ಇಂದು ಮಾರ್ಚ
27, ವಿಶ್ವ ರಂಗಭೂಮಿ ದಿನ. ಜಗತ್ತಿನಾದ್ಯಂತ ರಂಗಪ್ರೀಯರು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಪ್ರತಿಯೊಂದು ನಾಟಕದ ತಯಾರಿ ಹಾಗೂ ಪ್ರದರ್ಶನವು ಪ್ರತಿಯೊಬ್ಬ ಕಲಾವಿದ ಹಾಗೂ ರಂಗತಂಡದವರಿಗೆ ಒಂದು
ಸಂಭ್ರಮವೇ. ಆದರೆ ಜಗತ್ತಿನ ಎಲ್ಲಾ ರಂಗಕರ್ಮಿಗಳೂ ಏಕಕಾಲಕ್ಕೆ ಸಂಭ್ರಮಿಸುವ ವರ್ಷದ ಏಕೈಕ ದಿನ ಮಾರ್ಚ
27 “ವರ್ಡ ಥೀಯಟರ್ ಡೇ”.
ಯಾವುದೇ ಆಚರಣೆಯನ್ನು
ಆಚರಿಸುವ ಮುನ್ನ ಅದರ ಹಿನ್ನಲೆಯನ್ನೊಂದಿಷ್ಟು ತಿಳಿದುಕೊಂಡು ಸಂಭ್ರಮಿಸುವುದು ಸೂಕ್ತ, ಇಲ್ಲವಾದರೆ
ಅಂತಹ ಆಚರಣೆಗಳು ಅಂಧಾನುಕರಣೆಯಾಗುತ್ತವೆ. ಆದ್ದರಿಂದ ವಿಶ್ವ ರಂಗಭೂಮಿ ದಿನದ ಇತಿಹಾಸವನ್ನು ಅರ್ಥಮಾಡಿಕೊಳ್ಳೋಣ.
‘ಇಂಟರನ್ಯಾಷನಲ್ ಥೇಯಟರ್ ಇನ್ಸ್ಟಿಟ್ಯೂಟ್’ (ಐಟಿಐ) ಎನ್ನುವ ಸಂಘಟನೆಯೊಂದಿದೆ. ಕೆಲವು ರಂಗಭೂಮಿ ಹಾಗೂ ನೃತ್ಯಕ್ಷೇತ್ರದ ಪರಿಣಿತರು
ಸೇರಿ 1948ರಲ್ಲಿ ಐಟಿಐ ಯನ್ನು ಸ್ಥಾಪಿಸಿದರು. ವಿಶ್ವ ಸಂಘಟನೆಯಾದ ಯುನೆಸ್ಕೋ ಈ ಐಟಿಐ ಯನ್ನು ಪ್ರಾಯೋಜಿಸುತ್ತದೆ.
ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಈ ಸಂಸ್ಥೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ದೇಶ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು
ನಡೆಸುತ್ತಿದೆ. ರಂಗ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತದೆ. ವಿಶ್ವ ರಂಗ ಪ್ರಶಸ್ತಿಗಳನ್ನು ಆಯ್ದ
ರಂಗಕರ್ಮಿಗಳಿಗೆ ಕೊಟ್ಟು ಗೌರವಿಸುತ್ತದೆ. ಅಂತರಾಷ್ಟ್ರೀಯ ರಂಗೋತ್ಸವಗಳನ್ನು ಸಂಘಟಿಸುತ್ತದೆ.
ಐಟಿಐ ಮತ್ತು
ಯುನೆಸ್ಕೋ ಎರಡೂ ಸೇರಿ 1998ರಲ್ಲಿ ‘ಥೇಯಟರ್ ಆಂಡ್
ಕಲ್ಚರ್ ಆಪ್ ಸಿವಿಲಿಜೇಶನ್’ ಎನ್ನುವ ಕಾರ್ಯಕ್ರಮವನ್ನು ಲಾಂಚ್
ಮಾಡಿವೆ. ಈ ಮೂಲಕ ಅಂತರಾಷ್ಟೀಯ ರಂಗ ಕಾರ್ಯಾಗಾರಗಳನ್ನು ನಡೆಸುವುದು, ಕಲಾವಿದರಿಗೆ ಆಭಿನಯ ತರಬೇತಿಗಳನ್ನು
ಆಯೋಜಿಸುವುದು, ರಂಗಭೂಮಿ ಕುರಿತ ಮಾಹಿತಿ ಹಾಗೂ ಹೊಸ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳುವುದು, ರಂಗಕಲೆಯ
ತರಬೇತಿ ಮೆಥಡ್‌ನ್ನು ತಿಳಿಸಿವುದು ಹೀಗೆ... ಹಲವಾರು
ರಂಗ ಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಾ ಬಂದಿದೆ.
1961ರಲ್ಲಿ
ವಿಯನ್ನಾದಲ್ಲಿ ನಡೆದ ಈ ಸಂಘಟನೆಯ ಒಂಬತ್ತನೆಯ ವಿಶ್ವ ಕಾಂಗ್ರೆಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ‘ವಿಶ್ವ ರಂಗ ದಿನಾಚರಣೆ’ಯನ್ನು ಕುರಿತು
ಆ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ‍್ವಿ ಕಿವಿಯಾ ರವರು ಪ್ರಸ್ತಾಪಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಜಗತ್ತಿನ ಪ್ರದರ್ಶನ ಕಲೆಯಲ್ಲಿ ತೊಡಗಿಕೊಂಡ ಕಲಾವಿದರೆಲ್ಲಾ ಒಂದೇ ಕುಟುಂಬವೆಂಬುದನ್ನು ಪ್ರತಿಪಾದಿಸಲು
ಮತ್ತು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಕಲೆಗಳ ಅಭಿವೃದ್ದಿಯ ಅರಿವನ್ನು ಮೂಡಿಸಲು ವಿಶ್ವರಂಗಭೂಮಿ ದಿನವನ್ನು
ಆಚರಿಸಲು ನಿರ್ಧರಿಸಲಾಯಿತು. 1962ರ ಮಾರ್ಚ 27 ರಂದು ಪ್ಯಾರಿಸ್ ನಲ್ಲಿ ಥೇಯಟರ್ ಆಪ್ ನೇಷನ್ಸ’ ಅಸ್ಥಿತ್ವಕ್ಕೆ
ಬಂದ ನೆನಪಿಗಾಗಿ ಪ್ರತಿವರ್ಷ ಮಾರ್ಚ 27 ರಂದು ‘ವಿಶ್ವ ರಂಗಭೂಮಿ
ದಿನ’ವನ್ನು ಆಚರಿಸಬೇಕು
ಹಾಗೂ ಪ್ರತಿ ವರ್ಷ ಒಂದು ದೇಶದ ಪ್ರಸಿದ್ಧ ರಂಗಕರ್ಮಿಯೊಬ್ಬರು ರಂಗಭೂಮಿ ಕುರಿತು ಮಹತ್ವದ ಸಂದೇಶವನ್ನು
ಕೊಡಬೇಕು” ಎಂದು ವಿಶ್ವ
ಕಾಂಗ್ರೆಸ್ ಸಭೆ ನಿರ್ಣಯವನ್ನು ಕೈಗೊಂಡಿತು. 1962ರಿಂದ ಐಟಿಐ ‘ವಿಶ್ವ ರಂಗಭೂಮಿ ದಿನ’ವನ್ನು ನೂರಕ್ಕೂ
ಹೆಚ್ಚು ರಾಷ್ಟ್ರಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದೆ. ಮೊದಲ ಬಾರಿಗೆ 1962ರ ಮಾರ್ಚ 27 ರಂದು ‘ಜಿಯಾನ್ ಕಾಕ್ಟಿಯೋ’ ರವರು ಮೊದಲ
ವಿಶ್ವರಂಗಭೂಮಿ ದಿನದ ಸಂದೇಶವನ್ನು ಬರೆದು ಪ್ರಕಟಿಸಿದರು. ಭಾರತದಿಂದ ನಾಟಕಕಾರರಾದ ಗಿರೀಶ್ ಕಾರ್ನಾಡರಿಗೆ ಮಾತ್ರ ಇಲ್ಲಿವರೆಗೂ
ರಂಗಸಂದೇಶವನ್ನು ಕೊಡುವ ಅವಕಾಶ ದೊರಕಿದೆ.
ಅವತ್ತಿನಿಂದ
ಪ್ರತಿವರ್ಷ ಐಟಿಐ ಸೆಂಟ್ರಲ್ ಕಮಿಟಿಯವರು ಒಂದು ದೇಶದ ಪ್ರಮುಖ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ
ವಿಶ್ವ ರಂಗ ಸೌಹಾರ್ಧತೆ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಗ್ರಹಿಸುತ್ತಾರೆ. ಅಂತಹ
ಆಹ್ವಾನಿತರು ಕೊಡುವ ಅಂತರಾಷ್ಟ್ರೀಯ ರಂಗ ಸಂದೇಶವನ್ನು ಅಧಿಕೃತವಾಗಿ ಪ್ರಕಟಿಸಿ ಪ್ರಚಾರಪಡಿಸಲಾಗುತ್ತದೆ.
ಈ ಸಂದೇಶವನ್ನು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಇಂತಹ ಸಂದೇಶವನ್ನು ಹಲವಾರು
ದೇಶಗಳ ವೃತ್ತಪತ್ರಿಕೆಗಳಲ್ಲಿ ಮುದ್ರಿಸಲಾಗುತ್ತದೆ. ರೇಡಿಯೋ ಹಾಗು ಟಿವಿಗಳಲ್ಲಿ ಬಿತ್ತರಿಸಲಾಗುತ್ತದೆ.
ಜಗತ್ತಿನಾದ್ಯಂತ ನಡೆಯುವ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಸಂದರ್ಭದಲ್ಲಿ ಈ ಸಂದೇಶವನ್ನು ಓದಲಾಗುತ್ತದೆ. ಐಟಿಐ ಸಂಸ್ಥೆಯಿಂದಲೇ ನೂರಕ್ಕೂ ಹೆಚ್ಚು
ರಾಷ್ಟ್ರಗಳಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯನ್ನು ಅದ್ದೂರಿಯಾಗಿ
ಆಚರಿಸಲಾಗುತ್ತದೆ. ಉಳಿದಂತೆ ಭಾರತವನ್ನೂ ಒಳಗೊಂಡಂತೆ
ಜಗತ್ತಿನ ಹಲವಾರು ರಂಗಸಂಘಟನೆಗಳು, ರಂಗತಂಡಗಳು ಮಾರ್ಚ 27ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವ ಮೂಲಕ ‘ವಿಶ್ವ ರಂಗಭೂಮಿ ದಿನ’ವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇದುವರೆಗೂ ವಿಶ್ವದ
ಆಯ್ದ ಒಬ್ಬರಿಗೆ ಮಾತ್ರ ಪ್ರತಿ ವರ್ಷ ವಿಶ್ವ ರಂಗಭೂಮಿ ದಿನದ ಸಂದೇಶ ನೀಡುವ ಅವಕಾಶವನ್ನು ವದಗಿಸಲಾಗುತ್ತಿತ್ತು.
ಆದರೆ.. ಈ ವರ್ಷ 2018ರಲ್ಲಿ ಅಂತರಾಷ್ಟ್ರೀಯ ರಂಗ ಸಂಸ್ಥೆ (ಐಟಿಐ)ಯು 70ನೇ ವರ್ಷದ ವಿಶ್ವರಂಗಭೂಮಿ ದಿನದ ವಾರ್ಷಿಕೋತ್ಸವವನ್ನು
ಆಚರಿಸುತ್ತಿದೆ. ಇದರ ಅಂಗವಾಗಿ ಐಟಿಐ ಸಂಸ್ಥೆಯ ಎಕ್ಜಿಕೂಟಿವ್ ಕೌನ್ಸಿಲ್ ವಿಶ್ವ ರಂಗಭೂಮಿ ಸಂದೇಶದಲ್ಲಿ
ವಿಶೇಷತೆಯೊಂದನ್ನು ಆರಂಭಿಸಲು ನಿರ್ಣಯಿಸಿದೆ. ಪ್ರಪಂಚದ ಪ್ರಾದೇಶಿಕವಾರು ಆಯ್ದ ಐದು ರಂಗಭೂಮಿಯ ಗಣ್ಯರಿಂದ
ಸಂದೇಶವನ್ನು ಬರೆಯಿಸಿ ಅದನ್ನು ಅಧೀಕೃತವಾಗಿ ವಿಶ್ವಾದ್ಯಂತ ಪ್ರಕಟಿಸಲಾಗುತ್ತಿದೆ. ಯುನೆಸ್ಕೋ ಗುರುತಿಸಿದ
ಪ್ರಪಂಚದ ಐದು ಪ್ರದೇಶಗಳಾದ ಆಪ್ರಿಕಾ, ಅಮೇರಿಕಾ, ಅರಬ್ ದೇಶಗಳು, ಏಷಿಯಾ ಫೆಸಿಫಿಕ್ ಹಾಗೂ ಯುರೋಪ್
ಈ ಖಂಡಗಳಿಂದ ಆಯ್ದ ರಂಗಕರ್ಮಿಗಳಿಂದ ವಿಶ್ವರಂಗಭೂಮಿ ಸಂದೇಶವನ್ನು ಬರೆಯಿಸಲಾಗುತ್ತದೆ. ಈ ವರ್ಷ ಏಷಿಯಾ
ಫೆಸಿಫಿಕ್ ನಿಂದ ಭಾರತದ ರಾಮ್ ಗೋಪಾಲ್ ಬಜಾಜ್ ರವರಿಗೆ ಸಂದೇಶ ಬರೆಯುವ ಅವಕಾಶ ದೊರಕಿದೆ. ಹಾಗೆಯೇ
ಅರಬ್ ದೇಶಗಳಿಂದ ಲೆಬಿನಾನಿನ ಮಾಯಾ ಜಿಬೀಬ್, ಯುರೋಪಿನ ಯುಕೆ ಇಂದಾ ಸಿಮೊನ್ ಮೆಕ್ ಬರ್ನಿ, ಅಮೇರಿಕದ
ಮೆಕ್ಸಿಕೋದಿಂದ ಸಬಿನಾ ಬೆರ‍್ಮನ್ ಹಾಗೂ ಆಪ್ರಿಕಾದ ಐವರಿ ಕೋಸ್ಟಲ್ ನಿಂದ ವೇರ್ ವೇರ್ ಲೀಕಿಂಗ್ ರವರಿಗೆ
ಈ ವರ್ಷದ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಬರೆಯುವ ಅವಕಾಶ ದೊರಕಿದ್ದು ಅವುಗಳನ್ನು ಅಧೀಕೃತವಾಗಿ
ಪ್ರಕಟಿಸಲಾಗಿದೆ.
ವಿಪರ್ಯಾಸ ನೋಡಿ,
ಹೆಚ್ಚು ಕಡಿಮೆ ನೂರು ದೇಶಗಳಲ್ಲಿ ತನ್ನ ಕೇಂದ್ರವನ್ನು ಹೊಂದಿರುವ ಐಟಿಐ ಭಾರತದಲ್ಲಿ ಇನ್ನೂ ಅಸ್ತಿತ್ವವನ್ನೇ
ಹೊಂದಿಲ್ಲ. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದಂತಹ ಚಿಕ್ಕಪುಟ್ಟ ದೇಶಗಳಲ್ಲಿ ಸಹ ಐಟಿಐ ಕೇಂದ್ರಗಳಿವೆ.
ಈ ದೇಶಗಳು ಐಟಿಐ ಮತ್ತು ಯುನೆಸ್ಕೋದ ಸಾಂಸ್ಕೃತಿಕ ಲಾಭಗಳನ್ನು ಪಡೆಯುತ್ತಿವೆ. ಆದರೆ ಪ್ರದರ್ಶನ ಕಲೆಗಳಲ್ಲಿ
ತುಂಬಾ ಶ್ರೀಮಂತವಾಗಿರುವ ಭಾರತದೇಶ ಯಾಕೆ ಇನ್ನೂ ಐಟಿಐ ಕೇಂದ್ರವನ್ನು ಹೊಂದಿಲ್ಲ ಎನ್ನುವುದು ತಿಳಿಯುತ್ತಿಲ್ಲ.
ಭಾರತದ ಸರಕಾರಕ್ಕೆ ನಿಶ್ಚಿತವಾದ ಒಂದು ಸಾಂಸ್ಕೃತಿಕ ನೀತಿಯೇ ಇಲ್ಲದಿರುವಾಗಿ ಅದಕ್ಕೆ ಈ ಎಲ್ಲಾ ಸಾಂಸ್ಕೃತಿಕ
ವಿನಿಮಯದ ಪ್ರಾಮುಖ್ಯತೆಯ ಅರಿವಾದರೂ ಎಲ್ಲಾಗುತ್ತದೆ. ಐಟಿಐ ದ ಭಾಗವಾಗದಿದ್ದರೆ ಏನಂತೆ... ಭಾರತ ದೇಶಾದ್ಯಂತ
‘ವಿಶ್ವ ರಂಗಭೂಮಿ ದಿನ’ವನ್ನು ಆಚರಿಸಿ ಸಂಭ್ರಮಿಸುತ್ತಿರುವುದು ಭಾರತೀಯ ರಂಗಕರ್ಮಿಗಳ ರಂಗನಿಷ್ಟೆಯನ್ನು ತೋರುತ್ತದೆ.
ಕಲೆ ಎನ್ನುವುದಕ್ಕೆ ಗಡಿ-ಭಾಷೆಯ ಹಂಗಿಲ್ಲ. ಆದ್ದರಿಂದ ಬನ್ನಿ ಎಲ್ಲಾ ರಂಗಪ್ರೀಯರು ‘ವಿಶ್ವ ರಂಗಭೂಮಿ ದಿನ’ವನ್ನು ಸಾಂಸ್ಕೃತಿಕ
ಕಾರ್ಯಕ್ರಮಗಳ ಮೂಲಕ ಆಚರಿಸೋಣ.
ಪ್ರತಿ ವರ್ಷ
ವಿಶ್ವರಂಗಭೂಮಿ ಸಂದೇಶವನ್ನು ನಿರಂತರವಾಗಿ ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸುತ್ತಿದ್ದ ಮೈಸೂರಿನ
ರಂಗಕರ್ಮಿ ಶ್ರೀಕಂಠ ಗುಂಡಪ್ಪನವರು. ಆದರೆ.. ಇನ್ನುಮೇಲೆ ಅವರಿಂದ ಸಂದೇಶದ ಅನುವಾದ ಸಾಧ್ಯವಿಲ್ಲ ಎನ್ನುವುದು
ಅತ್ಯಂತ ಬೇಸರದ ಸಂಗತಿ. ಕಳೆದ ವರ್ಷ ಶ್ರೀಕಂಠ ಗುಂಡಪ್ಪನವರು ತೀರಿಕೊಂಡಿದ್ದರಿಂದ ಈ ವರ್ಷ ಯಾರು ವಿಶ್ವರಂಗಭೂಮಿ
ಸಂದೇಶವನ್ನು ಅನುವಾದಿಸುವರು ಎನ್ನುವ ಕುತೂಹಲವಿತ್ತು. ಶ್ರೀಕಂಠ ಗುಂಡಪ್ಪನವರ ಕೆಲಸವನ್ನು ಮೈಸೂರಿನವರೇ
ಆದ ಹಿರಿಯ ರಂಗಕರ್ಮಿ ಪ್ರೊ.ಹೆಚ್.ಎಸ್.ಉಮೇಶರವರು ಮಾಡಿದ್ದಾರೆ. ರಾಮ್ ಗೋಪಾಲ್ ಬಜಾಜ್ ರವರು ಬರೆದ
ವಿಶ್ವರಂಗಭೂಮಿ ಸಂದೇಶವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಸಂದೇಶವನ್ನು ಕರ್ನಾಟಕದಾದ್ಯಂತ
ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತಿರುವ ಎಲ್ಲರೂ ಸಭೆ ಸಮಾರಂಭದಲ್ಲಿ ಓದುತ್ತಿದ್ದಾರೆ. ಈ
ಸಲದ ವಿಶ್ವರಂಗಭೂಮಿ ದಿನದ ಸಂದೇಶ ಹೀಗಿದೆ.
ವಿಶ್ವರಂಗಭೂಮಿ
ದಿನದ ಸಂದೇಶ - 2018, ಮಾರ್ಚ 27
ರಾಮ್ ಗೋಪಾಲ್
ಬಜಾಜ್
ರಂಗನಿರ್ದೇಶಕರು,
ನಟರು, ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕರು.
ವಿಕಾಸ ಕುರಿತ
ಎಲ್ಲಾ ಕತೆಗಳ ನಂತರ ನಮಗೆ ತಿಳಿದಿರುವುದು ಇಷ್ಟೇ; ಎಲ್ಲಾ ಜೀವಿ ಪ್ರಕಾರಗಳು ಅನಂತ ಕಾಲದವರೆಗೆ ಉಳಿಯುತ್ತವೆ.
ಸಾಧ್ಯವಿದ್ದಲ್ಲಿ ಬದುಕು, ಕಾಲ ಮತ್ತು ದೇಶವನ್ನು ಮೀರಿ ಅಮರ್ತ್ಯವಾಗಲು ಹವಣಿಸುತ್ತದೆ. ಈ ಪ್ರಕ್ರಿಯೆಯಲ್ಲಿ,
ಜೀವ ಪ್ರಬೇಧವು ತನ್ನನ್ನು ತಾನು ವಿರೂಪಗೊಳಿಸಿಕೊಳ್ಳುತ್ತದೆ ಮತ್ತು ನಾಶವಾಗುತ್ತದೆ. ಹೀಗಿದ್ದರೂ,
ನಾವು ಮಾನವೀಯತೆಯ ಉಳಿವು ಮತ್ತು ಶಿಲಾಯುಗದ ಬೇಟೆಗಾರನಿಂದ ನಮ್ಮ ಗಗನ ಯುಗದವರೆಗಿನ ಬೆಳವಣಿಗೆಯ ಬಗೆಗಿನ
ಚಿಂತನೆಗೆ ಮಿತಗೊಳಿಸಿಕೊಳ್ಳಬೇಕು. ನಾವೀಗ ಹೆಚ್ಚು ಸಹಿಷ್ಣುಗಳೇ? ಸೂಕ್ಷ್ಮರೇ? ಸಂತೋಷಿಗಳೇ? ಯಾವುದರ
ಫಲವೋ ಆ ಪ್ರಕೃತಿಯನ್ನು ಪ್ರೀತಿಸುವವರೇ?
ಪ್ರಾರಂಭದಿಂದಲೂ,
ಈಗಲೂ ಜೀವಂತ ಪ್ರದರ್ಶಕ ಕಲೆಗಳು (ನೃತ್ಯ, ಸಂಗೀತ, ಅಭಿನಯ/ನಾಟಕ) ಸ್ವರ, ವ್ಯಂಜನಗಳಿಂದ ಕೂಡಿದ ಭಾಷೆಯ
ಸಾಧನಗಳನ್ನು ಹೊಂದಿವೆ. ಮೂಲತಃ ಸ್ವರಗಳು ಭಾವನೆಗಳನ್ನು ವ್ಯಕ್ತಪಡಿಸಿದರೆ, ವ್ಯಂಜನಗಳು ರೂಪ ಮತ್ತು
ಆಲೋಚನೆ/ಜ್ಞಾನವನ್ನು ಸಂವಹಿಸುತ್ತವೆ. ಗಣಿತ, ರೇಖಾಗಣಿತ, ಕಂಪ್ಯೂಟರುಗಳು ಕೂಡ ಇದರ ಫಲಶೃತಿಗಳೇ.
ನಾವೀಗ ಆ ಭಾಷಿಕ ವಿಕಾಸದಲ್ಲಿ ಹಿಂದೆ ಸರಿಯಲು ಸಾಧ್ಯವಿಲ್ಲ. ಜೀವಂತ ರಂಗಕಲೆ ಮತ್ತು ಜ್ಞಾನವನ್ನು
(ತಂತ್ರಜ್ಞಾನವನ್ನೂ ಒಳಗೊಂಡಂತೆ) ಮುಕ್ತಗೊಳಿಸದಿದ್ದರೆ, ದೈನಂದಿನ ಕೋಪತಾಪಗಳಿಂದ ಹಾಗೂ ಕೆಟ್ಟದ್ದರಿಂದ
ಬಿಡುಗಡೆಗೊಳಿಸದಿದ್ದರೆ ಈ ಭೂಮಿಯೇ ಅಸ್ತಿತ್ವದಲ್ಲಿ ಉಳಿಯುವುದಿಲ್ಲ.
ಸಮೂಹ ಮಾಧ್ಯಮ
ಮತ್ತು ನಮ್ಮ ವಿಜ್ಞಾನ ಹಾಗೂ ತಂತ್ರಜ್ಞಾನವು ನಮ್ಮನ್ನು ರಾಕ್ಷಸರಷ್ಟು ಬಲಶಾಲಿಯನ್ನಾಗಿಸಿವೆ. ಹಾಗಾಗಿ,
ರಂಗಭೂಮಿಯ ಪ್ರಕಾರವೂ ಇಂದಿನ ಬಿಕ್ಕಟ್ಟಲ್ಲ. ಅದು ವಸ್ತುವಿನ, ಬದ್ಧತೆಯ ಮತ್ತು ಹೇಳಿಕೆಯ ಬಿಕ್ಕಟ್ಟು.
ಭೂಮಿ ಗ್ರಹವನ್ನು ಸಂರಕ್ಷಿಸುವವರಾಗಿ ಇಂದಿನ ಮನುಷ್ಯ ಕಾಣಿಸಬೇಕಾಗಿದೆ. ಆದ್ದರಿಂದ ‘ರಂಗಭೂಮಿ’ಯನ್ನು ಸಂರಕ್ಷಕವನ್ನಾಗಿ
ಕಾಣಿಸಬೇಕಿದೆ. ಪ್ರಯೋಜನದ ಹಂತದಲ್ಲಿ ನಟನ ಕಲೆ ಮತ್ತು ಜೀವಂತ ಪ್ರದರ್ಶಕ ಕಲೆಯನ್ನು ಪ್ರಾಥಮಿಕ ಶಿಕ್ಷಣದ
ಮಕ್ಕಳಿಗೆ ಲಭ್ಯವಾಗುವಂತೆ ಮಾಡಬೇಕಿದೆ. ಅಂತಹ ತಲೆಮಾರು ಬದುಕು ಮತ್ತು ಪ್ರಕೃತಿಯ ಒಳ್ಳೆಯತನದಲ್ಲೆ
ಸೂಕ್ಷ್ಮಜ್ಞರಾಗಿರುತ್ತಾರೆ. ಹೀಗೆ ಭಾಷಿಕ ಅನುಕೂಲವು ಭೂಮಿತಾಯಿಗೆ ಮತ್ತು ಇತರ ಗ್ರಹಗಳಿಗೆ ಕಡಿಮೆ
ಅಪಾಯಕಾರಿಯಾಗುತ್ತದೆ. ಅದೂ ಅಲ್ಲದೆ, ‘ರಂಗಭೂಮಿ’ ಜೀವತ್ವದ ಕಾಪಾಡುವಿಕೆಗೆ ಹೆಚ್ಚು ಮುಖ್ಯವಾಗುತ್ತದೆ. ಈ ಸಾಮುದಾಯಿಕ ಯುಗದಲ್ಲಿ ಒಬ್ಬರನ್ನೊಬ್ಬರು
ಹೆದರಿಸುವ ಬದಲು ಜೀವಂತ ಪ್ರದರ್ಶಕರನ್ನು ಬಲಪಡಿಸುವ ಅಗತ್ಯವಿದೆ.
ನಾನು ರಂಗಭೂಮಿಯನ್ನು
ಕೊಂಡಾಡುತ್ತೇನೆ ಮತ್ತು ಇದನ್ನು ಗ್ರಾಮೀಣ ಮತ್ತು ನಗರ, ಎಲ್ಲೆಡೆಗಳಲ್ಲೂ ಅನುಷ್ಠಾನಗೊಳಿಸಲು ಹಾಗೂ
ಕ್ರಿಯಾಶೀಲಗೊಳಿಸಲು ಕೇಳಿಕೊಳ್ಳುತ್ತೇನೆ. ಮುಂದಿನ ಪೀಳಿಗೆಗಾಗಿ ಶಿಕ್ಷಣದಲ್ಲಿ ಜೀವ ವೈಶಿಷ್ಟ್ಯ,
ಭಾಷೆ ಹಾಗೂ ಕರುಣೆಗಳು ಜೊತೆಯಾಗಿರಲಿ.
ರಾಮ್ ಗೋಪಾಲ್
ಬಜಾಜ್ :
ರಾಮ್ ಗೋಪಾಲ್
ಬಜಾಜ್ ರವರು ಭಾರತದ ಹೆಸರಾಂತ ರಂಗ ನಿರ್ದೇಶಕರು, ಬಿಹಾರದ ದರ್ಬಾಂಗ್ ಪಟ್ಟಣದಲ್ಲಿ 1940 ಜುಲೈ
1 ರಂದು ಜನಿಸಿದರು. ರಂಗಭೂಮಿಯಲ್ಲಿ ಅಪಾರ ಆಸಕ್ತಿಯನ್ನು
ಹೊಂದಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಮುಂದೆ ಅಲ್ಲಿಯೇ ನಿರ್ದೇಶಕರಾಗಿದ್ದವರು. ಭಾರತದ
ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಧ್ಯಪ್ರದೇಶ ಸರಕಾರದಿಂದ ಕಾಳಿದಾಸ ಸನ್ಮಾನ ಗೌರವವನ್ನು
ಪಡೆದವರು. ರಂಗಭೂಮಿಯ ಸಾಧನೆಗಾಗಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದವರು. ಹಿಂದಿ ಚಲನಚಿತ್ರಗಳಲ್ಲಿ
ಅಭಿನಯಿಸಿ ಗಮನಸೆಳೆದವರು. ಸೂರ್ಯ ಕಿ ಪಹಲಿ ಕಿರಣ್ ತಕ್, ಸ್ಕಂದ ಗುಪ್ತ, ಕೈದ್ ಏ ಹಯಾತ್, ಆಷಾಡ್
ಕಾ ಏಕ್ ದಿನ್.. ಹೀಗೆ ಮುಂತಾದ ಗಮನಾರ್ಹ ನಾಟಕಗಳನ್ನು ನಿರ್ದೇಶಿಸಿ ಭಾರತ ರಂಗಭೂಮಿಯಲ್ಲಿ ತಮ್ಮದೇ
ಆದ ವಿಶಿಷ್ಟ ಛಾಪನ್ನು ಮೂಡಿಸಿದವರು. ಗಿರೀಶ್ ಕಾರ್ನಾಡರ ತಲೆದಂಡ ನಾಟಕವನ್ನು ಹಿಂದಿಗೆ ಅನುವಾದಿಸಿದವರು.
-ಶಶಿಕಾಂತ
ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ