತನ್ನದೇ ಮಗು ಅಂದ ಹಾಗಾಯ್ತು. ಕ್ರಿಯಾಶೀಲತೆ ಅಂದ್ರೆ ಇದೇನಾ? ಯಾವುದೋ ಮೂಲದಿಂದ ಪ್ರೇರಣೆ ಪಡೆದು ತಮ್ಮದೇ ಸೃಷ್ಟಿ ಎನ್ನುವುದು ಪಾಂಡಿತ್ಯಾನಾ?  

ಹೀಗೆ ಮೂಲವನ್ನು ಬಚ್ಚಿಟ್ಟು ತಮ್ಮದಾಗಿಸಿಕೊಳ್ಳುವುದೂ ಸಹ ಒಂದು ಕಲೆ. ಡಾ.ಚಂದ್ರಶೇಖರ ಕಂಬಾರರು ಇಂತಹ ಕಲೆಯಲ್ಲಿ ನಿಷ್ಣಾತರು. ಸಾಹಿತ್ಯ ಹಾಗೂ ಕಾವ್ಯದ ಹಿನ್ನೆಲೆಯಿಂದ ಬಂದ ಕೆವೈಎನ್ ಆಗಲಿ ಇಲ್ಲವೇ ಕಂಬಾರರಾಗಲಿ ನಾಟಕೀಯ ವಸ್ತುವಿರುವ ಯಾವುದೇ ವಸ್ತು ವಿಷಯ ಕಥೆ ಕಾವ್ಯಗಳ ಹೊಳಹುಗಳು ಸಿಕ್ಕರೆ ಅವುಗಳನ್ನೆತ್ತಿಕೊಂಡು ನಾಟಕವಾಗಿಸುತ್ತಾರೆ. ಇದು ತಪ್ಪೂ ಅಲ್ಲಾ.. ಕೃತಿಚೌರ್ಯವಂತೂ ಮೊದಲೇ ಅಲ್ಲಾ. ಆದರೆ.. ನಾಟಕ ಬರೆದ ನಂತರ ಮೂಲ ಆಕರವನ್ನು ಹೇಳಿಕೊಳ್ಳುವುದು ನೈತಿಕತೆ ಎನಿಸುತ್ತದೆ. ಉದಾಹರಣೆಗೆ ಕಂಬಾರರ ಬೋಳೇಶಂಕರ ನಾಟಕ. ಇದು ಲಿಯೋ ಟಾಲಸ್ಟಾಯ್ ಕಥೆಯ ರೂಪಾಂತರದ ನಾಟಕ. ಆದರೆ ಕಂಬಾರರು ಎಲ್ಲೂ ಲಿಯೋಟಾಲ್ಟಾಯಿಗೆ ಕ್ರೆಡಿಟ್ ಕೊಡದೇ ಸಂಪೂರ್ಣ ನಾಟಕ ತಮ್ಮದೇ ಎಂಬಂತೆ ಪ್ರಚರ ಪಡಿಸಿದರು. ಇದು ಎಂತಹ ಅನಾಹುತಕ್ಕೆ ಕಾರಣವಾಯಿತು ಎಂದರೆ. ಟಾಲಸ್ಟಾಯ್‌ರವರ ಕಥೆಯನ್ನು ಓದಿ ಪ್ರೇರಣೆಗೊಳಗಾದ ವಿಜಯನಗರ ಬಿಂಬದ ಡಾ.ಕಷ್ಯಪ್ ಅದೇ ಕಥೆಯನ್ನು ರಂಗರೂಪಗೊಳಿಸಿ ಮಕ್ಕಳಿಂದ ಆಡಿಸಿಬಿಟ್ಟರು. ಕಷ್ಯಪ್‌ರವರಿಗೂ ಗೊತ್ತಿರಲಿಲ್ಲಾ ಈ ಕಥೆ ಈಗಾಗಲೇ ಬೊಳೇಶಂಕರ ಎನ್ನುವ ನಾಟಕವಾಗಿದೆ ಎಂದು. ಯಾಕೆಂದರೆ ಕಂಬಾರರಾಗಲೀ ಇಲ್ಲವೇ ಕಷ್ಯಪ್ ಆಗಲೀ ತಮ್ಮ ನಾಟಕದ ಮೂಲ ಕಥೆಗಾರನಿಗೆ ಪ್ರಾಶಸ್ತ್ಯ ಕೊಡಲೇ ಇಲ್ಲಾ. ಬದುಕಿಲ್ಲದ ಟಾಲಸ್ಟಾಯ್ ಬಂದು ಯಾಕೆಂದು ಕೇಳಲು ಸಾಧ್ಯವೇ ಇಲ್ಲಾ. ಜಾನಪದಕ್ಕೆ ಹಕ್ಕುದಾರಿಕೆಯನ್ನು ಯಾರೂ ಕೇಳಲು ಆಗುವುದೂ ಇಲ್ಲಾ. ಇದು ಕೇವಲ ಕಂಬಾರರಾಗಲೀ ಕೆವೈಎನ್ ರವರಾಗಲಿ ಮಾಡಿದ ಕೆಲಸವಲ್ಲ. ಗಿರೀಶ್ ಕಾರ್ನಾಡರೂ ಸಹ ಹೀಗೆ ಮೂಲದ ಹೆಸರುಗಳನ್ನು ಹೇಳದೇ ಕಥೆಗಳನ್ನು ಅಡಾಪ್ಟ್ ಮಾಡಿಕೊಂಡು ನಾಟಕ ಬರೆದಿದ್ದಾರೆ.

ಇವು ಸ್ವತಂತ್ರ ನಾಟಕಗಳೂ ಅಲ್ಲಾ,  ಸಂಪೂರ್ಣ ರೂಪಾಂತರಗೊಂಡ ನಾಟಕಗಳೂ ಅಲ್ಲಾ. ಒಂದು ರೀತಿಯಲ್ಲಿ ಅತಂತ್ರ ನಾಟಕಗಳು. ಯಾಕೆಂದರೆ ಮೂಲದಿಂದ ಒಂದಿಷ್ಟು ಪಡೆದು ಅದಕ್ಕೆ ಬೇರೆಯದೇ ಆದ ನಿರೂಪಣೆಯನ್ನು ಒದಗಿಸಿ ವಿಭಿನ್ನ ನಾಟಕವನ್ನು ಕಟ್ಟಿಕೊಡುವುದೂ ಒಂದು ಸೋಜಿಗದ ಕಲೆ. ಆದರೆ ಅದೆಷ್ಟೇ ಮೂಲವನ್ನು ಮರೆಮಾಚಿದರೂ ಒಂದಿಲ್ಲೊಂದು ದಿನ ಅದು ಗೊತ್ತಾಗದೇ ಇರದು. ಕೆವೈಎನ್ ತಮ್ಮ ಅನಭಿಜ್ಞ ಶಾಕುಂತಲ ನಾಟಕದ ಎಳೆ ತೆಲಗು ಮೂಲದ ಜಾನಪದ ಹಾಡಿನದ್ದೆಂದು ಅದೆಷ್ಟೇ ಬಿಂಬಿಸಲು ಪ್ರಯತ್ನಪಟ್ಟರೂ ಆ ನಾಟಕದ ಮೂಲ ಇರುವುದು ಆಶಾಡದ ಒಂದು ದಿನದಲ್ಲಿ ಎನ್ನುವುದು ನಿರ್ವಿವಾದ. ಇದ್ದದ್ದನ್ನು ಇದ್ದಂಗೆ ಹೇಳಿದರೆ ಈ ಪಂಡಿತರಿಗೆ ಯಾವ ನಷ್ಟವಂತೂ ಇಲ್ಲವೇ ಇಲ್ಲಾ. ತಮಿಳು ಜಾನಪದದ ಕಥೆ ಆಧಾರಿತವೆಂದೋ ಇಲ್ಲವೇ ಜಾನಪದ ಕಥೆಯ ರಂಗರೂಪ ಎಂದೋ ಹೇಳಿಕೊಂಡು ನಾಟಕದ ಕೃತಿ, ಪೋಸ್ಟರ್ ಹಾಗೂ ಬೋಷರ್‌ಗಳಲ್ಲಿ ಹೇಳಿಬಿಟ್ಟರೆ ಯಾವ ಸಮಸ್ಯೆಯೂ ಇರುವುದಿಲ್ಲಾ. ಆದರೆ.. ಸಾಧ್ಯವಾದಷ್ಟೂ ಮೂಲವನ್ನು ಮುಚ್ಚಿಟ್ಟೋ ಇಲ್ಲವೇ ದಿಕ್ಕುತಪ್ಪಿಸಿಯೋ ಸದರಿ ನಾಟಕ ತಮ್ಮದೇ ಸೃಷ್ಟಿ ಎಂದು ಕ್ಲೈಮ್ ಮಾಡಿಕೊಳ್ಳುವುದು ಪಾಂಡಿತ್ಯಕ್ಕೆ ಶೋಭೆತರುವಂತಹುದಂತೂ ಅಲ್ಲವೇ ಅಲ್ಲಾ. ನಾಟಕದ ಮೂಲ ಹಾಗೂ ಮರ್ಮ ಅರಿಯದ ಈ ಪಂಡಿತರ ಭಕ್ತಮಂಡಳಿ ನಾಟಕದ ಕ್ರೆಡಿಟ್ಟನ್ನು ಸಂಪೂರ್ಣವಾಗಿ ಕೆವೈಎನ್‌ರವರಿಗೆ ಕೊಟ್ಟು ಉಧೋ ಉಧೋ ಎನ್ನುವುದು ಇನ್ನೂ ಅಕ್ಷಮ್ಯ. ಏನೇ ಇರಲಿ, ಕದ್ದುಕೊಂಡೋ,, ತೆಗೆದುಕೊಂಡೋ.. ಆಡಾಪ್ಟ್ ಮಾಡಿಕೊಂಡೋ.. ಕಟ್ ಆಂಡ್ ಪೇಸ್ಟ್ ಮಾಡಿಯೋ.. ಹೇಗೋ ಹೊಸ ನಾಟಕಗಳನ್ನು ಆಧುನಿಕ ಕನ್ನಡ ರಂಗಭೂಮಿಗೆ ಕೊಟ್ಟರಲ್ಲಾ ಎನ್ನುವುದೇ ಸಮಾಧಾನಕರ ಹಾಗೂ ಸಂತಸದ ಸಂಗತಿ.   

             -ಶಶಿಕಾಂತ ಯಡಹಳ್ಳಿ     




ಗುರುವಾರ, ಮಾರ್ಚ್ 2, 2017

ರಂಗದಮೇಲೆ ದೃಶ್ಯಕಾವ್ಯ ಸೃಷ್ಟಿಸಿದ “ಅಭಿಯಾನ” :




ಮಹಾಭಾರತ ಮಹಾಕಾವ್ಯದಲ್ಲಿ ನಲುಗಿದ ಮಹಿಳಾ ಪಾತ್ರಗಳನ್ನು ಕುಂತಿ ಗಾಂಧಾರಿ ದ್ರೌಪತಿ ಎಂದು ಪಟ್ಟಿಮಾಡಬಹದು. ಆದರೆ.. ಇವೆಲ್ಲಾ ಪಾತ್ರಗಳು ಪಿತೃಪ್ರಧಾನ ವ್ಯವಸ್ಥೆಯ ಜೊತೆಗೆ ವಿರೋಧಗಳ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ತಮ್ಮ ಪಾತ್ರ ಮುಗಿಸಿದವು. ಆದರೆ.. ಪುರುಷಪ್ರಧಾನ್ಯತೆಯ ಸ್ವಾರ್ಥ ಸಾಧನೆಯ ವಿರುದ್ಧ ಬಂಡಾಯವೆದ್ದು ಬಲಿಯಾದ ಅಂಬೆಯ ಬದುಕು ಮಾತ್ರ ದುರಂತಮಯವಾದದ್ದು. ಮಹಾಭಾರತದಲ್ಲಿ ಅಗಣ್ಯವೆನಿಸುವ ಅಂಬೆಯ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಡಾ.ಜಯಪ್ರಕಾಶ ಮಾವಿನಕುಳಿಯವರು ಅಭಿಯಾನ ನಾಟಕ ರಚಿಸಿದ್ದಾರೆ.

ದಾಕ್ಷಾಯಿಣಿ ಭಟ್‌ರವರು ತಮ್ಮ ದೃಶ್ಯ ರಂಗತಂಡದ ಕಲಾವಿದರುಗಳಿಗೆ ಈ ನಾಟಕವನ್ನು ನಿರ್ದೇಶಿಸಿದ್ದು ರಂಗದಂಗಳದಲ್ಲಿ ದೃಶ್ಯಕಾವ್ಯವೊಂದನ್ನು ಕಟ್ಟಿಕೊಟ್ಟಿದ್ದಾರೆ. ದೃಶ್ಯ ರಂಗತಂಡ 11 ವರ್ಷ ಪೂರೈಸಿದ ಸವಿನೆನಪಿಗಾಗಿ ಮಾರ್ಚ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ದೃಶ್ಯ ನಾಟಕೋತ್ಸವ-2017 ರಲ್ಲಿ ಅಭಿಯಾನ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಸ್ವಿಯಾಯಿತು. 
ಕಾಶಿರಾಜನ ರಾಜಕುಮಾರಿ ಅಂಬೆ ಸ್ವಯಂವರಕ್ಕೆ ಬಂದ ಸಾಲ್ವರಾಜಕುಮಾರನನ್ನು ಪ್ರೀತಿಸಿದ್ದು. ಸ್ವಯಂವರದಲ್ಲಿ ಇನ್ನೇನು ಸಾಲ್ವರಾಜನಿಗೆ ಮಾಲೆ ಹಾಕಬೇಕು ಎನ್ನುವಾಗ ಬಿರುಗಾಳಿಯಂತೆ ನುಗ್ಗಿದ ಭೀಷ್ಮ ಬೇರೆಲ್ಲಾ ರಾಜಕುಮಾರರ ಜೊತೆಗೆ ಸಾಲ್ವನನ್ನೂ ಸೋಲಿಸಿ ಅಂಬೆಯ ವಿರೋಧ ಲೆಕ್ಕಿಸದೇ ಆಕೆಯ ಇಬ್ಬರು ತಂಗಿಯರ ಜೊತೆಗೆ ಬಲವಂತವಾಗಿ ಹಸ್ತಿನಾವತಿಗೆ ಹೊತ್ತು ತಂದು ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡಲು ನೋಡಿದ್ದು, ಸಾಲ್ವನನ್ನು ಪ್ರೀತಿಸುತ್ತಿದ್ದು ತಾನು ಕನ್ಯತ್ವವನ್ನು ಕಳೆದುಕೊಂಡಿದ್ದೇನೆಂದು ರಾಣಿ ಸತ್ಯವತಿಗೆ ಹೇಳಿ ಬಿಡುಗಡೆ ಪಡೆದು ಸಾಲ್ವನಲ್ಲಿಗೆ ಹೋದ ಅಂಬೆ ಅಲ್ಲಿಯೂ ಸಹ ಸಾಲ್ವನಿಂದ ಅವಮಾನಿತಳಾಗಿದ್ದು, ತದನಂತರ ಮತ್ತೆ ಹಸ್ತಿನಾವತಿಗೆ ಬಂದ ಅಂಬೆ ಹೊತ್ತು ತಂದ ಭೀಷ್ಮನೇ ತನ್ನನ್ನು ಮದುವೆಯಾಗಬೇಕು ಎಂದು ಆಗ್ರಹಿಸಿದ್ದು. ಅಜನ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿಯಲು ನಿರಾಕರಿಸಿದ ಭೀಷ್ಮ ಅಂಬೆಯನ್ನು ತಿರಸ್ಕರಿಸಿದ್ದು.. ಹೀಗೆ ಇವೆಲ್ಲವುಗಳನ್ನೂ ದೃಶ್ಯಗಳ ರೂಪದಲ್ಲಿ ಅಭಿಯಾನದಲ್ಲಿ  ಕಟ್ಟಿಕೊಡಲಾಗಿದೆ. ಅವಮಾನದ ಬೆಂಕಿಯಲ್ಲಿ ಬೆಂದುಹೋದ ಅಂಬೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ.. ನೋಡುಗರನ್ನು ನಾಟಕ ಮುಗಿದ ಮೇಲೆಯೂ ಕಾಡುತ್ತದೆ.

ರಾಜ್ಯಾಧಿಕಾರವನ್ನು ಕಾಪಾಡಿಕೊಳ್ಳಲು ರಾಣಿ ಸತ್ಯವತಿ ಪ್ರಯತ್ನಿಸಿದರೆ.. ಕೊಟ್ಟ ವಚನಕ್ಕೆ ಭೀಷ್ಮ ಕಟಿಬದ್ದನಾಗುತ್ತಾನೆ. ಕಾಶಿರಾಜನಿಗೆ ತನ್ನ ಸಿಂಹಾಸನದ ಚಿಂತೆಯಾದರೆ.. ಸಾಳ್ವರಾಜನನ್ನು ಸುಡುತ್ತಿರುವುದು ಅವಮಾನದ  ಬೆಂಕಿ.. ಇವರೆಲ್ಲರ ಸ್ವಾರ್ಥ ಹಿತಾಸಕ್ತಿಯಲ್ಲಿ ಅಂಬೆ ಬಲಿಪಶುವಾಗುತ್ತಾಳೆ. ಭೀಷ್ಮನಿಂದಾಗಿ ಸಾಳ್ವನನ್ನು ಮದುವೆಯಾಗಲಾಗದೇ.. ಸತ್ಯವತಿಯ ಶಂಡ ಮಗನಿಗೆ ಹೆಂಡತಿಯಾಗಲಾಗದೇ.. ತಲ್ಲಣಗೊಳ್ಳುವ ಅಂಬೆ ಅತ್ತ ಸಾಳ್ವನಿಂದಲೂ ತಿರಸ್ಕೃತಳಾಗಿ ಇತ್ತ ಭೀಷ್ಮನಿಂದಲೂ ನಿರಾಕರಣೆಗೊಳಗಾಗಿ, ಸತ್ಯವತಿಯಿಂದಲೂ ಅವಮಾನಕ್ಕೊಳಗಾಗಿ ಸೇಡಿನ ಕಿಚ್ಚಿನಲ್ಲಿ ಬೇಯುತ್ತಾಳೆ. ತನ್ನ ಬದುಕಿನ ದುರಂತಕ್ಕೆ ಕಾರಣರಾದ ಪುರುಷರ ಮೇಲೆ ಇಂದಿಲ್ಲಾ ಮುಂದಾದರೂ ಸೇಡು ತೀರಿಸಿಕೊಳ್ಳುವ ನಿರ್ಣಯದೊಂದಿಗೆ ಅಂಬೆಯ ಅಭಿಯಾನ ಮುಕ್ತಾಯವಾಗುತ್ತದೆ. ರಾಜ್ಯಾಧಿಕಾರ, ಧರ್ಮ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಲಿಯಾದ ಸಮಸ್ತ ಮಹಿಳೆಯರ ಪ್ರತಿನಿಧಿಯಾಗಿ ಅಂಬೆಯ ಪಾತ್ರ ಮೂಡಿಬಂದಿದೆ. ಜೊತೆಗೆ ಪುರೋಹಿತಶಾಹಿ ಬ್ರಾಹ್ಮಣರು ಅದು ಹೇಗೆ ಪಾಪಪ್ರಜ್ಞೆಯನ್ನು ಹೆಚ್ಚಿಸಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವುದನ್ನೂ ಸಹ ಈ ನಾಟಕವು ಲೇವಡಿ ಮಾಡುತ್ತದೆ.    

ನಾಟಕ ಮೇಲ್ನೋಟಕ್ಕೆ ತುಂಬಾ ಸೊಗಸಾಗಿ ಕಂಡರೂ ಆಳಕ್ಕಿಳಿದರೆ ಅದ್ಯಾಕೋ ಅಂಬೆಯನ್ನು ಸೇಡಿನ ಮನೋಭಾವದ ಮಹಿಳೆ ಎಂಬಂತೆ ಬಿಂಬಿಸಲಾಗಿದೆ. ಅಂಬೆ ಪಾತ್ರಧಾರಿ ಅರಂಭದ ದೃಶ್ಯವೊಂದನ್ನು ಹೊರತು ಪಡಿಸಿ ಕೊನೆಯವರೆಗೂ ತನ್ನ ಹಾವಭಾವಗಳಲ್ಲಿ ಸೇಡನ್ನೇ ಮೈಗೂಡಿಸಿಕೊಂಡಂತೆ ಅಭಿನಯಿಸಿದ್ದಾರೆ. ತಾನು ಶಾಸ್ತ್ರ ಕಲಿತು ಶಸ್ತ್ರವಿದ್ಯೆ ಕಲಿತಿದ್ದೇನೆ ಆದ್ದರಿಂದ ಅನ್ಯಾಯವನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಳ್ಳುವ ಅಂಬೆ ತಂದೆ, ಭೀಷ್ಮ, ಸತ್ಯವತಿಯ ಜೊತೆಗೆ ಆಕ್ರೋಶದಿಂದಲೇ ಮಾತಾಡುತ್ತಾಳೆ. ಇದರಿಂದಾಗಿ ಈ ನಾಟಕದ ಅಂಬೆ ಸೇಡಿನ ಸ್ವಭಾವದ ಹಠಮಾರಿ ಹೆಂಗಸು ಎನ್ನುವ ವ್ಯತಿರಿಕ್ತ ಮನೋಭಾವ ನೋಡುಗರಲ್ಲಿ ಹುಟ್ಟುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಂತ್ಯದಲ್ಲೂ ಸಹ ಏಟಿಗೆ ಎದುರೇಟು, ಉತ್ತರಕ್ಕೆ ಪ್ರತ್ಯುತ್ತರ, ಬಾಣಕ್ಕೆ ತಿರುಗುಬಾಣ, ಮಂತ್ರಕ್ಕೆ ತಿರುಮಂತ್ರ ನೀಡುತ್ತೇವೆ.. ಎಂದು ಹೇಳುತ್ತಾ ಇಡೀ ಪುರುಷಲೋಕವನ್ನೇ ತನ್ನ ಸೇಡಿನ ಜ್ವಾಲೆಯಲ್ಲಿ ಸುಟ್ಟುಬಿಡುವಂತೆ ಮಾತಾಡುತ್ತಾಳೆ. ಈ ಸಾರ್ವತ್ರೀಕರಣ ಅಪಾಯಕಾರಿಯಾದದ್ದು. ಅಂಬೆ ತನಗಾದ ಅನ್ಯಾಯಕ್ಕೆ ಸಾಲ್ವ, ಭೀಷ್ಮರ ಸ್ವಾರ್ಥವನ್ನು ನಿಂದಿಸಿದ್ದರೆ, ಅಂತವರ ಮೇಲೆ ಸೇಡು ತೀರಿಸಿಕೊಳ್ಳುವ ಮಾತಾಡಿದ್ದರೆ ಅವಳ ಅಂತರಂಗದ ಆಕ್ರೋಶವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಆದರೆ.. ಇಡೀ ಪುರುಷಕುಲವನ್ನೇ ದಿಕ್ಕರಿಸುವ ನಿರ್ಣಯ ತೆಗೆದುಕೊಂಡು ಏಟಿಗೆ ಎದುರೇಟು ಹಾಕುವ ಶಪಥ ಕೈಗೊಂಡಿದ್ದು ಅತಿರೇಕವೆನಿಸುತ್ತದೆ. ಇಷ್ಟಕ್ಕೂ ಅಂಬೆಗೆ ಮೂಲಭೂತವಾಗಿ ಅನ್ಯಾಯವಾಗಲು ಕಾರಣವಾಗಿದ್ದು ಸತ್ಯವತಿಯೇ ಆಗಿದ್ದಾಳೆ. ಭೀಷ್ಮ ಸ್ವಯಂವರಕ್ಕೆ ಹೋಗಲು ನಿರಾಕರಿಸಿದಾಗ ಒತ್ತಡ ಹೇರಿ  ಕಳುಹಿಸಿದ್ದೂ ಸತ್ಯವತಿಯೇ ಹೊರತು ಭೀಷ್ಮನೇ ಸ್ವಯಂಪ್ರೇರಿತನಾಗಿ ಹೋಗಿರಲಿಲ್ಲಾ. ಅಂಬೆ ಕನ್ಯೆಯಾಗಿ ಉಳಿದಿಲ್ಲ ಎನ್ನುವ ಸುಳ್ಳನ್ನು ಸತ್ಯವೆಂದು ನಂಬಿದ ಸತ್ಯವತಿಯು ಅಂಬೆಯನ್ನು ಬಿಡುಗಡೆ ಮಾಡುತ್ತಾಳೆಯೇ ಹೊರತು ಅಂಬೆಯ ಮೇಲಿನ ಕರುಣೆಯಿಂದಲ್ಲಾ. ಇಲ್ಲಿ ಅಂಬೆ ಹೇಗೆ ಅಸಹಾಯಕಳೋ ಹಾಗೆಯೇ ಪುರುಷ ಪಾತ್ರಗಳೂ ಸಹ ಅಸಹಾಯಕವಾಗಿವೆ. ಎಲ್ಲಾ ಪಾತ್ರಗಳೂ ಆಯಾ ಸಂದರ್ಭದ ಬಲಿಪಶುಗಳೇ. ಆದರೂ ಅಂಬೆಯ ಮೂಲಕ ಇಡೀ ಪುರುಷಕುಲಕ್ಕೆ ತಿರುಮಂತ್ರ ಹಾಕುವ ನಾಟಕದ ಸೇಡಿನ ಮನೋಭಾವ ಮಾದರಿಯಾದುದಲ್ಲಾ. ಎಲ್ಲಾ ಪುರುಷರೂ ಕೆಟ್ಟವರಲ್ಲಾ ಎಲ್ಲಾ ಸ್ತ್ರೀಯರೂ ಒಳ್ಳೆಯವರೂ ಅಲ್ಲಾ ಎನ್ನುವುದು ಕಾಲಾತೀತ ಸಾರ್ವಕಾಲಿಕ ಸತ್ಯ. ಇಲ್ಲಿ ಭೀಷ್ಮನನ್ನು ಸ್ವಾರ್ಥಿ ಎನ್ನುವುದಾದರೆ ಸತ್ಯವತಿಯೂ ಸ್ವಾರ್ಥಿಯೇ. ತನ್ನ ಸ್ವಾರ್ಥಕ್ಕಾಗಿ ಪ್ರೀತಿಸಿದ ಶಂತನು ರಾಜನಿಗೆ ಶರತ್ತುಗಳನ್ನು ಹಾಕಿ ಭೀಷ್ಮನ ಬದುಕು ಹಾಗೂ ಭವಿಷ್ಯವನ್ನು ಹಾಳು ಮಾಡಿದ್ದೂ ಸಹ ಸತ್ಯವತೀಯೇ. ಮಹಾಭಾರತ ಕಾವ್ಯದಲ್ಲಿ ಬರುವ ಅಂಬೆ ಭೀಷ್ಮನ ಮೇಲೆ ಮಾತ್ರ ಸೇಡು ತೀರಿಸಿಕೊಳ್ಳುವ ಶಪಥಗೈದರೆ.. ಅಭಿಯಾನ ನಾಟಕದ ಅಂಬೆ ಇಡೀ ಪುರುಷರ ವಿರುದ್ಧವೇ ಏಟಿಗೆ ಎದುರೇಟು ಹಾಕುವ ಮಾತನ್ನಾಡುತ್ತಾ ಪುರುಷದ್ವೇಷದ ಪ್ರತೀಕವಾಗುತ್ತಾಳೆ. 
ಇಂದಲ್ಲಾ ನಾಳೆ, ನಾಳೆಯಲ್ಲ ಮತ್ತೊಂದು ದಿನ ನಾವು ನೂರಾರು ದೀಪಗಳಾಗಿ ಬೆಳಗಿ ಏಟಿಗೆ ಎದುರೇಟು ನೀಡುತ್ತೇವೆ.. ಎಂದು ಅಂಬೆಯ ಪಾತ್ರ ಹೇಳುತ್ತದೆ. ಆದರೆ.. ದೀಪಗಳು ಇರುವುದು ಬೆಳಕು ಕೊಡುವುದಕ್ಕೆ ಹೊರತು ಬೆಂಕಿ ಹಚ್ಚುವುದಕ್ಕಲ್ಲಾ ಎನ್ನುವ ಸರಳ ಸತ್ಯ ದೀಪವನ್ನು ರೂಪಕವಾಗಿಸಿದ ನಾಟಕಕಾರರಿಗೆ ಇರಬೇಕಾಗಿತ್ತು. ದೀಪದ ಬದಲು ಕೊಳ್ಳಿಗಳಾಗಿ ಉರಿದು ಎಂದಿದ್ದರೆ ಅಂಬೆಯ ಸೇಡಿಗೆ ಕೊಳ್ಳಿ ಪ್ರತೀಕವಾಗಬಹುದಾಗಿತ್ತು. ರೂಪಕಾತ್ಮಕ ಶಬ್ದಗಳನ್ನು ಬಳಸುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದರೆ ಮಾತಿನ ಆಶಯದಲ್ಲಿ ವ್ಯತ್ಯಾಸವಾಗುತ್ತದೆ. ರಂಗಪಠ್ಯದಲ್ಲಿ ಅಂಬೆಯನ್ನು ಸೇಡಿಗೆ ಪ್ರತೀಕವಾಗಿ ನಿರೂಪಿಸಲಾಗಿದ್ದರೂ ನಿರ್ದೇಶಕಿಯಾದರೂ ಅಂಬೆಯ ಅಸಹಾಯಕತೆಯನ್ನು ಹೇಳುತ್ತಾ ಆಕೆ ಅವಮಾನಿತಳಾದಾಗ ಮಾತ್ರ ಆಕ್ರೋಶ ತೋರಿಸುವಂತೆ ನೋಡಿಕೊಂಡಿದ್ದರೆ ಹಾಗೂ ಅಂಬೆ ತನಗೆ ಅನ್ಯಾಯ ಮಾಡಿದವರನ್ನು ಮಾತ್ರ ವಿರೋಧಿಸಿ ಸೇಡಿನ ಮಾತಾಡಿದ್ದರೆ ಅವಳ ಆಕ್ರೋಶಕ್ಕೂ ಒಂದು ತರ್ಕವಿರುತ್ತಿತ್ತು. ಅಂಬೆಯನ್ನು ಪುರುಷವಿರೋಧಿಯನ್ನಾಗಿಸುವುದು ತಪ್ಪುತ್ತಿತ್ತು.

ನನಗೆ ನಾಚಿಕೆಯಾಗಲು ನಾನೇನು ಯಾರೊಂದಿಗಾದರೂ ಹಾದರ ಮಾಡಿದ್ದೇನೆಯೇ?.. ಎಂದು ಅಂಬೆ ತನಗೆ ತಾನೇ ಸಮರ್ಥನೆ ಮಾಡಿಕೊಂಡು ತನ್ನ ಪಾತಿವೃತ್ಯವನ್ನು ಸಾಬೀತುಪಡಿಸಿಕೊಳ್ಳುತ್ತಾಳೆ. ಆದರೆ.. ಹಾದರ ಎನ್ನುವುದು ಸ್ತ್ರೀಯರ ಮೇಲೆ ಪುರುಷರು ಹೇರಿದ ನಿಂದನಾ ಕ್ರಮವಾಗಿದೆ. ಹಾದರ ಮಾಡುವುದು ನಾಚಿಕೆಗೇಡು ಎನ್ನುವುದು ಪಿತೃಸಮಾಜದ ಸ್ತ್ರೀವಿರೋಧಿ ಕುತಂತ್ರವಾಗಿದೆ. ಈ ನಾಟಕದಲ್ಲೂ ಸಹ ಅಂಬೆಯ ಮೂಲಕ ಹಾದರವನ್ನು ಅನೈತಿಕವಾದದ್ದು ಹಾಗೂ ನಾಚಿಕೆ ಪಡುವಂತಹುದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಆದರೆ.. ಇದರ ಅಗತ್ಯವೇ ಇರಲಿಲ್ಲಾ. ಇಲ್ಲಿ ನಾನು ಕನ್ಯೆಯಾಗಿ ಉಳಿದಿಲ್ಲಾ.. ಸಾಲ್ವನೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಸತ್ಯವತಿಗೆ ಹೇಳುವ ಅಂಬೆ ಕೊನೆಗೆ ಹಾದರ ಮಾಡಿದ್ದೇನೆಯೇ? ಎಂದೂ ಕೇಳುತ್ತಾಳೆ. ಹಾದರ ಎಂದರೆ ವಿವಾಹಬಾಹಿರ ಸಂಬಂಧ ಎನ್ನುವುದೇ ಈ ನಾಟಕದ ಗ್ರಹಿಕೆಯಾದರೆ ಸಾಲ್ವನೊಂದಿಗೆ ಸೇರಿ ಕನ್ಯತ್ವ ಕಳೆದುಕೊಂಡಿದ್ದೇನೆ ಎಂದು ಹೇಳುವ ಅಂಬೆ ಮಾಡಿದ್ದಾದರೂ ಏನು? ಹೋಗಲಿ ಅಂಬೆಗೆ ಹಸ್ತಿನಾವತಿಯಿಂದ ಪಾರಾಗಿ ಹೋಗುವ ತಂತ್ರಗಾರಿಕೆಯ ಭಾಗವಾಗಿ ಕನ್ಯತ್ವ ಕಳೆದುಕೊಂಡೆನೆಂದು ಸುಳ್ಳು ಹೇಳಿದ್ದಾಳೆಂದುಕೊಂಡರೂ ಅದು ನಾಟಕದಲ್ಲಿ ಎಲ್ಲಿಯೂ ಸಾಬೀತಾಗುವುದಿಲ್ಲಾ.  ಹೀಗೆ.. ನಾಟಕದಲ್ಲಿ ಮೂಡಿ ಬರುವ ಕೆಲವು ವೈರುದ್ಯಗಳನ್ನು ಸರಿಪಡಿಸಿದರೆ ಪ್ರೇಕ್ಷಕರ ಸಂದೇಹಗಳನ್ನು ದೂರಮಾಡಬಹುದಾಗಿದೆ. ನಾಟಕದ ವಿನ್ಯಾಸದ ಮೇಲೆ ಪ್ರಭುತ್ವ ಸಾಧಿಸಿದ ನಿರ್ದೇಶಕಿ ದಾಕ್ಷಾಯಿಣಿಯವರು ವಸ್ತುವಿನ ತಾರ್ಕಿಕ ನಿರೂಪಣೆಯಲ್ಲೂ ಬೌದ್ದಿಕತೆ ತೋರಬೇಕಾಗಿತ್ತು.
ಈ ತಾರ್ಕಿಕ ಸಂದೇಹಗಳನ್ನು.. ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವಾಗಿಸಿವೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ಟೆಕ್ನಿಕ್ ಈ ನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ. ಆರಂಭದ ಉದ್ಯಾನವನದಲ್ಲಿ ನಡೆಯುವ ರೊಮ್ಯಾಂಟಿಕ್ ದೃಶ್ಯವೈಭವ ಹಾಗೂ ಸತ್ಯವತಿ-ಶಂತನು ಬೇಟಿಯಾದಾಗ ನಾವಿಗೆ ಹುಟ್ಟು ಹಾಕುವಂತೆ ನಟಿಸುವ ಗುಂಪಿನ ದೃಶ್ಯ ಮತ್ತು ಸ್ವಯಂವರದಲ್ಲಿ ಭೀಷ್ಮನು ರಾಜಕುಮಾರರೊಂದಿಗೆ ಕಾದಾಡುವ ದೃಶ್ಯಸಂಯೋಜನೆಗಳು..  ಜೊತೆಗೆ ಇದಕ್ಕೆ ಪೂರಕವಾಗಿ ಕೊಟ್ಟ ಹಿನ್ನಲೆ ಆಲಾಪ ಮತ್ತು ಸಂಗೀತ ನಿಜಕ್ಕೂ ಸೋಜಿಗವನ್ನು ಹುಟ್ಟುಹಾಕುವಂತಿದೆ. ಸಂಗೀತ ಹಾಗೂ ಬೆಳಕಿನ ವಿನ್ಯಾಸಗಳು ಇಡೀ ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಷವನ್ನು ನೀಡಿವೆ. ಆರಂಭದಿಂದ ಅಂತ್ಯದವರೆಗೂ ಬ್ಲಾಕ್‌ಔಟ್‌ಗಳಿಲ್ಲದೇ ನಾನ್‌ಸ್ಟಾಪ್ ಆಗಿ ಮೂಡಿಬರುವ ದೃಶ್ಯಬದಲಾವಣೆಗಳು ಪ್ರೇಕ್ಷಕರ ಗಮನಕ್ಕೆ ಬಾರದಂತೆ ಆಗುತ್ತಿದ್ದುದರಿಂದಾಗಿ ಪ್ರೇಕ್ಷಕರ ಚಿತ್ತ ಅತ್ತಿತ್ತ ಹರಿದಾಡಲೂ ಈ ನಾಟಕ ಆಸ್ಪದ ಕೊಡದೇ ನೋಡಿಸಿಕೊಂಡು ಹೋಗುತ್ತದೆ.

ಎಲ್ಲಾ ಪಾತ್ರಗಳ ಶೈಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಅದರಲ್ಲೂ ಅಂಬೆಯ ಪಾತ್ರವನ್ನು ಸ್ವಕಾಯಪ್ರವೇಶ ಮಾಡಿದವಳಂತೆ ಬಿಂಬಶ್ರೀ ಅಭಿನಯಿಸಿದ್ದನ್ನು ನೋಡುವುದೇ ಒಂದು ಅನುಭವ. ಆದರೂ ಬಿಂಬಶ್ರೀ ಸಂದರ್ಭಕ್ಕನುಗುಣವಾಗಿ ಭಾವತೀವ್ರತೆಯನ್ನು ನಿಯಂತ್ರಿಸಿಕೊಂಡರೆ ಅಂಬೆಯನ್ನು ಕೆಲವೊಮ್ಮೆ ಖಳನಾಯಕಿಯನ್ನಾಗಿ ಬಿಂಬಿಸುವುದನ್ನು ತಪ್ಪಿಸಬಹುದು. ಭೀಷ್ಮನಾಗಿ ತೇಜಸ್ ಕುಮಾರ್, ಸಾಳ್ವನಾಗಿ ವಿಷ್ಣು ಹಾಗೂ ಕಾಶಿರಾಜನಾಗಿ ಹೇಮಂತ್ ಅಭಿನಯ ಎನರ್ಜಿಟಿಕ್ಕಾಗಿದ್ದು ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವಿದ್ಯಾರವರ ಅಭಿನಯ ಗಮನಾರ್ಹವಾಗಿತ್ತು. ಉಳಿದೆಲ್ಲಾ ನಟ ನಟಿಯರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಅಂದಗೊಳಿಸಿದ್ದಾರೆ.   

ನೋಡುಗರ ಗಮನವನ್ನು ಸೆಳೆಯಲು ಕಾರಣವಾಗಿದ್ದು ಪ್ರತಿ ಪಾತ್ರಗಳ ವಸ್ತ್ರವಿನ್ಯಾಸ. ಒಳಗಡೆ ಒಂದೇ ರೀತಿಯ ಕಪ್ಪು ಉಡುಪುಗಳನ್ನು ಬಹುತೇಕ ಪಾತ್ರಗಳು ಧರಿಸಿದ್ದರೂ ಅದರ ಮೇಲೆ ಪಾತ್ರೋಚಿತ ಮೇಲುವಸ್ತ್ರಗಳನ್ನು ಬಳಸಿ ಪ್ರೇಕ್ಷಕರ ಮನದಲ್ಲಿ ಪಾತ್ರಗಳನ್ನು ಚಿತ್ರಿಸಿದ್ದು ವಿಸ್ಮಯಕಾರಿಯಾಗಿದೆ. ರಂಗಸಜ್ಜಿಕೆಯ ವಿನ್ಯಾಸ ತುಂಬಾ ಸರಳವಾಗಿದ್ದು ಕೇವಲ ರಾಜಲಾಂಚನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿದ್ದು ಇಡೀ ನಾಟಕವು ಅಭಿನಯ ಪ್ರಧಾನವಾಗಿ ಪ್ರಸ್ತುತ ಪಡಿಸಲಾಗಿದೆ. ವಯೋಗುಣಕ್ಕನುಗುಣವಾಗಿ ಕಾಶಿರಾಜ ಹಾಗೂ ಶಂತನು ರಾಜನನ್ನು ಪ್ರಸಾಧನದಲ್ಲಿ ಬಿಂಬಿಸಿದ್ದರೆ ಸೂಕ್ತವಾಗುತ್ತಿತ್ತು.   ನೃತ್ಯ ಸಂಗೀತ ಬೆಳಕು ಅಭಿನಯ ಹಾಗೂ ಕಣ್ಮನ ಸೆಳೆಯುವ ಕಾಸ್ಟ್ಯೂಮ್ ಮತ್ತು ಮೇಕಪ್‌ಗಳ ಸೂಕ್ತ ಸಂಯೋಜನೆಗಳಿಂದಾಗಿ ಅಭಿಯಾನವು ನೋಡುಗರ ಮನೋಮಂದಿರದಲ್ಲಿ ಅಭಿಯಾನ ಮಾಡಿದ್ದಂತೂ ಸುಳ್ಳಲ್ಲಾ. ದಾಕ್ಷಾಯಿಣಿಯವರ ಸಂಪೂರ್ಣ ಪ್ರತಿಭೆ ಈ ನಾಟಕದಲ್ಲಿ ಮೂಡಿಬಂದಿದ್ದು, ನಟನೆಗೆ ಹೊಸದಾಗಿ ತೆರೆದುಕೊಂಡಿರುವ ಕಾಲೇಜು ಯುವಕ ಯುವತಿಯರ ಪ್ರತಿಭೆಯನ್ನು ಅಭಿನಯದ ಅಭಿವ್ಯಕ್ತಿಯಾಗಿ ಪರಿವರ್ತಿಸಿ ಸಶಕ್ತ ನಾಟಕವನ್ನು ಕಟ್ಟಿಕೊಟ್ಟಿದ್ದು ಶ್ಲಾಘನೀಯವಾದದ್ದು. ಹೊಸಬರನ್ನು ಕಟ್ಟಿಕೊಂಡು ಉತ್ತಮ ನಾಟಕ ಕಟ್ಟಿಕೊಡಲು ಸಾಧ್ಯವಿಲ್ಲಾ ಎಂದು ನೆಪ ಹೇಳುವ ಕೆಲವು ನಿರ್ದೇಶಕರುಗಳಿಗೆ ಅಭಿಯಾನ ನಾಟಕದಲ್ಲಿನ ಹೊಸಬರ ಅಭಿನಯ ಉತ್ತರ ಹೇಳಬಲ್ಲುದಾಗಿದೆ. ಅಪಾರವಾದ ರಂಗಸಿದ್ದತೆ ಹಾಗೂ ರಂಗಬದ್ದತೆಯ ಜೊತೆಗೆ ನಿಜವಾಗಿ ಪ್ರತಿಭೆಯೂ ಇದ್ದಲ್ಲಿ ಅಭಿಯಾನದಂತಹ ದೃಶ್ಯಕಾವ್ಯವನ್ನು ಕಟ್ಟಿಕೊಡಲು ಸಾಧ್ಯ ಎನ್ನುವುದಕ್ಕೆ ದಾಕ್ಷಾಯಿಣಿ ಬಟ್‌ರವರೇ ಮಾದರಿಯಾಗಿದ್ದಾರೆ. 


  -ಶಶಿಕಾಂತ ಯಡಹಳ್ಳಿ