ನಡೆ ನುಡಿ ಸಿದ್ದಾಂತದ ಏಣಗಿ ಬಾಳಪ್ಪಜ್ಜ ದಿವಂಗತ :
“ಹೋಗಿ ಬರ‍್ತೀನ್ರಯ್ಯಾ ನಮ್ಮೂರಿಗೆ...
ಎಲ್ಲರಿಗೂ ಶರಣಾರ್ಥಿ ದಯದೋರಿ
ಕಳುಹಿಸಿರಿ..
ಹಿಂದಿಲ್ಲ ಮುಂದಿಲ್ಲ, ನಾ
ತಂದದ್ದೇನಿಲ್ಲ
ಎಲ್ಲ ನೀವೇ ನೀಡಿ ನೆರವಾದಿರಿ
ಎನಗೆ
ಹೆಂಡತಿ ಮಕ್ಕಳ ಸಂಸಾರ ಬೆಳೆಸಿದಿರಿ
ಮಮಕಾರವಿದ್ದರೇನು ಬಿಟ್ಟು
ಹೋಗಲೇಬೇಕು...
ಬದುಕಿದ್ದ ಕಾಲದಲಿ ಏನೇನೋ
ಮಾಡಿದೆ
ತಪ್ಪೇನೋ ಒಪ್ಪೇನೋ ಒಪ್ಪಿಸಿಕೊಳ್ಳಿರಯ್ಯ
ಹೋಗೆಂದ ದೇವನು ಬಾ ಎಂದು ಕರೆವನು
ಎಲ್ಲರಿಗೂ ಶರಣಾರ್ಥಿ ಎಲ್ಲರಿಗೂ
ಶರಣಾರ್ಥಿ..”
ಎಂದು ಜೋಳದರಾಶಿ ದೊಡ್ಡನಗೌಡರು
ರಚಿಸಿದ ಈ ಹಾಡನ್ನು ಈ ಅಭಿಜಾತ ಕಲಾವಿದ ರಂಗ ವೇದಿಕೆಯ ಮೇಲೆ ನಿಂತು ವಿದಾಯ ಗೀತೆ ಹಾಡತೊಡಗಿದರೆ ಕೇಳಿದ
ಪ್ರೇಕ್ಷಕರ ಕಣ್ಣೆವೆಗಳು ಹಸಿಯಾಗುತ್ತಿದ್ದವು. ಆದರೆ.. ಈಗ ನಿಜವಾಗಿಯೂ ಮರಳಿ ಬಾರದ ಲೋಕಕ್ಕೆ ಹೋಗುವ
ಮುನ್ನ ‘ಹೋಗಿ
ಬರ‍್ತೀನ್ರಯ್ಯಾ’ ಅಂತಾ ಒಂದೇ ಒಂದು ಮಾತನ್ನೂ ಹೇಳದೇ ಹೋಗಿಬಿಟ್ಟರು. ಬಹುಷಃ
ಹೇಳಲು ಬಾಯಿದ್ದರೆ ಕೊನೆಯ ಕ್ಷಣದಲ್ಲೂ ಅದೇ ವಿದಾಯ ಗೀತೆಯನ್ನು ಹಾಡುತ್ತಿದ್ದರೋ ಏನೋ? ಆದರೆ.. ಕಾಲನ
ಕರೆ ಬರುವ ಒಂದು ತಿಂಗಳ ಮುಂಚೆಯೇ ದಿವ್ಯ ಮೌನಕ್ಕೆ ಶರಣಾಗಿದ್ದರು. ಹೇಳಬೇಕೆಂದರೂ ಮಾತುಗಳೇ ನಿಂತು
ಹೋಗಿದ್ದವು. ಜೀವಮಾನವೆಲ್ಲಾ ಹಾಡಿದ ಸಿರಿಕಂಠದ ಕೋಗಿಲೆ ಮೂಕವಾಗಿತ್ತು. ಆಗ ಅವರಿಗೆ ಸರಿಯಾಗಿ ಒಂದುನೂರಾ
ನಾಲ್ಕು ವರ್ಷಗಳ ವಯಸ್ಸು. ಅಷ್ಟರಲ್ಲಿ ಆಗಲೇ ಮೂರ‍್ನಾಲ್ಕು ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸವನ್ನು
ಮಾಡಿಯಾಗಿತ್ತು. ನಿಸರ್ಗ ನಿಯಮಕ್ಕೆ ತಲೆಬಾಗಿ ಹೋಗಿಯೇ ಬಿಟ್ಟರು. ಮತ್ತೆ ಇನ್ನು ಮರಳಿ ಬರುವ ಮಾತೇ
ಇಲ್ಲಾ. ಅವರು ಇಟ್ಟ ದಿಟ್ಟ ಹೆಜ್ಜೆಗಳು ಮಾತ್ರ ರಂಗಚರಿತ್ರೆಯಲ್ಲಿ ದಟ್ಟವಾಗಿ ಮೂಡಿದವು. ಅವರ ಭೌತಿಕ
ಕಾಯ 2017ರ ಆಗಸ್ಟ್ 18ರಂದು ನಿಶ್ಚಲವಾಯಿತು, ಆಗಸ್ಟ್ 19ರಂದು ಪಂಚಭೂತಗಳಲ್ಲಿ ಲೀನವಾದರೂ ಅವರ ಹೆಸರು
ವೃತ್ತಿ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೇ ಮೂಡಿತು. ಅವರ ಅಗಲಿಕೆಯ ನೆನಪು ರಂಗಕರ್ಮಿಗಳನ್ನು ಇನ್ನಿಲ್ಲದಂತೆ
ಕಾಡಿತು.
ಅದು ಬಲು ದೊಡ್ಡ ಜೀವ. ಅವರು
ಮನುಕುಲಕೆ ಮಾದರಿಯಾಗುವಂತಾ ಬದುಕು ಬಾಳಿದ ಕಲಾವಿದ. ಅವರ ಹೆಸರು ಬಾಳಪ್ಪ ಎಂದರೆ ಯಾರಿಗೆ ಗೊತ್ತಾಗುತ್ತೋ
ಇಲ್ಲವೋ ಗೊತ್ತಿಲ್ಲಾ. ಆದ್ರೆ ಏಣಗಿ ಬಾಳಪ್ಪ ಎಂದರೆ ಗೊತ್ತಿಲ್ಲಾ ಎನ್ನುವ ರಂಗಕರ್ಮಿಗಳೇ ಇಲ್ಲಾ.
ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನ ಗಡಿಭಾಗದ ಪುಟ್ಟ ಹಳ್ಳಿ ಏಣಗಿಯಲ್ಲಿ ಹುಟ್ಟಿದ ಅಪ್ಪಟ ಗ್ರಾಮೀಣ
ಪ್ರತಿಭೆಯೊಂದು ಬಾಳಿ ಬೆಳೆದು ಬೆಳಗಿದ ರೀತಿ ನಿಜಕ್ಕೂ ವಿಸ್ಮಯ. ಅವರು ನಡೆದ ದಾರಿಯನ್ನು ನೆನಸಿಕೊಂಡರದೇ
ತನ್ಮಯ.
ಕನ್ನಡ ವೃತ್ತಿ ರಂಗಭೂಮಿಯನ್ನು
ದೊಡ್ಡ ದೊಡ್ಡ ನಟರು ಆಳಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿದ್ದಾರೆ. ತಮ್ಮ ಕಲಾಪ್ರೌಢಿಮೆಯಿಂದ ಸಾಕಷ್ಟು
ಹೆಸರು ಮಾಡಿದವರಿದ್ದಾರೆ, ನಾಟಕ ಕಂಪನಿಗಳನ್ನು ಕಟ್ಟಿ ಮೆರೆದವರಿದ್ದಾರೆ, ಜನಪ್ರೀಯತೆಯನ್ನು ಪಡೆದವರೂ
ಬೇಕಾದಷ್ಟಿದ್ದಾರೆ. ಆದರೆ.. ಬಾಳಪ್ಪನವರಂತೆ ಸರಳವಾಗಿ, ಸಜ್ಜನಿಕೆಯಿಂದಾ, ನಡೆದಂತೆ ನುಡಿದು ತುಂಬು
ಬದುಕನ್ನು ತೃಪ್ತಿಯಿಂದ ಬದುಕಿದವರು ಯಾರೂ ಇಲ್ಲವೇ ಇಲ್ಲಾ. ಅಪರೂಪದಲ್ಲಿ ಅಪರೂಪವಾಗಿದ್ದಂತಹ ನಮ್ಮ
ಏಣಗಿ ಬಾಳಪ್ಪಜ್ಜನವರ ಬದುಕು ಮತ್ತು ಸಾಧನೆ ರಂಗಭೂಮಿಯವರಿಗೆಲ್ಲಾ ಆದರ್ಶನೀಯ. ಅವರ ಅಗಲಿಕೆಯ ಸಂದರ್ಭದಲ್ಲಿ
ಅಕ್ಷರ ನಮನಗಳನ್ನು ಹೇಳುವುದೇ ಈ ಲೇಖನದ ದ್ಯೇಯ..
1914 ರಲ್ಲಿ ಬೆಳಗಾವಿ ಜಿಲ್ಲೆಯ
ಏಣಗಿ ಗ್ರಾಮದಲ್ಲಿ ಕರಿಬಸಪ್ಪ ಹಾಗೂ ಬಾಳಮ್ಮ ದಂಪತಿಗಳಿಗೆ ಹುಟ್ಟಿದ ಬಾಳಪ್ಪನವರ ಬಾಲ್ಯ ಬಲು ಕಷ್ಟಕರವಾಗಿತ್ತು.
ಬಾಳಪ್ಪನವರಿಗೆ ಮೂರು ವರ್ಷ ತುಂಬುವ ಮೊದಲೇ ಅಪ್ಪ ತೀರಿಕೊಂಡರು. ನಾಲ್ಕನೇ ಕ್ಲಾಸ್‌ವರೆಗೆ ಓದಿದ್ದ
ಬಾಳಪ್ಪನವರು ಆರ್ಥಿಕ ತಾಪತ್ರಯಗಳಿಂದಾಗ ಓದು ನಿಲ್ಲಿಸಿ ದನಕಾಯಬೇಕಾಯಿತು. ಹಳ್ಳಿಗಳಲ್ಲಿ ಆಗಾಗ ಪ್ರದರ್ಶನಗೊಳ್ಳುತ್ತಿದ್ದ
ಬಯಲಾಟಗಳತ್ತ ಚಿತ್ತ ಬೆಳೆಯಿತು. ಕಂಚಿನ ಕಂಠ ಹಾಗೂ ಸುಶ್ರಾವ್ಯವಾದ ಹಾಡುಗಾರಿಕೆಯಿಂದಾಗಿ ಊರವರ ಗಮನ
ಸೆಳೆದ ಬಾಳಪ್ಪನವರಿಗೆ ಮೊದಲ ಬಾರಿಗೆ ‘ಮಾರ್ಕಂಡೇಯ’ ಬಯಲಾಟದಲ್ಲಿ ಅಭಿನಯಿಸಲು
ಅವಕಾಶ ಸಿಕ್ಕಿದ್ದೂ ಸಹ ಆಕಸ್ಮಿಕ. ಪ್ರದರ್ಶನದ ಸಮಯಕ್ಕೆ ಸರಿಯಾಗಿ ಗಣಪತಿ ಪಾತ್ರ ಮಾಡುತ್ತಿದ್ದ ಬಾಳಪ್ಪನವರ
ಅಣ್ಣ ಬರಲಾಗದ್ದರಿಂದ ಆ ಪಾತ್ರವನ್ನು ಬಾಳಪ್ಪನವರೇ ಮಾಡಿ ಗ್ರಾಮಸ್ಥರ ಗಮನ ಸೆಳೆದರು. ನಂತರ ‘ಲವ-ಕುಶ’ ಬಯಲಾಟದಲ್ಲಿ ಲವನ ಪಾತ್ರಕ್ಕೆ
ಜೀವತುಂಬಿದರು. ಆಗ ಅವರಿಗೆ ಕೇವಲ ಎಂಟು ವರ್ಷಗಳ ಎಳೆಯ
ಬಾಲ್ಯ. ಅದೃಷ್ಟ ಅವರಿಗೆ ಮತ್ತೊಂದು ಆಕಸ್ಮಿಕ ಅವಕಾಶವನ್ನೊದಗಿಸಿತು. ನರಗುಂದದಲ್ಲಿ ಪಾದುಕಾ ಪಟ್ಟಾಭಿಷೇಕ
ನಾಟಕದಲ್ಲಿ ನಟಿಸಬೇಕಾಗಿದ್ದ ಭರತನ ಸೇವಕನ ಪಾತ್ರದಾರಿ ಬಂದಿರಲಿಲ್ಲ. ಅದೂ ಸಹ ಅಚಾನಕ್ಕಾಗಿ ಬಾಳಪ್ಪನವರಿಗೆ
ಒಲಿದುಬಂದು ನಾಟಕರಂಗ ಪ್ರವೇಶಕ್ಕೆ ಅನುಕೂಲವಾಯಿತು. ಮುಂದೆ ಹುಕ್ಕೇರಿ ನಾಯಕರ ಕಂಪನಿ ಅದೇ ಪಾದುಕಾ
ಪಟ್ಟಾಭಿಷೇಕ ನಾಟಕವನ್ನು ಬೈಲಹೊಂಗಲದಲ್ಲಿ ಮಾಡದಾಗಲೂ ಕೂಡಾ ಭರತನ ಪಾತ್ರದಾರಿ ಕೈಕೊಟ್ಟಿದ್ದ. ಮತ್ತೆ
ಆ ಪಾತ್ರವೂ ಸಹ ತಾನಾಗಿಯೇ ಬಾಳಪ್ಪನವರನ್ನು ಹುಡುಕಿಬಂತು. ದಶರತನ ಪಾತ್ರದಲ್ಲಿ ನಟಿಸಿದ್ದ ಪ್ರಸಿದ್ದ
ನಾಟಕಕಾರರಾದ ಶಿವಲಿಂಗಸ್ವಾಮಿಗಳು ಬಾಳಪ್ಪನವರ ಪಾತ್ರವನ್ನು ಮೆಚ್ಚಿದರು. ಮುಂದೆ 1928ರಲ್ಲಿ ಶಿವಲಿಂಗಸ್ವಾಮಿಗಳು
ತಮ್ಮದೇ ಆದ ‘ಲಿಂಗರಾಜ ನಾಟ್ಯ ಸಂಘ’ವನ್ನು ಕಟ್ಟಿದಾಗ ಬಾಳಪ್ಪನವರನ್ನು
ತಮ್ಮ ನಾಟಕ ಕಂಪನಿಗೆ ಕರೆಯಿಸಿಕೊಂಡರು. ಆಗ ಬಾಳಪ್ಪನವರಿಗೆ ವಯಸ್ಸು ಕೇವಲ ಹನ್ನೆರಡು. ಹೀಗೆ ಅದೃಷ್ಟ
ಕರೆದಲ್ಲೆಲ್ಲಾ, ಅವಕಾಶ ಸಿಕ್ಕಲ್ಲೆಲ್ಲಾ ಹೊರಟ ಈ ಗ್ರಾಮೀಣ ಪ್ರತಿಭೆ ಬಾಳಪ್ಪನವರ ಬದುಕಿನ ರಂಗಪಯಣ
ಬಲು ರೋಚಕವಾದದ್ದು.
ತಮ್ಮ ಆಕರ್ಷಕ ದೇಹಸಿರಿ, ಅಪರೂಪದ ಕಂಠಸಿರಿ ಹಾಗೂ ವಿಶಿಷ್ಟ ಅಭಿನಯಗಳಿಂದಾಗಿ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಬಾಲನಟನಾಗಿ, ಸ್ರ್ತೀ ಪಾತ್ರದಾರಿಯಾಗಿ ಒಂದಾದ ಮೇಲೊಂದು ನಾಟಕಗಳಲ್ಲಿ ಅಭಿನಯಿಸುತ್ತಾ ಕಂಪನಿ ಮಾಲೀಕರ ಹಾಗೂ ಪ್ರೇಕ್ಷಕರ ಗಮನವನ್ನು ಸೆಳೆದರು. ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ಬಾಳಪ್ಪನವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೂ ಸಹ ಆಕಸ್ಮಿಕವೇ. ಚಿಕ್ಕೋಡಿ ಶಿವಲಿಂಗಸ್ವಾಮಿಗಳ ‘ಶಿರಸಿ ಮಾರಿಕಾಂಬಾ ನಾಟಕ ಮಂಡಳಿ’ಯ ವೀರರಾಣಿ ರುದ್ರಮ್ಮ ನಾಟಕದಲ್ಲಿ ನಟಿಸಬೇಕಾಗಿದ್ದ ರುದ್ರಮ್ಮನ ಪಾತ್ರದಾರಿ ಬಾಗೀರಥಿಬಾಯಿ ಕೊನೆಯ ಗಳಿಗೆಯಲ್ಲಿ ಬಾರದೇ ಹೋದರು. ಆ ವಿರೋಚಿತ ಸ್ರ್ತೀ ಪಾತ್ರವನ್ನು ಆವಾಹಿಸಿಕೊಂಡು ಅಮೋಘವಾಗಿ ನಟಿಸಿದ ಬಾಳಪ್ಪನವರಿಗೆ ತದನಂತರ ನಾಯಕಿ ಪಾತ್ರಗಳೇ ಖಾಯಂ ಆದವು. ಶಿವಲಿಂಗಸ್ವಾಮಿಗಳ ಕಂಪನಿ ಮುಚ್ಚಿದಾಗ, ಆ ರಂಗಗುರುವಿನ ನೆನಪಿನಲ್ಲಿ ಮೊದಲ ಬಾರಿಗೆ ಸೂಡಿ ಹುಚ್ಚಪ್ಪನವರ ಜೊತೆಗೆ ಸೇರಿ ಬಾಳಪ್ಪನವರು “ಗುರು ಸೇವಾ ಸಂಗೀತ ನಾಟಕ ಮಂಡಲಿ” ನಾಟಕ ಕಂಪನಿಯನ್ನು ಶುರುಮಾಡಿದಾಗ ಅವರ ವಯಸ್ಸು ಕೇವಲ ಹದಿನೆಂಟು. ಬಿ.ಎ, ಕಿತ್ತೂರು ರುದ್ರಮ್ಮ, ಅಸ್ಪೃಶ್ಯತಾ ನಿವಾರಣೆ ಮುಂತಾದ ನಾಟಕಗಳು ಪ್ರದರ್ಶನಗೊಂಡವು. ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಬಂದಿದ್ದರಿಂದ ಮೂರೇ ವರ್ಷದಲ್ಲಿ ಈ ನಾಟಕ ಕಂಪನಿಯನ್ನು ತೊರೆದು ೧೯೩೬ ರಲ್ಲಿ ಸ್ವಂತ ನಾಟಕ ಕಂಪನಿಯನ್ನು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಕಟ್ಟಿದ ಬಾಳಪ್ಪನವರು ಅದಕ್ಕೆ “ಕಿತ್ತೂರ ಸಂಗೀತ ನಾಟಕ ಮಂಡಳಿ” ಎಂದು ಹೆಸರಿಟ್ಟರು. ಮೂರು ವರ್ಷಗಳ ಕಾಲ ಸಂಕಷ್ಟದಲ್ಲೆ ಈ ನಾಟಕ ಕಂಪನಿಯನ್ನು ನಡೆಸಿದ ಬಾಳಪ್ಪನವರು ನಷ್ಟಕ್ಕೆ ಒಳಗಾಗಿ ಕಂಪನಿ ಮುಚ್ಚಬೇಕಾಯಿತು. ಮುಂದೆ ಬೇರೆ ನಾಟಕ ಕಂಪನಿಗಳಲ್ಲಿ ಅತಿಥಿ ನಟರಾಗಿ ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕಿತ್ತೂರು ರುದ್ರಮ್ಮ, ಕಡ್ಲಿಮಟ್ಟಿ ಕಾಶೀಬಾಯಿ, ಪಠಾನ ಪಾಶದ ವೃಂದಾ.. ಪಾತ್ರಗಳನ್ನು ಅಭಿನಯಿಸುತ್ತಲೇ ತಮ್ಮ ಜನಪ್ರೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರು.
ಎರಡು ಕಂಪನಿಗಳನ್ನು ಕಟ್ಟಿ
ಕಷ್ಟ ನಷ್ಟ ಅನುಭವಿಸಿದರೂ ಛಲ ಬಿಡದ ಬಾಳಪ್ಪನವರು 1940 ರಲ್ಲಿ ಮತ್ತೆ ನಾಲ್ಕು ಜನರ ಪಾಲುದಾರಿಕೆಯಲ್ಲಿ
‘ವೈಭವಶಾಲಿ’ ನಾಟಕ ಕಂಪನಿ ಹುಟ್ಟುಹಾಕಿದರು.
ಆದರೆ ಮೂರೇ ತಿಂಗಳಲ್ಲಿ ಇಬ್ಬರು ಪಾಲುದಾರರು ಹೊರಹೋದರು. ಹಾಗೂ ಹೀಗೂ ಆರು ವರ್ಷಗಳ ಕಾಲ ವೈಭವಶಾಲಿಯನ್ನು
ಮುನ್ನಡೆಸಿದ ಬಾಳಪ್ಪನವರ ಈ ಕಂಪನಿಯೂ ಎರಡನೇ ಸಲ ಹೋಳಾಯಿತು. ಪ್ರತಿಕೂಲ ಪರಿಸ್ಥಿತಿಯಲ್ಲೂ ದೃತಿಗೆಡದ ಬಾಳಪ್ಪನವರು ತಮ್ಮ
ಪಾಲಿಗೆ ಬಂದ ಪರಿಕರಗಳನ್ನು ತೆಗೆದುಕೊಂಡು ಹಠಕ್ಕೆ ಬಿದ್ದು ಸ್ವತಂತ್ರವಾಗಿ ಭಾರತಕ್ಕೆ ಸ್ವಾತಂತ್ರ್ಯ
ಬಂದ ವರುಷದಲ್ಲಿ “ಕಲಾವೈಭವ ನಾಟ್ಯ ಸಂಘ” ವನ್ನು 1947 ರಲ್ಲಿ ಸ್ಥಾಪಿಸಿದರು.
ಆ ನಂತರ ಹಿಂತಿರುಗಿ ನೋಡದ ಬಾಳಪ್ಪನವರು ನಾಟಕಗಳನ್ನು ಪ್ರದರ್ಶಿಸುತ್ತಲೇ ಹೋದರು. ಸಂಪೂರ್ಣ ರಾಮಾಯಣ,
ಪಾದುಕಾ ಪಟ್ಟಾಭಿಷೇಕ, ಕುರುಕ್ಷೇತ್ರ, ಲಂಕಾದಹನ, ರಾಜಾಹರಿಶ್ಚಂದ್ರ ಹೀಗೆ ಒಟ್ಟು ಇಪ್ಪತ್ತು ಪೌರಾಣಿಕ
ನಾಟಕಗಳನ್ನು ಮತ್ತು ಕಿತ್ತೂರು ರುದ್ರಮ್ಮ, ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಟಿಪ್ಪು ಸುಲ್ತಾನ..
ಸೇರಿದಂತೆ ಎಂಟು ಐತಿಹಾಸಿಕ ನಾಟಕಗಳನ್ನು ಹಾಗೂ ಧರ್ಮಪತ್ನಿ, ಕುಂಕುಮ, ಚಲೇಜಾವ್, ಸಂಪತ್ತಿಗೆ ಸವಾಲ್,
ಶಾಲಾಮಾಸ್ತರ್,, ಹೀಗೆ ಮೂವತ್ತೈದಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ಬಾಳಪ್ಪನವರು ನಿರ್ಮಿಸಿ ನಾಡಿನಾದ್ಯಂತ
ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾ ಕನ್ನಡ ವೃತ್ತಿ ರಂಗಭೂಮಿಗೆ ಅಪಾರವಾದ ಕೊಡುಗೆಗಳನ್ನು ಕೊಟ್ಟರು.
ಕಲಾವೈಭವದ ‘ಜಗಜ್ಯೋತಿ ಬಸವೇಶ್ವರ’ ನಾಟಕವಂತೂ ಅತ್ಯಂತ ಜನಪ್ರೀಯವಾಯಿತು.
ಬಸವೇಶ್ವರರ ಪಾತ್ರವನ್ನು ಮಾಡುತ್ತಿದ್ದ ಬಾಳಪ್ಪನವರನ್ನು ಎಲ್ಲರೂ ಬಸವಣ್ಣನವರ ತದ್ರೂಪವೆಂದೇ ಪರಿಗಣಿಸುವಂತಾಯಿತು. ಬಾಳಪ್ಪನವರ
ಬಸವಣ್ಣನ ಪಾತ್ರದ ಅಭಿನಯವನ್ನು ನೋಡಿ ಭಕ್ತಿಯಿಂದ ತನ್ಮಯಗೊಂಡು ಭಾವಪರವಶರಾದ ಧಾರವಾಡದ ಮುರುಘಾಮಠದ
ಮೃತ್ಯುಂಜಯ ಸ್ವಾಮಿಗಳು ಅದು ನಾಟಕ ಎನ್ನುವುದನ್ನೂ ಮರೆತು ಅನುಭವ ಮಂಟಪದ ದೃಶ್ಯ ನಡೆಯುತ್ತಿರುವಾಗಲೇ
ವೇದಿಕೆ ಏರಿ ಬಾಳಪ್ಪನವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದರು. ಜನಸಾಮಾನ್ಯ ಪ್ರೇಕ್ಷಕರಂತೂ ಬಾಳಪ್ಪನವರ
ಅಭಿನಯಕ್ಕೆ ಮಾರುಹೋಗಿ ಬಸವಣ್ಣನವರನ್ನೇ ಅವರಲ್ಲಿ ಕಾಣತೊಡಗಿದ್ದರು. ಬಾಳಪ್ಪನವರ ಸಮಾಜ ಸೇವಾ ಮನೋಭಾವವನ್ನೂ ಇಲ್ಲಿ ನೆನೆಯಲೇಬೇಕು. ಬಸವೇಶ್ವರ ನಾಟಕದ ಪ್ರದರ್ಶನ ಮುಗಿದ ನಂತರ
ಜೋಳಿಗೆ ಹಿಡಿದು ಮುಖ್ಯದ್ವಾರದ ಬಳಿ ನಿಲ್ಲುತ್ತಿದ್ದ ಬಾಳಪ್ಪನವರ ಜೋಳಿಗೆಗೆ ಆ ನಾಟಕದ ಟಿಕೆಟ್ ಕಲೆಕ್ಷನ್‌ಗಿಂತಲೂ
ಹೆಚ್ಚು ಹಣ ಸಂಗ್ರಹವಾಗುತ್ತಿತ್ತು. ಹಾಗೆ ಬಂದ ಹಣವನ್ನು
ಸ್ವಂತಕ್ಕೆ ಬಳಸದೇ ಬಾಗೇವಾಡಿಯ ಬಸವೇಶ್ವ ದೇವಸ್ಥಾನಕ್ಕೆ ಸಂದಾಯ ಮಾಡುತ್ತಿದ್ದರು. ಹಳಕಟ್ಟಿಯಂತಹ
ವಿದ್ವಾಂಸರು ಆರ್ಥಿಕ ಸಮಸ್ಯೆಯಲ್ಲಿದ್ದಾಗಲೂ ಸಹ ಜೋಳಿಗೆಯ ಸಂಗ್ರಹವನ್ನು ಕೊಟ್ಟು ಸಹಾಯ ಮಾಡಿದ್ದರು.
‘ಕೆರೆಯ
ನೀರನು ಕೆರೆಗೆ ಚೆಲ್ಲಿದೆ’ ಇದರಲ್ಲಿ ನಂದೇನೂ ಇಲ್ಲಾ ಎನ್ನುವ ಸಾರ್ಥಕತೆಯನ್ನು ಬಾಳಪ್ಪನವರು
ಅನುಭವಿಸಿದರು. 1965ರಲ್ಲಿ ಈ ನಾಟಕ ಕರ್ನಾಟಕಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ್ದು ಮಹಾರಾಷ್ಟ್ರದಲ್ಲಿ.
ಬಸವೇಶ್ವರ ನಾಟಕ ಅದೆಷ್ಟು ಯಶಸ್ವಿಯಾಗಿತ್ತೆಂದರೆ ಮಹಾರಾಷ್ಟ್ರ ಸರಕಾರವೇ ಬೆಚ್ಚಿಬಿದ್ದಿತ್ತು. ಗಡಿಭಾಗದಲ್ಲಿ ಕನ್ನಡ ಬೆಳೆಸಲು ಈ ನಾಟಕ ಪ್ರೇರೇಪಿಸುತ್ತದೆ ಎಂದು ದಿಗಿಲುಗೊಂಡ ಮಹಾರಾಷ್ಟ್ರ
ಸರಕಾರ ಬಸವೇಶ್ವರ ನಾಟಕ ಪ್ರದರ್ಶನದ ಅನುಮತಿಯನ್ನೇ ತಡೆಹಿಡಿದಿತ್ತು. ಹರಸಾಹಸ ಮಾಡಿ ಲೈಸನ್ಸ್ ಮತ್ತೆ
ಪಡೆಯಲಾಯ್ತು.
ಬಾಳಪ್ಪನವರು ಮೂವತ್ತೇಳು ವರ್ಷಗಳ ಕಾಲ ವೈಭವದಿಂದ ಮುನ್ನೆಡೆಸಿದ ಕಲಾವೈಭವ ನಾಟ್ಯ ಸಂಘವನ್ನು 1983ರಲ್ಲಿ ನಿಲ್ಲಿಸಿ ಕಲಾವಿದರಿಗೆಲ್ಲಾ ಕೈಲಾದಷ್ಟು ಸಹಾಯಮಾಡಿ ಹುಟ್ಟೂರಿಗೆ ಮರಳಿದರು. ಆರು ದಶಕಗಳ ನಿರಂತರ ರಂಗಭೂಮಿ ಕಾಯಕದಿಂದ ನಿವೃತ್ತಿ ಪಡೆದು ಕೃಷಿಕರಾಗಿ ಮುಂದುವರೆದರು. ನಟರಾಗಿ, ಗಾಯಕರಾಗಿ, ಸಂಗೀತಗಾರರಾಗಿ, ನಾಟಕ ಕಂಪನಿಯ ಮಾಲೀಕರಾಗಿ, ರಂಗ ಸಂಘಟಕರಾಗಿ ಬಾಳಪ್ಪನವರು ಮಾಡಿದ ಸಾಧನೆ ಹೇಳುತ್ತಾ ಹೋದರೆ ಮಹಾಪ್ರಬಂಧವೇ ಆದೀತು. ಬಾಳಪ್ಪನವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ (1973) ನೀಡಿ ಸನ್ಮಾನಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯ (1976) ಪ್ರಶಸ್ತಿಯೂ ದೊರಕಿದೆ. ಕನ್ನಡ ಸಾಹಿತ್ಯ ಪರಿಷತ್ತು (1978) ಗೌರವಿಸಿದೆ. ರಾಜ್ಯ ಸರಕಾರದ ಪ್ರತಿಷ್ಠಿತ ‘ಗುಬ್ಬಿ ವೀರಣ್ಣ” ಪ್ರಶಸ್ತಿಯೂ (1995) ಬಾಳಪ್ಪನವರನ್ನು ಅರಸಿ ಬಂದಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (1995) ಯೂ ಸಿಕ್ಕಿದೆ. ಕನ್ನಡ ವಿಶ್ವವಿದ್ಯಾಲಯವು (2005) ನಾಡೋಜ ಪ್ರಶಸ್ತಿ ಕೊಟ್ಟು ಪುರಸ್ಕರಿಸಿದೆ, ಕರ್ನಾಟಕ ವಿಶ್ವವಿದ್ಯಾಲಯವು (2006) ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಸನ್ಮಾನಿಸಿತು. ಬಾಳಪ್ಪನವರ ರಂಗಕಾಯಕಕ್ಕೆ ಎಷ್ಟೆಲ್ಲಾ ಪುರಸ್ಕಾರ ಸನ್ಮಾನಗಳನ್ನು ಕೊಟ್ಟರೂ ಕಡಿಮೆಯೇ ಎನ್ನುವಷ್ಟು ಅವರ ಸಾಧನೆ ಹಿರಿದಾಗಿದೆ. ಮುಂದಿನ ತಲೆಮಾರಿಗೆ ಬಾಳಪ್ಪನವರ ಛಲ, ಪ್ರತಿಭೆ, ಶಿಸ್ತು, ಸಂಯಮ, ವಿನಯವಂತಿಕೆ, ನೈತಿಕತೆ ಹಾಗೂ ರಂಗಸಂಘಟನಾ ಚಾತುರ್ಯಗಳು ಮಾದರಿಯಾಗಿವೆ.
ಇದೆಲ್ಲವೂ ಅವರ ಸಾರ್ವಜನಿಕ ಬದುಕು ಹಾಗೂ ಸಾಧನೆಯ ಕುರಿತ ಮಾತಾಯಿತು. ಈ ರೀತಿಯ ಸಾಧನೆ ಮಾಡಿದವರೂ ಇದ್ದಾರೆ. ಸಾರ್ವಜನಿಕ ಬದುಕಲ್ಲಿ ಯಶಸ್ವಿಯಾದವರು ಸಂತೃಪ್ತ ಕೌಟುಂಬಿಕ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾದ ಹಲವಾರು ಉದಾಹರಣೆಗಳಿವೆ. ಆದರೆ.. ಬಾಳಪ್ಪನವರು ಕಟ್ಟಿಕೊಂಡ ವ್ಯಯಕ್ತಿಕ ಬದುಕು ವಿಶಿಷ್ಟವಾದದ್ದು. ಬಾಳಪ್ಪನವರು 1930ರಲ್ಲಿ ಸೋದರ ಮಾವನ ಮಗಳು ಮದುವೆಯಾದಾಗ ಅವರಿಗೆ ಕೇವಲ ಹದಿನಾರು ವರ್ಷ ವಯಸ್ಸು. ಅದೊಂದು ಬಾಲ್ಯವಿವಾಹ. ಅವರ ಹೆಂಡತಿ ತುಂಬಾ ಚಿಕ್ಕವಳಾಗಿದ್ದರಿಂದ ತವರು ಮನೆಯಲ್ಲೇ ಇದ್ದಳು. ಆದರೆ ಇವರಿಬ್ಬರೂ ಕೂಡಿ ಸಂಸಾರ ಮಾಡುವುದು ಆ ಕಾಲನಿಗೆ ಇಷ್ಟವರಿಲಿಲ್ಲವೇನೋ.. ಬಾಳಪ್ಪನವರ ಪತ್ನಿ ಚಿಕ್ಕ ವಯಸ್ಸಿನಲ್ಲೇ 1932ರಲ್ಲಿ ತೀರಿಹೋದರು. ಮಡದಿಯ ಅಗಲಿಕೆಯ ದುಃಖವನ್ನು ಮರೆಯಲು ಸಾಕಷ್ಟು ಸಾಹಸಪಟ್ಟರು. ತದನಂತರ ಅವ್ವನ ಒತ್ತಾಯಕ್ಕೆ 1935ರಲ್ಲಿ ಸಾವಿತ್ರಿಯವರನ್ನು ಮದುವೆ ಮಾಡಿಕೊಂಡರು. ಬಾಳಪ್ಪನವರ ಯಶಸ್ಸಿನ ಹಿಂದೆ ಅವ್ವ ಬಾಳಮ್ಮ ಹಾಗೂ ಮಡದಿ ಸಾವಿತ್ರಿಯವರ ಕೊಡುಗೆಯೂ ಬೇಕಾದಷ್ಟಿದೆ. ಮಗ ನಾಟಕ ಕಂಪನಿ ಮಾಡಿ ಎಲ್ಲಿ ದಿವಾಳಿ ಆಗ್ತಾನೋ ಎನ್ನುವ ಆತಂಕದಲ್ಲಿದ್ದ ಬಾಳವ್ವ ಮಗನ ನಾಟಕ ಕಂಪನಿ ಚೆನ್ನಾಗಿ ನಡೆಯುತ್ತಿರುವಾಗಲೆಲ್ಲಾ ಹೋಗಿ ಹಣ ತೆಗೆದುಕೊಂಡು ಬಂದು ಹೊಲ ಕೊಂಡುಕೊಳ್ಳುತ್ತಿದ್ದರು. ಹದಿನಾರೆಕರೆ ಇದ್ದ ಹೊಲದ ಸಂಪತ್ತನ್ನು ಎಂಬತ್ತೆಕರೆಗೆ ಏರಿಸಿದ್ದರ ಹಿಂದೆ ಬಾಳಮ್ಮನವರ ಶ್ರಮ ಅಪಾರವಾಗಿತ್ತು. ಪಾಲುದಾರಿಕೆಯ ನಾಟಕ ಕಂಪನಿ ಮುಳುಗಿ ನಷ್ಟವಾಗಿ ಕೋರ್ಟಲ್ಲಿ ದಾವೆ ಬಿದ್ದು ಇರುವ ಆಸ್ತಿ ಹರಾಜಿಗೆ ಬಂದಿದ್ದಾಗ ತಮ್ಮ ತಂದೆಯವರಿಂದ ಹಣ ಕೊಡಿಸಿ ಬಾಳಪ್ಪನವರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ್ದೇ ಅವರ ಮಡದಿ ಸಾವಿತ್ರಿಯವರು. ಸಾವಿತ್ರಿ ಹಾಗೂ ಬಾಳಪ್ಪ ದಂಪತಿಗಳಿಗೆ ಒಟ್ಟು ಏಳು ಜನ ಮಕ್ಕಳು. ಅದರಲ್ಲಿ ನಾಲ್ಕು ಗಂಡು ಹಾಗೂ ಮೂರು ಹೆಣ್ಣು. 1992ರಲ್ಲಿ ಸಾವಿತ್ರಿಯವರು ತೀರಿಕೊಂಡರು.
1947ರಲ್ಲಿ ಕಲಾವೈಭವ ನಾಟ್ಯ
ಸಂಘ ಕಟ್ಟಿದಾಗ ಆ ತಂಡದ ಮ್ಯಾನೇಜರ್ ವಿರುಪಾಕ್ಷರವರ ಮಗಳು ಲಕ್ಷೀದೇವಿಯವರನ್ನು 1951ರಲ್ಲಿ ಏಣಗಿ
ಬಾಳಪ್ಪನವರು ಮದುವೆಯಾದರು. ಆಗಲೇ ತಾವು ನಿರ್ವಹಿಸುತ್ತಿದ್ದ ಸ್ತ್ರೀಪಾತ್ರಗಳಿಂದ ಮುಕ್ತಿ ಹೊಂದಿ
ಆ ಹೊಣೆಗಾರಿಕೆಯನ್ನು ಲಕ್ಷ್ಮೀಯವರಿಗೆ ವಹಿಸಿದರು. ಲಕ್ಷ್ಮೀದೇವಿಯವರಂತೆಯೇ ಅವರ ತಂದೆ ವಿರುಪಾಕ್ಷಪ್ಪಾ
ಬಳ್ಳಾರಿ ಹಾಗೂ ತಮ್ಮ ಕೃಷ್ಣಚಂದ್ರ ಇಬ್ಬರೂ ಕಲಾವೈಭವ ನಾಟ್ಯ ಸಂಘದ ಅಭ್ಯುದಯಕ್ಕಾಗಿ ಅಹೋರಾತ್ರಿ ಶ್ರಮಿಸಿದರು.
ಇವರೆಲ್ಲರ ಪರಿಶ್ರಮದಿಂದಲೇ ಆ ಕಂಪನಿ ನಾಲ್ಕು ದಶಕಗಳ ಕಾಲ ತಾಳಿ ಬಾಳಿ ಬೆಳಗಿತು. ಅದಕ್ಕೆ ಬಾಳಪ್ಪನಂತವರ
ಸಮರ್ಥ ನಾಯಕತ್ವವೂ ದೊರಕಿತ್ತು. ಲಕ್ಷ್ಮೀದೇವಿಯವರಿಗೆ
ಏಣಗಿ ನಟರಾಜ ಮತ್ತು ಭಾಗ್ಯಶ್ರೀ ಇಬ್ಬರು ಮಕ್ಕಳು. ಸದಾ ಏರಿಳಿತದಿಂದ ಕೂಡಿದ, ಲಾಭನಷ್ಟದ ನಾಟಕ ಕಂಪನಿಯನ್ನೂ
ಕಟ್ಟಿಕೊಂಡು, ಎರಡೂ ಸಂಸಾರಗಳನ್ನೂ ಕಾಪಾಡಿಕೊಂಡು, ಒಟ್ಟು ಒಂಬತ್ತು ಮಕ್ಕಳನ್ನು ಓದಿಸಿ ಬೆಳೆಸಿ ಬದುಕಿನ
ದಡಕ್ಕೆ ಸೇರಿಸಿದ ಬಾಳಪ್ಪನವರ ಕೌಟುಂಬಿಕ ನಿರ್ವಹನಾ ಜವಾಬ್ದಾರಿ ಕೂಡಾ ವಿಸ್ಮಯಕಾರಿಯಾಗಿದೆ. ಹಿರಿಯ
ಮಗ ಬಸವರಾಜ್ ವೈದ್ಯ ವೃತ್ತಿಯಲ್ಲಿದ್ದರೆ, ಎರಡನೆಯ ಮಗ ಸುಭಾಷ್ ಏಣಗಿ ಇಂಜನೀಯರ್ ವೃತ್ತಿಯಲ್ಲಿದ್ದಾರೆ.
ಮೂರನೆಯ ಮಗ ಮೋಹನ್ ವಕೀಲ್ ವೃತ್ತಿಯನ್ನು ಕೈಗೊಂಡಿದ್ದರೆ, ನಾಲ್ಕನೆಯವ ಅರವಿಂದ ಕೃಷಿ ವಿಜ್ಞಾನದ ಪದವೀಧರ.
ಎಲ್ಲ ಮಕ್ಕಳೂ ಹೀಗೆ ನೌಕರಿ ಹಿಡಿದು ಪಟ್ಟಣ ಸೇರಿದರೆ ಊರಲ್ಲಿರುವ ಇರುವ ನೂರಾರು ಎಕರೆ ಜಮೀನನ್ನು
ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಬಂದಾಗ ಅರವಿಂದರವರ ಮನವೊಲಿಸಿ ಗ್ರಾಮದಲ್ಲೇ ಇರಿಸಿ ಅನ್ನದಾತನನ್ನಾಗಿಸಿದ್ದು
ಬಾಳಪ್ಪನವರ ಯೋಜನಾಬದ್ದ ರೀತಿಗೆ ಸಾಕ್ಷಿಯಾಗಿದೆ. ತಮ್ಮ ಕೊನೆಯ ಮಗನನ್ನು ಮಾತ್ರ ರಂಗಭೂಮಿಯಲ್ಲೇ ತೊಡಗಿಕೊಂಡು
ಕಲಾಸೇವೆ ಮಾಡಲು ಪ್ರೇರೇಪಿಸಿದರು. ಹೆಗ್ಗೋಡಿನ ನೀನಾಸಮ್‌ಗೆ ಕಳುಹಿಸಿ ಆಧುನಿಕ ರಂಗಶಿಕ್ಷಣವನ್ನು
ಕೊಡಿಸಿದರು. ಏಣಗಿ ನಟರಾಜರವರು ಅಭಿನಯದಲ್ಲಿ ಅಪ್ಪನನ್ನೂ ಮೀರಿಸುವಂತೆ ನಟಿಸಿ ಕನ್ನಡ ರಂಗಭೂಮಿಯ ಪ್ರತಿಭಾವಂತ
ಕಲಾವಿದನಾಗಿ ಗುರುತಿಸಿಕೊಂಡರು. ಬಹು ಬೇಗ ಯಶಸ್ಸಿನ ಎತ್ತರಕ್ಕೆ ಏರಿ ಅಷ್ಟೇ ಬೇಗ ಅವಸಾನವನ್ನೂ ಕಂಡು
ಅಕಾಲ ಮೃತ್ಯುವಿಗೆ ಈಡಾದ ನಟರಾಜರ ನಟನೆಯನ್ನು ನೋಡಿದವರು ಮರೆಯಲು ಸಾಧ್ಯವೇ ಇಲ್ಲ. ಹೀಗೆ ಪ್ರತಿಯೊಬ್ಬ
ಗಂಡು ಮಕ್ಕಳನ್ನೂ ಒಂದೊಂದು ವೃತ್ತಿಯಲ್ಲಿ ಮುಂದುವರೆಸುವಂತೆ ಮಾಡಿದ ಬಾಳಪ್ಪನವರಿಗೆ ಇಪ್ಪತ್ನಾಲ್ಕು
ಮೊಮ್ಮಕ್ಕಳು.
ಏಣಗಿ ಬಾಳಪ್ಪನವರು ಎಲ್ಲರಿಗೂ
ಬೇಕಾಗಿದ್ದು ಅವರ ಸರಳವಾದ ಜೀವನ ಮತ್ತು ಅಪಾರವಾದ ವಿನಯವಂತಿಕೆಯಿಂದಾಗಿ. ಒಮ್ಮೆ ಬಸವಣ್ಣನ ಪಾತ್ರ
ಮಾಡಿದ ನಂತರ ಬೆಳ್ಳಂಬೆಳಿಗ್ಗೆ ಬೀದಿ ಬದಿಯ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದ ಬಾಳಪ್ಪನವರನ್ನು ನೋಡಿದವರು
“ಅಲ್ಲಿ ನೋಡ್ರೋ ಬಸವಣ್ಣ ಹೋಟಲಲ್ಲಿ ಚಾ ಕುಡೀತಿದ್ದಾನೆ” ಅಂದರಂತೆ. ಅವತ್ತಿನಿಂದಾ
ಬಾಳಪ್ಪನವರು ಟೀ ಕಾಫಿ ಕುಡಿಯುವುದನ್ನು ನಿಲ್ಲಿಸಿದ್ದಷ್ಟೇ ಅಲ್ಲಾ ಹೋಟೇಲಿಗೆ ಹೋಗುವುದನ್ನೇ ಬಿಟ್ಟರಂತೆ.
‘ದೀರ್ಘಾಯುಶ್ಯದ
ಗುಟ್ಟೇನು ಅಜ್ಜಾ ?’ ಎಂದು ಅವರನ್ನು ಕೇಳಿದರೆ ಮಗುವಿನಂತೆ ನಕ್ಕು ‘ಬಿಸಿ ರೊಟ್ಟಿ, ಹಾಲು ಹೈನಾ
ಮತ್ತು ಸಾಕಷ್ಟು ತಪ್ಪಲ ಪಲ್ಲೆ.. ಇಷ್ಟನ್ನೇ ಬದುಕಿನಾದ್ಯಂತ ತಿನ್ನುತ್ತಾ ಬಂದಿದ್ದರಿಂದಾ ಆಯಸ್ಸು
ಗಟ್ಟಿಯಾಗಿದೆ’ ಎಂದು ಹೇಳುತ್ತಿದ್ದರು. ಎಲ್ಲಾ ಅನಗತ್ಯ ಚಟಗಳಿಂದ ದೂರಾಗಿ,
ತಿನ್ನುವ ಆಹಾರದಲಿ ರೂಢಿಸಿಕೊಂಡ ಶಿಸ್ತು ಬಾಳಪ್ಪನವರನ್ನು ದೀರ್ಘಾಯುಶಿಯನ್ನಾಗಿಸಿದ್ದರೆ, ಅವರಲ್ಲಿರುವ
ವಿನಯವಂತಿಕೆ ಅವರನ್ನು ಗೌರವಾನ್ವಿತರನ್ನಾಗಿಸಿತ್ತು. ಪ್ರತಿಯೊಬ್ಬ ಸಹಜೀವಿಯೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ
ನಡೆದುಕೊಂಡು ತಮ್ಮ ಉತ್ತಮ ನಡೆ ನುಡಿಗಳಿಂದಲೇ ಎಲ್ಲರನ್ನೂ ಪ್ರಭಾವಿಸಿದರು.
ಎಂದೂ ದ್ವಂದ್ವಾರ್ಥ ಸಂಭಾಷಣೆ
ಹಾಗೂ ಅಶ್ಲೀಲ ದೃಶ್ಯಗಳ ನಾಟಕಗಳನ್ನು ಮಾಡಿಸದೇ ನೀತಿ, ನಿಯತ್ತನ್ನು ಹೇಳುವಂತಹ, ಸಾಮಾಜಿಕ ಪಿಡುಗುಗಳನ್ನು ವಿರೋಧಿಸುವಂತಹ, ಭಾಷೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಂತಹ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸುವ ಮೂಲಕ
ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಕಲಾ ಮಾಧ್ಯಮದ
ಮೂಲಕ ಸಾರ್ಥಕವಾಗಿ ನಿರ್ವಹಿಸಿದರು. ಬಾಳಪ್ಪನವರು ನಡೆ ನುಡಿಗಳನ್ನು ಸಿದ್ದಾಂತವನ್ನಾಗಿಸಿ ಬಸವಣ್ಣನವರು
ತೋರಿದ ಮಾರ್ಗದಲ್ಲಿ ನಿಷ್ಟೆಯಿಂದ ನಡೆದರು. ನಿಜವಾದ ಲಿಂಗಾಯತರಾದರು. ಮಾನವೀಯತೆಯನ್ನು ಬದುಕಿನ ದ್ಯೇಯವಾಗಿಸಿಕೊಂಡು
ನಿಜವಾದ ಅರ್ಥದಲ್ಲಿ ಮನುಷ್ಯರಾದರು. ಮನುಷ್ಯರೆಂದುಕೊಳ್ಳುವವರಿಗೆಲ್ಲಾ ಮಾದರಿಯಾದರು. ಸಾಮಾಜಿಕ ಜೀವನ
ಹಾಗೂ ವ್ಯೆಯಕ್ತಿಕ ಬದುಕಿನಲ್ಲಿ ಗೆದ್ದರು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸತತ ಯತ್ನದಿಂದ
ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಹಾಕುತ್ತಾ ಸಾಧನೆಯನ್ನು ಮಾಡಿದರು.
ಹೋಗಿ ಬಾ ಬಾಳಪ್ಪಜ್ಜಾ.. ನೀ
ನಡೆದ ಹಾದಿ ನಮಗೆ ದಾರಿದೀಪವಾಗಿರಲಿ. ನೀ ಹಚ್ಚಿ ಹೋದ
ರಂಗ ದೀವಿಗೆ ರಂಗಭೂಮಿಗೆ ಬೆಳಕಾಗಲಿ. ನೀ ಬಿತ್ತಿ ಬೆಳೆದ ರಂಗಕಲೆಯೆಂಬ ಆಲದ ಮರ ಮುಂದಿನ ತಲೆಮಾರಿನ
ಕಲಾವಿದರಿಗೆ ನೆರಳಾಗಲಿ. ನಿನ್ನ ಆದರ್ಶಮಯ ಬದುಕು ಮತ್ತು ಸಾಧನೆ ಯುವ ಸಾಧಕರಿಗೆ ಪ್ರೇರಣೆಯಾಗಲಿ.
ಶರಣು ಶರಣಾರ್ಥಿ ಶಿವಶರಣ ಬಾಳಪ್ಪನವರಿಗೆ.. ಶರಣು ಶರಣಾರ್ಥಿ ರಂಗಜಂಗಮ ಬಾಳಪ್ಪಜ್ಜನವರಿಗೆ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ