ಮಂಗಳವಾರ, ಆಗಸ್ಟ್ 1, 2017

ಎರಡು ದಶಕಗಳ ನಂತರ ಮರುಸೃಷ್ಟಿಕೊಂಡ ‘ಸಿಜಿಕೆ’ಯವರ “ಅಂಬೇಡ್ಕರ್” :




ಡಾ.ಅಂಬೇಡ್ಕರ್‌ರವರ 126ನೇ ವರ್ಷಗಳ ಜಯಂತಿಯ ಸ್ಮರಣೆಗೆ ಐದು ದಿನಗಳ ಅಂಬೇಡ್ಕರ್ ನಾಟಕೋತ್ಸವವನ್ನು ಗುರುನಾನಕ ಭವನದಲ್ಲಿ ಜುಲೈ19 ರಿಂದ ಆಯೋಜಿಸಲಾಗಿತ್ತು. ಎಲ್. ಹನುಮಂತಯ್ಯನವರು ರಚಿಸಿದ ಅಂಬೇಡ್ಕರ್ ನಾಟಕವನ್ನು 21 ವರ್ಷಗಳ ಹಿಂದೆ ರಂಗದಿಗ್ಗಜ ಸಿಜಿಕೆಯವರು ನಿರ್ದೇಶಿಸಿದ್ದರು. ಈಗ ಇದೇ ನಾಟಕವನ್ನು ರಂಗನಿರಂತರ ತಂಡದ ಕಲಾವಿದರಿಗೆ ವೆಂಕಟರಾಜುರವರು ಮರು ನಿರ್ದೇಶನ ಮಾಡಿದ್ದು ಜುಲೈ 23 ರಂದು ಪ್ರದರ್ಶನಗೊಂಡಿತು.

ಕೇವಲ ಹನ್ನೆರಡು ದಿನಗಳ ಅವಧಿಯಲ್ಲಿ ಮೂವತ್ತಕ್ಕೂ ಹೆಚ್ಚು ಕಲಾವಿದರುಗಳೊಂದಿಗೆ ಈ ವೈಚಾರಿಕ ನಾಟಕವನ್ನು ಮರು ನಿರ್ಮಾಣ ಮಾಡಿದ ರಂಗನಿರಂತರ ರಂಗತಂಡದವರು ಹಾಗೂ ಮರುನಿರ್ದೇಶನದ ಹೊಣೆ ಹೊತ್ತು ಅಂಬೇಡ್ಕರ್ ಪಾತ್ರವನ್ನೂ ನಿಭಾಯಿಸಿದ ವೆಂಕಟರಾಜುರವರು ಅಭಿನಂದನಾರ್ಹರು.

ಕಥಾನಕವಿಲ್ಲದೆ ಕೇವಲ ಪ್ರಮುಖ ಘಟನೆಗಳನ್ನು ಮಾತ್ರ ಆಧರಿಸಿ ಸೈದ್ದಾಂತಿಕ ಬದ್ದತೆ ಇರುವ ನಾಟಕವನ್ನು ಕಟ್ಟಿಕೊಡುವುದು ಅಷ್ಟು ಸುಲಭಸಾಧ್ಯವಾದುದಲ್ಲ. ಅಂತಹ ಪ್ರಯತ್ನವನ್ನು ಅಂಬೇಡ್ಕರ್ ನಾಟಕದಲ್ಲಿ ಮಾಡಿದ ಸಿಜಿಕೆ ತಮ್ಮ ಪ್ರಯತ್ನದಲ್ಲಿ ಗೆದ್ದಿದ್ದರು. ಅಂದಿನ ನಾಟಕವನ್ನು ಇಂದಿನ ನಾಟಕಕ್ಕೆ ಹೋಲಿಸುವುದು ಸಮಂಜಸವೆನಿಸುವುದಿಲ್ಲ. ಬಹುತೇಕ ಹೊಸ ನಟರುಗಳನ್ನು ಇಟ್ಟುಕೊಂಡು ಇಷ್ಟು ಕಡಿಮೆ ಅವಧಿಯಲ್ಲಿ ನಾಟಕವನ್ನು ಪ್ರದರ್ಶನಯೋಗ್ಯಗೊಳಿಸುವುದು ಸಾಹಸದ ಕೆಲಸವೇ ಆಗಿದೆ. ಅಂತಹ ಒಂದು ದಿಡೀರ್ ಪ್ರಯತ್ನದಲ್ಲಿ ಈ ಅಂಬೇಡ್ಕರ್ ನಾಟಕ ಭಾಗಷಃ ಯಶಸ್ವಿಯಾಗಿದೆ. ಇನ್ನೂ ತಾಲೀಮುಗಳಲ್ಲಿ ನಟರುಗಳು ಬೆವರು ಹರಿಸಿ ಶ್ರಮಿಸಬೇಕಿದೆ.

ಬಾಬಾ ಸಾಹೇಬರು ಬೌದ್ದರಾದಾಗ ಆರಂಭಗೊಳ್ಳುವ ಈ ನಾಟಕವು ಕೊನೆಗೆ ಅದೇ ದೃಶ್ಯದೊಂದಿಗೆ ಮುಕ್ತಾಯವಾಗುತ್ತದೆ. ಇವೆರಡರ ನಡುವೆ ಅಂಬೇಡ್ಕರ್ ಹಾಗೂ ಗಾಂಧೀಜಿ ನಡುವಿನ ಸಂವಾದ ಹಾಗೂ ಸೈದ್ಧಾಂತಿಕ ಸಂಘರ್ಷಗಳು ಅನಾವರಣಗೊಳ್ಳುತ್ತವೆ. ಹಿಂದೂಗಳಿಂದ ಅಸ್ಪೃಶ್ಯರನ್ನು ಬೇರೆ ಮಾಡಕೂಡದೆಂದು ಗಾಂಧಿ ಹಠಮಾಡಿದರೆ, ಅಸಮಾನತೆಯಿಂದ ನಲುಗಿರುವ ಅಸ್ಪೃಶ್ಯರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯತೆ ಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ. ಬ್ರಿಟೀಷರ ದುಂಡು ಮೇಜಿನ ಪರಿಷತ್ತಿನಲ್ಲಿ ಅಂಬೇಡ್ಕರ್ ವಾದ ಊರ್ಜಿತವಾದಾಗ ಗಾಂಧೀ ಉಪವಾಸಕ್ಕೆ ಕೂತು ಭಾವನಾತ್ಮಕವಾಗಿ ಅಂಬೇಡ್ಕರ್ ರವರನ್ನು ಮಣಿಸಿ ತಮ್ಮ ಉದ್ದೇಶ ಸಾಧಿಸುತ್ತಾರೆ. ಕೊನೆಗೆ ಅಸಹಾಯಕರಾದ ಬಾಬಾ ಸಾಹೇಬರು ಹಿಂದೂ ಧರ್ಮವನ್ನೇ ತ್ಯಜಿಸಿ ಬೌದ್ದ ದಮ್ಮಕ್ಕೆ ಮತಾಂತರಗೊಳ್ಳುತ್ತಾರೆ. ಇದು ಈ ನಾಟಕದ ಸಾರ ಮತ್ತು ಪ್ರಮುಖ ಉದ್ದೇಶವಾಗಿದೆ.

ಗಾಂಧಿ ಮತ್ತು ಅಂಬೇಡ್ಕರರ ಈ ಪ್ರಮುಖ ಸಂಘರ್ಷವನ್ನೇ ಇಟ್ಟುಕೊಂಡು ಇಡೀ ನಾಟಕ ಕಟ್ಟಿಕೊಟ್ಟಿದ್ದರೆ ಪ್ರಯೋಗದ ಆಶಯ ಸಮರ್ಥವಾಗಿ ಈಡೇರುತ್ತಿತ್ತು. ಆದರೆ ಇದರ ನಡುವೆ ಚೌದಾರ್‌ಕೆರೆ ಪ್ರಕರಣ, ಪೆರಿಯಾರ್ ಆಗಮನ, ಆರ್ಯ ಸಮಾಜದವರ ವಿರೋಧ, ಡಾಂಗೆ ಜೊತೆ ವಾದ.. ಹೇಗೆ ಕೆಲವು ದೃಶ್ಯಗಳನ್ನೂ ಸೇರಿಸಿದ್ದು ನಾಟಕದ ನೋಡುಗರಲ್ಲಿ ಅನಗತ್ಯ ಗೊಂದಲವನ್ನುಂಟುಮಾಡಿದಂತಿದೆ. ಡಾಂಗೇ ಹಾಗೂ ಅಂಬೇಡ್ಕರರ ಸಂವಾದವನ್ನು ರಂಗಪಠ್ಯಕ್ಕೆ ಹೊರತಾದ ದೃಶ್ಯವೆಂದು ತಿಳಿದು ಸಿಜಿಕೆಯವರು ಕೈಬಿಟ್ಟಿದ್ದರು. ಆದರೆ ವೆಂಕಟರಾಜುರವರು ಅದನ್ನೂ ಅಳವಡಿಸಿಕೊಂಡಿದ್ದಾರೆ. ನಾಟಕದ ಮುಖ್ಯ ಉದ್ದೇಶಕ್ಕೆ ಪೂರಕವಾದ ದೃಶ್ಯಗಳನ್ನು ಸಾಧ್ಯವಾದಷ್ಟೂ ಕ್ರಮಬದ್ಧವಾಗಿ ಕಟ್ಟಿಕೊಟ್ಟರೆ ಈ ನಾಟಕ ಇನ್ನೂ ಹೆಚ್ಚು ಯಶಸ್ವಿಯಾಗುತ್ತದೆ. ಒಂದೂ ಮುಕ್ಕಾಲು ಗಂಟೆಯ ಈ  ನಾಟಕವನ್ನು ಇನ್ನೂ ಸ್ವಲ್ಪ ಎಡಿಟ್ ಮಾಡಿ ಅನಗತ್ಯ ದೃಶ್ಯಗಳನ್ನು ಕಟ್ ಮಾಡಿದರೆ ಹೆಚ್ಚು ಜನರನ್ನು ಈ ನಾಟಕ ತಲುಪಬಹುದಾಗಿದೆ. 

ಹಾಡು ಹಾಗೂ ಸಂಗೀತ ನಾಟಕದ ಭಾಗವಾಗದೇ ಹೊರಗೆ ಉಳಿದು ದೃಶ್ಯಗಳ ನಡುವೆ ಗ್ಯಾಪ್ ಪಿಲ್ಲರ್ ಆಗುವುದಕ್ಕಷ್ಠೇ ಸೀಮಿತವಾಗಿವೆ. ಅಂಬೇಡ್ಕರ್ ನಾಟಕದಲ್ಲಿ ಬಿಕ್ಕು ಅಂಬೇಡ್ಕರ್ ಆಗಮನವಾದಾಗ ಒಂದೇ ಮಾತರಂ ಹಾಡು ಅಗತ್ಯವಿರಲಿಲ್ಲಾ.. ಅಸಮಾನ ವ್ಯವಸ್ಥೆಯನ್ನು ತೊಲಗಿಸಲು ಪ್ರಯತ್ನಿಸಿದ ಅಂಬೇಡ್ಕರರಿಗೂ ಒಂದೇ ಮಾತರಂ ಹಾಡು ಸೂಕ್ತವೆನ್ನಿಸುವಂತಿಲ್ಲಾ. ಹಾಡು ಮತ್ತು ಸಂಗೀತವನ್ನು ತುಂಬಾ ಅವಸರದಲ್ಲಿ  ಕಟ್ಟಿದಂತಿದೆ.  ನಾಟಕದಲ್ಲಿ ಬಳಸಿದ ಸೆಟ್ ಹಾಗೂ ಪ್ರಾಪರ್ಟಿಗಳು ಇಡೀ ನಾಟಕಕ್ಕೆ ಕಳೆ ತಂದು ಕೊಟ್ಟಿವೆ. ಗಾಂಧೀಜಿ ಜೈಲಲ್ಲಿರುವಾಗ ಹಿಂಬದಿಯಲ್ಲಿ ಸರಳುಗಳನ್ನು ಬೆಳಕಿನ ವಿನ್ಯಾಸದಲ್ಲಿ ತೋರಿಸಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಪಾರ್ಲಿಮೆಂಟಿನ ಪ್ರತಿಕೃತಿಯನ್ನೇ ಸೃಷಿಸಿದ್ದು ನೋಡುಗರನ್ನು ಸೆಳೆಯುವಂತೆ ಮೂಡಿಬಂದವು. ಬೆಳಕಿನ ಸಂಯೋಜನೆ ಕೆಲವೊಂದು ದೃಶ್ಯಗಳಿಗೆ ಅಗತ್ಯವಾದ ಡೆಪ್ತ್ ಕೊಟ್ಟು ಮೂಡ್ ಸೃಷ್ಟಿಗೊಳಿಸಿದರೆ ಇನ್ನು ಕೆಲವು ದೃಶ್ಯಗಳಲ್ಲಿ ಪ್ಲಾಟ್ ಆಗಿತ್ತು. ರಂಗಮಂದಿರದಲ್ಲಿರುವ ಬೆಳಕಿನ ಪರಿಕರಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.  

ತಾಲೀಮಿನ ಕೊರತೆ ನಾಟಕದಾದ್ಯಂತ ಕಂಡುಬರುತ್ತಿದ್ದು ಬಹುತೇಕ ನಟರ ಮಾತು ಹಾಗೂ ಅಭಿನಯದಲ್ಲಿ ಇನ್ನೂ ಪೋರ್ಸ್ ಬೇಕಾಗಿದೆ. ಅಂಬೇಡ್ಕರ್ ಪಾತ್ರದಾರಿಯಾದ ವೆಂಕಟರಾಜು ತಮ್ಮದೇ ಆದ ಟಿಪಿಕಲ್ ಅಭಿನಯ ಹಾಗೂ ಮಾತಿನ ಶೈಲಿಯಲ್ಲಿ ಗಮನ ಸೆಳೆದರೂ ಸಂಭಾಷಣೆಯ ವೇಗವನ್ನು ಕಡಿಮೆ ಮಾಡಿ ಅಗತ್ಯವಿದ್ದಲ್ಲಿ ಪಾಜ್‌ಗಳನ್ನು ಬಳಸುವ ಅಗತ್ಯವಿದೆ. ಇದ್ದುದರಲ್ಲಿಯೇ ಪಾತ್ರಕ್ಕೆ ಜೀವತುಂಬಿ ಬಿ.ಜಿ.ರಾಮಕೃಷ್ಣ ಅಭಿನಯಿಸಿದ್ದಾರೆ. ದಲಿತ ಅಜ್ಜನ ಪುಟ್ಟ ಪಾತ್ರದಲ್ಲೂ ಪ್ರಕಾಶ್ ಅರಸು ಗಮನಸೆಳೆಯುತ್ತಾರೆ. ಪೆರಿಯಾರ್ ರವರ ಪಾತ್ರಕ್ಕೆ ರಾಜಕುಮಾರ್ ಜೀವತುಂಬಿದ್ದಾರೆ.  ರಮಾಬಾಯಿ ಹಾಗೂ ರಾಜಾಜಿ ಪಾತ್ರಗಳು ಪಕ್ಕಾ ರಾಂಗ್ ಕಾಸ್ಟಿಂಗ್. ಗಾಂಧಿ ಪಾತ್ರದಾರಿ ಇನ್ನೂ ಹೆಚ್ಚು ಪಾತ್ರದಾಳಕ್ಕೆ ಇಳಿಯಬೇಕಿದೆ. 

ಅನುಭವಿ ನಟನಾಗಿರುವ ವೆಂಕಟರಾಜು ಪಾತ್ರಕ್ಕೆ ತಕ್ಕಂತೆ ವಿಭಿನ್ನ ಶೈಲಿಯನ್ನು ರೂಢಿಸಿಕೊಂಡರೆ ಪಾತ್ರ ಇನ್ನೂ ಕಳೆಗಟ್ಟುವುದರಲ್ಲಿ ಸಂದೇಹವಿಲ್ಲ. ಪ್ರಮುಖ ಪಾತ್ರವನ್ನೂ ನಿರ್ವಹಿಸಿ ಕಡಿಮೆ ಅವಧಿಯಲ್ಲಿ ನಾಟಕದ ನಿರ್ದೇಶನದ ಹೊಣೆಯನ್ನೂ ಹೊತ್ತು ನಿಭಾಯಿಸುವುದು ಅಂದುಕೊಂಡಷ್ಟು ಸುಲಭವೂ ಅಲ್ಲಾ.. ಸರಳವೂ ಅಲ್ಲಾ.. ಈ ನಿಟ್ಟಿನಲ್ಲಿ ವೆಂಕಟರಾಜು ನಟನೆ ಹಾಗೂ ನಿರ್ದೇಶನದತ್ತ ಮಾಡಿದ ಪ್ರಾಮಾಣಿಕ ಪ್ರಯತ್ನವನ್ನು ಯಾರೂ ಅಲ್ಲಗಳೆಯುವಂತಿಲ್ಲಾ. ನಾಟಕ ಇನ್ನೂ ಕಟ್ಟುವ ಅಂತಿಮ ಹಂತದಲ್ಲಿದ್ದರೂ ಇಂದಲ್ಲ ನಾಳೆ ಮುಂದಿನ ಪ್ರದರ್ಶನಗಳಲ್ಲಿ ಗಟ್ಟಿಗೊಳ್ಳುತ್ತಾ ಹೋಗುವುದರಲ್ಲಿ ಅನುಮಾನಗಳೇ ಇಲ್ಲಾ.

ಬಹಳ ವರ್ಷಗಳ ನಂತರ ಮರುಸೃಷ್ಟಿಗೊಂಡ ಸಿಜಿಕೆಯವರು ನಿರ್ದೇಶಿಸಿದ್ದ ಅಂಬೇಡ್ಕರ್ ನಾಟಕವು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಿದೆ. ಅಂಬೇಡ್ಕರ್ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣಕ್ಕೆ 23 ಕೋಟಿ ಖರ್ಚು ಮಾಡುವ ಸರಕಾರವು ಅಂಬೇಡ್ಕರ್ ಕುರಿತ ಇಂತಹ ನಾಟಕಗಳ ಪ್ರದರ್ಶನಗಳನ್ನು ರಾಜ್ಯಾದ್ಯಂತ ಪ್ರಾಯೋಜನೆ ಮಾಡಬೇಕಿದೆ. ಅಂಬೇಡ್ಕರರ ಬದುಕು, ವೇದನೆ, ಸಾಧನೆ ಹಾಗೂ ದಲಿತ ದಮನಿತ ಜನರಿಗಾಗಿ ಅವರ ತುಡಿತಗಳು ಜನಸಾಮಾನ್ಯರಿಗೆ ತಿಳಿಯಬೇಕಿದೆ. ಅದಕ್ಕೂ ಮುಂಚೆ ಈ ನಾಟಕ ಇನ್ನೂ ಪಾಲಿಶ್ ಆಗಿ ಪ್ರದರ್ಶನ ಯೋಗ್ಯವಾಗಬೇಕಿದೆ. 

   -ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ